ಸ್ಪ್ರಿಂಗ್‍ನ ಗುಂಗು

ಸ್ಪ್ರಿಂಗ್ ಶುರುವಾಗಿ ಎಷ್ಟೋ ದಿನಗಳಾದ ಮೇಲೆ ಕೊನೆಗೂ ಸ್ಪ್ರಿಂಗ್ ಶುರುವಾಗಿದೆ. ಅಥವಾ, ಸ್ಥಾಯಿಯಾಗಿದೆ. ಮಾರ್ಚಿನ ಆರಂಭದಲ್ಲಿ ಯುನಿವರ್ಸಿಟಿಗೆ ಸ್ಪ್ರಿಂಗ್ ಬ್ರೇಕ್ ಇತ್ತು. ಸ್ಪ್ರಿಂಗ್ ಶುರುವಾಯ್ತಲ್ಲ ಅಂದುಕೊಂಡೆ. ಆದರೆ ಅದು ಹೆಸರಿಗೆ ಮಾತ್ರ ಸ್ಪ್ರಿಂಗ್ ಬ್ರೇಕ್. ಹಿಮ್ ಬೀಳುತ್ತಲೇ ಇತ್ತು. ಮಾರ್ಚ್ ಮುಗಿದರೂ ಬಿಡದ ಚಳಿ. ಏಪ್ರೀಲ್ ಶುರುವಾತಿಗೆ ಸ್ವಲ್ಪ ಕಡಿಮೆಯಾಯಿತೇನೋ ಎನ್ನುವಷ್ಟರಲ್ಲಿ ಮತ್ತೆ ಮರಳಿ ಬಂತು. ಅಂತೂ ಕೊನೆಗೂ ಅದಕ್ಕೇ ಸಾಕೆನ್ನಿಸಿ ರಜಾ ಹಾಕಿ ಹೋಗಿದೆ.

ಇಲ್ಲಿ ಜನ ಸಮ್ಮರ್‌ಗೆ ಕಾಯುತ್ತಿರುತ್ತಾರೆ. ಅದು ಯಾಕೆ ಎಂದು ಅರ್ಥವಾಗುತ್ತಿದೆ. ತುಂಬ ಸುಂದರ ದಿನಗಳು. ಗಿಡಗಳಲ್ಲಿ ಹೂಗಳು ಮತ್ತೆ ಏರಿ ಕುಳಿತಿವೆ. ಗುಬ್ಬಚ್ಚಿಗಳು ಎಲ್ಲಿಂದಲೋ ಮರಳಿ ಬಂದಿವೆ. ಹೊರಗೆ ಹೋದರೆ ಹಕ್ಕಿಗಳ ವಿವಿಧ ಬಗೆಯ ಆಹ್ಲಾದಕರ ಸದ್ದುಗಳನ್ನು ಕೇಳಬಹುದು. ತಾಪಮಾನ ಬಹಳೇ ಸಹ್ಯವಾಗಿ ೧೮-೨೦ ಡಿಗ್ರಿ ಸೆಲ್ಶಿಯಸ್‍ನಷ್ಟು ಇರುತ್ತದೆ. ಸಣ್ಣನೆಯ ಗಾಳಿ ಬೀಸುತ್ತಿರುತ್ತದೆ. ವಾಕ್ ಮಾಡಬಹುದು. ನಾನು ಹೊಸ ನುಡಿಗಟ್ಟೊಂದನ್ನು ಬಳಸುತ್ತೇನೆ: walkable weather. ನಾವೆಲ್ಲ walkable distance ಎಂಬುದನ್ನು ಬಳಸುತ್ತೇವಲ್ಲ, ಅದು ಇಲ್ಲಿ ನನಗೆ ಅಷ್ಟು ಮಹತ್ವದ್ದಾಗಿಲ್ಲ. ಎಲ್ಲಾದರೂ ಹೋಗಬೇಕೆಂದರೆ, “Is it a walkable weather?” ಎಂದು ನನ್ನನ್ನೇ ಕೇಳಿಕೊಳ್ಳುತ್ತೇನೆ.

ಬೇಸಿಗೆಗೆ ಕಾಯುತ್ತಿರುತ್ತಾರೆ ಎಂದೆನಲ್ಲ. ಯುನಿವರ್ಸಿಟಿಯ ಕ್ಯಾಂಪಸ್ಸಿನಲ್ಲಿ ಈಗ ಎಲ್ಲಿ ಜಾಗ ಸಿಕ್ಕಲ್ಲಿ ಹೋಗಿ ಅಡ್ಡಾಗಿಬಿಡುತ್ತಾರೆ ಜನ. ಕಟ್ಟೆಗಳ ಮೇಲೆ, ಹುಲ್ಲಿನ ಮೇಲೆ, ಎಲ್ಲ ಕಡೆ. ನನ್ನ ಲ್ಯಾಬಿನ ಹತ್ತಿರದಲ್ಲಿಯೇ ಒಂದು ದೊಡ್ಡ ಕಾರಂಜಿಯಿದೆ. ಅದರ ಸುತ್ತಲೂ ಕಟ್ಟೆಗಳಿವೆ. ಆ ಕಟ್ಟೆಗಳ ಮೇಲೆ ಹೋಗಿ ಮಲಗಿಬಿಡುತ್ತಾರೆ. ಹಿತವಾದ ಬಿಸಿಲು. ನಡುನಡುವೆ ಕಾರಂಜಿಯಿಂದ ಸಿಡಿಯುವ ನೀರಿನ ಹನಿಗಳು. ಬಹಳ ಮಜಾ ಇರಬೇಕು. ನಾನೂ ಹಾಗೆ ಮಲಗಿದರೆ, ಎಂದುಕೊಳ್ಳುತ್ತೇನೆ. ಆದರೆ ಇನ್ನೂ ಸಂಕೋಚ. ಇವರು ಆರಾಮಾಗಿ ಮಲಗಿ ನಿದ್ದೆ ಹತ್ತಿದರೆ ಸುಖದಿಂದ ನಿದ್ರಿಸಿಬಿಡುತ್ತಾರೆ.

ನಾನಿರುವ ಅಪಾರ್ಟ್‍ಮೆಂಟ್ ಸ್ವಲ್ಪ ದೂರದಲ್ಲಿದೆ. ಇಲ್ಲಿ ಜನರ ಓಡಾಟ ಬಹಳ ಕಡಿಮೆ. ಯುನಿವರ್ಸಿಟಿಯ ಸುತ್ತಮುತ್ತ ಈಗೆಲ್ಲ ಹುಡುಗ ಹುಡುಗಿಯರು ಉಲ್ಲಾಸದಿಂದ ಓಡಾಡುತ್ತಾರೆ. ಚಳಿಯಿದ್ದಾಗ ಹೆಣಭಾರದ ಜಾಕೆಟ್ಟುಗಳನ್ನು ಧರಿಸಿ ಓಡಾಡುವವರೆಲ್ಲ ಈಗ ಚಡ್ಡಿಗಳನ್ನೂ ಬನಿಯನ್ನುಗಳನ್ನೂ ಹಾಕಿಕೊಂಡು ಅಲೆಯುತ್ತಾರೆ. ಕೆಫೆಗಳ ಹೊರಾಂಗಣಗಳಲ್ಲಿ ಟೇಬಲ್ಲು ಕುರ್ಚಿಗಳನ್ನು ಹಾಕುತ್ತಾರೆ. ಇದ್ದಕ್ಕಿದ್ದ ಹಾಗೆ ಎಂಬಂತೆ ಜನ ಕಾಣಿಸತೊಡಗುತ್ತಾರೆ. ಸಂಜೆಯಾಗುತ್ತಿದ್ದಂತೆ ಕೆಫ಼ೆಗಳ, ಪಬ್ಬುಗಳ ಮ್ಯೂಸಿಕ್ ಶುರುವಾಗುತ್ತದೆ. ಆದರೆ ನಾನಿರುವಲ್ಲಿ ಮಾತ್ರ ಗವ್ವೆನ್ನುತ್ತದೆ. ಯಾವ ಸದ್ದೂ ಇಲ್ಲ. ಇದರಿಂದ ಒಮ್ಮೊಮ್ಮೆ ಹಾಯೆನಿಸುತ್ತದೆ, ಒಮ್ಮೊಮ್ಮೆ ಬೋರಾಗುತ್ತದೆ.

ದಿನಗಳೂ ದೀರ್ಘ. ಸಾಯಂಕಾಲ ೮:೩೦-೯ರವರೆಗೆ ಬೆಳಕಿರುತ್ತದೆ. ಹೀಗೆ ಇನ್ನು ಕೆಲವು ತಿಂಗಳು.

ಮೂರ್ಖ ಪ್ರಕ್ರಿಯೆಗಳೂ ಮಶೀನುಗಳಂಥ ಮನುಷ್ಯರೂ

ಇಲ್ಲಿ ಬಂದಾಗಿನಿಂದ ನಾನು ಗಮನಿಸಿದ ಒಂದು ಅಂಶವೆಂದರೆ ಇಲ್ಲಿನ ತೀರಾ ಸಾಮಾನ್ಯ ವ್ಯಾವಹಾರಿಕ ಸಂವಹನಗಳೂ ಪ್ರಮಾಣಿತ ಪ್ರಕ್ರಿಯೆಗಳಿಂದ ಚಾಲಿತವಾದವು (process driven). ಇದರ ಒಂದು ನೇರ ಪರಿಣಾಮವೆಂದರೆ, ಈ ಪ್ರೊಸೆಸ್‍ಗಳಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಅದರಲ್ಲಿ ಒಳಗಾಗಿರುವ ಜನ ಮುಜುಗರಕ್ಕೊಳಗಾಗುತ್ತಾರೆ. ವಸ್ತುತಃ, ಇಲ್ಲಿನ ಜನರನ್ನು ಮುಜುಗರಕ್ಕೊಳಪಡಿಸುವುದು ತೀರ ಸುಲಭ. ಇದೊಂದು ಒಳ್ಳೆಯ ಸುದ್ದಿಯೆಂದು ನಾನು ಹೇಳುತ್ತಿಲ್ಲ. ಆದರೆ ನಾನು ಒಳಗಾಗುವ ತೀರ ಸಾಮಾನ್ಯ ವ್ಯವಹಾರಗಳಲ್ಲೆಲ್ಲ ದಿನನಿತ್ಯ ಇದು ಆನುಷಂಗಿಕವಾಗಿ ಆಗುತ್ತಲೇ ಇರುತ್ತದೆ. ಉದಾಹರಣೆಗೆ: ಫ಼ಾಸ್ಟ್‍ಫ಼ುಡ್ ತೆಗೆದುಕೊಳ್ಳುವಾಗ, ಮಾಲ್‍ಗಳಲ್ಲಿ, ಫೋನಿನಲ್ಲಿ ಕಸ್ಟಮರ್ ಕೇರ್‌ನವರೊಂದಿಗೆ ವ್ಯವಹರಿಸುವಾಗ, ಹೀಗೆ. ಇವರೆಲ್ಲರಲ್ಲೂ ಮೆಚ್ಚಬೇಕಾದಂಥ ಅಂಶವೆಂದರೆ, ಸೌಜನ್ಯದಿಂದ ಮಾತನಾಡುತ್ತಾರೆ. (ಎಲ್ಲರೂ ಅಲ್ಲ, ಆದರೆ ಅದು ಸಹಜ.) ಆದರೆ, ಅದೂ ಕೂಡ ಅವರ ಪ್ರೊಸೆಸ್‍ನ ಒಂದು ಅಂಗವಷ್ಟೆ. ಆ ಪ್ರಕ್ರಿಯೆ ಎಲ್ಲ ಗ್ರಾಹಕರಿಗೂ ಗೊತ್ತಿರುತ್ತದೆ ಎಂಬ ಭಾವನೆಯಲ್ಲಿರುತ್ತಾರೆ. ಆದರೆ ನನ್ನಂಥ ಅಜ್ಞಾನಿಗಳು ಇಂಥದ್ದೆಲ್ಲದ್ದಕ್ಕೆ ಗಮನ ಕೊಡದೆ, ಆ ಪ್ರಕ್ರಿಯೆಯ ತಾಳಕ್ಕೆ ಕುಣಿಯದೆ ನನ್ನದೇ ರೀತಿಯಲ್ಲಿ ವ್ಯವಹಾರ ನಡೆಸಲು ನೋಡಿದರೆ, ಬಹು ಬೇಗ ಅವರು ತಮ್ಮ comfort zoneನಿಂದ ಹೊರ ಬೀಳುವ ಪ್ರಸಂಗ ಉಂಟಾಗುತ್ತದೆ. ಅಂಥ ಸಂದರ್ಭವನ್ನು ಎದುರಿಸುವುದು ಅವರಿಗೆ ಎಷ್ಟು ಕಷ್ಟವಾಗಿತ್ತದೆಂದರೆ, ಅಲ್ಲಿಯವರೆಗೆ ಸೌಜನ್ಯದಿಂದಿದ್ದ ಅವರು ನಾವು ಅವರ ಮನನೋಯಿಸಿದವರ ಹಾಗೆ ವರ್ತಿಸತೊಡಗುತ್ತಾರೆ. ಎಷ್ಟೋ ಸಲ ನಾನೇನೋ ತಪ್ಪು ಮಾಡಿದೆನೇನೋ ಎಂಬ ಭಾವನೆ ನನ್ನಲ್ಲಿ ಮೂಡಲಾರಂಭಿಸುತ್ತದೆ.

