ಸಾವು ಮುಗಿಯಿತು…

ಲೆವ್ ಟಾಲ್‍ಸ್ಟಾಯ್‍ನ ಒಂದು ನೀಳ್ಗತೆ ’ಇವಾನ್ ಇಲ್ಯಿಚ್‍ರ ಸಾವು’ (The Death of Ivan Ilych) ನನಗೆ ಅತ್ಯಂತ ಇಷ್ಟವಾಗುವ ಕೃತಿಗಳಲ್ಲಿ ಒಂದು. ಮೇಲಿಂದ ಮೇಲೆ ಆ ನೀಳ್ಗತೆಗೆ ಮರಳುತ್ತಿರುತ್ತೇನೆ. ತಮಾಷೆ, ವಿಷಾದ, ವಾಸ್ತವ, ವಿಪರ್ಯಾಸ… ಎಲ್ಲವನ್ನೂ ಹದವಾಗಿ ಕಲೆಸಿ ಆ ಕತೆಯಲ್ಲಿ ಬಳಸಿದ ಟಾಲ್‍ಸ್ಟಾಯ್‍ನ ಭಾಷೆ ತುಂಬಾ ಇಷ್ಟವಾಗುತ್ತದೆ. ಕತೆಯನ್ನು ಓದುತ್ತ ಹೋದಂತೆ ಜೀವನ ಒಂದು farce ಎನ್ನುವ ಅಂಶ ನಮ್ಮನ್ನು ತಟ್ಟುತ್ತ ಹೋಗುತ್ತದೆ. ಪ್ರತಿ ಸಾರಿ ಈ ಕತೆ ಓದಿದಾಗ ಅದರ ಕೊನೆಯ ಸಾಲುಗಳು ಗಾಢವಾಗಿ ತಟ್ಟುತ್ತವೆ. ಸರಳವಾದ, ನಿರುಮ್ಮಳ ಸಾಲುಗಳವು. Continue reading “ಸಾವು ಮುಗಿಯಿತು…”

ಮತ್ತದೇ ಬೇಸರ…

ನನಗೆ ಮೊದಲಿಂದಲೂ ಊರುಗಳ ಬಗೆಗೆ ತುಂಬಾ ಆಸಕ್ತಿ. ಅಂದರೆ ಒಂದು ಊರಿನಲ್ಲಿ ಎಷ್ಟು ಜನರಿದ್ದಾರೆ, ಅದರ ವಿಸ್ತೀರ್ಣ ಎಷ್ಟು, ಪ್ರತಿಶತ ಎಷ್ಟು ಜನ ಕಾರು ಇಟ್ಟುಕೊಂಡಿದ್ದಾರೆ, ಇತ್ಯಾದಿ ವಿವರಗಳಲ್ಲ. ನನಗಿಷ್ಟವಾಗುವುದು ಗುಣಾತ್ಮಕ ವಿವರಗಳು. ವಿಶೇಷಣಗಳು. ಸ್ವಭಾವಗಳು. ಒಟ್ಟಾರೆ ಆ ಊರಿನ ಸ್ವರೂಪ, ಸಂಕ್ಷಿಪ್ತವಾಗಿ. ಆ ಊರಿನ ಬಣ್ಣ ಯಾವುದು, ವಾಸನೆ ಯಾವುದು, ಭಾವ ಯಾವುದು… ಅದೇನು ಶಾಂತ ಊರೋ, ಕೋಪಿಷ್ಠ ಊರೋ, ನಗೆಚಾಟಿಕೆಯದೋ… ಹೀಗೆ. ಕಾದಂಬರಿಯೊಂದನ್ನು ಓದುವಾಗ, ಅದರ ಪಾತ್ರಗಳು ವಾಸಿಸುವ ಊರುಗಳು, ಆ ಊರಲ್ಲಿ ಅವರ ಮನೆ, ಮನೆಯಲ್ಲಿ ಅವರ ಕುರ್ಚಿ ಮೇಜುಗಳ ಏರ್ಪಾಟು, ಟೆರೇಸಿಗೆ ಹೋಗುವ ಮೆಟ್ಟಿಲುಗಳು, ಟಿವಿ ಸ್ಟ್ಯಾಂಡಿನ ಕೆಳಗೆ ಇಟ್ಟ ಹಳೆಯ ವರ್ತಮಾನ ಪತ್ರಿಕೆಗಳು, ಎಲ್ಲವನ್ನೂ ಮನಸ್ಸಿನಲ್ಲೇ ಚಿತ್ರಿಸಿಕೊಳ್ಳುವುದಿಲ್ಲವೆ ಸ್ಪಷ್ಟವಾಗಿ? ಪ್ರತಿ ಸಲ ಪುಸ್ತಕ ತೆಗೆದಾಗಲೂ ಎಲ್ಲವೂ ಪಟಪಟನೆ ಓಡಿ ಬಂದು ತಾವೇ ಅನುಗೊಳ್ಳುವುದಿಲ್ಲವೆ? ಮುಂದೆ ಯಾವತ್ತೋ ಆ ಕಾದಂಬರಿಯ ನೆನಪಾದಾಗ, ಆ ಚಿತ್ರಗಳು ಕಣ್ಣೆದುರಿಗೆ ಸರಸರನೆ ಹಾಯುವುದಿಲ್ಲವೆ? ಹಾಗೆಯೇ, ಯಾವುದೋ ಊರನ್ನು ನೆನೆಸಿಕೊಂಡಾಗ ಮೂಡುವ ಚಿತ್ರ ಯಾವುದು? ಆಗುವ ಅನುಭವ ಎಂಥದ್ದು?
Continue reading “ಮತ್ತದೇ ಬೇಸರ…”

