ನನ್ನದೊಂದು ಥಿಯರಿ ಇದೆ. ಹಿಂದೂ ಧರ್ಮ ಸಾಮಾನ್ಯವಾಗಿ ಉಳಿದ ಬಹುತೇಕ ಧರ್ಮಗಳಿಗಿಂತ ಹೆಚ್ಚು ಸಹಿಷ್ಣುವೂ, ತನ್ನ ವಿರುದ್ಧ ನಡೆಯುವ “ಪಿತೂರಿ” “ಅಪಚಾರ”ಗಳ ಬಗ್ಗೆ ಕಡಿಮೆ ಮುಂಗೋಪಿಯೂ ಆಗಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಎರಡು (ವಸ್ತುತ:, ಇವೆರಡೂ ಒಂದಕ್ಕೊಂದು ಸಂಬಂಧಿಸಿದ್ದೇ ಆಗಿವೆ): (೧) ಬಹುದೇವತೆಗಳ ಆರಾಧನೆ (Polythiesm) (೨) ಸಗುಣ ಸಾಕಾರ ಮೂರ್ತ ದೈವತ್ವ (Personal God). ದೇವನೊಬ್ಬ ನಾಮ ಹಲವು, ಅಲ್ಲವೇ? ದೇವನೆಂಬುದೇ ನಿರ್ಗುಣ, ನಿರಾಕಾರವಲ್ಲವೇ? ಇತ್ಯಾದಿ ಪ್ರಶ್ನೆ ವಾದಗಳು ಸಿಂಧುವೇ. ಆದರೆ ನನಗೆ ಇಲ್ಲಿ ಮುಖ್ಯವಾಗಿರುವುದು ಸಾಮಾನ್ಯ ಜನರ ದಿನನಿತ್ಯದ ಆಚರಣೆಗಳಿಗೆ ಒದಗುವ ದೇವರು; ಮೆಟಫಿಸಿಕಲ್ ಗ್ರಹಿಕೆಗಳಲ್ಲ.
ನಮ್ಮದು ಬಹಳ ಹಳೆಯ ಹಾಗೂ ಬಹು ದೊಡ್ಡ ದೇಶ. ಜಗತ್ತಿನ ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಹಲವು ಇಲ್ಲಿ ಹುಟ್ಟಿ ಬೆಳೆದು ಮೇಲ್ಮೆ ಗಳಿಸಿದ್ದುವು. ಭೌಗೋಳಿಕವಾಗಿ ಇಲ್ಲಿ ಉತ್ಕಟ ಸಮಸ್ಯೆಗಳು ಕಡಿಮೆಯಿದ್ದುವು. ಅತಿರೇಕವಲ್ಲದ ಹವಾಗುಣ, ಫಲವತ್ತಾದ ನೆಲ. ಬದುಕಲು ಕಷ್ಟವಲ್ಲದ ಜಾಗ. ಜಗತ್ತಿನ ಬಹುತೇಕ ಭೂಭಾಗಳಿಗೆ ಇಂಥ ಲಕ್ಶುರಿ ಇರಲಿಲ್ಲ. ವಿಶೇಷವಾಗಿ, ಪಶ್ಚಿಮ ಯೂರಪ್ (Western Europe). ವರ್ಷಕ್ಕಾರು ತಿಂಗಳು ನೆಲವೆಂಬೋ ನೆಲ ಹಿಮಾಚ್ಚಾದಿತಗೊಂಡು ಏನನ್ನೂ ಬೆಳೆಯುವ ಹಾಗಿರಲಿಲ್ಲ. ಕೊರೆಯುವ ಚಳಿಯಲ್ಲಿ ಜೀವ ಹಿಡಿಯುವುದೇ ಕಷ್ಟವಾಗಿತ್ತು. ಜನರು ತಮ್ಮ ಪ್ರತಿ ಹೆಜ್ಜೆಗೂ ಪ್ರಕೃತಿಯೊಂದಿಗೆ ಸೆಣೆಸಬೇಕಿತ್ತು. ಬದುಕಬೇಕಿದ್ದಲ್ಲಿ ಶಕ್ಯವಿದ್ದಷ್ಟು ಪ್ರಕೃತಿಯನ್ನು ಪಳಗಿಸಬೇಕಿತ್ತು. ಇದು ಪಶ್ಚಿಮ ಯೂರಪ್ನ ತಾಂತ್ರಿಕ ಪ್ರಗತಿಗೆ ಬಹುಮುಖ್ಯ ಕಾರಣಗಳಲ್ಲಿ ಒಂದು.
