ಗೋಕಾಂವಿ ನಾಡಿನಲ್ಲಿ ಒಂದು ಸುತ್ತು

ನಮ್ಮ ಗೋಕಾಂವಿ ನಾಡು ರಣರಣ ಬಿಸಿಲಿನ ಪ್ರದೇಶ. ವೈಶಾಖದಲ್ಲಿ ನೀವು ಯಾವಾಗರೆ ಅಕಸ್ಮಾತ್ ಹಾದಿ ತಪ್ಪಿ ಬಂದು ಗೋಕಾಂವಿ ಸ್ಟ್ಯಾಂಡಿನಲ್ಲಿ ಇಳದ್ರಿ ಅಂದ್ರ, ಸ್ಟ್ಯಾಂಡಿನ ಹಿಂಭಾಗದ ಗುಡ್ಡವಂತೂ ನಿಮ್ಮ ಗಮನಕ್ಕೆ ಬರುವ ಮೊದಲನೆಯ ವಿಸ್ಮಯ. ಬೃಹತ್ ಬಂಡೆಗಳು ಯಾವುದೇ ಆಧಾರವೇ ಇಲ್ಲ ಎಂಬಂತೆ; ಉರುಳಲು ತಯಾರಾಗಿ ನಿಂತಂತೆ, ತೋರುತ್ತವೆ. ಬಿಸಿಲಿಗೆ ಮಿರಮಿರನೆ ಮಿಂಚುತ್ತಿರುತ್ತವೆ. ಪ್ರತಿ ಸಲ ಗೋಕಾಂವಿ ಸ್ಟ್ಯಾಂಡಿನಲ್ಲಿ ಇಳಿದಾಗಲೂ ಅಂದುಕೊಳ್ಳುತ್ತೇನೆ, ’ಅಲ್ಲ, ಇಂಥಾ ಈ ಒಂದು ಬಂಡೆಗಲ್ಲು ಉರುಳಿ ಕೆಳಗ ಬಂತಂದರ ಏನಾದೀತು? ಸ್ಟ್ಯಾಂಡ್ ಅಂತೂ ಹಕನಾತ ಜಜ್ಜಿ ಹೋದೀತು.’ ಹಂಗ ಸ್ವಲ್ಪ ಮ್ಯಾಲೆ ನೋಡಿದರ ಸುಣ್ಣ ಹಚ್ಚಿದ ಒಂದು ಸಣ್ಣ ಆಕಾರ ಕಾಣತದ. ಅದು ಮಲಿಕಸಾಬನ ಗುಡಿ ಅಥವಾ ದರ್ಗಾ. ನಾವು ಸಣ್ಣವರಿದ್ದಾಗ ಮಲಿಕಸಾಬನ ಗುಡಿಯೇ ಜಗತ್ತಿನ ಅತ್ಯಂತ ಎತ್ತರದ ಸ್ಥಾನವಾಗಿತ್ತು. ಒಮ್ಮೆ ಗುಡ್ಡಾ ಹತ್ತಿ ಅಲ್ಲಿ ಮಟಾ ಹೋಗಿ ಬರಬೇಕು ಅಂತ ರಗಡು ಸಲ ಅಂದುಕೊಂಡರೂ ಯಾಕೋ ಯಾವತ್ತೂ ಹೋಗಿಲ್ಲ. ಮಲಿಕಸಾಬನ ಗುಡ್ಡದ ಬಂಡೆಗಳು ಸದಾಕಾಲ ಮಳೆಗಾಗಿ ಕಾಯುತ್ತ ಕುಂತಲ್ಲೆ ಕೂತು ತಪಸ್ಸು ನಡೆಸುತ್ತಿರುವಂತೆಯೇ ನಮ್ಮ ಬೆಳವಲದ ಮಂದಿಯ ಬೇಗುದಿಯನ್ನು ಇನ್ನೂ ಹೆಚ್ಚಿಸುತ್ತಿರುತ್ತವೆ.

ಗುಡ್ಡ ನೋಡುತ್ತಿದ್ದಂತೆ ನಾನು ಜೀವನದಲ್ಲಿ, ಸರ್ವತಂತ್ರ ಸ್ವತಂತ್ರವಾಗಿ, ಬರೆದೆಸೆದ ಮೊತ್ತಮೊದಲ ಪದ್ಯ ನೆನಪಾಗುತ್ತದೆ. ಅದರ ಹೆಸರು ’ಗೋಕಾಂವಿಯ ಬಿಸಿಲು’. (ಅದರ ಜೊತೆಗೇ ಬರೆದ ಇನ್ನೊಂದು ಪದ್ಯ ’ಮಡಿಕೇರಿಯ ಮಳೆ’). ಇದು ನಾನು ಮಡಿಕೇರಿಯಲ್ಲಿ ಎಂಟನೇತ್ತೆ ಇದ್ದ ಕಾಲದಲ್ಲಿ. ಆ ಪದ್ಯದ ಮೊದಲ ಸಾಲುಗಳು ಕೆಳಕಂಡಂತೆ ಇದ್ದುವೆಂದು ನೆನಪು.

