ಖಯಾಲ್: ಪ್ರೇಮ, ಕತೆಗಳು

ಬಹುಕಾಲದ ನಂತರ ಸೇರುತ್ತಿರುವ ಪ್ರೇಮಿಗಳ ಕತೆಗಳು. ಅವಳು ಇತ್ತೀಚೆಗೆ ಓದಿದ ಇಂಗ್ಲಿಶ್ ಕಾದಂಬರಿಗಳಲ್ಲಿನ ಕತೆಗಳು. ಅವರು ಆ ಕತೆಗಳನ್ನು ಹೇಳುವ ರೀತಿ ಅವಳಿಗೆ ತುಂಬ ಇಷ್ಟ. ಅವು ಅವಳೋದಿದ ಎಷ್ಟೋ ಹಳೆಯ ಕತೆ ಕಾದಂಬರಿಗಳಿಗಿಂತ ಬಹಳ ಭಿನ್ನ. ಅವಳಿಗೆ ಪ್ರೇಮಿಗಳ ಪ್ರಲಾಪಗಳು, ಹಲುಬುವಿಕೆ, ಉದ್ದುದ್ದ ಭಾಷಣಗಳು ಜಿಗುಪ್ಸೆ ಹುಟ್ಟಿಸುತ್ತದೆ; ಕೃತಕ ಅನ್ನಿಸುತ್ತದೆ. ಇವು ಹಾಗಲ್ಲ. ಪ್ರೇಮಿಗಳು ಪ್ರೇಮಿಸುತ್ತಾರೆ, ಮತ್ತೇನಿಲ್ಲ. ಪ್ರಶ್ನೆಗಳ ಹಂಗಿಲ್ಲ; ವಿವರಣೆಗಳು ಬೇಕಿಲ್ಲ; ಹೆಚ್ಚು ಮಾತಿಗೂ ಅವಕಾಶವಿಲ್ಲ. ದೀರ್ಘಕಾಲದ ವಿರಹದ ನೋವನ್ನು ಮರೆಸುವಂಥ ಮಿಲನದ ಈ ಸಂದರ್ಭದಲ್ಲಿ ಮಾತು ಪರಸ್ಪರ ದೂಷಣೆಗೆ ಎಡೆಮಾಡುತ್ತದಷ್ಟೆ. ಅವರು ಬರಿ ಚುಂಬಿಸುತ್ತಾರೆ. ಮುದ್ದಾಡುತ್ತಾರೆ. ಎಂಥ ಚುಂಬನಗಳವು! ಸುಂಟರಗಾಳಿಯ ಸವಿ ಅವಕ್ಕೆ. ಒಬ್ಬರದೊಬ್ಬರು ನಾಲಗೆ ತುಟಿ ಬಾಯಿಗಳನ್ನು ಬಂಧಿಸಿ, ಕೈಗಳಿಗೆ ಮಾತಿನ ಅನುಮತಿ ಕೊಡುತ್ತಾರೆ. ಬೆರಳುಗಳು ಉಗುರುಗಳು ಅಂಗೈಗಳು. ಶಬ್ದಗಳು ತಲುಪಲಾರದ ನೆಲೆಗಳಿಗೆ ತಲುಪುವ ತಾಕತ್ತು ಅವಕ್ಕಿದೆ. ಮಾತು ಸೋಲುತ್ತದೆ. ಅವು ಹೇಳುವ ಕತೆಗಳನ್ನು ಮಾತುಗಳಿಂದ ಹೇಳಹೊರಟರೆ ಕತೆಗಳು ಸೊರಗುತ್ತವೆ, ಸವಕಲಾಗುತ್ತವೆ. ಬೆಚ್ಚಿದ ನರನಾಡಿಗಳನ್ನೆಲ್ಲ ಕೈಗಳು ತಣಿಸುತ್ತವೆ. ಅವರಲ್ಲಿ ದೂರುಗಳೇ ಇಲ್ಲವೆಂದಲ್ಲ. ವಸ್ತುತ:, ಬೆರಳುಗಳು ಮಗ್ನತೆಯಿಂದ ಆಡುತ್ತಿರುವ ಈ ಆಟದ ಕೆಲವೊಂದು ನಡೆಗಳು ನಿರ್ದಿಷ್ಟವಾದ ದೂರುಗಳನ್ನು ಸೂಚಿಸುತ್ತವೆ. ಕುತ್ತಿಗೆಯ ಹಿಂದೆ ತೋರುಬೆರಳು ಹೆಬ್ಬೆರಳನ್ನು ಸೇರಿ ಮೃದುವಾಗಿ ಚಿವುಟುತ್ತ ಹೇಳುತ್ತದೆ – ನಿನಗಾಗಿ ಎಷ್ಟು ಹಂಬಲಿಸಿದೆ, ಗೊತ್ತೆ? ಬೆನ್ನಿನ ಇಳಕಲಿನಲ್ಲಿ ವಿಹರಿಸುತ್ತಿರುವ ಅಂಗೈ, ಚಿವುಟನ್ನು ರಮಿಸುತ್ತದೆ, ತಟ್ಟುತ್ತದೆ, ತೂಗಿ ನಿದ್ದೆಗೆ ನೂಕುತ್ತದೆ. ಅಫ್ಘನ್ನನಂತೆ ಕಾಣುವ ನಿನ್ನ ಹಳೆಯ ಗೆಳೆಯನೊಬ್ಬನಿದ್ದಾನಲ್ಲ. ಅವನು ನನಗೆ ಮೊನ್ನೆ ಕಾಣಿಸಿದ. ಬಹುಶ: ನಾನು ನಿನ್ನ ಬಗ್ಗೆ ಯೋಚಿಸುತ್ತಿದ್ದೆನೇನೋ ಅಥವಾ ಏನೇನೋ ಊಹಿಸಿಕೊಳ್ಳುತ್ತಿದ್ದೆನೇನೋ, ಅವನನ್ನು ತಡೆಯಲೆ ಎನಿಸಿತು. ನಿನ್ನ ಹೆಸರು ಹಿಡಿದು ಕೂಗಿ ಕರೆಯಲೆ ಎನ್ನಿಸಿತು. ಅಧೀರ ಬೆರಳುಗಳು ಗುಂಗುರನ್ನು ಸುತ್ತುತ್ತ ಬಿಚ್ಚುತ್ತ ತಪ್ಪೊಪ್ಪಿಗೆ ಮಾಡಿಕೊಳ್ಳುತ್ತವೆ. ಬಲಶಾಲಿ ಅಂಗೈಗಳೆರಡು ಈ ಎಲ್ಲ ಹೆದರಿಕೆಗಳನ್ನು ಒರೆಸಿ ಹಾಕುತ್ತವೆ. ಅಪ್ಪುಗೆ ಬಿಗಿಯುತ್ತದೆ. ಬಿಗಿಯಪ್ಪುಯಗೆಯಂಥದ್ದು ಮತ್ತೊಂದಿಲ್ಲ. ಅದು ಒಬ್ಬರಲ್ಲೊಬ್ಬರು ಏಕಾಗ್ರಗೊಳ್ಳುವಂತೆ ಒತ್ತಾಯಿಸುತ್ತದೆ. ತಕ್ಷಣದಲ್ಲಿ ಒಂದಾಗುವಂತೆ ಮಾಡುತ್ತದೆ.

ತಲೆಮರೆಸಿಕೊಳ್ಳುವ ಕಲೆ

ನನಗೆ ಬಹಳ ಇಷ್ಟವಾಗುವ, ನಾನು ಮೇಲಿಂದ ಮೇಲೆ ಓದುವ ಪದ್ಯವೊಂದನ್ನು ಅನುವಾದಿಸಿದ್ದೇನೆ. ನೋಡಿ. ಮೂಲ ಇಲ್ಲಿದೆ.

’ಗುರುತು ಹತ್ತಲಿಲ್ಲವೇ?’ ಎಂದವರು ಕೇಳಿದಾಗ
ಇಲ್ಲವೆನ್ನಿ.

ಔತಣಕೂಟಗಳಿಗೆ ನಿಮಗೆ ಆಮಂತ್ರಣ ಬಂದಾಗ
ಉತ್ತರಿಸುವ ಮೊದಲು
ಪಾರ್ಟಿಗಳೆಂದರೆ ಹೇಗಿರುತ್ತವೆಂದು ನೆನಪಿಸಿಕೊಳ್ಳಿ:
ಯಾರೋ ತಾನೊಮ್ಮೆ ಪದ್ಯ ಬರೆದಿದ್ದೆನೆಂದು
ಎತ್ತರದ ದನಿಯಲ್ಲಿ ಹೇಳುತ್ತಿರುತ್ತಾರೆ;
ಕಾಗದದ ಪ್ಲೇಟುಗಳ ಮೇಲೆ ಎಣ್ಣೆಯೊಸರುವ ಮಾಂಸದ ಭಜಿಗಳು.
ಈಗ ಹೇಳಿ ನೋಡೋಣ.

ನಾವೊಮ್ಮೆ ಒಟ್ಟಿಗೆ ಸೇರಬೇಕು ಎಂದು ಅವರೆಂದರೆ
ಯಾಕೆಂದು ಕೇಳಿ.

