ನಮ್ಮ ಗೋಕಾಂವಿ ನಾಡಿನಲ್ಲಿ ವ್ಯಂಜನಗಳ ಬಳಕೆ ಕಡಿಮೆ. ಊಟದಲ್ಲಲ್ಲ. ಊಟದಲ್ಲಿ ನಾನಾ ನಮನಿ ವ್ಯಂಜನಗಳನ್ನೂ, ಸಾದನಿಗಳನ್ನು (ಸಾಧನ ಸಲಕರಣೆಗಳನ್ನೂ) ಪುರಮಾಶಿ ಕಟಿಯುತ್ತೇವೆ. ನಾನು ಹೇಳುತ್ತಿರುವುದು ಮಾತಿನಲ್ಲಿ ಹಾಗೂ ಬರೆಹದಲ್ಲಿ: ದಕ್ಷಿಣಾದಿಗಳಂತೆ ನಾವು ಶಬ್ದಗಳ ಕೊನೆಯ ಅಕ್ಷರಗಳನ್ನು ವ್ಯಂಜನ ಮಾಡುವುದಿಲ್ಲ. ’ಅ’ ಎಂಬ ಸ್ವರವನ್ನು ಕೂಡಿಸಿ ಪೂರ್ತಿ ಮಾಡುತ್ತೇವೆ. ಉದಾಹರಣೆಗೆ, ಬಿಟ್ಟರೆ ನೀವು ದಕ್ಷಿಣಾದಿಗಳು ಈ ಬ್ಲಾಗಿನ ಲೇಖಕನನ್ನು ’ಚಕೋರ್’ ಎಂದು ಮುಗಿಸುತ್ತೀರಿ; ಅದಕ್ಕೆ ಸ್ಪಷ್ಟವಾಗಿ ’ಚಕೋರ’ ಎಂದು ಬರೆಯಬೇಕಾಗುತ್ತದೆ. ಹಾಗೆಯೇ ಅಶೋಕ, ರಮೇಶ, ಸುರೇಶ, ಪ್ರಹ್ಲಾದ ಇತ್ಯಾದಿ. (ಅಂಧಂಗ, ಈ ’ಹ’ಕ್ಕೆ ಒತ್ತು ಕೊಡುವ ಸಂದರ್ಭ ಬಂದಾಗಲೂ ಕೆಲ ದಕ್ಷಿಣಾದಿಗಳಲ್ಲಿ ಗೊಂದಲ ಮೂಡುತ್ತದೆ. ನಾಲ್ಕು ತಲೆಗಳುಳ್ಳ ನಮ್ಮ ಮುದುಕ ದೇವರ ಹೆಸರು ಬರೆಯುವಾಗ ’ಹ’ಕ್ಕೆ ’ಮ’ದ ಒತ್ತು ಕೊಡಬೇಕೋ ’ಮ’ಕ್ಕೆ ’ಹ’ದ ಒತ್ತು ಕೊಡಬೇಕೋ ಎಂಬ ಕನ್ಫ್ಯೂಜನ್ನು. ಕೆಲವು ಹಿರಣ್ಯಪುತ್ರರು ಗೊಂದಲವೇ ಬೇಡ ಎಂದು ’ಪ್ರಹಲ್ಲಾದ್’ ಎಂದು ಬರೆಯಲು ಶುರು ಮಾಡಿದ್ದಾರೆ!) ಅದು ಬೇಡೆನಿಸಿದರೆ ಸುರೇಶೀ, ರಮೇಶೀ, ಸಂತೋಷೀ ಇತ್ಯಾದಿಗಳೂ ನಡೆಯುತ್ತವೆ. (ಈ ಬಳಕೆ ಮಧ್ಯಕರ್ನಾಟಕದಲ್ಲೂ ಇದೆ ಬಿಡಿ. ’ನಮ್ ಪ್ರಸದಿ ಬರ್ತಾ ಇದಾನೆ.’) ಬೆಳಗಾವಿ ಶಹರಕ್ಕೆ ಹೋದರೆ ಮರಾಠಿಯ ಪ್ರಭಾವದ ಮನೆಗಳಲ್ಲಿ ಇನ್ನೊಂದು ನಮೂನೆಯ ಎಳೆಯುವಿಕೆ ಕಾಣಸಿಗುತ್ತದೆ. ನಾವು ಗೋಕಾಂವಿಯವರು ’ಕೇಶವ’ ಅಂತಂದರೆ ಬೆಳಗಾಂವಿಯವರು ’ಕೇsಶsವs’ ಎಂದು ಪ್ರತಿಯೊಂದು ಅಕ್ಷರವನ್ನೂ ಎಳೆಯುತ್ತಾರೆ. ಸ್ವಲ್ಪ ಕೆಳಗೆ ಧಾರವಾಡಕ್ಕೆ ಹೋದರೆ ಅವರು ಎರಡೇ ಅಕ್ಷರಗಳಲ್ಲಿ ’ಕೇಶ್ವ’ ಎಂದು ಮುಗಿಸುತ್ತಾರೆ. ಇನ್ನು ದಕ್ಷಿಣಾದಿಗಳು ಕೆಲವೊಮ್ಮೆ ಅನಂತಮೂರ್ತಿಗಳ ಮಾತಿಗೆ ಗೌರವ ಕೊಟ್ಟು ’ಶರತ್ತು’ ’ಪ್ರದೀಪು’ ಇತ್ಯಾದಿ ಅನ್ನುವುದೂ ಉಂಟು.
ಅದಿರಲಿ. ಈಗ ಶೀರ್ಷಿಕೆಯಲ್ಲಿರುವ ಮುಖ್ಯ ವಿಷಯಕ್ಕೆ ಬರೋಣ. ನಮ್ಮಲ್ಲಿ ಶಾಪಗ್ರಸ್ತರು ಬಹಳ. ನಾಕು ಹೆಜ್ಜೆಗೊಬ್ಬರು ಸಿಗುತ್ತಾರೆ. ’ಜೈ ಕರ್ನಾಟಕ ಪಾನ ಶಾಪ’, ’ಮಸ್ತಾನ ಪಾನ ಶಾಪ’ ಹೀಗೆ. ನಮಗೆ ವ್ಯಂಜನಿಸುವುದರಲ್ಲಿ ನಂಬಿಕೆ ಇಲ್ಲ. ’ಸೂಪರ ಶಾಪೀ ಕಿರಾಣಿ ಅಂಗಡಿ’ ’ಜನರಲ್ಲ ಹಾರ್ಡವೇರ ಸ್ಟೋಅರ್ಸ’ ಎಂದು ಬರೆದರೆ ಅಂಗಡಿಗಳ ಉದ್ದೇಶ ಸ್ಪಷ್ಟವಾಗಿ ಗೊತ್ತಾಗುತ್ತದಲ್ಲವೆ. ಇವೆಲ್ಲ ಜನರಲ್ ವಿಚಾರಗಳಂತೂ ಸರಿಯೇ. ನಮ್ಮಲ್ಲಿ ಸ್ಪೆಶಲಿಸ್ಟರೂ ಕಡಿಮೆ ಇಲ್ಲ. ’ಡಾ|| ಹತಪಾಕಿ, ಚೈಲ್ಡ ಸ್ಪೇಶಾಲಿಸ್ಟ (ಆದರೆ ಇದು ನಾನು ಒಂದು ಕಡೆ ಓದಿದ ’ಚೈಲ್ಡ್ ಬೇರ್’ಗೆ ಸಮೀಪವೂ ಬರುವುದಿಲ್ಲ; ಅದರ ಹಿಂದೆ ಏನು ಆಶಯವಿತ್ತು ಎಂದು ಯಾರಾದರೂ ಊಹಿಸಬಲ್ಲಿರಾ?). ಆದರೆ ಹೆಚ್ಚಾಗಿ ಡಾಕ್ಟರುಗಳು ಕನ್ನಡದಲ್ಲಿ ಬರೆಯುತ್ತಾರೆ: ಡಾ|| ಉಮರಾಣಿ, ಎಲುಬು ಮತ್ತು ಕೀಲುಗಳ ತಜ್ಞರು. ನಮ್ಮ ಟೇಲರುಗಳು ಮಾತ್ರ ಅಗದೀ ಹೆಚ್ಚಿನ ಸ್ಪೆಶಲಿಸ್ಟರು. ’ಲೇಡೀಜ ಸ್ಪೇಶಾಲಿಸ್ಟ’ ’ಜೆಂಟ್ಸ ಸ್ಪೇಶಾಲಿಸ್ಟ’ರಂತೂ ಎಲ್ಲೆಡೆ ಇರುತ್ತಾರೆ ಬಿಡಿ. ಆದರೆ ’ಸುಪ್ರೀಮ, ಜನರಲ್ಲ ಸ್ಪೇಶಾಲಿಸ್ಟ’, ಇಂಥ ಸಿಂಪಿಗರನ್ನು ನೋಡಿದ್ದೀರಾ? ಜನರಲ್ಲ ಆಗಿದ್ದುಕೊಂಡೇ ಸ್ಪೇಶಾಲಿಸ್ಟನೂ ಆಗಿರುವ ಆ ಸಿಂಪಿಗ್ಯಾನ ಪ್ರತಿಭೆಯೇ ಪ್ರತಿಭೆ!
