ಇಲ್ಲೆಲ್ಲೋ ಇರುವ ಅವಳ ಕಸಿನ್ ಹಾಗೂ ಕಸಿನ್ನಳ ಗಂಡನ ಜೋಡಿ ಮಾತಾಡು ಅಂತ ಎಸ್ ಭಾಳ ದಿನದಿಂದ ಗಂಟುಬಿದ್ದಿದ್ದಳು. ತೀರಾ ಆಪ್ತರ ಜೋಡಿ ಸೈತ ಫೋನಿನಲ್ಲಿ ಮಾತಾಡುವುದೆಂದರೆ ನನಗೆ ಭಯಂಕರ ಸಂತೋಷದ ಸಂಗತಿ ಅಲ್ಲ. ಹಿಂತಾದರಾಗ ಯಾವುದೇ ಗುರುತು ಪರಿಚಯವಿಲ್ಲದವರ ಜೋಡಿ ನಾನು ಮಾತಾಡಿಯೇನೆ? ಈ-ಮೇಲ್ನಲ್ಲಿ ಕೆಲಸ ಮುಗಿಸಿ, ’ಓಹೋ ತಮಗೆ ಅವಶ್ಯ ಫೋನು ಮಾಡುತ್ತೇನೆ,’ ಇತ್ಯಾದಿ ದೇಶಾವರಿ ಬರೆದು ಕೈತೊಳಕೊಂಡಿದ್ದೆ. ಆದರೆ ಇವೆಲ್ಲ ಇಷ್ಟು ಸುಲಭವಾಗಿ ಬಗೆಹರಿಯುವಂಥ ವಿಷಯಗಳೇ ಅಲ್ಲ. ಆ ಕಸಿನ್ನಳು ನನಗೆ ಫೋನು ಮಾಡಿದ್ದಳೆಂದೂ, ನಾನು ಏಕೋ ಎತ್ತಲಿಲ್ಲವೆಂದೂ, ಕಸಿನ್ನಳ ಅಪ್ಪನ ಮುಖಾಂತರ ಭಾರತದಲ್ಲೆಲ್ಲ ಸುದ್ದಿಯಾಗಿ, ಅದು ಎಸ್ಳ ಮೂಲಕ ನನಗೆ ಮರಳಿ ಬಂತು. ನಾನು ಅದೆಷ್ಟು ಬೇಜವಾಬ್ದಾರಿಯ ಮನುಷ್ಯನೆಂಬುದು ಮತ್ತೆ ಮತ್ತೆ ನಿರೂಪಿತವಾಯಿತು. ಆದರೆ ನಾನು ಹಳೆಯ ಖಿಲಾಡಿಯಾದ್ದರಿಂದ ಮತ್ತೆ ಹೇಗೋ, ’ಅವಶ್ಯ ಫೋನು ಹಚ್ಚುತ್ತೇನೆ. ಹೀಗೇ ಏನೇನೋ ಯೋಚನೆಯಲ್ಲಿ ಮರತಿದ್ದೆ. ಇಷ್ಟಕ್ಕೂ ಅವಳ ಫೋನು ನನಗ ಬಂದಿಲ್ಲ,’ ಎಂದೆಲ್ಲ ಹೇಳಿ ದಾಟಿದೆ. ಖರೆವಂದ್ರೂ ಆ ಕಸಿನ್ನಳ ಫೋನು ನನಗ ಬಂದಿರಲಿಲ್ಲ. ನನ್ನ ಮಿಸ್ಸ್ಡ್ ಕಾಲುಗಳಲ್ಲೂ ಇಲ್ಲ. ಹೀಗಾಗಿ ಯಾವುದೇ ತಪ್ಪಿತಸ್ಥ ಭಾವ ಇಲ್ಲದೆ ಯಥಾಪ್ರಕಾರ ಈ ಫೋನಿನ ಪ್ರಸಂಗವನ್ನು ಮುಂದೆ ಹಾಕಿ ಆರಾಮಾಗಿದ್ದೆ. ಆದರೆ ಮತ್ತೊಂದೆರಡು ದಿನಕ್ಕೆ, ಅವಳು ಫೋನ್ ಮಾಡಿದಾಗ ನನ್ನ ಫೋನಿನ ವಾಯ್ಸ್ ಮೇಲ್ಬಾಕ್ಸಿಗೆ ಅದು ಹೋಯಿತೆಂದೂ, ಆದರೆ ವಾಯ್ಸ್ ಮೇಲ್ಬಾಕ್ಸ್ ಸೆಟ್ ಮಾಡಿರಲಿಲ್ಲವಾದ್ದರಿಂದ ಮೆಸೇಜನ್ನೂ ಬಿಡಲಾಗಲಿಲ್ಲವೆಂದೂ ಮತ್ತೊಮ್ಮೆ ಪುಕಾರೆದ್ದಿತು. ಅಷ್ಟಕ್ಕೇ ಮುಗಿಯದೆ ಆ ಕಸಿನ್ನಳ ಪತ್ರವೂ ಬಂದು ತಲುಪಿತು. ಅದರಲ್ಲೂ ಅದೇ ಪುಕಾರಿನ ಜೊತೆ ’ನೀನು ಹಚ್ಚಿದರೆ ಸರಿ, ಇಲ್ಲದಿದ್ದರೆ ನಾನು ಹಚ್ಚುತ್ತೇನೆ,’ ಎಂಬ ವಾಕ್ಕೂ ಇದ್ದಿತು.
