ಬಾ. ಕೂತುಕೊಳ್ಳು. ನೀನು ರಕ್ಷಿಸುತ್ತಿರುವುದು ಸಂಸ್ಕೃತಿಯನ್ನೋ, ಧರ್ಮವನ್ನೋ, ಭಾಷೆಯನ್ನೋ, ಅಥವಾ ಮತ್ತೇನೇ ಇರಲಿ. ಬಾ. ಮಾತಾಡೋಣ. ಅಲ್ಲ, ಈ ದಿನ ನಾನು ಮಾತಾಡುತ್ತೇನೆ, ನೀನು ಕೇಳು; ನಿನ್ನ ಮಾತುಗಳನ್ನು ಸಾಕಷ್ಟು ಕೇಳಿದ್ದೇನೆ, ಕೆಲಸಗಳನ್ನು ಸಾಕಷ್ಟು ನೋಡಿದ್ದೇನೆ. ನಿನ್ನ ದನಿ ಜೋರು, ಕೆಲಸಗಳೂ ಎದ್ದುಕಾಣುವಂಥವು. ನನ್ನಲ್ಲಿ ಆ ಕುವ್ವತ್ತಿಲ್ಲ. ನನ್ನ ಸಣ್ಣದನಿಯನ್ನೂ ಸ್ವಲ್ಪ ಕೇಳು.
ಒಂದಷ್ಟು ಮೂಲಭೂತ ಸತ್ಯಗಳನ್ನು ಎಷ್ಟು ಸಲ ಹೇಳಿದರೂ ನಾನು ದಣಿಯುವುದಿಲ್ಲ. ನಿನಗೆ ತಿಳಿಯುವ ತನಕ ಹೇಳುತ್ತೇನೆ. ಮನುಷ್ಯ ಎಂಬ ಜೀವಿಯಲ್ಲಿರುವ ಅತ್ಯಮೂಲ್ಯ ಸ್ವತ್ತು ಸ್ವಾತಂತ್ರ್ಯ. ಸ್ವಾತಂತ್ರ್ಯ ನಿರಪೇಕ್ಷವಾದುದು. It is absolute. ಅನ್ನಿಸಿದ್ದನ್ನು ಅಭಿವ್ಯಕ್ತಿಸುವ ಸ್ವಾತಂತ್ರ್ಯ; ಅನ್ನಿಸಿದಂತೆ ಮಾಡುವ ಸ್ವಾತಂತ್ರ್ಯ; ನಮಗೊಪ್ಪುವ ಮೌಲ್ಯಗಳನ್ನು, ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಸ್ವಾತಂತ್ರ್ಯ. ಬದುಕುವ ಸ್ವಾತಂತ್ರ್ಯ. ಕುಟುಂಬ, ಗುಂಪು, ಧರ್ಮ, ಜಾತಿ, ಭಾಷೆ, ಸಂಸ್ಕೃತಿ, ರಾಜ್ಯ, ದೇಶ ಮೊದಲಾದ ಸಾಮೂಹಿಕ ಅಸ್ತಿತ್ವಗಳಿಗೆ ಒಳಗಾಗಿದ್ದುಕೊಂಡೂ ತಾನು ತಾನೇ ಆಗಿರುವ ಮನುಷ್ಯನ ಮೂಲಭೂತ, ನಿರಪೇಕ್ಷ, ಪವಿತ್ರ, ಪ್ರಶ್ನಿಸಲಾಗದ, ಕಸಿದುಕೊಳ್ಳಲಾಗದ, ವೈಯಕ್ತಿಕ ಸ್ವಾತಂತ್ರ್ಯ.
