12 Angry Menರನ್ನು ನೋಡಿದ ಬಳಿಕ

ಇತ್ತೀಚೆಗೆ ಚೇತನಾಳ ಬ್ಲಾಗಿನಲ್ಲಿ ಹಳೆಯ ಧಾರಾವಾಹಿಗಳ ಬಗ್ಗೆ ಚರ್ಚೆ ನಡೆದಿತ್ತು. ಅಲ್ಲಿ ಒಟ್ಟಾರೆಯಾಗಿ ಕಂಡುಬರುತ್ತಿದ್ದ ಮೂಡು ಹೇಗಿತ್ತೆಂದರೆ, ಎಲ್ಲರ ಅಚ್ಚುಮೆಚ್ಚಿನ ಧಾರಾವಾಹಿಗಳು ಹಳೆಯವೆ. ಇದಕ್ಕೆ ಸ್ವಲ್ಪ ಮಟ್ಟಿಗೆ nostalgia ಕಾರಣ: ಚಿಕ್ಕಂದಿನಲ್ಲಿ ಸಣ್ಣಸಣ್ಣ ಊರುಗಳಲ್ಲಿ ಓರಗೆಯವರು, ಕಿರಿಯರು, ಹಿರಿಯರು ಎಲ್ಲರೂ ಒಟ್ಟಿಗೆ ಕೂತು ಭಕ್ತಿಯಿಂದ ನೋಡುತ್ತಿದ್ದ ಧಾರಾವಾಹಿಗಳು; ನಾನಂತೂ ತೀರ ಚಿಕ್ಕವನಿದ್ದಾಗ ಮಹಾಭಾರತ ಇತ್ಯಾದಿಗಳನ್ನು ಬೇರೆಯವರ ಮನೆಯಲ್ಲಿ ಹೋಗಿಯೇ ನೋಡಿದ್ದು; ಹೀಗೆ ಚಿಕ್ಕಂದಿನ ಸಾಮೂಹಿಕ ಚಟುವಟಿಕೆಗಳು ನಮ್ಮನ್ನು ಕಾಡಿ ಮೃದುವಾಗಿಸುವುದು ಹೌದು. ಅದು ಹೀಗಿದ್ದಾಗ್ಗ್ಯೂ, ವಸ್ತುನಿಷ್ಠವಾಗಿ ವಿಶ್ಲೇಷಿಸಿದರೆ, ಧಾರಾವಾಹಿಗಳ ಗುಣಮಟ್ಟ ಕುಸಿಯುತ್ತ ಬಂದಿರುವುದು ನಿಜ. ಧಾರಾವಾಹಿಗಳಷ್ಟೇ ಅಲ್ಲ, ಸಿನೆಮಾಗಳೂ ಕೂಡ. (ಭಾರತದಲ್ಲಿ) ೭೦ರ ದಶಕದಲ್ಲಿ ಬಂದಷ್ಟು ಒಳ್ಳೆಯ ಸಿನೆಮಾಗಳು ನಂತರ ಬರಲೇ ಇಲ್ಲ. ಇತ್ತಿಚಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಬದಲಾಗುತ್ತಿರುವುದು ಧನಾತ್ಮಕ ವಿಚಾರ. ಒಟ್ಟಾರೆಯಾಗಿ ನಮಗಿಂತ ಒಳ್ಳೆಯ ಕ್ವಾಲಿಟಿ ಹೊಂದಿರುವ ಇಂಗ್ಲಿಶ್ ಸಿನೆಮಾಗಳೂ ಇದಕ್ಕೆ ಹೊರತಲ್ಲ. ಹಾಗೆಯೇ ನಮ್ಮಲ್ಲಿ ಸಿನೆಮಾ ಸಂಗೀತ, ಹಾಗೂ ಹಾಡುಗಳ “ಸಾಹಿತ್ಯ”. ಅವುಗಳ ಬಗ್ಗೆಯಂತೂ ಹೇಳುವುದೇ ಬೇಡ.

ಇದೆಲ್ಲ ಮತ್ತೆ ಮನಸ್ಸಿನಲ್ಲಿ ಬಂದದ್ದು ಯಾಕೆಂದರೆ ಮೊನ್ನೆ 12 Angry Men ಎಂಬ ಸಿನೆಮಾ ನೋಡಿದೆ. ಸಿಡ್ನಿ ಲುಮೆಟ್ ನಿರ್ದೇಶಿಸಿದ ಮೊದಲ ಸಿನೆಮಾ. ೧೯೫೧ರ ಸಿನೆಮ. ಕಪ್ಪುಬಿಳುಪು ಸಿನೆಮಾ. ರೆಜಿನಾಲ್ಡ್ ರೋಸ್ ಎಂಬಾತನ ಅದೇ ಹೆಸರಿನ ನಾಟಕವೊಂದನ್ನು ಆಧರಿಸಿದ್ದು. ಅದನ್ನು ನೋಡಿದ ಕೂಡಲೇ ಮತ್ತೆ ಅದೇ, “Oh, they don’t make them like this anymore!” ಎಂಬ familiar ಫೀಲಿಂಗು.

