“It’s easier to be an asshole to words than to people.”

ಇಂಟರ್‌ನೆಟ್ಟಿನಲ್ಲಿ ಫ಼ೋರಮ್ಮುಗಳು, ಮೇಲಿಂಗ್ ಲಿಸ್ಟುಗಳು ಅಥವಾ ಬ್ಲಾಗುಗಳು, ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗಂತೂ ಒಮ್ಮೆಯಲ್ಲಾ ಒಮ್ಮೆ ’ಗಾಡ್ವಿನ್ಸ್ ಲಾ’ದ (Godwin’s Law) ಅನುಭವ ಆಗಿಯೇ ಆಗುತ್ತದೆ. ಯಾವುದಕ್ಕೂ ಒಮ್ಮೆ ಗಾಡ್ವಿನ್ ಏನು ಹೇಳಿದ್ದ ಎಂಬುದನ್ನು ನೋಡೋಣ.

ಯೂಸ್‍ನೆಟ್ ಮೇಲಿನ ಚರ್ಚೆಯೊಂದು ಬೆಳೆಯುತ್ತ ಹೋದಂತೆ ಆ ಚರ್ಚೆಯಲ್ಲಿ ನಾತ್ಸೀಗಳನ್ನು ಅಥವಾ ಹಿಟ್ಲರ್‌ನನ್ನು ಒಳಗೊಂಡ ಹೋಲಿಕೆ ವ್ಯಕ್ತವಾಗುವ ಸಂಭವನೀಯತೆ ಒಂದನ್ನು (೧.೦ ಅಥವಾ ೧೦೦%) ಸಮೀಪಿಸುತ್ತದೆ.

(ಅಥವಾ ಇಂಗ್ಲಿಶಿನಲ್ಲಿ – “As a Usenet discussion grows longer, the probability of a comparison involving Nazis or Hitler approaches one.”)

ಮೈಕ್ ಗಾಡ್ವಿನ್ ೧೯೯೦ರಲ್ಲಿ ಈ ತತ್ವವನ್ನು ರೂಪಿಸಿದ. ಇದು ವೆಬ್ ಎಂಬ ಪೆಡಂಭೂತ ಹುಟ್ಟಿ ಬೆಳೆಯುವುದಕ್ಕೆ ಮೊದಲು ಬಹಳ ಜನಪ್ರಿಯವಾಗಿದ್ದ ಯೂಸ್‍ನೆಟ್ ಎಂಬ ಸಮುದಾಯಗಳ ಬಗ್ಗೆ ಹೇಳಿದ್ದಾದರೂ, ಇಂದು ಎಂದಿಗಿಂತಲೂ ಹೆಚ್ಚು ಸಮಂಜಸವಾಗಿದೆ. ಯೂಸ್‍ನೆಟ್ ಚರ್ಚೆಯ ಬದಲು ಬ್ಲಾಗ್ ಚರ್ಚೆ ಎಂದು ಬದಲಿಸಿ. ಅಥವಾ ನಾತ್ಸೀಗಳ ಬದಲು ಕ್ಯಾಪಿಟಲಿಸ್ಟ, ಕಮ್ಯುನಿಸ್ಟ, ಎಡಪಂಥೀಯ, ಬಲಪಂಥೀಯ, ಹಿಂದೂ, ಮುಂದೂ, ಐಟಿ ಉದ್ಯೋಗಿ, ಅಮೆರಿಕಾ ಬಾಲಬಡುಕ, ಪೌರ್ವಾತ್ಯ, ಪಾಶ್ಚಾತ್ಯ, ಪುರಾತನ, ಸನಾತನ, ನವ್ಯ, ಭವ್ಯ, ದಿವ್ಯ…