“ಯಾಕೆಂದರೆ… ನಾನು ಮೊನ್ನೆ ತಾನೇ ಮರಳಿ ಬಂದೆ…”

ಅವನು ಒಳಗೆ ಬಂದಾಗ ನಾನು ಒಂದರ್ಧ ಗ್ಲಾಸ್ ಬಿಯರ್ ಗುಟುಕರಿಸಿ ಕೂತಿದ್ದೆ. ಆಗ ತಾನೇ ಯಾರೋ ಜ್ಯೂಕ್‍ಬಾಕ್ಸಿನಲ್ಲಿ ದುಡ್ಡು ಹಾಕಿ ಹಾಡು ಶುರು ಮಾಡಿದ್ದರು. ಯಾವುದೋ ನನಗಿಷ್ಟವಾಗದ ಹಾಡು ಬರುತ್ತಿತ್ತು. ’ಯಾರಪ್ಪಾ ಇದು, ದುಡ್ಡು ಕೊಟ್ಟು ಕೆಟ್ಟ ಹಾಡು ಕೇಳುತ್ತಾರಲ್ಲ!’ ಎಂದು ನನ್ನಷ್ಟಕ್ಕೆ ನಾನು ಮುಸಿನಗುತ್ತಿದ್ದೆ. ಅವನು ಸ್ವಲ್ಪ ಅಪ್ರತಿಭನಾಗಿದ್ದಂತೆ ತೋರಿತು. ಕೌಂಟರಿನ ಎದುರಿಗಿನ ಖಾಲಿ ಕುರ್ಚಿಯೊಂದರಲ್ಲಿ ಕೂತ. ತನ್ನ ಸುತ್ತಮುತ್ತಲಿದ್ದವರನ್ನೆಲ್ಲ ಮಾತಾಡಿಸಿ ಕೈಕುಲುಕಿ ಪರಿಚಯ ಮಾಡಿಕೊಳ್ಳುತ್ತಿದ್ದ. ಹುಮ್ಮಸ್ಸಿನಿಂದಲ್ಲ, ಒಂದು ರೀತಿಯ ಅಳುಕಿನಿಂದ. ಅವನ ನಡೆನುಡಿಗಳಲ್ಲಿ ಹಗುರಾದ socialising ಇರಲಿಲ್ಲ. ಬದಲಿಗೆ, ಯಾವುದೋ ಭರವಸೆಗಾಗಿ ಹಾತೊರೆಯುತ್ತಿದ್ದ. ಅಭಯಹಸ್ತಕ್ಕಾಗಿ ಬೇಡುತ್ತಿದ್ದಂತಿತ್ತು.
Continue reading ““ಯಾಕೆಂದರೆ… ನಾನು ಮೊನ್ನೆ ತಾನೇ ಮರಳಿ ಬಂದೆ…””

