ಕಳೆದ ೧೨-೧೮ ತಿಂಗಳಲ್ಲಿ ಲೆಕ್ಕವಿಲ್ಲದಷ್ಟು ಸ್ಫೋಟಗಳು ನಡೆದಿವೆ. ಎಲ್ಲೋ ಒಮ್ಮೆ ಓದಿದ್ದಂತೆ, ಪ್ರತಿ ೬ ವಾರಕ್ಕೊಮ್ಮೆ ತಪ್ಪದೇ ಯಾವುದಾದರೂ ಒಂದು ನಗರದಲ್ಲಿ ಬಾಂಬುಗಳು ಸಿಡಿಯುತ್ತಿವೆ, ಜೀವಗಳು ಹೋಗುತ್ತಿವೆ. ನಾನು ದೂರದಲ್ಲಿರುವುದು ಹತಾಶೆಯ ಭಾವವನ್ನು ಇನ್ನಷ್ಟು ಹೆಚ್ಚಿಸುತ್ತದೆ, ಪ್ರತಿ ಸಲವೂ. ಆದರೆ ಮೊನ್ನೆ ೨೬ನೇ ತಾರೀಖು ಮಧ್ಯಾಹ್ನ (ಭಾರತದಲ್ಲಿ ಮಧ್ಯರಾತ್ರಿ) ನನ್ನ ಮನಸ್ಸಿನ ಭಾವ ಹಿಂದೆಂದಿನದಕ್ಕಿಂತ ತುಂಬ ಭಿನ್ನವಾಗಿತ್ತು. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳು ನಮ್ಮೆಲ್ಲರ ದಿನಚರಿಯ ಅಂಗವಾಗಿಬಿಟ್ಟಿವೆ. ಆದರೆ ಈ ಸಲದ್ದು ಕೊಟ್ಟ ಆಘಾತ ಮಾತ್ರ ಎಣೆಯಿಲ್ಲದ್ದು. ನಮ್ಮ ಮನೆ, ಊರು, ದೇಶದ ಬಹುತೇಕ ಮಂದಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾಗ ನಡೆಯುತ್ತಿದ್ದ ಅತಿಕ್ರಮಣವನ್ನು ಸುದ್ದಿಯಲ್ಲಿ ಓದುತ್ತ, ನೋಡುತ್ತ ಕಂಗಾಲಾಗಿ ಕೂತಿದ್ದೆ. ಬಾಂಬೆಯಂಥ ಒಂದು ಬೃಹತ್ ನಗರವನ್ನು ಒಂದಷ್ಟು ಅಮಾನುಷ ಯುವಕರು ತೆಕ್ಕೆಗೆ ತೆಗೆದುಕೊಂಡು ಅಟ್ಟಹಾಸಗೈಯುತ್ತಿದ್ದ ದೃಶ್ಯಗಳು ನಂಬಲಸಾಧ್ಯವಾದುವಾಗಿದ್ದುವು. ಲ್ಯಾಬ್‍ನಲ್ಲಿ ಕಂಪ್ಯೂಟರ್ ಮುಂದೆ ಕೂತು ನೋಡನೋಡುತ್ತಿದ್ದಂತೆ ೪ ಸಾವು ಎಂಬುದು ೮೦ ಸಾವು ಎಂದು ಬದಲಾಗಿದ್ದನ್ನು ಕಂಡು, ಸದ್ಯಕ್ಕೆ ಇದು ಮುಗಿದರೆ ಸಾಕು ಎಂದು ಕೈಚೆಲ್ಲಿದ್ದೆ.
Continue reading “ಇಂಥ ಒಂದು ದಿನದಂದು…”
ಧ್ರುಪದ
ನನ್ನ ಜೀಮೇಲ್‍ನ ಅಂಚೆಡಬ್ಬಿಯಲ್ಲಿ ಕೆಲವು ಹಳೆಯ ಪತ್ರಗಳನ್ನು ಹುಡುಕುತ್ತಿದ್ದೆ. ಏನೋ ಕಾರಣಕ್ಕೆ ’ಧ್ರುಪದ’ ಶಬ್ದವುಳ್ಳ ಪತ್ರಗಳನ್ನು ಹುಡುಕುವ ಆದೇಶ ಕೊಟ್ಟೆ. ನೋಡುತ್ತಿದ್ದಾಗ ತುಂಬಾ ಹಳೆಯ ಪತ್ರವೊಂದು ಸಿಕ್ಕಿತು. ಇದು ೨೦೦೫ರ ಮೇ, ೪ನೇ ತೇದಿಯಂದು ನಾನು ನನ್ನ ಆತ್ಮೀಯ ಮಿತ್ರನೊಬ್ಬನಿಗೆ ಬರೆದದ್ದು:
Nothing on earth is as divine and soothing as a Dhrupad rendition. This is specially true when someone from the Dagar family does it with utmost efficacy. I am thoroughly grateful!
