ಕಾರ್

ಪಾಮುಕ್‍ನ ’ಸ್ನೋ’ (Snow, ಟರ್ಕಿಶ್‍ನಲ್ಲಿ ’ಕಾರ್’) ಕಾದಂಬರಿಯನ್ನು ನಾನು ಇಲ್ಲಿನ ಚಳಿಗಾಲದಲ್ಲಿ ಓದಬೇಕಿತ್ತೇನೋ. ಅವನ ಹಿಮದ ವರ್ಣನೆಯ ಫಸ್ಟಹ್ಯಾಂಡ್ ಅನುಭವವಾಗುತ್ತಿತ್ತೇನೋ: ಹಿಮದ ಹರಳೊಂದು ಷಟ್ಕೋನವಂತೆ; ಅಥವಾ, ಹೆಚ್ಚು ಹೆಪ್ಪುಗಟ್ಟುತ್ತ ಹೋದಂತೆ ರೆಂಬೆಕೊಂಬೆಗಳು ಮೂಡಿ, ಆರು ಬೆರಳುಗಳನ್ನು ಚಾಚಿದಂತೆಯೋ, ನಕ್ಷತ್ರ ಮೀನಿನಂತೆಯೋ ಕಾಣುತ್ತದಂತೆ. ಇಲ್ಲಿ ಹಿಮ ಬಿದ್ದಾಗ ಈ ಕಾದಂಬರಿಯನ್ನು ಮತ್ತೊಮ್ಮೆ ಓದಿ, ಪಾಮುಕ್ ವರ್ಣಿಸಿದಂತೆ ಹಿಮದ ಅನುಭವವಾಗುತ್ತದೋ ನೋಡಬೇಕು.


ಹಿಮದ ಈ ಸಮರೂಪತೆಯನ್ನು ಮೊದಲಿಗೆ ನಿದರ್ಶಿಸಿದವನು ವಿಲ್ಸನ್ ಆಲ್ವಿನ್ “ಸ್ನೋಫ್ಲೇಕ್” ಬೆಂಟ್ಲಿ. ಒಂದು ಮೈಕ್ರೋಸ್ಕೋಪಿಗೆ ತನ್ನ ಕ್ಯಾಮೆರಾ ಜೋಡಿಸಿ, “ಸ್ನೋಫ಼್ಲೇಕ್”ಗಳಲ್ಲಿ ಅಡಗಿದ ಒಟ್ಟಂದವನ್ನು ಹೊರತಂದು ತನ್ನ ಫೋಟೋಗಳ ಮೂಲಕ ತೋರಿಸಿದ. ಹಿಮ ಕರಗುವ ಮೊದಲೇ ಅವುಗಳ ಫೋಟೋ ತೆಗೆಯುವ ಸಲುವಾಗಿ ತನ್ನದೇ ವಿಶಿಷ್ಟ ತಂತ್ರವನ್ನು ಕಂಡುಕೊಂಡ. ಇದು ಸುಮಾರು ೧೮೮೫ರಲ್ಲಿ.

