ಸಣ್ಣ ಸಂಗತಿಗಳು

ಕ್ಯಾಂಪಸ್ಸಿಗೆ ಹೋಗಲು ಬಸ್ಸು ಹತ್ತಿದ ತಕ್ಷಣ ಮೊದಲು ನನ್ನ ಲಕ್ಷ್ಯ ಹೋಗುವುದು ಬಸ್ಸಿನ ಒಳಮೈಯ್ಯನ್ನು ಅಲಂಕರಿಸಿದ ಫಲಕಗಳತ್ತ. ಬರ್ಗರುಗಳ ಅಂಗಡಿಗಳನ್ನೊಳಗೊಂಡಂತೆ “ಬಂಡವಾಳಶಾಹೀ” ಜಾಹೀರಾತುಗಳು, ಯುನಿವರ್ಸಿಟಿಯ ಕೆಲ ಸಂದೇಶಗಳು, ಮತ್ತಿತರ (ಕೆಲವು ಬಸ್ಸುಗಳಲ್ಲಿ ಆರ್ಟ್ ಆಪ್ ಲಿವಿಂಗ್‍ನ ಜಾಹೀರಾತುಗಳೂ ಇವೆ) ಫಲಕಗಳ ನಡುವೆ ನಾನು ಹುಡುಕುವುದು ಒಂದು ವಿಶೇಷ ಫಲಕವನ್ನು: ಈ ಊರಲ್ಲಿ ಬಸ್ಸಿನ ಸೇವೆ ನಡೆಸುವ ಕಂಪನಿ, ಕೆಲ ಸ್ವಯಂಸೇವಕರ ಜೊತೆ ಭಾಗಿಯಾಗಿ, ಸ್ಥಳೀಯರಿಂದ ಪದ್ಯಗಳನ್ನು ಆಹ್ವಾನಿಸಿ, ಆಯ್ದ ಕೆಲವನ್ನು ಆರು ತಿಂಗಳಿಗೊಮ್ಮೆ ಪ್ರಕಟಿಸುತ್ತದೆ; ಆ ಪದ್ಯಗಳನ್ನು ಇಂಥವೇ ಫಲಕಗಳ ಮೇಲೆ ಛಾಪಿಸಿ ಬಸ್ಸಿನಲ್ಲಿ ಹಾಕುತ್ತಾರೆ. ಆ ಸ್ವಯಂಸೇವಕರ ತಂಡದ ಹೆಸರೂ ಚೆನ್ನಾಗಿದೆ — words on the go. ಸಣ್ಣ ಸಣ್ಣ ಪದ್ಯಗಳು. ಕೆಲವು ಚೆನ್ನಾಗೂ ಇವೆ. ಆ ಪದ್ಯಗಳ ಗುಣಮಟ್ಟಕ್ಕಿಂತ ಇಂಥ ಪ್ರಯತ್ನ ಅಪ್ಯಾಯಮಾನವೆನ್ನಿಸುತ್ತದೆ. ಸಮುದಾಯಗಳೊಂದಿಗೆ ಸಹಕರಿಸಿ, ಅವನ್ನು ಒಳಗೊಂಡು, ಒಟ್ಟಿಗೆ ಮುಂದುವರಿಯುವ ಆಸ್ಥೆ ಇರುವುದು ಯಾವ ಕಾಲದಲ್ಲೂ, ಯಾವ ದೇಶದಲ್ಲೂ ಸ್ವಾಗತಾರ್ಹ. ಸಮುದಾಯ ಹಾಗೂ ಸಂಸ್ಥೆಗಳು ಒಂದಕ್ಕೊಂದು ಸಂಬಂಧವಿಲ್ಲದಂತಿರುವ, ಬಹಳ ಸಂಕುಚಿತವಾದ — ವಿವಿಧ ಆಯಾಮಗಳಿಲ್ಲದ– ಕೊಡುಕೊಳ್ಳುವಿಕೆಯಿರುವಂಥ ವ್ಯವಸ್ಥೆಗಳ ಬಗ್ಗೆ ನನಗೆ ಅತೀವ ಬೇಸರವಾಗುತ್ತದೆ.

ಈ ಬಸ್ಸುಗಳ ಬಗ್ಗೆ ಇನ್ನಷ್ಟು ಹೇಳಬೇಕು. ಬಸ್ಸುಗಳ ಚಾಲಕರು ಗ್ರಾಹಕರ ಬಗ್ಗೆ ತೋರುವ ಸೌಜನ್ಯವನ್ನು ಮೆಚ್ಚದಿರಲು ಸಾಧ್ಯವಿಲ್ಲ. ದೈಹಿಕವಾಗಿ ದುರ್ಬಲರು ಅಥವಾ ವಯಸ್ಸಾದವರು ಬಸ್ಸು ಹತ್ತಬೇಕಾದರೆ ಬಸ್ಸಿನ ಮುಂಭಾಗವನ್ನು ಸಾಧ್ಯವಾದಷ್ಟು ನೆಲದ ಮಟ್ಟಕ್ಕಿಳಿಸಿ, ಅವರಿಗೆ ಹತ್ತಲು ಆಗುವ ತ್ರಾಸನ್ನು ಕಡಿಮೆ ಮಾಡುತ್ತಾರೆ. (ಈ ಬಸ್ಸುಗಳಲ್ಲಿ ಇಂಥ ತಂತ್ರಜ್ಞಾನ ಇರುವುದು ಹೌದು; ಆದರೆ ಅದೇನು ಅಂಥ ವಿಶೇಷತೆ ಅಲ್ಲ. ಇವತ್ತು ದುರ್ಲಭವಾಗಿರುವುದು ತಂತ್ರಜ್ಞಾನ ಅಲ್ಲ; ಸೌಜನ್ಯ.) ಹತ್ತುವವರಿಗೆ ಇಳಿಯುವವರಿಗೆಲ್ಲ ಏನೋ ಒಂದೆರಡು ಒಳ್ಳೆಯ ಮಾತು ಹೇಳುತ್ತಾರೆ. ಹತ್ತಿದವರು ಒಳಹೋಗಿ ಕೂರುವವರೆಗೆ, ಕೊನೆಯ ಪಕ್ಷ ಪೂರ್ತಿ ಒಳಹೊಗುವವರೆಗಾದರೂ ತಡೆಯುತ್ತಾರೆ.

