ತುಣುಕುಗಳು

ಬಹಳ ದಿನದಿಂದ ಏನೂ ಬರೆದೇ ಇಲ್ಲ. ತಂಗಳಿನ ಈ ತುಣುಕುಗಳಾದರೂ ಸರಿಯೇ.

ಮಳೆ ಸುರಿಯುತ್ತದೆ
ನೆನಪು ಕನಸುಗಳ
ಕಲಸುಮೇಲೋಗರದಲಿ
ವಾಸ್ತವ ಕರಗುತ್ತದೆ
***

ಮಳೆಬಿಲ್ಲು ನೋಡಿ ವಿಸ್ಮಯಪಡುತ್ತೇನೆ
ನೀರಹನಿಯೊಂದು ಸೂರ್ಯನನ್ನೇ
ಒಡೆಯುವ ಬಗೆಯೆಂತು!
ನಿನ್ನ ನೆನಪಾಗುತ್ತದೆ
ನಿನ್ನ ಕಣ್ಹನಿ ನನ್ನ
ಜೀವವ ಕೆದರಿ ನಿರ್ವರ್ಣ
ಮಾಡುವ ಬಗೆಯ ಅರಿವಾಗಿ
ಮಳೆಬಿಲ್ಲಿನ ಅದ್ಭುತವ ಮರೆಮಾಚುತ್ತದೆ.
***

ನಿರುಮ್ಮಳ ನಿದ್ದೆಯುದ್ದಕ್ಕೂ ಕನಸು ಕಂಡೆ
ಅಥವಾ ಬಹಳ ಮಾಡಿ
ನಿರುಮ್ಮಳ ಕನಸಿನುದ್ದಕ್ಕೂ ನಿದ್ದೆ ಕಂಡೆ
ವಾಸ್ತವ ಎಚ್ಚರ ಮಾಡಿತು.
ಗೊಂದಲ ಮಾತಾಡತೊಡಗಿತು.
***

ಚೈತನ್ಯ ಧನವಾಗಿ ಬದಲುವ ಈ
ಸ್ಥಾವರದ ಬಳಿ ಕೂತಿದ್ದೇನೆ.
ನನ್ನ ಉರಿ ಹಂಬಲಗಳ ಹೊಗೆ
ರಸ್ತೆಯ ಮುಸುಕುವ ಅವಿರತ ಕರಿ
ಕಂಬಳಿಯ ಎರಗುತ್ತದೆ.
ನೆನಪುಗಳ ಆವಾಹಿಸಿಕೊಳ್ಳುತ್ತೇನೆ
ನಿಶ್ವಾಸಗಳ ಮೂಲಕ ನೆಯ್ಯುತ್ತೇನೆ
ಕಂಬಳಿಯ ತಳಕ್ಕೂ ಒಯ್ಯುತ್ತೇನೆ
ಅಚಾನಕ್ಕಿನ ಟ್ರಕ್ಕಿನ ತುಳಿತಕ್ಕೆ
ಸಿಲುಕಿ ಹಿಪ್ಪೆಯಾಗಲೆಂದು ಕಾಯುತ್ತೇನೆ.
ಅದೃಶ್ಯ ಸೋಸಕವೊಂದು ಬಲಿಷ್ಠ
ಎದುರಾಳಿಯಾಗಿ ಕಾಡುತ್ತದೆ,
ನೆನಪುಗಳ ನೆಯ್ದು ಹಂಬಲಗಳಾಗಿಸುತ್ತದೆ
ಶ್ವಾಸದ ಮೂಲಕ ಮತ್ತೆ
ನನ್ನೊಳಗೆ ತಳ್ಳುತ್ತದೆ.
ಸ್ಥಾವರದತ್ತ ನೋಡುತ್ತ ಶೋಕಿಸುತ್ತೇನೆ
ಮನಗಾಣುತ್ತೇನೆಯೆ?
ಇದೊಂದು ವಿಷವರ್ತುಳವೆಂದು
ಅಥವಾ
ಮತ್ತೂ ಆಶಿಸುತ್ತೇನೆಯೆ?
***

ಹಸಿ ನೆನಪುಗಳು ಒಣಗುವುದಿಲ್ಲ
ಒಣಗಿಸುವುದನ್ನು ಒಣಗಿಸುತ್ತವೆ
ಮೋರಿಯನ್ನು ಸೋರಿಸುತ್ತವೆ
ಕವಿಯನ್ನು ರಮಿಸುವ ಸೋಗು ಹಾಕುತ್ತವೆ.

ಹಂಬಲಗಳೇ ಮೇಲು
ಸದಾಕಾಲ ಉರಿಯುತ್ತವೆ
ನೆನಪುಗಳನ್ನೂ ಸುಡುತ್ತವೇನೋ
ಆದರೆ ಅವನ್ನು ನಂದಿಸಲಾಗುತ್ತದೆ
ಅಥವಾ ಆಗಿಂದಾಗ ಉರಿದು ಹೋಗುತ್ತವೆ.

ಟೆ-ರೀ-ಸಾ…

ಫುಟ್‍ಪಾತಿನಿಂದ ಇಳಿದು, ಮೇಲೆ ನೋಡುತ್ತಲೇ ನಾಕು ಹೆಜ್ಜೆ ಹಿಂದೆ ಬಂದೆ. ನಡುಬೀದಿಯಲ್ಲಿ ನಿಂತು, ಕೈಗಳೆರಡನ್ನೂ ಬಾಯಿಯ ಸುತ್ತ ಲೌಡ್‍ಸ್ಪೀಕರಿನ ಹಾಗೆ ಅಗಲಿಸಿ, ಜೋರಾಗಿ “ಟೆರೀಸಾ,” ಎಂದು ಕಿರುಚಿದೆ, ಕಟ್ಟಡದ ಮೇಲ್ಮಹಡಿಗಳನ್ನುದ್ದೇಶಿಸಿ.

ನನ್ನ ನೆರಳು ಚಂದ್ರನಿಗೆ ಹೆದರಿ, ಗಬಕ್ಕನೆ ನನ್ನ ಕಾಲಬುಡದಲ್ಲಿ ಕವುಚಿಕೊಂಡಿತು.

ಇನ್ನೊಮ್ಮೆ, “ಟೆರೀಸಾ!” ಎಂದು ಕೂಗುವಾಗ ಯಾರೋ ಒಬ್ಬ ಅತ್ತಕಡೆ ಬಂದ. “ನೀನು ಇನ್ನೂ ಜೋರಾಗಿ ಕೂಗದಿದ್ದರೆ ಅವಳಿಗೆ ಕೇಳಿಸೊಲ್ಲ. ಒಂದು ಕೆಲ್ಸಾ ಮಾಡೋಣ. ಇಬ್ಬರೂ ಸೇರಿ ಕೂಗೋಣ. ಸರಿ, ಮೂರರ ತನಕ ಎಣಿಸೋಣ. ’ಮೂರು’ ಅಂದ ತಕ್ಷಣ ಇಬ್ಬ್ರೂ ಸೇರಿ ಕೂಗೋಣ.” ಅವನು ಎಣಿಸಿದ, “ಒಂದು ಎರಡು ಮೂರು.” ಇಬ್ಬರೂ ಗಂಟಲು ಬಿಚ್ಚಿ ಕಿರುಚಿದೆವು, “ಟೆ-ರ್ರೀ-ಸಾ…!”

ಥೇಟರಿನಿಂದಲೋ ಕಾಫಿ ಕುಡಿದೋ ವಾಪಸು ಬರುತ್ತಿದ್ದ ಗೆಳೆಯರ ಗುಂಪೊಂದು ನಾವು ಯಾರನ್ನೋ ಕರೆಯುತ್ತಿದ್ದುದನ್ನು ನೋಡಿತು. “ನಾವೂ ನಿಮ್ಮ ಜೊತೆ ಸೇರ್ಕೊಂಡು ಕೂಗ್ತೀವಿ… ಬನ್ರೋ” ಎನ್ನುತ್ತ ನಡುಬೀದಿಯಲ್ಲಿ ನಿಂತಿದ್ದ ನಮ್ಮನ್ನು ಬಂದು ಸೇರಿಕೊಂಡರು. ಮತ್ತೆ ಮೊದಲು ಬಂದಿದ್ದವ ಮೂರರ ತನಕ ಎಣಿಸಿದ. ಎಲ್ಲರೂ ಏಕಕಂಠದಿಂದ ಒದರಿದೆವು, “ಟೇ-ರ್ರೀ-ಸ್ಸ್ಸಾ!”

ಮತ್ತ್ಯಾರೋ ಬಂದು ನಮ್ಮನ್ನು ಸೇರಿಕೊಂಡರು; ಕಾಲುಗಂಟೆಯ ನಂತರ ಒಂದು ದೊಡ್ಡ ಗುಂಪೇ ಅಲ್ಲಿ ನೆರೆದಿತ್ತು. ಸುಮಾರು ಇಪ್ಪತ್ತು ಜನ ಆಗಿರಬಹುದು. ಆವಾಗವಾಗ ಹೊಸಬರು ಬಂದು ಕೂಡಿಕೊಳ್ಳುತ್ತಿದ್ದರು.

