ಇನ್ನೊಬ್ಬ ನೊಬೆಲ್ “ಖಳ ಸಾಹಿತಿ”ಯ ತಪ್ಪೊಪ್ಪಿಗೆಯ ಮೆಲುಕು

ವಿ. ಎಸ್. ನೈಪಾಲ್ ಒಮ್ಮಿಂದೊಮ್ಮೆಲೆ ಸುದ್ದಿಯಲ್ಲಿದ್ದಾರೆ. ಬ್ಲಾಗುಗಳಲ್ಲಿ ಬರಹಗಳೂ, ವಾದಗಳೂ ನಡೆಯುತ್ತಿವೆ. ಈ ಸಂದರ್ಭದಲ್ಲಿ, ಹಳೆಯ ಕಿಡಿಯನ್ನು ಹೊತ್ತಿಸುವ ಉದ್ದೇಶದಿಂದ ಊದುಗೊಳವೆ ಹಿಡಿದಿದ್ದೇನೆ. ಇದು ಗುಂತರ್ ಗ್ರಾಸ್‍ರ ತಪ್ಪೊಪ್ಪಿಗೆಯ ಬಗ್ಗೆ.

ಅಗಸ್ಟ್ ೨೦೦೬ರಲ್ಲಿ, ಸಾಹಿತ್ಯ ಜಗತ್ತು ತಲ್ಲಣಗೊಂಡಿತು. ಸಂದರ್ಶನವೊಂದರಲ್ಲಿ ಗುಂತರ್ ಗ್ರಾಸ್ ತಾವು ಯುವಕರಾಗಿದ್ದಾಗ ವ್ಯಾಫ಼ೆನ್ಸ್-ಎಸ್‍ಎಸ್‍ನ ಸದಸ್ಯರಾಗಿದ್ದರೆಂದು ಬಹಿರಂಗಗೊಳಿಸಿದರು. ೬೦ ವರ್ಷಗಳ ದೀರ್ಘಕಾಲದ ನಂತರ ಯಾರಿಗೂ ಗೊತ್ತಿಲ್ಲದ ಈ ಸುದ್ದಿಯನ್ನು ನೀಡಿ ಗ್ರಾಸ್ ಎಲ್ಲರಿಗೂ ಶಾಕ್ ನೀಡಿದರು. ಕೋಲಾಹಲವೆದ್ದಿತು. ಗ್ರಾಸ್‍ರ ತಪ್ಪೊಪ್ಪಿಗೆಯ ಹಿನ್ನೆಯಲ್ಲಿ ಅವರ ಸಾಹಿತ್ಯವನ್ನೂ ವ್ಯಕ್ತಿವನ್ನೂ ಮರುವಿಶ್ಲೇಷಿಸುವ ಅಗತ್ಯವಿದೆಯೆಂದು ಎಷ್ಟೋ ಜನ ಪ್ರತಿಪಾದಿಸಿದರು. ಹಾಗೆಯೇ ಸಲ್ಮಾನ್ ರಶ್ದಿಯಂಥ ಘಟಾನುಘಟಿಗಳು ಗ್ರಾಸ್‍ರ ಬೆಂಬಲಕ್ಕೆ ನಿಂತರು. ಆವಾಗ ಕನ್ನಡ ಬ್ಲಾಗುಗಳಲ್ಲಿ ಇದರ ಬಗ್ಗೆ ಚರ್ಚೆಗಳಾದವೋ ಇಲ್ಲವೋ ಲಕ್ಷ್ಯದಲ್ಲಿಲ್ಲ, ಆದರೆ ನಾನೋದುತ್ತಿದ್ದ ಕೆಲ ಇಂಗ್ಲಿಶ್ ಬ್ಲಾಗುಗಳಲ್ಲಿ ರಭಸದ ಚರ್ಚೆಗಳಾದುವು. ೬೦ ವರ್ಷಗಳ ಕಾಲ ತನ್ನ ತಪ್ಪುಗಳನ್ನು ಮುಚ್ಚಿಟ್ಟುಕೊಂಡು, ನಮ್ಮೆಲ್ಲರ ಸಾಮೂಹಿಕ ಆತ್ಮಪ್ರಜ್ಞೆಯಂತೆ ಪೋಸು ಕೊಡುತ್ತಿದ್ದ, ನೈತಿಕತೆಯ ಅಧಿಕೃತ ವಕ್ತಾರನಂತೆ ಮಾತಾಡುತ್ತಿದ್ದ ಗ್ರಾಸ್ ಒಬ್ಬ ಹಿಪಾಕ್ರಿಟ್ ಎಂದು ಕೆಲವರು ಅವರನ್ನು ಜರಿದರು.

ಮುಂದೇನಾಯಿತೋ ಗೊತ್ತಿಲ್ಲ. ಗೊತ್ತಿದ್ದವರು ತಿಳಿಸಿ. ಅದಕ್ಕೂ ಮುಖ್ಯವಾಗಿ, ನೈಪಾಲ್ ಕೇಸಿನಲ್ಲಿ ನಿಮ್ಮ ಅಭಿಪ್ರಾಯ ಮಂಡಿಸಿದಂತೆ ಇದರ ಬಗೆಗೂ ನಿಮ್ಮ ಅಬಿಪ್ರಾಯಗಳನ್ನು ಹೇಳುತ್ತೀರಾ? ತಿಳಿದುಕೊಳ್ಳುವ ಆಸಕ್ತಿಯೂ ಇದೆ. ಅದೂ ಅಲ್ಲದೆ, ಇಂಥ ಸಂದರ್ಭಗಳಲ್ಲಿ ಆಗುವ ಗೊಂದಲ ತಳಮಳಗಳ ನೆಲೆ ಯಾವುದು, ವೈಯಕ್ತಿಕ, ಸಾಮಾಜಿಕ, ಲೇಖಕನ ಬದುಕು-ಬರಹಗಳ ಡೈಕಾಟಮಿ, ಇವೇ ಮೊದಲಾದ ಪ್ರಶ್ನೆಗಳಿಗೆ ಇನ್ನೂ ಹೆಚ್ಚಿನ ಸ್ಪಷ್ಟತೆ ಸಿಗಬಹುದು. (ಅಥವಾ ಗೊಂದಲ ಹೆಚ್ಚಾಗಬಹುದು.)

ಜೆ. ಅಲ್ಫ಼್ರೆಡ್ ಪ್ರುಫ಼್ರಾಕನ ಪ್ರೇಮ ಗೀತೆ (ಭಾಗ ೩, ಮುಗಿತಾಯ)

ಇದಕ್ಕೂ ಮೊದಲು, ಭಾಗ ೧ ಹಾಗೂ ಭಾಗ ೨.

ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಆ ಕಪ್ಪುಗಳು, ಮೊರಬ್ಬ, ಚಹಾಗಳ ನಂತರ,
ಪಿಂಗಾಣಿ ಕಪ್ಪು-ಬಸಿಗಳಲ್ಲಿ, ನಿನ್ನ ನನ್ನ ಬಗೆಗಿನ ಮಾತುಗಳಲ್ಲಿ,
ವಿಷಯದ ಕೊಂಡಿಯನ್ನು ಒಂದು ಮುಗುಳ್ನಗೆಯಿಂದ ಕಡಿದುಹಾಕುವುದು,
ಮೌಲಿಕವಾದುದಾಗುತ್ತಿತ್ತೇ,
ಇಡೀ ಬ್ರಹ್ಮಾಂಡವ ಹಿಂಡಿ ಚೆಂಡು ಮಾಡುವುದು,
ಮೈಮೇಲೆರಗುವ ಪ್ರಶ್ನೆಯತ್ತ ಉರುಳಿಸುವುದು,
“ನಾನು ಲೆಜ಼ಾರಸ್, ಸತ್ತವನೆದ್ದು ಬಂದಿದ್ದೇನೆ,
ಎಲ್ಲ ಹೇಳಲು ಮರಳಿ ಬಂದಿದ್ದೇನೆ, ನಿಮಗೆಲ್ಲ ಹೇಳಲು,” ಎಂದು ಬಿಡುವುದು,
ಅವಳ ತಲೆಗೆ ಇಂಬಿರಿಸಿ, “ನಾನು ಹೇಳಿದರರ್ಥ
ಅದಲ್ಲ, ಅದಲ್ಲವೇ ಅಲ್ಲ,” ಎಂದು ಹೇಳಬೇಕಾಗಿದ್ದಲ್ಲಿ,
ಇದೆಲ್ಲ ಬೇಕಾಗಿತ್ತೆ?

ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಅರ್ಥಪೂರ್ಣವಾದುದಾಗುತ್ತಿತ್ತೇ?
ಸೂರ್ಯಾಸ್ತಗಳು, ಹಿತ್ತಿಲುಗಳು, ನೀರು ಚಿಮುಕಿಸಿದ್ದ ಬೀದಿಗಳು,
ಕಾದಂಬರಿಗಳು, ಚಹಾಕಪ್ಪುಗಳು, ಫರಶಿಯುದ್ದಕ್ಕೂ ತೆವಳುವ
ಸ್ಕರ್ಟುಗಳು —
ಇವು, ಹಾಗೂ ಮತ್ತಿನ್ನೆಷ್ಟೋ ಸಂಗತಿಗಳ ನಂತರ?
ನನಗನ್ನಿಸ್ಸಿದ್ದನ್ನು ಯಥಾರ್ಥ ಹೇಳುವುದು ಸಾಧ್ಯವೇ ಇಲ್ಲ!
ಆದರೆ ಒಂದು ಮಾಯಾವಿ ಲಾಟೀನು ಪರದೆಯ ಮೇಲೆ ನರನಾಡಿಗಳ ಚಿತ್ತಾರ ಎರಚಿದಂತೆ:
ತಲೆದಿಂಬನ್ನಿರಿಸಿ, ಅಥವಾ ಶಾಲನ್ನು ಕಿತ್ತೆಸೆದು,
ಕಿಟಕಿಯತ್ತ ಮುಖ ತಿರುಗಿಸಿ, “ಅಲ್ಲ, ನಾನು ಹೇಳಿದ್ದರ ಅರ್ಥ
ಅದಲ್ಲ. ಅದಲ್ಲವೇ ಅಲ್ಲ,” ಎಂದು ಹೇಳಿದ್ದರೆ,
ಆವಾಗ ಅದು ಸರಿಹೋಗುತ್ತಿತ್ತೇ?

………..

ಅಲ್ಲ! ನಾನು ಪ್ರಿನ್ಸ್ ಹ್ಯಾಮ್ಲೆಟ್ ಅಲ್ಲ, ಅದು ನನ್ನ ಸ್ವಭಾವವೇ ಅಲ್ಲ;
ನಾನೊಬ್ಬ ಸೇವಕ, ದೇವದೂತ, ಹೇಳಿದಷ್ಟು ಮಾಡುವವ,
ಪೋಷಿಸಿ ಮುಂದುವರಿಸುವುದು, ಒಂದೆರಡು ದೃಶ್ಯಗಳ ಮೊದಲು ಬರುವುದು,
ರಾಜಕುವರನಿಗೆ ಸಲಹೆ ಕೊಡುವುದು; ಸುಲಭ ಸಲಕರಣೆ, ಸಂಶಯವಿಲ್ಲ,
ಗೌರವ ಸೂಚಿಸುತ್ತ, ಕೃತಕೃತ್ಯೆಯಿಂದ ಉಪಯೋಗಕ್ಕೆ ಬರುವವ,
ಮುತ್ಸದ್ದಿ, ಜಾಗರೂಕ, ಎಲ್ಲವೂ ಕೂಲಂಕುಷ,
ಭಾಷ್ಕಳಪಂತ, ಆದರೆ ತುಸು ಸ್ಥೂಲ, ನಿಧಾನಿ
ಕೆಲವೊಮ್ಮೆ ನಿಜಕ್ಕೂ ಹಾಸ್ಯಾಸ್ಪದ
ಮತೊಮ್ಮೊಮ್ಮೆಯಂತೂ ಪೂರಾ ವಿದೂಷಕ.

ನನಗೆ ವಯಸ್ಸಾಗುತ್ತದೆ… ಮುದುಕನಾಗುತ್ತೇನೆ…
ಕೆಳಗೆ ಮಡಿಕೆ ಹಾಕಿ ಪ್ಯಾಂಟು ತೊಡುತ್ತೇನೆ.

ಕೂದಲು ಹಿಂದಕ್ಕೆ ಬಾಚಲೆ? ಪೀಚ್ ತಿನ್ನುವ ಸಾಹಸ ಮಾಡಲೆ?
ನಾನು ಬಿಳಿಯ ಫ್ಲ್ಯಾನೆಲ್ ಟ್ರೌಸರ್ಸ್ ತೊಟ್ಟು, ಬೀಚ್ ಮೇಲೆ ಓಡಾಡುವೆ.
ನಾನು ಮತ್ಸ್ಯಕನ್ನಿಕೆಯರ ಹಾಡು ಪ್ರತಿಹಾಡುಗಳನ್ನು ಕೇಳಿರುವೆ.

ನನ್ನ ಸಲುವಾಗಿ ಅವರು ಹಾಡುವರೆಂದು ನನಗನ್ನಿಸುವುದಿಲ್ಲ.

