ಮೆಟಮಾರ್ಫಸಿಸ್

ಒಂದು ಬೆಳಿಗ್ಗೆ, ತಲ್ಲಣಭರಿತ ಕನಸುಗಳಿಂದ ಎಚ್ಚರ ತಿಳಿದು ಎದ್ದ ಗ್ರೆಗೊರಿ ಸಾಂಸ ಸ್ಯಾಂಸಾ (ಟೀನಾ ಅಕ್ಕೋರ್ತಿಯ ಆರ್ಡರದ ಮೇರೆಗೆ), ಹಾಸಿಗೆಯಲ್ಲಿ ತಾನೊಂದು ದೈತ್ಯ, ಅಸಹ್ಯಕರ ಕೀಟವಾಗಿ ಬದಲಾದದ್ದನ್ನು ಕಂಡುಕೊಂಡ.

ಉಮ್.. ಬೇಡ, ಕಾಫ಼್ಕನ ಕತೆಯ ಅವಶ್ಯವಿಲ್ಲ. ನನ್ನದೇ kafkaesque ಕತೆಯಿರುವಾಗ, ನನ್ನದೇ ಮೆಟಮಾರ್ಫ಼ಸಿಸ್‍ನ ತಲ್ಲಣಭರಿತ ಸತ್ಯವಿರುವಾಗ, ಅನಗತ್ಯ ಫ಼್ಯಾಂಟಸಿಯ ಹಂಗು ಬೇಕಿಲ್ಲ. ಈ ಘೋರ ಕತೆಯನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳುತ್ತಿದ್ದೇನೆ. ಆದರೂ ಅಳ್ಳೆದೆಯವರು ಇದನ್ನು ಓದಲು ಹೋಗಬೇಡಿರೆಂದು ವಿನಂತಿ.

ಸಣ್ಣಸಣ್ಣ ಅಪಘಾತಗಳು ನಮ್ಮೆಲ್ಲದ ದೈನಂದಿನ ಬದುಕಿನಲ್ಲಿ ಸಂಭವಿಸುತ್ತಲೇ ಇರುತ್ತವೆ. ಅವಕ್ಕೆ ಅಂಥ ಮಹತ್ವ ಇರುವುದಿಲ್ಲ. ಆದರೂ ಒಮ್ಮೊಮ್ಮೆ ಒಂದು ಸಣ್ಣ ಅಪಘಾತದ ಪರಿಣಾಮ ತುರ್ತಿನ ಅನನುಕೂಲಕ್ಕೇ ಮುಗಿಯದೆ ವಿಸ್ತಾರವಾದುದಾಗಿ ಬೆಳೆಯುತ್ತದೆ. ಅಂಥದೇ ಒಂದು ಅಪಘಾತ ನನಗೆ ಮೊನ್ನೆ ಆಯಿತು. ಅದು ನನ್ನ ಜೀವನವನ್ನೇ ಬದಲಾಯಿಸಿದೆ. ವಸ್ತುತ:, ಅದರ ಅತ್ಯಂತ ಪ್ರಬಲ ಪರಿಣಾಮವೆಂದರೆ, ಅದು ನನ್ನರಿವಿಲ್ಲದೆ ನನ್ನೊಳಗೆ ಹುದುಗಿದ್ದ ನನ್ನ ಇನ್ನೊಂದು ಮುಖವನ್ನು ಹೊರಗೆ ತಂದಿದೆ; ನನ್ನ ಅತ್ಯಂತ ಕರಾಳ ಮುಖ. ನಾನು ಇಂಥ ವ್ಯಕ್ತಿಯಾಗಲು ಶಕ್ಯವೆಂದು ನನಗೆ ಎಂದೂ ಅನ್ನಿಸಿರಲಿಲ್ಲ. ಎಂಥ ದಿಗ್ಭ್ರಮೆಯಲ್ಲಿ ಸಿಲುಕಿದ್ದೆನೆಂದರೆ ನಾನು ಯಾರು ಎನ್ನುವಲ್ಲಿಗೆ ಹೋಗಿ ಮುಟ್ಟಿತ್ತು ನನ್ನ ಆತಂಕ, ಸಂಶಯ. ನನ್ನ ಪಾಸ್‍ಪೋರ್ಟಿಗಾಗಿ ತಡಕಾಡಿ, ಅದರಲ್ಲಿದ್ದ ಹೆಸರು, ವಿಳಾಸ, ಹುಟ್ಟಿದ ದಿನ ಇತ್ಯಾದಿಗಳನ್ನು ನೋಡಿ ನಾನು ನಾನೇ ಎಂದು ನಿಶ್ಚಯಿಸಿಕೊಂಡು ಇನ್ನಷ್ಟು ತಳಮಳಕ್ಕೆ ಒಳಗಾದೆ.

