ಇಂಥ ಒಂದು ದಿನದಂದು…

ಕಳೆದ ೧೨-೧೮ ತಿಂಗಳಲ್ಲಿ ಲೆಕ್ಕವಿಲ್ಲದಷ್ಟು ಸ್ಫೋಟಗಳು ನಡೆದಿವೆ. ಎಲ್ಲೋ ಒಮ್ಮೆ ಓದಿದ್ದಂತೆ, ಪ್ರತಿ ೬ ವಾರಕ್ಕೊಮ್ಮೆ ತಪ್ಪದೇ ಯಾವುದಾದರೂ ಒಂದು ನಗರದಲ್ಲಿ ಬಾಂಬುಗಳು ಸಿಡಿಯುತ್ತಿವೆ, ಜೀವಗಳು ಹೋಗುತ್ತಿವೆ. ನಾನು ದೂರದಲ್ಲಿರುವುದು ಹತಾಶೆಯ ಭಾವವನ್ನು ಇನ್ನಷ್ಟು ಹೆಚ್ಚಿಸುತ್ತದೆ, ಪ್ರತಿ ಸಲವೂ. ಆದರೆ ಮೊನ್ನೆ ೨೬ನೇ ತಾರೀಖು ಮಧ್ಯಾಹ್ನ (ಭಾರತದಲ್ಲಿ ಮಧ್ಯರಾತ್ರಿ) ನನ್ನ ಮನಸ್ಸಿನ ಭಾವ ಹಿಂದೆಂದಿನದಕ್ಕಿಂತ ತುಂಬ ಭಿನ್ನವಾಗಿತ್ತು. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳು ನಮ್ಮೆಲ್ಲರ ದಿನಚರಿಯ ಅಂಗವಾಗಿಬಿಟ್ಟಿವೆ. ಆದರೆ ಈ ಸಲದ್ದು ಕೊಟ್ಟ ಆಘಾತ ಮಾತ್ರ ಎಣೆಯಿಲ್ಲದ್ದು. ನಮ್ಮ ಮನೆ, ಊರು, ದೇಶದ ಬಹುತೇಕ ಮಂದಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾಗ ನಡೆಯುತ್ತಿದ್ದ ಅತಿಕ್ರಮಣವನ್ನು ಸುದ್ದಿಯಲ್ಲಿ ಓದುತ್ತ, ನೋಡುತ್ತ ಕಂಗಾಲಾಗಿ ಕೂತಿದ್ದೆ. ಬಾಂಬೆಯಂಥ ಒಂದು ಬೃಹತ್ ನಗರವನ್ನು ಒಂದಷ್ಟು ಅಮಾನುಷ ಯುವಕರು ತೆಕ್ಕೆಗೆ ತೆಗೆದುಕೊಂಡು ಅಟ್ಟಹಾಸಗೈಯುತ್ತಿದ್ದ ದೃಶ್ಯಗಳು ನಂಬಲಸಾಧ್ಯವಾದುವಾಗಿದ್ದುವು. ಲ್ಯಾಬ್‍ನಲ್ಲಿ ಕಂಪ್ಯೂಟರ್ ಮುಂದೆ ಕೂತು ನೋಡನೋಡುತ್ತಿದ್ದಂತೆ ೪ ಸಾವು ಎಂಬುದು ೮೦ ಸಾವು ಎಂದು ಬದಲಾಗಿದ್ದನ್ನು ಕಂಡು, ಸದ್ಯಕ್ಕೆ ಇದು ಮುಗಿದರೆ ಸಾಕು ಎಂದು ಕೈಚೆಲ್ಲಿದ್ದೆ.
Continue reading “ಇಂಥ ಒಂದು ದಿನದಂದು…”

ನಿಮಗಾಗಿ ಮುಂಜಾವದ ಕಾಫಿಯಂಥ ಕುದಿ

(ಬಹಳ ಮೊದಲಿಗೆ ಬರೆದದ್ದು.)

ಅದು ಶುರುವಾಗುತ್ತದೆ ಪ್ರತಿ ಬೆಳಿಗ್ಗೆ. ಮೊಬೈಲ್ ಫೋನಿನಲ್ಲಿನ ಡಿಜಿಟಲ್ ಸಮಯ. ೬:೩೦. ೭:೧೫. ಅಥವಾ ೭:೪೫. ಎಲ್ಲಾ ಒಂದೇ. ಯಾವುದೇ ಫರಕಿಲ್ಲ. ವರ್ತಮಾನ ಪತ್ರಗಳು ನೇಪಾಳ, ಬಿಎಂಐಸಿ, ಪರಮಾಣು ಒಪ್ಪಂದ ಅಥವಾ ಫ಼ುಟ್‍ಬಾಲ್ ಬಗ್ಗೆ ಮಾತಾಡುತ್ತವೆ. ಟಿವಿ ಹಳಸಿದ ಸುದ್ದಿಯನ್ನೇ ಇನ್ನೂ ಮಾರುತ್ತಿದೆ. ನಿನ್ನ ಬಾಲ್ಕನಿಯಿಂದ ನಾಕೇ ಅಡಿ ದೂರದಲ್ಲಿರುವ ಸಂಪಿಗೆ ಮರ. ಅದರಲ್ಲಿ ಹೂವರಳಿದ್ದನ್ನು ನಾನು ಎಂದೂ ಕಂಡಿಲ್ಲ. ಎಂದಿನಂತೆ ಸಮಯಕ್ಕೆ ಸರಿಯಾಗಿ ಕೆಳಗೆ ರಸ್ತೆಬದಿಯಲ್ಲಿ ಕಾಣುವ ಮುದುಕಿಯನ್ನು ನೋಡುತ್ತಿದ್ದಂತೆ ಅದು ಮುಂದುವರಿಯುತ್ತದೆ. ಮುದುಕಿ ಎಂದಿನಂತೆ ಅಚ್ಚುಕಟ್ಟು. ನೀಟಾದ ಸೀರೆ. ಹೂ ಮುಡಿದಿದ್ದಾಳೆ. ಆದರೆ ಕೆಳಗಿನ ಮನೆಯವರು ಎಲ್ಲೆಲ್ಲೂ ಹರಡಿದ ಕಸವನ್ನು ಬಳಿದು ತನ್ನ ಗಾಡಿಗೆ ಹಾಕಲು ಒದ್ದಾಡುತ್ತಿದ್ದಾಳೆ. ಅಮ್ಮ ಅವಳನ್ನು ನೋಡಿ ಮರುಕ ಪಡುತ್ತಾಳೆ. “ಎಲ್ಲ ಕಸವನ್ನು ಒಂದು ಪ್ಲ್ಯಾಸ್ಟಿಕ್ ಚೀಲದಲ್ಲಿ ಹಾಕಿ ಒಂದು ದಂಡೆಗೆ ಇಟ್ಟರೆ, ಪಾಪ ಆ ಮುದುಕಿ ಸುಲಭವಾಗಿ ತೊಗೊಂಡು ಹೋಗುತ್ತಾಳೆ,” ಅಷ್ಟು ಮಾಡಲು ಏನು ಧಾಡಿಯೋ ಏನೋ? ಕಸ ಮುಸುರೆಯನ್ನು ಊರ ತುಂಬಾ ಎರಚಾಡುತ್ತಾರೆ.
Continue reading “ನಿಮಗಾಗಿ ಮುಂಜಾವದ ಕಾಫಿಯಂಥ ಕುದಿ”

ಸಣ್ಣ ಸಂಗತಿಗಳು

ಕ್ಯಾಂಪಸ್ಸಿಗೆ ಹೋಗಲು ಬಸ್ಸು ಹತ್ತಿದ ತಕ್ಷಣ ಮೊದಲು ನನ್ನ ಲಕ್ಷ್ಯ ಹೋಗುವುದು ಬಸ್ಸಿನ ಒಳಮೈಯ್ಯನ್ನು ಅಲಂಕರಿಸಿದ ಫಲಕಗಳತ್ತ. ಬರ್ಗರುಗಳ ಅಂಗಡಿಗಳನ್ನೊಳಗೊಂಡಂತೆ “ಬಂಡವಾಳಶಾಹೀ” ಜಾಹೀರಾತುಗಳು, ಯುನಿವರ್ಸಿಟಿಯ ಕೆಲ ಸಂದೇಶಗಳು, ಮತ್ತಿತರ (ಕೆಲವು ಬಸ್ಸುಗಳಲ್ಲಿ ಆರ್ಟ್ ಆಪ್ ಲಿವಿಂಗ್‍ನ ಜಾಹೀರಾತುಗಳೂ ಇವೆ) ಫಲಕಗಳ ನಡುವೆ ನಾನು ಹುಡುಕುವುದು ಒಂದು ವಿಶೇಷ ಫಲಕವನ್ನು: ಈ ಊರಲ್ಲಿ ಬಸ್ಸಿನ ಸೇವೆ ನಡೆಸುವ ಕಂಪನಿ, ಕೆಲ ಸ್ವಯಂಸೇವಕರ ಜೊತೆ ಭಾಗಿಯಾಗಿ, ಸ್ಥಳೀಯರಿಂದ ಪದ್ಯಗಳನ್ನು ಆಹ್ವಾನಿಸಿ, ಆಯ್ದ ಕೆಲವನ್ನು ಆರು ತಿಂಗಳಿಗೊಮ್ಮೆ ಪ್ರಕಟಿಸುತ್ತದೆ; ಆ ಪದ್ಯಗಳನ್ನು ಇಂಥವೇ ಫಲಕಗಳ ಮೇಲೆ ಛಾಪಿಸಿ ಬಸ್ಸಿನಲ್ಲಿ ಹಾಕುತ್ತಾರೆ. ಆ ಸ್ವಯಂಸೇವಕರ ತಂಡದ ಹೆಸರೂ ಚೆನ್ನಾಗಿದೆ — words on the go. ಸಣ್ಣ ಸಣ್ಣ ಪದ್ಯಗಳು. ಕೆಲವು ಚೆನ್ನಾಗೂ ಇವೆ. ಆ ಪದ್ಯಗಳ ಗುಣಮಟ್ಟಕ್ಕಿಂತ ಇಂಥ ಪ್ರಯತ್ನ ಅಪ್ಯಾಯಮಾನವೆನ್ನಿಸುತ್ತದೆ. ಸಮುದಾಯಗಳೊಂದಿಗೆ ಸಹಕರಿಸಿ, ಅವನ್ನು ಒಳಗೊಂಡು, ಒಟ್ಟಿಗೆ ಮುಂದುವರಿಯುವ ಆಸ್ಥೆ ಇರುವುದು ಯಾವ ಕಾಲದಲ್ಲೂ, ಯಾವ ದೇಶದಲ್ಲೂ ಸ್ವಾಗತಾರ್ಹ. ಸಮುದಾಯ ಹಾಗೂ ಸಂಸ್ಥೆಗಳು ಒಂದಕ್ಕೊಂದು ಸಂಬಂಧವಿಲ್ಲದಂತಿರುವ, ಬಹಳ ಸಂಕುಚಿತವಾದ — ವಿವಿಧ ಆಯಾಮಗಳಿಲ್ಲದ– ಕೊಡುಕೊಳ್ಳುವಿಕೆಯಿರುವಂಥ ವ್ಯವಸ್ಥೆಗಳ ಬಗ್ಗೆ ನನಗೆ ಅತೀವ ಬೇಸರವಾಗುತ್ತದೆ.
Continue reading “ಸಣ್ಣ ಸಂಗತಿಗಳು”

ಇತ್ಯೇವ ಇತ್ಯೇವ ಇತ್ಯೇವ

(ನಾನು ಹಿಂದೊಮ್ಮೆ ಬರೆದಿದ್ದರ ಸ್ವಲ್ಪ ಪರಿಷ್ಕೃತ ಅನುವಾದ.)

ಜಯನಗರದ ’ದ ಆರ್ಟ್ ಆಫ಼್ ಲಿವಿಂಗ್ ಶಾಪ್’ ತುಂಬಾ ಆಯಕಟ್ಟಿನ ಜಾಗದಲ್ಲಿ ಸ್ಥಾಪಿತವಾಗಿದೆ. Very strategically located. ಅದರ ಸ್ಥಾನ ಎಷ್ಟು ಚೆನ್ನಾಗಿದೆ ಎಂದರೆ, ನಾನು ಇನ್ಸ್ಟಿಟ್ಯೂಟಿಗೆ ಹೋಗಿಬರುವಾಗ ದಿನಾ ಅಡ್ಡಬರುತ್ತದೆ. ಹಾಗೆಯೇ ರಂಗಶಂಕರ ಮತ್ತಿತರ ಅನೇಕ ಆಸಕ್ತಿಕರ ಜಾಗಗಳಿಗೆ ಹೋಗಬೇಕಾದಾಗಲೂ ಕಾಣಿಸಿಕೊಳ್ಳುತ್ತದೆ. ಈಗೀಗ ಇದು ನನಗೆ ರೂಡಿಯಾದಂತಾಗಿದೆ ಬಿಡಿ. ಹೀಗಾಗಿ ಮೊದಲು ಕೆಲವು ಸಲ ಆ ’ಶಾಪ್’ ನೋಡಿದಾಗ ಆದ ಥ್ರಿಲ್ ಈಗ ಉಂಟಾಗುವುದೇ ಇಲ್ಲ. ನೀವು ಈಗಾಗಲೆ ಇದನ್ನು ಸರಿಯಾಗಿ ಊಹಿಸಿರುತ್ತೀರ: ಅಲ್ಲಿ ಅವರು ’ದ ಆರ್ಟ್ ಆಫ಼್ ಲಿವಿಂಗ್’‍ನ ಪುಸ್ತಕಗಳನ್ನು ಮಾರುವುದಿಲ್ಲ. ಅಥವಾ, ಹೋಗಲಿ ಬಿಡಿ; ಹಾಗೆ ಹೇಳುವುದು ಸಮಂಜಸವಲ್ಲವೇನೋ. ಬಹಳ ಮಾಡಿ, ಆ ಪುಸ್ತಕಗಳನ್ನೂ ಮಾರುತ್ತಾರೆ, ಆದರೆ ಅದು ಅವರ ಮುಖ್ಯ ಧಂದೆ ಅಲ್ಲ ಅಂತ ನನಗನ್ನಿಸುತ್ತೆ. ಹತ್ತಾರು ಅಡಿಗಳ ದೂರದಿಂದ, ನನ್ನ ಚಲಿಸುತ್ತಿರುವ ಬೈಕಿನಿಂದ ಕಂಡ ಓರೆಗಣ್ಣಿನ ಭಂಗುರ ನೋಟವೂ ಸಾಕು. ಸೂಜಿಗಲ್ಲಿನಂತೆ ಸೆಳೆಯುವ ಅದೆಂಥ ತರಹೇವಾರಿ ಸರಕುಗಳವು. What magnetic merchandise! ಶರ್ಟುಗಳು, ಕುರ್ತಾಗಳು, ಹೆಂಗಸರ ಟಾಪ್‍ಗಳು, ಟಿ-ಶರ್ಟುಗಳು… (ಕನ್ನಡಕ್ಕೆ ನಿಲುಕದ) bracelets, bandannas, caps, ಹಾಗೂ ನನ್ನ ತಿಳುವಳಿಕೆ ಹಾಗೂ ಊಹೆಗಳಿಗೆ ನಿಲುಕದ ಇನ್ನೂ ಏನೇನೋ ಸಾಮಗ್ರಿಗಳು. ಅಲ್ಲಿ ನಿಮ್ಮ ಮೈಮೇಲೆ ’ದ ಆರ್ಟ್ ಆಫ಼್ ಲಿವಿಂಗ್’‍ನ ಹಚ್ಚೆಗಳನ್ನೂ ಹಾಕುತ್ತಾರೇನೋ. ಆಯಕಟ್ಟಿನ ಜಾಗಗಳಲ್ಲಿ! Strategically located tattoos anyone? ನಾನು ಒಮ್ಮೆ ಒಳಹೊಕ್ಕು ನೋಡಬೇಕೇನೋ. (ಓ ಕೊನೆಗೊಮ್ಮೆ ಸೆಳೆತ ತಡೆಯಲಾರದೆ ಹೋಗಿಯೂಬಿಟ್ಟಿದ್ದೆ. ಆದರೆ ಏನನ್ನೂ ಕೊಳ್ಳಲಿಲ್ಲ.)
Continue reading “ಇತ್ಯೇವ ಇತ್ಯೇವ ಇತ್ಯೇವ”

