ಅವನು ಒಳಗೆ ಬಂದಾಗ ನಾನು ಒಂದರ್ಧ ಗ್ಲಾಸ್ ಬಿಯರ್ ಗುಟುಕರಿಸಿ ಕೂತಿದ್ದೆ. ಆಗ ತಾನೇ ಯಾರೋ ಜ್ಯೂಕ್‍ಬಾಕ್ಸಿನಲ್ಲಿ ದುಡ್ಡು ಹಾಕಿ ಹಾಡು ಶುರು ಮಾಡಿದ್ದರು. ಯಾವುದೋ ನನಗಿಷ್ಟವಾಗದ ಹಾಡು ಬರುತ್ತಿತ್ತು. ’ಯಾರಪ್ಪಾ ಇದು, ದುಡ್ಡು ಕೊಟ್ಟು ಕೆಟ್ಟ ಹಾಡು ಕೇಳುತ್ತಾರಲ್ಲ!’ ಎಂದು ನನ್ನಷ್ಟಕ್ಕೆ ನಾನು ಮುಸಿನಗುತ್ತಿದ್ದೆ. ಅವನು ಸ್ವಲ್ಪ ಅಪ್ರತಿಭನಾಗಿದ್ದಂತೆ ತೋರಿತು. ಕೌಂಟರಿನ ಎದುರಿಗಿನ ಖಾಲಿ ಕುರ್ಚಿಯೊಂದರಲ್ಲಿ ಕೂತ. ತನ್ನ ಸುತ್ತಮುತ್ತಲಿದ್ದವರನ್ನೆಲ್ಲ ಮಾತಾಡಿಸಿ ಕೈಕುಲುಕಿ ಪರಿಚಯ ಮಾಡಿಕೊಳ್ಳುತ್ತಿದ್ದ. ಹುಮ್ಮಸ್ಸಿನಿಂದಲ್ಲ, ಒಂದು ರೀತಿಯ ಅಳುಕಿನಿಂದ. ಅವನ ನಡೆನುಡಿಗಳಲ್ಲಿ ಹಗುರಾದ socialising ಇರಲಿಲ್ಲ. ಬದಲಿಗೆ, ಯಾವುದೋ ಭರವಸೆಗಾಗಿ ಹಾತೊರೆಯುತ್ತಿದ್ದ. ಅಭಯಹಸ್ತಕ್ಕಾಗಿ ಬೇಡುತ್ತಿದ್ದಂತಿತ್ತು.
Continue Reading »
Posted in ಅನುಭವ, ಕತೆ, ತುಡಿತ, ಮೆಲುಕುಗಳು | 4 Comments »
ಹಿಂದಿನ ಲೇಖನದಲ್ಲಿ ಕೈದಿಯ ಇಬ್ಬಂದಿಯ ಬಗ್ಗೆ ಮಾತಾಡಿದೆವು. ಅದು ಆಸಕ್ತಿಕರವಾದ ಸಮಸ್ಯೆಯಂತೂ ಹೌದು. ಆದರೆ ಅದಕ್ಕಿಂತ ಹೆಚ್ಚಿನ ಉಪಯೋಗ ಅದರಿಂದ ಇದೆಯೆ? ಏನಾದರೂ ಸಾಮಾಜಿಕ ಪ್ರಸ್ತುತತೆ ಇದೆಯೆ? ಇದೆ. ಏಕೆಂದರೆ ನಾವೆಲ್ಲರೂ ಕೈದಿಗಳೆ! ಹಿಂದಿನ ಲೇಖನದಲ್ಲಿನ ರೀತಿಯ ಕೈದಿಗಳಲ್ಲ. ಅದು ಒಂದು ನಿದರ್ಶನ ಅಷ್ಟೆ. ಅಲ್ಲಿ ನಾನು ವಿವರಿಸಿದ್ದು ಒಂದು ಆಟ (ಗೇಮ್). ನಾವೆಲ್ಲರೂ ದಿನನಿತ್ಯವೂ ಇಂಥ ಅನೇಕ ಗೇಮ್‍ಗಳನ್ನು ಬೇಕಾಗಿಯೋ ಬೇಡಾಗಿಯೋ ಆಡುತ್ತಿರುತ್ತೇವೆ. ಅವನ್ನು ನಾವು ಹೇಗೆ ಆಡುತ್ತೇವೆ ಎನ್ನುವುದು ಬಹಳ ಮಟ್ಟಿಗೆ ನಮ್ಮ ಒಟ್ಟಾರೆ ವ್ಯವಸ್ಥೆಯನ್ನು ರೂಪಿಸುತ್ತದೆ. ಆದರೆ ಅಲ್ಲಿಗೆ ಹೋಗುವ ಮೊದಲು ಗೇಮ್ ಥಿಯರಿ ಏನು ಹೇಳುತ್ತದೆ ಮತ್ತು ಗೇಮ್ ಎಂದರೆ ಏನು ಎಂದು ಸಂಕ್ಷಿಪ್ತವಾಗಿ ತಿಳಿಯೋಣ. ನಾನು ಈ ಗ್ರಹಿಕೆಗಳನ್ನು intuitive ಸ್ತರದಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ. ನಿಖರ ಹಾಗೂ ಔಪಚಾರಿಕ definitionಗಳನ್ನು ಬೇಕಿದ್ದಲ್ಲಿ ನಂತರ ನೋಡಬಹುದು.
ಗೇಮ್ ಥಿಯರಿ ಕೆಲವು ಸಂದರ್ಭಗಳಲ್ಲಿ ಮನುಷ್ಯರು ತೋರಿಸುವ ನಡವಳಿಕೆಗಳನ್ನು ಸೆರೆಹಿಡಿದು ಅದಕ್ಕೆ ಔಪಚಾರಿಕವಾದ mathematical ಚೌಕಟ್ಟನ್ನು ಕೊಡಲೆತ್ನಿಸುತ್ತದೆ. ಇಂಥ ಒಂದು ಸಂದರ್ಭದ ಲಕ್ಷಣಗಳು ಹೀಗಿರುತ್ತವೆ: (೧) ಒಂದಕ್ಕಿಂತ ಹೆಚ್ಚು ಪಕ್ಷಗಳು ಅದರಲ್ಲಿ ಒಳಗಾಗಿರುತ್ತವೆ (೨) ಈ ಎಲ್ಲ ಪಕ್ಷಗಳಿಗೂ ಯಾವುದೋ ಸಂಪನ್ಮೂಲವನ್ನು ಕುರಿತು ಆಸಕ್ತಿ/ಪೈಪೋಟಿ/ತಿಕ್ಕಾಟ ಇರುತ್ತದೆ (೩) ಆದ್ದರಿಂದ ಇದು ಕೌಶಲ್ಯದಿಂದ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭ. ಇಲ್ಲಿ ಒಂದು ಪಕ್ಷ ತೆಗೆದುಕೊಳ್ಳುವ ನಿರ್ಧಾರ ಉಳಿದ ಪಕ್ಷಗಳು ತೆಗೆದುಕೊಂಡಿರುವ/ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ.
