ಒಂದು ಸಣ್ಣ ಪ್ರಯೋಗ ಮಾಡೋಣ. ಒಂದು ವೈಚಾರಿಕ ಪ್ರಯೋಗ (thought experiment) ಎಂದಿಟ್ಟುಕೊಳ್ಳಿ ಬೇಕಿದ್ದರೆ. ನಿಮ್ಮ ಮನಸ್ಸಿನಲ್ಲೆ ನಿಮ್ಮ ಗೆಳೆಯ/ಗೆಳತಿಯರು ಮತ್ತು/ಅಥವಾ ಪರಿಚಿತರನ್ನು ನೆನೆಸಿಕೊಳ್ಳಿ; ಬಂಧುಗಳು ಬೇಡ. ಹಾಗೆ ನೆನೆಸಿಕೊಳ್ಳುತ್ತಲೇ ಅವರನ್ನು ನಾನು ಹೇಳಲಿರುವ ಹಾಗೆ ವಿಂಗಡಿಸಿ (ಒಬ್ಬ ವ್ಯಕ್ತಿಯನ್ನು ಒಂದೇ ಕೆಟಗರಿಗೆ ಹಾಕಿ): ನಿಮ್ಮ ಮನೆಯ ಸುತ್ತಮುತ್ತಲಲ್ಲಿರುವವರು ಹಾಗೂ ನಿಮ್ಮ ಮನೆಗೆ ಹತ್ತಿರ ಇರುವವರು; ಉಳಿದಂತೆ ನಿಮ್ಮ ಏರಿಯಾದಲ್ಲಿರುವವರು; ನೀವಿರುವ ಏರಿಯಾ ಬಿಟ್ಟು ನೀವಿರುವ ನಗರದಲ್ಲಿ ಎಲ್ಲಿಯಾದರೂ ಇರುವವರು; ಭಾರತದ ಉಳಿದೆಲ್ಲ ನಗರದಲ್ಲಿರುವವರು; ಭಾರತ ಬಿಟ್ಟು ಜಗತ್ತಿನ ಯಾವ್ಯಾವುವೋ ದೇಶದಲ್ಲಿರುವವರು. ಸದ್ಯಕ್ಕೆ, ಈ ನಮ್ಮ ಭೂಮಿಯನ್ನು ಬಿಟ್ಟು ಬೇರೆಲ್ಲೂ ನಿಮ್ಮ ಗೆಳೆಯರು ಇಲ್ಲವೆಂದುಕೊಳ್ಳೋಣ. ಇದ್ದರೆ ಅವರನ್ನೂ ಸೇರಿಸಿಕೊಳ್ಳಿ.
ನೀವು ಈಗಾಗಲೇ ಬೋರು ಹೊಡೆಸಿಕೊಂಡು ಬೇರೆಲ್ಲೋ ಹೋಗಿಲ್ಲದಿದ್ದರೆ, ಮೇಲೆ ನೀವು ಮಾಡಿದ ಪ್ರತಿಯೊಂದು ಗುಂಪಿನಲ್ಲೂ ಎಷ್ಟು ಜನರಿದ್ದಾರೆ ಎಂದು ಲೆಕ್ಕ ಹಾಕಿ. (ಮನಸ್ಸಿನಲ್ಲೇ ಮಾಡಬೇಕಿಲ್ಲ; ಬೇಕಿದ್ದರೆ ಒಂದು ಹಾಳೆ ಹಾಗೂ ಪೆನ್ಸಿಲ್ ಉಪಯೋಗಿಸಿ.) ನೀವು (ನನ್ನಂತಲ್ಲದೆ) ಆಧುನಿಕ ಕನೆಕ್ಟೆಡ್ ಜಗತ್ತಿನ ಸಾಮಾನ್ಯ ಜೀವಿಯಾಗದ್ದ ಪಕ್ಷದಲ್ಲಿ ಎಲ್ಲ ಗುಂಪುಗಳಲ್ಲೂ ಹೆಚ್ಚೂಕಡಿಮೆ ಅಷ್ಟೇ ಜನರಿರುತ್ತಾರೆ! ಉದಾಹರಣೆಗೆ: ನಿಮ್ಮ ಮನೆಯ ಹತ್ತಿರ ನಿಮ್ಮ ಪರಿಚಯಸ್ಥರ ಸಂಖ್ಯೆ ೧೦ ಎಂದುಕೊಳ್ಳಿ, ಅವರನ್ನು ಬಿಟ್ಟು ಉಳಿದಂತೆ ಬೆಂಗಳೂರಿನಲ್ಲಿ ನಿಮಗೆ ಇನ್ನೂ ಹತ್ತು ಜನರು ಗೊತ್ತಿರುತ್ತಾರೆ, ಬೆಂಗಳೂರು ಬಿಟ್ಟು ಉಳಿದಂತೆ ಭಾರತದಲ್ಲಿ ಇನ್ನೂ ಹತ್ತು ಜನ ಗೊತ್ತಿರುತ್ತಾರೆ, ಹಾಗೂ ಜಗತ್ತಿನ ಎಲ್ಲೆಡೆ ಹರಡಿಕೊಂಡಿರುವ ಇನ್ನೊಂದು ೧೦ ಜನರಿರುತ್ತಾರೆ.
