ಜೆ. ಆಲ್ಫ್ರೆಡ್ ಪ್ರುಫ್ರಾಕ್‍ನ ಪ್ರೇಮ ಗೀತೆ (ಭಾಗ ೨)

ಓದಿರದವರು ಇದರ ಭಾಗ ೧ಕ್ಕೆ ಇಲ್ಲಿ ಹೋಗಿ.

ಯಾಕೆಂದರೆ ಇವರೆಲ್ಲ ನನಗೆ ಈಗಾಗಲೆ ಗೊತ್ತು, ಎಲ್ಲವೂ ಗೊತ್ತು:
ಸಂಜೆಗಳು, ನಸುಕುಗಳು, ಅಪರಾಹ್ಣಗಳು ಎಲ್ಲ ಗೊತ್ತು
ನನ್ನ ಬಾಳುವೆಯನ್ನು ಕಾಫೀ ಚಮ್ಮಚೆಗಳಿಂದ ಅಳೆದು ಸುರಿದಿದ್ದೇನೆ;
ದೂರದ ರೂಮಿನಿಂದ ಬರುತ್ತಿರುವ ಸಂಗೀತದಡಿಯಲ್ಲಿ
ನೆಲಕ್ಕಚ್ಚುತ್ತಿರುವ ದನಿಗಳ ಕೊನೆಯುಸಿರೂ ನನಗೆ ಗೊತ್ತು.
ಹೀಗಿರುವಾಗ ಹೇಗೆ ಮುಂದರಿಯಲಿ?

ಆ ಕಣ್ಣುಗಳೂ ನನಗೆ ಗೊತ್ತು, ಅವೆಲ್ಲವೂ –
ಎಲ್ಲರನ್ನೂ ಸೂತ್ರಬದ್ಧ ನುಡಿಗಟ್ಟಿನಿಂದ ಕಟ್ಟಿಹಾಕುವಂಥ ಕಣ್ಣುಗಳು,
ಹೀಗೆ ನಾನೊಂದು ಸೂತ್ರವಾದಾಗ, ಪಿನ್ನಿಗಂಟಿ ಅಸ್ತವ್ಯಸ್ತ ಬಿದ್ದಿರುವಾಗ,
ಪಿನ್ನೆರಗಿ ಗೋಡೆಗೊರಗಿ ಎತ್ತಕೆತ್ತರೆ ಹೊರಳಾಡುತ್ತಿರುವಾಗ,
ಹೇಗೆ ಶುರು ಮಾಡಲಿ, ಹೇಳಿ?
ನನ್ನ ನಿತ್ಯದ ರೀತಿಗಳ ಅರೆಬೆಂದ ದಂಡೆಗಳನ್ನು ಹೇಗೆ ಉಗಿಯಲಿ?
ಹೇಗೆ ಮುಂದರಿಯುವ ಸಾಹಸಪಡಲಿ?

ಮತ್ತೆ ನನಗೆ ಆ ಕೈಗಳೂ ಗೊತ್ತು, ಅವೆಲ್ಲವೂ –
ಕೈಗಳಲ್ಲಿರುವ ಬಳೆಗಳು, ಅಥವಾ ಬಿಳಿ ಖಾಲಿ ಕೈಗಳು
[ಆದರೆ ದೀಪದ ಬೆಳಕಿನಲ್ಲಿ ಕಂಡುಬಂದು ಕೈಕೊಡುವ ಕಂದು ಕೂದಲು!]
ಇದೇನು, ಯಾರದೋ ಬಟ್ಟೆಗಳ ಸುವಾಸನೆ
ಹೀಗೆ ನನ್ನ ದಿಕ್ಕು ತಪ್ಪಿಸುತ್ತಿದೆಯೋ?
ಟೇಬಲ್ಲಿನ ಮೇಲೆ ಒರಗಿರುವ ಕೈಗಳು, ಶಾಲು ಸುತ್ತಿಕೊಂಡಿರುವ ಕೈಗಳು.
ಮತ್ತೀಗ ಮುಂದೆ ಹೆಜ್ಜೆಯಿಡಲೆ?
ಆದರೆ.. ಎಲ್ಲಿ ಶುರು ಮಾಡಲಿ?

…….

ಮುಸ್ಸಂಜೆಗಳ ಸಂದಿಗಳಲ್ಲಿ ಹಾದುಹೋಗಿದ್ದೇನೆ,
ಕಿಟಕಿಗಳಲ್ಲಿ ಬಾಗಿ ನಿಂತ ಒಂಟಿ ಗಂಡಸರ
ಪೈಪುಗಳಿಂದೊಸರಿ ಮೇಲೆರುವ ಹೊಗೆ ನೋಡಿದ್ದೇನೆಂದು ಹೇಳಲೆ?