ಹೇಳಬೇಕಾದ ಒಂದು ವಿಷಯವೆಂದರೆ, ನಾನು ಸ್ವಲ್ಪ (ಸ್ವಲ್ಪವೇಕೆ, ಒಮ್ಮೊಮ್ಮೆ ಬಹಳವೇ) ಮಖೀನ ಮನುಷ್ಯ. ಉಳಿದವರಿಗೆ ಅತ್ಯಂತ ಸರಳ ಹಾಗೂ ಮಾಮೂಲು ಎನ್ನಿಸುವ ಸಾಮಾಜಿಕ ಸಂದರ್ಭಗಳು ನನಗೆ ನಿಭಾಯಿಸಲು ಕಷ್ಟವಾಗುವ ಸಮಸ್ಯೆಗಳು. ಅಪರಿಚಿತರನ್ನು ನಾನಾಗಿಯೇ ಹೋಗಿ ಮಾತನಾಡಿಸುವುದು, ನಾನಾಗಿಯೇ ಹೋಗಿ ಜನರ ದೋಸ್ತಿ ಮಾಡಿಕೊಳ್ಳುವುದು, ಅದೆಲ್ಲ ಹೋಗಲಿ, ಫೋನ್ ಮಾಡುವಾಗ ನಾನು ಅನೇಕ ಬಾರಿ ಸರಿಯಾದ ನಂಬರನ್ನು ಒತ್ತಿದ್ದೇನೆ ಎಂದು ಧೃಢಪಡಿಸಿಕೊಳ್ಳುತ್ತೇನೆ. ಏಕೆಂದರೆ ಅದು ಅಕಸ್ಮಾತ್ ಯಾವುದಾದರೂ ತಪ್ಪು ನಂಬರಿಗೆ ಹೋದರೆ ಏನು ಮಾಡುವುದು? ಅಂಥ ದುರ್ಭರ ಪ್ರಸಂಗವನ್ನು ನಿಭಾಯಿಸುವುದು ಹೇಗೆ? ಎಷ್ಟೋ ಸಲ, ಡಿಸ್‍ಪ್ಲೇ ಇಲ್ಲದ ನಮ್ಮ ಮನೆಯ ಲ್ಯಾಂಡ್‍ಲೈನಿನಿಂದ ಫೋನ್ ಮಾಡುವಾಗ, ನಂಬರ್ ಒತ್ತಿದ ಮೇಲೆ ಸಂಶಯದ ಹುಳು ತಲೆಯೊಳಗೆ ಹೊಕ್ಕುತ್ತದೆ. ಆಕಸ್ಮಾತಾಗಿ ಒಂದು ಅಂಕಿಯನ್ನು ತಪ್ಪು ಒತ್ತಿದ್ದರೆ? ಅತ್ತ ಫೋನು ರಿಂಗಾಗುತ್ತಿದ್ದರೂ ಪಟಕ್ಕನೆ ಕಟ್ ಮಾಡಿ, ಜಾಗ್ರತೆಯಿಂದ ಇನ್ನೊಮ್ಮೆ ಅಂಕಿಗಳನ್ನು ಒಂದೊಂದಾಗೆ ಒತ್ತುತ್ತೇನೆ. ಪಟಪಟನೆ ಅಂಕಿಗಳನ್ನು ಒತ್ತುವ ಬೇರೆಯವರನ್ನು ನೋಡಿದಾಗ ವಿಸ್ಮಯವಾಗುತ್ತದೆ. ಆದರೆ ಪರಿಚಿತರು, ಆತ್ಮೀಯರ ಜೊತೆ ನಾನು ಪೂರ್ತಿ ಬೇರೆ ವ್ಯಕ್ತಿಯೇ! ಅಲ್ಲಿ ನನ್ನ sense of humour ಎಣೆಯಿಲ್ಲದೆ ನಲಿಯುತ್ತದೆ. ಆರಾಮಾಗಿರುತ್ತೇನೆ.

ಹೀಗಿದ್ದಾಗ, ಅಪರಿಚಿತ ಊರಲ್ಲಿ, ಅಪರಿಚಿತರೊಂದಿಗೆ ಅಪರಿಚಿತ ರೀತಿಯ ವ್ಯವಹಾರಗಳು ಅದೆಷ್ಟು ಕಷ್ಟವಾಗಿರಬಹುದು ನನಗೆ! ಪ್ರತಿಯೊಂದು ವ್ಯವಹಾರವೂ ಒಂದು ಕಾಳಗವಿದ್ದಂತೆ. ನನ್ನಂತಲ್ಲದ, ಜನರೊಂದಿಗೆ ಬೆರೆಯುವ ಜನರಿಗೆ ಇವೆಲ್ಲ ಸುಲಭವೇನೋ. ಆದರೆ ಮತ್ತೆ ಈಪ್ರಕ್ರಿಯೆಗಳ ಬಗ್ಗೆ ಹೇಳಬೇಕೆಂದರೆ, ಒಂದೊಂದು ಕಡೆ ಒಂದೊಂದು ರೀತಿಯ ಪ್ರಕ್ರಿಯೆ ಇರುತ್ತದೆ. ಮತ್ತೆ, ಅಲ್ಲಿನ ಜನ ಗ್ರಾಹಕರಿಗೆ ಅದರ ತಿಳುವಳಿಕೆಯಿದೆ ಎಂದು assume ಮಾಡುತ್ತಾರೆ. ಅವೆಲ್ಲ ಪ್ರಕ್ರಿಯೆಗಳನ್ನು ಅನುಭವಿಸುವ ಮುನ್ನ ಅವು ಗೊತ್ತಿರಲು ಹೇಗೆ ಸಾಧ್ಯ? ಕೆಲ ಉದಾಹರಣೆಗಳನ್ನು ಕೊಡುತ್ತೇನೆ. ಶಿಕಾಗೋಗೆ ಹೋಗಲು ಒಂದು ಬಸ್ಸಿನ ಟಿಕೆಟ್ ತೊಗೊಂಡಿದ್ದೆ, ಅವರ ವೆಬ್‍ಸೈಟ್ ಮೂಲಕ. ಬಸ್ಸು ಹೊರಡುವುದಕ್ಕಿಂತ ಒಂದು ಗಂಟೆಯಾದರೂ ಮುಂಚೆ ಬಂದು ಒಂದು ರೆಫ಼ರನ್ಸ್ ನಂಬರ್ ಕೊಟ್ಟು ಕೌಂಟರಿನಲ್ಲಿ ಟಿಕೆಟ್ ಪಡೆಯಬೇಕು ಎಂದು ನಮೂದಾಗಿತ್ತು. ಸರಿ, ಸಮಯಕ್ಕೆ ಸರಿಯಾಗಿ ಹೋಗಿ ಅಲ್ಲಿ ಕೌಂಟರಿನಲ್ಲಿ ಕುಳಿತಿದ್ದ ಮಹಿಳೆಗೆ “ಹಾಯ್ದು”, ಹುಸಿನಕ್ಕು, “ನಾನು ಆನ್‍ಲೈನ್ ಟಿಕೆಟ್ ತೆಗೆಸಿದ್ದೆ. ನನ್ನ ರೆಫ಼ರನ್ಸ್ ನಂಬರು ಇದು,” ಎಂದು ನಂಬರ್ ಹೇಳಿದೆ. ನಾನು ಮಾಡಿರಬಹುದಾದ ತಪ್ಪೆಂದರೆ ನಂಬರನ್ನು ಸ್ವಲ್ಪ ವೇಗವಾಗಿ ಹೇಳಿದೆ. ಅಲ್ಲಿದ್ದ ಮಹಿಳೆ ಒಮ್ಮೆಲೇ ಸಿಟ್ಟಿಗೆದ್ದಂತೆ ತೋರಿತು. “Alright! Alright! Let me first get to the computer screen before you start rattling away those numbers.” Rattling away! ನಾನು ಒಮ್ಮೆಲೇ ಬೆಚ್ಚಿಬಿದ್ದೆ. “ತಾಯಿ, ನಾನು ಅಂಥದೇನು ತಪ್ಪು ಮಾಡಿದೆ? ನಿನಗೆ ಅರ್ಥವಾಗಿಲ್ಲದಿದ್ದರೆ, ಆ ಸಂಖ್ಯೆಯನ್ನು ಮತ್ತೆ ಮತ್ತೆ ಹೇಳುತ್ತೇನೆ, ಆದರೆ ಯಾಕಿಷ್ಟು ಅಸಹನೆ?” ಎನ್ನಬೇಕೆನ್ನಿಸಿತು. ಸುಮ್ಮನಿದ್ದೆ. ಆದರೆ ಅವಳು ಟಿಕೆಟ್ಟು ತೆಗೆದು ಕೊಡಲು ಹತ್ತಿದ ೩-೪ ನಿಮಿಷ ಪೂರ್ತಿ ತಲೆ ಕೊಡವುತ್ತ ತನ್ನ ಅಸಹನೆ ವ್ಯಕ್ತಪಡಿಸುತ್ತಲೇ ಇದ್ದಳು.

ನಾನಿರುವ ಅಪಾರ್ಟ್‍ಮೆಂಟ್‍ಗೆ ಗ್ಯಾಸ್ ಕನೆಕ್ಶನ್ ತೆಗೆದುಕೊಳ್ಳಲು ಫೋನಿನಲ್ಲಿ ಮಾತಾಡುವಾಗಲೂ ಅಷ್ಟೆ. ನಾನು ಹೇಳಿದ್ದು ಅವರಿಗರ್ಥವಾಗದಿದ್ದರೆ, ಅಥವಾ ಅವರು ಹೇಳಿದ್ದು ನನಗರ್ಥವಾಗದೆ ಇನ್ನೊಮ್ಮೆ ಹೇಳಿ ಎಂದರೆ, ಅವರಿಗೆ ತ್ರಾಸು ಶುರುವಾಗಿಬಿಡುತ್ತದೆ. ಈ ಗ್ಯಾಸಿನ ಕಸ್ಟಮರ್ ಕೇರ್‌ಗೆ ಫೋನ್ ಮಾಡಿದರೆ ಅವರು ಫೋನೆತ್ತಿದ ಕೂಡಲೆ ಮೊದಲಿಗೆ ನಮ್ಮ ವಿಳಾಸ ಹೇಳಬೇಕು. ಹೆಸರು ಹೇಳಲು ತೊಡಗಿದರೆ, ಅವರು ಸಂಕಟಪಟ್ಟುಕೊಂಡು, ಅದೆಲ್ಲ ನನಗೆ ಬೇಡ, ಮೊದಲು ವಿಳಾಸ ಎನ್ನುತ್ತಾರೆ. ಮತ್ತ್ಯಾವುದರದೋ ಕಸ್ಟಮರ್ ಕೇರ್‌ಗೆ ಫೋನ್ ಮಾಡಿದರೆ, ಮೊದಲು ಹೆಸರು ಫೋನ್ ನಂಬರ್ ಹೇಳಬೇಕು. ಇವೆಲ್ಲ ರೀತಿಗಳನ್ನು ನಾನು ನೆನಪಿಟ್ಟುಕೊಳ್ಳುವುದೇ? ಫೋನುಗಳ ವ್ಯವಹಾರಗಳು ಹೋಗಲಿ, ಮುಖಾಮುಖಿ ವ್ಯವಹಾರಗಳಲ್ಲೂ ಹಾಗೆಯೇ! ಕೆಲವು ಕಡೆ ಕಾಫಿಗಳಿಗೆ ಟಾಲ್, ಗ್ರ್ಯಾಂಡೆ, ಹೀಗೆ ಏನೇನೋ ಅಳತೆಗಳು. ಇನ್ನು ಕೆಲವು ಕಡೆ ಸ್ಮಾಲ್, ಮೀಡಿಯಮ್ ಹಾಗೂ ಲಾರ್ಜ್. ಒಂದು ಇನ್ನೊಂದು ಕಡೆ ಅರ್ಥವಾಗುವುದಿಲ್ಲ. ಅದು ಹೋಗಲಿ, ಬಿಗ್ ಎಂದರೆ ಮುಖ ನೋಡುತ್ತಾರೆ. ಮತ್ತೆ, “ಓ ಸಾರಿ, ಐ ಮೀನ್, ಲಾರ್ಜ್,” ಎನ್ನುತ್ತೇನೆ. ರೆಸ್ಟೊರಂಟುಗಳು, ಪಬ್ಬುಗಳಂತೂ ಅವರವರ ಒಂದೊಂದು glossary ಇಟ್ಟುಕೊಂಡರೇ ಒಳ್ಳೆಯದು. ಏಕೆಂದರೆ ಆ ತಿಂಡಿ ತೀರ್ಥಗಳ ಹೆಸರುಗಳಿಗೆ ಅರ್ಥವೇ ಇರುವುದಿಲ್ಲ. ಇಲ್ಲೇ ಪಕ್ಕದ ಪಬ್ಬಿನಲ್ಲಿ ಒಂದು ಪೇಯದ ಹೆಸರು “well drinks”. ವ್ಯಾಕರಣದ ಹಂಗಿಲ್ಲದ ಆ ನುಡಿಗಟ್ಟು ಹಾಳಾಗಲಿ, ಅದರರ್ಥ ಏನು? ವೇಟ್ರೆಸ್‍ಳನ್ನು ಕೇಳಿದೆ. ಅವಳಿಂದ, ವೋಡ್ಕಾ ಹಾಗೂ ಮತ್ತೇನೇನೋ ಇರುವ ಒಂದು ಕಾಕ್‍ಟೇಲ್‍ನಂಥದ್ದು ಎಂದು ತಿಳಿಯಿತು. ಅದರಲ್ಲಿನ ವೋಡ್ಕಾದ ಪರಿಮಾಣವೇನು ಎಂದು ಕೇಳಿದೆ. ಅವಳಿಗೆ ಅರ್ಥವೇ ಆಗಲಿಲ್ಲ. ಹೇಳಿದ್ದನ್ನೇ ಮತ್ತೆ ಹೇಳಿದಳು. ನಾನು, “ಸರಿಯಬ್ಬೆ, ಕೃತಕೃತ್ಯನು ನಾನು,” ಎಂದೆ.

