ಮೊನ್ನೆ ರವಿವಾರ ಬಸವನಗುಡಿಯಲ್ಲಿ ನಡೆದ ಬ್ಲಾಗಿಗರ ಕೂಟ ಅತ್ಯಂತ ಯಶಸ್ವೀ ಕೂಟ ಎಂದು ನಾನು ಈ ಮೂಲಕ ಘೋಷಿಸುತ್ತಿದ್ದೇನೆ. ಏಕೆಂದರೆ ಅದರ ಬಗ್ಗೆ ಜಗಳಗಳಾಗುತ್ತಿವೆ. ಯಾವುದೇ ವ್ಯಕ್ತಿಯಾಗಲಿ, ಸಂಸ್ಥೆಯಾಗಲಿ ಅಥವಾ ವಿದ್ಯಮಾನವಾಗಲಿ ಸಕ್ಸೆಸ್ಫ಼ುಲ್ ಆಗುವುದು ಯಾವಾಗ ಎಂದರೆ ಅದು ಜನರಲ್ಲಿ ಆಸಕ್ತಿ ಮೂಡಿಸುವುದಷ್ಟೆ ಅಲ್ಲದೆ, ಅದನ್ನು ಉಳಿಸಿಕೊಂಡಾಗ. ಯಾರನ್ನೋ ಬರಿ ಹೊಗಳಿದರೆ ಅಥವಾ ತೆಗಳಿದರೆ ಅವರ ಬಗೆಗಿನ ಆಸಕ್ತಿ ಕಾಲಕ್ರಮದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಅತ್ಯಂತ ಯಶಸ್ವೀ ವ್ಯಕ್ತಿಗಳ ಉದಾಹರಣೆಗಳನ್ನು ಗಮನಿಸಿ: ಪಟಕ್ಕನೆ ನಿಮ್ಮ ಮನಸ್ಸಿಗೆ ತೋಚುವ ಹೆಸರುಗಳನ್ನೇ ತೊಗೊಳ್ಳಿ; ಶಾಹ್ ರುಖ್ ಖಾನ್ ಹೆಚ್ಚು ಯಶಸ್ವೀ ವ್ಯಕ್ತಿಯೋ ಅಲ್ಬರ್ಟ್ ಐನ್ಸ್ಟೈನ್ನೋ; ಉತ್ತರ ಅತ್ಯಂತ ಸ್ಪಷ್ಟ; ಬೆಳಕಿನಷ್ಟು ನಿಚ್ಚಳ. ಇದನ್ನೇ ಸಾರ್ವತ್ರೀಕರಿಸಿ ನೋಡಿ. ಅತ್ಯಂತ ಸಕ್ಸೆಸ್ಫುಲ್ ವ್ಯಕ್ತಿಗಳೆಂದರೆ ಸಿನೆಮಾ ತಾರೆಯರು ಮತ್ತು ಕ್ರಿಕೆಟಿಗರು. ಅವರು ಒಂದು ಕೆಟಗರಿ. ಇನ್ನು ವಿಜ್ಞಾನಿಗಳು, ಸಂತರು, ತುಡುಗರು, ಕೊಲೆಗಡುಕರು ಇನ್ನೊಂದು ಕೆಟಗರಿ. ಪೇಜ್ ೩ಯೇ ಜಗತ್ತು. ಗಾಸಿಪ್ಗಳು, ಪರಸ್ಪರ ದೋಷಾರೋಪಣೆ, ವೈಯಕ್ತಿಕ ವಿಚಾರಗಳ ಪ್ರಸ್ತಾಪ, ಇವೆಲ್ಲ ಇಲ್ಲದಿದ್ದರೆ ಯಶಸ್ಸು ಚಲಾವಣೆಯಲ್ಲಿ ಉಳಿಯುವುದಿಲ್ಲ. ಆದುದರಿಂದ ಮೊದಲಿಗೆ ನಾನು – ಸಂಘಟಕರ ವೈಯಕ್ತಿಕ ಪರಿಚಯ ನನಗಿಲ್ಲ – ’ಪ್ರಣತಿ’ ಛಾವಣಿಗೆ ಅಭಿನಂದನೆ ಕೋರುತ್ತೇನೆ.