Continue Reading »
Posted in Economics, Game Theory, philosophy, ವಿಚಾರ | No Comments »
ಗೇಮ್ ಥಿಯರಿಯ ಬಗ್ಗೆ ಒಂದಷ್ಟು ಬರಿಯುವ ಅಂತ ಇದೆ. ನಾನು ಎಷ್ಟೋ ವಿಷಯಗಳನ್ನು ಶುರು ಮಾಡಿ, ಮುಂದುವರೆಸುತ್ತೇನೆ ಎಂದು ಹೇಳಿ, ನಂತರ ಮತ್ತೇನೇನೋ ಬರೆಯುತ್ತ ಮೈಮರೆತುಬಿಡುತ್ತೇನೆ. ಒಂದು ಸರಣಿಯಲ್ಲಿ ಏನನ್ನೂ ಬರೆದು ರೂಢಿಯಿಲ್ಲ. ಇದೂ ಹಾಗೇ ಆಗುತ್ತದೆ. ಆದರೂ ನನಗೆ ಇದೊಂದು exciting ವಿಷಯಾಗಿರುವುದರಿಂದ ಆವಾಗಾವಾಗ ಬರೆಯುತ್ತಿರುತ್ತೇನೆ ಎಂದು ಹೇಳಬಲ್ಲೆ. ನಾನು ಹೇಳುವ ಸಂಗತಿಗಳು ಬಹಳೇ ಮೂಲಭೂತವಾದುವು (ಎಲ್ಲಾ ರೀತಿಯಲ್ಲೂ). ಆದ್ದರಿಂದ ಅನೇಕರಿಗೆ ಇವು ಈಗಾಗಲೇ ಗೊತ್ತಿರಲೂಬಹುದು. ನಾನು ಈ ಪೋಸ್ಟಿನಲ್ಲಿ ಗೇಮ್ ಥಿಯರಿಯ ಒಂದು ಪ್ರಮಾಣಭೂತ ಸಮಸ್ಯೆಯನ್ನು ಪ್ರಸ್ತಾಪಿಸಿ, ಅದರ ಬಗ್ಗೆ ಓದುಗರ ಅನ್ನಿಸಿಕೆಗಳನ್ನು ಕೇಳುತ್ತೇನೆ. ಅದಾದ ನಂತರ ಗೇಮ್ ಥಿಯರಿಯ ನುಡಿಗಟ್ಟುಗಳು, ಡೆಫ಼ನಿಶನ್ನುಗಳು, ಉಪಯೋಗಗಳು ಇತ್ಯಾದಿ ನೋಡೋಣ.
ಕೈದಿಯ ಇಬ್ಬಂದಿ ಅಥವಾ Prisoner’s Dilemma (PD) ಬಹಳ ಹಳೆಯ ಒಡಪು. ಅದರ ಸ್ವಲ್ಪ ಭಿನ್ನ ಭಿನ್ನ ರೂಪಗಳಿವೆಯಾದರೂ ಅದರ ಸಾರವನ್ನು ಕೆಳಕಂಡಂತೆ ಸರಳವಾಗಿ ವಿವರಿಸಬಹುದು.
Continue Reading »
Posted in Economics, Game Theory, philosophy, ವಿಚಾರ | 5 Comments »
ಕ್ಯಾಂಪಸ್ಸಿಗೆ ಹೋಗಲು ಬಸ್ಸು ಹತ್ತಿದ ತಕ್ಷಣ ಮೊದಲು ನನ್ನ ಲಕ್ಷ್ಯ ಹೋಗುವುದು ಬಸ್ಸಿನ ಒಳಮೈಯ್ಯನ್ನು ಅಲಂಕರಿಸಿದ ಫಲಕಗಳತ್ತ. ಬರ್ಗರುಗಳ ಅಂಗಡಿಗಳನ್ನೊಳಗೊಂಡಂತೆ “ಬಂಡವಾಳಶಾಹೀ” ಜಾಹೀರಾತುಗಳು, ಯುನಿವರ್ಸಿಟಿಯ ಕೆಲ ಸಂದೇಶಗಳು, ಮತ್ತಿತರ (ಕೆಲವು ಬಸ್ಸುಗಳಲ್ಲಿ ಆರ್ಟ್ ಆಪ್ ಲಿವಿಂಗ್‍ನ ಜಾಹೀರಾತುಗಳೂ ಇವೆ) ಫಲಕಗಳ ನಡುವೆ ನಾನು ಹುಡುಕುವುದು ಒಂದು ವಿಶೇಷ ಫಲಕವನ್ನು: ಈ ಊರಲ್ಲಿ ಬಸ್ಸಿನ ಸೇವೆ ನಡೆಸುವ ಕಂಪನಿ, ಕೆಲ ಸ್ವಯಂಸೇವಕರ ಜೊತೆ ಭಾಗಿಯಾಗಿ, ಸ್ಥಳೀಯರಿಂದ ಪದ್ಯಗಳನ್ನು ಆಹ್ವಾನಿಸಿ, ಆಯ್ದ ಕೆಲವನ್ನು ಆರು ತಿಂಗಳಿಗೊಮ್ಮೆ ಪ್ರಕಟಿಸುತ್ತದೆ; ಆ ಪದ್ಯಗಳನ್ನು ಇಂಥವೇ ಫಲಕಗಳ ಮೇಲೆ ಛಾಪಿಸಿ ಬಸ್ಸಿನಲ್ಲಿ ಹಾಕುತ್ತಾರೆ. ಆ ಸ್ವಯಂಸೇವಕರ ತಂಡದ ಹೆಸರೂ ಚೆನ್ನಾಗಿದೆ — words on the go. ಸಣ್ಣ ಸಣ್ಣ ಪದ್ಯಗಳು. ಕೆಲವು ಚೆನ್ನಾಗೂ ಇವೆ. ಆ ಪದ್ಯಗಳ ಗುಣಮಟ್ಟಕ್ಕಿಂತ ಇಂಥ ಪ್ರಯತ್ನ ಅಪ್ಯಾಯಮಾನವೆನ್ನಿಸುತ್ತದೆ. ಸಮುದಾಯಗಳೊಂದಿಗೆ ಸಹಕರಿಸಿ, ಅವನ್ನು ಒಳಗೊಂಡು, ಒಟ್ಟಿಗೆ ಮುಂದುವರಿಯುವ ಆಸ್ಥೆ ಇರುವುದು ಯಾವ ಕಾಲದಲ್ಲೂ, ಯಾವ ದೇಶದಲ್ಲೂ ಸ್ವಾಗತಾರ್ಹ. ಸಮುದಾಯ ಹಾಗೂ ಸಂಸ್ಥೆಗಳು ಒಂದಕ್ಕೊಂದು ಸಂಬಂಧವಿಲ್ಲದಂತಿರುವ, ಬಹಳ ಸಂಕುಚಿತವಾದ — ವಿವಿಧ ಆಯಾಮಗಳಿಲ್ಲದ– ಕೊಡುಕೊಳ್ಳುವಿಕೆಯಿರುವಂಥ ವ್ಯವಸ್ಥೆಗಳ ಬಗ್ಗೆ ನನಗೆ ಅತೀವ ಬೇಸರವಾಗುತ್ತದೆ.
