ಪದ್ಯದಂಥದ್ದೇನೋ ಬರೆದಿದ್ದೇನೆ. ನೀವೂ ಹಾಗೆ ಅಂದುಕೊಂಡು ಓದಿ. ಶೀರ್ಷಿಕೆಯ ’ಕ್ಯಾಮೆಲ್ಬ್ಯಾಕ್ ಬೂಲೆವಾರ್ಡ್’ (camelback boulevard), ಇಲ್ಲೇ ಪಕ್ಕದಲ್ಲಿರುವ, ಎಡಬಲಕ್ಕೂ ಅಮೆರಿಕನ್ ಮಿಡಲ್ಕ್ಲಾಸಿನ ಶಿಸ್ತಿನ, ಅಂದವಾದ ಮನೆಗಳಿರುವ, ರಸ್ತೆ. ಆಗಾಗ ಆ ರಸ್ತೆಯ ಮುಖಾಂತರ ವಾಕ್ ಹೋಗುತ್ತಿರುತ್ತೇನೆ.
ಅದೋ ನೋಡು ಅಮೆರಿಕಾ
ಕಾಣುತ್ತಲ್ಲ ತುಂಬಿಕೊಂಡು
ಉದ್ದವಾಗಿ ಅಗಲವಾಗಿ
ಭೂಗೋಳ ಪರೀಕ್ಷೆಯಲ್ಲಿ
ನಕ್ಷೆ ಬಿಡಿಸುವ ಮಕ್ಕಳಿಗೆ
ಅನುಕೂಲವಾಗಿ ಆಯತವಾಗಿ.
ದೊಡ್ಡದಲ್ಲವೆ ದೇಶ?
ಓ! ಕೇಳುತ್ತೀಯೇನು?
ದೊಡ್ಡ ದೇಶ.
ಈ ಬೂಲೆವಾರ್ಡಿನ ಮನೆಗಳಷ್ಟು.
ಅಥವಾ ವಾಲ್ಮಾರ್ಟಿನಷ್ಟು.
ಉಂ… ಬಹುತೇಕ ಜಗತ್ತಿನಷ್ಟು.
ಏನೋ ಬಿಡು
ಸರಿಯಾಗಿ ಗೊತ್ತಿಲ್ಲ
ಜಗತ್ತೆನ್ನುವುದು ಎಲ್ಲಿದೆಯೋ ಏನೋ
ಇಷ್ಟಕ್ಕೂ ನಮಗೇಕೆ?ದೊಡ್ಡದೆ ಇರಬೇಕು; ಇಲ್ಲಿ ಎಲ್ಲವೂ
ದೊಡ್ಡದು. ಮನೆ, ಕಾರು, ಮಂದಿ
ಬರ್ಗರುಗಳು, ಹಾಲಿನ ಡಬ್ಬಿಗಳು.
ಅದೇಕೆ, ಲಾನಿನಲ್ಲಿ ಓಡಾಡುವ
ಇಣಚಿಗಳನ್ನು ನೋಡಿದ್ದೀಯಾ?
ಒಂದೊಂದೂ ಮುಂಗುಲಿಯ ಮುಕ್ಕಾಲಷ್ಟಿವೆ.ಯಾಕೆ ಗ್ಲೋಬ್ ತಿರುಗಿಸುತ್ತಿ?
ಬೇರೆ ಕಡೆ ಹೇಗೆ ಅನ್ನೋ ಕುತೂಹಲವಾ?
ಹೇಳ್ತೇನೆ ಕೇಳು: ಈ ಬೂಲೆವಾರ್ಡಿನಾಚೆ
ಬೇರೇನೂ ಇಲ್ಲ.
ಇದ್ದರೂ ಚೂರೂ ಸುಖವಿಲ್ಲ.
ಅಲ್ಲೆಲ್ಲ ಮಂದಿಗೆ ನಮಗಿಂತ
ತಮ್ಮ ಮಕ್ಕಳ ಮೇಲೇ ಪ್ರೀತಿ ಜಾಸ್ತಿ.