12 Angry Men, ಸರಳ ಕಥಾವಸ್ತುವಿನ, ನೇರ ನಿರೂಪಣೆಯ ಸಿನೆಮಾ. ಈ ಸಿನೆಮಾದ ಅತ್ಯಂತ ಎದ್ದುಕಾಣುವ ತಂತ್ರವೆಂದರೆ, ಬಹುತೇಕ ಇಡೀ ಸಿನೆಮಾ ಒಂದೇ ಒಂದು ಕೋಣೆಯ ಒಳಗೆ, ಒಂದು ಟೇಬಲ್ಲಿನ ಸುತ್ತ ನಡೆಯುವುದು. ಮೊದಲಿನ ಒಂದು ನಿಮಿಷದಷ್ಟು ಕಾಲ ಕೋರ್ಟಿನಲ್ಲೂ, ಕೊನೆಯ ಕೆಲ ಕ್ಷಣಗಳು ಕೋರ್‍ಟಿನ ಹೊರಗೂ, ಮತ್ತೆ ನಡುವೆ ಒಂದೆರಡು ನಿಮಿಷ ಮೇಲೆ ಹೇಳಿದ ಕೊಠಡಿಗೆ ಹೊಂದಿಕೊಂಡ ಶೌಚದ ಕೋಣೆಯಲ್ಲೂ ನಡೆಯುತ್ತವೆ. ಉಳಿದ್ದದ್ದೆಲ್ಲ ಆ ಕೋಣೆಯಲ್ಲೆ. ಯಾವುದೇ ಹಿನ್ನೆಲೆ ಸಂಗೀತವಿಲ್ಲದ, ಸಹಜವಾದ ಶಬ್ದಗಳನ್ನು — ಕೆಮ್ಮುವುದು, ಸೆಕೆಗೆ ಉಸ್ಸೆನ್ನುವುದು, ಗುಸುಗುಸು ಮಾತಾಡುವುದು — ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತ, ಎಚ್ಚರಿಕೆಯ ಕ್ಯಾಮರಾ ಬಳಕೆಯಿಂದ ನಿಧಾನವಾಗಿ ಮುಂದರಿಯುವ ಈ ಸಿನೆಮಾ, ತನ್ನ ಯಾವುದೇ ವಿಪರೀತ ತಂತ್ರಗಾರಿಕೆಯ ಹಂಗಿಲ್ಲದ ಸ್ವಭಾವದಿಂದಲೇ ಮನಸೂರೆಗೊಳ್ಳುತ್ತದೆ.

ಕೆಳವರ್ಗದ ವಸತಿಯಿರುವ ಜಾಗವೊಂದರಲ್ಲಿ ಒಂದು ಕೊಲೆಯಾಗಿದೆ. ಒಬ್ಬ ಲ್ಯಾಟಿನೋ ಹುಡುಗ ತನ್ನ ತಂದೆಯನ್ನು ಕೊಂದಿರುವ ಆರೋಪದ ಮೇಲೆ ಕೋರ್ಟಿನಲ್ಲಿದ್ದಾನೆ. ಸಿನೆಮಾ ಶುರುವಾದಾಗ ಎಲ್ಲ ವಾದವಿವಾದಗಳು ಮುಗಿದಿವೆ. ಜಜ್ ಒಮ್ಮೆ ಕೇಸಿನ ವಿವರಗಳನ್ನು ಸಂಕ್ಷಿಪ್ತವಾಗಿ ಹೇಳಿ, ಅಲ್ಲಿ ಕೂತ ನ್ಯಾಯಾಧಿಕರಣಕ್ಕೆ (jury) ಮುಂದಿನ ವಿಚಾರವನ್ನು ಬಿಡುತ್ತಾನೆ. ೧೨ ಮಂದಿ ಸದಸ್ಯರಿರುವ ಆ ಜ್ಯೂರಿ, ಆಪಾದಿತ ಅಪರಾಧಿಯೋ ಅಲ್ಲವೋ ನಿರ್ಧರಿಸಬೇಕು. ಆದರೆ, ಜಜ್ ಹೇಳುತ್ತಾನೆ – ಎರಡರಲ್ಲಿ ಯಾವ ನಿರ್ಧಾರಕ್ಕೆ ನೀವು ಬಂದರೂ ಸರಿಯೇ, ಆದರೆ ಅದು ಒಮ್ಮತದ ನಿರ್ಧಾರವಾಗಿರಬೇಕು; ಅಲ್ಲದೇ, ಮೊಕದ್ದಮೆಯ ಅಂಶಗಳು ಹಾಗೂ ಆರೋಪಿಯ ವಿರುದ್ಧದ ಸಾಕ್ಷ್ಯ, ಸಂದೇಹಾತೀತವಾಗಿದ್ದಲ್ಲಿ (beyond reasonable doubt) ಮಾತ್ರ ಆರೋಪಿಯನ್ನು ಅಪರಾಧಿಯೆಂದು ಪರಿಗಣಿಸತಕ್ಕದ್ದು.