ನಾವೆಲ್ಲರೂ ಕೈದಿಗಳೆ

ಹಿಂದಿನ ಲೇಖನದಲ್ಲಿ ಕೈದಿಯ ಇಬ್ಬಂದಿಯ ಬಗ್ಗೆ ಮಾತಾಡಿದೆವು. ಅದು ಆಸಕ್ತಿಕರವಾದ ಸಮಸ್ಯೆಯಂತೂ ಹೌದು. ಆದರೆ ಅದಕ್ಕಿಂತ ಹೆಚ್ಚಿನ ಉಪಯೋಗ ಅದರಿಂದ ಇದೆಯೆ? ಏನಾದರೂ ಸಾಮಾಜಿಕ ಪ್ರಸ್ತುತತೆ ಇದೆಯೆ? ಇದೆ. ಏಕೆಂದರೆ ನಾವೆಲ್ಲರೂ ಕೈದಿಗಳೆ! ಹಿಂದಿನ ಲೇಖನದಲ್ಲಿನ ರೀತಿಯ ಕೈದಿಗಳಲ್ಲ. ಅದು ಒಂದು ನಿದರ್ಶನ ಅಷ್ಟೆ. ಅಲ್ಲಿ ನಾನು ವಿವರಿಸಿದ್ದು ಒಂದು ಆಟ (ಗೇಮ್). ನಾವೆಲ್ಲರೂ ದಿನನಿತ್ಯವೂ ಇಂಥ ಅನೇಕ ಗೇಮ್‍ಗಳನ್ನು ಬೇಕಾಗಿಯೋ ಬೇಡಾಗಿಯೋ ಆಡುತ್ತಿರುತ್ತೇವೆ. ಅವನ್ನು ನಾವು ಹೇಗೆ ಆಡುತ್ತೇವೆ ಎನ್ನುವುದು ಬಹಳ ಮಟ್ಟಿಗೆ ನಮ್ಮ ಒಟ್ಟಾರೆ ವ್ಯವಸ್ಥೆಯನ್ನು ರೂಪಿಸುತ್ತದೆ. ಆದರೆ ಅಲ್ಲಿಗೆ ಹೋಗುವ ಮೊದಲು ಗೇಮ್ ಥಿಯರಿ ಏನು ಹೇಳುತ್ತದೆ ಮತ್ತು ಗೇಮ್ ಎಂದರೆ ಏನು ಎಂದು ಸಂಕ್ಷಿಪ್ತವಾಗಿ ತಿಳಿಯೋಣ. ನಾನು ಈ ಗ್ರಹಿಕೆಗಳನ್ನು intuitive ಸ್ತರದಲ್ಲಿ ವಿವರಿಸಲು ಪ್ರಯತ್ನಿಸುತ್ತೇನೆ. ನಿಖರ ಹಾಗೂ ಔಪಚಾರಿಕ definitionಗಳನ್ನು ಬೇಕಿದ್ದಲ್ಲಿ ನಂತರ ನೋಡಬಹುದು.

ಗೇಮ್ ಥಿಯರಿ ಕೆಲವು ಸಂದರ್ಭಗಳಲ್ಲಿ ಮನುಷ್ಯರು ತೋರಿಸುವ ನಡವಳಿಕೆಗಳನ್ನು ಸೆರೆಹಿಡಿದು ಅದಕ್ಕೆ ಔಪಚಾರಿಕವಾದ mathematical ಚೌಕಟ್ಟನ್ನು ಕೊಡಲೆತ್ನಿಸುತ್ತದೆ. ಇಂಥ ಒಂದು ಸಂದರ್ಭದ ಲಕ್ಷಣಗಳು ಹೀಗಿರುತ್ತವೆ: (೧) ಒಂದಕ್ಕಿಂತ ಹೆಚ್ಚು ಪಕ್ಷಗಳು ಅದರಲ್ಲಿ ಒಳಗಾಗಿರುತ್ತವೆ (೨) ಈ ಎಲ್ಲ ಪಕ್ಷಗಳಿಗೂ ಯಾವುದೋ ಸಂಪನ್ಮೂಲವನ್ನು ಕುರಿತು ಆಸಕ್ತಿ/ಪೈಪೋಟಿ/ತಿಕ್ಕಾಟ ಇರುತ್ತದೆ (೩) ಆದ್ದರಿಂದ ಇದು ಕೌಶಲ್ಯದಿಂದ ನಿರ್ಧಾರ ತೆಗೆದುಕೊಳ್ಳಬೇಕಾದ ಸಂದರ್ಭ. ಇಲ್ಲಿ ಒಂದು ಪಕ್ಷ ತೆಗೆದುಕೊಳ್ಳುವ ನಿರ್ಧಾರ ಉಳಿದ ಪಕ್ಷಗಳು ತೆಗೆದುಕೊಂಡಿರುವ/ತೆಗೆದುಕೊಳ್ಳುವ ನಿರ್ಧಾರದ ಮೇಲೆ ಪರಿಣಾಮ ಬೀರುತ್ತದೆ.
Continue reading “ನಾವೆಲ್ಲರೂ ಕೈದಿಗಳೆ”

