ಬ್ಲಾಗಂಗಣದ ಅಂಚಿನಿಂದ

ಬ್ಲಾಗುಗಳ ಸ್ವರೂಪ, ಅವುಗಳ ಕಾಳಜಿಗಳು, ನಿರೀಕ್ಷೆಗಳು ಮೊದಲಾದ ವಿಷಯಗಳ ಬಗ್ಗೆ ಕನ್ನಡ ಬ್ಲಾಗಿಗರು ವಿಚಾರ ನಡೆಸುತ್ತಿದ್ದಾರೆ. ಪ್ರಣತಿಯ ಕಾರ್ಯಕ್ರಮದಲ್ಲಿ ಇದರ ಬಗ್ಗೆ ಚರ್ಚೆ ಇತ್ತಂತೆ. ಏನು ಬರೆಯಬೇಕು ಏನು ಬರೆಯಬಾರದು ಎಂದು ಕೆಲವು ಕಡೆ ಗೊಂದಲಗಳೂ ಮೂಡಿವೆ. ನಾವಡರು ಬ್ಲಾಗೆಂಬ ಆಕಾಶದ ತಾರೆಗಳು ಹೊಳೆಯಲಿ ಎಂಬ ಆಶಯದೊಂದಿಗೆ ಶುರು ಮಾಡಿ, ಒಂದು ಚೆನ್ನಾದ ಬರೆಹ ಬರೆದಿದ್ದಾರೆ. ಕೌತುಕ ಹೊಮ್ಮಿಸುವ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಲ್ಲಿ ಪ್ರತಿಕ್ರಿಯಿಸಿದವರೂ ಇನ್ನಷ್ಟು ಸಲಹೆಗಳನ್ನಿತ್ತಿದ್ದಾರೆ. ಆದರೆ ಇದೆಲ್ಲಕ್ಕಿಂತ ಕೌತುಕದ ಸಂಗತಿಯೆಂದರೆ, ಬ್ಲಾಗಿಗರು ಸಾಮೂಹಿಕವಾಗಿ ಒಂದು meta-blogging (ಅಂದರೆ ಬ್ಲಾಗಿಂಗಿನ ಸ್ವರೂಪದ ಬಗ್ಗೆ ಬ್ಲಾಗಿಂಗ್) ಚಟುವಟಿಕೆ ನಡೆಸಿರುವುದು. ಇದು ಆಹ್ಲಾದಕರ ಬೆಳವಣಿಗೆ ಕೂಡ ಹೌದು. ಇಂಗ್ಲಿಶ್ ಬ್ಲಾಗುಲೋಕದಲ್ಲಿ ಈ ತರಹದ ಅನೇಕ ಚರ್ಚೆಗಳು ಆಗಿವೆ, ಆಗುತ್ತಲಿರುತ್ತವೆ. ಆದರೆ ಪ್ರಾಂತಿಕ ಭಾಷೆಗಳ ಸಂದರ್ಭಾದಲ್ಲಿ ನಡೆಯುವ ಇಂಥ ಚರ್ಚೆಗಳು ಹೆಚ್ಚು ಮಹತ್ವದ್ದು ಅನ್ನಿಸುತ್ತದೆ. Such collective meta-blogging exercises are indicative of the coming of age of our blogworld ಅಂತಲೂ ಹೇಳಬಹುದು.

ಬ್ಲಾಗುಗಳ ಯಶಸ್ಸಿನ ಪ್ರಾತಿನಿಧಿಕ ಕಾರಣವೆಂದರೆ ಅದೊಂದು ಮುಕ್ತ ಮಾರುಕಟ್ಟೆಯಂಥ ವ್ಯವಸ್ಥೆ ಎನ್ನುವುದು. ಆಗಮನ ನಿರ್ಬಂಧ (entry barrier) ಹಾಗೂ ನಿರ್ಗಮನ ನಿರ್ಬಂಧಗಳು (exit barrier) ಕಡಿಮೆ ಇರುವಲ್ಲಿನ ಪ್ರತ್ಯೇಕ ಅಸ್ತಿತ್ವಗಳು ಬೆಳೆಯುವುದಷ್ಟೇ ಅಲ್ಲದೆ, ತನ್ಮೂಲಕ ಇಡೀ ವ್ಯವಸ್ಥೆಯ ಬೆಳವಣಿಗೆಗೆಗೂ ಕಾರಣವಾಗುತ್ತವೆ. ಹಾಗೆಯೇ ಇಂಥಲ್ಲಿ ವಾತಾವರಣವನ್ನು ತಮ್ಮ ತಮ್ಮ ಅನುಕೂಲಕ್ಕಾಗಿ ಅಲ್ಪಸ್ವಲ್ಪವಾಗಿ ಬದಲಾಯಿಸುತ್ತ, ಬಳಸಿಕೊಳ್ಳುತ್ತ, ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುತ್ತಲೇ ಬೇರೆಯವರೊಂದಿಗೆ ಪೈಪೋಟಿ ನಡೆಸುತ್ತ, ಹಾಗೆಯೇ ಸಹಕರಿಸುತ್ತ, ಸಮಯ ಹೋದ ಹಾಗೆ ಉತ್ತಮಗೊಳ್ಳುತ್ತ ಹೋಗುತ್ತವೆ. (ವಿನಾಶಗೊಳ್ಳುವಂಥವೂ ಇವೆ, ಆದರೆ ಅವುಗಳ ಬಗ್ಗೆ ಇಲ್ಲಿ ಬೇಡ.) ಇಂಥವುಗಳಿಗೆ complex networks ಅಥವಾ complex systems (ಸಂಕೀರ್ಣ ವ್ಯವಸ್ಥೆಗಳು ಅಥವಾ ಸಂಕೀರ್ಣ ಜಾಲಗಳು, ಎನ್ನಬಹುದೇನೋ) ಎಂದು ಹೆಸರು.  ಎಷ್ಟೋ ಸ್ವಾಭಾವಿಕ ಹಾಗೂ ಮಾನವನಿರ್ಮಿತ ಉದಾಹರಣೆಗಳನ್ನು ಕೊಡಬಹುದು: food-webs, ಪ್ರೋಟೀನುಗಳ ಜಾಲ, ಮಾರುಕಟ್ಟೆಗಳು, ಕಂಪ್ಯೂಟರ್‌ಗಳ ಜಾಲ, ಮನುಷ್ಯರ ಸೋಶಿಯಲ್ ನೆಟವರ್ಕ್‍ಗಳು, ದೇಶದೇಶಗಳ ನಡುವಿನ ಸಂಬಂಧಗಳು ಹೀಗೆ.