ವ್ಯಕ್ತಿ ಮತ್ತು ವಿಚಾರ. ಯಾವುದೇ ಚರ್ಚೆಯಲ್ಲಿ ವಿಚಾರದಿಂದ ವ್ಯಕ್ತಿಯನ್ನು ದೂರವಿರಿಸಿದಷ್ಟು ಚರ್ಚೆ ಆರೋಗ್ಯಯುತವಾಗಿಯೂ, ಧನಾತ್ಮಕವಾಗಿಯೂ, ಸಹ್ಯವಾಗಿಯೂ ಇರುತ್ತದೆ. ವ್ಯಕ್ತಿ ಮತ್ತು ವಿಚಾರಗಳ ನಡುವೆ ಕಾರ್ಯಕಾರಣ ಸರಪಳಿಯನ್ನು ನಿರ್ಮಿಸತೊಡಗಿದರೆ ತಾರ್ಕಿಕ ಚರ್ಚೆ ಅಲ್ಲಿಗೆ ಮುಗಿಯಿತೆಂದು ಅರ್ಥ. ಒಂದು ವಿಷಯದ ಬಗ್ಗೆ ನಾವು ಕಾಳಜಿ ವಹಿಸಬೇಕು: ನಮ್ಮ ವಿಚಾರಗಳಿಗೂ ನಮ್ಮ ವ್ಯಕ್ತಿತ್ವಕ್ಕೂ ಸಂಬಂಧವಿಲ್ಲ ಎಂದು ನಾನು ಹೇಳುತ್ತಿಲ್ಲ; ಕೇವಲ ಆ ಸಂಬಂಧವನ್ನು ಯಾವುದೇ ಚರ್ಚೆಯಲ್ಲಿ ಮುನ್ನೆಲೆಗೆ ತರುವುದು ತರ್ಕಬದ್ಧವಲ್ಲ ಎಂದು ಹೇಳುತ್ತಿದ್ದೇನೆ. ಅದೊಂದು ತಾರ್ಕಿಕ ಮಿಥ್ಯೆ (logical fallacy). ಅದಕ್ಕೆ ad hominem ಎಂದು ಹೆಸರು. ಆ ಲ್ಯಾಟಿನ್ ನುಡಿಗಟ್ಟಿನ ಅರ್ಥ ಅತ್ಯಂತ ಸಮರ್ಪಕವಾಗಿದೆ: ವ್ಯಕ್ತಿಯ ವಿರುದ್ಧದ ವಾದ. ಒಂದು ವಿಚಾರದ ಬಗ್ಗೆ ವಾದ ಇರಬೇಕು. ವ್ಯಕ್ತಿ ಅಮುಖ್ಯ.

ನಾನು ನನ್ನ ಕುಟುಂಬದವರೊಡನೆ ಒಳಗೊಳ್ಳುವ ಚರ್ಚೆಗಳು ಎಂದಿಗೂ ವಿಚಾರದ ಮೇಲೆ ಸ್ಥಾಯಿಯಾಗುವುದೇ ಇಲ್ಲ. ಎಲ್ಲವೂ ಮೌಲ್ಯಗಳು, ನೈತಿಕತೆಗಳ ಜಜ್‍ಮೆಂಟ್‍ನ ಮಟ್ಟಕ್ಕೆ ಇಳಿಯುತ್ತವೆ. ಅಥವಾ ಯಾರು ದೊಡ್ಡವರು, ಯಾರು ಸಣ್ಣವರು; ಯಾರಿಗೆ ಹೆಚ್ಚು ಜೀವನಾನುಭವ ಇದೆ; ಸಂಪ್ರದಾಯ, ಸಂಸ್ಕೃತಿ; ಇತ್ಯಾದಿ. ಇವ್ಯಾವನ್ನೂ ನಾನು ತಳ್ಳಿ ಹಾಕುತ್ತಿಲ್ಲ. ಆದರೆ ಅತಿ ಭಾವುಕತೆ, ತೀವ್ರತೆ, ಅತಿ ಸೂಕ್ಷ್ಮಜ್ಞತೆ, ಮೌಲ್ಯ/ನೈತಿಕತೆ ಆಧಾರಿತ ತೀರ್ಮಾನಗಳು — ಇವು ಒಳ್ಳೆಯ ಚರ್ಚೆಯ ಲಕ್ಷಣಗಳಲ್ಲ.

ಹೀಗಿರುವಾಗ, ಇಂಟರ್‌ನೆಟ್ಟೆಂಬ ಜಗತ್ತು ಇವನ್ನೆಲ್ಲ ಮೀರುವ ಅವಕಾಶಗಳನ್ನು ಹೊಂದಿದ್ದಿತು. ಪೀಟರ್ ಸ್ಟೈನರ್‌ನ ಕಾರ್ಟೂನ್ ಹೇಳುವಂತೆ,  On the Internet, nobody knows you are a dog.

Dog

ಇಂಟರ್ನೆಟ್ಟು ನೀವು ಯಾರು ಎಂಬ ಪ್ರಶ್ನೆ ಕೇಳುವುದಿಲ್ಲ. ಈ ಅನಾಮಧೇಯತೆಗೆ ಎರಡು ’ಮುಖ’ಗಳಿವೆ 😉 ಒಂದು – ವಿಮುಕ್ತಿ. ಜಾತಿ, ಧರ್ಮ, ನಂಬಿಕೆ, ಹುದ್ದೆ, ಕಾಲುಚೀಲದ ಬಣ್ಣ, ಮಲಗುವ ಭಂಗಿ ಮೊದಲಾದ ಐಡೆಂಟಿಟಿಗಳನ್ನು ಮೀರಿದ ಅಭಿವ್ಯಕ್ತಿಯ ಸೌಲಭ್ಯ. ಇನ್ನೊಂದು – ಸ್ವೇಚ್ಚೆ. ಒಳ್ಳೆಯದೇನಾದರೂ ಮಾಡುವವರಿಗೆ ಹೆಸರಿನ ತವಕ; ಕಿಡಿಗೇಡಿಗಳಿಗೇಕೆ ಹೆಸರಿನ ಹಂಗು? ಅನಾಮಧೇಯತೆ ಕಿಡಿಗೇಡಿತನವನ್ನು ಉತ್ತೇಜಿಸುತ್ತದೆ. ಹೀಗಾಗಿ, ಅಂತರ್ಜಾಲದಲ್ಲಿ ಎಷ್ಟು ಒಳ್ಳೆಯ ಚರ್ಚೆಗಳು ನಡೆಯುತ್ತವೋ, ಅದರ ನೂರು ಪಟ್ಟು ನಿರರ್ಥಕ ಚರ್ಚೆಗಳು ನಡೆಯುತ್ತವೆ.