ಇಂಥ ಶ್ರೀಮಂತ, ಬಂಡವಾಳಶಾಹೀ, ಅವಕಾಶವಾದೀ ದೇಶದಲ್ಲಿ ಜನರಿಗೆ ಧಾವಂತ ಇಲ್ಲದಿರುವುದನ್ನು ಕಂಡು ಸೋಜಿಗವಾಗುತ್ತದೆ. ಯಾವುದೋ ಬಿಲ್ಡಿಂಗಿನ ಬಾಗಿಲು ದಾಟಿ ಹೋಗುವಾಗ, ಹಿಂದಿಂದ ಯಾರಾದರೂ ಬರುತ್ತಿದ್ದರೆ ಅವರಿಗಾಗಿ ಬಾಗಿಲು ತೆರೆದು ಹಿಡಿದು ಕಾಯುತ್ತಾರೆ. ಒಂದು ರಸ್ತೆಯಿಂದ ಇನ್ನೊಂದಕ್ಕೆ ಹೊರಳುವಾಗ ತುದಿಯಲ್ಲಿ ನಿಲ್ಲಿಸುತ್ತಾರೆ; ಮುಂದಿನ ರಸ್ತೆಯಲ್ಲಿ ಯಾರೂ ಬರುತ್ತಿಲ್ಲವೆಂದು ನಕ್ಕೀ ಮಾಡಿಕೊಂಡೇ ಮುಂದುವರಿಯುತ್ತಾರೆ. ಇನ್ನೂರು ಗಜ ದೂರದಲ್ಲಿ ಒಂದು ಕಾರು ಬರುತ್ತಿದ್ದರೂ ಆ ಕಾರನ್ನು ಹೋಗಲು ಬಿಟ್ಟು ನಂತರ ಹೊರಳುತ್ತಾರೆ. (ಇದು ಸಣ್ಣ ಊರು ಬಿಡಿ. ಟ್ರಾಫಿಕ್ಕು ಕಡಿಮೆ. ದೊಡ್ಡ ದೊಡ್ಡ ಊರುಗಳಲ್ಲಿ ಇಷ್ಟೆಲ್ಲ ಚೆನ್ನಾಗಿಲ್ಲ. ಎಷ್ಟೋ ಕಡೆ ನಮ್ಮಲ್ಲಿಗಿಂತ ಕೆಟ್ಟದಾಗಿದೆ. ಆದರೆ ನಾನು ಸದ್ಯಕ್ಕೆ ಹೇಳುತ್ತಿರುವ ಅಂಶಗಳು ಬೇರೆ.)
***

ಇವೆಲ್ಲ ತೀರ ಸಣ್ಣ ಸಣ್ಣ ಸಂಗತಿಗಳು. ಆದರೂ ಸಮಾಜದ ಬದುಕಿನ ಗುಣಮಟ್ಟವನ್ನು (quality of life) ಸುಧಾರಿಸುತ್ತವೆ. ಇಲ್ಲಿ ಯಾವ ಸರಕಾರಗಳೂ, ಕಾರ್ಪೊರೇಟ್‍ಗಳೂ ಪ್ರಭಾವ ಬೀರುತ್ತಿಲ್ಲ. ಇಂಥ ಸಂಗತಿಗಳಿಗೆ ಯಾವುದೇ ಸೈದ್ಧಾಂತಿಕ ವಿವರಣೆಯೂ ಬೇಕಾಗಿಲ್ಲ. ವ್ಯಕ್ತಿಗಳು, ಸಣ್ಣ ಸಣ್ಣ ಸಮುದಾಯಗಳು ತಮ್ಮಷ್ಟಕ್ಕೆ ತಾವೇ ತಮ್ಮ ಬದುಕಿನ ರೀತಿಯನ್ನು ಹೆಚ್ಚು ಚೆನ್ನಾಗಿ ಮಾಡಿಕೊಂಡಿವೆ. ಹುಟ್ಟುವಳಿಯು ಹೂಡುವಳಿಗೆ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತ, ತನ್ಮೂಲಕ ಧನಾತ್ಮಕತೆ, ಒಳ್ಳೆಯತನವನ್ನು ಹೆಚ್ಚು ಹೆಚ್ಚು ಬೆಳೆಸುತ್ತ ಹೋಗುವ positive feedback ಇರುವಂಥ ಪ್ರಕ್ರಿಯೆಗಳು. ಆದರೆ ನಾವೇಕೆ ದಿನಗಳೆದಂತೆ ಋಣಾತ್ಮಕ ಪ್ರಕ್ರಿಯೆಗಳನ್ನು ಬೆಳೆಸುತ್ತ ಹೋಗುತ್ತಿದ್ದೇವೆ? ನಮಗೇಕೆ ಸಾಧ್ಯವಿಲ್ಲ ಇದು? ನಾವೇಕೆ ನಮ್ಮನ್ನು ನಾವೇ ಶಿಕ್ಷಿಸಿಕೊಳ್ಳುತ್ತೇವೆ?

