Feed on
Posts
Comments

ಒಂದು ಬೆಳಿಗ್ಗೆ, ತಲ್ಲಣಭರಿತ ಕನಸುಗಳಿಂದ ಎಚ್ಚರ ತಿಳಿದು ಎದ್ದ ಗ್ರೆಗೊರಿ ಸಾಂಸ ಸ್ಯಾಂಸಾ (ಟೀನಾ ಅಕ್ಕೋರ್ತಿಯ ಆರ್ಡರದ ಮೇರೆಗೆ), ಹಾಸಿಗೆಯಲ್ಲಿ ತಾನೊಂದು ದೈತ್ಯ, ಅಸಹ್ಯಕರ ಕೀಟವಾಗಿ ಬದಲಾದದ್ದನ್ನು ಕಂಡುಕೊಂಡ.

ಉಮ್.. ಬೇಡ, ಕಾಫ಼್ಕನ ಕತೆಯ ಅವಶ್ಯವಿಲ್ಲ. ನನ್ನದೇ kafkaesque ಕತೆಯಿರುವಾಗ, ನನ್ನದೇ ಮೆಟಮಾರ್ಫ಼ಸಿಸ್‍ನ ತಲ್ಲಣಭರಿತ ಸತ್ಯವಿರುವಾಗ, ಅನಗತ್ಯ ಫ಼್ಯಾಂಟಸಿಯ ಹಂಗು ಬೇಕಿಲ್ಲ. ಈ ಘೋರ ಕತೆಯನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದೇನೆ. ಆದರೂ ಅಳ್ಳೆದೆಯವರು ಇದನ್ನು ಓದಲು ಹೋಗಬೇಡಿರೆಂದು ವಿನಂತಿ.

ಸಣ್ಣಸಣ್ಣ ಅಪಘಾತಗಳು ನಮ್ಮೆಲ್ಲದ ದೈನಂದಿನ ಬದುಕಿನಲ್ಲಿ ಸಂಭವಿಸುತ್ತಲೇ ಇರುತ್ತವೆ. ಅವಕ್ಕೆ ಅಂಥ ಮಹತ್ವ ಇರುವುದಿಲ್ಲ. ಆದರೂ ಒಮ್ಮೊಮ್ಮೆ ಒಂದು ಸಣ್ಣ ಅಪಘಾತದ ಪರಿಣಾಮ ತುರ್ತಿನ ಅನನುಕೂಲಕ್ಕೇ ಮುಗಿಯದೆ ವಿಸ್ತಾರವಾದುದಾಗಿ ಬೆಳೆಯುತ್ತದೆ. ಅಂಥದೇ ಒಂದು ಅಪಘಾತ ನನಗೆ ಮೊನ್ನೆ ಆಯಿತು. ಅದು ನನ್ನ ಜೀವನವನ್ನೇ ಬದಲಾಯಿಸಿದೆ. ವಸ್ತುತ:, ಅದರ ಅತ್ಯಂತ ಪ್ರಬಲ ಪರಿಣಾಮವೆಂದರೆ, ಅದು ನನ್ನರಿವಿಲ್ಲದೆ ನನ್ನೊಳಗೆ ಹುದುಗಿದ್ದ ನನ್ನ ಇನ್ನೊಂದು ಮುಖವನ್ನು ಹೊರಗೆ ತಂದಿದೆ; ನನ್ನ ಅತ್ಯಂತ ಕರಾಳ ಮುಖ. ನಾನು ಇಂಥ ವ್ಯಕ್ತಿಯಾಗಲು ಶಕ್ಯವೆಂದು ನನಗೆ ಎಂದೂ ಅನ್ನಿಸಿರಲಿಲ್ಲ. ಎಂಥ ದಿಗ್ಭ್ರಮೆಯಲ್ಲಿ ಸಿಲುಕಿದ್ದೆನೆಂದರೆ ನಾನು ಯಾರು ಎನ್ನುವಲ್ಲಿಗೆ ಹೋಗಿ ಮುಟ್ಟಿತ್ತು ನನ್ನ ಆತಂಕ, ಸಂಶಯ. ನನ್ನ ಪಾಸ್‍ಪೋರ್ಟಿಗಾಗಿ ತಡಕಾಡಿ, ಅದರಲ್ಲಿದ್ದ ಹೆಸರು, ವಿಳಾಸ, ಹುಟ್ಟಿದ ದಿನ ಇತ್ಯಾದಿಗಳನ್ನು ನೋಡಿ ನಾನು ನಾನೇ ಎಂದು ನಿಶ್ಚಯಿಸಿಕೊಂಡು ಇನ್ನಷ್ಟು ತಳಮಳಕ್ಕೆ ಒಳಗಾದೆ.

ಇಲ್ಲಿಗೇ ಇದು ಮುಗಿಯುವುದಿಲ್ಲ. ಈ ನನ್ನ ಕರಾಳ ಮುಖ ಹೊರಬಂದಂದಿನಿಂದ, ನನ್ನ ಸಾಮಾನ್ಯ ಮುಖ ಹೇಗಿತ್ತೆನ್ನುವುದೇ ಮರೆತಿದೆ. ನಾನು ಮೊದಲು ಹೀಗಿರಲಿಲ್ಲ ಎಂಬ ಅರಿವಿದ್ದರೂ ನನ್ನನ್ನು ನಾನು ಬದಲು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇದೇ ಮುಖವನ್ನು ಹೊತ್ತು ತಿರುಗುವ ಭಾರಕ್ಕೆ ಒಳಗಾಗಿದ್ದೇನೆ. ಬಹುತೇಕ, ಸಮಯವೊಂದೇ ಇದಕ್ಕೆ ಮದ್ದು. ಸಮಯ ಕಳೆದಂತೆ ನಾನು ಮತ್ತೆ ಮೊದಲಿನಂತಾಗಬಹುದು. ಮತ್ತೆ ಮೊದಲಿನಂತೆ ಜಗತ್ತಿನ ಮೇಲೆ, ಅದಕ್ಕಿಂತ ಮುಖ್ಯವಾಗಿ, ನನ್ನ ಮೇಲೇ ನಂಬಿಕೆ ಮರಳಬಹುದು. ಇದೊಂದು ಆಶಯವಷ್ಟೆ. ಅಲ್ಲಿಯವರೆಗೆ ನನ್ನ ಬ್ಲಾಗಿನ ಓದುಗರು ಕೂಡ ನನ್ನ ಈ ಪರಿಸ್ಥಿತಿಯಲ್ಲಿ ಬೆಂಬಲ ಕೊಡಬೇಕು ಎಂಬ ಪ್ರಾರ್ಥನೆ.

ಆದದ್ದಿಷ್ಟೆ. ಭಯಂಕರ ದಿನಗಳ ನಂತರ, ಇಂದು ಹಜಾಮತಿ ಮಾಡಿಕೊಂಡೇ ತೀರಬೇಕು ಎಂದು ಮೊನ್ನೆ ರಾತ್ರಿ ನಿರ್ಧರಿಸಿದೆ. ಸರಿ, ದಾಡಿ ಮಾಡಿಕೊಂಡದ್ದಾಯ್ತು. ಮೀಸೆ ಕೂಡ ಸ್ವಲ್ಪ ಉದ್ದಕ್ಕೆ ಬೆಳೆದು ಬಾಯಲ್ಲಿ ಬಂಧಂಗಾಗುತ್ತಿತ್ತು. ಸ್ವಲ್ಪ ತುದಿ ಕತ್ತರಿಸಿದರಾಯ್ತು ಎಂದು ಕತ್ತರಿಯಿಂದ ಕತ್ತರಿಸಲು ಪ್ರಯತ್ನಿಸಿದೆ. ಆ ಸುಮಾರು ಕತ್ತರಿ ಸರಿಯಾಗಿ ಕತ್ತರಿಸುತ್ತಲೇ ಇರಲಿಲ್ಲ. ಹೋಗಲಿ ಎಂದು ರೇಜ಼ರಿನಿಂದಲೇ ಸ್ವಲ್ಪ ಸ್ವಲ್ಪ ನಿಧಾನಕ್ಕೆ ಕೆರೆಯತೊಡಗಿದೆ. ಹಾಗೆ ಮಾಡುವಾಗ ಒಂದು ಕಡೆ ಸ್ವಲ್ಪ ಹೆಚ್ಚು ಕಟ್ಟಾಗಿ ಮೀಸೆಯ ಬ್ಯಾಲನ್ಸ್ ತಪ್ಪಿತು. ಸರಿಪಡಿಸೋಣವೆಂದು ಇನ್ನೊಂದು ಕಡೆ ಸ್ವಲ್ಪ ಕತ್ತರಿಸಿದೆ. ಅದು ತಪ್ಪಿ ಬೇರೆಲ್ಲೋ ಸ್ವಲ್ಪ ಹೆಚ್ಚು ಕತ್ತರಿಸಿತು. ಬೆಕ್ಕು, ಮಂಗ, ಬೆಣ್ಣೆ, ತಕ್ಕಡಿ ನೆನೆಯುತ್ತ, ಪ್ರಕಟವಾಗಿ ನಗುತ್ತ, ಅದನ್ನು ರಿಪೇರಿ ಮಾಡಹೊರಟೆ. ರಿಪೇರಿ ಆಗುವ ಬದಲು ಇನ್ನಷ್ಟು ಕೆಡುತ್ತ ಹೋಯಿತು. ಆಕಡೆ ಈಕಡೆ ಮಾಡುತ್ತ, ತುದಿ ಕಟ್ಟಾಗುವ ಬದಲು ಮಧ್ಯದಲ್ಲೆಲ್ಲ ಕಟ್ಟಾಗಿ, ಅಲ್ಲಲ್ಲಿ ಮೀಸೆಯಲ್ಲಿ ಗ್ಯಾಪುಗಳಾದವು. ಯಾವುದೇ ರೀತಿಯ ರಿಪೇರಿ ಸಾಧ್ಯವಿಲ್ಲದ ಮಟ್ಟಕ್ಕೆ ಅದು ಮುಟ್ಟಿ, ಕೊನೆಗೆ ಬೇರೆ ದಾರಿಯಿಲ್ಲದೆ ಮೀಸೆಯನ್ನು ಪೂರ್ತಿ ಬೋಳಿಸಬೇಕಾಯಿತು.

R.I.P. ವಿಜಯ್ ತೆಂಡೂಲ್ಕರ್.

ಇತ್ತೀಚಿನ ದಿನಗಳಲ್ಲಿ ನನಗೆ ಬೋರಾದಾಗಲೆಲ್ಲ ಅಥವಾ ಖಾಲಿ ಇದ್ದಾಗೆಲ್ಲಾ (ಇರುವ ಕೆಲಸಗಳನ್ನೆಲ್ಲ ಮುಂದುಹಾಕುತ್ತ ಹೋಗುವ ನಾನು ಯಾವಾಗಲೂ ಖಾಲಿಯೇ), ಟಾಯಂಪಾಸ್‍ಗಾಗಿ ಅವಲಂಬಿಸಿರುವುದು ಬ್ರಿಟಿಶ್ ಕಾಮೆಡಿಗಳನ್ನು. ಮುಖ್ಯವಾಗಿ ’ಯೆಸ್ ಮಿನಿಸ್ಟರ್’ ಹಾಗೂ ’ಮಾಂಟಿ ಪೈಥನ್’. ಯೆಸ್ ಮಿನಿಸ್ಟರ್‌ನ ಒಂದಷ್ಟು ಎಪಿಸೋಡ್‍ಗಳು ಆನ್‍ಲೈನ್ ಇವೆ. ಮತ್ತೆ ಯೂಟ್ಯೂಬ್‍ನಲ್ಲಿ ಒಂದಷ್ಟು ತುಣುಕುಗಳಿವೆ. ಮಾಂಟಿ ಪೈಥನ್ನರೂ ಯೂಟ್ಯೂಬ್‍ನಲ್ಲಿ ಅನೇಕ ತುಣುಕುಗಳಾಗಿ ಸಿಗುತ್ತಾರೆ. ಪದೇ ಪದೇ ನೋಡಿದರೂ ಬೇಜಾರಾಗದ ಅದ್ಭುತ ಕಾಮಿಕ್ ಗುಣಗಳಿವೆ ಈ ಕೃತಿಗಳಲ್ಲಿ.