ಇಂಥ ವ್ಯವಸ್ಥೆಗಳಲ್ಲಿ ಇನ್ನೊಂದು ಬಹುಮುಖ್ಯ ಸ್ವಭಾವವೆಂದರೆ ಪ್ರಾದುರ್ಭಾವ (emergence)!  ಪ್ರತ್ಯೇಕ ಘಟಕಗಳನ್ನು ಎಷ್ಟೇ ಕೂಲಂಕಷವಾಗಿ ಪರಿಶೀಲಿಸಿದರೂ ಕಾಣದ ಕೆಲ ಸ್ವಭಾವಗಳು, ಆ ಘಟಕಗಳ ಸಂಕೀರ್ಣ‍ ಜಾಲಗಳಿಂದ ಉದ್ಭವಿಸುತ್ತವೆ. ಇದರ ಅತ್ಯಂತ ದೊಡ್ಡ ಉದಾಹರಣೆಗೆ ಬೇರೆಲ್ಲೂ ನೋಡಬೇಕಿಲ್ಲ: ನಮ್ಮ ಮೆದುಳನ್ನೇ ತೆಗೆದುಕೊಳ್ಳಿ. ಬುದ್ಧಿಶಕ್ತಿ ಎಂದರೆ ಏನು? ಭಾವನೆಗಳು ಎಂದರೆ ಏನು? ಅರಿವು ಎಂದರೆ ಏನು? ನಮ್ಮ ಮೆದುಳು, neuronಗಳ ಒಂದು ಸಂಕೀರ್ಣ ಜಾಲ. ಪ್ರತ್ಯೇಕ ನ್ಯೂರಾನಿಗೆ ಬುದ್ಧಿ ಇದೆಯೆ? ಅರಿವಿದೆಯೆ? ಇಲ್ಲ. ಇನ್ನು ನಮ್ಮ ಪ್ರಜ್ಞೆ ಎನ್ನುವುದು ಎಲ್ಲಿಂದ ಬಂತು? ನಮ್ಮ ಮೆದುಳಿನಲ್ಲಿ ಸುಮಾರು ೧೦೦ ಬಿಲಿಯನ್ ನ್ಯೂರಾನ್‍ಗಳಿವೆ. ಪ್ರತಿಯೊಂದು ನ್ಯೂರಾನ್, ೧೦೦೦೦ಕ್ಕೂ ಹೆಚ್ಚು ಇತರ ನ್ಯೂರಾನ್‍ಗಳ ಜತೆ ಸಂವಹಿಸುತ್ತದೆ. ಇಂಥ ಅಗಾಧ ಸಂವಹನ ಪ್ರಕ್ರಿಯೆಯಿಂದ ಉದ್ಭವಿಸುವ ಒಟ್ಟಾರೆ ಫಲಿತಾಂಶವೇ ನಮ್ಮ ಅರಿವು, ಬುದ್ಧಿಶಕ್ತಿ ಇತ್ಯಾದಿ. ಇಂಥ ವ್ಯವಸ್ಥೆಗಳು ಮಶೀನುಗಳಿಗಿಂತ ಭಿನ್ನವಾಗಿ ಕೆಲಸ ಮಾಡುತ್ತವೆ; ಇವುಗಳ ಕಾರ್ಯವೈಖರಿ ಸಮಾಜಗಳಂಥದ್ದು. ಮಶೀನುಗಳಿಗಿಂತ ಸೊಸೈಟಿಗಳು ಹೆಚ್ಚು ಪುಷ್ಟ: ಮಶೀನುಗಳ ಯಾವುದೋ ಒಂದು ಅಂಗ ಊನವಾಯಿತೆಂದರೆ, ಇಡೀ ಮಶೀನೇ ಬಂದಾಗಿಬಿಡುತ್ತದೆ; ಸಮಾಜಗಳು ಹಾಗಲ್ಲ. ಇನ್ನೊಂದು ಉದಾಹರಣೆಯೆಂದರೆ, ನಮ್ಮ ಹೃದಯ. ೭೦-೮೦ ವರ್ಷಗಳ ಕಾಲ ಎಡೆಬಿಡದೆ ರಕ್ತಸಂಚಾರವನ್ನು ನಿರ್ವಹಿಸುವ ಹೃದಯ ಅದೆಷ್ಟು robust ಸಮಾಜವಿದ್ದೀತು! ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಆ ಸಮಾಜದ ಸದಸ್ಯರಾದ ಪ್ರತ್ಯೇಕ ಜೀವಕೋಶಗಳೇನು ದಷ್ಟಪುಷ್ಟವಲ್ಲ; ಪ್ರತಿಯೊಂದು ಕ್ಷಣವೂ ಸಾವಿರಾರು ಜೀವಕೋಶಗಳು ಸಾಯುತ್ತವೆ, ಸಾವಿರಾರು ಹುಟ್ಟುತ್ತವೆ; ಆದರೆ, ನಮ್ಮ ಶ್ರೀ ಹೃದಯರು ಏನೂ ಆಗದಂತೆ ವಟವಟಿಸುತ್ತಲೇ ಇರುತಾರಲ್ಲ! ಸೋಜಿಗವಲ್ಲವೆ?

ಮನುಷ್ಯ ಸಮಾಜಗಳೇನು ಕಡಿಮೆಯೇ? ಸಾವು ನೋವು ಬರಗಾಲ ಅನಾಹುತಗಳು ಎಲ್ಲವನ್ನೂ ದಾಟುತ್ತ, ಹೊಸ ಹೊಸ ಸವಾಲುಗಳನ್ನೆದುರಿಸುತ್ತ, ಜಗತ್ತಿನೊಂದಿಗೆ ಬದಲಾಗುತ್ತ, ಜಗತ್ತನ್ನು ಬದಲಿಸುತ್ತ, ಸಾಗಿಯೇ ಸಾಗುತ್ತದಲ್ಲ. ಎಲ್ಲ ಸಮಾಜಗಳಲ್ಲೂ ಕಿಡಿಗೇಡಿ ಘಟಕಗಳಿರುತ್ತವೆ. ಅವನ್ನೆಲ್ಲ ಸಂಭಾಳಿಸಿಕೊಂಡು ಹೋಗುತ್ತಿರುತ್ತವಲ್ಲ. ವಿಕಿಪೀಡಿಯ ಎಂಬ ಅದ್ಭುತವನ್ನು ತೆಗೆದುಕೊಳ್ಳಿ. ಅದು ಶುರುವಾದಾಗ, ಯಾರು ಬೇಕಾದರೂ ಏನು ಬೇಕಾದರೂ ಬರಿಯಬಹುದಾದ ಒಂದು ತಾಣ ಮಾಹಿತಿಯ ಆಕರವಾಗುವುದು ಸಾಧ್ಯವೆ, ಎಂದು ಅಪಹಾಸ್ಯ ಮಾಡಿದವರು ಕಡಿಮೆಯಿರಲಿಲ್ಲ. ಇವತ್ತು ವಿಕಿಪೀಡಿಯಾ ಎಲ್ಲಿ ಬಂದು ನಿಂತಿದೆ ನೋಡಿ. ಅತ್ಯಂತ ಕಠಿಣ ಪ್ರಕ್ರಿಯೆಯ ಮೂಲಕ ಸಾಗುವ ವೈಜ್ಞಾನಿಕ ಪ್ರಕಟಣೆಗಳಲ್ಲೂ ಇವತ್ತು ಯಾವುದೋ ಮಾಹಿತಿಯ ಆಕರವೆಂದು ವಿಕಿಪೀಡಿಯಾವನ್ನು ಉದ್ಧರಿಸಿದರೆ ತಕರಾರು ತೆಗೆಯುವ ಜನ ಕಡಿಮೆ. ಅಲ್ಲಿ ಕಿಡಿಗೇಡಿಗಳಿಲ್ಲವೇ? ಇದ್ದೇ ಇದ್ದಾರೆ. ಆದರೆ ಸಮಾಜಗಳ ಇನ್ನೊಂದು ಪ್ರಬಲ ಗುಣವೆಂದರೆ – ತನ್ನನ್ನು ತಾನೇ ತಿದ್ದಿಕೊಳ್ಳುವ ಪ್ರಕ್ರಿಯೆ (self-correcting mechanism). ಇದನ್ನೇ ಮುಂದುವರಿಸುತ್ತ, ಒಂದು ವ್ಯವಸ್ಥೆಯಲ್ಲಿ ನಿಯಂತ್ರಣ ಎಲ್ಲಿರಬೇಕು, ಹೇಗಿರಬೇಕು ಎನ್ನುವುದನ್ನು ಕಂಡುಕೊಳ್ಳುವುದು ಸುಲಭ. ನಿಯಂತ್ರಣ ಕೇಂದ್ರೀಕೃತವಾದಾಗ, ಎಲ್ಲರೂ ಕೇಂದ್ರದಲ್ಲಿರಬಯಸುತ್ತಾರೆ. ಸ್ವಾಭಾವಿಕವಾಗಿ, ಅಂಥ ವ್ಯವಸ್ಥೆಗಳು ಭಾರ ತಡೆಯಲಾರದೆ ನೆಲಕ್ಕಚ್ಚುತ್ತವೆ. ಇಂಥ ಎಷ್ಟೋ ಉದಾಹರಣೆಗಳನ್ನು ನಾವು ನೋಡಿದ್ದೇವೆ.

