ಬ್ಲಾಗಿಗರ ಕಾಳಗ

ಮೊನ್ನೆ ರವಿವಾರ ಬಸವನಗುಡಿಯಲ್ಲಿ ನಡೆದ ಬ್ಲಾಗಿಗರ ಕೂಟ ಅತ್ಯಂತ ಯಶಸ್ವೀ ಕೂಟ ಎಂದು ನಾನು ಈ ಮೂಲಕ ಘೋಷಿಸುತ್ತಿದ್ದೇನೆ. ಏಕೆಂದರೆ ಅದರ ಬಗ್ಗೆ ಜಗಳಗಳಾಗುತ್ತಿವೆ. ಯಾವುದೇ ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ ಅಥವಾ ವಿದ್ಯಮಾನವಾಗಲಿ ಸಕ್ಸೆಸ್ಫ಼ುಲ್ ಆಗುವುದು ಯಾವಾಗ ಎಂದರೆ ಅದು ಜನರಲ್ಲಿ ಆಸಕ್ತಿ ಮೂಡಿಸುವುದಷ್ಟೆ ಅಲ್ಲದೆ, ಅದನ್ನು ಉಳಿಸಿಕೊಂಡಾಗ. ಯಾರನ್ನೋ ಬರಿ ಹೊಗಳಿದರೆ ಅಥವಾ ತೆಗಳಿದರೆ ಅವರ ಬಗೆಗಿನ ಆಸಕ್ತಿ ಕಾಲಕ್ರಮದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಅತ್ಯಂತ ಯಶಸ್ವೀ ವ್ಯಕ್ತಿಗಳ ಉದಾಹರಣೆಗಳನ್ನು ಗಮನಿಸಿ: ಪಟಕ್ಕನೆ ನಿಮ್ಮ ಮನಸ್ಸಿಗೆ ತೋಚುವ ಹೆಸರುಗಳನ್ನೇ ತೊಗೊಳ್ಳಿ; ಶಾಹ್ ರುಖ್ ಖಾನ್ ಹೆಚ್ಚು ಯಶಸ್ವೀ ವ್ಯಕ್ತಿಯೋ ಅಲ್ಬರ್ಟ್ ಐನ್‍ಸ್ಟೈನ್‍ನೋ; ಉತ್ತರ ಅತ್ಯಂತ ಸ್ಪಷ್ಟ; ಬೆಳಕಿನಷ್ಟು ನಿಚ್ಚಳ. ಇದನ್ನೇ ಸಾರ್ವತ್ರೀಕರಿಸಿ ನೋಡಿ. ಅತ್ಯಂತ ಸಕ್ಸೆಸ್‍ಫುಲ್ ವ್ಯಕ್ತಿಗಳೆಂದರೆ ಸಿನೆಮಾ ತಾರೆಯರು ಮತ್ತು ಕ್ರಿಕೆಟಿಗರು. ಅವರು ಒಂದು ಕೆಟಗರಿ. ಇನ್ನು ವಿಜ್ಞಾನಿಗಳು, ಸಂತರು, ತುಡುಗರು, ಕೊಲೆಗಡುಕರು ಇನ್ನೊಂದು ಕೆಟಗರಿ. ಪೇಜ್ ೩ಯೇ ಜಗತ್ತು. ಗಾಸಿಪ್‍ಗಳು, ಪರಸ್ಪರ ದೋಷಾರೋಪಣೆ, ವೈಯಕ್ತಿಕ ವಿಚಾರಗಳ ಪ್ರಸ್ತಾಪ, ಇವೆಲ್ಲ ಇಲ್ಲದಿದ್ದರೆ ಯಶಸ್ಸು ಚಲಾವಣೆಯಲ್ಲಿ ಉಳಿಯುವುದಿಲ್ಲ. ಆದುದರಿಂದ ಮೊದಲಿಗೆ ನಾನು – ಸಂಘಟಕರ ವೈಯಕ್ತಿಕ ಪರಿಚಯ ನನಗಿಲ್ಲ – ’ಪ್ರಣತಿ’ ಛಾವಣಿಗೆ ಅಭಿನಂದನೆ ಕೋರುತ್ತೇನೆ.

ಹೀಗಿರುವಾಗ ಸಂತೋಷಕುಮಾರರ ಪೋಸ್ಟನ್ನು ಓದಿದಾಗ ನನಗೆ ಸ್ವಲ್ಪ ಖುಷಿಯೇ ಆಯಿತು. ಲಲಲ ಎಂದು ಗುನುಗುತ್ತ ಬಾಯಿ ಚಪ್ಪರಿಸಿದೆ. ಅವರು ಜನಪ್ರಿಯವಲ್ಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ನೋಡಿ ನಾನು ಕಾತರದಿಂದ ಅದಕ್ಕೆ ಒದಗುವ ಗತಿಯನ್ನು ಕಾಯುತ್ತ ಕೂತೆ. ಅಲ್ಲಿಯವರೆಗೆ ಶ್ರೀಯವರ ರಿಪೋರ್ಟನ್ನೊಳಗೊಂಡಂತೆ ಒಂದೆರಡು ಉತ್ಸಾಹಭರಿತ ಅಭಿಪ್ರಾಯಗಳನ್ನೋದಿದ್ದೆ. ಸಂತೋಷ್ ಅವರಿಗಾದ ನಿರಾಶೆಯಿಂದ ನನಗೆ ಸಂತೋಷವೇ ಆಯಿತು (ಅದರಲ್ಲಿನ ಎಷ್ಟೋ ಅಂಶಗಳು ನನಗೆ ಅನ್‍ರೀಸನೆಬಲ್ ಎಂದು ತೋರಿದರೂ). ನಂತರ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನೂ ಓದಿದೆ. ಸಂತೋಷ್ ಅವರ ನಂತರದ ಪ್ರತಿಕ್ರಿಯೆಯ ಪೋಸ್ಟನ್ನೂ ಓದಿದೆ. ಆದರೆ ಆ ಪೋಸ್ಟನ್ನು ಓದಿ ನನಗೆ ಮೊದಲಿನಂತೆ ಸಂತಸವಾಗಲಿಲ್ಲ. ಅದರ ಬಗ್ಗೆ ಮುಂದೆ ಹೇಳುತ್ತೇನೆ. ಇದೆಲ್ಲದರ ಬಗ್ಗೆ ಒಬ್ಬ ’ಸೆಲೆಬ್ರಿಟಿ’ ಬ್ಲಾಗರ್ ಫ಼್ರೆಂಡ್ ಜೊತೆಗೂ ಮಾತಾಡಿದೆ. ಅವರೂ ಈ ಎಲ್ಲ ವಿದ್ಯಮಾನಗಳಿಂದ ತುಂಬಾ ಹುರುಪಾಗಿದ್ದರು. ನಾನೂ ಮತ್ತಷ್ಟು ಹುರುಪಾಗಿ, ಆ ಕೂಟದಲ್ಲಿ ಭಾಗವಹಿಸಿರದಿದ್ದರೂ ಈ ಕಾಮೆಂಟರಿ ಬರೆಯುತ್ತಿದ್ದೇನೆ. ಇದನ್ನು ನಾನು ತಮಾಷೆ ಹಾಗೂ ಗಾಂಭೀರ್ಯವನ್ನು ಯಾರಿಗೂ ಗೊತ್ತಾಗದಂತೆ ಹದವಾಗಿ ಮಿಶ್ರಣ ಮಾಡಿ ಬರೆಯುತ್ತಿದ್ದೇನೆ. ಇದರಿಂದ ಓದುಗರಿಗೆ ಅನುಕೂಲವಾಗಲಿಕ್ಕಿಲ್ಲ. ನನಗಂತೂ ಅನುಕೂಲವಿದೆ: ನಾನು ತಮಾಷೆಗೆ ಬರದದ್ದನ್ನು ಯಾರಾದರೂ ಹೊಗಳಿದರೆ, ಹೌದು, ಅದು ಅತ್ಯಂತ ಘನಿಷ್ಠ ಸಂಗತಿ ಎನ್ನುತ್ತೇನೆ; ಇನ್ನು ನಾನು ಬರೆದ ಏನನ್ನೋ ಓದಿ ಯಾರಾದರೂ ಇರಿಟೇಟ್ ಆದರೆ, ಅದು ಕೇವಲ ತಮಾಶೆ ಎಂದುಬಿಡುತ್ತೇನೆ.