ಇನ್ನೊಮ್ಮೆ, ಬೆಂಗಳೂರಿಂದ ಇಲ್ಲಿನ ಒಂದು ಊರಿಗೆ ಕೆಲಸದ ಸಲುವಾಗಿ ವಾರದ ಮಟ್ಟಿಗೆ ಬಂದಿದ್ದ ಪ್ರೊಫೆಸರ್ ಒಬ್ಬರನ್ನು ಸಂಪರ್ಕಿಸಬೇಕಾಗಿತ್ತು. ಅವರು ಉಳಿದುಕೊಂಡ ಹೊಟೇಲಿನ ಹೆಸರು ಮಾತ್ರ ಗೊತ್ತಿತ್ತು; ಅವರ ರೂಂ ನಂಬರ್ ಗೊತ್ತಿರಲಿಲ್ಲ. ಅಲ್ಲಿಗೆ ಫೋನ್ ಹಚ್ಚಿ, ನಾನು ಇಂಥವರ ಜೊತೆ ಸಂಪರ್ಕ ಸಾಧಿಸಬಯಸುತ್ತೇನೆ ಎಂದು ಹೇಳಿದೆ. ಅಲ್ಲಿದ್ದವಳು, “ಅವರ ಕೊನೆಯ ನಾಮವೇನು?” ಮತ್ತೆ ಶುರು. ಅವರು ತಮಿಳರು. ಅವರಿಗೆ ಯಾವ “ಕೊನೆಯ ನಾಮ”ವೂ ಅಡ್ಡ ಹೆಸರೂ ಇಲ್ಲ. ಅವರ ಹೆಸರು.. ಉಂ.. ಏನೋ ಒಂದು, “ಅನಂತರಾಮನ್ ಪದ್ಮನಾಭನ್” ಎಂದುಕೊಳ್ಳೋಣ, ಉದಾಹರಣೆಗೆ. ಅವರು “ಎ. ಪದ್ಮನಾಭನ್” ಅಥವಾ ಹೆಚ್ಚಾಗಿ ಕೇವಲ “ಪದ್ಮನಾಭನ್” ಎಂದು ತಮ್ಮ ಹೆಸರು ಹೇಳುತ್ತಾರೆ. ಇಂತಿದ್ದಾಗ. ಅವರ ಕೊನೆಯ ನಾಮವೇನೆನ್ನಲಿ? ಅವರು ಪದ್ಮನಾಭನ್ ಎಂದೇ ಬರೆಸಿರಬಹುದೆಂದು ಅದನ್ನೇ ಅರುಹಿದೆ. ನಿಧಾನಕ್ಕೆ ಒಂದೊಂದೇ ಅಕ್ಷರವನ್ನು ಹೇಳಿದೆ. “ಅವರ ಮೊದಲ ನಾಮವೇನು?” ಪಂಚೇತಿಯಾಯಿತು. “ಅವರ ಮೊದಲ ನಾಮ.. ಅಲ್ಲ ಅದು ಹೀಗಿದೆ, ಆದರೆ ಅವರು ಅದನ್ನೇನು ಬಳಸುವಂತೆ ತೋರುವುದಿಲ್ಲ,” ಎಂದೇನೇನೋ ಹೇಳತೊಡಗಿದೆ. ಅವಳು, ಅರ್ಧ ಅಪನಂಬಿಕೆಯಿಂದ ಅರ್ಧ ಮುನಿಸಿನಿಂದ, “ನಿಮಗೆ ಅವರ ಮೊದಲ ನಾಮ ಗೊತ್ತಿಲ್ಲವೆ?!” ಎಂದಳು. ನಾನು, “ಇಲ್ಲ, ನಾನು ಹೇಳಿದ್ದರಿಂದಲೇ ಹುಡುಕಿ,” ಎಂದೆ. ಆ ಹೆಸರೇ ಅಲ್ಲಿ ಸಿಗಲಿಲ್ಲ ಅವಳಿಗೆ ಅವಳ ಕಂಪ್ಯೂಟರಿನಲ್ಲಿ. ಪೂರ್ತಿ ಹೆಸರು ಕೊಟ್ಟಾಗಲೇ ಹುಡುಕುವ ಆ ಮೂರ್ಖ ಕಂಪ್ಯೂಟರ್ ಪ್ರೋಗ್ರ್ಯಾಮನ್ನೂ, ಎಲ್ಲರ ಹೆಸರುಗಳೂ ಒಂದು standard formatನಲ್ಲಿರುತ್ತವೆಂದು ಭಾವಿಸುವ ಮೂರ್ಖ ಜನರನ್ನೂ, ಅಡ್ಡ ಹೆಸರಿಲ್ಲದ ತಮಿಳರನ್ನೂ ಶಪಿಸುತ್ತ ಫೋನು ಕುಕ್ಕಿದೆ.
ನಾನು ಇಲ್ಲಿ ಬಂದ ಹೊಸದರಲ್ಲಂತೂ ಮೇಲೆ ಹೇಳಿದಂತೆ ಪ್ರತಿಯೊಂದು ಇಂಥ ಸಂದರ್ಭವನ್ನು ಒಂದು ಕಾಳಗದಂತೆ, ಒಂದು ಸವಾಲಿನಂತೆ ಪರಿಗಣಿಸುತ್ತಿದ್ದೆ. ಇಂಥ ಯಾವುದೇ ಸಾಮಾಜಿಕ ಸಂದರ್ಭದಿಂದ ಸುಭಗವಾಗಿ ಹೊರಹೊಮ್ಮಿದರೆ, ಅದು ನನ್ನ ಒಂದು ದೊಡ್ದ social victory ಎಂದು ಆಹ್ಲಾದಪಡುತ್ತಿದ್ದೆ. ಹೆಚ್ಚಾಗಿ ಈ ಪ್ರಕ್ರಿಯೆಗಳು ಗೊತ್ತಿದ್ದ ಜಾಗಗಳಿಗೇ ಹೆಚ್ಚಾಗಿ ಹೋಗುತ್ತಿದ್ದೆ. ಆದರೆ ಈಗೀಗ ಸ್ವಲ್ಪ ರೂಢಿಯಾಗುತ್ತಿದ್ದೆ. ಏನಾದರೂ ಗೊತ್ತಾಗದಿದ್ದರೆ ಗೊತ್ತಿಲ್ಲವೆಂದು ಆರಾಮಾಗಿ ಹೇಳಿ, ಅವರೇನಾದರೂ ಅಂದುಕೊಳ್ಳಲಿ, ನನ್ನ ಕೆಲಸ ಸಾಧಿಸಿಕೊಳ್ಳುವುದರತ್ತ ಗಮನವಿಡುವುದು, ಇದನ್ನೆಲ್ಲ ಕಲಿಯುತ್ತಿದ್ದೇನೆ. ಆದರೂ ಒಮ್ಮೊಮ್ಮೆ ಇವೆಲ್ಲ ಮತ್ತೆ ಮರುಕಳಿಸುತ್ತವೆ. ಮೊನ್ನೆ ಒಂದೆಡೆಯಲ್ಲಿ ಸ್ಯಾಂಡ್‍ವಿಚ್ ತೊಗೊಳ್ಳಲು ಹೋದೆ. ಅಲ್ಲಿ ಹೋಗಿ ಒಂದು ವೆಜ್ ಸ್ಯಾಂಡ್‍ವಿಚ್ ಕೊಡಯ್ಯ, ಎಂದೆ. ಅವನು ಅಳತೆ ಕೇಳಿದ. (ಇಲ್ಲಿ ಊಟತಿಂಡಿಗಳನ್ನೆಲ್ಲ ಅಳೆಯುವುದು ನನಗಂತೂ ತೀರ ತಮಾಷೆಯ ಸಂಗತಿ.) ನಾನು, ಫೂಟುದ್ದದ್ದು, ಎಂದೆ. ಮುಂದೆ ಬಹಳೇ ಕಷ್ಟದ ಪರಿಸ್ಥಿತಿಗಳು ಒದಗಿದವು. ಅವನು, “ಯಾವ ಥರದ ಬ್ರೆಡ್ಡು?” ಎಂದ. ಒಳ್ಳೆಯ ಥರದ್ದು ಕೊಡಯ್ಯ ಎಂದರೆ ಅವನಿಗೆ ತಿಳಿಯುವುದಿಲ್ಲ. ನಗುತ್ತ, “ನನಗಿರುವ ಆಯ್ಕೆಗಳೇನು?” ಎಂದೆ. ಅವನು ಅಪನಂಬಿಕೆಯಿಂದ ನನ್ನತ್ತ ನೋಡುತ್ತ, ಸ್ವಲ್ಪ ದೂರದಲ್ಲಿ ಅಂಟಿಸಿದ್ದ ಪಟ್ಟಿಯೊಂದನ್ನು ತೋರಿಸಿದ. ಅವನ ಪಕ್ಕದಲ್ಲಿದ್ದವಳು ಆಗಲೇ ಅಪನಂಬಿಕೆಯಿಂದ ಮುಸಿನಗುತ್ತಿದ್ದಳು. ನಾನು ಹೆದರದೆ ಆ ಪಟ್ಟಿಯತ್ತ ಹೋಗಿ, ಅಲ್ಲಿದ್ದ ಐದಾರು ಬ್ರೆಡ್ಡುಗಳಿಂದ ಯಾವುದೋ ಒಂದನ್ನು ಆಯ್ದು, ಅದರ ಹೆಸರನ್ನು ಹೇಳಿದೆ. ಇದಾಗುತ್ತಿದ್ದಂತೆ ಅವನು, “ಯಾವು ಚೀಸು?” ಎಂದ. ನಾನು, “ಹಹ್ಹಾ.. ಮತ್ತೆ ತಾವು ನನ್ನನ್ನು ಕ್ಷಮಿಸಲೇಬೇಕು. ನನಗೆ ಅದರ ಬಗೆಗಳೂ ಗೊತ್ತಿಲ್ಲ.” ಅವನು ಗಾಜಿನ ಕೆಳಗಿದ್ದ ೪-೫ ಬಗೆಗಳನ್ನು ತೋರಿಸಿ, ಒಂದಷ್ಟು ಹೆಸರುಗಳನ್ನು ಹೇಳಿದ. ನಾನು ಯಾವುದೋ ಒಂದನ್ನು ಹೇಳಿದೆ. ಇದೆಲ್ಲ ಇಷ್ಟಕ್ಕೇ ಮುಗಿಯುತ್ತದೆಯೇ? ಮುಂದೆ ಅವನು, “ಯಾವ ಬಗೆಯ ಕಾಯಿಪಲ್ಲೆಗಳು ಬೇಕು?” ಎಂದ. ಇದೊಳ್ಳೆ ಫಜೀತಿಯಾಯಿತಲ್ಲ! ಇವನಿಗೆ ನಾನು ಪ್ರತಿಯೊಂದನ್ನೂ ಹೇಳಿ ಹೇಳಿ ಮಾಡಿಸಿಕೊಳ್ಳುವುದಾದರೆ ಮನೆಯಲ್ಲೇ ಏನೋ ಬೇಯಿಸುತ್ತಿದ್ದೆನಲ್ಲ. ಅಲ್ಲದೇ ಅಲ್ಲಿದ್ದ ಕಾಯಿಪಲ್ಲೆಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವುಗಳ ಹೆಸರೇ ನನಗೆ ಗೊತ್ತಿಲ್ಲ. (ಗೊತ್ತಿದ್ದ ತರಕಾರಿಗಳಿಗೂ ಇವರ ಹೆಸರುಗಳು ಬೇರೆ ಇರುತ್ತವೆ; ಬದನೆಕಾಯಿಗೆ ಎಗ್‍ಪ್ಲಾಂಟ್ ಎನ್ನುತ್ತಾರೆ!) ಬೆರಳಿನಿಂದ, “ಇದು, ಇದು, ಮತ್ತದು, ಅದೋ ಅದು,” ಎಂದು ತೋರಿಸುತ್ತ ಹೋದೆ. ಇದಾಗುವವರೆಗೆ ಅವನು ಬೆವೆತಿದ್ದ! ಆದರೂ ನನ್ನನ್ನು ಕೇಳಿದ, “ಯಾವ ಬಗೆಯ ಸಾಸ್?” “ಸ್ವಾಮಿಯೇ, ನನಗೆ ಯಾವ ಬಗೆಯ ಸಾಸೂ ಬೇಡ. ಇದನ್ನು ಮುಗಿಸಿ ನನ್ನನ್ನು ಮುಕ್ತನನ್ನಾಗಿಸು!” ಈ ವ್ಯವಹಾರ ಮುಗಿದಾಗ ಆ ಮನುಷ್ಯ ತ್ರಾಸುಮಾಡಿಕೊಂಡಿದ್ದ. ನನಗೂ ಕಡಿಮೆ ತ್ರಾಸಾಗಿರಲಿಲ್ಲ.