ಇಲ್ಲಿ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಬೇಕು. ಇಲ್ಲಿ ಸಂಖ್ಯೆಗಳು ಕರಾರುವಾಕ್ಕಾಗಿ ಇರುವುದಿಲ್ಲ. ಹಾಗೆಯೇ ನಮ್ಮ ’ಹತ್ತಿರ’ ’ದೂರ’ ಇಂಥವು ನಮ್ಮ ಗ್ರಹಿಕೆಯ ಮೇಲೆ ಆಧಾರಿತ. ಆದ್ದರಿಂದ ಸ್ವಲ್ಪ ಹೆಚ್ಹೂಕಡಿಮೆ ಹೊಂದಿಸಿಕೊಂಡು ಹೋಗಬೇಕು. ಇನ್ನೊಂದು ಮುಖ್ಯ ಅಂಶವೆಂದರೆ, ನಮ್ಮ ಅಳತೆಪಟ್ಟಿ ನಮ್ಮ ಓಣಿಯಿಂದ ಶುರುವಾಗಿ ಜಗತ್ತಿನ ತನಕ ಏರುವ ಅವಶ್ಯಕತೆಯಿಲ್ಲ. ವ್ಯಕ್ತಿಗೆ ಅನ್ವಯವಾಗುವಂತೆ ಇದನ್ನು ಮಾರ್ಪಡಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಜೀವನವಿಡೀ ಹಳ್ಳಿ ಅಥವಾ ಸಣ್ಣ ಊರುಗಳಲ್ಲಿರುವಂಥವರಿಗೆ ತೀರ ದೂರದೂರದಲ್ಲಿ ಪರಿಚಿತರಿರುವ ಸಂಭವ ಕಡಿಮೆ. ಅವರು ಅಳತೆಪಟ್ಟಿಯನ್ನು, ತಮ್ಮ ಓಣಿ, ಸುತ್ತಮುತ್ತಲಿನ ಓಣಿಗಳು, ಊರು, ಸುತ್ತಮುತ್ತಲಿನ ಊರುಗಳು, ತಾಲೂಕು, ಸುತ್ತಮುತ್ತಲಿನ ಉಳಿದ ತಾಲೂಕುಗಳು, ಹೀಗೆ ಡಿಫ಼ೈನ್ ಮಾಡಿಕೊಳ್ಳಬೇಕು. ಹಾಗೆಯೇ ’ಕನೆಕ್ಟೆಡ್’ ಜಗತ್ತಿನ ಜಾಲಕ್ಕೆ ಸಿಗದೆ ಆರಾಮಾಗಿರುವವರು ಕೂಡ. ಇದಷ್ಟೇ ಅಲ್ಲದೆ, ಪರಿಚಿತರು ಅಂದರೆ ಯಾರು? ನೀವು ಇಂಟರ್ನೆಟ್ಟಿನಲ್ಲಿ ದಿನಾಲೂ ಹರಟುವ ವ್ಯಕ್ತಿಗಳು ನಿಮ್ಮ ಪರಿಚಯದವರೇ ಅಲ್ಲವೇ? ಅವರನ್ನು ನೀವು ಭೇಟಿ ಮಾಡಿರಲಿಕ್ಕೂ ಇಲ್ಲ. ಇದು ಕೂಡ ನಿಮ್ಮ ಗ್ರಹಿಕೆಗೆ ಬಿಟ್ಟದ್ದು. ಆದರೆ ಒಟ್ಟಾರೆಯಾಗಿ ನಿಮ್ಮ ಗ್ರಹಿಕೆಗಳು ಹಾಗೂ ಡೆಫ಼ನಿಶನ್ನುಗಳು ಸುಸಂಬದ್ಧವಾಗಿರಬೇಕು.
