ಇಂಥ ಒಂದು ದಿನದಂದು…

ಕಳೆದ ೧೨-೧೮ ತಿಂಗಳಲ್ಲಿ ಲೆಕ್ಕವಿಲ್ಲದಷ್ಟು ಸ್ಫೋಟಗಳು ನಡೆದಿವೆ. ಎಲ್ಲೋ ಒಮ್ಮೆ ಓದಿದ್ದಂತೆ, ಪ್ರತಿ ೬ ವಾರಕ್ಕೊಮ್ಮೆ ತಪ್ಪದೇ ಯಾವುದಾದರೂ ಒಂದು ನಗರದಲ್ಲಿ ಬಾಂಬುಗಳು ಸಿಡಿಯುತ್ತಿವೆ, ಜೀವಗಳು ಹೋಗುತ್ತಿವೆ. ನಾನು ದೂರದಲ್ಲಿರುವುದು ಹತಾಶೆಯ ಭಾವವನ್ನು ಇನ್ನಷ್ಟು ಹೆಚ್ಚಿಸುತ್ತದೆ, ಪ್ರತಿ ಸಲವೂ. ಆದರೆ ಮೊನ್ನೆ ೨೬ನೇ ತಾರೀಖು ಮಧ್ಯಾಹ್ನ (ಭಾರತದಲ್ಲಿ ಮಧ್ಯರಾತ್ರಿ) ನನ್ನ ಮನಸ್ಸಿನ ಭಾವ ಹಿಂದೆಂದಿನದಕ್ಕಿಂತ ತುಂಬ ಭಿನ್ನವಾಗಿತ್ತು. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳು ನಮ್ಮೆಲ್ಲರ ದಿನಚರಿಯ ಅಂಗವಾಗಿಬಿಟ್ಟಿವೆ. ಆದರೆ ಈ ಸಲದ್ದು ಕೊಟ್ಟ ಆಘಾತ ಮಾತ್ರ ಎಣೆಯಿಲ್ಲದ್ದು. ನಮ್ಮ ಮನೆ, ಊರು, ದೇಶದ ಬಹುತೇಕ ಮಂದಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾಗ ನಡೆಯುತ್ತಿದ್ದ ಅತಿಕ್ರಮಣವನ್ನು ಸುದ್ದಿಯಲ್ಲಿ ಓದುತ್ತ, ನೋಡುತ್ತ ಕಂಗಾಲಾಗಿ ಕೂತಿದ್ದೆ. ಬಾಂಬೆಯಂಥ ಒಂದು ಬೃಹತ್ ನಗರವನ್ನು ಒಂದಷ್ಟು ಅಮಾನುಷ ಯುವಕರು ತೆಕ್ಕೆಗೆ ತೆಗೆದುಕೊಂಡು ಅಟ್ಟಹಾಸಗೈಯುತ್ತಿದ್ದ ದೃಶ್ಯಗಳು ನಂಬಲಸಾಧ್ಯವಾದುವಾಗಿದ್ದುವು. ಲ್ಯಾಬ್‍ನಲ್ಲಿ ಕಂಪ್ಯೂಟರ್ ಮುಂದೆ ಕೂತು ನೋಡನೋಡುತ್ತಿದ್ದಂತೆ ೪ ಸಾವು ಎಂಬುದು ೮೦ ಸಾವು ಎಂದು ಬದಲಾಗಿದ್ದನ್ನು ಕಂಡು, ಸದ್ಯಕ್ಕೆ ಇದು ಮುಗಿದರೆ ಸಾಕು ಎಂದು ಕೈಚೆಲ್ಲಿದ್ದೆ.