ಏನ ಹೇಳ್ಲಿ ಗೋಕಾಂವಿಯ ಬಿಸಿಲ
ದಾಟಂಗಿಲ್ಲ ಮನೀ ಹೊಸಲ
ಮುಂಜಾನಿಂದ ಸಂಜೀ ತನಕ ಇರತದ
ಹೊರಗ ಓಡ್ಯಾಡವರನ್ನ ಗೋಳಾಡಿಸ್ತದ.

ಇದೇ ರೀತಿ ತ್ರಾಸಿನ ಪ್ರಾಸಗಳನ್ನು ಚೆಲ್ಲುತ್ತ ಮುಂದುವರಿದ ಪದ್ಯದ ಕಡೀ ಸಾಲುಗಳು ಹಿಂಗ ಇದ್ದೂ.

ದಣಿಯೂದಿಲ್ಲ ಸೂರ್ಯಾ ಸಂಜೀತನಕಾ
ಮುಳುಗೂದಿಲ್ಲ ಅಂವ ಮಂದಿ ಮಣಿಯೂತನಕಾ

ಗುಡ್ದ ನೋಡಿ ಕಣ್ಣು ದಣಿದು ದಿಟ್ಟಿ ಕೆಳಗಿಳಿಸಿದರೆ ಗೋಕಾಕದ ಲೋಕಪ್ರಸಿದ್ಧ – ಅಲ್ಲ, ಕರದಂಟಲ್ಲ, ಕರದಂಟು ನಂತರ ಬರುತ್ತದೆ – ’ಅಲೇsಪಾಕ್’ನ ಆವಾಜು ಎಲ್ಲೆಲ್ಲೂ ಮೊಳಗುತ್ತಿರುತ್ತದೆ. ’ಅಲೇಪಾಕ್. ಕೆಮ್ಮಾ ಹುಗುಳಾ ನೆಗಡಿ… ಅಲೇಪಾಕ್’ ಎಂಬ ಮಂತ್ರ ಪುನರಾವರ್ತನೆಗೊಳ್ಳುತ್ತ ಇಡೀ ಸ್ಟ್ಯಾಂಡೇ ’ಅಲೇಪಾಕ್ ಕ್ರಾಂತಿ’ಯ ಹುಮ್ಮಸ್ಸಿನಲ್ಲಿರುತ್ತದೆ. ಅಲೇsಪಾಕ್ ಮಾರುವವರು ಒದರುತ್ತಿರುವಂತೆ ಅದೊಂದು ಔಷಧೀಯ ಗುಣವುಳ್ಳ ತಿನಿಸು. ಶುಂಠಿ, ಬೆಲ್ಲ (ಮತ್ತೆ ಬಹುಶ: ಜಾಜೀ ಕಾಯಿ, ತುಳಸಿ) ಇತ್ಯಾದಿ ಹಾಕಿ ಕೊತಕೊತನೆ ಕುದಿಸಿ, ನಂತರ ಕೊಬ್ಬರಿ ವಡೆಯ ಆಕಾರ ಮತ್ತು ಗಾತ್ರದಲ್ಲಿ ಕತ್ತರಿಸಿ, ಪರಾತಗಳಲ್ಲಿ ಜೋಡಿಸಿ, ಮೇಲೊಂದು ’ಗೋಕಾಕ ಟಾಯಿಂಸ’ದ ಹಾಳೆಯನ್ನು ಮುಚ್ಚಿ – ನೊಣಗಳ ರೋಗಗಳೂ ಗುಣವಾಗಲು ಅನುವಾಗುವಂತೆ ಸ್ವಲ್ಪವೇ ಬಿರುಕಿರುತ್ತದೆ – ಹತ್ತಾರು ಮಂದಿ ಗದ್ದಲವೆಬ್ಬಿಸಿರುತ್ತಾರೆ. ಬಸ್ಸು ಹೊರಡುವವರೆಗೆ ಒಳಗೂ ಹೊರಗೂ ಈ ಧಂದೆ ನಡೆಯುತ್ತಿರುತ್ತದೆ. ಒಂದು ವಿಷಯವನ್ನು ನೀವು ಗಮನಿಸದೆ ಇರಲಾರಿರಿ: ಆ ಅಲೇಪಾಕ್ ಮಾರುವ ಪ್ರತಿಯೊಬ್ಬನ ದನಿಯೂ ಸತತ ಒದರುವುದರಿಂದಲೋ, ರೂಢಿಗತವಾಗಿಯೋ, ಗೊಗ್ಗಾರಾಗಿರುತ್ತದೆ; ’ದೋಸ್ತ, ಎಲ್ಲಾರಗಿಂತ ಮೊದಲು ನೀನ ಒಂದು ಅಲೀಪಾಕ ಯಾಕ ತಿನ್ನಬಾರದು?’ ಎಂದು ಕೇಳಬೇಕೆನ್ನಿಸುತ್ತದೆ ನಿಮಗೆ.

