… ಆದರೆ … ಎಲ್ಲಿ ಶುರು ಮಾಡಲಿ?
ನಮಸ್ಕಾರ! ಸುಮಾರು ನಾಲ್ಕು ವರ್ಷಗಳ ನಂತರ ಬ್ಲಾಗಿನ ಕದ ತೆರೆಯುತ್ತಿದ್ದೇನೆ.
ಧೂಳು ನಿವಾಂತ ನಿರಾತಂಕ ಮೈ ಚೆಲ್ಲಿದೆ.
ತೊಗಲು ಬಾವಲಿಗಳು ಗೋಡೆ ಮಾಡುಗಳಿಗೆ ಕಡುಗಪ್ಪು ಬಣ್ಣ ಬಳಿದಿವೆ.
ಹೆಜ್ಜೆ ಇಟ್ಟಲ್ಲೆಲ್ಲ ಜೇಡರಬಲೆಗಳು ಮೈಗಂಟಿ ಇರಿಸುಮುರಿಸಾಗುತ್ತಿದೆ.
ಮತ್ತೀಗ ಮುಂದೆ ಹೆಜ್ಜೆಯಿಡಲೆ?
ಪಾಳು ಬಿದ್ದಿರುವ ಬ್ಲಾಗಂಗಳವನ್ನು ಸಾರಿಸಿ ಹಸನು ಮಾಡಲೆ? ಆದರೆ … ಎಲ್ಲಿ ಶುರು ಮಾಡಲಿ?
ಟೇಬಲ್ಲಿನ ಮೇಲಿನ ಧೂಳು ಕೊಡವಿ, ‘ನನ್ನನ್ನು ಎತ್ತಿಕೋ,’ ಎಂಬಂತೆ ಕೈಕಾಲು ಮೇಲೆತ್ತಿ ಅನಾಥ ಬಿದ್ದಿರುವ ಕುರ್ಚಿಯನ್ನು ಎತ್ತಿಟ್ಟು, ಬಿಸ್ಕೀಟಿನ ಪುಡಿಕೆಯೊಡೆದು ಚಹಾದಲ್ಲಿ ಅದ್ದುತ್ತ, ನಡುನಡುವೆ ಕೀಲಿಮಣಿ ಒತ್ತುತ್ತ, ಹೊಸದೇನನ್ನಾದರೂ ಬರೆಯುವ ಸಾಹಸ ಪಡಲೇ?
ಹೇಗೆ ಶುರು ಮಾಡಲಿ, ಹೇಳಿ!
***
ಹೇಳದೆ ಕೇಳದೆ ನಾನು ಹಿಂದೊಮ್ಮೆ ಅನುವಾದಿಸಿದ್ದ ಎಲಿಯಟ್ ಪದ್ಯವೊಂದನ್ನು ತಮ್ಮ ಬ್ಲಾಗಿನಲ್ಲಿ ಹಾಕಿ, ಸೊಗಸಾದ ಮಾತುಗಳಿಂದ ನನ್ನನ್ನು ಮರಳು ಮಾಡಿ, ವರ್ಷಗಳ ನಂತರ ನಾನು ನನ್ನದೇ ಬ್ಲಾಗನ್ನು ಮತ್ತೆ ನೋಡುವಂತೆ ಮಾಡಿದ ಗೆಳತಿ ಟೀನಾ ಇವರನ್ನು ಮೊದಲಿಗೆ ಒಲುಮೆಯಿಂದ ನೆನೆಯುತ್ತೇನೆ. ಅನೇಕ ಸಲ ನನ್ನನ್ನು ಮತ್ತೆ ಬರೆಯಲು ಶುರು ಮಾಡುವಂತೆ ಪ್ರಚೋದಿಸುತ್ತಿದ್ದವರು ಗೆಳತಿ ಚೇತನಾ (ಓ ಎನ್ನಿ ಚೇತನಾ!).
ನಾನು ಮತ್ತೆ ಬರೆಯಲು ಶುರು ಮಾಡಿ, ಅದರಿಂದ ಯಾರಿಗಾದರೂ ಯಾವುದೇ ರೀತಿಯ ತೊಂದರೆ ಅಥವಾ ಬಾಧೆ ಉಂಟಾದರೆ ಅದಕ್ಕೆ ಯಾರು ಜವಾಬ್ದಾರರು ಅಂತ ಗೊತ್ತಾಯಿತಲ್ಲ?
ಸಂಕೇತ್,
ಬ್ಲಾಗಿಲು ತೆರೆದಿದ್ದೀರಿ. ನಾನು ಬೇಕಿದ್ದರೆ ದೂಳು ಹೊಡೆಯಲು ಸಹಾಯ ಮಾಡುವೆ. ಬಿಸ್ಕೀಟಿನ ಪುಡಿಕೆ ಚಹಾದ ಬಿಸಿಯಲ್ಲಿ ಕರಗಿ ಹೋಗುವ ಮುನ್ನ ಕೀಲಿಮಣೆ ಒತ್ತಲು ಶುರು ಮಾಡಿ. ಈ ನಾಲ್ಕು ವರ್ಷಗಳ ಕಾಲ ನೀವು ಬರೆಯದೆ ಉಂಟುಮಾಡಿರುವ ನಷ್ಟವನ್ನು ನನಗಾದರೂ ತುಂಬಿಕೊಡಿ. ಬ್ಲಾಗ್ ಲೋಕದಲ್ಲಿ ಒಳ್ಳೆಯ ಬರಹಗಳು ಕಾಣಿಸಿಕೊಳ್ಳಲಿ ಎಂದು ಇಷ್ಟು ದಿನ ಮಾಡಿದ ತಪಸ್ಸು ಫಲಿಸಿದೆ 🙂
ಮತ್ತೀಗ, ಅಲ್ಲಿಂದಲೇ ಶುರು ಮಾಡಿ!
ನೀವು ಮತ್ತೆ ಬರೀತೀರಿ ಅಂದ್ರ ಖುಶಿ ಆಗುತ್ತೆ. ಬರೀರಿ ಬರೀರಿ….
ನಾನೂ ಇದೇ ಹಾದಿಯಿಂದ ಮತ್ತೆ ಮರಳಿದ್ದೇನೆ.. ಒಳ್ಳೆಯ ಸ್ನೇಹಿತನೊಬ್ಬ ಬರೆಯಲೆಂದು ಹಿಂಸಿಸುವುದರ ಹಿಂದೆ ನಮ್ಮ ಸ್ವಾರ್ಥವೇ ಇರುವುದು!! ಈಗ ನೀವು ಬರೆಯದೆ ಹೋಗಿದ್ದಿದ್ದರೆ ಇನ್ನೂ ಹಲವಾರು ಬಾಣಗಳು ನಮ್ಮ ಬತ್ತಳಿಕೆಯಲ್ಲಿದ್ದವು..ಬಚಾವಾದಿರಿ ಸಂಕಪ್ಪಯ್ಯ!! ಹಿಹಿಹಿ!!
ಥ್ಯಾಂಕ್ಸ್! ನಿಮ್ಮೆಲ್ಲರ ಸಹಾಯ, ಒತ್ತಾಸೆ, ಅಷ್ಟೇ ಏಕೆ ಕಟಕಿಗಳು ಕೂಡ ಬೇಕೇ ಬೇಕು!