ಅವರನ್ನು ನೋಡಿದ್ದೇನೆ ಅಲೆಗಳ ಸವಾರಿ ಮಾಡುತ್ತ ಸಮುದ್ರದತ್ತ ಹೋಗುವಾಗ
ಗಾಳಿ ಬೀಸಿ ನೀರನ್ನು ಕಪ್ಪುಬಿಳುಪಾಗಿ ಹರಡುವಾಗ
ಅಲೆಗಳ ಬೆಳ್ಳನೆಯ ಕೂದಲನ್ನು ಹಿಂದೆ ಹಿಂದೆ ಹಿಕ್ಕುವಾಗ.

ತಿರುಗಿದ್ದೇವೆ ನಾವು ಸಮುದ್ರದ ಅನೇಕ ಕಕ್ಷೆಗಳಲ್ಲಿ
ಕೆಂಪು ಕಂದು ಜೊಂಡಿನ ಮಾಲೆ ಧರಿಸಿರುವ ಸಾಗರಕನ್ನಿಕೆಯರ ಸುತ್ತಲೂ
ಮನುಷ್ಯ ದನಿಗಳು ನಮ್ಮನ್ನೆಬ್ಬಿಸುವ ತನಕ, ಮುಳುಗಿಸುವ ತನಕ.

ಪಾಲ್ ಅರ್ಡೋಶ್ ಎಂಬ ಪ್ರಮೇಯಗಳ ಮಶೀನು

ಪಾಲ್ ಅರ್ಡೋಶ್ (Paul Erdös) ನೆನಪಾದ ಒಮ್ಮೆಲೆ. ಈಗ ಒಂದು ಕಮೆಂಟ್ ಬರೆಯುತ್ತಿದ್ದಾಗ ಒಂದು ಕೋಟ್ ನೆನಪಾಯಿತು: “A mathematician is a machine for turning coffee into theorems.” ಇದು ಅರ್ಡೋಶ್‍ನ ಗೆಳೆಯ ಹಾಗೂ ಸಹಸಂಶೋಧಕ, ಇನ್ನೊಬ್ಬ ಗಣಿತಜ್ಞ, ಆಲ್ಫ಼್ರೆಡ್ ರೇಯ್ನಿ ಹೇಳಿದ ಮಾತು. ಬಹುತೇಕ ಅರ್ಡೋಶ್‍ನ ಬಗ್ಗೆಯೇ ಹೇಳಿದ ಮಾತಿದು.

ಸುಮಾರು ೧೫೦೦ರಷ್ಟು ಪೇಪರುಗಳನ್ನು ಪ್ರಕಟಿಸಿದ ಅರ್ಡೋಶ್, ಶ್ರೇಷ್ಠ ಗಣಿತಜ್ಞನಷ್ಟೇ ಅಲ್ಲದೆ ಅತ್ಯಂತ ವಿಲಕ್ಷಣ ಮನುಷ್ಯನಾಗಿದ್ದ. ಬಹು ಕುಶಾಲಿನ ವರ್ಣರಂಜಿತ ವ್ಯಕ್ತಿತ್ವ ಅವನದು. ಅವನ ಆಸ್ತಿಯೆಂದರೆ ಒಂದು ಸೂಟ್‍ಕೇಸ್‍ನಲ್ಲಿ ತುಂಬಿಸಬಹುದಾದಷ್ಟು. ಅದನ್ನು ತುಂಬಿಸಿಕೊಂಡು ಹೊರಟನೆಂದರೆ ನೆನಪಾದ ಯಾವುದೋ ಸಂಶೋಧಕನ ಮನೆಯೆದುರು ಬಂದು ಪ್ರತ್ಯಕ್ಷನಾಗುತ್ತಿದ್ದನಂತೆ. ಬಂದವನೆ, “My brain is open,” ಎಂದು ಉದ್ಘೋಷಿಸಿ, ಕೆಲಸಕ್ಕೆ ತೊಡಗುತ್ತಿದ್ದ. ಆ ಗೆಳೆಯನಲ್ಲೆ ವಾಸ್ತವ್ಯ ತಿಂಗಳುಗಟ್ಟಲೆ. ಹತ್ತಾರು ಪೇಪರುಗಳನ್ನು ಬರೆದೆಸೆದನೆಂದರೆ ತಾತ್ಕಾಲಿಕವಾಗಿ ಅಲ್ಲಿನ ಋಣ ತೀರಿತು. ಮುಂದೆ ಇನ್ನೊಬ್ಬನ ಮನೆ. “ಯಾರಲ್ಲಿಗೆ ಬರಲಿ,” ಎಂದು ಕೇಳಿ ಅವರಲ್ಲಿಗೆ ಹೋಗಿ ಬಾವುಟ ಹಾರಿಸುತ್ತಿದ್ದ. ತನ್ನ ಈ ಚಾಳಿಯ ಬಗ್ಗೆ ಅವನು ಹೇಳುತ್ತಿದ್ದುದು, “Another roof, another proof!”.

ಯಾವಾಗಲೂ ’ದ ಬುಕ್’ ಬಗ್ಗೆ ಮಾತಾಡುತ್ತಿದ್ದ. ದೇವರನ್ನು ನಂಬದಿದ್ದರೆ ಬಿಡು, ದ ಬುಕ್‍ನಲ್ಲಿ ಮಾತ್ರ ವಿಶ್ವಾಸವಿಡು. ಆ ಪುಸ್ತಕದ ತುಂಬ ಅತ್ಯಂತ ಶ್ರೇಷ್ಠ ಹಾಗೂ ಸುಂದರ ಪ್ರುಫ಼ುಗಳಿವೆಯೆಂದು ಸಾಧಿಸುತ್ತಿದ್ದ. ದೇವರು ಒಬ್ಬ ಧೂರ್ತ, ನನಗೆ ಒಳ್ಳೊಳ್ಳೆಯ ಪ್ರೂಫ಼ುಗಳನ್ನು ತೋರಿಸದೆ ಅಡಗಿಸಿಡುತ್ತಾನೆ, ಎಂದು ಗೊಣಗುತ್ತಿದ್ದ. ಯಾವುದಾದರೂ ಸುಂದರ ಪ್ರೂಫ಼ನ್ನು ನೋಡಿದರೆ, “ಹಾಂ! ಇದು ನೋಡು, ದ ಬುಕ್‍ನಿಂದ ಬಂದಿದೆ!” ಎಂದು ಉದ್ಗರಿಸುತ್ತಿದ್ದ.

ಗಣಿತ ಒಂದು ಸಾಮಾಜಿಕ ಚಟುವಟಿಕೆ ಎಂದು ಧೃಢವಾಗಿ ನಂಬಿದ್ದ ಅವನು, ಐದಾರುನೂರು ಜನ ಸಂಶೋಧಕರ ಜೊತೆ ಕೆಲಸ ಮಾಡಿದ್ದ. ಹೋದಲ್ಲಿ ಬಂದಲ್ಲೆಲ್ಲ ಅವನ ಸಂಗಾತಿಗಳೆ. ಹೀಗಾಗಿ ಅವರು ಅರ್ಡೋಶ್ ನಂಬರ್‌ನಿಂದ ಗುರುತಿಸಿಕೊಳ್ಳತೊಡಗಿದರು. ಖುದ್ದು ಅರ್ಡೋಶ್‍ನ ಅರ್ಡೋಶ್ ಸಂಖ್ಯೆ ೦; ಅವನ immediate collaboratorಗಳ ಸಂಖ್ಯೆ ೧; ಅವರ ಕೊಲ್ಯಾಬೊರೇಟರ್‌ಗಳ ಸಂಖ್ಯೆ ೨; ಹೀಗೆ. ಅವನು ಉತ್ತುಂಗದಲ್ಲಿದ್ದಾಗ ಜಗತ್ತಿನ ಯಾವುದೇ ವಿಜ್ಞಾನಿ ೮ಕ್ಕಿಂತ ಹೆಚ್ಚಿನ ದೂರದಲ್ಲಿರಲಿಲ್ಲವಂತೆ.

ಹೀಗಿದ್ದ ಅರ್ಡೋಶ್ ೧೯೯೬ರಲ್ಲಿ ಒಂದು ಕಾನ್ಫ಼ರನ್ಸ್‍ನಲ್ಲಿದ್ದಾಗಲೆ ಹೃದಯಾಘಾತದಿಂದ ತೀರಿಕೊಂಡ.

ಇನ್ನಷ್ಟು ’ಏನು ಮಾಡಬಹುದು?’

’ಏನು ಮಾಡಬಹುದು’ ಎಂದು ಕೇಳಿದ್ದಾರೆ ಟೀನಾ. ಒಂದಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಅವರೆಲ್ಲ ಮಾತಾಡಿ ಸುಮ್ಮನಾಗದೆ ಏನಾದರೂ ಮಾಡಬೇಕೆಂದು ನಿರ್ಧರಿಸಿದ್ದಾರೆ. ಬಹುಶ: ಅವರ brainstorming sessionನ ನಂತರ ಆ ಪ್ರಶ್ನೆಗೆ ಇನ್ನಷ್ಟು ಉತ್ತರಗಳು ಸಿಗಬಹುದು.

ಈ ವಿಷಯದಲ್ಲಿ ನನಗೆ ನೇರ ಅನುಭವವಂತೂ ಇಲ್ಲ. ನನ್ನ girlfriend (ಅವಳನ್ನು S ಎಂದು ಕರೆಯೋಣ) ಒಮ್ಮೊಮ್ಮೆ ಅವಳಿಗಾದ ಇಂಥ ಅನುಭವಗಳನ್ನು ಹೇಳುತ್ತಾಳೆ. ಆದರೆ ಅದೃಷ್ಟವಶಾತ್, ಆಫೀಸಿಗೆ ಹೋಗಿ ಬರುವುದು ಕ್ಯಾಬಿನಲ್ಲಿ, ಮತ್ತು ಉಳಿದ ಹೊತ್ತು ಹೆಚ್ಚಾಗಿ ಅವಳು ಒಬ್ಬಳೆ ದೂರದೂರ ಓಡಾಡುವ ಪ್ರಸಂಗಗಳು ಬರದಿರುವುದರಿಂದ ಒಟ್ಟಾರೆಯಾಗಿ eve teasing ಸಮಸ್ಯೆಯ ಅನುಭವ ಕಡಿಮೆಯೇ. ಆದರೆ ಎಷ್ಟೋ ಸಲ ಆಟೋದವರ ಜೊತೆ ನನಗಾಗುವ ಕಹಿ ಅನುಭವಗಳು, ಅವರ ಕೆಟ್ಟ ನಡವಳಿಕೆ, blatant ಮೋಸ (ಹೆಚ್ಚಾಗಿ ಕುಡಿದವರು ಮಾಡುವುದು ಇದನ್ನ), ’ನಾನು ಮೋಸ ಮಾಡುತ್ತಿದ್ದೇನೆ, ಏನು ಮಾಡ್ತೀಯೋ ಮಾಡು,’ ಎನ್ನುವ ಅಮಾನುಷ ವರ್ತನೆ — ಇವೆಲ್ಲವನ್ನು ನಾನೂ ಅನುಭವಿಸಿದ್ದೇನೆ, ಬೇರೆಯವರೂ ಅನುಭವಿಸಿರುತ್ತಾರೆ. ಭಯ ಅಪನಂಬಿಕೆಗಳಿಂದ ಕತ್ತಲಾದ ಮೇಲೆ ಆಟೋನಲ್ಲಿ ಓಡಾಡಬೇಡ ಎಂದು ಎಸ್‍ಗೂ ಹೇಳುತ್ತೇನೆ. ಅದೆಷ್ಟೋ ಸಲ ನನ್ನೆದುರಿಗೆ ನಾಚಿಕೆಗೆಟ್ಟ ವರ್ತನೆ ತೋರುತ್ತಿರುವ ಆಟೋದವರನ್ನೋ, ಸರಕಾರಿ ಕಚೇರಿಯ ನೌಕರರನ್ನೋ ಸುಟ್ಟು ಹಾಕಬೇಕೆನ್ನಿಸುವಷ್ಟು ಕೋಪವೂ ಬರುತ್ತದೆ.

ಆದರೆ ಇದ್ಯಾವುದೂ ಹೆಣ್ಣುಮಕ್ಕಳು ಅನುಭವಿಸುವ humiliationನ್ನಿನ ಹತ್ತಿರಕ್ಕೂ ಬರುವುದಿಲ್ಲ; ಅದನ್ನು ನಾನು ಊಹಿಸಬಲ್ಲೆನಷ್ಟೆ. ಆದರೂ ಒಂದಷ್ಟು ಮಾತಾಡಬೇಕೆನ್ನಿಸುತ್ತದೆ.