೧೯೮೦-೮೪ರ ನಡುವೆ ಯೆಸ್ ಮಿನಿಸ್ಟರ್ ಹಾಗೂ ೧೯೮೬-೮೮ರ ನಡುವೆ ಯೆಸ್ ಪ್ರೈಮ್ ಮಿನಿಸ್ಟರ್ ಬಿಬಿಸಿ ರೇಡಿಯೊ ಹಾಗೂ ಟಿವಿಯಲ್ಲಿ ಪ್ರದರ್ಶಿತವಾದವು. ಇವು ಆಗ ಬ್ರಿಟನ್ನಿನ ಪ್ರದಾನಮಂತ್ರಿಯಾಗಿದ್ದ ಮಾರ್ಗರೇಟ್ ಥ್ಯಾಚರರ ಫೇವರೆಟ್ ಕಾರ್ಯಕ್ರಮಗಳಾಗಿದ್ದುವು. ಜನಪ್ರತಿನಿಧಿಗಳು ಹಾಗೂ ಬ್ಯುರಾಕ್ರಸಿಯ ನಡುವಿನ ಹಗ್ಗಜಗ್ಗಾಟ ಯೆಸ್ (ಪ್ರೈಮ್) ಮಿನಿಸ್ಟರ್‌ನ ಮುಖ್ಯ ಮೋಟಿಫ಼್. ಒಬ್ಬ ಮಂತ್ರಿ (ಜಿಮ್ ಹ್ಯಾಕರ್), ಅವನ ಪರ್ಮನೆಂಟ್ ಸೆಕ್ರೆಟರಿ (ಸರ್ ಹಂಫ್ರಿ) ಹಾಗೂ ಅವನ ಪ್ರೈವೇಟ್ ಸೆಕ್ರೆಟರಿ (ಬರ್ನರ್ಡ್) — ಇವು ಮೂರು ಈ ಸರಣಿಯ ಮುಖ್ಯ ಪಾತ್ರಗಳು. ಹೆಚ್ಚಾಗಿ ಹ್ಯಾಕರ್‌ನ ಹೊಸ ಹೊಸ ಯೋಜನೆಗಳನ್ನು ಠುಸ್ಸೆನ್ನಿಸುವುದೇ ಹಂಫ್ರಿಯ ಕೆಲಸ. ಆಗಾಗ ಹ್ಯಾಕರ್ ಹಂಫ್ರಿಯನ್ನು ಮುಜುಗರಕ್ಕೊಳಪಡಿಸುವ ಸಂದರ್ಭಗಳೂ ಉಂಟು. ಒಂದು ಎಪಿಸೋಡಿನ ಸಂಭಾಷಣೆಯ ತುಣುಕೊಂದನ್ನು ನೋಡೋಣ. ಅದು ಈ ಸರಣಿಯ ಒಟ್ಟಾರೆ ಉದ್ದೇಶವನ್ನು ಸಂಕ್ಷಿಪ್ತವಾಗಿ ಹಿಡಿದುಕೊಡುತ್ತದೆ. ನೆನಪಿನಿಂದ ಬರೆಯುತ್ತಿದ್ದೇನೆ. ಪಕ್ಕಾ ಕೊಟೇಶನ್ ಅಲ್ಲ.

ಹ್ಯಾಕರನ ಸಲಹೆಗಾರ್ತಿ: I want to be there to see Humphrey’s reaction when you propose this idea to him.
ಹ್ಯಾಕರ್: To see the battle between the political will and the bureaucratic will?
ಸಲಹೆಗಾರ್ತಿ: Well, it will be more like the battle between political will and bureaucratic wont.

ಇನ್ನೊಮ್ಮೆ ಹ್ಯಾಕರ್ ಹಂಫ್ರಿಯನ್ನು ತಾನು ಕೊಟ್ಟ ಒಂದು ಹೇಳಿಕೆಯ ಬಗ್ಗೆ ಅಭಿಪ್ರಾಯ ಕೇಳುತ್ತಾನೆ. (ಮೂಲ: ವಿಕಿಕೋಟ್)

Sir Humphrey: Unfortunately, although the answer was indeed clear, simple, and straightforward, there is some difficulty in justifying assigning to it the fourth of the epithets you applied to the statement, inasmuch as the precise correlation between the information you communicated, and the facts insofar as they can be determined and demonstrated is such as to cause epistemological problems, of sufficient magnitude as to lay upon the logical and semantic resources of the English language a heavier burden than they can reasonably be expected to bear.
Jim Hacker: Epistemological, what are you talking about?
Sir Humphrey: You told a lie.

ಇನ್ನೊಂದು ನೋಡಿ.

Sir Humphrey: Prime Minister I must express in the strongest possible terms my profound opposition to the newly instituted practice which imposes severe and intolerable restrictions on the ingress and egress of senior members of the hierarchy and will, in all probability, should the current deplorable innovation be perpetuated, precipitate a progressive constriction of the channels of communication, culminating in a condition of organisational atrophy and administrative paralysis which will render effectively impossible the coherent and co-ordinated discharge of the function of government within Her Majesty’s United Kingdom of Great Britain and Northern Ireland!
Jim Hacker: You mean you’ve lost your key?

ಈ ರೀತಿಯ ಜಾಣತನ, ಚಾತುರ್ಯದ ಮಾತುಗಳು; ಹಂಫ್ರಿಯ ಉದ್ದುದ್ದ ವಾಕ್ಯಗಳು; ಇವರಿಬ್ಬರ ನಡುವೆ ಸಿಕ್ಕಿಹಾಕಿಕೊಂಡ ಬರ್ನರ್ಡ್‍ನ ಗೊಂದಲಗಳು; ಇವೆಲ್ಲ ಯೆಸ್ ಮಿನಿಸ್ಟರ್‌ನ ಕಾಮೆಡಿಯ ರೀತಿ. ಇದು ಗಂಭೀರ ಹಾಸ್ಯ. ಬ್ರಿಟಿಶ್ ಸಮಾಜ, ರಾಜಕಾರಣ, ಅಧಿಕಾರಶಾಹಿಗಳ ಬಗ್ಗೆ ಒಂದು ಹೈ ಕ್ಲಾಸ್ ಕಮೆಂಟರಿ.

ಮಾಂಟಿ ಪೈಥನ್ ತೀರಾ ವಿಭಿನ್ನ. ಯಾವುದೇ ಸೂತ್ರಗಳಲ್ಲಿ ಬಂಧಿಸಲು ಸಾಧ್ಯವಿಲ್ಲದ ಕಾಮೆಡಿ. ಈ ಗುಂಪಿನ ಬಂಡವಾಳ, ಅವರ ವಿಲಕ್ಷಣ ಕಲ್ಪಕತೆ. ಯಾರೂ ಊಹಿಸಲೂ ಸಾಧ್ಯವಿಲ್ಲದ ವಿಚಿತ್ರ, ಕ್ಷುಲ್ಲಕ, surreal ಸಂದರ್ಭಗಳನ್ನು ಸೃಷ್ಟಿಸಿ, ಆ ಮೂಲಕ ಹಾಸ್ಯವನ್ನು ಉತ್ಪಾದಿಸುವ ಪ್ರತಿಭೆ ಈ ಗುಂಪಿಗಿತ್ತು. ೭೦ರ ದಶಕದಲ್ಲಿ ಇವರು ಕಾಮೆಡಿ ಜಗತ್ತನ್ನು ಆಳುತ್ತಿದ್ದರು. ಮುಂದೆ ಎಷ್ಟೋ ಪೀಳಿಗೆಗಳು ಇವರ ಪ್ರಭಾವಕ್ಕೆ ಒಳಗಾಗಿವೆ. ಗುಂಪಿನಲ್ಲಿ ೬ ಮುಖ್ಯ ಸದಸ್ಯರಿದ್ದರು. ಒಳ್ಳೆಯ ಶಿಕ್ಷಣ, ಅಪಾರವಾದ ಓದು, ಆಳವಾದ ತಿಳುವಳಿಕೆ — ಎಲ್ಲ ಸದಸ್ಯರಲ್ಲೂ ಇತ್ತು. ಆದರೆ ಇವರ ತಮಾಷೆ ಯೆಸ್ ಮಿನಿಸ್ಟರ್‌ನಂತಲ್ಲ. ಸಿಲ್ಲಿನೆಸ್‍ಗೆ ಇನ್ನೊಂದು ಹೆಸರು ಮಾಂಟಿ ಪೈಥನ್ ಎನ್ನಬಹುದು. ಆದರೆ ಈ ಸಿಲ್ಲಿನೆಸ್ ಎಂಥೆಂಥ ವಿಲಕ್ಷಣ ಕ್ರಿಯೇಟಿವ್ ಸಂದರ್ಭಗಳಿಂದ ಹೊಮ್ಮುತ್ತಿತ್ತೆಂದರೆ, ನೀವು ಆ ಸಿಲ್ಲಿನೆಸ್ ಬಗ್ಗೆ ತಕರಾರು ತೆಗೆಯುವುದೇ ಸಾಧ್ಯವಿಲ್ಲ. ನಮ್ಮಲ್ಲಿಯ ಸಿಲ್ಲಿ ಕಾಮೆಡಿಗಳು ಸೋಲುವುದು ಆಳದ ಕೊರತೆಯಿಂದ, predictabilityಯಿಂದ. ಅಮೆರಿಕನ್ ಕಾಮೆಡಿಗಳೂ ಅಷ್ಟೆ; ಸತ್ವವಿಲ್ಲದ್ದಾಗಿರುತ್ತವೆ.

ವಿಲಕ್ಷಣ ಎಂದೆನಲ್ಲವೆ. ಕೆಲವು ಉದಾಹರಣೆ ಕೊಡುತ್ತೇನೆ. ಒಂದು ಸ್ಕೆಚ್‍ನಲ್ಲಿ ಜರ್ಮನಿ ಹಾಗೂ ಗ್ರೀಸ್ ನಡುವೆ ಪುಟ್ಬಾಲ್ ಪಂದ್ಯವಿದೆ. ಮಜಾ ಏನಪ್ಪಾ ಅಂದರೆ ಅದು ತತ್ವಜ್ಞಾನಿಗಳ ಫುಟ್ಬಾಲ್. ಎರಡೂ ತಂಡಗಳಲ್ಲಿ ಅವರವರ ದೇಶದ ಫಿಲಾಸಫರ್‌ಗಳಿದ್ದಾರೆ! ಇನ್ನೊಂದು ಸ್ಕೆಚ್‍ನಲ್ಲಿ ಒಬ್ಬ ಮನುಷ್ಯ ಸರಕಾರಿ ಅಫೀಸೊಂದಕ್ಕೆ ಹೋಗಿ ಅವನ ಮನೆಯಲ್ಲಿ ಮೀನು ಸಾಕಲು ಲೈಸನ್ಸ್ ಬೇಕು ಎಂದು ಕೇಳುತ್ತಾನೆ. ಆ ಥರದ್ದು ಬೇಕಾಗಿಲ್ಲ ಎಂದರೆ, ವಾದಿಸತೊಡಗುತ್ತಾನೆ. ಇನ್ನೊಮ್ಮೆ ’ಮಿನಿಸ್ಟ್ರಿ ಆಫ಼್ ಸಿಲ್ಲಿ ವಾಕ್ಸ್’ — ಇದರಲ್ಲಿರುವ ಪಾತ್ರಗಳಿಗೆಲ್ಲ ವಿಭಿನ್ನ ವಿಚಿತ್ರ ನಡೆಯುವ ಶೈಲಿಗಳು. ನೀವೂ ನಿಮ್ಮದೇ ಸಿಲ್ಲಿ ಶೈಲಿಯನ್ನು ರೂಢಿಸಿಕೊಳ್ಳಬೇಕೆ? ಸರಕಾರ ಅದಕ್ಕೆ ಹಣ ಕೊಡುತ್ತದೆ! ಇನ್ನು ಪೋಪ್ ಮತ್ತು ಮೈಕೆಲೆಂಜೆಲೊ, ಡೆಡ್ ಪ್ಯಾರಟ್ ಸ್ಕೆಚ್, ಇವಂತೂ ತುಂಬಾ ಪ್ರಸಿದ್ಧ. ಇನ್ನೊಂದರಲ್ಲಿ ಒಂದು ಕ್ಲಿನಿಕ್ ಇದೆ. ವಿಶೇಷ ಏನಪ್ಪಾ ಅಂದರೆ ಅದು ’ಆರ್ಗ್ಯುಮೆಂಟ್ ಕ್ಲಿನಿಕ್’. ದುಡ್ಡು ಕೊಟ್ಟು ಹೋಗಿ ಅಲ್ಲಿರುವ ’ಡಾಕ್ಟರ್’ ಜೊತೆ ಇಂತಿಷ್ಟು ಸಮಯ ನೀವು ವಾದಿಸಬಹುದು! ಇನ್ನೊಂದರಲ್ಲಿ ಒಂದು ಪೋಲೀಸ್ ಸ್ಟೇಶನ್ನು; ಅದರಲ್ಲಿ ಪ್ರತಿಯೊಬ್ಬನಿಗೂ ಅವನಿಗೆ ಹೊಂದುವ ಆವರ್ತನೆಯಲ್ಲಿ ಮಾತನಾಡಿದಾಗ ಮಾತ್ರ ಕೇಳಿಸುತ್ತದೆ; ಹಾಗೂ ಪ್ರತಿಯೊಬ್ಬನೂ ಇನ್ನೊಬ್ಬನ ಜೊತೆ ಮಾತಾಡುವಾಗ ಅವನಿಗೆ ಹೊಂದುವಂಥ ಆವರ್ತದಲ್ಲಿ ಮಾತಾಡುತ್ತಾನೆ; ಇದು ಸೃಷ್ಟಿಸುವ ಕಾಮಿಕ್ ಇಫ಼ೆಕ್ಟನ್ನು ನೋಡಿಯೇ ಅನುಭವಿಸಬೇಕು. ಹೀಗೆ ಅವರ ಥೀಮುಗಳಿಗೆ ಯಾವುದೇ ಸೀಮೆಯೇ ಇಲ್ಲ. ಇಜಿಪ್ತಿನ ಪಿರಮಿಡ್ಡುಗಳಿಗೆ ಹೋಗುತ್ತಾರೆ; ಹಿಟ್ಲರ್ ಬರುತ್ತಾನೆ; ವೈಕಿಂಗ್‍ಗಳು ಬಂದು ವಿಚಿತ್ರವಾಗಿ ಹಾಡಿ ಹೋಗುತ್ತಾರೆ; ಪಿಕಾಸೊ ಸೈಕಲ್ ಹೊಡೆಯುತ್ತ ಚಿತ್ರ ಬಿಡಿಸುತ್ತಾನೆ; ’ಫಿಶ್ ಸ್ಲ್ಯಾಪ್ ಡಾನ್ಸ್’ ಎಂಬ ಡಾನ್ಸ್‍ನಲ್ಲಿ, ಒಬ್ಬ ಇನ್ನೊಬ್ಬನಿಗೆ ಮೀನುಗಳಿಂದ ಕಪಾಳಕ್ಕೆ ಹೊಡೆಯುತ್ತ ಕುಣಿಯುತ್ತಿರುತ್ತಾನೆ.