ಇಲ್ಲಿಗೇ ಇದು ಮುಗಿಯುವುದಿಲ್ಲ. ಈ ನನ್ನ ಕರಾಳ ಮುಖ ಹೊರಬಂದಂದಿನಿಂದ, ನನ್ನ ಸಾಮಾನ್ಯ ಮುಖ ಹೇಗಿತ್ತೆನ್ನುವುದೇ ಮರೆತಿದೆ. ನಾನು ಮೊದಲು ಹೀಗಿರಲಿಲ್ಲ ಎಂಬ ಅರಿವಿದ್ದರೂ ನನ್ನನ್ನು ನಾನು ಬದಲು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇದೇ ಮುಖವನ್ನು ಹೊತ್ತು ತಿರುಗುವ ಭಾರಕ್ಕೆ ಒಳಗಾಗಿದ್ದೇನೆ. ಬಹುತೇಕ, ಸಮಯವೊಂದೇ ಇದಕ್ಕೆ ಮದ್ದು. ಸಮಯ ಕಳೆದಂತೆ ನಾನು ಮತ್ತೆ ಮೊದಲಿನಂತಾಗಬಹುದು. ಮತ್ತೆ ಮೊದಲಿನಂತೆ ಜಗತ್ತಿನ ಮೇಲೆ, ಅದಕ್ಕಿಂತ ಮುಖ್ಯವಾಗಿ, ನನ್ನ ಮೇಲೇ ನಂಬಿಕೆ ಮರಳಬಹುದು. ಇದೊಂದು ಆಶಯವಷ್ಟೆ. ಅಲ್ಲಿಯವರೆಗೆ ನನ್ನ ಬ್ಲಾಗಿನ ಓದುಗರು ಕೂಡ ನನ್ನ ಈ ಪರಿಸ್ಥಿತಿಯಲ್ಲಿ ಬೆಂಬಲ ಕೊಡಬೇಕು ಎಂಬ ಪ್ರಾರ್ಥನೆ.