ಸಂತೋಷ್ ಅವರು ಅನವಶ್ಯಕವಾಗಿ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಕೆಲವರು ತಕರಾರು ತೆಗೆದಿದ್ದಾರೆ. ನಾನು ಇದನ್ನು ಒಪ್ಪೋದಿಲ್ಲ. ವ್ಯಕ್ತಿಗಳ ಉಡುಗೆ, ಭಾಷೆ, ರೂಪ, ಮಾತು ಇವೇ ಮೊದಲಾದವುಗಳ ಬಗ್ಗೆ ಪಟಕ್ಕನೆ ಜಜ್ ಮಾಡುವುದು, ಪೂರ್ವಗ್ರಹ ಬೆಳೆಸಿಕೊಳ್ಳುವುದು ನಮ್ಮ ಸ್ವಭಾವ. ಸ್ವಭಾವ ಸ್ವಾಭಾವಿಕ. ಸ್ವಾಭಾವಿಕವಾದದ್ದು ಹೇಗೆ ಅನವಶ್ಯಕವಾದೀತು? ಮತ್ತು ಅವರು ಹೇಳಿರುವ ಅಂಶಗಳು – ಚಡ್ದಿ ಧರಿಸಿದ್ದ ಬ್ಲಾಗರ್, ಬೋಳುತಲೆಯ ಮೇಲಿನ ಚಾಳೀಸು – ಎದ್ದು ಕಾಣಿಸುವಂಥವು. ಅವನ್ನು ನಾವು ಬಿಟ್ಟೇವೆ? ಆದರೆ ಅವರ ತಕರಾರುಗಳ ಬಗ್ಗೆ ನನ್ನ ತಕರಾರು ಬೇರೆ ಇದೆ: ಅವರ ಪ್ರಶ್ನೆಗಳು ಅತ್ಯಂತ ಸರಳವಾಗಿವೆ; ಅವರಿಗೆ ಅದು ಹೇಗೆ ಉತ್ತರ ಗೊತ್ತಾಗಿಲ್ಲವೋ ಏನೋ. ಚಡ್ದಿ ಹಾಕಿಕೊಂಡು ಒಬ್ಬರು ಬಂದಿದ್ದರು ಎಂದರೆ ಅವರು ಖರೆ ಬ್ಲಾಗರ್. ಬ್ಲಾಗಿಂಗ್ ಎನ್ನುವುದು ಅರೆಬರೆ ಸಾಹಿತ್ಯವಲ್ಲವೆ? ಹೀಗಾಗಿ ಚಡ್ಡಿ ಅತ್ಯಂತ ಪ್ರಸ್ತುತವಾದ ಉಡುಪು. ಅಲ್ಲದೇ ಚಡ್ಡಿ ಹಾಕಿಕೊಂಡು ಆರಾಮಶೀರ ಕೂತು ಬರೆಯುವ ಅನುಭವ ಸಂತೋಷ ಅವರಿಗೆ ಇಲ್ಲವೆಂದು ತೋರುತ್ತದೆ. (ನಾನಿದನ್ನು ಚಡ್ಡಿ ಹಾಕಿ ಕೂತೇ ಬರೆಯುತ್ತಿದ್ದೇನೆ.) ಇಲ್ಲದ್ದಿದ್ದರೆ ಅವರು ಅದನ್ನು ಪ್ರಶ್ನಿಸುತ್ತಿರಲಿಲ್ಲ. ಚಡ್ದಿ ಹಾಕಿಕೊಂಡು ಬ್ಲಾಗಿಸಲಿ, ಅಲ್ಲಿಯೂ ಹಾಗೇ ಬರಬೇಕೇ ಎಂದರೆ, ಅವರು method blogger (method actor ಥರ) ಎನ್ನುತ್ತೇನೆ. ಅಲ್ಲದೇ ಜುಬ್ಬಾ, ಜೀನ್ಸ್ ಪ್ಯಾಂಟು, ಬಗಲಲ್ಲಿ ಜೋಳಿಗೆ, ಕುರುಚಲು ಗಡ್ದ ಬಿಟ್ಟುಕೊಂಡು ಬರಲು ಬ್ಲಾಗರುಗಳೇನು ನವ್ಯ ಸಾಹಿತಿಗಳೆ?

ಇನ್ನೊಬ್ಬರ ಕನ್ನಡಕ ತಲೆಯೇರಿ ಕುಳಿತಿತ್ತಂತೆ. ಇದು ಮೇಲ್ನೋಟಕ್ಕೆ ಸ್ವಲ್ಪ ಅಸಮಂಜಸ ಎನ್ನಿಸಿದರೂ, ಸರಿಯಾಗಿ ವಿಶ್ಲೇಷಿಸಿದರೆ ಸುಲಭವಾಗಿ ಬಗೆಹರಿಯುವ ಸಮಸ್ಯೆ. ಮೊದಲಿಗೆ ಚಾಳಶಿಯ ಸ್ವಾಭಾವಿಕ ಗುಣವನ್ನು ಪರಿಗಣಿಸೋಣ. ಅದೆಂದರೆ ಕೆಳಗೆ ಜರಿಯುವುದು. ಮೂಗಿನ ಮೇಲೆ ಕೂಡದೆ ಕೆಳಗೆ ಜರಿಯುತ್ತಿರುತ್ತದೆ; ಅದನ್ನು ಮೇಲೆ ಮೇಲೆ ಎಳೆದು ಎಳೆದು ಹಾಕುತ್ತಿರುತ್ತಾರೆ ಪಾಪ. ಹೆಚ್ಚೂಕಡಿಮೆಯಾದರೆ ಕೆಳಗೇ ಬಿದ್ದು ಹೋಗುತ್ತದೆ. ಹೀಗಿದ್ದಾಗ ಆ ಚಾಳಶಿ ತಲೆ ಕಣ್ಣು ಹಣೆ ಕೂದಲು ಎಲ್ಲ ದಾಟಿ ತಲೆಯ ಮೇಲೆ ಹೇಗೆ ಹೋಯಿತು. ಹಾಂ.. ಕೂದಲು? ಕೂದಲೆಲ್ಲಿದೆ? ಅದೇನಾಗಿರಬೇಕೆಂದರೆ ಸ್ಟೇಜಿನ ಮೇಲೆ ಭಾಷಣಕಾರರು ಜವಾಬ್ದಾರಿ, ಸಾಂಸ್ಕೃತಿಕ ಮಹತ್ವ, ಸಂಕ್ರಮಣದ ಈ ಕಾಲಘಟ್ಟ ಮೊದಲಾದುವುವನ್ನು ಝಳಪಿಸುವಾಗ ಹಾಗೇ ಅಕಸ್ಮಾತ್ತಾಗಿ ಚಾಳಶಿಯ ವ್ಯಕ್ತಿಗೆ ಸಣ್ಣಂಗೆ ನಿದ್ದೆ ಬಂದು ತಲೆ ಹಿಂದೆ ಕುರ್ಚಿಗೊರಗಿಸಿರಬೇಕು. ಮೂಗಿನ ಏರಕಲು ರಸ್ತೆಗಿಂತ ಥಳಥಳನೆ ಹೊಳೆಯುತ್ತಿರುವ ಬಟಾಬಯಲು ಇಳಿಜಾರಿನ ತಲೆ ನಮ್ಮ ಚಾಳೀಸಿಗೆ ಆಕರ್ಷಣೀಯವಾಗಿ ಕಂಡದ್ದರಲ್ಲಿ ಯಾವುದೇ ಚಮತ್ಕಾರವಿಲ್ಲ.

