ನಿಮಗಾಗಿ ಮುಂಜಾವದ ಕಾಫಿಯಂಥ ಕುದಿ

(ಬಹಳ ಮೊದಲಿಗೆ ಬರೆದದ್ದು.)

ಅದು ಶುರುವಾಗುತ್ತದೆ ಪ್ರತಿ ಬೆಳಿಗ್ಗೆ. ಮೊಬೈಲ್ ಫೋನಿನಲ್ಲಿನ ಡಿಜಿಟಲ್ ಸಮಯ. ೬:೩೦. ೭:೧೫. ಅಥವಾ ೭:೪೫. ಎಲ್ಲಾ ಒಂದೇ. ಯಾವುದೇ ಫರಕಿಲ್ಲ. ವರ್ತಮಾನ ಪತ್ರಗಳು ನೇಪಾಳ, ಬಿಎಂಐಸಿ, ಪರಮಾಣು ಒಪ್ಪಂದ ಅಥವಾ ಫ಼ುಟ್‍ಬಾಲ್ ಬಗ್ಗೆ ಮಾತಾಡುತ್ತವೆ. ಟಿವಿ ಹಳಸಿದ ಸುದ್ದಿಯನ್ನೇ ಇನ್ನೂ ಮಾರುತ್ತಿದೆ. ನಿನ್ನ ಬಾಲ್ಕನಿಯಿಂದ ನಾಕೇ ಅಡಿ ದೂರದಲ್ಲಿರುವ ಸಂಪಿಗೆ ಮರ. ಅದರಲ್ಲಿ ಹೂವರಳಿದ್ದನ್ನು ನಾನು ಎಂದೂ ಕಂಡಿಲ್ಲ. ಎಂದಿನಂತೆ ಸಮಯಕ್ಕೆ ಸರಿಯಾಗಿ ಕೆಳಗೆ ರಸ್ತೆಬದಿಯಲ್ಲಿ ಕಾಣುವ ಮುದುಕಿಯನ್ನು ನೋಡುತ್ತಿದ್ದಂತೆ ಅದು ಮುಂದುವರಿಯುತ್ತದೆ. ಮುದುಕಿ ಎಂದಿನಂತೆ ಅಚ್ಚುಕಟ್ಟು. ನೀಟಾದ ಸೀರೆ. ಹೂ ಮುಡಿದಿದ್ದಾಳೆ. ಆದರೆ ಕೆಳಗಿನ ಮನೆಯವರು ಎಲ್ಲೆಲ್ಲೂ ಹರಡಿದ ಕಸವನ್ನು ಬಳಿದು ತನ್ನ ಗಾಡಿಗೆ ಹಾಕಲು ಒದ್ದಾಡುತ್ತಿದ್ದಾಳೆ. ಅಮ್ಮ ಅವಳನ್ನು ನೋಡಿ ಮರುಕ ಪಡುತ್ತಾಳೆ. “ಎಲ್ಲ ಕಸವನ್ನು ಒಂದು ಪ್ಲ್ಯಾಸ್ಟಿಕ್ ಚೀಲದಲ್ಲಿ ಹಾಕಿ ಒಂದು ದಂಡೆಗೆ ಇಟ್ಟರೆ, ಪಾಪ ಆ ಮುದುಕಿ ಸುಲಭವಾಗಿ ತೊಗೊಂಡು ಹೋಗುತ್ತಾಳೆ,” ಅಷ್ಟು ಮಾಡಲು ಏನು ಧಾಡಿಯೋ ಏನೋ? ಕಸ ಮುಸುರೆಯನ್ನು ಊರ ತುಂಬಾ ಎರಚಾಡುತ್ತಾರೆ.