ನಮ್ಮಲ್ಲಿನ ಸಮಸ್ಯೆಗಳು ಬೇರೆ ಇದ್ದುವು. ಅವು ಸಾಮಾಜಿಕ ವ್ಯವಸ್ಥೆಗೆ ಸಂಬಂಧಪಟ್ಟ ಸಮಸ್ಯೆಗಳು. ಇಲ್ಲಿ ವ್ಯಕ್ತಿಯೊಬ್ಬ ಬದುಕುವುದು ತೊಂದರೆಯಾಗಿರಲಿಲ್ಲ. ಆದರೆ ಬಹುಬೇಗ ’ಸಮಾಜ’ ಎನ್ನುವುದು ಬಹಳ ಸಂಕೀರ್ಣ ಅಸ್ತಿತ್ವವಾಗಿ ಬೆಳೆದು ಬಿಟ್ಟಿತ್ತು. ವ್ಯಕ್ತಿಯ ಮುಖ್ಯ ಸಮಸ್ಯೆ ಸಾಮಾಜಿಕ ಭಿನ್ನತೆಗಳನ್ನು ತೂಗಿಸಿಕೊಂಡು ಹೋಗುವುದಾಗಿತ್ತು. ಮಧ್ಯಯುಗದ ಪಾಶ್ಚಾತ್ಯ ವ್ಯಕ್ತಿಯ ಮನೋಧರ್ಮ ’ಸಮಸ್ಯೆಯ ನಿವಾರಣೆ’ಯದಾಗಿತ್ತು, ಭಾರತದಲ್ಲಿನ ವ್ಯಕ್ತಿಯ ಮನೋಧರ್ಮ ’ಸ್ವಯಂದರ್ಶನ’ದ್ದಾಗಿತ್ತು. ಮಧ್ಯಯುಗದ ಪಶ್ಚಿಮ ಯೂರಪ್ನ ಮನುಷ್ಯರಿಗೆ ’ಯಾಕೆ’ ’ಎಂತು’ ಇತ್ಯಾದಿ ಪ್ರಶ್ನೆಗಳ ಬಗ್ಗೆ ಚಿಂತನೆ ನಡೆಸುತ್ತ ಕೂಡುವ ಅನುಕೂಲಗಳಿರಲಿಲ್ಲ. ಅವರು ಜೀವ ಹಿಡಿಯಬೇಕಿತ್ತು. ಅವರ ಪ್ರಶ್ನೆಗಳು ಮುಖ್ಯವಾಗಿ ’ಹೇಗೆ’ ಎಂಬುವಾಗಿದ್ದುವು. ಅನಾದಿಕಾಲದಿಂದ ಭಾರತೀಯ ತಾತ್ವಿಕತೆ ಮೇಲ್ಮೆ ಗಳಿಸಿ, ಇಂದಿಗೂ ಎಲ್ಲೆಡೆಯಲ್ಲಿ ಪ್ರಸ್ತುತವಾಗುಳಿದಿರುವುದಕ್ಕೆ ಇದು ಮುಖ್ಯ ಕಾರಣ.