ಅದೆಲ್ಲ ಇರಲಿ. ಸಂತೋಷ್ ಅವರಿಗೆ ಆದ ನಿರಾಸೆಯ ಕಾರಣಗಳನ್ನೂ ಯಾರೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ನೀಲಿ ಚೌಕಡಿಯ ತುಂಬುತೋಳಿನ ಶರಟು (ಚಹಾದ ವೇಳೆಯಲ್ಲಿ ತೋಳುಗಳಿಗೆ ಒಂದೆರಡು ಮಡಿಕೆ ಹಾಕಿದ್ದರೆನ್ನಿ), ಬ್ರೌನ್ ಪ್ಯಾಂಟು ಹಾಕಿಕೊಂಡು, ಮಸ್ತ ಪೈಕಿ ಸೇಂಟು ಹೊಡೆದುಕೊಂಡು ಬಂದ ಅವರನ್ನು ಜನರು ಗಮನಿಸಲೇ ಇಲ್ಲ. ಅದೂ ಹೋಗಲಿ. ಟೀನಾ, ಚೇತನಾ, ಜೋಗಿ ಇಂಥ ಬ್ಲಾಗುಲೋಕದ ಅಮಿತಾಭ್ ಬಚ್ಚನ್, ಶಾಹ್ ರುಖ್ ಖಾನ್, ದೀಪಿಕಾ ಪಡುಕೋಣೆಗಳನ್ನು ನೋಡಲು ಬಂದ ಅವರಿಗೆ, ನಮ್ಮ ಈ -ಟಿವಿಯ ಕನ್ನಡ ಧಾರಾವಾಹಿಗಳ ಸದಾ ನಿಟ್ಟುಸಿರುಬಿಡುವ ಅತ್ತೆ ಮಾವಂದಿರಂಥ ಮಂದಿಯೇ ನೋಡಿದಲ್ಲೆಲ್ಲಾ ಕಂಡುಬಂದರೆ ನಿರಾಸೆಯಾಗದೆ ಇರುತ್ತದೆಯೇ? (ಉದಯ ಟಿವಿ ಧಾರಾವಾಹಿಗಳ ರೂಕ್ಷ ಪಾತ್ರಗಳು ಅಲ್ಲಿದ್ದವೋ ಇಲ್ಲವೋ ಗೊತ್ತಿಲ್ಲ!) ಇಷ್ಟೇ ಸಾಲದೆಂಬಂತೆ ’ಚಹಾ ವಿರಾಮ’ ಎಂದರೆ ಕೇವಲ ಚಹಾ ಕೊಡುವುದು ಎಂಥ ಪದ್ಧತಿ? ಗದಗಿನ ಲೋಕಪ್ರಸಿದ್ಧ ಬದನಿಕಾಯಿ ಭಜಿ ಇಲ್ಲದಿದ್ದರೆ ಹೋಗಲಿ, ಕೊನೆಯ ಪಕ್ಷ ಮಂಡಾಳವೋ, ಅಥವಾ ಮಿರ್ಚಿಯದೋ ಸರಬರಾಜು ಆಗಬಾರದೇ? ಮಿರ್ಚಿಯ ಖಾರ ಹೊರಗಿಂದ ಒಳಗೆ ಹೋಗಿದ್ದರೆ ಅವರೊಳಗಿನ ಖಾರ ಅವರ ಲೇಖನಗಳ ಮೂಲಕ ಹೀಗೆ ಹೊರಬರುತ್ತಿರಲಿಲ್ಲ. ಗದಗು ನನ್ನ ಹುಟ್ಟೂರಾದ್ದರಿಂದ ಮುಂದಿನ ಭೇಟಿಗಳಲ್ಲಿ ಬದನಿಕಾಯಿ ಭಜಿ ಇರಲೇಬೇಕೆಂದು ನಾನು ಈ ಮೂಲಕ ಆಗ್ರಹಿಸುತ್ತೇನೆ.

ಈ ವಾಗ್ವಾದಗಳಿಂದಾದ ಇನ್ನೊಂದು ಮಜಾ ಪರಿಣಾಮವೇನೆಂದರೆ, ಬ್ಲಾಗುಲೋಕದ ಸೆಲೆಬ್ರಿಟಿಗಳನ್ನು ಉದ್ಧರಿಸಿ ಪೋಸ್ಟುಗಳನ್ನು ಬರೆದವರೆಲ್ಲ ಈಗ ಸೆಲೆಬ್ರಿಟಿಗಳಾಗಿ ಹೊಮ್ಮಿದ್ದಾರೆ; ಆ ದೊಡ್ದವರ ಸಾಲಿನಲ್ಲಿ ಇವರೂ ಈಗ ನಿಂತಿದ್ದಾರೆ. ಈ ಬ್ಲಾಗಿಗರ ಕಾಟದ ಬಗ್ಗೆ ಪೋಸ್ಟು ಬರೆದವರ ಮೂಲ ಉದ್ದೇಶ ಅದೇ ಆಗಿದ್ದಿತು. ಆದರೆ as usual ಆಗಿ ನಮ್ಮ ಮಹಾಜನಗಳು ಆ ಧೂರ್ತತನವನ್ನು ಮನಗಾಣದೆ ಅವರ ಉದ್ದೇಶಪೂರ್ತಿಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ! ತಪ್ಪೇನಿಲ್ಲ ಬಿಡಿ. ಎಲ್ಲರೂ ಸೆಲೆಬ್ರಿಟಿಗಳಾದರೂ ಪರವಾಗಿಲ್ಲ. ಟ್ಯಾಬ್ಲಾಯ್ಡ್ ಬ್ಲಾಗುಗಳ ಹೊಸ ಬಿಸಿನೆಸ್ ಶುರುವಾಗುತ್ತದೆ. ಅಲ್ಲಿ ಯಾವ ಬ್ಲಾಗಿಗರು ಅತ್ಯಂತ ಟ್ರೆಂಡಿ ಉಡುಗೆ ಧರಿಸುತ್ತಾರೆ, ಯಾವ ಬ್ಲಾಗಿ ಯಾವ ಬ್ಲಾಗನಿಗೆ ಗಾಳ ಹಾಕುತ್ತಿದ್ದಾಳೆ ಎಂಬಿತ್ಯಾದಿ ತರಹೇವಾರಿ ಖಡಕ್ ಸುದ್ದಿಗಳನ್ನು ಗುದ್ದಬಹುದು. ಪಾಟೀಲರು, ಶ್ರೀ ಮತ್ತಿತರ ಹೋರಾಟಗಾರರಿಗೆ ನನ್ನ ಅಭಿನಂದನೆಗಳು.

ನಮ್ಮ ಪಾಟೀಲರು, ’ಇವೆಲ್ಲ ನನ್ನ ಸ್ವಂತ ಅಭಿಪ್ರಾಯ, ಜಜ್ ಮಾಡಲು ಹೋಗಬೇಡಿ’ ಎಂಬರ್ಥದ ಮಾತುಗಳನ್ನು ಆಡುತ್ತಲೆ ತಮ್ಮ ಎರಡನೆಯ ಪೋಸ್ಟ್‍ನಲ್ಲಿ ಅವರ ಅಭಿಪ್ರಾಯಗಳಿಗೆ ಭಿನ್ನ ಅಭಿಪ್ರಾಯ ಕೊಟ್ಟವರನ್ನೆಲ್ಲ ಗುಡಿಸಿಹಾಕಿ ’ಗುತ್ತಿಗೆದಾರರು’ ಎಂದು ಜರಿದಿರುವುದು ಸ್ವಲ್ಪ ಚೋದ್ಯವೇ. ಅಲ್ಲದೆ ಇನ್ನು ಹೆಚ್ಚಿನದೇನನ್ನೂ ಹೇಳಲು ನನ್ನಲ್ಲಿಲ್ಲ, (ನೀವೂ ಹೇಳದಿದ್ದರೆ ನಿಮ್ಮ ಆರೋಗ್ಯಕ್ಕೆ ಕ್ಷೇಮ, ಎಂದು ಕಂಸದಲ್ಲೂ), ಹೆದರಿಕೆ ಹುಟ್ಟಿಸುವ ವ್ಯಾಧಿಗಳ ಮೂಲಕ ಪ್ರಕಟವಾಗಿಯೂ ಹೇಳಿಬಿಟ್ಟಿದ್ದಾರೆ. ಹೀಗಾದರೆ ಹೇಗೆ? ಹಾಗಾಗುವುದು ಬೇಡ. ಜಗಳಗಳು ಬೇಕು; ವಾದಗಳಾದಷ್ಟೂ ನಾವು ಪ್ರಬುದ್ಧರಾಗ್ತೀವಿ; ನಮ್ಮ ಇಡೀ ಸಮಾಜವೇ ಒಂದು ರೀತಿಯ ‘Argumentation Crisis’ನಲ್ಲಿದೆ. ಎಲ್ಲದಕ್ಕೂ ಸುಮ್ಮನೆ ಹೂಂಗುಟ್ಟುವ conformance ನಮಗೆ ಬೇಡ. ಪ್ರಶ್ನೆಗಳನ್ನೆತ್ತುವ, ಪ್ರಶ್ನೆಗಳನ್ನೆದುರಿಸುವ ಮನೋಭಾವ ನಮ್ಮಲ್ಲಿ ಹೆಚ್ಚಾಗಬೇಕು. ಇಲ್ಲದಿದ್ದರೆ ನಾವು ನಿಂತಲ್ಲೆ ನಿಲ್ಲುತ್ತೇವೆ. ಅಲ್ಲದೆ ಬದುಕು ಬಹಳ ಸಪ್ಪೆಯಾಗುತ್ತದೆ.