ಅಲೀಪಾಕ ತಿಂದು ಗಂಟಲು ನೆಟ್ಟಗೆ ಮಾಡಿಕೊಂಡಿರೋ? ಸರಿ, ಮುಂದೆ ಕರದಂಟು ಬೇಕೆಂದರೆ ಅಲ್ಲಿಂದ ಹೊರಬೀಳಬೇಕು. ಹೊರಬಿದ್ದು ಬಲಕ್ಕೆ ಹೋದರೆ ಅಲ್ಲಿ ಯರಗಟ್ಟಿ, ಮಮದಾಪುರ, ಕೌಜಲಗಿ, ಬೆಟಗೇರಿ… ಹೀಗೆ ನಾನಾ ಪ್ರದೇಶಗಳಿಗೆ ಹೋಗುವ ಜೀಪುಗಳೂ, ’ಲಗ್ಝರಿ’ಗಳೂ ’ಡರ್ ಡರ್’ ಎನ್ನುತ್ತ ನಿಂತಿರುತ್ತವೆ. ಎಡಕ್ಕೆ ಹೋದರೆ ಅಲ್ಲಿ ನಿಮಗೆ ದುರದುಂಡೀಶ್ವರ ಹಾಗೂ ಸದಾನಂದರು ಸಿಗುತ್ತಾರೆ. ಕರದಂಟು, ಲಡ್ಡಿಕಿ ಉಂಡಿಗಳ ಖರೀದಿಯ ನಂತರ ಅದೇ ರಸ್ತೆಯಲ್ಲಿ ಮುಂದರಿದರೆ ಗೋಕಾಂವಿಯ ಪ್ಯಾಟಿ ಶುರುವಾಗುತ್ತದೆ. ಭರ್ರನೆ ಬರುವ ಟೂ-ವ್ಹೀಲರಗಳು, ಸೈಕಲ್ಲುಗಳು, (ಹಾಗೆಯೇ ನಾಕು ಕಾಲಿನ, ವಿಷ್ಣುವಿನ ಅವತಾರಗಳಲ್ಲೊಂದಾದ, ’ಅರ್ಧ ಸೊಂಡಿಯ ಆನೆ’ಗಳು), ಹಾಗೂ ತಂಬಾಕಿನ ಬಾಣಗಳಿಂದ ತಪ್ಪಿಸಿಕೊಳ್ಳುತ್ತ ಪೇಟೆಯಲ್ಲಿ ಓಡಾಡಬೇಕು. ಅದೇನು ಅಂಥ ವಿಶೇಷ ಪೇಟೆಯಲ್ಲವಾದರೂ ಗೋಕಾಂವಿ ನಾಡಿನ ಮಂದಿಗೆ ಮುಂಬೈದ ನಂತರ ಗೋಕಾಂವಿಯೇ ಸೈ ಎಂದು ನಂಬಿದ್ದಾರೆ. ರೆಡಿಮೇಡ ಅರಿವೆಗಳ ಅಂಗಡಿಗಳನ್ನೂ, ಬಾಗವಾನರ ಕಾಯಿಪಲ್ಲೇದ ಮಂದಿಯನ್ನೂ, ಪತ್ತಾರರನ್ನೂ, ತಂಬಾಕು, ರಸಗೊಬ್ಬರದವರನ್ನೂ, ಸಿಂಪಿಗ್ಯಾರನ್ನೂ ದಾಟಿ ಹಾಗೆಯೇ ಮುಂದುವರಿದು, ಪ್ಯಾಟಿಯ ಗದ್ದಲವನ್ನು ದಾಟಿದರೆ – ಆಶ್ಚರ್ಯಕರವಾಗಿ – ಹೊಳೀದಂಡಿಗೆ ಬಂದಿರುತ್ತೀರಿ.

