ಇದಕ್ಕೂ ಮೊದಲು, ಭಾಗ ೧ ಹಾಗೂ ಭಾಗ ೨.
ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಆ ಕಪ್ಪುಗಳು, ಮೊರಬ್ಬ, ಚಹಾಗಳ ನಂತರ,
ಪಿಂಗಾಣಿ ಕಪ್ಪು-ಬಸಿಗಳಲ್ಲಿ, ನಿನ್ನ ನನ್ನ ಬಗೆಗಿನ ಮಾತುಗಳಲ್ಲಿ,
ವಿಷಯದ ಕೊಂಡಿಯನ್ನು ಒಂದು ಮುಗುಳ್ನಗೆಯಿಂದ ಕಡಿದುಹಾಕುವುದು,
ಮೌಲಿಕವಾದುದಾಗುತ್ತಿತ್ತೇ,
ಇಡೀ ಬ್ರಹ್ಮಾಂಡವ ಹಿಂಡಿ ಚೆಂಡು ಮಾಡುವುದು,
ಮೈಮೇಲೆರಗುವ ಪ್ರಶ್ನೆಯತ್ತ ಉರುಳಿಸುವುದು,
“ನಾನು ಲೆಜ಼ಾರಸ್, ಸತ್ತವನೆದ್ದು ಬಂದಿದ್ದೇನೆ,
ಎಲ್ಲ ಹೇಳಲು ಮರಳಿ ಬಂದಿದ್ದೇನೆ, ನಿಮಗೆಲ್ಲ ಹೇಳಲು,” ಎಂದು ಬಿಡುವುದು,
ಅವಳ ತಲೆಗೆ ಇಂಬಿರಿಸಿ, “ನಾನು ಹೇಳಿದರರ್ಥ
ಅದಲ್ಲ, ಅದಲ್ಲವೇ ಅಲ್ಲ,” ಎಂದು ಹೇಳಬೇಕಾಗಿದ್ದಲ್ಲಿ,
ಇದೆಲ್ಲ ಬೇಕಾಗಿತ್ತೆ?ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಅರ್ಥಪೂರ್ಣವಾದುದಾಗುತ್ತಿತ್ತೇ?
ಸೂರ್ಯಾಸ್ತಗಳು, ಹಿತ್ತಿಲುಗಳು, ನೀರು ಚಿಮುಕಿಸಿದ್ದ ಬೀದಿಗಳು,
ಕಾದಂಬರಿಗಳು, ಚಹಾಕಪ್ಪುಗಳು, ಫರಶಿಯುದ್ದಕ್ಕೂ ತೆವಳುವ
ಸ್ಕರ್ಟುಗಳು —
ಇವು, ಹಾಗೂ ಮತ್ತಿನ್ನೆಷ್ಟೋ ಸಂಗತಿಗಳ ನಂತರ?
ನನಗನ್ನಿಸ್ಸಿದ್ದನ್ನು ಯಥಾರ್ಥ ಹೇಳುವುದು ಸಾಧ್ಯವೇ ಇಲ್ಲ!
ಆದರೆ ಒಂದು ಮಾಯಾವಿ ಲಾಟೀನು ಪರದೆಯ ಮೇಲೆ ನರನಾಡಿಗಳ ಚಿತ್ತಾರ ಎರಚಿದಂತೆ:
ತಲೆದಿಂಬನ್ನಿರಿಸಿ, ಅಥವಾ ಶಾಲನ್ನು ಕಿತ್ತೆಸೆದು,
ಕಿಟಕಿಯತ್ತ ಮುಖ ತಿರುಗಿಸಿ, “ಅಲ್ಲ, ನಾನು ಹೇಳಿದ್ದರ ಅರ್ಥ
ಅದಲ್ಲ. ಅದಲ್ಲವೇ ಅಲ್ಲ,” ಎಂದು ಹೇಳಿದ್ದರೆ,
ಆವಾಗ ಅದು ಸರಿಹೋಗುತ್ತಿತ್ತೇ?………..