ಇದು ಜನರಲ್ ಸಮಸ್ಯೆಯೊಂದರ ನಿರ್ದಿಷ್ಟ ಉಪಸಮಸ್ಯೆ ಅನ್ನಿಸುತ್ತದೆ. ಆ ಸಮಸ್ಯೆಗೇನು ಹೆಸರು ಕೊಡುವುದು ಎಂದು ಗೊತ್ತಿಲ್ಲ, ಆದರೆ ಅದರ ಗುಣಲಕ್ಷಣಗಳು ಎದ್ದು ಕಾಣುತ್ತವೆ: ಸಾಮಾಜಿಕ ಸಂವೇದನೆಯ ತೀವ್ರ ಅಭಾವ, ಮತ್ತೊಂದು ಜೀವದ ಬಗ್ಗೆ ಕಿಮ್ಮತ್ತಿಲ್ಲದಿರುವುದು, ನಾನು ಸೇವೆ ಸಲ್ಲಿಸುತ್ತಿಲ್ಲ, ಬದಲಿಗೆ ಏನನ್ನೋ ದಯಪಾಲಿಸುತ್ತಿದ್ದೇನೆ ಎಂಬಂಥ ವರ್ತನೆ, ಹೀಗೆ. ಇದನ್ನು ಎಲ್ಲೆಲ್ಲೂ ನೋಡುತ್ತೇವೆ: ಆಟೋ ಡ್ರೈವರುಗಳಲ್ಲಿ, ಆಫೀಸುಗಳಲ್ಲಿ, ಬಸ್ಸುಗಳಲ್ಲಿ, ಹೊಟೆಲುಗಳಲ್ಲಿ, ಪೋಲೀಸರಲ್ಲಿ (ಆಹಾಹಾ), ಬಸ್ಸುಗಳೊಳಗಿಂದ ತಂಬಾಕು ಉಗುಳುವವರಲ್ಲಿ, ಕ್ಯೂನಲ್ಲಿ ನಿಲ್ಲದೆ ಕಂಡಕಂಡಲ್ಲಿ ನುಗ್ಗಿ ರಂಪ ಎಬ್ಬಿಸುವವರಲ್ಲಿ.

ಇದಕ್ಕೇನು ಕಾರಣಗಳು? ಆರ್ಥಿಕ ಅಭದ್ರತೆಯೆ, ನಮ್ಮ ಮುಕ್ತವಲ್ಲದ ಸಮಾಜದ ಸಂದರ್ಭವೆ, ಶಿಕ್ಷಣದ ತೀವ್ರ ಕೊರತೆಯೆ, ಸೀಮಿತ ಸವಲತ್ತುಗಳಿಗಿರುವ ತೀವ್ರ ಬಡಿದಾಟ, ಕಾನೂನು ಸಹಾಯಕ್ಕೆ ಬಾರದಿರುವುದು — ಎಲ್ಲವೂ ಹೌದು. ಹಾಗೆಯೆ ಆಟೋದವರ ಮೋಸ ಅಭದ್ರತೆಯಿಂದ ಹುಟ್ಟಿದರೆ, ಸರಕಾರಿ ನೌಕರರ ಮೋಸ ಅತಿಭದ್ರತೆಯಲ್ಲಿ ಹುಟ್ಟುವ ವಿಪರ್ಯಾಸಗಳೂ ಇವೆ.

ನನಗೆ ಜನರ ಬಗ್ಗೆ ನಂಬಿಕೆ ಹೆಚ್ಚು. ಬಹುತೇಕ ಮಂದಿ ಒಳ್ಳೆಯವರು; ಮೋಸ ಮಾಡುವುದಿಲ್ಲ; ತಮ್ಮ ಧಂದೆಗಳನ್ನು ಮಾಡಿಕೊಂಡು ಹೋಗುತ್ತಿದ್ದಾರಷ್ಟೆ; ಸಲ್ಲದ ಆತಂಕ, alarm ಬೇಡ ಎಂದು ಯಾವಾಗಲೂ ವಾದಿಸುತ್ತಿರುತ್ತೇನೆ. ನನ್ನ ಥಿಯರಿ ಹೀಗಿದೆ. ಪ್ರತಿ ಮನುಷ್ಯನಲ್ಲೂ ಬಹುತೇಕ ಸಾಮಾನ್ಯ ಗುಣಗಳಿವೆ. ಅಲ್ಪ ಅತಿ ಒಳ್ಳೆಯ ಗುಣಗಳಿವೆ. ಹಾಗೆಯೇ ಕೆಲವು ಅತಿ ಕೆಟ್ಟ ಗುಣಗಳಿವೆ. (ಗಣಿತದಲ್ಲಿ ಆಸಕ್ತಿಯಿದ್ದವರು ಮನುಷ್ಯ ಗುಣಗಳ  distribution ಒಂದು Gaussian distributionನ ಆಕಾರ ಪಡೆದುಕೊಳ್ಳುತ್ತದೆ ಎಂದು ಗಮನಿಸಬಹುದು.) ಇದನ್ನೇ ವಿಸ್ತರಿಸಿದರೆ, ಒಂದು ಜನ ಸಮೂಹವನ್ನು ತೊಗೊಂಡರೆ, ಅದರಲ್ಲಿ ಬಹುತೇಕ ಜನರು ಸಾಮಾನ್ಯರಾಗಿರುತ್ತಾರೆ, ಕೆಲವರು ಅತಿ ಒಳ್ಳೆಯವರಾಗಿರುತ್ತಾರೆ, ಉಳಿದ ಕೆಲವರು ಅತಿ ಕೆಟ್ಟವರಾಗಿರುತ್ತಾರೆ. ಇದನ್ನೇ ಇನ್ನೂ ವಿಸ್ತರಿಸಿ ಇಡೀ populationಗೆ ಆಪಾದಿಸಬಹುದು. (ಮತ್ತೆ ಗಣಿತದಲ್ಲಿ ಆಸಕ್ತಿಯಿದ್ದವರು, ಇದು Central Limit Theoremನ ಅನ್ವಯ ಎಂದು ಗುರುತಿಸಬಹುದು.) ಇದರ ಪರಿಣಾಮ ಏನಪ್ಪಾ ಎಂದರೆ, ಒಂದು ಜನಸಮುದಾಯದಲ್ಲಿಂದ ಯಾದೃಚ್ಛಿಕವಾಗಿ ವ್ಯಕ್ತಿಯೊಬ್ಬಳನ್ನು ಆಯ್ಕೆ ಮಾಡಿದರೆ, ಅವಳು ಅತಿ ಒಳ್ಳೆಯವಳೂ ಅಲ್ಲದ, ಅತಿ ಕೆಟ್ಟವಳೂ ಅಲ್ಲದ, ನಮ್ಮಂತೆ ಸಾಮಾನ್ಯಳಾಗಿರುವ ಸಂಭವನೀಯತೆ ಬಹಳವಿರುತ್ತದೆ (ಸುಮಾರು ೬೮%). ಹಾಗೆಯೇ ಅವಳ ಜೊತೆ ನಾವು ದೈನಂದಿನ ವ್ಯವಹಾರ ಮಾಡುವ ಸಂಭವವೂ ಹೆಚ್ಚಿರುತ್ತದೆ.

The proof of the pudding is in the eating, ಎನ್ನುವ ಹಾಗೆ ನಾವು ಇದನ್ನೆಲ್ಲ ಯೋಚಿಸದೇ ದಿನನಿತ್ಯ ಮಾಡುತ್ತಲೆ ಇರುತ್ತೆವೆ. ಗೊತ್ತಿರುವ, ಗೊತ್ತಿಲ್ಲದ ಅನೇಕ ವ್ಯಕ್ತಿಗಳ ಜೊತೆಗೆ ಅರ್ಥಿಕ ವ್ಯವಹಾರಗಳನ್ನೋ, ವೈಯಕ್ತಿಕ ಹರಟೆಯನ್ನೋ ನಡೆಸುತ್ತೇವೆ. ಆದರೆ ಕೆಲವು ನಿರ್ದಿಷ್ಟ ರೀತಿಯ ನಮೂನೆಗಳನ್ನು ತೊಗೊಂಡಾಗ ನಾನು ಮೇಲೆ ಹೇಳಿದ್ದಕ್ಕೆ ಪೂರಕವಲ್ಲದ ರೀತಿ ನಮ್ಮ ನಡವಳಿಕೆಯಿರುತ್ತದೆ. ಉದಾಹರಣೆಗೆ – ನಿಮ್ಮ ಮನೆಯ ಸುತ್ತಮುತ್ತಲಿನ ಜನರನ್ನೆಲ್ಲ ಹಿಡಿದು ಒಂದೆಡೆ ನಿಲ್ಲಿಸಿ ವಿಶ್ಲೇಷಿಸಿದರೆ ಆ ನಾನು ಮೇಲೆ ಹೇಳಿದ ಲಕ್ಷಣಗಳನ್ನು ತೋರ್ಪಡಿಸುತ್ತಾರೆಯೇ, ಎಂದು ನಾನು ಕೇಳಿದರೆ, ನಿಮ್ಮ ಉತ್ತರ ಹೌದೆಂದಾಗಿರುತ್ತದೆ. ಈಗ ನಿಮ್ಮ ಓಣಿಯ ಕೊನೆಯಲ್ಲಿರುವ ಆಟೊ ಸ್ಟ್ಯಾಂಡಿನ ಆಟೊ ಡ್ರೈವರ್‌ಗಳ ಗುಂಪನ್ನು ನೋಡಿ. ಆ ಗುಂಪಿನ ಬಗೆ ನಮಗೆ ಅದೇ ನಂಬಿಕೆ ಇದೆಯೆ? ಇಲ್ಲ ಅನ್ನಿಸುತ್ತದೆ. ಯಾವುದೋ ಯಾದೃಚ್ಛಿಕ ಆಟೊದವನು ನಮ್ಮ ಮುಂದೆ ಬಂದು ನಿಂತರೆ, ಅವನನ್ನು ನಾವು ನಂಬಲು ಸಾಧ್ಯವಾಗಬೇಕಲ್ಲವೆ? ಸಾಧ್ಯವಾಗುವುದಿಲ್ಲ. ಹಾಗೆಯೇ ಎಲ್ಲ ಪೋಲೀಸರು ದುಡ್ದು ತಿನ್ನುತ್ತಾರೆ ಎಂಬ generalisation ತಪ್ಪೆನ್ನಿಸುವುದಿಲ್ಲ. ಹೀಗೆ ಕೆಲವು ರೀತಿಯ ಜನರ ಜೊತೆ ವ್ಯವಹರಿಸುವಾಗ ನಾವು counter-intuitive ಆಗಿ ವರ್ತಿಸುವುದು ನಮಗೆ ಸಹಜವೆ ಅಥವಾ ನಾವು ರೂಢಿಸಿಕೊಂಡಿರುವುದೆ ಎಂದು ಒಮ್ಮೊಮ್ಮೆ ನನಗೆ ಗೊಂದಲವಾಗುತ್ತದೆ. ಮತ್ತು ಈ ಥರದ ಅಪನಂಬಿಕೆ, ಅಗೌರವಗಳು ಕೂಡ ಆ ರೀತಿಯ ಜನರ ವರ್ತನೆಗಳನ್ನು ಸ್ವಲ್ಪಮಟ್ಟಿಗೆ ರೂಪಿಸುತ್ತವೇನೋ ಅನ್ನಿಸುತ್ತದೆ. ಉದಾಹರಣೆಗೆ – ಪೋಲೀಸ್ ಕಾನ್‍ಸ್ಟೆಬಲ್‍ಗಳು ಜನರ ಜೊತೆ ಮಾತನಾಡುವ ರೀತಿ, ಅವರ ಮೇಲಧಿಕಾರಿಗಳು ಅವರ ಜೊತೆ ಮಾತನಾಡುವ ರೀತಿಯನ್ನೇ ಪ್ರತಿಫಲಿಸುತ್ತದೆ.

ಹೆಚ್ಚಾಗಿ ಸಿಟಿಟ್ಯಾಕ್ಸಿಯ ಡ್ರೈವರುಗಳೇಕೆ ಆಟೊದವರ ಹಾಗೆ ವರ್ತಿಸುವುದಿಲ್ಲ? ಅವರು ಹೆಚ್ಚು ಸುಶಿಕ್ಷಿತರಾಗಿರುವುದು ಒಂದು ಕಾರಣವಿರಬಹುದು; ಅದು ದೊಡ್ದ ಸಂಘಟನೆ ಆಗಿರುವುದು ಇನ್ನೊಂದು ಕಾರಣವಿರಬಹುದು; ಆರ್ಥಿಕವಾಗಿಯೂ ಅವರಿಗೆ ಭದ್ರತೆ ಹೆಚ್ಚು. ಹಿಂದೊಮ್ಮೆ ಪೋಲೀಸರಿಗೆ ಜನರೊಟ್ಟಿಗೆ ಸರಿಯಾಗಿ ವ್ಯವಹರಿಸುವ ನಿಟ್ಟಿನಲ್ಲಿ ಏನೋ ತರಬೇತಿಗಳು ನಡೆಯುತ್ತಿದ್ದುದನ್ನು ಕೇಳಿದಂತೆ ನೆನಪು. ಆ ತರದ ಪ್ರಯತ್ನಗಳಾಗಬೇಕು. ಆದರೆ ಅದಕ್ಕಂಟಿಕೊಂಡಂತೆ ಸ್ಪಷ್ಟ ಪ್ರತಿಫಲವೇನಾದರೂ ಇರಬೇಕು. ಒಳ್ಳೆಯ ಮನೋಭಾವ, ವ್ಯವಹಾರ ಕೌಶಲ ಇರುವಂಥ ಆಟೊದವರಿಗೆ ಸರ್ಟಿಫಿಕೇಶನ್ ಕೊಡಬಹುದು. ಆಟೊದ ಹೊರಮೈಗೆ ಎದ್ದು ಕಾಣುವಂತೆ ಆ ಫಲಕ ಇದ್ದರೆ, ಹೆಚ್ಚು ಜನ ಅಂಥ ಆಟೊಗಳಲ್ಲಿ ಹೋಗಬಯಸುತ್ತಾರೆ. (ನಕಲಿ ಫಲಕಗಳನ್ನು ಹಾಕಿಕೊಂಡರೆ ಕಠಿಣ ಶಿಕ್ಷೆಯನ್ನು ತಪ್ಪದೆ ಕೊಡಬೇಕು.) ಇದರಿಂದ ಮೂಲದಲ್ಲಿ ಕರಪ್ಶನ್ ಶುರುವಾಗಬಹುದು; ಆದರೆ ಅದನ್ನು ತಡೆಹಿಡಿಯಬಹುದು.