ಗೋಕಾಕದಲ್ಲಿ ಹೊಳಿ ಇದೆ (ಒಂದಲ್ಲ ಎರಡು!) ಎಂದು ನನಗೆ ಬಹಳ ದಿನ ಗೊತ್ತೇ ಇರಲಿಲ್ಲ! ನಮ್ಮ ಸೋದರತ್ತೆಯ ಮಗ ’ಹೊಳೀದಂಡಿಯ ಸಾಲಿ’ಗೆ ಹೋಗುತ್ತಿದ್ದುದು ಗೊತ್ತಿದ್ದರೂ ಹೊಳಿಯೆಂಬೋ ಹೊಳಿಯ ಕಲ್ಪನೆ ಮನಸ್ಸಿನಲ್ಲಿ ಮೂಡುತ್ತಲೇ ಇರಲಿಲ್ಲ. ಮುಂದೊಂದು ದಿನ, ’ಇದs ನೋಡು ಹೊಳಿ’, ಎಂದು ಯಾರೋ ತೋರಿಸಿದಾಗ ನಾನು, ’ಹೋಗ್ಯಾ..,’ ಎಂದು ಅಪನಂಬಿಕೆ ವ್ಯಕ್ತಪಡಿಸಿದ್ದೆ. ಬಹಳ ಮಾಡಿ, ಹೊಳಿ ಇರುವ ಪ್ರದೇಶವೆಂದರೆ ನಾನಾ ನಮೂನೆಯ ಹಣ್ಣುಗಳು ಕೈಗೆಟಕುವಂತೆ ತೊನೆದಾಡುತ್ತಿರುವ ಗಿಡಗಳುಳ್ಳ, ಎಲ್ಲೆಲ್ಲೂ ಆಹ್ಲಾದಕರ ನೆರಳಿರುವ, (ದೇವಸ್ತ್ರೀಯರು ಸಂಗೀತ ನೃತ್ಯಗಳಲ್ಲಿ ತೊಡಗಿರುವ), ಗುಡ್ಡದಿಂದ ಸೂರ್ಯ ಉದಯಿಸಲು ಸಜ್ಜಾಗುತ್ತಿದ್ದಂತೆ ಭಟಿಯಾರ, ಉದಯಿಸುತ್ತಿದ್ದಂತೆ ಅಹಿರ ಭೈರವ, ಲಲಿತಗಳು ಸೂರ್ಯನ ಜೊತೆಗೇ ಗುಡ್ಡದ ಹಿಂದಿಂದ ಉದಯಿಸಿ ಇಡೀ ಜಗತ್ತಿಗೇ ಪಸರಿಸುವ, ಒಟ್ಟಾರೆ ನಮ್ಮ ಗೋಕಾಂವಿ ನಾಡಿನಿಂದ ಬಹಳ ದೂರದಲ್ಲಿರುವ ನಾಡು ಎಂಬ ಭಾವನೆಯಿತ್ತೇನೊ.

ಗೋಕಾಂವಿಯಲ್ಲಿ ಎರಡು ಹೊಳೆಗಳಿವೆ. ಒಂದು ಊರಲ್ಲೇ ಇದ್ದರೂ ಎದ್ದು ಕಾಣದ ಘಟಪ್ರಭೆ. ಘಟಪ್ರಭೆಯಲ್ಲಿ ಸಾಕಷ್ಟು ನೀರು ನೋಡಿದ್ದೇನೆ ನಾನು. ಇನ್ನೊಂದು ಘಟಪ್ರಭೆಯ ಉಪನದಿಯಾದ ಮಾರ್ಕಂಡೇಯ. ಕೋರ್ಟ ಸರ್ಕಲ್ಲಿನ ಮೇಲೆ ಹಾದು, ’ನ್ಯೂ ಇಂಗ್ಲಿಶ್ ಕನ್ನಡ ಮಾಧ್ಯಮ ಶಾಲೆ’, ’ಜೆ ಎಸ್ ಎಸ್ ಕಾಲೇಜು’, ’ಎಲ್ ಐ ಸಿ’ ಅಫೀಸು, ಹಾಗೂ ಗೋಕಾಕದ ಇನ್ನೊಂದು ಮುಖ್ಯ ಅದ್ಭುತ ’ಗೋಕಾಕ ರೆಸಾರ್ಟ್ಸ’ಗಳನ್ನು ದಾಟಿದರೆ ಒಂದು ಸಣ್ಣ ಪೂಲು ಬರುತ್ತದೆ. ಆ ಪೂಲು ಹೊಳಿಯ ಮೇಲೆ ಕಟ್ಟಿದ್ದು ಎಂದು ಗೊತ್ತಾಗುವುದು ಸ್ವಲ್ಪ ಕಷ್ಟವೇ: ಬಹಳ ಸಲ ಮಾರ್ಕಂಡೇಯ ಅಲ್ಲಿ ಇರುವುದೇ ಇಲ್ಲ; ಇದ್ದರೂ ಅಲ್ಲಷ್ಟು ಇಲ್ಲಷ್ಟು ಸಣ್ಣ ತೆಗ್ಗುಗಳಲ್ಲಿ ನೀರು ನಿಂತು, ಟ್ರ್ಯಾಕ್ಟರುಗಳ ಮೈತೊಳೆಯಲು ಅನುಕೂಲವಾಗಿರುತ್ತದಷ್ಟೆ. ಮಾರ್ಕಂಡೇಯ ಮೈದುಂಬಿ ಹರಿದದ್ದನ್ನು ನಾನು ನೋಡಿದ್ದೇ ಬಹಳ ಕಡಿಮೆ.