***

ಇವೆಲ್ಲ ಉದಾಹರಣೆಗಳಷ್ಟೆ. ಇವುಗಳ ಆಧಾರದ ಮೇಲೆ ನಾನು ಯಾವುದೇ ಸಾರ್ವತ್ರಿಕ ತತ್ವಗಳನ್ನು ಮಂಡಿಸುತ್ತಿಲ್ಲ. ಆದರೆ ಒಟ್ಟಾರೆಯಾಗಿ ನೋಡಿದರೆ, ನಾನು ಹಿಂದೊಮ್ಮೆ ಸಿಂಗಪೋರಿನ ಸಂದರ್ಭದಲ್ಲಿ ಹೇಳಿದ್ದ ಸೂತ್ರಬದ್ಧ ಸಮಾಜಗಳ (normative society) ಲಕ್ಷಣಗಳು ಇಲ್ಲಿಯೂ ಕಾಣಿಸುತ್ತವೆ. ಇವನ್ನು ನಮ್ಮಲ್ಲಿನ್ನ ವ್ಯವಹಾರಗಳ ಜೊತೆ ಹೋಲಿಸಿ ನೋಡಿ. ನಮ್ಮಲ್ಲಿ ಹೆಚ್ಚು ವ್ಯವಹಾರಗಳು ಅಭಿವ್ಯಕ್ತ (declarative) ನೆಲೆಗಟ್ಟಿನಲ್ಲಿರುತ್ತವೆ. ಒಂದು ಹೊಟೇಲಿಗೆ ಹೋಗಿ, “ಅಯ್ಯಾ, ನನಗೊಂದು ಒಳ್ಳೆಯ ಮಸಾಲೆ ದೋಸೆಯನ್ನು ಕರುಣಿಸು,” ಎಂದಷ್ಟೆ ಹೇಳುತ್ತೇವೆ. ಅವನು ಯಾವ ಎಣ್ಣೆಯನ್ನು ಉಪಯೋಗಿಸಬೇಕು, ಎಷ್ಟು ಹಾಕಬೇಕು ಇತ್ಯಾದಿ ಹೇಳುವುದಿಲ್ಲ. ಅದು micro-management. ನಮ್ಮಲ್ಲಿರುವ ಜನಸಂಖ್ಯೆ ಅಗಾಧ. ಹೀಗಾಗಿ ಒಬ್ಬೊಬ್ಬರ ಅಭೀಪ್ಸೆಗಳ ಬಗ್ಗೆ ಗಮನ ಕೊಡಲಾಗುವುದಿಲ್ಲ. ಅಲ್ಲದೇ ನಮ್ಮ ತಿಂಡಿತಿನಿಸುಗಳ ರೀತಿಯೇ ಬೇರೆ. ಹೌದು, ಇವೆಲ್ಲ ನಿಜ. ಆದರೆ ಅವು ಅಷ್ಟು ದೊಡ್ಡ ವ್ಯತ್ಯಾಸ ಮಾಡುವುದಿಲ್ಲ. ಇನ್ನೊಂದು ಅಂಶವೆಂದರೆ, ಈ ರೀತಿ ಪ್ರತಿಯೊಂದಕ್ಕೂ ಹತ್ತಾರು ಆಯ್ಕೆಗಳನ್ನು ಕೊಟ್ಟು, ಗ್ರಾಹಕರಿಗೆ ಅವರಿಗೆ ಬೇಕಾದದ್ದನ್ನು ಆಯಲು ಬಿಟ್ಟರೆ, ಅದರ ಪರಿಣಾಮ ಶ್ರೇಷ್ಠವಾಗುತ್ತದೆಯೇ? ಇರಬಹುದು. ಆದರೆ, ಆ ಪ್ರಕ್ರಿಯೆಯಲ್ಲಿ, ಕೆಲಸವನ್ನು ಬೇರೊಬ್ಬರಿಗೆ ವಹಿಸಿ ಹಗುರಾಗುವ ಆನಂದವೇ ಇಲ್ಲವಾಗುತ್ತದೆ. ತಿಂಡಿ ತಿನ್ನಲು ದರ್ಶಿನಿಗೆ ಹೋಗಿ ನಿಮ್ಮ ಮನೆಯವರು ಅಥವಾ ದೋಸ್ತ-ದೋಸ್ತಿಯರೊಂದಿಗೆ ಹರಟೆ ಹೊಡೆಯುವುದು ಬಿಟ್ಟು, ಅಲ್ಲಿ ಅಡುಗೆ ಮಾಡುವವರಿಗೆ ನಿರ್ದೇಶನ ಕೊಡುತ್ತ ನಿಲ್ಲುವುದನ್ನು ಊಹಿಸಿ. ಹೇಗನ್ನಿಸುತ್ತದೆ?

ಸಮಸ್ಯೆ ಇದಷ್ಟೇ ಅಲ್ಲ. ಇದರ ಹಿಂದೆ ನನ್ನನ್ನು ಕಾಡುವ ಅಂಶವೆಂದರೆ, ಇವರೇನು ಮನುಷ್ಯರೋ ಮಶೀನುಗಳೋ, ಎಂಬ ಆತಂಕ. ಒಂದು ಪ್ರಕ್ರಿಯೆಯನ್ನು ದಿನನಿತ್ಯವೂ ಇದ್ದದ್ದು ಇದ್ದ ಹಾಗೇ ನಡೆಸುತ್ತ, ವರ್ಷಗಟ್ಟಲೇ ಅದನ್ನೇ ಮಾಡುತ್ತ ಹೋಗುವುದು ಭೀತಿ ತರಿಸುವುದಿಲ್ಲವೇ? ಒಂದು ಪ್ರಮಾಣೀಕೃತ ಪ್ರಕ್ರಿಯೆಯಲ್ಲಿ ಹೆಚ್ಚೂಕಡಿಮೆಯಾದರೆ ತಡಬಡಾಯಿಸುವುದು ಮಶೀನುಗಳಿಗೆ ಸಹಜ. ಯಾಕೆಂದರೆ ಅವನ್ನು ಹಾಗೆ ನಿರ್ಮಿಸುವುದು ಅನಿವಾರ್ಯ. ಮಶೀನುಗಳನ್ನೂ ಹೆಚ್ಚು ಹೆಚ್ಚು ಜಾಣರನ್ನಾಗಿ ಮಾಡಲು ಹತ್ತಾರು ವರ್ಷಗಳಿಂದ ಸಂಶೋಧಕರು ಶ್ರಮಿಸುತ್ತಿರುವುದು ಬೇರೆ ವಿಷಯ. ಆದರೆ ಮನುಷ್ಯರೂ ಹಾಗೆ ತಡಬಡಾಯಿಸುವುದೇ? ಈ ಪ್ರಕ್ರಿಯೆಗಳ ಮೇಲೆ ಇಂಥ ಅವಲಂಬನೆಯೇ? ಪ್ರಕ್ರಿಯೆಗಳು ಒಂದು ವ್ಯವಸ್ಥೆಯನ್ನು ಹೆಚ್ಚು ದಕ್ಷವಾಗಿಯೂ, ಅನೇಕ ಸಂದರ್ಭಗಳಲ್ಲಿ ಹೆಚ್ಚು ಪುಷ್ಟವಾಗಿಯೂ ಮಾಡುತ್ತವೆನ್ನುವುದು ನಿಜ. ಆದರೆ ಅದಕ್ಕೆ ತೆರಬೇಕಾದ ಬೆಲೆಯೇನು? ಮಶೀನುಗಳಂತಾಗುವುದೇ? ಅಲ್ಲದೆ, ಒಂದೆಡೆ ಮನುಷ್ಯರು ಮಶೀನುಗಳಂತಾಗುತ್ತಿರುವುದು, ಮತ್ತು ಇನ್ನೊಂದೆಡೆ ಮಶೀನುಗಳು ಜಾಣರಾಗಿ ಮನುಷ್ಯರಂತಾಗುವುವೇ ಎನ್ನುವ ಆತಂಕ, ಇವೆರಡೂ ಏಕಕಾಲದಲ್ಲಿ ನಡೆಯುತ್ತಿರುವ ಆಧುನಿಕ ಯುಗದಲ್ಲಿರುವ ನಾವೇ ಧನ್ಯರಲ್ಲವೇ! ಅದೆಂಥ ವಿಸ್ಮಯಗಳನ್ನು ನೋಡುತ್ತಿದ್ದೇವಲ್ಲ!

“ಪುಸ್ತಕ ವಿಮರ್ಶೆ”

ಅಂತೂ ಪಟ್ಟುಹಿಡಿದು ಕೂತು (ಕೂತು? ಅಥವಾ ಅಡ್ಡಾಗಿ, ಅಥವಾ ವಿಚಿತ್ರ ಭಂಗಿಗಳಲ್ಲಿ ಒರಗಿ) ಬಹಳ ದಿನದಿಂದ ಓದುತ್ತಿದ್ದ ಪುಸ್ತಕದ ಉಳಿದ ಭಾಗವನ್ನು ಮುಗಿಸಿದೆ. ಮೈ ನೇಮ್ ಈಸ್ ರೆಡ್. ಯಾಕೋ ಓದುವುದೇ ಕಷ್ಟವಾಗುತ್ತಿದೆ. ಬಹಳ ಹೊತ್ತು ಏಕಾಗ್ರತೆಯಿಂದ ಏನನ್ನು ಮಾಡುವುದೂ ಕಷ್ಟವಾಗುತ್ತಿದೆಯೇನೋ ಅನ್ನಿಸುತ್ತೆ. ವಯಸ್ಸಾಯಿತೇನೋ!

ಅದೂ ಅಲ್ಲದೇ ಬಹಳ ಪುಸ್ತಕಗಳ ವಿನ್ಯಾಸವೇ ಅನನುಕೂಲಕರವಾಗಿರುತ್ತದೆ. ಅಗಲ ಹೆಚ್ಚಿದ್ದು ದಪ್ಪ ಕಡಿಮೆಯಿದ್ದರೆ ಪಟಕ್ಕನೆ ಮಡಚಿಕೊಳ್ಳುತ್ತವೆ. ಹೀಗಾಗಿ ಅಡ್ಡಾಗಿ ಓದಲಾಗುವುದಿಲ್ಲ. ಆದರೆ ಅವು ಟೇಬಲ್ಲಿನ ಮೇಲೆ ಇಟ್ಟು ಓದಲು ಅನುಕೂಲ. ಹಾಗೆಯೇ ಆರಾಮ ಕುರ್ಚಿಯಲ್ಲಿ ಕೂತು ಓದುವುದಕ್ಕೂ ಅನುಕೂಲ; ಅರ್ಧ ಮಡಚಿ ಕೈಯಲ್ಲಿ ಹಿಡಿದುಕೊಳ್ಳಬಹುದು. ಅಗಲವಿದ್ದು ದಪ್ಪಕ್ಕೂ ಇದ್ದರೆ, ಆಡ್ಡಾಗಿ ಓದಲು ಸಾಧ್ಯವಿಲ್ಲ. ವಜ್ಜೆ ಭಾಳ ಆಗುತ್ತದೆ. ಆರಾಮ ಕುರ್ಚಿಯಲ್ಲಿ ಕೂತು ಓದುವುದೂ ಕಷ್ಟಸಾಧ್ಯ. ತೊಡೆಯ ಮೇಲೆ ಇಟ್ಟುಕೊಂಡು, ಎದೆ ಹೊಟ್ಟೆ ಓಳಗೆ ಎಳೆದುಕೊಂಡು, ತಲೆಯನ್ನು ಶಕ್ಯವಿದ್ದಷ್ಟು ಬಗ್ಗಿಸಿ… ಹೀಗೆಲ್ಲ ಮಾಡಿ ಎಷ್ಟು ಹೊತ್ತು ಓದಲು ಸಾಧ್ಯ? ಇನ್ನು ಟೇಬಲ್ಲಿನ ಮೇಲೆ ಇಟ್ಟು ಓದೋಣವೆಂದರೆ, ಅರ್ಧ ಪುಟಗಳು ಸರಿಯುವ ತನಕ, ಎಡಗಡೆಯ ಪುಟಗಳಿಗೆಲ್ಲ ಏನಾದರೂ ಆಧಾರ ಕೊಡಲೇಬೇಕು. ಇಲ್ಲದಿದ್ದರೆ ಮಗುಚಿಕೊಳ್ಳುತ್ತವೆ. ಅರ್ಧದಿಂದ ಓದಲು ಸಾಧ್ಯವೇ?