ದಿಕ್ಕುಗಾಣದೆ, ಫೋನು ಮಾಡಿ ಇದನ್ನೊಮ್ಮೆ ಬಗೆಹರಿಸಲು ನಿಶ್ಚಯಿಸಿದೆ. ಆದರೂ ಚಟದ ಪ್ರಕಾರ ಅದನ್ನೂ ಮುಂದೆ ಹಾಕಿ ರಾತ್ರಿ ೮ರ ಸುಮಾರು ಫೋನು ಹಚ್ಚುತ್ತೇನೆ ಎಂದು ಪತ್ರ ಬರೆದೆ. ಏನೋ ಮಾಡುತ್ತ ಆರಾಮಾಗಿ ಕೂತವನಿಗೆ ಸುಮಾರು ೮:೧೫ರ ಹೊತ್ತಿಗೆ ಯಾಕೋ ಏನೋ ನಾನು ಕೊಟ್ಟ ಮಾತು ನೆನಪಾಯಿತು. ನೆನಪಾಗದಿದ್ದರೆ ಛೊಲೊ ಇತ್ತು, ಖರೆ ಈಗ ನೆನಪಾಗಿಬಿಟ್ಟಿತಲ್ಲ. ಸರಿ, ಇನ್ನೇನು ಮಾಡಲು ಸಾಧ್ಯವಿಲ್ಲ, ಒಂದೆರಡು ನಿಮಿಷ ಮಾತಾಡಿ ಮುಗಿಸೋಣ ಎಂದು ಫೋನೊತ್ತಿದೆ. ಯಾರೂ ಎತ್ತಲಿಲ್ಲ. ಆಹಾ.. ಅಂದರ ದೈವ ನನ್ನ ಜೊತೆಗಿದೆ ಅಂಧಂಗಾತು. ಆದರ ಒಂದರೆ ನಿಮಿಷ ಮಾತ್ರ. ಅವಳ ಫೋನು ಬಂದೇ ಬಂತು. ಎತ್ತಿದರೆ, ಉಭಯಕುಶಲೋಪರಿ ಆಗಿಂದಾಗ ಮುಗಿಸಿ, ವಾಯ್ಸ್ ಮೇಲ್ಬಾಕ್ಸ್ನ ಉಪಯೋಗಗಳನ್ನು ಬಣ್ಣಿಸಿದಳು, ಪ್ರಯತ್ನಪಟ್ಟು ಅಮೆರಿಕನ್ accentನಲ್ಲಿ ಮಾತಾಡುತ್ತ. ನಾನು, “ನಿನ ಸುಡ್ಲಿ, ಇಷ್ಟ್ಯಾಕ ತ್ರಾಸ ಪಟ್ಟು ಮಾತಾಡ್ಲಿಕತ್ತಿ. ಅದೂ ಅಲ್ಲದ, ಇಷ್ಟ ಲಗೂ ನಿನಗ accident ಆಗೇದ? ಇನ್ನೊಂದು ಸ್ವಲ್ಪ ದಿವಸ ತಡದ್ರ ಬರೊಬ್ಬರಿ accident ಆಗ್ತಿತ್ತು,” ಅನ್ನಲಿಲ್ಲ. ಅವಳಿಗೆ ಹೂಂಗುಟ್ಟಿ ಮುಗಿಸುವಷ್ಟರಲ್ಲಿ ಅವಳ ಗಂಡನಿಗೆ ಕೊಟ್ಟಳು. ಅವನು ಇಲ್ಲಿದ್ದು ಒಂದಷ್ಟು ವರ್ಷಗಳಾಗಿವೆ. ಅಂವಗೇನು ಅಂಥಾ ಅಪಘಾತ ಆಗಿಲ್ಲ. ಆದರ ಮನಷ್ಯಾ ಶಿಕ್ಕಂಗ ಭಾಷ್ಕಳಪಂತ. ಭಯಂಕರ ಮಾತಾಡುವ ಉಮೇದಿನಲ್ಲಿದ್ದ. ನನ್ನ ಮಾತುಗಳೋ ಒಂದೆರಡು ನಿಮಿಷಗಳಲ್ಲಿ ಮುಗಿದವು. ಇನ್ನೇನು ಹೇಳುವುದು? ಮಳೆಬೆಳೆಯ ಮಾತಾಡೋಣವೆ? ಆದರೆ ಆತ ಅದೂ ಇದೂ ತೆಗೆದು ರಗಡ ಹೊತ್ತು ಮಾತಾಡಿದ. ನಡುನಡುವೆ ನಾನು, “ಆಹಾ”, “ಓಹೋ”, “ಅವಶ್ಯ”, “ಛೇ ಛೇ”, “ಅದಕ್ಕೇನು ಭಿಡೆ”, ಮೊದಲಾದ ಜಾಣ್ಣುಡಿಗಳನ್ನು ಉದುರಿಸುತ್ತಿದ್ದೆ. ಮೊದಲೇ ಇವತ್ತು ಒಂದು ಸೆಮಿನಾರನ್ನು ಕೊಟ್ಟಿದ್ದೆ. ಅದೋ ೨.೫ ತಾಸು ನಡೆದಿತ್ತು. ಆಸಕ್ತಿಕರವಾದ ಚರ್ಚೆಗಳು ನಡೆದಿದ್ದವು ಬಿಡ್ರಿ, ಖರೆ ನನ್ನ ಮಾತಿನ ಕೋಟಾ ಮುಗದು ಹಳಿಮಾತಾಗಿತ್ತು. ಇವನೋ ಬಿಡುತ್ತಲೇ ಇಲ್ಲ. “ನನ್ನ ದೇಶ, ನನ್ನ ಜನ..” ಎನ್ನುವಂಥ ಉಮೇದಿನಲ್ಲಿ ಹೊಡೆದೇ ಹೊಡೆಯುತ್ತಿದ್ದಾನೆ. ನಡುವೆ ಇಲ್ಲಿಯೇ ಮತ್ತ್ಯಾವುದೋ ಊರಲ್ಲಿರುವ ಅವನ ಹೆಂಡತಿಯ ತಂದೆಯ ಮಾವುಶಿಯ ನೆಗೆಣ್ಣಿಯ ಮರಿಮಗನ ಬಗ್ಗೆ ಹೇಳಿದ. ನನ್ನ ಜೊತೆ ಮಾತಾಡುತ್ತಲೇ ಅವನ ಹೆಸರೇನೆಂದು ಹೆಂಡತಿಯ ಜೊತೆ ೨ ನಿಮಿಷಗಳ ಉಪಸಂವಾದ ನಡೆಸಿದ. ಇಬ್ಬರೂ ನಾನಾ ನಮೂನೆಯ ಹೆಸರುಗಳನ್ನು ಹೊರಹೊಮ್ಮಿಸಿದರು. ಕೊನೆಗೆ ರವಿ, ರಜತ ಹಾಗೂ ರಘು, ಈ ಮೂರು ಶಾರ್ಟ್ಲಿಸ್ಟಾದವು. ಮುಂದೆ ಸ್ವಲ್ಪ ಚರ್ಚೆಯ ನಂತರ ಅದು ರಘು ಎಂದೂ, ಮೊದಲು ರಜತ ಎಂದು ಹೇಳಿದ್ದಕ್ಕೆ ಕ್ಷಮೆಕೋರುತ್ತೇನೆಂದೂ ಆತ ಹೇಳಿದ. ’ಅಲ್ಲೋ ಮಾರಾಯ್ನ, ಆ ರಂಡೇಗಂಡ ಯಾರಂತನ ನನಗ ಗೊತ್ತಿಲ್ಲ. ಅಂಥಾಪರಿ ಅವನ ಹೆಸರಿನ ಬಗ್ಗೆ ಹಾಹಾಕಾರ ಎಬ್ಬಿಸಿ ಅದನ್ನ ನನಗ ಹೇಳೇ ತೀರಬೇಕ? ಅಲ್ಲದ ಸ್ವಾರೀ ಬ್ಯಾರೆ ಅಂತೀ. ಬೇಕೇನು ಗಜ್ಜು?’ ಅಂತ ಅನ್ನಲಿಕ್ಕೆ ಹೋಗಲಿಲ್ಲ. ಹಂಗ ನಾನು ಉತ್ತಮ ಮನುಷ್ಯ.
