ಒಂದಷ್ಟು ಸಿಂಗಪೋರ್ ಮೆಲುಕುಗಳು

ಸಿಂಗಪೋರ್. ಮಲಯದಲ್ಲಿ ಸಿಂಗಪುರ. ೧೪ನೇ ಶತಮಾನದ ಸುಮಾತ್ರದ ಮಲಯ ರಾಜಕುಮಾರ ಬಂದಿಳಿದಾಗ ಪ್ರ್‍ಆಣಿಯೊಂದನ್ನು ಕಂಡು ಶುಭಶಕುನವಾಯಿತೆಂದುಕೊಂಡನಂತೆ. ಅವನ ಮಂತ್ರಿ ಆ ಪ್ರಾಣಿ ಸಿಂಹ ಎಂದು ಅರುಹಿದನಂತೆ. ಹೀಗಾಗಿ ಮಲಯ ಮೂಲಗಳ ಪ್ರಕಾರ ಈ ಊರಿನ ಹೆಸರು ಸಿಂಗಪುರವಂತೆ. ಹೊಸ ಸಂಶೋಧನೆಯ ಪ್ರಕಾರ ಈ ಪ್ರಾಂತ್ಯದಲ್ಲಿ ಸಿಂಹಗಳು ಇದ್ದಿರಲಿಕ್ಕೆ ಸಾಧ್ಯವೇ ಇಲ್ಲ; ಆದ್ದರಿಂದ ಆ ಪ್ರಾಣಿ ಹುಲಿಯಾಗಿದ್ದಿರಬೇಕು ಎಂಬ ಅಂಬೋಣ. ಹೀಗೆ ಮಂತ್ರಿಯೊಬ್ಬನ ತಪ್ಪು ತಿಳುವಳಿಕೆಯಿಂದ ಹುಲಿಯೂರು ಸಿಂಗಪುರವಾಯಿತು. ಅಥವಾ ಸಂಸ್ಕೃತದ ವ್ಯಾಘ್ರಪುರ, ಬಾಘಪುರ ಬಾಗ್‌ಪುರ ಇತ್ಯಾದಿಗಳಾಗಿ ಕೊನೆಗೆ ಬಾಗಪೋರ್ ಆಗುತ್ತಿತ್ತೇನೋ.

ಹುಲಿಯೋ ಸಿಂಹವೋ, ಇದು ಕಾಡಂತೂ ಅಲ್ಲ. ಎಲ್ಲ ವ್ಯವಸ್ಥಿತ, ಚುರುಕು, ದಕ್ಷ. ತುಟ್ಟಿಯಾದರೂ ಒಳ್ಳೆಯ ಗುಣಮಟ್ಟದ ಬದುಕು. ಬೇಕಾದಷ್ಟು ಆಯ್ಕೆ; ಬೇಕಾದ ಹಾಗೆ ಬದುಕುವ ಸ್ವಾತಂತ್ರ್ಯ.

