ಮೊರೆ

ಹೊಸದೇನಾದರೂ ಬರೆಯಬೇಕೆಂದುಕೊಳ್ಳುತ್ತೇನೆ. ಸಮಯದ ಅಭಾವ. ಅಲ್ಲದೇ ಉತ್ಸಾಹ ಸಾಲುತ್ತಿಲ್ಲ. ಸದ್ಯಕ್ಕೆ ಇನ್ನೊಂದು ಹಳೆ ಪದ್ಯ. ಇದಂತೂ ಬಹಳ ಹಳೆಯದು. ಈಗ ಓದಿದರೆ ಹಸಿ ಹಸಿ ಎನ್ನಿಸುತ್ತಿದೆ. ಅಂದ ಹಾಗೆ, ನಾನು ಇದನ್ನು ಮೊದಲು ಬರೆದದ್ದು ಇಂಗ್ಲಿಶಿನಲ್ಲಿ. ಅದು ಕೆಳಗಿದೆ.

ಒಣ ಬಾವಿಯದೊಂದು ಮೊರೆ

ಕೆಲವು ಸಂಗತಿಗಳು ಮತ್ತೆ ಮತ್ತೆ ಸ್ಫೂರ್ತಿ ತರುತ್ತವೆ
ವಸಂತ, ಮೊಗ್ಗು ಮತ್ತೆ ಹುಣ್ಣಿಮೆಯ ಚಂದ್ರ
ಅಲೆ, ಮೋಡ ಮತ್ತೆ ಮಧ್ಯಾಹ್ನದ ಮಳೆ

ಒಮ್ಮೊಮ್ಮೆ ಅನ್ನಿಸುತ್ತದೆ…
ನಾನು ಇನ್ನೂ ಬದುಕಿದ್ದೇನೆ
ಸುತ್ತಲಿನ ಸೌಂದರ್ಯವನ್ನು ನೋಡುತ್ತಿದ್ದೇನೆ
ನನ್ನಜ್ಜನ ಪಿಸುಮಾತನ್ನು ಈಗಲೂ ಕೇಳಬಲ್ಲೆ
‘ಸುಮ್ಮನೆ ನೋಡದಿರು, ಕಂದಾ… ಅನುಭವಿಸು..’
ಬಹಳ ಪ್ರಯತ್ನಿಸಿದ್ದೇನೆ ನಾನು
ನೋಡದ್ದನ್ನೂ ಅನುಭವಿಸಲು
ಆದರೆ ಒಂದನ್ನು ಗಮನಿಸಿ.. ಇದಕ್ಕೆ ಕಾರಣ ನಾನಲ್ಲ…
ಇಂಥ ಅಸೂಕ್ಷ್ಮ ಆಟಗಳನ್ನು ಆಡುವುದು ಕಾಲ.

ಬೇರೆ ಸಂಗತಿಗಳೂ ಸ್ಫೂರ್ತಿ ತರುತ್ತವೆ
ಏಕೆಂದರೆ ನಾನು ವಿಮುಖರಾಗುವವರ ಪೈಕಿ ಅಲ್ಲ
ಮಣ್ಣಲ್ಲಾಡುವ ಆ ಬೆತ್ತಲೆ ‘ಪ್ರೇಮ ದೇವತೆ’ಗಳನ್ನು ನೋಡಿದ್ದೇನೆ.
ಹುಟ್ಟಿನಿಂದಲೇ ಮುರಿದಿವೆ ಅವುಗಳ ಬಿಲ್ಲುಗಳು
ಬಾಣಗಳಂತೂ ಗಾಳಿಯಲ್ಲೇಲ್ಲೋ ಕರಗಿವೆ
ಕೆಲವು ಕಡ್ಡಿಯೊಂದನ್ನು ಕೈಯಲ್ಲಿ ಧರಿಸಿವೆ.. ಉಳಿದವು.. ಶೂನ್ಯವನ್ನು..!
ಅವರನ್ನು ಕರುಣೆಯಿಂದ ನಿರುಕಿಸುತ್ತ ವಿಚಾರ ಮಾಡುತ್ತೇನೆ
ಉರಿಯುವ ಕಣ್ಣುಗಳನ್ನು ಮುಚ್ಚಿ ಬೇಗುದಿಯನ್ನು ಶಪಿಸುವ ಮುನ್ನ

ಯಾವಾಗಲೂ ಕಾಡುವ ಸಂಗತಿಗಳೂ ಇಲ್ಲವೆಂದಲ್ಲ
ನಾನು ವ್ಯವಸ್ಥೆಯ ತಾಳಕ್ಕೆ ಕುಣಿಯುವವನಲ್ಲ
ತಪ್ಪು ಜಾಗಗಳಲ್ಲಿ ಕೇಳಿಸುವ ಗಂಟೆಗಳು
ತಮಂಧವನು ಹುಡುಕುವ ಬಿದಿಗೆ ಚಂದ್ರಮ
ಎಲ್ಲೆಡೆಯೂ ನುಸುಳುವ ಕಾರಭಾರಿ ಶಿಲುಬೆ
ಇವೆಲ್ಲ ದುರುಗುಟ್ಟಿ ನನ್ನನ್ನು ಅಣಕಿಸುವಾಗ
ಹುಬ್ಬುಗಂಟಿಕುತ್ತೇನೆ… ಬಿಗಿದ ಮುಷ್ಠಿ ಎತ್ತುತ್ತೇನೆ
.. ಆದರೆ… ತಡೆಯಿರಿ.. ದೇವದೂಷಣೆಗೆ ನಾನು ತೀರ ಸಣ್ಣವನಲ್ಲವೆ?

ತೀವ್ರ ಹುಡುಕಾಟದ ಗಳಿಗೆಗಳೂ ಒದಗುತ್ತವೆ
ಏಕೆಂದರೆ ನನ್ನಲ್ಲೂ ಹಪಹಪಿಸುವ ಆತ್ಮವಿದೆ
ನಿನ್ನ ದಟ್ಟ ನೀಲಿ ಕಣ್ಣುಗಳನ್ನು ನೋಡಿದಾಗ
ಅಲೆಗಳನು ಮೋಡಗಳನು ಅಂಗೈಯಲ್ಲಿ ಕಾಣುತ್ತೇನೆ
ಅಂದುಕೊಂಡಿದ್ದೇನೆ.. ಹಾರಬಹುದೇನೋ ಅನಂತ, ಕಾಣದ ನೆಲಗಳಿಗೆ
ಹೆಕ್ಕಿ ತೆಗೆಯಬಹುದೇನೋ ಒಂದು ಶಂಖ ಆಳದಾಚೆಯಿಂದ
ಆದರೆ.. ತಡವರಿಸುತ್ತೇನೆ.. ಹುಮ್ಮಸ್ಸು ತಡೆಯುತ್ತೇನೆ.
ಯಾರಿಗೆ ಗೊತ್ತು.. ನನ್ನಂತೆ ನಿನ್ನ ಕಣ್ಣುಗಳಿಗೂ ಆಳವೇ ಇರಲಿಕ್ಕಿಲ್ಲ..!!

Litany from a Hollow Well

Some things inspire me more than once
The spring, the bud and the full moon
The tide, the cloud and the shower in the noon.

Perhaps…
I am a man who still is not dead
For, I see the beauty that surrounds
Can still hear my grandpa whispering
‘Don’t just see it, Son.. behold it’
Well…have tried hard you can be sure
to behold even the unseen!
But there’s this… it’s not me…
Time who plays these blatant games

Other things inspire me too
For, I am not the one who averses
When I see those muddy Cupids
with their bows broken at birth
and the arrows dissolved in thin air
Some wearing a stick, and others… emptiness!
I watch them with compassion and think twice
before I close my burning eyes and swear in anguish

There are things that haunt me ever
For, I am not the one who fears dissent.
The ringing bell that is out of place
The crescent moon that seeks darkness
and the cross that pierces through
Intimidated I am by their stare
I try to frown and bang a fist
… wait … am I too mortal to blaspheme?

There are moments when I need to search
For I too have a resurgent soul
When I see your deep blue eyes
feel the clouds and the tides in my palms
I could fly eternally to unseen lands
and find a conch at cavernous depths
Well… but then I restrain from the endeavour
for… perhaps…your eyes are as shallow as me!!

ಬೆಳಕು

Light

ಈ ಫೋಟೋ ನನ್ನ ಸಂಚಾರಿ ಫೋನಿನಲ್ಲಿ ಸಿಕ್ಕಿದ್ದು. ಏನೆಂದು ಗೊತ್ತಿಲ್ಲ. ಬಹುಶಃ ನಿರುದ್ದಿಶ್ಶವಾಗಿ ಸುಮ್ಮನೆ ಏನೋ ತೆಗೆದಿರಬೇಕು. ಅದಿರಲಿ. ಅದನ್ನು ನೋಡಿದ ಕೂಡಲೆ ಏನೇನೋ ಅನ್ನಿಸಿತು. ಅನ್ನಿಸಿದ್ದನ್ನು ಕೆಳಗೆ ದಾಖಲಿಸಿದ್ದೇನೆ. ಹಾಗೆಯೇ ಇಂಗ್ಲಿಶಿಗೆ ಅನುವಾದವನ್ನೂ ಮಾಡಿದ್ದೇನೆ; ಅವಸರದ ಅನುವಾದ.

—-

ಜಗದಗಲ ಹಣೆಬಡೆದ
ಹಿತ್ತಾಳೆ ಮೊಗದೊಡೆಯ
ಮುಚ್ಚುಕಂಗಳ ಸಂತ
ನಿರ್ಲಿಪ್ತ ಜಂಗಮನೆ

 

ಧ್ಯಾನಸ್ತ ಅಲ್ಲಮನೆ?

 

ಪ್ರಶಾಂತ
ಅಭಯಂಕರ
ಶಿವನೆ?