ಪಾಮುಕ್‍ನ ಕಾದಂಬರಿಯ ಮುಖ್ಯಪಾತ್ರ ಕಾ ಎಂಬ ಹೆಸರಿನ ದೇಶಭ್ರಷ್ಟ ಕವಿ. ಅವನು ಬರೆದ ೧೯ ಕವಿತೆಗಳನ್ನು ಸ್ನೋಫ್ಲೇಕ್‍ನ ಅಕ್ಷರೇಖೆಗಳ ಮೇಲೆ ಜೋಡಿಸುತ್ತಾನೆ. ನೆನಪುಗಳು (memory), ಕಲ್ಪನೆ (imagination) ಮತ್ತು ವಿಚಾರ (reason); ಇವು ಮೂರು ಅಕ್ಷರೇಖೆಗಳು. ನೆನಪುಗಳು ಮತ್ತು ಕಲ್ಪನೆಯ ಪ್ರಭಾವದಿಂದ ಬರೆದ ಪದ್ಯಗಳು. ವೈಚಾರಿಕತೆ ಮತ್ತು ಹಳೆಯ ಚಾಳಿಗಳಿಂದ ಕೂಡಿದ ಪದ್ಯಗಳು. ಹೀಗೆ.  ಅವನು ಪದ್ಯ ಬರೆಯದೆ ಎಷ್ಟೋ ವರ್ಷಗಳು ಸಂದಿವೆ. ಆದರೆ ಇದ್ದಕ್ಕಿದ್ದಂತೆ ಅವನಲ್ಲಿ ಪದ್ಯಗಳು ಒಂದಾದ ಮೇಲೊಂದು ಮೂಡುತ್ತಿವೆ. ಅದೇನು ಹಿಮದ ಅದ್ಭುತ ಸೌಂದರ್ಯದಿಂದಲೋ; ಹಳೆಯ ಗೆಳತಿಯ ಮೇಲೆ ಹುಟ್ಟಿದ ಪ್ರೇಮದಿಂದಲೋ; ಕುಡಿಯುತ್ತಲೇ ಇರುವ ಅನೇಕ ಗ್ಲಾಸು ರಾಕಿಗಳ ಪರಿಣಾಮವೋ; ಇದ್ದಕ್ಕಿದ್ದಂತೆ ಅವನಲ್ಲಿ ಭಕ್ತಿ, ನಂಬಿಕೆಗಳು ಮೂಡಿ, ದೈವಪ್ರೇರಣೆಯಾಗುತ್ತಿದೆಯೋ. ಅದೇನೇ ಇರಲಿ. ವಾಸ್ತವವೆಂದರೆ, ೨-೩ ದಿನಗಳ ಅವಧಿಯಲ್ಲಿ ಅವನು ೧೯ ಶ್ರೇಷ್ಠ ಕವಿತೆಗಳನ್ನು ಬರೆದಿದ್ದಾನೆ (ಅಥವಾ ಅವು ಅವನಿಂದ ಬರೆಯಲ್ಪಟ್ಟಿವೆ). ಆ ೩ ದಿನಗಳಾದ ಮೇಲೆ ಮುಂದೆ ಅವನು ಬದುಕಿದ ೪ ವರ್ಷಗಳಲ್ಲಿ ಮತ್ತೇನನ್ನೂ ಅವನು ಬರೆಯಲಿಲ್ಲ. ಆದರೆ ಆ ಸಮಯವನ್ನು ಅವನು ಆ ಪದ್ಯಗಳನ್ನು ತಿದ್ದಿ ಒಂದು ಸಂಕಲನವನ್ನು ಹೊರತರುವ ತಯಾರಿಯಲ್ಲಿ ಕಳೆದಿದ್ದಾನೆ. ಇಷ್ಟೆಲ್ಲ ಆಗಿ, ಕೊನೆಗೆ ಉಳಿದದ್ದು ಏನೂ ಇಲ್ಲ. ಅವನು ಕವಿತೆಗಳನ್ನು ಬರೆಯುತ್ತಿದ್ದ ಆ ಹಸಿರು ಡೈರಿ ಕಾಣೆಯಾಗಿದೆ. ಬಹುತೇಕ ಫ಼್ರ್ಯಾಂಕ್‍ಫರ್ಟ್ನಲ್ಲಿ ಕಾನನ್ನು ಗುಂಡು ಹೊಡೆದು ಕೊಂದ ಮನುಷ್ಯನೇ ಅದನ್ನೂ ತೆಗೆದುಕೊಂಡು ಹೋಗಿದ್ದಾನೇನೋ!