I strongly recommend Dhrupad to you. It is the purest form of music.
ಮೂರ್ತ ದೇವರುಗಳೂ ಸಹಿಷ್ಣುತೆಯೂ
ನನ್ನದೊಂದು ಥಿಯರಿ ಇದೆ. ಹಿಂದೂ ಧರ್ಮ ಸಾಮಾನ್ಯವಾಗಿ ಉಳಿದ ಬಹುತೇಕ ಧರ್ಮಗಳಿಗಿಂತ ಹೆಚ್ಚು ಸಹಿಷ್ಣುವೂ, ತನ್ನ ವಿರುದ್ಧ ನಡೆಯುವ “ಪಿತೂರಿ” “ಅಪಚಾರ”ಗಳ ಬಗ್ಗೆ ಕಡಿಮೆ ಮುಂಗೋಪಿಯೂ ಆಗಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಎರಡು (ವಸ್ತುತ:, ಇವೆರಡೂ ಒಂದಕ್ಕೊಂದು ಸಂಬಂಧಿಸಿದ್ದೇ ಆಗಿವೆ): (೧) ಬಹುದೇವತೆಗಳ ಆರಾಧನೆ (Polythiesm) (೨) ಸಗುಣ ಸಾಕಾರ ಮೂರ್ತ ದೈವತ್ವ (Personal God). ದೇವನೊಬ್ಬ ನಾಮ ಹಲವು, ಅಲ್ಲವೇ? ದೇವನೆಂಬುದೇ ನಿರ್ಗುಣ, ನಿರಾಕಾರವಲ್ಲವೇ? ಇತ್ಯಾದಿ ಪ್ರಶ್ನೆ ವಾದಗಳು ಸಿಂಧುವೇ. ಆದರೆ ನನಗೆ ಇಲ್ಲಿ ಮುಖ್ಯವಾಗಿರುವುದು ಸಾಮಾನ್ಯ ಜನರ ದಿನನಿತ್ಯದ ಆಚರಣೆಗಳಿಗೆ ಒದಗುವ ದೇವರು; ಮೆಟಫಿಸಿಕಲ್ ಗ್ರಹಿಕೆಗಳಲ್ಲ.
Continue reading “ಮೂರ್ತ ದೇವರುಗಳೂ ಸಹಿಷ್ಣುತೆಯೂ”
ನಿಮಗಾಗಿ ಮುಂಜಾವದ ಕಾಫಿಯಂಥ ಕುದಿ
(ಬಹಳ ಮೊದಲಿಗೆ ಬರೆದದ್ದು.)
ಅದು ಶುರುವಾಗುತ್ತದೆ ಪ್ರತಿ ಬೆಳಿಗ್ಗೆ. ಮೊಬೈಲ್ ಫೋನಿನಲ್ಲಿನ ಡಿಜಿಟಲ್ ಸಮಯ. ೬:೩೦. ೭:೧೫. ಅಥವಾ ೭:೪೫. ಎಲ್ಲಾ ಒಂದೇ. ಯಾವುದೇ ಫರಕಿಲ್ಲ. ವರ್ತಮಾನ ಪತ್ರಗಳು ನೇಪಾಳ, ಬಿಎಂಐಸಿ, ಪರಮಾಣು ಒಪ್ಪಂದ ಅಥವಾ ಫ಼ುಟ್‍ಬಾಲ್ ಬಗ್ಗೆ ಮಾತಾಡುತ್ತವೆ. ಟಿವಿ ಹಳಸಿದ ಸುದ್ದಿಯನ್ನೇ ಇನ್ನೂ ಮಾರುತ್ತಿದೆ. ನಿನ್ನ ಬಾಲ್ಕನಿಯಿಂದ ನಾಕೇ ಅಡಿ ದೂರದಲ್ಲಿರುವ ಸಂಪಿಗೆ ಮರ. ಅದರಲ್ಲಿ ಹೂವರಳಿದ್ದನ್ನು ನಾನು ಎಂದೂ ಕಂಡಿಲ್ಲ. ಎಂದಿನಂತೆ ಸಮಯಕ್ಕೆ ಸರಿಯಾಗಿ ಕೆಳಗೆ ರಸ್ತೆಬದಿಯಲ್ಲಿ ಕಾಣುವ ಮುದುಕಿಯನ್ನು