Continue Reading »
Posted in Economics, philosophy, ನಗರಗಳು, ವಿಚಾರ | 4 Comments »
ಪದ್ಯದಂಥದ್ದೇನೋ ಬರೆದಿದ್ದೇನೆ. ನೀವೂ ಹಾಗೆ ಅಂದುಕೊಂಡು ಓದಿ. ಶೀರ್ಷಿಕೆಯ ’ಕ್ಯಾಮೆಲ್‍ಬ್ಯಾಕ್ ಬೂಲೆವಾರ್ಡ್’ (camelback boulevard), ಇಲ್ಲೇ ಪಕ್ಕದಲ್ಲಿರುವ, ಎಡಬಲಕ್ಕೂ ಅಮೆರಿಕನ್ ಮಿಡಲ್‍ಕ್ಲಾಸಿನ ಶಿಸ್ತಿನ, ಅಂದವಾದ ಮನೆಗಳಿರುವ, ರಸ್ತೆ. ಆಗಾಗ ಆ ರಸ್ತೆಯ ಮುಖಾಂತರ ವಾಕ್ ಹೋಗುತ್ತಿರುತ್ತೇನೆ.
ಅದೋ ನೋಡು ಅಮೆರಿಕಾ
ಕಾಣುತ್ತಲ್ಲ ತುಂಬಿಕೊಂಡು
ಉದ್ದವಾಗಿ ಅಗಲವಾಗಿ
ಭೂಗೋಳ ಪರೀಕ್ಷೆಯಲ್ಲಿ
ನಕ್ಷೆ ಬಿಡಿಸುವ ಮಕ್ಕಳಿಗೆ
ಅನುಕೂಲವಾಗಿ ಆಯತವಾಗಿ.
Continue Reading »
Posted in ಪದ್ಯ | 8 Comments »
ನಮ್ಮ ಗೋಕಾಂವಿ ನಾಡಿನಲ್ಲಿ ವ್ಯಂಜನಗಳ ಬಳಕೆ ಕಡಿಮೆ. ಊಟದಲ್ಲಲ್ಲ. ಊಟದಲ್ಲಿ ನಾನಾ ನಮನಿ ವ್ಯಂಜನಗಳನ್ನೂ, ಸಾದನಿಗಳನ್ನು (ಸಾಧನ ಸಲಕರಣೆಗಳನ್ನೂ) ಪುರಮಾಶಿ ಕಟಿಯುತ್ತೇವೆ. ನಾನು ಹೇಳುತ್ತಿರುವುದು ಮಾತಿನಲ್ಲಿ ಹಾಗೂ ಬರೆಹದಲ್ಲಿ: ದಕ್ಷಿಣಾದಿಗಳಂತೆ ನಾವು ಶಬ್ದಗಳ ಕೊನೆಯ ಅಕ್ಷರಗಳನ್ನು ವ್ಯಂಜನ ಮಾಡುವುದಿಲ್ಲ. ’ಅ’ ಎಂಬ ಸ್ವರವನ್ನು ಕೂಡಿಸಿ ಪೂರ್ತಿ ಮಾಡುತ್ತೇವೆ. ಉದಾಹರಣೆಗೆ, ಬಿಟ್ಟರೆ ನೀವು ದಕ್ಷಿಣಾದಿಗಳು ಈ ಬ್ಲಾಗಿನ ಲೇಖಕನನ್ನು ’ಚಕೋರ್’ ಎಂದು ಮುಗಿಸುತ್ತೀರಿ; ಅದಕ್ಕೆ ಸ್ಪಷ್ಟವಾಗಿ ’ಚಕೋರ’ ಎಂದು ಬರೆಯಬೇಕಾಗುತ್ತದೆ. ಹಾಗೆಯೇ ಅಶೋಕ, ರಮೇಶ, ಸುರೇಶ, ಪ್ರಹ್ಲಾದ ಇತ್ಯಾದಿ. (ಅಂಧಂಗ, ಈ ’ಹ’ಕ್ಕೆ ಒತ್ತು ಕೊಡುವ ಸಂದರ್ಭ ಬಂದಾಗಲೂ ಕೆಲ ದಕ್ಷಿಣಾದಿಗಳಲ್ಲಿ ಗೊಂದಲ ಮೂಡುತ್ತದೆ. ನಾಲ್ಕು ತಲೆಗಳುಳ್ಳ ನಮ್ಮ ಮುದುಕ ದೇವರ ಹೆಸರು ಬರೆಯುವಾಗ ’ಹ’ಕ್ಕೆ ’ಮ’ದ ಒತ್ತು ಕೊಡಬೇಕೋ ’ಮ’ಕ್ಕೆ ’ಹ’ದ ಒತ್ತು ಕೊಡಬೇಕೋ ಎಂಬ ಕನ್‍ಫ್ಯೂಜನ್ನು. ಕೆಲವು ಹಿರಣ್ಯಪುತ್ರರು ಗೊಂದಲವೇ ಬೇಡ ಎಂದು ’ಪ್ರಹಲ್ಲಾದ್’ ಎಂದು ಬರೆಯಲು ಶುರು ಮಾಡಿದ್ದಾರೆ!) ಅದು ಬೇಡೆನಿಸಿದರೆ ಸುರೇಶೀ, ರಮೇಶೀ, ಸಂತೋಷೀ ಇತ್ಯಾದಿಗಳೂ ನಡೆಯುತ್ತವೆ. (ಈ ಬಳಕೆ ಮಧ್ಯಕರ್ನಾಟಕದಲ್ಲೂ ಇದೆ ಬಿಡಿ. ’ನಮ್ ಪ್ರಸದಿ ಬರ್ತಾ ಇದಾನೆ.’) ಬೆಳಗಾವಿ ಶಹರಕ್ಕೆ ಹೋದರೆ ಮರಾಠಿಯ ಪ್ರಭಾವದ ಮನೆಗಳಲ್ಲಿ ಇನ್ನೊಂದು ನಮೂನೆಯ ಎಳೆಯುವಿಕೆ ಕಾಣಸಿಗುತ್ತದೆ. ನಾವು ಗೋಕಾಂವಿಯವರು ’ಕೇಶವ’ ಅಂತಂದರೆ ಬೆಳಗಾಂವಿಯವರು ’ಕೇsಶsವs’ ಎಂದು ಪ್ರತಿಯೊಂದು ಅಕ್ಷರವನ್ನೂ ಎಳೆಯುತ್ತಾರೆ. ಸ್ವಲ್ಪ ಕೆಳಗೆ ಧಾರವಾಡಕ್ಕೆ ಹೋದರೆ ಅವರು ಎರಡೇ ಅಕ್ಷರಗಳಲ್ಲಿ ’ಕೇಶ್ವ’ ಎಂದು ಮುಗಿಸುತ್ತಾರೆ. ಇನ್ನು ದಕ್ಷಿಣಾದಿಗಳು ಕೆಲವೊಮ್ಮೆ ಅನಂತಮೂರ್ತಿಗಳ ಮಾತಿಗೆ ಗೌರವ ಕೊಟ್ಟು ’ಶರತ್ತು’ ’ಪ್ರದೀಪು’ ಇತ್ಯಾದಿ ಅನ್ನುವುದೂ ಉಂಟು.