ಇವೆರಡರ ಡಿವಿಡಿಗಳನ್ನು ಖರೀದಿಸುವುದು ನನ್ನ ವಿಶ್‍ಲಿಸ್ಟಿನಲ್ಲಿ ಇದೆ. ಅಲ್ಲಿಯವರೆಗೆ ಮತ್ತೆ ಮತ್ತೆ ಈ ತುಣುಕುಗಳನ್ನು ನೋಡುತ್ತಿರುತ್ತೇನೆ. ನೀವೂ ಹುಡುಕಿ ನೋಡಿ. ಆನಂದಿಸಿ.

ಫುಟ್‍ಪಾತಿನಿಂದ ಇಳಿದು, ಮೇಲೆ ನೋಡುತ್ತಲೇ ನಾಕು ಹೆಜ್ಜೆ ಹಿಂದೆ ಬಂದೆ. ನಡುಬೀದಿಯಲ್ಲಿ ನಿಂತು, ಕೈಗಳೆರಡನ್ನೂ ಬಾಯಿಯ ಸುತ್ತ ಲೌಡ್‍ಸ್ಪೀಕರಿನ ಹಾಗೆ ಅಗಲಿಸಿ, ಜೋರಾಗಿ “ಟೆರೀಸಾ,” ಎಂದು ಕಿರುಚಿದೆ, ಕಟ್ಟಡದ ಮೇಲ್ಮಹಡಿಗಳನ್ನುದ್ದೇಶಿಸಿ.

ನನ್ನ ನೆರಳು ಚಂದ್ರನಿಗೆ ಹೆದರಿ, ಗಬಕ್ಕನೆ ನನ್ನ ಕಾಲಬುಡದಲ್ಲಿ ಕವುಚಿಕೊಂಡಿತು.

ಇನ್ನೊಮ್ಮೆ, “ಟೆರೀಸಾ!” ಎಂದು ಕೂಗುವಾಗ ಯಾರೋ ಒಬ್ಬ ಅತ್ತಕಡೆ ಬಂದ. “ನೀನು ಇನ್ನೂ ಜೋರಾಗಿ ಕೂಗದಿದ್ದರೆ ಅವಳಿಗೆ ಕೇಳಿಸೊಲ್ಲ. ಒಂದು ಕೆಲ್ಸಾ ಮಾಡೋಣ. ಇಬ್ಬರೂ ಸೇರಿ ಕೂಗೋಣ. ಸರಿ, ಮೂರರ ತನಕ ಎಣಿಸೋಣ. ’ಮೂರು’ ಅಂದ ತಕ್ಷಣ ಇಬ್ಬ್ರೂ ಸೇರಿ ಕೂಗೋಣ.” ಅವನು ಎಣಿಸಿದ, “ಒಂದು ಎರಡು ಮೂರು.” ಇಬ್ಬರೂ ಗಂಟಲು ಬಿಚ್ಚಿ ಕಿರುಚಿದೆವು, “ಟೆ-ರ್ರೀ-ಸಾ…!”

ಥೇಟರಿನಿಂದಲೋ ಕಾಫಿ ಕುಡಿದೋ ವಾಪಸು ಬರುತ್ತಿದ್ದ ಗೆಳೆಯರ ಗುಂಪೊಂದು ನಾವು ಯಾರನ್ನೋ ಕರೆಯುತ್ತಿದ್ದುದನ್ನು ನೋಡಿತು. “ನಾವೂ ನಿಮ್ಮ ಜೊತೆ ಸೇರ್ಕೊಂಡು ಕೂಗ್ತೀವಿ… ಬನ್ರೋ” ಎನ್ನುತ್ತ ನಡುಬೀದಿಯಲ್ಲಿ ನಿಂತಿದ್ದ ನಮ್ಮನ್ನು ಬಂದು ಸೇರಿಕೊಂಡರು. ಮತ್ತೆ ಮೊದಲು ಬಂದಿದ್ದವ ಮೂರರ ತನಕ ಎಣಿಸಿದ. ಎಲ್ಲರೂ ಏಕಕಂಠದಿಂದ ಒದರಿದೆವು, “ಟೇ-ರ್ರೀ-ಸ್ಸ್ಸಾ!”

ಮತ್ತ್ಯಾರೋ ಬಂದು ನಮ್ಮನ್ನು ಸೇರಿಕೊಂಡರು; ಕಾಲುಗಂಟೆಯ ನಂತರ ಒಂದು ದೊಡ್ಡ ಗುಂಪೇ ಅಲ್ಲಿ ನೆರೆದಿತ್ತು. ಸುಮಾರು ಇಪ್ಪತ್ತು ಜನ ಆಗಿರಬಹುದು. ಆವಾಗವಾಗ ಹೊಸಬರು ಬಂದು ಕೂಡಿಕೊಳ್ಳುತ್ತಿದ್ದರು.

ಎಲ್ಲರನ್ನೂ ಸಂಘಟಿಸಿ, ಏಕಕಂಠದಿಂದ ಒಂದು ಒಳ್ಳೆಯ ಕರೆ ಕೊಡುವುದೆಂದರೆ ಸುಲಭದ ಮಾತಾಗಿರಲಿಲ್ಲ. ಮೂರು ಎಣಿಸುವ ಮೊದಲು ಶುರು ಮಾಡುವವರೋ ಎಲ್ಲರೂ ಮುಗಿಸಿದ ಮೇಲೂ ಮುಂದುವರಿಸುವವರೋ ಇದ್ದೇ ಇರುತ್ತಿದ್ದರು. ಆದರೂ ಈ ವ್ಯತ್ಯಾಸಗಳನ್ನೆಲ್ಲ ನೀಗಿಸಿಕೊಂಡು ಕೆಲಸವನ್ನು ಚೆನ್ನಾಗಿ ನಿಭಾಯಿಸತೊಡಗಿದೆವು. ನಾವು ನಮ್ಮ ಕೂಗು ಹೀಗಿರಬೇಕೆಂದು ನಿಶ್ಚಯಿಸಿದೆವು: ’ಟೆ’ಯನ್ನು ಕೆಳದನಿಯಲ್ಲಿ ದೀರ್ಘವಾಗಿ ಅನ್ನತಕ್ಕದ್ದು; ’ರೀ’ ಉಚ್ಚಸ್ವರ ಹಾಗೂ ದೀರ್ಘ; ’ಸಾ’, ಮತ್ತೆ ಕೆಳದನಿ, ಆದರೆ ಹೃಸ್ವ. ಚೆನ್ನಾಗಿ ಕೇಳುತ್ತಿತ್ತು. ಯಾರಾದರೂ ಈ ಲಯವನ್ನು ತಪ್ಪಿಸಿದಾಗ ಸಣ್ಣಪುಟ್ಟ ತಕರಾರುಗಳು ಅವಾಗಿವಾಗ ಬರುತ್ತಿದ್ದವು.

ಇದು ನಮ್ಮ ಹಿಡಿತಕ್ಕೆ ಬಂದಿತ್ತಷ್ಟೆ. ಆಗಲೇ ಯಾವನೋ ಒಬ್ಬ ಪ್ರಶ್ನೆಯೆತ್ತಿದ — ಅವನ ದನಿಯಿಂದ ಅವನ ಲಕ್ಷಣಗಳನ್ನು ನಿರ್ಧರಿಸಬಹುದಾದಲ್ಲಿ, ಅವನ ಮುಖದ ಮೇಲೆ ಸಣ್ಣ ಚಿಕ್ಕಿಗಳಿರಲಿಕ್ಕೆ ಸಾಕು — “ಅಲ್ಲ, ಅವಳು ಮನೇಲಿದಾಳೆ ಅನ್ನೋದು ಗ್ಯಾರಂಟೀನಾ ಅಂತ?”

“ಇಲ್ಲ,” ನಾನೆಂದೆ.

“ಇದೊಳ್ಳೆ ಫಜೀತಿ,” ಇನ್ನೊಬ್ಬನೆಂದ. “ಕೀ ಮರ್ತಿದೀಯಾ?”

“Actually, ನನ್ನ ಕೀ ನನ್ನ ಹತ್ತಿರಾನೇ ಇದೆ,” ಅಂತ ಹೇಳಿದೆ.

“ಮತ್ತೆ? ಹೋಗು ಮೇಲಕ್ಕೆ!” ಅವರೆಂದರು.

“ಆದ್ರೆ, ನಾನು ಇಲ್ಲಿ ಇರಲ್ಲ,” ವಿವರಿಸಿದೆ, “ಬೇರೆ ಕಡೆ ಇರೋದು. ನಾನಿರೋದು ಆ ಸೈಡು.”

“ಹೌದಾ? ಹಾಗಿದ್ರೆ, ನಾನು ಒಂದು ಮಾತು ಕೇಳ್ತೀನಿ. ಇಲ್ಲಿ ಯಾರಿರ್ತಾರೆ?” ಆ ಚಿಕ್ಕಿ ಚಿಕ್ಕಿ ದನಿಯವನು ಕೇಳಿದ.

“ಅಯ್ಯೋ, ಅದು ನನಗೆ ಹ್ಯಾಗೆ ಗೊತ್ತಿರುತ್ತೆ?” ಅಂತಂದೆ.

ಯಾಕೋ ಜನರು ಇದರಿಂದ ಸ್ವಲ್ಪ ಕೋಪ ಮಾಡಿಕೊಂಡಂತೆ ಅನ್ನಿಸಿತು.

“ಅಣಾ.. ಹಾಗಿದ್ದ್ರೆ ನಾವು ಇಲ್ಲಿ ನಿಂತ್ಕೊಂಡು ’ಟೆರೀಸಾ’ ಅಂತ ಯಾಕೆ ಬಡ್ಕೋತಿದೀವಿ ಅಂತ ರವಷ್ಟು ಹೇಳ್ತೀಯಾ?” ಯಾವನೋ ಹಲ್ಲು ಬಿಗಿಹಿಡಿದು ದನಿ ಹೊರಡಿಸಿದ.

“ಇದೇ ಹೆಸರು ಕರೀಬೇಕು ಅಂತ ನಂದೇನೂ ಇಲ್ಲ. ಬೇರೆ ಯಾವ ಹೆಸರಾದ್ರೂ ಪರ್ವಾಗಿಲ್ಲ,” ನಾನು ಹೇಳಲು ಪ್ರಯತ್ನಿಸಿದೆ. “ಅಥವಾ ನಿಮಗಿಷ್ಟ ಇದ್ದರೆ ಬೇರೆ ಯಾವುದೋ ಜಾಗದಲ್ಲಿ ನಿಂತ್ಕೊಂಡೂ ಕರೀಬಹುದು.”

ಎಲ್ಲರೂ ಅಸಮಾಧಾನ ತಳೆಯುತ್ತಿದ್ದರು.

“ನಮ್ಮ ಜೊತೆ ಆಟ ಆಡ್ತಿದೀಯಾ? ಇದು ಸರಿ ಇಲ್ಲ,” ಚಿಕ್ಕಿ ದನಿಯವನು ಸಂಶಯದಿಂದ ಕೇಳಿದ.

“ಏನು ಹೇಳ್ತಾ ಇದೀರಾ?” ಎಂದು ನಾನು ವಿಷಾದದಿಂದ ಅಂದು, ಉಳಿದವರಿಗಾದರೂ ನನ್ನಲ್ಲಿ ಯಾವ ದುರುದ್ದೇಶವೂ ಇಲ್ಲ ಎಂಬ ನಂಬಿಕೆಯಿದೆಯೇನೋ ಎಂದು ಎಲ್ಲರತ್ತ ಮುಖ ಹೊರಳಿಸಿದೆ. ಯಾರೂ ಏನೂ ಹೇಳಲಿಲ್ಲ.

ಒಂದು ಕ್ಷಣ ಅಲ್ಲಿ ಮುಜುಗರದ ವಾತಾವರಣ ಏರ್ಪಟ್ಟಿತು.

ಅಷ್ಟರಲ್ಲಿ, ಅವರಲ್ಲೊಬ್ಬ, ಹಗುರಾಗಿ ಹೇಳಿದ, “ಒಂದು ಕೆಲಸ ಮಾಡೋಣ. ಕೊನೇ ಸಲ ’ಟೆರೀಸಾ’ ಅಂತ ಕರದು, ನಮ್ಮ ನಮ್ಮ ಮನೆಗಳಿಗೆ ಹೋಗೋಣ.”

ಸರಿ, ಇನ್ನೊಂದು ಸಲ ಕೂಗಿದೆವು. “ಒಂದು ಎರಡು ಮೂರು.. ಟೆರೀಸಾ!” ಆದರೆ ಅಷ್ಟು ಸರಿಯಾಗಿ ಆಗಲಿಲ್ಲ. ಆಮೇಲೆ ಮಂದಿ ಮನೆಯತ್ತ ನಡೆದರು. ಕೆಲವರು ಅತ್ತಕಡೆ, ಕೆಲವರು ಇತ್ತಕಡೆ.