ಕರಟಕ ದಮನಕರ ಇಬ್ಬಂದಿ

ಗೇಮ್ ಥಿಯರಿಯ ಬಗ್ಗೆ ಒಂದಷ್ಟು ಬರಿಯುವ ಅಂತ ಇದೆ. ನಾನು ಎಷ್ಟೋ ವಿಷಯಗಳನ್ನು ಶುರು ಮಾಡಿ, ಮುಂದುವರೆಸುತ್ತೇನೆ ಎಂದು ಹೇಳಿ, ನಂತರ ಮತ್ತೇನೇನೋ ಬರೆಯುತ್ತ ಮೈಮರೆತುಬಿಡುತ್ತೇನೆ. ಒಂದು ಸರಣಿಯಲ್ಲಿ ಏನನ್ನೂ ಬರೆದು ರೂಢಿಯಿಲ್ಲ. ಇದೂ ಹಾಗೇ ಆಗುತ್ತದೆ. ಆದರೂ ನನಗೆ ಇದೊಂದು exciting ವಿಷಯಾಗಿರುವುದರಿಂದ ಆವಾಗಾವಾಗ ಬರೆಯುತ್ತಿರುತ್ತೇನೆ ಎಂದು ಹೇಳಬಲ್ಲೆ. ನಾನು ಹೇಳುವ ಸಂಗತಿಗಳು ಬಹಳೇ ಮೂಲಭೂತವಾದುವು (ಎಲ್ಲಾ ರೀತಿಯಲ್ಲೂ). ಆದ್ದರಿಂದ ಅನೇಕರಿಗೆ ಇವು ಈಗಾಗಲೇ ಗೊತ್ತಿರಲೂಬಹುದು. ನಾನು ಈ ಪೋಸ್ಟಿನಲ್ಲಿ ಗೇಮ್ ಥಿಯರಿಯ ಒಂದು ಪ್ರಮಾಣಭೂತ ಸಮಸ್ಯೆಯನ್ನು ಪ್ರಸ್ತಾಪಿಸಿ, ಅದರ ಬಗ್ಗೆ ಓದುಗರ ಅನ್ನಿಸಿಕೆಗಳನ್ನು ಕೇಳುತ್ತೇನೆ. ಅದಾದ ನಂತರ ಗೇಮ್ ಥಿಯರಿಯ ನುಡಿಗಟ್ಟುಗಳು, ಡೆಫ಼ನಿಶನ್ನುಗಳು, ಉಪಯೋಗಗಳು ಇತ್ಯಾದಿ ನೋಡೋಣ.

ಕೈದಿಯ ಇಬ್ಬಂದಿ ಅಥವಾ Prisoner’s Dilemma (PD) ಬಹಳ ಹಳೆಯ ಒಡಪು. ಅದರ ಸ್ವಲ್ಪ ಭಿನ್ನ ಭಿನ್ನ ರೂಪಗಳಿವೆಯಾದರೂ ಅದರ ಸಾರವನ್ನು ಕೆಳಕಂಡಂತೆ ಸರಳವಾಗಿ ವಿವರಿಸಬಹುದು.
Continue reading “ಕರಟಕ ದಮನಕರ ಇಬ್ಬಂದಿ”