ಎಲ್ಲರನ್ನೂ ಸಂಘಟಿಸಿ, ಏಕಕಂಠದಿಂದ ಒಂದು ಒಳ್ಳೆಯ ಕರೆ ಕೊಡುವುದೆಂದರೆ ಸುಲಭದ ಮಾತಾಗಿರಲಿಲ್ಲ. ಮೂರು ಎಣಿಸುವ ಮೊದಲು ಶುರು ಮಾಡುವವರೋ ಎಲ್ಲರೂ ಮುಗಿಸಿದ ಮೇಲೂ ಮುಂದುವರಿಸುವವರೋ ಇದ್ದೇ ಇರುತ್ತಿದ್ದರು. ಆದರೂ ಈ ವ್ಯತ್ಯಾಸಗಳನ್ನೆಲ್ಲ ನೀಗಿಸಿಕೊಂಡು ಕೆಲಸವನ್ನು ಚೆನ್ನಾಗಿ ನಿಭಾಯಿಸತೊಡಗಿದೆವು. ನಾವು ನಮ್ಮ ಕೂಗು ಹೀಗಿರಬೇಕೆಂದು ನಿಶ್ಚಯಿಸಿದೆವು: ’ಟೆ’ಯನ್ನು ಕೆಳದನಿಯಲ್ಲಿ ದೀರ್ಘವಾಗಿ ಅನ್ನತಕ್ಕದ್ದು; ’ರೀ’ ಉಚ್ಚಸ್ವರ ಹಾಗೂ ದೀರ್ಘ; ’ಸಾ’, ಮತ್ತೆ ಕೆಳದನಿ, ಆದರೆ ಹೃಸ್ವ. ಚೆನ್ನಾಗಿ ಕೇಳುತ್ತಿತ್ತು. ಯಾರಾದರೂ ಈ ಲಯವನ್ನು ತಪ್ಪಿಸಿದಾಗ ಸಣ್ಣಪುಟ್ಟ ತಕರಾರುಗಳು ಅವಾಗಿವಾಗ ಬರುತ್ತಿದ್ದವು.

ಇದು ನಮ್ಮ ಹಿಡಿತಕ್ಕೆ ಬಂದಿತ್ತಷ್ಟೆ. ಆಗಲೇ ಯಾವನೋ ಒಬ್ಬ ಪ್ರಶ್ನೆಯೆತ್ತಿದ — ಅವನ ದನಿಯಿಂದ ಅವನ ಲಕ್ಷಣಗಳನ್ನು ನಿರ್ಧರಿಸಬಹುದಾದಲ್ಲಿ, ಅವನ ಮುಖದ ಮೇಲೆ ಸಣ್ಣ ಚಿಕ್ಕಿಗಳಿರಲಿಕ್ಕೆ ಸಾಕು — “ಅಲ್ಲ, ಅವಳು ಮನೇಲಿದಾಳೆ ಅನ್ನೋದು ಗ್ಯಾರಂಟೀನಾ ಅಂತ?”

“ಇಲ್ಲ,” ನಾನೆಂದೆ.

“ಇದೊಳ್ಳೆ ಫಜೀತಿ,” ಇನ್ನೊಬ್ಬನೆಂದ. “ಕೀ ಮರ್ತಿದೀಯಾ?”

“Actually, ನನ್ನ ಕೀ ನನ್ನ ಹತ್ತಿರಾನೇ ಇದೆ,” ಅಂತ ಹೇಳಿದೆ.

“ಮತ್ತೆ? ಹೋಗು ಮೇಲಕ್ಕೆ!” ಅವರೆಂದರು.

“ಆದ್ರೆ, ನಾನು ಇಲ್ಲಿ ಇರಲ್ಲ,” ವಿವರಿಸಿದೆ, “ಬೇರೆ ಕಡೆ ಇರೋದು. ನಾನಿರೋದು ಆ ಸೈಡು.”

“ಹೌದಾ? ಹಾಗಿದ್ರೆ, ನಾನು ಒಂದು ಮಾತು ಕೇಳ್ತೀನಿ. ಇಲ್ಲಿ ಯಾರಿರ್ತಾರೆ?” ಆ ಚಿಕ್ಕಿ ಚಿಕ್ಕಿ ದನಿಯವನು ಕೇಳಿದ.

“ಅಯ್ಯೋ, ಅದು ನನಗೆ ಹ್ಯಾಗೆ ಗೊತ್ತಿರುತ್ತೆ?” ಅಂತಂದೆ.

ಯಾಕೋ ಜನರು ಇದರಿಂದ ಸ್ವಲ್ಪ ಕೋಪ ಮಾಡಿಕೊಂಡಂತೆ ಅನ್ನಿಸಿತು.

“ಅಣಾ.. ಹಾಗಿದ್ದ್ರೆ ನಾವು ಇಲ್ಲಿ ನಿಂತ್ಕೊಂಡು ’ಟೆರೀಸಾ’ ಅಂತ ಯಾಕೆ ಬಡ್ಕೋತಿದೀವಿ ಅಂತ ರವಷ್ಟು ಹೇಳ್ತೀಯಾ?” ಯಾವನೋ ಹಲ್ಲು ಬಿಗಿಹಿಡಿದು ದನಿ ಹೊರಡಿಸಿದ.

“ಇದೇ ಹೆಸರು ಕರೀಬೇಕು ಅಂತ ನಂದೇನೂ ಇಲ್ಲ. ಬೇರೆ ಯಾವ ಹೆಸರಾದ್ರೂ ಪರ್ವಾಗಿಲ್ಲ,” ನಾನು ಹೇಳಲು ಪ್ರಯತ್ನಿಸಿದೆ. “ಅಥವಾ ನಿಮಗಿಷ್ಟ ಇದ್ದರೆ ಬೇರೆ ಯಾವುದೋ ಜಾಗದಲ್ಲಿ ನಿಂತ್ಕೊಂಡೂ ಕರೀಬಹುದು.”

ಎಲ್ಲರೂ ಅಸಮಾಧಾನ ತಳೆಯುತ್ತಿದ್ದರು.

“ನಮ್ಮ ಜೊತೆ ಆಟ ಆಡ್ತಿದೀಯಾ? ಇದು ಸರಿ ಇಲ್ಲ,” ಚಿಕ್ಕಿ ದನಿಯವನು ಸಂಶಯದಿಂದ ಕೇಳಿದ.

“ಏನು ಹೇಳ್ತಾ ಇದೀರಾ?” ಎಂದು ನಾನು ವಿಷಾದದಿಂದ ಅಂದು, ಉಳಿದವರಿಗಾದರೂ ನನ್ನಲ್ಲಿ ಯಾವ ದುರುದ್ದೇಶವೂ ಇಲ್ಲ ಎಂಬ ನಂಬಿಕೆಯಿದೆಯೇನೋ ಎಂದು ಎಲ್ಲರತ್ತ ಮುಖ ಹೊರಳಿಸಿದೆ. ಯಾರೂ ಏನೂ ಹೇಳಲಿಲ್ಲ.

ಒಂದು ಕ್ಷಣ ಅಲ್ಲಿ ಮುಜುಗರದ ವಾತಾವರಣ ಏರ್ಪಟ್ಟಿತು.

ಅಷ್ಟರಲ್ಲಿ, ಅವರಲ್ಲೊಬ್ಬ, ಹಗುರಾಗಿ ಹೇಳಿದ, “ಒಂದು ಕೆಲಸ ಮಾಡೋಣ. ಕೊನೇ ಸಲ ’ಟೆರೀಸಾ’ ಅಂತ ಕರದು, ನಮ್ಮ ನಮ್ಮ ಮನೆಗಳಿಗೆ ಹೋಗೋಣ.”

ಸರಿ, ಇನ್ನೊಂದು ಸಲ ಕೂಗಿದೆವು. “ಒಂದು ಎರಡು ಮೂರು.. ಟೆರೀಸಾ!” ಆದರೆ ಅಷ್ಟು ಸರಿಯಾಗಿ ಆಗಲಿಲ್ಲ. ಆಮೇಲೆ ಮಂದಿ ಮನೆಯತ್ತ ನಡೆದರು. ಕೆಲವರು ಅತ್ತಕಡೆ, ಕೆಲವರು ಇತ್ತಕಡೆ.

ನಾನೂ ಅಲ್ಲಿಂದ ನಡೆದು ಸರ್ಕಲ್ಲಿಗೆ ಬಂದಿದ್ದೆ. ಆವಾಗ ಯಾರೋ “ಟೆssರೀssಸಾss” ಎಂದು ಕಿರುಚಿದಂತೆ ಅನ್ನಿಸಿತು.

ಬಹಳ ಮಾಡಿ, ಯಾರೋ ಇನ್ನೂ ಅಲ್ಲೇ ಉಳಿದು ಕರೆಯುತ್ತಿದ್ದಾರೆ. ಯಾರೋ. ತುಂಬ ಹಠಮಾರಿಯಿರಬೇಕು.

***

ಇದು ಇಟ್ಯಾಲೋ ಕ್ಯಾಲ್ವಿನೋ (Italo Calvino) ಎಂಬ ಮಾಂತ್ರಿಕನದು. ಇಟ್ಯಾಲಿಯನ್ ಕತೆಗಾರ, ಕಾದಂಬರಿಕಾರ. ಎರಡು-ಮೂರು ವರ್ಷಗಳ ಹಿಂದೆ ಇದು, ಮತ್ತೆ ಇನ್ನಷ್ಟು ಫ಼ೇಬಲ್‍ಗಳನ್ನೂ, ಮತ್ತೆ ಅವನ ಕೆಲ ಬಿಡಿ ಬರೆಹಗಳನ್ನೂ ಓದಿ ಮೈಮರೆತಿದ್ದೆ. ಇದರ ಹೆಸರು, The Man Who Shouted Teresa. ಇಲ್ಲಿ ಒಂದಷ್ಟು ಇವೆ: ಲೇಖನಗಳು, ಕತೆಗಳು, ವಿಮರ್ಶೆ. ಎಷ್ಟು ಅಂದುಕೊಂಡರೂ, ಯಾಕೋ ಇಲ್ಲಿಯವರೆಗೆ ಅವನ ಕೃತಿಗಳನ್ನು ತೊಗೊಂಡು ಓದಲಾಗಿಲ್ಲ. ಇನ್ನೂ ತಡ ಮಾಡಬಾರದು. ಯಾಕೋ ಒಮ್ಮೆಲೆ ಇದು ನೆನಪಾಯಿತು. ಅದಕ್ಕೆ ಅನುವಾದಿಸಿ ಹಾಕಿದ್ದೇನೆ. ಏನನ್ನಿಸಿತು ಹೇಳಿ.

ಜೆ. ಅಲ್ಫ಼್ರೆಡ್ ಪ್ರುಫ಼್ರಾಕನ ಪ್ರೇಮ ಗೀತೆ (ಭಾಗ ೩, ಮುಗಿತಾಯ)

ಇದಕ್ಕೂ ಮೊದಲು, ಭಾಗ ೧ ಹಾಗೂ ಭಾಗ ೨.

ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಆ ಕಪ್ಪುಗಳು, ಮೊರಬ್ಬ, ಚಹಾಗಳ ನಂತರ,
ಪಿಂಗಾಣಿ ಕಪ್ಪು-ಬಸಿಗಳಲ್ಲಿ, ನಿನ್ನ ನನ್ನ ಬಗೆಗಿನ ಮಾತುಗಳಲ್ಲಿ,
ವಿಷಯದ ಕೊಂಡಿಯನ್ನು ಒಂದು ಮುಗುಳ್ನಗೆಯಿಂದ ಕಡಿದುಹಾಕುವುದು,
ಮೌಲಿಕವಾದುದಾಗುತ್ತಿತ್ತೇ,
ಇಡೀ ಬ್ರಹ್ಮಾಂಡವ ಹಿಂಡಿ ಚೆಂಡು ಮಾಡುವುದು,
ಮೈಮೇಲೆರಗುವ ಪ್ರಶ್ನೆಯತ್ತ ಉರುಳಿಸುವುದು,
“ನಾನು ಲೆಜ಼ಾರಸ್, ಸತ್ತವನೆದ್ದು ಬಂದಿದ್ದೇನೆ,
ಎಲ್ಲ ಹೇಳಲು ಮರಳಿ ಬಂದಿದ್ದೇನೆ, ನಿಮಗೆಲ್ಲ ಹೇಳಲು,” ಎಂದು ಬಿಡುವುದು,
ಅವಳ ತಲೆಗೆ ಇಂಬಿರಿಸಿ, “ನಾನು ಹೇಳಿದರರ್ಥ
ಅದಲ್ಲ, ಅದಲ್ಲವೇ ಅಲ್ಲ,” ಎಂದು ಹೇಳಬೇಕಾಗಿದ್ದಲ್ಲಿ,
ಇದೆಲ್ಲ ಬೇಕಾಗಿತ್ತೆ?

ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಅರ್ಥಪೂರ್ಣವಾದುದಾಗುತ್ತಿತ್ತೇ?
ಸೂರ್ಯಾಸ್ತಗಳು, ಹಿತ್ತಿಲುಗಳು, ನೀರು ಚಿಮುಕಿಸಿದ್ದ ಬೀದಿಗಳು,
ಕಾದಂಬರಿಗಳು, ಚಹಾಕಪ್ಪುಗಳು, ಫರಶಿಯುದ್ದಕ್ಕೂ ತೆವಳುವ
ಸ್ಕರ್ಟುಗಳು —
ಇವು, ಹಾಗೂ ಮತ್ತಿನ್ನೆಷ್ಟೋ ಸಂಗತಿಗಳ ನಂತರ?
ನನಗನ್ನಿಸ್ಸಿದ್ದನ್ನು ಯಥಾರ್ಥ ಹೇಳುವುದು ಸಾಧ್ಯವೇ ಇಲ್ಲ!
ಆದರೆ ಒಂದು ಮಾಯಾವಿ ಲಾಟೀನು ಪರದೆಯ ಮೇಲೆ ನರನಾಡಿಗಳ ಚಿತ್ತಾರ ಎರಚಿದಂತೆ:
ತಲೆದಿಂಬನ್ನಿರಿಸಿ, ಅಥವಾ ಶಾಲನ್ನು ಕಿತ್ತೆಸೆದು,
ಕಿಟಕಿಯತ್ತ ಮುಖ ತಿರುಗಿಸಿ, “ಅಲ್ಲ, ನಾನು ಹೇಳಿದ್ದರ ಅರ್ಥ
ಅದಲ್ಲ. ಅದಲ್ಲವೇ ಅಲ್ಲ,” ಎಂದು ಹೇಳಿದ್ದರೆ,
ಆವಾಗ ಅದು ಸರಿಹೋಗುತ್ತಿತ್ತೇ?

………..

ಅಲ್ಲ! ನಾನು ಪ್ರಿನ್ಸ್ ಹ್ಯಾಮ್ಲೆಟ್ ಅಲ್ಲ, ಅದು ನನ್ನ ಸ್ವಭಾವವೇ ಅಲ್ಲ;
ನಾನೊಬ್ಬ ಸೇವಕ, ದೇವದೂತ, ಹೇಳಿದಷ್ಟು ಮಾಡುವವ,
ಪೋಷಿಸಿ ಮುಂದುವರಿಸುವುದು, ಒಂದೆರಡು ದೃಶ್ಯಗಳ ಮೊದಲು ಬರುವುದು,
ರಾಜಕುವರನಿಗೆ ಸಲಹೆ ಕೊಡುವುದು; ಸುಲಭ ಸಲಕರಣೆ, ಸಂಶಯವಿಲ್ಲ,
ಗೌರವ ಸೂಚಿಸುತ್ತ, ಕೃತಕೃತ್ಯೆಯಿಂದ ಉಪಯೋಗಕ್ಕೆ ಬರುವವ,
ಮುತ್ಸದ್ದಿ, ಜಾಗರೂಕ, ಎಲ್ಲವೂ ಕೂಲಂಕುಷ,
ಭಾಷ್ಕಳಪಂತ, ಆದರೆ ತುಸು ಸ್ಥೂಲ, ನಿಧಾನಿ
ಕೆಲವೊಮ್ಮೆ ನಿಜಕ್ಕೂ ಹಾಸ್ಯಾಸ್ಪದ
ಮತೊಮ್ಮೊಮ್ಮೆಯಂತೂ ಪೂರಾ ವಿದೂಷಕ.

ನನಗೆ ವಯಸ್ಸಾಗುತ್ತದೆ… ಮುದುಕನಾಗುತ್ತೇನೆ…
ಕೆಳಗೆ ಮಡಿಕೆ ಹಾಕಿ ಪ್ಯಾಂಟು ತೊಡುತ್ತೇನೆ.

ಕೂದಲು ಹಿಂದಕ್ಕೆ ಬಾಚಲೆ? ಪೀಚ್ ತಿನ್ನುವ ಸಾಹಸ ಮಾಡಲೆ?
ನಾನು ಬಿಳಿಯ ಫ್ಲ್ಯಾನೆಲ್ ಟ್ರೌಸರ್ಸ್ ತೊಟ್ಟು, ಬೀಚ್ ಮೇಲೆ ಓಡಾಡುವೆ.
ನಾನು ಮತ್ಸ್ಯಕನ್ನಿಕೆಯರ ಹಾಡು ಪ್ರತಿಹಾಡುಗಳನ್ನು ಕೇಳಿರುವೆ.

ನನ್ನ ಸಲುವಾಗಿ ಅವರು ಹಾಡುವರೆಂದು ನನಗನ್ನಿಸುವುದಿಲ್ಲ.

ಅವರನ್ನು ನೋಡಿದ್ದೇನೆ ಅಲೆಗಳ ಸವಾರಿ ಮಾಡುತ್ತ ಸಮುದ್ರದತ್ತ ಹೋಗುವಾಗ
ಗಾಳಿ ಬೀಸಿ ನೀರನ್ನು ಕಪ್ಪುಬಿಳುಪಾಗಿ ಹರಡುವಾಗ
ಅಲೆಗಳ ಬೆಳ್ಳನೆಯ ಕೂದಲನ್ನು ಹಿಂದೆ ಹಿಂದೆ ಹಿಕ್ಕುವಾಗ.

ತಿರುಗಿದ್ದೇವೆ ನಾವು ಸಮುದ್ರದ ಅನೇಕ ಕಕ್ಷೆಗಳಲ್ಲಿ
ಕೆಂಪು ಕಂದು ಜೊಂಡಿನ ಮಾಲೆ ಧರಿಸಿರುವ ಸಾಗರಕನ್ನಿಕೆಯರ ಸುತ್ತಲೂ
ಮನುಷ್ಯ ದನಿಗಳು ನಮ್ಮನ್ನೆಬ್ಬಿಸುವ ತನಕ, ಮುಳುಗಿಸುವ ತನಕ.

ಜೆ. ಆಲ್ಫ್ರೆಡ್ ಪ್ರುಫ್ರಾಕ್‍ನ ಪ್ರೇಮ ಗೀತೆ (ಭಾಗ ೨)

ಓದಿರದವರು ಇದರ ಭಾಗ ೧ಕ್ಕೆ ಇಲ್ಲಿ ಹೋಗಿ.

ಯಾಕೆಂದರೆ ಇವರೆಲ್ಲ ನನಗೆ ಈಗಾಗಲೆ ಗೊತ್ತು, ಎಲ್ಲವೂ ಗೊತ್ತು:
ಸಂಜೆಗಳು, ನಸುಕುಗಳು, ಅಪರಾಹ್ಣಗಳು ಎಲ್ಲ ಗೊತ್ತು
ನನ್ನ ಬಾಳುವೆಯನ್ನು ಕಾಫೀ ಚಮ್ಮಚೆಗಳಿಂದ ಅಳೆದು ಸುರಿದಿದ್ದೇನೆ;
ದೂರದ ರೂಮಿನಿಂದ ಬರುತ್ತಿರುವ ಸಂಗೀತದಡಿಯಲ್ಲಿ
ನೆಲಕ್ಕಚ್ಚುತ್ತಿರುವ ದನಿಗಳ ಕೊನೆಯುಸಿರೂ ನನಗೆ ಗೊತ್ತು.
ಹೀಗಿರುವಾಗ ಹೇಗೆ ಮುಂದರಿಯಲಿ?

