ನಾವು ಚಿಕ್ಕವರೂ ಮೂರ್ಖರೂ ಇದ್ದಾಗ — ಈಗಲೂ ನಾವು ಮೂರ್ಖರಾಗಿಯೇ ಉಳಿದಿದ್ದೇವೆ, ಚಿಕ್ಕವರಾಗಿ ಉಳಿದಿಲ್ಲವಷ್ಟೇ — ಒಂದು ಅಸಾಮಾನ್ಯ ಹೊರಾಂಗಣ ಆಟ ಆಡುತ್ತಿದ್ದೆವು. ಆಟ ಅನ್ನುವುದಕ್ಕಿಂತ ಅದನ್ನು ಚಾಳಿಯೆಂದರೆ ಸರಿಯೇನೋ. ಒಟ್ಟಾರೆ ಆ ಆಟ ಯಾರೋ ಒಬ್ಬರಲ್ಲಿ spontaneous ಆಗಿ ಅವಿರ್ಭವಿಸಿ, ಕ್ಷಣಾರ್ಧದಲ್ಲಿ ಎಲ್ಲರಲ್ಲೂ ಹಬ್ಬುತ್ತಿತ್ತು. ಹೆಚ್ಚಾಗಿ ಅದು ನಾವೆಲ್ಲರೂ ಕೂಡಿ ಮನೆಯ ಯಾವುದೋ ಸಣ್ಣ ಕೆಲಸದಿಂದ ಅಂಗಡಿಗೋ ಮತ್ತೆಲ್ಲಿಗೋ ಹೋಗುವಾಗ ಶುರುವಾಗಿ ಕೆಲಸದ ಜೊತೆಗೇ ಸಾಗುತ್ತಿತ್ತು. ನಮ್ಮಲ್ಲಿ ಯಾರಾದರೊಬ್ಬರು ಹಾದು ಹೋದ ವಾಹನವೊಂದರ ನೋಂದಣಿ ಸಂಖ್ಯೆಯಲ್ಲಿ ಯಾವುದೋ ಒಂದು ಅಂಕಿ ಮರುಕಳಿಸಿದ್ದನ್ನು ಗಮನಿಸುತ್ತಿದ್ದರು; ಹಾಗೆ ಗಮನಿಸಿದವರು, ತಮ್ಮ ಕೈಗೆ ಅತ್ಯಂತ ಸಮೀಪಕ್ಕೆ ಸಿಗುವ ವ್ಯಕ್ತಿಯ — ತಮ್ಮ/ತಂಗಿ/ಗೆಳೆಯ/ಗೆಳತಿ — ಬೆನ್ನ ಮೇಲೆ ಎರಡು ಬಾರಿಸುತ್ತಿದ್ದರು. ಏನೆಂದು ತಿರುಗಿ ನೋಡಿದರೆ ಗೊತ್ತಾಗುತ್ತಿತ್ತು: ಅದು ಸುಮ್ಮನೆ ಬಾರಿಸಿದ್ದಲ್ಲ; ಒಂದು ಮಹತ್ವದ ಉತ್ಪಾತವನ್ನು ಗಮನಿಸಿದ ಮೊದಲಿಗನೆಂಬ ಹೆಮ್ಮೆಯ ಕುರುಹು! ಮೊದಲು ಗಮನಿಸಿದ್ದು ಎಂಬುದು ಮುಖ್ಯ ಅಂಶ; ಈ ಗೌರವ ಮೊದಲು ಯಾರು ಗಮನಿಸುತ್ತಾರೋ ಅವರಿಗೆ ಸಲ್ಲಬೇಕಾದ್ದು. ಅಲ್ಲಿಂದ ಆಟ ಶುರು. ಒಮ್ಮೆ ಆಟ ಶುರುವಾಯಿತೆಂದರೆ ಎಲ್ಲರ ಮೈಯೆಲ್ಲ ಕಣ್ಣು ಕಿವಿ. ಜೊತೆಗಾರರನ್ನು ಥಳಿಸುವ, ಅಷ್ಟೇ ಅಲ್ಲದೆ ತಾವು ಅದರಿಂದ ಪಾರಾಗುವ ಹೊಂಚು ಹಾಕುವುದು ಶುರು. ಅದರಲ್ಲೂ ಕೆಲವರು ಚಾಲಾಕು. ಇಂಥ ತಿಳಿಗೇಡಿ ಆಟವನ್ನೇನು ಆಡುವುದು, ಇದರಲ್ಲಿ ತನಗೆ ಆಸಕ್ತಿ ಇಲ್ಲ – ಎಂದು ನಿರುಂಬಳ ಭಾವವನ್ನು ನಟಿಸಿ, ಜೊತೆಗಾರರ ಅವಧಾನ ಕಡಿಮೆಯಾಗುವಂತೆ ಮಾಡಿ, ನಂತರ ದಾಳಿಗೆರಗುವ ಬಗೆ. ಆದರೆ ಇಂಥ ತಂತ್ರಗಳು ಬಹಳ ಕಾಲ ಸಫಲತೆ ಪಡೆಯುತ್ತಿರಲಿಲ್ಲ. ಮತ್ತೆ ಎಲ್ಲರೂ ಆಟದ ತಾದಾತ್ಮ್ಯ ಗಳಿಸುತ್ತಿದ್ದರು.