—-

ಹೆಣ್ಣುಮಕ್ಕಳು ಪೆಪ್ಪರ್ ಸ್ಪ್ರೇ ಇಟ್ಟುಕೊಂಡು ಓಡಾಡುತ್ತಿರುವ ಸುದ್ದಿಯನ್ನು ನಾನೂ ಕೇಳಿದ್ದೇನೆ. ಆದರೆ ಅದನ್ನು ಉಪಯೋಗಿಸಿದ ಸುದ್ದಿಗಳನ್ನು ನಾನು ಕೇಳಿದಂತಿಲ್ಲ. ಒಟ್ಟಾರೆಯಾಗಿ, ಹೆಣ್ಣುಮಕ್ಕಳು ಶೋಷಣೆಗೊಳಗಾದಾಗ ಮಾಧ್ಯಮಗಳಲ್ಲಿ ಸಿಗುವ ಸಮಯ ಮತ್ತು ಜಾಗ, ಅವರು ಆತ್ಮರಕ್ಷಣೆ ಮಾಡಿಕೊಂಡಾಗ ಸಿಗುತ್ತಲಿದೆಯೆ? ನನಗೆ ಸಂಶಯವಿದೆ. ಅಥವಾ ಅಂಥ ಪ್ರಸಂಗಗಳೆ ಕಡಿಮೆಯೋ? ಅದೂ ಅಲ್ಲದೆ, ನನ್ನನ್ನು ಕಾಡುವ ಇನ್ನೊಂದು ಮುಖ್ಯ ಪ್ರಶ್ನೆಯೆಂದರೆ, ಪೆಪ್ಪರ್ ಸ್ಪ್ರೇ ಅಥವಾ ಮತ್ತೆನೋ ಇಟ್ಟುಕೊಳ್ಳುವುದು ಸುಲಭ; ಅದನ್ನು ಉಪಯೋಗಿಸುವ ಬಗೆ ಹೆಣ್ಣುಮಕ್ಕಳಿಗೆ ಗೊತ್ತಿದೆಯೇ? ಸಂದರ್ಭ ಬಂದಾಗ ಒಮ್ಮಿಂದೊಮ್ಮೆಲೆ ದೆವ್ವ ಹೊಕ್ಕವರ ಹಾಗೆ ಪೆಪ್ಪರ್ ಸ್ಪ್ರೇ ಎರಚಿಬಿಡುವುದು ಎಷ್ಟು ಜನರಿಗೆ ಸಾಧ್ಯ? ಬಹುತೇಕ ಮಂದಿಗೆ ಇದು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆಯಷ್ಟೆ ಅಲ್ಲ, ಆಶಯ ಕೂಡ. ಬಹುಶ: ಇಂಥ ತರಬೇತಿಗಳೂ ಬೇಕು. ಆತ್ಮರಕ್ಷಣೆ ನಮ್ಮ ಹಕ್ಕು. ಆದರೆ ನಾವು ಉಪಕರಣಗಳನ್ನು ಉಪಯೋಗಿಸುವಾಗ restraint ಬೇಕು, ಚಾಲಾಕುತನ ಬೇಕು. ಅದಕ್ಕೆ ತರಬೇತಿಯ ಅಗತ್ಯವಿದೆ ಎಂದು ನನ್ನ ನಂಬಿಕೆ.

ಜೆ. ಆಲ್ಫ್ರೆಡ್ ಪ್ರುಫ್ರಾಕ್‍ನ ಪ್ರೇಮ ಗೀತೆ (ಭಾಗ ೨)

ಓದಿರದವರು ಇದರ ಭಾಗ ೧ಕ್ಕೆ ಇಲ್ಲಿ ಹೋಗಿ.

ಯಾಕೆಂದರೆ ಇವರೆಲ್ಲ ನನಗೆ ಈಗಾಗಲೆ ಗೊತ್ತು, ಎಲ್ಲವೂ ಗೊತ್ತು:
ಸಂಜೆಗಳು, ನಸುಕುಗಳು, ಅಪರಾಹ್ಣಗಳು ಎಲ್ಲ ಗೊತ್ತು
ನನ್ನ ಬಾಳುವೆಯನ್ನು ಕಾಫೀ ಚಮ್ಮಚೆಗಳಿಂದ ಅಳೆದು ಸುರಿದಿದ್ದೇನೆ;
ದೂರದ ರೂಮಿನಿಂದ ಬರುತ್ತಿರುವ ಸಂಗೀತದಡಿಯಲ್ಲಿ
ನೆಲಕ್ಕಚ್ಚುತ್ತಿರುವ ದನಿಗಳ ಕೊನೆಯುಸಿರೂ ನನಗೆ ಗೊತ್ತು.
ಹೀಗಿರುವಾಗ ಹೇಗೆ ಮುಂದರಿಯಲಿ?

ಆ ಕಣ್ಣುಗಳೂ ನನಗೆ ಗೊತ್ತು, ಅವೆಲ್ಲವೂ –
ಎಲ್ಲರನ್ನೂ ಸೂತ್ರಬದ್ಧ ನುಡಿಗಟ್ಟಿನಿಂದ ಕಟ್ಟಿಹಾಕುವಂಥ ಕಣ್ಣುಗಳು,
ಹೀಗೆ ನಾನೊಂದು ಸೂತ್ರವಾದಾಗ, ಪಿನ್ನಿಗಂಟಿ ಅಸ್ತವ್ಯಸ್ತ ಬಿದ್ದಿರುವಾಗ,
ಪಿನ್ನೆರಗಿ ಗೋಡೆಗೊರಗಿ ಎತ್ತಕೆತ್ತರೆ ಹೊರಳಾಡುತ್ತಿರುವಾಗ,
ಹೇಗೆ ಶುರು ಮಾಡಲಿ, ಹೇಳಿ?
ನನ್ನ ನಿತ್ಯದ ರೀತಿಗಳ ಅರೆಬೆಂದ ದಂಡೆಗಳನ್ನು ಹೇಗೆ ಉಗಿಯಲಿ?
ಹೇಗೆ ಮುಂದರಿಯುವ ಸಾಹಸಪಡಲಿ?

ಮತ್ತೆ ನನಗೆ ಆ ಕೈಗಳೂ ಗೊತ್ತು, ಅವೆಲ್ಲವೂ –
ಕೈಗಳಲ್ಲಿರುವ ಬಳೆಗಳು, ಅಥವಾ ಬಿಳಿ ಖಾಲಿ ಕೈಗಳು
[ಆದರೆ ದೀಪದ ಬೆಳಕಿನಲ್ಲಿ ಕಂಡುಬಂದು ಕೈಕೊಡುವ ಕಂದು ಕೂದಲು!]
ಇದೇನು, ಯಾರದೋ ಬಟ್ಟೆಗಳ ಸುವಾಸನೆ
ಹೀಗೆ ನನ್ನ ದಿಕ್ಕು ತಪ್ಪಿಸುತ್ತಿದೆಯೋ?
ಟೇಬಲ್ಲಿನ ಮೇಲೆ ಒರಗಿರುವ ಕೈಗಳು, ಶಾಲು ಸುತ್ತಿಕೊಂಡಿರುವ ಕೈಗಳು.
ಮತ್ತೀಗ ಮುಂದೆ ಹೆಜ್ಜೆಯಿಡಲೆ?
ಆದರೆ.. ಎಲ್ಲಿ ಶುರು ಮಾಡಲಿ?

…….

ಮುಸ್ಸಂಜೆಗಳ ಸಂದಿಗಳಲ್ಲಿ ಹಾದುಹೋಗಿದ್ದೇನೆ,
ಕಿಟಕಿಗಳಲ್ಲಿ ಬಾಗಿ ನಿಂತ ಒಂಟಿ ಗಂಡಸರ
ಪೈಪುಗಳಿಂದೊಸರಿ ಮೇಲೆರುವ ಹೊಗೆ ನೋಡಿದ್ದೇನೆಂದು ಹೇಳಲೆ?

ನನಗೊಂದು ಜೋಡಿ ಪರಪರಕು ಉಗುರುಗಳಿರಬೇಕಿತ್ತು
ನಿ:ಶಬ್ದ ಸಮುದ್ರಗಳಡಿಯಲ್ಲಿ ಗರಗರ ತಿರುಗುತ್ತಿದ್ದೆ.

…….

ಮತ್ತೆ ಈ ಮಧ್ಯಾಹ್ನ, ಈ ಸಂಜೆ ಎಷ್ಟು ನಿರುಂಬಳ ಮಲಗಿದೆ!
ನೀಳವಾದ ಬೆರಳುಗಳಿಂದ ನೀವಿಸಿಕೊಂಡು,
ನಿದ್ರಿಸುತ್ತಿದೆ… ಸುಸ್ತಾಗಿದೆ.. ಅಥವಾ ಓತ್ಲಾ ಹೊಡೆಯುತ್ತಿದೆ,
ಫರಶಿಗಳ ಮೇಲೆ ಮೈಚಾಚಿ, ಇಲ್ಲಿಯೇ, ನಿನ್ನ ನನ್ನ ಪಕ್ಕದಲ್ಲೆ.
ಚಹಾ, ಕೇಕು, ಐಸ್‍ಕ್ರೀಮುಗಳ ನಂತರ, ಪ್ರಸಕ್ತ ಕ್ಷಣವನ್ನು
ತೀರಾ ಸಂದಿಗ್ಧಕ್ಕೆ ತಳ್ಳುವ ಚೇತನ ನನ್ನಲ್ಲಿರಲೇಬೇಕೆ?
ನಾನು ಅತ್ತುಕರೆದು ಹೊಟ್ಟೆಗಟ್ಟಿ, ಗೋಳಾಡಿ ಪ್ರಾರ್ಥಿಸಿದ್ದರೂ
ನನ್ನ [ಸ್ವಲ್ಪ ಬಕ್ಕ] ತಲೆಯನ್ನು ತಾಟಿನಲ್ಲಿ ಹೊತ್ತು ತಂದದ್ದನ್ನು ನೋಡಿದ್ದರೂ
ಹೇಳುವುದೇನೆಂದರೆ, ನಾನೇನು ಪ್ರವಾದಿಯಲ್ಲ — ಮತ್ತಿದು ದೊಡ್ಡ ಸಂಗತಿಯೂ ಅಲ್ಲ;
ನೋಡಿದ್ದೇನೆ ನನ್ನ ಶ್ರೇಷ್ಠತೆಯ ಕ್ಷಣಗಳು ಮಿಣುಗುಟ್ಟಿದ್ದನ್ನೂ,
ನೋಡಿದ್ದೇನೆ ಕೆಲಸದ ಹುಡುಗ ಸಂತತ ನನ್ನ ಕೋಟನ್ನು ಇಸಿದುಕೊಳ್ಳುವುದನ್ನು, ಮುಸಿನಗುವುದನ್ನೂ,
ಸಂಕ್ಷೇಪಿಸಿ ಹೇಳಬೇಕೆಂದರೆ – ನಾನು ಬೆಚ್ಚಿಬಿದ್ದಿದ್ದೆ.