ಒಂದು ನಿಮಿಷ. ಸ್ವಾತಂತ್ರ್ಯ? ಇಲ್ಲಿನ ಜೀವನಶೈಲಿಯ ಬಗ್ಗೆ ನನಗೆ ಸ್ಪಷ್ಟ ಅಥವಾ ಸಮಗ್ರ ಪರಿಕಲ್ಪನೆ ಇಲ್ಲ. ಆದರೆ ನನಗನ್ನಿಸುವುದೆಂದರೆ ಇಲ್ಲಿ ಕಾರ್ಯನಿರ್ವಾಹಣಾ ದಕ್ಷತೆ ಹಾಗೂ ಸ್ವಾತಂತ್ರ್ಯಗಳ ನಡುವೆ ನಿರಂತರ ಹಗ್ಗ ಜಗ್ಗಾಟ ನಡೆದಿರುತ್ತದೆ. ಇದು ಸಿಂಗಪೋರಿನ ಕತೆಯಷ್ಟೇ ಅಲ್ಲ. ಹಾಗೆಯೇ ನಾನು ಸ್ವಾತಂತ್ರ್ಯ ಎಂಬ ಶಬ್ದವನ್ನು ಯಾವುದೇ ಪರಿಮಿತ ಅಥವಾ ನಿರ್ದಿಷ್ಟ ಅರ್ಥ ಕೊಡುವಂತೆ ಬಳಸುತ್ತಿಲ್ಲ. ಈ ಹಗ್ಗ ಜಗ್ಗಾಟ ಸುರಕ್ಷೆ ಮತ್ತು ಸ್ವಾತಂತ್ರ್ಯಗಳ ನಡುವಿನ ಚೌಕಾಶಿಯಂಥದ್ದು. ನಮ್ಮವೇ ದೊಡ್ಡ ನಗರಗಳ ಶಾಪಿಂಗ್ ಮಾಲ್‌ಗಳಲ್ಲಿ ಒಳಗೆ ಹೋಗುವ ಮುನ್ನ ನೀವು ಹಾಗೂ ನಿಮ್ಮ ಚೀಲಗಳು ಸುರಕ್ಷಿತ ಎಂದು ಧೄಢಪಡಿಸಬೇಕಾದ ಮುಜುಗರ ಸ್ವಾತಂತ್ರ್ಯಕ್ಕೆ ತೋರಿಸುವ ಅಗೌರವವೇ. ಹಾಗೆಯೇ ಸರಕಾರಗಳು ಸುರಕ್ಷೆ ದಕ್ಷತೆ ಅನುಕೂಲಗಳ ನೆವ ಹೇಳಿ, ವ್ಯಕ್ತಿಗಳು ಯೋಚಿಸುವ ಪರಿಶೀಲಿಸುವ ವಿವೇಚಿಸಿ ನಿರ್ಧರಿಸುವ ಅವಶ್ಯಕತೆಯಿಲ್ಲವೆಂದು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಹೇಳುವುದು. “ನೀವೇಕೆ ಯೋಚಿಸಿ ತಲೆ ಕೆಡಿಸಿಕೊಳ್ಳುತ್ತೀರಿ. ನಾವು ಹೇಳುವುದು ಸರಿಯಾಗಿಯೇ ಇದೆ. ಅದನ್ನು ಮಾಡಿದರೆ ನಿಮಗಾಗುವ ಅನುಕೂಲ ನೋಡಿ. ಅಷ್ಟಕ್ಕೂ ಯೋಚಿಸುವ ಅವಶ್ಯಕತೆ ಬಂದರೆ ನಾವಿದ್ದೇವಲ್ಲ! ಅದಕ್ಕೊಂದಷ್ಟು fee ಕೊಟ್ಟರೆ ಆಯಿತು”, ವ್ಯವಸ್ಥೆ ಹೀಗಂದಂತೆ ಭಾಸವಾಗುತ್ತದೆ.

ನಾನು ಹಾಗೂ ಇಲ್ಲಿಯೇ ವಾಸಿಸುವ ನನ್ನ ಸೋದರತ್ತೆಯ ಮಗ ಸುಂದರ ಫುಟ್‌ಪಾತ್‌ವೊಂದರ ಮೇಲೆ ನಡೆಯುತ್ತ ಹತ್ತಿರದ food-courtಗೆ ಹೋಗುತ್ತಿದ್ದೆವು. ನಡುವೆ ರಸ್ತೆ ಕ್ರಾಸ್ ಮಾಡಬೇಕಾಯಿತು. ಖಾಲಿ ರಸ್ತೆ. ನಾನು ಆರಾಮಾಗಿ ಮುಂದುವರಿದೆ. ಅವನು ನನ್ನನ್ನು ತಡೆದು “ಕೆಂಪು ಮನುಷ್ಯ”ನತ್ತ ಕೈ ತೋರಿದ. ನಾನವನಿಗೆ ಹೇಳಿದೆ, “ಇದು ಬಹಳೇ ನಾರ್ಮೇಟಿವ್ ಸಮಾಜ”. ಅದೆಷ್ಟು ಕಾಯ್ದೆಗಳು. ಅದೆಷ್ಟು ಸೂತ್ರಗಳು. ಕ್ಯಾಮೆರಾಗಳು. ಮನೆ ಕೊಂಡುಕೊಳ್ಳಲೇಬೇಕು. ಆದರೆ ನಿನ್ನ ನಂತರ ನಿನ್ನ ಮಕ್ಕಳು ಅದನ್ನು ಭೋಗಿಸಲಾರರು. ಅದು ಸರಕಾರದ ಸ್ವತ್ತಾಗುತ್ತದೆ. ಆದಾಯ ಕರ ಕೇವಲ ೮%. ಆದರೆ ಹೋದಲ್ಲಿ ಬಂದಲ್ಲಿ ಪರೋಕ್ಷ taxes. ಎಲ್ಲವೂ ವಿಪರೀತ ತುಟ್ಟಿ. ಆದರೆ ಉಳಿತಾಯ ಮಾಡುವುದು ಕಡ್ಡಾಯ! ಸಿಗರೇಟನ್ನು ಚಿಲ್ಲರೆಯಾಗಿ ಮಾರಿದರೆ ಜನ ಸೇದುವುದು ಜಾಸ್ತಿಯಾಗುತ್ತದಂತೆ. ೨೦ರ ಪ್ಯಾಕುಗಳನ್ನು ಮಾರಿದರೆ ಕಡಿಮೆಯಾಗುತ್ತದಂತೆ.

