ಏನ್ಮಾಡ್ಕೋಂಡಿದೀರಾ…

ಬೆಂಗಳೂರಿನ ಮಹತ್ತರ ಆವಿಷ್ಕಾರಗಳಲ್ಲಿ ಒಂದು ’ಏನ್ ಮಾಡ್ಕೊಂಡಿದೀರಾ?’ ಬೆಳ್ಳಂಬೆಳಗೆ ಎದ್ದು ನನ್ನ ತಮ್ಮ ಟಿವಿ ಹಚ್ಚುತ್ತಿದ್ದ. ಅಂದರೆ ಅವನಿಗೆ ಬೆಳಗಾದಾಗ. ಹಚ್ಚಿದ ಕೂಡಲೆ ಒಮ್ಮಿಂದೊಮ್ಮೆಲೆ ಮೊಳಗುತ್ತಿತ್ತು, ’ಏನ್ ಮಾಡ್ಕೊಂಡಿದೀರಾ?’ ಉದಯ, ಉಷೆ, ಯು೨, ಕಾವೇರಿ, ಕೃಷ್ಣಾ, ಮಲಪ್ರಭಾ, ಅಘನಾಶಿನಿ, ದೂಧಗಂಗಾ ಮೊದಲಾದ ವಾಹಿನಿಗಳೆಲ್ಲವುಗಳಿಂದ ಏಕಕಾಲಕ್ಕೆ ಉಕ್ಕಿಹರಿಯುವುದು, ’ಏನ್ ಮಾಡ್ಕೊಂಡಿದೀರಾ?’ ಮೊದಮೊದಲಿಗೆ ಈ ಕಾರ್ಯಕ್ರಮಗಳ ಬಗ್ಗೆ ಅತೀವ ತಿರಸ್ಕಾರ ತೋರಿಸುತ್ತಿದ್ದ ನಮ್ಮ ತಂದೆ (ನಾನೂ ಕೂಡ ಮೊದಮೊದಲು ಅದೇ ಮಾಡುತ್ತಿದ್ದೆನೆನ್ನಿ) ಕೂಡ ಕಾಲಕ್ರಮೇಣ ಅದರ ನಶೆಗೆ ಒಳಗಾದರು ಎಂದರೆ ಅದರ ಸೆಳೆತ ಹೇಗಿರಬೇಡ!

ಈ ಕಾರ್ಯಕ್ರಮಗಳ ಲಾಕ್ಷಣಿಕ ಅಧಿವೇಶನದ ತುಣುಕೊಂದನ್ನು ಕೆಳಗೆ ಕೊಟ್ಟಿದ್ದೇನೆ.