೯ನೇ ಮುಖ್ಯರಸ್ತೆಯಿಂದ ಸಣ್ಣ ಜಗತ್ತಿನೆಡೆಗೆ

ಒಂದು ಸಣ್ಣ ಪ್ರಯೋಗ ಮಾಡೋಣ. ಒಂದು ವೈಚಾರಿಕ ಪ್ರಯೋಗ (thought experiment) ಎಂದಿಟ್ಟುಕೊಳ್ಳಿ ಬೇಕಿದ್ದರೆ. ನಿಮ್ಮ ಮನಸ್ಸಿನಲ್ಲೆ ನಿಮ್ಮ ಗೆಳೆಯ/ಗೆಳತಿಯರು ಮತ್ತು/ಅಥವಾ ಪರಿಚಿತರನ್ನು ನೆನೆಸಿಕೊಳ್ಳಿ; ಬಂಧುಗಳು ಬೇಡ. ಹಾಗೆ ನೆನೆಸಿಕೊಳ್ಳುತ್ತಲೇ ಅವರನ್ನು ನಾನು ಹೇಳಲಿರುವ ಹಾಗೆ ವಿಂಗಡಿಸಿ (ಒಬ್ಬ ವ್ಯಕ್ತಿಯನ್ನು ಒಂದೇ ಕೆಟಗರಿಗೆ ಹಾಕಿ): ನಿಮ್ಮ ಮನೆಯ ಸುತ್ತಮುತ್ತಲಲ್ಲಿರುವವರು ಹಾಗೂ ನಿಮ್ಮ ಮನೆಗೆ ಹತ್ತಿರ ಇರುವವರು; ಉಳಿದಂತೆ ನಿಮ್ಮ ಏರಿಯಾದಲ್ಲಿರುವವರು; ನೀವಿರುವ ಏರಿಯಾ ಬಿಟ್ಟು ನೀವಿರುವ ನಗರದಲ್ಲಿ ಎಲ್ಲಿಯಾದರೂ ಇರುವವರು; ಭಾರತದ ಉಳಿದೆಲ್ಲ ನಗರದಲ್ಲಿರುವವರು; ಭಾರತ ಬಿಟ್ಟು ಜಗತ್ತಿನ ಯಾವ್ಯಾವುವೋ ದೇಶದಲ್ಲಿರುವವರು. ಸದ್ಯಕ್ಕೆ, ಈ ನಮ್ಮ ಭೂಮಿಯನ್ನು ಬಿಟ್ಟು ಬೇರೆಲ್ಲೂ ನಿಮ್ಮ ಗೆಳೆಯರು ಇಲ್ಲವೆಂದುಕೊಳ್ಳೋಣ. ಇದ್ದರೆ ಅವರನ್ನೂ ಸೇರಿಸಿಕೊಳ್ಳಿ.

ನೀವು ಈಗಾಗಲೇ ಬೋರು ಹೊಡೆಸಿಕೊಂಡು ಬೇರೆಲ್ಲೋ ಹೋಗಿಲ್ಲದಿದ್ದರೆ, ಮೇಲೆ ನೀವು ಮಾಡಿದ ಪ್ರತಿಯೊಂದು ಗುಂಪಿನಲ್ಲೂ ಎಷ್ಟು ಜನರಿದ್ದಾರೆ ಎಂದು ಲೆಕ್ಕ ಹಾಕಿ. (ಮನಸ್ಸಿನಲ್ಲೇ ಮಾಡಬೇಕಿಲ್ಲ; ಬೇಕಿದ್ದರೆ ಒಂದು ಹಾಳೆ ಹಾಗೂ ಪೆನ್ಸಿಲ್ ಉಪಯೋಗಿಸಿ.) ನೀವು (ನನ್ನಂತಲ್ಲದೆ) ಆಧುನಿಕ ಕನೆಕ್ಟೆಡ್ ಜಗತ್ತಿನ ಸಾಮಾನ್ಯ ಜೀವಿಯಾಗದ್ದ ಪಕ್ಷದಲ್ಲಿ ಎಲ್ಲ ಗುಂಪುಗಳಲ್ಲೂ ಹೆಚ್ಚೂಕಡಿಮೆ ಅಷ್ಟೇ ಜನರಿರುತ್ತಾರೆ! ಉದಾಹರಣೆಗೆ: ನಿಮ್ಮ ಮನೆಯ ಹತ್ತಿರ ನಿಮ್ಮ ಪರಿಚಯಸ್ಥರ ಸಂಖ್ಯೆ ೧೦ ಎಂದುಕೊಳ್ಳಿ, ಅವರನ್ನು ಬಿಟ್ಟು ಉಳಿದಂತೆ ಬೆಂಗಳೂರಿನಲ್ಲಿ ನಿಮಗೆ ಇನ್ನೂ ಹತ್ತು ಜನರು ಗೊತ್ತಿರುತ್ತಾರೆ, ಬೆಂಗಳೂರು ಬಿಟ್ಟು ಉಳಿದಂತೆ ಭಾರತದಲ್ಲಿ ಇನ್ನೂ ಹತ್ತು ಜನ ಗೊತ್ತಿರುತ್ತಾರೆ, ಹಾಗೂ ಜಗತ್ತಿನ ಎಲ್ಲೆಡೆ ಹರಡಿಕೊಂಡಿರುವ ಇನ್ನೊಂದು ೧೦ ಜನರಿರುತ್ತಾರೆ.

ಇಲ್ಲಿ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಬೇಕು. ಇಲ್ಲಿ ಸಂಖ್ಯೆಗಳು ಕರಾರುವಾಕ್ಕಾಗಿ ಇರುವುದಿಲ್ಲ. ಹಾಗೆಯೇ ನಮ್ಮ ’ಹತ್ತಿರ’ ’ದೂರ’ ಇಂಥವು ನಮ್ಮ ಗ್ರಹಿಕೆಯ ಮೇಲೆ ಆಧಾರಿತ. ಆದ್ದರಿಂದ ಸ್ವಲ್ಪ ಹೆಚ್ಹೂಕಡಿಮೆ ಹೊಂದಿಸಿಕೊಂಡು ಹೋಗಬೇಕು. ಇನ್ನೊಂದು ಮುಖ್ಯ ಅಂಶವೆಂದರೆ, ನಮ್ಮ ಅಳತೆಪಟ್ಟಿ ನಮ್ಮ ಓಣಿಯಿಂದ ಶುರುವಾಗಿ ಜಗತ್ತಿನ ತನಕ ಏರುವ ಅವಶ್ಯಕತೆಯಿಲ್ಲ. ವ್ಯಕ್ತಿಗೆ ಅನ್ವಯವಾಗುವಂತೆ ಇದನ್ನು ಮಾರ್ಪಡಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಜೀವನವಿಡೀ ಹಳ್ಳಿ ಅಥವಾ ಸಣ್ಣ ಊರುಗಳಲ್ಲಿರುವಂಥವರಿಗೆ ತೀರ ದೂರದೂರದಲ್ಲಿ ಪರಿಚಿತರಿರುವ ಸಂಭವ ಕಡಿಮೆ. ಅವರು ಅಳತೆಪಟ್ಟಿಯನ್ನು, ತಮ್ಮ ಓಣಿ, ಸುತ್ತಮುತ್ತಲಿನ ಓಣಿಗಳು, ಊರು, ಸುತ್ತಮುತ್ತಲಿನ ಊರುಗಳು, ತಾಲೂಕು, ಸುತ್ತಮುತ್ತಲಿನ ಉಳಿದ ತಾಲೂಕುಗಳು, ಹೀಗೆ ಡಿಫ಼ೈನ್ ಮಾಡಿಕೊಳ್ಳಬೇಕು. ಹಾಗೆಯೇ ’ಕನೆಕ್ಟೆಡ್’ ಜಗತ್ತಿನ ಜಾಲಕ್ಕೆ ಸಿಗದೆ ಆರಾಮಾಗಿರುವವರು ಕೂಡ. ಇದಷ್ಟೇ ಅಲ್ಲದೆ, ಪರಿಚಿತರು ಅಂದರೆ ಯಾರು? ನೀವು ಇಂಟರ್ನೆಟ್ಟಿನಲ್ಲಿ ದಿನಾಲೂ ಹರಟುವ ವ್ಯಕ್ತಿಗಳು ನಿಮ್ಮ ಪರಿಚಯದವರೇ ಅಲ್ಲವೇ? ಅವರನ್ನು ನೀವು ಭೇಟಿ ಮಾಡಿರಲಿಕ್ಕೂ ಇಲ್ಲ. ಇದು ಕೂಡ ನಿಮ್ಮ ಗ್ರಹಿಕೆಗೆ ಬಿಟ್ಟದ್ದು. ಆದರೆ ಒಟ್ಟಾರೆಯಾಗಿ ನಿಮ್ಮ ಗ್ರಹಿಕೆಗಳು ಹಾಗೂ ಡೆಫ಼ನಿಶನ್ನುಗಳು ಸುಸಂಬದ್ಧವಾಗಿರಬೇಕು.

***

ನಾನು ಮೇಲೆ ವಿವರಿಸಿದ್ದು, ಗಣಕಶಾಸ್ತ್ರ ವಿಜ್ಞಾನಿ ಜಾನ್ ಕ್ಲೈನ್‍ಬರ್ಗ್, ತನ್ನ “small world network“ಗಳ ಸಿದ್ಧಾಂತಗಳನ್ನು ಮಂಡಿಸುವಾಗ ಬಳಸಿದ ಸಾದೃಶ. ಇದಕ್ಕೆ ನೇರ ಸ್ಫೂರ್ತಿ ಸಾಲ್ ಸ್ಟೈನ್‍ಬರ್ಗ್‍’೯ನೇ ಮುಖ್ಯರಸ್ತೆ’ಯ ಚಿತ್ರ. ಸ್ಟೈನ್‍ಬರ್ಗ್‍ನ ಚಿತ್ರ ಒಂದು ಸಾಮಾಜಿಕ ಕಮೆಂಟರಿ. ಒಂದು ಸ್ತರದಲ್ಲಿ ಅದು ವಿಡಂಬನೆ. ಇನ್ನೊಂದು ಸ್ತರದಲ್ಲಿ ನೋಡಿದರೆ ಅದು ಅಮೇರಿಕದ್ದಷ್ಟೆ ಅಲ್ಲದೇ ಜಗತ್ತಿನ ಎಲ್ಲ ಸಮಾಜಗಳ, ಎಲ್ಲ ಮನುಷ್ಯರ ವಸ್ತುಸ್ಥಿತಿ. ಆ ಚಿತ್ರವನ್ನು ನೀವು ಇನ್ನೊಮ್ಮೆ ನೊಡಿದರೆ, ಒಟ್ಟಾರೆ ಚಿತ್ರವನ್ನು ನಾವು ಸ್ಥೂಲವಾಗಿ ನಾಕು ಸಮಾನ ಭಾಗಗಳಲ್ಲಿ ವಿಂಗಡಿಸಬಹುದು: ೯ನೇ ಅವೆನ್ಯೂ ಮತ್ತು ಅದರ ಆಸುಪಾಸು (ಹತ್ತನೆಯ ಅವೆನ್ಯೂದ ತನಕ ಅಂದುಕೊಳ್ಳಿ); ಹತ್ತನೆಯ ಅವೆನ್ಯೂದಿಂದ ಹಿಡಿದು ಉಳಿದಂತೆ ನ್ಯೂಯಾರ್ಕ್ ಹಾಗೂ ಹಡ್ಸನ್ ನದಿ ಇನ್ನೊಂದು ಭಾಗ; ಯುನೈಟೆಡ್ ಸ್ಟೇಟ್ಸ್‍ನ ಉಳಿದ, ಚೌಕವಾಗಿ ಕಾಣುತ್ತಿದೆಯಲ್ಲ, ಅದು ಮೂರನೆಯದ್ದು; ಪೆಸಿಫ಼ಿಕ್ ಸಾಗರ ಮತ್ತು ಏಷ್ಯಾ ನಾಕನೆಯ ಭಾಗ. ಇದನ್ನು ಹೀಗೆ ನೋಡಿದಾಗ ನಾವು ಕೊಡಬಹುದುದಾದ ವ್ಯಾಖ್ಯಾನವೆಂದರೆ, ನ್ಯೂಯಾರ್ಕಿನ ಜನರು ತಮ್ಮ ತುರ್ತಿನ ಅಥವಾ ಸ್ಥಳೀಯ ವಿಚಾರಗಳಿಗೆ, ಜಗತ್ತಿನ ಯಾವುದೇ ಮಹತ್ವದ ಆಗುಹೋಗುಗಳಿಗೆ ಕೊಡುವಷ್ಟೇ ಮಹತ್ವ ಕೊಡುತ್ತಾರೆ. ಎಲ್ಲರೂ ತಮ್ಮನ್ನು ಬ್ರಹ್ಮಾಂಡದ ಕೇಂದ್ರದಲ್ಲಿರಿಸಿಕೊಳ್ಳಬಯಸುತ್ತಾರೆ. ನಿಜವಲ್ಲವೆ?