ಬ್ಲಾಗಿಗರ ಕಾಳಗ

ಮೊನ್ನೆ ರವಿವಾರ ಬಸವನಗುಡಿಯಲ್ಲಿ ನಡೆದ ಬ್ಲಾಗಿಗರ ಕೂಟ ಅತ್ಯಂತ ಯಶಸ್ವೀ ಕೂಟ ಎಂದು ನಾನು ಈ ಮೂಲಕ ಘೋಷಿಸುತ್ತಿದ್ದೇನೆ. ಏಕೆಂದರೆ ಅದರ ಬಗ್ಗೆ ಜಗಳಗಳಾಗುತ್ತಿವೆ. ಯಾವುದೇ ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ ಅಥವಾ ವಿದ್ಯಮಾನವಾಗಲಿ ಸಕ್ಸೆಸ್ಫ಼ುಲ್ ಆಗುವುದು ಯಾವಾಗ ಎಂದರೆ ಅದು ಜನರಲ್ಲಿ ಆಸಕ್ತಿ ಮೂಡಿಸುವುದಷ್ಟೆ ಅಲ್ಲದೆ, ಅದನ್ನು ಉಳಿಸಿಕೊಂಡಾಗ. ಯಾರನ್ನೋ ಬರಿ ಹೊಗಳಿದರೆ ಅಥವಾ ತೆಗಳಿದರೆ ಅವರ ಬಗೆಗಿನ ಆಸಕ್ತಿ ಕಾಲಕ್ರಮದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಅತ್ಯಂತ ಯಶಸ್ವೀ ವ್ಯಕ್ತಿಗಳ ಉದಾಹರಣೆಗಳನ್ನು ಗಮನಿಸಿ: ಪಟಕ್ಕನೆ ನಿಮ್ಮ ಮನಸ್ಸಿಗೆ ತೋಚುವ ಹೆಸರುಗಳನ್ನೇ ತೊಗೊಳ್ಳಿ; ಶಾಹ್ ರುಖ್ ಖಾನ್ ಹೆಚ್ಚು ಯಶಸ್ವೀ ವ್ಯಕ್ತಿಯೋ ಅಲ್ಬರ್ಟ್ ಐನ್‍ಸ್ಟೈನ್‍ನೋ; ಉತ್ತರ ಅತ್ಯಂತ ಸ್ಪಷ್ಟ; ಬೆಳಕಿನಷ್ಟು ನಿಚ್ಚಳ. ಇದನ್ನೇ ಸಾರ್ವತ್ರೀಕರಿಸಿ ನೋಡಿ. ಅತ್ಯಂತ ಸಕ್ಸೆಸ್‍ಫುಲ್ ವ್ಯಕ್ತಿಗಳೆಂದರೆ ಸಿನೆಮಾ ತಾರೆಯರು ಮತ್ತು ಕ್ರಿಕೆಟಿಗರು. ಅವರು ಒಂದು ಕೆಟಗರಿ. ಇನ್ನು ವಿಜ್ಞಾನಿಗಳು, ಸಂತರು, ತುಡುಗರು, ಕೊಲೆಗಡುಕರು ಇನ್ನೊಂದು ಕೆಟಗರಿ. ಪೇಜ್ ೩ಯೇ ಜಗತ್ತು. ಗಾಸಿಪ್‍ಗಳು, ಪರಸ್ಪರ ದೋಷಾರೋಪಣೆ, ವೈಯಕ್ತಿಕ ವಿಚಾರಗಳ ಪ್ರಸ್ತಾಪ, ಇವೆಲ್ಲ ಇಲ್ಲದಿದ್ದರೆ ಯಶಸ್ಸು ಚಲಾವಣೆಯಲ್ಲಿ ಉಳಿಯುವುದಿಲ್ಲ. ಆದುದರಿಂದ ಮೊದಲಿಗೆ ನಾನು – ಸಂಘಟಕರ ವೈಯಕ್ತಿಕ ಪರಿಚಯ ನನಗಿಲ್ಲ – ’ಪ್ರಣತಿ’ ಛಾವಣಿಗೆ ಅಭಿನಂದನೆ ಕೋರುತ್ತೇನೆ.

ಹೀಗಿರುವಾಗ ಸಂತೋಷಕುಮಾರರ ಪೋಸ್ಟನ್ನು ಓದಿದಾಗ ನನಗೆ ಸ್ವಲ್ಪ ಖುಷಿಯೇ ಆಯಿತು. ಲಲಲ ಎಂದು ಗುನುಗುತ್ತ ಬಾಯಿ ಚಪ್ಪರಿಸಿದೆ. ಅವರು ಜನಪ್ರಿಯವಲ್ಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ನೋಡಿ ನಾನು ಕಾತರದಿಂದ ಅದಕ್ಕೆ ಒದಗುವ ಗತಿಯನ್ನು ಕಾಯುತ್ತ ಕೂತೆ. ಅಲ್ಲಿಯವರೆಗೆ ಶ್ರೀಯವರ ರಿಪೋರ್ಟನ್ನೊಳಗೊಂಡಂತೆ ಒಂದೆರಡು ಉತ್ಸಾಹಭರಿತ ಅಭಿಪ್ರಾಯಗಳನ್ನೋದಿದ್ದೆ. ಸಂತೋಷ್ ಅವರಿಗಾದ ನಿರಾಶೆಯಿಂದ ನನಗೆ ಸಂತೋಷವೇ ಆಯಿತು (ಅದರಲ್ಲಿನ ಎಷ್ಟೋ ಅಂಶಗಳು ನನಗೆ ಅನ್‍ರೀಸನೆಬಲ್ ಎಂದು ತೋರಿದರೂ). ನಂತರ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನೂ ಓದಿದೆ. ಸಂತೋಷ್ ಅವರ ನಂತರದ ಪ್ರತಿಕ್ರಿಯೆಯ ಪೋಸ್ಟನ್ನೂ ಓದಿದೆ. ಆದರೆ ಆ ಪೋಸ್ಟನ್ನು ಓದಿ ನನಗೆ ಮೊದಲಿನಂತೆ ಸಂತಸವಾಗಲಿಲ್ಲ. ಅದರ ಬಗ್ಗೆ ಮುಂದೆ ಹೇಳುತ್ತೇನೆ. ಇದೆಲ್ಲದರ ಬಗ್ಗೆ ಒಬ್ಬ ’ಸೆಲೆಬ್ರಿಟಿ’ ಬ್ಲಾಗರ್ ಫ಼್ರೆಂಡ್ ಜೊತೆಗೂ ಮಾತಾಡಿದೆ. ಅವರೂ ಈ ಎಲ್ಲ ವಿದ್ಯಮಾನಗಳಿಂದ ತುಂಬಾ ಹುರುಪಾಗಿದ್ದರು. ನಾನೂ ಮತ್ತಷ್ಟು ಹುರುಪಾಗಿ, ಆ ಕೂಟದಲ್ಲಿ ಭಾಗವಹಿಸಿರದಿದ್ದರೂ ಈ ಕಾಮೆಂಟರಿ ಬರೆಯುತ್ತಿದ್ದೇನೆ. ಇದನ್ನು ನಾನು ತಮಾಷೆ ಹಾಗೂ ಗಾಂಭೀರ್ಯವನ್ನು ಯಾರಿಗೂ ಗೊತ್ತಾಗದಂತೆ ಹದವಾಗಿ ಮಿಶ್ರಣ ಮಾಡಿ ಬರೆಯುತ್ತಿದ್ದೇನೆ. ಇದರಿಂದ ಓದುಗರಿಗೆ ಅನುಕೂಲವಾಗಲಿಕ್ಕಿಲ್ಲ. ನನಗಂತೂ ಅನುಕೂಲವಿದೆ: ನಾನು ತಮಾಷೆಗೆ ಬರದದ್ದನ್ನು ಯಾರಾದರೂ ಹೊಗಳಿದರೆ, ಹೌದು, ಅದು ಅತ್ಯಂತ ಘನಿಷ್ಠ ಸಂಗತಿ ಎನ್ನುತ್ತೇನೆ; ಇನ್ನು ನಾನು ಬರೆದ ಏನನ್ನೋ ಓದಿ ಯಾರಾದರೂ ಇರಿಟೇಟ್ ಆದರೆ, ಅದು ಕೇವಲ ತಮಾಶೆ ಎಂದುಬಿಡುತ್ತೇನೆ.

ಸಂತೋಷ್ ಅವರು ಅನವಶ್ಯಕವಾಗಿ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಕೆಲವರು ತಕರಾರು ತೆಗೆದಿದ್ದಾರೆ. ನಾನು ಇದನ್ನು ಒಪ್ಪೋದಿಲ್ಲ. ವ್ಯಕ್ತಿಗಳ ಉಡುಗೆ, ಭಾಷೆ, ರೂಪ, ಮಾತು ಇವೇ ಮೊದಲಾದವುಗಳ ಬಗ್ಗೆ ಪಟಕ್ಕನೆ ಜಜ್ ಮಾಡುವುದು, ಪೂರ್ವಗ್ರಹ ಬೆಳೆಸಿಕೊಳ್ಳುವುದು ನಮ್ಮ ಸ್ವಭಾವ. ಸ್ವಭಾವ ಸ್ವಾಭಾವಿಕ. ಸ್ವಾಭಾವಿಕವಾದದ್ದು ಹೇಗೆ ಅನವಶ್ಯಕವಾದೀತು? ಮತ್ತು ಅವರು ಹೇಳಿರುವ ಅಂಶಗಳು – ಚಡ್ದಿ ಧರಿಸಿದ್ದ ಬ್ಲಾಗರ್, ಬೋಳುತಲೆಯ ಮೇಲಿನ ಚಾಳೀಸು – ಎದ್ದು ಕಾಣಿಸುವಂಥವು. ಅವನ್ನು ನಾವು ಬಿಟ್ಟೇವೆ? ಆದರೆ ಅವರ ತಕರಾರುಗಳ ಬಗ್ಗೆ ನನ್ನ ತಕರಾರು ಬೇರೆ ಇದೆ: ಅವರ ಪ್ರಶ್ನೆಗಳು ಅತ್ಯಂತ ಸರಳವಾಗಿವೆ; ಅವರಿಗೆ ಅದು ಹೇಗೆ ಉತ್ತರ ಗೊತ್ತಾಗಿಲ್ಲವೋ ಏನೋ. ಚಡ್ದಿ ಹಾಕಿಕೊಂಡು ಒಬ್ಬರು ಬಂದಿದ್ದರು ಎಂದರೆ ಅವರು ಖರೆ ಬ್ಲಾಗರ್. ಬ್ಲಾಗಿಂಗ್ ಎನ್ನುವುದು ಅರೆಬರೆ ಸಾಹಿತ್ಯವಲ್ಲವೆ? ಹೀಗಾಗಿ ಚಡ್ಡಿ ಅತ್ಯಂತ ಪ್ರಸ್ತುತವಾದ ಉಡುಪು. ಅಲ್ಲದೇ ಚಡ್ಡಿ ಹಾಕಿಕೊಂಡು ಆರಾಮಶೀರ ಕೂತು ಬರೆಯುವ ಅನುಭವ ಸಂತೋಷ ಅವರಿಗೆ ಇಲ್ಲವೆಂದು ತೋರುತ್ತದೆ. (ನಾನಿದನ್ನು ಚಡ್ಡಿ ಹಾಕಿ ಕೂತೇ ಬರೆಯುತ್ತಿದ್ದೇನೆ.) ಇಲ್ಲದ್ದಿದ್ದರೆ ಅವರು ಅದನ್ನು ಪ್ರಶ್ನಿಸುತ್ತಿರಲಿಲ್ಲ. ಚಡ್ದಿ ಹಾಕಿಕೊಂಡು ಬ್ಲಾಗಿಸಲಿ, ಅಲ್ಲಿಯೂ ಹಾಗೇ ಬರಬೇಕೇ ಎಂದರೆ, ಅವರು method blogger (method actor ಥರ) ಎನ್ನುತ್ತೇನೆ. ಅಲ್ಲದೇ ಜುಬ್ಬಾ, ಜೀನ್ಸ್ ಪ್ಯಾಂಟು, ಬಗಲಲ್ಲಿ ಜೋಳಿಗೆ, ಕುರುಚಲು ಗಡ್ದ ಬಿಟ್ಟುಕೊಂಡು ಬರಲು ಬ್ಲಾಗರುಗಳೇನು ನವ್ಯ ಸಾಹಿತಿಗಳೆ?

ಇನ್ನೊಬ್ಬರ ಕನ್ನಡಕ ತಲೆಯೇರಿ ಕುಳಿತಿತ್ತಂತೆ. ಇದು ಮೇಲ್ನೋಟಕ್ಕೆ ಸ್ವಲ್ಪ ಅಸಮಂಜಸ ಎನ್ನಿಸಿದರೂ, ಸರಿಯಾಗಿ ವಿಶ್ಲೇಷಿಸಿದರೆ ಸುಲಭವಾಗಿ ಬಗೆಹರಿಯುವ ಸಮಸ್ಯೆ. ಮೊದಲಿಗೆ ಚಾಳಶಿಯ ಸ್ವಾಭಾವಿಕ ಗುಣವನ್ನು ಪರಿಗಣಿಸೋಣ. ಅದೆಂದರೆ ಕೆಳಗೆ ಜರಿಯುವುದು. ಮೂಗಿನ ಮೇಲೆ ಕೂಡದೆ ಕೆಳಗೆ ಜರಿಯುತ್ತಿರುತ್ತದೆ; ಅದನ್ನು ಮೇಲೆ ಮೇಲೆ ಎಳೆದು ಎಳೆದು ಹಾಕುತ್ತಿರುತ್ತಾರೆ ಪಾಪ. ಹೆಚ್ಚೂಕಡಿಮೆಯಾದರೆ ಕೆಳಗೇ ಬಿದ್ದು ಹೋಗುತ್ತದೆ. ಹೀಗಿದ್ದಾಗ ಆ ಚಾಳಶಿ ತಲೆ ಕಣ್ಣು ಹಣೆ ಕೂದಲು ಎಲ್ಲ ದಾಟಿ ತಲೆಯ ಮೇಲೆ ಹೇಗೆ ಹೋಯಿತು. ಹಾಂ.. ಕೂದಲು? ಕೂದಲೆಲ್ಲಿದೆ? ಅದೇನಾಗಿರಬೇಕೆಂದರೆ ಸ್ಟೇಜಿನ ಮೇಲೆ ಭಾಷಣಕಾರರು ಜವಾಬ್ದಾರಿ, ಸಾಂಸ್ಕೃತಿಕ ಮಹತ್ವ, ಸಂಕ್ರಮಣದ ಈ ಕಾಲಘಟ್ಟ ಮೊದಲಾದುವುವನ್ನು ಝಳಪಿಸುವಾಗ ಹಾಗೇ ಅಕಸ್ಮಾತ್ತಾಗಿ ಚಾಳಶಿಯ ವ್ಯಕ್ತಿಗೆ ಸಣ್ಣಂಗೆ ನಿದ್ದೆ ಬಂದು ತಲೆ ಹಿಂದೆ ಕುರ್ಚಿಗೊರಗಿಸಿರಬೇಕು. ಮೂಗಿನ ಏರಕಲು ರಸ್ತೆಗಿಂತ ಥಳಥಳನೆ ಹೊಳೆಯುತ್ತಿರುವ ಬಟಾಬಯಲು ಇಳಿಜಾರಿನ ತಲೆ ನಮ್ಮ ಚಾಳೀಸಿಗೆ ಆಕರ್ಷಣೀಯವಾಗಿ ಕಂಡದ್ದರಲ್ಲಿ ಯಾವುದೇ ಚಮತ್ಕಾರವಿಲ್ಲ.