ನಿರ್ವಾಹಕಿ (ಅಥವಾ ಭಕ್ತವತ್ಸಲೆ ಅಥವಾ ವಾಣಿ): ನಮಸ್ಕಾರ ರಮೇಶ್‍ರವರೇ!
ಕರೆ ಮಾಡಿದವ (ಅಥವಾ ಭಕ್ತ ಅಥವಾ ಶರಣಾರ್ಥಿ): ನಮಸ್ಕಾರ ಮೇಡಮ್.
ವಾ: ಹೇಗಿದ್ದೀರಾ ರಮೇಶ್‍ರವರೇ?
ಶ: ಚೆನಾಗಿದೀವಿ ಮೇಡಮ್, ತಾವು ಹೇಗಿದೀರಾ?
ವಾ: ನಾನು ಸೂಪರ್. ಹೇಳಿ ರಮೇಶ್, ಏನ್ ಮಾಡ್ಕೊಂಡಿದೀರಾ?
(ಈ ’ಏನ್ಮಾಡ್ಕೊಂಡಿದೀರಾ’ ನುಡಿಯ ಅರ್ಥವೇ ನನಗೆ ಬಹಳ ದಿನ ಆಗಿರಲಿಲ್ಲ.)
ಶ: ನಾವು ಅಂಗಡಿ ಇಟ್ಕೊಂಡಿದೀವಿ, ಮೇಡಮ್.
ವಾ: ಅಂಗಡಿ ಇಟ್ಕೊಂಡಿದೀರಾ. ವೆರಿ ಗುಡ್. ಹೇಗಿದೆ ರಮೇಶ್‍ರವರೇ, ಬಿಸಿನೆಸ್. ಫುಲ್ ಜ಼ೂಮಾ?
ಶ: ಏನೋ ಪರ್ವಾಗಿಲ್ಲ, ಮೇಡಮ್. ತಮ್ಮ ಆಶೀರ್ವಾದ.
ವಾ: ಹಹ್ಹಹ್ಹಾ… ತುಂಬಾ ತಮಾಷೆಯಾಗಿ ಮಾತಾಡ್ತೀರಾ ನೀವು. ನಿಮಗೆ ತುಂಬಾ ಜನಾ ಫ಼್ರೆಂಡ್ಸ್ಗಳು ಇರ್ಬೇಕಲ್ಲ್ವಾ?
ಶ: (ಏನು ಹೇಳಬೇಕೆಂದು ತಿಳಿಯದೆ) ಹೂಂ ಹೌದು ಮೇಡಮ್.
ವಾ: ಸೋ.. ಹೇಳಿ… ಯಾವ ಸಾಂಗ್ ಪ್ರಸಾರ ಮಾಡೋಣ ತಮಗೋಸ್ಕರ?
ಶ: ರಮೇಶ್ ಅವರ ಫಿಲಮ್ಮಿಂದು ಯಾವುದಾದ್ರೂ ಸಾಂಗ್ ಪ್ರಸಾರ ಮಾಡಿ ಮೇಡಮ್.
ವಾ: ಓ ತುಂಬಾ ಕಿಲಾಡಿರೀ ನೀವು. ನಿಮ್ಮ ಹೆಸರೂ ರಮೇಶ ಅವರ ಹೆಸರೂ ರಮೇಶ್.
(ಎಂಥಾ ವಿಸ್ಮಯಕಾರಿ ಕಾಕತಾಳೀಯವಲ್ಲವೆ!)
ವಾ: ಈ ಸಾಂಗ್‍ನ ಯಾರಿಗೋಸ್ಕರಾನಾದ್ರೂ ಡೆಡಿಕೇಟ್ ಮಾಡಕ್ಕೆ ಇಷ್ಟಾ ಪಡ್ತೀರಾ?
ಶ: ಹೌದು ಮೇಡಮ್. ನಮ್ಮ ತಾಯಿ, ನಮ್ಮ ತಂಗಿ, ನಮ್ಮ ನಾದಿನಿ. ಆಮೇಲೆ.. ಮೇಡಮ್.. ನಮ್ಮ ತಮ್ಮ ನಿಮಗೆ ತುಂಬಾ ಫ್ಯಾನು. ಅವರು ಸ್ವಲ್ಪ ಮಾತಾಡ್ತಾರೆ.
(ತಮ್ಮನೂ ಮಾತನಾಡುತ್ತಾನೆ. ಕೊನೆಗೆ…)
ವಾ: ಗೊರಗುಂಟೆಪಾಳ್ಯದಿಂದ ರಮೇಶ್‍ರವರು ದೂರವಾಣಿ ಮಾಡಿ ರಮೇಶ್‍ರವರ ಸಾಂಗ್ ಬೇಕೆಂದು ಕೇಳಿದ್ದಾರೆ. ಅವರಿಗೋಸ್ಕರ ಮತ್ತು ಅವರ ಮನೆಯರಿಗೋಸ್ಕರ ಈ ಸೂಪರ್ ಸಾಂಗ್.

ಇತ್ಯಾದಿ ಇತ್ಯಾದಿ. ಬೆಂಗಳೂರಿನ ಇನ್ನೊಂದು ಸೋಜಿಗದ ಸಂಗತಿಯೆಂದರೆ, ’ಹಾಡು’ ಎಂಬ ಶಬ್ದವೇ ಜನರಿಗೆ ಗೊತ್ತಿಲ್ಲ! ’ಏನ್ಮಾಂಡ್ಕೋಂಡಿದೀರಾ’ದ ನಿರ್ವಾಹಕರನ್ನು ಬಿಡಿ, ಬೇರೆ ಹಾಡಿನ ಸ್ಪರ್ಧೆಗಳಿಗೆ ತೀರ್ಪುಗಾರರಾಗಿ ಬರುವ ಜನ ಕೂಡ ಅಷ್ಟೆ. ಕನ್ನಡ ಪಂಡಿತರೇ ಇರಲಿ, ಅದೆಷ್ಟೇ ಒಳ್ಳೆಯ ಕನ್ನಡ ಮಾತಾಡಲಿ, ಹಾಡು ಮಾತ್ರ ಸಾಂಗೇ!

