ಮನಸಿನ ರೀತಿಯೇ ವಿಚಿತ್ರ. ಅದು ನಮ್ಮ ವಿಚಾರ ಮಾಡುವ ಪ್ರಕ್ರಿಯೆಯನ್ನು ಅನೇಕ ರೀತಿಯಲ್ಲಿ ಗೊಂದಲಕ್ಕೀಡು ಮಾಡಿ, ನಮ್ಮ ಒಳ ಅರಿವಿನ ವಿರುದ್ಧ ಸಂಚು ಹೂಡಿದಂತೆ ತೋರುತ್ತದೆ. ಕೆಲವೊಮ್ಮೆ ತೀರಾ ವಿದಿತವಾದ ಸಂಗತಿಗಳನ್ನು ಒರೆಗೆ ಹಚ್ಚಿ ಅವುಗಳ ಬಗ್ಗೆ ಪಕ್ಕಾ ನಿರ್ಧಾರಗಳನ್ನು ತಳೆಯುವ ತನಕ ನಮ್ಮನ್ನು ಕಾಡುತ್ತದೆ. ಇನ್ನು ಕೆಲವು ಸಲ ನಮಗೆ ಅಸ್ಪಷ್ಟವಾದ ಸಂಗತಿಗಳ ಬಗ್ಗೆ ಕ್ಷಣಾರ್ಧದಲ್ಲಿ ನಾವು ಪೂರ್ಣ ಸ್ಥೈರ್ಯದಿಂದ ಸಮೀಪದೃಷ್ಟಿಯ ತೀರ್ಪುಗಳನ್ನು ಕೊಡುವಂತೆ ಮಾಡುತ್ತದೆ. ಯಾವುದು intuitive, ಯಾವುದು counterintuitive ಎಂಬುದೇ ತಿಳಿಯದಂತಾಗುತ್ತದೆ.
***
ಅಮೇರಿಕಾ ಯಾತ್ರೆಯನ್ನು ನಾನು ಅಮೇರಿಕಾ ಯಾತ್ರೆ ಅನ್ನುವುದಕ್ಕಿಂತ ಒಂದು getaway ಯಾತ್ರೆ ಅಂತಲೇ ಅಂದುಕೊಂಡಿದ್ದೆ. ಯಾವುದರಿಂದ ದೂರ ಹೋಗುವುದು ಎಂದರೆ – ಬಳಕೆಯ ವಾತಾವರಣದಿಂದ, ಮುಖ್ಯವಾಗ ಬಳಕೆಯ ಜನರಿಂದ; ಸಂಬಂಧಿಗಳ ಪ್ರೀತಿ ತುಂಬಿದ ಕಾಟ; ನನ್ನ ಭಿಡೆಗಳು; ಬಳಕೆಯ ಜನರಿಂದ ನನ್ನ ಸಮಯ ಪೋಲಾಗುತ್ತಿರುವುದನ್ನು ಸಹಿಸುವ ಅನಿವಾರ್ಯತೆ; ನನ್ನ ಸ್ವಾತಂತ್ರ್ಯದ ಹಕ್ಕನ್ನು ಸ್ಥಾಪಿಸುವ ನಿಷ್ಠುರವಿಲ್ಲದೆ ಸುಮ್ಮನಿರುವ ಅಸಹಾಯಕತೆ. ಅಮೇರಿಕಕ್ಕೆ ಹೊರಡುವ ದಿನದ ತನಕ ನನಗೆ ಇಲ್ಲಿ ಬರುವ ಅನಿವಾರ್ಯತೆಗಿಂತ ದೂರ ಹೋಗುವ ಅನಿವಾರ್ಯತೆ ಬಲವಾಗಿ ತೋರುತ್ತಿತ್ತು. (ಅಥವಾ ನನ್ನ ಮನಸ್ಸು ನನ್ನನ್ನು ಆ ವಿಚಾರದತ್ತ ಕೊಂಡೊಯ್ದಿತ್ತು.) ಸ್ವಲ್ಪ ದಿನ ಒಬ್ಬನೇ ಎಲ್ಲರಿಂದ ದೂರವಿದ್ದರೆ ಸಾಕು ಎಂಬ ಹಂಬಲಿಕೆ ಕಾಡುತ್ತಿತ್ತು. ದೂರವಿರುವ ಕಾರ್ಯಕ್ರಮದಲ್ಲಿ ನಾನು ದೂರವಿರಲು ಬಯಸದಿರುವವರಿಂದಲೂ ದೂರವಾಗುವ ಉಪವಾಕ್ಯವಿದ್ದುದೂ ಗೊತ್ತಿತ್ತು. ಆದರೆ ನನಗೆ ಸಲ್ಲಲೇಬೇಕಾದ ಒಂಟಿತನ ಗಳಿಸಲು ಸ್ವಲ್ಪ ದಿನ ಆ ಶರತ್ತನ್ನು ಒಪ್ಪಿಕೊಂಡರಾಯಿತು ಎಂದು ಸಿದ್ಧನಿದ್ದೆ.
