ಎರಡು ಅದ್ಭುತ ಬ್ರಿಟಿಶ್ ಕಾಮೆಡಿಗಳು

ಇತ್ತೀಚಿನ ದಿನಗಳಲ್ಲಿ ನನಗೆ ಬೋರಾದಾಗಲೆಲ್ಲ ಅಥವಾ ಖಾಲಿ ಇದ್ದಾಗೆಲ್ಲಾ (ಇರುವ ಕೆಲಸಗಳನ್ನೆಲ್ಲ ಮುಂದುಹಾಕುತ್ತ ಹೋಗುವ ನಾನು ಯಾವಾಗಲೂ ಖಾಲಿಯೇ), ಟಾಯಂಪಾಸ್‍ಗಾಗಿ ಅವಲಂಬಿಸಿರುವುದು ಬ್ರಿಟಿಶ್ ಕಾಮೆಡಿಗಳನ್ನು. ಮುಖ್ಯವಾಗಿ ’ಯೆಸ್ ಮಿನಿಸ್ಟರ್’ ಹಾಗೂ ’ಮಾಂಟಿ ಪೈಥನ್’. ಯೆಸ್ ಮಿನಿಸ್ಟರ್‌ನ ಒಂದಷ್ಟು ಎಪಿಸೋಡ್‍ಗಳು ಆನ್‍ಲೈನ್ ಇವೆ. ಮತ್ತೆ ಯೂಟ್ಯೂಬ್‍ನಲ್ಲಿ ಒಂದಷ್ಟು ತುಣುಕುಗಳಿವೆ. ಮಾಂಟಿ ಪೈಥನ್ನರೂ ಯೂಟ್ಯೂಬ್‍ನಲ್ಲಿ ಅನೇಕ ತುಣುಕುಗಳಾಗಿ ಸಿಗುತ್ತಾರೆ. ಪದೇ ಪದೇ ನೋಡಿದರೂ ಬೇಜಾರಾಗದ ಅದ್ಭುತ ಕಾಮಿಕ್ ಗುಣಗಳಿವೆ ಈ ಕೃತಿಗಳಲ್ಲಿ.

೧೯೮೦-೮೪ರ ನಡುವೆ ಯೆಸ್ ಮಿನಿಸ್ಟರ್ ಹಾಗೂ ೧೯೮೬-೮೮ರ ನಡುವೆ ಯೆಸ್ ಪ್ರೈಮ್ ಮಿನಿಸ್ಟರ್ ಬಿಬಿಸಿ ರೇಡಿಯೊ ಹಾಗೂ ಟಿವಿಯಲ್ಲಿ ಪ್ರದರ್ಶಿತವಾದವು. ಇವು ಆಗ ಬ್ರಿಟನ್ನಿನ ಪ್ರದಾನಮಂತ್ರಿಯಾಗಿದ್ದ ಮಾರ್ಗರೇಟ್ ಥ್ಯಾಚರರ ಫೇವರೆಟ್ ಕಾರ್ಯಕ್ರಮಗಳಾಗಿದ್ದುವು. ಜನಪ್ರತಿನಿಧಿಗಳು ಹಾಗೂ ಬ್ಯುರಾಕ್ರಸಿಯ ನಡುವಿನ ಹಗ್ಗಜಗ್ಗಾಟ ಯೆಸ್ (ಪ್ರೈಮ್) ಮಿನಿಸ್ಟರ್‌ನ ಮುಖ್ಯ ಮೋಟಿಫ಼್. ಒಬ್ಬ ಮಂತ್ರಿ (ಜಿಮ್ ಹ್ಯಾಕರ್), ಅವನ ಪರ್ಮನೆಂಟ್ ಸೆಕ್ರೆಟರಿ (ಸರ್ ಹಂಫ್ರಿ) ಹಾಗೂ ಅವನ ಪ್ರೈವೇಟ್ ಸೆಕ್ರೆಟರಿ (ಬರ್ನರ್ಡ್) — ಇವು ಮೂರು ಈ ಸರಣಿಯ ಮುಖ್ಯ ಪಾತ್ರಗಳು. ಹೆಚ್ಚಾಗಿ ಹ್ಯಾಕರ್‌ನ ಹೊಸ ಹೊಸ ಯೋಜನೆಗಳನ್ನು ಠುಸ್ಸೆನ್ನಿಸುವುದೇ ಹಂಫ್ರಿಯ ಕೆಲಸ. ಆಗಾಗ ಹ್ಯಾಕರ್ ಹಂಫ್ರಿಯನ್ನು ಮುಜುಗರಕ್ಕೊಳಪಡಿಸುವ ಸಂದರ್ಭಗಳೂ ಉಂಟು. ಒಂದು ಎಪಿಸೋಡಿನ ಸಂಭಾಷಣೆಯ ತುಣುಕೊಂದನ್ನು ನೋಡೋಣ. ಅದು ಈ ಸರಣಿಯ ಒಟ್ಟಾರೆ ಉದ್ದೇಶವನ್ನು ಸಂಕ್ಷಿಪ್ತವಾಗಿ ಹಿಡಿದುಕೊಡುತ್ತದೆ. ನೆನಪಿನಿಂದ ಬರೆಯುತ್ತಿದ್ದೇನೆ. ಪಕ್ಕಾ ಕೊಟೇಶನ್ ಅಲ್ಲ.