ಹಗಲುರಾತ್ರಿಯೆನ್ನದೇ ಎಲ್ಲ ವಾಹಿನಿಗಳಲ್ಲಿ ನಡೆಯುವ ಈ ’ಎನ್ಮಾಡ್ಕೋಂಡಿದೀರಾ’ ಕಾರ್ಯಕ್ರಮಗಳಿಗೆ ಅಷ್ಟು ಬಳಕೆದಾರರಿದ್ದಾರೆಯೇ ಎಂದು ವಿಸ್ಮಯವಾಗುತ್ತದೆ. ಇಷ್ಟಕ್ಕೂ ಈ ಕರೆಗಳನ್ನು ಮಾಡುವವರು ಯಾರು? ಎಸ್‍ಎಮ್‍ಎಸ್ ಕಳಿಸುವವರು ಯಾರು? ನನಗೆ ಗೊತ್ತಿದ್ದವರು ಯಾರೂ ಯಾವತ್ತೂ ಕರೆ ಮಾಡಿಲ್ಲ. ನಾನು ಕೇಳಿತಿಳಿದಂತೆ ಅವರಿಗೆ ಗೊತ್ತಿದ್ದವರಲ್ಲಿ ಯಾರೂ ಇದನ್ನು ಮಾಡಿಲ್ಲ. ಇಲ್ಲಿಯವರೆಗೆ ಇಂಥದೊಂದು ಕರೆ ಮಾಡಿದ ಒಬ್ಬ ವ್ಯಕ್ತಿಯೂ ನನಗೆ ಭೆಟ್ಟಿಯಾಗಿಲ್ಲ. Actually, ಹಾಡಿಗಾಗಿ ಮನವಿ ಕಳಿಸಿದ್ದ ನನಗೆ ಗೊತ್ತಿರುವ ಒಬ್ಬನೇ ಒಬ್ಬ ವ್ಯಕ್ತಿಯೆಂದರೆ ನಾನು ಸಣ್ಣವನಿದ್ದಾಗ ನಮ್ಮ ದನಗಳನ್ನು ನೋಡಿಕೊಳ್ಳುತ್ತಿದ್ದ ಹುಡುಗ. ನನಗೂ ಅವನಿಗೂ ಭಯಂಕರ ದೋಸ್ತಿ. ಇಬ್ಬರೂ ಕೂಡಿ ಆಕಾಶವಾಣಿ ಧಾರವಾಡದ ಕನ್ನಡ ಚಿತ್ರಗೀತೆಗಳನ್ನು ಕೇಳುತ್ತಿದ್ದೆವು. ನಮ್ಮ ದೊಡ್ಡಮ್ಮ ಆ ಚಿತ್ರಗೀತೆಗಳಿಗೆ ’ನಲ್ಲಾನಲ್ಲೆಯರ ಹಾಡುಗೋಳು’ ಎಂಬ ಬಿರುದನ್ನು ಕೊಟ್ಟಿದ್ದರು. ನನ್ನ ದನಗಾಹಿ ದೋಸ್ತ ಒಮ್ಮೆ ಪೋಸ್ಟಕಾರ್ಡಿನ ಮುಖಾಂತರ ಮನವಿ ಕಳಿಸಿದ್ದ. ತಾನೇ ಬರೆದಿದ್ದನೋ, ಅಥವಾ ನನ್ನಿಂದ ಬರೆಸಿದ್ದನೋ, ಅಥವಾ ಮತ್ತ್ಯಾರ ಮುಖಾಂತರ ಕಳಿಸಿದ್ದನೋ ನೆನಪಿಲ್ಲ. ಹಾಗೆ ಕಳಿಸಿದ ನಂತರ ದಿನಾ ರಾತ್ರಿ ನಡುಮನಿಯ ಕಡೆಗೋಲು ಕಂಬದ ಕೆಳಗೆ ಇರುತ್ತಿದ್ದ ನಮ್ಮ ಸಣ್ಣ ರೇಡಿಯೋದ ಪಕ್ಕಕ್ಕೆ ಕುಕ್ಕರುಗಾಲಲ್ಲಿ ಕೂತು, “ಹಾಡಿ ಕುಣಿಯುವ ಎರಡು ಪಕ್ಷಿ ಹೆಸರು ಪಡೆದ ಬನಿಯನ್ ಚಡ್ಡಿ,” “ನನ್ನ ನಲ್ಲನ ಹೊಲದಲ್ಲೀ ಫಳಫಳ ಹೊಳೆಯುವ ನೀರು,” ಇತ್ಯಾದಿ ಜಾಹೀರಾತುಗಳನ್ನು ಕೇಳುತ್ತ ಕಾಯುತ್ತಿದ್ದ. ಒಂದು ಶುಭರಾತ್ರಿ ಬಂದೇ ಬಂತು. “ರಾಘವೇಂದ್ರ ರಾಜಕುಮಾರ್, ಮಾಲಾಶ್ರೀ ಅಭಿನಯಿಸಿರುವ ನಂಜುಂಡಿ ಕಲ್ಯಾಣ ಚಿತ್ರದ ’ನಿಜವ ನುಡಿಯಲೆ ನನ್ನಾಣೆ ನಲ್ಲೆ’ ಈ ಹಾಡನ್ನು ಕೇಳಬಯಸುವವರು” ಲಿಸ್ಟಿನಲ್ಲಿ “ಗೋಕಾಕ್ ತಾಲೂಕು, ಬೆಟಗೇರಿ ಗ್ರಾಮದಿಂದ ಬಾಳಪ್ಪಾ ಸೊನಬಗೋಳ”ನ ಹೆಸರನ್ನು ಉದ್ಘೋಷಕ ಹೇಳಿಯೇ ಬಿಟ್ಟ! “ಬಾಳ್ಯಾ ಮಗನಾ, ನಿನ್ನ ಹೆಸರು ಬತ್ತು ನೋಡಲೇ!” ಎಂದು ನಾನು ಅವನನ್ನು ಅಭಿನಂದಿಸಿಯೂ ಬಿಟ್ಟೆ.