agadee chulo baradeeri. mast maja bantu Odalikke 🙂 yaawooryapa nimdu? “gajju, ranDe ganD, khoDi” bhaaL divsad myale keLidanga aatu 😉
-Rajesh
ರಾಜೇಶ:
ಎಲ್ಲಾ ಊರೂ ನಮ್ಮೂನರೀ. ಆದರೂ ಗೋಕಾಕ ತಾಲೂಕು ಅಂದುಕೋಬಹುದು.
agdee best aat biDri! Hanga khaali kootaaga nimma blog gaLannella Odde. Hinga vanda blognyaga nimma huTTooru Gadag anta gottatu :-). Alalala neevu nammoorinavara anta khushi aatu. hanga noDidra nanna ooru Gadag jilla Mulgund 10 netta tanka alle kalatu munda JT college nyaga PUC maaDeeni.
adu ena aagli neevu agdee chulo bareetiri. elladrakinta neevu chyashTi maaDakota barad laghu-baraha bhaaLa seridavu. Hinga barakota irrepa!
namskaarri, hogi barteni!
-Rajesh
ಚಕೋರ ಗುರುಗಳಿಗೆ ನಮಸ್ಕಾರ.
ನಿಮ್ಮ ಫಜೀತಿ ಚೆನ್ನಾಗಿದೆ. ಅದರಲ್ಲಿ ಕೆಲವು ಗೊತ್ತಾಗದ ಪದಗಳನ್ನ ಪಟ್ಟಿ ಮಾಡಿದ್ದೇನೆ. ದಯವಿಟ್ಟು ತಿಳಿಸಿಕೊಡುವಂಥವರಾಗಿ. ಈ ಭಾಷೆ ಬಹಳ ಚೆಂದವಿದೆ. ಖುಶಿಕೊಟ್ಟಿತು. ಅದಕ್ಕೇ, ತಿಳಿಯಬೇಕನ್ನೋ ಕುತೂಹಲವಾಯ್ತು. ಅಂದಹಾಗೆ, ಪಟ್ಟಿ ಹೀಗಿದೆ.
* ಆದರ ಮನಷ್ಯಾ ಶಿಕ್ಕಂಗ ಭಾಷ್ಕಳಪಂತ.
* ರಗಡ (ತುಂಬಾ ಅಂತ ಅರ್ಥವಾ?)
* ಬೇಕೇನು ಗಜ್ಜು?
* ನೆಗೆಣ್ಣಿ ಅಂದರೆ ನಾದಿನಿ ಅಂತಲಾ? ಅಥವಾ ವಾರಗಿತ್ತಿಯಾ?
ಇಂತಿ,
ಶಿಷ್ಯೋತ್ತಮಳು
ಚೇತನಾ ತೀರ್ಥಹಳ್ಳಿ
ಹ್ಹೆ ಹ್ಹೆ! ಚೆನ್ನಾಗಿದೆ ಫೋನ್ ಪುರಾಣ ಚಕೋರರೆ!
ರಾಜೇಶ:
ನಾ ಬರದದ್ದನ್ನ ನೀವು ಓದಿದ್ದಕ್ಕ, ಅವು ನಿಮಗ ಛೊಲೊ ಅನ್ನಿಸಿದ್ದಕ್ಕ ನನಗೂ ಸಂತೋಷ ಆತು. ಮತ್ತ ಬರಕೋತ ಇರ್ರಿ.