ಇಷ್ಟಕ್ಕೂ ಯಾತಕ್ಕಾಗಿ ನಿನಗೆ ಇಂಥ ಸಣ್ಣತನ? ನೀನು ಎಷ್ಟು ಅಗಾಧವೆಂಬ ಕಲ್ಪನೆಯಾದರೂ ನಿನಗಿದೆಯೇ? ನಿನ್ನ ನಶ್ವರ ಶರೀರವನ್ನು ನಿರ್ಮಿಸಿರುವ ಲಕ್ಷಾಂತರ ಬಿಲಿಯನ್ನು ಅಣುಗಳಲ್ಲಿ ಪ್ರತಿಯೊಂದೂ ಲಕ್ಷಾಂತರ ಬಿಲಿಯನ್ನು ವರ್ಷಗಟ್ಟಲೆ ತಾಳಿಕೆ ಬರುತ್ತವೆಂದು ಗೊತ್ತೇ ನಿನಗೆ? ನೀನು ೭೦-೮೦ ವರ್ಷ ಬದುಕಬಹುದು; ಆದರೆ ಅವು ವಾಸ್ತವದಲ್ಲಿ ಹೆಚ್ಚೂಕಡಿಮೆ ಅಮರ! ಇದರ ಅರ್ಥ ಗೊತ್ತೇ? ನಿನ್ನ ದೇಹದಲ್ಲಿರುವ ಅಣುಗಳೆಲ್ಲ ಎಲ್ಲ ಕಾಲಗಳಲ್ಲೂ, ಎಲ್ಲ ದೇಶಗಳಲ್ಲೂ, ಎಲ್ಲ ರೂಪಗಳಲ್ಲೂ ವಾಸವಾಗಿದ್ದುಕೊಂಡು ಕೊನೆಗೆ ನಿನ್ನಲ್ಲಿ ಬಂದಿವೆ. ಬಹಳ ಮಾಡಿ ನಿನ್ನಲ್ಲಿ ಜೂಲಿಯಸ್ ಸೀಸರ್‌ನ ಬಿಲಿಯನ್ ಅಣುಗಳಿವೆ; ಅಕ್ಬರನವು ಇನ್ನೊಂದು ಬಿಲಿಯನ್; ಕಾಳಿದಾಸನವು; ಎಲಿಜಬೆತ್‍ಳವು; ಹಿಟ್ಲರನವು; ಬುದ್ಧನವು; ಶಂಕರನವು; ಮೊಹಮ್ಮದನವು; ಎಲ್ಲ ಕೂಡಿ ನೀನಾಗಿದ್ದೀ. ನೀನು ಇಂದು ತೆಗೆದುಕೊಳ್ಳುವ ಒಂದೊಂದು ಉಸಿರಲ್ಲೂ ಅವರೆಲ್ಲರ, ಎಲ್ಲದರ ಕಣಗಳಿರಬಹುದು. ಹಾಗಿದ್ದಾಗ್ಗ್ಯೂ, ನಿನಗೆ ನಿನ್ನ ಸಣ್ಣ ನಿರ್ದಿಷ್ಟ ಅಸ್ಮಿತೆಯ ಬಗ್ಗೆ ಎಷ್ಟೊಂದು ಭರವಸೆ!
ಮತ್ತಿನ್ನು, ಆ ಸಂಕುಚಿತತೆಯನ್ನೇ ಹಿಡಿದುಕೊಂಡು ಅದೆಷ್ಟು ಶ್ರೇಷ್ಠ ಎಂದು ಸಾಧಿಸಬಯಸುವ ದೊಡ್ಡಸ್ತನ! ಬ್ರಹ್ಮಾಂಡವೆನ್ನುವುದು ಎಷ್ಟು ದೊಡ್ದದೆಂದು ಗೊತ್ತಿದೆಯೇ? ಆ ಬಗ್ಗೆ ಸ್ವಲ್ಪವಾದರೂ ಗಮನವಿಟ್ಟು ಯೋಚಿಸಿದರೆ ನಿನಗೆ ನಿನ್ನ ಕ್ಷುದ್ರತೆಯ ಅರಿವಾಗುತ್ತದೆ. On a cosmic scale you are no more than the resultant of a series of random events. ನೀನು ಈ ಜಾಗದಲ್ಲಿ, ಈ ರೂಪದಲ್ಲಿ, ಈ ಜಾತಿ ಧರ್ಮಗಳಲ್ಲಿ, ಭಾಷೆ ಸಂಸ್ಕೃತಿಗಳಲ್ಲಿ ಹುಟ್ಟಿದ್ದು ಕೇವಲ ಒಂದು ಯಾದೃಚ್ಛಿಕ ಸಂಗತಿ. ಆದರೂ ಎಲ್ಲವೂ ಪೂರ್ವನಿರ್ಧಾರಿತವಾಗಿದ್ದಂತೆ, ಎಲ್ಲವೂ ಗೊತ್ತಿದ್ದಂತೆ ಮಾತಾಡುತ್ತೀ. ಅವುಗಳ ಸಲುವಾಗಿ ಕೊಲ್ಲುತ್ತೀ, ಸಾಯುತ್ತೀ.