ಹೀಗಿರುವಾಗ, ನನಗೊಂದು ಗುಮಾನಿಯಿದೆ. ಇವೆಲ್ಲ ಫೋನು ಕರೆಗಳು ನಿಜವಾದುವೆ? ಅಥವಾ ಇಂಥ ಕರೆಗಳನ್ನು ಮಾಡಲೆಂದು ಈ ಚಾನೆಲ್ಲಿನವರೇ ಒಂದಿಷ್ಟು ಮಂದಿಯನ್ನು ನೇಮಿಸಿಕೊಂಡಿರುತ್ತಾರೆಯೆ? ಹೆಸರು ಉದ್ಯೋಗ ಇತ್ಯಾದಿ ವಿವರಗಳನ್ನು ಪ್ರತಿಸಲವೂ ಬದಲಿಸುತ್ತ, ಮೇಲಿಂದ ಮೇಲೆ ಫೋನು ಮಾಡುವ ಈ ಮಂದಿ ಭಾರೀ ಕಲಾವಂತರೇ ಹೌದು.

11 thoughts on “ಏನ್ಮಾಡ್ಕೋಂಡಿದೀರಾ…

  1. ತುಂಬಾ ಮಜವಾಗಿದೆ ಲೇಖನ. ನಮ್ಮ ತಂದೆತಾಯಿಗಳೂ ಕೂಡಾ ಈ ಕಾರ್ಯಕ್ರಮ ಅಂದರೆ ಮೊದಲು ಸಿಡಿಮಿಡಿಗೊಳ್ಳುತ್ತಿದ್ದರಾದರೂ, ಈಗ ಇವನ್ನೇ ಹೆಚ್ಚು ನೋಡಲು ಶುರುವಿಟ್ಟುಕೊಂಡಿದ್ದಾರೆ. ನಿರೂಪಕ/ನಿರೂಪಕಿಯರ ಮೊನೋಟನಸ್ ಪ್ರಶ್ನೆಗಳಿಗೆ ನಾನೊಮ್ಮೆ ಹೀಗೆ ಉತ್ತರಿಸುತ್ತಿರುತ್ತೇನೆ :

    ಹಲೋ…ಯಾರ್ ಮಾತಾಡ್ತಿರೋದು ?