ನೋಡುತ್ತಿದ್ದಂತೆ ಅದು ಮುಂದುವರಿಯುತ್ತದೆ. ಮುದುಕಿ ಎಂದಿನಂತೆ ಅಚ್ಚುಕಟ್ಟು. ನೀಟಾದ ಸೀರೆ. ಹೂ ಮುಡಿದಿದ್ದಾಳೆ. ಆದರೆ ಕೆಳಗಿನ ಮನೆಯವರು ಎಲ್ಲೆಲ್ಲೂ ಹರಡಿದ ಕಸವನ್ನು ಬಳಿದು ತನ್ನ ಗಾಡಿಗೆ ಹಾಕಲು ಒದ್ದಾಡುತ್ತಿದ್ದಾಳೆ. ಅಮ್ಮ ಅವಳನ್ನು ನೋಡಿ ಮರುಕ ಪಡುತ್ತಾಳೆ. “ಎಲ್ಲ ಕಸವನ್ನು ಒಂದು ಪ್ಲ್ಯಾಸ್ಟಿಕ್ ಚೀಲದಲ್ಲಿ ಹಾಕಿ ಒಂದು ದಂಡೆಗೆ ಇಟ್ಟರೆ, ಪಾಪ ಆ ಮುದುಕಿ ಸುಲಭವಾಗಿ ತೊಗೊಂಡು ಹೋಗುತ್ತಾಳೆ,” ಅಷ್ಟು ಮಾಡಲು ಏನು ಧಾಡಿಯೋ ಏನೋ? ಕಸ ಮುಸುರೆಯನ್ನು ಊರ ತುಂಬಾ ಎರಚಾಡುತ್ತಾರೆ.
Continue reading “ನಿಮಗಾಗಿ ಮುಂಜಾವದ ಕಾಫಿಯಂಥ ಕುದಿ”
“It’s easier to be an asshole to words than to people.”
ಇಂಟರ್‌ನೆಟ್ಟಿನಲ್ಲಿ ಫ಼ೋರಮ್ಮುಗಳು, ಮೇಲಿಂಗ್ ಲಿಸ್ಟುಗಳು ಅಥವಾ ಬ್ಲಾಗುಗಳು, ಇಂಥ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗಂತೂ ಒಮ್ಮೆಯಲ್ಲಾ ಒಮ್ಮೆ ’ಗಾಡ್ವಿನ್ಸ್ ಲಾ’ದ (Godwin’s Law) ಅನುಭವ ಆಗಿಯೇ ಆಗುತ್ತದೆ. ಯಾವುದಕ್ಕೂ ಒಮ್ಮೆ ಗಾಡ್ವಿನ್ ಏನು ಹೇಳಿದ್ದ ಎಂಬುದನ್ನು ನೋಡೋಣ.
ಯೂಸ್‍ನೆಟ್ ಮೇಲಿನ ಚರ್ಚೆಯೊಂದು ಬೆಳೆಯುತ್ತ ಹೋದಂತೆ ಆ ಚರ್ಚೆಯಲ್ಲಿ ನಾತ್ಸೀಗಳನ್ನು ಅಥವಾ ಹಿಟ್ಲರ್‌ನನ್ನು ಒಳಗೊಂಡ ಹೋಲಿಕೆ ವ್ಯಕ್ತವಾಗುವ ಸಂಭವನೀಯತೆ ಒಂದನ್ನು (೧.೦ ಅಥವಾ ೧೦೦%) ಸಮೀಪಿಸುತ್ತದೆ.
(ಅಥವಾ ಇಂಗ್ಲಿಶಿನಲ್ಲಿ – “As a Usenet discussion grows longer, the probability of a comparison involving Nazis or Hitler approaches one.”)
Continue reading ““It’s easier to be an asshole to words than to people.””