***
ನಾನು ಮೇಲೆ ವಿವರಿಸಿದ್ದು, ಗಣಕಶಾಸ್ತ್ರ ವಿಜ್ಞಾನಿ ಜಾನ್ ಕ್ಲೈನ್ಬರ್ಗ್, ತನ್ನ “small world network“ಗಳ ಸಿದ್ಧಾಂತಗಳನ್ನು ಮಂಡಿಸುವಾಗ ಬಳಸಿದ ಸಾದೃಶ. ಇದಕ್ಕೆ ನೇರ ಸ್ಫೂರ್ತಿ ಸಾಲ್ ಸ್ಟೈನ್ಬರ್ಗ್ನ ’೯ನೇ ಮುಖ್ಯರಸ್ತೆ’ಯ ಚಿತ್ರ. ಸ್ಟೈನ್ಬರ್ಗ್ನ ಚಿತ್ರ ಒಂದು ಸಾಮಾಜಿಕ ಕಮೆಂಟರಿ. ಒಂದು ಸ್ತರದಲ್ಲಿ ಅದು ವಿಡಂಬನೆ. ಇನ್ನೊಂದು ಸ್ತರದಲ್ಲಿ ನೋಡಿದರೆ ಅದು ಅಮೇರಿಕದ್ದಷ್ಟೆ ಅಲ್ಲದೇ ಜಗತ್ತಿನ ಎಲ್ಲ ಸಮಾಜಗಳ, ಎಲ್ಲ ಮನುಷ್ಯರ ವಸ್ತುಸ್ಥಿತಿ. ಆ ಚಿತ್ರವನ್ನು ನೀವು ಇನ್ನೊಮ್ಮೆ ನೊಡಿದರೆ, ಒಟ್ಟಾರೆ ಚಿತ್ರವನ್ನು ನಾವು ಸ್ಥೂಲವಾಗಿ ನಾಕು ಸಮಾನ ಭಾಗಗಳಲ್ಲಿ ವಿಂಗಡಿಸಬಹುದು: ೯ನೇ ಅವೆನ್ಯೂ ಮತ್ತು ಅದರ ಆಸುಪಾಸು (ಹತ್ತನೆಯ ಅವೆನ್ಯೂದ ತನಕ ಅಂದುಕೊಳ್ಳಿ); ಹತ್ತನೆಯ ಅವೆನ್ಯೂದಿಂದ ಹಿಡಿದು ಉಳಿದಂತೆ ನ್ಯೂಯಾರ್ಕ್ ಹಾಗೂ ಹಡ್ಸನ್ ನದಿ ಇನ್ನೊಂದು ಭಾಗ; ಯುನೈಟೆಡ್ ಸ್ಟೇಟ್ಸ್ನ ಉಳಿದ, ಚೌಕವಾಗಿ ಕಾಣುತ್ತಿದೆಯಲ್ಲ, ಅದು ಮೂರನೆಯದ್ದು; ಪೆಸಿಫ಼ಿಕ್ ಸಾಗರ ಮತ್ತು ಏಷ್ಯಾ ನಾಕನೆಯ ಭಾಗ. ಇದನ್ನು ಹೀಗೆ ನೋಡಿದಾಗ ನಾವು ಕೊಡಬಹುದುದಾದ ವ್ಯಾಖ್ಯಾನವೆಂದರೆ, ನ್ಯೂಯಾರ್ಕಿನ ಜನರು ತಮ್ಮ ತುರ್ತಿನ ಅಥವಾ ಸ್ಥಳೀಯ ವಿಚಾರಗಳಿಗೆ, ಜಗತ್ತಿನ ಯಾವುದೇ ಮಹತ್ವದ ಆಗುಹೋಗುಗಳಿಗೆ ಕೊಡುವಷ್ಟೇ ಮಹತ್ವ ಕೊಡುತ್ತಾರೆ. ಎಲ್ಲರೂ ತಮ್ಮನ್ನು ಬ್ರಹ್ಮಾಂಡದ ಕೇಂದ್ರದಲ್ಲಿರಿಸಿಕೊಳ್ಳಬಯಸುತ್ತಾರೆ. ನಿಜವಲ್ಲವೆ?