ಜರ್ಮನಿಯಿಂದ ೧೨ ವರ್ಷದ ನಂತರ ತನ್ನ ತಾಯಿಯ ಅಂತ್ಯಕ್ರಿಯೆಯ ಸಲುವಾಗಿ ಕಾ ಇಸ್ತಾನ್‍ಬುಲ್‍ಗೆ ಬಂದಿದ್ದಾನೆ. ತನ್ನ ಗೆಳೆಯನ ಸಲಹೆಯ ಮೇರೆಗೆ ಕಾರ್ಸ್ ಎಂಬ ನಗರಕ್ಕೆ ಬರುತ್ತಾನೆ. ಟರ್ಕಿಯ ಪೂರ್ವಭಾಗದ ಅನತೋಲಿಯದ ಗಡಿ ಪ್ರದೇಶವದು. ಪಕ್ಕದಲ್ಲಿ ಅರ್ಮೇನಿಯ. ಸ್ವಲ್ಪ ಆಚೆ ರಷ್ಯಾ. ಕಾ ಅಲ್ಲಿಗೆ ಬಂದ ಉದ್ದೇಶ: “ಅಲ್ಲಿನ ಸ್ಥಳೀಯ ನಗರಸಭೆಯ ಚುನಾವಣೆಯನ್ನು ವೀಕ್ಷಿಸಲು” ಮತ್ತು “ಕಾರ್ಸ್ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಹುಡುಗಿಯರ ಆತ್ಮಹತ್ಯೆಗಳ ಪಿಡುಗಿನ ಬಗ್ಗೆ ಮಾಹಿತಿ ಸಂಗ್ರಹಿಸಲು”. ಒಬ್ಬ ಪತ್ರಕರ್ತನೆಂದು ಹೇಳಿಕೊಂಡು ಅಲ್ಲಿಗೆ ಬಂದಿದ್ದಾನೆ. ಅದೇ ನಗರದಲ್ಲಿ ಕಾನ ಹಳೆಯ ಗೆಳತಿ ಐಪೆಕ್ ಇದ್ದಾಳೆ. ಇತ್ತೀಚೆಗೆ ಅವಳು ತನ್ನ ಗಂಡನಿಂದ ದೂರವಾಗಿ ತಂದೆಯ ಹಾಗೂ ತಂಗಿಯ ಜೊತೆ ಇದ್ದಾಳೆ. ಈ ವಿಷಯವೇ ಬಹಳ ಮಾಡಿ ಕಾ ಅಲ್ಲಿಗೆ ಬಂದ ಮುಖ್ಯ ಕಾರಣವಿರಬಹುದು.

ಆದರೆ ಎಂದಿನಂತೆ ಪಾಮುಕ್‍ನ ಕಾದಂಬರಿಗಳಲ್ಲಿ ಇವೆಲ್ಲ ರೆಡ್ ಹೆರ್ರಿಂಗ್‍ಗಳಷ್ಟೆ. ಇವೆಲ್ಲವೂ ನೆಪಗಳಷ್ಟೆ. ಇದಿಷ್ಟು ಶುರು ಮಾಡಿದ ಮೇಲೆ ಮುಂದೆ ಹೋದಂತೆ ನಿಮಗೆ ಸಿಗುವುದು ಒಂದು ವಿಲಕ್ಷಣ ಹಾಗೂ ಉತ್ಕಟ ಚಿತ್ರಣ: ಬಿಡದೆ ಬೀಳುವ ಹಿಮ; ನಿರ್ಜನ ರಸ್ತೆಗಳು; ಹೆಜ್ಜೆಗೊಂದಿವೆಯೋ ಎನ್ನಿಸುವ, ಊರಿನ ನಿರುದ್ಯೋಗಿಗಳ ಅಡ್ಡಾಗಳಿಗಿರುವ, ಚಹಾದಂಗಡಿಗಳು; ಮಫ್ತಿಯಲ್ಲಿರುವ, ಕಂಡಕಂಡಲ್ಲಿ ಕಂಡುಬರುವ ಪೋಲೀಸರು; ಅವರಿಗೆ ಮಾಹಿತಿದಾರರಾಗಿ ಕೆಲಸ ಮಾಡುವ ನೂರಾರು ನಾಗರಿಕರು; ಬೀದಿನಾಯಿಗಳು; ಧಾರ್ಮಿಕ ಶಾಲೆಯ ಹುಡುಗರು; ಸ್ಥಳೀಯ ರಾಜಕಾರಣಿಗಳು; ಒಟ್ಟಾರೆ, ಕಾರ್ಸ್ ಎಂಬ ದುಃಖದ, ದುಗುಡ ತುಂಬಿದ ಊರು.