ನಮ್ಮನ್ನು ಸತತವಾಗಿ ಕಾಡುವ ಅಪರಾಧಗಳು ಯಾವುವು ಗೊತ್ತೇ? ಜೀವನಮಟ್ಟದ ವಿರುದ್ದ ಎಸಗುವ ಅಪರಾಧಗಳು (quality of life crimes — ಇದು ನನ್ನ ಪ್ರೊಫ಼ೆಸರ್ ಬಳಸುವ ನುಡಿ. ಅತ್ಯಂತ ಸೂಕ್ತವಾಗಿದೆ.) ಈ ಅಪರಾಧಗಳ ಕೆಲ ಉದಾಹರಣೆಗಳನ್ನು ಕೊಡುತ್ತೇನೆ: ಅನವಶ್ಯಕವಾಗಿ ಹಾರ್ನ್ ಬಾರಿಸುವುದು; ಸತತವಾಗಿ ಗಾಡಿಯ ದೀಪವನ್ನು ಹೈಬೀಮ್‍ನಲ್ಲಿಡುವುದು; ಬಸ್ಸಿನ ಕಿಡಕಿಯಲ್ಲಿ ತಲೆಹಾಕಿ ನಿರ್ಭಿಡೆಯಿಂದ ತಂಬಾಕು ಉಗುಳುವುದು; ಪಾದಚಾರಿಗಳು ರಸ್ತೆ ದಾಟಲು ಪ್ರಯತ್ನಿಸುತ್ತಿರುವುದನ್ನು ದುರ್ಲಕ್ಷಿಸಿ ಇನ್ನಷ್ಟು ವೇಗವಾಗಿ ಮುನ್ನುಗ್ಗುವುದು; ಇನ್ನೂ ಏನೇನೋ ಎಷ್ಟೆಷ್ಟೋ. ನನ್ನ ಇನ್ಸ್ಟಿಟ್ಯೂಟಿನಿಂದ ಮನೆಗೆ ಬರುವ ಹಾದಿಯಲ್ಲಿ ದಿನಾಲೂ — ಸುಮಾರು ೧೮-೨೦ ಕಿಮಿಯಷ್ಟು ದೂರ — ಹಾರ್ನ್ ಬಾರಿಸುವ ಒತ್ತಡಕ್ಕೆ ಒಮ್ಮೆಯೂ ಒಳಗಾಗದೆ ಇರುವವನೆಂದರೆ ನಾನೊಬ್ಬನೆ! ಒಮ್ಮೊಮ್ಮೆ, ನಾನೇಕೆ ಹೀಗೆ, ಏನು ಧಾಡಿಯಾಗಿದೆ ನನಗೆ, ಎನ್ನಿಸುವುದೂ ಉಂಟು. (ನಾನು ಬಹಳಷ್ಟು ಜನರಿಗೆ ಹೋಲಿಸಿದರೆ ಕಡಿಮೆ ಅಪರಾಧಗಳನ್ನು ಮಾಡುತ್ತೇನಷ್ಟೆ. ಇಲ್ಲಿ ನಾನು ನಿರಪರಾಧಿ ಎಂದು ಸಾಧಿಸುವ ಪ್ರಯತ್ನವಿಲ್ಲ.)