ನಾನೂ ಅಲ್ಲಿಂದ ನಡೆದು ಸರ್ಕಲ್ಲಿಗೆ ಬಂದಿದ್ದೆ. ಆವಾಗ ಯಾರೋ “ಟೆssರೀssಸಾss” ಎಂದು ಕಿರುಚಿದಂತೆ ಅನ್ನಿಸಿತು.

ಬಹಳ ಮಾಡಿ, ಯಾರೋ ಇನ್ನೂ ಅಲ್ಲೇ ಉಳಿದು ಕರೆಯುತ್ತಿದ್ದಾರೆ. ಯಾರೋ. ತುಂಬ ಹಠಮಾರಿಯಿರಬೇಕು.

***

ಇದು ಇಟ್ಯಾಲೋ ಕ್ಯಾಲ್ವಿನೋ (Italo Calvino) ಎಂಬ ಮಾಂತ್ರಿಕನದು. ಇಟ್ಯಾಲಿಯನ್ ಕತೆಗಾರ, ಕಾದಂಬರಿಕಾರ. ಎರಡು-ಮೂರು ವರ್ಷಗಳ ಹಿಂದೆ ಇದು, ಮತ್ತೆ ಇನ್ನಷ್ಟು ಫ಼ೇಬಲ್‍ಗಳನ್ನೂ, ಮತ್ತೆ ಅವನ ಕೆಲ ಬಿಡಿ ಬರೆಹಗಳನ್ನೂ ಓದಿ ಮೈಮರೆತಿದ್ದೆ. ಇದರ ಹೆಸರು, The Man Who Shouted Teresa. ಇಲ್ಲಿ ಒಂದಷ್ಟು ಇವೆ: ಲೇಖನಗಳು, ಕತೆಗಳು, ವಿಮರ್ಶೆ. ಎಷ್ಟು ಅಂದುಕೊಂಡರೂ, ಯಾಕೋ ಇಲ್ಲಿಯವರೆಗೆ ಅವನ ಕೃತಿಗಳನ್ನು ತೊಗೊಂಡು ಓದಲಾಗಿಲ್ಲ. ಇನ್ನೂ ತಡ ಮಾಡಬಾರದು. ಯಾಕೋ ಒಮ್ಮೆಲೆ ಇದು ನೆನಪಾಯಿತು. ಅದಕ್ಕೆ ಅನುವಾದಿಸಿ ಹಾಕಿದ್ದೇನೆ. ಏನನ್ನಿಸಿತು ಹೇಳಿ.

ಇಲ್ಲೆಲ್ಲೋ ಇರುವ ಅವಳ ಕಸಿನ್ ಹಾಗೂ ಕಸಿನ್ನಳ ಗಂಡನ ಜೋಡಿ ಮಾತಾಡು ಅಂತ ಎಸ್ ಭಾಳ ದಿನದಿಂದ ಗಂಟುಬಿದ್ದಿದ್ದಳು. ತೀರಾ ಆಪ್ತರ ಜೋಡಿ ಸೈತ ಫೋನಿನಲ್ಲಿ ಮಾತಾಡುವುದೆಂದರೆ ನನಗೆ ಭಯಂಕರ ಸಂತೋಷದ ಸಂಗತಿ ಅಲ್ಲ. ಹಿಂತಾದರಾಗ ಯಾವುದೇ ಗುರುತು ಪರಿಚಯವಿಲ್ಲದವರ ಜೋಡಿ ನಾನು ಮಾತಾಡಿಯೇನೆ? ಈ-ಮೇಲ್‍ನಲ್ಲಿ ಕೆಲಸ ಮುಗಿಸಿ, ’ಓಹೋ ತಮಗೆ ಅವಶ್ಯ ಫೋನು ಮಾಡುತ್ತೇನೆ,’ ಇತ್ಯಾದಿ ದೇಶಾವರಿ ಬರೆದು ಕೈತೊಳಕೊಂಡಿದ್ದೆ. ಆದರೆ ಇವೆಲ್ಲ ಇಷ್ಟು ಸುಲಭವಾಗಿ ಬಗೆಹರಿಯುವಂಥ ವಿಷಯಗಳೇ ಅಲ್ಲ. ಆ ಕಸಿನ್ನಳು ನನಗೆ ಫೋನು ಮಾಡಿದ್ದಳೆಂದೂ, ನಾನು ಏಕೋ ಎತ್ತಲಿಲ್ಲವೆಂದೂ, ಕಸಿನ್ನಳ ಅಪ್ಪನ ಮುಖಾಂತರ ಭಾರತದಲ್ಲೆಲ್ಲ ಸುದ್ದಿಯಾಗಿ, ಅದು ಎಸ್‍ಳ ಮೂಲಕ ನನಗೆ ಮರಳಿ ಬಂತು. ನಾನು ಅದೆಷ್ಟು ಬೇಜವಾಬ್ದಾರಿಯ ಮನುಷ್ಯನೆಂಬುದು ಮತ್ತೆ ಮತ್ತೆ ನಿರೂಪಿತವಾಯಿತು. ಆದರೆ ನಾನು ಹಳೆಯ ಖಿಲಾಡಿಯಾದ್ದರಿಂದ ಮತ್ತೆ ಹೇಗೋ, ’ಅವಶ್ಯ ಫೋನು ಹಚ್ಚುತ್ತೇನೆ. ಹೀಗೇ ಏನೇನೋ ಯೋಚನೆಯಲ್ಲಿ ಮರತಿದ್ದೆ. ಇಷ್ಟಕ್ಕೂ ಅವಳ ಫೋನು ನನಗ ಬಂದಿಲ್ಲ,’ ಎಂದೆಲ್ಲ ಹೇಳಿ ದಾಟಿದೆ. ಖರೆವಂದ್ರೂ ಆ ಕಸಿನ್ನಳ ಫೋನು ನನಗ ಬಂದಿರಲಿಲ್ಲ. ನನ್ನ ಮಿಸ್ಸ್‍ಡ್ ಕಾಲುಗಳಲ್ಲೂ ಇಲ್ಲ. ಹೀಗಾಗಿ ಯಾವುದೇ ತಪ್ಪಿತಸ್ಥ ಭಾವ ಇಲ್ಲದೆ ಯಥಾಪ್ರಕಾರ ಈ ಫೋನಿನ ಪ್ರಸಂಗವನ್ನು ಮುಂದೆ ಹಾಕಿ ಆರಾಮಾಗಿದ್ದೆ. ಆದರೆ ಮತ್ತೊಂದೆರಡು ದಿನಕ್ಕೆ, ಅವಳು ಫೋನ್ ಮಾಡಿದಾಗ ನನ್ನ ಫೋನಿನ ವಾಯ್ಸ್ ಮೇಲ್‍ಬಾಕ್ಸಿಗೆ ಅದು ಹೋಯಿತೆಂದೂ, ಆದರೆ ವಾಯ್ಸ್ ಮೇಲ್‍ಬಾಕ್ಸ್ ಸೆಟ್ ಮಾಡಿರಲಿಲ್ಲವಾದ್ದರಿಂದ ಮೆಸೇಜನ್ನೂ ಬಿಡಲಾಗಲಿಲ್ಲವೆಂದೂ ಮತ್ತೊಮ್ಮೆ ಪುಕಾರೆದ್ದಿತು. ಅಷ್ಟಕ್ಕೇ ಮುಗಿಯದೆ ಆ ಕಸಿನ್ನಳ ಪತ್ರವೂ ಬಂದು ತಲುಪಿತು. ಅದರಲ್ಲೂ ಅದೇ ಪುಕಾರಿನ ಜೊತೆ ’ನೀನು ಹಚ್ಚಿದರೆ ಸರಿ, ಇಲ್ಲದಿದ್ದರೆ ನಾನು ಹಚ್ಚುತ್ತೇನೆ,’ ಎಂಬ ವಾಕ್ಕೂ ಇದ್ದಿತು.

ದಿಕ್ಕುಗಾಣದೆ, ಫೋನು ಮಾಡಿ ಇದನ್ನೊಮ್ಮೆ ಬಗೆಹರಿಸಲು ನಿಶ್ಚಯಿಸಿದೆ. ಆದರೂ ಚಟದ ಪ್ರಕಾರ ಅದನ್ನೂ ಮುಂದೆ ಹಾಕಿ ರಾತ್ರಿ ೮ರ ಸುಮಾರು ಫೋನು ಹಚ್ಚುತ್ತೇನೆ ಎಂದು ಪತ್ರ ಬರೆದೆ. ಏನೋ ಮಾಡುತ್ತ ಆರಾಮಾಗಿ ಕೂತವನಿಗೆ ಸುಮಾರು ೮:೧೫ರ ಹೊತ್ತಿಗೆ ಯಾಕೋ ಏನೋ ನಾನು ಕೊಟ್ಟ ಮಾತು ನೆನಪಾಯಿತು. ನೆನಪಾಗದಿದ್ದರೆ ಛೊಲೊ ಇತ್ತು, ಖರೆ ಈಗ ನೆನಪಾಗಿಬಿಟ್ಟಿತಲ್ಲ. ಸರಿ, ಇನ್ನೇನು ಮಾಡಲು ಸಾಧ್ಯವಿಲ್ಲ, ಒಂದೆರಡು ನಿಮಿಷ ಮಾತಾಡಿ ಮುಗಿಸೋಣ ಎಂದು ಫೋನೊತ್ತಿದೆ. ಯಾರೂ ಎತ್ತಲಿಲ್ಲ. ಆಹಾ.. ಅಂದರ ದೈವ ನನ್ನ ಜೊತೆಗಿದೆ ಅಂಧಂಗಾತು. ಆದರ ಒಂದರೆ ನಿಮಿಷ ಮಾತ್ರ. ಅವಳ ಫೋನು ಬಂದೇ ಬಂತು. ಎತ್ತಿದರೆ, ಉಭಯಕುಶಲೋಪರಿ ಆಗಿಂದಾಗ ಮುಗಿಸಿ, ವಾಯ್ಸ್ ಮೇಲ್‍ಬಾಕ್ಸ್‍ನ ಉಪಯೋಗಗಳನ್ನು ಬಣ್ಣಿಸಿದಳು, ಪ್ರಯತ್ನಪಟ್ಟು ಅಮೆರಿಕನ್ accentನಲ್ಲಿ ಮಾತಾಡುತ್ತ. ನಾನು, “ನಿನ ಸುಡ್ಲಿ, ಇಷ್ಟ್ಯಾಕ ತ್ರಾಸ ಪಟ್ಟು ಮಾತಾಡ್ಲಿಕತ್ತಿ. ಅದೂ ಅಲ್ಲದ, ಇಷ್ಟ ಲಗೂ ನಿನಗ accident ಆಗೇದ? ಇನ್ನೊಂದು ಸ್ವಲ್ಪ ದಿವಸ ತಡದ್ರ ಬರೊಬ್ಬರಿ accident ಆಗ್ತಿತ್ತು,” ಅನ್ನಲಿಲ್ಲ. ಅವಳಿಗೆ ಹೂಂಗುಟ್ಟಿ ಮುಗಿಸುವಷ್ಟರಲ್ಲಿ ಅವಳ ಗಂಡನಿಗೆ ಕೊಟ್ಟಳು. ಅವನು ಇಲ್ಲಿದ್ದು ಒಂದಷ್ಟು ವರ್ಷಗಳಾಗಿವೆ. ಅಂವಗೇನು ಅಂಥಾ ಅಪಘಾತ ಆಗಿಲ್ಲ. ಆದರ ಮನಷ್ಯಾ ಶಿಕ್ಕಂಗ ಭಾಷ್ಕಳಪಂತ. ಭಯಂಕರ ಮಾತಾಡುವ ಉಮೇದಿನಲ್ಲಿದ್ದ. ನನ್ನ ಮಾತುಗಳೋ ಒಂದೆರಡು ನಿಮಿಷಗಳಲ್ಲಿ ಮುಗಿದವು. ಇನ್ನೇನು ಹೇಳುವುದು? ಮಳೆಬೆಳೆಯ ಮಾತಾಡೋಣವೆ? ಆದರೆ ಆತ ಅದೂ ಇದೂ ತೆಗೆದು ರಗಡ ಹೊತ್ತು ಮಾತಾಡಿದ. ನಡುನಡುವೆ ನಾನು, “ಆಹಾ”, “ಓಹೋ”, “ಅವಶ್ಯ”, “ಛೇ ಛೇ”, “ಅದಕ್ಕೇನು ಭಿಡೆ”, ಮೊದಲಾದ ಜಾಣ್ಣುಡಿಗಳನ್ನು ಉದುರಿಸುತ್ತಿದ್ದೆ. ಮೊದಲೇ ಇವತ್ತು ಒಂದು ಸೆಮಿನಾರನ್ನು ಕೊಟ್ಟಿದ್ದೆ. ಅದೋ ೨.೫ ತಾಸು ನಡೆದಿತ್ತು. ಆಸಕ್ತಿಕರವಾದ ಚರ್ಚೆಗಳು ನಡೆದಿದ್ದವು ಬಿಡ್ರಿ, ಖರೆ ನನ್ನ ಮಾತಿನ ಕೋಟಾ ಮುಗದು ಹಳಿಮಾತಾಗಿತ್ತು. ಇವನೋ ಬಿಡುತ್ತಲೇ ಇಲ್ಲ. “ನನ್ನ ದೇಶ, ನನ್ನ ಜನ..” ಎನ್ನುವಂಥ ಉಮೇದಿನಲ್ಲಿ ಹೊಡೆದೇ ಹೊಡೆಯುತ್ತಿದ್ದಾನೆ. ನಡುವೆ ಇಲ್ಲಿಯೇ ಮತ್ತ್ಯಾವುದೋ ಊರಲ್ಲಿರುವ ಅವನ ಹೆಂಡತಿಯ ತಂದೆಯ ಮಾವುಶಿಯ ನೆಗೆಣ್ಣಿಯ ಮರಿಮಗನ ಬಗ್ಗೆ ಹೇಳಿದ. ನನ್ನ ಜೊತೆ ಮಾತಾಡುತ್ತಲೇ ಅವನ ಹೆಸರೇನೆಂದು ಹೆಂಡತಿಯ ಜೊತೆ ೨ ನಿಮಿಷಗಳ ಉಪಸಂವಾದ ನಡೆಸಿದ. ಇಬ್ಬರೂ ನಾನಾ ನಮೂನೆಯ ಹೆಸರುಗಳನ್ನು ಹೊರಹೊಮ್ಮಿಸಿದರು. ಕೊನೆಗೆ ರವಿ, ರಜತ ಹಾಗೂ ರಘು, ಈ ಮೂರು ಶಾರ್ಟ್‍ಲಿಸ್ಟಾದವು. ಮುಂದೆ ಸ್ವಲ್ಪ ಚರ್ಚೆಯ ನಂತರ ಅದು ರಘು ಎಂದೂ, ಮೊದಲು ರಜತ ಎಂದು ಹೇಳಿದ್ದಕ್ಕೆ ಕ್ಷಮೆಕೋರುತ್ತೇನೆಂದೂ ಆತ ಹೇಳಿದ. ’ಅಲ್ಲೋ ಮಾರಾಯ್ನ, ಆ ರಂಡೇಗಂಡ ಯಾರಂತನ ನನಗ ಗೊತ್ತಿಲ್ಲ. ಅಂಥಾಪರಿ ಅವನ ಹೆಸರಿನ ಬಗ್ಗೆ ಹಾಹಾಕಾರ ಎಬ್ಬಿಸಿ ಅದನ್ನ ನನಗ ಹೇಳೇ ತೀರಬೇಕ? ಅಲ್ಲದ ಸ್ವಾರೀ ಬ್ಯಾರೆ ಅಂತೀ. ಬೇಕೇನು ಗಜ್ಜು?’ ಅಂತ ಅನ್ನಲಿಕ್ಕೆ ಹೋಗಲಿಲ್ಲ. ಹಂಗ ನಾನು ಉತ್ತಮ ಮನುಷ್ಯ.