ಹೀಗಿರುವಾಗ ಸಂತೋಷಕುಮಾರರ ಪೋಸ್ಟನ್ನು ಓದಿದಾಗ ನನಗೆ ಸ್ವಲ್ಪ ಖುಷಿಯೇ ಆಯಿತು. ಲಲಲ ಎಂದು ಗುನುಗುತ್ತ ಬಾಯಿ ಚಪ್ಪರಿಸಿದೆ. ಅವರು ಜನಪ್ರಿಯವಲ್ಲದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ನೋಡಿ ನಾನು ಕಾತರದಿಂದ ಅದಕ್ಕೆ ಒದಗುವ ಗತಿಯನ್ನು ಕಾಯುತ್ತ ಕೂತೆ. ಅಲ್ಲಿಯವರೆಗೆ ಶ್ರೀಯವರ ರಿಪೋರ್ಟನ್ನೊಳಗೊಂಡಂತೆ ಒಂದೆರಡು ಉತ್ಸಾಹಭರಿತ ಅಭಿಪ್ರಾಯಗಳನ್ನೋದಿದ್ದೆ. ಸಂತೋಷ್ ಅವರಿಗಾದ ನಿರಾಶೆಯಿಂದ ನನಗೆ ಸಂತೋಷವೇ ಆಯಿತು (ಅದರಲ್ಲಿನ ಎಷ್ಟೋ ಅಂಶಗಳು ನನಗೆ ಅನ್ರೀಸನೆಬಲ್ ಎಂದು ತೋರಿದರೂ). ನಂತರ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನೂ ಓದಿದೆ. ಸಂತೋಷ್ ಅವರ ನಂತರದ ಪ್ರತಿಕ್ರಿಯೆಯ ಪೋಸ್ಟನ್ನೂ ಓದಿದೆ. ಆದರೆ ಆ ಪೋಸ್ಟನ್ನು ಓದಿ ನನಗೆ ಮೊದಲಿನಂತೆ ಸಂತಸವಾಗಲಿಲ್ಲ. ಅದರ ಬಗ್ಗೆ ಮುಂದೆ ಹೇಳುತ್ತೇನೆ. ಇದೆಲ್ಲದರ ಬಗ್ಗೆ ಒಬ್ಬ ’ಸೆಲೆಬ್ರಿಟಿ’ ಬ್ಲಾಗರ್ ಫ಼್ರೆಂಡ್ ಜೊತೆಗೂ ಮಾತಾಡಿದೆ. ಅವರೂ ಈ ಎಲ್ಲ ವಿದ್ಯಮಾನಗಳಿಂದ ತುಂಬಾ ಹುರುಪಾಗಿದ್ದರು. ನಾನೂ ಮತ್ತಷ್ಟು ಹುರುಪಾಗಿ, ಆ ಕೂಟದಲ್ಲಿ ಭಾಗವಹಿಸಿರದಿದ್ದರೂ ಈ ಕಾಮೆಂಟರಿ ಬರೆಯುತ್ತಿದ್ದೇನೆ. ಇದನ್ನು ನಾನು ತಮಾಷೆ ಹಾಗೂ ಗಾಂಭೀರ್ಯವನ್ನು ಯಾರಿಗೂ ಗೊತ್ತಾಗದಂತೆ ಹದವಾಗಿ ಮಿಶ್ರಣ ಮಾಡಿ ಬರೆಯುತ್ತಿದ್ದೇನೆ. ಇದರಿಂದ ಓದುಗರಿಗೆ ಅನುಕೂಲವಾಗಲಿಕ್ಕಿಲ್ಲ. ನನಗಂತೂ ಅನುಕೂಲವಿದೆ: ನಾನು ತಮಾಷೆಗೆ ಬರದದ್ದನ್ನು ಯಾರಾದರೂ ಹೊಗಳಿದರೆ, ಹೌದು, ಅದು ಅತ್ಯಂತ ಘನಿಷ್ಠ ಸಂಗತಿ ಎನ್ನುತ್ತೇನೆ; ಇನ್ನು ನಾನು ಬರೆದ ಏನನ್ನೋ ಓದಿ ಯಾರಾದರೂ ಇರಿಟೇಟ್ ಆದರೆ, ಅದು ಕೇವಲ ತಮಾಶೆ ಎಂದುಬಿಡುತ್ತೇನೆ.