ಮಿಲಿಯನ್ನುಗಟ್ಟಲೇ ವರ್ಷ ಹಿಂದೆ ಹುಟ್ಟಿದ ನಮ್ಮ ಜಗತ್ತು ವಿಕಸಿಸುತ್ತ ಬಂದಿದೆ. ಲೆಕ್ಕವಿಲ್ಲದಷ್ಟು ನಮೂನೆಯ ಜೀವಜಂತುಗಳು ವಿಕಾಸಗೊಂಡಿವೆ. ಅದು ನಡೆಯುತ್ತಲೇ ಇರುವಂಥದ್ದು. ಈ ವಿಕಾಸದ ಪಥದಲ್ಲಿ ಒಂದು ಕೊಂಡಿ ಮನುಷ್ಯನದು. ಉಳಿದೆಲ್ಲದರಂತೆ. ಹುಟ್ಟು, ಸಾವು, ವಿಕಾಸ ಇವು ಜೀವ ಸಂಕುಲಕ್ಕಷ್ಟೆ ಅಲ್ಲ: ಸಮಾಜ, ಭಾಷೆ, ಸಂಸ್ಕೃತಿ, ಧರ್ಮ, ಎಲ್ಲದಕ್ಕೂ. ಹತ್ತಾರು ಶತಕಗಳಿಂದ ಸೃಷ್ಟಿಯ ತತ್ವಗಳನ್ನು ಕಂಡುಕೊಳ್ಳಲು, ಕಂಡುಕೊಂಡು ಅಭಿವ್ಯಕ್ತಿಸಲು ಸಾವಿರಾರು ವಿಜ್ಞಾನಿಗಳು, ತತ್ವಜ್ಞಾನಿಗಳು, ಕಲಾವಿದರು ತಮ್ಮ ಜೀವನವನ್ನು ಮುಡಿಪಿಡುತ್ತ ಬಂದಿದ್ದಾರೆ. ಆದರೆ ನಮಗೆ ತಿಳಿದಿರುವುದು ತೀರ ಕಡಿಮೆ; ತಿಳಿಯದಿರುವುದೇ ಹೆಚ್ಚು. ನಿನಗೊಬ್ಬನಿಗೇ ಎಲ್ಲ ಸತ್ಯಗಳ ದರ್ಶನವಾಗಿದೆ ಅಲ್ಲವೇ?
ಇಲ್ಲಿ ಕೇಳು. ನೀನು ಎಷ್ಟೇ ಅಬ್ಬರಿಸು. ತಿಪ್ಪರಲಾಗ ಹೊಡಿ. ಯಾವುದನ್ನೂ ನಿನ್ನ ಅಧೀನಕ್ಕೆ ತೆಗೆದುಕೊಳ್ಳಲು ನಿನ್ನಿಂದ ಸಾಧ್ಯವಿಲ್ಲ. ಸಮಾಜಗಳು, ಸಂಸ್ಕೃತಿಗಳು ಎಲ್ಲೆಲ್ಲಿಯೋ ಯಾವ ಯಾವ ಕಾರಣಗಳಿಗೋ ಹುಟ್ಟಿವೆ, ಯಾವುದೇ ಕೇಂದ್ರೀಕೃತ ನಿಯಂತ್ರಣವಿಲ್ಲದೆಯೇ ಬೆಳೆದಿವೆ, ವಿಕಸಿತಗೊಂಡಿವೆ. ಕೆಲವು ನಶಿಸಿಯೂ ಹೋಗಿವೆ. ಜಗತ್ತಿನ ಇತಿಹಾಸದಲ್ಲಿ ಸಾವಿರಾರು ಜೀವ ಪ್ರಕಾರಗಳೇ ಕಾಲಕ್ರಮದಲ್ಲಿ ನಿರ್ನಾಮವಾಗಿ ಹೋಗಿವೆಯಂತೆ. ಇನ್ನು ಇವೆಲ್ಲ ಯಾವ ಲೆಕ್ಕ. ಸುಮಾರು ೧೬೦ ಮಿಲಿಯನ್ ವರ್ಷಗಳಷ್ಟು ಕಾಲ ಭೂಮಿಯನ್ನು ಆಳಿದ ದೈತ್ಯ ಡೈನೋಸಾರ್‌ಗಳೇ ಸೃಷ್ಟಿಯ ಹೊಡೆತಕ್ಕೆ ನಶಿಸಿ ಹೋದವು. ಇನ್ನು ಮನುಷ್ಯನಾದರೂ ಏನು? ನಾನೇನು? ನೀನೇನು? ಎಲ್ಲವನ್ನು ನಿಯಂತ್ರಿಸುತ್ತೇನೆ ಎಂದುಕೊಂಡಿರುವ ನಿನ್ನ ಅಹಂಭಾವ ಹಾಸ್ಯಾಸ್ಪದ.