ನೇರ, ಸ್ಪಷ್ಟ ನುಡಿಯ ನಮ್ಮಲ್ಲಿ ಸರಳವಾದ, ’ಶೆರೆ ಅಂಗಡಿ’ಗಳು ಹೆಚ್ಚು. ಕೆಳಗೆ ಹೋದಂತೆ, ಅಲ್ಲಲ್ಲಿ ’ಸಾರಾಯಿ ಅಂಗಡಿ’ಗಳು ಸಿಗುತ್ತವಾದರೂ ’ಲಕ್ಷ್ಮಿ ವೈನ್ಸ್’ ಗಳೇ ಹೆಚ್ಚು. ನನಗೆ ಅರ್ಥವಾಗದ ಇನ್ನೊಂದು ವಿಷಯವೆಂದರೆ ಇದು: ನಮ್ಮಲ್ಲಿ ಪಂಚರು ತೆಗೆಯಲಾಗುತ್ತದೆ; ನಿಮ್ಮಲ್ಲಿ ಪಂಚರು ಹಾಕುತ್ತಾರೆ! ಯಾರ ಉದ್ದೇಶ ಏನು ಎಂಬುದು ಸ್ಪಷ್ಟವಾಗುವುದಿಲ್ಲ.
ಆದರೆ ಕೆಳಗೆ ಬರುತ್ತಿದ್ದಂತೆ — ಇದು ಮಧ್ಯಕರ್ನಾಟಕದಿಂದಲೇ ಶುರುವಾಗುತ್ತದೆ — ಅತಿ ಹೆಚ್ಚು ತ್ರಾಸು ಕೊಡಲು ಶುರುಮಾಡುವುದು ’ಷ’ರಕ್ಕಸನ ಹಾವಳಿ. ಇದು ನನಗೆ ಅರ್ಥವೇ ಆಗುವುದಿಲ್ಲ, ದಕ್ಷಿಣಾದಿಗಳ ಈ ’ಷ’ ಅಕ್ಷರದ ಪ್ರೀತಿ. ತ್ರಾಸೇ ಬೇಡವೆಂದು ಮಹಾಪ್ರಾಣಗಳನ್ನೆಲ್ಲ ತ್ಯಜಿಸುವ ಇವರು ಕಷ್ಟಪಟ್ಟು ಬೇಡವಾದಲ್ಲೆಲ್ಲ ’ಷ’ ಬಳಸುವುದು ಏಕೆ ಎಂದು ನನಗೆ ಸೋಜಿಗವಾಗುತ್ತದೆ. ಹೆಚ್ಚಾಗಿ ಇಂಗ್ಲಿಶ್ ಶಬ್ದಗಳನ್ನು ಕನ್ನಡದಲ್ಲಿ ಬರೆಯುವಾಗ ಈ ಬಳಕೆ ಕಂಡುಬರುತ್ತದೆ. ಉದಾಹರಣೆಗಳು ಬೇಕೆ? ’ಷಾಪಿಂಗ್’, ’ಇಂಗ್ಲಿಷ್’ ’ಷೋ’ ’ಷುಗರ್’ ’ಷೂ’… ಇವಲ್ಲದೆ ಕೆಲ ಹೆಸರುಗಳೂ – ನರೇಂದ್ರ ಷಾ, ಕಿಷನ್. ಇದೇಕೆ ಹೀಗೆ? ಅಲ್ಲ, ಶೂ, ಶಾಪ್, ಶೇವ್ ಇತ್ಯಾದಿಗಳು ಅನ್ನಲಿಕ್ಕೆ ಸುಲಭವಷ್ಟೆ ಅಲ್ಲದೆ ಸರಿಯಾದ ಬಳಕೆಗಳು ಕೂಡ. ಇಂಗ್ಲಿಶಿನಲ್ಲಿ ನಾವು ಇವನ್ನು ಹೀಗೆಯೇ ಬಳಸುತ್ತೇವಲ್ಲ. ನೀವೇ ಅಂದು ನೋಡಿ, ಶೇವಿಂಗ್ ಅನ್ನುತ್ತೇವೋ ಷೇವಿಂಗ್ ಅನ್ನುತ್ತೇವೋ ಎಂದು. ಕನ್ನಡದಲ್ಲಿ ಯಾಕೆ ಬೇರೆ ಬಳಸಿ ’ಷಾಕ್’ ಕೊಡುತ್ತೇವೆ? ಇದನ್ನು ಊಹಿಸಿ – ಷಾ ಷೂ ಷಾಪ್. (ನಾನು ಹಲ ದಿನಗಳ ಹಿಂದೆ ’ಚಿಲ್ಡ್ರನ್ ಆಫ಼್ ಹೆವನ್’ ಚಿತ್ರದ ಬಗ್ಗೆ ಬರೆಯುವಾಗ ಎಲ್ಲೆಲ್ಲೂ ’ಷೂ’ಗಳನ್ನು ನೋಡಿ ಬೇಕೆಂದೇ ’ಶೂ’ ಎಂದು ಬಳಸಿದ್ದೆ. ಆದರೆ ’ಮ್ಯಾಜಿಕ್ ಕಾರ್ಪೆಟ್’ನಲ್ಲಿ ಅದನ್ನು ಅವರು ಹಾಕಿದಾಗ ಕ್ಷಿಪ್ರವಾಗಿ ಅದನ್ನು ’ಷೂ’ ಎಂದು ಬದಲಿಸಿದರು :d )
ಒಟ್ಟಾರೆ ಎಲ್ಲಿಂದ ಎಲ್ಲಿಗೆ ಹೋದರೂ ಇಂಥ ಮಜಾಗಟಾಗಳಿಗಂತೂ ಯಾವುದೇ ಬರವಿಲ್ಲ. ಬಸ್ಸುಗಳಲ್ಲಿ ಊರಿಂದೂರಿಗೆ ಹೋಗುವಾಗ, ಅಥವಾ ನಿಮ್ಮೂರಲ್ಲೇ ಅಂಗಡಿಗಳ ಬೋರ್ಡುಗಳನ್ನು ನೋಡುತ್ತ ಹೋದರೆ ಟ್ರಾಫಿಕ್ಕಿನ ತೊಂದರೆಗಳೆಲ್ಲ ಹಗುರವಾಗುತ್ತವೆ. ಸಮಯ ಹೋದದ್ದೇ ಗೊತ್ತಾಗುವುದಿಲ್ಲ.
ನಮಸ್ಕಾರ ಚಕೊರರಿಗೆ. ನಿಮಗೊಂದು ಆಹ್ವಾನ ಪತ್ರಿಕೆ..
ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
ವಿಷಯ:
ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.
ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.
http://saadhaara.com/events/index/english
http://saadhaara.com/events/index/kannada
ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.
ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.
ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.
-ಕನ್ನಡಸಾಹಿತ್ಯ.ಕಾಂ ಬಳಗ
ದಯಮಾಡಿ ಬನ್ನಿ ಮತ್ತು ಹೀಗೆ ಸ್ಪಾಮ್ ಮಾಡಿ ಆಹ್ವಾನಿಸುತ್ತಿರುವುದಕ್ಕೆ ಕ್ಷಮೆಯಿರಲಿ.