ಇನ್ನು ಕೆಲವು ದಪ್ಪಕ್ಕೆ ಹೆಚ್ಚಿದ್ದು ಅಗಲಕ್ಕೆ ತೀರ ಕಡಿಮೆಯಿರುತ್ತವೆ. (ಮೈ ನೇಮ್ ಈಸ್ ರೆಡ್ ಅಂಥದ್ದು.) ಅವಂತೂ ಎರಡೂ ಕಡೆ ಮಗುಚಿಗೊಳ್ಳುತ್ತವೆ. ಅಡ್ಡಾದಾಗ ಎರಡೂ ಕಡೆ ಪುಟಗಳನ್ನು ಇಷ್ಟಗಲ ಕಿಸಿದು ಓದಬೇಕು! ನನಗೆ ಪುಸ್ತಕಗಳ ಬಗ್ಗೆ platonic ಅಷ್ಟೇ ಅಲ್ಲದ, “ದೈಹಿಕ” ಪ್ರೀತಿಯೂ ಇದೆ. ಹೀಗಾಗಿ ಅವನ್ನು ಕಂಡಕಂಡ ಹಾಗೆ ಮಡಚಿ ಹಿಡಿಯುವುದು, ಮಗುಚದೇ ಇರಲೆಂದು ಮಧ್ಯದಲ್ಲಿ ಜಜ್ಜುವುದು, ಇಂಥದೆಲ್ಲ ಮಾಡುವುದು ಸಾಧ್ಯವಿಲ್ಲ. ಆದರೆ ಓದಲು ನಾನು ಇಷ್ಟೊಂದು ಕಷ್ಟ ಪಡಬೇಕಾದಾಗ ಅದೆಷ್ಟು ಹೊತ್ತು ಓದು ಸಾಗೀತು? ನನ್ನ ಬಳಿ ಇಲ್ಲಿ ಆರಾಮ ಕುರ್ಚಿಯೂ ಇಲ್ಲ. ಇರುವುದು ಒಂದು ಕುರ್ಚಿ ಟೇಬಲ್ಲು. ಟೇಬಲ್ಲಿನ ಮೇಲೆ ಯಾವಾಗಲೂ laptop ಕೂತಿರುತ್ತದೆ. ಅದನ್ನು ತೆಗೆದಿರಿಸಿ ಅವಾಗವಾಗ ಪುಸ್ತಕಗಳನ್ನು ಟೇಬಲ್ಲಿನ ಮೇಲಿರಿಸಿ ಸ್ವಲ್ಪ ಹೊತ್ತು ಓದುತ್ತೇನೆ. ಆದರೆ ದಿನವಿಡೀ ಅಲ್ಲೇ ಕೂತು laptop ಉಪಯೋಗಿಸಿ, ಮತ್ತೆ ಅಲ್ಲೇ ಕೂತು ಓದುವುದು ಇನ್ನೊಂದು ಕಿರಿಕಿರಿ. ಬದಲಾವಣೆ ಬೇಕೆನ್ನಿಸುತ್ತದೆ. ಆರಾಮ ಕುರ್ಚಿಯ ಆರಾಮಶೀರ ಓದಿನ ಮಜವೇ ಬೇರೆ. ಮತ್ತೆ ಹೋಗಿ ಅಡ್ಡಾಗಿ ಓದಲು ಯತ್ನಿಸುತ್ತೇನೆ. ಕೈ ಸೋಲುತ್ತವೆ. ಇಲ್ಲಾ ನನ್ನ ಭಂಗಿಯಿಂದ clue ತೊಗೊಳ್ಳುವ ಕಣ್ಣುಗಳು ಸೋಲುತ್ತವೆ. ಒಟ್ಟಿನಲ್ಲಿ ಓದು ಹಿಂದೆ ಬೀಳುತ್ತದೆ. ಪುಸ್ತಕಗಳನ್ನು ಇನ್ನಷ್ಟು ಅನುಕೂಲಕರವಾಗಿ design ಮಾಡಬೇಕು. ಇಲ್ಲದಿದ್ದರೆ ಜನರು ಹೇಗೆ ಓದಬೇಕು?

ಒಟ್ಟಿನಲ್ಲಿ, ಜೀವನ ಅದೆಷ್ಟು ಘೋರ!

ಬ್ಲಾಗಿಗರ ಕಾಳಗ

ಮೊನ್ನೆ ರವಿವಾರ ಬಸವನಗುಡಿಯಲ್ಲಿ ನಡೆದ ಬ್ಲಾಗಿಗರ ಕೂಟ ಅತ್ಯಂತ ಯಶಸ್ವೀ ಕೂಟ ಎಂದು ನಾನು ಈ ಮೂಲಕ ಘೋಷಿಸುತ್ತಿದ್ದೇನೆ. ಏಕೆಂದರೆ ಅದರ ಬಗ್ಗೆ ಜಗಳಗಳಾಗುತ್ತಿವೆ. ಯಾವುದೇ ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ ಅಥವಾ ವಿದ್ಯಮಾನವಾಗಲಿ ಸಕ್ಸೆಸ್ಫ಼ುಲ್ ಆಗುವುದು ಯಾವಾಗ ಎಂದರೆ ಅದು ಜನರಲ್ಲಿ ಆಸಕ್ತಿ ಮೂಡಿಸುವುದಷ್ಟೆ ಅಲ್ಲದೆ, ಅದನ್ನು ಉಳಿಸಿಕೊಂಡಾಗ. ಯಾರನ್ನೋ ಬರಿ ಹೊಗಳಿದರೆ ಅಥವಾ ತೆಗಳಿದರೆ ಅವರ ಬಗೆಗಿನ ಆಸಕ್ತಿ ಕಾಲಕ್ರಮದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಅತ್ಯಂತ ಯಶಸ್ವೀ ವ್ಯಕ್ತಿಗಳ ಉದಾಹರಣೆಗಳನ್ನು ಗಮನಿಸಿ: ಪಟಕ್ಕನೆ ನಿಮ್ಮ ಮನಸ್ಸಿಗೆ ತೋಚುವ ಹೆಸರುಗಳನ್ನೇ ತೊಗೊಳ್ಳಿ; ಶಾಹ್ ರುಖ್ ಖಾನ್ ಹೆಚ್ಚು ಯಶಸ್ವೀ ವ್ಯಕ್ತಿಯೋ ಅಲ್ಬರ್ಟ್ ಐನ್‍ಸ್ಟೈನ್‍ನೋ; ಉತ್ತರ ಅತ್ಯಂತ ಸ್ಪಷ್ಟ; ಬೆಳಕಿನಷ್ಟು ನಿಚ್ಚಳ. ಇದನ್ನೇ ಸಾರ್ವತ್ರೀಕರಿಸಿ ನೋಡಿ. ಅತ್ಯಂತ ಸಕ್ಸೆಸ್‍ಫುಲ್ ವ್ಯಕ್ತಿಗಳೆಂದರೆ ಸಿನೆಮಾ ತಾರೆಯರು ಮತ್ತು ಕ್ರಿಕೆಟಿಗರು. ಅವರು ಒಂದು ಕೆಟಗರಿ. ಇನ್ನು ವಿಜ್ಞಾನಿಗಳು, ಸಂತರು, ತುಡುಗರು, ಕೊಲೆಗಡುಕರು ಇನ್ನೊಂದು ಕೆಟಗರಿ. ಪೇಜ್ ೩ಯೇ ಜಗತ್ತು. ಗಾಸಿಪ್‍ಗಳು, ಪರಸ್ಪರ ದೋಷಾರೋಪಣೆ, ವೈಯಕ್ತಿಕ ವಿಚಾರಗಳ ಪ್ರಸ್ತಾಪ, ಇವೆಲ್ಲ ಇಲ್ಲದಿದ್ದರೆ ಯಶಸ್ಸು ಚಲಾವಣೆಯಲ್ಲಿ ಉಳಿಯುವುದಿಲ್ಲ. ಆದುದರಿಂದ ಮೊದಲಿಗೆ ನಾನು – ಸಂಘಟಕರ ವೈಯಕ್ತಿಕ ಪರಿಚಯ ನನಗಿಲ್ಲ – ’ಪ್ರಣತಿ’ ಛಾವಣಿಗೆ ಅಭಿನಂದನೆ ಕೋರುತ್ತೇನೆ.

ಹೀಗಿರುವಾಗ ಸಂತೋಷಕುಮಾರರ ಪೋಸ್ಟನ್ನು ಓದಿದಾಗ ನನಗೆ ಸ್ವಲ್ಪ ಖುಷಿಯೇ ಆಯಿತು. ಲಲಲ ಎಂದು ಗುನುಗುತ್ತ ಬಾಯಿ ಚಪ್ಪರಿಸಿದೆ. ಅವರು ಜನಪ್ರಿಯವಲ್ಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ನೋಡಿ ನಾನು ಕಾತರದಿಂದ ಅದಕ್ಕೆ ಒದಗುವ ಗತಿಯನ್ನು ಕಾಯುತ್ತ ಕೂತೆ. ಅಲ್ಲಿಯವರೆಗೆ ಶ್ರೀಯವರ ರಿಪೋರ್ಟನ್ನೊಳಗೊಂಡಂತೆ ಒಂದೆರಡು ಉತ್ಸಾಹಭರಿತ ಅಭಿಪ್ರಾಯಗಳನ್ನೋದಿದ್ದೆ. ಸಂತೋಷ್ ಅವರಿಗಾದ ನಿರಾಶೆಯಿಂದ ನನಗೆ ಸಂತೋಷವೇ ಆಯಿತು (ಅದರಲ್ಲಿನ ಎಷ್ಟೋ ಅಂಶಗಳು ನನಗೆ ಅನ್‍ರೀಸನೆಬಲ್ ಎಂದು ತೋರಿದರೂ). ನಂತರ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನೂ ಓದಿದೆ. ಸಂತೋಷ್ ಅವರ ನಂತರದ ಪ್ರತಿಕ್ರಿಯೆಯ ಪೋಸ್ಟನ್ನೂ ಓದಿದೆ. ಆದರೆ ಆ ಪೋಸ್ಟನ್ನು ಓದಿ ನನಗೆ ಮೊದಲಿನಂತೆ ಸಂತಸವಾಗಲಿಲ್ಲ. ಅದರ ಬಗ್ಗೆ ಮುಂದೆ ಹೇಳುತ್ತೇನೆ. ಇದೆಲ್ಲದರ ಬಗ್ಗೆ ಒಬ್ಬ ’ಸೆಲೆಬ್ರಿಟಿ’ ಬ್ಲಾಗರ್ ಫ಼್ರೆಂಡ್ ಜೊತೆಗೂ ಮಾತಾಡಿದೆ. ಅವರೂ ಈ ಎಲ್ಲ ವಿದ್ಯಮಾನಗಳಿಂದ ತುಂಬಾ ಹುರುಪಾಗಿದ್ದರು. ನಾನೂ ಮತ್ತಷ್ಟು ಹುರುಪಾಗಿ, ಆ ಕೂಟದಲ್ಲಿ ಭಾಗವಹಿಸಿರದಿದ್ದರೂ ಈ ಕಾಮೆಂಟರಿ ಬರೆಯುತ್ತಿದ್ದೇನೆ. ಇದನ್ನು ನಾನು ತಮಾಷೆ ಹಾಗೂ ಗಾಂಭೀರ್ಯವನ್ನು ಯಾರಿಗೂ ಗೊತ್ತಾಗದಂತೆ ಹದವಾಗಿ ಮಿಶ್ರಣ ಮಾಡಿ ಬರೆಯುತ್ತಿದ್ದೇನೆ. ಇದರಿಂದ ಓದುಗರಿಗೆ ಅನುಕೂಲವಾಗಲಿಕ್ಕಿಲ್ಲ. ನನಗಂತೂ ಅನುಕೂಲವಿದೆ: ನಾನು ತಮಾಷೆಗೆ ಬರದದ್ದನ್ನು ಯಾರಾದರೂ ಹೊಗಳಿದರೆ, ಹೌದು, ಅದು ಅತ್ಯಂತ ಘನಿಷ್ಠ ಸಂಗತಿ ಎನ್ನುತ್ತೇನೆ; ಇನ್ನು ನಾನು ಬರೆದ ಏನನ್ನೋ ಓದಿ ಯಾರಾದರೂ ಇರಿಟೇಟ್ ಆದರೆ, ಅದು ಕೇವಲ ತಮಾಶೆ ಎಂದುಬಿಡುತ್ತೇನೆ.

ಸಂತೋಷ್ ಅವರು ಅನವಶ್ಯಕವಾಗಿ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಕೆಲವರು ತಕರಾರು ತೆಗೆದಿದ್ದಾರೆ. ನಾನು ಇದನ್ನು ಒಪ್ಪೋದಿಲ್ಲ. ವ್ಯಕ್ತಿಗಳ ಉಡುಗೆ, ಭಾಷೆ, ರೂಪ, ಮಾತು ಇವೇ ಮೊದಲಾದವುಗಳ ಬಗ್ಗೆ ಪಟಕ್ಕನೆ ಜಜ್ ಮಾಡುವುದು, ಪೂರ್ವಗ್ರಹ ಬೆಳೆಸಿಕೊಳ್ಳುವುದು ನಮ್ಮ ಸ್ವಭಾವ. ಸ್ವಭಾವ ಸ್ವಾಭಾವಿಕ. ಸ್ವಾಭಾವಿಕವಾದದ್ದು ಹೇಗೆ ಅನವಶ್ಯಕವಾದೀತು? ಮತ್ತು ಅವರು ಹೇಳಿರುವ ಅಂಶಗಳು – ಚಡ್ದಿ ಧರಿಸಿದ್ದ ಬ್ಲಾಗರ್, ಬೋಳುತಲೆಯ ಮೇಲಿನ ಚಾಳೀಸು – ಎದ್ದು ಕಾಣಿಸುವಂಥವು. ಅವನ್ನು ನಾವು ಬಿಟ್ಟೇವೆ? ಆದರೆ ಅವರ ತಕರಾರುಗಳ ಬಗ್ಗೆ ನನ್ನ ತಕರಾರು ಬೇರೆ ಇದೆ: ಅವರ ಪ್ರಶ್ನೆಗಳು ಅತ್ಯಂತ ಸರಳವಾಗಿವೆ; ಅವರಿಗೆ ಅದು ಹೇಗೆ ಉತ್ತರ ಗೊತ್ತಾಗಿಲ್ಲವೋ ಏನೋ. ಚಡ್ದಿ ಹಾಕಿಕೊಂಡು ಒಬ್ಬರು ಬಂದಿದ್ದರು ಎಂದರೆ ಅವರು ಖರೆ ಬ್ಲಾಗರ್. ಬ್ಲಾಗಿಂಗ್ ಎನ್ನುವುದು ಅರೆಬರೆ ಸಾಹಿತ್ಯವಲ್ಲವೆ? ಹೀಗಾಗಿ ಚಡ್ಡಿ ಅತ್ಯಂತ ಪ್ರಸ್ತುತವಾದ ಉಡುಪು. ಅಲ್ಲದೇ ಚಡ್ಡಿ ಹಾಕಿಕೊಂಡು ಆರಾಮಶೀರ ಕೂತು ಬರೆಯುವ ಅನುಭವ ಸಂತೋಷ ಅವರಿಗೆ ಇಲ್ಲವೆಂದು ತೋರುತ್ತದೆ. (ನಾನಿದನ್ನು ಚಡ್ಡಿ ಹಾಕಿ ಕೂತೇ ಬರೆಯುತ್ತಿದ್ದೇನೆ.) ಇಲ್ಲದ್ದಿದ್ದರೆ ಅವರು ಅದನ್ನು ಪ್ರಶ್ನಿಸುತ್ತಿರಲಿಲ್ಲ. ಚಡ್ದಿ ಹಾಕಿಕೊಂಡು ಬ್ಲಾಗಿಸಲಿ, ಅಲ್ಲಿಯೂ ಹಾಗೇ ಬರಬೇಕೇ ಎಂದರೆ, ಅವರು method blogger (method actor ಥರ) ಎನ್ನುತ್ತೇನೆ. ಅಲ್ಲದೇ ಜುಬ್ಬಾ, ಜೀನ್ಸ್ ಪ್ಯಾಂಟು, ಬಗಲಲ್ಲಿ ಜೋಳಿಗೆ, ಕುರುಚಲು ಗಡ್ದ ಬಿಟ್ಟುಕೊಂಡು ಬರಲು ಬ್ಲಾಗರುಗಳೇನು ನವ್ಯ ಸಾಹಿತಿಗಳೆ?