ನಿಮಗೆ ಅವರ ಮೇಲೆ ಅಕ್ಕರೆ ಇಲ್ಲವಾಗಿದೆಯೆಂದಲ್ಲ.
ಮರೆಯಬಾರದಾದಂಥ ಮಹತ್ವದ್ದೇನನ್ನೋ
ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದೀರಷ್ಟೇ,
ಮರಗಳು ಅಥವಾ ಇಳಿಹೊತ್ತಿನ ಮಠದ ಗಂಟೆಯ ನಾದ
ಹೊಸ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆಂದು ಹೇಳಿ ಬಿಡಿ.
ಎಂದಿಗೂ ಮುಗಿಯಲಾರದಂಥದ್ದದು.

ಕಿರಾಣಿ ಅಂಗಡಿಯಲ್ಲಿ ಯಾರಾದರೂ ಭೆಟ್ಟಿ ಆದರೆ
ಸುಮ್ಮನೆ ಒಮ್ಮೆ ತಲೆಯಾಡಿಸಿ ಕೋಸುಗಡ್ದೆಯಾಗಿಬಿಡಿ.
ಹತ್ತಾರು ವರ್ಷ ಕಾಣದವರು ಒಮ್ಮೆಲೆ
ಬಾಗಿಲೆದುರು ಉದಯಿಸಿದರೆ
ನಿಮ್ಮ ಹೊಸ ಹಾಡುಪಾಡುಗಳನ್ನು ಬಿಚ್ಚಲು ಹೋಗಬೇಡಿ.
ಕಾಲದೊಂದಿಗೆ ಮೇಳೈಸುವುದು ಸಾಧ್ಯವೇ ಇಲ್ಲ.

ನೀವೊಂದು ಎಲೆಯೆಂಬ ಅರಿವಿನೊಂದಿಗೆ ತುಯ್ದಾಡಿ.
ಯಾವುದೇ ಕ್ಷಣ ಉದುರಬಹುದೆಂಬುದು ಗೊತ್ತಿರಲಿ.
ನಿಮ್ಮ ಸಮಯ ಹೇಗೆ ಕಳೆಯುತ್ತೀರೆಂದು ನಂತರ ನಿರ್ಧರಿಸಿ.

ಮುಸ್ಸಂಜೆಯ ನನ್ನ ಬಾನಿನಲಿ

Valentine’s Day ಆದ್ದರಿಂದ ಪ್ರೀತಿಯ ಬಗ್ಗೆ ಏನಾದರೂ ಬರೆಯಲೇಬೇಕಲ್ಲವೆ? ಒಳ್ಳೆಯ ಪದ್ಯ ಬರೆಯುವ ಕುವ್ವತ್ತಿಲ್ಲದಿದ್ದರೆ ಹೋಗಲಿ, ಯಾವುದಾದರೂ ಒಳ್ಳೆಯ ಪದ್ಯವನ್ನು ಅನುವಾದಿಸಲೇಬೇಕು ಎಂದು ನಿನ್ನೆ ರಾತ್ರಿ ಕುಳಿತೆ. ಯಾವ ಪದ್ಯ? ಯಾರ ಪದ್ಯ? ಯಾರ ಪದ್ಯ ಎಂಬ ಸಮಸ್ಯೆ ತಕ್ಷಣದಲ್ಲಿ ಬಗೆ ಹರಿಯಿತು. ನೆರೂಡನ ಪದ್ಯಗಳನ್ನು ಅನುವಾದಿಸಬೇಕೆಂಬುದು ಮೊದಲಿನಿಂದಲೂ ಇದ್ದ ಬಯಕೆ. ನನ್ನಲ್ಲಿರುವ ನೆರೂಡನ ಪದ್ಯಗಳನ್ನು ತಿರುವಿಹಾಕುತ್ತ ಒಂದನ್ನು ಆರಿಸಿಕೊಂಡೆ. ಪದ್ಯದ ಸಣ್ಣ ಗಾತ್ರವೂ ನನ್ನನ್ನು ಹುರಿದುಂಬಿಸಿತು. ಒಂದರ್ಧ ಮುಗಿಸಿದಾಗ ಆ ಪದ್ಯದ ಬಗ್ಗೆ ಏನೋ ಹುಡುಕತೊಡಗಿದೆ. ಆಗ ಗೊತ್ತಾದದ್ದು: ಪದ್ಯ ನೆರೂಡನದಲ್ಲ; ರವೀಂದ್ರನಾಥ ಟ್ಯಾಗೋರರದು. ಟ್ಯಾಗೋರರ ’ತುಮಿ ಸಂಧ್ಯಾರ್ ಮೇಘಮಾಲಾ’ ಎಂಬ ಪದ್ಯದ ನೆರೂಡನ ಸ್ಪ್ಯಾನಿಶ್ ಅನುವಾದದ ಇಂಗ್ಲಿಶ್ ಅನುವಾದ ನನ್ನ ಬಳಿಯಿದ್ದುದು! ಪರವಾಗಿಲ್ಲ ಎಂದುಕೊಂಡು ಉಳಿದರ್ಧ ಈಗ ಬೆಳಿಗ್ಗೆ ಮುಗಿಸಿದೆ. ನೀಗಿದಷ್ಟು ಮಾಡಿದ್ದೇನೆ. ಇದೋ ನಿಮ್ಮ ಮುಂದೆ ಸಾದರ ಪಡಿಸುತ್ತಿದ್ದೇನೆ. ಬಂಗಾಳಿ –> ಸ್ಪ್ಯಾನಿಶ್ –> ಇಂಗ್ಲಿಶ್ –> ಕನ್ನಡ, ಈ ಭಾವಾನುವಾದಗಳ ಹಾದಿಯಲ್ಲಿ ಪಾಪ ಮೂಲ ಪದ್ಯ ಏನಾಗಿದೆಯೊ!

ಮುಸ್ಸಂಜೆಯ ನನ್ನ ಬಾನಿನಲಿ ನೀನೊಂದು ಮೋಡದಂತೆ
ಬರುವೆ ನಿನ್ನ ಆಕಾರ ಬಣ್ಣಗಳಲಿ ನನ್ನ ಮನಕೊಪ್ಪುವಂತೆ
ನೀನು ನನ್ನವಳು, ನನ್ನವಳೇ, ಮಧುರ ತುಟಿಗಳ ಹೆಣ್ಣೇ
ನಿನ್ನ ಉಸಿರಿನಲ್ಲಿದೆ ನನ್ನ ಅನಂತ ಕನಸುಗಳ ಜೀವ

ನನ್ನ ಅಂತರಾಳದ ದೀಪ ಹೊಯ್ಯುತಿದೆ ನಿನ್ನ ಪಾದಗಳಿಗೆ ರಂಗು
ಹುಳಿ ಮದಿರೆಯ ಮಾಡದೆ ಸವಿ ನಿನ್ನ ತುಟಿಗಳ ಸೋಂಕು?
ನನ್ನ ಸಂಜೆಯ ಹಾಡುಗಳನೊಟ್ಟಿ ಸುಗ್ಗಿ ಮಾಡುವವಳೆ
ನನ್ನ ಒಬ್ಬಂಟಿ ಕನಸುಗಳಿಗೂ ಗೊತ್ತು ನೀನು ನನ್ನವಳೆ

ನೀನು ನನ್ನವಳು ನನ್ನವಳೆಂದು ಅಪರಾಹ್ನದ ಗಾಳಿಯಲ್ಲಿ ಹಲುಬುತ್ತ ಓಡುತ್ತೇನೆ
ಗಾಳಿ ನನ್ನ ವಿಧುರ ಸುಯ್ಯನ್ನು ತುಯ್ಯುತ್ತ ಒಯ್ಯುತ್ತದೆ
ನನ್ನ ಕಣ್ಣಿನಾಳಕ್ಕೆ ಲಗ್ಗೆಯಿಟ್ಟವಳೆ, ಈ ನಿನ್ನ ಕೊಳ್ಳೆ
ನಿನ್ನ ಇರುಳಿನ ಆಸ್ಥೆಯನ್ನು ತಿಳಿಗೊಳಿಸುತ್ತದೆ ಕೊಳದ ನೀರಿನಂತೆ

ನನ್ನ ನಾದದ ಬಲೆಗೆ ಒಳಗಾಗಿದ್ದೀ ನೀ, ಪ್ರಿಯೆ
ಆಗಸದ ಹರವು ನನ್ನ ನಾದದ ಬಲೆಗೆ
ಅಗಲಿಕೆಯ ದು:ಖದ ನಿನ ಕಂಗಳ ತಡಿಯಲ್ಲೆ ನನ್ನ ಚೇತನದ ಹುಟ್ಟು
ಶೋಕಿಸುವ ನಿನ ಕಂಗಳೇ ಕನಸುಗಳ ನೆಲೆಯ ಶುರುವಾತು

ಇಂಗ್ಲಿಶ್ ಅವತಾರ ಇಲ್ಲಿ ಮತ್ತು ಇಲ್ಲಿ.

ಶಬ್ದಮಾಲಿನ್ಯ

ಸವಿಯಾದ ತಿಂಡಿಯನ್ನು ತಿನ್ನುವಾಗ ಸಣ್ಣ ಹರಳೊಂದು ಸಿಕ್ಕಂತೆ, ರವಿವಾರದ ರಸ್ತೆಗಳಲ್ಲಿ ಸುಖದಿಂದ ತೇಲುವಾಗ ರಸ್ತೆಗುಬುಟಿಯೊಂದು ತಡೆದಂತೆ, ಸೊಗಸಾದ ಪದ್ಯವೋದುವಾಗ ಒಮ್ಮೊಮ್ಮೆ ಶಬ್ದಗಳು ಅಡ್ದ ಬರುತ್ತವೆ.

