ಸಂಗಾತ

[ಎಷ್ಟೋ ಕಾಲದ ನಂತರ ಹೀಗೆಯೇ ಕೂತು ಒಂದು ಪದ್ಯ ಬರೆದೆ. ಈ ಪದ್ಯವನ್ನು ಹಿಂದೊಮ್ಮೆ ಬರೆದಿದ್ದೆ. ಬರೆದದ್ದೆಂದರೆ ನನ್ನ ಗೆಳೆಯನೊಬ್ಬನಿಗೆ ಫೋನಿನಲ್ಲಿ ಸಂದೇಶ ಕಳಿಸುತ್ತಿದ್ದಾಗ  ಏನೋ ಒಂದು ಲಹರಿಯಲ್ಲಿ ಸರಸರನೆ ಟೈಪು ಮಾಡಿ ಕಳಿಸಿದ್ದೆ. ನಂತರ ಅದು ಕಳೆದೇ ಹೋಯಿತು! ಈಗ ‘ಅದನ್ನು’ ಮತ್ತೊಮ್ಮೆ ಬರೆದೆ. ಇದು ಅದೇ ಎಂದರೆ ಅದೇ, ಅಲ್ಲವೆಂದಲ್ಲಿ ಅಲ್ಲ. ಥೀಮು ಮಾತ್ರ ಅದೇ. ಉಳಿದಂತೆ ಆಗ ಏನು ಬರೆದಿದ್ದೆ ಎನ್ನುವುದು ಅಷ್ಟಾಗಿ ನನಗೆ ನೆನಪಿಲ್ಲ. ಅದೇನೇ ಇರಲಿ. ಬರೆಯುವುದು ಬಲು ಕಷ್ಟ. ಅದೂ ಬರೆಯುವ ರೂಢಿ ತಪ್ಪಿದ್ದಲ್ಲಿ ಮತ್ತೆ ಕೂತು ಬರೆಯುವುದು ಸಾಕಷ್ಟು ಹೈರಾಣ ಮಾಡುವ ಕೆಲಸ. ಓದಿ ಅಭಿಪ್ರಾಯ ತಿಳಿಸಿ.]

ಹುಟ್ಟಿನಿಂದಲೇ ಕರ್ಣನ ಮೈ
ಗಂಟಿಕೊಂಡ ಹೊನ್ನ ಕವಚ
ಕಿವಿಗೆ ಕುಂಡಲ. ವರವೋ
ಶಾಪವೋ ಅದವನ ದಿರಿಸು.
ಕುಂತಿ ತೇಲಿಸಿಯೇ ಬಿಟ್ಟಳು ಕೂಸು
ಸೂರ್ಯ ಕೊಟ್ಟದ್ದಲ್ಲವೇ?
ಆಗದೇನೋ ಹಸಿ ಹೊಲಸು.
ಕರ್ಣನೋ ಹೇಳೀಕೇಳಿ ದಾನಶೂರ
ಮುಂದೊಮ್ಮೆ ಮಳೆಯ ದೇವ ಕೇಳಿದ್ದೇ ತಡ
ಬಿಚ್ಚಿ ಕೊಟ್ಟೇ ಬಿಟ್ಟ, ಬೆತ್ತಲೆ ನಿಂತ.
ಸಾಮ ದಾನ ಭೇದ ದಂಡಗಳನೆಲ್ಲ
ಅರಿತೂ ಮರೆತ ಮೊದ್ದು ಕ್ಷತ್ರಿಯ
ಕೊಟ್ಟ ಮಾತು ಬಿಟ್ಟ ಬಾಣ
ತೊಟ್ಟ ಬಟ್ಟೆ. ಎಲ್ಲವೂ ಗೌಣ.

ಎಳವೆಯಲ್ಲಿ ಎಷ್ಟೋ ಸಲ ಕೇಳಿ
ಮರೆತಿರುವ ಕತೆ ಮತ್ತೆ
ನೆನಪಾಗಲು ನಿಮಿತ್ತ ನನ್ನ ಮಗಳು
ಮತ್ತವಳ ಮಜೆಂಟಾ ಫ್ರಾಕು.
ಅದನ್ನು ಮೈಮೇಲೆ ಅಚ್ಚುಹಾಕಿಸಿ
ಕೊಂಡೇ ಹುಟ್ಟಿದ್ದಳೇನೋ ಎಂಬ ಠಾಕು
ಊಟ ಆಟ ಅಳು ನಿದ್ದೆ ಕನಸು
ಕನವರಿಕೆಯಲ್ಲೂ ಬಿಡದ ಸಂಗಾತ
ಹೋಗಲಿ ಸ್ನಾನಕ್ಕೆ ನಿಂತಾಗಲಾದರೂ
ಬೇಡಿಕೊಂಡಷ್ಟೂ ಜಗ್ಗದ ಒಂದೇ ಹಟ.
ಪುಸಲಾವಣೆ ಅರೆ ಮುನಿಸು ಬೆದರಿಕೆ ಎತ್ತಿದ ಕೈ
ಎಲ್ಲದಕೂ ಮುದ್ದುಗರೆಯುವ ತಿರುಗು ಬಾಣ
ಮಾಡಿದ ಪ್ರಾಮಿಸ್ಸು ನಾಲಿಗೆಯ ಮೇಲಣ
ಚಾಕಲೇಟು ಕರಗಿದಂತೇ ಮಟಾ ಮಾಯ.

ಕೊಡುಗೈಯ್ಯ ಕರ್ಣ ಪಾಪ ಎಲ್ಲ ಇದ್ದೂ
ಯಾವುದಕ್ಕೂ ಅಂಟಿಕೊಳ್ಳಲಾರದ ಸಂತಪ್ತ.
ನಾನೂ ಮಗಳೂ ಮಗಳೂ ಫ್ರಾಕೂ
ಒಂದಕ್ಕೊಂದು ಲಿಪ್ತರು. ನಿತ್ಯ ತೃಪ್ತರು.

ಬೆಳಕೆ

image135

ಜಗದಗಲ ಹಣೆಬಡೆದ
ಹಿತ್ತಾಳೆ ಮೊಗದೊಡೆಯ
ಮುಚ್ಚುಕಂಗಳ ಸಂತ
ನಿರ್ಲಿಪ್ತ ಜಂಗಮನೆ

ಧ್ಯಾನಸ್ತ ಅಲ್ಲಮನೆ?

ಪ್ರಶಾಂತ
ಅಭಯಂಕರ
ಶಿವನೆ?

ಹಣೆಗಣ್ಣಲ್ಲ
ಜ್ಞಾನದ ಬೆಳಕಿಂಡಿ
ಹಣೆಯ ಛೇದಿಸಿ
ಯಜ್ಞಕುಂಡವ ಹೂಡಿ
ಬೆಳಕ ಸೂಸುವ
ಅಘೋರಿಯೆ
ಮಹಾ ಮಹಿಮನೆ

ಈ ಫ಼ೋಟೊ ಯಾವುದೋ ಕಾಲದಲ್ಲಿ ನನ್ನ ಸಂಚಾರಿ ಫ಼ೋನಿನಲ್ಲಿ ಹೇಗೋ ಸೇರಿಕೊಂಡಿತ್ತು. ಇದು ಏನೆಂದು ಗೊತ್ತಿಲ್ಲ. ಏನೋ ಮಾಡಲು ಹೋದಾಗ ಆನುಷಂಗಿಕವಾಗಿ ಸೆರೆಯಾಗಿರಲಿಕ್ಕೆ ಸಾಕು. ಆದರೆ ಅದನ್ನು ನೋಡಿ ನನಗ ಏನೇನೋ ಅನ್ನಿಸಿತ್ತು. ಅದು ಈ ಪದ್ಯವಾಗಿ ಪರಿಣಮಿಸಿತ್ತು. ಬಹಳ ಮೊದಲೊಮ್ಮೆ ಈ ಬ್ಲಾಗಿನಲ್ಲಿ ಇದನ್ನು ಹಾಕಿದ್ದೆ. ಯಾಕೋ ಇದು ನೆನಪಾಗಿದ್ದಕ್ಕೂ ನನಗೆ ಸದ್ಯಕ್ಕೆ ಬರೆಯುವ ಲಹರಿಯಿಲ್ಲದಿರುವುದಕ್ಕೂ, ಒಟ್ಟು ಇದನ್ನು ಮತ್ತೆ ಇಲ್ಲಿ ಹಾಕುತ್ತಿದ್ದೇನೆ.