ಟರ್ಕಿ ಒಂದು ವಿಶೇಷ ದೇಶ. ಪೂರ್ವ ಮತ್ತು ಪಶ್ಚಿಮಗಳ ಸಂಘರ್ಷ ಸದಾಕಾಲ ಇರುವಂಥ ದೇಶ. ಸ್ವಾಭಾವಿಕವಾಗಿ ಪಾಮುಕ್‍ನ ಕಾದಂಬರಿಗಳ ಮುಖ್ಯ ಮೋಟಿಫ಼್ ಅದೇ. ಕಾರ್ಸ್ ಪ್ರಾಂತ್ಯದಲ್ಲಿ ಇದ್ದಕ್ಕಿದ್ದಂತೆ ಆತ್ಮಹತ್ಯೆಯ ಪಿಡುಗು ಹೆಚ್ಚಾಗುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳುವವರೆಲ್ಲ ಯೌವನದ ಹುಡುಗಿಯರು ಅಥವಾ ಹೊಸದಾಗಿ ಮದುವೆಯಾದವರು. ಈ ಆತ್ಮಹತ್ಯೆಯ ಹಿಂದಿನ ಕಾರಣಗಳೂ ಅಸ್ಪಷ್ಟ: ಒತ್ತಾಯದಿಂದ ಬೇಡದ ಮದುವೆಯಾದದ್ದು; ವಿಫಲ ಪ್ರೇಮ; ಮನೆಯವರ ಕಾಟ. ಏನೇನೋ ಕಾರಣಗಳು. ಅದರ ಜೊತೆಗೆ ರಾಜಕೀಯ ಬೆರೆತಿದೆ. ಆತ್ಮಹತ್ಯೆಗೆ ಇನ್ನೊಂದು ಮುಖ್ಯ ಕಾರಣವೆಂದರೆ, ಸಾಮಾನ್ಯ ಜನರ ಮೇಲೆ ಸೆಕ್ಯುಲರಿಸ್ಂ‍ನ ಹೇರಿಕೆ! ಅದು ಕಾರ್ಸ್‍ನಲ್ಲಿ (ಹಾಗೂ ಅನತೋಲಿಯಾದಲ್ಲಿ, ಸಾರ್ವತ್ರಿಕವಾಗಿ) ಅಭಿವ್ಯಕ್ತವಾಗಿವಾಗಿದ್ದು ಹೆಂಗಸರು ತಲೆಯ ಮೇಲೆ ಹೊದ್ದುಕೊಳ್ಳುವ ವಸ್ತ್ರಗಳ (ಹೆಡ್‍ಸ್ಕಾರ್ಫ಼್) ಮೇಲಿನ ನಿರ್ಬಂಧದ ಮೂಲಕ. ಹೆಚ್ಚು ಹೆಚ್ಚು ಸೆಕ್ಯುಲರ್ ಆಗಬಯಸುವ, ಹೆಚ್ಚು ಪಾಶ್ಚಾತ್ಯವಾಗಿ ತನ್ಮೂಲಕ ಪ್ರಗತಿ ಸಾಧಿಸಬೇಕೆನ್ನುವ ಸರಕಾರ, ಬುದ್ಧಿಜೀವಿಗಳು, ಹಾಗೂ ಮಧ್ಯಮ ವರ್ಗ. ದೇವರು, ಧರ್ಮ, ರಿವಾಜುಗಳು ಕೊಡುವ — ಅಲ್ಪಸ್ವಲ್ಪವೇ ಇದ್ದರೂ ಸರಿ — ಭದ್ರತೆಯಲ್ಲಿ ಬದುಕಬಯಸುವ ಬಡ ಜನ, ಪೌರ್ವಾತ್ಯರು, ಸಾಮಾನ್ಯ ಜನರು. ಇವರ ನಡುವಿನ ನಾನಾ ನಮೂನೆಯ ಸಂಘರ್ಷಗಳು ಸಮಗ್ರ ಚಿತ್ರಣ ಈ ಕಾದಂಬರಿಯಲ್ಲಿ ಸಿಗುತ್ತದೆ.