Continue Reading »
Posted in ಟಾಯಂಪಾಸ್, ಸುಮ್ಮನೆ, ಹರಟೆ | 7 Comments »
(ನಾನು ಹಿಂದೊಮ್ಮೆ ಬರೆದಿದ್ದರ ಸ್ವಲ್ಪ ಪರಿಷ್ಕೃತ ಅನುವಾದ.)
ಜಯನಗರದ ’ದ ಆರ್ಟ್ ಆಫ಼್ ಲಿವಿಂಗ್ ಶಾಪ್’ ತುಂಬಾ ಆಯಕಟ್ಟಿನ ಜಾಗದಲ್ಲಿ ಸ್ಥಾಪಿತವಾಗಿದೆ. Very strategically located. ಅದರ ಸ್ಥಾನ ಎಷ್ಟು ಚೆನ್ನಾಗಿದೆ ಎಂದರೆ, ನಾನು ಇನ್ಸ್ಟಿಟ್ಯೂಟಿಗೆ ಹೋಗಿಬರುವಾಗ ದಿನಾ ಅಡ್ಡಬರುತ್ತದೆ. ಹಾಗೆಯೇ ರಂಗಶಂಕರ ಮತ್ತಿತರ ಅನೇಕ ಆಸಕ್ತಿಕರ ಜಾಗಗಳಿಗೆ ಹೋಗಬೇಕಾದಾಗಲೂ ಕಾಣಿಸಿಕೊಳ್ಳುತ್ತದೆ. ಈಗೀಗ ಇದು ನನಗೆ ರೂಡಿಯಾದಂತಾಗಿದೆ ಬಿಡಿ. ಹೀಗಾಗಿ ಮೊದಲು ಕೆಲವು ಸಲ ಆ ’ಶಾಪ್’ ನೋಡಿದಾಗ ಆದ ಥ್ರಿಲ್ ಈಗ ಉಂಟಾಗುವುದೇ ಇಲ್ಲ. ನೀವು ಈಗಾಗಲೆ ಇದನ್ನು ಸರಿಯಾಗಿ ಊಹಿಸಿರುತ್ತೀರ: ಅಲ್ಲಿ ಅವರು ’ದ ಆರ್ಟ್ ಆಫ಼್ ಲಿವಿಂಗ್’ನ ಪುಸ್ತಕಗಳನ್ನು ಮಾರುವುದಿಲ್ಲ. ಅಥವಾ, ಹೋಗಲಿ ಬಿಡಿ; ಹಾಗೆ ಹೇಳುವುದು ಸಮಂಜಸವಲ್ಲವೇನೋ. ಬಹಳ ಮಾಡಿ, ಆ ಪುಸ್ತಕಗಳನ್ನೂ ಮಾರುತ್ತಾರೆ, ಆದರೆ ಅದು ಅವರ ಮುಖ್ಯ ಧಂದೆ ಅಲ್ಲ ಅಂತ ನನಗನ್ನಿಸುತ್ತೆ. ಹತ್ತಾರು ಅಡಿಗಳ ದೂರದಿಂದ, ನನ್ನ ಚಲಿಸುತ್ತಿರುವ ಬೈಕಿನಿಂದ ಕಂಡ ಓರೆಗಣ್ಣಿನ ಭಂಗುರ ನೋಟವೂ ಸಾಕು. ಸೂಜಿಗಲ್ಲಿನಂತೆ ಸೆಳೆಯುವ ಅದೆಂಥ ತರಹೇವಾರಿ ಸರಕುಗಳವು. What magnetic merchandise! ಶರ್ಟುಗಳು, ಕುರ್ತಾಗಳು, ಹೆಂಗಸರ ಟಾಪ್‍ಗಳು, ಟಿ-ಶರ್ಟುಗಳು… (ಕನ್ನಡಕ್ಕೆ ನಿಲುಕದ) bracelets, bandannas, caps, ಹಾಗೂ ನನ್ನ ತಿಳುವಳಿಕೆ ಹಾಗೂ ಊಹೆಗಳಿಗೆ ನಿಲುಕದ ಇನ್ನೂ ಏನೇನೋ ಸಾಮಗ್ರಿಗಳು. ಅಲ್ಲಿ ನಿಮ್ಮ ಮೈಮೇಲೆ ’ದ ಆರ್ಟ್ ಆಫ಼್ ಲಿವಿಂಗ್’ನ ಹಚ್ಚೆಗಳನ್ನೂ ಹಾಕುತ್ತಾರೇನೋ. ಆಯಕಟ್ಟಿನ ಜಾಗಗಳಲ್ಲಿ! Strategically located tattoos anyone? ನಾನು ಒಮ್ಮೆ ಒಳಹೊಕ್ಕು ನೋಡಬೇಕೇನೋ. (ಓ ಕೊನೆಗೊಮ್ಮೆ ಸೆಳೆತ ತಡೆಯಲಾರದೆ ಹೋಗಿಯೂಬಿಟ್ಟಿದ್ದೆ. ಆದರೆ ಏನನ್ನೂ ಕೊಳ್ಳಲಿಲ್ಲ.)