ತುಣುಕುಗಳು

ಬಹಳ ದಿನದಿಂದ ಏನೂ ಬರೆದೇ ಇಲ್ಲ. ತಂಗಳಿನ ಈ ತುಣುಕುಗಳಾದರೂ ಸರಿಯೇ.

ಮಳೆ ಸುರಿಯುತ್ತದೆ
ನೆನಪು ಕನಸುಗಳ
ಕಲಸುಮೇಲೋಗರದಲಿ
ವಾಸ್ತವ ಕರಗುತ್ತದೆ
***

ಮಳೆಬಿಲ್ಲು ನೋಡಿ ವಿಸ್ಮಯಪಡುತ್ತೇನೆ
ನೀರಹನಿಯೊಂದು ಸೂರ್ಯನನ್ನೇ
ಒಡೆಯುವ ಬಗೆಯೆಂತು!
ನಿನ್ನ ನೆನಪಾಗುತ್ತದೆ
ನಿನ್ನ ಕಣ್ಹನಿ ನನ್ನ
ಜೀವವ ಕೆದರಿ ನಿರ್ವರ್ಣ
ಮಾಡುವ ಬಗೆಯ ಅರಿವಾಗಿ
ಮಳೆಬಿಲ್ಲಿನ ಅದ್ಭುತವ ಮರೆಮಾಚುತ್ತದೆ.
***

ನಿರುಮ್ಮಳ ನಿದ್ದೆಯುದ್ದಕ್ಕೂ ಕನಸು ಕಂಡೆ
ಅಥವಾ ಬಹಳ ಮಾಡಿ
ನಿರುಮ್ಮಳ ಕನಸಿನುದ್ದಕ್ಕೂ ನಿದ್ದೆ ಕಂಡೆ
ವಾಸ್ತವ ಎಚ್ಚರ ಮಾಡಿತು.
ಗೊಂದಲ ಮಾತಾಡತೊಡಗಿತು.
***

ಚೈತನ್ಯ ಧನವಾಗಿ ಬದಲುವ ಈ
ಸ್ಥಾವರದ ಬಳಿ ಕೂತಿದ್ದೇನೆ.
ನನ್ನ ಉರಿ ಹಂಬಲಗಳ ಹೊಗೆ
ರಸ್ತೆಯ ಮುಸುಕುವ ಅವಿರತ ಕರಿ
ಕಂಬಳಿಯ ಎರಗುತ್ತದೆ.
ನೆನಪುಗಳ ಆವಾಹಿಸಿಕೊಳ್ಳುತ್ತೇನೆ
ನಿಶ್ವಾಸಗಳ ಮೂಲಕ ನೆಯ್ಯುತ್ತೇನೆ
ಕಂಬಳಿಯ ತಳಕ್ಕೂ ಒಯ್ಯುತ್ತೇನೆ
ಅಚಾನಕ್ಕಿನ ಟ್ರಕ್ಕಿನ ತುಳಿತಕ್ಕೆ
ಸಿಲುಕಿ ಹಿಪ್ಪೆಯಾಗಲೆಂದು ಕಾಯುತ್ತೇನೆ.
ಅದೃಶ್ಯ ಸೋಸಕವೊಂದು ಬಲಿಷ್ಠ
ಎದುರಾಳಿಯಾಗಿ ಕಾಡುತ್ತದೆ,
ನೆನಪುಗಳ ನೆಯ್ದು ಹಂಬಲಗಳಾಗಿಸುತ್ತದೆ
ಶ್ವಾಸದ ಮೂಲಕ ಮತ್ತೆ
ನನ್ನೊಳಗೆ ತಳ್ಳುತ್ತದೆ.
ಸ್ಥಾವರದತ್ತ ನೋಡುತ್ತ ಶೋಕಿಸುತ್ತೇನೆ
ಮನಗಾಣುತ್ತೇನೆಯೆ?
ಇದೊಂದು ವಿಷವರ್ತುಳವೆಂದು
ಅಥವಾ
ಮತ್ತೂ ಆಶಿಸುತ್ತೇನೆಯೆ?
***

ಹಸಿ ನೆನಪುಗಳು ಒಣಗುವುದಿಲ್ಲ
ಒಣಗಿಸುವುದನ್ನು ಒಣಗಿಸುತ್ತವೆ
ಮೋರಿಯನ್ನು ಸೋರಿಸುತ್ತವೆ
ಕವಿಯನ್ನು ರಮಿಸುವ ಸೋಗು ಹಾಕುತ್ತವೆ.

ಹಂಬಲಗಳೇ ಮೇಲು
ಸದಾಕಾಲ ಉರಿಯುತ್ತವೆ
ನೆನಪುಗಳನ್ನೂ ಸುಡುತ್ತವೇನೋ
ಆದರೆ ಅವನ್ನು ನಂದಿಸಲಾಗುತ್ತದೆ
ಅಥವಾ ಆಗಿಂದಾಗ ಉರಿದು ಹೋಗುತ್ತವೆ.

ಕ್ಯಾಮೆಲ್‍ಬ್ಯಾಕ್ ಬೂಲೆವಾರ್ಡಿನ ನಾಯಿಗಳ ಸಂವಾದ

ಪದ್ಯದಂಥದ್ದೇನೋ ಬರೆದಿದ್ದೇನೆ. ನೀವೂ ಹಾಗೆ ಅಂದುಕೊಂಡು ಓದಿ. ಶೀರ್ಷಿಕೆಯ ’ಕ್ಯಾಮೆಲ್‍ಬ್ಯಾಕ್ ಬೂಲೆವಾರ್ಡ್’ (camelback boulevard), ಇಲ್ಲೇ ಪಕ್ಕದಲ್ಲಿರುವ, ಎಡಬಲಕ್ಕೂ ಅಮೆರಿಕನ್ ಮಿಡಲ್‍ಕ್ಲಾಸಿನ ಶಿಸ್ತಿನ, ಅಂದವಾದ ಮನೆಗಳಿರುವ, ರಸ್ತೆ. ಆಗಾಗ ಆ ರಸ್ತೆಯ ಮುಖಾಂತರ ವಾಕ್ ಹೋಗುತ್ತಿರುತ್ತೇನೆ.