    ಮನುಷ್ಯರೇ…ಡೌಟ್ ಇಟ್ಕೋಬೇಡಿ.

    ಓಕೆ ಫೈನ್….ಏನ್ ಮಾಡ್ಕೊಂಡಿದೀರಾ ?

    ಬದುಕಿದ್ದೇನೆ. ಉಸಿರಾಡುತ್ತಿದ್ದೇನೆ. ಸದ್ಯಕ್ಕೆ ನಿಮ್ಮ ಜೊತೆ ಮಾತಾಡುತ್ತಿದ್ದೇನೆ.

    ಮನೆಯವರೆಲ್ಲಾ ?

    ನನ್ನ ಕಾಟ ಸಹಿಸಿಕೊಂಡು ಇನ್ನು ಘಟ್ಟಿಮುಟ್ಟಾಗಿದ್ದಾರೆ.

    ನಿಮ್ಮ ಹಾಬೀಸ್ ?

    ನಿಮ್ಮ ಪ್ರೋಗ್ರಾಮ್ ನೋಡೋದು …ಟಿ ವೀ ನೋಡ್ತಾನೇ ಇರೋದು !!!

    ಯಾವ್ ಸಾಂಗ್ ?
    ……

    ಯಾರ್ಯಾರಿಗೆ ಡೆಡಿಕೇಟ್ ಮಾಡ್ತಿದ್ದೀರಿ ?
    ನಮ್ಮ ಹಳ್ಳಿಯಲ್ಲಿರುವ ಸಮಸ್ತ ಕಾಗೆ ಕೋಳಿ ಗುಬ್ಬಚ್ಚಿಗಳಿಗೆ, ಕಟ್ಟೆಬಾವಿಗಳಿಗೆ, ಅಶ್ವತ್ಥ ಕಟ್ಟೆ, ಬೇವಿನ ಮರ ಮತ್ತು ದೇವಸ್ಥಾನದ ಪ್ರಸಾದಕ್ಕೆ ಮೇಡಮ್ !

    ಓಕೆ ಫೈನ್ …..

    ಮರ್ತಿದ್ದೆ..ನಮ್ಮ ಮನೆಯ ಬೆಕ್ಕಿಗೆ ಈ ಸಾಂಗ್ ಅಂದ್ರೆ ಪ್ರಾಣ…ಪ್ಲೀಸ್ ನಿರಾಶೆ ಮಾಡ್ಬೇಡಿ ಮೇಡಮ್…ನನ್ನದು ಈ ದಿನದಲ್ಲಿ ಮೊದಲನೆಯ ಫೋನ್ ಕಾಲು !

    ಖಂಡಿತಾ ಪ್ರಸಾರ ಮಾಡ್ತಿವಿ ಓಕೆ ? ವೀಕ್ಷಕರೆ…….ಗೋಸ್ಕರ ಇದೊಂದು ಸೂಪರ್ ಡೂಪರ್ ಸಾಂಗನ್ನ ನೋಡ್ಕೊಂಡ್ ಬರಣ….

  2. ಲೇಖನ ಚೆನ್ನಾಗಿದೆ, ಇ೦ತಹ ಪ್ರೊಗ್ರಾಮ್ಸ್ ನೋಡಿ ನೋಡಿ ಸಿಕ್ಕಾಪಟ್ಟೆ ಬೇಜಾರು and ಸಿಟ್ಟು ಬ೦ದಿದೆ.
    ಅ೦ದ ಹಾಗೆ ಒ೦ದು ಲೈನು ಆಡ್ಡ್ ಮಾಡ್ಬೋದಿತ್ತು.
    ‘ನಿಮ್ಮತ್ರ ಮಾತ್ನಾಡಿ ತು೦ಬಾ ಸ೦ತೋಷ ಆಯಿತು.ಕರೆ ಮಾಡಿದ್ದಕ್ಕೆ ತು೦ಬಾ ಧನ್ಯವಾದಗಳು. ಹೀಗೆ ಕರೆ ಮಾಡ್ತಾ ಇರಿ…ಮ್ ಮ್ ‘