ಅಶಿಕ್ಷಿತತೆ ಇದಕ್ಕೆ ಕಾರಣವೆ? ಅನೇಕ ಸಂದರ್ಭಗಳಲ್ಲಿ ಹೌದು. ಆದರೆ ನಮ್ಮ ಬೆಂಗಳೂರು ರಾಜ್ಯದ ಮಹಾಜನತೆಗೆ ವಿದ್ಯೆಗೇನು ಕಡಿಮೆ? ಹೌದು, ನಮ್ಮಲ್ಲಿ ಲೆಕ್ಕವಿಲ್ಲದಷ್ಟು ಜನರು. ಭಯಂಕರ ಪೈಪೋಟಿ. ಸಂಪನ್ಮೂಲದ ವಿಪರೀತ ಕೊರತೆ. ನಾನು ಸ್ವಲ್ಪ ಸಡಿಲ ಬಿಟ್ಟರೆ ಬೇರೊಬ್ಬರು ಮುಂದೆ ಹೋಗುತ್ತಾರೆ. ಎಲ್ಲವನ್ನೂ ಒಪ್ಪುತ್ತೇನೆ. ಆದರೆ, ಗಮನಿಸಬೇಕಾದದ್ದೇನೆಂದರೆ, ನಾನು ಹೇಳುತ್ತಿರುವ ಬಹುತೇಕ ಸಂಗತಿಗಳಿಗೂ ಈ ಅಂಶಗಳಿಗೂ ಸಂಬಂಧವಿಲ್ಲ. ಈ ಅಪರಾಧಗಳಿಗೆ ಯಾವುದೇ ಧೃಢವಾದ (ಅದು ಸರಿಯಿರಬಹುದು, ತಪ್ಪಿರಬಹುದು) ತಳಹದಿಯಿಲ್ಲ. ಇವು ಹೆಚ್ಚಾಗಿ ನಮ್ಮ ಮೂರ್ಖತನ ಹಾಗೂ shortsightednessನಿಂದ ಉಂಟಾಗುವಂಥವು. Here and now ಎಂಬ ಸಂಕುಚಿತ ಮನೋಭಾವದಿಂದ ಉಂಟಾಗುವಂಥವು. ನಮ್ಮ ದೄಷ್ಟಿ ಎಷ್ಟು ದೂರದ ತನಕ ನೋಡುತ್ತದೆಂದರೆ — ’ಓ ಆ ಕಾರಿನ ಪಕ್ಕ ಆರಂಗುಲ ಜಾಗವಿದೆ. ಅಲ್ಲಿ ನುಗ್ಗಬೇಕು.’ ಒಮ್ಮೊಮ್ಮೆ ಇನ್ನೂ ಸ್ವಲ್ಪ ದೂರ ಹೋಗುತ್ತದೆ. ಅತಿವೇಗವಾಗಿ ಹೋಗಿ … ಮುಂದಿನ ಸಿಗ್ನಲ್ಲಿನಲ್ಲಿ ಗಝಲ್ಲನೆ ಬ್ರೇಕ್ ಹಚ್ಚುವುದು. ಸಾಧಿಸಿದ್ದೇನು? ಎಂಥ ಪೈಪೋಟಿಯಲ್ಲ, ಸಾಧ್ಯವಾದಷ್ಟು ಬೇಗ ಕಚೇರಿಗೆ ಹೋಗಬೇಕು. ’ಓ ಈ ಲೇನಿನಲ್ಲಿ ಟ್ರಾಫಿಕ್ ಮುಂದೆ ಹೋಗುತ್ತಲೆ ಇಲ್ಲ. ಅರೆ.. ಇದೇನಿದು? ಪಕ್ಕದ ಲೇನ್ ಪೂರ್ತಿ ಖಾಲಿಯಿದೆಯಲ್ಲ! ಲ ಲ ಲಾ…’ ಮುಂದೆ? ಇಂಥ ವಿಪರೀತ ಟ್ರಾಫಿಕ್ಕಿರುವ ನಮ್ಮ ನಗರಗಳಲ್ಲಿ ಒಂದು ಲೇನ್ ಖಾಲಿ ಇರುವುದರ ಅರ್ಥ ತಿಳಿಯುವುದಿಲ್ಲವೇ? ಅಲ್ಲಿ ಅಪಘಾತವಾಗಿದೆ, ಅಥವಾ ಮತ್ತ್ಯಾವುದೋ ಕಾರಣಕ್ಕೆ ಅಲ್ಲಿ ರಸ್ತೆ ಬ್ಲಾಕ್ ಆಗಿದೆ. ಇಂಥ ಸಂದರ್ಭದಲ್ಲಿ ಒಬ್ಬರ ಹಿಂದೆ ಒಬ್ಬರು ಸಂಭಾವಿತರಾಗಿ ಹೋದರೆ ಮಾತ್ರ ಬೇಗ ಮುಟ್ಟಲು ಸಾಧ್ಯ. ಆದರೆ, ನಾವು ದೀಡ್‍ಪಂಡಿತರಲ್ಲವೆ? ಒಬ್ಬ ಪಕ್ಕದ ಲೇನಿಗೆ ಹಾರಿದ. ಅವನನ್ನು ನೋಡಿ ಇನ್ನೊಬ್ಬ. ಸ್ವಲ್ಪ ಹೊತ್ತಿಗೆ ಆಕಡೆಯಿಂದ ಈಕಡೆ, ಈಕಡೆಯಿಂದ ಆಕಡೆ ಬರಲು ಒದ್ದಾಡುತ್ತ, ಯಾರೂ ಎಲ್ಲೂ ಹೋಗಲು ಸಾಧ್ಯವಿಲ್ಲದ ದೊಡ್ಡ deadlock ಉತ್ಪನ್ನವಾಗುತ್ತದೆ.

ಇಂಥದಕ್ಕೆ ಯಾರು ಕಾರಣ? ನಮ್ಮ ಸರಕಾರಗಳು ಅದಕ್ಷವಾಗಿರುವುದೇ? ನಮ್ಮ ಕಾರ್ಪೊರೇಟ್‍ಗಳು ವಿಪರೀತ ದುಡ್ಡು ಮಾಡುತ್ತಿರುವುದೆ? ನಮ್ಮದು ಬಡ ದೇಶವಾಗಿರುವುದೆ? ನಮ್ಮಲ್ಲಿ ಸಾವಿರಾರು ಜಾತಿಗಳಿರುವುದೆ? ನಾವು ಪಶ್ಚಿಮವನ್ನು ಅನುಕರಿಸುತ್ತಿರುವುದೆ? ಧಾರಾವಾಹಿಗಳು ಕೆಟ್ಟದಾಗಿರುವುದೆ? ಅಮಿತಾಭ್ ಬಚ್ಚನ್ನನ ಚಿತ್ರ ಫ್ಲಾಪ್ ಆಗಿರುವುದೆ? ಕ್ಷಮಿಸಿ, ನನ್ನ ಪ್ರಶ್ನೆಗಳು ಕ್ರಮೇಣ ಅಸಂಬದ್ಧತೆಯತ್ತ ಓಡುತ್ತಿರುವುದಕ್ಕೆ. ಆದರೆ ಅವು ನಾವೇ ಇಷ್ಟಪಟ್ಟುಕೊಂಡು ನಮ್ಮ ವಿರುದ್ಧ ಎಸಗಿಕೊಳ್ಳುವ ಅಪರಾಧಗಳಷ್ಟು ಅಸಂಬದ್ಧವಾಗಿಲ್ಲ. ನಮಗಾಗಿ ನಾವೇ ನಿರ್ಮಿಸಿಕೊಳ್ಳುವ ಪರಿಸ್ಥಿತಿಗಳಷ್ಟು ಅಸಂಬದ್ಧವಾಗಿಯಂತೂ ಇಲ್ಲ.
***