ಹೀಗೆ ಹೊಸದನ್ನು ಅಥವಾ ಭಿನ್ನವಾದುದನ್ನು ಹಳಿಯುವ ಪರಂಪರೆಯೇನು ಹೊಸದಲ್ಲ. ಗಾಂಧಿಯ ಅದ್ಭುತ quote ಒಂದು ನೆನಪಾಗುತ್ತದೆ. ಮತ್ತು ಅದು ಈ ಸಂದರ್ಭದಲ್ಲಿ ನೆನಪಾಗಿದ್ದು ಪ್ರಸ್ತುತವೂ ಹೌದು. ಯಾಕೆಂದರೆ ಗಾಂಧಿಯ ಆ ನುಡಿಗಳನ್ನು ಈ ಜಮಾನಾದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಬಳಸಿಕೊಂಡವರು, ಇಂಥದೇ ಒಂದು ಪ್ರಬಲ ವಿಕೇಂದ್ರೀಕೃತವಾದ ಸಮಾಜ: open source community.  ರೆಡ್‍ಹ್ಯಾಟ್ ಲಿನಕ್ಸ್‍ನ ಈ ಪುಟವನ್ನು ನೋಡಿ. ಇದರ ಅನೇಕ ವೀಡಿಯೋಗಳೂ ಇವೆ. ಇದನ್ನೇ ನಂತರ ಇಂಥ ಅನೇಕ ಸಮುದಾಯಗಳೂ ಬಳಸಿವೆ.
First they ignore you.
Then they laugh at you.
Then they fight you.
Then you win.
ಈ ಮಾತುಗಳ ಸತ್ಯಾಸತ್ಯತೆಯ ಬಗ್ಗೆ ಏನನ್ನೂ ಹೇಳುವ ಅವಶ್ಯಕತೆ ಇಲ್ಲ!

ಏನೋ ಶುರು ಮಾಡಿ ಎಲ್ಲೆಲ್ಲೋ ಅಲೆದಾಡುತ್ತಿದ್ದೇನೆ. ಕ್ಷಮಿಸಿ. ಬ್ಲಾಗುಗಳ ಬಗ್ಗೆ ಹೇಳುತ್ತಿದ್ದೆ ಅನ್ನಿಸುತ್ತೆ. ಬ್ಲಾಗುಗಳ ಇನ್ನೊಂದು ಸ್ವಭಾವವೆಂದರೆ ಅವು ಡೆಮೊಕ್ರಟಿಕ್. ಇಲ್ಲಿ ಯಾರು ಬೇಕಾದರೂ ತಮಗನ್ನಿಸಿದ್ದನ್ನು ಹೇಳಬಹುದು. Mainstream Media(MSM)ಗಳಲ್ಲಿ ಬರುವ ಅಭಿಪ್ರಾಯಕ್ಕೆ ನಿಮ್ಮ ವಿರೋಧವಿದ್ದರೆ ಪತ್ರಿಕೆಗಳಿಗೆ ಪತ್ರ ಬರೆದು, ಅವರು ಅದನ್ನು ಪ್ರಕಟಿಸುವ ಕೃಪೆ ತೋರುತ್ತಾರೋ ಇಲ್ಲವೋ ಎಂದು ಕಾಯುವ ಅಗತ್ಯವಿಲ್ಲ. ಸರಸರನೆ ಬ್ಲಾಗಲ್ಲಿ ಬರೆಯಬಹುದು. ಇದು ಬ್ಲಾಗುಲೋಕದಲ್ಲಷ್ಟೇ ಆಗುತ್ತಿಲ್ಲ. ಹಾಗೆ ನೋಡಿದರೆ, ಈ ಬ್ಲಾಗುಗಳು ಎಂಬ ಪರಿಕಲ್ಪನೆ web 2.0 ಎಂಬ ಚಳುವಳಿಯ ಭಾಗ. ಬ್ಲಾಗುಗಳು, ಟ್ಯಾಗಿಂಗ್, ಕೆಟಗರಿಗಳು, ಸೋಶಿಯಲ್ ನೆಟ್‍ವರ್ಕುಗಳು, ಸೋಶಿಯಲ್ ಬುಕ್‍ಮಾರ್ಕಿಂಗ್, ಹೀಗೆ ಹೊಸ ವಿಧಾನಗಳನ್ನು ಕಂಡುಹಿಡಿಯುತ್ತ, ಬಳಸುತ್ತ, ವೆಬ್ ಎಂಬ ಮಹಾಲೋಕದ ಸ್ವರೂಪವನ್ನೇ ಬದಲಿಸುತ್ತಿರುವ ಒಂದು ಡೆಮೊಕ್ರಟಿಕ್ ಚಳುವಳಿ ನಡೆಯುತ್ತಿದೆ. (ಯಾವುದೇ ಚಳುವಳಿಗಳಿಲ್ಲ ಎಂದು ಕೊರಗುವವರು ಸ್ವಲ್ಪ ಈ ಸೈಲೆಂಟ್ ಚಳುವಳಿಯನ್ನು ಗಮನಿಸಬೇಕು.) ವೆಬ್ ಎಂಬ ಲೋಕ ವಿಕೇಂದ್ರೀಕರಣಗೊಳ್ಳುತ್ತಿದೆ. ಇಂದು ಎಷ್ಟೋ ವೆಬ್‍ಸೈಟುಗಳು ವಿಕಿ ರೂಪದಲ್ಲಿವೆ. ಇದು ಅಂತರ್ಜಾಲದ ವರ್ಚುವಲ್ ಪ್ರಪಂಚದಲ್ಲಿ ಜನರು ನಡೆಸುತ್ತಿರುವ ಸಹಬಾಳ್ವೆ.

ಹೀಗಿರುವಾಗ ಬ್ಲಾಗುಗಳ ಸ್ವರೂಪ, ಉಪಯೋಗ ಇತ್ಯಾದಿಗಳನ್ನೂ ನಾವು ಇದೇ ಮಾದರಿಯಲ್ಲಿ ನಿರ್ದೇಶಿಸಬೇಕು. ಎಲ್ಲಕ್ಕಿಂತ ಮೂಲಭೂತ ಅಗತ್ಯವಾದ ಸ್ವಾತಂತ್ರ್ಯಕ್ಕೆ ಎಲ್ಲೂ ಧಕ್ಕೆ ಬಾರದಂತೆ; ನಿಯಮ ನಿರ್ಬಂಧಗಳು ಹೊರಗಿನಿಂದ ಅಥವಾ ಕೇಂದ್ರದಿಂದ ಬಾರದೆ, ಒಳಗಿನಿಂದಲೇ ಪ್ರಾದುರ್ಭವಿಸುವಂತೆ; ಪ್ರತ್ಯೇಕ ಬ್ಲಾಗುಗಳು ತಮ್ಮತಮ್ಮ ಲಕ್ಷಣ, ಲಕ್ಷ್ಯಗಳನ್ನು ಕಳೆದುಕೊಳ್ಳದೆ, ಹಾಗೆಯೇ ಇಡೀ ಬ್ಲಾಗುಲೋಕವೂ ಇದನ್ನೆಲ್ಲ ಒಳಗೊಂಡು, ಇದನ್ನೂ ಮೀರಿ ತನ್ನದೇ ಲಕ್ಷಣಗಳನ್ನೂ, ಒಟ್ಟಂದವನ್ನೂ ಪಡೆಯುವಂತೆ; ಒಟ್ಟಾರೆಯಾಗಿ ಬ್ಲಾಗುಲೋಕವು ಸಮಯ ಸಾಗಿದಂತೆ ತನ್ನ ಕರ್ತವ್ಯಗಳನ್ನು ಕಂಡುಕೊಳ್ಳುವ, ಅಗತ್ಯಕ್ಕೆ ತಕ್ಕಂತೆ ಬದಲಾಗುವ ಒಂದು ಪ್ರಬಲ ಮಾಧ್ಯಮವಾಗಿ ಬೆಳೆಯಬೇಕು. ಇದು MSMನೊಂದಿಗೆ ಪೈಪೋಟಿ ನಡೆಸುತ್ತದೋ, ಅದರ ಅಗತ್ಯವನ್ನು ಕಡಿಮೆ ಮಾಡುತ್ತದೋ ಎಂಬ ಪ್ರಶ್ನೆಗಳು ಅಷ್ಟು ಮುಖ್ಯವಲ್ಲ. ಬ್ಲಾಗುಗಳೂ ಕೂಡ ಅವಗಣನೆಗೆ, ಅಪಹಾಸ್ಯಕ್ಕೆ ಗುರಿಯಾಗುತ್ತಲೇ ಇವತ್ತು ಅದನ್ನೆಲ್ಲ ಮೀರಿದ್ದು ಮುಖ್ಯವಾಹಿನಿಯ ಮಾಧ್ಯಮಗಳಿಗೂ ಗೊತ್ತು. ಎಷ್ಟೋ ಸಲ ಬ್ಲಾಗುಗಳು ಮಾಧ್ಯಮಗಳಿಗೆ ಚುರುಕು ಮುಟ್ಟಿಸಿದ ಪ್ರಸಂಗಗಳಿವೆ. ಇದೇನು ಹೊಸ ಬಗೆಯ ಸಾಹಿತ್ಯವೋ ಎನ್ನುವ ಪ್ರಶ್ನೆಯೂ ಮುಖ್ಯವಲ್ಲ. ನಾವಡರು ಹೇಳಿದಂತೆ ಹಣೆಪಟ್ಟಿಗಳ ಅಗತ್ಯವಿಲ್ಲ.