[ನನ್ನ ಈ ಬರಹದಿಂದ ಯಾವುದಾದರೂ ವ್ಯಕ್ತಿಗೆ, ಅಲೌಕಿಕ ಶಕ್ತಿಗೆ, ಸಂಸ್ಥೆಗೆ, ಸಂವಿಧಾನಕ್ಕೆ, ನಿಮ್ಮ ಆತ್ಮೀಯ ಸಿನೆಮಾ ತಾರೆ, ಧಾರಾವಾಹಿ ಪಾತ್ರ, ಸೆಲೆಬ್ರಿಟಿ, ಸೆಲೆಬ್ರಿಟಿಗಳ ಸಾಕು ನರಿ ನಾಯಿ, ಅಥವಾ ಇನ್ನ್ಯಾವುದಕ್ಕಾದರೂ ಅಪಚಾರವಾಗಿದ್ದಲ್ಲಿ, ಈ ಕೂಡಲೆ ಹೋಗಿ ನಂದ ವರ್ಸಸ್ ನಂದಿತ ಸಿನೆಮಾ ನೋಡತಕ್ಕದ್ದು. ಪಾಟೀಲರನ್ನೂ ಜೊತೆಗೆ ಒಯ್ಯತಕ್ಕದ್ದು. ಹಾಗೆಯೇ ನಾನು ಅನುಮತಿಯಿಲ್ಲದೆ ಬಳಸಿಕೊಂಡ ಅನಾಮಧೇಯ ಚಾಳೀಸು ಹಾಗೂ ಬಕ್ಕತಲೆಗಳಿಗೆ ಧನ್ಯವಾದಗಳು. ಹಾಗೆಯೇ, ಇಷ್ಟುದ್ದ ಕುಟ್ಟಿದ್ದಕ್ಕೆ ಕ್ಷಮೆಯಿರಲಿ; ಮತ್ತೆ ಹಾಗೆ ಎಡೆಬಿಡದೆ ಕುಟ್ಟುವಾಗ ಆಗಿರಬಹುದಾದ ಖಗೂನಿಟ ಮಿಸ್ಟಿಕುಗಳನ್ನು ಸುಧಾರಿಸಿಕೊಂಡು ಓದಿದ್ದೀರೆಂದು (ಪೂರ್ತಿ ಓದಿದ್ದರೆ!) ಅಂದುಕೊಂಡಿದ್ದೇನೆ.]

20 thoughts on “ಬ್ಲಾಗಿಗರ ಕಾಳಗ

 1. ಚಕೋರ,
  what a superb declaration, what superb thoughts!! ವೆರಿ ಇಂಪ್ರೆಸಿವ್. ನಿಮ್ಮ ಯೋಚನೆಗಳನ್ನು ನೋಡಿದರೆ ತಾವು ಒಬ್ಬ ಅತ್ಯುತ್ತಮ ಥಿಂಕರ್ ಆಗಿ ಎಮರ್ಜ್ ಆಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಆಹ! ಆಹ! ಎಂಥ ಅಪೂರ್ವ ವಾಕ್ಯಗಳು! ನಿಮ್ಮ ಟ್ಯಾಬ್ಲಾಯ್ಡ್ ಬ್ಲಾಗಿನ ಐಡಿಯವನ್ನು ಸೀರಿಯಸ್ ಆಗಿ ತೆಗೆದುಕೊಂಡಿದೇನೆ. ಬ್ಲಾಗುಗಳನ್ನು ಕಮರ್ಶಿಯಲೈಜ್ ಮಾಡುವ ಬಗ್ಗೆ ಬ್ಲಾಗರ್ಸ್ ಮೀಟಿನಲ್ಲಿ ಕೂಡ ಚರ್ಚೆ ನಡೆದಿತೆಂದು ಕೇಳ್ಪಟ್ಟೆ. ನನ್ನಂಥ ಬಡಪಾಯಿಗಳಿಗೆ ದುಡ್ಡುಮಾಡುವ ಐಡಿಯ ಕೊಟ್ಟದ್ದಕ್ಕೆ ನಿಮ್ಮ ಹೆಸ್ರು ಹೇಳಿಕೊಂಡು ತುಪ್ಪದ ದೀಪ ಹಚ್ಚಿ ನಿಮ್ಮ unmethodic ಬ್ಲಾಗಿಂಗಿಗೆ ಜಯವಾಗಲಿ ಎಂದು ಹಾರಯಿಸುತ್ತೇನೆ. ಈ ಜಗಳದಿಂದ ಬಹಳ ಜನರಿಗೆ ಫಾಯಿದೆಯಾಗಿ ಅವರ ಪಾಲಿನ ಕೀರ್ತಿ ಅವ್ರಿಗೆ ದೊರಕಲೇಬೇಕು, ಈ ರೀತಿಯ ಜಗಳಗಳು ಕನ್ನಡ ಬ್ಲಾಗರುಗಳ (ಅಪ)ಕೀರ್ತಿಪತಾಕೆ ಹಾರಿಸುವಲ್ಲಿ, ಅವರ ಪದಕೋಶದ ವೈಶಿಷ್ಟ್ಯತೆಯ ’ಅನಾವರಣ” ಮಾಡುವಲ್ಲಿ ಸಹಕಾರಿಯಾಗಬೇಕು, ತನ್ಮೂಲಕ ಬೇಸರ ತುಂಬಿದ ಬ್ಲಾಗ್ ಪ್ರಪಂಚಕ್ಕೆ ಒಂದು ಕೊಳೆ, ಊಪ್ಸ್!! ಸಾರಿ!! ’ಖಳೆ’ಯನ್ನ ತಂದುಕೊಡಬೇಕು ಎಂದು ಈ ಮೂಲಕ ಎಲ್ಲ ಬ್ಲಾಗಿಗರಲ್ಲಿ ಕಳಕಳಿಯಿಂದ ವಿನಂತಿಸುತ್ತೇನೆ.
  ಬ್ಲಾಗುಲೋಕದಲ್ಲಿ ಈ ರೀತಿಯ ಸಂತಸ, ಎಕ್ಸೈಟ್ ಮೆಂಟು ಹರಡಲು ಕಾರಣರಾದ ಸಂತೋಷ ಸಿ. ಪಾಟೀಲರಿಗೆ ಈ ಮೂಲಕ ಹೃತ್ಪೂರ್ವಕ ಅಭಿನಂದನೆಗಳು.
  ಚಕೋರ ಎಂಬ ಹೊಸ ಸೆಲೆಬ್ರಿಟಿ ಬ್ಲಾಗರಿಗೆ, ಜಯವಾಗಲಿ!!

  Unlock Kannada Blogs!
  Bring the zing-bang back into your posts!!

  -ಟೀನಾ.

 2. ಶರಣರಿ ಯಪ್ಪಾ,

  ನಾನೂ ನಿನ್ನೆಯಿಂದ ಸಂತೋಷರ ಅಭಿಪ್ರಾಯ ಮತ್ತು ಅದಕ್ಕೆ ಬಂದ ಕಮೆಂಟುಗಳನ್ನು ಗಮನಿಸುತ್ತಿದ್ದೇನೆ, ಅವರಿಗೆ ಹಾಂಗ ಅನಿಸಿದ್ರ ತಪ್ಪೆನೈತ್ರಿ. One Man’s food is another man’s poison ಅನ್ನೊ ಹಾಗೆ “ಲೋಕೋ ಭಿನ್ನ ರುಚಿಃ”.

  ಇನ್ನು ಮುಂದಿನ ಸಭೆಯಲ್ಲಿ ಬದನಿಕಾಯಿ ಅಥವಾ ಮಿರ್ಚಿ ಭಜಿ ಇರಲೆಬೇಕೆಂಬ ನಿಮ್ಮ ಆಗ್ರಹಕ್ಕೆ ನನ್ನ ಬೇಷರತ್ (ಕುಮಾರಣ್ಣನ) ಬೆಂಬಲವಿದೆ. (ನಾನು ಮೊದಲ ತಿಂತಿನಿ, ನೀವು ಆಮ್ಯಾಲೆ ಶುರು ಮಾಡಿರಂತ) 🙂

  ಪ್ರೀತಿಯಿರಲಿ

  ಶೆಟ್ಟರು

 3. ಚಕೋರ,
  ನಾನು ಚೆನಾಗಿದೆ ಅಂದ್ರೆ ನೀವು ಇದು ಘನಿಷ್ಟ ಅಂತೀರಿ ಹೌದಲ್ಲೋ!?ಆದ್ರೆ ನಾನು- ಇದು ಚೆನ್ನಾಗೂ, ಯಮಾಶೆಯಾಗೂ ಇದೆ ಅಂತ ಮಿಕ್ಸ್ ಮಾಡೀ ಹೇಳೋಕೆ ಇಷ್ಟಪಡ್ತೀನಿ!
  ನಿಮ್ಮ ವಿಮರ್ಶೆ ಚಪ್ಪರಿಸ್ಕೊಂಡು ಓದಿದೆ. ರಾತ್ರೋರಾತ್ರಿ ಸೆಲೆಬ್ರಿಟಿಯಾಗಿದ್ದನ್ನ ನಾನೂ ಟೀನಾ ಅಂತೂ ಸೆಲೆಬ್ರೇಟ್ ಮಾಡಿದ್ವಿ. ಜೋಗಿ ಸರ್ ಸಿಗ್ಲಿಲ್ಲ. 😦
  ಅಂದಹಾಗೆ, ದೀಪಿಕಾ ಪಡುಕೋಣೆ ಯಾರು ನೀವು ಹೇಳಿದ ಮೂವರಲ್ಲಿ!!? ನಾವು ಇಬ್ಬರು ಹೆಣ್ಣುಮಕ್ಕಳಿದ್ದೇವೆ!! ನಮ್ಮ ನಡುವೆ ಕಿತ್ತಾಟ ಹಚ್ಚುವ ಹುನ್ನಾರವೋ?

  ಈಗ ಚರ್ಚೆ, ವಾದ, ಕದನ್ ಬರೀ ಕಮೆಂಟಿನ ಮೇಲೆ ಮುಂದುವರೆಯಲಿ. ಪ್ರಣತಿಯ ವಿನೂತನ, ಯಶಸ್ವೀ ಕಾರ್ಯಕ್ರಮದ ಬಗೆಗೆ ಬೇಡ. ಬಹುಶಃ ನಿಮ್ಮ ಐಡಿಯಾ ಕೂಡಾ ಹಾಗೇ ಇದೆ ಅಲ್ಲವೆ?

  ಇರಲಿ. ಮುಂದೆ ಚರಿತ್ರೆಯಲ್ಲಿದು ಕನ್ನಡದ ಮೊತ್ತ ಮೊದಲ ಬ್ಲಾಗ್ ವಾರ್ ಅಂತ ದಾಖಲಾಗತ್ತೆ. ಅದರಲ್ಲಿ ನಾವೆಲ್ಲ ಪಿಳಿಪಿಳಿ ಕಣ್ ಬಿಟ್ಕೊಂಡು ಕುಂತಿರ್ತೀವಿ. ಪಾಟೀಲರು ಅಜರಾಮರವಾಗ್ತಾರೆ. ಪ್ರಣತಿಯ ಸಾಹಸ ಕೂಡ.
  ರುಚಿರುಚಿ ಬರಹಕ್ಕೆ ಥ್ಯಾಕ್ಸ್.

  – ಚೇತನಾ

 4. ಚಕೋರರೇ,
  ನಮ್ಮ ಪಾಟೀಲರ ಬ್ಲಾಗ್‌ನಲ್ಲಿ ನೀವಿಲ್ಲಿ ಬರೆದಿರೋದರ ಕ್ಲೂ ಸಿಕ್ತು, ಹಿಡ್ಕೊಂಡು ಬಂದೆ, ಸಖತ್ತಾಗಿದೆ ನಿಮ್ಮ ಪೋಸ್ಟ್, ಬಿದ್ದು ಬಿದ್ದು ನಕ್ಕು, ನಕ್ಕು ನಕ್ಕು ಬಿದ್ದು – ಒಟ್ಟಿನಲ್ಲಿ ಬೀಳಿಸಿದ್ರಿ ನನ್ನ – ಅದಕ್ಕೆ ನಿಮ್ಮ ಮೇಲೆ ಯಾವ ಕ್ರಮ ಕೈಗೊಳ್ಳಬೇಕು ಆಮೇಲೆ ಡಿಸೈಡ್ ಮಾಡ್ತೀನಿ. ಯಾಕಂದ್ರೆ ಈಗ ನನ್ನ ಮುಂದೆ ಅದಕ್ಕಿಂತ ಇಂಪಾರ್ಟೆಂಟು ಬರ್ನಿಂಗ್ ಇಶ್ಯೂ ಒಂದಿದೆ. ಸೆಲೆಬ್ರಿಟಿಗಳನ್ನ ಉದ್ಧರಿಸಿ ಬರೆದವ್ರು ತಾವೇ ಸೆಲೆಬ್ರಿಟಿ ಆಗ್ತಿದ್ದಾರೆ ಅಂತ ಬರೆದ ಪ್ಯಾರ ಕೊನೆಯಲ್ಲಿ ಪಾಟೀಲರ ಹೆಸರಿನ ಜೊತೆ ನನ್ನ ಹೆಸರನ್ನೂ ಹೇಳಿರೋದು ನೋಡಿ ನಂಗೆ ಒಂದು ಸಣ್ಣ ದುರಾಸೆ – ನಾನೂ ಈಗ ಸೆಲೆಬ್ರಿಟಿ ಅಂತ ಟೀನಾ, ಚೇತನಾ ಜೊತೆ ಸೆಲೆಬ್ರೇಟ್ ಮಾಡೋಕೆ ಹೋಗ್‍ಬಹುದಾ ಅಂತ! ದೀಪಿಕಾ ಪಡುಕೊಣೆ ನಂಗೇನ್ ಅಷ್ಟು ಹಿಡಿಸಲ್ಲ, ಸೋ ಆ ಕಿತ್ತಾಟದಲ್ಲಿ ಭಾಗವಹಿಸೋಕೆ ಇಷ್ಟ ಇಲ್ಲ. ಇನ್ ವಿಚ್ ಕೇಸ್, ನೀವು ನನಗೊಂದು ಹೊಸ ಸ್ಟಾರ್ ರೋಲ್ ಕೊಡಬೇಕಾಗುತ್ತೆ!:p ಈ ಮಲ್ಟಿಸ್ಟಾರ್ ಮೆಗಾಸೀರಿಯಲ್ ಬಗ್ಗೆ ಇನ್ನೊಂದು ಡೌಟು – ಕಿತ್ತಾಟ-ಕಾದಾಟದಿಂದ ಸೆಲೆಬ್ರಿಟಿ ಬ್ಲಾಗರ್ ಆಗೋಹಾಗಿದ್ರೆ ನಾನು born celebrity ಆಗಿರಬೇಕು! ಹಾಗಿದ್ರೆ ಇಲ್ಲಿಂದ ನಂಗೆ ಸಿಕ್ಕಿದ್ದೇನು ಅಂತ ! (ನಿಮ್ಮ ಮೇಲೆ ನನಗೆ ಐಡೆಂಟಿಟಿ ಕ್ರೈಸಿಸ್ ತಂದಿಟ್ಟ ಕಾರಣಕ್ಕೆ ಕ್ರಮ ತೊಗೋಬಹುದಾ ನೋಡ್ತೀನಿ!:D) ಬೈ ದ ವೇ ನಾನೂ ಥೇಟ್ ಸ್ಮೃತಿ ಇರಾನಿ ಥರ ಆ ಸೀರಿಯಲ್‍ನಿಂದ ಈಗಷ್ಟೇ ಹೊರಗ್ ಬಂದುಬಿಟ್ಟೆ. ಬಿಜೆಪಿ ಆಫೀಸ್ ಹುಡುಕ್ಬೇಕು ನೆಕ್ಸ್ಟು!;)
  ಏನೇ ಇರಲಿ ಇಲ್ಲಿ ಈ ಥರ ರೋಲ್‍ಗೆ ಕಿತ್ತಾಡಿ, ಐಡೆಂಟಿಟಿ ಕ್ರೈಸಿಸ್ ಎದುರಿಸೋದೇ ಗೋರ್ಕಲ್ಲ ಮೇಲೆ ಮಳೆ ಸುರಿಸೋದಕ್ಕಿಂತ ಬೆಟರ್ರು ಬಿಡಿ, ಸೋ ಯು ಹ್ಯಾವ್ ಮೈ ಲಾಯಲ್ಟಿ ಹಿಯರ್:))

 5. ಚಕೋರ,

  ನಾನೂ ಇದನ್ನ ಲಲಲ (ನಿಮ್ಮ ಸ್ಟೈಲಲ್ಲೆ) ಅಂತ ಓದಿದೆ. ಬರೀ ಮಿರ್ಚಿ ಭಜಿ ಇದ್ರ ಆಗೋಂಗಿಲ್ಲ. ನಮಗೆ ಮಲೆನಾಡು ಸ್ಟೈಲಲ್ಲಿ ಹಲಸಿನಕಾಯಿ ಹಪ್ಪಳವೂ ಬೇಕು. ನಿಂತಲ್ಲೆ ನಿಲ್ಲದೆ ಮುಂದೆ ಹೋಗಲಿಕ್ಕೆ ಬೇಕಾಗುವ ಎಲ್ಲ ಶಕ್ತಿಯನ್ನೂ ಬರಿಯ ಚರ್ಚೆ ಮಾಡಿ ಪೋಲು ಮಾಡುತ್ತೇವಾ ಅಂತ ನಂಗೆ ಕುಂತಲ್ಲೇ ಅನುಮಾನ ಬೇರೆ ಬಂದಿದೆ. 🙂
  ಯಾವ್ದಕ್ಕೂ ನಿಮ್ಮ ಮುಂದಿನ ಪೋಸ್ಟಲ್ಲಿ ಈ ನಿಲ್ಲದೆ ಮುಂದೆ ಹೋಗುವುದರ ಬಗ್ಗೆ, ಆಗಾಗ ಅಲ್ಲಲ್ಲಿ ಕೂತು ಸುಧಾರಿಸಿಕೊಂಡು ಮುಂದೆ ಹೋಗುವುದರ ಬಗ್ಗೆ ಬರೀರಿ.