ಅದೋ ನೋಡು ಅಮೆರಿಕಾ
ಕಾಣುತ್ತಲ್ಲ ತುಂಬಿಕೊಂಡು
ಉದ್ದವಾಗಿ ಅಗಲವಾಗಿ
ಭೂಗೋಳ ಪರೀಕ್ಷೆಯಲ್ಲಿ
ನಕ್ಷೆ ಬಿಡಿಸುವ ಮಕ್ಕಳಿಗೆ
ಅನುಕೂಲವಾಗಿ ಆಯತವಾಗಿ.
Continue reading “ಕ್ಯಾಮೆಲ್‍ಬ್ಯಾಕ್ ಬೂಲೆವಾರ್ಡಿನ ನಾಯಿಗಳ ಸಂವಾದ”

ಜೆ. ಅಲ್ಫ಼್ರೆಡ್ ಪ್ರುಫ಼್ರಾಕನ ಪ್ರೇಮ ಗೀತೆ (ಭಾಗ ೩, ಮುಗಿತಾಯ)

ಇದಕ್ಕೂ ಮೊದಲು, ಭಾಗ ೧ ಹಾಗೂ ಭಾಗ ೨.

ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಆ ಕಪ್ಪುಗಳು, ಮೊರಬ್ಬ, ಚಹಾಗಳ ನಂತರ,
ಪಿಂಗಾಣಿ ಕಪ್ಪು-ಬಸಿಗಳಲ್ಲಿ, ನಿನ್ನ ನನ್ನ ಬಗೆಗಿನ ಮಾತುಗಳಲ್ಲಿ,
ವಿಷಯದ ಕೊಂಡಿಯನ್ನು ಒಂದು ಮುಗುಳ್ನಗೆಯಿಂದ ಕಡಿದುಹಾಕುವುದು,
ಮೌಲಿಕವಾದುದಾಗುತ್ತಿತ್ತೇ,
ಇಡೀ ಬ್ರಹ್ಮಾಂಡವ ಹಿಂಡಿ ಚೆಂಡು ಮಾಡುವುದು,
ಮೈಮೇಲೆರಗುವ ಪ್ರಶ್ನೆಯತ್ತ ಉರುಳಿಸುವುದು,
“ನಾನು ಲೆಜ಼ಾರಸ್, ಸತ್ತವನೆದ್ದು ಬಂದಿದ್ದೇನೆ,
ಎಲ್ಲ ಹೇಳಲು ಮರಳಿ ಬಂದಿದ್ದೇನೆ, ನಿಮಗೆಲ್ಲ ಹೇಳಲು,” ಎಂದು ಬಿಡುವುದು,
ಅವಳ ತಲೆಗೆ ಇಂಬಿರಿಸಿ, “ನಾನು ಹೇಳಿದರರ್ಥ
ಅದಲ್ಲ, ಅದಲ್ಲವೇ ಅಲ್ಲ,” ಎಂದು ಹೇಳಬೇಕಾಗಿದ್ದಲ್ಲಿ,
ಇದೆಲ್ಲ ಬೇಕಾಗಿತ್ತೆ?

ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಅರ್ಥಪೂರ್ಣವಾದುದಾಗುತ್ತಿತ್ತೇ?
ಸೂರ್ಯಾಸ್ತಗಳು, ಹಿತ್ತಿಲುಗಳು, ನೀರು ಚಿಮುಕಿಸಿದ್ದ ಬೀದಿಗಳು,
ಕಾದಂಬರಿಗಳು, ಚಹಾಕಪ್ಪುಗಳು, ಫರಶಿಯುದ್ದಕ್ಕೂ ತೆವಳುವ
ಸ್ಕರ್ಟುಗಳು —
ಇವು, ಹಾಗೂ ಮತ್ತಿನ್ನೆಷ್ಟೋ ಸಂಗತಿಗಳ ನಂತರ?
ನನಗನ್ನಿಸ್ಸಿದ್ದನ್ನು ಯಥಾರ್ಥ ಹೇಳುವುದು ಸಾಧ್ಯವೇ ಇಲ್ಲ!
ಆದರೆ ಒಂದು ಮಾಯಾವಿ ಲಾಟೀನು ಪರದೆಯ ಮೇಲೆ ನರನಾಡಿಗಳ ಚಿತ್ತಾರ ಎರಚಿದಂತೆ:
ತಲೆದಿಂಬನ್ನಿರಿಸಿ, ಅಥವಾ ಶಾಲನ್ನು ಕಿತ್ತೆಸೆದು,
ಕಿಟಕಿಯತ್ತ ಮುಖ ತಿರುಗಿಸಿ, “ಅಲ್ಲ, ನಾನು ಹೇಳಿದ್ದರ ಅರ್ಥ
ಅದಲ್ಲ. ಅದಲ್ಲವೇ ಅಲ್ಲ,” ಎಂದು ಹೇಳಿದ್ದರೆ,
ಆವಾಗ ಅದು ಸರಿಹೋಗುತ್ತಿತ್ತೇ?

………..

ಅಲ್ಲ! ನಾನು ಪ್ರಿನ್ಸ್ ಹ್ಯಾಮ್ಲೆಟ್ ಅಲ್ಲ, ಅದು ನನ್ನ ಸ್ವಭಾವವೇ ಅಲ್ಲ;
ನಾನೊಬ್ಬ ಸೇವಕ, ದೇವದೂತ, ಹೇಳಿದಷ್ಟು ಮಾಡುವವ,
ಪೋಷಿಸಿ ಮುಂದುವರಿಸುವುದು, ಒಂದೆರಡು ದೃಶ್ಯಗಳ ಮೊದಲು ಬರುವುದು,
ರಾಜಕುವರನಿಗೆ ಸಲಹೆ ಕೊಡುವುದು; ಸುಲಭ ಸಲಕರಣೆ, ಸಂಶಯವಿಲ್ಲ,
ಗೌರವ ಸೂಚಿಸುತ್ತ, ಕೃತಕೃತ್ಯೆಯಿಂದ ಉಪಯೋಗಕ್ಕೆ ಬರುವವ,
ಮುತ್ಸದ್ದಿ, ಜಾಗರೂಕ, ಎಲ್ಲವೂ ಕೂಲಂಕುಷ,
ಭಾಷ್ಕಳಪಂತ, ಆದರೆ ತುಸು ಸ್ಥೂಲ, ನಿಧಾನಿ
ಕೆಲವೊಮ್ಮೆ ನಿಜಕ್ಕೂ ಹಾಸ್ಯಾಸ್ಪದ
ಮತೊಮ್ಮೊಮ್ಮೆಯಂತೂ ಪೂರಾ ವಿದೂಷಕ.

ನನಗೆ ವಯಸ್ಸಾಗುತ್ತದೆ… ಮುದುಕನಾಗುತ್ತೇನೆ…
ಕೆಳಗೆ ಮಡಿಕೆ ಹಾಕಿ ಪ್ಯಾಂಟು ತೊಡುತ್ತೇನೆ.

ಕೂದಲು ಹಿಂದಕ್ಕೆ ಬಾಚಲೆ? ಪೀಚ್ ತಿನ್ನುವ ಸಾಹಸ ಮಾಡಲೆ?
ನಾನು ಬಿಳಿಯ ಫ್ಲ್ಯಾನೆಲ್ ಟ್ರೌಸರ್ಸ್ ತೊಟ್ಟು, ಬೀಚ್ ಮೇಲೆ ಓಡಾಡುವೆ.
ನಾನು ಮತ್ಸ್ಯಕನ್ನಿಕೆಯರ ಹಾಡು ಪ್ರತಿಹಾಡುಗಳನ್ನು ಕೇಳಿರುವೆ.

ನನ್ನ ಸಲುವಾಗಿ ಅವರು ಹಾಡುವರೆಂದು ನನಗನ್ನಿಸುವುದಿಲ್ಲ.