ನಮ್ಮಲ್ಲಿನ ಎಲ್ಲ ಭಿನ್ನತೆಗಳಿಗೂ ಪ್ರಾತಿನಿಧಿಕವಾದುದರಂತೆ ದೇವರು ಎಂಬ ಗ್ರಹಿಕೆಯ ಅಗಣಿತ ಅಭಿವ್ಯಕ್ತಿಗಳು. ಲೆಕ್ಕವಿಲ್ಲದಷ್ಟು ನಮೂನೆಯ ನೂರಾರು ಕೋಟಿ ಮಂದಿಯಿರುವ ನಮ್ಮ ದೇಶದಲ್ಲಿ, ಒಂದಷ್ಟು ಕೋಟಿ ದೇವರುಗಳಿರುವುದು ಅಸಹಜವಲ್ಲ. ಮನುಷ್ಯನ ಸೃಜನಶೀಲತೆ ಇಷ್ಟೊಂದು ದೇವರುಗಳನ್ನು ಸೃಷ್ಟಿಸುವುದಕ್ಕೆ ನಿಲ್ಲದೆ, ಪ್ರತಿಯೊಬ್ಬ ದೇವ-ದೇವತೆಗೂ ಅದರದೇ ಅನನ್ಯ ರೂಪ, ಗುಣವಿಶೇಷಣಗಳು, ಪುರಾಣ ಪುಣ್ಯಕತೆಗಳ ಸಮೇತ ಪರಿಪೂರ್ಣ ಪ್ಯಾಕೇಜ್ ನಿರ್ಮಿಸುವ ತನಕ ಮುಂದುವರೆಯಿತು. ಸಹಜವಾಗಿ ಬೇರೆ ಬೇರೆ ದೇವರ ಭಕ್ತರಲ್ಲಿ ಪೈಪೋಟಿ ಹತ್ತಿ, ಪ್ರತಿಯೊಬ್ಬರೂ ತಮ್ಮ ದೇವರು ಹೆಚ್ಚು ಶ್ರೇಷ್ಠ ಎಂದೂ, ಮತ್ತೊಬ್ಬನ ದೇವರಲ್ಲಿ ಲೋಪದೋಷಗಳಿವೆಯೆಂದೂ ಕತೆಗಳ ಮೂಲಕ ಸಾರಿದರು. ಹಾಗೆಂದು ಬೇರೆ ದೇವರುಗಳ ಬಗ್ಗೆ ಅಗೌರವವಿರಲಿಲ್ಲ. ಆದರೆ ತಮ್ಮ ದೇವರ ಬಗ್ಗೆ ಹೆಚ್ಚು ಭಕ್ತಿ, ಪ್ರೀತಿ ಇದ್ದುವು. ಕೆಲವರಂತೂ ಅಗದೀ ವ್ಯವಸ್ಥಿತವಾಗಿ ತಾರತಮ್ಯ ಪದ್ಧತಿಯನ್ನು ಬೆಳೆಸಿಕೊಂಡು ಬಂದರು. ಭೀಮಸೇನ ಜೋಶಿ, “ಕೈಲಾಸವಾಸ ಗೌರೀಶ ಈಶ…,” ಎಂದು ಹಾಡುವುದನ್ನು ಕೇಳಿ ಶೈವರೇನಾದರೂ ಆನಂದತುಂದಿಲರಾದರೋ, ಮುಂದಿನ ಸಾಲು ಅವರನ್ನು ಜರ್ರೆಂದು ಕೆಳಗಿಳಿಸುತ್ತದೆ, “ತೈಲಧಾರೆಯಂತೆ ಮನಸು ಕೊಡು ಹರಿಯಲ್ಲಿ, ಶಂಭೋ!” ಶಿವನನ್ನು ಬೇಡುವುದು ಏನೆಂದು? ನಿನ್ನದೇನೂ ಉಸಾಬರಿ ಅಂಥಾಪರಿ ನನಗ ಬೇಕಾಗಿಲ್ಲಪಾ, ಹರಿಯ ಕಡೆ ನನ್ನ ಮನಸು ಸಂಪೂರ್ಣವಾಗಿ ಇರುವಂತೆ ಮಾಡು!