ಯಾವುದೇ ಕೊಲೆಗೂ ಒಂದು ಹೇತು, motive ಬೇಕು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಹೆಣ್ಣು, ಹೊನ್ನು, ಮಣ್ಣು, ಮತ್ತೊಂದು. ಜಗತ್ತಿನ ಚರಿತ್ರೆಯಲ್ಲಿ ಇಂದಿನವರೆಗೆ ಕೋಟಿಗಟ್ಟಲೆ ಕೊಲೆಗಳಾಗಿವೆ. ದೇಶಗಳು, ಊರುಗಳು, ಬುಡಕಟ್ಟುಗಳು, ಸಂಘಟನೆಗಳು, ಕುಟುಂಬಗಳು, ವ್ಯಕ್ತಿಗಳು — ನಾಶವಾಗಿವೆ. ಇತಿಹಾಸದ ಹಾಗೂ ವರ್ತಮಾನದ ಬಹುಪಾಲು ಕೊಲೆಗಳಿಗೆ ಮೂಲ ಹೇತು – ದೇವರು ಮತ್ತು/ಅಥವಾ ಧರ್ಮ. ದೇವರು ಕೊಂದಷ್ಟು ಜನರನ್ನು ಬೇರೆ ಯಾರೂ, ಯಾವುದೂ ಕೊಂದಿಲ್ಲ. ನಾನು ಇತ್ತೀಚೆಗೆ ಎಸ್‍ಳಿಗೆ ಹೇಳುತ್ತಿದ್ದೆ. ಗೂಗಲ್ ನ್ಯೂಸ್ ಇಂಡಿಯಾದ ಪೋರ್‍ಟಲ್ ತೆಗೆಯುವುದೆಂದರೆ ಈಹೊತ್ತು ಇಂಡಿಯಾದಲ್ಲಿ ದೇವರು ಎಷ್ಟು ಜನರನ್ನು ಕೊಂದ ಎಂಬ matter of factly ಕುತೂಹಲದ ಮಟ್ಟಕ್ಕೆ ಇಳಿದುಬಿಟ್ಟಿದೆ. ರೂಪಗಳು ಬೇರೆ ಬೇರೆ. ಒಮ್ಮೊಮ್ಮೆ ಸರಣಿ ಬಾಂಬುಗಳು. ಮತ್ತೊಮ್ಮೆ ಚರ್ಚಿಗೆ ಬೆಂಕಿ. ಮತ್ತೊಂದು ನಮೂನೆ ಬೇಕೆನ್ನಿಸಿದರೆ ದೇವರ ಸನ್ನಿಧಿಯಲ್ಲಿ ಕಾಲ್ದುಳಿತಕ್ಕೆ ಸಿಲುಕಿ ಸಾವುಗಳು. ಮೂಲ ಕಾರಣ ಒಂದೇ.
ಅಚೇಬೆಯ ಪುರಾತನ ಆಫ಼್ರಿಕನ್ ಬುಡಕಟ್ಟುಗಳಲ್ಲಿ ಯಾವುದೋ ದೇವರು ತನ್ನ ಕೆಲಸ ಸರಿಯಾಗಿ ನಡೆಸುತ್ತಿಲ್ಲ ಅಥವಾ ಬುಡಕಟ್ಟಿನ ಮೇಲೆ ಅನ್ಯಾಯವೆಸಗುತ್ತಿದೆ ಎಂಬ ಭಾವನೆ ಹಬ್ಬತೊಡಗಿತೆಂದರೆ ಆ ದೇವರ ಕತೆ ಮುಗಿಯತೊಡಗಿತು ಎಂದೇ ಅರ್ಥ! ಅಂಥ ಅದಕ್ಷ ಅಥವಾ ವಿನಾಶಕಾರಿ ದೇವರನ್ನು ತೊಗೊಂಡು ಏನು ಮಾಡುವುದು ಎಂದವರೇ ಜನರು ಆ ದೇವರನ್ನು ನಾನಾ ನಮೂನೆಯಿಂದ ತಿರಸ್ಕರಿಸಿ ಹೊರಗಟ್ಟುತ್ತಾರೆ. ಬೇಕೆನ್ನಿಸಿದರೆ ಆ ದೇವರ ಸ್ಥಾನಕ್ಕೆ ಬೇರೊಬ್ಬ ದೇವರನ್ನು ಸ್ಥಾಪಿಸುತ್ತಾರೆ. ದೇವರುಗಳಿಗೆ ನಾವು ಪೂಜೆ ನೈವೇದ್ಯ ಸಲ್ಲಿಸುತ್ತೇವೆ ದಿಟ; ಅದಕ್ಕೆ ಅಂಜಿ ಗಡಗಡ ನಡುಗುತ್ತೇವೆನ್ನುವುದೂ ದಿಟ. ಆದರೆ ಅಂಥಾ ಒಂದು ದೇವರ ಕೆಲಸವೆಂದರೆ ನಮ್ಮ ಅಭದ್ರತೆಗಳನ್ನೂ, ರೋಗ ರುಜಿನಗಳನ್ನೂ, ಬರಗಾಲವನ್ನೂ ನೀಗಿಸಿ ಜನರನ್ನು ಸಂರಕ್ಷಿಸಬೇಕಾದ್ದು; ಜನರಿಗೆ ಸುಖ ಸಂತೋಷವನ್ನು ನೀಡಿ ಸಲಹತಕ್ಕದ್ದು. ಇಂಥ ಜವಾಬುದಾರಿಯನ್ನು ನಿಭಾಯಿಸುವ ಯೋಗ್ಯತೆಯಿಲ್ಲದ ದೇವರು ಇರುವ ಅವಶ್ಯಕತೆಯಿಲ್ಲ. ಇದು ಆ ಬುಡಕಟ್ಟುಗಳ ಧೋರಣೆ.