ಹೊರಗೆ ಹೋಗಿ ದಿನನಿತ್ಯದ ಗ್ರೌಂಡಿನ ದಿನನಿತ್ಯದ ಕಟ್ಟೆಯ ಮೇಲೆ ಕೂಡುತ್ತಿದ್ದಂತೆ ಅದರ ತೀವ್ರತೆ ಹೆಚ್ಚುತ್ತದೆ. ಕೆಲವು ಯುವಕರು ನೆಟ್ ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಅವರಲ್ಲಿಬ್ಬರಿಗೆ ಧೋನಿಯಂತೆ ಉದ್ದ ಕೂದಲಿದೆ. ಸ್ವಲ್ಪ ದೂರದಲ್ಲಿ ಕೆಂಪು ಟಿ-ಶರ್ಟ್ ಬೂದಿ ಬಣ್ಣದ ಟ್ರ್ಯಾಕ್ ಪ್ಯಾಂಟಿನವ ಮೈ ಮಣಿಸುತ್ತಿದಾನೆ. ಮಧ್ಯವಯಸ್ಸಿನ ಪಂಜಾಬಿ ಮನುಷ್ಯ ಎಂದಿನಂತೆ ತನ್ನ ನಸುಗೆಂಪು ಪಟಕಾಗೆ ವಾಕ್ ಮಾಡಿಸುತ್ತಿದ್ದಾನೆ. ತನ್ನ ಸಂಶಯಾಸ್ಪದ ತಳಿಯ ನಾಯಿಗೆ ಕೂಡ. ನಿಸ್ಸಂಶಯವಾಗಿ ಸಾಫ್ಟ್ವೇರನೇ ಇರುವ ಎತ್ತರದ ವ್ಯಕ್ತಿ ನಿಸ್ಸಂಶಯವಾಗಿ ಸಾಫ಼್ಟ್ವೇರಳೇ ಇರುವ ಅವನ ಹೆಂಡತಿಯ ಜೊತೆ ದಿನಾ ನಾಕಾರು ಸುತ್ತು ಸುತ್ತುತ್ತಿದ್ದವ, ಕೆಲವು ದಿನದಿಂದೀಚೆಗೆ ಒಬ್ಬನೇ ಸುತ್ತುತ್ತಿದ್ದಾನೆ. ಅವನ ಹೆಂಡತಿಗೆ ಆರಾಮಿಲ್ಲವೋ ಹೇಗೆ? ಹತ್ತಿರದ ಲಕ್ಷ್ಮಿ ವೈನ್ಸ್‍ದ ರಾತ್ರಿಯ ವ್ಯವಹಾರದ ಉಪವಸ್ತುಗಳು ಆಕಾರರಹಿತವಾಗಿ ಅಲ್ಲಲ್ಲಿ ಉದುರಿವೆ, ಮುದುರಿಕೊಂಡಿವೆ. ಮೆಟ್ಟಿಲುಗಳ ಮೇಲೆ, ಮತ್ತೆ ಅಲ್ಲಿ ಇಲ್ಲಿ.

ಕ್ಷಣಕ್ಷಣಕ್ಕೂ ಅದು ಬೆಳೆಯುತ್ತದೆ. ಕಿರಿದಾದ ಅಡ್ಡರಸ್ತೆಗಳ ಮೂಲಕ ವ್ಯಾಪಿಸುತ್ತದೆ. (“streets that follow like a tedious argument of insidious intent”) ರಸ್ತೆಗುಂಡಿಗಳನ್ನು ತಪ್ಪಿಸುತ್ತದೆ, ವೇಗ ನಿರೋಧಕಗಳ ಬಳಿ ವೇಗ ತಗ್ಗಿಸುತ್ತದೆ, ಗೇಟುಗಳನ್ನು ಕಳ್ಳತನದಿಂದ ತಳ್ಳಿ ಬೆಕ್ಕಿನ ಹೆಜ್ಜೆಗಳಿಂದ ಒಳಹೊಕ್ಕು ಪ್ರತಿ ಮನೆ ಮನೆಗೂ ದಾಳಿಯಿಕ್ಕುತ್ತದೆ.

ಅದನ್ನು ಯಾವ ಹೆಸರಿನಿಂದಾದರೂ ಕರೆಯಿರಿ. ಗ್ಲಾನಿ, ಏಕಾಂಗಿತನ, ನಿರರ್ಥಕತೆ, ವಿಭ್ರಮೆ. ಅಥವಾ ಜ್ವಲಂತ ಅಸ್ವಸ್ಥತೆ.