ಸಾಲ್ ಸ್ಟೈನ್‍ಬರ್ಗ್ ಈ ಚಿತ್ರ ಬರೆಯುವಾಗ ಕೇವಲ ವಿಡಂಬನೆಯಂತೆ ಬರೆದಿದ್ದನೋ ಅಥವಾ ಈ ಥರದ ವ್ಯಾಖ್ಯಾನವೂ ಅವನು ಉಪಯೋಗಿಸಿದ ಚಿತ್ರದ ಜಾಮೆಟ್ರಿಯಲ್ಲಿ ಅಡಕವಾಗಿತ್ತೋ ಗೊತ್ತಿಲ್ಲ. ಆದರೆ ಜಾನ್ ಕ್ಲೈನ್‍ಬರ್ಗ್ ಈ ಚಿತ್ರವನ್ನು ಅತ್ಯಂತ ಪ್ರಬಲವಾದ ಸಾಮತಿಯನ್ನಾಗಿ ಬಳಸಿಕೊಂಡ. ಸೋಶಿಯಲ್ ನೆಟ್‍ವರ್ಕುಗಳಲ್ಲಷ್ಟೆ ಅಲ್ಲದೆ, ಸಂಪರ್ಕ ಜಾಲಗಳ ಬಗ್ಗೆಯೂ ಅನೇಕ ಸಿದ್ಧಾಂತಗಳನ್ನು ನಿರೂಪಿಸಿದ. ಕ್ಲೈನ್‍ಬರ್ಗ್‍ನ ಸ್ಮಾಲ್ ವಲ್ಡ್ ಮಾಡೆಲ್ಲುಗಳು ೨೦೦೦ರ ಸುಮಾರಿಗೆ ಮಂಡಿಸಲ್ಪಟ್ಟವು. ಇವತ್ತೂ ಕೂಡ ಅದು ಗಣಕಶಾಸ್ತ್ರ ಸಂಶೋಧನೆಯ ಬಿಸಿ ಬಿಸಿ ಕ್ಷೇತ್ರಗಳಲ್ಲಿ ಒಂದು.

ಹಾಗೆ ನೋಡಿದರೆ ಈ Small World Phenomenon ಕ್ಲೈನ್‍ಬರ್ಗ್‍ನಿಗಿಂತ ತುಂಬ ಹಳೆಯದು. ೧೯೬೩ರಲ್ಲಿ ಸ್ಟ್ಯಾನ್ಲೀ ಮಿಲ್‍ಗ್ರಮ್ ನಡೆಸಿದ ಒಂದು ಸಾಮಾಜಿಕ ಮನಃಶಾಸ್ತ್ರದ (social psychology) ಪ್ರಯೋಗದಿಂದ ಇದು ಒಮ್ಮಿಂದೊಮ್ಮೆಲೆ ಪ್ರಚಲಿತವಾಯಿತು. ‘Six degrees of separation‘ ಎಂಬ ನುಡಿಗಟ್ಟೂ ಇದರಿಂದ ತುಂಬ ಲೋಕಪ್ರಿಯವಾಯಿತು. ಈಗಾಗಲೇ ಈ ಪೋಸ್ಟು ಭಯಂಕರ ಉದ್ದವಾಗಿರುವುದರಿಂದ ಇಲ್ಲಿಗೇ ನಿಲ್ಲಿಸುತ್ತೇನೆ.

ಈ ನಮ್ಮ ಜಗತ್ತು: ೯ನೇ ಮುಖ್ಯರಸ್ತೆಯಿಂದ ಕಂಡಂತೆ

ಇದು ದ ನ್ಯೂ ಯಾರ್ಕರ್ ಪತ್ರಿಕೆಯ ಮಾರ್ಚ್ ೨೯, ೧೯೭೬ರ ಕವರ್ ಪೇಜ್. ಕಲಾವಿದ, ಅದೇ ಪತ್ರಿಕೆಯ ಕಾರ್ಟೂನಿಸ್ಟ್ ಸಾಲ್ ಸ್ಟೈನ್‍ಬರ್ಗ್. ಅತ್ಯಂತ ಪ್ರಸಿದ್ಧ ಚಿತ್ರವಾಗಿರುವ ಇದು “View of the World from 9th Avenue” ಅಥವಾ “A New Yorker’s View of the World” ಎಂದು ಕರೆಯಲ್ಪಡುತ್ತದೆ. ಇದು ನನಗೆ ತುಂಬಾ ಇಷ್ಟವಾಗುವ illustration ಕೂಡ. ಇಲ್ಲಿ ಉಲ್ಲೇಖಿಸಿರುವ ೯ನೇ ಅವೆನ್ಯು, ನ್ಯೂ ಯಾರ್ಕ್‍ನ ಮ್ಯಾನ್‍ಹ್ಯಾಟನ್‍ನಲ್ಲಿದೆ. ನ್ಯೂ ಯಾರ್ಕಿಗರ world view ಎಷ್ಟು ಸಂಕುಚಿತ ಎಂಬುದನ್ನು ಅತ್ಯಂತ ಸ್ಪಷ್ಟ ಹಾಗೂ ಪ್ರಖರವಾದ ವ್ಯಂಗ್ಯದಿಂದ ಸೆರೆ ಹಿಡಿದಿರುವುದನ್ನು ಇಲ್ಲಿ ಕಾಣಬಹುದು. ಇದು ನ್ಯೂ ಯಾರ್ಕಿಗರದಷ್ಟೇ ಅಲ್ಲದೆ ಒಟ್ಟಾರೆ ಅಮೆರಿಕದ ಜನರ ತಮ್ಮ ತಮ್ಮ ಸಣ್ಣ ಪರಿಧಿಗಳಲ್ಲಿ ಆನಂದತುಂದಿಲರಾಗಿದ್ದು ಉಳಿದದ್ದೆಲ್ಲ ಸಂಬಂಧವಿಲ್ಲದ್ದು, ಮಹತ್ವದ್ದಲ್ಲದ್ದು ಎಂದು ಭಾವಿಸುವ ಸ್ವಭಾವದ ಲೇವಡಿಯಾಗಿದೆ.

ನನ್ನ ’ಪ್ರಕ್ರಿಯೆಗಳು ಮಶೀನುಗಳು’ ಪೋಸ್ಟಿಗೆ ಶ್ರೀಪ್ರಿಯೆಯವರ ಕಮೆಂಟು ಇದನ್ನು ನೆನಪಿಸಿತು. ಅವರ ಕಮೆಂಟಿಗೆ ಉತ್ತರಿಸುತ್ತ, ಒಮ್ಮೆಲೇ ಇದರ ಬಗ್ಗೆ ಬರೆಯೋಣವೆನ್ನಿಸಿತು. ವಿವರವಾಗಿ ಮುಂದಿನ ಪೋಸ್ಟಿನಲ್ಲಿ ಬರೀತೀನಿ. ಸದ್ಯಕ್ಕೆ ನಮ್ಮ ಕರ್ನಾಟಕದ ಐದು ಕೋಟಿ ಓದುಗ ದೇವತೆಗಳಿಗೆ ಇದನ್ನು ನೋಡಿ ಏನೆನ್ನಿಸಿತು ಹೇಳಿ. ಸ್ವಲ್ಪ ಗಮನವಿಟ್ಟು ಚಿತ್ರವನ್ನು ನೋಡಿ ಸ್ಟೈನ್‍ಬರ್ಗ್ ತನ್ನ ವ್ಯಂಗ್ಯವನ್ನು ಹೇಗೆ ಅಭಿವ್ಯಕ್ತಿಸಿದ್ದಾನೆ ಎಂಬುದನ್ನು ಕಂಡುಕೊಳ್ಳಿ. ಹಾಗೇ ನೀವು ಕಂಡುಕೊಂಡದ್ದನ್ನು ಇಲ್ಲಿ ಬರೆಯಿರಿ.

ಈ ಚಿತ್ರ ಇನ್ನೊಂದು ಕಾರಣಕ್ಕಾಗಿ ಬಹಳ ಮಹತ್ವದ್ದಾಗಿ ಬೆಳೆದು ಬಂದಿದೆ. ಚಿತ್ರದ ವಿನ್ಯಾಸ ಸೋಶಿಯಲ್ ನೆಟ್‍ವರ್ಕುಗಳಲ್ಲೂ ಸಂಪರ್ಕ ಜಾಲಗಳಲ್ಲೂ ಕೆಲ ಮಹತ್ವದ ಬೆಳವಣಿಗೆಗೆ ಸ್ಫೂರ್ತಿಯಾಗಿದೆ. ಹೀಗಾಗಿ ವ್ಯಂಗ್ಯಕ್ಕೆ ಸೀಮಿತಾಗದೆ ದೊಡ್ಡ ಅರ್ಥವ್ಯಾಪ್ತಿ ಕಂಡುಕೊಂಡಿದೆ. ಅದೆಲ್ಲದರ ಬಗ್ಗೆ ಇನ್ನೊಮ್ಮೆ. ಸದ್ಯಕ್ಕೆ, ಅದೆಲ್ಲದರ ಹಂಗು ಬಿಟ್ಟು ಸುಮ್ಮನೆ ಚಿತ್ರವನ್ನು ನೋಡಿ ಆನಂದಿಸಿ.

ಮೂರ್ಖ ಪ್ರಕ್ರಿಯೆಗಳೂ ಮಶೀನುಗಳಂಥ ಮನುಷ್ಯರೂ

ಇಲ್ಲಿ ಬಂದಾಗಿನಿಂದ ನಾನು ಗಮನಿಸಿದ ಒಂದು ಅಂಶವೆಂದರೆ ಇಲ್ಲಿನ ತೀರಾ ಸಾಮಾನ್ಯ ವ್ಯಾವಹಾರಿಕ ಸಂವಹನಗಳೂ ಪ್ರಮಾಣಿತ ಪ್ರಕ್ರಿಯೆಗಳಿಂದ ಚಾಲಿತವಾದವು (process driven). ಇದರ ಒಂದು ನೇರ ಪರಿಣಾಮವೆಂದರೆ, ಈ ಪ್ರೊಸೆಸ್‍ಗಳಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಅದರಲ್ಲಿ ಒಳಗಾಗಿರುವ ಜನ ಮುಜುಗರಕ್ಕೊಳಗಾಗುತ್ತಾರೆ. ವಸ್ತುತಃ, ಇಲ್ಲಿನ ಜನರನ್ನು ಮುಜುಗರಕ್ಕೊಳಪಡಿಸುವುದು ತೀರ ಸುಲಭ. ಇದೊಂದು ಒಳ್ಳೆಯ ಸುದ್ದಿಯೆಂದು ನಾನು ಹೇಳುತ್ತಿಲ್ಲ. ಆದರೆ ನಾನು ಒಳಗಾಗುವ ತೀರ ಸಾಮಾನ್ಯ ವ್ಯವಹಾರಗಳಲ್ಲೆಲ್ಲ ದಿನನಿತ್ಯ ಇದು ಆನುಷಂಗಿಕವಾಗಿ ಆಗುತ್ತಲೇ ಇರುತ್ತದೆ. ಉದಾಹರಣೆಗೆ: ಫ಼ಾಸ್ಟ್‍ಫ಼ುಡ್ ತೆಗೆದುಕೊಳ್ಳುವಾಗ, ಮಾಲ್‍ಗಳಲ್ಲಿ, ಫೋನಿನಲ್ಲಿ ಕಸ್ಟಮರ್ ಕೇರ್‌ನವರೊಂದಿಗೆ ವ್ಯವಹರಿಸುವಾಗ, ಹೀಗೆ. ಇವರೆಲ್ಲರಲ್ಲೂ ಮೆಚ್ಚಬೇಕಾದಂಥ ಅಂಶವೆಂದರೆ, ಸೌಜನ್ಯದಿಂದ ಮಾತನಾಡುತ್ತಾರೆ. (ಎಲ್ಲರೂ ಅಲ್ಲ, ಆದರೆ ಅದು ಸಹಜ.) ಆದರೆ, ಅದೂ ಕೂಡ ಅವರ ಪ್ರೊಸೆಸ್‍ನ ಒಂದು ಅಂಗವಷ್ಟೆ. ಆ ಪ್ರಕ್ರಿಯೆ ಎಲ್ಲ ಗ್ರಾಹಕರಿಗೂ ಗೊತ್ತಿರುತ್ತದೆ ಎಂಬ ಭಾವನೆಯಲ್ಲಿರುತ್ತಾರೆ. ಆದರೆ ನನ್ನಂಥ ಅಜ್ಞಾನಿಗಳು ಇಂಥದ್ದೆಲ್ಲದ್ದಕ್ಕೆ ಗಮನ ಕೊಡದೆ, ಆ ಪ್ರಕ್ರಿಯೆಯ ತಾಳಕ್ಕೆ ಕುಣಿಯದೆ ನನ್ನದೇ ರೀತಿಯಲ್ಲಿ ವ್ಯವಹಾರ ನಡೆಸಲು ನೋಡಿದರೆ, ಬಹು ಬೇಗ ಅವರು ತಮ್ಮ comfort zoneನಿಂದ ಹೊರ ಬೀಳುವ ಪ್ರಸಂಗ ಉಂಟಾಗುತ್ತದೆ. ಅಂಥ ಸಂದರ್ಭವನ್ನು ಎದುರಿಸುವುದು ಅವರಿಗೆ ಎಷ್ಟು ಕಷ್ಟವಾಗಿತ್ತದೆಂದರೆ, ಅಲ್ಲಿಯವರೆಗೆ ಸೌಜನ್ಯದಿಂದಿದ್ದ ಅವರು ನಾವು ಅವರ ಮನನೋಯಿಸಿದವರ ಹಾಗೆ ವರ್ತಿಸತೊಡಗುತ್ತಾರೆ. ಎಷ್ಟೋ ಸಲ ನಾನೇನೋ ತಪ್ಪು ಮಾಡಿದೆನೇನೋ ಎಂಬ ಭಾವನೆ ನನ್ನಲ್ಲಿ ಮೂಡಲಾರಂಭಿಸುತ್ತದೆ.