ಆದರೆ ೨೧ನೆಯ ಶತಮಾನದ ನಾಗರಿಕರಾದ ನಾವು, ನಾವುಗಳು ಹುಟ್ಟುಹಾಕಿಕೊಂಡ ವಿಧ್ವಂಸಕ ದೇವರುಗಳ, ಧರ್ಮಗಳ ಅಟ್ಟಹಾಸದಿಂದ ಇನ್ನಷ್ಟು ಹುರುಪುಗೊಳ್ಳುತ್ತೇವೆ. ಜಿದ್ದಿಗೆ ಬೀಳುತ್ತೇವೆ. ದೇವರುಗಳು, ಧರ್ಮಗಳನ್ನು ಮೀರುವ ಬದಲು ಅವುಗಳ ಕರಾಳ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ಹೆಣಗುತ್ತೇವೆ.
ಏನ್ಮಾಡ್ಕೋಂಡಿದೀರಾ…
ಬೆಂಗಳೂರಿನ ಮಹತ್ತರ ಆವಿಷ್ಕಾರಗಳಲ್ಲಿ ಒಂದು ’ಏನ್ ಮಾಡ್ಕೊಂಡಿದೀರಾ?’ ಬೆಳ್ಳಂಬೆಳಗೆ ಎದ್ದು ನನ್ನ ತಮ್ಮ ಟಿವಿ ಹಚ್ಚುತ್ತಿದ್ದ. ಅಂದರೆ ಅವನಿಗೆ ಬೆಳಗಾದಾಗ. ಹಚ್ಚಿದ ಕೂಡಲೆ ಒಮ್ಮಿಂದೊಮ್ಮೆಲೆ ಮೊಳಗುತ್ತಿತ್ತು, ’ಏನ್ ಮಾಡ್ಕೊಂಡಿದೀರಾ?’ ಉದಯ, ಉಷೆ, ಯು೨, ಕಾವೇರಿ, ಕೃಷ್ಣಾ, ಮಲಪ್ರಭಾ, ಅಘನಾಶಿನಿ, ದೂಧಗಂಗಾ ಮೊದಲಾದ ವಾಹಿನಿಗಳೆಲ್ಲವುಗಳಿಂದ ಏಕಕಾಲಕ್ಕೆ ಉಕ್ಕಿಹರಿಯುವುದು, ’ಏನ್ ಮಾಡ್ಕೊಂಡಿದೀರಾ?’ ಮೊದಮೊದಲಿಗೆ ಈ ಕಾರ್ಯಕ್ರಮಗಳ ಬಗ್ಗೆ ಅತೀವ ತಿರಸ್ಕಾರ ತೋರಿಸುತ್ತಿದ್ದ ನಮ್ಮ ತಂದೆ (ನಾನೂ ಕೂಡ ಮೊದಮೊದಲು ಅದೇ ಮಾಡುತ್ತಿದ್ದೆನೆನ್ನಿ) ಕೂಡ ಕಾಲಕ್ರಮೇಣ ಅದರ ನಶೆಗೆ ಒಳಗಾದರು ಎಂದರೆ ಅದರ ಸೆಳೆತ ಹೇಗಿರಬೇಡ!