Continue Reading »
Posted in Economics, philosophy, ಅನುಭವ, ನಗರಗಳು, ಮೆಲುಕುಗಳು, ವಿಚಾರ, ವಿಡಂಬನೆ, ಸುಮ್ಮನೆ | Tagged semi-serious, spirituality | 14 Comments »
ಒಂದು ಊರಿನಲ್ಲಿ ಒಬ್ಬನೇ ಒಬ್ಬ ಕ್ಷೌರಿಕನಿದ್ದಾನೆ ಎಂದುಕೊಳ್ಳಿ. ಆ ಊರಿನ ಗಂಡಸರೆಲ್ಲರೂ ನಿಯಮಿತವಾಗಿ ಗಡ್ಡಮೀಸೆಗಳನ್ನು ತೆಗೆದು ವ್ಯವಸ್ಥಿತರಾಗಿರುತ್ತಾರೆ. ಅಲ್ಲಿ ಗಡ್ಡ ಬಿಟ್ಟುಕೊಂಡು ತಿರುಗುವು ಆಲಸಿಗಳೂ, ನವ್ಯರೂ ಒಬ್ಬರೂ ಇಲ್ಲ. ಕೆಲವರು ಮನೆಯಲ್ಲೇ ದಾಡಿ ಮಾಡಿಕೊಳ್ಳುತ್ತಾರೆ. ಉಳಿದವರೆಲ್ಲ ಆ ಕ್ಷೌರಿಕನ ಕಡೆ ಹೋಗಿ ದಾಡಿ ಮಾಡಿಸಿಕೊಳ್ಳುತ್ತಾರೆ. ಬೇರೆಯವರ ದಾಡಿ ಮಾಡುವವನು ಕ್ಷೌರಿಕನೊಬ್ಬನೆ. ಒಟ್ಟಾರೆ ಹೇಳಬೇಕೆಂದರೆ - ಕ್ಷೌರಿಕ ಸ್ವಂತ ದಾಡಿ ಮಾಡಿಕೊಳ್ಳದ ಎಲ್ಲ ಗಂಡಸರ, ಹಾಗೂ ಕೇವಲ ಅಂಥ ಗಂಡಸರ, ದಾಡಿ ಮಾಡುತ್ತಾನೆ. ಸ್ವಂತ ಮಾಡಿಕೊಳ್ಳುವವರ ದಾಡಿ ಮಾಡುವುದಿಲ್ಲ; ಉಳಿದ ಎಲ್ಲ ಗಂಡಸರ ಕ್ಷೌರವನ್ನು ಅವನೇ ಮಾಡುತ್ತಾನೆ. ಸರಿಯಷ್ಟೆ?
(ಆ ಊರಿನ ಹೆಂಗಸರು ಅವರವರ ಅವಶ್ಯಕತೆಗಳನ್ನು ಅವರವರೇ ಪೂರೈಸಿಕೊಳ್ಳುತ್ತಾರೆ; ಮತ್ತು ಬೇರೆಯವರ ಅವಶ್ಯಕತೆ - ಹೆಂಗಸರದಾಗಲಿ, ಗಂಡಸರದಾಗಲಿ - ಅವರ ಜವಾಬ್ದಾರಿಯಲ್ಲ, ಅಂದುಕೊಳ್ಳಿ. ಆದರೆ ಇದು ಅಷ್ಟು ಪ್ರಸ್ತುತವಾದುದಲ್ಲ.)
ಹೀಗಿರುವಾಗ, ನಮ್ಮ ಮುಂದಿರುವ ಪ್ರಶ್ನೆಯೇನಪ್ಪಾ ಅಂದರೆ: ಕ್ಷೌರಿಕ ತನ್ನ ಕ್ಷೌರವನ್ನು ತಾನೇ ಮಾಡಿಕೊಳ್ಳುತ್ತಾನೆಯೇ ಇಲ್ಲವೇ?
ಉತ್ತರ ತಿಳಿಸಿ.
Continue Reading »
Posted in philosophy | Tagged ವಿರೋಧಾಭಾಸ, paradox | 5 Comments »
ಇತ್ತೀಚೆಗೆ ಬ್ರಿಟಿಶ್ ಕಾಮೆಡಿಯ ಬಗ್ಗೆ ಮಾತಾಡಿದೆವಲ್ಲ. ಒಂದು ರೀತಿಯಲ್ಲಿ “ಪೈಥನೆಸ್ಕ್” ಎಂದು ಹೇಳಬಹುದಾದ ಸಣ್ಣ ಸಣ್ಣ ಸ್ಕೆಚ್‍ಗಳನ್ನು ನಮ್ಮವರೇ ಆದ ಹರೀಶ್ ಕುಮಾರ್ ಎನ್ ಹಾಗೂ ಅವರ ಗೆಳೆಯರು ಮಾಡಿದ್ದಾರೆ. ಅವರ ಲೀಲೆಗಳನ್ನು ಯೂಟ್ಯೂಬ್‍ನಲ್ಲಿ ಇಲ್ಲಿ ನೋಡಬಹುದು. ಪೈಥನೆಸ್ಕ್ ಎಂದು ಹೇಳಿದೆನಲ್ಲ. ಇವು ಗುಣಮಟ್ಟದಲ್ಲಿ ಅಲ್ಲದಿದ್ದರೂ ಶೈಲಿಯಲ್ಲಿ ಆ ನುಡಿಯನ್ನು ಹೋಲುತ್ತವೆ. ಒಂದಷ್ಟು ಚುರುಕಾಗಿವೆ ಕೂಡ. ಉದಾಹರಣೆಗೆ: ಅನಂತಮೂರ್ತಿ ಹಾಗೂ ಕಪ್ಪಣ್ಣ, ಭಾರತರತ್ನ ಯಾರಿಗೆ ಕೊಡಬೇಕು ಎಂದು ಚರ್ಚಿಸುತ್ತಾರೆ; ಅನಂತಮೂರ್ತಿ, ಮೊಟ್ಟಮೊದಲಿಗೆ ಅಕ್ಬರನಿಗೆ ಭಾರತರತ್ನ ಕೊಟ್ಟು ನಂತರ ಉಳಿದವರ ಬಗ್ಗೆ ಯೋಚಿಸಬೇಕೆಂದು ಮೇಲಿಂದಮೇಲೆ ಪ್ರತಿಪಾದಿಸುತ್ತಾರೆ. ಇನ್ನೊಂದರಲ್ಲಿ ಪ್ರತಾಪ್ ಸಿಂಹ, ಸುನೀಲ್ ಜೋಶಿಯ ಪುಸ್ತಕ ಬಿಡುಗಡೆಯ ನೆವದಲ್ಲಿ ಇದ್ದಬದ್ದವರನ್ನೆಲ್ಲ ಬೈಯ್ಯತೊಡಗುತ್ತಾರೆ.