ಅವರನ್ನು ನೋಡಿದ್ದೇನೆ ಅಲೆಗಳ ಸವಾರಿ ಮಾಡುತ್ತ ಸಮುದ್ರದತ್ತ ಹೋಗುವಾಗ
ಗಾಳಿ ಬೀಸಿ ನೀರನ್ನು ಕಪ್ಪುಬಿಳುಪಾಗಿ ಹರಡುವಾಗ
ಅಲೆಗಳ ಬೆಳ್ಳನೆಯ ಕೂದಲನ್ನು ಹಿಂದೆ ಹಿಂದೆ ಹಿಕ್ಕುವಾಗ.

ತಿರುಗಿದ್ದೇವೆ ನಾವು ಸಮುದ್ರದ ಅನೇಕ ಕಕ್ಷೆಗಳಲ್ಲಿ
ಕೆಂಪು ಕಂದು ಜೊಂಡಿನ ಮಾಲೆ ಧರಿಸಿರುವ ಸಾಗರಕನ್ನಿಕೆಯರ ಸುತ್ತಲೂ
ಮನುಷ್ಯ ದನಿಗಳು ನಮ್ಮನ್ನೆಬ್ಬಿಸುವ ತನಕ, ಮುಳುಗಿಸುವ ತನಕ.

ಜೆ. ಆಲ್ಫ್ರೆಡ್ ಪ್ರುಫ್ರಾಕ್‍ನ ಪ್ರೇಮ ಗೀತೆ (ಭಾಗ ೨)

ಓದಿರದವರು ಇದರ ಭಾಗ ೧ಕ್ಕೆ ಇಲ್ಲಿ ಹೋಗಿ.

ಯಾಕೆಂದರೆ ಇವರೆಲ್ಲ ನನಗೆ ಈಗಾಗಲೆ ಗೊತ್ತು, ಎಲ್ಲವೂ ಗೊತ್ತು:
ಸಂಜೆಗಳು, ನಸುಕುಗಳು, ಅಪರಾಹ್ಣಗಳು ಎಲ್ಲ ಗೊತ್ತು
ನನ್ನ ಬಾಳುವೆಯನ್ನು ಕಾಫೀ ಚಮ್ಮಚೆಗಳಿಂದ ಅಳೆದು ಸುರಿದಿದ್ದೇನೆ;
ದೂರದ ರೂಮಿನಿಂದ ಬರುತ್ತಿರುವ ಸಂಗೀತದಡಿಯಲ್ಲಿ
ನೆಲಕ್ಕಚ್ಚುತ್ತಿರುವ ದನಿಗಳ ಕೊನೆಯುಸಿರೂ ನನಗೆ ಗೊತ್ತು.
ಹೀಗಿರುವಾಗ ಹೇಗೆ ಮುಂದರಿಯಲಿ?

ಆ ಕಣ್ಣುಗಳೂ ನನಗೆ ಗೊತ್ತು, ಅವೆಲ್ಲವೂ –
ಎಲ್ಲರನ್ನೂ ಸೂತ್ರಬದ್ಧ ನುಡಿಗಟ್ಟಿನಿಂದ ಕಟ್ಟಿಹಾಕುವಂಥ ಕಣ್ಣುಗಳು,
ಹೀಗೆ ನಾನೊಂದು ಸೂತ್ರವಾದಾಗ, ಪಿನ್ನಿಗಂಟಿ ಅಸ್ತವ್ಯಸ್ತ ಬಿದ್ದಿರುವಾಗ,
ಪಿನ್ನೆರಗಿ ಗೋಡೆಗೊರಗಿ ಎತ್ತಕೆತ್ತರೆ ಹೊರಳಾಡುತ್ತಿರುವಾಗ,
ಹೇಗೆ ಶುರು ಮಾಡಲಿ, ಹೇಳಿ?
ನನ್ನ ನಿತ್ಯದ ರೀತಿಗಳ ಅರೆಬೆಂದ ದಂಡೆಗಳನ್ನು ಹೇಗೆ ಉಗಿಯಲಿ?
ಹೇಗೆ ಮುಂದರಿಯುವ ಸಾಹಸಪಡಲಿ?

ಮತ್ತೆ ನನಗೆ ಆ ಕೈಗಳೂ ಗೊತ್ತು, ಅವೆಲ್ಲವೂ –
ಕೈಗಳಲ್ಲಿರುವ ಬಳೆಗಳು, ಅಥವಾ ಬಿಳಿ ಖಾಲಿ ಕೈಗಳು
[ಆದರೆ ದೀಪದ ಬೆಳಕಿನಲ್ಲಿ ಕಂಡುಬಂದು ಕೈಕೊಡುವ ಕಂದು ಕೂದಲು!]
ಇದೇನು, ಯಾರದೋ ಬಟ್ಟೆಗಳ ಸುವಾಸನೆ
ಹೀಗೆ ನನ್ನ ದಿಕ್ಕು ತಪ್ಪಿಸುತ್ತಿದೆಯೋ?
ಟೇಬಲ್ಲಿನ ಮೇಲೆ ಒರಗಿರುವ ಕೈಗಳು, ಶಾಲು ಸುತ್ತಿಕೊಂಡಿರುವ ಕೈಗಳು.
ಮತ್ತೀಗ ಮುಂದೆ ಹೆಜ್ಜೆಯಿಡಲೆ?
ಆದರೆ.. ಎಲ್ಲಿ ಶುರು ಮಾಡಲಿ?

…….

ಮುಸ್ಸಂಜೆಗಳ ಸಂದಿಗಳಲ್ಲಿ ಹಾದುಹೋಗಿದ್ದೇನೆ,
ಕಿಟಕಿಗಳಲ್ಲಿ ಬಾಗಿ ನಿಂತ ಒಂಟಿ ಗಂಡಸರ
ಪೈಪುಗಳಿಂದೊಸರಿ ಮೇಲೆರುವ ಹೊಗೆ ನೋಡಿದ್ದೇನೆಂದು ಹೇಳಲೆ?

ನನಗೊಂದು ಜೋಡಿ ಪರಪರಕು ಉಗುರುಗಳಿರಬೇಕಿತ್ತು
ನಿ:ಶಬ್ದ ಸಮುದ್ರಗಳಡಿಯಲ್ಲಿ ಗರಗರ ತಿರುಗುತ್ತಿದ್ದೆ.

…….

ಮತ್ತೆ ಈ ಮಧ್ಯಾಹ್ನ, ಈ ಸಂಜೆ ಎಷ್ಟು ನಿರುಂಬಳ ಮಲಗಿದೆ!
ನೀಳವಾದ ಬೆರಳುಗಳಿಂದ ನೀವಿಸಿಕೊಂಡು,
ನಿದ್ರಿಸುತ್ತಿದೆ… ಸುಸ್ತಾಗಿದೆ.. ಅಥವಾ ಓತ್ಲಾ ಹೊಡೆಯುತ್ತಿದೆ,
ಫರಶಿಗಳ ಮೇಲೆ ಮೈಚಾಚಿ, ಇಲ್ಲಿಯೇ, ನಿನ್ನ ನನ್ನ ಪಕ್ಕದಲ್ಲೆ.
ಚಹಾ, ಕೇಕು, ಐಸ್‍ಕ್ರೀಮುಗಳ ನಂತರ, ಪ್ರಸಕ್ತ ಕ್ಷಣವನ್ನು
ತೀರಾ ಸಂದಿಗ್ಧಕ್ಕೆ ತಳ್ಳುವ ಚೇತನ ನನ್ನಲ್ಲಿರಲೇಬೇಕೆ?
ನಾನು ಅತ್ತುಕರೆದು ಹೊಟ್ಟೆಗಟ್ಟಿ, ಗೋಳಾಡಿ ಪ್ರಾರ್ಥಿಸಿದ್ದರೂ
ನನ್ನ [ಸ್ವಲ್ಪ ಬಕ್ಕ] ತಲೆಯನ್ನು ತಾಟಿನಲ್ಲಿ ಹೊತ್ತು ತಂದದ್ದನ್ನು ನೋಡಿದ್ದರೂ
ಹೇಳುವುದೇನೆಂದರೆ, ನಾನೇನು ಪ್ರವಾದಿಯಲ್ಲ — ಮತ್ತಿದು ದೊಡ್ಡ ಸಂಗತಿಯೂ ಅಲ್ಲ;
ನೋಡಿದ್ದೇನೆ ನನ್ನ ಶ್ರೇಷ್ಠತೆಯ ಕ್ಷಣಗಳು ಮಿಣುಗುಟ್ಟಿದ್ದನ್ನೂ,
ನೋಡಿದ್ದೇನೆ ಕೆಲಸದ ಹುಡುಗ ಸಂತತ ನನ್ನ ಕೋಟನ್ನು ಇಸಿದುಕೊಳ್ಳುವುದನ್ನು, ಮುಸಿನಗುವುದನ್ನೂ,
ಸಂಕ್ಷೇಪಿಸಿ ಹೇಳಬೇಕೆಂದರೆ – ನಾನು ಬೆಚ್ಚಿಬಿದ್ದಿದ್ದೆ.