ಒಂದು ಸಣ್ಣ ಪ್ರಯೋಗ ಮಾಡೋಣ. ಒಂದು ವೈಚಾರಿಕ ಪ್ರಯೋಗ (thought experiment) ಎಂದಿಟ್ಟುಕೊಳ್ಳಿ ಬೇಕಿದ್ದರೆ. ನಿಮ್ಮ ಮನಸ್ಸಿನಲ್ಲೆ ನಿಮ್ಮ ಗೆಳೆಯ/ಗೆಳತಿಯರು ಮತ್ತು/ಅಥವಾ ಪರಿಚಿತರನ್ನು ನೆನೆಸಿಕೊಳ್ಳಿ; ಬಂಧುಗಳು ಬೇಡ. ಹಾಗೆ ನೆನೆಸಿಕೊಳ್ಳುತ್ತಲೇ ಅವರನ್ನು ನಾನು ಹೇಳಲಿರುವ ಹಾಗೆ ವಿಂಗಡಿಸಿ (ಒಬ್ಬ ವ್ಯಕ್ತಿಯನ್ನು ಒಂದೇ ಕೆಟಗರಿಗೆ ಹಾಕಿ): ನಿಮ್ಮ ಮನೆಯ ಸುತ್ತಮುತ್ತಲಲ್ಲಿರುವವರು ಹಾಗೂ ನಿಮ್ಮ ಮನೆಗೆ ಹತ್ತಿರ ಇರುವವರು; ಉಳಿದಂತೆ ನಿಮ್ಮ ಏರಿಯಾದಲ್ಲಿರುವವರು; ನೀವಿರುವ ಏರಿಯಾ ಬಿಟ್ಟು ನೀವಿರುವ ನಗರದಲ್ಲಿ ಎಲ್ಲಿಯಾದರೂ ಇರುವವರು; ಭಾರತದ ಉಳಿದೆಲ್ಲ ನಗರದಲ್ಲಿರುವವರು; ಭಾರತ ಬಿಟ್ಟು ಜಗತ್ತಿನ ಯಾವ್ಯಾವುವೋ ದೇಶದಲ್ಲಿರುವವರು. ಸದ್ಯಕ್ಕೆ, ಈ ನಮ್ಮ ಭೂಮಿಯನ್ನು ಬಿಟ್ಟು ಬೇರೆಲ್ಲೂ ನಿಮ್ಮ ಗೆಳೆಯರು ಇಲ್ಲವೆಂದುಕೊಳ್ಳೋಣ. ಇದ್ದರೆ ಅವರನ್ನೂ ಸೇರಿಸಿಕೊಳ್ಳಿ.

ನೀವು ಈಗಾಗಲೇ ಬೋರು ಹೊಡೆಸಿಕೊಂಡು ಬೇರೆಲ್ಲೋ ಹೋಗಿಲ್ಲದಿದ್ದರೆ, ಮೇಲೆ ನೀವು ಮಾಡಿದ ಪ್ರತಿಯೊಂದು ಗುಂಪಿನಲ್ಲೂ ಎಷ್ಟು ಜನರಿದ್ದಾರೆ ಎಂದು ಲೆಕ್ಕ ಹಾಕಿ. (ಮನಸ್ಸಿನಲ್ಲೇ ಮಾಡಬೇಕಿಲ್ಲ; ಬೇಕಿದ್ದರೆ ಒಂದು ಹಾಳೆ ಹಾಗೂ ಪೆನ್ಸಿಲ್ ಉಪಯೋಗಿಸಿ.) ನೀವು (ನನ್ನಂತಲ್ಲದೆ) ಆಧುನಿಕ ಕನೆಕ್ಟೆಡ್ ಜಗತ್ತಿನ ಸಾಮಾನ್ಯ ಜೀವಿಯಾಗದ್ದ ಪಕ್ಷದಲ್ಲಿ ಎಲ್ಲ ಗುಂಪುಗಳಲ್ಲೂ ಹೆಚ್ಚೂಕಡಿಮೆ ಅಷ್ಟೇ ಜನರಿರುತ್ತಾರೆ! ಉದಾಹರಣೆಗೆ: ನಿಮ್ಮ ಮನೆಯ ಹತ್ತಿರ ನಿಮ್ಮ ಪರಿಚಯಸ್ಥರ ಸಂಖ್ಯೆ ೧೦ ಎಂದುಕೊಳ್ಳಿ, ಅವರನ್ನು ಬಿಟ್ಟು ಉಳಿದಂತೆ ಬೆಂಗಳೂರಿನಲ್ಲಿ ನಿಮಗೆ ಇನ್ನೂ ಹತ್ತು ಜನರು ಗೊತ್ತಿರುತ್ತಾರೆ, ಬೆಂಗಳೂರು ಬಿಟ್ಟು ಉಳಿದಂತೆ ಭಾರತದಲ್ಲಿ ಇನ್ನೂ ಹತ್ತು ಜನ ಗೊತ್ತಿರುತ್ತಾರೆ, ಹಾಗೂ ಜಗತ್ತಿನ ಎಲ್ಲೆಡೆ ಹರಡಿಕೊಂಡಿರುವ ಇನ್ನೊಂದು ೧೦ ಜನರಿರುತ್ತಾರೆ.

ಇಲ್ಲಿ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಬೇಕು. ಇಲ್ಲಿ ಸಂಖ್ಯೆಗಳು ಕರಾರುವಾಕ್ಕಾಗಿ ಇರುವುದಿಲ್ಲ. ಹಾಗೆಯೇ ನಮ್ಮ ’ಹತ್ತಿರ’ ’ದೂರ’ ಇಂಥವು ನಮ್ಮ ಗ್ರಹಿಕೆಯ ಮೇಲೆ ಆಧಾರಿತ. ಆದ್ದರಿಂದ ಸ್ವಲ್ಪ ಹೆಚ್ಹೂಕಡಿಮೆ ಹೊಂದಿಸಿಕೊಂಡು ಹೋಗಬೇಕು. ಇನ್ನೊಂದು ಮುಖ್ಯ ಅಂಶವೆಂದರೆ, ನಮ್ಮ ಅಳತೆಪಟ್ಟಿ ನಮ್ಮ ಓಣಿಯಿಂದ ಶುರುವಾಗಿ ಜಗತ್ತಿನ ತನಕ ಏರುವ ಅವಶ್ಯಕತೆಯಿಲ್ಲ. ವ್ಯಕ್ತಿಗೆ ಅನ್ವಯವಾಗುವಂತೆ ಇದನ್ನು ಮಾರ್ಪಡಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಜೀವನವಿಡೀ ಹಳ್ಳಿ ಅಥವಾ ಸಣ್ಣ ಊರುಗಳಲ್ಲಿರುವಂಥವರಿಗೆ ತೀರ ದೂರದೂರದಲ್ಲಿ ಪರಿಚಿತರಿರುವ ಸಂಭವ ಕಡಿಮೆ. ಅವರು ಅಳತೆಪಟ್ಟಿಯನ್ನು, ತಮ್ಮ ಓಣಿ, ಸುತ್ತಮುತ್ತಲಿನ ಓಣಿಗಳು, ಊರು, ಸುತ್ತಮುತ್ತಲಿನ ಊರುಗಳು, ತಾಲೂಕು, ಸುತ್ತಮುತ್ತಲಿನ ಉಳಿದ ತಾಲೂಕುಗಳು, ಹೀಗೆ ಡಿಫ಼ೈನ್ ಮಾಡಿಕೊಳ್ಳಬೇಕು. ಹಾಗೆಯೇ ’ಕನೆಕ್ಟೆಡ್’ ಜಗತ್ತಿನ ಜಾಲಕ್ಕೆ ಸಿಗದೆ ಆರಾಮಾಗಿರುವವರು ಕೂಡ. ಇದಷ್ಟೇ ಅಲ್ಲದೆ, ಪರಿಚಿತರು ಅಂದರೆ ಯಾರು? ನೀವು ಇಂಟರ್ನೆಟ್ಟಿನಲ್ಲಿ ದಿನಾಲೂ ಹರಟುವ ವ್ಯಕ್ತಿಗಳು ನಿಮ್ಮ ಪರಿಚಯದವರೇ ಅಲ್ಲವೇ? ಅವರನ್ನು ನೀವು ಭೇಟಿ ಮಾಡಿರಲಿಕ್ಕೂ ಇಲ್ಲ. ಇದು ಕೂಡ ನಿಮ್ಮ ಗ್ರಹಿಕೆಗೆ ಬಿಟ್ಟದ್ದು. ಆದರೆ ಒಟ್ಟಾರೆಯಾಗಿ ನಿಮ್ಮ ಗ್ರಹಿಕೆಗಳು ಹಾಗೂ ಡೆಫ಼ನಿಶನ್ನುಗಳು ಸುಸಂಬದ್ಧವಾಗಿರಬೇಕು.