ಮತಾಂಧರ ಭಯೋತ್ಪಾದನೆಯ ರೂಢಿಯಿರುವ ನಮಗೆ ಇಲ್ಲಿ ಸೆಕ್ಯುಲರ್ ಮಂದಿಯ ಭಯೋತ್ಪಾದನೆಯ ಪರಿಚಯವಾಗುತ್ತದೆ! ಸ್ವಾತಂತ್ರ್ಯ ಎಂದರೆ ಏನು? ಬಂಧಮುಕ್ತಿ ಎಂದರೆ ಏನು? ಮುಂತಾದ ಪ್ರಶ್ನೆಗಳು ಕಾಡುತ್ತವೆ. ಧರ್ಮದ ಕಾರಣಕ್ಕಿಂತ ಸೆಕ್ಯುಲರ್ ದಬ್ಬಾಳಿಕೆಯ ವಿರುದ್ಧ ಬಂಡೇಳುವ ಉದ್ದೇಶದಿಂದಲೇ ಹೆಡ್‍ಸ್ಕಾರ್ಫ್ ಧರಿಸುವ ಹುಡುಗಿಯರು ಕಾಣಸಿಗುತ್ತಾರೆ. ಹಾಗೆಯೇ, ರಂಗದ ಮೇಲೆ, ಸಾವಿರಾರು ಮಡಿವಂತ ಪ್ರೇಕ್ಷಕರೆದುರಿಗೆ, ತಲೆಯ ಮೇಲಿನ ವಸ್ತ್ರವನ್ನು ಸೆಳೆದು ನೆಲಕ್ಕೆ ಹಾಕಿ ಸುಡುವ ದೃಶ್ಯಗಳೂ ಇವೆ. ಅಟಾಟರ್ಕ್‍ನ ಆದರ್ಶಗಳನ್ನು ಒಳಗೊಂಡ ಭಾಷಣಗಳು, ಆ ಆದರ್ಶಗಳನ್ನು ಸಾಕಾರಗೊಳಿಸುತ್ತೇವೆಂದುಕೊಳ್ಳುತ್ತಲೇ ಅಧಿಕಾರದ ಆಸೆಗೆ ದೌರ್ಜನ್ಯ ನಡೆಸುವ ಜನರೂ ಇದ್ದಾರೆ.

ಇದಕ್ಕೆಲ್ಲ ಏನು ಪರಿಹಾರ? ಗೊತ್ತಿಲ್ಲ. ಅಂಥದನ್ನು ಕೊಡುವ ಉದ್ದೇಶವೂ ಕಾದಂಬರಿಗಿಲ್ಲ. ಅಲ್ಲದೇ, ಇದೆಲ್ಲವೂ ಒಂದು ಡಾರ್ಕ್ ಕಾಮೆಡಿ ಎಂಬಂತೆ ಭಾಸವಾಗುತ್ತದೆ ಪಾಮುಕ್‍ನ ಶೈಲಿಯ ದೆಸೆಯಿಂದ. ಪ್ರೀತಿ, ಧರ್ಮ, ಪರಂಪರೆ, ಆಧುನಿಕತೆ; ಇವೆಲ್ಲವುಗಳ ಸಲುವಾಗಿನ ಬಡಿದಾಟಗಳು; ಎಲ್ಲವೂ ಫ಼ಾರ್ಸ್ ಎನ್ನಿಸುತ್ತದೆ.