ಅದೆಲ್ಲ ಇರಲಿ. ಸಂತೋಷ್ ಅವರಿಗೆ ಆದ ನಿರಾಸೆಯ ಕಾರಣಗಳನ್ನೂ ಯಾರೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ನೀಲಿ ಚೌಕಡಿಯ ತುಂಬುತೋಳಿನ ಶರಟು (ಚಹಾದ ವೇಳೆಯಲ್ಲಿ ತೋಳುಗಳಿಗೆ ಒಂದೆರಡು ಮಡಿಕೆ ಹಾಕಿದ್ದರೆನ್ನಿ), ಬ್ರೌನ್ ಪ್ಯಾಂಟು ಹಾಕಿಕೊಂಡು, ಮಸ್ತ ಪೈಕಿ ಸೇಂಟು ಹೊಡೆದುಕೊಂಡು ಬಂದ ಅವರನ್ನು ಜನರು ಗಮನಿಸಲೇ ಇಲ್ಲ. ಅದೂ ಹೋಗಲಿ. ಟೀನಾ, ಚೇತನಾ, ಜೋಗಿ ಇಂಥ ಬ್ಲಾಗುಲೋಕದ ಅಮಿತಾಭ್ ಬಚ್ಚನ್, ಶಾಹ್ ರುಖ್ ಖಾನ್, ದೀಪಿಕಾ ಪಡುಕೋಣೆಗಳನ್ನು ನೋಡಲು ಬಂದ ಅವರಿಗೆ, ನಮ್ಮ ಈ -ಟಿವಿಯ ಕನ್ನಡ ಧಾರಾವಾಹಿಗಳ ಸದಾ ನಿಟ್ಟುಸಿರುಬಿಡುವ ಅತ್ತೆ ಮಾವಂದಿರಂಥ ಮಂದಿಯೇ ನೋಡಿದಲ್ಲೆಲ್ಲಾ ಕಂಡುಬಂದರೆ ನಿರಾಸೆಯಾಗದೆ ಇರುತ್ತದೆಯೇ? (ಉದಯ ಟಿವಿ ಧಾರಾವಾಹಿಗಳ ರೂಕ್ಷ ಪಾತ್ರಗಳು ಅಲ್ಲಿದ್ದವೋ ಇಲ್ಲವೋ ಗೊತ್ತಿಲ್ಲ!) ಇಷ್ಟೇ ಸಾಲದೆಂಬಂತೆ ’ಚಹಾ ವಿರಾಮ’ ಎಂದರೆ ಕೇವಲ ಚಹಾ ಕೊಡುವುದು ಎಂಥ ಪದ್ಧತಿ? ಗದಗಿನ ಲೋಕಪ್ರಸಿದ್ಧ ಬದನಿಕಾಯಿ ಭಜಿ ಇಲ್ಲದಿದ್ದರೆ ಹೋಗಲಿ, ಕೊನೆಯ ಪಕ್ಷ ಮಂಡಾಳವೋ, ಅಥವಾ ಮಿರ್ಚಿಯದೋ ಸರಬರಾಜು ಆಗಬಾರದೇ? ಮಿರ್ಚಿಯ ಖಾರ ಹೊರಗಿಂದ ಒಳಗೆ ಹೋಗಿದ್ದರೆ ಅವರೊಳಗಿನ ಖಾರ ಅವರ ಲೇಖನಗಳ ಮೂಲಕ ಹೀಗೆ ಹೊರಬರುತ್ತಿರಲಿಲ್ಲ. ಗದಗು ನನ್ನ ಹುಟ್ಟೂರಾದ್ದರಿಂದ ಮುಂದಿನ ಭೇಟಿಗಳಲ್ಲಿ ಬದನಿಕಾಯಿ ಭಜಿ ಇರಲೇಬೇಕೆಂದು ನಾನು ಈ ಮೂಲಕ ಆಗ್ರಹಿಸುತ್ತೇನೆ.

ಈ ವಾಗ್ವಾದಗಳಿಂದಾದ ಇನ್ನೊಂದು ಮಜಾ ಪರಿಣಾಮವೇನೆಂದರೆ, ಬ್ಲಾಗುಲೋಕದ ಸೆಲೆಬ್ರಿಟಿಗಳನ್ನು ಉದ್ಧರಿಸಿ ಪೋಸ್ಟುಗಳನ್ನು ಬರೆದವರೆಲ್ಲ ಈಗ ಸೆಲೆಬ್ರಿಟಿಗಳಾಗಿ ಹೊಮ್ಮಿದ್ದಾರೆ; ಆ ದೊಡ್ದವರ ಸಾಲಿನಲ್ಲಿ ಇವರೂ ಈಗ ನಿಂತಿದ್ದಾರೆ. ಈ ಬ್ಲಾಗಿಗರ ಕಾಟದ ಬಗ್ಗೆ ಪೋಸ್ಟು ಬರೆದವರ ಮೂಲ ಉದ್ದೇಶ ಅದೇ ಆಗಿದ್ದಿತು. ಆದರೆ as usual ಆಗಿ ನಮ್ಮ ಮಹಾಜನಗಳು ಆ ಧೂರ್ತತನವನ್ನು ಮನಗಾಣದೆ ಅವರ ಉದ್ದೇಶಪೂರ್ತಿಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ! ತಪ್ಪೇನಿಲ್ಲ ಬಿಡಿ. ಎಲ್ಲರೂ ಸೆಲೆಬ್ರಿಟಿಗಳಾದರೂ ಪರವಾಗಿಲ್ಲ. ಟ್ಯಾಬ್ಲಾಯ್ಡ್ ಬ್ಲಾಗುಗಳ ಹೊಸ ಬಿಸಿನೆಸ್ ಶುರುವಾಗುತ್ತದೆ. ಅಲ್ಲಿ ಯಾವ ಬ್ಲಾಗಿಗರು ಅತ್ಯಂತ ಟ್ರೆಂಡಿ ಉಡುಗೆ ಧರಿಸುತ್ತಾರೆ, ಯಾವ ಬ್ಲಾಗಿ ಯಾವ ಬ್ಲಾಗನಿಗೆ ಗಾಳ ಹಾಕುತ್ತಿದ್ದಾಳೆ ಎಂಬಿತ್ಯಾದಿ ತರಹೇವಾರಿ ಖಡಕ್ ಸುದ್ದಿಗಳನ್ನು ಗುದ್ದಬಹುದು. ಪಾಟೀಲರು, ಶ್ರೀ ಮತ್ತಿತರ ಹೋರಾಟಗಾರರಿಗೆ ನನ್ನ ಅಭಿನಂದನೆಗಳು.

ನಮ್ಮ ಪಾಟೀಲರು, ’ಇವೆಲ್ಲ ನನ್ನ ಸ್ವಂತ ಅಭಿಪ್ರಾಯ, ಜಜ್ ಮಾಡಲು ಹೋಗಬೇಡಿ’ ಎಂಬರ್ಥದ ಮಾತುಗಳನ್ನು ಆಡುತ್ತಲೆ ತಮ್ಮ ಎರಡನೆಯ ಪೋಸ್ಟ್‍ನಲ್ಲಿ ಅವರ ಅಭಿಪ್ರಾಯಗಳಿಗೆ ಭಿನ್ನ ಅಭಿಪ್ರಾಯ ಕೊಟ್ಟವರನ್ನೆಲ್ಲ ಗುಡಿಸಿಹಾಕಿ ’ಗುತ್ತಿಗೆದಾರರು’ ಎಂದು ಜರಿದಿರುವುದು ಸ್ವಲ್ಪ ಚೋದ್ಯವೇ. ಅಲ್ಲದೆ ಇನ್ನು ಹೆಚ್ಚಿನದೇನನ್ನೂ ಹೇಳಲು ನನ್ನಲ್ಲಿಲ್ಲ, (ನೀವೂ ಹೇಳದಿದ್ದರೆ ನಿಮ್ಮ ಆರೋಗ್ಯಕ್ಕೆ ಕ್ಷೇಮ, ಎಂದು ಕಂಸದಲ್ಲೂ), ಹೆದರಿಕೆ ಹುಟ್ಟಿಸುವ ವ್ಯಾಧಿಗಳ ಮೂಲಕ ಪ್ರಕಟವಾಗಿಯೂ ಹೇಳಿಬಿಟ್ಟಿದ್ದಾರೆ. ಹೀಗಾದರೆ ಹೇಗೆ? ಹಾಗಾಗುವುದು ಬೇಡ. ಜಗಳಗಳು ಬೇಕು; ವಾದಗಳಾದಷ್ಟೂ ನಾವು ಪ್ರಬುದ್ಧರಾಗ್ತೀವಿ; ನಮ್ಮ ಇಡೀ ಸಮಾಜವೇ ಒಂದು ರೀತಿಯ ‘Argumentation Crisis’ನಲ್ಲಿದೆ. ಎಲ್ಲದಕ್ಕೂ ಸುಮ್ಮನೆ ಹೂಂಗುಟ್ಟುವ conformance ನಮಗೆ ಬೇಡ. ಪ್ರಶ್ನೆಗಳನ್ನೆತ್ತುವ, ಪ್ರಶ್ನೆಗಳನ್ನೆದುರಿಸುವ ಮನೋಭಾವ ನಮ್ಮಲ್ಲಿ ಹೆಚ್ಚಾಗಬೇಕು. ಇಲ್ಲದಿದ್ದರೆ ನಾವು ನಿಂತಲ್ಲೆ ನಿಲ್ಲುತ್ತೇವೆ. ಅಲ್ಲದೆ ಬದುಕು ಬಹಳ ಸಪ್ಪೆಯಾಗುತ್ತದೆ.

[ನನ್ನ ಈ ಬರಹದಿಂದ ಯಾವುದಾದರೂ ವ್ಯಕ್ತಿಗೆ, ಅಲೌಕಿಕ ಶಕ್ತಿಗೆ, ಸಂಸ್ಥೆಗೆ, ಸಂವಿಧಾನಕ್ಕೆ, ನಿಮ್ಮ ಆತ್ಮೀಯ ಸಿನೆಮಾ ತಾರೆ, ಧಾರಾವಾಹಿ ಪಾತ್ರ, ಸೆಲೆಬ್ರಿಟಿ, ಸೆಲೆಬ್ರಿಟಿಗಳ ಸಾಕು ನರಿ ನಾಯಿ, ಅಥವಾ ಇನ್ನ್ಯಾವುದಕ್ಕಾದರೂ ಅಪಚಾರವಾಗಿದ್ದಲ್ಲಿ, ಈ ಕೂಡಲೆ ಹೋಗಿ ನಂದ ವರ್ಸಸ್ ನಂದಿತ ಸಿನೆಮಾ ನೋಡತಕ್ಕದ್ದು. ಪಾಟೀಲರನ್ನೂ ಜೊತೆಗೆ ಒಯ್ಯತಕ್ಕದ್ದು. ಹಾಗೆಯೇ ನಾನು ಅನುಮತಿಯಿಲ್ಲದೆ ಬಳಸಿಕೊಂಡ ಅನಾಮಧೇಯ ಚಾಳೀಸು ಹಾಗೂ ಬಕ್ಕತಲೆಗಳಿಗೆ ಧನ್ಯವಾದಗಳು. ಹಾಗೆಯೇ, ಇಷ್ಟುದ್ದ ಕುಟ್ಟಿದ್ದಕ್ಕೆ ಕ್ಷಮೆಯಿರಲಿ; ಮತ್ತೆ ಹಾಗೆ ಎಡೆಬಿಡದೆ ಕುಟ್ಟುವಾಗ ಆಗಿರಬಹುದಾದ ಖಗೂನಿಟ ಮಿಸ್ಟಿಕುಗಳನ್ನು ಸುಧಾರಿಸಿಕೊಂಡು ಓದಿದ್ದೀರೆಂದು (ಪೂರ್ತಿ ಓದಿದ್ದರೆ!) ಅಂದುಕೊಂಡಿದ್ದೇನೆ.]