ಅದೇ ರಸ್ತೆಯಲ್ಲಿ ಮುಂದೆ ಒಂದೆರಡು ಕಿಲೋಮೀಟರ್ ಹೋದರೆ ಘಟ್ಟ ಶುರುವಾಗುತ್ತದೆ. ಘಟ್ಟದಾಚೆಗೆ ಘಟಪ್ರಭೆ ಧುಮುಕುತ್ತಿರುತ್ತಾಳೆ, ಮಳೆಗಾಲದಲ್ಲಿ ಹಾಗೂ/ಅಥವಾ ಹಿಡಕಲ್ ಡ್ಯಾಮಿನಿಂದ (ರವಿವಾರಕ್ಕೊಮ್ಮೆ) ನೀರು ಬಿಟ್ಟಾಗ. ಗೋಕಾಕ ಫಾಲ್ಸನ್ನು ಮುಟ್ಟುವ ಮೊದಲು ಕಾಣುವ ಸುಂದರ ಕೊಲೋನಿಯಲ್ ಕಟ್ಟಡಗಳು ನಿಮ್ಮಲ್ಲಿ ಸೋಜಿಗವನ್ನುಂಟುಮಾಡದೇ ಇರಲಾರವು. ಸುಮಾರು ೧೨೦ ವರ್ಷದ ಹಿಂದೆ ಕಟ್ಟಿದ ಗೋಕಾಕ ಮಿಲ್ಸ್ ಒಂದು ಉದಾಹರಣೆ. ಫಾಲ್ಸಿಗೆ ಹೊಂದಿಕೊಂಡಿರುವ ಚಾಲುಕ್ಯ ಶೈಲಿಯ ಶಿವನ ಗುಡಿ ಅಲ್ಲಿನ ಇನ್ನೊಂದು ಆಕರ್ಷಣೆ. ಅಲ್ಲದೇ ಉಚ್ಚಪಾರ ಕಟ್ಟಿರುವ ಹ್ಯಾಂಗಿಂಗ್ ಬ್ರಿಡ್ಜ್. ಬ್ರಿಡ್ಜದ ಆಚೆ ಹಳ್ಳಿಯೊಂದಿದೆ. ಅಲ್ಲಿ ಇನ್ನೊಂದು ಹಳೆಯ ಗುಡಿಯಿದೆ. ಘಟಪ್ರಭೆ ಉಕ್ಕಿ ಹರಿಯುವಾಗಲೂ ಅಲ್ಲಿನ ದೇಸಾಯಿ ತನ್ನ ಕುದುರೆಯ ಮೇಲೆ ನಾಗಾಲೋಟದಿಂದ ಸೇತುವೆಯನ್ನು ದಾಟುತ್ತಿದ್ದನೆಂದು ಪ್ರತೀತಿಯಿದೆ. ಈಹೊತ್ತು ಕುದುರೆಗಳೇನೂ ಇಲ್ಲ, ಆದರೆ ಸಾಕಷ್ಟು ಜನರು ಟಿವ್ಹಿಎಸ್, ಲೂನಾ ಹಾಗೂ ಸೈಕಲ್ಲುಗಳ ಮೇಲೆ ಆಕಡೆಯಿಂದ ಈಕಡೆ ಹೋಗಿಬಂದು, ಮೊದಲೇ ಓಲಾಡುತ್ತಿರುವ ಸೇತುವೆಯ ಮೇಲಿನ ಪ್ರವಾಸಿಗಳಿಗೆ ಇನ್ನಷ್ಟು ಭಯವುಂಟುಮಾಡುತ್ತಾರೆ.