ಇಲ್ಲಿಗೆ ಬಂದಿಳಿಯುವ ತನಕ ಬಹುಶಃ ನನ್ನ ಮನಸ್ಸಿನಲ್ಲಿ ಯಾವ ಯೋಚನೆಗಳೇ ಇರಲಿಲ್ಲವೇನೋ ಅನ್ನಿಸುತ್ತದೆ. ವಿಚಿತ್ರವೆನ್ನಿಸುತ್ತದೆ. ನಡುನಡುವಿನ ವಿಳಂಬ, ವಿಮಾನ ಬದಲಾವಣೆಗಳನ್ನೆಲ್ಲ ಹಿಡಿದು ಒಟ್ಟಾರೆ ೩೨ ಗಂಟೆಗಳ ಪ್ರಯಾಸದಲ್ಲಿ ನಾನು ಯಾವ ವಿಷಯಗಳ ಬಗ್ಗೆ ಯೋಚನೆ ಮಾಡುತ್ತಿದ್ದೆ ಎಂಬುದೇ ನೆನಪಿಲ್ಲ! ಮಲಗಿದ್ದೂ ಕಡಿಮೆ. ಒಂದಷ್ಟು ಹೊತ್ತು ಓದಿದೆ. ಒಂದಷ್ಟು ಕಾಲ ಸತತವಾಗಿ ಸಿನೆಮಾಗಳನ್ನು ನೋಡಿದೆ. ನಾನು ತಿನ್ನುವಂಥದ್ದು ಹೆಚ್ಚೇನೂ ಅವರು ಕೊಟ್ಟ ಆಹಾರದಲ್ಲಿರಲಿಲ್ಲ. ಏನು ಮಾಡುತ್ತಿದ್ದೆನೋ ಏನೋ! ಬಹುಶಃ ಈ ಜನಗಳ ಪ್ರಕ್ರಿಯೆಗಳು, ಸಂಶಯಗಳು ಇವನ್ನೆಲ್ಲ ದಾಟಿ ಒಂದು ಸಲ ಆ ಊರನ್ನು ಮುಟ್ಟಿದರೆ ಸಾಕಪ್ಪ ಎಂಬ ಯೋಚನೆಯೇ ಮನಸ್ಸಿನ ಜಾಗವನ್ನು ಆಕ್ರಮಿಸಿಕೊಂಡಿತ್ತೇನೋ! ಇಲ್ಲಿ ಕೊನೆಗೆ ಪೂರ್ವನಿರ್ಧಾರಿತ ಜಾಗಕ್ಕೆ ಬಂದು ಮುಟ್ಟಿ, ಒಂದಿಬ್ಬರು ಸಹೋದ್ಯೋಗಿಗಳು ಮತ್ತು ಒಬ್ಬ ಸಹವಾಸಿಯನ್ನು ಭೆಟ್ಟಿಯಾದ ಮೇಲೂ – “ಆಹಾ! ಇನ್ನಾವ ಚಿಂತೆಯಿಲ್ಲ. ಇವರು ನನಗೆ ಜೀವನದ ಮಾರ್ಗವನ್ನು ತೋರಿಸುತ್ತಾರೆ,” ಎಂಬ ನಿರಾಳವೂ ಆಗದಷ್ಟು ಮಬ್ಬು ಕವಿದಿತ್ತು ಮನಸ್ಸಿಗೆ. ಅದಂತೂ ಆ ಪ್ರವಾಸದ ಸುಸ್ತಿನಿಂದಲೇ ಆಗಿರಬೇಕು ಬಿಡಿ. ಎತ್ತರದಲ್ಲಿ ತೇಲುತ್ತ ತೇಲುತ್ತ ನಾನು ಹೋದಂತೆ, ನನ್ನ ಭಾವನೆಗಳ ಭಾರ ಹೆಚ್ಚಾಗಿ ಅವು ಗುರುತ್ವದಿಂದ ಕೆಳಗೆ ಕುಸಿಯುತ್ತ ಹೋಗಿ ದಾರಿಯಲ್ಲೆಲ್ಲೋ ನೆಲಕಚ್ಚಿರಲು ಸಾಕು.