ಹಾಗೆಯೇ ನಮ್ಮ ಸಂಸ್ಥೆಗಳಿಗೂ ಜನಸಮುದಾಯಗಳಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ. ನಾವು ಬಸ್ಸುಗಳನ್ನು ಉಪಯೋಗಿಸುತ್ತೇವೆ. ಆದರೆ ಆ ಬಸ್ಸು ನಮ್ಮದೆಂದು ನಮಗನ್ನಿಸುವುದಿಲ್ಲ. ಬಸ್ಸಿನ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಬ್ಬರಿಗೊಬ್ಬರು ವಿರೋಧಿಗಳು! ಹಾಗೆಯೇ ಸರಕಾರಿ ಕಚೇರಿಗಳು, ಹೊಟೇಲುಗಳು, ಬಿಡಿಎ ಕಾಂಪ್ಲೆಕ್ಸುಗಳು, ಬ್ಯಾಂಕುಗಳು, ಪಾರ್ಕುಗಳು. ಇವನ್ನೆಲ್ಲ ನಡೆಸುವ ಸಂಸ್ಥೆಗಳು ಹಾಗೂ ಅದರ ಸಿಬ್ಬಂದಿ ವರ್ಗ ಒಂದು ತಂಡ; ಸಮುದಾಯ ಇನ್ನೊಂದು ತಂಡ. ಯಾವಾಗಲೂ ಹೊಡೆದಾಟ. ಸದಾ ಅಪನಂಬಿಕೆ. ಯಾಕೆ? ಪಾರ್ಕನ್ನು ಸ್ವಚ್ಚವಾಗಿಡುವುದು ಅಲ್ಲಿನ ಸಿಬ್ಬಂದಿಯ ಜವಾಬ್ದಾರಿ ಹೌದು. ಆದರೆ ಅದನ್ನು ಮಲಿನಗೊಳಿಸದೆ ಇರುವುದು ಸಮುದಾಯದ ಕರ್ತವ್ಯವಲ್ಲವೆ? ಮತ್ತೆ, ಪಾರ್ಕಿರುವುದು ಜನರ ಸಲುವಾಗಿ. ಅವರೊಂದಿಗೆ ಸೌಜನ್ಯದಿಂದ ವ್ಯವಹರಿಸುವುದು ಅಲ್ಲಿನ ಸಿಬ್ಬಂದಿಯ ಕರ್ತವ್ಯವಲ್ಲವೆ?
***

ಸರಿ ಬಾಯಿಗೆ ಬಂದಂತೆ ಬೈದದ್ದಾಯಿತು. ಏನಾದರೂ ಮಾಡಲು ಸಾಧ್ಯವಿದೆಯೆ? ಏಕಿಲ್ಲ. ಬೇಕಾದಷ್ಟು ಮಾಡಬಹುದು. ಯಾರ ಮೇಲೆ ಅವಲಂಬಿಸದೆ, ವ್ಯಕ್ತಿಗಳೇ ಖುದ್ದಾಗಿ ಇಂಥ ಅಪರಾಧಗಳನ್ನು ಕಡಿಮೆ ಮಾಡಬಹುದು. ಒಂದು ಉದಾಹರಣೆ ನೋಡೋಣ. ಇದು ಮತ್ತೆ ಟ್ರಾಫಿಕ್ಕಿನ ಉದಾಹರಣೆ. ನಾನು ಹೆಚ್ಚಾಗಿ ಟ್ರಾಫಿಕ್ಕಿನ ಬಗ್ಗೆ ಮಾತಾಡುತ್ತಿದ್ದಾಗ್ಗ್ಯೂ ಅನೇಕ ಅಂಶಗಳು ಬೇರೆಡೆಗೂ ಅನ್ವಯಗೊಳ್ಳುತ್ತವೆ. (ಮೇಲಾಗಿ, ಈಹೊತ್ತು ನಮ್ಮ ನೆಮ್ಮದಿಯನ್ನು ಕದಡಿ, ಬದುಕಿನ ಸ್ವಾರಸ್ಯವನ್ನು ದೈನಂದಿನವಾಗಿ ಕಡಿಮೆಗೊಳಿಸುವುದು ಟ್ರಾಫಿಕ್ಕೆ ಅಲ್ಲವೆ?) ಸಿಗ್ನಲ್ಲು ಕೆಂಪು ಬತ್ತಿಯನ್ನು ತೋರಿಸಿದ ಮೇಲೂ ಕೆಲವು ಕ್ಷಣ ಮುನ್ನುಗ್ಗಲು ಅನುಮತಿಯಿದೆಯೆಂದು ನಾವು ಭಾವಿಸುತ್ತೇವಲ್ಲವೇ? ಕೆಂಪು ಬತ್ತಿ ಉರಿಯತೊಡಗಿದರೂ ಮುನ್ನುಗುತ್ತಲೆ ಇರುತ್ತವೆ ವಾಹನಗಳು. ’ನನ್ನ ಮುಂದಿನವನು ಹೋದನಲ್ಲ, ನಾನೂ ಕ್ಷಿಪ್ರವಾಗಿ ದಾಟಿಬಿಡುತ್ತೇನೆ. ನಾನೊಬ್ಬನೇ ತಾನೆ, ನನ್ನ ಹಿಂದಿನವರು ನಿಲ್ಲುತ್ತಾರೆ.’ ಏಕೆ? ಹಿಂದಿನವಳೇನು ಬೆಕ್ಕು ಬಡಿದಿದ್ದಾಳೆಯೆ? ಅವಳೂ ದಾಟುತ್ತಾಳೆ. ಎಲ್ಲಿಯವರೆಗೆ ಹೀಗೆ? ಪೋಲೀಸ ಬಂದು ಸಿಳ್ಳೆ ಹೊಡಿಯಬೇಕು. ಇಲ್ಲಾ ಯಾರೋ ಪುಣ್ಯಾತ್ಮರು ಸ್ವಯಂಪ್ರೇರಣೆಯಿಂದ ನಿಲ್ಲಬೇಕು.