ಸಂತೋಷ್ ಅವರು ಅನವಶ್ಯಕವಾಗಿ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಕೆಲವರು ತಕರಾರು ತೆಗೆದಿದ್ದಾರೆ. ನಾನು ಇದನ್ನು ಒಪ್ಪೋದಿಲ್ಲ. ವ್ಯಕ್ತಿಗಳ ಉಡುಗೆ, ಭಾಷೆ, ರೂಪ, ಮಾತು ಇವೇ ಮೊದಲಾದವುಗಳ ಬಗ್ಗೆ ಪಟಕ್ಕನೆ ಜಜ್ ಮಾಡುವುದು, ಪೂರ್ವಗ್ರಹ ಬೆಳೆಸಿಕೊಳ್ಳುವುದು ನಮ್ಮ ಸ್ವಭಾವ. ಸ್ವಭಾವ ಸ್ವಾಭಾವಿಕ. ಸ್ವಾಭಾವಿಕವಾದದ್ದು ಹೇಗೆ ಅನವಶ್ಯಕವಾದೀತು? ಮತ್ತು ಅವರು ಹೇಳಿರುವ ಅಂಶಗಳು – ಚಡ್ದಿ ಧರಿಸಿದ್ದ ಬ್ಲಾಗರ್, ಬೋಳುತಲೆಯ ಮೇಲಿನ ಚಾಳೀಸು – ಎದ್ದು ಕಾಣಿಸುವಂಥವು. ಅವನ್ನು ನಾವು ಬಿಟ್ಟೇವೆ? ಆದರೆ ಅವರ ತಕರಾರುಗಳ ಬಗ್ಗೆ ನನ್ನ ತಕರಾರು ಬೇರೆ ಇದೆ: ಅವರ ಪ್ರಶ್ನೆಗಳು ಅತ್ಯಂತ ಸರಳವಾಗಿವೆ; ಅವರಿಗೆ ಅದು ಹೇಗೆ ಉತ್ತರ ಗೊತ್ತಾಗಿಲ್ಲವೋ ಏನೋ. ಚಡ್ದಿ ಹಾಕಿಕೊಂಡು ಒಬ್ಬರು ಬಂದಿದ್ದರು ಎಂದರೆ ಅವರು ಖರೆ ಬ್ಲಾಗರ್. ಬ್ಲಾಗಿಂಗ್ ಎನ್ನುವುದು ಅರೆಬರೆ ಸಾಹಿತ್ಯವಲ್ಲವೆ? ಹೀಗಾಗಿ ಚಡ್ಡಿ ಅತ್ಯಂತ ಪ್ರಸ್ತುತವಾದ ಉಡುಪು. ಅಲ್ಲದೇ ಚಡ್ಡಿ ಹಾಕಿಕೊಂಡು ಆರಾಮಶೀರ ಕೂತು ಬರೆಯುವ ಅನುಭವ ಸಂತೋಷ ಅವರಿಗೆ ಇಲ್ಲವೆಂದು ತೋರುತ್ತದೆ. (ನಾನಿದನ್ನು ಚಡ್ಡಿ ಹಾಕಿ ಕೂತೇ ಬರೆಯುತ್ತಿದ್ದೇನೆ.) ಇಲ್ಲದ್ದಿದ್ದರೆ ಅವರು ಅದನ್ನು ಪ್ರಶ್ನಿಸುತ್ತಿರಲಿಲ್ಲ. ಚಡ್ದಿ ಹಾಕಿಕೊಂಡು ಬ್ಲಾಗಿಸಲಿ, ಅಲ್ಲಿಯೂ ಹಾಗೇ ಬರಬೇಕೇ ಎಂದರೆ, ಅವರು method blogger (method actor ಥರ) ಎನ್ನುತ್ತೇನೆ. ಅಲ್ಲದೇ ಜುಬ್ಬಾ, ಜೀನ್ಸ್ ಪ್ಯಾಂಟು, ಬಗಲಲ್ಲಿ ಜೋಳಿಗೆ, ಕುರುಚಲು ಗಡ್ದ ಬಿಟ್ಟುಕೊಂಡು ಬರಲು ಬ್ಲಾಗರುಗಳೇನು ನವ್ಯ ಸಾಹಿತಿಗಳೆ?