ಆ ಕಣ್ಣುಗಳೂ ನನಗೆ ಗೊತ್ತು, ಅವೆಲ್ಲವೂ –
ಎಲ್ಲರನ್ನೂ ಸೂತ್ರಬದ್ಧ ನುಡಿಗಟ್ಟಿನಿಂದ ಕಟ್ಟಿಹಾಕುವಂಥ ಕಣ್ಣುಗಳು,
ಹೀಗೆ ನಾನೊಂದು ಸೂತ್ರವಾದಾಗ, ಪಿನ್ನಿಗಂಟಿ ಅಸ್ತವ್ಯಸ್ತ ಬಿದ್ದಿರುವಾಗ,
ಪಿನ್ನೆರಗಿ ಗೋಡೆಗೊರಗಿ ಎತ್ತಕೆತ್ತರೆ ಹೊರಳಾಡುತ್ತಿರುವಾಗ,
ಹೇಗೆ ಶುರು ಮಾಡಲಿ, ಹೇಳಿ?
ನನ್ನ ನಿತ್ಯದ ರೀತಿಗಳ ಅರೆಬೆಂದ ದಂಡೆಗಳನ್ನು ಹೇಗೆ ಉಗಿಯಲಿ?
ಹೇಗೆ ಮುಂದರಿಯುವ ಸಾಹಸಪಡಲಿ?

ಮತ್ತೆ ನನಗೆ ಆ ಕೈಗಳೂ ಗೊತ್ತು, ಅವೆಲ್ಲವೂ –
ಕೈಗಳಲ್ಲಿರುವ ಬಳೆಗಳು, ಅಥವಾ ಬಿಳಿ ಖಾಲಿ ಕೈಗಳು
[ಆದರೆ ದೀಪದ ಬೆಳಕಿನಲ್ಲಿ ಕಂಡುಬಂದು ಕೈಕೊಡುವ ಕಂದು ಕೂದಲು!]
ಇದೇನು, ಯಾರದೋ ಬಟ್ಟೆಗಳ ಸುವಾಸನೆ
ಹೀಗೆ ನನ್ನ ದಿಕ್ಕು ತಪ್ಪಿಸುತ್ತಿದೆಯೋ?
ಟೇಬಲ್ಲಿನ ಮೇಲೆ ಒರಗಿರುವ ಕೈಗಳು, ಶಾಲು ಸುತ್ತಿಕೊಂಡಿರುವ ಕೈಗಳು.
ಮತ್ತೀಗ ಮುಂದೆ ಹೆಜ್ಜೆಯಿಡಲೆ?
ಆದರೆ.. ಎಲ್ಲಿ ಶುರು ಮಾಡಲಿ?

…….

ಮುಸ್ಸಂಜೆಗಳ ಸಂದಿಗಳಲ್ಲಿ ಹಾದುಹೋಗಿದ್ದೇನೆ,
ಕಿಟಕಿಗಳಲ್ಲಿ ಬಾಗಿ ನಿಂತ ಒಂಟಿ ಗಂಡಸರ
ಪೈಪುಗಳಿಂದೊಸರಿ ಮೇಲೆರುವ ಹೊಗೆ ನೋಡಿದ್ದೇನೆಂದು ಹೇಳಲೆ?

ನನಗೊಂದು ಜೋಡಿ ಪರಪರಕು ಉಗುರುಗಳಿರಬೇಕಿತ್ತು
ನಿ:ಶಬ್ದ ಸಮುದ್ರಗಳಡಿಯಲ್ಲಿ ಗರಗರ ತಿರುಗುತ್ತಿದ್ದೆ.

…….

ಮತ್ತೆ ಈ ಮಧ್ಯಾಹ್ನ, ಈ ಸಂಜೆ ಎಷ್ಟು ನಿರುಂಬಳ ಮಲಗಿದೆ!
ನೀಳವಾದ ಬೆರಳುಗಳಿಂದ ನೀವಿಸಿಕೊಂಡು,
ನಿದ್ರಿಸುತ್ತಿದೆ… ಸುಸ್ತಾಗಿದೆ.. ಅಥವಾ ಓತ್ಲಾ ಹೊಡೆಯುತ್ತಿದೆ,
ಫರಶಿಗಳ ಮೇಲೆ ಮೈಚಾಚಿ, ಇಲ್ಲಿಯೇ, ನಿನ್ನ ನನ್ನ ಪಕ್ಕದಲ್ಲೆ.
ಚಹಾ, ಕೇಕು, ಐಸ್‍ಕ್ರೀಮುಗಳ ನಂತರ, ಪ್ರಸಕ್ತ ಕ್ಷಣವನ್ನು
ತೀರಾ ಸಂದಿಗ್ಧಕ್ಕೆ ತಳ್ಳುವ ಚೇತನ ನನ್ನಲ್ಲಿರಲೇಬೇಕೆ?
ನಾನು ಅತ್ತುಕರೆದು ಹೊಟ್ಟೆಗಟ್ಟಿ, ಗೋಳಾಡಿ ಪ್ರಾರ್ಥಿಸಿದ್ದರೂ
ನನ್ನ [ಸ್ವಲ್ಪ ಬಕ್ಕ] ತಲೆಯನ್ನು ತಾಟಿನಲ್ಲಿ ಹೊತ್ತು ತಂದದ್ದನ್ನು ನೋಡಿದ್ದರೂ
ಹೇಳುವುದೇನೆಂದರೆ, ನಾನೇನು ಪ್ರವಾದಿಯಲ್ಲ — ಮತ್ತಿದು ದೊಡ್ಡ ಸಂಗತಿಯೂ ಅಲ್ಲ;
ನೋಡಿದ್ದೇನೆ ನನ್ನ ಶ್ರೇಷ್ಠತೆಯ ಕ್ಷಣಗಳು ಮಿಣುಗುಟ್ಟಿದ್ದನ್ನೂ,
ನೋಡಿದ್ದೇನೆ ಕೆಲಸದ ಹುಡುಗ ಸಂತತ ನನ್ನ ಕೋಟನ್ನು ಇಸಿದುಕೊಳ್ಳುವುದನ್ನು, ಮುಸಿನಗುವುದನ್ನೂ,
ಸಂಕ್ಷೇಪಿಸಿ ಹೇಳಬೇಕೆಂದರೆ – ನಾನು ಬೆಚ್ಚಿಬಿದ್ದಿದ್ದೆ.

ಜೆ. ಆಲ್ಫ್ರೆಡ್ ಪ್ರುಫ್ರಾಕ್‍ನ ಪ್ರೇಮ ಗೀತೆ (ಭಾಗ ೧)

ಎಲಿಯಟ್‍ನ ಪದ್ಯಗಳನ್ನು ಜೋರಾಗಿ ಓದಬೇಕು. ದನಿ ತೆಗೆದು. ದನಿ ಏರಿಳಿಸಿ. ಅವು ದಕ್ಕುತ್ತವೋ ಇಲ್ಲವೋ ಎಂಬ ಯೋಚನೆಯಿಲ್ಲದೆ. “Do I dare?” and “Do I dare?” ಎಂದುಕೊಳ್ಳುತ್ತಲೆ ಈ ಅನುವಾದಕ್ಕಿಳಿದಿದ್ದೇನೆ. ಬಹುಶಃ ೨ ಅಥವಾ ೩ ಭಾಗಗಳಲ್ಲಿ ಇಲ್ಲಿ ಛಾಪಿಸುತ್ತೇನೆ. ಹೇಗನ್ನಿಸಿತು ಹೇಳಿ. ಈ ಪದ್ಯದ epigraph, ಡಾಂಟೆಯ ಇನ್‍ಫ಼ರ್ನೋದ ಸಾಲುಗಳು. ಅದನ್ನು ಹಾಗೆಯೇ ಬಿಟ್ಟಿದ್ದೇನೆ. ಹುಡುಕಿದರೆ ಅದರರ್ಥ ನಿಮಗೆ ಸಿಕ್ಕೇ ಸಿಗುತ್ತದೆ.

Update: ಎಲಿಯಟ್‍ನ ಕವಿತೆ ಅನುವಾದ ಮಾಡುವ ಸಾಹಸ ಮಾಡಿ, ಅದನ್ನು ಬೇಜವಾಬ್ದಾರಿಯಿಂದ ನಿಭಾಯಿಸಿದ್ದಕ್ಕೆ ಟೀನಾ ನನ್ನನ್ನು ಚೆನ್ನಾಗಿ ಬೈದಿದ್ದಾರೆ 😉 . ಮೊದಲಿಂದಲೂ ಈ ಬ್ಲಾಗನ್ನು ಓದುತ್ತ ಬಂದಿರುವ ಅವರ ಮಾತುಗಳನ್ನು ಸೀರಿಯಸ್ಸಾಗಿ ನಾನು ತೆಗೆದುಕೊಳ್ಳಲೇಬೇಕು. ಹೀಗಾಗಿ, epigraphನ ಅನುವಾದವನ್ನೂ ಹಾಕಿದ್ದೇನೆ. ಅಡಚಣೆಗೆ ಕ್ಷಮೆಯಿರಲಿ.
S’io credesse che mia risposta fosse
A persona che mai tornasse al mondo,
Questa fiamma staria senza piu scosse.
Ma perciocche giammai di questo fondo
Non torno vivo alcun, s’i’odo il vero,
Senza tema d’infamia ti rispondo.
1ಹೋಗೋಣಲ್ಲ ಮತ್ತೆ, ನೀನೂ ನಾನೂ,
ಟೇಬಲ್ಲಿನ ಮೇಲೆ ಮಂಪರುಕವಿದ ಪೇಶಂಟಿನ ಹಾಗೆ ಇಳಿಸಂಜೆ
ಆಕಾಶದಗಲಕ್ಕೂ ಹರಡಿಕೊಂಡಿರುವಾಗ;
ಹೋಗೋಣಲ್ಲ, ಕೆಲ ಅರೆನಿರ್ಜನ ಓಣಿಗಳಲ್ಲಿ,
ರಾತ್ರಿಯೊಪ್ಪತ್ತಿನ ತಹತಹಿಕೆಗೆಟಕುವ ಸೋವಿ ಹೊಟೆಲುಗಳ
ಕನವರಿಕೆಯ ಮರೆಗಳಲ್ಲಿ
ಕಟ್ಟಿಗೆಹೊಟ್ಟು ಹರಡಿದ ಆಯ್‍ಸ್ಟರ್ ಕವಚಗಳ ರೆಸ್ಟೊರಾಂಟ್‍ಗಳಲ್ಲಿ.
ಕಪಟ ಉದ್ದಿಶ್ಶದ ವಾಗ್ವಾದ
-ದಿಂದ ಬಳಲಿಸುವಂಥ ಬೀದಿಗಳು
ಮೈಮೇಲೆರಗುವ ಪ್ರಶ್ನೆಯತ್ತ ಒಯ್ಯುವ ಬೀದಿಗಳು…
ಆಂಹಾ, ಕೇಳದಿರು, “ಅದೆಂಥದ್ದು?” ಎಂದು.
ಹೋಗೋಣ. ಭೇಟಿ ಕೊಡೋಣ.