ನನ್ನ ಪ್ರಕಾರ ಗೋಕಾಂವಿ ನಾಡಿನ ನಿಜವಾದ ಅದ್ಭುತ ಗೊಡಚಿನಮಲಿಕಿ ಫಾಲ್ಸ್. ಇತ್ತೀಚಿನ ದಿನಗಳಲ್ಲಿ ಇದು ಪ್ರಸಿದ್ಧಿಗೆ ಬರುತ್ತಿದೆ. ಅದ್ಯಾಕೋ ಏನೋ ನಾನು ಸಣ್ಣವನಿದ್ದಾಗ ಯಾರೂ ನನ್ನನ್ನು ಅಲ್ಲಿ ಕರೆದುಕೊಂಡೇ ಹೋಗಿರಲಿಲ್ಲ. ಬಹಳ ಮಾಡಿ, ಸಂಪರ್ಕದ ಅನನುಕೂಲತೆಯಿಂದ. ಗೋಕಾಕ ಫಾಲ್ಸದಿಂದ ಸುಮಾರು ೧೫ ಕಿಲೋಮೀಟರ್ ದೂರದಲ್ಲಿ ಮಾರ್ಕಂಡೇಯ ನದಿ ಗೊಡಚಿನಮಲಿಕಿಯಾಗಿ ಧಬಧಬಿಸುತ್ತದೆ. ಫಾಲ್ಸಿಗೆ (ಅಂದರೆ ಗೋಕಾಕ್ ಫಾಲ್ಸಿಗೆ) ಹೋಲಿಸಿದರೆ ಇದು ಸಣ್ಣ ಧಬಧಬೆ. ಆದರೆ ರಮಣೀಯವಾದಂಥದ್ದು. ಅಲ್ಲದೇ ಇದನ್ನು ತೀರಾ ಹತ್ತಿರದಿಂದ ನೋಡಬಹುದು. ಮೆಟ್ಟಿಲಿನಿಂದ ಮೆಟ್ಟಿಲಿಗೆ ಧುಮುಕುತ್ತ ಬರುವ ಪ್ರವಾಹ. ’ಓಹೋ, ಇನ್ನೇನು ನೆಲಕ್ಕಚ್ಚಿತು,’ ಎಂದುಕೊಳ್ಳುವಷ್ಟರಲ್ಲೇ ಬಂಡೆಯ ಮತ್ತೊಂದು ಪದರ ಅಡ್ಡ ಬರುತ್ತದೆ. ಕೊನೆಗೆ ಮೆಟ್ಟಿಲುಗಳೆಲ್ಲ ಮುಗಿದು, ಕೆಂಪನೆಯ ನೀರು ಧಾವಿಸಿಕೊಂಡು ಕೆಳಗಪ್ಪಳಿಸಿ ಬಿಳಿಯಾಗುತ್ತದೆ. ಇನ್ನೊಂದು ವಿಶೇಷವೆಂದರೆ, ಬಂಡೆಗಳ ಈ ಪದರಗಳು ಉದ್ದಕ್ಕೂ ಒಂದು ದಂಡೆಯಿಂದ ಇನ್ನೊಂದು ದಂಡೆಯವರೆಗೂ ಇರದೆ, ಅಲ್ಲಲ್ಲಿ ಒಂದು ಪದರ ಮುಗಿದು, ಮುಂದೆ ಸ್ವಲ್ಪ ದೂರದಲ್ಲಿ ಇನ್ನೊಂದು ಶುರುವಾಗುತ್ತವೆ. ಹೀಗಾಗಿ, ಅಲ್ಲಿರುವುದು ಒಂದು ಧಬಧಬೆಯಲ್ಲ, ಅನೇಕ ಸಣ್ಣಸಣ್ಣವು ಕೂಡಿ ಬರುತ್ತಿವೆ ಎಂದು ಭಾಸವಾಗುತ್ತದೆ. ನೀರಿನ ಹೊಸ ಪ್ರವಾಹ ಈಗ ನೇರವಾಗಿ ಕೆಳಗೆ ಬೀಳುತ್ತದೋ ಅಥವಾ ಇನ್ನೂ ಒಂದು ಮೆಟ್ಟಿಲಿದೆಯೋ ಎಂದು ಊಹಿಸುವುದೇ ಒಂದು ಸೋಜಿಗದ ಆಟದ ರೂಪ ತಾಳುತ್ತದೆ.