ಇನ್ನೊಬ್ಬರ ಕನ್ನಡಕ ತಲೆಯೇರಿ ಕುಳಿತಿತ್ತಂತೆ. ಇದು ಮೇಲ್ನೋಟಕ್ಕೆ ಸ್ವಲ್ಪ ಅಸಮಂಜಸ ಎನ್ನಿಸಿದರೂ, ಸರಿಯಾಗಿ ವಿಶ್ಲೇಷಿಸಿದರೆ ಸುಲಭವಾಗಿ ಬಗೆಹರಿಯುವ ಸಮಸ್ಯೆ. ಮೊದಲಿಗೆ ಚಾಳಶಿಯ ಸ್ವಾಭಾವಿಕ ಗುಣವನ್ನು ಪರಿಗಣಿಸೋಣ. ಅದೆಂದರೆ ಕೆಳಗೆ ಜರಿಯುವುದು. ಮೂಗಿನ ಮೇಲೆ ಕೂಡದೆ ಕೆಳಗೆ ಜರಿಯುತ್ತಿರುತ್ತದೆ; ಅದನ್ನು ಮೇಲೆ ಮೇಲೆ ಎಳೆದು ಎಳೆದು ಹಾಕುತ್ತಿರುತ್ತಾರೆ ಪಾಪ. ಹೆಚ್ಚೂಕಡಿಮೆಯಾದರೆ ಕೆಳಗೇ ಬಿದ್ದು ಹೋಗುತ್ತದೆ. ಹೀಗಿದ್ದಾಗ ಆ ಚಾಳಶಿ ತಲೆ ಕಣ್ಣು ಹಣೆ ಕೂದಲು ಎಲ್ಲ ದಾಟಿ ತಲೆಯ ಮೇಲೆ ಹೇಗೆ ಹೋಯಿತು. ಹಾಂ.. ಕೂದಲು? ಕೂದಲೆಲ್ಲಿದೆ? ಅದೇನಾಗಿರಬೇಕೆಂದರೆ ಸ್ಟೇಜಿನ ಮೇಲೆ ಭಾಷಣಕಾರರು ಜವಾಬ್ದಾರಿ, ಸಾಂಸ್ಕೃತಿಕ ಮಹತ್ವ, ಸಂಕ್ರಮಣದ ಈ ಕಾಲಘಟ್ಟ ಮೊದಲಾದುವುವನ್ನು ಝಳಪಿಸುವಾಗ ಹಾಗೇ ಅಕಸ್ಮಾತ್ತಾಗಿ ಚಾಳಶಿಯ ವ್ಯಕ್ತಿಗೆ ಸಣ್ಣಂಗೆ ನಿದ್ದೆ ಬಂದು ತಲೆ ಹಿಂದೆ ಕುರ್ಚಿಗೊರಗಿಸಿರಬೇಕು. ಮೂಗಿನ ಏರಕಲು ರಸ್ತೆಗಿಂತ ಥಳಥಳನೆ ಹೊಳೆಯುತ್ತಿರುವ ಬಟಾಬಯಲು ಇಳಿಜಾರಿನ ತಲೆ ನಮ್ಮ ಚಾಳೀಸಿಗೆ ಆಕರ್ಷಣೀಯವಾಗಿ ಕಂಡದ್ದರಲ್ಲಿ ಯಾವುದೇ ಚಮತ್ಕಾರವಿಲ್ಲ.