ಆದದ್ದಿಷ್ಟೆ. ಭಯಂಕರ ದಿನಗಳ ನಂತರ, ಇಂದು ಹಜಾಮತಿ ಮಾಡಿಕೊಂಡೇ ತೀರಬೇಕು ಎಂದು ಮೊನ್ನೆ ರಾತ್ರಿ ನಿರ್ಧರಿಸಿದೆ. ಸರಿ, ದಾಡಿ ಮಾಡಿಕೊಂಡದ್ದಾಯ್ತು. ಮೀಸೆ ಕೂಡ ಸ್ವಲ್ಪ ಉದ್ದಕ್ಕೆ ಬೆಳೆದು ಬಾಯಲ್ಲಿ ಬಂಧಂಗಾಗುತ್ತಿತ್ತು. ಸ್ವಲ್ಪ ತುದಿ ಕತ್ತರಿಸಿದರಾಯ್ತು ಎಂದು ಕತ್ತರಿಯಿಂದ ಕತ್ತರಿಸಲು ಪ್ರಯತ್ನಿಸಿದೆ. ಆ ಸುಮಾರು ಕತ್ತರಿ ಸರಿಯಾಗಿ ಕತ್ತರಿಸುತ್ತಲೇ ಇರಲಿಲ್ಲ. ಹೋಗಲಿ ಎಂದು ರೇಜ಼ರಿನಿಂದಲೇ ಸ್ವಲ್ಪ ಸ್ವಲ್ಪ ನಿಧಾನಕ್ಕೆ ಕೆರೆಯತೊಡಗಿದೆ. ಹಾಗೆ ಮಾಡುವಾಗ ಒಂದು ಕಡೆ ಸ್ವಲ್ಪ ಹೆಚ್ಚು ಕಟ್ಟಾಗಿ ಮೀಸೆಯ ಬ್ಯಾಲನ್ಸ್ ತಪ್ಪಿತು. ಸರಿಪಡಿಸೋಣವೆಂದು ಇನ್ನೊಂದು ಕಡೆ ಸ್ವಲ್ಪ ಕತ್ತರಿಸಿದೆ. ಅದು ತಪ್ಪಿ ಬೇರೆಲ್ಲೋ ಸ್ವಲ್ಪ ಹೆಚ್ಚು ಕತ್ತರಿಸಿತು. ಬೆಕ್ಕು, ಮಂಗ, ಬೆಣ್ಣೆ, ತಕ್ಕಡಿ ನೆನೆಯುತ್ತ, ಪ್ರಕಟವಾಗಿ ನಗುತ್ತ, ಅದನ್ನು ರಿಪೇರಿ ಮಾಡಹೊರಟೆ. ರಿಪೇರಿ ಆಗುವ ಬದಲು ಇನ್ನಷ್ಟು ಕೆಡುತ್ತ ಹೋಯಿತು. ಆಕಡೆ ಈಕಡೆ ಮಾಡುತ್ತ, ತುದಿ ಕಟ್ಟಾಗುವ ಬದಲು ಮಧ್ಯದಲ್ಲೆಲ್ಲ ಕಟ್ಟಾಗಿ, ಅಲ್ಲಲ್ಲಿ ಮೀಸೆಯಲ್ಲಿ ಗ್ಯಾಪುಗಳಾದವು. ಯಾವುದೇ ರೀತಿಯ ರಿಪೇರಿ ಸಾಧ್ಯವಿಲ್ಲದ ಮಟ್ಟಕ್ಕೆ ಅದು ಮುಟ್ಟಿ, ಕೊನೆಗೆ ಬೇರೆ ದಾರಿಯಿಲ್ಲದೆ ಮೀಸೆಯನ್ನು ಪೂರ್ತಿ ಬೋಳಿಸಬೇಕಾಯಿತು.

8 thoughts on “ಮೆಟಮಾರ್ಫಸಿಸ್

 1. ಚಕೋರ,
  ಬೆಕ್ಕು, ಬೆಣ್ಣೆ, ತಕ್ಕಡಿ ನೆನೆಯುತ್ತ ಬೆಪ್ಪು ತಕ್ಕಡಿಯಾದ ನಿನಗೆ ಶುಭಾಶಯ!
  ಇದನ್ನೆಲ್ಲ ಫೋಟೋ ಸಹಿತ ವಿವರಿಸಿದ್ದರೆ ನಮಗೆ ವಿಷಯ, ಅದರ ಘೋರತೆ ಇವನ್ನೆಲ್ಲ ಅಳೆಯಲು ಬಹಳ ಅನುಕೂಲವಾಗ್ತಿತ್ತು.

  ಚೇತನಾ

 2. ಚಕೋರ,
  ಕಾಫ್ಕಾನ ಕಥೆಯ ನಾಯಕನ ಹೆಸರು ಗ್ರೆಗೊರಿ ಸಾಂಸ ಅಲ್ಲ, ಗ್ರೆಗರ್ ಸ್ಯಾಂಸಾ.
  ವಾಪಾಸು ಇದೇ ಮೆಟಮಾರ್ಫಸೈಸ್ಡ್ ಅವತಾರದಲ್ಲೆ ಬರುತ್ತೀರೋ? 😉
  ಅಥವಾ ಈ ಪ್ರಸಂಗಕ್ಕೆ ಯಾವದಾದರು ಫಿಲಾಸಫಿಕಲ್ ಆಂಗಲ್ಲು ಹುಡುಕಿಕೊಂಡು ಹೊಸ ಥರದ ಐಡೆಂಟಿಟಿ ಕ್ರೈಸಿಸ್ಸಿಗೆ ಒಳಗಾಗುವ ಅಂದಾಜಿದೆಯೊ?
  ತಾವು (ಹೊಸ ರುಟೀನು ಪ್ರಕಾರ)ಬೆಳಗ್ಗೆದ್ದು ಕನ್ನಡಿ ನೋಡಿ ಬೆಚ್ಚಿಬೀಳದಿರಲೆಂದು ಹಾರೈಸುವೆ.
  ಅಕ್ಕರೆಯೊಡನೆ,
  – ಟೀನಾ.