***

ನಾನು ಮೇಲೆ ವಿವರಿಸಿದ್ದು, ಗಣಕಶಾಸ್ತ್ರ ವಿಜ್ಞಾನಿ ಜಾನ್ ಕ್ಲೈನ್‍ಬರ್ಗ್, ತನ್ನ “small world network“ಗಳ ಸಿದ್ಧಾಂತಗಳನ್ನು ಮಂಡಿಸುವಾಗ ಬಳಸಿದ ಸಾದೃಶ. ಇದಕ್ಕೆ ನೇರ ಸ್ಫೂರ್ತಿ ಸಾಲ್ ಸ್ಟೈನ್‍ಬರ್ಗ್‍’೯ನೇ ಮುಖ್ಯರಸ್ತೆ’ಯ ಚಿತ್ರ. ಸ್ಟೈನ್‍ಬರ್ಗ್‍ನ ಚಿತ್ರ ಒಂದು ಸಾಮಾಜಿಕ ಕಮೆಂಟರಿ. ಒಂದು ಸ್ತರದಲ್ಲಿ ಅದು ವಿಡಂಬನೆ. ಇನ್ನೊಂದು ಸ್ತರದಲ್ಲಿ ನೋಡಿದರೆ ಅದು ಅಮೇರಿಕದ್ದಷ್ಟೆ ಅಲ್ಲದೇ ಜಗತ್ತಿನ ಎಲ್ಲ ಸಮಾಜಗಳ, ಎಲ್ಲ ಮನುಷ್ಯರ ವಸ್ತುಸ್ಥಿತಿ. ಆ ಚಿತ್ರವನ್ನು ನೀವು ಇನ್ನೊಮ್ಮೆ ನೊಡಿದರೆ, ಒಟ್ಟಾರೆ ಚಿತ್ರವನ್ನು ನಾವು ಸ್ಥೂಲವಾಗಿ ನಾಕು ಸಮಾನ ಭಾಗಗಳಲ್ಲಿ ವಿಂಗಡಿಸಬಹುದು: ೯ನೇ ಅವೆನ್ಯೂ ಮತ್ತು ಅದರ ಆಸುಪಾಸು (ಹತ್ತನೆಯ ಅವೆನ್ಯೂದ ತನಕ ಅಂದುಕೊಳ್ಳಿ); ಹತ್ತನೆಯ ಅವೆನ್ಯೂದಿಂದ ಹಿಡಿದು ಉಳಿದಂತೆ ನ್ಯೂಯಾರ್ಕ್ ಹಾಗೂ ಹಡ್ಸನ್ ನದಿ ಇನ್ನೊಂದು ಭಾಗ; ಯುನೈಟೆಡ್ ಸ್ಟೇಟ್ಸ್‍ನ ಉಳಿದ, ಚೌಕವಾಗಿ ಕಾಣುತ್ತಿದೆಯಲ್ಲ, ಅದು ಮೂರನೆಯದ್ದು; ಪೆಸಿಫ಼ಿಕ್ ಸಾಗರ ಮತ್ತು ಏಷ್ಯಾ ನಾಕನೆಯ ಭಾಗ. ಇದನ್ನು ಹೀಗೆ ನೋಡಿದಾಗ ನಾವು ಕೊಡಬಹುದುದಾದ ವ್ಯಾಖ್ಯಾನವೆಂದರೆ, ನ್ಯೂಯಾರ್ಕಿನ ಜನರು ತಮ್ಮ ತುರ್ತಿನ ಅಥವಾ ಸ್ಥಳೀಯ ವಿಚಾರಗಳಿಗೆ, ಜಗತ್ತಿನ ಯಾವುದೇ ಮಹತ್ವದ ಆಗುಹೋಗುಗಳಿಗೆ ಕೊಡುವಷ್ಟೇ ಮಹತ್ವ ಕೊಡುತ್ತಾರೆ. ಎಲ್ಲರೂ ತಮ್ಮನ್ನು ಬ್ರಹ್ಮಾಂಡದ ಕೇಂದ್ರದಲ್ಲಿರಿಸಿಕೊಳ್ಳಬಯಸುತ್ತಾರೆ. ನಿಜವಲ್ಲವೆ?

ಸಾಲ್ ಸ್ಟೈನ್‍ಬರ್ಗ್ ಈ ಚಿತ್ರ ಬರೆಯುವಾಗ ಕೇವಲ ವಿಡಂಬನೆಯಂತೆ ಬರೆದಿದ್ದನೋ ಅಥವಾ ಈ ಥರದ ವ್ಯಾಖ್ಯಾನವೂ ಅವನು ಉಪಯೋಗಿಸಿದ ಚಿತ್ರದ ಜಾಮೆಟ್ರಿಯಲ್ಲಿ ಅಡಕವಾಗಿತ್ತೋ ಗೊತ್ತಿಲ್ಲ. ಆದರೆ ಜಾನ್ ಕ್ಲೈನ್‍ಬರ್ಗ್ ಈ ಚಿತ್ರವನ್ನು ಅತ್ಯಂತ ಪ್ರಬಲವಾದ ಸಾಮತಿಯನ್ನಾಗಿ ಬಳಸಿಕೊಂಡ. ಸೋಶಿಯಲ್ ನೆಟ್‍ವರ್ಕುಗಳಲ್ಲಷ್ಟೆ ಅಲ್ಲದೆ, ಸಂಪರ್ಕ ಜಾಲಗಳ ಬಗ್ಗೆಯೂ ಅನೇಕ ಸಿದ್ಧಾಂತಗಳನ್ನು ನಿರೂಪಿಸಿದ. ಕ್ಲೈನ್‍ಬರ್ಗ್‍ನ ಸ್ಮಾಲ್ ವಲ್ಡ್ ಮಾಡೆಲ್ಲುಗಳು ೨೦೦೦ರ ಸುಮಾರಿಗೆ ಮಂಡಿಸಲ್ಪಟ್ಟವು. ಇವತ್ತೂ ಕೂಡ ಅದು ಗಣಕಶಾಸ್ತ್ರ ಸಂಶೋಧನೆಯ ಬಿಸಿ ಬಿಸಿ ಕ್ಷೇತ್ರಗಳಲ್ಲಿ ಒಂದು.

ಹಾಗೆ ನೋಡಿದರೆ ಈ Small World Phenomenon ಕ್ಲೈನ್‍ಬರ್ಗ್‍ನಿಗಿಂತ ತುಂಬ ಹಳೆಯದು. ೧೯೬೩ರಲ್ಲಿ ಸ್ಟ್ಯಾನ್ಲೀ ಮಿಲ್‍ಗ್ರಮ್ ನಡೆಸಿದ ಒಂದು ಸಾಮಾಜಿಕ ಮನಃಶಾಸ್ತ್ರದ (social psychology) ಪ್ರಯೋಗದಿಂದ ಇದು ಒಮ್ಮಿಂದೊಮ್ಮೆಲೆ ಪ್ರಚಲಿತವಾಯಿತು. ‘Six degrees of separation‘ ಎಂಬ ನುಡಿಗಟ್ಟೂ ಇದರಿಂದ ತುಂಬ ಲೋಕಪ್ರಿಯವಾಯಿತು. ಈಗಾಗಲೇ ಈ ಪೋಸ್ಟು ಭಯಂಕರ ಉದ್ದವಾಗಿರುವುದರಿಂದ ಇಲ್ಲಿಗೇ ನಿಲ್ಲಿಸುತ್ತೇನೆ.

ಬಹಳ ಜನ ಮಾಜಿದ್ ಮಜೀದಿಯ ’Childre of Heaven’ ಬಗ್ಗೆ ಮಾತಾಡುತ್ತಿದ್ದಾರೆ. ಇದು ಹೀಗೆ ಸೆಲೆಬ್ರೇಟ್ ಮಾಡಲೇಬೇಕಾದ ಸಿನೆಮಾಗಳಲ್ಲಿ ಒಂದಾದ್ದರಿಂದ, ನನ್ನದೂ ಎರಡು ಅಕ್ಕಿಕಾಳು. ಸ್ವಲ್ಪ ಹಳೆಯ ಅಕ್ಕಿ. ಹಿಂದೆ ಎಲ್ಲೋ ಬರೆದಿದ್ದನ್ನು ಇಲ್ಲಿ ಹಾಕುತ್ತಿದ್ದೇನೆ. ಇಂಗ್ಲಿಶ್‍ನಲ್ಲಿ ಬರೆದಿದ್ದೆ. ಹಾಗೇ ಹಾಕುತ್ತಿದ್ದೇನೆ.

Majid Majidi’s Shoes

The excellent Iranian director Majid Majidi’s Children of Heaven (Bacheha-Ye Aseman, 1997) is not an ambitious movie. The fact that it is not so, and that it is intentionally so, is what makes it stand out. It needs an able artist to seize a tiny thread of an idea and explicate an engaging piece of art. And one can trust Majidi to do that.

The entire movie is based on a seemingly contrived incident. Ali, a 9 year old kid accidentally loses his 7 year old sister Zahra’s shoes on the way back from the cobbler’s. Zahra cannot go to school without her shoes. But Ali doesn’t want her to report this to their father because he doesn’t have any money to buy new shoes. So, the two young siblings hatch out a plan so that they will save themselves from their father’s wrath and also to avoid adding to his troubles. The movie then moves on a fast track portraying the kids’ little escapades.

What makes the movie outstanding is the careful juxtaposition of different frames, each frame celebrating the different qualities of what makes a poor yet happy and closely bound family. I think this is where Majidi focuses and scores. The acting is very good, of course. One of the lead characters, Ali, who has the most screen time, played by Amir Farrokh Hashemian is very good. But I find Zahra, played by Bahare Seddiqi, better. However, I was most impressed by Mohammad Amir Naji, who plays the role of Ali and Zahra’s father. His chracter and performance is very real.

Children of Heaven is not a movie that will give us a lot of food for thought. It is a kind of movie that will leave behind a longing feeling to see more such movies made that capture our own contexts and lives.

I’ll end this post by talking about one of the several scenes that I particularly liked. The masjid sends sugar to Ali’s father through Ali asking him to break it into small sugar cubes. At night we see Ali’s father cutting the sugar and talking to his family. His wife asks Zahra to serve her father some tea. Zahra pours tea in a cup and brings it to her father. Father thanks Zahra but tells her that she forgot to get sugar. Zahra is a little amused at this. She suggests to her father that “there’s so much sugar here”, which he has been cutting. Why doesn’t he use just one cube? Her father smiles and remarks that it’s not right. The Masjid has given it to him because they trust him. Zahra’s mother promptly asks her get sugar from the kitchen. Scenes like this have been beautifully rendered in the movie celebrating the simple family values and love. A nice engaging 90 minutes.

ಹಿಂದೆ ಮಜೀದಿಯ ಒಂದು ಇಂಟರ್‍ವ್ಯೂ ಓದಿದ್ದೆ. ಇಂಗ್ಲಿಶ್ ಬರದ ಮಜೀದಯ ಮೊಗ, ಸಂದರ್ಶಕ “ಶೂ” ಎಂದ ತಕ್ಷಣ ಅರಳಿದ ಬಗೆಯ ಬಗ್ಗೆ ಬರೆದಿದ್ದ. ಏಕೆಂದರೆ ಆ ಶಬ್ದ ಅವನಿಗೆ ಗೊತ್ತು. ಅದು ತೀರಾ ಆಪ್ತ.

Iranian Filmmaker, Majid Majidi welcomed me out on his hotel terrace. His wavy reaching hair, puppy dog eyes, and graying mustache reminded me of Albert Einstein. I framed and focused, “Smile!” I shouted, I was in a good mood. But Majid, peered rather tentatively at the camera. “Smile!” I shouted again, it didn’t occur to me until well into the interview, that Majid knew a completely different word for “Smile.”

“Could you tie your shoe?” I requested. Then he smiled. “Shoe” he knew. That’s the motif his sweet film Children of Heaven runs on … the simple shoe.

ಆ ಸಂದರ್ಶನವನ್ನು ಇಲ್ಲಿ ಓದಿ.

ಇತ್ತೀಚೆಗೆ ಚೇತನಾಳ ಬ್ಲಾಗಿನಲ್ಲಿ ಹಳೆಯ ಧಾರಾವಾಹಿಗಳ ಬಗ್ಗೆ ಚರ್ಚೆ ನಡೆದಿತ್ತು. ಅಲ್ಲಿ ಒಟ್ಟಾರೆಯಾಗಿ ಕಂಡುಬರುತ್ತಿದ್ದ ಮೂಡು ಹೇಗಿತ್ತೆಂದರೆ, ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಗಳು ಹಳೆಯವೆ. ಇದಕ್ಕೆ ಸ್ವಲ್ಪ ಮಟ್ಟಿಗೆ nostalgia ಕಾರಣ: ಚಿಕ್ಕಂದಿನಲ್ಲಿ ಸಣ್ಣಸಣ್ಣ ಊರುಗಳಲ್ಲಿ ಓರಗೆಯವರು, ಕಿರಿಯರು, ಹಿರಿಯರು ಎಲ್ಲರೂ ಒಟ್ಟಿಗೆ ಕೂತು ಭಕ್ತಿಯಿಂದ ನೋಡುತ್ತಿದ್ದ ಧಾರಾವಾಹಿಗಳು; ನಾನಂತೂ ತೀರ ಚಿಕ್ಕವನಿದ್ದಾಗ ಮಹಾಭಾರತ ಇತ್ಯಾದಿಗಳನ್ನು ಬೇರೆಯವರ ಮನೆಯಲ್ಲಿ ಹೋಗಿಯೇ ನೋಡಿದ್ದು; ಹೀಗೆ ಚಿಕ್ಕಂದಿನ ಸಾಮೂಹಿಕ ಚಟುವಟಿಕೆಗಳು ನಮ್ಮನ್ನು ಕಾಡಿ ಮೃದುವಾಗಿಸುವುದು ಹೌದು. ಅದು ಹೀಗಿದ್ದಾಗ್ಗ್ಯೂ, ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ, ಧಾರಾವಾಹಿಗಳ ಗುಣಮಟ್ಟ ಕುಸಿಯುತ್ತ ಬಂದಿರುವುದು ನಿಜ. ಧಾರಾವಾಹಿಗಳಷ್ಟೇ ಅಲ್ಲ, ಸಿನೆಮಾಗಳೂ ಕೂಡ. (ಭಾರತದಲ್ಲಿ) ೭೦ರ ದಶಕದಲ್ಲಿ ಬಂದಷ್ಟು ಒಳ್ಳೆಯ ಸಿನೆಮಾಗಳು ನಂತರ ಬರಲೇ ಇಲ್ಲ. ಇತ್ತಿಚಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಬದಲಾಗುತ್ತಿರುವುದು ಧನಾತ್ಮಕ ವಿಚಾರ. ಒಟ್ಟಾರೆಯಾಗಿ ನಮಗಿಂತ ಒಳ್ಳೆಯ ಕ್ವಾಲಿಟಿ ಹೊಂದಿರುವ ಇಂಗ್ಲಿಶ್ ಸಿನೆಮಾಗಳೂ ಇದಕ್ಕೆ ಹೊರತಲ್ಲ. ಹಾಗೆಯೇ ನಮ್ಮಲ್ಲಿ ಸಿನೆಮಾ ಸಂಗೀತ, ಹಾಗೂ ಹಾಡುಗಳ “ಸಾಹಿತ್ಯ”. ಅವುಗಳ ಬಗ್ಗೆಯಂತೂ ಹೇಳುವುದೇ ಬೇಡ.