ಇನ್ನೊಬ್ಬರ ಕನ್ನಡಕ ತಲೆಯೇರಿ ಕುಳಿತಿತ್ತಂತೆ. ಇದು ಮೇಲ್ನೋಟಕ್ಕೆ ಸ್ವಲ್ಪ ಅಸಮಂಜಸ ಎನ್ನಿಸಿದರೂ, ಸರಿಯಾಗಿ ವಿಶ್ಲೇಷಿಸಿದರೆ ಸುಲಭವಾಗಿ ಬಗೆಹರಿಯುವ ಸಮಸ್ಯೆ. ಮೊದಲಿಗೆ ಚಾಳಶಿಯ ಸ್ವಾಭಾವಿಕ ಗುಣವನ್ನು ಪರಿಗಣಿಸೋಣ. ಅದೆಂದರೆ ಕೆಳಗೆ ಜರಿಯುವುದು. ಮೂಗಿನ ಮೇಲೆ ಕೂಡದೆ ಕೆಳಗೆ ಜರಿಯುತ್ತಿರುತ್ತದೆ; ಅದನ್ನು ಮೇಲೆ ಮೇಲೆ ಎಳೆದು ಎಳೆದು ಹಾಕುತ್ತಿರುತ್ತಾರೆ ಪಾಪ. ಹೆಚ್ಚೂಕಡಿಮೆಯಾದರೆ ಕೆಳಗೇ ಬಿದ್ದು ಹೋಗುತ್ತದೆ. ಹೀಗಿದ್ದಾಗ ಆ ಚಾಳಶಿ ತಲೆ ಕಣ್ಣು ಹಣೆ ಕೂದಲು ಎಲ್ಲ ದಾಟಿ ತಲೆಯ ಮೇಲೆ ಹೇಗೆ ಹೋಯಿತು. ಹಾಂ.. ಕೂದಲು? ಕೂದಲೆಲ್ಲಿದೆ? ಅದೇನಾಗಿರಬೇಕೆಂದರೆ ಸ್ಟೇಜಿನ ಮೇಲೆ ಭಾಷಣಕಾರರು ಜವಾಬ್ದಾರಿ, ಸಾಂಸ್ಕೃತಿಕ ಮಹತ್ವ, ಸಂಕ್ರಮಣದ ಈ ಕಾಲಘಟ್ಟ ಮೊದಲಾದುವುವನ್ನು ಝಳಪಿಸುವಾಗ ಹಾಗೇ ಅಕಸ್ಮಾತ್ತಾಗಿ ಚಾಳಶಿಯ ವ್ಯಕ್ತಿಗೆ ಸಣ್ಣಂಗೆ ನಿದ್ದೆ ಬಂದು ತಲೆ ಹಿಂದೆ ಕುರ್ಚಿಗೊರಗಿಸಿರಬೇಕು. ಮೂಗಿನ ಏರಕಲು ರಸ್ತೆಗಿಂತ ಥಳಥಳನೆ ಹೊಳೆಯುತ್ತಿರುವ ಬಟಾಬಯಲು ಇಳಿಜಾರಿನ ತಲೆ ನಮ್ಮ ಚಾಳೀಸಿಗೆ ಆಕರ್ಷಣೀಯವಾಗಿ ಕಂಡದ್ದರಲ್ಲಿ ಯಾವುದೇ ಚಮತ್ಕಾರವಿಲ್ಲ.

ಅದೆಲ್ಲ ಇರಲಿ. ಸಂತೋಷ್ ಅವರಿಗೆ ಆದ ನಿರಾಸೆಯ ಕಾರಣಗಳನ್ನೂ ಯಾರೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ನೀಲಿ ಚೌಕಡಿಯ ತುಂಬುತೋಳಿನ ಶರಟು (ಚಹಾದ ವೇಳೆಯಲ್ಲಿ ತೋಳುಗಳಿಗೆ ಒಂದೆರಡು ಮಡಿಕೆ ಹಾಕಿದ್ದರೆನ್ನಿ), ಬ್ರೌನ್ ಪ್ಯಾಂಟು ಹಾಕಿಕೊಂಡು, ಮಸ್ತ ಪೈಕಿ ಸೇಂಟು ಹೊಡೆದುಕೊಂಡು ಬಂದ ಅವರನ್ನು ಜನರು ಗಮನಿಸಲೇ ಇಲ್ಲ. ಅದೂ ಹೋಗಲಿ. ಟೀನಾ, ಚೇತನಾ, ಜೋಗಿ ಇಂಥ ಬ್ಲಾಗುಲೋಕದ ಅಮಿತಾಭ್ ಬಚ್ಚನ್, ಶಾಹ್ ರುಖ್ ಖಾನ್, ದೀಪಿಕಾ ಪಡುಕೋಣೆಗಳನ್ನು ನೋಡಲು ಬಂದ ಅವರಿಗೆ, ನಮ್ಮ ಈ -ಟಿವಿಯ ಕನ್ನಡ ಧಾರಾವಾಹಿಗಳ ಸದಾ ನಿಟ್ಟುಸಿರುಬಿಡುವ ಅತ್ತೆ ಮಾವಂದಿರಂಥ ಮಂದಿಯೇ ನೋಡಿದಲ್ಲೆಲ್ಲಾ ಕಂಡುಬಂದರೆ ನಿರಾಸೆಯಾಗದೆ ಇರುತ್ತದೆಯೇ? (ಉದಯ ಟಿವಿ ಧಾರಾವಾಹಿಗಳ ರೂಕ್ಷ ಪಾತ್ರಗಳು ಅಲ್ಲಿದ್ದವೋ ಇಲ್ಲವೋ ಗೊತ್ತಿಲ್ಲ!) ಇಷ್ಟೇ ಸಾಲದೆಂಬಂತೆ ’ಚಹಾ ವಿರಾಮ’ ಎಂದರೆ ಕೇವಲ ಚಹಾ ಕೊಡುವುದು ಎಂಥ ಪದ್ಧತಿ? ಗದಗಿನ ಲೋಕಪ್ರಸಿದ್ಧ ಬದನಿಕಾಯಿ ಭಜಿ ಇಲ್ಲದಿದ್ದರೆ ಹೋಗಲಿ, ಕೊನೆಯ ಪಕ್ಷ ಮಂಡಾಳವೋ, ಅಥವಾ ಮಿರ್ಚಿಯದೋ ಸರಬರಾಜು ಆಗಬಾರದೇ? ಮಿರ್ಚಿಯ ಖಾರ ಹೊರಗಿಂದ ಒಳಗೆ ಹೋಗಿದ್ದರೆ ಅವರೊಳಗಿನ ಖಾರ ಅವರ ಲೇಖನಗಳ ಮೂಲಕ ಹೀಗೆ ಹೊರಬರುತ್ತಿರಲಿಲ್ಲ. ಗದಗು ನನ್ನ ಹುಟ್ಟೂರಾದ್ದರಿಂದ ಮುಂದಿನ ಭೇಟಿಗಳಲ್ಲಿ ಬದನಿಕಾಯಿ ಭಜಿ ಇರಲೇಬೇಕೆಂದು ನಾನು ಈ ಮೂಲಕ ಆಗ್ರಹಿಸುತ್ತೇನೆ.

ಈ ವಾಗ್ವಾದಗಳಿಂದಾದ ಇನ್ನೊಂದು ಮಜಾ ಪರಿಣಾಮವೇನೆಂದರೆ, ಬ್ಲಾಗುಲೋಕದ ಸೆಲೆಬ್ರಿಟಿಗಳನ್ನು ಉದ್ಧರಿಸಿ ಪೋಸ್ಟುಗಳನ್ನು ಬರೆದವರೆಲ್ಲ ಈಗ ಸೆಲೆಬ್ರಿಟಿಗಳಾಗಿ ಹೊಮ್ಮಿದ್ದಾರೆ; ಆ ದೊಡ್ದವರ ಸಾಲಿನಲ್ಲಿ ಇವರೂ ಈಗ ನಿಂತಿದ್ದಾರೆ. ಈ ಬ್ಲಾಗಿಗರ ಕಾಟದ ಬಗ್ಗೆ ಪೋಸ್ಟು ಬರೆದವರ ಮೂಲ ಉದ್ದೇಶ ಅದೇ ಆಗಿದ್ದಿತು. ಆದರೆ as usual ಆಗಿ ನಮ್ಮ ಮಹಾಜನಗಳು ಆ ಧೂರ್ತತನವನ್ನು ಮನಗಾಣದೆ ಅವರ ಉದ್ದೇಶಪೂರ್ತಿಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ! ತಪ್ಪೇನಿಲ್ಲ ಬಿಡಿ. ಎಲ್ಲರೂ ಸೆಲೆಬ್ರಿಟಿಗಳಾದರೂ ಪರವಾಗಿಲ್ಲ. ಟ್ಯಾಬ್ಲಾಯ್ಡ್ ಬ್ಲಾಗುಗಳ ಹೊಸ ಬಿಸಿನೆಸ್ ಶುರುವಾಗುತ್ತದೆ. ಅಲ್ಲಿ ಯಾವ ಬ್ಲಾಗಿಗರು ಅತ್ಯಂತ ಟ್ರೆಂಡಿ ಉಡುಗೆ ಧರಿಸುತ್ತಾರೆ, ಯಾವ ಬ್ಲಾಗಿ ಯಾವ ಬ್ಲಾಗನಿಗೆ ಗಾಳ ಹಾಕುತ್ತಿದ್ದಾಳೆ ಎಂಬಿತ್ಯಾದಿ ತರಹೇವಾರಿ ಖಡಕ್ ಸುದ್ದಿಗಳನ್ನು ಗುದ್ದಬಹುದು. ಪಾಟೀಲರು, ಶ್ರೀ ಮತ್ತಿತರ ಹೋರಾಟಗಾರರಿಗೆ ನನ್ನ ಅಭಿನಂದನೆಗಳು.

ನಮ್ಮ ಪಾಟೀಲರು, ’ಇವೆಲ್ಲ ನನ್ನ ಸ್ವಂತ ಅಭಿಪ್ರಾಯ, ಜಜ್ ಮಾಡಲು ಹೋಗಬೇಡಿ’ ಎಂಬರ್ಥದ ಮಾತುಗಳನ್ನು ಆಡುತ್ತಲೆ ತಮ್ಮ ಎರಡನೆಯ ಪೋಸ್ಟ್‍ನಲ್ಲಿ ಅವರ ಅಭಿಪ್ರಾಯಗಳಿಗೆ ಭಿನ್ನ ಅಭಿಪ್ರಾಯ ಕೊಟ್ಟವರನ್ನೆಲ್ಲ ಗುಡಿಸಿಹಾಕಿ ’ಗುತ್ತಿಗೆದಾರರು’ ಎಂದು ಜರಿದಿರುವುದು ಸ್ವಲ್ಪ ಚೋದ್ಯವೇ. ಅಲ್ಲದೆ ಇನ್ನು ಹೆಚ್ಚಿನದೇನನ್ನೂ ಹೇಳಲು ನನ್ನಲ್ಲಿಲ್ಲ, (ನೀವೂ ಹೇಳದಿದ್ದರೆ ನಿಮ್ಮ ಆರೋಗ್ಯಕ್ಕೆ ಕ್ಷೇಮ, ಎಂದು ಕಂಸದಲ್ಲೂ), ಹೆದರಿಕೆ ಹುಟ್ಟಿಸುವ ವ್ಯಾಧಿಗಳ ಮೂಲಕ ಪ್ರಕಟವಾಗಿಯೂ ಹೇಳಿಬಿಟ್ಟಿದ್ದಾರೆ. ಹೀಗಾದರೆ ಹೇಗೆ? ಹಾಗಾಗುವುದು ಬೇಡ. ಜಗಳಗಳು ಬೇಕು; ವಾದಗಳಾದಷ್ಟೂ ನಾವು ಪ್ರಬುದ್ಧರಾಗ್ತೀವಿ; ನಮ್ಮ ಇಡೀ ಸಮಾಜವೇ ಒಂದು ರೀತಿಯ ‘Argumentation Crisis’ನಲ್ಲಿದೆ. ಎಲ್ಲದಕ್ಕೂ ಸುಮ್ಮನೆ ಹೂಂಗುಟ್ಟುವ conformance ನಮಗೆ ಬೇಡ. ಪ್ರಶ್ನೆಗಳನ್ನೆತ್ತುವ, ಪ್ರಶ್ನೆಗಳನ್ನೆದುರಿಸುವ ಮನೋಭಾವ ನಮ್ಮಲ್ಲಿ ಹೆಚ್ಚಾಗಬೇಕು. ಇಲ್ಲದಿದ್ದರೆ ನಾವು ನಿಂತಲ್ಲೆ ನಿಲ್ಲುತ್ತೇವೆ. ಅಲ್ಲದೆ ಬದುಕು ಬಹಳ ಸಪ್ಪೆಯಾಗುತ್ತದೆ.