ಪಾಮುಕ್‍ನ ಕಾದಂಬರಿಗಳಲ್ಲಿ ಸಮಯ ಅದರದೇ ವಿಶಿಷ್ಟ ಗತಿಯಲ್ಲಿ ತೆವಳುತ್ತದೆ. ಇನ್ನು ಇಪ್ಪತ್ತು ನಿಮಿಷಗಳಲ್ಲಿ ಪ್ರೇಯಸಿಯನ್ನು ಭೆಟ್ಟಿಯಾಗಬೇಕು ಎಂದು ಹೊರಟಾಗಲೂ, ಇದ್ದಕ್ಕಿದ್ದಂತೆ ಕವಿತೆಯ ಹಕ್ಕಿಯೊಂದು ಹಾರಿ ಬಂದು ಮನಸ್ಸಿನಲ್ಲಿ ಸೇರಿಕೊಳ್ಳುತ್ತದೆ. ಹಿಂಬಾಲಿಸುತ್ತಿರುವ ಗೂಢಚಾರನಿದ್ದಾಗಲೂ, ಅಲ್ಲಿಯೇ ಪಕ್ಕದಲ್ಲಿ ಸಿಗುವ ಚಹಾದಂಗಡಿಯೊಳಗೆ ನುಗ್ಗಿ, ಹಸಿರು ಬಣ್ಣದ ಡೈರಿ ತೆಗೆದು, ಪದ್ಯವೊಂದನ್ನು ಬರೆಯುವಷ್ಟು ಪುರುಸೊತ್ತಿರುತ್ತದೆ. ಈ ಸಮಯದ ಅಂದಾಜು ನಮಗೆ ಸಿಗುವುದೇ ಇಲ್ಲ. ಪ್ರತಿ ಬಾರಿಗೂ ಹೊಸದೆನ್ನಿಸುತ್ತದೆ. ಕೊನೆಗೆ ಸೋಜಿಗವೇ ಸ್ಥಾಯಿಯಾಗುತ್ತದೆ.

3 thoughts on “ಕಾರ್

 1. ಚಕೋರ, ನೀವು ಹೇಳುವ ಪಾಮುಕ್ ಒರ್ಹಾನ್ ಪಾಮುಕ್ ಅಲ್ಲವೆ?
  ನಾನು ಈತನ ಬಗ್ಗೆ ಬಹಳ ಕೇಳಿದ್ದೆ. ಬಹಳಷ್ಟು ಆತನ ಕಥೆಗಳ ಕಾಂಟ್ರಾವರ್ಸಿಗಳ ಬಗ್ಗೆ. ಪರಿಚಯಕ್ಕಾಗಿ ಧನ್ಯವಾದ. ಬರಹದಲ್ಲಿ ಎಲ್ಲೊ ನೀವು ಯಾವದೊ ಕೊಂಡಿ ಮಿಸ್ ಮಾಡಿರುವ ಹಾಗಿದೆ. ಕೆಳಗಿನ ನಾನು quote ಮಾಡಿರುವ ಪ್ಯಾರಾಗಳ ನಡುವೆ ಇವೆರಡೂ ನಡೆಯುವ ಕಾಲದ ಕಂಟಿನ್ಯುಯಿಟಿಯ ಬಗ್ಗೆ ಗೊಂದಲ ಹುಟ್ಟುತ್ತೆ. ನಾನು ಪುನಹ ಪುನಹ ಓದಿದ ಮೇಲೆ ಮೇಲಿನ ಪ್ಯಾರಾಗ್ರಾಫ್ ಅನ್ನ ಬರಹದ ಕೊನೆಯ ಭಾಗಕ್ಕೆ ಪ್ಲೇಸ್ ಮಾಡಿದರೆ ಸರಿಹೋಗಬಹುದು ಎನ್ನಿಸಿತು :-

  “ಇಷ್ಟೆಲ್ಲ ಆಗಿ, ಕೊನೆಗೆ ಉಳಿದದ್ದು ಏನೂ ಇಲ್ಲ. ಅವನು ಕವಿತೆಗಳನ್ನು ಬರೆಯುತ್ತಿದ್ದ ಆ ಹಸಿರು ಡೈರಿ ಕಾಣೆಯಾಗಿದೆ. ಬಹುತೇಕ ಫ಼್ರ್ಯಾಂಕ್‍ಫರ್ಟ್ನಲ್ಲಿ ಕಾನನ್ನು ಗುಂಡು ಹೊಡೆದು ಕೊಂದ ಮನುಷ್ಯನೇ ಅದನ್ನೂ ತೆಗೆದುಕೊಂಡು ಹೋಗಿದ್ದಾನೇನೋ!