ಅದೆಲ್ಲ ಇರಲಿ. ಸಂತೋಷ್ ಅವರಿಗೆ ಆದ ನಿರಾಸೆಯ ಕಾರಣಗಳನ್ನೂ ಯಾರೂ ಪೂರ್ತಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ. ನೀಲಿ ಚೌಕಡಿಯ ತುಂಬುತೋಳಿನ ಶರಟು (ಚಹಾದ ವೇಳೆಯಲ್ಲಿ ತೋಳುಗಳಿಗೆ ಒಂದೆರಡು ಮಡಿಕೆ ಹಾಕಿದ್ದರೆನ್ನಿ), ಬ್ರೌನ್ ಪ್ಯಾಂಟು ಹಾಕಿಕೊಂಡು, ಮಸ್ತ ಪೈಕಿ ಸೇಂಟು ಹೊಡೆದುಕೊಂಡು ಬಂದ ಅವರನ್ನು ಜನರು ಗಮನಿಸಲೇ ಇಲ್ಲ. ಅದೂ ಹೋಗಲಿ. ಟೀನಾ, ಚೇತನಾ, ಜೋಗಿ ಇಂಥ ಬ್ಲಾಗುಲೋಕದ ಅಮಿತಾಭ್ ಬಚ್ಚನ್, ಶಾಹ್ ರುಖ್ ಖಾನ್, ದೀಪಿಕಾ ಪಡುಕೋಣೆಗಳನ್ನು ನೋಡಲು ಬಂದ ಅವರಿಗೆ, ನಮ್ಮ ಈ -ಟಿವಿಯ ಕನ್ನಡ ಧಾರಾವಾಹಿಗಳ ಸದಾ ನಿಟ್ಟುಸಿರುಬಿಡುವ ಅತ್ತೆ ಮಾವಂದಿರಂಥ ಮಂದಿಯೇ ನೋಡಿದಲ್ಲೆಲ್ಲಾ ಕಂಡುಬಂದರೆ ನಿರಾಸೆಯಾಗದೆ ಇರುತ್ತದೆಯೇ? (ಉದಯ ಟಿವಿ ಧಾರಾವಾಹಿಗಳ ರೂಕ್ಷ ಪಾತ್ರಗಳು ಅಲ್ಲಿದ್ದವೋ ಇಲ್ಲವೋ ಗೊತ್ತಿಲ್ಲ!) ಇಷ್ಟೇ ಸಾಲದೆಂಬಂತೆ ’ಚಹಾ ವಿರಾಮ’ ಎಂದರೆ ಕೇವಲ ಚಹಾ ಕೊಡುವುದು ಎಂಥ ಪದ್ಧತಿ? ಗದಗಿನ ಲೋಕಪ್ರಸಿದ್ಧ ಬದನಿಕಾಯಿ ಭಜಿ ಇಲ್ಲದಿದ್ದರೆ ಹೋಗಲಿ, ಕೊನೆಯ ಪಕ್ಷ ಮಂಡಾಳವೋ, ಅಥವಾ ಮಿರ್ಚಿಯದೋ ಸರಬರಾಜು ಆಗಬಾರದೇ? ಮಿರ್ಚಿಯ ಖಾರ ಹೊರಗಿಂದ ಒಳಗೆ ಹೋಗಿದ್ದರೆ ಅವರೊಳಗಿನ ಖಾರ ಅವರ ಲೇಖನಗಳ ಮೂಲಕ ಹೀಗೆ ಹೊರಬರುತ್ತಿರಲಿಲ್ಲ. ಗದಗು ನನ್ನ ಹುಟ್ಟೂರಾದ್ದರಿಂದ ಮುಂದಿನ ಭೇಟಿಗಳಲ್ಲಿ ಬದನಿಕಾಯಿ ಭಜಿ ಇರಲೇಬೇಕೆಂದು ನಾನು ಈ ಮೂಲಕ ಆಗ್ರಹಿಸುತ್ತೇನೆ.