 

ಹಣೆಗಣ್ಣಲ್ಲ
ಜ್ಞಾನದ ಬೆಳಕಿಂಡಿ
ಹಣೆಯ ಛೇದಿಸಿ
ಯಜ್ಞಕುಂಡವ ಹೂಡಿ
ಬೆಳಕ ಸೂಸುವ
ಅಘೋರಿಯೆ
ಮಹಾ ಮಹಿಮನೆ

—-

Blanket forehead
Brazen-faced
Closed eyes. Saint.
An impassive Jangama?

 

Musing Allama, perhaps.

 

Tranquil
Unstartling
Shiva?

 

Not a flaming Third Eye
A passage for wisdom
Bored the forehead
to install a Yajnakunda
The blessed one
Aghori
Radiates light.

ಇರಲಿ ಬನ್ನಿ

ಇನ್ನೊಮ್ಮೆ ಬರುವಾಗ
ಮರೆಯದೆ ಕುಂದಾ
ಕೊಂಡು ಬನ್ನಿ

ನಡುವಿನಂಗಳದ
ತುಳಸಿ
ದಿನವೆರಡು ತಡೆವಂತೆ
ನೀರೆರೆದು ಬನ್ನಿ

ಬಂದವರು ಎರಡು
ದಿನ ನಿಲ್ಲು-
ವುದು ಹೆಚ್ಚಲ್ಲ
ಯಾವುದಕ್ಕೂ ಜೋಕೆ-
ಯೆಂದು ಯಾರಿಗೊ
ಹೇಳಿ ಬನ್ನಿ

ಮಳೆಯಾಗಿದೆಯೆ?
ಇಲ್ಲಿ ಸಾಕಷ್ಟು ಮಳೆ
ಸಂಜೆಯ ಮೋಡ
ಕರಿ ಲಡ್ಡ

ಮಳೆಯಾಗಿದ್ದರೆ ಸರಿ
ನಿಶ್ಚಿಂತೆಯಿಂದ
ಹೊರಟು ಬನ್ನಿ

ಹಾಂ! ಮರೆತಿದ್ದೆ
ಹೇಗೂ ಮಳೆಯಾಗಿದೆಯಲ್ಲ
ಜೋಳ ಬಂದಿರಬೇಕಲ್ಲ
ಕಮ್ಮನೆಯ ಬಿಳಿಜೋಳ
ಕೊಂಡೇಕೆ ತಿನ್ನುವುದು?

ಅತ್ತಿಗೆಗೆ ತೆಗೆ-
ದಿರಿಸಲು
ತಪ್ಪದೆ ಹೇಳಿ

ಒಂದೆರಡು ಕೈಚೀಲ
ಹೆಚ್ಚೇನು ಒಜ್ಜೆಯಲ್ಲ
ಸೆಜ್ಜೆಯಿದ್ದರೆ
ತುಸು, ನಾಕಾಳು

ಲುಂಗಿಯೊಂದಿದೆಯಿಲ್ಲಿ
ಒಳರಿವೆ ಶರ್ಟು ಮಾತ್ರ
ಪ್ಲ್ಯಾಸ್ಟೀಕಿನಲ್ಲಿ
ಸುತ್ತಿಕೊಂಡು ಬನ್ನಿ

ಮಳೆಯಲ್ಲಿ ನೆಂದಿರೆ
ಬಟ್ಟೆ ಒಣಗವೆ
ಬೇಸರವೆ?
ಏನ್ಮಾಡುವುದು ಹೇಳಿ
ಸ್ವಲ್ಪ ದಿವಸ

ನನಗೂ ಆಗುತ್ತದಲ್ಲ
ಏನಿದ್ದೂ ಏನಿಲ್ಲ
ಆದರೂ ಪರವಾಗಿಲ್ಲ
ಆಗೊಮ್ಮೆ ಈಗೊಮ್ಮೆ
ಬರುತ್ತೀರಲ್ಲ

ಸಿಗರೇಟು ಕಚ್ಚುತ್ತೀರಾ
ಕಾಲವ್ಯಯದ ನೆವ ಹೇಳಿ
ಮೂರಿಂಚು ಕಡ್ಡಿಯದು
ದೂರ ಹಿಂಗಿಸಲುಂಟೇನು
ಬಿಡಿ ಬಿಡಿ
ಬಂದು ಬಿಡಿ

ಸಿಗರೇಟು ವಾಸನೆ
ಮುಚ್ಚುವ ಹಂಗ್ಯಾಕೆ
ವಿರಹ ಸಂಕೇತಿಯದು
ಹಾಳು ಪೆಪ್ಪರ್ ಮಿಂಟ್ಯಾಕೆ
ಸಿಗರೇಟು ವಾಸನೆ
ಬರಲಿ ಬನ್ನಿ

ಏನು? ಕುಂದಾ..
ಮರೆತಿರಾ
ಹಹ್ಹಹ್ಹಾ..
ಇರಲಿ ಬನ್ನಿ