ಸಣ್ಣ ಸಂಗತಿಗಳು

ಕ್ಯಾಂಪಸ್ಸಿಗೆ ಹೋಗಲು ಬಸ್ಸು ಹತ್ತಿದ ತಕ್ಷಣ ಮೊದಲು ನನ್ನ ಲಕ್ಷ್ಯ ಹೋಗುವುದು ಬಸ್ಸಿನ ಒಳಮೈಯ್ಯನ್ನು ಅಲಂಕರಿಸಿದ ಫಲಕಗಳತ್ತ. ಬರ್ಗರುಗಳ ಅಂಗಡಿಗಳನ್ನೊಳಗೊಂಡಂತೆ “ಬಂಡವಾಳಶಾಹೀ” ಜಾಹೀರಾತುಗಳು, ಯುನಿವರ್ಸಿಟಿಯ ಕೆಲ ಸಂದೇಶಗಳು, ಮತ್ತಿತರ (ಕೆಲವು ಬಸ್ಸುಗಳಲ್ಲಿ ಆರ್ಟ್ ಆಪ್ ಲಿವಿಂಗ್‍ನ ಜಾಹೀರಾತುಗಳೂ ಇವೆ) ಫಲಕಗಳ ನಡುವೆ ನಾನು ಹುಡುಕುವುದು ಒಂದು ವಿಶೇಷ ಫಲಕವನ್ನು: ಈ ಊರಲ್ಲಿ ಬಸ್ಸಿನ ಸೇವೆ ನಡೆಸುವ ಕಂಪನಿ, ಕೆಲ ಸ್ವಯಂಸೇವಕರ ಜೊತೆ ಭಾಗಿಯಾಗಿ, ಸ್ಥಳೀಯರಿಂದ ಪದ್ಯಗಳನ್ನು ಆಹ್ವಾನಿಸಿ, ಆಯ್ದ ಕೆಲವನ್ನು ಆರು ತಿಂಗಳಿಗೊಮ್ಮೆ ಪ್ರಕಟಿಸುತ್ತದೆ; ಆ ಪದ್ಯಗಳನ್ನು ಇಂಥವೇ ಫಲಕಗಳ ಮೇಲೆ ಛಾಪಿಸಿ ಬಸ್ಸಿನಲ್ಲಿ ಹಾಕುತ್ತಾರೆ. ಆ ಸ್ವಯಂಸೇವಕರ ತಂಡದ ಹೆಸರೂ ಚೆನ್ನಾಗಿದೆ — words on the go. ಸಣ್ಣ ಸಣ್ಣ ಪದ್ಯಗಳು. ಕೆಲವು ಚೆನ್ನಾಗೂ ಇವೆ. ಆ ಪದ್ಯಗಳ ಗುಣಮಟ್ಟಕ್ಕಿಂತ ಇಂಥ ಪ್ರಯತ್ನ ಅಪ್ಯಾಯಮಾನವೆನ್ನಿಸುತ್ತದೆ. ಸಮುದಾಯಗಳೊಂದಿಗೆ ಸಹಕರಿಸಿ, ಅವನ್ನು ಒಳಗೊಂಡು, ಒಟ್ಟಿಗೆ ಮುಂದುವರಿಯುವ ಆಸ್ಥೆ ಇರುವುದು ಯಾವ ಕಾಲದಲ್ಲೂ, ಯಾವ ದೇಶದಲ್ಲೂ ಸ್ವಾಗತಾರ್ಹ. ಸಮುದಾಯ ಹಾಗೂ ಸಂಸ್ಥೆಗಳು ಒಂದಕ್ಕೊಂದು ಸಂಬಂಧವಿಲ್ಲದಂತಿರುವ, ಬಹಳ ಸಂಕುಚಿತವಾದ — ವಿವಿಧ ಆಯಾಮಗಳಿಲ್ಲದ– ಕೊಡುಕೊಳ್ಳುವಿಕೆಯಿರುವಂಥ ವ್ಯವಸ್ಥೆಗಳ ಬಗ್ಗೆ ನನಗೆ ಅತೀವ ಬೇಸರವಾಗುತ್ತದೆ.
Continue reading “ಸಣ್ಣ ಸಂಗತಿಗಳು”

ಕ್ಯಾಮೆಲ್‍ಬ್ಯಾಕ್ ಬೂಲೆವಾರ್ಡಿನ ನಾಯಿಗಳ ಸಂವಾದ

ಪದ್ಯದಂಥದ್ದೇನೋ ಬರೆದಿದ್ದೇನೆ. ನೀವೂ ಹಾಗೆ ಅಂದುಕೊಂಡು ಓದಿ. ಶೀರ್ಷಿಕೆಯ ’ಕ್ಯಾಮೆಲ್‍ಬ್ಯಾಕ್ ಬೂಲೆವಾರ್ಡ್’ (camelback boulevard), ಇಲ್ಲೇ ಪಕ್ಕದಲ್ಲಿರುವ, ಎಡಬಲಕ್ಕೂ ಅಮೆರಿಕನ್ ಮಿಡಲ್‍ಕ್ಲಾಸಿನ ಶಿಸ್ತಿನ, ಅಂದವಾದ ಮನೆಗಳಿರುವ, ರಸ್ತೆ. ಆಗಾಗ ಆ ರಸ್ತೆಯ ಮುಖಾಂತರ ವಾಕ್ ಹೋಗುತ್ತಿರುತ್ತೇನೆ.

ಅದೋ ನೋಡು ಅಮೆರಿಕಾ
ಕಾಣುತ್ತಲ್ಲ ತುಂಬಿಕೊಂಡು
ಉದ್ದವಾಗಿ ಅಗಲವಾಗಿ
ಭೂಗೋಳ ಪರೀಕ್ಷೆಯಲ್ಲಿ
ನಕ್ಷೆ ಬಿಡಿಸುವ ಮಕ್ಕಳಿಗೆ
ಅನುಕೂಲವಾಗಿ ಆಯತವಾಗಿ.
Continue reading “ಕ್ಯಾಮೆಲ್‍ಬ್ಯಾಕ್ ಬೂಲೆವಾರ್ಡಿನ ನಾಯಿಗಳ ಸಂವಾದ”