ರೂಮಿನೊಳಗೆ ಹೆಂಗಸರು ಹೋಗಿಬಂದು ಮಾಡುತ್ತಾರೆ.
ಮೈಕೆಲೆಂಜೆಲೊನನ್ನು ಚರ್ಚಿಸುತ್ತಾರೆ.

ಕಿಟಕಿಗಾಜಿಗೆ ಬೆನ್ನುತಿಕ್ಕುವ ಹಳದಿಯ ಮಂಜು,
ಕಿಟಕಿಗಾಜಿಗೆ ಮುಸುಡಿಯುಜ್ಜುವ ಹಳದಿಯ ಹೊಗೆ
ಸಂಜೆಯ ಮೂಲೆಮೂಲೆಗೂ ನಾಲಗೆ ಚಾಚಿತು,
ಕೊಳಚೆಗಟ್ಟಿದ ಕೊಳಗಳ ಮೇಲೆ ಸುಳಿದಾಡಿತು,
ಚಿಮಣಿಗಳಿಂದುದುರುವ ಮಸಿಗೆ ಬೆನ್ನು ಕೊಟ್ಟಿತು,
ಜಗಲಿಯಿಂದ ಜಾರಿತು, ಒಮ್ಮೆಗೆಲೆ ಹಾರಿತು,
ಅಷ್ಟರಲ್ಲಿ, ಇದು ಅಕ್ಟೋಬರ್‌ನ ಮೆದುರಾತ್ರಿಯೆಂದು ಮನಗಂಡು,
ಮನೆಯ ಸುತ್ತ ಒಮ್ಮೆ ಸುತ್ತಿ ಉಂಗುರಾಗಿ ನಿದ್ದೆಹೋಯಿತು.

ಸಮಯವಂತೂ ಇದ್ದೇ ಇದೆ
ಕಿಟಕಿಗಾಜುಗಳ ಮೇಲೆ ಬೆನ್ನು ತಿಕ್ಕುತ್ತ
ಬೀದಿಯುದ್ದಕ್ಕೂ ತೆವಳುವ ಹಳದಿ ಹೊಗೆಗೆ;
ಸಮಯವಿದೆ, ಸಮಯವಿದೆ
ನಾವು ಕಾಣುವ ಮುಖಗಳ ಕಾಣುವ ಮತ್ತೊಂದು ಮುಖ ತಯಾರಿಸಲು;
ಸಮಯವಿದೆ ಹುಟ್ಟಿಸಲೂ ಸಾಯಿಸಲೂ,
ಪ್ರಶ್ನೆಯೊಂದನ್ನು ಎತ್ತಿ ನಿಮ್ಮ ತಟ್ಟೆಗೆ ಬಡಿಸುವ
ಕೈಗಳ ನಿತ್ಯಗಳಿಗೆ ಕೆಲಸಗಳಿಗೆ ಸಮಯವಿದೆ;
ನಿಮಗಾಗಿ ಸಮಯವಿದೆ ನನಗಾಗಿ ಸಮಯವಿದೆ
ಸಮಯವಿದೆ ನೂರಾರು ಮೀನಮೇಷಗಳಿಗೆ,
ನೂರಾರು ದರ್ಶನಗಳಿಗೆ ಸಂಸ್ಕರಣಗಳಿಗೆ
ಸಮಯವಿದೆ, ಟೋಸ್ಟು ಚಹಾ ತೊಗೊಳ್ಳುವ ಮುಂಚೆ.

ರೂಮಿನೊಳಗೆ ಹೆಂಗಸರು ಹೋಗಿಬಂದು ಮಾಡುತ್ತಾರೆ.
ಮೈಕೆಲೆಂಜೆಲೊನನ್ನು ಚರ್ಚಿಸುತ್ತಾರೆ.

ಸಮಯ ಇದ್ದೇ ಇದೆ
“ಧೈರ್ಯವಿದೆಯೇ ನನಗೆ? ಧೈರ್ಯವಿದೆಯೇ?” ಧೇನಿಸಲು
ಹಿಂದಿರುಗಿ, ಮೆಟ್ಟಲಿಳಿಯಲು, ಸಮಯವಿದೆ
ಮಧ್ಯದಲ್ಲಿ ಬೋಡಾಗುತ್ತಿರುವ ತಲೆಬಾಗಿಸಲು
(ಅವರೆನ್ನುವರು: “ಅವನ ಕೂದಲೆಷ್ಟು ಉದುರಿವೆ ನೋಡು!”)
ನನ್ನ ಮಾರ್ನಿಂಗ್ ಕೋಟು, ಗದ್ದಕ್ಕೊತ್ತಿದಂತಿರುವ ಕಾಲರು
ನೆಕ್‍ಟೈ ಸುಂದರ ಗಂಭೀರ, ಆದರೆ ಸಣ್ಣ ಪಿನ್ನಿನಿಂದ ಬಂಧಿತ
(ಅವರೆನ್ನುವರು: “ಅಯ್ಯೋ, ಅವನ ಕೈಕಾಲುಗಳೆಷ್ಟು ಬಡಕಲು!”)
ವಿಶ್ವವನು ಅಲುಗಿಸುವ
ಸಾಹಸ ಇದೆಯೇ?
ನಿಮಿಷದಲ್ಲೇ ಸಮಯವಿದೆ
ನಿರ್ಧರಿಸಲು ವಿಮರ್ಶಿಸಲು, ಮರುನಿಮಿಷದಿ ಕವುಚಿಹಾಕಲು.
1
ಜೀವಜಗತ್ತಿಗೆ ಮರಳುವ
ಯಾರಿಗಾದರೂ ನಾನು ಉತ್ತರವೀಯುತ್ತಿದ್ದಲ್ಲಿ
ಈ ಉರಿ ಹೀಗೆ ಮಿಣುಕದೆ ನಿಶ್ಚಲವಾಗಿರುತ್ತಿತ್ತು.
ಆದರೆ ನಾ ಕೇಳಿ ತಿಳಿದಂತೆ ಈ
ಗಹ್ವರದಿಂದ ಮರಳಿ ಹೋದವರಿಲ್ಲ.
ಅಪವಾದದ ಭಯವಿಲ್ಲದೆ
ಕೊಡುವೆ ನಿನಗುತ್ತರ

ಡಾಂಟೆಯ ಡಿವೈನ್ ಕಾಮಿಡಿಯ ಇನ್ಫ಼ರ್ನೋದ ಸಾಲುಗಳಿವು. ಇದು ಗಿಡೊ ಡ ಮಾಂಟೆಫ಼ೆಲ್ಟ್ರೋ ನರಕದ ಎಂಟನೇ ವರ್ತುಲದೊಳಗಿಂದ ಹೇಳುವ ಮಾತು. ಗಿಡೊ ಡ ಮಾಂಟೆಫ಼ೆಲ್ಟ್ರೋ ಡಾಂಟೆಯ ಪ್ರಕಾರ ನರಕದ ಎಂಟನೇ ವರ್ತುಲಕ್ಕೆ ತಳ್ಳಲ್ಪಟ್ಟಿದ್ದಾನೆ. ಕಾರಣ: ದುರುದ್ದೇಶಪೂರಿತ ಸಲಹೆ. ಆದರೆ ಇಲ್ಲಿ ಮುಖ್ಯವಾದದ್ದೇನೆಂದರೆ, ಪ್ರುಫ಼್ರಾಕ್ ಮೊನೊಲಾಗ್‍ಗೆ ಸಂಬಂಧಿಸಿದಂತೆ ಈ ಸಾಲುಗಳ ವ್ಯಾಖ್ಯಾನ: ಗಿಡೊ ಅಂದುಕೊಂಡಿರುವುದೇನೆಂದರೆ ಡಾಂಟೆ ಕೂಡ ನರಕಕ್ಕೆ ತಳ್ಳಲ್ಪಟ್ಟಿದ್ದಾನೆ; ಹೀಗಾಗಿ ನಾನು ಯಾರಿಗೂ ಹೇಳಬಾರದೆಂದುಕೊಂಡಿದ್ದ ಸಂಗತಿಗಳನ್ನು ಇವನಿಗೆ ಹೇಳಬಹುದು; ಅವನು ಮರಳಿ ಹೋಗಿ ಭೂಮಿಯಲ್ಲಿ ತನ್ನ ಅಪಖ್ಯಾತಿ ಹಬ್ಬಿಸಲು ಸಾಧ್ಯವಿಲ್ಲ; ಇದೇ ರೀತಿ, ಪ್ರುಫ಼್ರಾಕ್‍ನಿಗೆ ಕೂಡ ತಾನು ಈ ಪದ್ಯದಲ್ಲಿ ಹೇಳುತ್ತಿರುವುದನ್ನು ಹೇಳುವ ಮನಸ್ಸಿರಲಿಲ್ಲ. ಇದು ಒಂದು interpretation.