  ಇನ್ನೂ ಲಲಲ ಅಂತನೇ ಅಂತಾ ಇದೀನಿ.

  ಪ್ರೀತಿಯಿಂದ,
  ಸಿಂಧು

 6. “ನೀಲಿ ಚೌಕಡಿಯ ತುಂಬುತೋಳಿನ ಶರಟು (ಚಹಾದ ವೇಳೆಯಲ್ಲಿ ತೋಳುಗಳಿಗೆ ಒಂದೆರಡು ಮಡಿಕೆ ಹಾಕಿದ್ದರೆನ್ನಿ), ಬ್ರೌನ್ ಪ್ಯಾಂಟು ಹಾಕಿಕೊಂಡು, ಮಸ್ತ ಪೈಕಿ ಸೇಂಟು ಹೊಡೆದುಕೊಂಡು ಬಂದ ಅವರನ್ನು ಜನರು ಗಮನಿಸಲೇ ಇಲ್ಲ”

  ಸಾರ್ ನಿಮ್ದುಕೆ ಬೇರೆ ಯಾರ್ದೊಕೋ ನಮ್ದು ಮಿಸ್ಟಿಕ್ ಮಾಡ್ಕೋಂಡಿದೆ. 🙂 ನಮ್ದುಕೆ ಆವತ್ತು ಆ ರೀತಿ ಬಂದಿರಲಿಲ್ಲಾ.. ಬೇಕಾದರೆ ’ಶ್ರೀ’ಯವರನ್ನು ಕೇಳಿ; ಅವರೇ ನನ್ನ “ಔಟ್ ಲುಕ್ ” ನೋಡಿ ಎನೇನೋ ನಿರ್ಧಾರಕ್ಕೆ ಬಂದಿದಾರೆ.. 🙂

  “ನಮ್ಮ ಇಡೀ ಸಮಾಜವೇ ಒಂದು ರೀತಿಯ ‘Argumentation Crisis’ನಲ್ಲಿದೆ. ಎಲ್ಲದಕ್ಕೂ ಸುಮ್ಮನೆ ಹೂಂಗುಟ್ಟುವ conformance ನಮಗೆ ಬೇಡ. ಪ್ರಶ್ನೆಗಳನ್ನೆತ್ತುವ, ಪ್ರಶ್ನೆಗಳನ್ನೆದುರಿಸುವ ಮನೋಭಾವ ನಮ್ಮಲ್ಲಿ ಹೆಚ್ಚಾಗಬೇಕು. ಇಲ್ಲದಿದ್ದರೆ ನಾವು ನಿಂತಲ್ಲೆ ನಿಲ್ಲುತ್ತೇವೆ. ಅಲ್ಲದೆ ಬದುಕು ಬಹಳ ಸಪ್ಪೆಯಾಗುತ್ತದೆ”
  ಸಪ್ಪೆಯಾದ್ರೂ ಓಕೆ, ಆದ್ರೆ ಖಾರ ಅದ್ರೆ ನಮ್ ತರ( ಉ. ಕರ್ನಾಟಕದವರು) ಕೆಲವರಿಗೆ ಇಷ್ಟ ಆಗಲ್ಲ, ಎಲ್ಲಾ ಸ್ವೀಟ್ ಸ್ವೀಟ್ ಆಗಬೇಕು..

  ಆದ್ರೂ ಚೆನ್ನಾಗಿ ಕಾಲೆಳೆದಿದ್ದೀರಾ. ಓದಿ ನಗು ಬಂತು, ವಿಷೇಶವಾಗಿ ಕೊನೆಯ ಪ್ಯಾರ 🙂

 7. ಜಾಲಿಗರ ನಿದ್ದೆಗೆದಿಸಿದ್ದ(ಕಮೆಂಟಿಸಿದವರಿಗೆ ಮಾತ್ರ) ಬ್ಲಾಗು ಕಾಳಗಕ್ಕೆ ಲಲಲ ಹಿನ್ನುಡಿ ಬರೆದ ಚಕೋರರಿಗೆ ಮುಂದಿನ ಸಮಾವೇಶದಲ್ಲಿ ಅವರ ಇಷ್ಟಾರ್ಥಗಳನ್ನ ಪೂರೈಸುವ ಹೊಣೆ ಸಂಘಟಕರದ್ದಾಗಿರುತ್ತೆ……. 🙂

  ನಿಜ ಜನುಮದಲ್ಲಿ ಕ್ಲಿಕಿಸದ ಪಾಟೀಲರ ಬ್ಲಾಗಂಳಕ್ಕೆ ೨ ದಿನಗಳಿಂದ ಅಲೆದು ಅಲೆದು ಸಾಕಾಗೊಗಿತ್ತು ……. 🙂 ಮುಂದಿನ ಹೆಜ್ಜೆ ಮತ್ತಷ್ಟು ಅರ್ಥಪೂರ್ಣವಾಗಿರಲಿ …….. ಚಲೋ ಐತಿ ಹೇಳೊದನ್ನ ಮರೆತರೆ ಹೆಂಗೆ.

  **ಸ್ಪೆಲಿಂಗ್ ಮಿಸ್ಟೇಕ್ಸ್ ….. ಸರಿ ಮಾಡ್ದೆ

  -ಅಮರ

 8. ಶ್ರೀ,
  ನಂಗೂ ದೀಪಿಕಾ ಇಷ್ಟ ಇಲ್ಲ. ನಾನು ಅವಳ ಮಂಡಿ ಅಷ್ಟುದ್ದವೂ ಇಲ್ಲ ಮತ್ತೆ 😦
  ಅದ್ಕೆ, ನಾವಿಬ್ಬರೂ ‘ನೀನು, ನೀನು’ ಅಂತ ಕಿತ್ತಾಡಬೇಕಾದೀತು ಅಂತ ಚಿಂತೆಯಾಗಿತ್ತು ನಂಗೆ 😉
  ನೀವೂ ಈಗ ಸೆಲೆಬ್ರಿಟಿ ಆಗಿದೀರಿ ಅಂತಾದ್ರೆ, ಬನ್ನಿ ಸೆಲೆಬ್ರೇಟ್ ಮಾಡೊಣ!
  ಚಿಯರ್ಸ್!!
  – ಚೇತನಾ

 9. ಒಮ್ಮೆಲೆ ನನ್ನ ಬ್ಲಾಗು ಒಂದೆರಡು ದಿನದ ಮಟ್ಟಿಗಾದರೂ ಸೆಲೆಬ್ರಿಟಿ ಆದಂತೆ ತೋರುತ್ತದೆ. ಎಲ್ಲರಿಗೂ ನಮಸ್ಕಾರ. ಮೊದಲನೇ ಸಲ ಕಮೆಂಟಿಸುವವರ ಕಮೆಂಟುಗಳು ಬಹಳ ಹೊತ್ತು ತಡೆಹಿಡಿಯಲ್ಪಟ್ಟಿದ್ದರೆ ಕ್ಷಮಿಸಿ.

  ಸ್ನೇಹ: ನಕ್ಕದ್ದಕ್ಕೆ ನಿಮಗೂ ಥ್ಯಾಂಕ್ಸ್! ಸ್ನೇಹವಿರಲಿ.

  ಚೇತನಾ @ 4:45 AM: ನೀವು ದೀಪಿಕಾ ಅಲ್ಲ; ಮುಂದೆ ಹೇಳುತ್ತೇನೆ.

  ಅಮರ: ಯಾರು ಹೇಳಲಿ ಬಿಡಲಿ, ಕಾರ್ಯಕ್ರಮ ಛೊಲೊ ಇದ್ದದ್ದಕ್ಕೆ ಇವೆಲ್ಲ ಪ್ರತಿಕ್ರಿಯೆಗಳೆ ಸಾಕ್ಷಿ.