ಈ mayhem ಇಷ್ಟು ಬೇಗ ಮುಗಿಯುವಂಥದ್ದಲ್ಲ ಎಂದು ತಿಳಿದು ನನಗೆ ಉಂಟಾದ ಭಾವನೆ ದುಃಖದ್ದಲ್ಲ, ತಡೆಯಲಾರದಂಥ ಆಕ್ರೋಶದ್ದು. ಅಲ್ಲಲ್ಲಿ ಬಾಂಬುಗಳನ್ನು ನೆಟ್ಟು ದೂರದಲ್ಲಿ ನಿಂತು ಸಿಡಿಸುವುದು ಒಂದು ಸ್ತರದ್ದು; ಆದರೆ ಇದು ಅದಲ್ಲವೇ ಅಲ್ಲ. ಒಂದು ಊರಿನಲ್ಲಿ ರಾಜಾರೋಷವಾಗಿ ನುಸುಳಿ, ಆ ಊರಿನ ಚಾರಿತ್ರಿಕ ಪ್ರತೀಕಗಳ ಮೇಲೂ, ಸಮೃದ್ಧಿಯ ದ್ಯೋತಕಗಳ ಮೇಲೂ ಹಲ್ಲೆ ನಡೆಸುವುದು; ಉಚ್ಚ ದರ್ಜೆಯ ಪೋಲೀಸ್ ಅಧಿಕಾರಿಗಳನ್ನು ಹಿಂಜರಿಕೆಯಿಲ್ಲದೆ ಕೊಲ್ಲುವುದು; ಯಾವುದೇ ಅಳುಕಿಲ್ಲದೆ ಬೀದಿಬೀದಿಗಳಲ್ಲಿ ಹರಿದಾಡಿ ಎಕೆ-೪೭ಗಳಿಂದ ಮನಬಂದಂತೆ ಗುಂಡು ಹಾರಿಸುವುದು; ಇವುಗಳ ರೀತಿಯೇ ಬೇರೆ. ಭಯೋತ್ಪಾದಕ ಕೃತ್ಯವೊಂದು — ಅದರ ರೀತಿ ಏನೇ ಇರಲಿ — ಹೀನವೇ. ಆದರೆ ಇದು ನಮ್ಮ ಸಾಮೂಹಿಕ ಸಹನೆಯ ಮಿತಿಯನ್ನು ಮೀರಿದ್ದು.

ಸುದ್ದಿ ನೋಡುತ್ತ ಎಷ್ಟು ಹೊತ್ತು ಕಳೆದಿತ್ತೋ ಏನೋ. ನಂತರ ಮನೆಮಂದಿಗೆ ಫೋನು ಮಾಡಿದರೆ ಅವರೆಲ್ಲ ಇನ್ನೂ ಬೆಳಗಿನ ಸವಿನಿದ್ದೆಯಲ್ಲಿದ್ದರು. ಯಾರಿಗೂ ಈ ಅತ್ಯಾಚಾರದ ಅರಿವೇ ಇಲ್ಲ! ಕೊನೆಯ ಪಕ್ಷ ಅವರಾದರೂ ಇಂಥದನ್ನು ನೋಡುತ್ತಿಲ್ಲವಲ್ಲ ಎಂದು ನೆಮ್ಮದಿಪಡಲೋ, ಇಂಥ ನಿಶ್ಚಿಂತ ಸ್ಥಿತಿಯಲ್ಲೇ ಅಲ್ಲವೇ ಇದೆಲ್ಲ ಆಗುವುದು ಎಂದು ಗಾಬರಿಪಡಲೋ ತಿಳಿಯಲಿಲ್ಲ. ಬಾಂಬೆಯಲ್ಲಿರುವ ನನ್ನ ಕಾಕಾನ ಮಗನಿಗೆ ಫೋನು ಮಾಡಿ ಏನೂ ತೊಂದರೆಯಿಲ್ಲವೆಂದು ಖಾತ್ರಿ ಮಾಡಿಕೊಂಡೆ. ಬಾಂಬೆಯಲ್ಲಿರುವ ಬೇರೆ ಸಂಬಂಧಿಕರ ಬಗೆಗೂ ತಿಳಿದುಕೊಂಡೆ. ಅವರೆಲ್ಲರೂ ಈ ದಾಳಿಗಳು ನಡೆದ ಜಾಗಗಳಿಗಿಂತ ಬಹಳ ದೂರದಲ್ಲಿ ವಾಸಿಸುತ್ತಾರೆಂದು ಗೊತ್ತಿತ್ತು. ಆದರೂ, ದುಷ್ಟಶಕ್ತಿಗಳು ಬಿಚ್ಚಿಬಿಟ್ಟ ಸೊಕ್ಕಿದ ಗೂಳಿಗಳಂತೆ ಎಲ್ಲೆಲ್ಲೂ ಓಡಾಡುತ್ತಿರುವಾಗ ಯಾವುದಕ್ಕೆ ಏನು ಖಾತರಿ?