ಗದಗು ನಮ್ಮ ತಾಯಿಯ ತವರುಮನಿ. ಸಣ್ಣವರಿದ್ದಾಗ ಸೂಟಿಗೆ ಹೋಗತಿದ್ದಿವಿ. ಖರೆ ನಮ್ಮ ಊರು ಅಂದರ ಗೋಕಾಕದ ಕಡೆನ ಬರಬೇಕಾಗತದ. ’ನಮ್ಮ ಊರು’ ಅನ್ನೂದೂ ಬದಲಾಕ್ಕೋತ ಇರತದ, ಬಿಡ್ರಿ. ಎಲ್ಲಾನೂ ನಮ್ಮೂನ ಅಂದುಕೊಳ್ಳೂದು.
ಚೇತನಾ ಅಕ್ಕೋರ:
(ನಮ್ಮಲ್ಲಿ ಹೆಣ್ಣು ಟೀಚರ್ಗಳಿಗೆ ’ಟೀಚರ್’ ಅಥವಾ ’ಮಿಸ್’ ಅಂತಿರಲಿಲ್ಲ ನಾವು. ಅಕ್ಕೋರು ಅಂತಿದ್ದಿವಿ. ಮಾಸ್ತರು ಮತ್ತ ಅಕ್ಕೋರು. ’ಅಕ್ಕೋರ್ರೀ, ಅಂವ ಚಿವುಟಿದರೀ!’)
ನಿಮ್ಮ ಪ್ರಶ್ನೇಕ್ಕುತ್ತ್ರಾ ಹೇಳೂಣು. (ಕನ್ನಡ ಸಾಲ್ಯಾಗ ನಾವು ಒಬ್ಬರಿಗೊಬ್ಬರು ’ಹೋಂವರ್ಕ್ ಮಾಡಿದಿ?’, ಅಥವಾ ’ಉತ್ತರ ಗೊತ್ತಾತು?’ ಅಂತ ಕೇಳ್ತಿರಲಿಲ್ಲ. ’ಪ್ರಶ್ನೇಕ್ಕುತ್ತ್ರಾ ಬರದಿ?’ ಅಂತ ಕೇಳ್ತಿದ್ದೆವು. ’ಪ್ರಶ್ನೇಕ್ಕುತ್ತ್ರಾ’ ಅನ್ನೂದು ಒಂದು ಶಬ್ದ ಎಂಬಂತೆ ಬಳಸುತ್ತಿದ್ದೆವು. ಅದು ’ಪ್ರಶ್ನೆಗೆ ಉತ್ತರ’ ಅಂತ ಹೇಳಬೇಕಾಗಿಲ್ಲ ತಾನೆ. ಇರಲಿ. ಇಷ್ಟು ಸಾಕು ಸದ್ಯಕ್ಕೆ.)
* ’ಶಿಕ್ಕಂಗ’ -> ಸಿಕ್ಕ ಹಂಗ, ಸಿಕ್ಕಾಪಟ್ಟೆ ಅಥವಾ ಸಕ್ಕತ್ತು ಅನ್ನೋ ತರ ಎಲ್ಲಿ ಬೇಕಾದಲ್ಲಿ ಬಳಸಬಹುದು.
* ’ಭಾಷ್ಕಳಪಂತ’: ಇದು ಮೂಳತೋ (ಮೂಲತಃ) ಮರಾಠಿ ಶಬ್ದ. ’ಹರಟೆಮಲ್ಲ’ ಅನ್ನಬಹುದೇನೋ. ಆದರೆ ಆ ಇಫ಼ೆಕ್ಟ್ ಬರಲ್ಲ. ಇದು ಒಂಥರ smooth talker, glib talker ಹಿಂಗೆ. ಮಾತು ಜಾಸ್ತಿ, ತೂಕ ಕಡಿಮೆ.
* ರಗಡ, ರಗಡು, ರಗ್ಗಡ್, ರಗ್ಗsಡ್ ಇತ್ಯಾದಿಗಳು ನೀವು ಹೇಳಿದಂತೆ ’ತುಂಬಾ’ ಅನ್ನೋ ಅರ್ಥದಲ್ಲಿ ಬಳಸಬಹುದು. ಆದರೆ ಬಹಳ ಸಂದರ್ಭಗಳಲ್ಲಿ ಅದು ’ಸಾಕಷ್ಟು’ ಅಥವಾ adequate, enough ತರ ಬಳಕೆಯಾಗತ್ತೆ. ಹಾಗೆಯೇ ಸುಸ್ತಾಯ್ತು ಅನ್ನಲಿಕ್ಕೆ ’ರಗಡ್ ಆತು’ ಅಥವಾ ’ರಗಡ ರಗಡ ಆತು’ ಅಂತ ಬಳಸಬಹುದು (’ಸಾಕಾಯ್ತು’ ಅನ್ನೋ ರೀತೀಲಿ).