ಸಾಲ್ ಸ್ಟೈನ್ಬರ್ಗ್ ಈ ಚಿತ್ರ ಬರೆಯುವಾಗ ಕೇವಲ ವಿಡಂಬನೆಯಂತೆ ಬರೆದಿದ್ದನೋ ಅಥವಾ ಈ ಥರದ ವ್ಯಾಖ್ಯಾನವೂ ಅವನು ಉಪಯೋಗಿಸಿದ ಚಿತ್ರದ ಜಾಮೆಟ್ರಿಯಲ್ಲಿ ಅಡಕವಾಗಿತ್ತೋ ಗೊತ್ತಿಲ್ಲ. ಆದರೆ ಜಾನ್ ಕ್ಲೈನ್ಬರ್ಗ್ ಈ ಚಿತ್ರವನ್ನು ಅತ್ಯಂತ ಪ್ರಬಲವಾದ ಸಾಮತಿಯನ್ನಾಗಿ ಬಳಸಿಕೊಂಡ. ಸೋಶಿಯಲ್ ನೆಟ್ವರ್ಕುಗಳಲ್ಲಷ್ಟೆ ಅಲ್ಲದೆ, ಸಂಪರ್ಕ ಜಾಲಗಳ ಬಗ್ಗೆಯೂ ಅನೇಕ ಸಿದ್ಧಾಂತಗಳನ್ನು ನಿರೂಪಿಸಿದ. ಕ್ಲೈನ್ಬರ್ಗ್ನ ಸ್ಮಾಲ್ ವಲ್ಡ್ ಮಾಡೆಲ್ಲುಗಳು ೨೦೦೦ರ ಸುಮಾರಿಗೆ ಮಂಡಿಸಲ್ಪಟ್ಟವು. ಇವತ್ತೂ ಕೂಡ ಅದು ಗಣಕಶಾಸ್ತ್ರ ಸಂಶೋಧನೆಯ ಬಿಸಿ ಬಿಸಿ ಕ್ಷೇತ್ರಗಳಲ್ಲಿ ಒಂದು.
ಹಾಗೆ ನೋಡಿದರೆ ಈ Small World Phenomenon ಕ್ಲೈನ್ಬರ್ಗ್ನಿಗಿಂತ ತುಂಬ ಹಳೆಯದು. ೧೯೬೩ರಲ್ಲಿ ಸ್ಟ್ಯಾನ್ಲೀ ಮಿಲ್ಗ್ರಮ್ ನಡೆಸಿದ ಒಂದು ಸಾಮಾಜಿಕ ಮನಃಶಾಸ್ತ್ರದ (social psychology) ಪ್ರಯೋಗದಿಂದ ಇದು ಒಮ್ಮಿಂದೊಮ್ಮೆಲೆ ಪ್ರಚಲಿತವಾಯಿತು. ‘Six degrees of separation‘ ಎಂಬ ನುಡಿಗಟ್ಟೂ ಇದರಿಂದ ತುಂಬ ಲೋಕಪ್ರಿಯವಾಯಿತು. ಈಗಾಗಲೇ ಈ ಪೋಸ್ಟು ಭಯಂಕರ ಉದ್ದವಾಗಿರುವುದರಿಂದ ಇಲ್ಲಿಗೇ ನಿಲ್ಲಿಸುತ್ತೇನೆ.