ಖಯಾಲ್: ಪ್ರೇಮ, ಕತೆಗಳು

ಬಹುಕಾಲದ ನಂತರ ಸೇರುತ್ತಿರುವ ಪ್ರೇಮಿಗಳ ಕತೆಗಳು. ಅವಳು ಇತ್ತೀಚೆಗೆ ಓದಿದ ಇಂಗ್ಲಿಶ್ ಕಾದಂಬರಿಗಳಲ್ಲಿನ ಕತೆಗಳು. ಅವರು ಆ ಕತೆಗಳನ್ನು ಹೇಳುವ ರೀತಿ ಅವಳಿಗೆ ತುಂಬ ಇಷ್ಟ. ಅವು ಅವಳೋದಿದ ಎಷ್ಟೋ ಹಳೆಯ ಕತೆ ಕಾದಂಬರಿಗಳಿಗಿಂತ ಬಹಳ ಭಿನ್ನ. ಅವಳಿಗೆ ಪ್ರೇಮಿಗಳ ಪ್ರಲಾಪಗಳು, ಹಲುಬುವಿಕೆ, ಉದ್ದುದ್ದ ಭಾಷಣಗಳು ಜಿಗುಪ್ಸೆ ಹುಟ್ಟಿಸುತ್ತದೆ; ಕೃತಕ ಅನ್ನಿಸುತ್ತದೆ. ಇವು ಹಾಗಲ್ಲ. ಪ್ರೇಮಿಗಳು ಪ್ರೇಮಿಸುತ್ತಾರೆ, ಮತ್ತೇನಿಲ್ಲ. ಪ್ರಶ್ನೆಗಳ ಹಂಗಿಲ್ಲ; ವಿವರಣೆಗಳು ಬೇಕಿಲ್ಲ; ಹೆಚ್ಚು ಮಾತಿಗೂ ಅವಕಾಶವಿಲ್ಲ. ದೀರ್ಘಕಾಲದ ವಿರಹದ ನೋವನ್ನು ಮರೆಸುವಂಥ ಮಿಲನದ ಈ ಸಂದರ್ಭದಲ್ಲಿ ಮಾತು ಪರಸ್ಪರ ದೂಷಣೆಗೆ ಎಡೆಮಾಡುತ್ತದಷ್ಟೆ. ಅವರು ಬರಿ ಚುಂಬಿಸುತ್ತಾರೆ. ಮುದ್ದಾಡುತ್ತಾರೆ. ಎಂಥ ಚುಂಬನಗಳವು! ಸುಂಟರಗಾಳಿಯ ಸವಿ ಅವಕ್ಕೆ. ಒಬ್ಬರದೊಬ್ಬರು ನಾಲಗೆ ತುಟಿ ಬಾಯಿಗಳನ್ನು ಬಂಧಿಸಿ, ಕೈಗಳಿಗೆ ಮಾತಿನ ಅನುಮತಿ ಕೊಡುತ್ತಾರೆ. ಬೆರಳುಗಳು ಉಗುರುಗಳು ಅಂಗೈಗಳು. ಶಬ್ದಗಳು ತಲುಪಲಾರದ ನೆಲೆಗಳಿಗೆ ತಲುಪುವ ತಾಕತ್ತು ಅವಕ್ಕಿದೆ. ಮಾತು ಸೋಲುತ್ತದೆ. ಅವು ಹೇಳುವ ಕತೆಗಳನ್ನು ಮಾತುಗಳಿಂದ ಹೇಳಹೊರಟರೆ ಕತೆಗಳು ಸೊರಗುತ್ತವೆ, ಸವಕಲಾಗುತ್ತವೆ. ಬೆಚ್ಚಿದ ನರನಾಡಿಗಳನ್ನೆಲ್ಲ ಕೈಗಳು ತಣಿಸುತ್ತವೆ. ಅವರಲ್ಲಿ ದೂರುಗಳೇ ಇಲ್ಲವೆಂದಲ್ಲ. ವಸ್ತುತ:, ಬೆರಳುಗಳು ಮಗ್ನತೆಯಿಂದ ಆಡುತ್ತಿರುವ ಈ ಆಟದ ಕೆಲವೊಂದು ನಡೆಗಳು ನಿರ್ದಿಷ್ಟವಾದ ದೂರುಗಳನ್ನು ಸೂಚಿಸುತ್ತವೆ. ಕುತ್ತಿಗೆಯ ಹಿಂದೆ ತೋರುಬೆರಳು ಹೆಬ್ಬೆರಳನ್ನು ಸೇರಿ ಮೃದುವಾಗಿ ಚಿವುಟುತ್ತ ಹೇಳುತ್ತದೆ – ನಿನಗಾಗಿ ಎಷ್ಟು ಹಂಬಲಿಸಿದೆ, ಗೊತ್ತೆ? ಬೆನ್ನಿನ ಇಳಕಲಿನಲ್ಲಿ ವಿಹರಿಸುತ್ತಿರುವ ಅಂಗೈ, ಚಿವುಟನ್ನು ರಮಿಸುತ್ತದೆ, ತಟ್ಟುತ್ತದೆ, ತೂಗಿ ನಿದ್ದೆಗೆ ನೂಕುತ್ತದೆ. ಅಫ್ಘನ್ನನಂತೆ ಕಾಣುವ ನಿನ್ನ ಹಳೆಯ ಗೆಳೆಯನೊಬ್ಬನಿದ್ದಾನಲ್ಲ. ಅವನು ನನಗೆ ಮೊನ್ನೆ ಕಾಣಿಸಿದ. ಬಹುಶ: ನಾನು ನಿನ್ನ ಬಗ್ಗೆ ಯೋಚಿಸುತ್ತಿದ್ದೆನೇನೋ ಅಥವಾ ಏನೇನೋ ಊಹಿಸಿಕೊಳ್ಳುತ್ತಿದ್ದೆನೇನೋ, ಅವನನ್ನು ತಡೆಯಲೆ ಎನಿಸಿತು. ನಿನ್ನ ಹೆಸರು ಹಿಡಿದು ಕೂಗಿ ಕರೆಯಲೆ ಎನ್ನಿಸಿತು. ಅಧೀರ ಬೆರಳುಗಳು ಗುಂಗುರನ್ನು ಸುತ್ತುತ್ತ ಬಿಚ್ಚುತ್ತ ತಪ್ಪೊಪ್ಪಿಗೆ ಮಾಡಿಕೊಳ್ಳುತ್ತವೆ. ಬಲಶಾಲಿ ಅಂಗೈಗಳೆರಡು ಈ ಎಲ್ಲ ಹೆದರಿಕೆಗಳನ್ನು ಒರೆಸಿ ಹಾಕುತ್ತವೆ. ಅಪ್ಪುಗೆ ಬಿಗಿಯುತ್ತದೆ. ಬಿಗಿಯಪ್ಪುಯಗೆಯಂಥದ್ದು ಮತ್ತೊಂದಿಲ್ಲ. ಅದು ಒಬ್ಬರಲ್ಲೊಬ್ಬರು ಏಕಾಗ್ರಗೊಳ್ಳುವಂತೆ ಒತ್ತಾಯಿಸುತ್ತದೆ. ತಕ್ಷಣದಲ್ಲಿ ಒಂದಾಗುವಂತೆ ಮಾಡುತ್ತದೆ.