ಇನ್ನೂ ಚುರುಕಾಗಬೇಕು. ಹೆಚ್ಚು ಬಿಗಿ ಬೇಕು. ಆದರೆ ಒಟ್ಟಾರೆಯಾಗಿ ಉತ್ತಮ ಪ್ರಯತ್ನ. ನನಗನ್ನಿಸುವುದೆಂದರೆ, ಹರೀಶ್ ಹಾಗೂ ಗೆಳೆಯರಿಗೆ ಭಾಷೆ ಹಾಗೂ ವಿಷಯವಸ್ತುಗಳ ಮೇಲೆ ಹಿಡಿತವಿದೆ. ಹೀಗಾಗಿ ಅವರಿಂದ ಇನ್ನೂ ಒಳ್ಳೆಯ ಕೊಡುಗೆ ನಿರೀಕ್ಷಿಸಬಹುದು. ಆದ್ದರಿಂದ ಈ ಬ್ಲಾಗಿನ ಓದುಗರು ಅವರ ಪ್ರಯತ್ನವನ್ನು ಗಮನಿಸಬೇಕೆಂದು ನನ್ನ ವಿನಂತಿ. ಗಮನಿಸುವುದಷ್ಟೇ ಅಲ್ಲದೆ ನಿಮ್ಮ ನಿಮ್ಮ ಬ್ಲಾಗುಗಳ ಮೂಲಕ, ಹಾಗೂ ಅವಧಿ, ಮ್ಯಾಜಿಕ್ ಕಾರ್ಪೆಟ್‍ನಂಥ ಬಹು ಓದುಗರನ್ನು ಹೊಂದಿದ ಬ್ಲಾಗುಗಳ ಮೂಲಕ, ಅವರ ಪ್ರಯತ್ನಕ್ಕೆ ಹೆಚ್ಚಿನ ಪ್ರಚಾರ ಕೊಡಬೇಕೆಂದು ಕೇಳಿಕೊಳ್ಳುತ್ತೇನೆ. ಅದರಿಂದ ಹುರುಪಾಗಿ ಹರೀಶ ಮತ್ತು ಗೆಳೆಯರು, ಟಾಯಂಪಾಸ್‍ಗಾಗಿ ’ಆ..’ ಎಂದು ಬಾಯ್ದೆರೆದು ಕೂತಿರುವ ಕನ್ನಡದ ಫಾಲ್ತೂ ಮಂದಿಗೆ ತಮ್ಮ ಹಾಸ್ಯವನ್ನು ಇನ್ನಷ್ಟು ಬಡಿಸಲಿ. ಧನ್ಯವಾದ.
***
ಮೊನ್ನೆ ಒಂದು ಸೆಮಿನಾರಿನಲ್ಲಿ ಅಚಾನಕ್ಕಾಗಿ ನನಗೆ ಇನ್ನೊಂದು ಉತ್ತಮ ಬ್ರಿಟಿಶ್ ಕಾಮೆಡಿಯ ಪರಿಚಯವಾಯಿತು. ಇದರ ಹೆಸರು ’Brenman, Bird and Fortune’. ಈ ಮೂವರೂ ನಡೆಸಿಕೊಡುವ ಈ ಕಾರ್ಯಕ್ರಮ ಒಂದು ರಾಜಕೀಯ ವಿಡಂಬನೆ. ಹೆಚ್ಚಾಗಿ ಬ್ರಿಟಿಶ್ ರಾಜಕೀಯದ ವಿಡಂಬನೆಯಾದ್ದರಿಂದ ಎಲ್ಲವೂ ನಮಗೆ ಅಪೀಲ್ ಆಗುವುದಿಲ್ಲ. ಆದರೆ ಬರ್ಡ್ ಮತ್ತು ಫ಼ೋರ್ಚುನ್ ಮಾಡುವ ನಕಲು ಸಂದರ್ಶನಗಳು ಸಿಕ್ಕಾಪಟ್ಟೆ ಚೆನ್ನಾಗಿವೆ. ಇರಾಕ್ ಯುದ್ಧ, ಅಮೆರಿಕದ ಪಾಲಿಸಿಗಳು, ಸಬ್ ಪ್ರೈಮ್ ಕ್ರೈಸಿಸ್ ಮೊದಲಾದವುಗಳ ಬಗ್ಗೆ ಒಳ್ಳೆಯ ಸಂಶೋಧನೆ ನಡೆಸಿಯೇ ಅದನ್ನು ವಿಡಂಬನಾತ್ಮಕವಾಗಿ ಮಂಡಿಸುತ್ತಾರೆ. ಅವೂ ಯೂಟ್ಯೂಬ್‍ನಲ್ಲಿ ಇವೆ. ನೋಡಿ ಆನಂದಿಸಿ.
Posted in ಟಾಯಂಪಾಸ್, ಸುಮ್ಮನೆ, ಹರಟೆ | No Comments »
ನಾನು ಚಿಕ್ಕಂದಿನಲ್ಲೇ ಒಂದು ಸರಳ ಸುಂದರ ಸತ್ಯವನ್ನು ಕಂಡುಕೊಂಡಿದ್ದೆ. ಅದನ್ನು ನಾನು ಚೆನ್ನಾಗಿ ಬಳಸುತ್ತಲೂ ಇದ್ದೆ. ಆದರೆ ಅದು ಎಕನಾಮಿಕ್ಸ್‍ನ ಒಂದು ಮಹತ್ವದ ಸಿದ್ಧಾಂತ ಎಂದು ಗೊತ್ತಾಗಿದ್ದು ಒಂದೆರಡು ವರ್ಷಗಳ ಹಿಂದಷ್ಟೆ. ಇದು ಎರಡು ವಿಷಯಗಳನ್ನು ನಿದರ್ಶಿಸುತ್ತದೆ: (೧) ಎಕನಾಮಿಕ್ಸ್ ಎನ್ನುವುದರ ತಳಹದಿ ಕಾಮನ್ ಸೆನ್ಸ್ ಹಾಗೂ (೨) ನಾನು ಚಿಕ್ಕಂದಿನಿಂದಲೇ ದೀಡುಪಂಡಿತ.