* ’ಗಜ್ಜು’ ಅಂದರೆ ಹೊಡೆತ. ಹಾಗೇ ’ಕಡತ’ ಅನ್ನೋ ಶಬ್ದನೂ ಇದೆ ಹೊಡೆತಕ್ಕೆ.
* ನೆಗೆಣ್ಣಿ ಅಂದರೆ ವಾರಗಿತ್ತಿ.
ಕೊನೆಯ ಮಾತು (ಖರೇವಂದ್ರೂ ಕಡೀದು): ’ಖರೆ’ ಅನ್ನುವ ಶಬ್ದ ’ನಿಜ’ ಎಂದು ಬಳಕೆಯಾದಷ್ಟೇ (ಅಥವಾ ಅದಕ್ಕಿಂತ ಹೆಚ್ಚಾಗಿ) ’ಆದರೆ’ ಎನ್ನುವ ಅರ್ಥದಲ್ಲಿ ಬಳಕೆಯಾಗುತ್ತದೆ. ’ಅಂವ ಬಂದಿದ್ದ, ಖರೆ, ನೀ ಇರಲಿಲ್ಲ.’ ’ನೀ ಇಷ್ಟೆಲ್ಲಾ ಹೇಳತೀ, ಖರೆ, ಚೇತನಾಗ ತಿಳೀಬೇಕಲಾ?’ ಅಂಧಂಗ, ಮನ್ನೆ ಮನ್ನೆ ಟೀನಾ ಅಕ್ಕೋರಿಗೂ ಒಂದಷ್ಟು ಶಬ್ದಾ ಕಲಿಸಿದ್ದೆ, ಖರೆ ಅವರಿಗೆ ನೆನಪವ ಇಲ್ಲೋ ಯಾರಿಗ್ಗೊತ್ತು.
ನೀಲಾಂಜನರೆ: ತುಂಬಾ ಥ್ಯಾಂಕ್ಸ್.
ಥ್ಯಾಂಕ್ಸ್ ರೀ ಮಾಸ್ತರಾ
ಅಂಧಂಗ, ಗುರು ದಕ್ಷಿಣಾ ಕೇಳ್ಬ್ಯಾಡ್ರೀ ಮತ್ತ!!
ಲೇ ಔಟ್ ಬದಲಿಸಿದ್ದು ಏನೋ ಖಾಲಿ ಖಾಲಿ ಅನಿಸ್ತಿದೆ.
ಕತ್ತಲಿಂದ ಬೆಳಕಿಗೆ ಬಂದ ಹಾಗೂ! ಕಣ್ಣಿಗೆ ಹೊಂದಿಕೊಳ್ಳೋಕೆ ಸ್ವಲ್ಪ ಕಾಲ ಹಿಡಿಯುತ್ತೇನೋ!?
ಓಹೋ, ನನ್ನ ಬ್ಲಾಗಲ್ಲಿ ಮೊದಲು ಕತ್ತಲೆ ತುಂಬಿತ್ತೋ? ಸ್ವಲ್ಪ ಕಾಲದ ನಂತರ ಬೆಳಕು ಸರಿಹೋಗದಿದ್ದರೆ ಕತ್ತಲಿಗೆ ಮರಳಿದರಾಯ್ತು.
ಛೇ! ಏನ್ ಮಸ್ತ ಬರದೀರ್ರಪಾ! ಗೋಕಾವಿ ಮಂದಿ, ಗದಗಿನ ಮಂದಿ ಅಂದ್ರ, ಖರೇವಂದ್ರೂ ಶ್ಯಾಣ್ಯಾರು ನೋಡ್ರಿ.
ಸುನಾಥ ಅವರ: ಏನಂದ್ರೂ ನಿಮ್ಮ ಧಾರವಾಡದ ಮಂದಿಯಷ್ಟು ಶ್ಯಾಣ್ಯಾ ಅಲ್ಲ ಬಿಡ್ರಿ ನಾವು.