ಅವನು ಒಳಗೆ ಬಂದಾಗ ನಾನು ಒಂದರ್ಧ ಗ್ಲಾಸ್ ಬಿಯರ್ ಗುಟುಕರಿಸಿ ಕೂತಿದ್ದೆ. ಆಗ ತಾನೇ ಯಾರೋ ಜ್ಯೂಕ್ಬಾಕ್ಸಿನಲ್ಲಿ ದುಡ್ಡು ಹಾಕಿ ಹಾಡು ಶುರು ಮಾಡಿದ್ದರು. ಯಾವುದೋ ನನಗಿಷ್ಟವಾಗದ ಹಾಡು ಬರುತ್ತಿತ್ತು. ’ಯಾರಪ್ಪಾ ಇದು, ದುಡ್ಡು ಕೊಟ್ಟು ಕೆಟ್ಟ ಹಾಡು ಕೇಳುತ್ತಾರಲ್ಲ!’ ಎಂದು ನನ್ನಷ್ಟಕ್ಕೆ ನಾನು ಮುಸಿನಗುತ್ತಿದ್ದೆ. ಅವನು ಸ್ವಲ್ಪ ಅಪ್ರತಿಭನಾಗಿದ್ದಂತೆ ತೋರಿತು. ಕೌಂಟರಿನ ಎದುರಿಗಿನ ಖಾಲಿ ಕುರ್ಚಿಯೊಂದರಲ್ಲಿ ಕೂತ. ತನ್ನ ಸುತ್ತಮುತ್ತಲಿದ್ದವರನ್ನೆಲ್ಲ ಮಾತಾಡಿಸಿ ಕೈಕುಲುಕಿ ಪರಿಚಯ ಮಾಡಿಕೊಳ್ಳುತ್ತಿದ್ದ. ಹುಮ್ಮಸ್ಸಿನಿಂದಲ್ಲ, ಒಂದು ರೀತಿಯ ಅಳುಕಿನಿಂದ. ಅವನ ನಡೆನುಡಿಗಳಲ್ಲಿ ಹಗುರಾದ socialising ಇರಲಿಲ್ಲ. ಬದಲಿಗೆ, ಯಾವುದೋ ಭರವಸೆಗಾಗಿ ಹಾತೊರೆಯುತ್ತಿದ್ದ. ಅಭಯಹಸ್ತಕ್ಕಾಗಿ ಬೇಡುತ್ತಿದ್ದಂತಿತ್ತು.
“Are you ok?” ಒಮ್ಮೆಲೆ ನನ್ನತ್ತ ಈ ಪ್ರಶ್ನೆ ಬಂದಾಗ ನಾನು ಕೊಂಚ ತಡವರಿಸಿದೆ. “ನಾನು ಆರಾಮಾಗೇ ಇದ್ದೀನಿ. ನನಗೆ ಇಷ್ಟದ ಹಾಡು ಬರುತ್ತಿದೆ. ಅದನ್ನ ನಾನೂ ಹಾಡುತ್ತಿದ್ದೇನಷ್ಟೆ.” ನಾನು ಹೇಳಿದ್ದನ್ನು ಗಮನಿಸದಂತೆ, “ಓ, ಸರಿ. ಯಾಕೆ ಕೇಳಿದೆ ಅಂದರೆ, ನೀನು ಇಲ್ಲಿ ಆರಾಮಾಗಿದ್ದೀ ಅಂತ ಖಾತ್ರಿ ಮಾಡಿಕೊಳ್ಳಬೇಕು ಎನ್ನಿಸಿತು. ನಾನು ಇತ್ತೀಚೆಗೆ ಇರಾಕಿನಿಂದ ಮರಳಿ ಬಂದೆ.” ಓ, ನನಗೆ ಈಗ ನಿಧಾನವಾಗಿ ಸ್ಪಷ್ಟವಾಗತೊಡಗಿತು. ಅವನು ಹೊರಗಡೆ ಸಿಗರೇಟು ಸೇದಲು ಹೊರಟಿದ್ದ. ನಾನೂ ಅವನೊಂದಿಗೆ ಬರುತ್ತೇನೆಂದು ಹೊರಹೋದೆ. “ನೀನು ಇಂಡಿಯಾದವನಲ್ಲವೆ. ನನಗೆ ಇಂಡಿಯನ್ನರು ಇಷ್ಟವಾಗುತ್ತಾರೆ. ನಿಮ್ಮ ಭಾಷೆಯ ಶಬ್ದವೇನಾದರೂ ಹೇಳುತ್ತೇನೆ… ಉಹ್… ಉಂ.. ನಾಮಸ್ತೆ.” ನಾನು ನಕ್ಕು ಕೇಳಿದೆ, “ಇರಾಕ್ಗೆ ಏನು ಹೋಗಿದ್ದು? ಕೆಲಸದ ಕಾರಣವೋ?” ಪ್ರಶ್ನೆ ಕೇಳಿದ ಕೂಡಲೆ ಅದೆಂಥ ಮೂರ್ಖ ಪ್ರಶ್ನೆ ಕೇಳಿದೆ ಎನ್ನಿಸಿತು. ಅವನು ಇರಾಕಿಗೆ ಏತಕ್ಕೆ ಹೋಗಲು ಸಾಧ್ಯ? “ಹೌದು. ಅಮೆರಿಕನ್ ಮಿಲಿಟರಿ.” ನಾನೆಂದೆ, “ಕ್ಷಮಿಸು. ಅದೊಂದು ಮೂರ್ಖ ಪ್ರಶ್ನೆ. It should have been obvious.” “No no.. ಪರವಾಗಿಲ್ಲ. You are doing