ನೆರುಡನ Ode to Wine

ನೆರುಡನ ಓಡ್‍ಗಳೆಂದರೆ celebration of the good things in life: Ode to Maize, Ode to a Large Tuna Fish in the Market, Ode to Salt, Ode to Sadness, Ode to Lemon ಇತ್ಯಾದಿ ಪದ್ಯಗಳು ಹುಚ್ಚೇ ಹಿಡಿಸುತ್ತವೆ. ಅತ್ಯಂತ ಸಾಮಾನ್ಯ ಸಂಗತಿಗಳ ಬಗ್ಗೆ ಹಾಡು ಕಟ್ಟುತ್ತ ಕಟ್ಟುತ್ತ ಅದನ್ನು ಒಂದು ದೊಡ್ಡ ಜಾತ್ರೆ ಮಾಡಿ ಬಿಡುತ್ತಾನೆ; ಜಾತ್ರೆಯಲ್ಲಿನ roller-coaster‍ನಲ್ಲಿ ಕೂಡಿಸಿ ಎತ್ತರಕ್ಕೂ ಹೋಗುತ್ತಾನೆ, ಆಳಕ್ಕೂ ಹೋಗುತ್ತಾನೆ, ಒಮ್ಮೆಲೆ ಎಲ್ಲಿಂದಲೋ ಮತ್ತೆಲ್ಲಿಗೋ ಹೋಗುತ್ತಾನೆ; ಸುಮ್ಮನೆ ಆ ಪದ್ಯಗಳೊಂದಿಗೆ ಅವುಗಳ ವೇಗದಲ್ಲಿ ಓಡುವುದೂ ಒಂದು ಮಜವೇ. ಈ ಓಡ್‍ಗಳನ್ನು ನಿಧಾನಕ್ಕೆ ಓದಲು ನನಗೆ ಸಾಧ್ಯವೇ ಆಗುವುದಿಲ್ಲ.

ಅವನ Ode to Wine ಪದ್ಯ ಅನುವಾದಿಸಿದೆ. ಅದು ಕೆಳಗಿದೆ. Faithful ಅನುವಾದ ಅಲ್ಲ. ತೋಚಿದ ಹಾಗೆ ವ್ಯಕ್ತಪಡಿಸಿದ್ದೇನೆ. ಮೊದಲಿನ ಒಂದಷ್ಟು ಸಾಲುಗಳನ್ನು ಒಂದೇ ಉಸಿರಿಗೆ ಓದದೆ ಬೇರೆ ಹಾದಿಯೇ ಇಲ್ಲ ಅನ್ನಿಸುತ್ತದೆ.

ಹಗಲ ಬಣ್ಣದ ಮದಿರೆ
ಇರುಳ ಬಣ್ಣದ ಮದಿರೆ
ನೇರಳೆ ಪಾದಗಳ ಮದಿರೆ
ಗೋಮೇಧಿಕ ರಂಜಿತ ಮದಿರೆ
ಮದಿರೆ
ಭುವಿಯ ಮುದ್ದು
ಮಿನುಗು ತಾರೆ
ಮದಿರೆ, ಚಿನ್ನ-
ದಲುಗಿನ ನುಣುಪೆ
ನವಿರೆ
ಲೋಲುಪ ಮಖಮಲ್ಲೆ
ಮದಿರೆ, ಕಪ್ಪೆಚಿಪ್ಪಿನ ಸಿಂಬಿ
ಒಳಗೆ ಕೌತುಕದುಂಬಿ
ಸರಸವೋ
ಸಾಗರವೋ;
ಒಂದೇ ಬಟ್ಟಲು ನಿನ್ನನ್ನೆಂದೂ ಹಿಡಿದಿಟ್ಟಿಲ್ಲ
ಒಂದೇ ಹಾಡಲ್ಲ, ಒಬ್ಬ ರಸಿಕನಲ್ಲ
ನೀನು ವೃಂದಗಾನಪ್ರಿಯೆ, ಸಮೂಹಜೀವಿ
ಹಂಚಿಕೊಳ್ಳಲೇಬೇಕು ನಿನ್ನನ್ನು.
ಒಮ್ಮೊಮ್ಮೆ
ನಶ್ವರ ನೆನಪು-
ಗಳನ್ನುಣ್ಣುತ್ತಿ;
ನಿನ್ನಲೆಗಳ ಮೇಲೆ ನಮಗೆ
ಗೋರಿಯಿಂದ ಗೋರಿಗೆ ಸವಾರಿ,
ಮಂಜುಗಟ್ಟಿದ ಸಾವ ಗವಿಗಳ ನೀನು ಕೊರೆದು ತೆಗೆದಾಗ,
ನಮಗದೋ ದುಃಖ
ನಾಕು ಹನಿ, ತಾತ್ಕಾಲಿಕ.
ನಿನ್ನ
ದಿವಿನಾದ
ವಸಂತದ ದಿರಿಸು
ವಿಭಿನ್ನ,
ಟಿಸಿಲುಗಳಲ್ಲಿ ನೆತ್ತರೇರುತ್ತದೆ,
ಗಾಳಿ ಹಗಲ ಉತ್ತೇಜಿಸುತ್ತದೆ,
ನಿನ್ನ ಸ್ಥಿರ ಚೇತನದ
ಕುರುಹೂ ಉಳಿಯುವುದಿಲ್ಲ.
ಮದಿರೆ ವಸಂತವನ್ನು
ಕದಳಿಸುತ್ತದೆ, ಆನಂದ
ಭುವಿಯೊಡಲಿನ ಸಸಿಯಂತೆ ಹೊಮ್ಮುತ್ತದೆ,
ಗೋಡೆಗಳು, ಬಂಡೆ
ಗುಡ್ಡಗಳು ಕುಸಿಯುತ್ತವೆ
ಬಿರುಕುಗಳು ಮುಚ್ಚುತ್ತವೆ
ಹಾಡೊಂದು ಹುಟ್ಟುತ್ತದೆ.
ಹಳೆಯ ಕವಿಯ ಹಾಡು
ಕಾನನದ ಏಕಾಂತದಲಿ
ಮದಿರೆಯ ಬೋಗುಣಿ, ನೀನು, ನಾನು
ಪ್ರೀತಿಯ ಚುಂಬನಕೆ
ಮಧು ಸಮ್ಮಿಲನ.

ನನ್ನ ನಲ್ಲೆ, ನಿನ್ನ ನಡುವು
ಮದಿರೆ ಬಟ್ಟಲಿನ
ತುಳುಕುವ ತಿರುವು
ನಿನ್ನ ಮೊಲೆ ದ್ರಾಕ್ಷಿಗೊಂಚಲು
ಮೊಲೆತೊಟ್ಟೆ ದ್ರಾಕ್ಷಿ
ಹೊಕ್ಕುಳು ನಿನ್ನೊಡಲಿಗೆ ಒತ್ತಿದ
ವಿಮಲ ಮುದ್ರೆ
ನಿನ್ನ ಪ್ರೇಮ ಎಣೆಯಿಲ್ಲದ
ಮಧುವಿನ ಧಬಧಬೆ
ನನ್ನ ಇಂದ್ರಿಯಗಳಿಗೆ ಕಳೆಗಟ್ಟುವ ಬೆಳಕು
ಇಳೆಯ ಜೀವದ ಮೆರುಗು.

ಆದರೆ ನೀನು ಪ್ರೀತಿಗೂ ಮಿಗಿಲು,
ಸುಡುಸುಡುವ ಮುತ್ತು,
ಬೆಂಕಿಯ ಬಿಸಿ,
ಜೀವಮಧುವಿಗೂ ಹೆಚ್ಚು;
ನೀನು
ರಸಿಕನಿಗೆ ಸಮುದಾಯ,
ಪಾರದರ್ಶಕತೆ,
ಹಿಮ್ಮೇಳದ ಶಿಸ್ತು,
ಹೂವುಗಳ ರಾಶಿ.
ಟೇಬಲ್ಲಿನ ಮೇಲೆ ಚದುರ ಮದಿರೆಯ
ಬಾಟಲಿಯ ಬೆಳಕು
ನನಗಿಷ್ಟ
ನಾವು ಮಾತಾಡುವಾಗ.
ಅದನ್ನು ಹೀರು,
ಹೊನ್ನಿನ ಪ್ರತಿ ಹನಿಯಲ್ಲೂ,
ಗೋಮೇಧಿಕದ ಪ್ರತಿ ಬಟ್ಟಲಲ್ಲೂ,
ಪ್ರತಿ ನೇರಳೆ ಚಮ್ಮಚೆಯಲ್ಲೂ,
ಮತ್ತೆ ಮತ್ತೆ ನೆನೆ,
ಶರದ್ಕಾಲವು ಮದಿರೆಯ ಗಡಿಗೆಯನ್ನು
ತುಂಬಲು ಬಸಿದ ಬೇನೆಯನ್ನು;
ಹಾಗೆಯೇ ಆಫೀಸಿನ ಸಮಾರಂಭಗಳಲ್ಲಿ
ಪ್ರತಿ ಮನುಷ್ಯನೂ ಮರೆಯದಿರಲಿ
ತನ್ನ ನೆಲವನ್ನು, ತನ್ನ ಕರ್ತವ್ಯವನ್ನು,
ಹಾಗೂ ಮದಿರೆಯ ಭಜನೆಯನ್ನು ಹರಡುವುದನ್ನು.

ತಲೆಮರೆಸಿಕೊಳ್ಳುವ ಕಲೆ

ನನಗೆ ಬಹಳ ಇಷ್ಟವಾಗುವ, ನಾನು ಮೇಲಿಂದ ಮೇಲೆ ಓದುವ ಪದ್ಯವೊಂದನ್ನು ಅನುವಾದಿಸಿದ್ದೇನೆ. ನೋಡಿ. ಮೂಲ ಇಲ್ಲಿದೆ.

’ಗುರುತು ಹತ್ತಲಿಲ್ಲವೇ?’ ಎಂದವರು ಕೇಳಿದಾಗ
ಇಲ್ಲವೆನ್ನಿ.

ಔತಣಕೂಟಗಳಿಗೆ ನಿಮಗೆ ಆಮಂತ್ರಣ ಬಂದಾಗ
ಉತ್ತರಿಸುವ ಮೊದಲು
ಪಾರ್ಟಿಗಳೆಂದರೆ ಹೇಗಿರುತ್ತವೆಂದು ನೆನಪಿಸಿಕೊಳ್ಳಿ:
ಯಾರೋ ತಾನೊಮ್ಮೆ ಪದ್ಯ ಬರೆದಿದ್ದೆನೆಂದು
ಎತ್ತರದ ದನಿಯಲ್ಲಿ ಹೇಳುತ್ತಿರುತ್ತಾರೆ;
ಕಾಗದದ ಪ್ಲೇಟುಗಳ ಮೇಲೆ ಎಣ್ಣೆಯೊಸರುವ ಮಾಂಸದ ಭಜಿಗಳು.
ಈಗ ಹೇಳಿ ನೋಡೋಣ.