ಉತ್ತರ ಶಾಪದಿಂ ದಕ್ಷಿಣ ಷಾಕಕು…

ನಮ್ಮ ಗೋಕಾಂವಿ ನಾಡಿನಲ್ಲಿ ವ್ಯಂಜನಗಳ ಬಳಕೆ ಕಡಿಮೆ. ಊಟದಲ್ಲಲ್ಲ. ಊಟದಲ್ಲಿ ನಾನಾ ನಮನಿ ವ್ಯಂಜನಗಳನ್ನೂ, ಸಾದನಿಗಳನ್ನು (ಸಾಧನ ಸಲಕರಣೆಗಳನ್ನೂ) ಪುರಮಾಶಿ ಕಟಿಯುತ್ತೇವೆ. ನಾನು ಹೇಳುತ್ತಿರುವುದು ಮಾತಿನಲ್ಲಿ ಹಾಗೂ ಬರೆಹದಲ್ಲಿ: ದಕ್ಷಿಣಾದಿಗಳಂತೆ ನಾವು ಶಬ್ದಗಳ ಕೊನೆಯ ಅಕ್ಷರಗಳನ್ನು ವ್ಯಂಜನ ಮಾಡುವುದಿಲ್ಲ. ’ಅ’ ಎಂಬ ಸ್ವರವನ್ನು ಕೂಡಿಸಿ ಪೂರ್ತಿ ಮಾಡುತ್ತೇವೆ. ಉದಾಹರಣೆಗೆ, ಬಿಟ್ಟರೆ ನೀವು ದಕ್ಷಿಣಾದಿಗಳು ಈ ಬ್ಲಾಗಿನ ಲೇಖಕನನ್ನು ’ಚಕೋರ್’ ಎಂದು ಮುಗಿಸುತ್ತೀರಿ; ಅದಕ್ಕೆ ಸ್ಪಷ್ಟವಾಗಿ ’ಚಕೋರ’ ಎಂದು ಬರೆಯಬೇಕಾಗುತ್ತದೆ. ಹಾಗೆಯೇ ಅಶೋಕ, ರಮೇಶ, ಸುರೇಶ, ಪ್ರಹ್ಲಾದ ಇತ್ಯಾದಿ. (ಅಂಧಂಗ, ಈ ’ಹ’ಕ್ಕೆ ಒತ್ತು ಕೊಡುವ ಸಂದರ್ಭ ಬಂದಾಗಲೂ ಕೆಲ ದಕ್ಷಿಣಾದಿಗಳಲ್ಲಿ ಗೊಂದಲ ಮೂಡುತ್ತದೆ. ನಾಲ್ಕು ತಲೆಗಳುಳ್ಳ ನಮ್ಮ ಮುದುಕ ದೇವರ ಹೆಸರು ಬರೆಯುವಾಗ ’ಹ’ಕ್ಕೆ ’ಮ’ದ ಒತ್ತು ಕೊಡಬೇಕೋ ’ಮ’ಕ್ಕೆ ’ಹ’ದ ಒತ್ತು ಕೊಡಬೇಕೋ ಎಂಬ ಕನ್‍ಫ್ಯೂಜನ್ನು. ಕೆಲವು ಹಿರಣ್ಯಪುತ್ರರು ಗೊಂದಲವೇ ಬೇಡ ಎಂದು ’ಪ್ರಹಲ್ಲಾದ್’ ಎಂದು ಬರೆಯಲು ಶುರು ಮಾಡಿದ್ದಾರೆ!) ಅದು ಬೇಡೆನಿಸಿದರೆ ಸುರೇಶೀ, ರಮೇಶೀ, ಸಂತೋಷೀ ಇತ್ಯಾದಿಗಳೂ ನಡೆಯುತ್ತವೆ. (ಈ ಬಳಕೆ ಮಧ್ಯಕರ್ನಾಟಕದಲ್ಲೂ ಇದೆ ಬಿಡಿ. ’ನಮ್ ಪ್ರಸದಿ ಬರ್ತಾ ಇದಾನೆ.’) ಬೆಳಗಾವಿ ಶಹರಕ್ಕೆ ಹೋದರೆ ಮರಾಠಿಯ ಪ್ರಭಾವದ ಮನೆಗಳಲ್ಲಿ ಇನ್ನೊಂದು ನಮೂನೆಯ ಎಳೆಯುವಿಕೆ ಕಾಣಸಿಗುತ್ತದೆ. ನಾವು ಗೋಕಾಂವಿಯವರು ’ಕೇಶವ’ ಅಂತಂದರೆ ಬೆಳಗಾಂವಿಯವರು ’ಕೇsಶsವs’ ಎಂದು ಪ್ರತಿಯೊಂದು ಅಕ್ಷರವನ್ನೂ ಎಳೆಯುತ್ತಾರೆ. ಸ್ವಲ್ಪ ಕೆಳಗೆ ಧಾರವಾಡಕ್ಕೆ ಹೋದರೆ ಅವರು ಎರಡೇ ಅಕ್ಷರಗಳಲ್ಲಿ ’ಕೇಶ್ವ’ ಎಂದು ಮುಗಿಸುತ್ತಾರೆ. ಇನ್ನು ದಕ್ಷಿಣಾದಿಗಳು ಕೆಲವೊಮ್ಮೆ ಅನಂತಮೂರ್ತಿಗಳ ಮಾತಿಗೆ ಗೌರವ ಕೊಟ್ಟು ’ಶರತ್ತು’ ’ಪ್ರದೀಪು’ ಇತ್ಯಾದಿ ಅನ್ನುವುದೂ ಉಂಟು.
Continue reading “ಉತ್ತರ ಶಾಪದಿಂ ದಕ್ಷಿಣ ಷಾಕಕು…”

ಇತ್ಯೇವ ಇತ್ಯೇವ ಇತ್ಯೇವ

(ನಾನು ಹಿಂದೊಮ್ಮೆ ಬರೆದಿದ್ದರ ಸ್ವಲ್ಪ ಪರಿಷ್ಕೃತ ಅನುವಾದ.)