ಇದೆಲ್ಲ ಮತ್ತೆ ಮನಸ್ಸಿನಲ್ಲಿ ಬಂದದ್ದು ಯಾಕೆಂದರೆ ಮೊನ್ನೆ 12 Angry Men ಎಂಬ ಸಿನೆಮಾ ನೋಡಿದೆ. ಸಿಡ್ನಿ ಲುಮೆಟ್ ನಿರ್ದೇಶಿಸಿದ ಮೊದಲ ಸಿನೆಮಾ. ೧೯೫೧ರ ಸಿನೆಮ. ಕಪ್ಪುಬಿಳುಪು ಸಿನೆಮಾ. ರೆಜಿನಾಲ್ಡ್ ರೋಸ್ ಎಂಬಾತನ ಅದೇ ಹೆಸರಿನ ನಾಟಕವೊಂದನ್ನು ಆಧರಿಸಿದ್ದು. ಅದನ್ನು ನೋಡಿದ ಕೂಡಲೇ ಮತ್ತೆ ಅದೇ, “Oh, they don’t make them like this anymore!” ಎಂಬ familiar ಫೀಲಿಂಗು.

12 Angry Men, ಸರಳ ಕಥಾವಸ್ತುವಿನ, ನೇರ ನಿರೂಪಣೆಯ ಸಿನೆಮಾ. ಈ ಸಿನೆಮಾದ ಅತ್ಯಂತ ಎದ್ದುಕಾಣುವ ತಂತ್ರವೆಂದರೆ, ಬಹುತೇಕ ಇಡೀ ಸಿನೆಮಾ ಒಂದೇ ಒಂದು ಕೋಣೆಯ ಒಳಗೆ, ಒಂದು ಟೇಬಲ್ಲಿನ ಸುತ್ತ ನಡೆಯುವುದು. ಮೊದಲಿನ ಒಂದು ನಿಮಿಷದಷ್ಟು ಕಾಲ ಕೋರ್ಟಿನಲ್ಲೂ, ಕೊನೆಯ ಕೆಲ ಕ್ಷಣಗಳು ಕೋರ್‍ಟಿನ ಹೊರಗೂ, ಮತ್ತೆ ನಡುವೆ ಒಂದೆರಡು ನಿಮಿಷ ಮೇಲೆ ಹೇಳಿದ ಕೊಠಡಿಗೆ ಹೊಂದಿಕೊಂಡ ಶೌಚದ ಕೋಣೆಯಲ್ಲೂ ನಡೆಯುತ್ತವೆ. ಉಳಿದ್ದದ್ದೆಲ್ಲ ಆ ಕೋಣೆಯಲ್ಲೆ. ಯಾವುದೇ ಹಿನ್ನೆಲೆ ಸಂಗೀತವಿಲ್ಲದ, ಸಹಜವಾದ ಶಬ್ದಗಳನ್ನು — ಕೆಮ್ಮುವುದು, ಸೆಕೆಗೆ ಉಸ್ಸೆನ್ನುವುದು, ಗುಸುಗುಸು ಮಾತಾಡುವುದು — ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತ, ಎಚ್ಚರಿಕೆಯ ಕ್ಯಾಮರಾ ಬಳಕೆಯಿಂದ ನಿಧಾನವಾಗಿ ಮುಂದರಿಯುವ ಈ ಸಿನೆಮಾ, ತನ್ನ ಯಾವುದೇ ವಿಪರೀತ ತಂತ್ರಗಾರಿಕೆಯ ಹಂಗಿಲ್ಲದ ಸ್ವಭಾವದಿಂದಲೇ ಮನಸೂರೆಗೊಳ್ಳುತ್ತದೆ.

ಕೆಳವರ್ಗದ ವಸತಿಯಿರುವ ಜಾಗವೊಂದರಲ್ಲಿ ಒಂದು ಕೊಲೆಯಾಗಿದೆ. ಒಬ್ಬ ಲ್ಯಾಟಿನೋ ಹುಡುಗ ತನ್ನ ತಂದೆಯನ್ನು ಕೊಂದಿರುವ ಆರೋಪದ ಮೇಲೆ ಕೋರ್ಟಿನಲ್ಲಿದ್ದಾನೆ. ಸಿನೆಮಾ ಶುರುವಾದಾಗ ಎಲ್ಲ ವಾದವಿವಾದಗಳು ಮುಗಿದಿವೆ. ಜಜ್ ಒಮ್ಮೆ ಕೇಸಿನ ವಿವರಗಳನ್ನು ಸಂಕ್ಷಿಪ್ತವಾಗಿ ಹೇಳಿ, ಅಲ್ಲಿ ಕೂತ ನ್ಯಾಯಾಧಿಕರಣಕ್ಕೆ (jury) ಮುಂದಿನ ವಿಚಾರವನ್ನು ಬಿಡುತ್ತಾನೆ. ೧೨ ಮಂದಿ ಸದಸ್ಯರಿರುವ ಆ ಜ್ಯೂರಿ, ಆಪಾದಿತ ಅಪರಾಧಿಯೋ ಅಲ್ಲವೋ ನಿರ್ಧರಿಸಬೇಕು. ಆದರೆ, ಜಜ್ ಹೇಳುತ್ತಾನೆ - ಎರಡರಲ್ಲಿ ಯಾವ ನಿರ್ಧಾರಕ್ಕೆ ನೀವು ಬಂದರೂ ಸರಿಯೇ, ಆದರೆ ಅದು ಒಮ್ಮತದ ನಿರ್ಧಾರವಾಗಿರಬೇಕು; ಅಲ್ಲದೇ, ಮೊಕದ್ದಮೆಯ ಅಂಶಗಳು ಹಾಗೂ ಆರೋಪಿಯ ವಿರುದ್ಧದ ಸಾಕ್ಷ್ಯ, ಸಂದೇಹಾತೀತವಾಗಿದ್ದಲ್ಲಿ (beyond reasonable doubt) ಮಾತ್ರ ಆರೋಪಿಯನ್ನು ಅಪರಾಧಿಯೆಂದು ಪರಿಗಣಿಸತಕ್ಕದ್ದು.

ಅಲ್ಲಿಂದ ಮುಂದೆ ಜ್ಯೂರಿಯ ಕೋಣೆಗೆ ಬಂದು ಎಲ್ಲರೂ ಸೇರುತ್ತಾರೆ. ಜ್ಯೂರಿಯ ಪ್ರಕಾರ ಇದೊಂದು Open and Shut case; ಆ ಹುಡುಗ ಕೊಲೆ ಮಾಡಿದ್ದಾನೆನ್ನುವುದು ನಿಚ್ಚಳ; ಸಂದರ್ಭ ಹಾಗಿದೆ, ಅಪ್ಪ ಹಾಗೂ ಮಗನಲ್ಲಿ ವಿಪರೀತ ಮನಸ್ತಾಪವಿದೆ; ಮೇಲಿಂದ ಮೇಲೆ ತನ್ನನ್ನು ಹೊಡೆಯುವ ಬೈಯ್ಯುವ ಅಪ್ಪನನ್ನು ಕೊಲ್ಲುವ ಹೇತು ಮಗನಲ್ಲಿರುವುದು ಈ ಕೇಸಿನಲ್ಲಿ ಸ್ಪಷ್ಟ; ’ನಿನ್ನನ್ನು ಕೊಂದೇ ತೀರುತ್ತೇನೆ,’ ಎಂದು ಆ ಹುಡುಗ ಕಿರುಚಿದ್ದನ್ನು ಕೇಳಿದ್ದೇವೆಂದು ಹೇಳುವ ಸಾಕ್ಷಿಗಳಿವೆ; ಕೊಲೆಗೆ ಬಳಸಿದ ಆಯುಧ ಸ್ಥಳದಲ್ಲೇ ಸಿಕ್ಕಿದೆ; ಅವನು ಚಾಕುವಿನಿಂದ ತಿವಿದಿದ್ದನ್ನು ನೋಡಿದೆ ಎಂದು ಹೇಳುವ ಎದುರು ಮನೆಯ ಹೆಂಗಸಿದ್ದಾಳೆ; ಅವನು ಕೊಲೆ ಮಾಡಿದ ನಂತರ ಅವಸರದಿಂದ ಪರಾರಿಯಾದದ್ದನ್ನು ನೋಡಿದೆ ಎಂದು ಹೇಳುವ ಕೆಳಗಿನ ಮನೆಯ ಮುದುಕನಿದ್ದಾನೆ; ಆ ಹುಡುಗ “ಆಯುಧವನ್ನು ಮರಳಿ ತೆಗೆದುಕೊಳ್ಳಲು ಬಂದಾಗ” ಬಂಧಿತನಾಗಿದ್ದಾನೆ. ಜಜ್‍ನಿಗೆ ಕೂಡ ಸುಮ್ಮನೆ ಶಿಕ್ಷೆವಿಧಿಸುವ ಬದಲು ಇದನ್ನು ಎಳೆಯುವುದು ಬೇಸರದ ವಿಚಾರ, ಆದರೆ ಅವನು ಅವಸರ ಮಾಡಲಾರ. ಅನಿವಾರ್ಯವಾಗಿ ನ್ಯಾಯಮಂಡಳಿಗೆ ಅದನ್ನು ಬಿಟ್ಟಿದ್ದಾನೆ. ಹೀಗಿರುವಾಗ, ನ್ಯಾಯಮಂಡಳಿಯ ಎಲ್ಲ ಸದಸ್ಯರಿಗೂ ಅವನು ಅಪರಾಧಿಯೆಂಬುದು ಸ್ಪಷ್ಟ. ಒಬ್ಬನನ್ನು ಬಿಟ್ಟು.

ಅಲ್ಲಿಗೆ ಬಿಕ್ಕಟ್ಟು ಶುರುವಾಗುತ್ತದೆ. ನಿರ್ಧಾರ ಒಮ್ಮತದ್ದಾಗಬೇಕು. ಆದರೆ ಒಬ್ಬ ಮೂರ್ಖ ಉಳಿದ ೧೧ ಜನರ ವಿರುದ್ದ ನಿಂತಿದ್ದಾನಲ್ಲ! “ನಾವೆಲ್ಲ ಅವನು ಅಪರಾಧಿ ಎಂದು ಹೇಳುತ್ತಿದ್ದೇವೆ. ನಿನಗೆ ಅವನು ನಿರಪರಾಧಿ ಎಂದೆನ್ನಿಸುತ್ತಿದೆಯೇ?” ಎಂದೊಬ್ಬ ಅವನನ್ನು ಕೇಳುತ್ತಾನೆ. ಅವನು ಸರಳವಾಗಿ, ನಿಧಾನವಾಗಿ ಹೇಳುತ್ತಾನೆ, “ನನಗೆ ಗೊತ್ತಿಲ್ಲ.” ಇನ್ನೊಬ್ಬ ಕೇಳುತ್ತಾನೆ — ಅವನಿಗೆ ಇದನ್ನು ಮುಗಿಸಿ ಬೇಸ್‍ಬಾಲ್ ಪಂದ್ಯ ನೋಡಲು ಹೋಗುವ ಅವಸರ — “ಛೇ! ಈಗೇನು ಮಾಡುವುದು?” ಅವನು ಮತ್ತೆ ಹೇಳುತ್ತಾನೆ, “ನನಗೆ ಗೊತ್ತಿಲ್ಲ. ಸುಮ್ಮನೆ ಮಾತಾಡೋಣ. ಸ್ವಲ್ಪ ಹೊತ್ತು, ಇದರ ಬಗ್ಗೆ.” “ಮಾತಾಡೋಣ?!” “ಹೌದು. ೧೮ ವರ್ಷದ ಹುಡುಗನೊಬ್ಬನನ್ನು ೫ ನಿಮಿಷದ ಮಾತೂ ಇಲ್ಲದೆ ವಿದ್ಯುತ್ ಕುರ್ಚಿಯ ಮೇಲೆ ಕೂಡಿಸಿ ಕೊಲ್ಲುವುದು ನನ್ನಿಂದ ಸಾಧ್ಯವಿಲ್ಲ. ಮಾತಾಡೋಣ ಇನ್ನೊಮ್ಮೆ, ಎಲ್ಲ ವಿವರಗಳ ಬಗ್ಗೆ.”