ಅಲ್ಲಿಂದ ಮುಂದೆ ಜ್ಯೂರಿಯ ಕೋಣೆಗೆ ಬಂದು ಎಲ್ಲರೂ ಸೇರುತ್ತಾರೆ. ಜ್ಯೂರಿಯ ಪ್ರಕಾರ ಇದೊಂದು Open and Shut case; ಆ ಹುಡುಗ ಕೊಲೆ ಮಾಡಿದ್ದಾನೆನ್ನುವುದು ನಿಚ್ಚಳ; ಸಂದರ್ಭ ಹಾಗಿದೆ, ಅಪ್ಪ ಹಾಗೂ ಮಗನಲ್ಲಿ ವಿಪರೀತ ಮನಸ್ತಾಪವಿದೆ; ಮೇಲಿಂದ ಮೇಲೆ ತನ್ನನ್ನು ಹೊಡೆಯುವ ಬೈಯ್ಯುವ ಅಪ್ಪನನ್ನು ಕೊಲ್ಲುವ ಹೇತು ಮಗನಲ್ಲಿರುವುದು ಈ ಕೇಸಿನಲ್ಲಿ ಸ್ಪಷ್ಟ; ’ನಿನ್ನನ್ನು ಕೊಂದೇ ತೀರುತ್ತೇನೆ,’ ಎಂದು ಆ ಹುಡುಗ ಕಿರುಚಿದ್ದನ್ನು ಕೇಳಿದ್ದೇವೆಂದು ಹೇಳುವ ಸಾಕ್ಷಿಗಳಿವೆ; ಕೊಲೆಗೆ ಬಳಸಿದ ಆಯುಧ ಸ್ಥಳದಲ್ಲೇ ಸಿಕ್ಕಿದೆ; ಅವನು ಚಾಕುವಿನಿಂದ ತಿವಿದಿದ್ದನ್ನು ನೋಡಿದೆ ಎಂದು ಹೇಳುವ ಎದುರು ಮನೆಯ ಹೆಂಗಸಿದ್ದಾಳೆ; ಅವನು ಕೊಲೆ ಮಾಡಿದ ನಂತರ ಅವಸರದಿಂದ ಪರಾರಿಯಾದದ್ದನ್ನು ನೋಡಿದೆ ಎಂದು ಹೇಳುವ ಕೆಳಗಿನ ಮನೆಯ ಮುದುಕನಿದ್ದಾನೆ; ಆ ಹುಡುಗ “ಆಯುಧವನ್ನು ಮರಳಿ ತೆಗೆದುಕೊಳ್ಳಲು ಬಂದಾಗ” ಬಂಧಿತನಾಗಿದ್ದಾನೆ. ಜಜ್‍ನಿಗೆ ಕೂಡ ಸುಮ್ಮನೆ ಶಿಕ್ಷೆವಿಧಿಸುವ ಬದಲು ಇದನ್ನು ಎಳೆಯುವುದು ಬೇಸರದ ವಿಚಾರ, ಆದರೆ ಅವನು ಅವಸರ ಮಾಡಲಾರ. ಅನಿವಾರ್ಯವಾಗಿ ನ್ಯಾಯಮಂಡಳಿಗೆ ಅದನ್ನು ಬಿಟ್ಟಿದ್ದಾನೆ. ಹೀಗಿರುವಾಗ, ನ್ಯಾಯಮಂಡಳಿಯ ಎಲ್ಲ ಸದಸ್ಯರಿಗೂ ಅವನು ಅಪರಾಧಿಯೆಂಬುದು ಸ್ಪಷ್ಟ. ಒಬ್ಬನನ್ನು ಬಿಟ್ಟು.

