ಮುಳುಗಿದ ವೆಚ್ಚದ ಮಿಥ್ಯೆ

ನಾನು ಚಿಕ್ಕಂದಿನಲ್ಲೇ ಒಂದು ಸರಳ ಸುಂದರ ಸತ್ಯವನ್ನು ಕಂಡುಕೊಂಡಿದ್ದೆ. ಅದನ್ನು ನಾನು ಚೆನ್ನಾಗಿ ಬಳಸುತ್ತಲೂ ಇದ್ದೆ. ಆದರೆ ಅದು ಎಕನಾಮಿಕ್ಸ್‍ನ ಒಂದು ಮಹತ್ವದ ಸಿದ್ಧಾಂತ ಎಂದು ಗೊತ್ತಾಗಿದ್ದು ಒಂದೆರಡು ವರ್ಷಗಳ ಹಿಂದಷ್ಟೆ. ಇದು ಎರಡು ವಿಷಯಗಳನ್ನು ನಿದರ್ಶಿಸುತ್ತದೆ: (೧) ಎಕನಾಮಿಕ್ಸ್ ಎನ್ನುವುದರ ತಳಹದಿ ಕಾಮನ್ ಸೆನ್ಸ್ ಹಾಗೂ (೨) ನಾನು ಚಿಕ್ಕಂದಿನಿಂದಲೇ ದೀಡುಪಂಡಿತ. 😉

ಅದಿರಲಿ. ಈ ಸಿದ್ಧಾಂತವನ್ನು ಮಂಡಿಸುವ ಮೊದಲು ಒಂದೆರಡು ಪ್ರಶ್ನೆಗಳು. ದರ್ಶಿನಿಯಲ್ಲಿ ದುಡ್ಡು ಕೊಟ್ಟು ಕಾಫಿ ತೊಗೊಂಡಾಗಿದೆ; ಕಾಫಿ ಕೆಟ್ಟದಾಗಿದೆ. ಆದರೂ ದುಡ್ಡು ಕೊಟ್ಟಿದ್ದೇವಲ್ಲ ಎಂಬ ಸಂಕಟಕ್ಕೆ ಅದನ್ನು ಕುಡಿಯುತ್ತೀರಲ್ಲ? ಮನೆಯಿಂದ ಊಟದ ಡಬ್ಬಿ ತೊಗೊಂಡು ಹೋಗಿದ್ದೀರಿ; ಆದರೆ ಮದ್ಯಾಹ್ನ ನಿಮ್ಮ ಮೆಚ್ಚಿನ ಸಹೋದ್ಯೋಗಿ ಹೊರಗೆ ಊಟಕ್ಕೆ ಹೋಗೋಣವೆ ಎಂದು ಕೇಳುತ್ತಾಳೆ; ಅವಳ ಜೊತೆ ಹೊರಗೆ ಊಟಕ್ಕೆ ಹೋದರೆ ಊಟದ ಜೊತೆಗೆ ನವನವೀನ ಗಾಸಿಪ್ಪಿನ ರಸಗವಳವೂ ಸಿಗುತ್ತದೆ ನಿಮ್ಮ ಪಾಲಿಗೆ. ಆದರೂ ಡಬ್ಬಿ ತಂದಿದ್ದೇನಲ್ಲ ಎಂದು ನಯವಾಗಿ ಅವಳ ಆಹ್ವಾನವನ್ನು ತಿರಸ್ಕರಿಸುತ್ತೀರಲ್ಲ? ಯಾವುದೋ ಸಿನೆಮಾಕ್ಕೆ ಹೋಗಿದ್ದೀರಿ; ಬೋರು ಹೊಡೆಸುತ್ತಿದೆಯೆಂದು ನಿದ್ದೆ ಹೊಡೆದುಬಿಟ್ಟಿರಿ. ಟಿಕೆಟ್ ಕೊಂಡು ನಿದ್ದೆ ಹೊಡೆದೆನಲ್ಲ ಎಂದು ನಂತರ ಹಳಹಳಿಯಾಗುತ್ತದೆಯೇ?