[…] peace, like a poem,
is not there ahead of itself,
can’t be imagined before it is made,
can’t be known except
in the words of its making,
grammar of justice,
syntax of mutual aid.

[…]

ಪದ್ಯದಂತೆ ಶಾಂತಿ. ಹೀಗೆ ಹೇಳುತ್ತ ಶುರುವಾಗುವ ಈ ಪದ್ಯ ಆ ಪ್ರತಿಮೆಯನ್ನು ಬೆಳೆಸಿಕೊಂಡು ಹೋಗುತ್ತದೆ. ಆದರೆ ಪದ್ಯ ಓದುವಾಗ ಅಲ್ಲಲ್ಲಿ ನಾನು ಮೇಲೆ ಹೇಳಿದಂಥ ಭಾವನೆ ಉಂಟಾಗುತ್ತದೆ. ಮೇಲಿನ ಭಾಗವನ್ನೇ ನೋಡಿ. ಮೊದಲ ೫ ಸಾಲುಗಳು ಒಂದು metaphysical ಸತ್ಯವನ್ನು ಎಷ್ಟೊಂದು ಸರಳ ಸುಂದರವಾಗಿ ಹೇಳುತ್ತ ಹೋಗುತ್ತವೆ. ಇನ್ನೂ ಹೆಚ್ಚಿನದನ್ನು ನಿರೀಕ್ಷಿಸುತ್ತಿದ್ದಂತೆ ಪದ್ಯದ ಬದಲು ಶಬ್ದಗಳು ಬರತೊಡಗುತ್ತವೆ. ಅನುಭಾವದ ನೆಲೆಯಿಂದ ಒಮ್ಮೆಲೆ ಪದ್ಯ ಜರ್ರೆಂದು ಜರಿದು ದಿನಚರಿಯ ನುಡಿಗಟ್ಟಿಗೆ ದಕ್ಕುತ್ತದೆ. ನಾನು emphasise ಮಾಡಿರುವ ಶಬ್ದಗಳನ್ನು ನೋಡಿ. ನಿಮಗೂ ಹೀಗನ್ನಿಸುವುದಿಲ್ಲವೇ? ಪದ್ಯಗಳನ್ನು ಓದುವವರಿಗೆ ಒಂದು ಪ್ರಶ್ನೆ: ನಿಮಗೂ ಇಂಥ ಅನುಭವಗಳಾಗುತ್ತವೆಯೇ? ಉದಾಹರಣೆಗಳನ್ನು ಕೊಡುತ್ತೀರಾ? ಹಾಗೆಯೇ ಪದ್ಯ ಬರೆಯುವವರೇ: ನಿಮ್ಮ ಶಬ್ದಗಳು ನಿಮ್ಮ ಪದ್ಯಗಳಿಗೆ ಅಡ್ಡಗಾಲು ಒಡ್ಡುತ್ತಿವೆ ಅನ್ನಿಸುತ್ತದಾ ಯಾವಾಗಾದರೂ?

***

ಇದಕ್ಕೆ ಅಲ್ಪಸ್ವಲ್ಪ ಸಂಬಂಧಿಸಿದಂತೆ ನನ್ನ ಇನ್ನೊಂದು ಅನುಭವವನ್ನು ಹೇಳುತ್ತೇನೆ. ಪಿ ಬಿ ಶ್ರೀನಿವಾಸ್ ಹಾಡಿದ ’ಬೆಟ್ಟದ ಹುಲಿ’ ಚಿತ್ರದ ’ಆಡುತಿರುವ ಮೋಡಗಳೆ..’ ಹಾಡು ಗೊತ್ತಲ್ಲ? ನನಗೆ ಬಹಳ ಇಷ್ಟವಾಗುತ್ತಿದ್ದ ಹಾಡು. ಆದರೆ ನನಗೆ ಅದರ ಸಾಹಿತ್ಯ ಸರಿಯಾಗಿ ಗೊತ್ತಿರಲಿಲ್ಲ, ಅಥವಾ ನಾನು ಗಮನವಿಟ್ಟು ಪೂರ್ತಿ ಹಾಡು ಕೇಳಿರಲಿಲ್ಲ. ಹೀಗೆಯೇ ಒಮ್ಮೆ ಯಾವಾಗಲೋ ಅದನ್ನು ಕೇಳುತ್ತಿದ್ದೆ. ’ಆಡುತಿರುವ ಮೋಡಗಳೆ, ಹಾಡುತಿರುವ ಹಕ್ಕಿಗಳೆ, [ಒಂದು ಸಾಲು ಮರೆತಿದೆ], ನಿಮ್ಮ ಭಾಗ್ಯ ನಮಗಿಲ್ಲ… ಒ ಹೊ ಹೋ …,” ಎಂದೆಲ್ಲ ಶುರುವಾಗುವ ಹಾಡು ಒಮ್ಮಿಂದೊಮ್ಮೆಲೆ ಈ ಕ್ರೂರ ಜಗತ್ತಿನ ದಿನನಿತ್ಯದ ಆಗುಹೋಗುಗಳನ್ನು ಮಂಡಿಸತೊಡಗುತ್ತದೆ. ಅದನ್ನು ಕೇಳುತ್ತಿದ್ದಂತೆ ನಾನು ಒಮ್ಮಿಂದೊಮ್ಮೆಲೆ ನಗತೊಡಗಿದೆ. ಅಲ್ಲಿಯೇ ಇದ್ದ ತಂದೆ, “ಯಾಕೋ? ಏನಾತು?” ಎಂದರು. ನಾನು,” ಈ ಹಾಡು ಈ ಪರಿ ಸಾಮಾಜಿಕ ಅದ ಅಂತ ನನಗ ಗೊತ್ತೇ ಇರಲಿಲ್ಲ,” ಎಂದೆ. ರಮ್ಯವಾಗಿ ಲಲಲಲಿಸುತ್ತಿದ್ದ ಹಾಡು ಒಮ್ಮಿಂದೊಮ್ಮೆಲೆ ಸಾಮಾಜಿಕ ಸತ್ಯಗಳನ್ನು ಪಟ್ಟಿ ಮಾಡತೊಡಗಿದ್ದು ನನಗೆ ಚೋದ್ಯವೆನ್ನಿಸಿತ್ತು. ಈಗಲೂ ಆ ಹಾಡನ್ನು ನೆನೆಸಿಕೊಂಡರೆ ಸ್ವಲ್ಪ ನಗೆ ಬರುತ್ತದೆ.

***

ಕೊನೆಮಾತು: ಆ website ಒಂದು ಅತ್ಯುತ್ತಮ ಸಂಗ್ರಹವಾಗಿ ಬೆಳೆದಿದೆ. ಆದರೆ ಅದರಲ್ಲಿ ಕನ್ನಡ ವಿಭಾಗವೇ ಇಲ್ಲ. ಪದ್ಯವೋದುವವರು, ಒಳ್ಳೆಯ ದನಿಯಿರುವವರು — ಅದೆಲ್ಲಾ ಬೇಕಾಗಿಲ್ಲ, ಉತ್ಸಾಹಿಗಳು — ನಿಮಗಿಷ್ಟದ ಪದ್ಯಗಳನ್ನು record ಮಾಡಿ ಅವರಿಗೆ ಕಳಿಸಲು ಸಾಧ್ಯವೇ ನೋಡಿ. ನಾನೂ ಮಾಡಿದರಾಯಿತು ಅಂದುಕೊಂಡಿದ್ದೇನೆ. (ಆದರೆ ನನ್ನದಿದ್ದದ್ದೇ. ಎಲ್ಲವನ್ನೂ ಮಾಡಬೇಕೆಂದುಕೊಂಡಿರುತ್ತೇನೆ…)

ಇರುವುದರ ತುಡಿತ, ಇರದುದರ ಸೆಳೆತ

ಮನಸಿನ ರೀತಿಯೇ ವಿಚಿತ್ರ. ಅದು ನಮ್ಮ ವಿಚಾರ ಮಾಡುವ ಪ್ರಕ್ರಿಯೆಯನ್ನು ಅನೇಕ ರೀತಿಯಲ್ಲಿ ಗೊಂದಲಕ್ಕೀಡು ಮಾಡಿ, ನಮ್ಮ ಒಳ ಅರಿವಿನ ವಿರುದ್ಧ ಸಂಚು ಹೂಡಿದಂತೆ ತೋರುತ್ತದೆ. ಕೆಲವೊಮ್ಮೆ ತೀರಾ ವಿದಿತವಾದ ಸಂಗತಿಗಳನ್ನು ಒರೆಗೆ ಹಚ್ಚಿ ಅವುಗಳ ಬಗ್ಗೆ ಪಕ್ಕಾ ನಿರ್ಧಾರಗಳನ್ನು ತಳೆಯುವ ತನಕ ನಮ್ಮನ್ನು ಕಾಡುತ್ತದೆ. ಇನ್ನು ಕೆಲವು ಸಲ ನಮಗೆ ಅಸ್ಪಷ್ಟವಾದ ಸಂಗತಿಗಳ ಬಗ್ಗೆ ಕ್ಷಣಾರ್ಧದಲ್ಲಿ ನಾವು ಪೂರ್ಣ ಸ್ಥೈರ್ಯದಿಂದ ಸಮೀಪದೃಷ್ಟಿಯ ತೀರ್ಪುಗಳನ್ನು ಕೊಡುವಂತೆ ಮಾಡುತ್ತದೆ. ಯಾವುದು intuitive, ಯಾವುದು counterintuitive ಎಂಬುದೇ ತಿಳಿಯದಂತಾಗುತ್ತದೆ.