ಅಲ್ಲಿಗೆ ಬಿಕ್ಕಟ್ಟು ಶುರುವಾಗುತ್ತದೆ. ನಿರ್ಧಾರ ಒಮ್ಮತದ್ದಾಗಬೇಕು. ಆದರೆ ಒಬ್ಬ ಮೂರ್ಖ ಉಳಿದ ೧೧ ಜನರ ವಿರುದ್ದ ನಿಂತಿದ್ದಾನಲ್ಲ! “ನಾವೆಲ್ಲ ಅವನು ಅಪರಾಧಿ ಎಂದು ಹೇಳುತ್ತಿದ್ದೇವೆ. ನಿನಗೆ ಅವನು ನಿರಪರಾಧಿ ಎಂದೆನ್ನಿಸುತ್ತಿದೆಯೇ?” ಎಂದೊಬ್ಬ ಅವನನ್ನು ಕೇಳುತ್ತಾನೆ. ಅವನು ಸರಳವಾಗಿ, ನಿಧಾನವಾಗಿ ಹೇಳುತ್ತಾನೆ, “ನನಗೆ ಗೊತ್ತಿಲ್ಲ.” ಇನ್ನೊಬ್ಬ ಕೇಳುತ್ತಾನೆ — ಅವನಿಗೆ ಇದನ್ನು ಮುಗಿಸಿ ಬೇಸ್‍ಬಾಲ್ ಪಂದ್ಯ ನೋಡಲು ಹೋಗುವ ಅವಸರ — “ಛೇ! ಈಗೇನು ಮಾಡುವುದು?” ಅವನು ಮತ್ತೆ ಹೇಳುತ್ತಾನೆ, “ನನಗೆ ಗೊತ್ತಿಲ್ಲ. ಸುಮ್ಮನೆ ಮಾತಾಡೋಣ. ಸ್ವಲ್ಪ ಹೊತ್ತು, ಇದರ ಬಗ್ಗೆ.” “ಮಾತಾಡೋಣ?!” “ಹೌದು. ೧೮ ವರ್ಷದ ಹುಡುಗನೊಬ್ಬನನ್ನು ೫ ನಿಮಿಷದ ಮಾತೂ ಇಲ್ಲದೆ ವಿದ್ಯುತ್ ಕುರ್ಚಿಯ ಮೇಲೆ ಕೂಡಿಸಿ ಕೊಲ್ಲುವುದು ನನ್ನಿಂದ ಸಾಧ್ಯವಿಲ್ಲ. ಮಾತಾಡೋಣ ಇನ್ನೊಮ್ಮೆ, ಎಲ್ಲ ವಿವರಗಳ ಬಗ್ಗೆ.”

ಮುಂದೆ ಕೇಸಿನ ವಿವರಗಳಷ್ಟೆ ಅಲ್ಲದೆ ಜ್ಯೂರಿಯ ಸದಸ್ಯರ ಸ್ವಭಾವಗಳು, ಅವರ ವಿವಿಧ ಹಿನ್ನೆಲೆಗಳು, ಪೂರ್ವಗ್ರಹಗಳು, ವೈಯಕ್ತಿಕ ರೋಷಗಳು, ತರ್ಕಬದ್ಧ ವಾದಗಳು, ವಿತಂಡ, ವಿರೋಧಾಭಾಸ ಎಲ್ಲವೂ ಅನಾವರಣಗೊಳ್ಳುತ್ತವೆ. ೧೨ ವಿಭಿನ್ನ ಮಂದಿ: ಯಾವುದೇ ಪರಿಗಣನೆಯಿಲ್ಲದೆ ಒಬ್ಬ ಮನುಷ್ಯನನ್ನು ಸಾವಿಗೆ ತಳ್ಳಲು ಮನಸ್ಸಿಲ್ಲದ ಆರ್ಕಿಟೆಕ್ಟ್; ಈ ವಿಷಯದಲ್ಲಿ ಯಾವುದೇ ಆಸಕ್ತಿಯಿಲ್ಲದ, ಯಾವುದೋ ಒಂದು ನಿರ್ಧಾರಕ್ಕೆ ಬೇಗನೇ ಬಂದು ಬೇಸ್‍ಬಾಲ್ ನೋಡಲು ಹೋಗಬಯಸುವ ಮನುಷ್ಯ; ಜೋರುಬಾಯಿಯ, ಕೆಳವರ್ಗದ ಜನರನ್ನು ದ್ವೇಷಿಸುವ, ಆದ್ದರಿಂದ ಹುಡುಗ ತಪ್ಪಿತಸ್ಥ ಎಂದು ನಿರ್ಧರಿಸಿರುವ ಮುದುಕನೊಬ್ಬ; ತನ್ನ ಮಗ ತನ್ನನ್ನು ಬಿಟ್ಟು ಹೋಗಿದ್ದು ಮನಸ್ಸಲ್ಲಿಟ್ಟುಕೊಂಡು, ಈ ಹುಡುಗನ ಬಗ್ಗೆ ದ್ವೇಷ ಕಾರುವ ಮತ್ತೊಬ್ಬ; ಅತ್ತಿಂದಿತ್ತ ಓಲಾಡುವ ಸೇಲ್ಸ್‍ಮನ್; ಭಾವನೆಗಳ ಕೈಗೆ ಬುದ್ಧಿ ಕೊಡದೆ, ತರ್ಕಬದ್ಧವಾಗಿ ಯೋಚಿಸುವ, ನಿಷ್ಠುರ ಆದರೆ ಮುಕ್ತ ಮನಸ್ಸಿನ ಅಕೌಂಟಂಟ್. ಹೀಗೆ ಸಮಾಜದ ಒಂದು cross-section ಆ ಸಣ್ಣ ಕೋಣೆಯಲ್ಲಿ ನೆರೆದು, ಬೇಸಿಗೆಯ ತಾಳಲಾರದ ಸೆಖೆಯಲ್ಲಿ ಚರ್ಚಿಸುತ್ತಿದೆ.