ಹೇಳಬೇಕಾದ ಒಂದು ವಿಷಯವೆಂದರೆ, ನಾನು ಸ್ವಲ್ಪ (ಸ್ವಲ್ಪವೇಕೆ, ಒಮ್ಮೊಮ್ಮೆ ಬಹಳವೇ) ಮಖೀನ ಮನುಷ್ಯ. ಉಳಿದವರಿಗೆ ಅತ್ಯಂತ ಸರಳ ಹಾಗೂ ಮಾಮೂಲು ಎನ್ನಿಸುವ ಸಾಮಾಜಿಕ ಸಂದರ್ಭಗಳು ನನಗೆ ನಿಭಾಯಿಸಲು ಕಷ್ಟವಾಗುವ ಸಮಸ್ಯೆಗಳು. ಅಪರಿಚಿತರನ್ನು ನಾನಾಗಿಯೇ ಹೋಗಿ ಮಾತನಾಡಿಸುವುದು, ನಾನಾಗಿಯೇ ಹೋಗಿ ಜನರ ದೋಸ್ತಿ ಮಾಡಿಕೊಳ್ಳುವುದು, ಅದೆಲ್ಲ ಹೋಗಲಿ, ಫೋನ್ ಮಾಡುವಾಗ ನಾನು ಅನೇಕ ಬಾರಿ ಸರಿಯಾದ ನಂಬರನ್ನು ಒತ್ತಿದ್ದೇನೆ ಎಂದು ಧೃಢಪಡಿಸಿಕೊಳ್ಳುತ್ತೇನೆ. ಏಕೆಂದರೆ ಅದು ಅಕಸ್ಮಾತ್ ಯಾವುದಾದರೂ ತಪ್ಪು ನಂಬರಿಗೆ ಹೋದರೆ ಏನು ಮಾಡುವುದು? ಅಂಥ ದುರ್ಭರ ಪ್ರಸಂಗವನ್ನು ನಿಭಾಯಿಸುವುದು ಹೇಗೆ? ಎಷ್ಟೋ ಸಲ, ಡಿಸ್‍ಪ್ಲೇ ಇಲ್ಲದ ನಮ್ಮ ಮನೆಯ ಲ್ಯಾಂಡ್‍ಲೈನಿನಿಂದ ಫೋನ್ ಮಾಡುವಾಗ, ನಂಬರ್ ಒತ್ತಿದ ಮೇಲೆ ಸಂಶಯದ ಹುಳು ತಲೆಯೊಳಗೆ ಹೊಕ್ಕುತ್ತದೆ. ಆಕಸ್ಮಾತಾಗಿ ಒಂದು ಅಂಕಿಯನ್ನು ತಪ್ಪು ಒತ್ತಿದ್ದರೆ? ಅತ್ತ ಫೋನು ರಿಂಗಾಗುತ್ತಿದ್ದರೂ ಪಟಕ್ಕನೆ ಕಟ್ ಮಾಡಿ, ಜಾಗ್ರತೆಯಿಂದ ಇನ್ನೊಮ್ಮೆ ಅಂಕಿಗಳನ್ನು ಒಂದೊಂದಾಗೆ ಒತ್ತುತ್ತೇನೆ. ಪಟಪಟನೆ ಅಂಕಿಗಳನ್ನು ಒತ್ತುವ ಬೇರೆಯವರನ್ನು ನೋಡಿದಾಗ ವಿಸ್ಮಯವಾಗುತ್ತದೆ. ಆದರೆ ಪರಿಚಿತರು, ಆತ್ಮೀಯರ ಜೊತೆ ನಾನು ಪೂರ್ತಿ ಬೇರೆ ವ್ಯಕ್ತಿಯೇ! ಅಲ್ಲಿ ನನ್ನ sense of humour ಎಣೆಯಿಲ್ಲದೆ ನಲಿಯುತ್ತದೆ. ಆರಾಮಾಗಿರುತ್ತೇನೆ.

ಹೀಗಿದ್ದಾಗ, ಅಪರಿಚಿತ ಊರಲ್ಲಿ, ಅಪರಿಚಿತರೊಂದಿಗೆ ಅಪರಿಚಿತ ರೀತಿಯ ವ್ಯವಹಾರಗಳು ಅದೆಷ್ಟು ಕಷ್ಟವಾಗಿರಬಹುದು ನನಗೆ! ಪ್ರತಿಯೊಂದು ವ್ಯವಹಾರವೂ ಒಂದು ಕಾಳಗವಿದ್ದಂತೆ. ನನ್ನಂತಲ್ಲದ, ಜನರೊಂದಿಗೆ ಬೆರೆಯುವ ಜನರಿಗೆ ಇವೆಲ್ಲ ಸುಲಭವೇನೋ. ಆದರೆ ಮತ್ತೆ ಈಪ್ರಕ್ರಿಯೆಗಳ ಬಗ್ಗೆ ಹೇಳಬೇಕೆಂದರೆ, ಒಂದೊಂದು ಕಡೆ ಒಂದೊಂದು ರೀತಿಯ ಪ್ರಕ್ರಿಯೆ ಇರುತ್ತದೆ. ಮತ್ತೆ, ಅಲ್ಲಿನ ಜನ ಗ್ರಾಹಕರಿಗೆ ಅದರ ತಿಳುವಳಿಕೆಯಿದೆ ಎಂದು assume ಮಾಡುತ್ತಾರೆ. ಅವೆಲ್ಲ ಪ್ರಕ್ರಿಯೆಗಳನ್ನು ಅನುಭವಿಸುವ ಮುನ್ನ ಅವು ಗೊತ್ತಿರಲು ಹೇಗೆ ಸಾಧ್ಯ? ಕೆಲ ಉದಾಹರಣೆಗಳನ್ನು ಕೊಡುತ್ತೇನೆ. ಶಿಕಾಗೋಗೆ ಹೋಗಲು ಒಂದು ಬಸ್ಸಿನ ಟಿಕೆಟ್ ತೊಗೊಂಡಿದ್ದೆ, ಅವರ ವೆಬ್‍ಸೈಟ್ ಮೂಲಕ. ಬಸ್ಸು ಹೊರಡುವುದಕ್ಕಿಂತ ಒಂದು ಗಂಟೆಯಾದರೂ ಮುಂಚೆ ಬಂದು ಒಂದು ರೆಫ಼ರನ್ಸ್ ನಂಬರ್ ಕೊಟ್ಟು ಕೌಂಟರಿನಲ್ಲಿ ಟಿಕೆಟ್ ಪಡೆಯಬೇಕು ಎಂದು ನಮೂದಾಗಿತ್ತು. ಸರಿ, ಸಮಯಕ್ಕೆ ಸರಿಯಾಗಿ ಹೋಗಿ ಅಲ್ಲಿ ಕೌಂಟರಿನಲ್ಲಿ ಕುಳಿತಿದ್ದ ಮಹಿಳೆಗೆ “ಹಾಯ್ದು”, ಹುಸಿನಕ್ಕು, “ನಾನು ಆನ್‍ಲೈನ್ ಟಿಕೆಟ್ ತೆಗೆಸಿದ್ದೆ. ನನ್ನ ರೆಫ಼ರನ್ಸ್ ನಂಬರು ಇದು,” ಎಂದು ನಂಬರ್ ಹೇಳಿದೆ. ನಾನು ಮಾಡಿರಬಹುದಾದ ತಪ್ಪೆಂದರೆ ನಂಬರನ್ನು ಸ್ವಲ್ಪ ವೇಗವಾಗಿ ಹೇಳಿದೆ. ಅಲ್ಲಿದ್ದ ಮಹಿಳೆ ಒಮ್ಮೆಲೇ ಸಿಟ್ಟಿಗೆದ್ದಂತೆ ತೋರಿತು. “Alright! Alright! Let me first get to the computer screen before you start rattling away those numbers.” Rattling away! ನಾನು ಒಮ್ಮೆಲೇ ಬೆಚ್ಚಿಬಿದ್ದೆ. “ತಾಯಿ, ನಾನು ಅಂಥದೇನು ತಪ್ಪು ಮಾಡಿದೆ? ನಿನಗೆ ಅರ್ಥವಾಗಿಲ್ಲದಿದ್ದರೆ, ಆ ಸಂಖ್ಯೆಯನ್ನು ಮತ್ತೆ ಮತ್ತೆ ಹೇಳುತ್ತೇನೆ, ಆದರೆ ಯಾಕಿಷ್ಟು ಅಸಹನೆ?” ಎನ್ನಬೇಕೆನ್ನಿಸಿತು. ಸುಮ್ಮನಿದ್ದೆ. ಆದರೆ ಅವಳು ಟಿಕೆಟ್ಟು ತೆಗೆದು ಕೊಡಲು ಹತ್ತಿದ ೩-೪ ನಿಮಿಷ ಪೂರ್ತಿ ತಲೆ ಕೊಡವುತ್ತ ತನ್ನ ಅಸಹನೆ ವ್ಯಕ್ತಪಡಿಸುತ್ತಲೇ ಇದ್ದಳು.

ನಾನಿರುವ ಅಪಾರ್ಟ್‍ಮೆಂಟ್‍ಗೆ ಗ್ಯಾಸ್ ಕನೆಕ್ಶನ್ ತೆಗೆದುಕೊಳ್ಳಲು ಫೋನಿನಲ್ಲಿ ಮಾತಾಡುವಾಗಲೂ ಅಷ್ಟೆ. ನಾನು ಹೇಳಿದ್ದು ಅವರಿಗರ್ಥವಾಗದಿದ್ದರೆ, ಅಥವಾ ಅವರು ಹೇಳಿದ್ದು ನನಗರ್ಥವಾಗದೆ ಇನ್ನೊಮ್ಮೆ ಹೇಳಿ ಎಂದರೆ, ಅವರಿಗೆ ತ್ರಾಸು ಶುರುವಾಗಿಬಿಡುತ್ತದೆ. ಈ ಗ್ಯಾಸಿನ ಕಸ್ಟಮರ್ ಕೇರ್‌ಗೆ ಫೋನ್ ಮಾಡಿದರೆ ಅವರು ಫೋನೆತ್ತಿದ ಕೂಡಲೆ ಮೊದಲಿಗೆ ನಮ್ಮ ವಿಳಾಸ ಹೇಳಬೇಕು. ಹೆಸರು ಹೇಳಲು ತೊಡಗಿದರೆ, ಅವರು ಸಂಕಟಪಟ್ಟುಕೊಂಡು, ಅದೆಲ್ಲ ನನಗೆ ಬೇಡ, ಮೊದಲು ವಿಳಾಸ ಎನ್ನುತ್ತಾರೆ. ಮತ್ತ್ಯಾವುದರದೋ ಕಸ್ಟಮರ್ ಕೇರ್‌ಗೆ ಫೋನ್ ಮಾಡಿದರೆ, ಮೊದಲು ಹೆಸರು ಫೋನ್ ನಂಬರ್ ಹೇಳಬೇಕು. ಇವೆಲ್ಲ ರೀತಿಗಳನ್ನು ನಾನು ನೆನಪಿಟ್ಟುಕೊಳ್ಳುವುದೇ? ಫೋನುಗಳ ವ್ಯವಹಾರಗಳು ಹೋಗಲಿ, ಮುಖಾಮುಖಿ ವ್ಯವಹಾರಗಳಲ್ಲೂ ಹಾಗೆಯೇ! ಕೆಲವು ಕಡೆ ಕಾಫಿಗಳಿಗೆ ಟಾಲ್, ಗ್ರ್ಯಾಂಡೆ, ಹೀಗೆ ಏನೇನೋ ಅಳತೆಗಳು. ಇನ್ನು ಕೆಲವು ಕಡೆ ಸ್ಮಾಲ್, ಮೀಡಿಯಮ್ ಹಾಗೂ ಲಾರ್ಜ್. ಒಂದು ಇನ್ನೊಂದು ಕಡೆ ಅರ್ಥವಾಗುವುದಿಲ್ಲ. ಅದು ಹೋಗಲಿ, ಬಿಗ್ ಎಂದರೆ ಮುಖ ನೋಡುತ್ತಾರೆ. ಮತ್ತೆ, “ಓ ಸಾರಿ, ಐ ಮೀನ್, ಲಾರ್ಜ್,” ಎನ್ನುತ್ತೇನೆ. ರೆಸ್ಟೊರಂಟುಗಳು, ಪಬ್ಬುಗಳಂತೂ ಅವರವರ ಒಂದೊಂದು glossary ಇಟ್ಟುಕೊಂಡರೇ ಒಳ್ಳೆಯದು. ಏಕೆಂದರೆ ಆ ತಿಂಡಿ ತೀರ್ಥಗಳ ಹೆಸರುಗಳಿಗೆ ಅರ್ಥವೇ ಇರುವುದಿಲ್ಲ. ಇಲ್ಲೇ ಪಕ್ಕದ ಪಬ್ಬಿನಲ್ಲಿ ಒಂದು ಪೇಯದ ಹೆಸರು “well drinks”. ವ್ಯಾಕರಣದ ಹಂಗಿಲ್ಲದ ಆ ನುಡಿಗಟ್ಟು ಹಾಳಾಗಲಿ, ಅದರರ್ಥ ಏನು? ವೇಟ್ರೆಸ್‍ಳನ್ನು ಕೇಳಿದೆ. ಅವಳಿಂದ, ವೋಡ್ಕಾ ಹಾಗೂ ಮತ್ತೇನೇನೋ ಇರುವ ಒಂದು ಕಾಕ್‍ಟೇಲ್‍ನಂಥದ್ದು ಎಂದು ತಿಳಿಯಿತು. ಅದರಲ್ಲಿನ ವೋಡ್ಕಾದ ಪರಿಮಾಣವೇನು ಎಂದು ಕೇಳಿದೆ. ಅವಳಿಗೆ ಅರ್ಥವೇ ಆಗಲಿಲ್ಲ. ಹೇಳಿದ್ದನ್ನೇ ಮತ್ತೆ ಹೇಳಿದಳು. ನಾನು, “ಸರಿಯಬ್ಬೆ, ಕೃತಕೃತ್ಯನು ನಾನು,” ಎಂದೆ.