ಹ್ಯಾಕರನ ಸಲಹೆಗಾರ್ತಿ: I want to be there to see Humphrey’s reaction when you propose this idea to him.
ಹ್ಯಾಕರ್: To see the battle between the political will and the bureaucratic will?
ಸಲಹೆಗಾರ್ತಿ: Well, it will be more like the battle between political will and bureaucratic wont.

ಇನ್ನೊಮ್ಮೆ ಹ್ಯಾಕರ್ ಹಂಫ್ರಿಯನ್ನು ತಾನು ಕೊಟ್ಟ ಒಂದು ಹೇಳಿಕೆಯ ಬಗ್ಗೆ ಅಭಿಪ್ರಾಯ ಕೇಳುತ್ತಾನೆ. (ಮೂಲ: ವಿಕಿಕೋಟ್)

Sir Humphrey: Unfortunately, although the answer was indeed clear, simple, and straightforward, there is some difficulty in justifying assigning to it the fourth of the epithets you applied to the statement, inasmuch as the precise correlation between the information you communicated, and the facts insofar as they can be determined and demonstrated is such as to cause epistemological problems, of sufficient magnitude as to lay upon the logical and semantic resources of the English language a heavier burden than they can reasonably be expected to bear.
Jim Hacker: Epistemological, what are you talking about?
Sir Humphrey: You told a lie.

ಇನ್ನೊಂದು ನೋಡಿ.

Sir Humphrey: Prime Minister I must express in the strongest possible terms my profound opposition to the newly instituted practice which imposes severe and intolerable restrictions on the ingress and egress of senior members of the hierarchy and will, in all probability, should the current deplorable innovation be perpetuated, precipitate a progressive constriction of the channels of communication, culminating in a condition of organisational atrophy and administrative paralysis which will render effectively impossible the coherent and co-ordinated discharge of the function of government within Her Majesty’s United Kingdom of Great Britain and Northern Ireland!
Jim Hacker: You mean you’ve lost your key?