ಹೌದು. ಮುಂದಿನವರು ಗಟ್ಟಿಯಾಗಿ ನಿಂತರೆ ಹಿಂದಿನವರು ಗೊಣಗಿ ತೆಪ್ಪಗಾಗುತ್ತಾರೆ. ನಾವು ನಮಗೆ ಸಾಧ್ಯವಿದ್ದಾಗಲೆಲ್ಲ ಹಾಗೆ ಗಟ್ಟಿಯಾಗಿ ಮುಂದೆ ನಿಲ್ಲಬೇಕು. ಇದೇ ರೀತಿ, ನಾವು ಹಸಿರು ದೀಪ ಬರುವವರೆಗೂ ಮುಂದರಿಯಬಾರದು, ಹಿಂದಿನವರು ಬೇಕಾದಷ್ಟು ಹಾರ್ನ್ ಹೊಡೆದರೂ ಅಚಲರಾಗಿರಬೇಕು. ಇದೆಲ್ಲ ಉಪಯೋಗವಾಗುತ್ತದೆಯೇ? ಏಕಿಲ್ಲ? ರಸ್ತೆಯಲ್ಲಿ ಹೋಗುವಾಗ ನನ್ನ ಹಿಂದಿನವರು ಹಾರ್ನ್ ಹೊಡೆದರೆ ನಾನು ನನ್ನ ಬೈಕನ್ನು ಬೇಕೆಂದೇ ಸ್ಲೋ ಮಾಡುತ್ತೇನೆ. ಮತ್ತೂ ಹೊಡೆದರೆ, ಹಿಂದಿರುಗಿ ದುರುಗುಟ್ಟಿ ನೋಡುತ್ತೇನೆ. ಬಹಳಷ್ಟು ಸಲ ಹಾರ್ನ್ ಹೊಡೆಯುವವರು ತೆಪ್ಪಗಾಗುತ್ತಾರೆ.

ಕೆಲ ವ್ಯಕ್ತಿಗಳು ಸರಿಯಾಗಿ ನಡೆದುಕೊಂಡರೆ ಸಾಕೇ? ಅದರಿಂದೇನಾದೀತು? ಅದು ಸಾಕಾಗಲಿಕ್ಕಿಲ್ಲ. ಆದರೆ ಉಪಯೋಗಕ್ಕಂತೂ ಬರುತ್ತದೆ. ನಾನು ಮೇಲೆ ಹೇಳಿದಂತೆ ನಮ್ಮಲ್ಲಿ negative feedback ಭಯಂಕರವಿದೆ: ನಮ್ಮ ಧಾವಂತಗಳು, ಅಭದ್ರತೆಗಳು ಒಬ್ಬರನ್ನು ನೋಡಿ ಇನ್ನೊಬ್ಬರದು ಹೆಚ್ಚಾಗುತ್ತ, ಸಿಂಬಿಯಂತೆ ಸುತ್ತುತ್ತ ಕ್ಷಣಾರ್ಧದಲ್ಲಿ ಬೆಳೆಯುತ್ತ ಹೋಗುತ್ತವೆ. ಅಂಥದನ್ನು ಪ್ರತ್ಯೇಕ ವ್ಯಕ್ತಿಗಳು ಸ್ವಲ್ಪವಾದರೂ ಕಡಿಮೆ ಮಾಡಬಹುದು. ನೀವೇ ಗಮನಿಸಿ ನೋಡಿ. ನೀವು ನಿಮ್ಮ ಕಾರನ್ನು ಒಂದು ಲೇನಿನಿಂದ ಇನ್ನೊಂದಕ್ಕೆ ಹಾರಿಸದೆ, ಸಿಗ್ನಲ್ಲುಗಳಲ್ಲಿ ಸರಿಯಾಗಿ ನಿಲ್ಲಿಸಿ, ಸರಿಯಾಗಿ ಓಡಿಸುತ್ತಿದ್ದರೆ, ನಿಮ್ಮ ಕಾರಿನ ಸುತ್ತಮುತ್ತಲಿನ ಒಂದು ಚಿಕ್ಕ ಪ್ರದೇಶದಲ್ಲಿ, ಉಳಿದ ಟ್ರಾಫಿಕ್ಕಿಗೆ ಹೋಲಿಸಿದರೆ, ವ್ಯವಸ್ಥಿಯ ವಾತಾವರಣವಿರುತ್ತದೆ. ಆದರೆ ನೀವು ನಿಮಿಷಕ್ಕೊಮ್ಮೆ ಲೇನ್ ಬದಲಾಯಿಸುತ್ತಿದ್ದಲ್ಲಿ, ಸ್ವಲ್ಪ ಜಾಗ ಕಂಡರೂ ನುಗ್ಗುತ್ತಿದ್ದಲ್ಲಿ, ನಿಮ್ಮ ಸುತ್ತಮುತ್ತಲೂ ಅವ್ಯವಸ್ಥೆ ಉಂಟಾಗುತ್ತದೆ. ನಿಮ್ಮ ಸುತ್ತಮುತ್ತಲಿನವರೂ ಅದನ್ನೇ ಮಾಡುತ್ತಾರೆ. ಇದೊಂದು ripple effect ಆಗಿ ಹರಡುತ್ತದೆ.
***