ಮಾನವ ಸಹಜ ಭಾವನೆಗಳ ಮೊದಲ ಸೆಳಕು ನನ್ನಲ್ಲಿ ಮರುಕಳಿಸಲು ಮುಂದೆ ಬಹಳ ಸಮಯ ಹಿಡಿಯಲಿಲ್ಲ. ನನ್ನ ಸಹವಾಸಿಯ ಕಾರಿನಲ್ಲಿ apartmentಗೆ ಬಂದು ತಲುಪಿದ ಕೆಲಹೊತ್ತಿಗೆ ಅವನು ಮತ್ತು ಇನ್ನೋರ್ವ ಸಹವಾಸಿ ನನಗೆ ನನ್ನ ಕೋಣೆಯನ್ನು ತೋರಿಸಿದರು. ಆ ಕೋಣೆಯಲ್ಲಿ ಕಾಲಿರಿಸಿ ನನ್ನ ಸಾಮಾನುಗಳನ್ನು ಇಡುವಷ್ಟರಲ್ಲಿ ಮನಸ್ಸಿನ ಮಬ್ಬು ಹರಿಯಿತು; ಒಮ್ಮಿಂದೊಮ್ಮೆಲೆ ಎಚ್ಚತ್ತಂತಾಯಿತು. ನಾನು ಗೊತ್ತಿರುವ ಜನ, ಗೊತ್ತಿರುವ ಊರು, ವಾತಾವರಣಗಳಿಂದ ಬಹು ದೂರ ಅಪರಿಚಿತ ಜಾಗಕ್ಕೆ ಬಂದು ಸೇರಿದ್ದೇನೆ ಎಂಬ ಸತ್ಯ ಅರಿವಿಗೆ ಬರುತ್ತಿದ್ದಂತೆ ಇದ್ದುದೆಲ್ಲವನ್ನು ಕಳಕೊಂಡ ಭಾವ ಒತ್ತರಿಸಿ ಬಂತು; ನಾನು ಎಷ್ಟೇ ಬೇಡಬೇಡವೆಂದರೂ ಪರಿಚಿತ ಸಂಗತಿಗಳಿಂದ ತಪ್ಪಿಸಿಕೊಳ್ಳುವುದು ನನಗೆ ಬಹಳ ಕಷ್ಟ ಎಂಬುದು ತಕ್ಷಣ ಅರಿವಿಗೆ ಬಂತು; ನನಗೆ familiar environmentಗಳ ಬಗ್ಗೆ ಅತೀವ ಅಸಮಾಧಾನವಿದ್ದರೂ ನನಗೆ ಅವುಗಳ ರೂಢಿ ಅತಿಯೆಂದರೆ ಅತಿಯಾಗಿ ಆಗಿದೆ ಎಂಬುದು ಮನವರಿಕೆಯಾಯಿತು. ಇನ್ನೂ ಅನೇಕ ಸತ್ಯಗಳು ಆ ಕೆಲವೇ ಕ್ಷಣಗಳಲ್ಲಿ ಸ್ಪಷ್ಟವಾದುವು.