ಈ ರೀತಿಯ ಜಾಣತನ, ಚಾತುರ್ಯದ ಮಾತುಗಳು; ಹಂಫ್ರಿಯ ಉದ್ದುದ್ದ ವಾಕ್ಯಗಳು; ಇವರಿಬ್ಬರ ನಡುವೆ ಸಿಕ್ಕಿಹಾಕಿಕೊಂಡ ಬರ್ನರ್ಡ್‍ನ ಗೊಂದಲಗಳು; ಇವೆಲ್ಲ ಯೆಸ್ ಮಿನಿಸ್ಟರ್‌ನ ಕಾಮೆಡಿಯ ರೀತಿ. ಇದು ಗಂಭೀರ ಹಾಸ್ಯ. ಬ್ರಿಟಿಶ್ ಸಮಾಜ, ರಾಜಕಾರಣ, ಅಧಿಕಾರಶಾಹಿಗಳ ಬಗ್ಗೆ ಒಂದು ಹೈ ಕ್ಲಾಸ್ ಕಮೆಂಟರಿ.

ಮಾಂಟಿ ಪೈಥನ್ ತೀರಾ ವಿಭಿನ್ನ. ಯಾವುದೇ ಸೂತ್ರಗಳಲ್ಲಿ ಬಂಧಿಸಲು ಸಾಧ್ಯವಿಲ್ಲದ ಕಾಮೆಡಿ. ಈ ಗುಂಪಿನ ಬಂಡವಾಳ, ಅವರ ವಿಲಕ್ಷಣ ಕಲ್ಪಕತೆ. ಯಾರೂ ಊಹಿಸಲೂ ಸಾಧ್ಯವಿಲ್ಲದ ವಿಚಿತ್ರ, ಕ್ಷುಲ್ಲಕ, surreal ಸಂದರ್ಭಗಳನ್ನು ಸೃಷ್ಟಿಸಿ, ಆ ಮೂಲಕ ಹಾಸ್ಯವನ್ನು ಉತ್ಪಾದಿಸುವ ಪ್ರತಿಭೆ ಈ ಗುಂಪಿಗಿತ್ತು. ೭೦ರ ದಶಕದಲ್ಲಿ ಇವರು ಕಾಮೆಡಿ ಜಗತ್ತನ್ನು ಆಳುತ್ತಿದ್ದರು. ಮುಂದೆ ಎಷ್ಟೋ ಪೀಳಿಗೆಗಳು ಇವರ ಪ್ರಭಾವಕ್ಕೆ ಒಳಗಾಗಿವೆ. ಗುಂಪಿನಲ್ಲಿ ೬ ಮುಖ್ಯ ಸದಸ್ಯರಿದ್ದರು. ಒಳ್ಳೆಯ ಶಿಕ್ಷಣ, ಅಪಾರವಾದ ಓದು, ಆಳವಾದ ತಿಳುವಳಿಕೆ — ಎಲ್ಲ ಸದಸ್ಯರಲ್ಲೂ ಇತ್ತು. ಆದರೆ ಇವರ ತಮಾಷೆ ಯೆಸ್ ಮಿನಿಸ್ಟರ್‌ನಂತಲ್ಲ. ಸಿಲ್ಲಿನೆಸ್‍ಗೆ ಇನ್ನೊಂದು ಹೆಸರು ಮಾಂಟಿ ಪೈಥನ್ ಎನ್ನಬಹುದು. ಆದರೆ ಈ ಸಿಲ್ಲಿನೆಸ್ ಎಂಥೆಂಥ ವಿಲಕ್ಷಣ ಕ್ರಿಯೇಟಿವ್ ಸಂದರ್ಭಗಳಿಂದ ಹೊಮ್ಮುತ್ತಿತ್ತೆಂದರೆ, ನೀವು ಆ ಸಿಲ್ಲಿನೆಸ್ ಬಗ್ಗೆ ತಕರಾರು ತೆಗೆಯುವುದೇ ಸಾಧ್ಯವಿಲ್ಲ. ನಮ್ಮಲ್ಲಿಯ ಸಿಲ್ಲಿ ಕಾಮೆಡಿಗಳು ಸೋಲುವುದು ಆಳದ ಕೊರತೆಯಿಂದ, predictabilityಯಿಂದ. ಅಮೆರಿಕನ್ ಕಾಮೆಡಿಗಳೂ ಅಷ್ಟೆ; ಸತ್ವವಿಲ್ಲದ್ದಾಗಿರುತ್ತವೆ.