ಜೆ. ಆಲ್ಫ್ರೆಡ್ ಪ್ರುಫ್ರಾಕ್‍ನ ಪ್ರೇಮ ಗೀತೆ (ಭಾಗ ೧)

ಎಲಿಯಟ್‍ನ ಪದ್ಯಗಳನ್ನು ಜೋರಾಗಿ ಓದಬೇಕು. ದನಿ ತೆಗೆದು. ದನಿ ಏರಿಳಿಸಿ. ಅವು ದಕ್ಕುತ್ತವೋ ಇಲ್ಲವೋ ಎಂಬ ಯೋಚನೆಯಿಲ್ಲದೆ. “Do I dare?” and “Do I dare?” ಎಂದುಕೊಳ್ಳುತ್ತಲೆ ಈ ಅನುವಾದಕ್ಕಿಳಿದಿದ್ದೇನೆ. ಬಹುಶಃ ೨ ಅಥವಾ ೩ ಭಾಗಗಳಲ್ಲಿ ಇಲ್ಲಿ ಛಾಪಿಸುತ್ತೇನೆ. ಹೇಗನ್ನಿಸಿತು ಹೇಳಿ. ಈ ಪದ್ಯದ epigraph, ಡಾಂಟೆಯ ಇನ್‍ಫ಼ರ್ನೋದ ಸಾಲುಗಳು. ಅದನ್ನು ಹಾಗೆಯೇ ಬಿಟ್ಟಿದ್ದೇನೆ. ಹುಡುಕಿದರೆ ಅದರರ್ಥ ನಿಮಗೆ ಸಿಕ್ಕೇ ಸಿಗುತ್ತದೆ.

Update: ಎಲಿಯಟ್‍ನ ಕವಿತೆ ಅನುವಾದ ಮಾಡುವ ಸಾಹಸ ಮಾಡಿ, ಅದನ್ನು ಬೇಜವಾಬ್ದಾರಿಯಿಂದ ನಿಭಾಯಿಸಿದ್ದಕ್ಕೆ ಟೀನಾ ನನ್ನನ್ನು ಚೆನ್ನಾಗಿ ಬೈದಿದ್ದಾರೆ 😉 . ಮೊದಲಿಂದಲೂ ಈ ಬ್ಲಾಗನ್ನು ಓದುತ್ತ ಬಂದಿರುವ ಅವರ ಮಾತುಗಳನ್ನು ಸೀರಿಯಸ್ಸಾಗಿ ನಾನು ತೆಗೆದುಕೊಳ್ಳಲೇಬೇಕು. ಹೀಗಾಗಿ, epigraphನ ಅನುವಾದವನ್ನೂ ಹಾಕಿದ್ದೇನೆ. ಅಡಚಣೆಗೆ ಕ್ಷಮೆಯಿರಲಿ.




S’io credesse che mia risposta fosse
A persona che mai tornasse al mondo,
Questa fiamma staria senza piu scosse.
Ma perciocche giammai di questo fondo
Non torno vivo alcun, s’i’odo il vero,
Senza tema d’infamia ti rispondo.
1



ಹೋಗೋಣಲ್ಲ ಮತ್ತೆ, ನೀನೂ ನಾನೂ,
ಟೇಬಲ್ಲಿನ ಮೇಲೆ ಮಂಪರುಕವಿದ ಪೇಶಂಟಿನ ಹಾಗೆ ಇಳಿಸಂಜೆ
ಆಕಾಶದಗಲಕ್ಕೂ ಹರಡಿಕೊಂಡಿರುವಾಗ;
ಹೋಗೋಣಲ್ಲ, ಕೆಲ ಅರೆನಿರ್ಜನ ಓಣಿಗಳಲ್ಲಿ,
ರಾತ್ರಿಯೊಪ್ಪತ್ತಿನ ತಹತಹಿಕೆಗೆಟಕುವ ಸೋವಿ ಹೊಟೆಲುಗಳ
ಕನವರಿಕೆಯ ಮರೆಗಳಲ್ಲಿ
ಕಟ್ಟಿಗೆಹೊಟ್ಟು ಹರಡಿದ ಆಯ್‍ಸ್ಟರ್ ಕವಚಗಳ ರೆಸ್ಟೊರಾಂಟ್‍ಗಳಲ್ಲಿ.
ಕಪಟ ಉದ್ದಿಶ್ಶದ ವಾಗ್ವಾದ
-ದಿಂದ ಬಳಲಿಸುವಂಥ ಬೀದಿಗಳು
ಮೈಮೇಲೆರಗುವ ಪ್ರಶ್ನೆಯತ್ತ ಒಯ್ಯುವ ಬೀದಿಗಳು…
ಆಂಹಾ, ಕೇಳದಿರು, “ಅದೆಂಥದ್ದು?” ಎಂದು.
ಹೋಗೋಣ. ಭೇಟಿ ಕೊಡೋಣ.

ರೂಮಿನೊಳಗೆ ಹೆಂಗಸರು ಹೋಗಿಬಂದು ಮಾಡುತ್ತಾರೆ.
ಮೈಕೆಲೆಂಜೆಲೊನನ್ನು ಚರ್ಚಿಸುತ್ತಾರೆ.

ಕಿಟಕಿಗಾಜಿಗೆ ಬೆನ್ನುತಿಕ್ಕುವ ಹಳದಿಯ ಮಂಜು,
ಕಿಟಕಿಗಾಜಿಗೆ ಮುಸುಡಿಯುಜ್ಜುವ ಹಳದಿಯ ಹೊಗೆ
ಸಂಜೆಯ ಮೂಲೆಮೂಲೆಗೂ ನಾಲಗೆ ಚಾಚಿತು,
ಕೊಳಚೆಗಟ್ಟಿದ ಕೊಳಗಳ ಮೇಲೆ ಸುಳಿದಾಡಿತು,
ಚಿಮಣಿಗಳಿಂದುದುರುವ ಮಸಿಗೆ ಬೆನ್ನು ಕೊಟ್ಟಿತು,
ಜಗಲಿಯಿಂದ ಜಾರಿತು, ಒಮ್ಮೆಗೆಲೆ ಹಾರಿತು,
ಅಷ್ಟರಲ್ಲಿ, ಇದು ಅಕ್ಟೋಬರ್‌ನ ಮೆದುರಾತ್ರಿಯೆಂದು ಮನಗಂಡು,
ಮನೆಯ ಸುತ್ತ ಒಮ್ಮೆ ಸುತ್ತಿ ಉಂಗುರಾಗಿ ನಿದ್ದೆಹೋಯಿತು.