ಇಂಥ ಪ್ರಶ್ನೆಗಳಿಗೆ ನಿಮ್ಮ ಉತ್ತರ ’ಹೌದು’ ಎಂದಾದಲ್ಲಿ, ನೀವು ಮುಳುಗಿದ ವೆಚ್ಚದ ಮಿಥ್ಯೆಯ (sunk cost fallacy) ಬಗ್ಗೆ ಅರಿತುಕೊಳ್ಳಲೇಬೇಕು. Sunk cost ಎನ್ನುವುದು ಅತ್ಯಂತ ಸರಳ ಸಿದ್ಧಾಂತ. ಆದರೆ ನಮ್ಮ ದಿನಚರಿಯ ಅನೇಕ (ಹೆಚ್ಚಾಗಿ ಸಣ್ಣ ಸಣ್ಣ) ಗೊಂದಲಗಳನ್ನು ಸುಲಭವಾಗಿ ಇತ್ಯರ್ಥಗೊಳಿಸಲು ಸಹಾಯ ಮಾಡುತ್ತದೆ. ಮುಳುಗಿದ ವೆಚ್ಚ ಎಂದರೆ ಏನು? ಈಗಾಗಲೇ ವ್ಯಯವಾಗಿರುವಂಥ, ಬಹುಮಟ್ಟಿಗೆ ನಮ್ಮ ವಶಕ್ಕೆ ಮರಳಿ ಬರಲಾರದಂಥ ಹಣ (ಅಥವಾ ಬೇರೆ ಥರದ ವೆಚ್ಚ) ಮುಳುಗಡೆಯಾದ ವೆಚ್ಚದ ಖಾತೆಯಲ್ಲಿ ಬೀಳುತ್ತದೆ. ದರ್ಶಿನಿಯಲ್ಲಿ ಕೊಟ್ಟ ಹಣ, ಸಿನೆಮಾ ಟಿಕೆಟ್ಟಿಗೆ ಕೊಟ್ಟ ಹಣ, ಹೀಗೆ ಇನ್ನೂ ಅನೇಕ ಉದಾಹರಣೆಗಳನ್ನು ಕೊಡಬಹುದು. ಗಮನಿಸಬೇಕಾದ ಅಂಶವೆಂದರೆ, ಮೊದಲೇ ದುಡ್ಡು ಕೊಟ್ಟಿರಬೇಕಾದ ಅಗತ್ಯವಿಲ್ಲ. ಉದಾಹರಣೆಗೆ, ರೆಸ್ಟೊರಾಂಟಿನಲ್ಲಿ ಬಗೆಬಗೆಯ ಭಕ್ಷ್ಯಗಳನ್ನು ತರಿಸುವಾಗ, ನೀವು ಅವಕ್ಕೆಲ್ಲ ದುಡ್ಡು ತೆತ್ತೇ ತೆರುತ್ತೀರೆಂದು ನಿಮ್ಮ ಹಾಗೂ ರೆಸ್ಟೊರಾಂಟಿನ ನಡುವೆ ಅವ್ಯಕ್ತ ಒಪ್ಪಂದವಿರುತ್ತದೆ ತಾನೆ? ಅವರು ತಂದಿಟ್ಟದ್ದು ಎಷ್ಟೇ ಕೆಟ್ಟದಾಗಿದ್ದರೂ ದುಡ್ಡಂತೂ ಕೊಡಲೇಬೇಕು. ಜಗಳಾಡಿ ದುಡ್ಡು ಕೊಡದೆ ಬರಬಹುದು. ಆದರೆ ಎಷ್ಟು ಜನ ಹಾಗೆ ಮಾಡುತ್ತಾರೆ? ಹಾಗೂ ಎಷ್ಟು ಸಲ ಹಾಗೆ ಮಾಡಲು ಸಾಧ್ಯ?