ಬ್ಲಾಗುಗಳ ಒಟ್ಟಾರೆ ಕರ್ತವ್ಯಗಳು, ನಿರೀಕ್ಷೆಗಳು ಹಾಗೂ ಸಂಬಂಧಿಸಿದ ವಿಷಯಗಳ ಮೇಲೆ ಚರ್ಚೆ ನಡೆಯಲಿ. ಆದರೆ, ಇವು ಎನ್‍ಫ಼ೋರ್ಸ್‍ಮೆಂಟ್‍ಗಳಾಗದೆ, ಕೇವಲ declarative ನೆಲೆಗಟ್ಟಿನಲ್ಲಿರಲಿ. ಒಂದು ಉದಾಹರಣೆ ಕೊಡಬೇಕೆಂದರೆ, ನಾವಡರಿಗೆ ಪ್ರತಿಕ್ರಿಯಿಸುತ್ತ ಚೇತನಾ, ಬ್ಲಾಗುಗಳು ಸಾಪ್ತಾಹಿಕಗಳಂತೆ ತರಹೇವಾರಿ ಬರೆಹಗಳನ್ನು ಕೊಡಬೇಕೆಂದು ಹೇಳಿದ್ದಾರೆ. ಅದೊಂದು ಉತ್ತಮ, ನಾನು ಹೇಳಿದಂಥ  declarative ಅಥವಾ abstract ನೆಲೆಯಲ್ಲಿರುವ ಸಲಹೆ. ಇದನ್ನೇ ವಿಸ್ತರಿಸಿ, ಬ್ಲಾಗುಗಳ ಗುಚ್ಛವೊಂದು ಸಾಪ್ತಾಹಿಕದಂತಿರಬೇಕು ಎನ್ನಬಹುದು. ಸಾಪ್ತಾಹಿಕದಂತಿರಬೇಕು ಎನ್ನುವುದು ಒಂದು ಉದಾಹರಣೆಯಷ್ಟೆ. ಆದರೆ ನಾವು ಯಾವುದರ ಬಗ್ಗೆ ಕಾಳಜಿಯಿಂದಿರಬೇಕೆಂದರೆ: ಏನು ಬರೆಯಬೇಕು ಏನು ಬರೆಯಬಾರದು ಎಂಬ ಗೊಂದಲ ಮೂಡಿಸುವುದು (ಇದೊಂದು ಪ್ರಬಲ ಆಗಮನ ನಿರ್ಬಂಧ, ಕೂಡ); ಬ್ಲಾಗಿಗರು ಎಷ್ಟು ಲೇಖನಗಳನ್ನು ಭಾವಪ್ರವಾಹವಾಗಿಸಬಹುದು, ಎಷ್ಟನ್ನು ಮಾಹಿತಿಕೇಂದ್ರಿತವಾಗಿಸಬೇಕು; ಯಾರು ಯಾವ ಥರದ್ದು ಬರಿಯಬೇಕು, ಯಾವ ಥರದ್ದು ಬರಿಯಬಾರದು; ಇತ್ಯಾದಿ ವಿವರಗಳ ಮೇಲೆ ಹಿಡಿತ ಸಾಧಿಸಲು ಹೋಗಬಾರದು. ಅದು ಸಾಧ್ಯವೂ ಇಲ್ಲ, ಮತ್ತು ಅದರಿಂದ ಅಪಾಯಗಳೇ ಜಾಸ್ತಿ.

ನಮ್ಮ ದಿನಪತ್ರಿಕೆಗಳ, ಮಾಧ್ಯಮಗಳ ಎಷ್ಟೋ ಕೊರತೆಗಳನ್ನು ನಾವು ಬ್ಲಾಗುಗಳ ಮೂಲಕ ನೀಗಿಸಬಹುದು. ಯಾಕೆಂದರೆ, ಬ್ಲಾಗುಲೋಕದ ಮಂದಿ ನಾನಾ ನಮೂನೆಯ ಹಿನ್ನೆಲೆಗಳಿಂದ ಬಂದಿದ್ದಾರೆ, ತರಹೇವಾರಿ ಉದ್ಯೋಗಗಳನ್ನು ನಿರ್ವಹಿಸುತ್ತಾರೆ, ಏನೇನೋ ಆಸಕ್ತಿಗಳನ್ನು ಹೊಂದಿದ್ದಾರೆ. ಇಲ್ಲಿ ನನ್ನ ನಿಲುವು, ನನ್ನ ಪತ್ರಿಕೆಯ, ಚಾನೆಲ್ಲಿನ, ಸಂಸ್ಥೆಯ ಅಥವಾ ಮತ್ತಾವುದರದೋ ನಿಲುವಿಗೆ ಹೊಂದುತ್ತದೋ ಇಲ್ಲವೋ ಎಂಬ ಆತಂಕವಿರುವುದಿಲ್ಲ. ಅನೇಕ ವಿಷಯಗಳಲ್ಲಿ ಪರಿಣತಿ ಪಡೆದವರಿದ್ದಾರೆ. ಅವರು ಯಾವುದರ ಹಂಗಿಲ್ಲದೇ ಬರೆಯಬಹುದು.

ಕನ್ನಡ ಬ್ಲಾಗುಲೋಕವನ್ನು ಗಮನಿಸಿದರೆ ಸಂತಸವಾಗುತ್ತದೆ. ಬ್ಲಾಗುಗಳ ಗುಣಮಟ್ಟ ಬಹಳ ಉತ್ತಮವಾಗಿದೆ. ಹಾಗೆ ನೋಡಿದರೆ, ತೆಗೆದುಹಾಕುವಂಥ ಬ್ಲಾಗುಗಳ ಸಂಖ್ಯೆಯೇ ಕಡಿಮೆ. ಇದು ದೊಡ್ಡ ಕಸುವು. ಇದು ಇನ್ನೂ ಹೆಚ್ಚಾಗಬೇಕೆಂದರೆ (ಹಾಗೆಯೇ ಬ್ಲಾಗುಗಳ ಸಾಮಾಜಿಕ ಬದ್ಧತೆ) ಕೆಲವು ವಿಷಯಗಳ ಬಗ್ಗೆ ಹೆಚ್ಚು ಹೆಚ್ಚು ಲೇಖನಗಳ ಅಗತ್ಯವಿದೆ. ಉದಾಹರಣೆಗೆ: ಎಕನಾಮಿಕ್ಸ್, ಪಾಲಿಸಿಗಳ ಬಗೆಗಿನ ವಿಷಯಗಳು, ರಾಜಕೀಯ ವಿಶ್ಲೇಷಣೆಗಳು ಇತ್ಯಾದಿ. ನಮ್ಮ (ಕನ್ನಡದ) ಮುಖ್ಯವಾಹಿನಿಯಲ್ಲಿ ಇದೆಲ್ಲ ಇದೆ. ಆದರೆ ಅವುಗಳ ಗುಣಮಟ್ಟದ ಬಗ್ಗೆ ನನಗೆ ಸಮಾಧಾನವಿಲ್ಲ. ಅವುಗಳ ಹೊಸತನದ ಬಗ್ಗೆಯೂ. ಮತ್ತಿನ್ನು ಅಲ್ಲಿನ ಪೂರ್ವಗ್ರಹಗಳು, biasಗಳ ಬಗ್ಗೆ ಮಾತಾಡುವುದೇ ಬೇಡ. ಇಂಗ್ಲಿಶಿನಲ್ಲಿ ಈ ಥರದ ವಾತಾವರಣ ಏರ್ಪಟ್ಟಿದೆ. ನಮ್ಮಲ್ಲೂ ಅದು ಹೆಚ್ಚು ಹೆಚ್ಚು ಆಗಬೇಕು. ಮತ್ತೆ ನನ್ನ ನಂಬಿಕೆಯೆಂದರೆ ಅದು ಆಗುತ್ತದೆ ಕೂಡ.