ಒಟ್ಟಿನಲ್ಲಿ ದೇವರುಗಳ ಬಗ್ಗೆ ಭಯಭಕ್ತಿಗಳ ಜೊತೆಗೆಯೇ ಸಲಿಗೆಯೂ ಬೆಳೆಯುತ್ತ ಬಂತು. (ಕೆಲವು ದೇವತೆಗಳ ಜೊತೆಗೆ ಹೆಚ್ಚು ಸಲಿಗೆ ತೆಗೆದುಕೊಳ್ಳಲಾಗುವುದಿಲ್ಲವೆಂದು ಅವರನ್ನು ಶಕ್ತಿ ದೇವತೆಗಳೆಂದು ಕರೆದರು; ಅವರ ತಂಟೆಗೆ ಹೋಗದಿರುವುದೇ ಕ್ಷೇಮ.) ದೇವರನ್ನು ಕೊಂಡಾಡುವ ಹಾಡುಗಳು ಕತೆಗಳ ಜೊತೆಗೆಯೇ, ದೇವರ ಬಗ್ಗೆ ಚಾಷ್ಟೀ ಮಾಡುವ ಹಾಡು ಕತೆಗಳೂ ಬೆಳೆದವು. ಕೃಷ್ಣ ಪಾರಿಜಾತ ಮೊದಲಾದ ಸಣ್ಣಾಟಗಳಲ್ಲಿ ಕೃಷ್ಣ ಒಂದು ರೀತಿಯ ಹಾಸ್ಯಪಾತ್ರವೇ. ನವರಾತ್ರಿಯಲ್ಲಿ ನಮ್ಮ ಕಾಕಾ ಓದುತ್ತಿದ್ದ ವೆಂಕಟೇಶ ಪಾರಿಜಾತದಲ್ಲಂತೂ ಅಗದೀ ರಂಜನೀಯ ಪ್ರಸಂಗಗಳು; ಪರಸ್ಪರ ಹೀಯಾಳಿಕೆಗಳು, ಹಾಸ್ಯ, ವೆಂಕಟೇಶನ ಪರದಾಟ, ಇತ್ಯಾದಿ. ಇನ್ನು ಗಣಪಣ್ಣನಂತೂ ಹಾಸ್ಯವೇ ಮೈವೆತ್ತಂಥ ದೇವರು. ಅವನ ರೂಪವೇ ಹಾಸ್ಯಾಸ್ಪದ. ಅಷ್ಟಕ್ಕೆ ಬಿಡದೆ ಗಣೇಶ ಚೌತಿಯಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ಸಿನ ಡ್ರೈವರ ಗಣಪತಿ; ಟ್ರ್ಯಾಕ್ಟರು ಹೊಡೆಯುವ ಗಣಪತಿ; ನಾನಾ ಭಂಗಿಗಳ ಗಣಪತಿ. ಛೇ! ಛೇ! ನಮ್ಮ ಕೈಯಲ್ಲಿ ಆಟಿಕೆಯ ವಸ್ತುವಿದ್ದಂತೆ.
ಅದೆಷ್ಟು ದೇವರ ಗರ್ವಭಂಗದ ಕತೆಗಳನ್ನು ನೀವು ಕೇಳಿಲ್ಲ? ಸಣ್ಣಪುಟ್ಟ ಋಷಿಗಳು ಕೂಡ ತಮ್ಮ ಮನಸ್ಸಿಗೆ ತೋಚಿದ ದೇವರಿಗೆ ಶಾಪ ಕೊಡಲು ಸಾಧ್ಯ. ಮತ್ತೆ ದೈವತ್ವವೇನು ಸದಾಕಾಲ ಉದಾತ್ತವಾದುದೇ? ಇಲ್ಲ. ಅಸುರರನ್ನು ಎದುರಿಸುವ ಶಕ್ತಿ ದೇವತೆಗಳಿಗಿಲ್ಲ. ನಾನಾ ನಮೂನೆಯ ಮೋಸದಾಟಗಳಿಂದ ಅಸುರರನ್ನು ಕೊಲ್ಲುತ್ತಾರೆ. ವಿಷ್ಣು ಒಬ್ಬ cross-dresser! ಇನ್ನು ದೇವತೆಗಳ ಒಡೆಯನಾದ ಇಂದ್ರನ ಬಣ್ಣನೆಯನ್ನಂತೂ ಕೇಳಲೇ ಬೇಡಿರಿ. ಮಹಾ ಲೋಲುಪ. ಯಾವಾಗ ಯಾವ ಋಷಿಯ ಪತ್ನಿಯ ಹಿಂದೆ ಬೀಳುತ್ತಾನೆಂದು ಹೇಳಲಾಗುವುದಿಲ್ಲ.