ಸಮಯವಂತೂ ಇದ್ದೇ ಇದೆ
ಕಿಟಕಿಗಾಜುಗಳ ಮೇಲೆ ಬೆನ್ನು ತಿಕ್ಕುತ್ತ
ಬೀದಿಯುದ್ದಕ್ಕೂ ತೆವಳುವ ಹಳದಿ ಹೊಗೆಗೆ;
ಸಮಯವಿದೆ, ಸಮಯವಿದೆ
ನಾವು ಕಾಣುವ ಮುಖಗಳ ಕಾಣುವ ಮತ್ತೊಂದು ಮುಖ ತಯಾರಿಸಲು;
ಸಮಯವಿದೆ ಹುಟ್ಟಿಸಲೂ ಸಾಯಿಸಲೂ,
ಪ್ರಶ್ನೆಯೊಂದನ್ನು ಎತ್ತಿ ನಿಮ್ಮ ತಟ್ಟೆಗೆ ಬಡಿಸುವ
ಕೈಗಳ ನಿತ್ಯಗಳಿಗೆ ಕೆಲಸಗಳಿಗೆ ಸಮಯವಿದೆ;
ನಿಮಗಾಗಿ ಸಮಯವಿದೆ ನನಗಾಗಿ ಸಮಯವಿದೆ
ಸಮಯವಿದೆ ನೂರಾರು ಮೀನಮೇಷಗಳಿಗೆ,
ನೂರಾರು ದರ್ಶನಗಳಿಗೆ ಸಂಸ್ಕರಣಗಳಿಗೆ
ಸಮಯವಿದೆ, ಟೋಸ್ಟು ಚಹಾ ತೊಗೊಳ್ಳುವ ಮುಂಚೆ.

ರೂಮಿನೊಳಗೆ ಹೆಂಗಸರು ಹೋಗಿಬಂದು ಮಾಡುತ್ತಾರೆ.
ಮೈಕೆಲೆಂಜೆಲೊನನ್ನು ಚರ್ಚಿಸುತ್ತಾರೆ.

ಸಮಯ ಇದ್ದೇ ಇದೆ
“ಧೈರ್ಯವಿದೆಯೇ ನನಗೆ? ಧೈರ್ಯವಿದೆಯೇ?” ಧೇನಿಸಲು
ಹಿಂದಿರುಗಿ, ಮೆಟ್ಟಲಿಳಿಯಲು, ಸಮಯವಿದೆ
ಮಧ್ಯದಲ್ಲಿ ಬೋಡಾಗುತ್ತಿರುವ ತಲೆಬಾಗಿಸಲು
(ಅವರೆನ್ನುವರು: “ಅವನ ಕೂದಲೆಷ್ಟು ಉದುರಿವೆ ನೋಡು!”)
ನನ್ನ ಮಾರ್ನಿಂಗ್ ಕೋಟು, ಗದ್ದಕ್ಕೊತ್ತಿದಂತಿರುವ ಕಾಲರು
ನೆಕ್‍ಟೈ ಸುಂದರ ಗಂಭೀರ, ಆದರೆ ಸಣ್ಣ ಪಿನ್ನಿನಿಂದ ಬಂಧಿತ
(ಅವರೆನ್ನುವರು: “ಅಯ್ಯೋ, ಅವನ ಕೈಕಾಲುಗಳೆಷ್ಟು ಬಡಕಲು!”)
ವಿಶ್ವವನು ಅಲುಗಿಸುವ
ಸಾಹಸ ಇದೆಯೇ?
ನಿಮಿಷದಲ್ಲೇ ಸಮಯವಿದೆ
ನಿರ್ಧರಿಸಲು ವಿಮರ್ಶಿಸಲು, ಮರುನಿಮಿಷದಿ ಕವುಚಿಹಾಕಲು.




1
ಜೀವಜಗತ್ತಿಗೆ ಮರಳುವ
ಯಾರಿಗಾದರೂ ನಾನು ಉತ್ತರವೀಯುತ್ತಿದ್ದಲ್ಲಿ
ಈ ಉರಿ ಹೀಗೆ ಮಿಣುಕದೆ ನಿಶ್ಚಲವಾಗಿರುತ್ತಿತ್ತು.
ಆದರೆ ನಾ ಕೇಳಿ ತಿಳಿದಂತೆ ಈ
ಗಹ್ವರದಿಂದ ಮರಳಿ ಹೋದವರಿಲ್ಲ.
ಅಪವಾದದ ಭಯವಿಲ್ಲದೆ
ಕೊಡುವೆ ನಿನಗುತ್ತರ

ಡಾಂಟೆಯ ಡಿವೈನ್ ಕಾಮಿಡಿಯ ಇನ್ಫ಼ರ್ನೋದ ಸಾಲುಗಳಿವು. ಇದು ಗಿಡೊ ಡ ಮಾಂಟೆಫ಼ೆಲ್ಟ್ರೋ ನರಕದ ಎಂಟನೇ ವರ್ತುಲದೊಳಗಿಂದ ಹೇಳುವ ಮಾತು. ಗಿಡೊ ಡ ಮಾಂಟೆಫ಼ೆಲ್ಟ್ರೋ ಡಾಂಟೆಯ ಪ್ರಕಾರ ನರಕದ ಎಂಟನೇ ವರ್ತುಲಕ್ಕೆ ತಳ್ಳಲ್ಪಟ್ಟಿದ್ದಾನೆ. ಕಾರಣ: ದುರುದ್ದೇಶಪೂರಿತ ಸಲಹೆ. ಆದರೆ ಇಲ್ಲಿ ಮುಖ್ಯವಾದದ್ದೇನೆಂದರೆ, ಪ್ರುಫ಼್ರಾಕ್ ಮೊನೊಲಾಗ್‍ಗೆ ಸಂಬಂಧಿಸಿದಂತೆ ಈ ಸಾಲುಗಳ ವ್ಯಾಖ್ಯಾನ: ಗಿಡೊ ಅಂದುಕೊಂಡಿರುವುದೇನೆಂದರೆ ಡಾಂಟೆ ಕೂಡ ನರಕಕ್ಕೆ ತಳ್ಳಲ್ಪಟ್ಟಿದ್ದಾನೆ; ಹೀಗಾಗಿ ನಾನು ಯಾರಿಗೂ ಹೇಳಬಾರದೆಂದುಕೊಂಡಿದ್ದ ಸಂಗತಿಗಳನ್ನು ಇವನಿಗೆ ಹೇಳಬಹುದು; ಅವನು ಮರಳಿ ಹೋಗಿ ಭೂಮಿಯಲ್ಲಿ ತನ್ನ ಅಪಖ್ಯಾತಿ ಹಬ್ಬಿಸಲು ಸಾಧ್ಯವಿಲ್ಲ; ಇದೇ ರೀತಿ, ಪ್ರುಫ಼್ರಾಕ್‍ನಿಗೆ ಕೂಡ ತಾನು ಈ ಪದ್ಯದಲ್ಲಿ ಹೇಳುತ್ತಿರುವುದನ್ನು ಹೇಳುವ ಮನಸ್ಸಿರಲಿಲ್ಲ. ಇದು ಒಂದು interpretation.