Continue reading “ಏನ್ಮಾಡ್ಕೋಂಡಿದೀರಾ…”
ಜೀವಕ್ಕೆ ಇನ್ನು ಸೌಖ್ಯವಿಲ್ಲ
ಚಿನುವಾ ಅಚೇಬೆ ನನ್ನ ಮೆಚ್ಚಿನ ಲೇಖಕರ ಪಟ್ಟಿಯ ಮುಂಚೂಣಿಯಲ್ಲಿರುವವರು. ಅವರ ಕಾದಂಬರಿಗಳ ಮುಖ್ಯ ಧಾತು ನೈಜೀರಿಯಾದ ಇಬೋ ಅಥವಾ ಇಗ್ಬೋ (ibo or igbo) ಜನಸಮುದಾಯದ ಮೇಲೆ ಕೊಲೋನಿಯಲಿಸಂನ ಪ್ರಭಾವ. ಅಚೇಬೆಯ ಭಾಷೆ ಸರಳ ಸುಂದರ. Poetic. ಇಂಗ್ಲಿಶಿನಲ್ಲಿ ಬರೆಯುವ ಅಚೇಬೆ, ಇಂಗ್ಲಿಶ್ ಭಾಷೆಯನ್ನು ಇಬೋ ಜನರ ನುಡಿಗಟ್ಟಿಗೆ ಹೊಂದುವಂತೆ ಅನುಕೂಲಿಸಿಕೊಂಡು ಭಾಷೆಯ ಸಾಧ್ಯತೆಗಳ ಮತ್ತೊಂದು ದರ್ಶನ ತೋರಿಸುತ್ತಾರೆ. ಇಬೋ ಜನರ ethos ಅತ್ಯಂತ ಸುರಳೀತವಾಗಿ ಆ ಭಾಷೆಯಿಂದ ಹೊಮ್ಮುತ್ತದೆ. ಅದು ಇಬೋ ಜನರ ಭಾಷೆ: ಮಾತುಕತೆಯೆಂದರೆ ಚಮತ್ಕಾರೋಕ್ತಿಗಳಿಂದ ಕೂಡಿದ ಉದ್ದುದ್ದ, ಆದರೆ ಬೋರು ಹೊಡೆಸದ, ಭಾಷಣದಂಥವು; ಮಾತಿಗೊಮ್ಮೆ ಉದುರಿಸುವ, ಆದರೂ ಪ್ರತಿ ಸಲ ಹೊಸದೆನ್ನಿಸುವ, ಜಾಣ್ಣುಡಿಗಳು. ಅಚೇಬೆಯ ಮೊದಲನೆಯ ಕಾದಂಬರಿ Things Fall Apartನಲ್ಲಿ ಅವರೇ ಹೇಳುವಂತೆ, “Among the Igbo, the art of conversation is regarded very highly, and proverbs are the palm-oil with which words are eaten.”
Continue reading “ಜೀವಕ್ಕೆ ಇನ್ನು ಸೌಖ್ಯವಿಲ್ಲ”
ಗೋಕಾಂವಿ ನಾಡಿನಲ್ಲಿ ಒಂದು ಸುತ್ತು
ನಮ್ಮ ಗೋಕಾಂವಿ ನಾಡು ರಣರಣ ಬಿಸಿಲಿನ ಪ್ರದೇಶ. ವೈಶಾಖದಲ್ಲಿ ನೀವು ಯಾವಾಗರೆ ಅಕಸ್ಮಾತ್ ಹಾದಿ ತಪ್ಪಿ ಬಂದು ಗೋಕಾಂವಿ ಸ್ಟ್ಯಾಂಡಿನಲ್ಲಿ ಇಳದ್ರಿ ಅಂದ್ರ, ಸ್ಟ್ಯಾಂಡಿನ ಹಿಂಭಾಗದ ಗುಡ್ಡವಂತೂ ನಿಮ್ಮ ಗಮನಕ್ಕೆ ಬರುವ ಮೊದಲನೆಯ ವಿಸ್ಮಯ. ಬೃಹತ್ ಬಂಡೆಗಳು ಯಾವುದೇ ಆಧಾರವೇ ಇಲ್ಲ ಎಂಬಂತೆ; ಉರುಳಲು ತಯಾರಾಗಿ ನಿಂತಂತೆ, ತೋರುತ್ತವೆ. ಬಿಸಿಲಿಗೆ ಮಿರಮಿರನೆ ಮಿಂಚುತ್ತಿರುತ್ತವೆ. ಪ್ರತಿ ಸಲ ಗೋಕಾಂವಿ ಸ್ಟ್ಯಾಂಡಿನಲ್ಲಿ ಇಳಿದಾಗಲೂ ಅಂದುಕೊಳ್ಳುತ್ತೇನೆ, ’ಅಲ್ಲ, ಇಂಥಾ ಈ ಒಂದು ಬಂಡೆಗಲ್ಲು ಉರುಳಿ ಕೆಳಗ ಬಂತಂದರ ಏನಾದೀತು? ಸ್ಟ್ಯಾಂಡ್ ಅಂತೂ ಹಕನಾತ ಜಜ್ಜಿ ಹೋದೀತು.’ ಹಂಗ ಸ್ವಲ್ಪ ಮ್ಯಾಲೆ ನೋಡಿದರ ಸುಣ್ಣ ಹಚ್ಚಿದ ಒಂದು ಸಣ್ಣ ಆಕಾರ ಕಾಣತದ. ಅದು ಮಲಿಕಸಾಬನ ಗುಡಿ ಅಥವಾ ದರ್ಗಾ. ನಾವು ಸಣ್ಣವರಿದ್ದಾಗ ಮಲಿಕಸಾಬನ ಗುಡಿಯೇ ಜಗತ್ತಿನ ಅತ್ಯಂತ ಎತ್ತರದ ಸ್ಥಾನವಾಗಿತ್ತು. ಒಮ್ಮೆ ಗುಡ್ಡಾ ಹತ್ತಿ ಅಲ್ಲಿ ಮಟಾ ಹೋಗಿ ಬರಬೇಕು ಅಂತ ರಗಡು ಸಲ ಅಂದುಕೊಂಡರೂ ಯಾಕೋ ಯಾವತ್ತೂ ಹೋಗಿಲ್ಲ. ಮಲಿಕಸಾಬನ ಗುಡ್ಡದ ಬಂಡೆಗಳು ಸದಾಕಾಲ ಮಳೆಗಾಗಿ ಕಾಯುತ್ತ ಕುಂತಲ್ಲೆ ಕೂತು ತಪಸ್ಸು ನಡೆಸುತ್ತಿರುವಂತೆಯೇ ನಮ್ಮ ಬೆಳವಲದ ಮಂದಿಯ ಬೇಗುದಿಯನ್ನು ಇನ್ನೂ ಹೆಚ್ಚಿಸುತ್ತಿರುತ್ತವೆ.
Continue reading “ಗೋಕಾಂವಿ ನಾಡಿನಲ್ಲಿ ಒಂದು ಸುತ್ತು”
ಕಾರ್
ಪಾಮುಕ್‍ನ ’ಸ್ನೋ’ (Snow, ಟರ್ಕಿಶ್‍ನಲ್ಲಿ ’ಕಾರ್’) ಕಾದಂಬರಿಯನ್ನು ನಾನು ಇಲ್ಲಿನ ಚಳಿಗಾಲದಲ್ಲಿ ಓದಬೇಕಿತ್ತೇನೋ. ಅವನ ಹಿಮದ ವರ್ಣನೆಯ ಫಸ್ಟಹ್ಯಾಂಡ್ ಅನುಭವವಾಗುತ್ತಿತ್ತೇನೋ: ಹಿಮದ ಹರಳೊಂದು ಷಟ್ಕೋನವಂತೆ; ಅಥವಾ, ಹೆಚ್ಚು ಹೆಪ್ಪುಗಟ್ಟುತ್ತ ಹೋದಂತೆ ರೆಂಬೆಕೊಂಬೆಗಳು ಮೂಡಿ, ಆರು ಬೆರಳುಗಳನ್ನು ಚಾಚಿದಂತೆಯೋ, ನಕ್ಷತ್ರ ಮೀನಿನಂತೆಯೋ ಕಾಣುತ್ತದಂತೆ. ಇಲ್ಲಿ ಹಿಮ ಬಿದ್ದಾಗ ಈ ಕಾದಂಬರಿಯನ್ನು ಮತ್ತೊಮ್ಮೆ ಓದಿ, ಪಾಮುಕ್ ವರ್ಣಿಸಿದಂತೆ ಹಿಮದ ಅನುಭವವಾಗುತ್ತದೋ ನೋಡಬೇಕು.
Continue reading “ಕಾರ್”