ಇನ್ನೊಮ್ಮೆ, ಬೆಂಗಳೂರಿಂದ ಇಲ್ಲಿನ ಒಂದು ಊರಿಗೆ ಕೆಲಸದ ಸಲುವಾಗಿ ವಾರದ ಮಟ್ಟಿಗೆ ಬಂದಿದ್ದ ಪ್ರೊಫೆಸರ್ ಒಬ್ಬರನ್ನು ಸಂಪರ್ಕಿಸಬೇಕಾಗಿತ್ತು. ಅವರು ಉಳಿದುಕೊಂಡ ಹೊಟೇಲಿನ ಹೆಸರು ಮಾತ್ರ ಗೊತ್ತಿತ್ತು; ಅವರ ರೂಂ ನಂಬರ್ ಗೊತ್ತಿರಲಿಲ್ಲ. ಅಲ್ಲಿಗೆ ಫೋನ್ ಹಚ್ಚಿ, ನಾನು ಇಂಥವರ ಜೊತೆ ಸಂಪರ್ಕ ಸಾಧಿಸಬಯಸುತ್ತೇನೆ ಎಂದು ಹೇಳಿದೆ. ಅಲ್ಲಿದ್ದವಳು, “ಅವರ ಕೊನೆಯ ನಾಮವೇನು?” ಮತ್ತೆ ಶುರು. ಅವರು ತಮಿಳರು. ಅವರಿಗೆ ಯಾವ “ಕೊನೆಯ ನಾಮ”ವೂ ಅಡ್ಡ ಹೆಸರೂ ಇಲ್ಲ. ಅವರ ಹೆಸರು.. ಉಂ.. ಏನೋ ಒಂದು, “ಅನಂತರಾಮನ್ ಪದ್ಮನಾಭನ್” ಎಂದುಕೊಳ್ಳೋಣ, ಉದಾಹರಣೆಗೆ. ಅವರು “ಎ. ಪದ್ಮನಾಭನ್” ಅಥವಾ ಹೆಚ್ಚಾಗಿ ಕೇವಲ “ಪದ್ಮನಾಭನ್” ಎಂದು ತಮ್ಮ ಹೆಸರು ಹೇಳುತ್ತಾರೆ. ಇಂತಿದ್ದಾಗ. ಅವರ ಕೊನೆಯ ನಾಮವೇನೆನ್ನಲಿ? ಅವರು ಪದ್ಮನಾಭನ್ ಎಂದೇ ಬರೆಸಿರಬಹುದೆಂದು ಅದನ್ನೇ ಅರುಹಿದೆ. ನಿಧಾನಕ್ಕೆ ಒಂದೊಂದೇ ಅಕ್ಷರವನ್ನು ಹೇಳಿದೆ. “ಅವರ ಮೊದಲ ನಾಮವೇನು?” ಪಂಚೇತಿಯಾಯಿತು. “ಅವರ ಮೊದಲ ನಾಮ.. ಅಲ್ಲ ಅದು ಹೀಗಿದೆ, ಆದರೆ ಅವರು ಅದನ್ನೇನು ಬಳಸುವಂತೆ ತೋರುವುದಿಲ್ಲ,” ಎಂದೇನೇನೋ ಹೇಳತೊಡಗಿದೆ. ಅವಳು, ಅರ್ಧ ಅಪನಂಬಿಕೆಯಿಂದ ಅರ್ಧ ಮುನಿಸಿನಿಂದ, “ನಿಮಗೆ ಅವರ ಮೊದಲ ನಾಮ ಗೊತ್ತಿಲ್ಲವೆ?!” ಎಂದಳು. ನಾನು, “ಇಲ್ಲ, ನಾನು ಹೇಳಿದ್ದರಿಂದಲೇ ಹುಡುಕಿ,” ಎಂದೆ. ಆ ಹೆಸರೇ ಅಲ್ಲಿ ಸಿಗಲಿಲ್ಲ ಅವಳಿಗೆ ಅವಳ ಕಂಪ್ಯೂಟರಿನಲ್ಲಿ. ಪೂರ್ತಿ ಹೆಸರು ಕೊಟ್ಟಾಗಲೇ ಹುಡುಕುವ ಆ ಮೂರ್ಖ ಕಂಪ್ಯೂಟರ್ ಪ್ರೋಗ್ರ್ಯಾಮನ್ನೂ, ಎಲ್ಲರ ಹೆಸರುಗಳೂ ಒಂದು standard formatನಲ್ಲಿರುತ್ತವೆಂದು ಭಾವಿಸುವ ಮೂರ್ಖ ಜನರನ್ನೂ, ಅಡ್ಡ ಹೆಸರಿಲ್ಲದ ತಮಿಳರನ್ನೂ ಶಪಿಸುತ್ತ ಫೋನು ಕುಕ್ಕಿದೆ.
ನಾನು ಇಲ್ಲಿ ಬಂದ ಹೊಸದರಲ್ಲಂತೂ ಮೇಲೆ ಹೇಳಿದಂತೆ ಪ್ರತಿಯೊಂದು ಇಂಥ ಸಂದರ್ಭವನ್ನು ಒಂದು ಕಾಳಗದಂತೆ, ಒಂದು ಸವಾಲಿನಂತೆ ಪರಿಗಣಿಸುತ್ತಿದ್ದೆ. ಇಂಥ ಯಾವುದೇ ಸಾಮಾಜಿಕ ಸಂದರ್ಭದಿಂದ ಸುಭಗವಾಗಿ ಹೊರಹೊಮ್ಮಿದರೆ, ಅದು ನನ್ನ ಒಂದು ದೊಡ್ದ social victory ಎಂದು ಆಹ್ಲಾದಪಡುತ್ತಿದ್ದೆ. ಹೆಚ್ಚಾಗಿ ಈ ಪ್ರಕ್ರಿಯೆಗಳು ಗೊತ್ತಿದ್ದ ಜಾಗಗಳಿಗೇ ಹೆಚ್ಚಾಗಿ ಹೋಗುತ್ತಿದ್ದೆ. ಆದರೆ ಈಗೀಗ ಸ್ವಲ್ಪ ರೂಢಿಯಾಗುತ್ತಿದ್ದೆ. ಏನಾದರೂ ಗೊತ್ತಾಗದಿದ್ದರೆ ಗೊತ್ತಿಲ್ಲವೆಂದು ಆರಾಮಾಗಿ ಹೇಳಿ, ಅವರೇನಾದರೂ ಅಂದುಕೊಳ್ಳಲಿ, ನನ್ನ ಕೆಲಸ ಸಾಧಿಸಿಕೊಳ್ಳುವುದರತ್ತ ಗಮನವಿಡುವುದು, ಇದನ್ನೆಲ್ಲ ಕಲಿಯುತ್ತಿದ್ದೇನೆ. ಆದರೂ ಒಮ್ಮೊಮ್ಮೆ ಇವೆಲ್ಲ ಮತ್ತೆ ಮರುಕಳಿಸುತ್ತವೆ. ಮೊನ್ನೆ ಒಂದೆಡೆಯಲ್ಲಿ ಸ್ಯಾಂಡ್‍ವಿಚ್ ತೊಗೊಳ್ಳಲು ಹೋದೆ. ಅಲ್ಲಿ ಹೋಗಿ ಒಂದು ವೆಜ್ ಸ್ಯಾಂಡ್‍ವಿಚ್ ಕೊಡಯ್ಯ, ಎಂದೆ. ಅವನು ಅಳತೆ ಕೇಳಿದ. (ಇಲ್ಲಿ ಊಟತಿಂಡಿಗಳನ್ನೆಲ್ಲ ಅಳೆಯುವುದು ನನಗಂತೂ ತೀರ ತಮಾಷೆಯ ಸಂಗತಿ.) ನಾನು, ಫೂಟುದ್ದದ್ದು, ಎಂದೆ. ಮುಂದೆ ಬಹಳೇ ಕಷ್ಟದ ಪರಿಸ್ಥಿತಿಗಳು ಒದಗಿದವು. ಅವನು, “ಯಾವ ಥರದ ಬ್ರೆಡ್ಡು?” ಎಂದ. ಒಳ್ಳೆಯ ಥರದ್ದು ಕೊಡಯ್ಯ ಎಂದರೆ ಅವನಿಗೆ ತಿಳಿಯುವುದಿಲ್ಲ. ನಗುತ್ತ, “ನನಗಿರುವ ಆಯ್ಕೆಗಳೇನು?” ಎಂದೆ. ಅವನು ಅಪನಂಬಿಕೆಯಿಂದ ನನ್ನತ್ತ ನೋಡುತ್ತ, ಸ್ವಲ್ಪ ದೂರದಲ್ಲಿ ಅಂಟಿಸಿದ್ದ ಪಟ್ಟಿಯೊಂದನ್ನು ತೋರಿಸಿದ. ಅವನ ಪಕ್ಕದಲ್ಲಿದ್ದವಳು ಆಗಲೇ ಅಪನಂಬಿಕೆಯಿಂದ ಮುಸಿನಗುತ್ತಿದ್ದಳು. ನಾನು ಹೆದರದೆ ಆ ಪಟ್ಟಿಯತ್ತ ಹೋಗಿ, ಅಲ್ಲಿದ್ದ ಐದಾರು ಬ್ರೆಡ್ಡುಗಳಿಂದ ಯಾವುದೋ ಒಂದನ್ನು ಆಯ್ದು, ಅದರ ಹೆಸರನ್ನು ಹೇಳಿದೆ. ಇದಾಗುತ್ತಿದ್ದಂತೆ ಅವನು, “ಯಾವು ಚೀಸು?” ಎಂದ. ನಾನು, “ಹಹ್ಹಾ.. ಮತ್ತೆ ತಾವು ನನ್ನನ್ನು ಕ್ಷಮಿಸಲೇಬೇಕು. ನನಗೆ ಅದರ ಬಗೆಗಳೂ ಗೊತ್ತಿಲ್ಲ.” ಅವನು ಗಾಜಿನ ಕೆಳಗಿದ್ದ ೪-೫ ಬಗೆಗಳನ್ನು ತೋರಿಸಿ, ಒಂದಷ್ಟು ಹೆಸರುಗಳನ್ನು ಹೇಳಿದ. ನಾನು ಯಾವುದೋ ಒಂದನ್ನು ಹೇಳಿದೆ. ಇದೆಲ್ಲ ಇಷ್ಟಕ್ಕೇ ಮುಗಿಯುತ್ತದೆಯೇ? ಮುಂದೆ ಅವನು, “ಯಾವ ಬಗೆಯ ಕಾಯಿಪಲ್ಲೆಗಳು ಬೇಕು?” ಎಂದ. ಇದೊಳ್ಳೆ ಫಜೀತಿಯಾಯಿತಲ್ಲ! ಇವನಿಗೆ ನಾನು ಪ್ರತಿಯೊಂದನ್ನೂ ಹೇಳಿ ಹೇಳಿ ಮಾಡಿಸಿಕೊಳ್ಳುವುದಾದರೆ ಮನೆಯಲ್ಲೇ ಏನೋ ಬೇಯಿಸುತ್ತಿದ್ದೆನಲ್ಲ. ಅಲ್ಲದೇ ಅಲ್ಲಿದ್ದ ಕಾಯಿಪಲ್ಲೆಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವುಗಳ ಹೆಸರೇ ನನಗೆ ಗೊತ್ತಿಲ್ಲ. (ಗೊತ್ತಿದ್ದ ತರಕಾರಿಗಳಿಗೂ ಇವರ ಹೆಸರುಗಳು ಬೇರೆ ಇರುತ್ತವೆ; ಬದನೆಕಾಯಿಗೆ ಎಗ್‍ಪ್ಲಾಂಟ್ ಎನ್ನುತ್ತಾರೆ!) ಬೆರಳಿನಿಂದ, “ಇದು, ಇದು, ಮತ್ತದು, ಅದೋ ಅದು,” ಎಂದು ತೋರಿಸುತ್ತ ಹೋದೆ. ಇದಾಗುವವರೆಗೆ ಅವನು ಬೆವೆತಿದ್ದ! ಆದರೂ ನನ್ನನ್ನು ಕೇಳಿದ, “ಯಾವ ಬಗೆಯ ಸಾಸ್?” “ಸ್ವಾಮಿಯೇ, ನನಗೆ ಯಾವ ಬಗೆಯ ಸಾಸೂ ಬೇಡ. ಇದನ್ನು ಮುಗಿಸಿ ನನ್ನನ್ನು ಮುಕ್ತನನ್ನಾಗಿಸು!” ಈ ವ್ಯವಹಾರ ಮುಗಿದಾಗ ಆ ಮನುಷ್ಯ ತ್ರಾಸುಮಾಡಿಕೊಂಡಿದ್ದ. ನನಗೂ ಕಡಿಮೆ ತ್ರಾಸಾಗಿರಲಿಲ್ಲ.