ಇನ್ನೆಷ್ಟು ದಿನ ಹೀಗೆ

“ಇನ್ನೆಷ್ಟು ದಿನ ಹೀಗೆ?”
ಪಣ ತೊಟ್ಟವರ ಹಾಗೆ
ಫೋನಿನಲಿ ಮಾತು
ರಾತ್ರಿಗಳ ಭ್ರಾಂತು
ಸೋತ ಕಣ್ಣೆವೆ ಮುಚ್ಚಿದರೂ
ನಿದ್ದೆಗೆ ಕಸರತ್ತು
ಒಂದೆರಡು ಮೂರ್ನಾಕು ಐದಾರು ಏಳೆಂಟು
ಎಣಿಕೆಯೇ ಸಾಲದ ದೊಡ್ಡ ಕುರಿಹಿಂಡು
ಅರೆನಿದ್ದೆಯ ಕುರಿಗಳಿಗೂ
ಬೀದಿನಾಯಿಗಳ ಕುತ್ತು
ಹೊರಳಾಡಿ ಉರುಳಾಡಿ ಮುಲುಗುತ್ತ ತೆವಳುತ್ತ
ತುತ್ತತುದಿಯ ಮುಟ್ಟಿ ಪ್ರಪಾತಕ್ಕೆ ಜಾರಿದರೆ
ನೆಲೆಯೆಟುಕುವ ಮೊದಲೆ ಹಕ್ಕಿಗಳ ಗುನುಗು
ಪಕ್ಕದಲಿ ನೀ ಕೊಟ್ಟ ಟೈಂಪೀಸಿನ ಕೆಂಪು ಚುಂಚು.
ಕನಸಿಗೂ ತೂತು.

ಇನ್ನೆಷ್ಟು ದಿನ ಹೀಗೆ?
ಪಣತೊಟ್ಟವರ ಹಾಗೆ.

***

ಇದಕ್ಕೆ ಉತ್ತರ ಇನ್ನೊಮ್ಮೆ.

ನೆರುಡನ Ode to Wine

ನೆರುಡನ ಓಡ್‍ಗಳೆಂದರೆ celebration of the good things in life: Ode to Maize, Ode to a Large Tuna Fish in the Market, Ode to Salt, Ode to Sadness, Ode to Lemon ಇತ್ಯಾದಿ ಪದ್ಯಗಳು ಹುಚ್ಚೇ ಹಿಡಿಸುತ್ತವೆ. ಅತ್ಯಂತ ಸಾಮಾನ್ಯ ಸಂಗತಿಗಳ ಬಗ್ಗೆ ಹಾಡು ಕಟ್ಟುತ್ತ ಕಟ್ಟುತ್ತ ಅದನ್ನು ಒಂದು ದೊಡ್ಡ ಜಾತ್ರೆ ಮಾಡಿ ಬಿಡುತ್ತಾನೆ; ಜಾತ್ರೆಯಲ್ಲಿನ roller-coaster‍ನಲ್ಲಿ ಕೂಡಿಸಿ ಎತ್ತರಕ್ಕೂ ಹೋಗುತ್ತಾನೆ, ಆಳಕ್ಕೂ ಹೋಗುತ್ತಾನೆ, ಒಮ್ಮೆಲೆ ಎಲ್ಲಿಂದಲೋ ಮತ್ತೆಲ್ಲಿಗೋ ಹೋಗುತ್ತಾನೆ; ಸುಮ್ಮನೆ ಆ ಪದ್ಯಗಳೊಂದಿಗೆ ಅವುಗಳ ವೇಗದಲ್ಲಿ ಓಡುವುದೂ ಒಂದು ಮಜವೇ. ಈ ಓಡ್‍ಗಳನ್ನು ನಿಧಾನಕ್ಕೆ ಓದಲು ನನಗೆ ಸಾಧ್ಯವೇ ಆಗುವುದಿಲ್ಲ.

ಅವನ Ode to Wine ಪದ್ಯ ಅನುವಾದಿಸಿದೆ. ಅದು ಕೆಳಗಿದೆ. Faithful ಅನುವಾದ ಅಲ್ಲ. ತೋಚಿದ ಹಾಗೆ ವ್ಯಕ್ತಪಡಿಸಿದ್ದೇನೆ. ಮೊದಲಿನ ಒಂದಷ್ಟು ಸಾಲುಗಳನ್ನು ಒಂದೇ ಉಸಿರಿಗೆ ಓದದೆ ಬೇರೆ ಹಾದಿಯೇ ಇಲ್ಲ ಅನ್ನಿಸುತ್ತದೆ.

ಹಗಲ ಬಣ್ಣದ ಮದಿರೆ
ಇರುಳ ಬಣ್ಣದ ಮದಿರೆ
ನೇರಳೆ ಪಾದಗಳ ಮದಿರೆ
ಗೋಮೇಧಿಕ ರಂಜಿತ ಮದಿರೆ
ಮದಿರೆ
ಭುವಿಯ ಮುದ್ದು
ಮಿನುಗು ತಾರೆ
ಮದಿರೆ, ಚಿನ್ನ-
ದಲುಗಿನ ನುಣುಪೆ
ನವಿರೆ
ಲೋಲುಪ ಮಖಮಲ್ಲೆ
ಮದಿರೆ, ಕಪ್ಪೆಚಿಪ್ಪಿನ ಸಿಂಬಿ
ಒಳಗೆ ಕೌತುಕದುಂಬಿ
ಸರಸವೋ
ಸಾಗರವೋ;
ಒಂದೇ ಬಟ್ಟಲು ನಿನ್ನನ್ನೆಂದೂ ಹಿಡಿದಿಟ್ಟಿಲ್ಲ
ಒಂದೇ ಹಾಡಲ್ಲ, ಒಬ್ಬ ರಸಿಕನಲ್ಲ
ನೀನು ವೃಂದಗಾನಪ್ರಿಯೆ, ಸಮೂಹಜೀವಿ
ಹಂಚಿಕೊಳ್ಳಲೇಬೇಕು ನಿನ್ನನ್ನು.
ಒಮ್ಮೊಮ್ಮೆ
ನಶ್ವರ ನೆನಪು-
ಗಳನ್ನುಣ್ಣುತ್ತಿ;
ನಿನ್ನಲೆಗಳ ಮೇಲೆ ನಮಗೆ
ಗೋರಿಯಿಂದ ಗೋರಿಗೆ ಸವಾರಿ,
ಮಂಜುಗಟ್ಟಿದ ಸಾವ ಗವಿಗಳ ನೀನು ಕೊರೆದು ತೆಗೆದಾಗ,
ನಮಗದೋ ದುಃಖ
ನಾಕು ಹನಿ, ತಾತ್ಕಾಲಿಕ.
ನಿನ್ನ
ದಿವಿನಾದ
ವಸಂತದ ದಿರಿಸು
ವಿಭಿನ್ನ,
ಟಿಸಿಲುಗಳಲ್ಲಿ ನೆತ್ತರೇರುತ್ತದೆ,
ಗಾಳಿ ಹಗಲ ಉತ್ತೇಜಿಸುತ್ತದೆ,
ನಿನ್ನ ಸ್ಥಿರ ಚೇತನದ
ಕುರುಹೂ ಉಳಿಯುವುದಿಲ್ಲ.
ಮದಿರೆ ವಸಂತವನ್ನು
ಕದಳಿಸುತ್ತದೆ, ಆನಂದ
ಭುವಿಯೊಡಲಿನ ಸಸಿಯಂತೆ ಹೊಮ್ಮುತ್ತದೆ,
ಗೋಡೆಗಳು, ಬಂಡೆ
ಗುಡ್ಡಗಳು ಕುಸಿಯುತ್ತವೆ
ಬಿರುಕುಗಳು ಮುಚ್ಚುತ್ತವೆ
ಹಾಡೊಂದು ಹುಟ್ಟುತ್ತದೆ.
ಹಳೆಯ ಕವಿಯ ಹಾಡು
ಕಾನನದ ಏಕಾಂತದಲಿ
ಮದಿರೆಯ ಬೋಗುಣಿ, ನೀನು, ನಾನು
ಪ್ರೀತಿಯ ಚುಂಬನಕೆ
ಮಧು ಸಮ್ಮಿಲನ.