ಸಿನೆಮಾ ಮುಂದುವರೆದಂತೆ ಸಾಕ್ಷಿಗಳು, ಸನ್ನಿವೇಶಗಳು, ಮೇಲ್ನೋಟಕ್ಕೆ ತೋರುವಷ್ಟು ನಿಖರವಾಗಿಲ್ಲವೆನ್ನುವುದು ತಿಳಿದು ಬರುತ್ತದೆ. ವಾಗ್ವಾದಗಳು, ಚರ್ಚೆಗಳು ಇಷ್ಟವಾಗುವ ನನ್ನಂಥವರಿಗೆ ಬೇಕಾಗುವ ಅಂಶಗಳೆಲ್ಲ ಅಲ್ಲಿವೆ. ತರ್ಕ, ಹೊಳಹು, burden of proof ಯಾರ ಮೇಲಿದೆ ಎನ್ನುವುದರ ವಿಶ್ಲೇಷಣೆ, ಬೇಕೆಂತಲೇ ಕೆದಕಿ, ಕೆಣಕಿ, ಸತ್ಯವನ್ನು ಹೊರಗೆಳೆಯುವ flame baitಗಳು. ಹಾಗೆಯೇ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಕೂಡ ಮುಖ್ಯವಾಗುವ “beyond any reasonable doubt” ಎಂಬ ನುಡಿ ಎಷ್ಟು ಪ್ರಬಲ ಎಂಬುದೂ ತಿಳಿಯುತ್ತದೆ. ನಿಜ, ನಮ್ಮ ವ್ಯವಸ್ಥೆ ಅದಕ್ಷವಾಗಿದೆ; ನ್ಯಾಯ ಸಿಗುವುದಕ್ಕೆ ಯುಗಗಟ್ಟಲೇ ಕಾಯಬೇಕು; ಬಹಳ ಸಲ ಅಪರಾಧಿಗಳು ತಪ್ಪಿಸಿಕೊಳ್ಳುತ್ತಾರೆ. ಹೌದು. ಆದರೆ ಇವೆಲ್ಲ ಬೇರೆ ಸಮಸ್ಯೆಗಳು. ಈ ಸಮಸ್ಯೆಗಳನ್ನು ಬಗೆಹರಿಸುವುದರ ಸಲುವಾಗಿ, ನಾವು ಆಪಾದಿತರ ಹಕ್ಕುಗಳನ್ನು ಕಡಿಮೆ ಮಾಡಿದರೆ ಅದು ಮಾನವೀಯತೆಯಲ್ಲ. ಅದೆಷ್ಟೇ ಪ್ರಖರ “ಸತ್ಯ”ವಾಗಿದ್ದರೂ, ಎಲ್ಲವೂ ನಿಚ್ಚಳವಾಗಿದ್ದರೂ, ಜನ ಸಮುದಾಯಗಳೂ, ಮಾಧ್ಯಮಗಳೂ, opinion pollಗಳೂ ನ್ಯಾಯವನ್ನು ಕೊಡುವ ಹೊರೆ ತೊಗೊಳ್ಳಬಾರದು.