ಜೆ. ಆಲ್ಫ್ರೆಡ್ ಪ್ರುಫ್ರಾಕ್‍ನ ಪ್ರೇಮ ಗೀತೆ (ಭಾಗ ೧)

ಎಲಿಯಟ್‍ನ ಪದ್ಯಗಳನ್ನು ಜೋರಾಗಿ ಓದಬೇಕು. ದನಿ ತೆಗೆದು. ದನಿ ಏರಿಳಿಸಿ. ಅವು ದಕ್ಕುತ್ತವೋ ಇಲ್ಲವೋ ಎಂಬ ಯೋಚನೆಯಿಲ್ಲದೆ. “Do I dare?” and “Do I dare?” ಎಂದುಕೊಳ್ಳುತ್ತಲೆ ಈ ಅನುವಾದಕ್ಕಿಳಿದಿದ್ದೇನೆ. ಬಹುಶಃ ೨ ಅಥವಾ ೩ ಭಾಗಗಳಲ್ಲಿ ಇಲ್ಲಿ ಛಾಪಿಸುತ್ತೇನೆ. ಹೇಗನ್ನಿಸಿತು ಹೇಳಿ. ಈ ಪದ್ಯದ epigraph, ಡಾಂಟೆಯ ಇನ್‍ಫ಼ರ್ನೋದ ಸಾಲುಗಳು. ಅದನ್ನು ಹಾಗೆಯೇ ಬಿಟ್ಟಿದ್ದೇನೆ. ಹುಡುಕಿದರೆ ಅದರರ್ಥ ನಿಮಗೆ ಸಿಕ್ಕೇ ಸಿಗುತ್ತದೆ.

Update: ಎಲಿಯಟ್‍ನ ಕವಿತೆ ಅನುವಾದ ಮಾಡುವ ಸಾಹಸ ಮಾಡಿ, ಅದನ್ನು ಬೇಜವಾಬ್ದಾರಿಯಿಂದ ನಿಭಾಯಿಸಿದ್ದಕ್ಕೆ ಟೀನಾ ನನ್ನನ್ನು ಚೆನ್ನಾಗಿ ಬೈದಿದ್ದಾರೆ 😉 . ಮೊದಲಿಂದಲೂ ಈ ಬ್ಲಾಗನ್ನು ಓದುತ್ತ ಬಂದಿರುವ ಅವರ ಮಾತುಗಳನ್ನು ಸೀರಿಯಸ್ಸಾಗಿ ನಾನು ತೆಗೆದುಕೊಳ್ಳಲೇಬೇಕು. ಹೀಗಾಗಿ, epigraphನ ಅನುವಾದವನ್ನೂ ಹಾಕಿದ್ದೇನೆ. ಅಡಚಣೆಗೆ ಕ್ಷಮೆಯಿರಲಿ.
S’io credesse che mia risposta fosse
A persona che mai tornasse al mondo,
Questa fiamma staria senza piu scosse.
Ma perciocche giammai di questo fondo
Non torno vivo alcun, s’i’odo il vero,
Senza tema d’infamia ti rispondo.
1ಹೋಗೋಣಲ್ಲ ಮತ್ತೆ, ನೀನೂ ನಾನೂ,
ಟೇಬಲ್ಲಿನ ಮೇಲೆ ಮಂಪರುಕವಿದ ಪೇಶಂಟಿನ ಹಾಗೆ ಇಳಿಸಂಜೆ
ಆಕಾಶದಗಲಕ್ಕೂ ಹರಡಿಕೊಂಡಿರುವಾಗ;
ಹೋಗೋಣಲ್ಲ, ಕೆಲ ಅರೆನಿರ್ಜನ ಓಣಿಗಳಲ್ಲಿ,
ರಾತ್ರಿಯೊಪ್ಪತ್ತಿನ ತಹತಹಿಕೆಗೆಟಕುವ ಸೋವಿ ಹೊಟೆಲುಗಳ
ಕನವರಿಕೆಯ ಮರೆಗಳಲ್ಲಿ
ಕಟ್ಟಿಗೆಹೊಟ್ಟು ಹರಡಿದ ಆಯ್‍ಸ್ಟರ್ ಕವಚಗಳ ರೆಸ್ಟೊರಾಂಟ್‍ಗಳಲ್ಲಿ.
ಕಪಟ ಉದ್ದಿಶ್ಶದ ವಾಗ್ವಾದ
-ದಿಂದ ಬಳಲಿಸುವಂಥ ಬೀದಿಗಳು
ಮೈಮೇಲೆರಗುವ ಪ್ರಶ್ನೆಯತ್ತ ಒಯ್ಯುವ ಬೀದಿಗಳು…
ಆಂಹಾ, ಕೇಳದಿರು, “ಅದೆಂಥದ್ದು?” ಎಂದು.
ಹೋಗೋಣ. ಭೇಟಿ ಕೊಡೋಣ.

ರೂಮಿನೊಳಗೆ ಹೆಂಗಸರು ಹೋಗಿಬಂದು ಮಾಡುತ್ತಾರೆ.
ಮೈಕೆಲೆಂಜೆಲೊನನ್ನು ಚರ್ಚಿಸುತ್ತಾರೆ.

ಕಿಟಕಿಗಾಜಿಗೆ ಬೆನ್ನುತಿಕ್ಕುವ ಹಳದಿಯ ಮಂಜು,
ಕಿಟಕಿಗಾಜಿಗೆ ಮುಸುಡಿಯುಜ್ಜುವ ಹಳದಿಯ ಹೊಗೆ
ಸಂಜೆಯ ಮೂಲೆಮೂಲೆಗೂ ನಾಲಗೆ ಚಾಚಿತು,
ಕೊಳಚೆಗಟ್ಟಿದ ಕೊಳಗಳ ಮೇಲೆ ಸುಳಿದಾಡಿತು,
ಚಿಮಣಿಗಳಿಂದುದುರುವ ಮಸಿಗೆ ಬೆನ್ನು ಕೊಟ್ಟಿತು,
ಜಗಲಿಯಿಂದ ಜಾರಿತು, ಒಮ್ಮೆಗೆಲೆ ಹಾರಿತು,
ಅಷ್ಟರಲ್ಲಿ, ಇದು ಅಕ್ಟೋಬರ್‌ನ ಮೆದುರಾತ್ರಿಯೆಂದು ಮನಗಂಡು,
ಮನೆಯ ಸುತ್ತ ಒಮ್ಮೆ ಸುತ್ತಿ ಉಂಗುರಾಗಿ ನಿದ್ದೆಹೋಯಿತು.

ಸಮಯವಂತೂ ಇದ್ದೇ ಇದೆ
ಕಿಟಕಿಗಾಜುಗಳ ಮೇಲೆ ಬೆನ್ನು ತಿಕ್ಕುತ್ತ
ಬೀದಿಯುದ್ದಕ್ಕೂ ತೆವಳುವ ಹಳದಿ ಹೊಗೆಗೆ;
ಸಮಯವಿದೆ, ಸಮಯವಿದೆ
ನಾವು ಕಾಣುವ ಮುಖಗಳ ಕಾಣುವ ಮತ್ತೊಂದು ಮುಖ ತಯಾರಿಸಲು;
ಸಮಯವಿದೆ ಹುಟ್ಟಿಸಲೂ ಸಾಯಿಸಲೂ,
ಪ್ರಶ್ನೆಯೊಂದನ್ನು ಎತ್ತಿ ನಿಮ್ಮ ತಟ್ಟೆಗೆ ಬಡಿಸುವ
ಕೈಗಳ ನಿತ್ಯಗಳಿಗೆ ಕೆಲಸಗಳಿಗೆ ಸಮಯವಿದೆ;
ನಿಮಗಾಗಿ ಸಮಯವಿದೆ ನನಗಾಗಿ ಸಮಯವಿದೆ
ಸಮಯವಿದೆ ನೂರಾರು ಮೀನಮೇಷಗಳಿಗೆ,
ನೂರಾರು ದರ್ಶನಗಳಿಗೆ ಸಂಸ್ಕರಣಗಳಿಗೆ
ಸಮಯವಿದೆ, ಟೋಸ್ಟು ಚಹಾ ತೊಗೊಳ್ಳುವ ಮುಂಚೆ.

ರೂಮಿನೊಳಗೆ ಹೆಂಗಸರು ಹೋಗಿಬಂದು ಮಾಡುತ್ತಾರೆ.
ಮೈಕೆಲೆಂಜೆಲೊನನ್ನು ಚರ್ಚಿಸುತ್ತಾರೆ.

ಸಮಯ ಇದ್ದೇ ಇದೆ
“ಧೈರ್ಯವಿದೆಯೇ ನನಗೆ? ಧೈರ್ಯವಿದೆಯೇ?” ಧೇನಿಸಲು
ಹಿಂದಿರುಗಿ, ಮೆಟ್ಟಲಿಳಿಯಲು, ಸಮಯವಿದೆ
ಮಧ್ಯದಲ್ಲಿ ಬೋಡಾಗುತ್ತಿರುವ ತಲೆಬಾಗಿಸಲು
(ಅವರೆನ್ನುವರು: “ಅವನ ಕೂದಲೆಷ್ಟು ಉದುರಿವೆ ನೋಡು!”)
ನನ್ನ ಮಾರ್ನಿಂಗ್ ಕೋಟು, ಗದ್ದಕ್ಕೊತ್ತಿದಂತಿರುವ ಕಾಲರು
ನೆಕ್‍ಟೈ ಸುಂದರ ಗಂಭೀರ, ಆದರೆ ಸಣ್ಣ ಪಿನ್ನಿನಿಂದ ಬಂಧಿತ
(ಅವರೆನ್ನುವರು: “ಅಯ್ಯೋ, ಅವನ ಕೈಕಾಲುಗಳೆಷ್ಟು ಬಡಕಲು!”)
ವಿಶ್ವವನು ಅಲುಗಿಸುವ
ಸಾಹಸ ಇದೆಯೇ?
ನಿಮಿಷದಲ್ಲೇ ಸಮಯವಿದೆ
ನಿರ್ಧರಿಸಲು ವಿಮರ್ಶಿಸಲು, ಮರುನಿಮಿಷದಿ ಕವುಚಿಹಾಕಲು.
1
ಜೀವಜಗತ್ತಿಗೆ ಮರಳುವ
ಯಾರಿಗಾದರೂ ನಾನು ಉತ್ತರವೀಯುತ್ತಿದ್ದಲ್ಲಿ
ಈ ಉರಿ ಹೀಗೆ ಮಿಣುಕದೆ ನಿಶ್ಚಲವಾಗಿರುತ್ತಿತ್ತು.
ಆದರೆ ನಾ ಕೇಳಿ ತಿಳಿದಂತೆ ಈ
ಗಹ್ವರದಿಂದ ಮರಳಿ ಹೋದವರಿಲ್ಲ.
ಅಪವಾದದ ಭಯವಿಲ್ಲದೆ
ಕೊಡುವೆ ನಿನಗುತ್ತರ

ಡಾಂಟೆಯ ಡಿವೈನ್ ಕಾಮಿಡಿಯ ಇನ್ಫ಼ರ್ನೋದ ಸಾಲುಗಳಿವು. ಇದು ಗಿಡೊ ಡ ಮಾಂಟೆಫ಼ೆಲ್ಟ್ರೋ ನರಕದ ಎಂಟನೇ ವರ್ತುಲದೊಳಗಿಂದ ಹೇಳುವ ಮಾತು. ಗಿಡೊ ಡ ಮಾಂಟೆಫ಼ೆಲ್ಟ್ರೋ ಡಾಂಟೆಯ ಪ್ರಕಾರ ನರಕದ ಎಂಟನೇ ವರ್ತುಲಕ್ಕೆ ತಳ್ಳಲ್ಪಟ್ಟಿದ್ದಾನೆ. ಕಾರಣ: ದುರುದ್ದೇಶಪೂರಿತ ಸಲಹೆ. ಆದರೆ ಇಲ್ಲಿ ಮುಖ್ಯವಾದದ್ದೇನೆಂದರೆ, ಪ್ರುಫ಼್ರಾಕ್ ಮೊನೊಲಾಗ್‍ಗೆ ಸಂಬಂಧಿಸಿದಂತೆ ಈ ಸಾಲುಗಳ ವ್ಯಾಖ್ಯಾನ: ಗಿಡೊ ಅಂದುಕೊಂಡಿರುವುದೇನೆಂದರೆ ಡಾಂಟೆ ಕೂಡ ನರಕಕ್ಕೆ ತಳ್ಳಲ್ಪಟ್ಟಿದ್ದಾನೆ; ಹೀಗಾಗಿ ನಾನು ಯಾರಿಗೂ ಹೇಳಬಾರದೆಂದುಕೊಂಡಿದ್ದ ಸಂಗತಿಗಳನ್ನು ಇವನಿಗೆ ಹೇಳಬಹುದು; ಅವನು ಮರಳಿ ಹೋಗಿ ಭೂಮಿಯಲ್ಲಿ ತನ್ನ ಅಪಖ್ಯಾತಿ ಹಬ್ಬಿಸಲು ಸಾಧ್ಯವಿಲ್ಲ; ಇದೇ ರೀತಿ, ಪ್ರುಫ಼್ರಾಕ್‍ನಿಗೆ ಕೂಡ ತಾನು ಈ ಪದ್ಯದಲ್ಲಿ ಹೇಳುತ್ತಿರುವುದನ್ನು ಹೇಳುವ ಮನಸ್ಸಿರಲಿಲ್ಲ. ಇದು ಒಂದು interpretation.