ನಾವಡರ ಬ್ಲಾಗಿನಲ್ಲಿ ಈ ಮೆಟಾ-ಬ್ಲಾಗಿಂಗ್ ಚಟುವಟಿಕೆಗಳನ್ನು ಒಂದು ಸಂಘಟನೆ ಮೂಲಕ ಬೆಳೆಸುವ ಸಾಧ್ಯತೆಗಳ ಬಗ್ಗೆ ಚರ್ಚೆಯೂ ಇದೆ. ಇದೊಂದು ಒಳ್ಳೆಯ ಯೋಚನೆಯೇ. ಆದರೆ, ಇದು ಸಾಧ್ಯವಾದಷ್ಟು ಅನೌಪಚಾರಿಕವಾಗಿ ಉಳಿಯುವಂತೆ ಮಾಡಬೇಕು. ಅಲ್ಲದೇ ಇದರಲ್ಲಿ ನಾವು ತುಂಬಾ ambitious ಆಗಿ ಕೈಹಾಕಬಾರದು. ಅದರಿಂದ ನಿರಾಸೆಯೇ ಹೆಚ್ಚು. ನಾನೂ ಹಿಂದೆ ಕೆಲವೊಂದು (ಇಂಗ್ಲಿಶ್) ಬ್ಲಾಗುಗಳ ಗುಂಪಿನ ಮೀಟಿಂಗಿಗೆ ಹೋಗಿದ್ದೇನೆ. ಬಹಳ ಬೇಗ ಎಲ್ಲರೂ ಆಸಕ್ತಿ ಕಳೆದುಕೊಂಡು ಅದರ ನೆನಪಿಲ್ಲದಂತೆ ಉಳಿದುಬಿಡುತ್ತಾರೆ. ಇದು ಸಾಮಾನ್ಯ.

’ನನಗೇನು ಲಾಭ?’ ಎಂದು ಕೇಳುವವರಿರಬಾರದು ಈ ಸಂಘಟನೆಯಲ್ಲಿ ಎಂದೂ ಅಲ್ಲಿ ಅಭಿಪ್ರಾಯವೆದ್ದಿದೆ. ಹಾಗಿದ್ದ ಪಕ್ಷದಲ್ಲಿ ಅದರಲ್ಲಿ ನನಗೆ ಪ್ರವೇಶ ನಿಷಿದ್ಧ. ಅಲ್ಲಲ್ಲ, ಎಲ್ಲರಿಗೂ! ಯಾಕೆಂದರೆ, ಲಾಭವಿಲ್ಲದೆ ಯಾರೂ ಏನೂ ಮಾಡುವುದಿಲ್ಲ. ಮಾಡಬಾರದು. ಲಾಭವಿರಬೇಕು. ಆದರೆ ಆ ಲಾಭದ ಅರ್ಥವ್ಯಾಪ್ತಿಯನ್ನು ನಾವು ಸರಿಯಾಗಿ define ಮಾಡಬೇಕಷ್ಟೆ.

9 thoughts on “ಬ್ಲಾಗಂಗಣದ ಅಂಚಿನಿಂದ

 1. ಚಕೋರ,
  ಬಹಳ ಪ್ರಬುದ್ಧವಾದ ವಿಶ್ಲೇಷಣೆ. ಇದನ್ನ ಮತ್ತೆ ಮತ್ತೆ ಓದಿಕೊಂಡು ಬ್ಲಾಗಿಂಗ್ ಅನ್ನು ಮತ್ತಷ್ಟು ಸೀರಿಯಸ್ಸಾಗಿ ಪರಿಗಣಿಸುವ ಬಗ್ಗೆ ಚಿಂತಿಸಿದೆ. ಇಂಥದೊಂದು ವಿಷಯವೆತ್ತಿದ ನಾವಡರಿಗೂ, ನಿನಗೂ ಧನ್ಯವಾದ.
  ಬರಹದ ಕೊನೆಯ ಸಾಲುಗಳಿಗೆ ಇದೀಗ ನನ್ನ ಸಹಮತವಿದೆ! ಹೌದು. ಲಾಭವನ್ನ ಸರಿಯಗಿ ಡಿಫೈನ್ ಮಾಡಬೇಕಷ್ಟೇ!!
  -ಚೇತನಾ

 2. “ಲಾಭವಿಲ್ಲದೆ ಯಾರೂ ಏನೂ ಮಾಡುವುದಿಲ್ಲ. ಮಾಡಬಾರದು. ಲಾಭವಿರಬೇಕು. ಆದರೆ ಆ ಲಾಭದ ಅರ್ಥವ್ಯಾಪ್ತಿಯನ್ನು ನಾವು ಸರಿಯಾಗಿ define ಮಾಡಬೇಕಷ್ಟೆ”
  ಈ ಮಾತುಗಳಿಗೆ ನನ್ನ ಅರ್ಥೈಕೆ ಸರಿಯಾದರೆ-

  ಬ್ಲಾಗ್‌ ಬರೆಯುವವರು ಕಮಿಟ್ ಆಗಲಿಕ್ಕೆ ಏನಾದರೂ ಮಾಡಲೇಬೇಕು. ಗೂಗಲ್, ವರ್ಡ್‌ಪ್ರೆಸ್ ಮುಂತಾದ ಕಂಪನಿಗಳು ಸಾಮಾಜಿಕ ಕಳಕಳಿಯಿಂದಾಗಲೀ, ಕಂಟೆಂಟ್ ಜಾಸ್ತಿ ಮಾಡಬೇಕೆಂಬ ಸದುದ್ದೇಶದಿಂದಾಗಿಯಾಗಲೀ ಬ್ಲಾಗಿಂಗ್‌ಗೆ ಅವಕಾಶ ನೀಡಿಲ್ಲ. ಅವರ ಉದ್ದೇಶ ಒಂದೇ ಹಣ ಮಾಡುವುದು. ಅದು ಜಾಹಿರಾತಿನ ಮೂಲಕ. ಅದನ್ನು ತಪ್ಪೆನ್ನಲಾಗುವುದಿಲ್ಲ. ನಮಗೆ ಜಾಹಿರಾತಿನಿಂದ ಹಣ ಮಾಡುವ ಅವಶ್ಯಕತೆಯಿಲ್ಲ. ಅದರಿಂದೆಷ್ಟು ಬಂದೀತು? ಇತ್ಯಾದಿ ವಾದಗಳಿಗೊಂದು ಉತ್ತರ:ನಾಳೆ ಈ ಕಂಪನಿಗಳೆಲ್ಲಾ ನೀವು ಬ್ಲಾಗ್ ಮಾಡೋದಕ್ಕೆ ಇಂತಿಷ್ಟು ಹಣ ಕೊಡಬೇಕು. ಇಲ್ಲ ಖಾಲಿ ಮಾಡಿ ಅಂದಾಗ ಏನು ಮಾಡೋದು…? ಆಗ ನಾನು ಆತ್ಮತೃಪ್ತಿಗೆ ಬರೀತೀನಿ ಕಣ್ರೀ ಅಂತ ಅವರಿಗೆ ಹೇಳೋಕಾಗುತ್ತಾ? ಹೇಳಿದರೆ ಅದಕ್ಕೊಂದು ಅರ್ಥವಿರುತ್ತಾ? ಅದೆಲ್ಲ್ಲಾ ಹೋಗಲಿ ನಿಮ್ಮ ಬ್ಲಾಗನ್ನು pay and use ಅನ್ನೋ ತರ ಮಾಡೋಕಾಗುತ್ತಾ? ಇಲ್ಲ. ಆವಾಗ ನಿಮ್ಮ ಬ್ಲಾಗನ್ನು ನೀವೇ ಓದಿಕೊಳ್ಳಬೇಕು. ಅದಕ್ಕೇ ಹೇಳಿದ್ದು ಕಮರ್ಶಿಯಲ್ ವ್ಯವಹಾರ ನಡೆಸೋ ಕಂಪನಿಗಳ ಸೇವೆಯ ಋಣ ನಮ್ಮ ಮೇಲಿರಬಾರದೆಂದರೆ ನಾವೂ ಕಮರ್ಶಿಯಲ್ ಆಗಬೇಕು. ಆದರೆ ಹೇಗೆ ಎಂಬ ಪ್ರಶ್ನೆ? ಇದಕ್ಕೆ ಉತ್ತರ ಕಂಡುಕೊಳ್ಳಬೇಕಾಗಿರೋದು.
  ನಮ್ಮದೇ ಸೈಟ್ ಮಾಡಿಕೊಳ್ಳಲು ಹಣ, ಸಮಯ, ನಿರ್ವಹಣೆ ಇತ್ಯಾದಿ ಅಡೆತಡೆ-ನೆಪ.
  ದೇಣಿಗೆ ಪಡೆದು ನಡೆಸೋದೆಂದರೆ ಅದು ತುಂಬಾ ಕಷ್ಟದ ಕೆಲಸ. ಸಂಪದ, ಕನ್ನಡಸಾಹಿತ್ಯ.ಕಾಂ ಸೈಟ್‍ಗಳ ಸಂಕಷ್ಟಗಳನ್ನು ಇಲ್ಲಿ ಉದಾಹರಿಸಬೇಕು.
  ಹಾಗಂತ ಗೂಗಲ್ ಜಾಹಿರಾತುಗಳನ್ನು ನಿಮ್ಮ ಕಂಟೆಂಟ್ ಮಧ್ಯೆ ಹಾಕಿಕೊಂಡರೂ ಜನ ಮೂಸುವುದಿಲ್ಲ. ಅದು ಅವರಿಗೆ ವರ್ಜ್ಯ. ಅವರಿಗೆ ಏನನ್ನಾದರೂ ಕೊಡಬೇಕೆಂದರೆ ಹೊಸ ತಟ್ಟೆಯಲ್ಲೇ ಹಾಕೊಕೊಡಬೇಕು.
  ಆ ತಟ್ಟೆ ಎಲ್ಲಿದೆ ಮತ್ತು ತರೋರು ಯಾರು?
  (ಈ ಕುರಿತಂತೆ ಇನ್ನೊಂದು ಕಮೆಂಟ್ ನಾವಡರ ಬ್ಲಾಗಿಗೆ ಹಾಕಿದ್ದೇನೆ)