good. ಅದಿರಲಿ. ನಿನ್ನ ಬಗ್ಗೆ ಹೇಳು. ನೀನು ಮನೆಯಿಂದ ಇಷ್ಟು ದೂರ ಇದ್ದೀಯ. ದಿನಾ ಮನೆಗೆ ಫೋನು ಮಾಡಿ ಮಾತಾಡುತ್ತೀ ತಾನೆ? ಏಕೆಂದರೆ ಮನೆಯಿಂದ ದೂರ ಇರುವುದು ಎಷ್ಟು ಕಷ್ಟ ಎಂದು ನನಗೆ ಗೊತ್ತು. ಕಳೆದ ೧೮ ತಿಂಗಳು ಇರಾಕಿನಲ್ಲಿದ್ದೆ.” ನನಗೆ ಏನು ಹೇಳುವುದು ತಿಳಿಯದಾಯಿತು. ಮನೆಯಿಂದ ನಾನೂ ದೂರವಿರುವುದು ನಿಜ. ಆದರೆ ನನಗೂ ಅವನಿಗೂ ಸಾಮ್ಯತೆ ಅಲ್ಲಿಗೇ ಮುಗಿಯುತ್ತದೆ. ನನ್ನ ದೇಶವಲ್ಲದಿರಬಹುದು, ಆದರೂ ಒಂದು ಸ್ವತಂತ್ರ ದೇಶದಲ್ಲಿ ಮುಕ್ತವಾಗಿ ಆರಾಮಾಗಿ ಇರುವುದಕ್ಕೂ, ಇರಾಕಿನಂಥಲ್ಲಿ ಯುದ್ಧಭೂಮಿಯಲ್ಲಿ ಇರುವುದಕ್ಕೂ ಹೋಲಿಕೆಯಿದೆಯೇ? ಅಷ್ಟಕ್ಕೆ ಬಿಡದೆ ಮುಂದುವರಿಸಿದ, “Now, don’t bullshit me. Tell me if you are ok here or not. ಏಕೆಂದರೆ ಬೇರೆ ದೇಶದಿಂದ ಇಲ್ಲಿಗೆ ಬಂದವರು ಇಲ್ಲಿ ಚೆನ್ನಾಗಿರಬೇಕು. They should feel they are welcome here.” “ಆ ಬಗ್ಗೆ ಚಿಂತೆ ಮಾಡಬೇಡ. ಇರಾಕಿಗೂ ಅಮೆರಿಕಕ್ಕೂ ಕಂಪೇರ್ ಮಾಡಲು ಸಾಧ್ಯವಿಲ್ಲ. ಇದು ಕೂಡ ನಮ್ಮ ದೇಶದಂತೆ ಶಾಂತವಾದ ದೇಶ.” ಅವನಿಗೆ ಅದರಿಂದ ಸ್ವಲ್ಪ ಸಮಾಧಾನವಾಯಿತು. “ನೀನು ಹೇಳಿದ್ದು ಕೇಳಿ ಸಂತೋಷವಾಗತ್ತೆ. ಆದರೂ ಯಾರಾದರೂ ನಿನಗೆ ಏನಾದರೂ ಅಂದರೆ, ಅಥವಾ ಯಾವುದೇ ರೀತಿಯ ತಾರತಮ್ಯ ತೋರಿದರೆ, ಯಾವುದೇ ಹಿಂಜರಿಕೆಯಿಲ್ಲದೆ ಸಂಬಂಧಪಟ್ಟವರಿಗೆ ದೂರು ಕೊಡು. ನಿಮ್ಮ ಯುನಿವರ್ಸಿಟಿಯಲ್ಲೋ, ಅಥವಾ ಮತ್ತೆಲ್ಲೋ ಇದನ್ನು ನೋಡಿಕೊಳ್ಳುವ ಅಧಿಕಾರಿಗಳಿರುತ್ತಾರೆ.” ನಾನು ಹೇಳಿದೆ, “ಆ ಥರದ ಏನೂ ನನ್ನ ಅನುಭವಕ್ಕೆ ಬಂದಿಲ್ಲ. ಆ ಥರದ್ದು ಆಗುವುದೂ ಇಲ್ಲ ಎಂದು ನನಗೆ ಖಾತ್ರಿಯಿದೆ.” “ಅದು ಒಳ್ಳೆಯದೆ. ಆದರೂ ನೀವು ಸ್ವಲ್ಪ ಮೆತ್ತನೆಯ ಜನ. And there are quite a few assholes around… Well, you know there are assholes everywhere…” ನಾನು ನಗುತ್ತ ಹೇಳಿದೆ, “ಅದರ ಬಗ್ಗೆ ಏನೂ ಅಂದುಕೋಬೇಡ. ನಮ್ಮಲ್ಲೂ ಅಂಥವರು ಬಹಳವಿದ್ದಾರೆ. In fact, I am sure there are many more assholes in India, simply because we have many more people there.”