  3. ಹ್ಹ ಹ್ಹ 🙂 ಒಳ್ಳೇ ಮಜವಾಗಿದೆ ಬರಹ! ನೀವು ಹೇಳಿರೋ ಹಾಗೆ “ಏನ್ಮಾಡ್ಕೊಂಡಿದೀರಾ” ಅನ್ನೋದು ಬೆಂಗಳೂರಿನೋವ್ರೇ ಹುಟ್ಟುಹಾಕಿರಬೇಕು.

    ಇನ್ನೊಂದು ವಿಷಯ ಅಂದ್ರೆ, ಅದಕ್ಕೆ ಉತ್ತರವಾಗಿ ಸಾಧಾರಣವಾಗಿ “ನಾವು ಹೌಸ್ ವೈಫ್” “ನಾವು RTO ಆಫೀಸಲ್ಲಿದೀವಿ” ಅಂತ ಎಲ್ಲ ಬಹುವಚನದಲ್ಲೇ ಹೇಳ್ಕೋತಾರೆ, ಅಂದ್ರೆ ಅಲ್ಲಿಗೆ ಕಾಲ್ ಮಾಡೋವ್ರೆಲ್ಲ ಅರಸು ಮನೆತನಕ್ಕೆ ಸೇರಿದವರೋ ಅಂತ ಅನುಮಾನ ಬರ್ತಾಇರತ್ತೆ ನನಗೆ.

  4. ಎಲ್ಲರಿಗೂ ನಮಸ್ಕಾರ. ಕಮೆಂಟಿಸಿದ್ದಕ್ಕೆ ಥ್ಯಾಂಕ್ಸ್!

    ನೀಲಾಂಜನ: ಹೌದು. ಎಲ್ಲರು ’ನಾವು’ ಅಂತಲೇ ಮಾತಾಡ್ತಾರೆ. ರಾಜಮನೆತನದವರೋ ಅಥವಾ ಸ್ವಾಮಿಗಳೋ ಇರಬೇಕು.

  5. ಏನ್ ನಡ್ಸಿದ್ದೀರ್ರೀ ಅಂದ್ರೆ?;)
    @ವಿಜಯರಾಜ್,
    ’ಪದ್ಯ’ ಅನ್ನೋ ಪದ ಗೊತ್ತಿರತ್ತೆ, ಆದರೆ ಅದನ್ನ ಕಾವ್ಯಪ್ರಕಾರವಾಗಿ ಮಾತ್ರ ಉಪಯೋಗಿಸ್ತೀವಿ ಈ ಕಡೆ. ’ಈ ಪದ್ಯದ ಸಾರಾಂಶ ತಿಳಿಸಿ’ types:) ಆದ್ರೆ ರಾಗವಾಗಿ ಹಾಡೋದನ್ನ ಹಾಡು/ ಸಾಂಗು ಅಂತ ಕರಿಯೋ ಅಭ್ಯಾಸ. ಎಲ್ಲ ಪದ್ಯಗಳೂ ಹಾಡಲ್ಲ, ಆದ್ರೆ ಎಲ್ಲ ಹಾಡುಗಳೂ ಪದ್ಯಗಳು, ಬೆಂಗಳೂರಿನ ಕಡೆಯ ಭಾಷೆಯ ಪ್ರಕಾರ
    (ಅಬ್ಬ ಬೆಂಗಳೂರಿಗರ ಕನ್ನಡವನ್ನ ಬಯ್ಯೋದು ನೋಡಿ ಹೆದರ್ಕೊಂಡು ಕಷ್ಟ ಪಟ್ಟು ಇಷ್ಟು ಬರಿಯೋ ಹೊತ್ತಿಗೆ ಸಾಕಾಯ್ತು!)

Leave a reply to Lakshmi S ಪ್ರತ್ಯುತ್ತರವನ್ನು ರದ್ದುಮಾಡಿ