ಮೇಲೆ ನಾನು ನಮ್ಮ ಮೂರ್ಖತನಗಳಿಗೆ ಯಾವುದೇ ನೆಲೆಯಿಲ್ಲ ಎಂದು ಹೇಳಿದ್ದೆ. ಅದು ಸಂಪೂರ್ಣ ಸತ್ಯವಲ್ಲ. ’ನಾವೇಕೆ ಹೀಗೆ?’ ಎನ್ನುವ ಪ್ರಶ್ನೆಯ ಕೆಲವು ಆಯಾಮಗಳನ್ನಾದರೂ ಸೈದ್ಧಾಂತಿಕವಾಗಿ ವಿವರಿಸಬಹುದು. ಆ ರೀತಿಯ ಪ್ರಯತ್ನಗಳು ಆಗಿವೆ ಕೂಡ. ಗೇಮ್ ಥಿಯರಿ (Game Theory) ಮತ್ತು ಎಕನಾಮಿಕ್ಸ್‍ನ ಸಹಾಯ ಪಡೆದು ಕೆಲವು ಸಮಸ್ಯೆಗಳನ್ನು ವಿವರಿಸುವುದಷ್ಟೆ ಅಲ್ಲದೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನೂ ಮಾಡಬಹುದು. ಮತ್ತೆ ಒತ್ತಿ ಹೇಳುತ್ತೇನೆ. ಎಕನಾಮಿಕ್ಸ್ ಎನ್ನುವುದು ಮನುಷ್ಯನ ವರ್ತನೆಗೆ ಸಂಬಂಧಪಟ್ಟ ಶಾಸ್ತ್ರ. ಮನುಷ್ಯ ಮನುಷ್ಯರ ನಡುವಿನ ಸಂವಹನಗಳು ಏಕೆ ಮತ್ತು ಹೇಗೆ ಏರ್ಪಡುತ್ತವೆ ಎಂಬುದನ್ನು ವಿವರಿಸಲು ಪ್ರಯತ್ನಿಸುವ ಶಾಸ್ತ್ರ. ಆರ್ಥಿಕ ಸಂವಹನಗಳು ಕೇವಲ ಒಂದು ಬಗೆಯವಷ್ಟೆ. ಹಾಗೆಯೇ ಗೇಮ್ ಥಿಯರಿಯ ಕೆಲವು ಮೂಲಭೂತ, ಸರಳ, ಆಸಕ್ತಿಕರ ಹಾಗೂ ಘನಿಷ್ಠ ತತ್ವಗಳಾದ ’ಕೈದಿಗಳ ಇಬ್ಬಂದಿ’ (prisoners’ dilemma), Evolutionarily Stable Strategies (ESS) ಇತ್ಯಾದಿಗಳು. ಇಂಥ ಕೆಲವು ವಿಷಯಗಳ ಬಗ್ಗೆ ಕ್ರಮೇಣ ಬರೆಯೋಣವಂತೆ.

5 thoughts on “ಸಣ್ಣ ಸಂಗತಿಗಳು

 1. ಅಪ್ರೂಪಕ್ಕೆ ಸೀರಿಯಸ್ಸಾಗಿದೀರಿ.ನಮ್ಮ ಮೆಂಟಾಲಿಟಿಗೆ ಬಡಿದಿರುವ ಗರವನ್ನ ನಾವೆ ತೊಲಗಿಸಿಕೊಳ್ಳುವತನಕ ಇದು ಕಡಿಮೆ ಆಗುವಹಾಗೆ ಕಾಣದು. ಬೇರೆ ದೇಶಗಳಿಗೆ ಕಂಪೇರ್ ಮಾಡಿದರೆ ನಾವು ಹಿಂದೆ ಇದೇವೆ ಅಂತ ಬಡುಕೊಳ್ಳೊ ಬದಲು ನಾವು ಹೇಗಿದೇವೆ ಅಂತ ರೋಡುಬದೀಲಿ ನಿಂತು ಕನ್ನಡೀಲಿ ಮುಖ ನೋಡಿಕೊಂಡ್ರೆ ಸಾಕು.ಗೊತ್ತಾಗತ್ತೆ.ವಿದ್ಯಾವಂತರಾದಷ್ಟು ನಾವು ರಂಗೋಲಿ ಕೆಳಗೆ ತೂರುವ ವಿಧಾನಗಳನ್ನ ಹುಡುಕೋದು ನೋಡ್ತೇವೆಯೆ ವಿನಹ ನಮ್ಮನ್ನ ಸುಧಾರಿಸಿಕೊಳ್ಳೊ ಪ್ರಯತ್ನಗಳು ಶೇಕಡಾವಾರು ಬಹಳ ಕಡಿಮೆ.ಎಲ್ಲ ಶುರುವಾಗಬೇಕಿರೋದು ನಮ್ಮ ನಮ್ಮ ಮನೆಗಳಿಂದ, ಮನಗಳಿಂದ. ಗೇಂ ಥಿಯರಿಯ ಬಗ್ಗೆ ತಿಳಿದುಕೊಳ್ಳಲು ಬಹಳ ಕುತೂಹಲವಿದೆ. ಬರೆಯಿರಿ. ಕಾಯುತ್ತ ಇರುತ್ತೇನೆ.
  -ಟೀನಾ.

