[ಎಷ್ಟೋ ಕಾಲದ ನಂತರ ಹೀಗೆಯೇ ಕೂತು ಒಂದು ಪದ್ಯ ಬರೆದೆ. ಈ ಪದ್ಯವನ್ನು ಹಿಂದೊಮ್ಮೆ ಬರೆದಿದ್ದೆ. ಬರೆದದ್ದೆಂದರೆ ನನ್ನ ಗೆಳೆಯನೊಬ್ಬನಿಗೆ ಫೋನಿನಲ್ಲಿ ಸಂದೇಶ ಕಳಿಸುತ್ತಿದ್ದಾಗ ಏನೋ ಒಂದು ಲಹರಿಯಲ್ಲಿ ಸರಸರನೆ ಟೈಪು ಮಾಡಿ ಕಳಿಸಿದ್ದೆ. ನಂತರ ಅದು ಕಳೆದೇ ಹೋಯಿತು! ಈಗ ‘ಅದನ್ನು’ ಮತ್ತೊಮ್ಮೆ ಬರೆದೆ. ಇದು ಅದೇ ಎಂದರೆ ಅದೇ, ಅಲ್ಲವೆಂದಲ್ಲಿ ಅಲ್ಲ. ಥೀಮು ಮಾತ್ರ ಅದೇ. ಉಳಿದಂತೆ ಆಗ ಏನು ಬರೆದಿದ್ದೆ ಎನ್ನುವುದು ಅಷ್ಟಾಗಿ ನನಗೆ ನೆನಪಿಲ್ಲ. ಅದೇನೇ ಇರಲಿ. ಬರೆಯುವುದು ಬಲು ಕಷ್ಟ. ಅದೂ ಬರೆಯುವ ರೂಢಿ ತಪ್ಪಿದ್ದಲ್ಲಿ ಮತ್ತೆ ಕೂತು ಬರೆಯುವುದು ಸಾಕಷ್ಟು ಹೈರಾಣ ಮಾಡುವ ಕೆಲಸ. ಓದಿ ಅಭಿಪ್ರಾಯ ತಿಳಿಸಿ.]
ಹುಟ್ಟಿನಿಂದಲೇ ಕರ್ಣನ ಮೈ
ಗಂಟಿಕೊಂಡ ಹೊನ್ನ ಕವಚ
ಕಿವಿಗೆ ಕುಂಡಲ. ವರವೋ
ಶಾಪವೋ ಅದವನ ದಿರಿಸು.
ಕುಂತಿ ತೇಲಿಸಿಯೇ ಬಿಟ್ಟಳು ಕೂಸು
ಸೂರ್ಯ ಕೊಟ್ಟದ್ದಲ್ಲವೇ?
ಆಗದೇನೋ ಹಸಿ ಹೊಲಸು.
ಕರ್ಣನೋ ಹೇಳೀಕೇಳಿ ದಾನಶೂರ
ಮುಂದೊಮ್ಮೆ ಮಳೆಯ ದೇವ ಕೇಳಿದ್ದೇ ತಡ
ಬಿಚ್ಚಿ ಕೊಟ್ಟೇ ಬಿಟ್ಟ, ಬೆತ್ತಲೆ ನಿಂತ.
ಸಾಮ ದಾನ ಭೇದ ದಂಡಗಳನೆಲ್ಲ
ಅರಿತೂ ಮರೆತ ಮೊದ್ದು ಕ್ಷತ್ರಿಯ
ಕೊಟ್ಟ ಮಾತು ಬಿಟ್ಟ ಬಾಣ
ತೊಟ್ಟ ಬಟ್ಟೆ. ಎಲ್ಲವೂ ಗೌಣ.
ಎಳವೆಯಲ್ಲಿ ಎಷ್ಟೋ ಸಲ ಕೇಳಿ
ಮರೆತಿರುವ ಕತೆ ಮತ್ತೆ
ನೆನಪಾಗಲು ನಿಮಿತ್ತ ನನ್ನ ಮಗಳು
ಮತ್ತವಳ ಮಜೆಂಟಾ ಫ್ರಾಕು.
ಅದನ್ನು ಮೈಮೇಲೆ ಅಚ್ಚುಹಾಕಿಸಿ
ಕೊಂಡೇ ಹುಟ್ಟಿದ್ದಳೇನೋ ಎಂಬ ಠಾಕು
ಊಟ ಆಟ ಅಳು ನಿದ್ದೆ ಕನಸು
ಕನವರಿಕೆಯಲ್ಲೂ ಬಿಡದ ಸಂಗಾತ
ಹೋಗಲಿ ಸ್ನಾನಕ್ಕೆ ನಿಂತಾಗಲಾದರೂ
ಬೇಡಿಕೊಂಡಷ್ಟೂ ಜಗ್ಗದ ಒಂದೇ ಹಟ.
ಪುಸಲಾವಣೆ ಅರೆ ಮುನಿಸು ಬೆದರಿಕೆ ಎತ್ತಿದ ಕೈ
ಎಲ್ಲದಕೂ ಮುದ್ದುಗರೆಯುವ ತಿರುಗು ಬಾಣ
ಮಾಡಿದ ಪ್ರಾಮಿಸ್ಸು ನಾಲಿಗೆಯ ಮೇಲಣ
ಚಾಕಲೇಟು ಕರಗಿದಂತೇ ಮಟಾ ಮಾಯ.
ಕೊಡುಗೈಯ್ಯ ಕರ್ಣ ಪಾಪ ಎಲ್ಲ ಇದ್ದೂ
ಯಾವುದಕ್ಕೂ ಅಂಟಿಕೊಳ್ಳಲಾರದ ಸಂತಪ್ತ.
ನಾನೂ ಮಗಳೂ ಮಗಳೂ ಫ್ರಾಕೂ
ಒಂದಕ್ಕೊಂದು ಲಿಪ್ತರು. ನಿತ್ಯ ತೃಪ್ತರು.