ನನಗೊಂದು ಜೋಡಿ ಪರಪರಕು ಉಗುರುಗಳಿರಬೇಕಿತ್ತು
ನಿ:ಶಬ್ದ ಸಮುದ್ರಗಳಡಿಯಲ್ಲಿ ಗರಗರ ತಿರುಗುತ್ತಿದ್ದೆ.

…….

ಮತ್ತೆ ಈ ಮಧ್ಯಾಹ್ನ, ಈ ಸಂಜೆ ಎಷ್ಟು ನಿರುಂಬಳ ಮಲಗಿದೆ!
ನೀಳವಾದ ಬೆರಳುಗಳಿಂದ ನೀವಿಸಿಕೊಂಡು,
ನಿದ್ರಿಸುತ್ತಿದೆ… ಸುಸ್ತಾಗಿದೆ.. ಅಥವಾ ಓತ್ಲಾ ಹೊಡೆಯುತ್ತಿದೆ,
ಫರಶಿಗಳ ಮೇಲೆ ಮೈಚಾಚಿ, ಇಲ್ಲಿಯೇ, ನಿನ್ನ ನನ್ನ ಪಕ್ಕದಲ್ಲೆ.
ಚಹಾ, ಕೇಕು, ಐಸ್‍ಕ್ರೀಮುಗಳ ನಂತರ, ಪ್ರಸಕ್ತ ಕ್ಷಣವನ್ನು
ತೀರಾ ಸಂದಿಗ್ಧಕ್ಕೆ ತಳ್ಳುವ ಚೇತನ ನನ್ನಲ್ಲಿರಲೇಬೇಕೆ?
ನಾನು ಅತ್ತುಕರೆದು ಹೊಟ್ಟೆಗಟ್ಟಿ, ಗೋಳಾಡಿ ಪ್ರಾರ್ಥಿಸಿದ್ದರೂ
ನನ್ನ [ಸ್ವಲ್ಪ ಬಕ್ಕ] ತಲೆಯನ್ನು ತಾಟಿನಲ್ಲಿ ಹೊತ್ತು ತಂದದ್ದನ್ನು ನೋಡಿದ್ದರೂ
ಹೇಳುವುದೇನೆಂದರೆ, ನಾನೇನು ಪ್ರವಾದಿಯಲ್ಲ — ಮತ್ತಿದು ದೊಡ್ಡ ಸಂಗತಿಯೂ ಅಲ್ಲ;
ನೋಡಿದ್ದೇನೆ ನನ್ನ ಶ್ರೇಷ್ಠತೆಯ ಕ್ಷಣಗಳು ಮಿಣುಗುಟ್ಟಿದ್ದನ್ನೂ,
ನೋಡಿದ್ದೇನೆ ಕೆಲಸದ ಹುಡುಗ ಸಂತತ ನನ್ನ ಕೋಟನ್ನು ಇಸಿದುಕೊಳ್ಳುವುದನ್ನು, ಮುಸಿನಗುವುದನ್ನೂ,
ಸಂಕ್ಷೇಪಿಸಿ ಹೇಳಬೇಕೆಂದರೆ – ನಾನು ಬೆಚ್ಚಿಬಿದ್ದಿದ್ದೆ.

Advertisements

6 thoughts on “ಜೆ. ಆಲ್ಫ್ರೆಡ್ ಪ್ರುಫ್ರಾಕ್‍ನ ಪ್ರೇಮ ಗೀತೆ (ಭಾಗ ೨)

  1. ಪೂರ್ತಿ ಮೊದಲೇ ಮಾಡಿಲ್ಲ. ಮಾಡಿದ್ದಷ್ಟು ಹಾಕುತ್ತಿದ್ದೇನೆ. ಇನ್ನೊಂದು ಭಾಗದಲ್ಲಿ ಮುಗಿಸ್ತೀನಿ. ಈ ಪದ್ಯವನ್ನು ಎಷ್ಟು ಸಲ ಓದಿದರೂ ಕಿಕ್ ಕೊಡುತ್ತದೆ. ಅನುವಾದದ ಉದ್ದೇಶ ಮೂಲದ ಇನ್ನೊಂದು ನಮೂನೆಯ rediscovery ಅಷ್ಟೇ ನನಗೆ. ಓದುಗರಿಗೂ ಹಾಗಾದರೆ ಖುಷಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s