  ರವೀ….

 3. ರವಿಯವರೆ, ಕಾಮೆಡಿ ಶುರು ಮಾಡಬೇಕೆಂದಲ್ಲ. ಆದರೆ ನನ್ನ ಬರೆಹದಲ್ಲಿ ನಾನು ’ಲಾಭ’ ಎಂಬುದನ್ನು ಯಾವ contextನಲ್ಲಿ ಉಪಯೋಗಿಸಿದ್ದೇನೆ ಅನ್ನುವುದು ಸ್ಪಷ್ಟ ಅಂದುಕೊಂಡಿದ್ದೆ. ಒಂದು ಸಂಘಟನೆಯನ್ನು ಬೆಳೆಸುವ ಬಗ್ಗೆ ಚರ್ಚೆ ನಡೀತಾ ಇದೆ; ಅದರ ಭಾಗವಾಗಬೇಕಾದವರ ಮನಸ್ಥಿತಿಯ ಬಗ್ಗೆ ಆಡಿದ ಮಾತು ಅದು; ಬ್ಲಾಗಿಂಗ್ ಮಾಡುವುದರ ಬಗ್ಗೆ ಅಲ್ಲ.

  ನಿಮಗೆ ಇನ್ನೂ ಕೆಲವು ವಿಚಾರಗಳನ್ನು ಹೇಳುವುದಿದ್ದಲ್ಲಿ, ಅದು ಬೇರೆ ವಿಷಯ. ಹಾಗೇ ಹೇಳಬಹುದಿತ್ತು. ಆದರೆ ನನ್ನ ಸಾಲುಗಳನ್ನು ಉದ್ಧರಿಸಿ ಹೇಳಿದ್ದೀರಲ್ಲ, ಅದಕ್ಕೆ ಹೇಳಿದೆ. ಅದಿರಲಿ. ನಿಮ್ಮ ಕಮೆಂಟಿನಲ್ಲಿರುವ ಕೆಲ ಪ್ರಶ್ನೆ, ಹಾಗೂ ಮುಖ್ಯವಾಗಿ ಕೆಲವು assumptionsಗಳಿಗೆ ನನ್ನ ಪ್ರತಿಕ್ರಿಯೆ ಕೊಡುತ್ತಿದ್ದೇನೆ:
  ಮೊದಲನೆಯದಾಗಿ, ಗೂಗಲ್ ಇತ್ಯಾದಿಗಳು ಯಾಕೆ ಈ ಸಲಕರಣೆಗಳನ್ನು ಕೊಟ್ಟಿವೆ, ಅವರ ಉದ್ದೇಶವೇನು, ಎನ್ನುವುದು ಅಪ್ರಸ್ತುತ. ಅವುಗಳಿಂದ ನಮಗೆ ಅನುಕೂಲವಿದೆಯೋ ಇಲ್ಲವೋ ಎನ್ನುವುದರ ಬಗ್ಗೆ ನಮ್ಮ ಲಕ್ಷ್ಯವಿದ್ದರೆ ಸಾಕು.
  ಮುಂದೆ ಆ ಕಂಪೆನಿಗಳು ಜಾಗ ಖಾಲಿ ಮಾಡಿ ಎಂದು ಹೇಳುವುದರ ಬಗ್ಗೆ. ಇದರ ಬಗ್ಗೆ ನಾನು ಹೇಳುವ ಒಂದೇ ಮಾತೆಂದರೆ, ಅವರು ಹಾಗೆ ವರ್ತಿಸಬೇಕಾದರೆ ಎಕನಾಮಿಕ್ಸ್ ಅದನ್ನು ಅವರಿಗೆ ಹೇಳಬೇಕಾಗುತ್ತದೆ. ಇಷ್ಟು ದೊಡ್ಡ ಯೂಸರ್ ಬೇಸ್ ಕಳೆದುಕೊಳ್ಳಲು ಕಂಪೆನಿಗಳು ಇಷ್ಟಪಡುತ್ತವೆಯೆ? ಅಲ್ಲದೆ, ವೆಬ್ ಆಧಾರಿತ ಕಂಪೆನಿಗಳು ಹಣ ಮಾಡುವ ರೀತಿ ಬೇರೆಯೇ ಇದೆ. (ಅದನ್ನು ವಿವರಿಸಲು ಬೇರೆ ಪೋಸ್ಟ್ ಬೇಕು.) ನೀವು ಉಪಯೋಗಿಸುವ ಪ್ರತಿಯೊಂದು ಸೌಲಭ್ಯ – ಈಮೇಲ್, ಐಎಮ್, ಬ್ಲಾಗ್ಸ್, ಸೋಶಿಯಲ್ ನೆಟ್‍ವರ್ಕಿಂಗ್, ಸರ್ಚ್ – ಪುಕ್ಕಟೆಯಾಗಿ ಗೂಗಲ್‍ನಂಥವರಿಂದ ಬರುತ್ತದೆ. ಅದು ಬದಲಾಗುವ ಸಂಭವ ಬಹಳ ಕಡಿಮೆ.
  ಬ್ಲಾಗಿಗರು ಕಮರ್ಶಿಯಲ್ ಆಗಬೇಕೋ ಆಗಬಾರದೋ ಎಂಬುದು ಅವರವರಿಗೆ ಬಿಟ್ಟ ವಿಷಯ. ಸ್ವಂತ ಸೈಟ್ ಮಾಡಿಕೊಳ್ಳುವುದು ಈಗ ಅಂಥ ಕಷ್ಟದ ವಿಷಯವೂ ಅಲ್ಲ, ಅದಕ್ಕೆ ಬಹಳ ಹಣವೂ ಬೇಕಾಗಿಲ್ಲ. ವರ್ಷಕ್ಕೆ ೧೫ ಡಾಲರ್ ಕೊಟ್ಟರೆ ವರ್ಡ್‍ಪ್ರೆಸ್‍ನಲ್ಲೇ ನಿಮ್ಮ ಡೊಮೇನ್ ರಿಜಿಸ್ಟರ್ ಮಾಡಬಹುದು. ಅಲ್ಲೇ ಜಾಗವೂ ಸಿಗುತ್ತೆ. ನಿಮ್ಮ ಬ್ಲಾಗಿನ ಮಾದರಿಯಲ್ಲೇ ಸೈಟ್ ಬೆಳೆಸಬಹುದು, ಅಥವಾ ವರ್ಡ್‍ಪ್ರೆಸ್‍ನವರ ಇತರ ಟೂಲ್‍ಗಳನ್ನು ಉಪಯೋಗಿಸಬಹುದು.