***

ಅಮೇರಿಕಾ ಯಾತ್ರೆಯನ್ನು ನಾನು ಅಮೇರಿಕಾ ಯಾತ್ರೆ ಅನ್ನುವುದಕ್ಕಿಂತ ಒಂದು getaway ಯಾತ್ರೆ ಅಂತಲೇ ಅಂದುಕೊಂಡಿದ್ದೆ. ಯಾವುದರಿಂದ ದೂರ ಹೋಗುವುದು ಎಂದರೆ – ಬಳಕೆಯ ವಾತಾವರಣದಿಂದ, ಮುಖ್ಯವಾಗ ಬಳಕೆಯ ಜನರಿಂದ; ಸಂಬಂಧಿಗಳ ಪ್ರೀತಿ ತುಂಬಿದ ಕಾಟ; ನನ್ನ ಭಿಡೆಗಳು; ಬಳಕೆಯ ಜನರಿಂದ ನನ್ನ ಸಮಯ ಪೋಲಾಗುತ್ತಿರುವುದನ್ನು ಸಹಿಸುವ ಅನಿವಾರ್ಯತೆ; ನನ್ನ ಸ್ವಾತಂತ್ರ್ಯದ ಹಕ್ಕನ್ನು ಸ್ಥಾಪಿಸುವ ನಿಷ್ಠುರವಿಲ್ಲದೆ ಸುಮ್ಮನಿರುವ ಅಸಹಾಯಕತೆ. ಅಮೇರಿಕಕ್ಕೆ ಹೊರಡುವ ದಿನದ ತನಕ ನನಗೆ ಇಲ್ಲಿ ಬರುವ ಅನಿವಾರ್ಯತೆಗಿಂತ ದೂರ ಹೋಗುವ ಅನಿವಾರ್ಯತೆ ಬಲವಾಗಿ ತೋರುತ್ತಿತ್ತು. (ಅಥವಾ ನನ್ನ ಮನಸ್ಸು ನನ್ನನ್ನು ಆ ವಿಚಾರದತ್ತ ಕೊಂಡೊಯ್ದಿತ್ತು.) ಸ್ವಲ್ಪ ದಿನ ಒಬ್ಬನೇ ಎಲ್ಲರಿಂದ ದೂರವಿದ್ದರೆ ಸಾಕು ಎಂಬ ಹಂಬಲಿಕೆ ಕಾಡುತ್ತಿತ್ತು. ದೂರವಿರುವ ಕಾರ್ಯಕ್ರಮದಲ್ಲಿ ನಾನು ದೂರವಿರಲು ಬಯಸದಿರುವವರಿಂದಲೂ ದೂರವಾಗುವ ಉಪವಾಕ್ಯವಿದ್ದುದೂ ಗೊತ್ತಿತ್ತು. ಆದರೆ ನನಗೆ ಸಲ್ಲಲೇಬೇಕಾದ ಒಂಟಿತನ ಗಳಿಸಲು ಸ್ವಲ್ಪ ದಿನ ಆ ಶರತ್ತನ್ನು ಒಪ್ಪಿಕೊಂಡರಾಯಿತು ಎಂದು ಸಿದ್ಧನಿದ್ದೆ.

ಇಲ್ಲಿಗೆ ಬಂದಿಳಿಯುವ ತನಕ ಬಹುಶಃ ನನ್ನ ಮನಸ್ಸಿನಲ್ಲಿ ಯಾವ ಯೋಚನೆಗಳೇ ಇರಲಿಲ್ಲವೇನೋ ಅನ್ನಿಸುತ್ತದೆ. ವಿಚಿತ್ರವೆನ್ನಿಸುತ್ತದೆ. ನಡುನಡುವಿನ ವಿಳಂಬ, ವಿಮಾನ ಬದಲಾವಣೆಗಳನ್ನೆಲ್ಲ ಹಿಡಿದು ಒಟ್ಟಾರೆ ೩೨ ಗಂಟೆಗಳ ಪ್ರಯಾಸದಲ್ಲಿ ನಾನು ಯಾವ ವಿಷಯಗಳ ಬಗ್ಗೆ ಯೋಚನೆ ಮಾಡುತ್ತಿದ್ದೆ ಎಂಬುದೇ ನೆನಪಿಲ್ಲ! ಮಲಗಿದ್ದೂ ಕಡಿಮೆ. ಒಂದಷ್ಟು ಹೊತ್ತು ಓದಿದೆ. ಒಂದಷ್ಟು ಕಾಲ ಸತತವಾಗಿ ಸಿನೆಮಾಗಳನ್ನು ನೋಡಿದೆ. ನಾನು ತಿನ್ನುವಂಥದ್ದು ಹೆಚ್ಚೇನೂ ಅವರು ಕೊಟ್ಟ ಆಹಾರದಲ್ಲಿರಲಿಲ್ಲ. ಏನು ಮಾಡುತ್ತಿದ್ದೆನೋ ಏನೋ! ಬಹುಶಃ ಈ ಜನಗಳ ಪ್ರಕ್ರಿಯೆಗಳು, ಸಂಶಯಗಳು ಇವನ್ನೆಲ್ಲ ದಾಟಿ ಒಂದು ಸಲ ಆ ಊರನ್ನು ಮುಟ್ಟಿದರೆ ಸಾಕಪ್ಪ ಎಂಬ ಯೋಚನೆಯೇ ಮನಸ್ಸಿನ ಜಾಗವನ್ನು ಆಕ್ರಮಿಸಿಕೊಂಡಿತ್ತೇನೋ! ಇಲ್ಲಿ ಕೊನೆಗೆ ಪೂರ್ವನಿರ್ಧಾರಿತ ಜಾಗಕ್ಕೆ ಬಂದು ಮುಟ್ಟಿ, ಒಂದಿಬ್ಬರು ಸಹೋದ್ಯೋಗಿಗಳು ಮತ್ತು ಒಬ್ಬ ಸಹವಾಸಿಯನ್ನು ಭೆಟ್ಟಿಯಾದ ಮೇಲೂ – “ಆಹಾ! ಇನ್ನಾವ ಚಿಂತೆಯಿಲ್ಲ. ಇವರು ನನಗೆ ಜೀವನದ ಮಾರ್ಗವನ್ನು ತೋರಿಸುತ್ತಾರೆ,” ಎಂಬ ನಿರಾಳವೂ ಆಗದಷ್ಟು ಮಬ್ಬು ಕವಿದಿತ್ತು ಮನಸ್ಸಿಗೆ. ಅದಂತೂ ಆ ಪ್ರವಾಸದ ಸುಸ್ತಿನಿಂದಲೇ ಆಗಿರಬೇಕು ಬಿಡಿ. ಎತ್ತರದಲ್ಲಿ ತೇಲುತ್ತ ತೇಲುತ್ತ ನಾನು ಹೋದಂತೆ, ನನ್ನ ಭಾವನೆಗಳ ಭಾರ ಹೆಚ್ಚಾಗಿ ಅವು ಗುರುತ್ವದಿಂದ ಕೆಳಗೆ ಕುಸಿಯುತ್ತ ಹೋಗಿ ದಾರಿಯಲ್ಲೆಲ್ಲೋ ನೆಲಕಚ್ಚಿರಲು ಸಾಕು.