ಅನಾಮಧೇಯತೆ ಎಷ್ಟು ಅನುಕೂಲಿಯೆಂದರೆ ಅದು ಇದ್ದಬದ್ದ ಹಿಂಜರಿಕೆ, ಮುಜುಗರಗಳನ್ನು ಕರಗಿಸುತ್ತದೆ. ಮನಸ್ಸಿಗೆ ಬಂದದ್ದನ್ನು ಮೊದಲಿಗೆ ಬರೆದುಬಿಡೋಣ, ಪರಿಣಾಮ ನಂತರ ನೋಡಿದರಾಯಿತು, ಎಂಬ ಧೋರಣೆ ಬೆಳೆಸುತ್ತದೆ. ಯಾಕೆಂದರೆ ಇಲ್ಲಿ ಕಳೆದುಕೊಳ್ಳುವುದಕ್ಕೆ ಏನೂ ಇಲ್ಲವಲ್ಲ! ಮುಖಾಮುಖಿ ವಾದವಾದರೆ ಎದುರಿಗಿನವಳು ಅಪರಿಚಿತಳೇ ಇದ್ದರೂ ಮನುಷ್ಯ ಸಹಜವಾದ ಅನುಭೂತಿಯಿರುತ್ತದೆ, ಸಂಕೋಚವಿರುತ್ತದೆ. ಕೊನೆಯ ಪಕ್ಷ, ಹೆಚ್ಚೂಕಡಿಮೆ ಮಾತಾಡಿದರೆ ಒದೆ ಬೀಳಬಹುದು ಎಂಬ ಆತಂಕವಾದರೂ ಇರುತ್ತದೆ. ಆದರೆ ಅಂತರ್ಜಾಲದಲ್ಲಿ ಬಹಳಷ್ಟು ಸಲ ಆ ಹ್ಯೂಮನ್ ಎಲಿಮೆಂಟ್ ಇಲ್ಲವಾಗಿಬಿಡುತ್ತದೆ. ಈ ಕೆಳಗಿನ ಕಾರ್ಟೂನ್ ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.

asshole

ಎಂದಿನಂತೆ ಇಬ್ಬರು ಒಬ್ಬರನ್ನೊಬ್ಬರು ನಿಂದಿಸುತ್ತಿದ್ದಾರೆ; ದೇವತೆಯೊಂದು ಬಂದು ಒಬ್ಬನನ್ನು ಅನಾಮತ್ತಾಗಿ ಎತ್ತಿಕೊಂಡು ಹೋಗಿ ಇನ್ನೊಬ್ಬನ ಎದುರು ತಂದು, ಅವನ ಮುಖ ತೋರಿಸಿ, ಮರಳಿ ಒಯ್ಯುತ್ತದೆ; ಅವರಿಬ್ಬರ ಚರ್ಚೆ ಈಗ ಸಭ್ಯವಾಗಿ ನಡೆಯತೊಡಗುತ್ತದೆ; ತಾವಿಬ್ಬರೂ ಮನುಷ್ಯರೇ ಎಂಬ ಅರಿವು ಇಬ್ಬರಿಗೂ ಆಗಿದೆ. ಕಾರ್ಟೂನು ಹೇಳುತ್ತದೆ: “It’s easier to be an asshole to words than to people.”