 3. ಮಾರಾಯ ಚಕೋರ!,

  ಕತ್ತರಿಸಿಕೊಂಡಿದ್ದು ಮೀಸೆ ತಾನೆ… ನಿಮ್ಮ ಪೀಠಿಕೆ ಓದಿ ಮೂಗೇ ಕತ್ತರಿಸಿಕೊಂಡಿರಾ ಅಂತ ಹೆದರಿದ್ದೆ. ಈ ದೇಶದಲ್ಲಿ ನಿಮ್ಮ ಎಲ್ಲಾ ಅವತಾರಗಳೂ accepted! ತಕರಾರು ತೆಗೆದರೆ ಅದು ನಿಮ್ಮ ಕನ್ನಡಿ ಮಾತ್ರ, ಅದಕ್ಕೆ ಸಾಂತ್ವನ ಹೇಳಿ. ನಾನೂ ಸಹ ಇಲ್ಲಿಗೆ ಬಂದ ಶುರುವಿನಲ್ಲಿ ಗೆಳತಿಯೊಬ್ಬಳ ಕೈಗೆ ಕೂದಲು ಕೊಟ್ಟು, ‘ಕೆಲ್ಸವೂ ಹಾಳು, ತಲೆಯೂ ಬೋಳು’ ಎಂಬಂತಾಗಿದ್ದೆ.
  ಅಂದ್ಹಾಗೆ ಚೇತನಾ ನೀಡಿದ ಸಲಹೆಯನ್ನು ಗಂಭೀರವಾಗಿ ಪರಿಗಣಿಸುವುದು ಒಳ್ಳೆಯದೇನೊ! 😉

 4. chulo aat biDri. $25 koTTu hajamati maaDiskoLLokinta namaga naava maaDakoLodu shaNyatana anta nanna cousin heLiddu nenapaatu 🙂 Nanna katheenu swalpa hinga aagi…poorNa meesi tagadu…swalpa divsa hengengo annisi…heNti sheTagonDu…eega rooDhi aageda biDri.

  annanga namma doDDappa US ge makkaLa hattra hogovaagella barobbari vandondu koodla huDuki huDuki hajamati maaDiskonDu bartaara …innondu 6 tingaLa (hoLLi barovargoo) chinti irabaaradu hanga!

  nanna innobba cousinnu…bhaaLa chapater manashya vanda dialogue hoDitidda swatha meesi illaddakka avana samazaishi…”mooche wohi rakhate hai jise apanee mardaangi par shak hai”…neevu hanga tiLakoLrella.