ಇನ್ನೊಂದು ಮಾತು ತಿಳಿದುಕೋ. ಧರ್ಮ, ಭಾಷೆ, ಸಂಸ್ಕೃತಿ, ಆಚಾರ, ಸಿದ್ಧಾಂತ — ಎಲ್ಲವನ್ನೂ ಮನುಷ್ಯ ತನ್ನ ಸಲುವಾಗಿ ಹುಟ್ಟುಹಾಕಿಕೊಂಡ, ಬೆಳೆಸಿದ, ವಿಕಾಸವಾಗಲು ಅನುಮಾಡಿಕೊಟ್ಟ. ಇದರರ್ಥ ಅವುಗಳ ಮೇಲೆ ಮನುಷ್ಯನ ಅಂಕೆಯಿದೆ ಎಂದಲ್ಲ. ಅವುಗಳಿಗೆ ಅವುಗಳದೇ ಆದ ಸಂಕೀರ್‍ಣ ಅಸ್ತಿತ್ವವಿದೆ. ಎಷ್ಟೊಂದು ಭಾಷೆಗಳು, ಸಿದ್ಧಾಂತಗಳು, ಆಚಾರ-ವಿಚಾರಗಳು, ಸಂಸ್ಕೃತಿ-ಸಂಪ್ರದಾಯಗಳು! ಅದೆಷ್ಟು ವಿವಿಧತೆ. ಅದೆಂಥ ಕ್ರೋಢೀಕೃತ ಸೃಜನಶೀಲ ಕ್ರಿಯಾಶಕ್ತಿ ಇವೆಲ್ಲವುಗಳ ಹಿಂದೆ ಕೆಲಸ ಮಾಡಿರಬಹುದು! ಇದೆಲ್ಲವನ್ನೂ ನೋಡಿ ನಿನ್ನ ಮನಸ್ಸಿನಲ್ಲಿ ಪ್ರೀತಿ ಕೌತುಕ ಹುಟ್ಟುವುದಿಲ್ಲವೇ? ಅದು ಹೇಗೆ ದ್ವೇಷ ತಿರಸ್ಕಾರ ಹುಟ್ಟುತ್ತದೆ? ಜಗತ್ತಿನಲ್ಲಿ ಅಸ್ತಿತ್ವದಲ್ಲಿರುವ ಸಾವಿರಾರು ಭಾಷೆ, ಧರ್ಮ, ಸಂಪ್ರದಾಯ, ಆಚಾರಗಳಲ್ಲಿ ನಿನ್ನವೂ ಇವೆ ಅಷ್ಟೆ. ವಿಶೇಷವಿಲ್ಲ. ಅದು ಹೇಗೆ ನಿನ್ನದೇ ಶ್ರೇಷ್ಠವಾಗುತ್ತದೆ? ಅದು ಹೇಗೆ ಕೇವಲ ನಿನ್ನದನ್ನು ಮಾತ್ರ ನಿನಗೆ ಪ್ರೀತಿಸಲು ಸಾಧ್ಯ? ಅದು ಹೇಗೆ ನಿನ್ನಗೊಬ್ಬನಿಗೇ ಗೊತ್ತಾಗುತ್ತದೆ, ಯಾವುದು ಸರಿ, ಯಾವುದು ತಪ್ಪು; ಯಾವುದು ಸ್ವಾತಂತ್ರ್ಯ, ಯಾವುದು ಸ್ವೇಚ್ಛೆ; ಯಾವುದು ಮಿತಿಯಲ್ಲಿರುವುದು, ಯಾವುದು ಮಿತಿಮೀರಿದ್ದು? ನಿನಗೆ ಹೇಗೆ ಗೊತ್ತು ಯಾವುದು ನಮ್ಮ ಸಂಸ್ಕೃತಿ, ಯಾವುದು ಅಲ್ಲ? ಸಾವಿರಾರು ವರ್ಷಗಳಿಂದ ವಿಕಸಿಸಿರುವ ಅಸ್ತಿತ್ವಗಳನ್ನು ಸಂಪೂರ್ಣವಾಗಿ ಅರಿತಿದ್ದೇನೆ, ಅವನ್ನು ನಿಯಂತ್ರಿಸುತ್ತೇನೆ ಎಂದು ಭ್ರಮಿಸಿರುವ ನಿನಗೆ ಎಂಥಾ ಸೊಕ್ಕಿರಲಿಕ್ಕಿಲ್ಲ!