ಹಾಗಿದ್ದರೆ ಇಂಟರ್ನೆಟ್ಟಿನ ಚರ್ಚೆಗಳು ನಿರರ್ಥಕವೇ? ಅಲ್ಲ. ಇಂಟರ್ನೆಟ್ಟು ಅತ್ಯಂತ ಪ್ರಬಲ ಮಾಧ್ಯಮ. ಇದರ ಮುಖ್ಯ ಲಕ್ಷಣ ಡೆಮಾಕ್ರಸಿ. ಇಲ್ಲಿ hierarchy ಇಲ್ಲ. ಎಲ್ಲರೂ ಒಂದೇ ಪಾತಳಿಯ ಮೇಲೆ ನಿಂತು ಸಂವಹಿಸಬಹುದು. ಆದರೆ ಆ ಸಂವಹನವನ್ನು ಪರಸ್ಪರ ನಿಂದನೆಯಲ್ಲಿ ವ್ಯರ್ಥಗೊಳಿಸದೆ, ಅರ್ಥಪೂರ್‍ಣವಾಗಿಸುವ ಹೊಣೆ ನಮ್ಮ ಮೇಲಿದೆ. ಅದನ್ನು ನಾವು ಮಾಡದಿದ್ದರೆ ಪಾಪ ಇಂಟರ್ನೆಟ್ಟೇನು ಮಾಡಬೇಕು?

ಕೊನೆಯಲ್ಲಿ ಇನ್ನೊಂದು ಮಾತು. ಮೇಲಿನ ಕಾರ್ಟೂನು ಮತ್ತೊಂದು ಸಂಗತಿಯನ್ನು ತಿಳಿಸುತ್ತದೆ. ಅದೇನೆಂದರೆ, ನಿಮ್ಮನ್ನು ಯಾರಾದರೂ ನಿಂದಿಸಿದರೆ ಅದನ್ನು ಅತಿ ಗಂಭೀರವಾಗಿ ತಗೆದುಕೊಳ್ಳುವುದರಲ್ಲಿ ಅರ್ಥವಿಲ್ಲ; ಏಕೆಂದರೆ ಅವರು ನಿಮ್ಮನ್ನು ನಿಂದಿಸುತ್ತಿಲ್ಲ, ಎದುರಿಗೆ ಪರದೆಯ ಮೇಲೆ ಕಾಣುವ ಅಕ್ಷರಗಳನ್ನು ನಿಂದಿಸುತ್ತಿದ್ದಾರೆ.

2 thoughts on ““It’s easier to be an asshole to words than to people.”

 1. ಚಕೋರ,
  ಉತ್ತಮವಾದ ವಿಚಾರ ಹೇಳಿದಿರಿ.
  ಒಂದು ಚರ್ಚೆ ನಡೆದಾಗ, –ಅದು ಮುಖಾಮುಖಿಯಾಗಿರಲಿ ಅಥವಾ ಗಣಕಯಂತ್ರದ ಎದುರಿಗೇ ಆಗಿರಲಿ–ನಾನು ಮಂಡಿಸುವ ವಾದವು ನನ್ನ ವ್ಯಕ್ತಿತ್ವದ ರಕ್ಷಣೆಯನ್ನು ಉದ್ದಿಶ್ಯವಾಗಿ ಇಟ್ಟುಕೊಂಡಿರುತ್ತದೆ.
  ಉದಾಹರಣೆಗೆ ಭಯೋತ್ಪಾದನೆ.
  ನನ್ನ identity ಒಂದು ಕೋಮಿನದಾಗಿದ್ದರೆ, ನಾನು ಭಯೋತ್ಪಾದನೆಯನ್ನು ಖಂಡಿಸುತ್ತೇನೆ. ನನ್ನ identityಯು ಬುದ್ಧಿಜೀವಿಯದಾಗಿದ್ದರೆ, ಖಂಡಿಸುವದಿಲ್ಲ.
  ಶಿವಸೇನೆಯವರು ಬಿಹಾರಿಗಳನ್ನು ಹೊಡೆದರೆ ನಾನು ಖಂಡಿಸುತ್ತೇನೆ. ಯಾಕೆಂದರೆ ಅವರು ಕನ್ನಡಿಗನಾದ ನನ್ನನ್ನೂ ಹೊಡೆಯಬಹುದು. ಕ.ರ.ವೇ.ದವರು ಬೆಂಗಳೂರಿನಲ್ಲಿ ಬಿಹಾರಿಗಳನ್ನು ಹೊಡೆದರೆ, ಅನುಮೋದಿಸುತ್ತೇನೆ.ಆಗ ನನ್ನ ಕಣ್ಣಿಗೆ ರೇಲವೇಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಕಾಣುತ್ತದೆ.
  ಅರ್ಥಾತ್, ಯಾವ ಯಾವ factorsಗಳಿಂದ ನಾನು ನನ್ನ ವ್ಯಕ್ತಿತ್ವವನ್ನು ಮಾಡಿಕೊಂಡಿದ್ದೇನೆಯೋ, ಆ ವ್ಯಕ್ತಿತ್ವದ ರಕ್ಷಣೆಯೆ ನನ್ನ ಗುರಿ–ಚರ್ಚಿಸುವ ಹೊತ್ತಿನಲ್ಲಿ.
  ಅಂದ ಮೇಲೆ ಅರ್ಥಪೂರ್ಣ ಚರ್ಚೆ ಹೇಗೆ ಸಾಧ್ಯ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s