***

ಇವೆಲ್ಲ ಉದಾಹರಣೆಗಳಷ್ಟೆ. ಇವುಗಳ ಆಧಾರದ ಮೇಲೆ ನಾನು ಯಾವುದೇ ಸಾರ್ವತ್ರಿಕ ತತ್ವಗಳನ್ನು ಮಂಡಿಸುತ್ತಿಲ್ಲ. ಆದರೆ ಒಟ್ಟಾರೆಯಾಗಿ ನೋಡಿದರೆ, ನಾನು ಹಿಂದೊಮ್ಮೆ ಸಿಂಗಪೋರಿನ ಸಂದರ್ಭದಲ್ಲಿ ಹೇಳಿದ್ದ ಸೂತ್ರಬದ್ಧ ಸಮಾಜಗಳ (normative society) ಲಕ್ಷಣಗಳು ಇಲ್ಲಿಯೂ ಕಾಣಿಸುತ್ತವೆ. ಇವನ್ನು ನಮ್ಮಲ್ಲಿನ್ನ ವ್ಯವಹಾರಗಳ ಜೊತೆ ಹೋಲಿಸಿ ನೋಡಿ. ನಮ್ಮಲ್ಲಿ ಹೆಚ್ಚು ವ್ಯವಹಾರಗಳು ಅಭಿವ್ಯಕ್ತ (declarative) ನೆಲೆಗಟ್ಟಿನಲ್ಲಿರುತ್ತವೆ. ಒಂದು ಹೊಟೇಲಿಗೆ ಹೋಗಿ, “ಅಯ್ಯಾ, ನನಗೊಂದು ಒಳ್ಳೆಯ ಮಸಾಲೆ ದೋಸೆಯನ್ನು ಕರುಣಿಸು,” ಎಂದಷ್ಟೆ ಹೇಳುತ್ತೇವೆ. ಅವನು ಯಾವ ಎಣ್ಣೆಯನ್ನು ಉಪಯೋಗಿಸಬೇಕು, ಎಷ್ಟು ಹಾಕಬೇಕು ಇತ್ಯಾದಿ ಹೇಳುವುದಿಲ್ಲ. ಅದು micro-management. ನಮ್ಮಲ್ಲಿರುವ ಜನಸಂಖ್ಯೆ ಅಗಾಧ. ಹೀಗಾಗಿ ಒಬ್ಬೊಬ್ಬರ ಅಭೀಪ್ಸೆಗಳ ಬಗ್ಗೆ ಗಮನ ಕೊಡಲಾಗುವುದಿಲ್ಲ. ಅಲ್ಲದೇ ನಮ್ಮ ತಿಂಡಿತಿನಿಸುಗಳ ರೀತಿಯೇ ಬೇರೆ. ಹೌದು, ಇವೆಲ್ಲ ನಿಜ. ಆದರೆ ಅವು ಅಷ್ಟು ದೊಡ್ಡ ವ್ಯತ್ಯಾಸ ಮಾಡುವುದಿಲ್ಲ. ಇನ್ನೊಂದು ಅಂಶವೆಂದರೆ, ಈ ರೀತಿ ಪ್ರತಿಯೊಂದಕ್ಕೂ ಹತ್ತಾರು ಆಯ್ಕೆಗಳನ್ನು ಕೊಟ್ಟು, ಗ್ರಾಹಕರಿಗೆ ಅವರಿಗೆ ಬೇಕಾದದ್ದನ್ನು ಆಯಲು ಬಿಟ್ಟರೆ, ಅದರ ಪರಿಣಾಮ ಶ್ರೇಷ್ಠವಾಗುತ್ತದೆಯೇ? ಇರಬಹುದು. ಆದರೆ, ಆ ಪ್ರಕ್ರಿಯೆಯಲ್ಲಿ, ಕೆಲಸವನ್ನು ಬೇರೊಬ್ಬರಿಗೆ ವಹಿಸಿ ಹಗುರಾಗುವ ಆನಂದವೇ ಇಲ್ಲವಾಗುತ್ತದೆ. ತಿಂಡಿ ತಿನ್ನಲು ದರ್ಶಿನಿಗೆ ಹೋಗಿ ನಿಮ್ಮ ಮನೆಯವರು ಅಥವಾ ದೋಸ್ತ-ದೋಸ್ತಿಯರೊಂದಿಗೆ ಹರಟೆ ಹೊಡೆಯುವುದು ಬಿಟ್ಟು, ಅಲ್ಲಿ ಅಡುಗೆ ಮಾಡುವವರಿಗೆ ನಿರ್ದೇಶನ ಕೊಡುತ್ತ ನಿಲ್ಲುವುದನ್ನು ಊಹಿಸಿ. ಹೇಗನ್ನಿಸುತ್ತದೆ?

ಸಮಸ್ಯೆ ಇದಷ್ಟೇ ಅಲ್ಲ. ಇದರ ಹಿಂದೆ ನನ್ನನ್ನು ಕಾಡುವ ಅಂಶವೆಂದರೆ, ಇವರೇನು ಮನುಷ್ಯರೋ ಮಶೀನುಗಳೋ, ಎಂಬ ಆತಂಕ. ಒಂದು ಪ್ರಕ್ರಿಯೆಯನ್ನು ದಿನನಿತ್ಯವೂ ಇದ್ದದ್ದು ಇದ್ದ ಹಾಗೇ ನಡೆಸುತ್ತ, ವರ್ಷಗಟ್ಟಲೇ ಅದನ್ನೇ ಮಾಡುತ್ತ ಹೋಗುವುದು ಭೀತಿ ತರಿಸುವುದಿಲ್ಲವೇ? ಒಂದು ಪ್ರಮಾಣೀಕೃತ ಪ್ರಕ್ರಿಯೆಯಲ್ಲಿ ಹೆಚ್ಚೂಕಡಿಮೆಯಾದರೆ ತಡಬಡಾಯಿಸುವುದು ಮಶೀನುಗಳಿಗೆ ಸಹಜ. ಯಾಕೆಂದರೆ ಅವನ್ನು ಹಾಗೆ ನಿರ್ಮಿಸುವುದು ಅನಿವಾರ್ಯ. ಮಶೀನುಗಳನ್ನೂ ಹೆಚ್ಚು ಹೆಚ್ಚು ಜಾಣರನ್ನಾಗಿ ಮಾಡಲು ಹತ್ತಾರು ವರ್ಷಗಳಿಂದ ಸಂಶೋಧಕರು ಶ್ರಮಿಸುತ್ತಿರುವುದು ಬೇರೆ ವಿಷಯ. ಆದರೆ ಮನುಷ್ಯರೂ ಹಾಗೆ ತಡಬಡಾಯಿಸುವುದೇ? ಈ ಪ್ರಕ್ರಿಯೆಗಳ ಮೇಲೆ ಇಂಥ ಅವಲಂಬನೆಯೇ? ಪ್ರಕ್ರಿಯೆಗಳು ಒಂದು ವ್ಯವಸ್ಥೆಯನ್ನು ಹೆಚ್ಚು ದಕ್ಷವಾಗಿಯೂ, ಅನೇಕ ಸಂದರ್ಭಗಳಲ್ಲಿ ಹೆಚ್ಚು ಪುಷ್ಟವಾಗಿಯೂ ಮಾಡುತ್ತವೆನ್ನುವುದು ನಿಜ. ಆದರೆ ಅದಕ್ಕೆ ತೆರಬೇಕಾದ ಬೆಲೆಯೇನು? ಮಶೀನುಗಳಂತಾಗುವುದೇ? ಅಲ್ಲದೆ, ಒಂದೆಡೆ ಮನುಷ್ಯರು ಮಶೀನುಗಳಂತಾಗುತ್ತಿರುವುದು, ಮತ್ತು ಇನ್ನೊಂದೆಡೆ ಮಶೀನುಗಳು ಜಾಣರಾಗಿ ಮನುಷ್ಯರಂತಾಗುವುವೇ ಎನ್ನುವ ಆತಂಕ, ಇವೆರಡೂ ಏಕಕಾಲದಲ್ಲಿ ನಡೆಯುತ್ತಿರುವ ಆಧುನಿಕ ಯುಗದಲ್ಲಿರುವ ನಾವೇ ಧನ್ಯರಲ್ಲವೇ! ಅದೆಂಥ ವಿಸ್ಮಯಗಳನ್ನು ನೋಡುತ್ತಿದ್ದೇವಲ್ಲ!

ಇನ್ನಷ್ಟು ’ಏನು ಮಾಡಬಹುದು?’

’ಏನು ಮಾಡಬಹುದು’ ಎಂದು ಕೇಳಿದ್ದಾರೆ ಟೀನಾ. ಒಂದಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಅವರೆಲ್ಲ ಮಾತಾಡಿ ಸುಮ್ಮನಾಗದೆ ಏನಾದರೂ ಮಾಡಬೇಕೆಂದು ನಿರ್ಧರಿಸಿದ್ದಾರೆ. ಬಹುಶ: ಅವರ brainstorming sessionನ ನಂತರ ಆ ಪ್ರಶ್ನೆಗೆ ಇನ್ನಷ್ಟು ಉತ್ತರಗಳು ಸಿಗಬಹುದು.

ಈ ವಿಷಯದಲ್ಲಿ ನನಗೆ ನೇರ ಅನುಭವವಂತೂ ಇಲ್ಲ. ನನ್ನ girlfriend (ಅವಳನ್ನು S ಎಂದು ಕರೆಯೋಣ) ಒಮ್ಮೊಮ್ಮೆ ಅವಳಿಗಾದ ಇಂಥ ಅನುಭವಗಳನ್ನು ಹೇಳುತ್ತಾಳೆ. ಆದರೆ ಅದೃಷ್ಟವಶಾತ್, ಆಫೀಸಿಗೆ ಹೋಗಿ ಬರುವುದು ಕ್ಯಾಬಿನಲ್ಲಿ, ಮತ್ತು ಉಳಿದ ಹೊತ್ತು ಹೆಚ್ಚಾಗಿ ಅವಳು ಒಬ್ಬಳೆ ದೂರದೂರ ಓಡಾಡುವ ಪ್ರಸಂಗಗಳು ಬರದಿರುವುದರಿಂದ ಒಟ್ಟಾರೆಯಾಗಿ eve teasing ಸಮಸ್ಯೆಯ ಅನುಭವ ಕಡಿಮೆಯೇ. ಆದರೆ ಎಷ್ಟೋ ಸಲ ಆಟೋದವರ ಜೊತೆ ನನಗಾಗುವ ಕಹಿ ಅನುಭವಗಳು, ಅವರ ಕೆಟ್ಟ ನಡವಳಿಕೆ, blatant ಮೋಸ (ಹೆಚ್ಚಾಗಿ ಕುಡಿದವರು ಮಾಡುವುದು ಇದನ್ನ), ’ನಾನು ಮೋಸ ಮಾಡುತ್ತಿದ್ದೇನೆ, ಏನು ಮಾಡ್ತೀಯೋ ಮಾಡು,’ ಎನ್ನುವ ಅಮಾನುಷ ವರ್ತನೆ — ಇವೆಲ್ಲವನ್ನು ನಾನೂ ಅನುಭವಿಸಿದ್ದೇನೆ, ಬೇರೆಯವರೂ ಅನುಭವಿಸಿರುತ್ತಾರೆ. ಭಯ ಅಪನಂಬಿಕೆಗಳಿಂದ ಕತ್ತಲಾದ ಮೇಲೆ ಆಟೋನಲ್ಲಿ ಓಡಾಡಬೇಡ ಎಂದು ಎಸ್‍ಗೂ ಹೇಳುತ್ತೇನೆ. ಅದೆಷ್ಟೋ ಸಲ ನನ್ನೆದುರಿಗೆ ನಾಚಿಕೆಗೆಟ್ಟ ವರ್ತನೆ ತೋರುತ್ತಿರುವ ಆಟೋದವರನ್ನೋ, ಸರಕಾರಿ ಕಚೇರಿಯ ನೌಕರರನ್ನೋ ಸುಟ್ಟು ಹಾಕಬೇಕೆನ್ನಿಸುವಷ್ಟು ಕೋಪವೂ ಬರುತ್ತದೆ.

ಆದರೆ ಇದ್ಯಾವುದೂ ಹೆಣ್ಣುಮಕ್ಕಳು ಅನುಭವಿಸುವ humiliationನ್ನಿನ ಹತ್ತಿರಕ್ಕೂ ಬರುವುದಿಲ್ಲ; ಅದನ್ನು ನಾನು ಊಹಿಸಬಲ್ಲೆನಷ್ಟೆ. ಆದರೂ ಒಂದಷ್ಟು ಮಾತಾಡಬೇಕೆನ್ನಿಸುತ್ತದೆ.

ಇದು ಜನರಲ್ ಸಮಸ್ಯೆಯೊಂದರ ನಿರ್ದಿಷ್ಟ ಉಪಸಮಸ್ಯೆ ಅನ್ನಿಸುತ್ತದೆ. ಆ ಸಮಸ್ಯೆಗೇನು ಹೆಸರು ಕೊಡುವುದು ಎಂದು ಗೊತ್ತಿಲ್ಲ, ಆದರೆ ಅದರ ಗುಣಲಕ್ಷಣಗಳು ಎದ್ದು ಕಾಣುತ್ತವೆ: ಸಾಮಾಜಿಕ ಸಂವೇದನೆಯ ತೀವ್ರ ಅಭಾವ, ಮತ್ತೊಂದು ಜೀವದ ಬಗ್ಗೆ ಕಿಮ್ಮತ್ತಿಲ್ಲದಿರುವುದು, ನಾನು ಸೇವೆ ಸಲ್ಲಿಸುತ್ತಿಲ್ಲ, ಬದಲಿಗೆ ಏನನ್ನೋ ದಯಪಾಲಿಸುತ್ತಿದ್ದೇನೆ ಎಂಬಂಥ ವರ್ತನೆ, ಹೀಗೆ. ಇದನ್ನು ಎಲ್ಲೆಲ್ಲೂ ನೋಡುತ್ತೇವೆ: ಆಟೋ ಡ್ರೈವರುಗಳಲ್ಲಿ, ಆಫೀಸುಗಳಲ್ಲಿ, ಬಸ್ಸುಗಳಲ್ಲಿ, ಹೊಟೆಲುಗಳಲ್ಲಿ, ಪೋಲೀಸರಲ್ಲಿ (ಆಹಾಹಾ), ಬಸ್ಸುಗಳೊಳಗಿಂದ ತಂಬಾಕು ಉಗುಳುವವರಲ್ಲಿ, ಕ್ಯೂನಲ್ಲಿ ನಿಲ್ಲದೆ ಕಂಡಕಂಡಲ್ಲಿ ನುಗ್ಗಿ ರಂಪ ಎಬ್ಬಿಸುವವರಲ್ಲಿ.