ನನ್ನ ಮನಸ್ಸಿನಲ್ಲಿ ಮರಳಿ ಮರಳಿ ಬರುತ್ತಿದ್ದ ವಿಚಾರವೊಂದೇ. This is hopeless. This is just hopeless. I felt humiliated. Enraged. Never before had I felt so violated. ಕಣ್ಣೆದುರಿಗೇ ಲೈವ್ ಟಿವಿಯಲ್ಲಿ ನಡೆಯುತ್ತಿದ್ದ ಗುಂಡಿನ ದಾಳಿ-ಪ್ರತಿದಾಳಿಗಳು. ಮೂರ್ಖ ಮೀಡಿಯಾದ ಮೂರ್ಖ ಪ್ರಶ್ನೆಗಳು. ಹೊತ್ತಿ ಉರಿಯುತ್ತಿದ್ದ ತಾಜ್. ಅಸಂಭಾವ್ಯ ದೃಶ್ಯಗಳು. It was surreal. ಕೆಟ್ಟ ಕನಸಿನಂತೆ.
***

ಭಯೋತ್ಪಾದನೆ ಕಸಿದುಕೊಳ್ಳುವುದು ನಮ್ಮ ಸ್ವಾತಂತ್ರ್ಯವನ್ನು. ನಿಶ್ಚಿಂತೆಯಿಂದ ಎಲ್ಲಿ ಬೇಕಾದಲ್ಲಿ ಹೋಗಿಬರುವ ಸ್ವಾತಂತ್ರ್ಯ. ಯಾರೂ ನಮ್ಮನ್ನು ಪ್ರಶ್ನಿಸದಿರುವಂಥ, ಸಂಶಯದಿಂದ ನೋಡದಿರುವಂಥ ಸ್ವಾತಂತ್ರ್ಯ. ಬದುಕುವ ಸ್ವಾತಂತ್ರ್ಯ. ಈ ಕೃತ್ಯ ಎಲ್ಲವನ್ನೂ ಬದಲಿಸಲಿದೆ. ಮೂಲಭೂತವಾಗಿ. ಈ ಬದಲಾವಣೆಗಳು ಒಳ್ಳೆಯದಕ್ಕಾಗಿಯೋ ಇಲ್ಲವೋ ಎಂಬುದನ್ನು ಸಮಯ ನಿರ್ಧರಿಸುತ್ತದೆ.

ನನ್ನ ಪ್ರಕಾರ ಪ್ರತಿ ಮನುಷ್ಯನಲ್ಲೂ ಇರಲೇಬೇಕಾದ ಮೂಲಭೂತ ಸ್ವತ್ತು ಸ್ವಾತಂತ್ರ್ಯ. ಅದಕ್ಕಿಂತ ದೊಡ್ಡದು ಯಾವುದೂ ಅಲ್ಲ. ಯೋಚಿಸುವ ಸ್ವಾತಂತ್ರ್ಯ, ಅಭಿವ್ಯಕ್ತಿಸುವ ಸ್ವಾತಂತ್ರ್ಯ, ಸೃಷ್ಟಿಸುವ ಸ್ವಾತಂತ್ರ್ಯ. ಬದುಕುವ ಸ್ವಾತಂತ್ರ್ಯ. ಮನುಷ್ಯನ ಉನ್ನತಿಗೆ ಕಾರಣೀಭೂತವಾದದ್ದೇ ಸ್ವಾತಂತ್ರ್ಯದ ಪರಿಕಲ್ಪನೆ. The freedom to create and develop ideas. ಕಳೆದ ಎಷ್ಟೋ ವರ್ಷಗಳಿಂದ ಸ್ವಾತಂತ್ರ್ಯ ಮತ್ತು ಭದ್ರತೆಗಳ ನಡುವೆ ಹಗ್ಗಜಗ್ಗಾಟ ಏರ್ಪಟ್ಟಿದೆ. ಇದು ಹೀಗೆ ಇರಬಾರದಿತ್ತು. ಸ್ವಾತಂತ್ರ್ಯ ನಿರಪೇಕ್ಷವಾದುದಾಗಬೇಕಾಗಿತ್ತು. ಭದ್ರತೆ ಅತ್ಯಗತ್ಯ. ಆದರೆ ಭದ್ರತೆಯನ್ನು ಸಾಧಿಸಬೇಕಾದ್ದು ಸ್ವಾತಂತ್ರ್ಯದ ಹರಣದ ಮೂಲಕವಲ್ಲ. ಅದು ಬೇರೆಯದೇ ಸಮಸ್ಯೆ. ಆ ಸಮಸ್ಯೆಗೆ ಉತ್ತರ ಗೊತ್ತಿದೆಯೆಂದೋ, ಅಥವಾ ಅದರ ನಿವಾರಣೆ ಸುಲಭಸಾಧ್ಯವೆಂದೋ ಹೇಳುವ ಹುಂಬತನಕ್ಕೆ ನಾನು ಬೀಳುವುದಿಲ್ಲ. ಆದರೆ ಸ್ವಾತಂತ್ರ್ಯಹರಣ ಮೂಲಕ ಸಾಧಿಸುವ ಭದ್ರತೆ ನಿಜವಾದ ಭದ್ರತೆಯಲ್ಲ. It’s an illusion.