ಮಾನವ ಸಹಜ ಭಾವನೆಗಳ ಮೊದಲ ಸೆಳಕು ನನ್ನಲ್ಲಿ ಮರುಕಳಿಸಲು ಮುಂದೆ ಬಹಳ ಸಮಯ ಹಿಡಿಯಲಿಲ್ಲ. ನನ್ನ ಸಹವಾಸಿಯ ಕಾರಿನಲ್ಲಿ apartmentಗೆ ಬಂದು ತಲುಪಿದ ಕೆಲಹೊತ್ತಿಗೆ ಅವನು ಮತ್ತು ಇನ್ನೋರ್ವ ಸಹವಾಸಿ ನನಗೆ ನನ್ನ ಕೋಣೆಯನ್ನು ತೋರಿಸಿದರು. ಆ ಕೋಣೆಯಲ್ಲಿ ಕಾಲಿರಿಸಿ ನನ್ನ ಸಾಮಾನುಗಳನ್ನು ಇಡುವಷ್ಟರಲ್ಲಿ ಮನಸ್ಸಿನ ಮಬ್ಬು ಹರಿಯಿತು; ಒಮ್ಮಿಂದೊಮ್ಮೆಲೆ ಎಚ್ಚತ್ತಂತಾಯಿತು. ನಾನು ಗೊತ್ತಿರುವ ಜನ, ಗೊತ್ತಿರುವ ಊರು, ವಾತಾವರಣಗಳಿಂದ ಬಹು ದೂರ ಅಪರಿಚಿತ ಜಾಗಕ್ಕೆ ಬಂದು ಸೇರಿದ್ದೇನೆ ಎಂಬ ಸತ್ಯ ಅರಿವಿಗೆ ಬರುತ್ತಿದ್ದಂತೆ ಇದ್ದುದೆಲ್ಲವನ್ನು ಕಳಕೊಂಡ ಭಾವ ಒತ್ತರಿಸಿ ಬಂತು; ನಾನು ಎಷ್ಟೇ ಬೇಡಬೇಡವೆಂದರೂ ಪರಿಚಿತ ಸಂಗತಿಗಳಿಂದ ತಪ್ಪಿಸಿಕೊಳ್ಳುವುದು ನನಗೆ ಬಹಳ ಕಷ್ಟ ಎಂಬುದು ತಕ್ಷಣ ಅರಿವಿಗೆ ಬಂತು; ನನಗೆ familiar environmentಗಳ ಬಗ್ಗೆ ಅತೀವ ಅಸಮಾಧಾನವಿದ್ದರೂ ನನಗೆ ಅವುಗಳ ರೂಢಿ ಅತಿಯೆಂದರೆ ಅತಿಯಾಗಿ ಆಗಿದೆ ಎಂಬುದು ಮನವರಿಕೆಯಾಯಿತು. ಇನ್ನೂ ಅನೇಕ ಸತ್ಯಗಳು ಆ ಕೆಲವೇ ಕ್ಷಣಗಳಲ್ಲಿ ಸ್ಪಷ್ಟವಾದುವು.

ಮುಂದಿನ ಕೆಲವು ದಿನಗಳಲ್ಲಿ ಹಿಂದೆ ಉಳಿದಿದ್ದ ಭಾವನೆಗಳು ತೆವಳುತ್ತ ತೆವಳುತ್ತ ಬಂದು, ನೆಲದಲ್ಲೇ ಇದ್ದ ನನ್ನನ್ನು ಅಡರಿ ಕಾಡಲು ಶುರು ಮಾಡಿದುವು. ಮೊದಲು ಹೇಳಿದ ಮನಸ್ಸಿನ ವೈಚಿತ್ರ್ಯ – ಮನಸ್ಸಿನ ವೈಚಿತ್ರ್ಯ ಅನ್ನುವುದಕ್ಕಿಂತ, ನನ್ನ ವಿಚಾರ ಮಾಡುವ ರೀತಿಯ limitations ಎನ್ನಬಹುದೇನೋ – ಮಜಾ ಎನ್ನಿಸತೊಡಗಿತು. ಮೊಬೈಲ್ ಫೋನ್, ಇಂಟರ್ನೆಟ್, ಗೆಳೆಯರು, ಅಂಗಡಿಗಳಲ್ಲಿನ ವ್ಯವಹಾರಗಳ ರೀತಿ, ರಿವಾಜುಗಳು — ಇಂಥ taken for granted ವಸ್ತುಗಳಿಲ್ಲದಿರುವುದಕ್ಕೆ ಹೊಂದಿಕೊಳ್ಳುವುದಕ್ಕೆ ಸಮಯವಂತೂ ಬೇಕಾಗುತ್ತದೆ. ಆದರೆ ಒಂಟಿಯಾಗಿರಬೇಕೆಂಬ ಹಂಬಲ, ನಾವಾಗಿಯೇ ಅದನ್ನು ಆಯ್ಕೆ ಮಾಡಿಕೊಂಡರಷ್ಟೇ ರಮ್ಯವಾಗುತ್ತದೆ. ಆನಂದದಾಯಕವೂ ಆಗುತ್ತದೆ. ನಾವಾಗಿಯೇ ಒಂಟಿತನವನ್ನು ಆಯ್ಕೆ ಮಾಡಿಕೊಂಡಿದ್ದೀವಿ ಎಂದು ಅಂದುಕೊಂಡರೂ ಎಷ್ಟೋ ಸಲ ಅದನ್ನು ನಾವು ಆರೋಪಿಸಿಕೊಂಡಿರುತ್ತೇವಷ್ಟೇ. ಆಗ ಅದನ್ನು ಸಹ್ಯಪಡಿಸಿಕೊಳ್ಳಲು ಸಾಹಸ ಪಡಬೇಕು.

ಇದೇನು ಯಾರೂ ಕಂಡರಿಯದ ಮಹಾನ್ ಸತ್ಯವಲ್ಲ. ಎಲ್ಲರಿಗೂ ಇಂಥ ಅನುಭವಗಳಾಗಿರುತ್ತವೆ. ದಿನ ಕಳೆದಂತೆ ಎಲ್ಲವೂ ರೂಢಿಯಾಗುತ್ತದೆ. ಮೇಲಾಗಿ ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ: ಅಮೇರಿಕಕ್ಕೋ ಮತ್ತೆಲ್ಲಿಗೋ ದಿನಾಲೂ ನೂರಾರು ಮಂದಿ ಬರುತ್ತಾರೆ. ಕೆಲಸದ ಸಲುವಾಗಿ ಬಂದವರಿಗೆ ಸಮಸ್ಯೆಗಳು ಕಡಿಮೆ. ಅವರಿಗೆ ಅನುಕೂಲತೆಗಳು ಹೆಚ್ಚು, ಮತ್ತು ಅವರು ಬಂದಿಳಿಯುವಂಥ ಊರುಗಳಲ್ಲಿ ಅವರಿಗೆ ಪರಿಚಯವಿರುವ ಮಂದಿ ಬೆರಳೆಣಿಕೆಯಷ್ಟಾದರೂ ಇದ್ದೇ ಇರುತ್ತಾರೆ. ಪೂರ್ವನಿರ್ಧಾರಿತ ಕೆಲಸಗಳಿರುತ್ತವೆ. ಆದರೆ ನಮ್ಮಂಥವರ ಕೆಲಸಕ್ಕೆ– ಅಬಾಧಿತವಾಗಿ ಬಹಳ ಹೊತ್ತಿನ ತನಕ ವಿಚಾರ ಹರಿಸುತ್ತ, ಅದರ ಬಗ್ಗೆ ಸ್ಪಷ್ಟತೆ ಕಂಡುಕೊಂಡು, ನಮ್ಮ ಕೆಲಸಗಳನ್ನು ನಾವೇ ನಿರ್ಧರಿಸಿಗೊಂಡು, ಯಥಾವಕಾಶ ಮಾಡಿ  ಮುಗಿಸಬೇಕು — ಬಹಳ ಒಳ್ಳೆಯ ಕೆಲಸವೆಂಬುದರಲ್ಲಿ ಸಂಶಯವೇ ಇಲ್ಲ — ಆದರೆ ಅದಕ್ಕೆ ತಲ್ಲಣದ ಮನಸ್ಥಿತಿ ತರವಲ್ಲ.

***

ಏನೇ ಇರಲಿ. “ಹೇಗಾದರೂ ಮಾಡಿ ಮನಸ್ಸನ್ನು ಹತೋಟಿಗೆ ತಂದು ಕೆಲಸಕ್ಕೆ ತೊಡಗೋಣ,” ಎಂಬ ಹಂತದಿಂದ, ಅದರ ಅನಿವಾರ್ಯತೆಯಿಲ್ಲದೆ ಸ್ವಾಭಾವಿಕವಾಗಿ ವಿಚಾರಗಳತ್ತ, ideaಗಳತ್ತ ತುಡಿಯುವ ಹಂತಕ್ಕೆ ನಿಧಾನವಾಗಿ ಸಾಗುತ್ತಿದ್ದೇನೆ. ಆದರೆ ಯಾವುದು ಇರುವುದು, ಯಾವುದು ಇರದುದು ಎಂಬ ಪ್ರಶ್ನೆಯೂ ಕಾಡುತ್ತದೆ. ಹಳೆಯದರತ್ತ ತುಡಿತ ಹೊಸದರತ್ತ ಆಶಾವಾದ ತುಂಬಿದ ಸೆಳೆತ, ಎರಡೂ ಇವೆ. ಬಹುಶ: ಮರಳಿ ಹೋಗುವಷ್ಟರಲ್ಲಿ ನನ್ನ ಅವಶ್ಯಕತೆಗಳು ಏನು ಎಂಬ ಬಗ್ಗೆ, ನನಗೆ ಸ್ವಾಭಾವಿಕವಾದ ಜೀವನಶೈಲಿ ಯಾವುದು ಎಂಬ ಬಗ್ಗೆ ನಾನು ಹೆಚ್ಚು ತಿಳಿದುಕೊಂಡಿರುತ್ತೇನೆ. ಹೆಚ್ಚು ಪ್ರಬುದ್ಧನಾಗಿರುತ್ತೇನೆ. ನನಗನ್ನಿಸುತ್ತದೆ: ನಮಗೆ ಬೇಕಾದ ಹಾಗೆ ಬದುಕಲು, ನಮಗೆ ಬೇಕಷ್ಟು ಸ್ವೇಚ್ಛೆ ಅನುಭವಿಸಲು, ನಮಗೆ ಬೇಕಾದಾಗ ಬೇಕಷ್ಟು solitude ಪಡೆಯಲು ನಾವು ಇರುವುದರಿಂದ ದೂರ ಹೋಗಬೇಕಾದ ಅನಿವಾರ್ಯತೆಯಿಲ್ಲ. ಇರುವುದೂ ಇಲ್ಲದಿರುವುದೂ ಎರಡೂ ಬೇರೆ ಬೇರೆ ಎಡೆಗಳಲ್ಲಿದೆ ಅನ್ನಿಸುವುದಿಲ್ಲ. ಎಲ್ಲವೂ ನಮ್ಮಲ್ಲಿಯೇ ಇದೆ. ಅದನ್ನು ನಾವು ಕಂಡುಕೊಳ್ಳಬೇಕಷ್ಟೆ. ಮರಳಿ ಹೋದ ಮೇಲೆ ಹಾಗೆ ಮಾಡಲು ನನ್ನಿಂದ ಸಾಧ್ಯ ಎಂದು ಇತ್ತೀಚೆಗೆ ಒಮ್ಮೊಮ್ಮೆ ಅನ್ನಿಸುತ್ತಿದೆ.