  ಸಂತೋಷ್: ಕಮೆಂಟಿಗೆ ಧನ್ಯವಾದ.

  ಸಿಂಧು: ನಿಮ್ಮ ಎಲ್ಲ ಡಿಮ್ಯಾಂಡ್‍ಗಳನ್ನೂ ಯಥಾವಕಾಶ ಪೂರೈಸೋಣ. ಥ್ಯಾಂಕ್ಸ್!

  ಶ್ರೀ: ಈಗ ನೀವು ಸೆಲೆಬ್ರಿಟಿ ಅನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗೆ ನೋಡಿದರೆ ಸದ್ಯಕ್ಕೆ ನಾನೂ ಸೆಲೆಚ್ರಿಟಿ. ನೀವು ನನ್ನ ಜೊತೆಗೂ ಸೆಲೆಬ್ರೀಟ್ ಮಾಡಬಹುದು. ಆದರೆ ನೀವೂ ಕೂಡ ಟೀನಾ, ಚೇತನಾ ಜೊತೆಗೆನೇ ಸೆಲೆಬ್ರೇಟ್ ಮಾಡಬೇಕೆಂದರೆ, ಸರಿ ಹಾಗೆ ಮಾಡಿ 😉 ನಿಮಗೆ ದೀಪಿಕಾ ಬೇಡವಾದರೆ ಬಿಡಿ, ಬೇರೆ ಯಾರದಾದರೂ ವ್ಯವಸ್ಥೆ ಮಾಡೋಣ; ನಮ್ಮಲ್ಲಿ ಜನಕ್ಕೆ ಕಡಿಮೆ ಇಲ್ಲ.

  ಚೇತನಾ: ಕಿತ್ತಾಟ ಬೇಡ. ನೀವಿಬ್ಬರೂ ದೀಪಿಕಾ ಪಡುಕೋಣೆ ಅಲ್ಲ. ಆ ತಾರೆಗಳ ಹೆಸರುಗಳೂ ನಿಮ್ಮ ಹೆಸರುಗಳೂ ಅನುಕ್ರಮವಾಗಿವೆ.

  ಶೆಟ್ಟರು: ಶರಣು. ಬೆಂಬಲ ಹೀಗೇ ಇರಲಿ.

  ಟೀನಾ: ಹೇ ರಿಲ್ಯಾಕ್ಸ್ ಮಾಡ್ಕೊಳ್ಳಿ.

 10. ಚೇತನಾ,
  ಗೊತ್ತಿಲ್ಲಪಾ, ವಶೀಲಿ ಮೇಲೆ ಸೀಟ್ ತೊಗೊಂಡವ್ರನ್ನ ಮೆರಿಟ್ ಲಿಸ್ಟ್‌ನವರ ಜೊತೆ ಸೆಲಿಬ್ರೇಶನ್ನಿಗೆ ಕಳ್ಸೋಕೆ ಚಕೋರರಿಗೆ ಮನಸ್ಸಿಲ್ಲ ಅನ್ನಿಸುತ್ತೆ!:))
  ಚಕೋರ,
  ನಿಮ್ಮ ಜೊತೆ ಸೆಲೆಬ್ರೇಟ್ ಮಾಡೋಣ ಅಂದುಕೊಂಡ್ರೆ ಮತ್ತೆ ಇನ್ಯಾರಾದ್ರೂ ಬ್ಲಾಗ್ ಬರೀತಾರೆ ಅಂತ ಭಯ ಕಣ್ರೀ, ನಮ್ಮನ್ನ ಯಾರೂ ಮಾತಾಡಿಸ್ಲಿಲ್ಲ, ನಾವೂ ಇದೇ ಕೋಟಾನಲ್ಲಿ ಬಂದವ್ರಾದ್ರೂ ನಮ್ಮನ್ನ ಬಿಟ್ಟು ಬರೇ ಚಕೋರರ ಜೊತೆ ಸೆಲೆಬ್ರೇಟ್ ಮಾಡೊಕೆ ಹೊರಟಿದ್ದಾರೆ ಅಂತೆಲ್ಲ! ಗಂಧದವರ ಜೊತೆಗಿನ ಗುದ್ದಾಟ ಸಾಕಾಯ್ತು ನಂಗೆ, ಇನ್ನು ಒಂದು ವರ್ಷ ಡಿಯೋಡರೆಂಟ್ ಖರ್ಚು ಉಳಿಸೋ ಅಷ್ಟು!;))
  ಸೋ ನಾನ್ ನನ್ನ ದುರಾಸೇನ ಪೋಸ್ಟ್‍‍ಪೋನಿಸಿ ತೆಪ್ಪಗೆ ನನ್ನ ಪಾಡು ನೋಡ್ಕೋತಿದೀನಿ. ನೀವ್ ಯಾರ್ ಜೊತೆ ಸೆಲೆಬ್ರೇಟ್ ಮಾಡ್ತೀರಾ ನೋಡಿ;)

 11. ಚಕೋರ,

  ಚೆನ್ನಾಗಿತ್ತು ನಿಮ್ಮ ವರದಿ – ಬರೀ ದಟ್ಸ್ ಕನ್ನಡ ದ ವರದಿ ನೋಡಿಕೊಂಡಿದ್ದ ನನಗೆ ಈ ಪಾಟಿ ಕಾಳಗವಾಗಿದ್ದು ಗೊತ್ತೇ ಇರಲಿಲ್ಲರೀ!

  ಅಂದ ಹಾಗೆ ಈ ಬರಹದ ಪ್ರತಿಕ್ರಿಯೆಗಳನ್ನು ನೋಡ್ತಾ ಇನ್ನೊಂದು ಸಹಾಯ ಆಯ್ತು – ನನಗೆ ಹಿಡಿಸೋ ಅಂಥ ಇನ್ನೊಂದು ಪುಟ ಸಿಕ್ತು. ಅದಕ್ಕೆ ಧನ್ಯವಾದಗಳು.

  ಹತ್ತು ಜನನ್ನ ಸೇರ್ಸೋವಾಗ ಹತ್ತು ತರಹ ಮಾತು ಕೇಳಿಬರತ್ತೆ ಅನ್ನೋದು ಪ್ರಣತಿ ಗೆ ಗೊತ್ತಿದ್ರೆ ಸಾಕು ( ಸ್ವಂತ ಅನುಭವದ ಮಾತು 🙂 – ಇನ್ನೆಲ್ಲ ಪರವಾಗಿಲ್ಲ. ಅಲ್ವಾ?

  -ನೀಲಾಂಜನ

 12. ಅವನಾಪ್ನ, ಮಸ್ತ್ ಬರದಿರಿ ಬಿಡ್ರಿ. ಕಾಳಗ ಚೊಲೋ ಹತ್ತಿತ್ತು. ಮಸ್ತ ಮಜಾ ಬಂತು. ಚಹಾದ್ ಜೊತೆ ಧಾರವಾಡ ಗಿರ್ಮಿಟ್ ಬೇಕ್ರಿ ಎಪ್ಪಾ. ಅದರ ಮ್ಯಾಲೆ ಒಂದು ಗುಟ್ಕ ಕೊಟ್ಟ ಬಿಟ್ರ ನಾವ್ ಖುಶ್. ಆಮ್ಯಗಿಂದ ಗುಟ್ಕ ಜಕ್ಕೊತ್ತ ನಾವು ಗಾಳ ಹಾಕಿ ಮೀನ ಹಿಡಿತ್ಹೇವಿ ಇಲ್ಲ ಚೊಣ್ಣ, ಚಡ್ಡಿ, ಬಾನ್ಡ್ಲಿ ತಲಿ ಹೀಂಗ ಎಲ್ಲ ಸರ್ವೇ ಮಾಡ್ಕೊತ್ತ ಕುಂದರ್ತೆವಿ. bloggers ಬೇಕಾದ್ರೆ ಮಿಲನ ಆಗ್ಲಿ. ಮಿಲನವಾಗ್ಲಿ ಮಿಲನಮಹೋತ್ಸವ ಆಗ್ಲಿ.