ಇನ್ನೆಷ್ಟು ದಿನ ಹೀಗೆ

“ಇನ್ನೆಷ್ಟು ದಿನ ಹೀಗೆ?”
ಪಣ ತೊಟ್ಟವರ ಹಾಗೆ
ಫೋನಿನಲಿ ಮಾತು
ರಾತ್ರಿಗಳ ಭ್ರಾಂತು
ಸೋತ ಕಣ್ಣೆವೆ ಮುಚ್ಚಿದರೂ
ನಿದ್ದೆಗೆ ಕಸರತ್ತು
ಒಂದೆರಡು ಮೂರ್ನಾಕು ಐದಾರು ಏಳೆಂಟು
ಎಣಿಕೆಯೇ ಸಾಲದ ದೊಡ್ಡ ಕುರಿಹಿಂಡು
ಅರೆನಿದ್ದೆಯ ಕುರಿಗಳಿಗೂ
ಬೀದಿನಾಯಿಗಳ ಕುತ್ತು
ಹೊರಳಾಡಿ ಉರುಳಾಡಿ ಮುಲುಗುತ್ತ ತೆವಳುತ್ತ
ತುತ್ತತುದಿಯ ಮುಟ್ಟಿ ಪ್ರಪಾತಕ್ಕೆ ಜಾರಿದರೆ
ನೆಲೆಯೆಟುಕುವ ಮೊದಲೆ ಹಕ್ಕಿಗಳ ಗುನುಗು
ಪಕ್ಕದಲಿ ನೀ ಕೊಟ್ಟ ಟೈಂಪೀಸಿನ ಕೆಂಪು ಚುಂಚು.
ಕನಸಿಗೂ ತೂತು.

ಇನ್ನೆಷ್ಟು ದಿನ ಹೀಗೆ?
ಪಣತೊಟ್ಟವರ ಹಾಗೆ.

***

ಇದಕ್ಕೆ ಉತ್ತರ ಇನ್ನೊಮ್ಮೆ.

ಈ ಸಾಲಿನ ಕೆಳಗಿನದನ್ನು ಓದಬೇಡಿ.

ನಾನು ಈ ಬ್ಲಾಗುಗಳ ಲೋಕಕ್ಕೆ ಕಾಲಿರಿಸಿ ಕಂಡಾಪಟ್ಟೆ ದಿನಗಳಾಗಿವೆ. ೨೦೦೪ರ ಜುಲೈ ೩೧ರ ತೇದಿಯಂದು ನನ್ನ ಮೊದಲನೆಯ ಬ್ಲಾಗಿನ ಮೊದಲನೆಯ “ಹಲೋ ವರ್ಲ್ಡ” ಆಯ್ತು. ಏನೇನೋ ಬರೆದೆ. ಒಂದಷ್ಟು ಚೆನ್ನಾಗಿತ್ತು, ಒಂದಷ್ಟು ಕೆಟ್ಟದಾಗಿತ್ತು. ನಂತರ ಮತ್ತೊಂದು ಬ್ಲಾಗು. ಮತ್ತೊಂದು. ಮತ್ತೊಂದು. ಆಮೇಲೆ ಬ್ಲಾಗುಗಳನ್ನು finis ಮಾಡುತ್ತಲೂ ಬಂದೆ. ಇಂಗ್ಲಿಶ್, ಕನ್ನಡ, ಮಿಶ್ರಿತ… ಎಲ್ಲವೂ. ಕಾರಣವಿಲ್ಲದೆ ಶುರು ಮಾಡಿದ ಬ್ಲಾಗುಗಳನ್ನು ಏನೋ ಕಾರಣ ಕೊಟ್ಟುಕೊಂಡು ಬಂದು ಮಾಡಿದೆ. (ಓದುಗರಿಲ್ಲದ್ದು ಕಾರಣವಲ್ಲ.) ಅಥವಾ ಅಲ್ಲಿ ಏನೂ ಬರೆಯುತ್ತಿಲ್ಲ. ಮತ್ತೆ ಕಾರಣವಿಲ್ಲದೆ ಹೊಸ ಹೊಸ ಬ್ಲಾಗುಗಳನ್ನು ಶುರು ಮಾಡುತ್ತೇನೆ. ಕೆಲವು ಕಡೆ ಸ್ವನಾಮಧೇಯನಾಗಿ, ಕೆಲವು ಕಡೆ ಅನಾಮಧೇಯನಾಗಿ. ಕೆಲವು ಕಡೆ ಚಕೋರನಾಗಿ. ಚಕೋರ… ಒಂದೇ ಕಡೆ ಅನ್ನಿಸುತ್ತೆ.

ಆದರೆ ಇದನ್ನೆಲ್ಲ ಏಕೆ ಬರೆಯುತ್ತಿದ್ದೇನೆ. ಬರೆಯಲು ಬೇರೆ ಏನೂ ಇಲ್ಲದ್ದರಿಂದ ಅನ್ನಿಸುತ್ತೆ. ಇನ್ನೊಂದು ಕಾರಣವೆಂದರೆ ಈಗ ನನ್ನ ಒಂದು ಹಳೆಯ ಬ್ಲಾಗಿನಲ್ಲಿನ ಬರೆಹಗಳನ್ನು ತಿರುವಿ ಹಾಕುತ್ತಿದ್ದೆ. ಕೆಲವೊಂದು ಚೆನ್ನಾಗಿವೆ. ಒಂದು ರೀತಿ ಮಜಾ ಇದ್ದವು ಆ ದಿನಗಳು.

ಅವನ್ನೆಲ್ಲ ಓದಿ ಯಾಕೋ ಸಿಕ್ಕಾಪಟ್ಟೆ nostalgia ಆಗುತ್ತಿದೆ. ಆಗಿನಂತೆ ಬರೆಯಬೇಕು, ಹಂಗಿಲ್ಲದೆ, ವಿಚಾರ ಮಾಡದೆ.. ಅನ್ನಿಸುತ್ತದೆ. ಹೆಚ್ಚು ಹೆಚ್ಚು ಬರಿಯಬೇಕು ಅನ್ನಿಸುತ್ತದೆ. ಆದರೆ ಅದು ನನ್ನಿಂದ ಸಾಧ್ಯವಿಲ್ಲ ಎಂದೂ ಗೊತ್ತಿದೆ.

ಹಸಿವಿನ ವಿರುದ್ಧ ಹೋರಾಟ

ಒಂದು ಪ್ರದೇಶದಿಂದ ಇನ್ನೊಂದಕ್ಕೆ ಹೋದಾಗ ಸಾಂಸ್ಕೃತಿಕ ವಿಭಿನ್ನತೆಗಳು ಮೋಜು, ಮುಜುಗರ, ಗಲಿಬಿಲಿ, ಒಮ್ಮೊಮ್ಮೆ ಆಘಾತವನ್ನೂ ಉಂಟು ಮಾಡುತ್ತವೆ. ಹಾಗೆಯೇ ಸಾಮಾಜಿಕ ಹಾಗೂ ಜೀವನಶೈಲಿಯಲ್ಲಿನ ಭಿನ್ನತೆಗಳು. ಮೊದಲಾದರೆ ಸಂಪರ್ಕ ಹಾಗೂ ಮಾಹಿತಿಯ ಕೊರತೆಯಿಂದ ಈ ಭಿನ್ನತೆಗಳು ಒಮ್ಮೆಲೆ ಬಂದು ದಾಳಿ ಮಾಡಿದಂತೆ ಅನ್ನಿಸುತ್ತಿತ್ತು. ಈಗ ಎಷ್ಟೋ ವಿಷಯಗಳ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ, ಅನುಭವ ಇರುತ್ತದೆ. ಆದರೂ ಒಮ್ಮೊಮ್ಮೆ ಅವು ನಮ್ಮೆದುರಿಗೆ ಬಂದಾಗ ನಾವು ಅವನ್ನು ಎದುರಿಸುವ ತಯಾರಿಯಲ್ಲಿರಲಿಲ್ಲ ಎಂದು ತಿಳಿದು ಬರುತ್ತದೆ.

ಒಮ್ಮೆ ಯಾವುದೋ ಆಫೀಸಿನಲ್ಲಿ ನನ್ನ ಸರದಿಗಾಗಿ ಕಾಯುತ್ತ ಟಿವಿ ನೋಡುತ್ತ ಕೂತಿದ್ದೆ. ಇಲ್ಲಿನ ಜಾಹೀರಾತುಗಳು ಹೇಗಿರುತ್ತವೆ ಎಂಬ ಕುತೂಹಲದಿಂದ ಆಸ್ಥೆಯಿಂದ ನೋಡುತ್ತಿದ್ದೆ. ಹೆಚ್ಚಾಗಿ ವಿಶೇಷವಾದುವೆನೂ ಇರಲಿಲ್ಲ. ಅವೇ ಕಾರುಗಳು, ಔಷಧಿಗಳು, ವೆಪೋರಬ್‍ಗಳು ಇತ್ಯಾದಿ. ಅಷ್ಟರಲ್ಲಿ ಬಂದ ಒಂದು ಜಾಹೀರಾತು ಗಮನ ಸೆಳೆಯಿತು. ಹಸಿವಿನ ಸಮಸ್ಯೆಯ ವಿರುದ್ಧ ಹೋರಾಡುವ ಒಬ್ಬ ಮಹಿಳೆಯ ಜಾಹೀರಾತು. ಪಾಪ ಅವಳು ಬಡತನ ಹಸಿವು ಈ ತರದ ಯಾವುದೇ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಟದ ಉಸಾಬರಿ ಹಿಡಿದವಳಲ್ಲ. ಅವಳು ತನ್ನ ಸ್ವಂತ ಹಸಿವಿನ ವಿರುದ್ಧ ಹೋರಾಡುತ್ತಿದ್ದಾಳೆ. ಅಂದರೆ ತನಗಾಗುವ ಅತಿ ಹಸಿವಿನ ವಿರುದ್ಧ. ಅತಿ ಹಸಿವಾಗಿ ಇದ್ದಬದ್ದದ್ದನ್ನೆಲ್ಲ ಗಬಗಬಿಸುವ ’ಕಾಯಿಲೆ’ ಅವಳಿಗೆ! ತನ್ನನ್ನು ಕಿತ್ತು ತಿನ್ನುತ್ತಿರುವ ಈ ಪರಿಯ ಅಸಾಧ್ಯ ಹಸಿವನ್ನು ಕಡಿಮೆ ಮಾಡಲು ಪಾಪ ಏನೇನೋ ಔಷಧಿ ತೆಗೆದುಕೊಂಡು ಏನೂ ಉಪಯೋಗವಾಗದೆ, ಕೊನೆಗೆ ಈಗ ಜಾಹೀರಾತಿನಲ್ಲಿ ತೋರಿಸುವ ಔಷಧಿಯ ಬಗ್ಗೆ ತಿಳಿದುಕೊಂಡು ಕೃತಾರ್ಥಳಾಗಿದ್ದಾಳೆ. ಜಾಹೀರಾತಿನ ಕೊನೆ ಮಾರ್ಮಿಕವಾಗಿದೆ. ತರಹೇವಾರಿ ತಿನಿಸುಗಳನ್ನು ಒಂದು ಟೇಬಲ್ ಮೇಲೆ ಇಟ್ಟಿರುತ್ತಾರೆ. ನಮ್ಮ ಮಹಿಳೆ ಆತ್ಮಸ್ಥೈರ್ಯದಿಂದ ಹೆಜ್ಜೆಯಿಕ್ಕುತ್ತ (ಹಿಂದಿನಿಂದ ಮಸ್ತ ಪೈಕಿ ಸಮಯೋಚಿತ ಸಂಗೀತ ಬರುತ್ತಿರುತ್ತದೆ) ಟೇಬಲ್ಲಿನತ್ತ ಬಂದು ಆ ತಿಂಡಿಗಳತ್ತ ಒಂದು ನಿರ್ಲಿಪ್ತ ಮುಗುಳ್ನಗೆ ಬೀರಿ ಹಾಗೆಯೇ ತನ್ನ ದೈನಂದಿನ ಕಾರ್ಯಗಳತ್ತ ಮುಂದರಿದುಬಿಡುತ್ತಾಳೆ!

ಹಸಿವಿನ ಸಮಸ್ಯೆ ಎಂಬುದು ನಮ್ಮ ಸಮಾಜದ ಸಂದರ್ಭದಲ್ಲಿ ಪಡೆದುಕೊಳ್ಳುವ ಅರ್ಥಕ್ಕೂ ಇಲ್ಲಿ ಅದು ಪಡೆಯುವ ಅರ್ಥಕ್ಕೂ ಎಂಥ ವ್ಯತ್ಯಾಸ. ನಮ್ಮಲ್ಲಿ ಈ ತರಹದ ಜಾಹೀರಾತನ್ನು ಕಲ್ಪಿಸಿಕೊಳ್ಳಲಾದರೂ ಸಾಧ್ಯವಾದೀತೆ? ಸದ್ಯಕ್ಕಂತೂ ಇಲ್ಲ.