ಇದಕ್ಕೇನು ಕಾರಣಗಳು? ಆರ್ಥಿಕ ಅಭದ್ರತೆಯೆ, ನಮ್ಮ ಮುಕ್ತವಲ್ಲದ ಸಮಾಜದ ಸಂದರ್ಭವೆ, ಶಿಕ್ಷಣದ ತೀವ್ರ ಕೊರತೆಯೆ, ಸೀಮಿತ ಸವಲತ್ತುಗಳಿಗಿರುವ ತೀವ್ರ ಬಡಿದಾಟ, ಕಾನೂನು ಸಹಾಯಕ್ಕೆ ಬಾರದಿರುವುದು — ಎಲ್ಲವೂ ಹೌದು. ಹಾಗೆಯೆ ಆಟೋದವರ ಮೋಸ ಅಭದ್ರತೆಯಿಂದ ಹುಟ್ಟಿದರೆ, ಸರಕಾರಿ ನೌಕರರ ಮೋಸ ಅತಿಭದ್ರತೆಯಲ್ಲಿ ಹುಟ್ಟುವ ವಿಪರ್ಯಾಸಗಳೂ ಇವೆ.

ನನಗೆ ಜನರ ಬಗ್ಗೆ ನಂಬಿಕೆ ಹೆಚ್ಚು. ಬಹುತೇಕ ಮಂದಿ ಒಳ್ಳೆಯವರು; ಮೋಸ ಮಾಡುವುದಿಲ್ಲ; ತಮ್ಮ ಧಂದೆಗಳನ್ನು ಮಾಡಿಕೊಂಡು ಹೋಗುತ್ತಿದ್ದಾರಷ್ಟೆ; ಸಲ್ಲದ ಆತಂಕ, alarm ಬೇಡ ಎಂದು ಯಾವಾಗಲೂ ವಾದಿಸುತ್ತಿರುತ್ತೇನೆ. ನನ್ನ ಥಿಯರಿ ಹೀಗಿದೆ. ಪ್ರತಿ ಮನುಷ್ಯನಲ್ಲೂ ಬಹುತೇಕ ಸಾಮಾನ್ಯ ಗುಣಗಳಿವೆ. ಅಲ್ಪ ಅತಿ ಒಳ್ಳೆಯ ಗುಣಗಳಿವೆ. ಹಾಗೆಯೇ ಕೆಲವು ಅತಿ ಕೆಟ್ಟ ಗುಣಗಳಿವೆ. (ಗಣಿತದಲ್ಲಿ ಆಸಕ್ತಿಯಿದ್ದವರು ಮನುಷ್ಯ ಗುಣಗಳ  distribution ಒಂದು Gaussian distributionನ ಆಕಾರ ಪಡೆದುಕೊಳ್ಳುತ್ತದೆ ಎಂದು ಗಮನಿಸಬಹುದು.) ಇದನ್ನೇ ವಿಸ್ತರಿಸಿದರೆ, ಒಂದು ಜನ ಸಮೂಹವನ್ನು ತೊಗೊಂಡರೆ, ಅದರಲ್ಲಿ ಬಹುತೇಕ ಜನರು ಸಾಮಾನ್ಯರಾಗಿರುತ್ತಾರೆ, ಕೆಲವರು ಅತಿ ಒಳ್ಳೆಯವರಾಗಿರುತ್ತಾರೆ, ಉಳಿದ ಕೆಲವರು ಅತಿ ಕೆಟ್ಟವರಾಗಿರುತ್ತಾರೆ. ಇದನ್ನೇ ಇನ್ನೂ ವಿಸ್ತರಿಸಿ ಇಡೀ populationಗೆ ಆಪಾದಿಸಬಹುದು. (ಮತ್ತೆ ಗಣಿತದಲ್ಲಿ ಆಸಕ್ತಿಯಿದ್ದವರು, ಇದು Central Limit Theoremನ ಅನ್ವಯ ಎಂದು ಗುರುತಿಸಬಹುದು.) ಇದರ ಪರಿಣಾಮ ಏನಪ್ಪಾ ಎಂದರೆ, ಒಂದು ಜನಸಮುದಾಯದಲ್ಲಿಂದ ಯಾದೃಚ್ಛಿಕವಾಗಿ ವ್ಯಕ್ತಿಯೊಬ್ಬಳನ್ನು ಆಯ್ಕೆ ಮಾಡಿದರೆ, ಅವಳು ಅತಿ ಒಳ್ಳೆಯವಳೂ ಅಲ್ಲದ, ಅತಿ ಕೆಟ್ಟವಳೂ ಅಲ್ಲದ, ನಮ್ಮಂತೆ ಸಾಮಾನ್ಯಳಾಗಿರುವ ಸಂಭವನೀಯತೆ ಬಹಳವಿರುತ್ತದೆ (ಸುಮಾರು ೬೮%). ಹಾಗೆಯೇ ಅವಳ ಜೊತೆ ನಾವು ದೈನಂದಿನ ವ್ಯವಹಾರ ಮಾಡುವ ಸಂಭವವೂ ಹೆಚ್ಚಿರುತ್ತದೆ.

The proof of the pudding is in the eating, ಎನ್ನುವ ಹಾಗೆ ನಾವು ಇದನ್ನೆಲ್ಲ ಯೋಚಿಸದೇ ದಿನನಿತ್ಯ ಮಾಡುತ್ತಲೆ ಇರುತ್ತೆವೆ. ಗೊತ್ತಿರುವ, ಗೊತ್ತಿಲ್ಲದ ಅನೇಕ ವ್ಯಕ್ತಿಗಳ ಜೊತೆಗೆ ಅರ್ಥಿಕ ವ್ಯವಹಾರಗಳನ್ನೋ, ವೈಯಕ್ತಿಕ ಹರಟೆಯನ್ನೋ ನಡೆಸುತ್ತೇವೆ. ಆದರೆ ಕೆಲವು ನಿರ್ದಿಷ್ಟ ರೀತಿಯ ನಮೂನೆಗಳನ್ನು ತೊಗೊಂಡಾಗ ನಾನು ಮೇಲೆ ಹೇಳಿದ್ದಕ್ಕೆ ಪೂರಕವಲ್ಲದ ರೀತಿ ನಮ್ಮ ನಡವಳಿಕೆಯಿರುತ್ತದೆ. ಉದಾಹರಣೆಗೆ – ನಿಮ್ಮ ಮನೆಯ ಸುತ್ತಮುತ್ತಲಿನ ಜನರನ್ನೆಲ್ಲ ಹಿಡಿದು ಒಂದೆಡೆ ನಿಲ್ಲಿಸಿ ವಿಶ್ಲೇಷಿಸಿದರೆ ಆ ನಾನು ಮೇಲೆ ಹೇಳಿದ ಲಕ್ಷಣಗಳನ್ನು ತೋರ್ಪಡಿಸುತ್ತಾರೆಯೇ, ಎಂದು ನಾನು ಕೇಳಿದರೆ, ನಿಮ್ಮ ಉತ್ತರ ಹೌದೆಂದಾಗಿರುತ್ತದೆ. ಈಗ ನಿಮ್ಮ ಓಣಿಯ ಕೊನೆಯಲ್ಲಿರುವ ಆಟೊ ಸ್ಟ್ಯಾಂಡಿನ ಆಟೊ ಡ್ರೈವರ್‌ಗಳ ಗುಂಪನ್ನು ನೋಡಿ. ಆ ಗುಂಪಿನ ಬಗೆ ನಮಗೆ ಅದೇ ನಂಬಿಕೆ ಇದೆಯೆ? ಇಲ್ಲ ಅನ್ನಿಸುತ್ತದೆ. ಯಾವುದೋ ಯಾದೃಚ್ಛಿಕ ಆಟೊದವನು ನಮ್ಮ ಮುಂದೆ ಬಂದು ನಿಂತರೆ, ಅವನನ್ನು ನಾವು ನಂಬಲು ಸಾಧ್ಯವಾಗಬೇಕಲ್ಲವೆ? ಸಾಧ್ಯವಾಗುವುದಿಲ್ಲ. ಹಾಗೆಯೇ ಎಲ್ಲ ಪೋಲೀಸರು ದುಡ್ದು ತಿನ್ನುತ್ತಾರೆ ಎಂಬ generalisation ತಪ್ಪೆನ್ನಿಸುವುದಿಲ್ಲ. ಹೀಗೆ ಕೆಲವು ರೀತಿಯ ಜನರ ಜೊತೆ ವ್ಯವಹರಿಸುವಾಗ ನಾವು counter-intuitive ಆಗಿ ವರ್ತಿಸುವುದು ನಮಗೆ ಸಹಜವೆ ಅಥವಾ ನಾವು ರೂಢಿಸಿಕೊಂಡಿರುವುದೆ ಎಂದು ಒಮ್ಮೊಮ್ಮೆ ನನಗೆ ಗೊಂದಲವಾಗುತ್ತದೆ. ಮತ್ತು ಈ ಥರದ ಅಪನಂಬಿಕೆ, ಅಗೌರವಗಳು ಕೂಡ ಆ ರೀತಿಯ ಜನರ ವರ್ತನೆಗಳನ್ನು ಸ್ವಲ್ಪಮಟ್ಟಿಗೆ ರೂಪಿಸುತ್ತವೇನೋ ಅನ್ನಿಸುತ್ತದೆ. ಉದಾಹರಣೆಗೆ – ಪೋಲೀಸ್ ಕಾನ್‍ಸ್ಟೆಬಲ್‍ಗಳು ಜನರ ಜೊತೆ ಮಾತನಾಡುವ ರೀತಿ, ಅವರ ಮೇಲಧಿಕಾರಿಗಳು ಅವರ ಜೊತೆ ಮಾತನಾಡುವ ರೀತಿಯನ್ನೇ ಪ್ರತಿಫಲಿಸುತ್ತದೆ.

ಹೆಚ್ಚಾಗಿ ಸಿಟಿಟ್ಯಾಕ್ಸಿಯ ಡ್ರೈವರುಗಳೇಕೆ ಆಟೊದವರ ಹಾಗೆ ವರ್ತಿಸುವುದಿಲ್ಲ? ಅವರು ಹೆಚ್ಚು ಸುಶಿಕ್ಷಿತರಾಗಿರುವುದು ಒಂದು ಕಾರಣವಿರಬಹುದು; ಅದು ದೊಡ್ದ ಸಂಘಟನೆ ಆಗಿರುವುದು ಇನ್ನೊಂದು ಕಾರಣವಿರಬಹುದು; ಆರ್ಥಿಕವಾಗಿಯೂ ಅವರಿಗೆ ಭದ್ರತೆ ಹೆಚ್ಚು. ಹಿಂದೊಮ್ಮೆ ಪೋಲೀಸರಿಗೆ ಜನರೊಟ್ಟಿಗೆ ಸರಿಯಾಗಿ ವ್ಯವಹರಿಸುವ ನಿಟ್ಟಿನಲ್ಲಿ ಏನೋ ತರಬೇತಿಗಳು ನಡೆಯುತ್ತಿದ್ದುದನ್ನು ಕೇಳಿದಂತೆ ನೆನಪು. ಆ ತರದ ಪ್ರಯತ್ನಗಳಾಗಬೇಕು. ಆದರೆ ಅದಕ್ಕಂಟಿಕೊಂಡಂತೆ ಸ್ಪಷ್ಟ ಪ್ರತಿಫಲವೇನಾದರೂ ಇರಬೇಕು. ಒಳ್ಳೆಯ ಮನೋಭಾವ, ವ್ಯವಹಾರ ಕೌಶಲ ಇರುವಂಥ ಆಟೊದವರಿಗೆ ಸರ್ಟಿಫಿಕೇಶನ್ ಕೊಡಬಹುದು. ಆಟೊದ ಹೊರಮೈಗೆ ಎದ್ದು ಕಾಣುವಂತೆ ಆ ಫಲಕ ಇದ್ದರೆ, ಹೆಚ್ಚು ಜನ ಅಂಥ ಆಟೊಗಳಲ್ಲಿ ಹೋಗಬಯಸುತ್ತಾರೆ. (ನಕಲಿ ಫಲಕಗಳನ್ನು ಹಾಕಿಕೊಂಡರೆ ಕಠಿಣ ಶಿಕ್ಷೆಯನ್ನು ತಪ್ಪದೆ ಕೊಡಬೇಕು.) ಇದರಿಂದ ಮೂಲದಲ್ಲಿ ಕರಪ್ಶನ್ ಶುರುವಾಗಬಹುದು; ಆದರೆ ಅದನ್ನು ತಡೆಹಿಡಿಯಬಹುದು.