ನಾವೊಮ್ಮೆ ಒಟ್ಟಿಗೆ ಸೇರಬೇಕು ಎಂದು ಅವರೆಂದರೆ
ಯಾಕೆಂದು ಕೇಳಿ.

ನಿಮಗೆ ಅವರ ಮೇಲೆ ಅಕ್ಕರೆ ಇಲ್ಲವಾಗಿದೆಯೆಂದಲ್ಲ.
ಮರೆಯಬಾರದಾದಂಥ ಮಹತ್ವದ್ದೇನನ್ನೋ
ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದೀರಷ್ಟೇ,
ಮರಗಳು ಅಥವಾ ಇಳಿಹೊತ್ತಿನ ಮಠದ ಗಂಟೆಯ ನಾದ
ಹೊಸ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆಂದು ಹೇಳಿ ಬಿಡಿ.
ಎಂದಿಗೂ ಮುಗಿಯಲಾರದಂಥದ್ದದು.

ಕಿರಾಣಿ ಅಂಗಡಿಯಲ್ಲಿ ಯಾರಾದರೂ ಭೆಟ್ಟಿ ಆದರೆ
ಸುಮ್ಮನೆ ಒಮ್ಮೆ ತಲೆಯಾಡಿಸಿ ಕೋಸುಗಡ್ದೆಯಾಗಿಬಿಡಿ.
ಹತ್ತಾರು ವರ್ಷ ಕಾಣದವರು ಒಮ್ಮೆಲೆ
ಬಾಗಿಲೆದುರು ಉದಯಿಸಿದರೆ
ನಿಮ್ಮ ಹೊಸ ಹಾಡುಪಾಡುಗಳನ್ನು ಬಿಚ್ಚಲು ಹೋಗಬೇಡಿ.
ಕಾಲದೊಂದಿಗೆ ಮೇಳೈಸುವುದು ಸಾಧ್ಯವೇ ಇಲ್ಲ.

ನೀವೊಂದು ಎಲೆಯೆಂಬ ಅರಿವಿನೊಂದಿಗೆ ತುಯ್ದಾಡಿ.
ಯಾವುದೇ ಕ್ಷಣ ಉದುರಬಹುದೆಂಬುದು ಗೊತ್ತಿರಲಿ.
ನಿಮ್ಮ ಸಮಯ ಹೇಗೆ ಕಳೆಯುತ್ತೀರೆಂದು ನಂತರ ನಿರ್ಧರಿಸಿ.

ಮುಸ್ಸಂಜೆಯ ನನ್ನ ಬಾನಿನಲಿ

Valentine’s Day ಆದ್ದರಿಂದ ಪ್ರೀತಿಯ ಬಗ್ಗೆ ಏನಾದರೂ ಬರೆಯಲೇಬೇಕಲ್ಲವೆ? ಒಳ್ಳೆಯ ಪದ್ಯ ಬರೆಯುವ ಕುವ್ವತ್ತಿಲ್ಲದಿದ್ದರೆ ಹೋಗಲಿ, ಯಾವುದಾದರೂ ಒಳ್ಳೆಯ ಪದ್ಯವನ್ನು ಅನುವಾದಿಸಲೇಬೇಕು ಎಂದು ನಿನ್ನೆ ರಾತ್ರಿ ಕುಳಿತೆ. ಯಾವ ಪದ್ಯ? ಯಾರ ಪದ್ಯ? ಯಾರ ಪದ್ಯ ಎಂಬ ಸಮಸ್ಯೆ ತಕ್ಷಣದಲ್ಲಿ ಬಗೆ ಹರಿಯಿತು. ನೆರೂಡನ ಪದ್ಯಗಳನ್ನು ಅನುವಾದಿಸಬೇಕೆಂಬುದು ಮೊದಲಿನಿಂದಲೂ ಇದ್ದ ಬಯಕೆ. ನನ್ನಲ್ಲಿರುವ ನೆರೂಡನ ಪದ್ಯಗಳನ್ನು ತಿರುವಿಹಾಕುತ್ತ ಒಂದನ್ನು ಆರಿಸಿಕೊಂಡೆ. ಪದ್ಯದ ಸಣ್ಣ ಗಾತ್ರವೂ ನನ್ನನ್ನು ಹುರಿದುಂಬಿಸಿತು. ಒಂದರ್ಧ ಮುಗಿಸಿದಾಗ ಆ ಪದ್ಯದ ಬಗ್ಗೆ ಏನೋ ಹುಡುಕತೊಡಗಿದೆ. ಆಗ ಗೊತ್ತಾದದ್ದು: ಪದ್ಯ ನೆರೂಡನದಲ್ಲ; ರವೀಂದ್ರನಾಥ ಟ್ಯಾಗೋರರದು. ಟ್ಯಾಗೋರರ ’ತುಮಿ ಸಂಧ್ಯಾರ್ ಮೇಘಮಾಲಾ’ ಎಂಬ ಪದ್ಯದ ನೆರೂಡನ ಸ್ಪ್ಯಾನಿಶ್ ಅನುವಾದದ ಇಂಗ್ಲಿಶ್ ಅನುವಾದ ನನ್ನ ಬಳಿಯಿದ್ದುದು! ಪರವಾಗಿಲ್ಲ ಎಂದುಕೊಂಡು ಉಳಿದರ್ಧ ಈಗ ಬೆಳಿಗ್ಗೆ ಮುಗಿಸಿದೆ. ನೀಗಿದಷ್ಟು ಮಾಡಿದ್ದೇನೆ. ಇದೋ ನಿಮ್ಮ ಮುಂದೆ ಸಾದರ ಪಡಿಸುತ್ತಿದ್ದೇನೆ. ಬಂಗಾಳಿ –> ಸ್ಪ್ಯಾನಿಶ್ –> ಇಂಗ್ಲಿಶ್ –> ಕನ್ನಡ, ಈ ಭಾವಾನುವಾದಗಳ ಹಾದಿಯಲ್ಲಿ ಪಾಪ ಮೂಲ ಪದ್ಯ ಏನಾಗಿದೆಯೊ!

ಮುಸ್ಸಂಜೆಯ ನನ್ನ ಬಾನಿನಲಿ ನೀನೊಂದು ಮೋಡದಂತೆ
ಬರುವೆ ನಿನ್ನ ಆಕಾರ ಬಣ್ಣಗಳಲಿ ನನ್ನ ಮನಕೊಪ್ಪುವಂತೆ
ನೀನು ನನ್ನವಳು, ನನ್ನವಳೇ, ಮಧುರ ತುಟಿಗಳ ಹೆಣ್ಣೇ
ನಿನ್ನ ಉಸಿರಿನಲ್ಲಿದೆ ನನ್ನ ಅನಂತ ಕನಸುಗಳ ಜೀವ

ನನ್ನ ಅಂತರಾಳದ ದೀಪ ಹೊಯ್ಯುತಿದೆ ನಿನ್ನ ಪಾದಗಳಿಗೆ ರಂಗು
ಹುಳಿ ಮದಿರೆಯ ಮಾಡದೆ ಸವಿ ನಿನ್ನ ತುಟಿಗಳ ಸೋಂಕು?
ನನ್ನ ಸಂಜೆಯ ಹಾಡುಗಳನೊಟ್ಟಿ ಸುಗ್ಗಿ ಮಾಡುವವಳೆ
ನನ್ನ ಒಬ್ಬಂಟಿ ಕನಸುಗಳಿಗೂ ಗೊತ್ತು ನೀನು ನನ್ನವಳೆ

ನೀನು ನನ್ನವಳು ನನ್ನವಳೆಂದು ಅಪರಾಹ್ನದ ಗಾಳಿಯಲ್ಲಿ ಹಲುಬುತ್ತ ಓಡುತ್ತೇನೆ
ಗಾಳಿ ನನ್ನ ವಿಧುರ ಸುಯ್ಯನ್ನು ತುಯ್ಯುತ್ತ ಒಯ್ಯುತ್ತದೆ
ನನ್ನ ಕಣ್ಣಿನಾಳಕ್ಕೆ ಲಗ್ಗೆಯಿಟ್ಟವಳೆ, ಈ ನಿನ್ನ ಕೊಳ್ಳೆ
ನಿನ್ನ ಇರುಳಿನ ಆಸ್ಥೆಯನ್ನು ತಿಳಿಗೊಳಿಸುತ್ತದೆ ಕೊಳದ ನೀರಿನಂತೆ

ನನ್ನ ನಾದದ ಬಲೆಗೆ ಒಳಗಾಗಿದ್ದೀ ನೀ, ಪ್ರಿಯೆ
ಆಗಸದ ಹರವು ನನ್ನ ನಾದದ ಬಲೆಗೆ
ಅಗಲಿಕೆಯ ದು:ಖದ ನಿನ ಕಂಗಳ ತಡಿಯಲ್ಲೆ ನನ್ನ ಚೇತನದ ಹುಟ್ಟು
ಶೋಕಿಸುವ ನಿನ ಕಂಗಳೇ ಕನಸುಗಳ ನೆಲೆಯ ಶುರುವಾತು

ಇಂಗ್ಲಿಶ್ ಅವತಾರ ಇಲ್ಲಿ ಮತ್ತು ಇಲ್ಲಿ.

ಮೊರೆ

ಹೊಸದೇನಾದರೂ ಬರೆಯಬೇಕೆಂದುಕೊಳ್ಳುತ್ತೇನೆ. ಸಮಯದ ಅಭಾವ. ಅಲ್ಲದೇ ಉತ್ಸಾಹ ಸಾಲುತ್ತಿಲ್ಲ. ಸದ್ಯಕ್ಕೆ ಇನ್ನೊಂದು ಹಳೆ ಪದ್ಯ. ಇದಂತೂ ಬಹಳ ಹಳೆಯದು. ಈಗ ಓದಿದರೆ ಹಸಿ ಹಸಿ ಎನ್ನಿಸುತ್ತಿದೆ. ಅಂದ ಹಾಗೆ, ನಾನು ಇದನ್ನು ಮೊದಲು ಬರೆದದ್ದು ಇಂಗ್ಲಿಶಿನಲ್ಲಿ. ಅದು ಕೆಳಗಿದೆ.

