ಯಾವುದೇ ಕೊಲೆಗೂ ಒಂದು ಹೇತು, motive ಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹೆಣ್ಣು, ಹೊನ್ನು, ಮಣ್ಣು, ಮತ್ತೊಂದು. ಜಗತ್ತಿನ ಚರಿತ್ರೆಯಲ್ಲಿ ಇಂದಿನವರೆಗೆ ಕೋಟಿಗಟ್ಟಲೆ ಕೊಲೆಗಳಾಗಿವೆ. ದೇಶಗಳು, ಊರುಗಳು, ಬುಡಕಟ್ಟುಗಳು, ಸಂಘಟನೆಗಳು, ಕುಟುಂಬಗಳು, ವ್ಯಕ್ತಿಗಳು — ನಾಶವಾಗಿವೆ. ಇತಿಹಾಸದ ಹಾಗೂ ವರ್ತಮಾನದ ಬಹುಪಾಲು ಕೊಲೆಗಳಿಗೆ ಮೂಲ ಹೇತು – ದೇವರು ಮತ್ತು/ಅಥವಾ ಧರ್ಮ. ದೇವರು ಕೊಂದಷ್ಟು ಜನರನ್ನು ಬೇರೆ ಯಾರೂ, ಯಾವುದೂ ಕೊಂದಿಲ್ಲ. ನಾನು ಇತ್ತೀಚೆಗೆ ಎಸ್‍ಳಿಗೆ ಹೇಳುತ್ತಿದ್ದೆ. ಗೂಗಲ್ ನ್ಯೂಸ್ ಇಂಡಿಯಾದ ಪೋರ್‍ಟಲ್ ತೆಗೆಯುವುದೆಂದರೆ ಈಹೊತ್ತು ಇಂಡಿಯಾದಲ್ಲಿ ದೇವರು ಎಷ್ಟು ಜನರನ್ನು ಕೊಂದ ಎಂಬ matter of factly ಕುತೂಹಲದ ಮಟ್ಟಕ್ಕೆ ಇಳಿದುಬಿಟ್ಟಿದೆ. ರೂಪಗಳು ಬೇರೆ ಬೇರೆ. ಒಮ್ಮೊಮ್ಮೆ ಸರಣಿ ಬಾಂಬುಗಳು. ಮತ್ತೊಮ್ಮೆ ಚರ್ಚಿಗೆ ಬೆಂಕಿ. ಮತ್ತೊಂದು ನಮೂನೆ ಬೇಕೆನ್ನಿಸಿದರೆ ದೇವರ ಸನ್ನಿಧಿಯಲ್ಲಿ ಕಾಲ್ದುಳಿತಕ್ಕೆ ಸಿಲುಕಿ ಸಾವುಗಳು. ಮೂಲ ಕಾರಣ ಒಂದೇ.
ಅಚೇಬೆಯ ಪುರಾತನ ಆಫ಼್ರಿಕನ್ ಬುಡಕಟ್ಟುಗಳಲ್ಲಿ ಯಾವುದೋ ದೇವರು ತನ್ನ ಕೆಲಸ ಸರಿಯಾಗಿ ನಡೆಸುತ್ತಿಲ್ಲ ಅಥವಾ ಬುಡಕಟ್ಟಿನ ಮೇಲೆ ಅನ್ಯಾಯವೆಸಗುತ್ತಿದೆ ಎಂಬ ಭಾವನೆ ಹಬ್ಬತೊಡಗಿತೆಂದರೆ ಆ ದೇವರ ಕತೆ ಮುಗಿಯತೊಡಗಿತು ಎಂದೇ ಅರ್ಥ! ಅಂಥ ಅದಕ್ಷ ಅಥವಾ ವಿನಾಶಕಾರಿ ದೇವರನ್ನು ತೊಗೊಂಡು ಏನು ಮಾಡುವುದು ಎಂದವರೇ ಜನರು ಆ ದೇವರನ್ನು ನಾನಾ ನಮೂನೆಯಿಂದ ತಿರಸ್ಕರಿಸಿ ಹೊರಗಟ್ಟುತ್ತಾರೆ. ಬೇಕೆನ್ನಿಸಿದರೆ ಆ ದೇವರ ಸ್ಥಾನಕ್ಕೆ ಬೇರೊಬ್ಬ ದೇವರನ್ನು ಸ್ಥಾಪಿಸುತ್ತಾರೆ. ದೇವರುಗಳಿಗೆ ನಾವು ಪೂಜೆ ನೈವೇದ್ಯ ಸಲ್ಲಿಸುತ್ತೇವೆ ದಿಟ; ಅದಕ್ಕೆ ಅಂಜಿ ಗಡಗಡ ನಡುಗುತ್ತೇವೆನ್ನುವುದೂ ದಿಟ. ಆದರೆ ಅಂಥಾ ಒಂದು ದೇವರ ಕೆಲಸವೆಂದರೆ ನಮ್ಮ ಅಭದ್ರತೆಗಳನ್ನೂ, ರೋಗ ರುಜಿನಗಳನ್ನೂ, ಬರಗಾಲವನ್ನೂ ನೀಗಿಸಿ ಜನರನ್ನು ಸಂರಕ್ಷಿಸಬೇಕಾದ್ದು; ಜನರಿಗೆ ಸುಖ ಸಂತೋಷವನ್ನು ನೀಡಿ ಸಲಹತಕ್ಕದ್ದು. ಇಂಥ ಜವಾಬುದಾರಿಯನ್ನು ನಿಭಾಯಿಸುವ ಯೋಗ್ಯತೆಯಿಲ್ಲದ ದೇವರು ಇರುವ ಅವಶ್ಯಕತೆಯಿಲ್ಲ. ಇದು ಆ ಬುಡಕಟ್ಟುಗಳ ಧೋರಣೆ.
ಆದರೆ ೨೧ನೆಯ ಶತಮಾನದ ನಾಗರಿಕರಾದ ನಾವು, ನಾವುಗಳು ಹುಟ್ಟುಹಾಕಿಕೊಂಡ ವಿಧ್ವಂಸಕ ದೇವರುಗಳ, ಧರ್ಮಗಳ ಅಟ್ಟಹಾಸದಿಂದ ಇನ್ನಷ್ಟು ಹುರುಪುಗೊಳ್ಳುತ್ತೇವೆ. ಜಿದ್ದಿಗೆ ಬೀಳುತ್ತೇವೆ. ದೇವರುಗಳು, ಧರ್ಮಗಳನ್ನು ಮೀರುವ ಬದಲು ಅವುಗಳ ಕರಾಳ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಹೆಣಗುತ್ತೇವೆ.