ಅಂಕಿಗಳಾಟ

ನಾವು ಚಿಕ್ಕವರೂ ಮೂರ್ಖರೂ ಇದ್ದಾಗ — ಈಗಲೂ ನಾವು ಮೂರ್ಖರಾಗಿಯೇ ಉಳಿದಿದ್ದೇವೆ, ಚಿಕ್ಕವರಾಗಿ ಉಳಿದಿಲ್ಲವಷ್ಟೇ — ಒಂದು ಅಸಾಮಾನ್ಯ ಹೊರಾಂಗಣ ಆಟ ಆಡುತ್ತಿದ್ದೆವು. ಆಟ ಅನ್ನುವುದಕ್ಕಿಂತ ಅದನ್ನು ಚಾಳಿಯೆಂದರೆ ಸರಿಯೇನೋ. ಒಟ್ಟಾರೆ ಆ ಆಟ ಯಾರೋ ಒಬ್ಬರಲ್ಲಿ spontaneous ಆಗಿ ಅವಿರ್ಭವಿಸಿ, ಕ್ಷಣಾರ್ಧದಲ್ಲಿ ಎಲ್ಲರಲ್ಲೂ ಹಬ್ಬುತ್ತಿತ್ತು. ಹೆಚ್ಚಾಗಿ ಅದು ನಾವೆಲ್ಲರೂ ಕೂಡಿ ಮನೆಯ ಯಾವುದೋ ಸಣ್ಣ ಕೆಲಸದಿಂದ ಅಂಗಡಿಗೋ ಮತ್ತೆಲ್ಲಿಗೋ ಹೋಗುವಾಗ ಶುರುವಾಗಿ ಕೆಲಸದ ಜೊತೆಗೇ ಸಾಗುತ್ತಿತ್ತು. ನಮ್ಮಲ್ಲಿ ಯಾರಾದರೊಬ್ಬರು ಹಾದು ಹೋದ ವಾಹನವೊಂದರ ನೋಂದಣಿ ಸಂಖ್ಯೆಯಲ್ಲಿ ಯಾವುದೋ ಒಂದು ಅಂಕಿ ಮರುಕಳಿಸಿದ್ದನ್ನು ಗಮನಿಸುತ್ತಿದ್ದರು; ಹಾಗೆ ಗಮನಿಸಿದವರು, ತಮ್ಮ ಕೈಗೆ ಅತ್ಯಂತ ಸಮೀಪಕ್ಕೆ ಸಿಗುವ ವ್ಯಕ್ತಿಯ — ತಮ್ಮ/ತಂಗಿ/ಗೆಳೆಯ/ಗೆಳತಿ — ಬೆನ್ನ ಮೇಲೆ ಎರಡು ಬಾರಿಸುತ್ತಿದ್ದರು. ಏನೆಂದು ತಿರುಗಿ ನೋಡಿದರೆ ಗೊತ್ತಾಗುತ್ತಿತ್ತು: ಅದು ಸುಮ್ಮನೆ ಬಾರಿಸಿದ್ದಲ್ಲ; ಒಂದು ಮಹತ್ವದ ಉತ್ಪಾತವನ್ನು ಗಮನಿಸಿದ ಮೊದಲಿಗನೆಂಬ ಹೆಮ್ಮೆಯ ಕುರುಹು! ಮೊದಲು ಗಮನಿಸಿದ್ದು ಎಂಬುದು ಮುಖ್ಯ ಅಂಶ; ಈ ಗೌರವ ಮೊದಲು ಯಾರು ಗಮನಿಸುತ್ತಾರೋ ಅವರಿಗೆ ಸಲ್ಲಬೇಕಾದ್ದು. ಅಲ್ಲಿಂದ ಆಟ ಶುರು. ಒಮ್ಮೆ ಆಟ ಶುರುವಾಯಿತೆಂದರೆ ಎಲ್ಲರ ಮೈಯೆಲ್ಲ ಕಣ್ಣು ಕಿವಿ.  ಜೊತೆಗಾರರನ್ನು ಥಳಿಸುವ, ಅಷ್ಟೇ ಅಲ್ಲದೆ ತಾವು ಅದರಿಂದ ಪಾರಾಗುವ ಹೊಂಚು ಹಾಕುವುದು ಶುರು. ಅದರಲ್ಲೂ ಕೆಲವರು ಚಾಲಾಕು. ಇಂಥ ತಿಳಿಗೇಡಿ ಆಟವನ್ನೇನು ಆಡುವುದು, ಇದರಲ್ಲಿ ತನಗೆ ಆಸಕ್ತಿ ಇಲ್ಲ – ಎಂದು ನಿರುಂಬಳ ಭಾವವನ್ನು ನಟಿಸಿ, ಜೊತೆಗಾರರ ಅವಧಾನ ಕಡಿಮೆಯಾಗುವಂತೆ ಮಾಡಿ, ನಂತರ ದಾಳಿಗೆರಗುವ ಬಗೆ. ಆದರೆ ಇಂಥ ತಂತ್ರಗಳು ಬಹಳ ಕಾಲ ಸಫಲತೆ ಪಡೆಯುತ್ತಿರಲಿಲ್ಲ. ಮತ್ತೆ ಎಲ್ಲರೂ ಆಟದ ತಾದಾತ್ಮ್ಯ ಗಳಿಸುತ್ತಿದ್ದರು.

ಒಮ್ಮೊಮ್ಮೆ ಆಟದ ನಿಯಮಗಳ ಬಗ್ಗೆ ವಿವಾದಗಳು ಶುರುವಾಗುತ್ತಿದ್ದುವು. ಮೇಧಾವಿಯೊಬ್ಬರು – “ಮರುಕಳಿಸುವ ಅಂಕೆಗಳು ಒಟ್ಟಿಗೆ ಬಂದಾಗ ಮಾತ್ರ ಹೊಡೆತಗಳು ಬದ್ಧ. ಇಲ್ಲದಿದ್ದರೆ ಇಲ್ಲ. ಉದಾಹರಣೆಗೆ: ೨೨೭೫ ಅಥವಾ ೪೬೬೦ ಸರಿ; ೧೩೧೬ ತಪ್ಪು,” ಎಂದು ತಕರಾರು ತೆಗೆಯುತ್ತಿದ್ದರು. ಆಗ ಉಳಿದವರು ಅದನ್ನು ವಿರೋಧಿಸಿ, ಇಂಥ ನಿರ್ಬಂಧಗಳಿಂದ ಆಟ ರಂಜನೀಯವಾಗಿ ಉಳಿಯುವುದಿಲ್ಲ ಎಂದು ಸಾಧಿಸಿ, ಹಳೆಯ ಆಟವನ್ನೇ ಮುಂದುವರಿಸುತ್ತಿದ್ದರು. ಹಾಗಿದ್ದಾಗ್ಗ್ಯೂಒಮ್ಮಿಂದೊಮ್ಮೆಲೆ ಕೆಲವರು ಜಾಣ್ಮೆಯ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದರು. ಎರಡು ’೪’ಗಳನ್ನು ಗಮನಿಸಿದರೆ, ೨ ಹೊಡೆಯುವ ಬದಲು ೪ ಹೊಡೆಯುತ್ತಿದ್ದರು. “ಮರುಕಳಿಸುವ ಅಂಕಿಯ ಮುಖಬೆಲೆಯಷ್ಟು ಹೊಡೆತಗಳನ್ನು ಹೊಡೆಯೋಣ,” ಎಂದು ವಕೀಲಿ ನಡೆಸುತ್ತಿದ್ದರು. ಅದೇಕೋ ಹೊಸ ನಿಯಮವನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು. ಆದರೆ ಹಂಗಾಮಿಯಾಗಿ ಮಾತ್ರ. ಏಕೆಂದರೆ ಎಲ್ಲರೂ ಬಂಪರ್ ಬಹುಮಾನ ಹೊಡೆಯೋಣವೆಂಬ ಆಸೆಯಲ್ಲಿ, ೫ಕ್ಕಿಂತ ಹೆಚ್ಚಿನ ಅಂಕಿಗಳಿಗಾಗಿ ಕಾಯುತ್ತಿದ್ದರು. ಪಣದ ಮೊತ್ತ ಹೆಚ್ಚಾಗುತ್ತಿದ್ದಂತೆ ಜಗಳಗಳು ಹೆಚ್ಚಾಗುತ್ತಿದ್ದುವು. ಸ್ವಲ್ಪ ಹೊತ್ತಿನಲ್ಲಿ ಆಟವು ನೀರಸವೂ ತ್ರಾಸದಾಯಕವೂ ಆಗಿ ಪರಿಣಮಿಸುತ್ತಿತ್ತು. ಹಳೆಯ ಪ್ರಮಾಣೀಕೃತ ನಿಯಮಗಳಿಗೆ ಎಲ್ಲರೂ ಮೊರೆಹೋಗುತ್ತಿದ್ದರು.