ಒಣ ಬಾವಿಯದೊಂದು ಮೊರೆ

ಕೆಲವು ಸಂಗತಿಗಳು ಮತ್ತೆ ಮತ್ತೆ ಸ್ಫೂರ್ತಿ ತರುತ್ತವೆ
ವಸಂತ, ಮೊಗ್ಗು ಮತ್ತೆ ಹುಣ್ಣಿಮೆಯ ಚಂದ್ರ
ಅಲೆ, ಮೋಡ ಮತ್ತೆ ಮಧ್ಯಾಹ್ನದ ಮಳೆ

ಒಮ್ಮೊಮ್ಮೆ ಅನ್ನಿಸುತ್ತದೆ…
ನಾನು ಇನ್ನೂ ಬದುಕಿದ್ದೇನೆ
ಸುತ್ತಲಿನ ಸೌಂದರ್ಯವನ್ನು ನೋಡುತ್ತಿದ್ದೇನೆ
ನನ್ನಜ್ಜನ ಪಿಸುಮಾತನ್ನು ಈಗಲೂ ಕೇಳಬಲ್ಲೆ
‘ಸುಮ್ಮನೆ ನೋಡದಿರು, ಕಂದಾ… ಅನುಭವಿಸು..’
ಬಹಳ ಪ್ರಯತ್ನಿಸಿದ್ದೇನೆ ನಾನು
ನೋಡದ್ದನ್ನೂ ಅನುಭವಿಸಲು
ಆದರೆ ಒಂದನ್ನು ಗಮನಿಸಿ.. ಇದಕ್ಕೆ ಕಾರಣ ನಾನಲ್ಲ…
ಇಂಥ ಅಸೂಕ್ಷ್ಮ ಆಟಗಳನ್ನು ಆಡುವುದು ಕಾಲ.

ಬೇರೆ ಸಂಗತಿಗಳೂ ಸ್ಫೂರ್ತಿ ತರುತ್ತವೆ
ಏಕೆಂದರೆ ನಾನು ವಿಮುಖರಾಗುವವರ ಪೈಕಿ ಅಲ್ಲ
ಮಣ್ಣಲ್ಲಾಡುವ ಆ ಬೆತ್ತಲೆ ‘ಪ್ರೇಮ ದೇವತೆ’ಗಳನ್ನು ನೋಡಿದ್ದೇನೆ.
ಹುಟ್ಟಿನಿಂದಲೇ ಮುರಿದಿವೆ ಅವುಗಳ ಬಿಲ್ಲುಗಳು
ಬಾಣಗಳಂತೂ ಗಾಳಿಯಲ್ಲೇಲ್ಲೋ ಕರಗಿವೆ
ಕೆಲವು ಕಡ್ಡಿಯೊಂದನ್ನು ಕೈಯಲ್ಲಿ ಧರಿಸಿವೆ.. ಉಳಿದವು.. ಶೂನ್ಯವನ್ನು..!
ಅವರನ್ನು ಕರುಣೆಯಿಂದ ನಿರುಕಿಸುತ್ತ ವಿಚಾರ ಮಾಡುತ್ತೇನೆ
ಉರಿಯುವ ಕಣ್ಣುಗಳನ್ನು ಮುಚ್ಚಿ ಬೇಗುದಿಯನ್ನು ಶಪಿಸುವ ಮುನ್ನ

ಯಾವಾಗಲೂ ಕಾಡುವ ಸಂಗತಿಗಳೂ ಇಲ್ಲವೆಂದಲ್ಲ
ನಾನು ವ್ಯವಸ್ಥೆಯ ತಾಳಕ್ಕೆ ಕುಣಿಯುವವನಲ್ಲ
ತಪ್ಪು ಜಾಗಗಳಲ್ಲಿ ಕೇಳಿಸುವ ಗಂಟೆಗಳು
ತಮಂಧವನು ಹುಡುಕುವ ಬಿದಿಗೆ ಚಂದ್ರಮ
ಎಲ್ಲೆಡೆಯೂ ನುಸುಳುವ ಕಾರಭಾರಿ ಶಿಲುಬೆ
ಇವೆಲ್ಲ ದುರುಗುಟ್ಟಿ ನನ್ನನ್ನು ಅಣಕಿಸುವಾಗ
ಹುಬ್ಬುಗಂಟಿಕುತ್ತೇನೆ… ಬಿಗಿದ ಮುಷ್ಠಿ ಎತ್ತುತ್ತೇನೆ
.. ಆದರೆ… ತಡೆಯಿರಿ.. ದೇವದೂಷಣೆಗೆ ನಾನು ತೀರ ಸಣ್ಣವನಲ್ಲವೆ?

ತೀವ್ರ ಹುಡುಕಾಟದ ಗಳಿಗೆಗಳೂ ಒದಗುತ್ತವೆ
ಏಕೆಂದರೆ ನನ್ನಲ್ಲೂ ಹಪಹಪಿಸುವ ಆತ್ಮವಿದೆ
ನಿನ್ನ ದಟ್ಟ ನೀಲಿ ಕಣ್ಣುಗಳನ್ನು ನೋಡಿದಾಗ
ಅಲೆಗಳನು ಮೋಡಗಳನು ಅಂಗೈಯಲ್ಲಿ ಕಾಣುತ್ತೇನೆ
ಅಂದುಕೊಂಡಿದ್ದೇನೆ.. ಹಾರಬಹುದೇನೋ ಅನಂತ, ಕಾಣದ ನೆಲಗಳಿಗೆ
ಹೆಕ್ಕಿ ತೆಗೆಯಬಹುದೇನೋ ಒಂದು ಶಂಖ ಆಳದಾಚೆಯಿಂದ
ಆದರೆ.. ತಡವರಿಸುತ್ತೇನೆ.. ಹುಮ್ಮಸ್ಸು ತಡೆಯುತ್ತೇನೆ.
ಯಾರಿಗೆ ಗೊತ್ತು.. ನನ್ನಂತೆ ನಿನ್ನ ಕಣ್ಣುಗಳಿಗೂ ಆಳವೇ ಇರಲಿಕ್ಕಿಲ್ಲ..!!

Litany from a Hollow Well

Some things inspire me more than once
The spring, the bud and the full moon
The tide, the cloud and the shower in the noon.

Perhaps…
I am a man who still is not dead
For, I see the beauty that surrounds
Can still hear my grandpa whispering
‘Don’t just see it, Son.. behold it’
Well…have tried hard you can be sure
to behold even the unseen!
But there’s this… it’s not me…
Time who plays these blatant games

Other things inspire me too
For, I am not the one who averses
When I see those muddy Cupids
with their bows broken at birth
and the arrows dissolved in thin air
Some wearing a stick, and others… emptiness!
I watch them with compassion and think twice
before I close my burning eyes and swear in anguish

There are things that haunt me ever
For, I am not the one who fears dissent.
The ringing bell that is out of place
The crescent moon that seeks darkness
and the cross that pierces through
Intimidated I am by their stare
I try to frown and bang a fist
… wait … am I too mortal to blaspheme?

There are moments when I need to search
For I too have a resurgent soul
When I see your deep blue eyes
feel the clouds and the tides in my palms
I could fly eternally to unseen lands
and find a conch at cavernous depths
Well… but then I restrain from the endeavour
for… perhaps…your eyes are as shallow as me!!

ಬೆಳಕು

Light

ಈ ಫೋಟೋ ನನ್ನ ಸಂಚಾರಿ ಫೋನಿನಲ್ಲಿ ಸಿಕ್ಕಿದ್ದು. ಏನೆಂದು ಗೊತ್ತಿಲ್ಲ. ಬಹುಶಃ ನಿರುದ್ದಿಶ್ಶವಾಗಿ ಸುಮ್ಮನೆ ಏನೋ ತೆಗೆದಿರಬೇಕು. ಅದಿರಲಿ. ಅದನ್ನು ನೋಡಿದ ಕೂಡಲೆ ಏನೇನೋ ಅನ್ನಿಸಿತು. ಅನ್ನಿಸಿದ್ದನ್ನು ಕೆಳಗೆ ದಾಖಲಿಸಿದ್ದೇನೆ. ಹಾಗೆಯೇ ಇಂಗ್ಲಿಶಿಗೆ ಅನುವಾದವನ್ನೂ ಮಾಡಿದ್ದೇನೆ; ಅವಸರದ ಅನುವಾದ.

—-

ಜಗದಗಲ ಹಣೆಬಡೆದ
ಹಿತ್ತಾಳೆ ಮೊಗದೊಡೆಯ
ಮುಚ್ಚುಕಂಗಳ ಸಂತ
ನಿರ್ಲಿಪ್ತ ಜಂಗಮನೆ

 

ಧ್ಯಾನಸ್ತ ಅಲ್ಲಮನೆ?

 

ಪ್ರಶಾಂತ
ಅಭಯಂಕರ
ಶಿವನೆ?

 

ಹಣೆಗಣ್ಣಲ್ಲ
ಜ್ಞಾನದ ಬೆಳಕಿಂಡಿ
ಹಣೆಯ ಛೇದಿಸಿ
ಯಜ್ಞಕುಂಡವ ಹೂಡಿ
ಬೆಳಕ ಸೂಸುವ
ಅಘೋರಿಯೆ
ಮಹಾ ಮಹಿಮನೆ

—-

Blanket forehead
Brazen-faced
Closed eyes. Saint.
An impassive Jangama?

 

Musing Allama, perhaps.

 

Tranquil
Unstartling
Shiva?

 

Not a flaming Third Eye
A passage for wisdom
Bored the forehead
to install a Yajnakunda
The blessed one
Aghori
Radiates light.