ನಿನಗೇನು ಕಡಿಮೆ? ಶಾಂಪೂ ಹಾಕ್ತಾರೆ, ಕಾರು
ಅಲ್ಲ.. ಮೊನ್ನೆ ವಿಮಾನದಲ್ಲೂ ಹೋಗಿದ್ದೆಯಲ್ಲ!
ಹೇಗಿತ್ತು?ಇಲ್ಲಿ ಎಲ್ಲ ಇದೆ. ಪರವೂರ ಹಂಗೇಕೆ?
ಹೊಸದೇನೋ ಬೇಕಿದ್ದರೆ ಅದು
ಗೊಣಗುವ ಪೂರ್ವವೇ ಇಲ್ಲಿ ಬಂದು ಬೀಳುತ್ತದೆ.
ಎಷ್ಟೋ ಕಡೆ ಬೀಫಿಲ್ಲವಂತೆ
ಬೇಕನ್ನಿಲ್ಲವಂತೆ.
ಚೀಸೂ ಕಷ್ಟ. ನೀರು
ಕುಡಿಸುತ್ತಾರಂತೆ ಕೋಕ್ ಬದಲು.
ಕ್ಯಾಲರಿ ಇರುವ ಸಕ್ಕರೆ
ತಿನ್ನುತ್ತಾರಂತೆ! ಬೇಕಾ?ಬೆಡ್ರೂಮಿಂದ ಹೊರಗಟ್ಟುತ್ತಾರೆ
ಮಕ್ಕಳು ಕಲ್ಲು ಹೆಟ್ಟುತ್ತಾರೆ
ಗಾಡಿ ಹಾಯಿಸಿ ಕೊಲ್ಲುತ್ತಾರೆ.
ನೆಲದ ಮೇಲೆ ನಿದ್ದೆ
ಒಡಕು ಡಬ್ಬಿಯಲಿ ಊಟ
ಬೇರೆ ನಾಯಿಗಳ ಜೊತೆ ಕಚ್ಚಾಟ
ಬರಿಗಾಲಲ್ಲಿ ಓಡಾಟ.
ಚಳಿಗಾಲದಲ್ಲಿ ನಮಗೆ
ಬಣ್ಣಬಣ್ಣದ
ಕ್ಯಾಪು ಸ್ವೆಟರನ್ನೂ ತೊಡಿಸುವುದಿಲ್ಲ!
“ಅಲ್ಲೆಲ್ಲ ಮಂದಿಗೆ ನಮಗಿಂತ ತಮ್ಮ ಮಕ್ಕಳ ಮೇಲೇ ಪ್ರೀತಿ ಜಾಸ್ತಿ” - ವ್ಯಂಗ್ಯ ಚುರುಕಾಗಿದೆ!
- ರಾಜೇಶ
ಸಾಲಿ ಕಲಿಯೂ ಮುಂದ ಭಾರತ ದೇಶದ ನಕಾಶ ಬಿಡಿಸುವಾಗ ಒದ್ದಾಡಿ ಹೋಗೇನಿ. ಅಮೇರಿಕಾದ ಹುಡುಗರು ಪುಣ್ಯವಂತರು. ಒಂದು freehand ಕಾಟಕೋನ ಚೌಕೋನ ತಗದರ ಸಾಕು.
ಕವಿತೆ ಖುಶಿ ಕೊಟ್ಟಿತು.
Chakora

Kindof confused!!! Are you Dr. Dolittle too?
Enjoyed this one.
ರಾಜೇಶ: ಥ್ಯಾಂಕ್ಸ್!
ಸುನಾಥ ಗುರುಗಳ: ಹೌದು. ಇದ್ದದ್ದರಾಗ ನಮ್ಮ ಪಶ್ಚಿಮ ಕರಾವಳಿ ಸ್ವಲ್ಪ ಸುಲಭ. ಉಳಕೀದೆಲ್ಲ ಭಾಳ ತ್ರಾಸು ಪಟ್ಟು ತಗೀಬೇಕಾಗತಿತ್ತು.