ನಾನು ಮುಂದುವರಿದು ಕೇಳಿದೆ, “ಇಂಥ ಪರಿಸ್ಥಿತಿ scalable ಆಗಲು ಸಾಧ್ಯವೇ?”. ಅಲ್ಲದೆ ಭಾರತದಂಥ ದೇಶದ ವಿಶಾಲತೆ ವೈವಿಧ್ಯಮಯತೆಯನ್ನು ಇಂಥ ವ್ಯವಸ್ಥೆ ತಡೆದುಕೊಳ್ಳಬಲ್ಲುದೆ? ಅಷ್ಟು ಪುಷ್ಟ(robust)ವಾಗಿದೆಯೆ? ಮೊಟ್ಟಮೊದಲಿಗೆ ಸಿಂಗಪೋರನ್ನು ಒಂದು ದೇಶವೆಂದು ಹೇಳುವುದೇ ಸ್ವಲ್ಪ ಕಷ್ಟ. ಇದು ಒಂದು ದೊಡ್ಡ ನಗರ. ವೈವಿಧ್ಯತೆ ಇಲ್ಲವೆಂದಲ್ಲ. ಆದರೆ ಇದು ಹೊಂದಾಣಿಕೆ ಮಾಡಿಕೊಂಡು ಹೋಗುವಂಥ ಕಾಸ್ಮೊಪಾಲಿಟನ್ ವೈವಿಧ್ಯ. ವಿಭಿನ್ನತೆಯನ್ನು ಒಂದು ರೀತಿಯ ಆವಾಹಿಸಿಕೊಂಡ amusementನಿಂದ ನೋಡಿ ಮಂದಹಾಸವೊಂದನ್ನು ಸವಿಯುತ್ತ ಎಲ್ಲಕ್ಕಿಂತ ದೊಡ್ಡದಾದ ಕೆಲಸದತ್ತ ಅಥವಾ ಉತ್ತಮ ಗುಣಮಟ್ಟದ ಬದುಕಿನತ್ತ ಹೆಜ್ಜೆಯಿರಿಸುವ ಸಮಾಜ. ಇದರಲ್ಲಿ ನನಗೆ ತಪ್ಪೇನೂ ಕಾಣಿಸುವುದಿಲ್ಲ. ನಾನು ಕೇವಲ ನನಗನ್ನಿಸಿದ ಕಾಸ್ಮೊಪೊಲಿಟನ್ ಸಮಾಜದ ಗುಣಗಳನ್ನಷ್ಟೇ ಹೇಳುತ್ತಿದ್ದೇನೆ. ಹೀಗಿರುವಾಗ ವಿಭಿನ್ನತೆ ಇಂಥ ಸಮಾಜಕ್ಕೆ ಒಂದು ಸಮಸ್ಯೆಯೇ ಅಲ್ಲ. ಆದರೆ ಭಾರತದಂಥ ದೇಶಗಳಲ್ಲಿ ವಿಭಿನ್ನತೆ ಎನ್ನುವುದು ಅದೆಷ್ಟು ಆಯಾಮಗಳಲ್ಲಿ ಒದಗುತ್ತದೋ ಯಾರು ಬಲ್ಲರು. ಸಾಹಿತ್ಯ, ಸಂಗೀತ, ಕಲೆ, ಇತಿಹಾಸ ಮುಂತಾದವುಗಳಂತೆ technologyಗು ಒಂದು context ಇರುತ್ತದೆ. ಇಲ್ಲಿನ ಸಮಸ್ಯೆಗಳಿಗೆ ಇಲ್ಲಿಯೇ ಉತ್ತರ ಕಂಡುಕೊಳ್ಳಬೇಕಾಗುತ್ತದೆ. ನಮ್ಮ ನಗರಾಭಿವೃದ್ಧಿ, ಆಡಳಿತ, ಶಿಕ್ಷಣ, ಆರೋಗ್ಯ, ಹೀಗೆ ಬಹಳಷ್ಟು.