ಒಮ್ಮೊಮ್ಮೆ ಆಟದ ನಿಯಮಗಳ ಬಗ್ಗೆ ವಿವಾದಗಳು ಶುರುವಾಗುತ್ತಿದ್ದುವು. ಮೇಧಾವಿಯೊಬ್ಬರು – “ಮರುಕಳಿಸುವ ಅಂಕೆಗಳು ಒಟ್ಟಿಗೆ ಬಂದಾಗ ಮಾತ್ರ ಹೊಡೆತಗಳು ಬದ್ಧ. ಇಲ್ಲದಿದ್ದರೆ ಇಲ್ಲ. ಉದಾಹರಣೆಗೆ: ೨೨೭೫ ಅಥವಾ ೪೬೬೦ ಸರಿ; ೧೩೧೬ ತಪ್ಪು,” ಎಂದು ತಕರಾರು ತೆಗೆಯುತ್ತಿದ್ದರು. ಆಗ ಉಳಿದವರು ಅದನ್ನು ವಿರೋಧಿಸಿ, ಇಂಥ ನಿರ್ಬಂಧಗಳಿಂದ ಆಟ ರಂಜನೀಯವಾಗಿ ಉಳಿಯುವುದಿಲ್ಲ ಎಂದು ಸಾಧಿಸಿ, ಹಳೆಯ ಆಟವನ್ನೇ ಮುಂದುವರಿಸುತ್ತಿದ್ದರು. ಹಾಗಿದ್ದಾಗ್ಗ್ಯೂಒಮ್ಮಿಂದೊಮ್ಮೆಲೆ ಕೆಲವರು ಜಾಣ್ಮೆಯ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದರು. ಎರಡು ’೪’ಗಳನ್ನು ಗಮನಿಸಿದರೆ, ೨ ಹೊಡೆಯುವ ಬದಲು ೪ ಹೊಡೆಯುತ್ತಿದ್ದರು. “ಮರುಕಳಿಸುವ ಅಂಕಿಯ ಮುಖಬೆಲೆಯಷ್ಟು ಹೊಡೆತಗಳನ್ನು ಹೊಡೆಯೋಣ,” ಎಂದು ವಕೀಲಿ ನಡೆಸುತ್ತಿದ್ದರು. ಅದೇಕೋ ಹೊಸ ನಿಯಮವನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು. ಆದರೆ ಹಂಗಾಮಿಯಾಗಿ ಮಾತ್ರ. ಏಕೆಂದರೆ ಎಲ್ಲರೂ ಬಂಪರ್ ಬಹುಮಾನ ಹೊಡೆಯೋಣವೆಂಬ ಆಸೆಯಲ್ಲಿ, ೫ಕ್ಕಿಂತ ಹೆಚ್ಚಿನ ಅಂಕಿಗಳಿಗಾಗಿ ಕಾಯುತ್ತಿದ್ದರು. ಪಣದ ಮೊತ್ತ ಹೆಚ್ಚಾಗುತ್ತಿದ್ದಂತೆ ಜಗಳಗಳು ಹೆಚ್ಚಾಗುತ್ತಿದ್ದುವು. ಸ್ವಲ್ಪ ಹೊತ್ತಿನಲ್ಲಿ ಆಟವು ನೀರಸವೂ ತ್ರಾಸದಾಯಕವೂ ಆಗಿ ಪರಿಣಮಿಸುತ್ತಿತ್ತು. ಹಳೆಯ ಪ್ರಮಾಣೀಕೃತ ನಿಯಮಗಳಿಗೆ ಎಲ್ಲರೂ ಮೊರೆಹೋಗುತ್ತಿದ್ದರು.