ನನ್ನ ನಲ್ಲೆ, ನಿನ್ನ ನಡುವು
ಮದಿರೆ ಬಟ್ಟಲಿನ
ತುಳುಕುವ ತಿರುವು
ನಿನ್ನ ಮೊಲೆ ದ್ರಾಕ್ಷಿಗೊಂಚಲು
ಮೊಲೆತೊಟ್ಟೆ ದ್ರಾಕ್ಷಿ
ಹೊಕ್ಕುಳು ನಿನ್ನೊಡಲಿಗೆ ಒತ್ತಿದ
ವಿಮಲ ಮುದ್ರೆ
ನಿನ್ನ ಪ್ರೇಮ ಎಣೆಯಿಲ್ಲದ
ಮಧುವಿನ ಧಬಧಬೆ
ನನ್ನ ಇಂದ್ರಿಯಗಳಿಗೆ ಕಳೆಗಟ್ಟುವ ಬೆಳಕು
ಇಳೆಯ ಜೀವದ ಮೆರುಗು.

ಆದರೆ ನೀನು ಪ್ರೀತಿಗೂ ಮಿಗಿಲು,
ಸುಡುಸುಡುವ ಮುತ್ತು,
ಬೆಂಕಿಯ ಬಿಸಿ,
ಜೀವಮಧುವಿಗೂ ಹೆಚ್ಚು;
ನೀನು
ರಸಿಕನಿಗೆ ಸಮುದಾಯ,
ಪಾರದರ್ಶಕತೆ,
ಹಿಮ್ಮೇಳದ ಶಿಸ್ತು,
ಹೂವುಗಳ ರಾಶಿ.
ಟೇಬಲ್ಲಿನ ಮೇಲೆ ಚದುರ ಮದಿರೆಯ
ಬಾಟಲಿಯ ಬೆಳಕು
ನನಗಿಷ್ಟ
ನಾವು ಮಾತಾಡುವಾಗ.
ಅದನ್ನು ಹೀರು,
ಹೊನ್ನಿನ ಪ್ರತಿ ಹನಿಯಲ್ಲೂ,
ಗೋಮೇಧಿಕದ ಪ್ರತಿ ಬಟ್ಟಲಲ್ಲೂ,
ಪ್ರತಿ ನೇರಳೆ ಚಮ್ಮಚೆಯಲ್ಲೂ,
ಮತ್ತೆ ಮತ್ತೆ ನೆನೆ,
ಶರದ್ಕಾಲವು ಮದಿರೆಯ ಗಡಿಗೆಯನ್ನು
ತುಂಬಲು ಬಸಿದ ಬೇನೆಯನ್ನು;
ಹಾಗೆಯೇ ಆಫೀಸಿನ ಸಮಾರಂಭಗಳಲ್ಲಿ
ಪ್ರತಿ ಮನುಷ್ಯನೂ ಮರೆಯದಿರಲಿ
ತನ್ನ ನೆಲವನ್ನು, ತನ್ನ ಕರ್ತವ್ಯವನ್ನು,
ಹಾಗೂ ಮದಿರೆಯ ಭಜನೆಯನ್ನು ಹರಡುವುದನ್ನು.

ತಲೆಮರೆಸಿಕೊಳ್ಳುವ ಕಲೆ

ನನಗೆ ಬಹಳ ಇಷ್ಟವಾಗುವ, ನಾನು ಮೇಲಿಂದ ಮೇಲೆ ಓದುವ ಪದ್ಯವೊಂದನ್ನು ಅನುವಾದಿಸಿದ್ದೇನೆ. ನೋಡಿ. ಮೂಲ ಇಲ್ಲಿದೆ.

’ಗುರುತು ಹತ್ತಲಿಲ್ಲವೇ?’ ಎಂದವರು ಕೇಳಿದಾಗ
ಇಲ್ಲವೆನ್ನಿ.

ಔತಣಕೂಟಗಳಿಗೆ ನಿಮಗೆ ಆಮಂತ್ರಣ ಬಂದಾಗ
ಉತ್ತರಿಸುವ ಮೊದಲು
ಪಾರ್ಟಿಗಳೆಂದರೆ ಹೇಗಿರುತ್ತವೆಂದು ನೆನಪಿಸಿಕೊಳ್ಳಿ:
ಯಾರೋ ತಾನೊಮ್ಮೆ ಪದ್ಯ ಬರೆದಿದ್ದೆನೆಂದು
ಎತ್ತರದ ದನಿಯಲ್ಲಿ ಹೇಳುತ್ತಿರುತ್ತಾರೆ;
ಕಾಗದದ ಪ್ಲೇಟುಗಳ ಮೇಲೆ ಎಣ್ಣೆಯೊಸರುವ ಮಾಂಸದ ಭಜಿಗಳು.
ಈಗ ಹೇಳಿ ನೋಡೋಣ.

ನಾವೊಮ್ಮೆ ಒಟ್ಟಿಗೆ ಸೇರಬೇಕು ಎಂದು ಅವರೆಂದರೆ
ಯಾಕೆಂದು ಕೇಳಿ.

ನಿಮಗೆ ಅವರ ಮೇಲೆ ಅಕ್ಕರೆ ಇಲ್ಲವಾಗಿದೆಯೆಂದಲ್ಲ.
ಮರೆಯಬಾರದಾದಂಥ ಮಹತ್ವದ್ದೇನನ್ನೋ
ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದೀರಷ್ಟೇ,
ಮರಗಳು ಅಥವಾ ಇಳಿಹೊತ್ತಿನ ಮಠದ ಗಂಟೆಯ ನಾದ
ಹೊಸ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆಂದು ಹೇಳಿ ಬಿಡಿ.
ಎಂದಿಗೂ ಮುಗಿಯಲಾರದಂಥದ್ದದು.

ಕಿರಾಣಿ ಅಂಗಡಿಯಲ್ಲಿ ಯಾರಾದರೂ ಭೆಟ್ಟಿ ಆದರೆ
ಸುಮ್ಮನೆ ಒಮ್ಮೆ ತಲೆಯಾಡಿಸಿ ಕೋಸುಗಡ್ದೆಯಾಗಿಬಿಡಿ.
ಹತ್ತಾರು ವರ್ಷ ಕಾಣದವರು ಒಮ್ಮೆಲೆ
ಬಾಗಿಲೆದುರು ಉದಯಿಸಿದರೆ
ನಿಮ್ಮ ಹೊಸ ಹಾಡುಪಾಡುಗಳನ್ನು ಬಿಚ್ಚಲು ಹೋಗಬೇಡಿ.
ಕಾಲದೊಂದಿಗೆ ಮೇಳೈಸುವುದು ಸಾಧ್ಯವೇ ಇಲ್ಲ.

ನೀವೊಂದು ಎಲೆಯೆಂಬ ಅರಿವಿನೊಂದಿಗೆ ತುಯ್ದಾಡಿ.
ಯಾವುದೇ ಕ್ಷಣ ಉದುರಬಹುದೆಂಬುದು ಗೊತ್ತಿರಲಿ.
ನಿಮ್ಮ ಸಮಯ ಹೇಗೆ ಕಳೆಯುತ್ತೀರೆಂದು ನಂತರ ನಿರ್ಧರಿಸಿ.