ಸಿಂಗಪೋರನು “fine city” ಎಂದೂ ವ್ಯಂಗ್ಯದಿಂದ ಕರೆಯುತ್ತಾರೆ: ಶೌಚದ ನಂತರ ಸರಿಯಾಗಿ ನೀರು ಹಾಕದೆ ಹೊರಬಂದರೆ, ಅನುಮತಿಯಿಲ್ಲದ ಸ್ಥಳಗಳಲ್ಲಿ ರಸ್ತೆ ಕ್ರಾಸ್ ಮಾಡಿದರೆ ಹೀಗೆ ಅನೇಕ ಸಣ್ಣಪುಟ್ಟ “ಅಪರಾಧ”ಗಳಿಗೆ ದಂಡ ನಿಗದಿಯಾಗಿದೆ. ಇಂಥ ತಪ್ಪುಗಳ ಬಗ್ಗೆ ಹುಬ್ಬು ಗಂಟಿಕ್ಕುವುದು ಬೇರೆ. ಆದರೆ ಅದನ್ನು ಕಾಯ್ದೆಯ ಪುಸ್ತಕದಲ್ಲಿ ಸ್ಪಷ್ಟವಾಗಿ ಬರೆಯುವುದು ವಿಚಿತ್ರವೇ. ಇಲ್ಲಿನವರ ಸೆನ್ಸ್ ಆಫ್ ಹಿಸ್ಟರಿಯೂ ಸ್ವಲ್ಪ ಮಜವೇ. ನೋಡಿದರೆ ಹೊಸ ದೇಶ. ಆದರೂ ಇದ್ದಷ್ಟು ಚರಿತ್ರೆ, ಸಿಕ್ಕಷ್ಟು ವಾರಸನ್ನು ತೋರಿಸಿ ಸಂಭ್ರಮಿಸಬೇಕೆನ್ನುವ ಹುಮ್ಮಸ್ಸು. ಸಣ್ಣ ಪಾರ್ಕುಗಳಿಗೂ ಒಂದೊಂದು ಇತಿಹಾಸದ ಫಲಕ! ಎಲ್ಲವೂ ಮಹತ್ತಾದದ್ದೇನನ್ನೋ ಸಂಕೇತಿಸುತ್ತವೆನ್ನುವ ನಂಬುಗೆ. ಅವರ ಪ್ರಸಿದ್ಧ ಸ್ಮಾರಕ merlion. ಅದರ ಬಗ್ಗೆ ವಿಪರೀತ ಅಭಿಮಾನ ಅವರಿಗೆ. ಅವರ ಉತ್ತಮ ಕವಿ ಎಡ್ವಿನ್ ತಂಬುನ ಶ್ರೇಷ್ಠ ಪದ್ಯ Ulysses by the Merlion ಕೂಡ ಅಲ್ಲಿ ಕಾಣಸಿಗುತ್ತದೆ. ನನ್ನದೇನೂ ತಕರಾರಿಲ್ಲ. ಆದರೂ “ಅಯ್ಯೋ, ಒಮ್ಮೆ ನಮ್ಮಲ್ಲಿ ಬಂದು ನೋಡಿ…” ಎನ್ನಬೇಕೆನ್ನಿಸುತ್ತದೆ.