  ಜರ್ಮನಿಯಿಂದ ೧೨ ವರ್ಷದ ನಂತರ ತನ್ನ ತಾಯಿಯ ಅಂತ್ಯಕ್ರಿಯೆಯ ಸಲುವಾಗಿ ಕಾ ಇಸ್ತಾನ್‍ಬುಲ್‍ಗೆ ಬಂದಿದ್ದಾನೆ. ತನ್ನ ಗೆಳೆಯನ ಸಲಹೆಯ ಮೇರೆಗೆ ಕಾರ್ಸ್ ಎಂಬ ನಗರಕ್ಕೆ ಬರುತ್ತಾನೆ.”

  Anyway, you are the person to correct me if i’m wrong!!

  -ಟೀನಾ

 2. ಕಾದಂಬರಿಯ ಸಾರಾಂಶ ಓದುತ್ತ ಹೋದಂತೆ, ಇದು ಅದ್ಭುತವಾದ ಕಾದಂಬರಿ ಎನಿಸಿತು. ತುರ್ಕಸ್ಥಾನದ ಕ್ರಾಂತಿಯ ಬಗೆಗೆ ಕೇವಲ ಇತಿಹಾಸದಲ್ಲಿ ಓದಿದ ನನಗೆ, ಅದರ ಮತ್ತೊಂದು ಮುಖವನ್ನು ಕಂಡಂತಾಯಿತು. And that is the job of literature, ಅಲ್ವೇ?

 3. ಟೀನಾ:
  ಹೌದು, ಒರ್ಹಾನ್ ಪಾಮುಕ್.
  ನೀವು ಕ್ವೋಟ್ ಮಾಡಿದ ಪ್ಯಾರಾಗಳ ನಡುವೆ ಕೊಂಡಿ ಮಿಸ್ ಆದಂತೆ ಅನ್ನಿಸೋದಿಲ್ಲ. ಮೊದಲನೆಯದರಲ್ಲಿ ಹಿಮದ ಬಗ್ಗೆ ಮಾತಾಡುತ್ತ, ಹಾಗೆಯೇ ಸ್ನೋಫ್ಲೇಕ್‍ಗಳ symmetryಯನ್ನು ತನ್ನ ಪದ್ಯಗಳಲ್ಲಿ ಕಾ ಕಂಡುಕೊಂಡದ್ದರ ಬಗ್ಗೆ ಹೇಳುತ್ತಿದ್ದೆ. ಅದನ್ನೇ ಮುಂದುವರಿಸಿ, ಕೊನೆಗೆ ಆ ಪದ್ಯಗಳಿಗೆ ದೊರಕಿದ ಗತಿಯನ್ನು ಹೇಳಿ ಮುಗಿಸಿದೆ.

  ಮುಂದಿನ ಪ್ಯಾರಾದಲ್ಲಿ ಕಾದಂಬರಿಯ ಶುರುವಾತಿದೆ. ಬೇಕಿದ್ದಲ್ಲಿ, ಇದರ ಹಿಂದಿನದಕ್ಕೂ ಇದಕ್ಕೂ ಮಧ್ಯದಲ್ಲಿ ಒಂದಷ್ಟು ’***’ ಹಾಕಬಹುದಿತ್ತೇನೊ.

  ಸುನಾಥ:
  ಹೌದು. ಸಾಹಿತ್ಯದ ಸಾಧ್ಯತೆಗಳು ಬಹಳ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s