 13. ಜಗಳ-ಜೋಗುಳ-ಚೋದ್ಯ-ಪದ್ಯ ಅಬ್ಬಬ್ಬ ಓದ್ತಾ ಇದ್ದಾ ಹಾಗೆ ಬರಹಕ್ಕೆ ಎಷ್ಟೆಲ್ಲಾ ಆಯಾಮಗಳು. ಅಲ್ಲಿ ಪ್ರಣತಿಯವರು ಬೇರೆ ಬೇರೆ ವಿಷ್ಯಗಳನ್ನು ಚರ್ಚಿಸಲಾಗಲಿಲ್ಲ ಅಂತ ಒದ್ದಾಡ್ತಿದ್ದರೆ, ಇಲ್ಲಿ ಬ್ಲಾಗಿಗಳು ಅವೆಲ್ಲಾ ಚರ್ಚೆಯ ಕುರ್ಚಿಯನ್ನು ಬಿಟ್ಟೆದ್ದು ಓಡಾಡ್ತಾ ಹಾರಾಡ್ತಿವೆ. ಬ್ಲಾಗ್ ಲೋಕಕ್ಕೆ ಇಂಥದ್ದೊಂದು ಆಕಸ್ಮಿಕ ಹಾಯಿದೋಣಿ ವಿಹಾರ ಬೇಕಿತ್ತು. ಅದು ಸಂತೋಷ್ ಮತ್ತು ಚಕೋರ ಅವರಿಂದಾಯಿತು. ಹಾಗೆ ಬೇಕಾಬಿಟ್ಟಿ ಸೆಲೆಬ್ರಿಟಿ ಪಟ್ಟವನ್ನು ಸಿಕ್ಕಸಿಕ್ಕವರೆಲ್ಲ-obsenteesಗೆ, ಸಿಗದವರಿಗೆ, ಕಣ್ಣಿಗೆ ಕಾಣದವರಿಗೆ ಕೊಡುವುದನ್ನು ತಪ್ಪಿಸಲು ಬ್ಲಾಗೀ ಬಿರುದು-ಬಾಲ ದಯಪಾಲನಾ ಸಮಿತಿಯನ್ನು ರಚಿಸಲು ಎಲ್ಲಾ ಬ್ಲಾಗಿಗರು ಓಡಾಟ ಮಾಡಬೇಕು. ಅದಲ್ಲದೆ ಬರೋ ಕಮೆಂಟು\ವರದಿಗಳು ರೊಟ್ಟಿ ಮೇಲಿನ ತುಪ್ಪದಂತಿರುತ್ತವೆ; ಒಂಚೂರು ಖಾರವಿರೊದಿಲ್ಲ ಎಂಬ ಗಂಭೀರ ಆರೋಪ ಕೇಳಿ ಬರ್ತಿರೋದರಿಂದ bloggee observers forum ಮಾಡೋಣ ಅಂತಿದೆ. ಏನೇ ಆದ್ರೂ ಟೀಕಾ ಸ್ವೀಕಾರ ಮನಸ್ಸುಗಳು ಕಡಿಮೆಯಾಗ್ತಿರೋದು ವಿಷಾದನೀಯ.

  ಟೀಕೆ ಮತ್ತು ಕೆಟ್ಟ ಟೀಗಳೇ ಅಲ್ವೇನ್ರೀ ಪರೀಕ್ಷೆಗಳನ್ನು ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗುವಂತೆ ಮಾಡೋದು.

  ಆದ್ರೂ ಟೀನಾ, ಚೇತನಾ, ಮುಂತಾದವರು ಬಾರದೇ ಬ್ಲಾಗೀಶ್ವರಿಯರಾದರು.

  ಅಮಿತಾಬ್, ಶಾರೂಖು, ದೀಪಿಕಾ ಪ್ರಸ್ತಾಪ ಅಪ್ರಸ್ತುತ. ರಕ್ಷಿತಾನ ಗೀತಾ-ಪ್ರವಚನದಲ್ಲಿ ಪ್ರಸ್ತಾಪಿಸಿದಂತೆ.

  ಕಮೆಂಟುಗಳು ಈ ಮಟ್ಟಕ್ಕೆ ತಮಾಷೆಯಾಗಿರಲು ಸಾಧ್ಯ ಅಂತ ಗೊತ್ತಾಗಿದ್ದು-ಸಂತೋಷ್, ಚಕೋರ(once again ಅನಾಮಿಕ) ಮತ್ತು ಇತರರ ಕಮೆಂಟ್ ಬರಹಗಳನ್ನು ಓದಿದ ಮೇಲೇನೆ.

  ಆದ್ರೂ ಒಂದು ವಿಷ್ಯ ತಲೆ ತಿನ್ತಿದೆ…ಸಂತೋಷ್‍ರವರು ನನ್ನ ಬ್ಲಾಗನ್ನು ತೀರ ಪ್ರಜಾವಾಣಿ-deccan herald ನಂದಿನಿ ಬ್ರಾಂಡ್ ತರಾ ಅಂದುಕೊಂಡಿದ್ಯಾಕೆ ಅಂತಾ.

  ರವೀ..

 14. ರವಿ:
  ಥ್ಯಾಂಕ್ಸ್. ನಿಮ್ಮ ಬರಹ ಓದಿದ್ದೆ. ಒಳ್ಳೆಯ ಕವರೇಜ್.

  ಗೋವಿಂದಪ್ಪ: ಥ್ಯಾಂಕ್ಯೂ, ಸರ್.

  ಮಠ್: ಥ್ಯ್ಯಾಂಕ್ಸ್ ರೀ ಸರ… ನಿಮ್ಮ ಸ್ಟಾರ್ ಜವಾಬ್ದಾರಿ ನೀವ ತೊಗೋಬೆಕ್ರೀ. ಬೆಂಗಳೂರಿನವರಿಗೆ ಅದು ತಿಳಿಯೂದಿಲ್ಲ 🙂

  ನೀಲಾಂಜನ: ಒಳ್ಳೆಯ ಮಾತುಗಳು.

 15. ಯಪ್ಪೋ…. ಸಾಕ ಸಾಕಾತಪ್ಪೋ ಈ ಬ್ಲಾಗ್ ಕೂಟದ ಮೇಲೆ ಬಂದ ಬರಹಗಳಂಥ ಕಮೆಂಟು ನೋಡಿ ನೋಡಿ ಓದಿ ಓದಿ.
  ಅಡ್ಡ ಬಿದ್ವಿ ಚಕೋರಪ್ಪಗ, ಪಾಟೀಲ್ರಗ ಮತ್ತ ಶ್ರೀಮಾತಾಗ.
  ಯಾ ಬ್ಲಾಗಿಗೆ ಹೋದ್ರು ನಮ್ಮ ಸಂತೋಷ ಹೀರೋ(ಇನ್ ನೆಗೆಟಿವ್ ರೋಲ್) ಆಗಿ ಬಿಟ್ಟಾನಲ್ರಿ.
  ಎಲ್ಲ ಹೋದ್ರು ಬ್ಯಾರೆ ಏನು ಓದಾಕ ಸಿಗಾವಲ್ದೂ !
  ಸ್ವಲ್ಪ ಬ್ಲಾಗರ್ ಗಳು ಬ್ಯಾರೆ ವಿಷಯಾ ಬರೆದ್ರೂ ಓದಾಕ ಮನಸು ಆಗಾವಲ್ದು!
  ನೀವು ಹೇಳಿದ್ದು ಖರೇ ಐತಿ ನೋಡ್ರಿ. ಯಾವುದರ ಬಗ್ಗೆ ಇಷ್ಟೊಂದು ಸತತವಾಗಿ ಯುಧ್ಧ ನಡೆಯುತ್ತೋ ಅದು ಸಕ್ಸಸ್ ಫುಲ್ ಆಗೈತಿ ಅಂತಾನೇ ಹೇಳಬೇಕು.
  ನೀವೂ ಚಂದಪ್ಪ ಚಕೋರಪ್ಪ ಆಗೇಬಿಟ್ಟೀರಲ್ಲಾ?
  ಛಲೋ ಆತು ಬಿಡ್ರಿ. ಶೆಟ್ರು, ಸಂತೋಷ, ಮಹಾಂತೇಶ, ತಿಪ್ಪಾರ, ಜೋಮೋನ್, ಸುನಾಥ್ ,ನೀವು, ನಾನು ಮತ್ತ್ ಮರ್ತಬಿಟ್ನಲ್ಲಾ ನಮ್ಮ ಸಂತೋಷ ಪಾಟೀಲ್ರು ಒಟ್ಟ ಅಂತೂ ಇಂತೂ ಇಷ್ಟು ಮಂದಿ ಉತ್ತರ ಕರ್ನಾಟಕದ ಬ್ಲಾಗ್ ದಂಡ್ ಐತಿ ಅಂತಾದ್ರೂ ಗೊತ್ತಾತು.

  ಈಗ ಮತ್ತ ಒಂದ್ನಾಕು ಕಮೆಂಟು ಹಾಕ್ಬ್ಯಾಡ್ರಿ. ಸಾಕ್ ಮಾಡ್ರೀಯಪ್ಪಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s