ಈಹೊತ್ತು ಮಾಲ್‍ಗಳಲ್ಲಿ ಹೋಗಿಬರುವಾಗಲೆಲ್ಲ ನನ್ನನ್ನು, ನನ್ನ ಚೀಲವನ್ನೂ ನನ್ನ ಅನುಮತಿಯಿಲ್ಲದೆ ತಪಾಸು ಮಾಡುತ್ತಾರೆ. ಈ ಥರದ್ದು ಇನ್ನೂ ಹೆಚ್ಚಾಗುತ್ತದೆ. ಒಂದು ಕಡೆ ಅಟ್ಟಹಾಸದಿಂದ ನಮ್ಮ ಸ್ವಾತಂತ್ರ್ಯ ಕಸಿದುಕೊಳ್ಳುವ ಭಯೋತ್ಪಾದನೆ. ಇನ್ನೊಂದು ಕಡೆ ಭದ್ರತೆಯ ನೆವದಲ್ಲಿ ಸ್ವಾತಂತ್ರ್ಯ ಹರಣ. ನಮಗೆ ಬೇಕಾಗಿಯೋ ಬೇಡಾಗಿಯೋ ಈ ಹಗ್ಗಜಗ್ಗಾಟದಲ್ಲಿ ನಾವೆಲ್ಲ ಭಾಗಿಗಳಾಗಬೇಕಾಗುತ್ತದೆ. ಬಹಳ ಮಾಡಿ ಇದು ಅನಿವಾರ್ಯವೇನೋ. ಏಕೆಂದರೆ ಸದ್ಯಕ್ಕಂತೂ ಬೇರೆ ಹಾದಿಗಳು ನಮಗೆ ಗೊತ್ತಿಲ್ಲ. ಹುಡುಕುವ ಪ್ರಯತ್ನವೂ ಕಡಿಮೆಯೇ ಎನ್ನುವುದು ಬೇರೆ ಮಾತು. ಇರಲಿ.