ಮುಂದಿನ ಕೆಲವು ದಿನಗಳಲ್ಲಿ ಹಿಂದೆ ಉಳಿದಿದ್ದ ಭಾವನೆಗಳು ತೆವಳುತ್ತ ತೆವಳುತ್ತ ಬಂದು, ನೆಲದಲ್ಲೇ ಇದ್ದ ನನ್ನನ್ನು ಅಡರಿ ಕಾಡಲು ಶುರು ಮಾಡಿದುವು. ಮೊದಲು ಹೇಳಿದ ಮನಸ್ಸಿನ ವೈಚಿತ್ರ್ಯ – ಮನಸ್ಸಿನ ವೈಚಿತ್ರ್ಯ ಅನ್ನುವುದಕ್ಕಿಂತ, ನನ್ನ ವಿಚಾರ ಮಾಡುವ ರೀತಿಯ limitations ಎನ್ನಬಹುದೇನೋ – ಮಜಾ ಎನ್ನಿಸತೊಡಗಿತು. ಮೊಬೈಲ್ ಫೋನ್, ಇಂಟರ್ನೆಟ್, ಗೆಳೆಯರು, ಅಂಗಡಿಗಳಲ್ಲಿನ ವ್ಯವಹಾರಗಳ ರೀತಿ, ರಿವಾಜುಗಳು — ಇಂಥ taken for granted ವಸ್ತುಗಳಿಲ್ಲದಿರುವುದಕ್ಕೆ ಹೊಂದಿಕೊಳ್ಳುವುದಕ್ಕೆ ಸಮಯವಂತೂ ಬೇಕಾಗುತ್ತದೆ. ಆದರೆ ಒಂಟಿಯಾಗಿರಬೇಕೆಂಬ ಹಂಬಲ, ನಾವಾಗಿಯೇ ಅದನ್ನು ಆಯ್ಕೆ ಮಾಡಿಕೊಂಡರಷ್ಟೇ ರಮ್ಯವಾಗುತ್ತದೆ. ಆನಂದದಾಯಕವೂ ಆಗುತ್ತದೆ. ನಾವಾಗಿಯೇ ಒಂಟಿತನವನ್ನು ಆಯ್ಕೆ ಮಾಡಿಕೊಂಡಿದ್ದೀವಿ ಎಂದು ಅಂದುಕೊಂಡರೂ ಎಷ್ಟೋ ಸಲ ಅದನ್ನು ನಾವು ಆರೋಪಿಸಿಕೊಂಡಿರುತ್ತೇವಷ್ಟೇ. ಆಗ ಅದನ್ನು ಸಹ್ಯಪಡಿಸಿಕೊಳ್ಳಲು ಸಾಹಸ ಪಡಬೇಕು.
ಇದೇನು ಯಾರೂ ಕಂಡರಿಯದ ಮಹಾನ್ ಸತ್ಯವಲ್ಲ. ಎಲ್ಲರಿಗೂ ಇಂಥ ಅನುಭವಗಳಾಗಿರುತ್ತವೆ. ದಿನ ಕಳೆದಂತೆ ಎಲ್ಲವೂ ರೂಢಿಯಾಗುತ್ತದೆ. ಮೇಲಾಗಿ ಇದು ಎಲ್ಲರಿಗೂ ಅನ್ವಯವಾಗುವುದಿಲ್ಲ: ಅಮೇರಿಕಕ್ಕೋ ಮತ್ತೆಲ್ಲಿಗೋ ದಿನಾಲೂ ನೂರಾರು ಮಂದಿ ಬರುತ್ತಾರೆ. ಕೆಲಸದ ಸಲುವಾಗಿ ಬಂದವರಿಗೆ ಸಮಸ್ಯೆಗಳು ಕಡಿಮೆ. ಅವರಿಗೆ ಅನುಕೂಲತೆಗಳು ಹೆಚ್ಚು, ಮತ್ತು ಅವರು ಬಂದಿಳಿಯುವಂಥ ಊರುಗಳಲ್ಲಿ ಅವರಿಗೆ ಪರಿಚಯವಿರುವ ಮಂದಿ ಬೆರಳೆಣಿಕೆಯಷ್ಟಾದರೂ ಇದ್ದೇ ಇರುತ್ತಾರೆ. ಪೂರ್ವನಿರ್ಧಾರಿತ ಕೆಲಸಗಳಿರುತ್ತವೆ. ಆದರೆ ನಮ್ಮಂಥವರ ಕೆಲಸಕ್ಕೆ– ಅಬಾಧಿತವಾಗಿ ಬಹಳ ಹೊತ್ತಿನ ತನಕ ವಿಚಾರ ಹರಿಸುತ್ತ, ಅದರ ಬಗ್ಗೆ ಸ್ಪಷ್ಟತೆ ಕಂಡುಕೊಂಡು, ನಮ್ಮ ಕೆಲಸಗಳನ್ನು ನಾವೇ ನಿರ್ಧರಿಸಿಗೊಂಡು, ಯಥಾವಕಾಶ ಮಾಡಿ ಮುಗಿಸಬೇಕು — ಬಹಳ ಒಳ್ಳೆಯ ಕೆಲಸವೆಂಬುದರಲ್ಲಿ ಸಂಶಯವೇ ಇಲ್ಲ — ಆದರೆ ಅದಕ್ಕೆ ತಲ್ಲಣದ ಮನಸ್ಥಿತಿ ತರವಲ್ಲ.