ಇದೆಲ್ಲ ಮಾತುಕತೆಯ ಬಳಿಕ ಅವನು ಸ್ವಲ್ಪ ಸಮಾಧಾನ ತಳೆದಿದ್ದ. ಆದರೆ ಅವನು ನಲುಗಿಹೋಗಿದ್ದು ಸ್ಪಷ್ಟವಾಗಿತ್ತು. ತನಗಾದ ಅನುಭವಗಳಿಂದ ಅವನು ಇನ್ನೂ ಹೊರಬಂದಿರಲಿಲ್ಲ. ನನ್ನ ಕುಟುಂಬದ ಬಗ್ಗೆ ಕೇಳಿದ. ನನಗೆ ಮದುವೆಯಾಗಿದೆಯೇ ಇಲ್ಲವೇ ಕೇಳಿದ. ಅವನು ಹೇಳದಿದ್ದರೂ ಅವನ ಕುಟುಂಬದಲ್ಲಿ ಏನೋ ಒಡಕಾಗಿದೆ ಈ ಅವಧಿಯಲ್ಲಿ ಎಂದು ನನಗೆ ತಿಳಿಯಿತು. ಒಳಗೆ ಹೋದ ನಂತರ ಕೌಂಟರಿನಲ್ಲಿ ಅವನ ಪಕ್ಕವೇ ಹೋಗಿ ಕುಳಿತೆ. “I still am shaken up,” ಎನ್ನುತ್ತಿದ್ದ. ಎಲ್ಲದಕ್ಕೂ ಹಿಂಜರಿಯುತ್ತಿದ್ದ. ಪದೇ ಪದೇ ಕ್ಷಮೆ ಕೇಳುತ್ತಿದ್ದ. ತೇಗಿದ್ದಕ್ಕೆ ಸುತ್ತಲಿನವರ ಕ್ಷಮೆ ಕೇಳಿದ. ಏನು ಮಾತಾಡಿದರೂ ಅದರ ಕೊನೆಗೆ, “ನಾನು ಮೊನ್ನೆಯೇ ಇರಾಕಿನಿಂದ ಬಂದೆ,” ಎಂದು ಜೋಡಿಸುತ್ತಿದ್ದ. “ಅದಕ್ಕೇಕೆ ಕ್ಷಮೆ ಕೇಳುತ್ತೀ ಬಿಡು. ನೀನೀಗ ವಾಪಸ್ ಮನೆಗೆ ಬಂದಿದ್ದೀಯ.” ಎಂದು ಸುತ್ತಲಿನ ಅಮೆರಿಕನ್ನರು ಹೇಳಿದರಾದರೂ ಅವರಿಗ್ಯಾಕೋ ಇವನಲ್ಲಿ ಅಂಥ ಆಸಕ್ತಿ ಇರಲಿಲ್ಲ. ಆದರೆ ನನಗೆ ಅವನನ್ನು ಸಮಾಧಾನಿಸಬೇಕೆನ್ನಿಸುತ್ತಿತ್ತು. ಇಲ್ಲಿ ಬಂದಿದ್ದುಕೊಂಡು ಇದೇ ದೇಶದವನೊಬ್ಬನನ್ನು ನಾನು ಸಂತೈಸುವುದು, ಅವನು ಮರಳಿ ಅವನ ನಾಡಿಗೆ ಬಂದಿದ್ದಾನೆ ಎಂದು ಭರವಸೆ ಕೊಡಲೆತ್ನಿಸುವುದು ವಿಪರ್ಯಾಸ ಎನ್ನಿಸುತ್ತಿತ್ತು. ಸ್ವಲ್ಪ ಹೊತ್ತಿಗೆ ಅಲ್ಲಿಂದ ಎದ್ದು ಹೊರಟ. ಸುತ್ತಮುತ್ತಲೂ ಇದ್ದವರನ್ನೂ, ಬಾರ್ಟೆಂಡರ್ನನ್ನೂ ಕುರಿತು, “Make sure he is ok.” ಎಂದು ನನ್ನತ್ತ ಕೈತೋರಿಸುತ್ತ ೨-೩ ಸಾರಿ ಹೇಳಿದ. ಅವರು ಏನೂ ತಿಳಿಯದೆ ವಿಚಿತ್ರವಾಗಿ ನೋಡಿದರು. ನಾನೇ ಅವರೆಲ್ಲರಿಗೆ ಸನ್ನೆ ಮಾಡಿ, “ಏನಿಲ್ಲ. ಎಲ್ಲಾ ಸರಿಯಾಗಿದೆ,” ಎಂದು ಹೇಳಿದೆ. “Make sure he is OK. Because, I just came back from Iraq,” ಎಂದು ಹೇಳುತ್ತಲೇ ಅಲ್ಲಿಂದ ನಿಧಾನಕ್ಕೆ ದಾಟಿ ಹೋದ.