ಅದಿರಲಿ. ಈ ಸಿದ್ಧಾಂತವನ್ನು ಮಂಡಿಸುವ ಮೊದಲು ಒಂದೆರಡು ಪ್ರಶ್ನೆಗಳು. ದರ್ಶಿನಿಯಲ್ಲಿ ದುಡ್ಡು ಕೊಟ್ಟು ಕಾಫಿ ತೊಗೊಂಡಾಗಿದೆ; ಕಾಫಿ ಕೆಟ್ಟದಾಗಿದೆ. ಆದರೂ ದುಡ್ಡು ಕೊಟ್ಟಿದ್ದೇವಲ್ಲ ಎಂಬ ಸಂಕಟಕ್ಕೆ ಅದನ್ನು ಕುಡಿಯುತ್ತೀರಲ್ಲ? ಮನೆಯಿಂದ ಊಟದ ಡಬ್ಬಿ ತೊಗೊಂಡು ಹೋಗಿದ್ದೀರಿ; ಆದರೆ ಮದ್ಯಾಹ್ನ ನಿಮ್ಮ ಮೆಚ್ಚಿನ ಸಹೋದ್ಯೋಗಿ ಹೊರಗೆ ಊಟಕ್ಕೆ ಹೋಗೋಣವೆ ಎಂದು ಕೇಳುತ್ತಾಳೆ; ಅವಳ ಜೊತೆ ಹೊರಗೆ ಊಟಕ್ಕೆ ಹೋದರೆ ಊಟದ ಜೊತೆಗೆ ನವನವೀನ ಗಾಸಿಪ್ಪಿನ ರಸಗವಳವೂ ಸಿಗುತ್ತದೆ ನಿಮ್ಮ ಪಾಲಿಗೆ. ಆದರೂ ಡಬ್ಬಿ ತಂದಿದ್ದೇನಲ್ಲ ಎಂದು ನಯವಾಗಿ ಅವಳ ಆಹ್ವಾನವನ್ನು ತಿರಸ್ಕರಿಸುತ್ತೀರಲ್ಲ? ಯಾವುದೋ ಸಿನೆಮಾಕ್ಕೆ ಹೋಗಿದ್ದೀರಿ; ಬೋರು ಹೊಡೆಸುತ್ತಿದೆಯೆಂದು ನಿದ್ದೆ ಹೊಡೆದುಬಿಟ್ಟಿರಿ. ಟಿಕೆಟ್ ಕೊಂಡು ನಿದ್ದೆ ಹೊಡೆದೆನಲ್ಲ ಎಂದು ನಂತರ ಹಳಹಳಿಯಾಗುತ್ತದೆಯೇ?
ಇಂಥ ಪ್ರಶ್ನೆಗಳಿಗೆ ನಿಮ್ಮ ಉತ್ತರ ’ಹೌದು’ ಎಂದಾದಲ್ಲಿ, ನೀವು ಮುಳುಗಿದ ವೆಚ್ಚದ ಮಿಥ್ಯೆಯ (sunk cost fallacy) ಬಗ್ಗೆ ಅರಿತುಕೊಳ್ಳಲೇಬೇಕು. Sunk cost ಎನ್ನುವುದು ಅತ್ಯಂತ ಸರಳ ಸಿದ್ಧಾಂತ. ಆದರೆ ನಮ್ಮ ದಿನಚರಿಯ ಅನೇಕ (ಹೆಚ್ಚಾಗಿ ಸಣ್ಣ ಸಣ್ಣ) ಗೊಂದಲಗಳನ್ನು ಸುಲಭವಾಗಿ ಇತ್ಯರ್ಥಗೊಳಿಸಲು ಸಹಾಯ ಮಾಡುತ್ತದೆ. ಮುಳುಗಿದ ವೆಚ್ಚ ಎಂದರೆ ಏನು? ಈಗಾಗಲೇ ವ್ಯಯವಾಗಿರುವಂಥ, ಬಹುಮಟ್ಟಿಗೆ ನಮ್ಮ ವಶಕ್ಕೆ ಮರಳಿ ಬರಲಾರದಂಥ ಹಣ (ಅಥವಾ ಬೇರೆ ಥರದ ವೆಚ್ಚ) ಮುಳುಗಡೆಯಾದ ವೆಚ್ಚದ ಖಾತೆಯಲ್ಲಿ ಬೀಳುತ್ತದೆ. ದರ್ಶಿನಿಯಲ್ಲಿ ಕೊಟ್ಟ ಹಣ, ಸಿನೆಮಾ ಟಿಕೆಟ್ಟಿಗೆ ಕೊಟ್ಟ ಹಣ, ಹೀಗೆ ಇನ್ನೂ ಅನೇಕ ಉದಾಹರಣೆಗಳನ್ನು ಕೊಡಬಹುದು. ಗಮನಿಸಬೇಕಾದ ಅಂಶವೆಂದರೆ, ಮೊದಲೇ ದುಡ್ಡು ಕೊಟ್ಟಿರಬೇಕಾದ ಅಗತ್ಯವಿಲ್ಲ. ಉದಾಹರಣೆಗೆ, ರೆಸ್ಟೊರಾಂಟಿನಲ್ಲಿ ಬಗೆಬಗೆಯ ಭಕ್ಷ್ಯಗಳನ್ನು ತರಿಸುವಾಗ, ನೀವು ಅವಕ್ಕೆಲ್ಲ ದುಡ್ಡು ತೆತ್ತೇ ತೆರುತ್ತೀರೆಂದು ನಿಮ್ಮ ಹಾಗೂ ರೆಸ್ಟೊರಾಂಟಿನ ನಡುವೆ ಅವ್ಯಕ್ತ ಒಪ್ಪಂದವಿರುತ್ತದೆ ತಾನೆ? ಅವರು ತಂದಿಟ್ಟದ್ದು ಎಷ್ಟೇ ಕೆಟ್ಟದಾಗಿದ್ದರೂ ದುಡ್ಡಂತೂ ಕೊಡಲೇಬೇಕು. ಜಗಳಾಡಿ ದುಡ್ಡು ಕೊಡದೆ ಬರಬಹುದು. ಆದರೆ ಎಷ್ಟು ಜನ ಹಾಗೆ ಮಾಡುತ್ತಾರೆ? ಹಾಗೂ ಎಷ್ಟು ಸಲ ಹಾಗೆ ಮಾಡಲು ಸಾಧ್ಯ?