ಜಯನಗರದ ’ದ ಆರ್ಟ್ ಆಫ಼್ ಲಿವಿಂಗ್ ಶಾಪ್’ ತುಂಬಾ ಆಯಕಟ್ಟಿನ ಜಾಗದಲ್ಲಿ ಸ್ಥಾಪಿತವಾಗಿದೆ. Very strategically located. ಅದರ ಸ್ಥಾನ ಎಷ್ಟು ಚೆನ್ನಾಗಿದೆ ಎಂದರೆ, ನಾನು ಇನ್ಸ್ಟಿಟ್ಯೂಟಿಗೆ ಹೋಗಿಬರುವಾಗ ದಿನಾ ಅಡ್ಡಬರುತ್ತದೆ. ಹಾಗೆಯೇ ರಂಗಶಂಕರ ಮತ್ತಿತರ ಅನೇಕ ಆಸಕ್ತಿಕರ ಜಾಗಗಳಿಗೆ ಹೋಗಬೇಕಾದಾಗಲೂ ಕಾಣಿಸಿಕೊಳ್ಳುತ್ತದೆ. ಈಗೀಗ ಇದು ನನಗೆ ರೂಡಿಯಾದಂತಾಗಿದೆ ಬಿಡಿ. ಹೀಗಾಗಿ ಮೊದಲು ಕೆಲವು ಸಲ ಆ ’ಶಾಪ್’ ನೋಡಿದಾಗ ಆದ ಥ್ರಿಲ್ ಈಗ ಉಂಟಾಗುವುದೇ ಇಲ್ಲ. ನೀವು ಈಗಾಗಲೆ ಇದನ್ನು ಸರಿಯಾಗಿ ಊಹಿಸಿರುತ್ತೀರ: ಅಲ್ಲಿ ಅವರು ’ದ ಆರ್ಟ್ ಆಫ಼್ ಲಿವಿಂಗ್’‍ನ ಪುಸ್ತಕಗಳನ್ನು ಮಾರುವುದಿಲ್ಲ. ಅಥವಾ, ಹೋಗಲಿ ಬಿಡಿ; ಹಾಗೆ ಹೇಳುವುದು ಸಮಂಜಸವಲ್ಲವೇನೋ. ಬಹಳ ಮಾಡಿ, ಆ ಪುಸ್ತಕಗಳನ್ನೂ ಮಾರುತ್ತಾರೆ, ಆದರೆ ಅದು ಅವರ ಮುಖ್ಯ ಧಂದೆ ಅಲ್ಲ ಅಂತ ನನಗನ್ನಿಸುತ್ತೆ. ಹತ್ತಾರು ಅಡಿಗಳ ದೂರದಿಂದ, ನನ್ನ ಚಲಿಸುತ್ತಿರುವ ಬೈಕಿನಿಂದ ಕಂಡ ಓರೆಗಣ್ಣಿನ ಭಂಗುರ ನೋಟವೂ ಸಾಕು. ಸೂಜಿಗಲ್ಲಿನಂತೆ ಸೆಳೆಯುವ ಅದೆಂಥ ತರಹೇವಾರಿ ಸರಕುಗಳವು. What magnetic merchandise! ಶರ್ಟುಗಳು, ಕುರ್ತಾಗಳು, ಹೆಂಗಸರ ಟಾಪ್‍ಗಳು, ಟಿ-ಶರ್ಟುಗಳು… (ಕನ್ನಡಕ್ಕೆ ನಿಲುಕದ) bracelets, bandannas, caps, ಹಾಗೂ ನನ್ನ ತಿಳುವಳಿಕೆ ಹಾಗೂ ಊಹೆಗಳಿಗೆ ನಿಲುಕದ ಇನ್ನೂ ಏನೇನೋ ಸಾಮಗ್ರಿಗಳು. ಅಲ್ಲಿ ನಿಮ್ಮ ಮೈಮೇಲೆ ’ದ ಆರ್ಟ್ ಆಫ಼್ ಲಿವಿಂಗ್’‍ನ ಹಚ್ಚೆಗಳನ್ನೂ ಹಾಕುತ್ತಾರೇನೋ. ಆಯಕಟ್ಟಿನ ಜಾಗಗಳಲ್ಲಿ! Strategically located tattoos anyone? ನಾನು ಒಮ್ಮೆ ಒಳಹೊಕ್ಕು ನೋಡಬೇಕೇನೋ. (ಓ ಕೊನೆಗೊಮ್ಮೆ ಸೆಳೆತ ತಡೆಯಲಾರದೆ ಹೋಗಿಯೂಬಿಟ್ಟಿದ್ದೆ. ಆದರೆ ಏನನ್ನೂ ಕೊಳ್ಳಲಿಲ್ಲ.)
Continue reading “ಇತ್ಯೇವ ಇತ್ಯೇವ ಇತ್ಯೇವ”