ನಿನ್ನ ಸಂಸ್ಕೃತಿಯನ್ನು ನೀನೇ ಇಟ್ಟುಕೋ. ಅದು ನನ್ನ ಸಂಸ್ಕೃತಿಯಲ್ಲ. ನನ್ನ ಸಂಸ್ಕೃತಿಯೆಂದರೆ ಸ್ವಾತಂತ್ರ್ಯದ್ದು, ಮುಕ್ತತೆಯದು, ಸೃಷ್ಟಿ ಮತ್ತು ಅದರಲ್ಲಿರುವ ಎಲ್ಲ ಸಂಗತಿಗಳ ಬಗೆಗೆ ಕೃತಜ್ಞತೆಯದ್ದು, ಪ್ರೀತಿಯದ್ದು, ಗೌರವದ್ದು, ವಿನಯದ್ದು. ನನ್ನ ಸಂಸ್ಕೃತಿ ಎಲ್ಲವನ್ನೂ ಪ್ರೀತಿಯಿಂದ ಸ್ವಾಗತಿಸಿ, ಸತ್ಕರಿಸುವಂಥದ್ದು — ದ್ವೇಷ ಕಾರುವಂಥದ್ದಲ್ಲ, ಧ್ವಂಸ ಮಾಡುವಂಥದ್ದಲ್ಲ. ನನ್ನ ಸಂಸ್ಕೃತಿ ಎಲ್ಲರನ್ನೂ ಗೌರವದಿಂದ, ಸಹನೆಯಿಂದ ಕಾಣುವಂಥದ್ದು — ಭಿನ್ನ ಆಚಾರ, ವಿಚಾರ, ಸಂಪ್ರದಾಯ, ಏನೇ ಇರಲಿ. ನಿನ್ನದನ್ನೂ ಗೌರವಿಸುತ್ತೇನೆ, ಸಹನೆಯಿಂದ ಕೇಳುತ್ತೇನೆ. ನೀನು ಅಟ್ಟಹಾಸ ಬಿಟ್ಟರೆ.
ನನಗೆ ಗೊತ್ತಿದೆ. ತಾರ್ಕಿಕವಾಗಿ ಬೌದ್ಧಿಕವಾಗಿ ನನ್ನ ಜೊತೆ ಮಾತಾಡಲು ನಿನ್ನ ಕೈಯಲ್ಲಿ ನೀಗುವುದಿಲ್ಲ. ನಿನಗೆ ಬಾಂಬು ಸ್ಫೋಟಿಸುವುದು, ಅತ್ಯಾಚಾರವೆಸಗುವುದು, ಸದೆಬಡಿಯುವುದು ಇದಷ್ಟೇ ಸಾಧ್ಯ. ಕೇಳು. ಭೂಕಂಪ, ಉಲ್ಕಾಪಾತ, ಸುನಾಮಿ ಮೊದಲಾದ ಸೃಷ್ಟಿಯ ಅನಾಹುತಗಳನ್ನೇ ತಾಳಿಕೊಂಡು ಜಗತ್ತು ಪುಷ್ಟವಾಗಿದೆ. ನೀನು ಒಂದಷ್ಟು ಜನ ಅಮಾಯಕರಿಗೆ ಹೊಡೆದರೆ ನಾವು ’ಪಾಠ ಕಲಿತು’ ನೀನು ಹೇಳಿದಂತೆ ಕೇಳುತ್ತೇವೆಯೇ? ನೀನು ಇನ್ನೊಂದಷ್ಟು ಬಾಂಬುಗಳನ್ನು ಹಾಕಬಹುದು, ಇನ್ನೊಂದಷ್ಟು ತಲೆ ಕೆಟ್ಟ ಹೆಂಗಸರನ್ನು ಮಾಲ್‍ಗೆ ಕರೆದುಕೊಂಡು ಹೋಗಿ ಹಚ್ಚೆ ಹಾಕಿಸಿಕೊಂಡ ಹುಡುಗಿಯರನ್ನು ಹೊಡೆಸಬಹುದು, ಪಬ್ಬುಗಳಿಗೆ ಹೋಗಿ ಧಾಂಧಲೆ ಎಬ್ಬಿಸಬಹುದು. ಆದರೆ ಯಾವುದೂ ನಿಲ್ಲುವುದಿಲ್ಲ. ನಿನ್ನ ’ಸಂಸ್ಕೃತಿ’, ’ಆಚಾರ’, ’ಭಾಷೆ’, ’ಧರ್ಮ’ಗಳನ್ನು