ಮುಂದೆ ಕೇಸಿನ ವಿವರಗಳಷ್ಟೆ ಅಲ್ಲದೆ ಜ್ಯೂರಿಯ ಸದಸ್ಯರ ಸ್ವಭಾವಗಳು, ಅವರ ವಿವಿಧ ಹಿನ್ನೆಲೆಗಳು, ಪೂರ್ವಗ್ರಹಗಳು, ವೈಯಕ್ತಿಕ ರೋಷಗಳು, ತರ್ಕಬದ್ಧ ವಾದಗಳು, ವಿತಂಡ, ವಿರೋಧಾಭಾಸ ಎಲ್ಲವೂ ಅನಾವರಣಗೊಳ್ಳುತ್ತವೆ. ೧೨ ವಿಭಿನ್ನ ಮಂದಿ: ಯಾವುದೇ ಪರಿಗಣನೆಯಿಲ್ಲದೆ ಒಬ್ಬ ಮನುಷ್ಯನನ್ನು ಸಾವಿಗೆ ತಳ್ಳಲು ಮನಸ್ಸಿಲ್ಲದ ಆರ್ಕಿಟೆಕ್ಟ್; ಈ ವಿಷಯದಲ್ಲಿ ಯಾವುದೇ ಆಸಕ್ತಿಯಿಲ್ಲದ, ಯಾವುದೋ ಒಂದು ನಿರ್ಧಾರಕ್ಕೆ ಬೇಗನೇ ಬಂದು ಬೇಸ್‍ಬಾಲ್ ನೋಡಲು ಹೋಗಬಯಸುವ ಮನುಷ್ಯ; ಜೋರುಬಾಯಿಯ, ಕೆಳವರ್ಗದ ಜನರನ್ನು ದ್ವೇಷಿಸುವ, ಆದ್ದರಿಂದ ಹುಡುಗ ತಪ್ಪಿತಸ್ಥ ಎಂದು ನಿರ್ಧರಿಸಿರುವ ಮುದುಕನೊಬ್ಬ; ತನ್ನ ಮಗ ತನ್ನನ್ನು ಬಿಟ್ಟು ಹೋಗಿದ್ದು ಮನಸ್ಸಲ್ಲಿಟ್ಟುಕೊಂಡು, ಈ ಹುಡುಗನ ಬಗ್ಗೆ ದ್ವೇಷ ಕಾರುವ ಮತ್ತೊಬ್ಬ; ಅತ್ತಿಂದಿತ್ತ ಓಲಾಡುವ ಸೇಲ್ಸ್‍ಮನ್; ಭಾವನೆಗಳ ಕೈಗೆ ಬುದ್ಧಿ ಕೊಡದೆ, ತರ್ಕಬದ್ಧವಾಗಿ ಯೋಚಿಸುವ, ನಿಷ್ಠುರ ಆದರೆ ಮುಕ್ತ ಮನಸ್ಸಿನ ಅಕೌಂಟಂಟ್. ಹೀಗೆ ಸಮಾಜದ ಒಂದು cross-section ಆ ಸಣ್ಣ ಕೋಣೆಯಲ್ಲಿ ನೆರೆದು, ಬೇಸಿಗೆಯ ತಾಳಲಾರದ ಸೆಖೆಯಲ್ಲಿ ಚರ್ಚಿಸುತ್ತಿದೆ.

ಸಿನೆಮಾ ಮುಂದುವರೆದಂತೆ ಸಾಕ್ಷಿಗಳು, ಸನ್ನಿವೇಶಗಳು, ಮೇಲ್ನೋಟಕ್ಕೆ ತೋರುವಷ್ಟು ನಿಖರವಾಗಿಲ್ಲವೆನ್ನುವುದು ತಿಳಿದು ಬರುತ್ತದೆ. ವಾಗ್ವಾದಗಳು, ಚರ್ಚೆಗಳು ಇಷ್ಟವಾಗುವ ನನ್ನಂಥವರಿಗೆ ಬೇಕಾಗುವ ಅಂಶಗಳೆಲ್ಲ ಅಲ್ಲಿವೆ. ತರ್ಕ, ಹೊಳಹು, burden of proof ಯಾರ ಮೇಲಿದೆ ಎನ್ನುವುದರ ವಿಶ್ಲೇಷಣೆ, ಬೇಕೆಂತಲೇ ಕೆದಕಿ, ಕೆಣಕಿ, ಸತ್ಯವನ್ನು ಹೊರಗೆಳೆಯುವ flame baitಗಳು. ಹಾಗೆಯೇ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಕೂಡ ಮುಖ್ಯವಾಗುವ “beyond any reasonable doubt” ಎಂಬ ನುಡಿ ಎಷ್ಟು ಪ್ರಬಲ ಎಂಬುದೂ ತಿಳಿಯುತ್ತದೆ. ನಿಜ, ನಮ್ಮ ವ್ಯವಸ್ಥೆ ಅದಕ್ಷವಾಗಿದೆ; ನ್ಯಾಯ ಸಿಗುವುದಕ್ಕೆ ಯುಗಗಟ್ಟಲೇ ಕಾಯಬೇಕು; ಬಹಳ ಸಲ ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆ. ಹೌದು. ಆದರೆ ಇವೆಲ್ಲ ಬೇರೆ ಸಮಸ್ಯೆಗಳು. ಈ ಸಮಸ್ಯೆಗಳನ್ನು ಬಗೆಹರಿಸುವುದರ ಸಲುವಾಗಿ, ನಾವು ಆಪಾದಿತರ ಹಕ್ಕುಗಳನ್ನು ಕಡಿಮೆ ಮಾಡಿದರೆ ಅದು ಮಾನವೀಯತೆಯಲ್ಲ. ಅದೆಷ್ಟೇ ಪ್ರಖರ “ಸತ್ಯ”ವಾಗಿದ್ದರೂ, ಎಲ್ಲವೂ ನಿಚ್ಚಳವಾಗಿದ್ದರೂ, ಜನ ಸಮುದಾಯಗಳೂ, ಮಾಧ್ಯಮಗಳೂ, opinion pollಗಳೂ ನ್ಯಾಯವನ್ನು ಕೊಡುವ ಹೊರೆ ತೊಗೊಳ್ಳಬಾರದು.

ಅದೇನೇ ಇರಲಿ. ನಾನು ಎಂದಿನಂತೆ ಮತ್ತೆ ಯಾವ್ಯಾವುದೋ ವಿಷಯಗಳ ಬಗ್ಗೆ ಮಾತಾಡುತ್ತ ಹೋಗುತ್ತಿದ್ದೇನೆ. 12 Angry Men ಎಂಬ ಶ್ರೇಷ್ಠ ಸಿನೆಮಾ ನೋಡಿ. ನೀವೂ ನನ್ನಂತೆ, ’ನಮ್ಮಲ್ಲೇಕೆ ಈ ಥರದ ಸಿನೆಮಾಗಳನ್ನು ಮಾಡುವುದಿಲ್ಲ’, ’ಈಗಿನ ಕಾಲದಲ್ಲಿ ಇಂಥ ಸಿನೆಮಾಗಳನ್ನು ಮಾಡಿದರೆ ಜನ ನೋಡುವುದಿಲ್ಲವೇ?’ ಎಂದು ವಿಚಾರಕ್ಕೆ ಬೀಳಿ.

ಇದು ದ ನ್ಯೂ ಯಾರ್ಕರ್ ಪತ್ರಿಕೆಯ ಮಾರ್ಚ್ ೨೯, ೧೯೭೬ರ ಕವರ್ ಪೇಜ್. ಕಲಾವಿದ, ಅದೇ ಪತ್ರಿಕೆಯ ಕಾರ್ಟೂನಿಸ್ಟ್ ಸಾಲ್ ಸ್ಟೈನ್‍ಬರ್ಗ್. ಅತ್ಯಂತ ಪ್ರಸಿದ್ಧ ಚಿತ್ರವಾಗಿರುವ ಇದು “View of the World from 9th Avenue” ಅಥವಾ “A New Yorker’s View of the World” ಎಂದು ಕರೆಯಲ್ಪಡುತ್ತದೆ. ಇದು ನನಗೆ ತುಂಬಾ ಇಷ್ಟವಾಗುವ illustration ಕೂಡ. ಇಲ್ಲಿ ಉಲ್ಲೇಖಿಸಿರುವ ೯ನೇ ಅವೆನ್ಯು, ನ್ಯೂ ಯಾರ್ಕ್‍ನ ಮ್ಯಾನ್‍ಹ್ಯಾಟನ್‍ನಲ್ಲಿದೆ. ನ್ಯೂ ಯಾರ್ಕಿಗರ world view ಎಷ್ಟು ಸಂಕುಚಿತ ಎಂಬುದನ್ನು ಅತ್ಯಂತ ಸ್ಪಷ್ಟ ಹಾಗೂ ಪ್ರಖರವಾದ ವ್ಯಂಗ್ಯದಿಂದ ಸೆರೆ ಹಿಡಿದಿರುವುದನ್ನು ಇಲ್ಲಿ ಕಾಣಬಹುದು. ಇದು ನ್ಯೂ ಯಾರ್ಕಿಗರದಷ್ಟೇ ಅಲ್ಲದೆ ಒಟ್ಟಾರೆ ಅಮೆರಿಕದ ಜನರ ತಮ್ಮ ತಮ್ಮ ಸಣ್ಣ ಪರಿಧಿಗಳಲ್ಲಿ ಆನಂದತುಂದಿಲರಾಗಿದ್ದು ಉಳಿದದ್ದೆಲ್ಲ ಸಂಬಂಧವಿಲ್ಲದ್ದು, ಮಹತ್ವದ್ದಲ್ಲದ್ದು ಎಂದು ಭಾವಿಸುವ ಸ್ವಭಾವದ ಲೇವಡಿಯಾಗಿದೆ.

ನನ್ನ ’ಪ್ರಕ್ರಿಯೆಗಳು ಮಶೀನುಗಳು’ ಪೋಸ್ಟಿಗೆ ಶ್ರೀಪ್ರಿಯೆಯವರ ಕಮೆಂಟು ಇದನ್ನು ನೆನಪಿಸಿತು. ಅವರ ಕಮೆಂಟಿಗೆ ಉತ್ತರಿಸುತ್ತ, ಒಮ್ಮೆಲೇ ಇದರ ಬಗ್ಗೆ ಬರೆಯೋಣವೆನ್ನಿಸಿತು. ವಿವರವಾಗಿ ಮುಂದಿನ ಪೋಸ್ಟಿನಲ್ಲಿ ಬರೀತೀನಿ. ಸದ್ಯಕ್ಕೆ ನಮ್ಮ ಕರ್ನಾಟಕದ ಐದು ಕೋಟಿ ಓದುಗ ದೇವತೆಗಳಿಗೆ ಇದನ್ನು ನೋಡಿ ಏನೆನ್ನಿಸಿತು ಹೇಳಿ. ಸ್ವಲ್ಪ ಗಮನವಿಟ್ಟು ಚಿತ್ರವನ್ನು ನೋಡಿ ಸ್ಟೈನ್‍ಬರ್ಗ್ ತನ್ನ ವ್ಯಂಗ್ಯವನ್ನು ಹೇಗೆ ಅಭಿವ್ಯಕ್ತಿಸಿದ್ದಾನೆ ಎಂಬುದನ್ನು ಕಂಡುಕೊಳ್ಳಿ. ಹಾಗೇ ನೀವು ಕಂಡುಕೊಂಡದ್ದನ್ನು ಇಲ್ಲಿ ಬರೆಯಿರಿ.

ಈ ಚಿತ್ರ ಇನ್ನೊಂದು ಕಾರಣಕ್ಕಾಗಿ ಬಹಳ ಮಹತ್ವದ್ದಾಗಿ ಬೆಳೆದು ಬಂದಿದೆ. ಚಿತ್ರದ ವಿನ್ಯಾಸ ಸೋಶಿಯಲ್ ನೆಟ್‍ವರ್ಕುಗಳಲ್ಲೂ ಸಂಪರ್ಕ ಜಾಲಗಳಲ್ಲೂ ಕೆಲ ಮಹತ್ವದ ಬೆಳವಣಿಗೆಗೆ ಸ್ಫೂರ್ತಿಯಾಗಿದೆ. ಹೀಗಾಗಿ ವ್ಯಂಗ್ಯಕ್ಕೆ ಸೀಮಿತಾಗದೆ ದೊಡ್ಡ ಅರ್ಥವ್ಯಾಪ್ತಿ ಕಂಡುಕೊಂಡಿದೆ. ಅದೆಲ್ಲದರ ಬಗ್ಗೆ ಇನ್ನೊಮ್ಮೆ. ಸದ್ಯಕ್ಕೆ, ಅದೆಲ್ಲದರ ಹಂಗು ಬಿಟ್ಟು ಸುಮ್ಮನೆ ಚಿತ್ರವನ್ನು ನೋಡಿ ಆನಂದಿಸಿ.

ಐಪಿಎಲ್

ಐಪಿಎಲ್ ಎಂಬ ನವ ಕ್ರಾಂತಿಯಿಂದ ದೇಶವಿದೇಶಗಳ ಶ್ರೇಷ್ಠ ಆಟಗಾರರೆಲ್ಲ ಒಟ್ಟಿಗೆ ಸೇರಿ ಅವರ ಸಂಬಂಧಗಳು ಉತ್ತಮಗೊಳ್ಳುತ್ತವೆ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುತ್ತಾರೆ, ಹೊಂದಾಣಿಕೆ ಹೆಚ್ಚಾಗುತ್ತದೆ… ಹೀಗೆ ಎಲ್ಲರೂ ಹೇಳಿಯೇ ಹೇಳುತ್ತಿದ್ದಾರೆ. ಅದೇನೋ ಗೊತ್ತಿಲ್ಲ. ಇದ್ದರೂ ಇರಬಹುದು. ಆದರೆ ಅದೇ ಐಪಿಎಲ್‍ನ ದೆಸೆಯಿಂದ ನಮ್ಮ ಆಟಗಾರರು ಕಡಿದಾಡುತ್ತಿದ್ದಾರಲ್ಲ! ಒಳ್ಳೆಯ ಪ್ರಹಸನ. ಹೆಹ್…

« Newer Posts - Older Posts »