  ಇನ್ನು ದೇಣಿಗೆ ಪಡೆದು ಸ್ವಂತ ಸೈಟ್ ನಡೆಸುವುದೇ? ಸಂಪದ, ಕನ್ನಡ ಸಾಹಿತ್ಯ.ಕಾಮ್‍ಗಳು ಸ್ವಂತಕ್ಕೆ ಮಾಡಿಕೊಂಡ ಸೈಟ್ ಅಲ್ಲ. ಅಲ್ಲೊಂದು ಸಮುದಾಯ ಇದೆ. ಒಂದು cause ಇದೆ. ಅದು ಬೇರೆಯೇ ವಿಷಯ.
  ಗೂಗಲ್ ಜಾಹೀರಾತುಗಳನ್ನು ಬ್ಲಾಗಿನಲ್ಲಿ ಹಾಕಿಕೊಂಡರೆ ಜನ ಮೂಸುವುದಿಲ್ಲ ಅನ್ನುತ್ತೀರಿ. ಅದು ನಿಮ್ಮ assumption ಅಷ್ಟೆ. ಅತ್ಯಂತ ಜನಪ್ರಿಯ ಬ್ಲಾಗುಗಳೆಲ್ಲ ಜಾಹೀರಾತುಗಳನ್ನು ಹಾಕಿಕೊಂಡಿವೆ. ದುಡ್ಡೂ ಮಾಡುತ್ತವೆ. ಆ ದುಡ್ಡಿನಿಂದಲೇ ಒಂದು ಕಾರು ಖರೀದಿಸಿದ ಅಮಿತ್ ಅಗರ್‍ವಾಲ್ ಎಂಬ ಟೆಕ್‍ಬ್ಲಾಗರ್ ಬಗ್ಗೆ ನಿನ್ನೆಯೇ ಓದಿದೆ.
  ಆದರೆ ಹೆಚ್ಚು ಜನ ಅದನ್ನು ಬಳಸುವುದಿಲ್ಲ. ಅದು ಬೇರೆ ವಿಷಯ. ಇಲ್ಲಿ ಮತ್ತೆ ನಿಮ್ಮ ಮೊದಲಿನ point ಬಗ್ಗೆ ಹೇಳಬೇಕೆಂದರೆ, ಹೆಚ್ಚು ಜನದ ಉದ್ದೇಶ ಇದರಿಂದ ಹಣ ಮಾಡುವುದಲ್ಲ. ಅನೇಕರಿಗೆ ಅದರ ಸಾಧ್ಯತೆಯ ಬಗ್ಗೆ ಗೊತ್ತಿಲ್ಲದಿರುವು ಬೇರೆ ವಿಚಾರ; ಆದರೆ ಅದರ ಅವಶ್ಯಕತೆಯೇ ಹೆಚ್ಚು ಜನರಿಗೆ ಇಲ್ಲ. ಬ್ಲಾಗ್ ಜಗತ್ತಿನ ಮಾರುಕಟ್ಟೆಯ ರೀತಿ ಬೇರೆ. ಇಲ್ಲಿನ ಕರೆನ್ಸಿಯೂ ಬೇರೆ. ಅದಕ್ಕೆ attention ಎಂದು ಹೆಸರು. ಇಲ್ಲಿನ ಎಕಾನಮಿ ’ಅಟೆನ್ಶನ್ ಎಕಾನಮಿ’ ಎಂಬ ಗ್ರಹಿಕೆಯ ಆಧಾರದ ಮೇಲೆ ನಡೆಯುತ್ತದೆ. ಈ ವಿಷಯದ ಬಗ್ಗೆ ಇನ್ನೊಮ್ಮೆ.

 4. ಧನ್ಯವಾದಗಳು ಚಕೋರರೆ,

  ಕೆಲವು ಸಂದೇಹಗಳಂತೂ ನೀಗಿದವು .

  ನೀವು ಗೂಗಲ್ ಜಾಹಿರಾತಿನಲ್ಲಿ ದುಡ್ಡು ಮಾಡುತ್ತಿರುವ ಇಂಗ್ಲೀಷ್/ಇತರೆ ಭಾಷೆಗಳ ಬಗ್ಗೆ ಹೇಳಿದಿರಿ. ಆದರೆ ನಾನು ಪ್ರಸ್ತಾಪಿಸಿದ್ದು ಕನ್ನಡದ ಬ್ಲಾಗ್ ಕುರಿತಂತೆ. ಇರಲಿ.
  ಬ್ಲಾಗ್ ಜಗತ್ತಿನ ಮಾರುಕಟ್ಟೆ ಮತ್ತು ’ಅಟೆನ್ಶನ್ ಎಕಾನಮಿ’ಇತ್ಯಾದಿ ಅಂದರೇನು ಒಂದಿಷ್ಟು ವಿವರ ಬೇಕಾಗಿದೆ. ಈ ’ಅಟೆನ್ಶನ್ ಎಕಾನಮಿ’ ಕನ್ನಡದ ಬ್ಲಾಗಿಂಗ್‌ನಲ್ಲಿ ಹೇಗೆ ಕೆಲಸ ಮಾಡುತ್ತೆ ಅನ್ನುವ ಕುರಿತಂತೆ ಸಂದೇಹಗಳಿವೆ. ದಯಮಾಡಿ ಪರಿಹರಿಸಿ.
  ಅದಕ್ಕಾಗಿ ಇನ್ನೊಂದು ಪೋಸ್ಟ್ ಬೇಡವೆಂದರೆ ಒಂದು ಮೈಲ್ ಮಾಡಿ:arehalliravi@gmail.com –ofcourse ನಿಮಗೆ ತೊಂದರೆಯೆನಿಸದಿದ್ದರೆ.