[ನನ್ನ ಈ ಬರಹದಿಂದ ಯಾವುದಾದರೂ ವ್ಯಕ್ತಿಗೆ, ಅಲೌಕಿಕ ಶಕ್ತಿಗೆ, ಸಂಸ್ಥೆಗೆ, ಸಂವಿಧಾನಕ್ಕೆ, ನಿಮ್ಮ ಆತ್ಮೀಯ ಸಿನೆಮಾ ತಾರೆ, ಧಾರಾವಾಹಿ ಪಾತ್ರ, ಸೆಲೆಬ್ರಿಟಿ, ಸೆಲೆಬ್ರಿಟಿಗಳ ಸಾಕು ನರಿ ನಾಯಿ, ಅಥವಾ ಇನ್ನ್ಯಾವುದಕ್ಕಾದರೂ ಅಪಚಾರವಾಗಿದ್ದಲ್ಲಿ, ಈ ಕೂಡಲೆ ಹೋಗಿ ನಂದ ವರ್ಸಸ್ ನಂದಿತ ಸಿನೆಮಾ ನೋಡತಕ್ಕದ್ದು. ಪಾಟೀಲರನ್ನೂ ಜೊತೆಗೆ ಒಯ್ಯತಕ್ಕದ್ದು. ಹಾಗೆಯೇ ನಾನು ಅನುಮತಿಯಿಲ್ಲದೆ ಬಳಸಿಕೊಂಡ ಅನಾಮಧೇಯ ಚಾಳೀಸು ಹಾಗೂ ಬಕ್ಕತಲೆಗಳಿಗೆ ಧನ್ಯವಾದಗಳು. ಹಾಗೆಯೇ, ಇಷ್ಟುದ್ದ ಕುಟ್ಟಿದ್ದಕ್ಕೆ ಕ್ಷಮೆಯಿರಲಿ; ಮತ್ತೆ ಹಾಗೆ ಎಡೆಬಿಡದೆ ಕುಟ್ಟುವಾಗ ಆಗಿರಬಹುದಾದ ಖಗೂನಿಟ ಮಿಸ್ಟಿಕುಗಳನ್ನು ಸುಧಾರಿಸಿಕೊಂಡು ಓದಿದ್ದೀರೆಂದು (ಪೂರ್ತಿ ಓದಿದ್ದರೆ!) ಅಂದುಕೊಂಡಿದ್ದೇನೆ.]

ಇನ್ನೆಷ್ಟು ದಿನ ಹೀಗೆ

“ಇನ್ನೆಷ್ಟು ದಿನ ಹೀಗೆ?”
ಪಣ ತೊಟ್ಟವರ ಹಾಗೆ
ಫೋನಿನಲಿ ಮಾತು
ರಾತ್ರಿಗಳ ಭ್ರಾಂತು
ಸೋತ ಕಣ್ಣೆವೆ ಮುಚ್ಚಿದರೂ
ನಿದ್ದೆಗೆ ಕಸರತ್ತು
ಒಂದೆರಡು ಮೂರ್ನಾಕು ಐದಾರು ಏಳೆಂಟು
ಎಣಿಕೆಯೇ ಸಾಲದ ದೊಡ್ಡ ಕುರಿಹಿಂಡು
ಅರೆನಿದ್ದೆಯ ಕುರಿಗಳಿಗೂ
ಬೀದಿನಾಯಿಗಳ ಕುತ್ತು
ಹೊರಳಾಡಿ ಉರುಳಾಡಿ ಮುಲುಗುತ್ತ ತೆವಳುತ್ತ
ತುತ್ತತುದಿಯ ಮುಟ್ಟಿ ಪ್ರಪಾತಕ್ಕೆ ಜಾರಿದರೆ
ನೆಲೆಯೆಟುಕುವ ಮೊದಲೆ ಹಕ್ಕಿಗಳ ಗುನುಗು
ಪಕ್ಕದಲಿ ನೀ ಕೊಟ್ಟ ಟೈಂಪೀಸಿನ ಕೆಂಪು ಚುಂಚು.
ಕನಸಿಗೂ ತೂತು.

ಇನ್ನೆಷ್ಟು ದಿನ ಹೀಗೆ?
ಪಣತೊಟ್ಟವರ ಹಾಗೆ.

***

ಇದಕ್ಕೆ ಉತ್ತರ ಇನ್ನೊಮ್ಮೆ.

ಈ ಸಾಲಿನ ಕೆಳಗಿನದನ್ನು ಓದಬೇಡಿ.

ನಾನು ಈ ಬ್ಲಾಗುಗಳ ಲೋಕಕ್ಕೆ ಕಾಲಿರಿಸಿ ಕಂಡಾಪಟ್ಟೆ ದಿನಗಳಾಗಿವೆ. ೨೦೦೪ರ ಜುಲೈ ೩೧ರ ತೇದಿಯಂದು ನನ್ನ ಮೊದಲನೆಯ ಬ್ಲಾಗಿನ ಮೊದಲನೆಯ “ಹಲೋ ವರ್ಲ್ಡ” ಆಯ್ತು. ಏನೇನೋ ಬರೆದೆ. ಒಂದಷ್ಟು ಚೆನ್ನಾಗಿತ್ತು, ಒಂದಷ್ಟು ಕೆಟ್ಟದಾಗಿತ್ತು. ನಂತರ ಮತ್ತೊಂದು ಬ್ಲಾಗು. ಮತ್ತೊಂದು. ಮತ್ತೊಂದು. ಆಮೇಲೆ ಬ್ಲಾಗುಗಳನ್ನು finis ಮಾಡುತ್ತಲೂ ಬಂದೆ. ಇಂಗ್ಲಿಶ್, ಕನ್ನಡ, ಮಿಶ್ರಿತ… ಎಲ್ಲವೂ. ಕಾರಣವಿಲ್ಲದೆ ಶುರು ಮಾಡಿದ ಬ್ಲಾಗುಗಳನ್ನು ಏನೋ ಕಾರಣ ಕೊಟ್ಟುಕೊಂಡು ಬಂದು ಮಾಡಿದೆ. (ಓದುಗರಿಲ್ಲದ್ದು ಕಾರಣವಲ್ಲ.) ಅಥವಾ ಅಲ್ಲಿ ಏನೂ ಬರೆಯುತ್ತಿಲ್ಲ. ಮತ್ತೆ ಕಾರಣವಿಲ್ಲದೆ ಹೊಸ ಹೊಸ ಬ್ಲಾಗುಗಳನ್ನು ಶುರು ಮಾಡುತ್ತೇನೆ. ಕೆಲವು ಕಡೆ ಸ್ವನಾಮಧೇಯನಾಗಿ, ಕೆಲವು ಕಡೆ ಅನಾಮಧೇಯನಾಗಿ. ಕೆಲವು ಕಡೆ ಚಕೋರನಾಗಿ. ಚಕೋರ… ಒಂದೇ ಕಡೆ ಅನ್ನಿಸುತ್ತೆ.

ಆದರೆ ಇದನ್ನೆಲ್ಲ ಏಕೆ ಬರೆಯುತ್ತಿದ್ದೇನೆ. ಬರೆಯಲು ಬೇರೆ ಏನೂ ಇಲ್ಲದ್ದರಿಂದ ಅನ್ನಿಸುತ್ತೆ. ಇನ್ನೊಂದು ಕಾರಣವೆಂದರೆ ಈಗ ನನ್ನ ಒಂದು ಹಳೆಯ ಬ್ಲಾಗಿನಲ್ಲಿನ ಬರೆಹಗಳನ್ನು ತಿರುವಿ ಹಾಕುತ್ತಿದ್ದೆ. ಕೆಲವೊಂದು ಚೆನ್ನಾಗಿವೆ. ಒಂದು ರೀತಿ ಮಜಾ ಇದ್ದವು ಆ ದಿನಗಳು.

ಅವನ್ನೆಲ್ಲ ಓದಿ ಯಾಕೋ ಸಿಕ್ಕಾಪಟ್ಟೆ nostalgia ಆಗುತ್ತಿದೆ. ಆಗಿನಂತೆ ಬರೆಯಬೇಕು, ಹಂಗಿಲ್ಲದೆ, ವಿಚಾರ ಮಾಡದೆ.. ಅನ್ನಿಸುತ್ತದೆ. ಹೆಚ್ಚು ಹೆಚ್ಚು ಬರಿಯಬೇಕು ಅನ್ನಿಸುತ್ತದೆ. ಆದರೆ ಅದು ನನ್ನಿಂದ ಸಾಧ್ಯವಿಲ್ಲ ಎಂದೂ ಗೊತ್ತಿದೆ.

ಬ್ಲಾಗಿಗರ ಕೂಟ

ಅಯ್ಯೋ, ಎಲ್ಲರೂ ಸೇರ್ತಿದೀರ. ಅದೂ ನಮ್ಮ ಮನೆ ಹತ್ತಿರ. ಆದ್ರೆ ನಾನು ಎಲ್ಲೋ ದೂರ ಇದೀನಿ, ಛೇ! I only hope there’ll be more such meetings once I am back from my exile. ಅಲ್ಲಿಯ ತನಕ ನಾನು Dire Straitsನ So Far Away ಹಾಡು ಕೇಳ್ತಾ ಕಾಲ ಕಳೀತೀನಿ. ಆ ಬ್ಯಾಂಡ್‍ನ ಹೆಸರು ನನ್ನ ಸಧ್ಯದ ಪರಿಸ್ಥಿತಿಯನ್ನು ಸರಿಯಾಗಿ ಬಿಂಬಿಸುತ್ತದೆ.

ಇರಲಿ. ಆ ಕೂಟ ಆದಮೇಲೆ ಎಲ್ಲರ ರಿಪೋರ್ಟ್‍ಗಳನ್ನ ಓದ್ತೀನಿ. ಅವನ್ನೋದಿ ಪರಾರ್ಥಕವಾದ ಒಂದು ಆನಂದ ಅನುಭವಿಸ್ತೀನಿ.

ಶಿವರಾತ್ರಿಯ ಪೂಜಾ ಪ್ರೊಗ್ರ್ಯಾಮ್

ಶಿವರಾತ್ರಿ, ಕೃಷ್ಣ ಜನ್ಮಾಷ್ಟಮಿಗಳ (ಹಾಗೂ ಶೈವ, ವೈಷ್ಣವರ) ಬಗ್ಗೆ ನಮ್ಮಲ್ಲೊಂದು ಹಳೆಯ ಜೋಕ್ ಇದೆ. ಶಿವರಾತ್ರಿಯ ದಿನ ಶೈವರು ಉಪವಾಸ ಮಾಡುತ್ತಾರೆ. ಆದರೆ ವೈಷ್ಣವರು ಪುಷ್ಕಳವಾಗಿ ಹೋಳಿಗಿ ಹೊಡೆಯುತ್ತಾರೆ. ಅದಕ್ಕೆ ವೈಷ್ಣವರ ವಿವರಣೆ – “ಅಲ್ಲರೀ, ಶಿವ ಹುಟ್ಟಿದ್ದು ನಮಗ ಸಂತೋಷ ಅಲ್ಲೇನು? ಅದಕ್ಕ ಹೋಳಿಗಿ ತಿಂದು ಅಚರಿಸತೀವಿ.” ಅದಕ್ಕೆ ಶೈವನೊಬ್ಬ ಹೊಳ್ಳಿ – “ಮಕ್ಕಳ್ರ್ಯಾ, ಹಂಗಾರ ಕೃಷ್ಣ ಹುಟ್ಟಿದ್ದಕ್ಕ ನಿಮಗ ದುಃಖ ಆಗಿರತದೇನು? ಅವತ್ತ್ಯಾಕ ಉಪವಾಸ ಮಾಡತೀರಿ?”, ಅಂದು ಮುಯ್ಯಿ ತೀರಿಸಿಗೊಂಡನಂತೆ.