ನಾನಿನ್ನೂ ಆಗ ಕಾಫಿ ಕುಡಿಯುತ್ತಿರಲಿಲ್ಲ; ಆದರೆ ಕೆಟ್ಟ ಕಾಫಿ ಕುಡಿಯಬೇಕಾದ ದಾರುಣತೆಯ ಬಗ್ಗೆ ಸಂವೇದನಾಶೀಲನಾಗಿದ್ದೆ. ನಮ್ಮ ತಂದೆಗೆ ಒಳ್ಳೆಯ ಸ್ಟ್ರಾಂಗ್ ಕಾಫಿ ಬೇಕು. ಮುಖ ಹಿಂಡುತ್ತ ಕೆಟ್ಟ ಕಾಫಿಯನ್ನು ಕುಡಿದು ಮುಗಿಸುವಾಗ ನಾನೆನ್ನುತ್ತಿದ್ದೆ, “ಅಲ್ಲ, ಹೆಂಗಿದ್ದರೂ ಅಂವಗ ರೊಕ್ಕಾ ಕೊಡಲಿಕ್ಕೇ ಬೇಕು. ಸುಳ್ಳ ಇಂಥಾ ಕಾಫಿ ಕುಡದು ಬಾಯಿ ರುಚೀನೂ ಯಾಕ ಕೆಡಿಸಿಕೊಳ್ಳಬೇಕು?” ಆದರೆ ಇದು ಅವರಿಗೆ ಪಟಾಯಿಸುತ್ತಿರಲಿಲ್ಲ. ಈಗಲೂ ಬಹಳ ಜನರಿಗೆ ಇದು ಮನವರಿಕೆಯಾಗುವುದಿಲ್ಲ. ಅಯ್ಯೋ, ದುಡ್ಡು ಕೊಟ್ಟಿದ್ದೇವಲ್ಲ ಎಂದು ಅರೆಬೆಂದ ಅಥವಾ ವಿಪರೀತ ಎಣ್ಣೆ, ಮಸಾಲೆಯುಳ್ಳ ತಿಂಡಿ ತಿಂದು ಹೊಟ್ಟೆ ಕೆಡಿಸಿಕೊಳ್ಳುವುದು. ದುಡ್ಡಂತೂ ಹೋಗಿಯೇ ಹೋಗುತ್ತದೆ; ಮೇಲೆ ಈ ದೈಹಿಕ ಮತ್ತು/ಅಥವಾ ಮಾನಸಿಕ ತ್ರಾಸುಗಳು. ಮರಳಿ ಬರಲಾರದ ವೆಚ್ಚದ ಹಂಗಿಗೆ ಬೇಡವಾಗಿದ್ದರೂ ಬೀಳುವ ಈ ಸಾಮಾನ್ಯ ಪ್ರಕ್ರಿಯೆಯೇ ಮುಳುಗಿದ ವೆಚ್ಚದ ಮಿಥ್ಯೆ ಅಥವಾ sunk cost fallacy. (ಇಷ್ಟೆಲ್ಲ ಹೇಳುವ ನಾನೂ ಇದಕ್ಕೆ ಎಷ್ಟೋ ಸಲ ಒಳಗಾಗುತ್ತೇನೆ.)
ಇದು ಯಾಕೆ ಒಂದು fallacy ಎಂದರೆ, ನಾವು ನಂತರ ತೆಗೆದುಕೊಳ್ಳುವ ನಿರ್ಧಾರ — ಉದಾಹರಣೆಗೆ ಕೆಟ್ಟ ಕಾಫಿ ಕುಡಿಯುವುದು — ಮೊದಲಿಗೆ ಉಂಟಾದ ವೆಚ್ಚಕ್ಕೆ ಅನುಗುಣವಾಗಿದೆ ಎಂಬ ತಪ್ಪು conclusionಗೆ ಬರುತ್ತೇವಾದ್ದರಿಂದ. ಇದು ಎಕನಾಮಿಕ್ಸ್‍ನ ಪ್ರಕಾರ (ಸಾಮಾನ್ಯ ತಿಳುವಳಿಕೆ ಪ್ರಕಾರವೂ) ವಿವೇಚನಾರಹಿತ (irrational) ನಡವಳಿಕೆ. ವಸ್ತುತ:, ಇವೆರಡೂ ನಿರ್ಧಾರಗಳಿಗೂ ಒಂದಕ್ಕೊಂದು ಸಂಬಂಧವಿಲ್ಲ. ಮೊದಲು ವೆಚ್ಚ ಭರಿಸಿದ ತಪ್ಪಿಗೆ ನಂತರ ಇನ್ನಷ್ಟು ವೆಚ್ಚ (ಯಾವುದೇ ಥರದಲ್ಲಿ) ಭರಿಸುವುದು ದಡ್ಡತನ. ಏನೋ ಅಂದುಕೊಂಡು ಸಿನೆಮಾ ಟಿಕೆಟ್ಟು ತೊಗೊಂಡಿರುತ್ತೀರಿ. ನೀವು ಹೊರಡುವ ಸಮಯಕ್ಕೆ ಸರಿಯಾಗಿ ಮಳೆ ಬರತೊಡಗುತ್ತದೆ. ಸಿನೆಮಾ ನೋಡಲೇಬೇಕೆನ್ನುವ ಆತುರವೇನೂ ಇಲ್ಲ ನಿಮಗೆ. ಆದರೆ ಟಿಕೆಟ್ಟು ತೊಗೊಂಡ ತಪ್ಪಿಗೆ, ಆಟೋದವನಿಗೆ ಡಬಲ್ ಮೀಟರ್ ದುಡ್ಡು ಕೊಟ್ಟೂ ಅರೆಬರೆ ತೊಯ್ಸಿಕೊಂಡು ಹೋಗಿ ಸಿನೆಮಾ ನೋಡಿದರೆ… ಏನು ಹೇಳಲಿ? ನಿಮ್ಮಂಥವರ ಸಲುವಾಗಿಯೇ ಮಳೆ (ಬೆಳೆ) ಆಗುತ್ತಿದೆ. (ಅಂದ ಹಾಗೆ, ಅತ್ತ ಕಡೆ ನಿಮ್ಮ ನಲ್ಲ/ನಲ್ಲೆ ಕಾಯುತ್ತಿದ್ದ ಪಕ್ಷದಲ್ಲಿ ನಿಮಗೆ ಮಾಫಿಯಿದೆ.)
Posted in Economics, ವಿಚಾರ | Tagged ಮುಳುಗಿದ ವೆಚ್ಚದ ಮಿಥ್, sunk cost fallacy | 7 Comments »