ನಾನಿನ್ನೂ ಆಗ ಕಾಫಿ ಕುಡಿಯುತ್ತಿರಲಿಲ್ಲ; ಆದರೆ ಕೆಟ್ಟ ಕಾಫಿ ಕುಡಿಯಬೇಕಾದ ದಾರುಣತೆಯ ಬಗ್ಗೆ ಸಂವೇದನಾಶೀಲನಾಗಿದ್ದೆ. ನಮ್ಮ ತಂದೆಗೆ ಒಳ್ಳೆಯ ಸ್ಟ್ರಾಂಗ್ ಕಾಫಿ ಬೇಕು. ಮುಖ ಹಿಂಡುತ್ತ ಕೆಟ್ಟ ಕಾಫಿಯನ್ನು ಕುಡಿದು ಮುಗಿಸುವಾಗ ನಾನೆನ್ನುತ್ತಿದ್ದೆ, “ಅಲ್ಲ, ಹೆಂಗಿದ್ದರೂ ಅಂವಗ ರೊಕ್ಕಾ ಕೊಡಲಿಕ್ಕೇ ಬೇಕು. ಸುಳ್ಳ ಇಂಥಾ ಕಾಫಿ ಕುಡದು ಬಾಯಿ ರುಚೀನೂ ಯಾಕ ಕೆಡಿಸಿಕೊಳ್ಳಬೇಕು?” ಆದರೆ ಇದು ಅವರಿಗೆ ಪಟಾಯಿಸುತ್ತಿರಲಿಲ್ಲ. ಈಗಲೂ ಬಹಳ ಜನರಿಗೆ ಇದು ಮನವರಿಕೆಯಾಗುವುದಿಲ್ಲ. ಅಯ್ಯೋ, ದುಡ್ಡು ಕೊಟ್ಟಿದ್ದೇವಲ್ಲ ಎಂದು ಅರೆಬೆಂದ ಅಥವಾ ವಿಪರೀತ ಎಣ್ಣೆ, ಮಸಾಲೆಯುಳ್ಳ ತಿಂಡಿ ತಿಂದು ಹೊಟ್ಟೆ ಕೆಡಿಸಿಕೊಳ್ಳುವುದು. ದುಡ್ಡಂತೂ ಹೋಗಿಯೇ ಹೋಗುತ್ತದೆ; ಮೇಲೆ ಈ ದೈಹಿಕ ಮತ್ತು/ಅಥವಾ ಮಾನಸಿಕ ತ್ರಾಸುಗಳು. ಮರಳಿ ಬರಲಾರದ ವೆಚ್ಚದ ಹಂಗಿಗೆ ಬೇಡವಾಗಿದ್ದರೂ ಬೀಳುವ ಈ ಸಾಮಾನ್ಯ ಪ್ರಕ್ರಿಯೆಯೇ ಮುಳುಗಿದ ವೆಚ್ಚದ ಮಿಥ್ಯೆ ಅಥವಾ sunk cost fallacy. (ಇಷ್ಟೆಲ್ಲ ಹೇಳುವ ನಾನೂ ಇದಕ್ಕೆ ಎಷ್ಟೋ ಸಲ ಒಳಗಾಗುತ್ತೇನೆ.)

ಇದು ಯಾಕೆ ಒಂದು fallacy ಎಂದರೆ, ನಾವು ನಂತರ ತೆಗೆದುಕೊಳ್ಳುವ ನಿರ್ಧಾರ — ಉದಾಹರಣೆಗೆ ಕೆಟ್ಟ ಕಾಫಿ ಕುಡಿಯುವುದು — ಮೊದಲಿಗೆ ಉಂಟಾದ ವೆಚ್ಚಕ್ಕೆ ಅನುಗುಣವಾಗಿದೆ ಎಂಬ ತಪ್ಪು conclusionಗೆ ಬರುತ್ತೇವಾದ್ದರಿಂದ. ಇದು ಎಕನಾಮಿಕ್ಸ್‍ನ ಪ್ರಕಾರ (ಸಾಮಾನ್ಯ ತಿಳುವಳಿಕೆ ಪ್ರಕಾರವೂ) ವಿವೇಚನಾರಹಿತ (irrational) ನಡವಳಿಕೆ. ವಸ್ತುತ:, ಇವೆರಡೂ ನಿರ್ಧಾರಗಳಿಗೂ ಒಂದಕ್ಕೊಂದು ಸಂಬಂಧವಿಲ್ಲ. ಮೊದಲು ವೆಚ್ಚ ಭರಿಸಿದ ತಪ್ಪಿಗೆ ನಂತರ ಇನ್ನಷ್ಟು ವೆಚ್ಚ (ಯಾವುದೇ ಥರದಲ್ಲಿ) ಭರಿಸುವುದು ದಡ್ಡತನ. ಏನೋ ಅಂದುಕೊಂಡು ಸಿನೆಮಾ ಟಿಕೆಟ್ಟು ತೊಗೊಂಡಿರುತ್ತೀರಿ. ನೀವು ಹೊರಡುವ ಸಮಯಕ್ಕೆ ಸರಿಯಾಗಿ ಮಳೆ ಬರತೊಡಗುತ್ತದೆ. ಸಿನೆಮಾ ನೋಡಲೇಬೇಕೆನ್ನುವ ಆತುರವೇನೂ ಇಲ್ಲ ನಿಮಗೆ. ಆದರೆ ಟಿಕೆಟ್ಟು ತೊಗೊಂಡ ತಪ್ಪಿಗೆ, ಆಟೋದವನಿಗೆ ಡಬಲ್ ಮೀಟರ್ ದುಡ್ಡು ಕೊಟ್ಟೂ ಅರೆಬರೆ ತೊಯ್ಸಿಕೊಂಡು ಹೋಗಿ ಸಿನೆಮಾ ನೋಡಿದರೆ… ಏನು ಹೇಳಲಿ? ನಿಮ್ಮಂಥವರ ಸಲುವಾಗಿಯೇ ಮಳೆ (ಬೆಳೆ) ಆಗುತ್ತಿದೆ. (ಅಂದ ಹಾಗೆ, ಅತ್ತ ಕಡೆ ನಿಮ್ಮ ನಲ್ಲ/ನಲ್ಲೆ ಕಾಯುತ್ತಿದ್ದ ಪಕ್ಷದಲ್ಲಿ ನಿಮಗೆ ಮಾಫಿಯಿದೆ.)