ತಡೆಹಿಡಿದು ಕಾಪಿಡಲು ನಿನ್ನಿಂದ ಸಾಧ್ಯವಿಲ್ಲ. ವಿಕ್ಟರ್ ಹ್ಯುಗೋ ಹೇಳಿದಂತೆ, “An invasion of armies can be resisted, but not an idea whose time has come.” ಅಂತೆಯೇ, ಸ್ವಾತಂತ್ರ್ಯ, ಸಹನೆ, ಪ್ರೀತಿ, ಸಹಬಾಳ್ವೆ — ಇವು ಕಾಲಾತೀತ ಗ್ರಹಿಕೆಗಳು. ಇವನ್ನು ನೀನು ತಡೆಹಿಡಿಯಲಾರೆ.
ತುಂಬಾ ಚೆನ್ನಾಗಿದೆ.
ಸಕಾಲಿಕ ಮತ್ತು ವಸ್ತುನಿಷ್ಠ.
and at the same time, most sensible write-up.
ಮೊದಲಿನ ಬರಹಗಳೂ ಸಹ. ಕೆಲವೊಂದನ್ನು ಹಿಂದೆ ಓದಿದ್ದೆ.
ಆದರೆ ಯಾಕೋ ಕಮೆಂಟ್ ಮಾಡಿರಲಿಲ್ಲ. 🙂
thanks
ತುಂಬ ಚೆಂದದ ಬರಹ. ಅರ್ಥಪೂರ್ಣವಾಗಿದೆ.
[…] ಜೊತೆಗೆ, ಸಂಕೇತ್ ಬರೆದಿರುವ ‘ಸಂರಕ್ಷಕನೆ’ ಎನ್ನುವ ಸ್ವಾರಸ್ಯಕರ- ಅರ್ಥಪ…ಲಿಂಕ್ ಮತ್ತು ಮೌನ ಕಣಿವೆಯ ಒಂದು ಲೇಖನದ […]
ಥ್ಯಾಂಕ್ಯೂ.
ಹಾಯ್,
ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.
ಧನ್ಯವಾದಗಳು,
ಶಮ, ನಂದಿಬೆಟ್ಟ
ಅಂದ ಹಾಗೆ, ಆಹ್ವಾನ ಕಳುಹಿಸುವೆ … ತಪ್ಪದೆ ಬನ್ನಿ
http://minchulli.wordpress.com
ಹೇಮಶ್ರೀ, ಚೇತನಾ, ಟೀನಾ:
ಥ್ಯಾಂಕ್ಸ್!
very well said!
ನಮಸ್ತೆ.. ಅಮ್ಮನ ಹಬ್ಬಕ್ಕೆ ಆಮಂತ್ರಿಸಲು ನಿಮ್ಮ ಮನೆಗೆ ಬಂದೆ.. ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ.. ವಿವರಗಳಿಗೆ ನನ್ನ ಬ್ಲಾಗ್ http://minchulli.wordpress.com ನೋಡಿ. ಮರೆಯದೆ ಬನ್ನಿ… ನಿಮ್ಮ ಆಪ್ತರಿಗೆಲ್ಲ ಈ ವಿಚಾರ ಹೇಳಿ ಸಾಧ್ಯವಾದರೆ ಕರೆದುಕೊಂಡು ಬನ್ನಿ.
ವಂದೇ,
– ಶಮ, ನಂದಿಬೆಟ್ಟ