ಅದೇನೇ ಇರಲಿ. ನಾನು ಎಂದಿನಂತೆ ಮತ್ತೆ ಯಾವ್ಯಾವುದೋ ವಿಷಯಗಳ ಬಗ್ಗೆ ಮಾತಾಡುತ್ತ ಹೋಗುತ್ತಿದ್ದೇನೆ. 12 Angry Men ಎಂಬ ಶ್ರೇಷ್ಠ ಸಿನೆಮಾ ನೋಡಿ. ನೀವೂ ನನ್ನಂತೆ, ’ನಮ್ಮಲ್ಲೇಕೆ ಈ ಥರದ ಸಿನೆಮಾಗಳನ್ನು ಮಾಡುವುದಿಲ್ಲ’, ’ಈಗಿನ ಕಾಲದಲ್ಲಿ ಇಂಥ ಸಿನೆಮಾಗಳನ್ನು ಮಾಡಿದರೆ ಜನ ನೋಡುವುದಿಲ್ಲವೇ?’ ಎಂದು ವಿಚಾರಕ್ಕೆ ಬೀಳಿ.

9 thoughts on “12 Angry Menರನ್ನು ನೋಡಿದ ಬಳಿಕ

 1. ಚಕೋರ,
  ನಿಮ್ಮ ’ಎಂದಿನಂತೆಯೆ ಆಡುವ ಯಾವ್ಯಾವುದೋ ಮಾತುಗಳು’ ನಮಗೆ ರಸಗವಳ. ಚಿಂತನೆಗೆ ಹಚ್ಚುವಂಥ ಮಾತುಗಳು, ಎಸ್ಪೆಶಲಿ ಆಪಾದಿತರ ಹಕ್ಕುಗಳ ಬಗ್ಗೆ ನೀವು ಬರೆದಿರುವುದು.. ಇನ್ನೊಂದು ಶ್ರೇಷ್ಠ ಸಿನೆಮಾ ’ಡೆಡ್ ಮ್ಯಾನ್ ವಾಕಿಂಗ್’ ಅನ್ನು ನೆನಪಿಸಿತು. 12 Angry Men ಬಗ್ಗೆ ಅಪ್ಪ ನಮ್ಮ ಕಾಲದ ಬೆಸ್ಟ್ ಮೂವೀ ಅಂತ್ ಹೇಳಿದ್ದು ನೆನಪು. ಎಲ್ಲಿ ಸಿಗಬಹುದೋ ತಿಳಿದಿಲ್ಲ. ಟ್ರೈ ಮಾಡುತ್ತೇನೆ. ನಿಮ್ಮ ಬಳಿ ಡಿವಿಡಿ ಇದ್ದರೆ ದಯವಿಟ್ಟು (Read this as threatening in disguise.) ತೆಗೆದಿಡಿ.

  -ಟೀನಾ.

 2. ಚಕೋರ,
  ಒಳ್ಳೆ ಚಿತ್ರದ ಬಗ್ಗೆ ಮಾತಾಡಿದ್ದೀರ. ಓದಿ ಖುಷಿಯಾಯಿತು. ಲುಮೆನ ಈ ಚಿತ್ರ ನೋಡಿ ಅವನ “ಮೇಕಿಂಗ್ ಮೂವೀಸ್” ಓದಿದ್ದೆ.
  ಚಿತ್ರದುದ್ದಕ್ಕೂ ಸಂವಾದ ಮುಂದುವರೆದಂತೆ, ಯಾರನ್ನೋ ಜಡ್ಜ್ ಮಾಡಬೇಕಾದ ಒತ್ತಡದಲ್ಲಿ ಎಲ್ಲರೂ ತಮ್ಮೊಳಗಿನ ತಮ್ಮದೇ “ದೆವ್ವ”ವನ್ನು ಅರಿತುಕೊಳ್ಳುತ್ತಾ, ಅದರಿಂದ ಪಾರಾಗುತ್ತಾ, ಅಪ್ಪಟ ಮಾನವರಾಗುತ್ತಾ ಹೋಗುವುದು ನನಗೆ ತುಂಬಾ ಮುಖ್ಯ ಅನಿಸಿತು.
  ಥ್ಯಾಂಕ್ಸ್ ರೀ.