ಹೀಗಿದ್ದಾಗ, ಇಂಥ ಒಂದು ದಿನದಂದು ಉಳಿದ ನಮ್ಮೆಲ್ಲರೆದುರಿಗೂ ಒಂದೇ ಹಾದಿಯಿದೆ. ವಿವೇಕವುಳ್ಳ ಆಶ್ರಯ ಅದೊಂದೇ. ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸ್ವತಂತ್ರವಾಗಿರುವುದು ಹಾಗೂ ಸ್ವಾತಂತ್ರ್ಯವನ್ನು ಹರಡುವುದು. ವಿಚಾರಗಳ ಮೂಲಕ, ಅಭಿವ್ಯಕ್ತಿಯ ಮೂಲಕ, ಸೄಷ್ಟಿಸುವ ಮೂಲಕ, ಅಭಿವೃದ್ಧಿಯ ಮೂಲಕ.
ವಾಸ್ತವಿಕವಾಗಿ ಯೋಚಿಸಿದರೆ, ಭವಿಷ್ಯತ್ತಿನಲ್ಲಿ ನಮ್ಮ ಸ್ವಾತಂತ್ರ್ಯವನ್ನು ನಿರಪೇಕ್ಷವಾಗಿ ಉಳಿಸಿಕೊಳ್ಳುವುದು ಬಹಳ ಕಷ್ಟ. ಆದ್ದರಿಂದ, ನಮ್ಮ ನಮ್ಮ ಸೀಮಿತ ದೇಶ-ಕಾಲಗಳಲ್ಲಿಯಾದರೂ ಸ್ವತಂತ್ರವಾಗಿರೋಣ. ಭಯ ಸಂಶಯಗಳನ್ನು ಬಿತ್ತದಿರೋಣ. ಭಾಷೆ, ಜಾತಿ, ಧರ್ಮ — ಇವೆಲ್ಲವು ಮನುಷ್ಯನಿಗಾಗಿ ವಿಕಾಸವಾದಂಥವು, ಅಥವಾ ಮನುಷ್ಯ ತನ್ನ ಬೇಕುಗಳ ಪೂರೈಕೆಗಾಗಿ ನಿರ್ಮಿಸಿಕೊಂಡಂಥವು. ಅವು ನಮ್ಮ ಸಲುವಾಗಿ ಇವೆಯೇ ಹೊರತು ನಾವು ಅವುಗಳ ಸಲುವಾಗಿಯಲ್ಲ. ಹಾಗಿದ್ದೂ ಮತ್ತೆ ಮತ್ತೆ ಅವುಗಳ ಸಲುವಾಗಿ ಕೊಲ್ಲುತ್ತೇವೆ, ಸಾಯುತ್ತೇವೆ. ನಮ್ಮ ಮುಂದಿನ ಪೀಳಿಗೆಯವರಿಗೆ ನಾವು ಎಂಥ ಮೂರ್ಖರೆಂದು ತಿಳಿಸಿ, ಅವರು ಈ ಮೂರ್ಖತನವನ್ನು ಮುಂದುವರಿಸದಂತೆ ನೋಡಿಕೊಳ್ಳೋಣ.

It may sound all too lofty, but freedom is a lofty thing! ಇಂಥ ಒಂದು ದಿನದಂದು ನಮಗಿರುವ ಆಸರೆ ಅದೊಂದೇ.

7 thoughts on “ಇಂಥ ಒಂದು ದಿನದಂದು…

  1. ಬಹಳ ವಿವೇಕದ ಮಾತನ್ನು ಹೇಳಿರುವಿರಿ, ಚಕೋರ.
    ಸ್ವಾತಂತ್ರ್ಯ vs ಸುಭದ್ರತೆ ಎನ್ನುವ dilemmaಅನ್ನು ಬಹಳಷ್ಟು ದೇಶಗಳು ತಮ್ಮದೇ ಆದ ರೀತಿಯಲ್ಲಿ ಪರಿಹರಿಸಿಕೊಂಡಿವೆ. ನಮ್ಮ ದೇಶದಲ್ಲಿ ಯಾವುದೇ ಪರಿಹಾರ ಕಣ್ಣಂಚಿನಲ್ಲಿಲ್ಲವೆನಿಸುತ್ತದೆ!

  2. ಉತ್ತಮವಾಗಿ ನಿರೂಪಿಸಿದ್ದಿರಿ,

    ಭಾಷೆ, ಜಾತಿ, ಧರ್ಮ ಮತ್ತು ಇವುಗಳಿಂದಾಗುತ್ತಿರುವ ಈ ವ್ಯರ್ಥ ಹೋರಾಟಗಳ ಬಗ್ಗೆ ಒಳ್ಳೆಯ ವಿಷ್ಲೇಷಣೆ ಮಾಡಿದ್ದಿರಿ.

    ಪ್ರೀತಿಯಿರಲಿ

    ಶೆಟ್ಟರು, ಮುಂಬಯಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s