7 thoughts on “ಮುಳುಗಿದ ವೆಚ್ಚದ ಮಿಥ್ಯೆ

 1. ಯಾಕೋ ಎಕನಾಮಿಕ್ಸು ನಮ್ಮ ತಲೆಗೆ ಹತ್ತೊದಿಲ್ಲ ಬಿಡಿ …. ಆದರು ಕಾಮನ್ ಸೆನ್ಸ್ ಕೆಲಸ ಮಾಡುತ್ತೆ …. ನಿಮ್ಮ ಉದಾಹರಣೆಯ ಹಾಗೆ ….. ದುಡ್ಡು ತೆತ್ತ ಹೋಟೆಲ್ ನವನು ಕೊಡುವ ಕೆಟ್ಟದಾದ ತಿನಿಸನ್ನ ತಿಂದು …. ಹೊಟ್ಟೆ ಕೆಡಿಸಿಕೊಂಡು … ಆಸ್ಪತ್ರೆಗೆ ಮತ್ತೆ ಹಣ ಸುರಿಯುವ ಕೆಲಸವಂತು ಮಾಡೊಲ್ಲ…. ಬಂದ ದಾರಿಗೆ ಸುಂಕವಿಲ್ಲ ಅಂತ ತಿನ್ನದೆ ಇದ್ದು ಬಿಡುತ್ತೇನೆ.

 2. Chakora,
  i always have pondered over this very question, but not in the systematic manner which you have done. Especially in case of spending out of my pocket on movies, i have always been extra careful, having duped by reviews from friends. It used to be first day first show earlier, but now i wait till i find some ‘bali kaa bakraa’ or some reviews!! Just can’t imagine spending and not getting it’s worth!!

 3. ಅಮರ: ಉತ್ತಮ ವಿಚಾರ.
  ಟೀನಾ: ನೀವು ಹೇಳುವುದು ಸರಿ. ನಾನೂ ಹಾಗೇ ಮಾಡುವುದು usually. ಒಮ್ಮಿಂದೊಮ್ಮೆಲೆ ನುಗ್ಗುವುದಿಲ್ಲ. ಆದರೆ ನಾನು ಹೇಳುತ್ತಿರುವುದು ಸ್ವಲ್ಪ ಭಿನ್ನ. ನಾನು ಹೇಳುತ್ತಿರವುದು ನಂತರದ್ದು. ನೀವು ಎಲ್ಲ ವಿಚಾರ ಮಾಡಿ ವಿವೇಚನೆಯಿಂದಲೇ ಖರ್ಚು ಮಾಡಿದ್ದೀರೆಂದುಕೊಳ್ಳಿ; ನಂತರ ಬೇರೇನೋ ಮಹತ್ವದ್ದು ಬಂದೊದಗುತ್ತದೆ. Handling the new situation should be mostly (if not completely) based on the merit of the new situation; the sunk cost should not affect new decision *if* the sunk cost is not really worth it. In short, there is no obligation.

 4. Mere Baap,

  I think I understand!! Sometimes, nope, most of the times, we women fall into such a trap. We enter a posh looking shop and try, say some perfume. The salesgirl looks at me as if I am a potential buyer. There is no real obligation that I should buy anything. Still, I fall for the ambience, imagine the look of anger+disappointment on the salesgirl’s face, and buy, ahem, some bloody perfume which will always weigh on my purse and mind for the rest of my life.. only if I am shameless enough to walk away arrogantly.
  Did I get it doc?
  😉
  Tina.

 5. ಅರ್ಥಶಾಸ್ತ್ರ ನನಗ ತಿಳಿಯೂದಿಲ್ಲ. ನನ್ನ ಹೆಂಡತಿಗೆ ತಿಳೀತದ. ಹಿಂಗಾಗಿ, ಆಕಿ ಜೊತಿಗೆ ಮದವಿ ಆಗಿದ್ದು ಬಹುಶಃ sunk cost
  ಇರಬಹುದೇನೊ ಅಂತ ಅನಸ್ತದ.

 6. Tina:
  Women commit a lot more fallacies than just this. So there. 😉

  ಸುನಾಥ:
  ಅದೇನೋ ನನಗ ಗೊತ್ತಿಲ್ಲ. ಆದರ ಅಕಸ್ಮಾತ್ ನೀವು ಇದನ್ನ ಅವರಿಗೆ ಹೇಳಿದರ, ಹೇಳಿದ ನಂತರನೂ ಮುಳುಗದ ಉಳೀರಿ ಅಂತ ಹಾರೈಸತೀನಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s