ಗುರು
ಸ್ವಲ್ಪ confusion.ಬೆಂಗ್ಳೂರು-ಮೈಸೂರಿನ ಕಡೆ formal contextನಲ್ಲಿ ಮಾತ್ರ ರಮೇಶ್, ಸುರೇಶ್, ಚಕೋರ್ ಇತ್ಯಾದಿ. ನಮ್ಮ ಆತ್ಮೀಯರಾಗಿದ್ರೆ ಕರಿಯೋದು ರಮೇಶ, ಸುರೇಶ, ಚಕೋರ – ಹೀಗೇನೇ.. infact ಪ್ರೀತಿ/ಕೋಪ ಜಾಸ್ತಿ ಆದಾಗ we add an extra ‘aa’ too!:) ಇನ್ನು ಶ – ಷ ವ್ಯತ್ಯಾಸವನ್ನೂ ದಕ್ಷಿಣಾದಿಗಳ ಬಗ್ಗ ಜೆನಲೈಸ್ ಮಡೋಕಾಗಲ್ಲವೇನೋ…ನಾನಂತೂ ಶಾಪ್, ಷೂ, ಇಂಗ್ಲಿಷ್, ಶುಗರ್ – ಹೀಗೆ ಯದ್ವಾ ತದ್ವಾ ಬರೀತೀನಿ:P
ಚಕೊರ – “ನಮ್ಮಲ್ಲಿ ಪಂಚರು ತೆಗೆಯಲಾಗುತ್ತದೆ; ನಿಮ್ಮಲ್ಲಿ ಪಂಚರು ಹಾಕುತ್ತಾರೆ” – ಮಸ್ತ ಪಂಚ್ ಲೈನ್ 🙂
ಇನ್ನೊಂದು ವಿಷಯ ನಾನು ಗಮನಿಸಿದ್ದು – ಬೆಂಗಳೂರಿನಲ್ಲಿ ಎಲ್ಲಾದರೂ ‘ಮಾಡರ್ನ್’ ಅಂತ ಸರಿಯಾಗಿ ಬರೆದಿದ್ದು ನೊಡಿರೀನು? ಎಲ್ಲವೂ ‘ಮಾಡ್ರನ್’ ಅಂತನೋ ಅಥ್ವಾ ‘ಮಾರ್ಡನ್’ ಅಂತನೋ ಇರ್ತದ! ಮಾಡ್ರನ್ ಟಿ ಶಾಪ್, ಮಾರ್ಡನ್ ಟೇಲರ್ಸ್ ಕೆಲ ಉದಹರಣೆಗಳು!
-ರಾಜೇಶ
ಚಕೋರ,
ನಿಮ್ಮ ಈ ಲೇಖನ ಭಾಳ ಬರೋಬ್ಬರಿ ಅದ. In fact, ಈ ಸಮಸ್ಯೆಯನ್ನು tackle ಮಾಡಲಿಕ್ಕೆ ಅಂತನs ಧಾರವಾಡದಾಗ ಒಂದು organisation ಹುಟ್ಟೇದ. ಹುಟ್ಟಿ ಮೂರು-ನಾಲ್ಕು ತಿಂಗಳಾತು. ಇದರ ಬಗೆಗೆ ದೊಡ್ಡದೊಂದು ಲೇಖನಾನ ತಯಾರ ಮಾಡ್ಯಾರ. ಅದನ್ನ ಇನ್ನೊಂದು ಹದಿನೈದು, ಇಪ್ಪತ್ತು ದಿನದಾಗ http://sallaap.blogspot.comದೊಳಗ ಹಾಕ್ತೀನಿ. ನೋಡ್ರಿ.