ಡಾ|| ಟೀನಾ: ಇಲ್ಲಿ ಬಂದಾಗಿನಿಂದ ಮನುಷ್ಯ ಸಂಪರ್ಕ ತಪ್ಪಿದ ಹಾಗಾಗಿ, ಪ್ರಾಣಿಗಳ ಭಾಷೆ ಸುಲಭವಾಗಿ ಅರ್ಥವಾಗುತ್ತಿದೆ. ಅದಿರಲಿ, ಇತ್ತೀಚೆಗೆ ತಾವು ನನ್ನ ನನ್ನ ಬ್ಲಾಗಿನಲ್ಲಿ ಆಂಗ್ಲ ಭಾಷೆಯಲ್ಲಿ ಟಿಪ್ಪಣಿ ಬಿಡುತ್ತಿರುವುದಕ್ಕೆ ಕಾರಣವೇನು? ನನ್ನ ಕನ್ನಡ ಅಷ್ಟಕ್ಕಷ್ಟೆ ಎಂದೋ?
ಹಯ್ಯೊ ತಂದೆಯೆ,

ನನ್ನ ಲ್ಯಾಪ್ಟಾಪಿನಿಂದ ಕಮೆಂಟು ಮಾಡುವಾಗ ಆಂಗ್ಲ ಇರತ್ತೆ, ಇಲ್ಲದಿದ್ರೆ ಕನ್ನಡ. ನಿಮ್ಮ ಕನ್ನಡ ಅಷ್ಟಕ್ಕಷ್ಟೆ ಎಂದು ನೀವೇ ಹೇಳಿಕೊಂಡರೆ ನಾನು ಏನು ಹೇಳಲಿ?:)
ಆಮೇಲೆ ಇನ್ಯಾವುದಾದ್ರು ಕಾಂಟ್ರಾವರ್ಸಿ ಹುಟ್ಟುಹಾಕೀರ ಮತ್ತೆ!!
ನಾನು ಕನ್ನಡತಿ, ಕನ್ನಡದ ಅಭಿಮಾನಿ ಅನ್ನೋದನ್ನ ಈ ಮೂಲಕ ಗಂಟಾಗೋಸವಾಗಿ ಸಾರುತ್ತೇನೆ.
ಚಕೋರರೇ,
ಖುಶಿ ಕೊಟ್ಟಿತು ಈ ಪದ್ಯ. ಪದ್ಯ್ದದ ಶೀರ್ಷಿಕೆ ಮಸ್ತಾಗಿದೆ.
ಹೌದು, ಭಾರತದ ನಕಾಶೆ ಬಿಡಿಸೋದಕ್ಕೆ ನಾನು ಕಷ್ಟ ಪಟ್ಟಿದ್ದೇನೆ. ಅಮೇರಿಕಾದವರು ಪುಣ್ಯವಂತರಪ್ಪ.
ಮನಸ್ವಿನಿ:
ಥ್ಯಾಂಕ್ಸ್ಯೂ ನಿಮಗೆ. ಇವರ ನಕಾಶೆ ಕಷ್ಟಕರವಾಗಿದ್ದರೆ ಅದನ್ನೂ ಸುಲಭಗೊಳಿಸಿಕೊಳ್ಳುತ್ತಿದ್ದರೇನೋ.
ಹ್ಞೂ, ಅಮೇರಿಕಾ ದೊಡ್ಡದು ಗೊಣಗಾಟ ಶುರುಮಾಡಿದ್ದೀರಲ್ಲ, ದೊಡ್ಡ ದೇಶದ ಸಣ್ಣದನ್ನೂ ತೋರಿಸಿದ್ದರೆ ಚೆನ್ನಾಗಿತ್ತೇನೋ…
ನೀವು ತಿರುಗಾಡುವ ಬುಲೆವಾರ್ಡಿನ ಫೋಟೋ ಹಾಕಿ ನೋಡಿ ಪೂರ್ವದವರು ಪಶ್ಚಿಮದವರಾಗಿ ಹೋಗುತ್ತಾರೆ, ಅಷ್ಟೇ!