ವಿಲಕ್ಷಣ ಎಂದೆನಲ್ಲವೆ. ಕೆಲವು ಉದಾಹರಣೆ ಕೊಡುತ್ತೇನೆ. ಒಂದು ಸ್ಕೆಚ್‍ನಲ್ಲಿ ಜರ್ಮನಿ ಹಾಗೂ ಗ್ರೀಸ್ ನಡುವೆ ಪುಟ್ಬಾಲ್ ಪಂದ್ಯವಿದೆ. ಮಜಾ ಏನಪ್ಪಾ ಅಂದರೆ ಅದು ತತ್ವಜ್ಞಾನಿಗಳ ಫುಟ್ಬಾಲ್. ಎರಡೂ ತಂಡಗಳಲ್ಲಿ ಅವರವರ ದೇಶದ ಫಿಲಾಸಫರ್‌ಗಳಿದ್ದಾರೆ! ಇನ್ನೊಂದು ಸ್ಕೆಚ್‍ನಲ್ಲಿ ಒಬ್ಬ ಮನುಷ್ಯ ಸರಕಾರಿ ಅಫೀಸೊಂದಕ್ಕೆ ಹೋಗಿ ಅವನ ಮನೆಯಲ್ಲಿ ಮೀನು ಸಾಕಲು ಲೈಸನ್ಸ್ ಬೇಕು ಎಂದು ಕೇಳುತ್ತಾನೆ. ಆ ಥರದ್ದು ಬೇಕಾಗಿಲ್ಲ ಎಂದರೆ, ವಾದಿಸತೊಡಗುತ್ತಾನೆ. ಇನ್ನೊಮ್ಮೆ ’ಮಿನಿಸ್ಟ್ರಿ ಆಫ಼್ ಸಿಲ್ಲಿ ವಾಕ್ಸ್’ — ಇದರಲ್ಲಿರುವ ಪಾತ್ರಗಳಿಗೆಲ್ಲ ವಿಭಿನ್ನ ವಿಚಿತ್ರ ನಡೆಯುವ ಶೈಲಿಗಳು. ನೀವೂ ನಿಮ್ಮದೇ ಸಿಲ್ಲಿ ಶೈಲಿಯನ್ನು ರೂಢಿಸಿಕೊಳ್ಳಬೇಕೆ? ಸರಕಾರ ಅದಕ್ಕೆ ಹಣ ಕೊಡುತ್ತದೆ! ಇನ್ನು ಪೋಪ್ ಮತ್ತು ಮೈಕೆಲೆಂಜೆಲೊ, ಡೆಡ್ ಪ್ಯಾರಟ್ ಸ್ಕೆಚ್, ಇವಂತೂ ತುಂಬಾ ಪ್ರಸಿದ್ಧ. ಇನ್ನೊಂದರಲ್ಲಿ ಒಂದು ಕ್ಲಿನಿಕ್ ಇದೆ. ವಿಶೇಷ ಏನಪ್ಪಾ ಅಂದರೆ ಅದು ’ಆರ್ಗ್ಯುಮೆಂಟ್ ಕ್ಲಿನಿಕ್’. ದುಡ್ಡು ಕೊಟ್ಟು ಹೋಗಿ ಅಲ್ಲಿರುವ ’ಡಾಕ್ಟರ್’ ಜೊತೆ ಇಂತಿಷ್ಟು ಸಮಯ ನೀವು ವಾದಿಸಬಹುದು! ಇನ್ನೊಂದರಲ್ಲಿ ಒಂದು ಪೋಲೀಸ್ ಸ್ಟೇಶನ್ನು; ಅದರಲ್ಲಿ ಪ್ರತಿಯೊಬ್ಬನಿಗೂ ಅವನಿಗೆ ಹೊಂದುವ ಆವರ್ತನೆಯಲ್ಲಿ ಮಾತನಾಡಿದಾಗ ಮಾತ್ರ ಕೇಳಿಸುತ್ತದೆ; ಹಾಗೂ ಪ್ರತಿಯೊಬ್ಬನೂ ಇನ್ನೊಬ್ಬನ ಜೊತೆ ಮಾತಾಡುವಾಗ ಅವನಿಗೆ ಹೊಂದುವಂಥ ಆವರ್ತದಲ್ಲಿ ಮಾತಾಡುತ್ತಾನೆ; ಇದು ಸೃಷ್ಟಿಸುವ ಕಾಮಿಕ್ ಇಫ಼ೆಕ್ಟನ್ನು ನೋಡಿಯೇ ಅನುಭವಿಸಬೇಕು. ಹೀಗೆ ಅವರ ಥೀಮುಗಳಿಗೆ ಯಾವುದೇ ಸೀಮೆಯೇ ಇಲ್ಲ. ಇಜಿಪ್ತಿನ ಪಿರಮಿಡ್ಡುಗಳಿಗೆ ಹೋಗುತ್ತಾರೆ; ಹಿಟ್ಲರ್ ಬರುತ್ತಾನೆ; ವೈಕಿಂಗ್‍ಗಳು ಬಂದು ವಿಚಿತ್ರವಾಗಿ ಹಾಡಿ ಹೋಗುತ್ತಾರೆ; ಪಿಕಾಸೊ ಸೈಕಲ್ ಹೊಡೆಯುತ್ತ ಚಿತ್ರ ಬಿಡಿಸುತ್ತಾನೆ; ’ಫಿಶ್ ಸ್ಲ್ಯಾಪ್ ಡಾನ್ಸ್’ ಎಂಬ ಡಾನ್ಸ್‍ನಲ್ಲಿ, ಒಬ್ಬ ಇನ್ನೊಬ್ಬನಿಗೆ ಮೀನುಗಳಿಂದ ಕಪಾಳಕ್ಕೆ ಹೊಡೆಯುತ್ತ ಕುಣಿಯುತ್ತಿರುತ್ತಾನೆ.