 3. ಈ ಸಿನಿಮಾವನ್ನು ನಾನೂ ಕೆಲ ತಿಂಗಳುಗಳ ಹಿಂದಷ್ಟೇ ನೋಡಿ ಬೆರಗಾಗಿದ್ದೆ. ಇತರ ಯಾವುದೇ ಸಿನಿಮಾಕ್ಕೆ ಹೋಲಿಸಿದರೂ ತೀರಾ ಬೇರೆಯೇ ಅನ್ನಿಸೋ ಚೈತನ್ಯ ಇರೋ ಚಿತ್ರ ಅನಿಸಿತ್ತು. ಇಂಥ ಚಿತ್ರ ಕನ್ನಡದಲ್ಲೇಕಿಲ್ಲ ಅಂತ ಕೇಳಿದ್ದೀರ. ಯಾಕಿಲ್ಲ. ಇದೇ ಸಿನಿಮಾದ ರೀಮೇಕೊಂದು ಈಗಾಗಲೆ ಬಿಡುಗಡೆಗೆ ಸಿದ್ಧವಾಗಿದೆ ಅಂತ ನಾನು ಕೇಳಿದ್ದೇನೆ!
  ಟೀನಾ, ಈ ಡಿವಿಡಿ ಸಿಗೋದು ಕಷ್ಟ ಏನಲ್ಲ. ನ್ಯಾಷನಲ್‌ ಮಾರ್ಕೆಟಲ್ಲೂ ಸಿಗುತ್ತೆ. ನಾನು ಹೋಗೋ ಕದಿರೇನಳ್ಳಿ ಬಸ್ಟಾಪಿನಲ್ಲಿರೋ ಡಿವಿಡಿ ಅಂಗಡಿಲೂ ಸಿಗುತ್ತೆ.
  ~ಅಪಾರ

 4. ಹರೀಶ್: ನೋಡಿ. ನೋಡಿ ಏನೆನ್ನಿಸಿತು ತಿಳಿಸಿ.

  ಟೀನಾ: ನಾನು ಕಷ್ಟಪಟ್ಟು ಸ್ಟ್ರೀಮ್ ಮಾಡಿಕೊಂಡು ನೋಡಿದೆ. ನನಗೂ ಡಿವಿಡಿ ಬೇಕು. ಪ್ರಯತ್ನಿಸುತ್ತೇನೆ. ನನಗೆ ಸಿಕ್ಕರೆ ನಿಮಗೆ, ನಿಮಗೆ ಸಿಕ್ಕರೆ ನನಗೆ. ಸರಿ ತಾನೆ?

  ಅನಿವಾಸಿ: ಥ್ಯಾಂಕ್ಸ್. ಭೇಟಿ ಕೊಟ್ಟದ್ದಕ್ಕೆ, ಕಮೆಂಟ್ ಬರೆದದ್ದಕ್ಕೆ. ನನಗೂ ನೀವು ಹೇಳಿದ ಅಂಶವೇ ಇಂಪ್ರೆಸ್ಸಿವ್ ಎನ್ನಿಸಿತು.

  ಅಪಾರ: ಅವಕಾಶ ಸಿಕ್ಕಾಗ ನಾನು ಆ ರೀಮೇಕ್ ನೋಡುತ್ತೇನೆ. ಒಳ್ಳೆಯ ಚಿತ್ರ ಕನ್ನಡದಲ್ಲಿ, ಅಥವಾ ಬೇರಾವ ಭಾಷೆಯಲ್ಲಿ ಬಂದರೂ ಸ್ವಾಗತಾರ್ಹವೇ. ನಾನು ಹೇಳಿದ್ದುದರ ಉದ್ದೇಶ ಸ್ವಲ್ಪ ಭಿನ್ನ. ನಮ್ಮಲ್ಲೂ ಒಳ್ಳೊಳ್ಳೆ ಕಥೆಗಳಿವೆ, ಅಲ್ಲದೇ ನಮ್ಮಲ್ಲಿನ ಬದುಕು ಬೇರೆಲ್ಲಿನ ಬದುಕಿಗಿಂತ ಹೆಚ್ಚು nuanced. ಹಾಗೆಯೇ ವೈವಿಧ್ಯಮಯ. ಹಾಗಿದ್ದಾಗಲೂ ನಮ್ಮ ಸಿನೆಮಾದವರಿಗೆ ಬರೀ ಸಿದ್ಧಸೂತ್ರಗಳೇ ಬೇಕು. ಬೇರೆಲ್ಲೋ ಹಿಟ್ ಆದ ಚಿತ್ರ. ಅಥವಾ ನಮ್ಮಲ್ಲೇ ಹಿಟ್ ಆದ ಮುಂಗಾರು ಮಳೆಯ ನಂತರದ ಒಂದು ವರ್ಷ ಅಂಥವೇ ಬರುತ್ತವೆ.