 2. ಟೀನಾ:
  ನಾನು ಯಾವಾಗಲೂ ಸೀರಿಯಸ್ಸೆ. ಆದರೆ ಜನ ನನ್ನನ್ನು ಸೀರಿಯಸ್ಸಾಗಿ ತೊಗೊಳ್ಳೋದಿಲ್ಲ. ಏನು ಮಾಡೋದು ಹೇಳಿ? ಮತ್ತೆ ನನ್ನ ವ್ಯಂಗ್ಯವೂ ಮೊಂಡಾಗಿ ಕೇವಲ ಹಾಸ್ಯದ ಮಟ್ಟಕ್ಕೆ ಇಳಿದಿರಬೇಕು. 🙂

  ನೀವು ಹೇಳುವುದು ಸರಿ. ಶುರುವಾಗಬೇಕಾಗಿದ್ದು ವ್ಯಕ್ತಿಗಳ ಮಟ್ಟದಲ್ಲೆ. ಆದರೆ ಅದು ಯಾಕೆ ಆಗೋದಿಲ್ಲ ಅನ್ನುವುದನ್ನ ವಿವರಿಸಬಹುದು. ಹೌದು, ಗೇಮ್ ಥಿಯರಿಯ ಬಗ್ಗೆ ಸ್ವಲ್ಪ ಬರೆಯಲೇಬೇಕು. ಯಾಕೆಂದರೆ ಹೆಚ್ಚು ಜನ ಇಂಥವನ್ನು ತಿಳಿದುಕೊಂಡು ಅವುಗಳ ಬಗ್ಗೆ ಯೋಚಿಸಿದರೆ ಒಳ್ಳೆಯದು.

 3. Insensitive ವಿದ್ಯಾವಂತರ ಬಗೆಗೆ ನಿವು ಹೇಳುತ್ತಿರುವದು ೧೦೦% ಕರೆಕ್ಟ.
  ನಾನೊಮ್ಮೆ ಬೆಳಗಿನ ಆರು ಗಂಟೆಗೆ ವಾಕಿಂಗ್ ಹೋದಾಗ, ಅ ಸಮಯದಲ್ಲೂ ತಂಪು ಕನ್ನಡಕ ಹಾಕಿಕೊಂಡ, ಬರ್ಮುಡಾ ಧರಿಸಿದ high level ವ್ಯಕ್ತಿಯೊಬ್ಬ ತನ್ನ ನಾಯಿಯನ್ನು ರಸ್ತೆಯ ಮಧ್ಯದಲ್ಲಿಯೇ ಕೂರಿಸಿರುವದನ್ನು ಕಂಡು ಬೆರಗಾದೆ.
  ನಮ್ಮ ಜನ ಹೀಗೇಕೆ?
  ಉತ್ತರ ಕಂಡು ಹಿಡಿಯಲು ಪ್ರಯತ್ನಿಸುತ್ತಿರುವಿರಿ, ಚಕೋರ.
  All the best.

 4. ಸುನಾಥ ಗುರುಗಳ:
  ’ನಾವೇಕೆ ಹೀಗೆ?’ ಎಂಬುದು ಸುಲಭ ಪ್ರಶ್ನೆಯೇನಲ್ಲ. ಆದರೂ ಕೆಲವನ್ನು ವಿವರಿಸಬಹುದು. ನೋಡೋಣ. ಥ್ಯಾಂಕ್ಸ್!

 5. ಅಲ್ಲಿಯ ಜನರು ಸಾರ್ವಜನಿಕರಿಗೆ(ಉದಾ: ಬಸ್ ಕಲ್ಲು ಹೊಡೆಯೋದು) ತೊ೦ದರೆ ಮಾಡೊ ಕೆಲ್ಸ ಮಾಡೊದೇ ಇಲ್ಲ ಅನ್ಸುತ್ತೆ.
  ಸಾರ್ವಜನಿಕ ಸ೦ಪರ್ಕ ವ್ಯವಸ್ಥೆ ತು೦ಬಾ ಚೆನ್ನಾಗಿದೆ, ಬಸ್ ಪ್ರಯಾಣ peaceful :). Seattleನಿ೦ದ ವಾಪಸ್ಸು ಬ೦ದು bmtcಯಲ್ಲಿ ಹೋಗೊದು ಹೇಗೆ ಎ೦ಬ ಚಿ೦ತೆ ಆಗಿತ್ತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s