 5. ತೊಂದರೆಯೇನಿಲ್ಲ. ಇಲ್ಲಿ ಅದಕ್ಕೆ ಸಂಕ್ಷಿಪ್ತ ಉತ್ತರ ಕೊಟ್ಟು ಇನ್ನೊಮ್ಮೆ ವಿಸ್ತೃತವಾಗಿ ಹೇಳುತ್ತೇನೆ. ಇದು ಮಾಹಿತಿ ಯುಗ. ಮಾಹಿತಿ ಎನ್ನುವುದು ಅತ್ಯಂತ ಪ್ರಬಲವಾಗಿ ಬೆಳೆಯುತ್ತಿದೆ. ಅದರದೇ ದೊಡ್ಡ ಮಾರುಕಟ್ಟೆ ಇದೆ. ಒಂದು ಬಗೆಯ ಮಾಹಿತಿಯಾದ ಸಾಫ್ಟ್‍ವೇರ್ ಯಾವ ಪರಿಮಾಣದಲ್ಲಿ ರಫ್ತಾಗುತ್ತಿದೆ ಎನ್ನುವುದು ನಿಮಗೂ ಗೊತ್ತು. ಆದರೆ ಈ ಮಾಹಿತಿ ಎನ್ನುವುದು ಅದರದೇ ಆದ ಹೊಸ ಆಸಕ್ತಿಕರ ಸಮಸ್ಯೆಗಳನ್ನು ತಂದಿದೆ. ಉದಾಹರಣೆಗೆ: ನಿಮ್ಮ ಬಳಿ ಒಂದು ಕಾರು ಇದೆ ಎನ್ನಿ. ನೀವು ಅದನ್ನು ನನಗೆ ಮಾರಿದರೆ, ನಿಮ್ಮ ಬಳಿ ಕಾರು ಇಲ್ಲ. ಬದಲಿಗೆ ನಾನು ಕೊಟ್ಟ ಹಣ ಇದೆ. ಮತ್ತೆ ನನ್ನ ಬಳಿ ಹಣ ಇಲ್ಲ, ಕಾರು ಇದೆ. ಆದರೆ ನಿಮ್ಮ ಬಳಿ ಡಿಜಿಟಲ್ ರೂಪದಲ್ಲಿ ಏನೋ ಮಾಹಿತಿ ಇದೆ ಎಂದಿಟ್ಟುಕೊಳ್ಳಿ. ನೀವು ಅದನ್ನು ನನಗೆ ಕಾಪಿ ಮಾಡಿ ಕೊಟ್ಟರೆ, ಅದು ನಿಮ್ಮಲ್ಲಿ ಇಲ್ಲವಾಗುವುದಿಲ್ಲ! ಇದು ಮತ್ತು ಇಂಥ ಅನೇಕ ಸಮಸ್ಯೆಗಳಿಂದ ನಮ್ಮ ಎಕನಾಮಿಕ್ಸ್‍ನ ಮೂಲಭೂತ ತತ್ವಗಳಾದ ’ಬೇಡಿಕೆ’ ಮತ್ತು ’ಪೂರೈಕೆ’ಗಳ ಸಮೀಕರಣಗಳು ಇಲ್ಲಿ ಉಪಯೋಗವಾಗುವುದಿಲ್ಲ. ಇದಕ್ಕೆ ಹೊಸ ಬಗೆಯ ಚಿಂತನೆ ಬೇಕು. ಅದು ನಡೆಯುತ್ತಿದೆ.

  ಇನ್ನು ಬ್ಲಾಗುಗಳು. ಇಂದು ಬ್ಲಾಗುಗಳು ಮುಖ್ಯವಾದ ಮಾಹಿತಿಯ ಆಕರವಾಗಿವೆ. ಬ್ಲಾಗುಗಳನ್ನು ಬರೆಯುವವರಿಗೆ ಅದರಿಂದ ಹಣ ದೊರೆಯುತ್ತದೆಯೇ? ಆ ಸಾಧ್ಯತೆಗಳು ನೀವು ಹೇಳಿದಂತೆ ಬಹಳ ಕಡಿಮೆ. ಮತ್ತೆ ನಾನು ಮೇಲೆ ಹೇಳಿದಂತೆ, ಡಿಜಿಟಲ್ ಮಾಹಿತಿಯನ್ನು ನಕಲು ಮಾಡುವುದು ಅತಿ ಸುಲಭ (ಚೇತನಾ ನನ್ನ ಲೇಖನವನ್ನು ’ಕದ್ದು’ ತನ್ನ ಬ್ಲಾಗಿನಲ್ಲಿ ಹಾಕಿಕೊಂಡಂತೆ ;)). ಇಲ್ಲಿನ ಕಾಪಿರೈಟ್ ಮತ್ತಿತರ ಪಾಲಿಸಿಗಳು ಇನ್ನೂವರೆಗೆ ಅಸ್ಪಷ್ಟ. ಹೀಗಿದ್ದಾಗ ನಾವು ಯಾತಕ್ಕಾಗಿ ಬ್ಲಾಗ್ ಬರೆಯಬೇಕು? ಅದರಿಂದ ನಮಗೆ ಏನು ಪ್ರತಿಫಲ ಸಿಗುತ್ತಿದೆ? ಇಷ್ಟೊಂದು ಜನ ಯಾಕೆ ಬರೀತಾರೆ?

  ಇಲ್ಲಿ ಸಿಗುವ ಪ್ರತಿಫಲವೆಂದರೆ: attention. ಜನರ ಗಮನ, ಆಸಕ್ತಿ. ಜನರೊಂದಿಗೆ ಸಂವಹನ. ಜನರು ನಾನು ಬರೆದದ್ದನ್ನು ಓದುತ್ತಿದಾರೆ ಎಂಬ ತೃಪ್ತಿ. ಜನರು ನನ್ನನ್ನು ಗುರುತಿಸುತ್ತಾರೆ ಎಂಬ ಅಲ್ಪ ಹೆಮ್ಮೆ. ಮೊನ್ನೆ ನಡೆದ ಬ್ಲಾಗರ್ಸ್ ಮೀಟಿನ ವರದಿಗಳನ್ನು ನೀವು ನೋಡಿದರೆ, ಅಲ್ಲಿ ಜನ ’ಓ ಈ ಬ್ಲಾಗ್ ಬರೆಯುವ ಇವರು ಬಂದಿದ್ದಾರೋ?’ ಎಂದು ಹುಡುಕಾಡಿದ ಬಗ್ಗೆ ಕಾಣುತ್ತೀರಿ. ಅದು ನಮ್ಮ ಐಡೆಂಟಿಟಿಯ ಭಾಗವಾಗುತ್ತದೆ.

  ಈ ಮಾರುಕಟ್ಟೆಯಲ್ಲಿ ಚಲಾವಣೆಯಾಗುವ ಕರೆನ್ಸಿ ಇದೇ: ಅವಗಾಹನೆ. ಅದು ವಿಪರೀತ scarce resource. ನೂರಾರು ಬ್ಲಾಗುಗಳು ಕೈಬೀಸಿ ಕರೆಯುತ್ತ ಈ ’ಹಣ’ವನ್ನು ಪಡೆದು ತಮ್ಮ ಬ್ಲಾಗಿನ ’ವಸ್ತು’ವನ್ನು ಮಾರಬಯಸುತ್ತಿವೆ. ಆದರೆ ಪ್ರತಿಯೊಬ್ಬರಲ್ಲೂ ಇರುವ ಈ ’ಹಣ’ ಸ್ವಲ್ಪವೇ. ಅದನ್ನು ನಾವು ವಿಚಾರ ಮಾಡಿ ಬಳಸುತ್ತೇವೆ. ಹೀಗಾಗಿ ಅನೇಕ ಸಂದರ್ಭಗಳಲ್ಲಿ ಎಷ್ಟೋ ಬ್ಲಾಗುಗಳು ಸಾಕಷ್ಟು ಅವಗಾಹನೆ ಸಿಗದೆ ತಮ್ಮ ವ್ಯಾಪಾರವನ್ನು ಬಂದು ಮಾಡುತ್ತವೆ. ಮತ್ತೆ ಕೆಲವು ಬ್ಲಾಗುಗಳು ಅತೀ ಲಾಭ ಗಳಿಸಿ ಸೆಲೆಬ್ರಿಟಿಗಳಾಗುತ್ತವೆ. ಹೀಗೆ.

  ಸ್ವಲ್ಪವೇ ಬರೀತೀನಿ ಅಂತ ಶುರು ಮಾಡಿ ಹುಚ್ಚಾಪಟ್ಟೆ ಬರೆದೆ. ಆದರೆ ಇಷ್ಟು ಸಾಕು. ಇದನ್ನೇ ಒಂದು ಪೂರ್ತಿ ಪೋಸ್ಟ್ ಮಾಡಿ ಬ್ಲಾಗಿನಲ್ಲಿ ಹಾಕಿದರೆ ಸ್ವಲ್ಪ ಅವಗಾಹನೆಯಾದರೂ ದೊರೆತೀತು.

 6. 🙂
  ಅವಗಾಹನೆಗೆ ಬಂದಿದೆ…!
  ನೀನು ನನು ‘ಕದ್ದೆ’ ಅನ್ನೋದಕ್ಕೆ ಇಷ್ಟೊಂದು ಪಬ್ಲಿಸಿಟಿ ಕೊಡ್ತಿದೀಯಲ್ಲ?
  ಬರೋ ಪ್ರಾಫಿಟ್ಟಾಲ್ಲಿ ನಿಂಗೂ ಶೇರ್ ಕೊಡ್ತೀನಿ, ಇನ್ಮೇಲೆ ಹಾಗೆ ಹೆಳ್ಬೇಡ. ಸರೀನಾ?
  ಚೆತನಾ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s