ಇವೆರಡರ ಡಿವಿಡಿಗಳನ್ನು ಖರೀದಿಸುವುದು ನನ್ನ ವಿಶ್‍ಲಿಸ್ಟಿನಲ್ಲಿ ಇದೆ. ಅಲ್ಲಿಯವರೆಗೆ ಮತ್ತೆ ಮತ್ತೆ ಈ ತುಣುಕುಗಳನ್ನು ನೋಡುತ್ತಿರುತ್ತೇನೆ. ನೀವೂ ಹುಡುಕಿ ನೋಡಿ. ಆನಂದಿಸಿ.

3 thoughts on “ಎರಡು ಅದ್ಭುತ ಬ್ರಿಟಿಶ್ ಕಾಮೆಡಿಗಳು

  1. ನಮ್ಮಲ್ಲಿಯ comedyಗಳು ಅತಿರೇಕದ silly comedyಗಳು.ಇದ್ದುದರಲ್ಲಿಯೇ ಹಿಂದಿಯಲ್ಲಿ ಬರುವ Office Time ಚೆನ್ನಾಗಿರುತ್ತದೆ. ನೀವು ಕೊಟ್ಟ extracts ಓದಿ ಖುಶಿಯಾಯಿತು.

  2. ಮಾಂಟಿ ಪೈಥನ್ ಸಕ್ಕತ್ತಾಗಿದೆ.ನಾನು Monty Python and the Holy Grail ಮತ್ತು And Now for Something Completely Different ನೋಡಿದ್ದೇನೆ. ನಕ್ಕು ನಕ್ಕು ಸುಸ್ತು ಆಯಿತು.ಬೇರೆ ಸಣ್ಣ ಸಣ್ಣ clips youtubeಅಲ್ಲಿ ಚೆನ್ನಾಗಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s