ಹೀಗೆ ಇದನ್ನು ನೆನೆಯುತ್ತ ಗೆಳೆಯ ಎನ್‍ಕೆಕೆಗೆ ಪತ್ರ ಬರೆದು ಕೇಳಿದೆ – “ಹೋಳಿಗಿ ತಿಂದೀ?” ಅದಕ್ಕೆ ಅವನು – “ಛೇ! ಏನು ಅಪದ್ಧ ಮಾತಾಡತೀಯೋ? ಉಪವಾಸದ ದಿನ ಹೋಳಿಗಿ ತಿಂತಾರೇನು?” ಎಂದು ಪಡಿನುಡಿದ. ನಾನು ಅವನನ್ನು ಹಾಗೆ ಕೇಳಿದ್ದಕ್ಕೂ ಅವನು ಅಂದು ಸಂಜೆ ಹೋಳಿಗಿ ತಿಂದದ್ದಕ್ಕೂ ತಾಳೆಯಾಯಿತು. ಮಾರನೆ ದಿನ ನನ್ನನ್ನು ಪ್ರವಾದಿ ಎಂದು ಜರಿದ.

ಅದೂ ಇರಲಿ. ನಿನ್ನೆ ಸಂಜೆ ಕೆಲಸದಿಂದ ವಾಪಸ್ ಬಂದ ಮೇಲೆ ನನ್ನ ಸಹವಾಸಿಯೊಬ್ಬ – “ಹಿಂದು ಸ್ಟೂಡೆಂಟ್ಸ್ ಅಸೋಸಿಯೇಶನ್‍ನವರು ಶಿವರಾತ್ರಿ ಪೂಜೆ ಇಟ್ಕೊಂಡಿದಾರೆ. ಬರ್ತೀಯಾ?” ಎಂದ. ಊರಲ್ಲಿದ್ದಿದ್ದರೆ ನಾನು “ಚಾನ್ಸೇ ಇಲ್ಲ,” ಎಂದುಬಿಡುತ್ತಿದ್ದೆ. ಆದರೆ ಇಲ್ಲಿ ಹೊರಬೀಳುವ ಅವಕಾಶಗಳೇ ಕಡಿಮೆಯಾದ್ದರಿಂದ ಹೋದರಾಯಿತು ಎಂದುಕೊಂಡು ಹೊರಟೆ. ಮೇಲಾಗಿ ಅಲ್ಲಿ ಯಾರದಾದರೂ ಪರಿಚಯವಾದರೂ ಆದೀತು ಎಂಬ ಹಂಬಲವೂ ಇತ್ತು. ಕ್ಯಾಂಪಸ್ಸಿಗೆ ಹೋಗಿ ಆ “ಮಹಾ ಶಿವರಾತ್ರಿ ಪೂಜಾ ಪ್ರೋಗ್ರ್ಯಾಮ್” ನಡೆಯುತ್ತಿದ್ದಂಥ ಜಾಗಕ್ಕೆ ಹೋಗುವಷ್ಟೊತ್ತಿಗೆ ಸಾಕಷ್ಟು ಜೊತೆ ಬೂಟುಗಳು ಆ ಕೊಠಡಿಯ ಹೊರಗೆ ನೆರೆದಿದ್ದುವು. ಒಳಗೆ ಹೋದರೆ ಒಂದು ೩೦-೪೦ ಜನ ನೆಲದ ಮೇಲೆ ಕೂತಿದ್ದರು. ನಾನು ಹೋಗಿ ಎಲ್ಲರಿಗಿಂತ ಹಿಂದೆ ಒಂದು ಕುರ್ಚಿಯಲ್ಲಿ ಕುಳಿತೆ. ಒಬ್ಬ ತಾರಕ ಸ್ಥಾಯಿಯಲ್ಲಿ ಸಂಸ್ಕೃತದಲ್ಲಿ ಮಂತ್ರೋಚ್ಚಾರಣೆ ಮಾಡುತ್ತಿದ್ದ. ಬಹಳ ಮಾಡಿ ಅಂವ ಅಯ್ಯಂಗಾರ್ಯರವನಿರಬೇಕು. ಮಲಯಾಳರಂತೆ ಕಾಣುವ ಇನ್ನೊಬ್ಬ ಆ ಉದ್ಘೋಷಣೆ ನಡೆದಷ್ಟೂ ಹೊತ್ತು ಒಂದು ಪುಟ್ಟ ಶಿವಲಿಂಗಕ್ಕೆ ಜಲಾಭಿಷೇಕ ಮಾಡುತ್ತಿದ್ದ. ಉದ್ಘೋಷಿಸುತ್ತಿದ್ದವನೋ ಮುಗಿಸುತ್ತಲೇ ಇಲ್ಲ. ಹಾಗೇ ಪುಟಗಳನ್ನು ತಿರುವುತ್ತ ಓದುತ್ತಲೇ ಇದ್ದಾನೆ. ಪಾಪ ಇನ್ನೊಬ್ಬನ ಬಟ್ಟಲಿನಲ್ಲಿರುವ ನೀರು ಮುಗಿದು ಅವನು ಮೇಲಿಂದ ಮೇಲೆ ಬಾಟಲಿಯಿಂದ ಬಟ್ಟಲಿಗೆ ನೀರು ತುಂಬಿಸಿಕೊಳ್ಳಬೇಕಾಯಿತು. ಕೊನೆಗೆ ಬಾಟಲಿನಲ್ಲಿನ ನೀರು ಮುಗಿಯುವ ಹಂತಕ್ಕೆ ಬಂತೇನೋ, ಓದುತ್ತಿದ್ದವನ ಕಿವಿಯಲ್ಲಿ ಏನೋ ಉಸುರಿದ. ಅದಕ್ಕೋ ಅಥವಾ ಅವನ ಬಳಿಯಿದ್ದ ಹಾಳೆಗಳು ಮುಗಿದವೋ, ಒಟ್ಟು ಸುಮಾರು ೪೦-೪೫ ನಿಮಿಷಗಳ ಕಾಲ ನಡೆದ ಪೂಜೆ ಸಂಪನ್ನವಾಯಿತು. ಉದ್ಘೋಷಕ ಪಾಪ ಸುಸ್ತಾಗಿದ್ದ. ಆಗದೇ ಏನು. ಅದರಲ್ಲೂ ಅವನ ಮಹಾಪ್ರಾಣಗಳು ಅತಿಪ್ರಾಣಗಳಾಗಿದ್ದುವು. ಒಂದೊಂದು ಮಹಾಪ್ರಾಣಕ್ಕೂ ಅವನಿಗೆ ಅಲ್ಪಪ್ರಾಣಿಗಳ ೮ ಪಟ್ಟು ಉಸಿರು ಬೇಕಾಗುತ್ತಿತ್ತು. ಘಟ್ಟಿಸಿ ಘಟ್ಟಿಸಿ ಅಂದೇ ಅಂದ.

ಇಷ್ಟಾದ ಮೇಲೆ “Now we will chant the 108 names of shiva. Just repeat after him,” ಎನ್ನಲಾಯಿತು. ಮತ್ತೆ ಅವನ ಪ್ರಾಣಾಂತಿಕ ಉಚ್ಚಾರ ಶುರುವಾಯಿತು. ಅವನು ಹೇಳಿದ್ದನ್ನು ಎಲ್ಲರೂ ತಮಗೆ ತಿಳಿದಂತೆ ಪುನರಾವರ್ತಿಸಿದರು. ಇದು ನಡೆಯುವಾಗ ನನಗೆ ಮತ್ತೊಂದೇನೋ ನೆನಪಾಯಿತು. ಅದನ್ನೂ ಹೇಳಿಯೇ ಬಿಡುತ್ತೇನೆ: ನಮ್ಮ ಊರ ಮನೆಯಲ್ಲಿ ಪಂಡರಾಪುರಕ್ಕೆ ದಿಂಡಿ ಹೋಗುವ ಜನ ಸೇರುವುದು ವಾಡಿಕೆ. ನಾನು ಸಣ್ಣವನಿದ್ದಾಗ ನಮ್ಮೂರಿಂದ ಪಂಢರಾಪುರಕ್ಕೆ ಹೋಗುವ ಒಂದಷ್ಟು ಜನ ನಮ್ಮಲ್ಲಿ ಸೇರಿ ಭಜನೆ ಮಾಡುತ್ತಿದ್ದರು. ನಮ್ಮ ಚಿಕ್ಕಪ್ಪ ಅವರಿಗೆ ಭಜನೆ ಹೇಳಿಕೊಡುತ್ತಿದ್ದ. ಅವನಂದಂತೆ ಇವರು ಅನ್ನುತ್ತಿದ್ದರು. ಅವನು, “ಋಷಿ ಮುನಿ ಸಿದ್ಧ,” ಎಂದರೆ ಇವರು, “ರುಶಿ ಮನಿ ಸಿದ್ದಾ,” ಎನ್ನುತ್ತಿದ್ದರು. ಚಿಕ್ಕಪ್ಪನಿಗೆ ಕೋಪ ಬಂದು, “ಸರಿಯಾಗಿ ಅನ್ನ್ರ್ಯೋ! ’ಅಚಿ ಮನಿ ಸಿದ್ದಾ’ ಅಂಧಂಗ ಮಾಡಬ್ಯಾಡ್ರಿ,” ಎಂದು ಬೈಯ್ಯುತ್ತಿದ್ದನು. ಇದನ್ನೆಲ್ಲ ಯೋಚನೆ ಮಾಡುತ್ತ ನನ್ನಷ್ಟಕ್ಕೆ ಮುಗುಳ್ನಗುತ್ತ ಕೂತ್ತಿದ್ದರೆ “೧೦೮ ನೇಮ್ ಚಾಂಟಿಂಗ್” ಇನ್ನೂ ಮುಗಿದಿರಲಿಲ್ಲ. ೧೦೮ಕ್ಕಿಂತ ಸ್ವಲ್ಪ ಜಾಸ್ತಿಯೇ ಇದ್ದಂತೆನ್ನಿಸಿತು. ನಾನೇನು ಎಣಿಸಲು ಹೋಗಲಿಲ್ಲ. ಆ ಹೆಸರುಗಳಲ್ಲಿ ಕೆಲವೊಂದು ಬಹಳ generic ಎನ್ನಿಸಿದವು. ಉದಾಹರಣೆಗೆ, ಭಕ್ತವತ್ಸಲ. ಅಲ್ಲ, ಎಲ್ಲ ದೇವರುಗಳೂ ತಾವು ಭಕ್ತವತ್ಸಲರೆಂಬ ಭ್ರಮೆಯಲ್ಲಿ ಆನಂದತುಂದಿಲರಾಗಿರುತ್ತಾರೆ. ಶಿವನಿಗೇ ನಿರ್ದಿಷ್ಟವಾಗಿ ಹೊಂದುವಂಥ ನಾಮಗಳನ್ನು ಬಳಸಬೇಕು ಎಂದು ಯೋಚಿಸುತ್ತಿದ್ದೆ.

ಅದು ನಡೆಯುವಾಗಲೇ ಇನ್ನೊಬ್ಬ ಮಂಗಳಾರತಿ ತಟ್ಟೆ ತೆಗೆದುಕೊಂಡು ಬಂದ. ನಾನು ಪೂರಾ ಹಿಂದಿನ ಸಾಲಿನಲ್ಲಿ ಕೂತುಕೊಂಡಿದ್ದರಿಂದಲೂ ನನಗೆ ಹೇಗಿದ್ದರೂ ಟಾಯಂಪಾಸ್ ಆಗುತ್ತಿರಲಿಲ್ಲವಾದ್ದರಿಂದಲೂ ಮಂದಿ ಮಂಗಳಾರತಿ ತೆಗೆದುಕೊಳ್ಳುವ ಬಗೆಗಳನ್ನು ನೋಡುತ್ತ ಕೂತೆ. ಎಷ್ಟು ಜನರಿದ್ದರೋ ಅಷ್ಟು ಮಂಗಳಾರತಿ ತೆಗೆದುಕೊಳ್ಳುವ ಬಗೆಗಳು! ಕೆಲವರು ಮಂಗಳಾರತಿ ತಟ್ಟೆಗೆ ಕಾಲು ಬಿದ್ದವರ ಹಾಗೆ ಮಾಡಿದರು; ಕೆಲವರು ಎರಡೂ ಕೈಗಳನ್ನು ತಟ್ಟೆಯ ಹತ್ತಿರ ಗಬಕ್ಕನೆ ಒಯ್ದು ದೀಪವನ್ನು ನಂದಿಸುವವರ ಹಾಗೆ ಮಾಡಿದರು; ಕೆಲವರು ಮಂಗಳಾರತಿಯ ಮೇಲೆ ಕೈಗಳನ್ನೊಯ್ದು ಅವನ್ನು ರೆಕ್ಕೆಗಳಂತೆ ಫಡಫಡಿಸಿದರು. ಕೆಲವರು ಮಂಗಳಾರತಿ ತೆಗೆದುಕೊಂಡು ಕೈಗಳನ್ನು ಹಣೆಗೆ ಹಚ್ಚಿಕೊಂಡರು; ಕೆಲವರು ಕಣ್ಣಿಗೆ ಹಚ್ಚಿಕೊಂಡರು; ಕೆಲವರು ತಲೆಯ ಹಿಂದೆ; ಕೆಲವರು ಕುತ್ತಿಗೆಯ ಹಿಂದೆ; ಹೀಗೆ.

ಅಷ್ಟರಲ್ಲಿ ಚಾಂಟಿಂಗ್ ಮುಗಿಯಿತು. If anybody wants to sing some bhajans, you can sing,” ಎನ್ನಲಾಯಿತು. ಅದೃಷ್ಟವಶಾತ್ ಯಾರೂ ಸಿಂಗಲಿಲ್ಲ. ಪ್ರಸಾದ ತಿಂದು ಮರಳಿ ಬಂದೆವು.