ಅಲ್ಲ! ನಾನು ಪ್ರಿನ್ಸ್ ಹ್ಯಾಮ್ಲೆಟ್ ಅಲ್ಲ, ಅದು ನನ್ನ ಸ್ವಭಾವವೇ ಅಲ್ಲ;
ನಾನೊಬ್ಬ ಸೇವಕ, ದೇವದೂತ, ಹೇಳಿದಷ್ಟು ಮಾಡುವವ,
ಪೋಷಿಸಿ ಮುಂದುವರಿಸುವುದು, ಒಂದೆರಡು ದೃಶ್ಯಗಳ ಮೊದಲು ಬರುವುದು,
ರಾಜಕುವರನಿಗೆ ಸಲಹೆ ಕೊಡುವುದು; ಸುಲಭ ಸಲಕರಣೆ, ಸಂಶಯವಿಲ್ಲ,
ಗೌರವ ಸೂಚಿಸುತ್ತ, ಕೃತಕೃತ್ಯೆಯಿಂದ ಉಪಯೋಗಕ್ಕೆ ಬರುವವ,
ಮುತ್ಸದ್ದಿ, ಜಾಗರೂಕ, ಎಲ್ಲವೂ ಕೂಲಂಕುಷ,
ಭಾಷ್ಕಳಪಂತ, ಆದರೆ ತುಸು ಸ್ಥೂಲ, ನಿಧಾನಿ
ಕೆಲವೊಮ್ಮೆ ನಿಜಕ್ಕೂ ಹಾಸ್ಯಾಸ್ಪದ
ಮತೊಮ್ಮೊಮ್ಮೆಯಂತೂ ಪೂರಾ ವಿದೂಷಕ.ನನಗೆ ವಯಸ್ಸಾಗುತ್ತದೆ… ಮುದುಕನಾಗುತ್ತೇನೆ…
ಕೆಳಗೆ ಮಡಿಕೆ ಹಾಕಿ ಪ್ಯಾಂಟು ತೊಡುತ್ತೇನೆ.ಕೂದಲು ಹಿಂದಕ್ಕೆ ಬಾಚಲೆ? ಪೀಚ್ ತಿನ್ನುವ ಸಾಹಸ ಮಾಡಲೆ?
ನಾನು ಬಿಳಿಯ ಫ್ಲ್ಯಾನೆಲ್ ಟ್ರೌಸರ್ಸ್ ತೊಟ್ಟು, ಬೀಚ್ ಮೇಲೆ ಓಡಾಡುವೆ.
ನಾನು ಮತ್ಸ್ಯಕನ್ನಿಕೆಯರ ಹಾಡು ಪ್ರತಿಹಾಡುಗಳನ್ನು ಕೇಳಿರುವೆ.ನನ್ನ ಸಲುವಾಗಿ ಅವರು ಹಾಡುವರೆಂದು ನನಗನ್ನಿಸುವುದಿಲ್ಲ.
ಅವರನ್ನು ನೋಡಿದ್ದೇನೆ ಅಲೆಗಳ ಸವಾರಿ ಮಾಡುತ್ತ ಸಮುದ್ರದತ್ತ ಹೋಗುವಾಗ
ಗಾಳಿ ಬೀಸಿ ನೀರನ್ನು ಕಪ್ಪುಬಿಳುಪಾಗಿ ಹರಡುವಾಗ
ಅಲೆಗಳ ಬೆಳ್ಳನೆಯ ಕೂದಲನ್ನು ಹಿಂದೆ ಹಿಂದೆ ಹಿಕ್ಕುವಾಗ.ತಿರುಗಿದ್ದೇವೆ ನಾವು ಸಮುದ್ರದ ಅನೇಕ ಕಕ್ಷೆಗಳಲ್ಲಿ
ಕೆಂಪು ಕಂದು ಜೊಂಡಿನ ಮಾಲೆ ಧರಿಸಿರುವ ಸಾಗರಕನ್ನಿಕೆಯರ ಸುತ್ತಲೂ
ಮನುಷ್ಯ ದನಿಗಳು ನಮ್ಮನ್ನೆಬ್ಬಿಸುವ ತನಕ, ಮುಳುಗಿಸುವ ತನಕ.