***

ಬೆಂಗಳೂರಿನಲ್ಲಿ ಹೊರಗೆ ಗಾಡಿಯಲ್ಲಿ ಓಡಾಡುವಾಗ ಅನೇಕ ಸಲ ಈ ಆಟದ ನೆನಪು ನನಗೆ ಆದದ್ದಿದೆ. ರಸ್ತೆಯ ಬದಿಗೆ ನಿಂತು ಒಂದಷ್ಟು ಮಕ್ಕಳು ಈ ಆಟವನ್ನು ಆಡುತ್ತಿದ್ದಂತೆ ಕಲ್ಪಿಸಿಕೊಳ್ಳುತ್ತೇನೆ. ಹಾಗೆ ಕಲ್ಪಿಸಿಕೊಂಡು ಗಾಬರಿಗೊಳ್ಳುತ್ತೇನೆ. ನಾವು ಈ ಆಟವನ್ನು ಒಂದು ದಶಕಕ್ಕಿಂತಲೂ ಹಿಂದೆ ಆಡುತ್ತಿದ್ದೆವು. ಅದೂ ನಮ್ಮ ಸಣ್ಣ ಹಳ್ಳಿ ಪಟ್ಟಣಗಳಲ್ಲಿ. ಗಾಡಿಗಳ ಹಾದುಹೋಗುವಿಕೆಯ ಮೇಲೆ ನಿರ್ಭರಿವಾದ ಆಟ ಅದೆಷ್ಟು ನಿಧಾನವಾಗಿ ನಡೆಯುತ್ತಿತ್ತೆಂದರೆ ಎಷ್ಟೋ ಸಲ ನಮ್ಮ ಬೆನ್ನ ಮೇಲೆ ಎರಡೇಟು ಬೀಳುವ ತನಕ ಆಟ ಆಡುತ್ತಿದ್ದುದನ್ನೇ ನಾವು ಮರೆತಿರುತ್ತಿದ್ದೆವು. ಆದರೆ ಈಗ? ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆಯ ಬಗ್ಗೆ ಸ್ವಲ್ಪ ವಿಚಾರ ಮಾಡಿ. ಹಾಗೂ ಅವುಗಳ ಆವೃತ್ತಿ. ಮಕ್ಕಳು ಈ ಪರಿಯ ಸಂಖ್ಯಾ ಪರಿವರ್ತನಗಳ, ಇಂಥ combinatorial explosion ಅನ್ನು ಎದುರಿಸಿ ಬದುಕುವುದುಂಟೇ? ಅವು ಈ ಅಂಕೆಯಿಲ್ಲದಾಟದ ಹಂಗಿಗೆ ಬಿದ್ದು ಒಂದು ತಿಳಿಗೇಡಿ ಆಟವನ್ನು ಭೀಕರ ಆಟವನ್ನಾಗಿಸಿಕೊಳ್ಳುವುದು ಬೇಡ.

ಬಿಳಿ ಮಣ್ಣು

ನನ್ನ ಕೋಣೆಯ ಕಿಟಕಿಯಿಂದ laptopನ webcamನಿಂದ ತೆಗೆದ ಫೋಟೊಗಳಿವು. Laptop ಎತ್ತಿ ಹಿಡಿದು ಹೇಗೆ ಹೇಗೋ ತೆಗೆದದ್ದು. Camera ಇಲ್ಲದ್ದಕ್ಕೆ ಈ ಸರ್ಕಸ್.

ಅದಿರಲಿ. ಮುಖ್ಯವಾದ ವಿಷಯವೆಂದರೆ ಹಿಮ. ಕರುನಾಡಿನಿಂದ ಬಂದವನು ನಾನು. ನಮ್ಮದು ಕಪ್ಪು ಮಣ್ಣಿನ ನಾಡು — ಎಂದೆಲ್ಲ ಓದಿದ್ದೆ ಶಾಲೆಯಲ್ಲಿ. ಕರಿ ಮಣ್ಣಂತೂ ಸರಿಯೇ ಸರಿ. ನಮ್ಮೂರಲ್ಲೂ ಬೇಕಾದಷ್ಟು ಕರಿಮಣ್ಣಿನ್ನು ಕಂಡವನೇ ನಾನು. ಹತ್ತಿ ಬೆಳೆಯಲು ಉತ್ತಮ ಮಣ್ಣದು. ಜೊತೆಗೆ ಕೆಂಪು ಧೂಳು ಮಣ್ಣು, ಉಸುಕುಸುಕಾದ ಮಸಾರಿ, ಕೆಂದು ಬಣ್ಣದ ಸಣ್ಣ ಸಣ್ಣ ಕಲ್ಲುಗಳ ಮರಡಿ, ಜೇಡಿ ಮಣ್ಣು, ಹಾಳು ಮಣ್ಣು, ಹೀಗೆ. ಬಿಳಿ ಮಣ್ಣು ಮಾತ್ರ ನೋಡಿರಲಿಲ್ಲ. ಇಲ್ಲಿಯೋ ಬಿಳಿ ಮಣ್ಣೇ ಮಣ್ಣು. ಅಗೆದಷ್ಟು ಬಿಳಿ ಮಣ್ಣು. ಪಾಪ ಕಾರಿನವರೆಲ್ಲ ತಮ್ಮ ಗಾಡಿಗಳ ಮೇಲಿನ ಮಣ್ಣು ತೊಡೆಯಲು ಪಡುವ ಪಾಡನ್ನು ನೋಡಬೇಕು. ಅದು ಗಟ್ಟಿಯಾಗಿ ಕೂತಿದ್ದರಂತೂ, ಅದನ್ನು ಕಾಯಿಸಿ ಒಲಿಸಿ ರಮಿಸಿ, ಕಾಜುಗಳಿಂದ ತೆಗೆಯಬೇಕಾದರೆ ೧೫-೨೦ ನಿಮಿಷಗಳೇ ಬೇಕು. ನಡೆದು ಹೋಗುವರಿಗಾದರೂ ಕಡಿಮೆ ಕಷ್ಟವಿಲ್ಲ: ಹಿಮದ ಮೇಲೆ ಕಾಲಿಡುತ್ತಲೇ ಕುಸಿದು, ಬೂಟುಗಳಿಗೂ ಪ್ಯಾಂಟಿಗೂ ಮೆತ್ತಿಕೊಳ್ಳುತ್ತದೆ. ಸ್ವಲ್ಪ ಹೊತ್ತಿಗೆ ಕರಗಿ ಕಾಲುಚೀಲಗಳನ್ನು ತೋಯಿಸಿ ನಡುಗಿಸುತ್ತದೆ.

ಬೆಳಿಗ್ಗೆ ಬಸ್ಸಿನಲ್ಲಿ ಕ್ಯಾಂಪಸ್ಸಿಗೆ ಹೋಗುವಾಗ ಸುತ್ತಲೂ ನೊಡಿದರೆ ಹಿಮವೇ ಹಿಮ. ಗಿಡಗಳ ಮೇಲೆ ಎಲೆಗಳ ಬದಲು ಹಿಮ. ಮನೆಗಳ ಮಾಳಿಗೆಗಳಿಗೆ ಬಿಳಿಯ ವಾರ್ನಿಶ್ ಪದರ ಕೊಟ್ಟ ಭಾವ. ಶುಭ್ರ ನೋಟ. White earth! — ಅಂದುಕೊಂಡೆ. ಮನಸ್ಸು ಉಲ್ಲಾಸಗೊಂಡಿತ್ತು ಬಲು ದಿನಗಳ ಬಳಿಕ. ಇಲ್ಲಿಗೆ ಬಂದಂದಿನಿಂದ — ನಾನು ಬಹುಶಃ ಇನ್ನೂ ಇಲ್ಲಿಗೆ ಹೊಂದಿಕೊಂಡಿಲ್ಲವೋ ಏನೋ — ಇಂಥ ಗಳಿಗೆಗಳೇ ಕಡಿಮೆ. ಸಮಯ ಕೊಲ್ಲುವ ಹೊರೆ. ಇಂದಿನ ಉಲ್ಲಾಸದ ಭರದಲ್ಲಿ, ಸಾಕಷ್ಟು ದೂರ ನಡೆದುಕೊಂಡು ಹೋಗಿ ನನಗೆ ಗೊತ್ತಿರುವ Indian food mart ಒಂದಕ್ಕೆ ಹೋಗಿ frozen ಮಸಾಲೆ ದೋಸೆಗಳ ಡಬ್ಬಿಯೊಂದನ್ನು ತಂದೆ! ಇಂಥ ಹವೆಯಲ್ಲಿ ಈ walking ಸಾಹಸವೇ ಸರಿ. ಆದರೂ ಅಮೇರಿಕೆಯ ನೆಲದಲ್ಲಿ ಮಸಾಲೆ ದೋಸೆಯ ಅಮೋಘ ವಾಸನೆಯ ಪತಾಕೆಯೇರಿಸಲೇಬೇಕೆಂಬ ಧ್ಯೇಯ. ಇಂಥ ಗಳಿಗೆಗಳಲ್ಲಿ ನನಲ್ಲಿ ಹೊಗುವ ಆತುರವೆಂದರೆ, ಇಲ್ಲಿನ ಯಾವುದಾದರೂ fast food ಅಂಗಡಿಗೆ ಹೋಗಿ – “ಒಟ್ಟಿಗೆ ೩ ಮಸ್ಸಾಲೆ.. ಆಯಿಲ್ ಕಡಿಮೆ..”, ಎಂದು ಕಿರುಚುವುದು.