6 thoughts on “ಖಯಾಲ್: ಪ್ರೇಮ, ಕತೆಗಳು

  1. ಚಕೋರ,
    ವ್ಹಾ! ಅಪ್ಪುಗೆ, ಚುಂಬನಗಳ ಅನಾಲಿಸಿಸ್! ಚಕೋರನಿಗೆ ತಕ್ಕ ಟಾಪಿಕ್. ಮೊನ್ನೆಯಿಂದ ಇದನ್ನ ಮೂರ್ನಾಕು ಸಾರಿ ಓದಿದೆ. ಬರಹ ಯಾಕೊ ಪೂರ್ಣವಾಗಿಲ್ಲ ಅಂತ ಪ್ರತೀ ಸಾರಿ ಅನ್ನಿಸ್ತು. ಇನ್ನೂ ಏನೊ ಬೇಕಿತ್ತು ಇದಕ್ಕೆ. ಅಥವಾ ಈ ಬರಹವೇ ನಮ್ಮನ್ನ ಹೆಚ್ಚು ಬೇಕಿತ್ತು ಅನ್ನಿಸುವ ಹಾಗೆ ಮಾಡಿದೆಯೊ ಏನೊ!
    ಟೀನಾ.

  2. ಅರೆ, ಚಕೋರ,
    ನಾನು ಹೇಳಿದ್ದು ಚಕೋರನಿಗೆ ಹಿಂದಿನಿಂದಲು ಜತೆಯಾಗಿ ಬಂದಂಥ ರಮ್ಯ, ತುಂಟ ಗುಣಗಳನ್ನ ನೆನೆಸಿಕೊಂಡು. ಚಕೋರ ಅಂತ ಹೆಸರಿಟ್ಟುಕೊಂಡು ಅದಕ್ಕೆ ತಕ್ಕ ಹಾಗೆ ಮಾತಾಡಿದೀರ ಅಂದೆ ಅಷ್ಟೆ. ನೀವ್ ನೋಡಿದ್ರೆ ವಯಲೆಂಟ್ ಚಕೋರ ಆಗೋ ಅಂದಾಜಲ್ಲಿದೀರಿ! 🙂
    -ಟೀನಾ.

Leave a reply to ಚಕೋರ ಪ್ರತ್ಯುತ್ತರವನ್ನು ರದ್ದುಮಾಡಿ