***
ಬೆಂಗಳೂರಿನಲ್ಲಿ ಹೊರಗೆ ಗಾಡಿಯಲ್ಲಿ ಓಡಾಡುವಾಗ ಅನೇಕ ಸಲ ಈ ಆಟದ ನೆನಪು ನನಗೆ ಆದದ್ದಿದೆ. ರಸ್ತೆಯ ಬದಿಗೆ ನಿಂತು ಒಂದಷ್ಟು ಮಕ್ಕಳು ಈ ಆಟವನ್ನು ಆಡುತ್ತಿದ್ದಂತೆ ಕಲ್ಪಿಸಿಕೊಳ್ಳುತ್ತೇನೆ. ಹಾಗೆ ಕಲ್ಪಿಸಿಕೊಂಡು ಗಾಬರಿಗೊಳ್ಳುತ್ತೇನೆ. ನಾವು ಈ ಆಟವನ್ನು ಒಂದು ದಶಕಕ್ಕಿಂತಲೂ ಹಿಂದೆ ಆಡುತ್ತಿದ್ದೆವು. ಅದೂ ನಮ್ಮ ಸಣ್ಣ ಹಳ್ಳಿ ಪಟ್ಟಣಗಳಲ್ಲಿ. ಗಾಡಿಗಳ ಹಾದುಹೋಗುವಿಕೆಯ ಮೇಲೆ ನಿರ್ಭರಿವಾದ ಆಟ ಅದೆಷ್ಟು ನಿಧಾನವಾಗಿ ನಡೆಯುತ್ತಿತ್ತೆಂದರೆ ಎಷ್ಟೋ ಸಲ ನಮ್ಮ ಬೆನ್ನ ಮೇಲೆ ಎರಡೇಟು ಬೀಳುವ ತನಕ ಆಟ ಆಡುತ್ತಿದ್ದುದನ್ನೇ ನಾವು ಮರೆತಿರುತ್ತಿದ್ದೆವು. ಆದರೆ ಈಗ? ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆಯ ಬಗ್ಗೆ ಸ್ವಲ್ಪ ವಿಚಾರ ಮಾಡಿ. ಹಾಗೂ ಅವುಗಳ ಆವೃತ್ತಿ. ಮಕ್ಕಳು ಈ ಪರಿಯ ಸಂಖ್ಯಾ ಪರಿವರ್ತನಗಳ, ಇಂಥ combinatorial explosion ಅನ್ನು ಎದುರಿಸಿ ಬದುಕುವುದುಂಟೇ? ಅವು ಈ ಅಂಕೆಯಿಲ್ಲದಾಟದ ಹಂಗಿಗೆ ಬಿದ್ದು ಒಂದು ತಿಳಿಗೇಡಿ ಆಟವನ್ನು ಭೀಕರ ಆಟವನ್ನಾಗಿಸಿಕೊಳ್ಳುವುದು ಬೇಡ.
>> ಅವು ಈ ”ಅಂಕೆಯಿಲ್ಲದಾಟದ” ಹಂಗಿಗೆ ಬಿದ್ದು ಒಂದು ತಿಳಿಗೇಡಿ ಆಟವನ್ನು ಭೀಕರ ಆಟವನ್ನಾಗಿಸಿಕೊಳ್ಳುವುದು ಬೇಡ <<<
kone saalu bhala chholo ada..
khare namma kade ee aata chaalti irlilla.
nammooru bahushaha avaagale bhaala munduvarediddu sikkaapatte gaadi odadtidduvu annastada, hingaagi ee aata mare maasirabeku aavagana.
ನೀಲಕಂಠ:
ಎಷ್ಟೆಂದರೂ ನೀವು ದಕ್ಷಿಣಾದಿಗಳಲ್ಲವೇ! ಬೆಂಗಳೂರಿಗೆ ಸಮೀಪ. ಹಿಂಗಾಗಿ ನಿಮ್ಮಲ್ಲಿ ಇಂಥಾ ಆಟಗಳು ಇರಲಿಕ್ಕಿಲ್ಲ. ಬಹುತೇಕ ನಿಮ್ಮ ಊರಾಗ ನೀವು ವೀಡವೇ ಗೇಮ್ಸ್ ಆಡತಿದ್ದಿರಿ ಅಂತ ನನಗ ಅನ್ನಸತದ.