ಕ್ಷೌರಿಕನ ವಿರೋಧಾಭಾಸ (ಪರಿಷ್ಕೃತ)

ಒಂದು ಊರಿನಲ್ಲಿ ಒಬ್ಬನೇ ಒಬ್ಬ ಕ್ಷೌರಿಕನಿದ್ದಾನೆ ಎಂದುಕೊಳ್ಳಿ. ಆ ಊರಿನ ಗಂಡಸರೆಲ್ಲರೂ ನಿಯಮಿತವಾಗಿ ಗಡ್ಡಮೀಸೆಗಳನ್ನು ತೆಗೆದು ವ್ಯವಸ್ಥಿತರಾಗಿರುತ್ತಾರೆ. ಅಲ್ಲಿ ಗಡ್ಡ ಬಿಟ್ಟುಕೊಂಡು ತಿರುಗುವು ಆಲಸಿಗಳೂ, ನವ್ಯರೂ ಒಬ್ಬರೂ ಇಲ್ಲ. ಕೆಲವರು ಮನೆಯಲ್ಲೇ ದಾಡಿ ಮಾಡಿಕೊಳ್ಳುತ್ತಾರೆ. ಉಳಿದವರೆಲ್ಲ ಆ ಕ್ಷೌರಿಕನ ಕಡೆ ಹೋಗಿ ದಾಡಿ ಮಾಡಿಸಿಕೊಳ್ಳುತ್ತಾರೆ. ಬೇರೆಯವರ ದಾಡಿ ಮಾಡುವವನು ಕ್ಷೌರಿಕನೊಬ್ಬನೆ. ಒಟ್ಟಾರೆ ಹೇಳಬೇಕೆಂದರೆ – ಕ್ಷೌರಿಕ ಸ್ವಂತ ದಾಡಿ ಮಾಡಿಕೊಳ್ಳದ ಎಲ್ಲ ಗಂಡಸರ, ಹಾಗೂ ಕೇವಲ ಅಂಥ ಗಂಡಸರ, ದಾಡಿ ಮಾಡುತ್ತಾನೆ. ಸ್ವಂತ ಮಾಡಿಕೊಳ್ಳುವವರ ದಾಡಿ ಮಾಡುವುದಿಲ್ಲ; ಉಳಿದ ಎಲ್ಲ ಗಂಡಸರ ಕ್ಷೌರವನ್ನು ಅವನೇ ಮಾಡುತ್ತಾನೆ. ಸರಿಯಷ್ಟೆ?

(ಆ ಊರಿನ ಹೆಂಗಸರು ಅವರವರ ಅವಶ್ಯಕತೆಗಳನ್ನು ಅವರವರೇ ಪೂರೈಸಿಕೊಳ್ಳುತ್ತಾರೆ; ಮತ್ತು ಬೇರೆಯವರ ಅವಶ್ಯಕತೆ – ಹೆಂಗಸರದಾಗಲಿ, ಗಂಡಸರದಾಗಲಿ – ಅವರ ಜವಾಬ್ದಾರಿಯಲ್ಲ, ಅಂದುಕೊಳ್ಳಿ. ಆದರೆ ಇದು ಅಷ್ಟು ಪ್ರಸ್ತುತವಾದುದಲ್ಲ.)

ಹೀಗಿರುವಾಗ, ನಮ್ಮ ಮುಂದಿರುವ ಪ್ರಶ್ನೆಯೇನಪ್ಪಾ ಅಂದರೆ: ಕ್ಷೌರಿಕ ತನ್ನ ಕ್ಷೌರವನ್ನು ತಾನೇ ಮಾಡಿಕೊಳ್ಳುತ್ತಾನೆಯೇ ಇಲ್ಲವೇ?

ಉತ್ತರ ತಿಳಿಸಿ.
Continue reading “ಕ್ಷೌರಿಕನ ವಿರೋಧಾಭಾಸ (ಪರಿಷ್ಕೃತ)”