***
ಏನೇ ಇರಲಿ. “ಹೇಗಾದರೂ ಮಾಡಿ ಮನಸ್ಸನ್ನು ಹತೋಟಿಗೆ ತಂದು ಕೆಲಸಕ್ಕೆ ತೊಡಗೋಣ,” ಎಂಬ ಹಂತದಿಂದ, ಅದರ ಅನಿವಾರ್ಯತೆಯಿಲ್ಲದೆ ಸ್ವಾಭಾವಿಕವಾಗಿ ವಿಚಾರಗಳತ್ತ, ideaಗಳತ್ತ ತುಡಿಯುವ ಹಂತಕ್ಕೆ ನಿಧಾನವಾಗಿ ಸಾಗುತ್ತಿದ್ದೇನೆ. ಆದರೆ ಯಾವುದು ಇರುವುದು, ಯಾವುದು ಇರದುದು ಎಂಬ ಪ್ರಶ್ನೆಯೂ ಕಾಡುತ್ತದೆ. ಹಳೆಯದರತ್ತ ತುಡಿತ ಹೊಸದರತ್ತ ಆಶಾವಾದ ತುಂಬಿದ ಸೆಳೆತ, ಎರಡೂ ಇವೆ. ಬಹುಶ: ಮರಳಿ ಹೋಗುವಷ್ಟರಲ್ಲಿ ನನ್ನ ಅವಶ್ಯಕತೆಗಳು ಏನು ಎಂಬ ಬಗ್ಗೆ, ನನಗೆ ಸ್ವಾಭಾವಿಕವಾದ ಜೀವನಶೈಲಿ ಯಾವುದು ಎಂಬ ಬಗ್ಗೆ ನಾನು ಹೆಚ್ಚು ತಿಳಿದುಕೊಂಡಿರುತ್ತೇನೆ. ಹೆಚ್ಚು ಪ್ರಬುದ್ಧನಾಗಿರುತ್ತೇನೆ. ನನಗನ್ನಿಸುತ್ತದೆ: ನಮಗೆ ಬೇಕಾದ ಹಾಗೆ ಬದುಕಲು, ನಮಗೆ ಬೇಕಷ್ಟು ಸ್ವೇಚ್ಛೆ ಅನುಭವಿಸಲು, ನಮಗೆ ಬೇಕಾದಾಗ ಬೇಕಷ್ಟು solitude ಪಡೆಯಲು ನಾವು ಇರುವುದರಿಂದ ದೂರ ಹೋಗಬೇಕಾದ ಅನಿವಾರ್ಯತೆಯಿಲ್ಲ. ಇರುವುದೂ ಇಲ್ಲದಿರುವುದೂ ಎರಡೂ ಬೇರೆ ಬೇರೆ ಎಡೆಗಳಲ್ಲಿದೆ ಅನ್ನಿಸುವುದಿಲ್ಲ. ಎಲ್ಲವೂ ನಮ್ಮಲ್ಲಿಯೇ ಇದೆ. ಅದನ್ನು ನಾವು ಕಂಡುಕೊಳ್ಳಬೇಕಷ್ಟೆ. ಮರಳಿ ಹೋದ ಮೇಲೆ ಹಾಗೆ ಮಾಡಲು ನನ್ನಿಂದ ಸಾಧ್ಯ ಎಂದು ಇತ್ತೀಚೆಗೆ ಒಮ್ಮೊಮ್ಮೆ ಅನ್ನಿಸುತ್ತಿದೆ.