hmm…ಇತ್ತೀಚೆಗಷ್ಟೇ Kite Runner ಓದಿ ಮುಗಿಸಿದೆ…ಬೆಚ್ಚಗೆ ಮನೆಯಲ್ಲಿ ಕೂತವರಿಗೇ ಇಂಥವನ್ನ ಓದಿದಾಗ ಕಸಿವಿಸಿಯಾಗುತ್ತೆ,.. ಪ್ರತ್ಯಕ್ಷವಾಗಿ ನೋಡಿದವರ ಪಾಡು ಕಲ್ಪನೆ ಮಾಡಿಕೊಳ್ಳಬಲ್ಲೆ! ಈ ಪೋಸ್ಟ್ ಬರೆದಿರೋ ರೀತಿ ತುಂಬಾ ಚೆನ್ನಾಗಿದೆ ಚಕೋರ, ಅತಿಯನಿಸದೆ, ದೊಡ್ಡ ಮಾತುಗಳಿಗೆ ಕಳೆದುಹೋಗದೇ ಮನಸ್ಸಿಗೆ ತಟ್ಟೋಹಾಗೆ ಬರೆದಿದ್ದೀರಾ:)
Strange! Very strange! ಮನುಷ್ಯತ್ವದ ಅನುಭವವಾಗುವದು ಮನುಷ್ಯ ನಲುಗಿ ಹೋದಾಗ ಮಾತ್ರ?
😦 Desha kaayo kelsa, rakShaNeya javaabdaari thumbaa kaShTa, aadre adna artha maDkoLLoru ilve illa… innoMdu kaDe noDidre, neeru kaMDallella kaalu thoLeyuva buddhi iruva Indian armyyalliruva janarannu balle naanu. Jeevanadalli enu mukhya, yaake mukhya aMta thale keDiskoMDu thale chiT hiDdhogithu…! Eega matte adella nenpaaythu.
ಯಾರದೋ ಹುಚ್ಚು ತೆವಲಿಗೆ ಹತ್ತಾರು ಸಾವಿರ ಜೀವಗಳು ಆರಿಹೋದವು …. ಮತ್ತೊಂದಷ್ಟು ಬದುಕಿ ಕೂಡ ಸತ್ತಂತಾಗಿವೆ.
ಈ ಶ್ರೀ ಮತ್ತು ಶ್ರೀ ಮತ್ತೆ ಒಂದೆ ಹೆಸರನ್ನ ಹಾಕಿ ಸಿಕ್ಕಾ ಪಟ್ಟೆ ಕನ್ ಪ್ಯೂಜ್ ಮಾಡ್ತಾ ಇದ್ದಾರೆ … 😀
-ಅಮರ
ಚಕೋರ ಸರ್ರ, ಏನು ಬರಯೋದ ಬಂದ ಮಾಡಿಬಿಟ್ಟೀರಲ್ಲಾ? ಭಾಳ ದಿವಸ ಆತು!
ರಾಜೇಶ
Elai cakOranE
maraLi bandu adAgalE tingaLa melAytu.
hosa lekhanakkaagi kaytiddeve.
krupe maduvanthavanAgu…