ಅಲ್ಲಿಂದ ಮರಳಿ ಫಾಲ್ಸಿಗೆ ಬಂದಿರೆಂದರೆ ಫಾಲ್ಸಿನ ಖಾನಾವಳಿಗಳಲ್ಲಿ ಮಸ್ತ ಪೈಕಿ ಗಿರ್ಮಿಟ್ಟನ್ನೂ, ಸೀಸನ್ನಿನಲ್ಲಿ ಶೀತೆನಿಯನ್ನೂ ತಿಂದು, ಕೇಟೀಯನ್ನು ಕುಡಿದು ಗೋಕಾಕಕ್ಕೆ ಮರಳಿ ಬನ್ನಿ. ಮನಸ್ಸಿದ್ದರೆ ಸ್ವಲ್ಪ ಹೊತ್ತು ಸಂಜೆಯ ಪ್ಯಾಟಿಯಲ್ಲಿ ಸುತ್ತಬಹುದು. ಎದುರಿಗೆ ನಿಮ್ಮ ಗುರ್ತಿನವರು ಯಾರಾದರೂ ಸಿಕ್ಕು, ’ಏನಪಾ, ಏನ್ ನಡಶೀ?’ ಎಂದರೆ, ’ಏನಿಲ್ಲಪಾ, ಹಿಂಗs ಟಾಯಂಪಾಸಾ..,’ ಎಂದು ಹೇಳಿ ಮುನ್ನಡೆಯಬಹುದು. ರವಿವಾರ ಪೇಟದಲ್ಲಿ ಸುತ್ತಿ, ಅಲ್ಲಿಂದ ಛಾಯಾ ಹೊಟೇಲಿಗೆ ಬಂದು ದ್ವಾಸೀ ತಿನ್ನಬಹುದು. ಎದುರಿಗಿನ ಕಲಬುರ್ಗಿಯಲ್ಲಿ ಐಸ್ಕ್ರೀಮ್ ತಿನ್ನಬಹುದು. (ಇತ್ತೀಚೆಗೆ ಗೋಕಾಂವಿಯಲ್ಲಿ ನಾರ್ತ ಭಾರತ ಹೊಟೇಲುಗಳೂ ಆಗಿವೆ, ಆದರೆ ಅವು ಅಷ್ಟು ’ಕೆಲಸ ಆಗೂದಿಲ್ಲ’.) ಲಕ್ಷ್ಮಿ ಟಾಕೀಜಿನಲ್ಲಿ ಹೊಚ್ಚ ಹೊಸ ಪಿಚ್ಚರ್ ನೋಡಬಹುದು. ಬ್ಯಾಡಾದಲ್ಲಿ, ಎತ್ತರ ಗೋಡೆಯಿರುವ, ಗೋಡೆಯ ಮೇಲೆ ಗ್ಲಾಸಿನ ತುಣುಕುಗಳನ್ನು ಶಿಗಿಸಿರುವ, ಜೈಲನ್ನು ದಾಟಿ ಎಕ್ಸ್‍ಟೆನ್ಶನ್ನಿನಲ್ಲಿ ವಾಕಿಂಗಕ್ಕೆ ಹೋಗಬಹುದು. ಸೆಕೆ ಸ್ವಲ್ಪ ಕಡಿಮೆಯಾಗಿರುತ್ತದೆ. ಈ ಎಕ್ಸಟೆನ್ಶನ್ನುಗಳಾಗಿ ಹತ್ತಾರು ವರ್ಷಗಳಾಗಿವೆ. ಊರಿನ ಅರ್ಧ ಮಂದಿ ಈಕಡೆಯೇ ಇದ್ದಾರೇನೋ. ಆದರೂ ಇದು ಇನ್ನೂ ಗೋಕಾಕದ ಎಕ್ಸಟೆನ್ಶನ್ನೇ. ಒಂದೋ ನಿಮ್ಮ ಮನಿ ಕಿಲ್ಲಾದಾಗ ಅದ, ಇಲ್ಲಾ ಎಕ್ಸಟೆನ್ಶನ್ನದಾಗ ಅದ. ಎಕ್ಸಟೆನ್ಶನಿನ್ನಲ್ಲಿ ವಾಕ್ ಮಾಡುತ್ತ ಹೋದಂತೆ ದೂರದಲ್ಲಿ ಇನ್ನೊಂದು ಗುಡ್ಡ ಕಾಣುತ್ತದೆ. ಮಳೆಗಾಗಿ ಕಾತರಿಸುತ್ತಿರುವ ಮತ್ತೊಂದು ಬೋಳು ಗುಡ್ಡವನ್ನು ನೋಡಿ ನಿಮ್ಮ ಬಾಯಾರಿ, ಹತ್ತಿರದ ಗಾಡಿಯಲ್ಲಿನ ಗೋಟೀಸೋಡಾದ ಮೊರೆ ಹೊಗುತ್ತೀರಿ.

