ದೋಷವಲ್ಲ, ವೈಶಿಷ್ಟ್ಯ

ಅನೇಕ ಸಲ ಒಂದು ಕಲಾಕೃತಿಯ ಮಹತ್ವ ತನ್ನಿಂದ ತಾನೇ ಎದ್ದು ಕಾಣದೆ, ಅದರ ವಿಮರ್ಶೆ/ವಿಶ್ಲೇಷಣೆಯಿಂದ ಹೊರಬರುತ್ತದೆ. ಹಾಗೆಯೇ, ಸಾಕಷ್ಟು ಸಲ ರೂಪಾಂತರ/ಅಳವಡಿಕೆಗಳೂ ಕಲಾಕೃತಿಗಳ ಮಹತ್ವವನ್ನು ಹೆಚ್ಚಿಸುತ್ತವೆ. ಸಾಧಾರಣ ಕೃತಿಗಳನ್ನೂ ಉತ್ತಮ ವ್ಯಾಖ್ಯಾನ ಅಥವಾ ಅಳವಡಿಕೆಗಳ ಮೂಲಕ ಮಹತ್ವದ್ದೆಂದು ತೋರುವಂತೆ ಮಾಡಬಹುದು. ಅನೇಕ ಉದಾಹರಣೆಗಳನ್ನು ಕೊಡಬಹುದು, ಆದರೆ ತಕ್ಷಣಕ್ಕೆ ನನ್ನ ಮನಸ್ಸಿಗೆ ಬರುತ್ತಿರುವುದು ಕೊಪ್ಪೋಲಾನ ಗಾಡ್‍ಫ಼ಾದರ್ ಸಿನೆಮಾ. ಮಾರಿಯೋ ಪುಝೋನ ಸಾಧಾರಣ ಕಾದಂಬರಿಯನ್ನು ತೊಗೊಂಡು (ನಾನು ಅದನ್ನು ಓದಿಲ್ಲ, ಕೇಳಿ ಗೊತ್ತಷ್ಟೆ) ಒಂದು ಪ್ರಬಲ ಸಿನೆಮಾವನ್ನು ಕೊಪ್ಪೋಲಾ ತಯಾರಿಸಿದ. ವ್ಯತಿರಿಕ್ತ ಉದಾಹರಣೆಗಳೂ ಸಾಕಷ್ಟು ಇವೆ. ಆದರೆ ಸದ್ಯಕ್ಕೆ ಅವುಗಳ ಅವಶ್ಯಕತೆಯಿಲ್ಲ.

ಇಷ್ಟೆಲ್ಲ ದೊಡ್ಡ ದೊಡ್ಡ ಫಾಲ್ತೂ ಮಾತುಗಳನ್ನು ಯಾಕೆ ಆಡಿದೆ ಎಂದರೆ… ಕೆಳಗಿನ ಪೇಂಟಿಂಗ್ ನೋಡಿ. ಅಂಥ ವಿಶೇಷ ಪೇಂಟಿಂಗ್ ಏನಲ್ಲ. ಟಾಯಮ್‍ಪಾಸ್ ಆಗದಿದ್ದಾಗ ಎಸ್ ತನ್ನ ಲ್ಯಾಪ್‍ಟಾಪಿನಲ್ಲಿ ಇಂಥವನ್ನು ಮಾಡುತ್ತಿರುತ್ತಾಳೆ.
Continue reading “ದೋಷವಲ್ಲ, ವೈಶಿಷ್ಟ್ಯ”

ಒಂದೆರಡು ಮಾತು

ಬಾಂಬೆಯ ನಂತರದ ದಿನಗಳಲ್ಲಿ ಅದರ ಕುರಿತು ಮತ್ತೊಂದೆರಡು ಪೋಸ್ಟುಗಳನ್ನು ಅರೆಬರೆ ಬರೆದಿಟ್ಟಿದ್ದೆ. ಆದರೆ ಅವನ್ನು ಮುಗಿಸಿ ಬ್ಲಾಗಿನಲ್ಲಿ ಹಾಕುವ ಉತ್ಸಾಹವಿಲ್ಲ. ಈಗಾಗಲೇ ಸಾಕಷ್ಟು ಮಾತುಗಳನ್ನು ಸಾಕಷ್ಟು ಜನ ಆಡಿದ್ದಾರೆ. ಕೆಲವರು ಕೆಲ ಮುಂದಿನ ಹೆಜ್ಜೆಗಳನ್ನೂ ಇಟ್ಟಿದ್ದಾರೆ. ನಾನು ಹೇಳುವುದು ಇಷ್ಟೇ. ನಾವು ಬ್ಲಾಗಿಗರು ಸಾಮಾನ್ಯವಾಗಿ ಉಳಿದವರಿಗಿಂತ ಹೆಚ್ಚು ಸವಲತ್ತುಗಳುಳ್ಳವರು. ಆರ್ಥಿಕವಾಗಿ ಅಥವಾ ಬುದ್ಧಿಶಕ್ತಿಯಿಂದ ಎಂದೇ ಅಥವಾ ಎಂದಷ್ಟೇ ಅಲ್ಲ. ಇದು ಮಾಹಿತಿ ಯುಗ. ಈ ನುಡಿ ಸವಕಲೆಂದು ತೋರಿದರೂ ಅದು ನಿಜವೆನ್ನುವುದರಲ್ಲಿ ಸಂಶಯವಿಲ್ಲ. Information is power. ನಮಗೆ ಮಾಹಿತಿ ಸಿಗುವುದು ಸುಲಭ ಸಾಧ್ಯ. ಹಾಗೆಯೇ ಮಾಹಿತಿ ಹರಡುವುದೂ. ವಾಡಿಕೆಯ ಹೇಳಿಕೆಯಂತೆ, ಇದೆಲ್ಲ ಒಂದೇ ಕ್ಲಿಕ್ಕಿನ ಅಂತರದಲ್ಲಿದೆ. ಇಂಥ ಪ್ರಬಲ ಮಾಧ್ಯಮದ ಸಾಧ್ಯತೆಗಳು ಅನೇಕ. ಉಪಯುಕ್ತ ಮಾಹಿತಿಯನ್ನು ಹರಡುವುದು ಎಷ್ಟು ಸುಲಭವೋ, ಅಷ್ಟೇ ಸುಲಭ ಗುಲ್ಲುಗಳನ್ನು, ತಪ್ಪು/ಉದ್ರೇಕಕಾರಿ ಸಂದೇಶಗಳನ್ನು ಹರಡುವುದು. ನಮ್ಮ ಸವಲತ್ತುಗಳನ್ನು ಪ್ರಭುದ್ದತೆಯಿಂದ ಬಳಸೋಣ.