ಮಸಾಲೆಯಿಂದ ಅದೋ, ಅದರಿಂದ ಮಸಾಲೆಯೋ; ಅಥವಾ ಎರಡೂ ನನ್ನ subconciousನ ವಿಚಿತ್ರ ಆಟವೋ; ಒಟ್ಟಿನಲ್ಲಿ ಟೀನಾರ ಪಡಖಾನೆ ಹುಡುಗಿಯ ನಿನ್ನೆಯ ಸಾಲುಗಳು ಮತ್ತೆ ನೆನಪಾಗುತ್ತವೆ:

ಬಿಸಿ ಹೊಯಿಗೆಯ ಮೇಲೆ
ನೀರು ಹುಯ್ದ ಹಾಗೆ
ನಮ್ಮಿಬ್ಬರ ಸಂಭಾಷಣೆ
ಹೊಗೆಯೆದ್ದು ಭಗ್ಗನೆ
ಎಲ್ಲ ಇಂಗಿದ ಹಾಗಾಗಿ
ಮಾತಿನಲಿ ಇರುವಾಗಲೆ
ಪುನಃ ನೀರಡಿಕೆ

ನನ್ನಲ್ಲಿ ಬಿಸಿ ಹೊಯಿಗೆಯ ಭಾವವೂ ಇದೆ, ನೀರನ್ನೂ ಹುಯ್ಯುತ್ತಿರುವ ಹಾಗಿದೆ, ಅದು ಇಂಗುತ್ತಲೂ ಇದೆ. ಪುನ: ಪುನ: ನೀರಡಿಕೆ.

ಬಹುಶ: ಒಂಟಿಯಾಗಿ ಕೊಳಿತುಕೊಂಡು ಧ್ರುಪದದ ಆಲಾಪಕ್ಕೆ ಮನವೊಡ್ಡಬೇಕು. ಜೊತೆಗೆ ಪಡಖಾನೆಯ ಭಾವವನ್ನಾವಾಹಿಸಿ ಒಂದಷ್ಟು ಮದಿರೆಯನ್ನೂ ಗುಟುಕರಿಸಬೇಕು. ಹೇಗೂ ಇದು ಶುಕ್ರವಾರದ ರಾತ್ರಿ. ವಾರಾಂತ್ಯ ಶುರು!

ವಂದನೆಗಳು

ನಾನೇ ನನ್ನ ಬ್ಲಾಗನ್ನು ದುರ್ಲಕ್ಷಿಸಿದ್ದಾಗಲೂ ಕೆಲ ಸಹೃದಯರು ಈ ತಾಣಕ್ಕೆ ಬಂದು ನನ್ನ ಲೇಖನಗಳನ್ನು ಓದಿ ಅನ್ನಿಸಿಕೆಗಳನ್ನು ಬರೆದಿದ್ದಾರೆ. ನಿಮ್ಮಂಥವರಿಂದಲೇ ಮಳೆ ಬೆಳೆ.. ಎಂದೆಲ್ಲ ಹೇಳುವುದಿಲ್ಲ. ಆದರೂ ಈ ಪ್ರೋತ್ಸಾಹದ ಮಾತುಗಳು ನನ್ನನ್ನು ಬರೆಯಲು ಹಚ್ಚಬಹುದೇನೋ! ಎಲ್ಲರಿಗೂ ವಂದನೆಗಳು. ನಾನು ನನ್ನ ಬ್ಲಾಗಿನಿಂದ ದೂರವುಳಿಯಲು (ನಿಜವಾದ) ಕಾರಣಗಳಲ್ಲೊಂದೆಂದರೆ ನನ್ನ ಬಳಿ ತಾತ್ಕಾಲಿಕವಾಗಿ laptop ಇಲ್ಲದಿದ್ದುದು. ಅದಕ್ಕೆ ಕಾರಣಗಳು ಎರಡು: ನನ್ನ laptopಗೆ ವಯಸ್ಸಾಗಿ ಅದು ಗೂರಲು ಶುರು ಮಾಡಿದ್ದು; ಆದರೆ ಅದಕ್ಕೂ ಮುಖ್ಯವಾಗಿ, ನಾನು ಅಮೇರಿಕೆಗೆ ಹೊರಟದ್ದು. ಹೇಗೂ ಅಮೇರಿಕೆಗೆ ಹೋಗುತ್ತೇನೆ, ಈ ಹಳೆಯ laptop ಯಾಕೆ? ಅಲ್ಲಿಯೇ ಒಂದು ಥಳಥಳಿಸುವ ಹೊಸ laptop ತೊಗೊಳ್ಳಬಾರದೇಕೆ ಎಂದು ಆಲೋಚಿಸಿದೆ. ಅಂದುಕೊಂಡಂತೆಯೇ ಒಂದನ್ನು ಖರೀದಿಸಿಯೂ ಬಿಟ್ಟೆ. ಇಂದಿನ ಶುಭದಿನ — ಅಮೇರಿಕೆಗೆ ಬಂದ ಸರಿಯಾದ ೧೫ನೇ ದಿನ — ನನ್ನ ಹೊಸ laptop ಆಗಮಿಸಿದೆ; ಹೊಸದೊಂದು ಶುರುವಾತು ಎಂಬ ರಮ್ಯ ಕಲ್ಪನೆಯಿಂದ ಇದನ್ನು ಬರೆಯುತ್ತಿದ್ದೇನೆ. ಹೌದು, ಗೆಳೆಯರೆ! ನಾನೀಗ ಅಮೇರಿಕೆಯಲ್ಲಿದ್ದೇನೆ. ಇನ್ನಾರು ತಿಂಗಳು ನನ್ನ ಬಿಡಾರ ಇಲ್ಲಿಯೇ. ಇಲ್ಲಿನ universityಯೊಂದರಲ್ಲಿ ಅಲ್ಪ ಸ್ವಲ್ಪ ಸಂಶೋಧನೆ ಮಾಡುವ ಉದ್ದಿಶ್ಯವೂ ಇದೆ. ನೋಡೋಣ.

ಸಹೃದಯರೆ, ಕಾದು ನೋಡಿ. ನಾನು ಈ ಅಗಾಧ ಹಾಗೂ ವಿಚಿತ್ರ ದೇಶದ ಬಗೆಗಿನ ನನ್ನನುಭವಗಳನ್ನು ಪುಂಖಾನುಪುಂಖವಾಗಿ ಬರೆದು, ನಿಮ್ಮ ಇಷ್ಟು ದಿನಗಳ ಹತಾಶೆಯನ್ನು ಕಳೆಯಲೂಬಹುದು. ಅಥವಾ ನಿಮಗೆ ಜಿಗುಪ್ಸೆ ಹುಟ್ಟಿಸಲೂಬಹುದು. ಇಲ್ಲಿ ಬಂದ ಮೇಲೆ ಸುಮ್ಮನೇನೂ ಕುಳಿತಿಲ್ಲ. ಕಾರಂತರ “ಮರಳಿ ಮಣ್ಣಿಗೆ” ಓದಿದೆ. ಕಾರಂತರ ಹಲವು ಕೃತಿಗಳನ್ನು ಓದಿದ್ದರೂ ಏಕೋ ನಾನು ಇದನ್ನು ಓದಿರಲಿಲ್ಲ. ಓದಲು ಶುರು ಮಾಡುತ್ತಿದ್ದಂತೆಯೇ ಈ ಕೃತಿಯನ್ನು ನಾನು ಇಲ್ಲಿಯವರೆಗೆ ಓದಿಲ್ಲವೇ ಎನ್ನಿಸುವಂತಹ ಬರವಣಿಗೆ. ಅದರ ಬಗ್ಗೆ ಏನಾದರೂ ಬರೆಯಬೇಕೆಂದಿದೆ. ನೋಡುವ. ಹಾಗೆಯೇ ನನಗೆ ಇಷ್ಟವಾಗುವ ಕೆಲ ಬ್ಲಾಗುಗಳನ್ನು ಓದದೆಯೇ ಬಿಟ್ಟಿಲ್ಲ. ಆದರೆ universityಯ ನನ್ನ cubicleನಲ್ಲಿ ಕುಳಿತು ಅದೆಷ್ಟು ಪಠ್ಯೇತರ ಚಟುವಟಿಕೆ ನಡೆಸಲಾದೀತು? ಆದರೆ ಇನ್ನು ನಾನು ಸರ್ವತಂತ್ರ ಸ್ವತಂತ್ರ!