  inti innobba meese-rahita,
  Rajesh

 5. ಸುನಾಥ್: ಹಾಗೂ ಹೇಳಬಹುದು. ಸುಮ್ಮನೆ ಕಾಫ಼್ಕಾನನ್ನು ಆವಾಹಿಸುವ ಸಲುವಾಗಿ ಈ ಶಬ್ದವಷ್ಟೆ; ಹೆಚ್ಚಿನದೇನಿಲ್ಲ.
  ಟೀನಾ: ಈ ಅವತಾರ ಉಳಿಸಿಕೊಳ್ಳುವುದಕ್ಕೆ ಕಡಿಮೆ ಕೆಲಸ ಹತ್ತುತ್ತದೆಯೇ? ನನಗೆ ಅಷ್ಟೆಲ್ಲ ಕೆಲಸ ಮಾಡಿ ರೂಢಿಯಿಲ್ಲ.
  ಚೇತನಾ/ಶ್ರೀಪ್ರಿಯೆ: ನನ್ನ ಓದುಗರ ಸಂವೇದನೆಗಳ ಬಗ್ಗೆ ನನಗೆ ಗೌರವವಿದೆ. ಆದ್ದರಿಂದ ನಿಮ್ಮಗಳ ಸಲಹೆಯನ್ನು ಖಂಡತುಂಡವಾಗಿ ತಿರಸ್ಕರಿಸಲಾಗಿದೆ.
  ರಾಜೇಶ: ಇಲ್ಲಿ ಒಂದು ಸಲ ಹಜಾಮತಿ ಮಾಡಿಸಿಕೊಳ್ಳಲಿಕ್ಕೆ ಹತ್ತೂ ರೊಕ್ಕದಾಗ ನಾ ನಮ್ಮಲ್ಲೆ ೨ ವರ್ಷ ಮಾಡಿಸಿಗೋಬಹುದು. ಹಿಂಗಾಗಿ ಅದರ ಉಸಾಬರಿಗೇ ಹೋಗಿಲ್ಲ.

 6. @chakora…
  ಹ್ಹೆ ಹ್ಹೆ….ಲೇಖನ ತುಂಬಾ ಚೆನ್ನಾಗಿದೆ. ನಗು ನಗು ನಗು…..ಸುಸ್ತಾದೆ. ಡಾಲರ್ ಉಳಿಸಲು ಹೋಗಿ ಮೀಸೆ ಹೋಗಿದೆ….. ಮುಂದೊಂದು ದಿನ ನಿಮ್ಮ ತಲೆಕೂದಲಿನ ಬಗ್ಗೆ ಯೋಚಿಸಿ ನಗು…..(ಆ ದಿನ ಬರುವುದರೊಳಗೆ ಒಳ್ಳೆಯ ಕತ್ತರಿಯನ್ನಾದರೂ ತಂದಿಟ್ಟುಕೊಳ್ಳುವಂಥವರಾಗಿ 🙂

  ತಿಂಗಳು ಕಾಲದಿಂದ ನನ್ನವನ ಪೀಡಿಸುತ್ತಲೇ ಇದ್ದೆ, ‘ನಿನ್ನ ಆ ಮೀಸೆ, ಅದಕ್ಕಂಟಿಕೊಂಡ ಹೋತದ ಗಡ್ಡ, ಬೋಳುತಲೆ(ತಲೆಯಲ್ಲಿ ಅಲ್ಪಸ್ವಲ್ಪ ಕೂದಲಿದೆಯಾದರೂ ಡಾಲರಿನ ಭಯದಿಂದಾಗಿ ಒಮ್ಮೆ ಹಜಾಮತಿಗೆ ಹೋದರೆ ಪೂರ್ತಿ ತಲೆ ಬೋಳಾಗಿಯೇ ಬರೋದು ಇಲ್ಲಿಗೆಬಂದಾಗಿಂದ ನೋಡಿ ಅಭ್ಯಾಸವಾಗಿದೆ)ನೋಡಿ ನೋಡಿ ಬೇಜಾರಾಗಿದೆ, ಮೀಸೆ ಬೋಳಿಸು ಮಾರಾಯಾ…’ಅಂತ. ಇವತ್ತು ನಿಮ್ಮ ಲೇಖನ ಓದಾದ ಮೇಲೆ ಹೇಳಿಬಿಟ್ಟೆ “ಯಾವ್ದೇ ಕಾರಣಕ್ಕೂ ಮೀಸೆಮಾತ್ರ ಬೋಳಿಸ್ಬೇಡ.” ಅಂತ.

  ಮೀಸೆ ಬೋಳಿಸಿದ್ರೆ ಇಷ್ಟೆಲ್ಲ ಅನಾಹುತ ಆಗುತ್ತೇಂತ ಗೊತ್ತಿರ್ಲಿಲ್ಲಪ್ಪಾ…
  ಬರೆದು ಪುಣ್ಯಕಟ್ಟಿಕೊಂಡ್ರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s