ಇದೆಲ್ಲದರ ಪರಿಣಾಮವೆಂದರೆ, ದೇವತೆಗಳಿಗೂ ಮನುಷ್ಯನಿಗೂ ದೊಡ್ಡ ಬಿರುಕು ಉಳಿಯಲಿಲ್ಲ. ರೂಪ, ಗುಣಗಳನ್ನು ಹೊಂದಿದ ದೇವತೆಗಳನ್ನು ಬೇಕಾದಾಗ ಸಲಿಗೆಯಿಂದ ಕರೆಯುವ, ಬೇಡಾದಾಗ ಬಾಯಿಗೆ ಬಂದಂತೆ ಬೈಯುವ ಪ್ರೀತಿ, ಆತ್ಮೀಯತೆಗಳಿವೆ ಭಕ್ತರಿಗೆ. ಇದು ಒಂದೇ ದೇವತೆಯ ಆರಾಧನೆ (Monotheism) ಇರುವ ಮತ್ತು/ಅಥವಾ ನಿರಾಕಾರ ದೇವರಿರುವ ಧರ್ಮಗಳಲ್ಲಿ ಕಾಣುವುದು ಬಹಳ ಕಡಿಮೆ. ಹೀಗಾಗಿ ’ಲಕ್ಷ್ಮಿ ವೈನ್ಸ್’ಗಳೂ ’ಗಣೇಶ ಬೀಡಿ’ಗಳೂ ಅಸಹಜವೆನ್ನಿಸುವುದಿಲ್ಲ. ದೇವರನ್ನೊಳಗೊಂಡ ವ್ಯಂಗ್ಯಚಿತ್ರಗಳೂ, ಹಾಸ್ಯಾಸ್ಪದ ಸಿನೆಮಾಗಳೂ ಅತಿರೇಕವೆನ್ನಿಸುವುದಿಲ್ಲ. Paranoia ಕಡಿಮೆ ಇರುತ್ತದೆ. ಒಟ್ಟಾರೆಯಾಗಿ ಸಹಿಷ್ಣುತೆ ಹೆಚ್ಚು ಎನ್ನಿಸುತ್ತದೆ.
ವಿ. ಸೂ:
(೧) ನಾನು ಧರ್ಮಗಳನ್ನೂ, ವೇದಾಂತ ಇತ್ಯಾದಿಗಳನ್ನೂ ಓದಿಕೊಂಡವನಲ್ಲ. ನಾನು ಮೇಲೆ ಬರೆದದ್ದೆಲ್ಲ ಒಂದು ಅನ್ನಿಸಿಕೆ ಅಷ್ಟೆ.
(೨) ನನಗೆ ಧರ್ಮ, ದೇವರು ಇತ್ಯಾದಿಗಳಲ್ಲಿ ಅಂಥ ಆಸ್ಥೆ ಇಲ್ಲ. ಇದೊಂದು ವಿಶ್ಲೇಷಣೇ ಅಷ್ಟೆ. ಹಿಂದೂ ಧರ್ಮ ಹೆಚ್ಚು ಸಹಿಷ್ಣು ಎಂದು ಹೇಳಿದ್ದಕ್ಕಾಗಿ ಬಲಪಂಥೀಯನೆಂದೋ, ’ದೈವದೂಷಣೆ’ ಮಾಡಿದ್ದಕ್ಕಾಗಿ ಎಡಪಂಥೀಯನೆಂದೋ ಭಾವಿಸದೇ ಇರಬೇಕೆಂದು ವಿನಂತಿ!
ಹಹ್ಹ! ಚೆನ್ನಾಗಿದೆ ನಿಮ್ಮ ಅನ್ನಿಸಿಕೆಗಳು. ನಿಜ್ವಾಗ್ಲೂ…
ಕೊನೆಯದೆರಡು ಸಮಜಾಯಿಷಿಗಳಿಲ್ಲದಿದ್ದರೂ ಅಪಾರ್ಥಗಳಿಗೆ ಎಡೆಯಗುವಂಥದ್ದೇನೂ ಇಲ್ಲ ಇದರಲ್ಲಿ. Don’t worry.
– ಚೇತನಾ
ಹಿಂದೂ ಧರ್ಮ ಹೆಚ್ಚು ಸಹಿಷ್ಣುವಾಗಿರಲು ಅನೇಕ ಕಾರಣಗಳಿವೆ. ನೀವು ಮಾಡಿದ ವಿಶ್ಲೇಷಣೆ ಈ ವಿಷಯದ ಮೇಲೆ ಒಳ್ಳೇ ಬೆಳಕನ್ನು ಬೀರುತ್ತದೆ.
ಚೇತನಾ, ಸುನಾಥ: ಥ್ಯಾಂಕ್ಸ್!