—-

ಹೆಣ್ಣುಮಕ್ಕಳು ಪೆಪ್ಪರ್ ಸ್ಪ್ರೇ ಇಟ್ಟುಕೊಂಡು ಓಡಾಡುತ್ತಿರುವ ಸುದ್ದಿಯನ್ನು ನಾನೂ ಕೇಳಿದ್ದೇನೆ. ಆದರೆ ಅದನ್ನು ಉಪಯೋಗಿಸಿದ ಸುದ್ದಿಗಳನ್ನು ನಾನು ಕೇಳಿದಂತಿಲ್ಲ. ಒಟ್ಟಾರೆಯಾಗಿ, ಹೆಣ್ಣುಮಕ್ಕಳು ಶೋಷಣೆಗೊಳಗಾದಾಗ ಮಾಧ್ಯಮಗಳಲ್ಲಿ ಸಿಗುವ ಸಮಯ ಮತ್ತು ಜಾಗ, ಅವರು ಆತ್ಮರಕ್ಷಣೆ ಮಾಡಿಕೊಂಡಾಗ ಸಿಗುತ್ತಲಿದೆಯೆ? ನನಗೆ ಸಂಶಯವಿದೆ. ಅಥವಾ ಅಂಥ ಪ್ರಸಂಗಗಳೆ ಕಡಿಮೆಯೋ? ಅದೂ ಅಲ್ಲದೆ, ನನ್ನನ್ನು ಕಾಡುವ ಇನ್ನೊಂದು ಮುಖ್ಯ ಪ್ರಶ್ನೆಯೆಂದರೆ, ಪೆಪ್ಪರ್ ಸ್ಪ್ರೇ ಅಥವಾ ಮತ್ತೆನೋ ಇಟ್ಟುಕೊಳ್ಳುವುದು ಸುಲಭ; ಅದನ್ನು ಉಪಯೋಗಿಸುವ ಬಗೆ ಹೆಣ್ಣುಮಕ್ಕಳಿಗೆ ಗೊತ್ತಿದೆಯೇ? ಸಂದರ್ಭ ಬಂದಾಗ ಒಮ್ಮಿಂದೊಮ್ಮೆಲೆ ದೆವ್ವ ಹೊಕ್ಕವರ ಹಾಗೆ ಪೆಪ್ಪರ್ ಸ್ಪ್ರೇ ಎರಚಿಬಿಡುವುದು ಎಷ್ಟು ಜನರಿಗೆ ಸಾಧ್ಯ? ಬಹುತೇಕ ಮಂದಿಗೆ ಇದು ಸಾಧ್ಯವಿಲ್ಲ ಎಂಬುದು ನನ್ನ ನಂಬಿಕೆಯಷ್ಟೆ ಅಲ್ಲ, ಆಶಯ ಕೂಡ. ಬಹುಶ: ಇಂಥ ತರಬೇತಿಗಳೂ ಬೇಕು. ಆತ್ಮರಕ್ಷಣೆ ನಮ್ಮ ಹಕ್ಕು. ಆದರೆ ನಾವು ಉಪಕರಣಗಳನ್ನು ಉಪಯೋಗಿಸುವಾಗ restraint ಬೇಕು, ಚಾಲಾಕುತನ ಬೇಕು. ಅದಕ್ಕೆ ತರಬೇತಿಯ ಅಗತ್ಯವಿದೆ ಎಂದು ನನ್ನ ನಂಬಿಕೆ.

ಅಂಕಿಗಳಾಟ

ನಾವು ಚಿಕ್ಕವರೂ ಮೂರ್ಖರೂ ಇದ್ದಾಗ — ಈಗಲೂ ನಾವು ಮೂರ್ಖರಾಗಿಯೇ ಉಳಿದಿದ್ದೇವೆ, ಚಿಕ್ಕವರಾಗಿ ಉಳಿದಿಲ್ಲವಷ್ಟೇ — ಒಂದು ಅಸಾಮಾನ್ಯ ಹೊರಾಂಗಣ ಆಟ ಆಡುತ್ತಿದ್ದೆವು. ಆಟ ಅನ್ನುವುದಕ್ಕಿಂತ ಅದನ್ನು ಚಾಳಿಯೆಂದರೆ ಸರಿಯೇನೋ. ಒಟ್ಟಾರೆ ಆ ಆಟ ಯಾರೋ ಒಬ್ಬರಲ್ಲಿ spontaneous ಆಗಿ ಅವಿರ್ಭವಿಸಿ, ಕ್ಷಣಾರ್ಧದಲ್ಲಿ ಎಲ್ಲರಲ್ಲೂ ಹಬ್ಬುತ್ತಿತ್ತು. ಹೆಚ್ಚಾಗಿ ಅದು ನಾವೆಲ್ಲರೂ ಕೂಡಿ ಮನೆಯ ಯಾವುದೋ ಸಣ್ಣ ಕೆಲಸದಿಂದ ಅಂಗಡಿಗೋ ಮತ್ತೆಲ್ಲಿಗೋ ಹೋಗುವಾಗ ಶುರುವಾಗಿ ಕೆಲಸದ ಜೊತೆಗೇ ಸಾಗುತ್ತಿತ್ತು. ನಮ್ಮಲ್ಲಿ ಯಾರಾದರೊಬ್ಬರು ಹಾದು ಹೋದ ವಾಹನವೊಂದರ ನೋಂದಣಿ ಸಂಖ್ಯೆಯಲ್ಲಿ ಯಾವುದೋ ಒಂದು ಅಂಕಿ ಮರುಕಳಿಸಿದ್ದನ್ನು ಗಮನಿಸುತ್ತಿದ್ದರು; ಹಾಗೆ ಗಮನಿಸಿದವರು, ತಮ್ಮ ಕೈಗೆ ಅತ್ಯಂತ ಸಮೀಪಕ್ಕೆ ಸಿಗುವ ವ್ಯಕ್ತಿಯ — ತಮ್ಮ/ತಂಗಿ/ಗೆಳೆಯ/ಗೆಳತಿ — ಬೆನ್ನ ಮೇಲೆ ಎರಡು ಬಾರಿಸುತ್ತಿದ್ದರು. ಏನೆಂದು ತಿರುಗಿ ನೋಡಿದರೆ ಗೊತ್ತಾಗುತ್ತಿತ್ತು: ಅದು ಸುಮ್ಮನೆ ಬಾರಿಸಿದ್ದಲ್ಲ; ಒಂದು ಮಹತ್ವದ ಉತ್ಪಾತವನ್ನು ಗಮನಿಸಿದ ಮೊದಲಿಗನೆಂಬ ಹೆಮ್ಮೆಯ ಕುರುಹು! ಮೊದಲು ಗಮನಿಸಿದ್ದು ಎಂಬುದು ಮುಖ್ಯ ಅಂಶ; ಈ ಗೌರವ ಮೊದಲು ಯಾರು ಗಮನಿಸುತ್ತಾರೋ ಅವರಿಗೆ ಸಲ್ಲಬೇಕಾದ್ದು. ಅಲ್ಲಿಂದ ಆಟ ಶುರು. ಒಮ್ಮೆ ಆಟ ಶುರುವಾಯಿತೆಂದರೆ ಎಲ್ಲರ ಮೈಯೆಲ್ಲ ಕಣ್ಣು ಕಿವಿ.  ಜೊತೆಗಾರರನ್ನು ಥಳಿಸುವ, ಅಷ್ಟೇ ಅಲ್ಲದೆ ತಾವು ಅದರಿಂದ ಪಾರಾಗುವ ಹೊಂಚು ಹಾಕುವುದು ಶುರು. ಅದರಲ್ಲೂ ಕೆಲವರು ಚಾಲಾಕು. ಇಂಥ ತಿಳಿಗೇಡಿ ಆಟವನ್ನೇನು ಆಡುವುದು, ಇದರಲ್ಲಿ ತನಗೆ ಆಸಕ್ತಿ ಇಲ್ಲ – ಎಂದು ನಿರುಂಬಳ ಭಾವವನ್ನು ನಟಿಸಿ, ಜೊತೆಗಾರರ ಅವಧಾನ ಕಡಿಮೆಯಾಗುವಂತೆ ಮಾಡಿ, ನಂತರ ದಾಳಿಗೆರಗುವ ಬಗೆ. ಆದರೆ ಇಂಥ ತಂತ್ರಗಳು ಬಹಳ ಕಾಲ ಸಫಲತೆ ಪಡೆಯುತ್ತಿರಲಿಲ್ಲ. ಮತ್ತೆ ಎಲ್ಲರೂ ಆಟದ ತಾದಾತ್ಮ್ಯ ಗಳಿಸುತ್ತಿದ್ದರು.

ಒಮ್ಮೊಮ್ಮೆ ಆಟದ ನಿಯಮಗಳ ಬಗ್ಗೆ ವಿವಾದಗಳು ಶುರುವಾಗುತ್ತಿದ್ದುವು. ಮೇಧಾವಿಯೊಬ್ಬರು – “ಮರುಕಳಿಸುವ ಅಂಕೆಗಳು ಒಟ್ಟಿಗೆ ಬಂದಾಗ ಮಾತ್ರ ಹೊಡೆತಗಳು ಬದ್ಧ. ಇಲ್ಲದಿದ್ದರೆ ಇಲ್ಲ. ಉದಾಹರಣೆಗೆ: ೨೨೭೫ ಅಥವಾ ೪೬೬೦ ಸರಿ; ೧೩೧೬ ತಪ್ಪು,” ಎಂದು ತಕರಾರು ತೆಗೆಯುತ್ತಿದ್ದರು. ಆಗ ಉಳಿದವರು ಅದನ್ನು ವಿರೋಧಿಸಿ, ಇಂಥ ನಿರ್ಬಂಧಗಳಿಂದ ಆಟ ರಂಜನೀಯವಾಗಿ ಉಳಿಯುವುದಿಲ್ಲ ಎಂದು ಸಾಧಿಸಿ, ಹಳೆಯ ಆಟವನ್ನೇ ಮುಂದುವರಿಸುತ್ತಿದ್ದರು. ಹಾಗಿದ್ದಾಗ್ಗ್ಯೂಒಮ್ಮಿಂದೊಮ್ಮೆಲೆ ಕೆಲವರು ಜಾಣ್ಮೆಯ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದರು. ಎರಡು ’೪’ಗಳನ್ನು ಗಮನಿಸಿದರೆ, ೨ ಹೊಡೆಯುವ ಬದಲು ೪ ಹೊಡೆಯುತ್ತಿದ್ದರು. “ಮರುಕಳಿಸುವ ಅಂಕಿಯ ಮುಖಬೆಲೆಯಷ್ಟು ಹೊಡೆತಗಳನ್ನು ಹೊಡೆಯೋಣ,” ಎಂದು ವಕೀಲಿ ನಡೆಸುತ್ತಿದ್ದರು. ಅದೇಕೋ ಹೊಸ ನಿಯಮವನ್ನು ಎಲ್ಲರೂ ಒಪ್ಪಿಕೊಳ್ಳುತ್ತಿದ್ದರು. ಆದರೆ ಹಂಗಾಮಿಯಾಗಿ ಮಾತ್ರ. ಏಕೆಂದರೆ ಎಲ್ಲರೂ ಬಂಪರ್ ಬಹುಮಾನ ಹೊಡೆಯೋಣವೆಂಬ ಆಸೆಯಲ್ಲಿ, ೫ಕ್ಕಿಂತ ಹೆಚ್ಚಿನ ಅಂಕಿಗಳಿಗಾಗಿ ಕಾಯುತ್ತಿದ್ದರು. ಪಣದ ಮೊತ್ತ ಹೆಚ್ಚಾಗುತ್ತಿದ್ದಂತೆ ಜಗಳಗಳು ಹೆಚ್ಚಾಗುತ್ತಿದ್ದುವು. ಸ್ವಲ್ಪ ಹೊತ್ತಿನಲ್ಲಿ ಆಟವು ನೀರಸವೂ ತ್ರಾಸದಾಯಕವೂ ಆಗಿ ಪರಿಣಮಿಸುತ್ತಿತ್ತು. ಹಳೆಯ ಪ್ರಮಾಣೀಕೃತ ನಿಯಮಗಳಿಗೆ ಎಲ್ಲರೂ ಮೊರೆಹೋಗುತ್ತಿದ್ದರು.

***

ಬೆಂಗಳೂರಿನಲ್ಲಿ ಹೊರಗೆ ಗಾಡಿಯಲ್ಲಿ ಓಡಾಡುವಾಗ ಅನೇಕ ಸಲ ಈ ಆಟದ ನೆನಪು ನನಗೆ ಆದದ್ದಿದೆ. ರಸ್ತೆಯ ಬದಿಗೆ ನಿಂತು ಒಂದಷ್ಟು ಮಕ್ಕಳು ಈ ಆಟವನ್ನು ಆಡುತ್ತಿದ್ದಂತೆ ಕಲ್ಪಿಸಿಕೊಳ್ಳುತ್ತೇನೆ. ಹಾಗೆ ಕಲ್ಪಿಸಿಕೊಂಡು ಗಾಬರಿಗೊಳ್ಳುತ್ತೇನೆ. ನಾವು ಈ ಆಟವನ್ನು ಒಂದು ದಶಕಕ್ಕಿಂತಲೂ ಹಿಂದೆ ಆಡುತ್ತಿದ್ದೆವು. ಅದೂ ನಮ್ಮ ಸಣ್ಣ ಹಳ್ಳಿ ಪಟ್ಟಣಗಳಲ್ಲಿ. ಗಾಡಿಗಳ ಹಾದುಹೋಗುವಿಕೆಯ ಮೇಲೆ ನಿರ್ಭರಿವಾದ ಆಟ ಅದೆಷ್ಟು ನಿಧಾನವಾಗಿ ನಡೆಯುತ್ತಿತ್ತೆಂದರೆ ಎಷ್ಟೋ ಸಲ ನಮ್ಮ ಬೆನ್ನ ಮೇಲೆ ಎರಡೇಟು ಬೀಳುವ ತನಕ ಆಟ ಆಡುತ್ತಿದ್ದುದನ್ನೇ ನಾವು ಮರೆತಿರುತ್ತಿದ್ದೆವು. ಆದರೆ ಈಗ? ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆಯ ಬಗ್ಗೆ ಸ್ವಲ್ಪ ವಿಚಾರ ಮಾಡಿ. ಹಾಗೂ ಅವುಗಳ ಆವೃತ್ತಿ. ಮಕ್ಕಳು ಈ ಪರಿಯ ಸಂಖ್ಯಾ ಪರಿವರ್ತನಗಳ, ಇಂಥ combinatorial explosion ಅನ್ನು ಎದುರಿಸಿ ಬದುಕುವುದುಂಟೇ? ಅವು ಈ ಅಂಕೆಯಿಲ್ಲದಾಟದ ಹಂಗಿಗೆ ಬಿದ್ದು ಒಂದು ತಿಳಿಗೇಡಿ ಆಟವನ್ನು ಭೀಕರ ಆಟವನ್ನಾಗಿಸಿಕೊಳ್ಳುವುದು ಬೇಡ.