ಹ್ಹ ಹ್ಹ ! ನಾನು ಹಿಂದೆ ದಕ್ಷಿಣದಿಂದ ಉತ್ತರಕ್ಕೆ ಹೋಗುವ ಬಸ್ ನಲ್ಲಿ ಹೋಗುತ್ತ ಈ . ಬ್ರಾಇಟ ಹಾಯಸ್ಕೂಲ, ಜೆನರಲ ಸ್ಟೋರ್ಸ ಮೊದಲಾದ ರೀತಿಯ ಬೋರ್ಡ್ ಗಳನ್ನ ಓದುತ್ತ ಮಜಾ ತೊಗೋತಿದ್ದೆ 🙂
ಇನ್ನು ಶಕಾರದ ಬಗ್ಗೆ ಹೇಳ್ಬೇಕಂದ್ರೆ, ಹೆಚ್ಚಾಗಿ ಇಂಗ್ಲಿಷ್ ಪದಗಳಲ್ಲಿ ಈ ಶ/ಷ ಕನ್ಫ್ಯೂಶನ್ ಜಾಸ್ತಿ ಅಂತ ನಾನೂ ಒಪ್ಕೋತೀನಿ. ಆದರೆ ’ಇಂಗ್ಲಿಷ್’ ಅಂತ ಹೇಳೋವಾಗ, ‘sh’ಹೆಚ್ಚಾಗಿ ಮೂರ್ಧನ್ಯ, ಕಡಿಮೆ ತಾಲವ್ಯ -೧೦೦% ಅಲ್ಲದಿದ್ದರೂ!; ಅದಕ್ಕೆ ನಾನು ಪಾಣಿನಿ ಪ್ರಕಾರ ಹೋಗಿ (ಇಚುಯಶಾನಾಂ ತಾಲು, ಋಟುರಷಾಣಾಂ ಮೂರ್ಧಾ) ಇಂಗ್ಲಿ’ಷ್’ ಅಂತ್ಲೇ ಬರೀತೀನಿ ಆದಷ್ಟೂ.
-ನೀಲಾಂಜನ
ಶ್ರೀ: ಅಷ್ಟೊಂದೆಲ್ಲ ಕನ್ಪ್ಯೂಸ್ ಆಗ್ಬೇಡಿ. 🙂 ಇದೆಲ್ಲ ಸುಮ್ಮನೆ anecdotal. ನಾನು ಸೀರಿಯಸ್ ಆಗಿ ಬರೆಯೋ ಲೇಖನಗಳಲ್ಲಿ ಈ ಥರದ sweeping generalisationಗಳು ಇರಲ್ಲ.
ರಾಜೇಶ್: ಹೌದು. ಇಲ್ಲೆಲ್ಲ ಮಾಡ್ರನ್ ಭಾಳ. ನಮ್ಮಲ್ಲೆ ನ್ಯೂ ಭಾಳ. ಯಾವುದರೆ ಹೊಟೇಲಿಗೆ ಹೊಸದಾಗಿ ಪೇಂಟ್ ಹಚ್ಚಿದರ ಅದು ’ಕೃಷ್ಣ ಭವನ’ ಹೋಗಿ ’ನ್ಯೂ ಕೃಷ್ಣ ಭವನ’ ಆಗತದ.
ಸುನಾಥ್: ನೀವು ಇದರ ಬಗ್ಗೆನೂ ಏನೋ ಗಂಭೀರ ಅಭ್ಯಾಸ ನಡಿಸಿಧಂಗ ಕಾಣತದ. ನಿಮ್ಮ ಲೇಖನ ಅವಶ್ಯ ನೊಡತೀನಿ.
ನೀಲಾಂಜನ: ’ಇಂಗ್ಲಿಷ್’ ಬಗ್ಗೆ ನನಗೆ ತಕರಾರು ಕಡಿಮೆ. ನೀವು ಹೇಳುವುದು ಬಹುತೇಕ ಸರಿ. ನನಗೇನು ವ್ಯಾಕರಣದ ಪರಿಚಯ ಅಷ್ಟಿಲ್ಲ. ಆದರೆ ನೀವು ಹೇಳಿದ್ದನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತೇನೆ.
(ಅಂದ ಹಾಗೆ, ನೀವು ಪಾಣಿನಿ ಅಂದಾಗ ನೆನಪಾಯಿತು. Panini ಎಂಬ ತಿನಿಸಿನ ಹೆಸರು ನೋಡಿ, ’ಅರೆ, ಇದೇನು ಪಾಣಿನಿ,’ ಅಂತ ಹಿಂದೊಮ್ಮೆ ಗಾಬರಿಯಾಗಿದ್ದೆ. ನಂತರ ಅದು ಪನೀನಿ ಅಂತ ಗೊತ್ತಾಯಿತು.)
munde?