ಅಕ್ಕಪಕ್ಕದವರೆಲ್ಲರೂ ಜಾಡ್ಯ ಅಂಟುತ್ತದೆ. ಪ್ರತಿ ದಿನವೂ ಅದು ಆಗುತ್ತದೆ. ತಪ್ಪದೇ. ಅದಾಗುತ್ತಿರುವುದನ್ನು ನಾನು ನೋಡುತ್ತೇನೆ. ಅದು ಬೆಳೆಯುತ್ತ ಬೆಳೆಯುತ್ತ ಆಚೆಯ ಮನೆಯಾತನನ್ನು ಅಂಟುವುದನ್ನು ನೋಡುತ್ತೇನೆ. ನಕ್ಕೀ ತೆಲುಗನೇ ಇರಬೇಕು, ೪-೫ ಇನೀಶಿಯಲ್ಲುಗಳಿವೆ ಹೆಸರಿನ ಮೊದಲು. ಅದರಲ್ಲಿ ಮೊದಲಿಗೆ ’ಎಚ್’, ಆಮೇಲೆ ಕನಿಷ್ಠ ೩ ’ಎಸ್’ಗಳು. ಆ ಹೆಸರಿನಿಂದಾಗಿಯೇ ಅವನು ಹಿಸ್s ಎಂದು ಬುಸುಗುಡುತ್ತಿರಬೇಕು, ದಿನಾಲೂ.

ಆದರೂ, ಆದರೂ ಯಾರಿಗೂ ಇದರ ಮೂಲ ಕಾರಣ ಗೊತ್ತಿಲ್ಲ! ಆ ಪಂಜಾಬಿಯ ನಸುಗೆಂಪು ಪಟಕಾಗೆ ತಾನೆಷ್ಟು ಸಾಂಕ್ರಾಮಿಕ ಎಂದು ಗೊತ್ತೆ? ಅಥವಾ ಆ ಉದ್ದ ಕೂದಲಿನ ಕ್ರಿಕೆಟಿಗರಿಗೆ? ಇವರಲ್ಲಿ ಯಾರಿಗಾದರೂ ನಾವೆಲ್ಲ ಈ ಅಪರಾಧದಲ್ಲಿ ಭಾಗೀದಾರರು ಎಂದು ಗೊತ್ತಿದೆಯೇ? ಯಾರಿಗೂ ಇದರ ಅರಿವಿದ್ದಂತಿಲ್ಲ: ಬೇಟೆಯಾಡುವವರಿಗೂ, ಮತ್ತವರ ಶಿಕಾರಿಗೂ. ನಿಜಕ್ಕೂ ಪ್ರತಿಯೊಬ್ಬರೂ ಆನುಷಂಗಿಕವಾಗಿ ಬೇಟೆಗಾರ ಹಾಗೂ ಶಿಕಾರಿ ಎರಡೂ ಪಾತ್ರವನ್ನಾಡುತ್ತಾರೆ. ಆದರೂ ಒಬ್ಬರಿಗೂ ವಿಷಾದವೂ ಇಲ್ಲ ಆತ್ಮ ಮರುಕವೂ ಇಲ್ಲ. ಎಲ್ಲವೂ ಎಷ್ಟೊಂದು ಸ್ಪಷ್ಟವಾಗಿದೆ! ಸ್ಪಷ್ಟವಾಗಿರಲೇಬೇಕು! ಆದರೂ, ಮತ್ತೆ ಮತ್ತೆ ನಾನೊಬ್ಬನೇ ಕುದಿಯುತ್ತೇನೆ; ಕೇವಲ ನನಗೊಬ್ಬನಿಗೇ ಗೊತ್ತಿದೆ, ಇದರ ಮೂಲ ಕಾರಣ ನಾನೇ! ನನಗೊಬ್ಬನಿಗೇ ಗೊತ್ತಿದೆ, ನಾನು ಇದೆಲ್ಲವನ್ನೂ ಶುರು ಮಾಡಿದವನಷ್ಟೇ ಅಲ್ಲದೆ, ಪ್ರತಿ ದಿನವೂ ಈ ಕಾರ್ಯಕಾರಣ ಸರಪಳಿಯ ಮೊತ್ತಮೊದಲಲ್ಲಿರುತ್ತೇನೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s