ಈ ವಾಗ್ವಾದಗಳಿಂದಾದ ಇನ್ನೊಂದು ಮಜಾ ಪರಿಣಾಮವೇನೆಂದರೆ, ಬ್ಲಾಗುಲೋಕದ ಸೆಲೆಬ್ರಿಟಿಗಳನ್ನು ಉದ್ಧರಿಸಿ ಪೋಸ್ಟುಗಳನ್ನು ಬರೆದವರೆಲ್ಲ ಈಗ ಸೆಲೆಬ್ರಿಟಿಗಳಾಗಿ ಹೊಮ್ಮಿದ್ದಾರೆ; ಆ ದೊಡ್ದವರ ಸಾಲಿನಲ್ಲಿ ಇವರೂ ಈಗ ನಿಂತಿದ್ದಾರೆ. ಈ ಬ್ಲಾಗಿಗರ ಕಾಟದ ಬಗ್ಗೆ ಪೋಸ್ಟು ಬರೆದವರ ಮೂಲ ಉದ್ದೇಶ ಅದೇ ಆಗಿದ್ದಿತು. ಆದರೆ as usual ಆಗಿ ನಮ್ಮ ಮಹಾಜನಗಳು ಆ ಧೂರ್ತತನವನ್ನು ಮನಗಾಣದೆ ಅವರ ಉದ್ದೇಶಪೂರ್ತಿಗೆ ಸಂಪೂರ್ಣ ಸಹಕಾರ ಕೊಟ್ಟಿದ್ದಾರೆ! ತಪ್ಪೇನಿಲ್ಲ ಬಿಡಿ. ಎಲ್ಲರೂ ಸೆಲೆಬ್ರಿಟಿಗಳಾದರೂ ಪರವಾಗಿಲ್ಲ. ಟ್ಯಾಬ್ಲಾಯ್ಡ್ ಬ್ಲಾಗುಗಳ ಹೊಸ ಬಿಸಿನೆಸ್ ಶುರುವಾಗುತ್ತದೆ. ಅಲ್ಲಿ ಯಾವ ಬ್ಲಾಗಿಗರು ಅತ್ಯಂತ ಟ್ರೆಂಡಿ ಉಡುಗೆ ಧರಿಸುತ್ತಾರೆ, ಯಾವ ಬ್ಲಾಗಿ ಯಾವ ಬ್ಲಾಗನಿಗೆ ಗಾಳ ಹಾಕುತ್ತಿದ್ದಾಳೆ ಎಂಬಿತ್ಯಾದಿ ತರಹೇವಾರಿ ಖಡಕ್ ಸುದ್ದಿಗಳನ್ನು ಗುದ್ದಬಹುದು. ಪಾಟೀಲರು, ಶ್ರೀ ಮತ್ತಿತರ ಹೋರಾಟಗಾರರಿಗೆ ನನ್ನ ಅಭಿನಂದನೆಗಳು.
ನಮ್ಮ ಪಾಟೀಲರು, ’ಇವೆಲ್ಲ ನನ್ನ ಸ್ವಂತ ಅಭಿಪ್ರಾಯ, ಜಜ್ ಮಾಡಲು ಹೋಗಬೇಡಿ’ ಎಂಬರ್ಥದ ಮಾತುಗಳನ್ನು ಆಡುತ್ತಲೆ ತಮ್ಮ ಎರಡನೆಯ ಪೋಸ್ಟ್ನಲ್ಲಿ ಅವರ ಅಭಿಪ್ರಾಯಗಳಿಗೆ ಭಿನ್ನ ಅಭಿಪ್ರಾಯ ಕೊಟ್ಟವರನ್ನೆಲ್ಲ ಗುಡಿಸಿಹಾಕಿ ’ಗುತ್ತಿಗೆದಾರರು’ ಎಂದು ಜರಿದಿರುವುದು ಸ್ವಲ್ಪ ಚೋದ್ಯವೇ. ಅಲ್ಲದೆ ಇನ್ನು ಹೆಚ್ಚಿನದೇನನ್ನೂ ಹೇಳಲು ನನ್ನಲ್ಲಿಲ್ಲ, (ನೀವೂ ಹೇಳದಿದ್ದರೆ ನಿಮ್ಮ ಆರೋಗ್ಯಕ್ಕೆ ಕ್ಷೇಮ, ಎಂದು ಕಂಸದಲ್ಲೂ), ಹೆದರಿಕೆ ಹುಟ್ಟಿಸುವ ವ್ಯಾಧಿಗಳ ಮೂಲಕ ಪ್ರಕಟವಾಗಿಯೂ ಹೇಳಿಬಿಟ್ಟಿದ್ದಾರೆ. ಹೀಗಾದರೆ ಹೇಗೆ? ಹಾಗಾಗುವುದು ಬೇಡ. ಜಗಳಗಳು ಬೇಕು; ವಾದಗಳಾದಷ್ಟೂ ನಾವು ಪ್ರಬುದ್ಧರಾಗ್ತೀವಿ; ನಮ್ಮ ಇಡೀ ಸಮಾಜವೇ ಒಂದು ರೀತಿಯ ‘Argumentation Crisis’ನಲ್ಲಿದೆ. ಎಲ್ಲದಕ್ಕೂ ಸುಮ್ಮನೆ ಹೂಂಗುಟ್ಟುವ conformance ನಮಗೆ ಬೇಡ. ಪ್ರಶ್ನೆಗಳನ್ನೆತ್ತುವ, ಪ್ರಶ್ನೆಗಳನ್ನೆದುರಿಸುವ ಮನೋಭಾವ ನಮ್ಮಲ್ಲಿ ಹೆಚ್ಚಾಗಬೇಕು. ಇಲ್ಲದಿದ್ದರೆ ನಾವು ನಿಂತಲ್ಲೆ ನಿಲ್ಲುತ್ತೇವೆ. ಅಲ್ಲದೆ ಬದುಕು ಬಹಳ ಸಪ್ಪೆಯಾಗುತ್ತದೆ.
[ನನ್ನ ಈ ಬರಹದಿಂದ ಯಾವುದಾದರೂ ವ್ಯಕ್ತಿಗೆ, ಅಲೌಕಿಕ ಶಕ್ತಿಗೆ, ಸಂಸ್ಥೆಗೆ, ಸಂವಿಧಾನಕ್ಕೆ, ನಿಮ್ಮ ಆತ್ಮೀಯ ಸಿನೆಮಾ ತಾರೆ, ಧಾರಾವಾಹಿ ಪಾತ್ರ, ಸೆಲೆಬ್ರಿಟಿ, ಸೆಲೆಬ್ರಿಟಿಗಳ ಸಾಕು ನರಿ ನಾಯಿ, ಅಥವಾ ಇನ್ನ್ಯಾವುದಕ್ಕಾದರೂ ಅಪಚಾರವಾಗಿದ್ದಲ್ಲಿ, ಈ ಕೂಡಲೆ ಹೋಗಿ ನಂದ ವರ್ಸಸ್ ನಂದಿತ ಸಿನೆಮಾ ನೋಡತಕ್ಕದ್ದು. ಪಾಟೀಲರನ್ನೂ ಜೊತೆಗೆ ಒಯ್ಯತಕ್ಕದ್ದು. ಹಾಗೆಯೇ ನಾನು ಅನುಮತಿಯಿಲ್ಲದೆ ಬಳಸಿಕೊಂಡ ಅನಾಮಧೇಯ ಚಾಳೀಸು ಹಾಗೂ ಬಕ್ಕತಲೆಗಳಿಗೆ ಧನ್ಯವಾದಗಳು. ಹಾಗೆಯೇ, ಇಷ್ಟುದ್ದ ಕುಟ್ಟಿದ್ದಕ್ಕೆ ಕ್ಷಮೆಯಿರಲಿ; ಮತ್ತೆ ಹಾಗೆ ಎಡೆಬಿಡದೆ ಕುಟ್ಟುವಾಗ ಆಗಿರಬಹುದಾದ ಖಗೂನಿಟ ಮಿಸ್ಟಿಕುಗಳನ್ನು ಸುಧಾರಿಸಿಕೊಂಡು ಓದಿದ್ದೀರೆಂದು (ಪೂರ್ತಿ ಓದಿದ್ದರೆ!) ಅಂದುಕೊಂಡಿದ್ದೇನೆ.]