4 thoughts on “ಗೋಕಾಂವಿ ನಾಡಿನಲ್ಲಿ ಒಂದು ಸುತ್ತು

 1. ಅಗದೀ ನಮ್ಮೂರ ನೆನಪು ಮಾಡಿಕೊಟ್ಟಿರಿ! ನಮ್ಮೂರು ಗೋಕಾ೦ವಿ ಅಷ್ಟು ದೊಡ್ಡದಿಲ್ಲದಿದ್ರೂ, ಅದ ಗುಡ್ಡ, ಅದ ಬಿಸಿಲು, ಅದ ಮಲಿಕ್ ಸಾಬನ ಗುಡ್ಡ/ದರ್ಗಾ (ನಂಗೊಂದ್ ಪ್ರಶ್ನ ಆದ – ಈ ಮಲಿಕ್ ಸಾಬ್ ಎಲ್ಲಾ ಕಡೆನೂ ಗುಡ್ಡದ ಮ್ಯಾಲೆ ಯಾಕ ಇದ್ದಾನ ಅಂತ), ಅದ ಅಲ್ಲೇಪಾಕ್ ಹ್ಮ್! ನಮ್ಮೂರಾಗೂ ಅಮೀನ್ ಸಾಬನ ಅಲ್ಲೇ ಪಾಕ್ ಅಂದ್ರ ಭಾಳ್ ಡಿಮ್ಯಾ೦ಡು!
  ದೊಡ್ಡ ನದಿ ಇಲ್ಲದಿದ್ರೂ, ಸಣ್ಣ ಸಣ್ಣ ಹಳ್ಳ – ಅದರಾಗ ನೀರಿಲ್ಲದಿದ್ರ ಮಂದಿ ತೊಡಿರೊ ವರ್ತಿ, ಪ್ಯಾಟಿ ವಳಗಿನ ಗಿರ್ಮಿಟ್ಟು, ಮಿರ್ಚೀ, ಬದ್ನೀಕಾಯಿ, ಹಾಫ್ ಕೇಟಿ – ಮತ್ತ ದೊಸ್ತರೊಟ್ಟಿಗಿ ಹರಟಿ!

  ನಾನು ಗೋಕಾ೦ವಿ ನೊಡಿಲ್ಲ ಅದ್ರ ಅಲ್ಲೇ ಹೋಗಿ ಬಂದಂಗ ಆತು!
  -ರಾಜೇಶ

 2. ಚಕೋರ,
  ನಮ್ಮ ಅಪ್ಪ ಗೋಕಾವಿಯೊಳಗ ನೌಕರಿ ಮಾಡೋವಾಗ, ನನ್ನ ಇಬ್ಬರು ತಮ್ಮಂದಿರು ಹಾಗೂ ತಂಗಿ ಅಲ್ಲೆ ಸಾಲಿ ಕಲತರು. ನಾನು, ನನ್ನ ಬೆನ್ನಿನ ಮ್ಯಾಲಿನ ತಮ್ಮಾ ಬ್ಯಾರೆ ಕಡೆ ಕಾಲೇಜಿನ್ಯಾಗ ಇದ್ವಿ. ಬ್ಯಾಸಗಿ ಸೂಟಿಯೊಳಗ ಗೋಕಾವಿಗೆ ಬರತಿದ್ವಿ. ಮಾರ್ಕಂಡೇಯ ಹೊಳಿ(!)ಗೆ ವಾಕಿಂಗ್ ಹೋಗತಿದ್ವಿ;
  ಮಸ್ತ enjoy ಮಾಡತಿದ್ವಿ. ಮಲಕಸಾಬನ ಗುಡ್ಡಕ್ಕ ನನ್ನ ಸಣ್ಣ (ಕಡೆ) ತಮ್ಮನ್ನ ಬಿಟ್ಟು ಹೋಗಿದ್ವಿ. ನಾವು ಹೊಳ್ಳಿ ಮನೀಗೆ ಬಂದಾಗ, ಆತ ಅಲ್ಲೆ ಅಡಿಕ್ಕೊಂಡು ನಿಂತು, ನಮ್ಮ ಮ್ಯಾಲೆ ಕಲ್ಲು ಒಗದಿದ್ದಾ.
  ಅಲೀಪಾಕ ಅಂದರ “ಅಲ್ಲಾ(ಹಸಿ ಶುಂಠಿ)+ಪಾಕ”=ginger mint (like pepper mint.)
  ಗೋಕಾವಿ ಮತ್ತೂ ಒಂದು itemಗೆ ಭಾಳ ಹೆಸರಾಗಿತ್ತು.
  ‘ಗೋಕಾವಿ ಗೊಂಬಿ’ ಅಂತ ಕೇಳೀರಲ್ಲಾ?
  ಹಳೇದೆಲ್ಲಾ ನೆನಪಾತು, ಚಕೋರ, ನಿಮಗ ಭಾಳ ಥ್ಯಾಂಕ್ಸ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s