ಒಂದಷ್ಟು ಒಪ್ಪು ಒಂದಷ್ಟು ತಪ್ಪು. ಒಟ್ಟಿನಲ್ಲಿ ಚೆನ್ನಾಗಿದೆ. ನೈಸರ್ಗಿಕ ಸೌಂದರ್ಯವೇನಿಲ್ಲ; ಒಂದಷ್ಟು ನಿಸರ್ಗ ನಿರ್ಮಿಸಲು ಪ್ರಯತ್ನ ಮಾಡಿದ್ದಾರೆ. ಕಟ್ಟಡಗಳೆಲ್ಲವೂ ಅದ್ಭುತ, ಬೃಹತ್. ಸಣ್ಣದೇನನ್ನೂ ಕಟ್ಟಿ ಇವರಿಗೆ ರೂಡಿಯೇ ಇಲ್ಲ. ಸಿಂಗಪೋರ್ ನ್ಯಾಶನಲ್ ಲೈಬ್ರರಿಯನ್ನು ನೋಡಿ ದಂಗಾದೆ. ಏನು ಭವ್ಯವಾಗಿದೆ. ಎಷ್ಟೊಂದು ಮಾಹಿತಿ. ಎಷ್ಟು ಓರಣ. ಸಂಶೋಧಕರಿಗೆ ಸ್ವರ್ಗ. ಇಂಥದ್ದು ನಮ್ಮೂರಲ್ಲೂ ಇದ್ದರೆ ಎಂದುಕೊಂಡು ಹಳಹಳಿಸಿದೆ. ನೋಡಿ ಕಲಿಯುವುದು ಬೇಕಾದಷ್ಟಿದೆ. ಕಲಿತದ್ದನ್ನು ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವುದು ಬೇರೆ ಪ್ರಶ್ನೆ.

ಸುಮ್ಮನೆ

ಬ್ಲಾಗ್ ಶುರು ಮಾಡಿ ಎಷ್ಟೋ ದಿನಗಳಾದರೂ ಏನೂ ಬರೆದಿಲ್ಲ. ಬರೆಯುವುದಕ್ಕೆ ಬೇಕಾದಷ್ಟಿದೆ. ವಿಚಾರಗಳಿವೆ, ಪ್ರತಿಮೆಗಳಿವೆ, ವಾದಗಳಿವೆ. ಇವತ್ತು ಕೂತು ಒಂದಷ್ಟು ಸಾಲನ್ನಾದರೂ ಬರೆಯಲೇಬೇಕು ಎಂದು ನಿಶ್ಚಯಿಸಿ ಪೆನ್ನು ಹಾಳೆ laptop ಎಲ್ಲವನ್ನು ಅಣಿಗೊಳಿಸಿ, ಪಕ್ಕದಲ್ಲಿ ಉದ್ದನೆಯ ಲೋಟದಲ್ಲಿ ಕಾಫಿಯೋ ಕರಿ ಚಹವೋ ಇಟ್ಟುಗೊಂಡು, ನನ್ನನ್ನು ಇನ್ನು ಬರೆಯದಂತೆ ತಡೆಯುವ ಶಕ್ತಿ ಅದಾವುದದು ಎಂದು ಗಹಗಹಿಸಿ (೮೦ರ ಹಿಂದಿ ಚಿತ್ರಗಳ ನಾಯಕನ “ದುನಿಯಾ ಕಿ ಕೊಯಿ ಭಿ ತಾಕತ್..” ನೆನೆಪಿಸಿಕೊಳ್ಳಿ ), ಕಣ್ಣು ಕಿರಿದು ಮಾಡಿ laptop ದುರುಗುಟ್ಟಿ ತಲೆಕೆರೆದು ಮೈಮುರಿಯುವಷ್ಟರಲ್ಲಿ ದಾಪು ಹತ್ತಿ ಉತ್ಸಾಹ ಪುಸ್ಸೆಂದು ಹೋಗಿರುತ್ತದೆ.

ಇರಲಿ. ಸಿಂಗಪೋರ್ ಬಗ್ಗೆ ಒಂದು ಲೇಖನ ಅರ್ಧ ಬರೆದು ಇಟ್ಟಿದ್ದೇನೆ. ಅದನ್ನು ಬೇಗ ಮುಗಿಸಿ ಛಾಪಿಸಬೇಕು. ಕತೆಯೊಂದನ್ನು ಬರೆಯುವ ಆಸೆಯಿದೆ. ಅದೆಷ್ಟು ದಿನಗಳಾದವು ಬರೆದು!