  ಇರಲಿ. ರೀಮೇಕ್ ಮಾಡಲಿ. ಆದರೆ ಹಾಗೆ ಮಾಡುವಾಗ ಮೂಲ ಚಿತ್ರಕ್ಕೆ ದೊರಕಬೇಕಾದ ಕ್ರೆಡಿಟ್ ಕೂಡ ಕೊಡಲಿ. ಕಂಡಕಂಡಲ್ಲಿಂದ ಹೇಳದೆ ಕೇಳದೆ ಕಥೆಗಳನ್ನೂ, ಹಾಡುಗಳನ್ನೂ ಎತ್ತುವುದೇ ನಡೆಯುತ್ತಿದೆ.

 5. ಸರಿ. ನಂಗೂ ಈ ಮೂವೀ ನೋಡೋ ಭಾಗ್ಯ ಸಿಕ್ಕಿಲ್ಲ ಇನ್ನೂ. ಚಕೋರಗೆ ಡಿವಿಡಿ ಸಿಕ್ಕರೆ ಟೀನಾಗೆ, ಟೀನಾಗೆ ಸಿಕ್ರೆ ಚಕೋರನಿಗೆ. ಅವರಲ್ಲಿ ಯಾರೊಬ್ಬರಿಗೆ ಸಿಕ್ರೂ ನಂಗೆ! ಸರೀನಾ? 🙂

  ಅಪಾರ, ಇದೇನು ಹೆದರಿಸ್ತಿದೀರಿ? ಇದೂ ರೀಮೇಕ್ ಆಗ್ತಿದ್ಯಾ? ನೀವು ತಮಾಷೆ ಮಾಡ್ತಿದೀರಿ ತಾನೆ!?

  – ಚೇತನಾ

 6. ನಮ್ಮ ಕೆಲವು ಚಿತ್ರಗಳು ಈ ಗುಣಮಟ್ಟವನ್ನು ಮುಟ್ಟುವಂತಹವು ಇವೆ.ಸತ್ಯಜಿತ ರಾಯ, ಶ್ಯಾಮ ಬೆನಗಲ್ ಇವರ ಚಿತ್ರಗಳನ್ನು ಹೇಳಬಹುದು.ಗಿರೀಶ ಕಾಸರವಳ್ಳಿಯವರ ಕೆಲವು ಚಿತ್ರಗಳೂ ಸಹ ಚೆನ್ನಾಗಿವೆ.

 7. ಹೌದು. ನಮ್ಮಲ್ಲಿ ಬೇಕಾದಷ್ಟು ಒಳ್ಳೆಯ ಚಿತ್ರಗಳಿವೆ. ಬೆನಗಲ್ ನನ್ನ ಫ಼ೇವರಿಟ್. ಅದ್ಭುತ ಚಿತ್ರಗಳನ್ನು ಕೊಟ್ಟಿದ್ದಾರೆ. ರೇ, ಕಾಸರವಳ್ಳಿ, ಬಿ ವಿ ಕಾರಂತ, ಪ್ರೇಮಾ ಕಾರಂತ, ಗೋವಿಂದ್ ನಿಹಲಾನಿ ಹೀಗೆ ಎಷ್ಟೋ ಜನ ಉತ್ತಮ ನಿರ್ದೇಶಕರಿದ್ದರು/ಇದ್ದಾರೆ. ಅದೇಕೆ, ೭೦ರ ದಶಕದ ’ಕಮರ್ಶಿಯಲ್’ ಚಿತ್ರಗಳೂ — ಉದಾಹರಣೆಗೆ, ಸಾಯಿ ಪರಾಂಜಪೆಯ ಚಿತ್ರಗಳು, ಗುಲ್ಜಾರ್, ಹೃಷೀಕೇಶ್ ಮುಖರ್ಜಿ — ಚೆನ್ನಾಗೇ ಇದ್ದುವು. ಆದರೆ ನಂತರ ಕ್ವಾಲಿಟಿ ಕಡಿಮೆಯಾಗುತ್ತ ಹೋಯಿತು. ಇತ್ತೀಚೆಗೆ ಮತ್ತೆ ಸ್ವಲ್ಪ ಕ್ವಾಲಿಟಿಯ ಬಗ್ಗೆ ಕಾಳಜಿ ಬಂದಿದೆಯೇನೋ ಅನ್ನಿಸುತ್ತೆ. ನೊಡೋಣ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s