Valentine’s Day ಆದ್ದರಿಂದ ಪ್ರೀತಿಯ ಬಗ್ಗೆ ಏನಾದರೂ ಬರೆಯಲೇಬೇಕಲ್ಲವೆ? ಒಳ್ಳೆಯ ಪದ್ಯ ಬರೆಯುವ ಕುವ್ವತ್ತಿಲ್ಲದಿದ್ದರೆ ಹೋಗಲಿ, ಯಾವುದಾದರೂ ಒಳ್ಳೆಯ ಪದ್ಯವನ್ನು ಅನುವಾದಿಸಲೇಬೇಕು ಎಂದು ನಿನ್ನೆ ರಾತ್ರಿ ಕುಳಿತೆ. ಯಾವ ಪದ್ಯ? ಯಾರ ಪದ್ಯ? ಯಾರ ಪದ್ಯ ಎಂಬ ಸಮಸ್ಯೆ ತಕ್ಷಣದಲ್ಲಿ ಬಗೆ ಹರಿಯಿತು. ನೆರೂಡನ ಪದ್ಯಗಳನ್ನು ಅನುವಾದಿಸಬೇಕೆಂಬುದು ಮೊದಲಿನಿಂದಲೂ ಇದ್ದ ಬಯಕೆ. ನನ್ನಲ್ಲಿರುವ ನೆರೂಡನ ಪದ್ಯಗಳನ್ನು ತಿರುವಿಹಾಕುತ್ತ ಒಂದನ್ನು ಆರಿಸಿಕೊಂಡೆ. ಪದ್ಯದ ಸಣ್ಣ ಗಾತ್ರವೂ ನನ್ನನ್ನು ಹುರಿದುಂಬಿಸಿತು. ಒಂದರ್ಧ ಮುಗಿಸಿದಾಗ ಆ ಪದ್ಯದ ಬಗ್ಗೆ ಏನೋ ಹುಡುಕತೊಡಗಿದೆ. ಆಗ ಗೊತ್ತಾದದ್ದು: ಪದ್ಯ ನೆರೂಡನದಲ್ಲ; ರವೀಂದ್ರನಾಥ ಟ್ಯಾಗೋರರದು. ಟ್ಯಾಗೋರರ ’ತುಮಿ ಸಂಧ್ಯಾರ್ ಮೇಘಮಾಲಾ’ ಎಂಬ ಪದ್ಯದ ನೆರೂಡನ ಸ್ಪ್ಯಾನಿಶ್ ಅನುವಾದದ ಇಂಗ್ಲಿಶ್ ಅನುವಾದ ನನ್ನ ಬಳಿಯಿದ್ದುದು! ಪರವಾಗಿಲ್ಲ ಎಂದುಕೊಂಡು ಉಳಿದರ್ಧ ಈಗ ಬೆಳಿಗ್ಗೆ ಮುಗಿಸಿದೆ. ನೀಗಿದಷ್ಟು ಮಾಡಿದ್ದೇನೆ. ಇದೋ ನಿಮ್ಮ ಮುಂದೆ ಸಾದರ ಪಡಿಸುತ್ತಿದ್ದೇನೆ. ಬಂಗಾಳಿ –> ಸ್ಪ್ಯಾನಿಶ್ –> ಇಂಗ್ಲಿಶ್ –> ಕನ್ನಡ, ಈ ಭಾವಾನುವಾದಗಳ ಹಾದಿಯಲ್ಲಿ ಪಾಪ ಮೂಲ ಪದ್ಯ ಏನಾಗಿದೆಯೊ!
ಮುಸ್ಸಂಜೆಯ ನನ್ನ ಬಾನಿನಲಿ ನೀನೊಂದು ಮೋಡದಂತೆ
ಬರುವೆ ನಿನ್ನ ಆಕಾರ ಬಣ್ಣಗಳಲಿ ನನ್ನ ಮನಕೊಪ್ಪುವಂತೆ
ನೀನು ನನ್ನವಳು, ನನ್ನವಳೇ, ಮಧುರ ತುಟಿಗಳ ಹೆಣ್ಣೇ
ನಿನ್ನ ಉಸಿರಿನಲ್ಲಿದೆ ನನ್ನ ಅನಂತ ಕನಸುಗಳ ಜೀವನನ್ನ ಅಂತರಾಳದ ದೀಪ ಹೊಯ್ಯುತಿದೆ ನಿನ್ನ ಪಾದಗಳಿಗೆ ರಂಗು
ಹುಳಿ ಮದಿರೆಯ ಮಾಡದೆ ಸವಿ ನಿನ್ನ ತುಟಿಗಳ ಸೋಂಕು?
ನನ್ನ ಸಂಜೆಯ ಹಾಡುಗಳನೊಟ್ಟಿ ಸುಗ್ಗಿ ಮಾಡುವವಳೆ
ನನ್ನ ಒಬ್ಬಂಟಿ ಕನಸುಗಳಿಗೂ ಗೊತ್ತು ನೀನು ನನ್ನವಳೆನೀನು ನನ್ನವಳು ನನ್ನವಳೆಂದು ಅಪರಾಹ್ನದ ಗಾಳಿಯಲ್ಲಿ ಹಲುಬುತ್ತ ಓಡುತ್ತೇನೆ
ಗಾಳಿ ನನ್ನ ವಿಧುರ ಸುಯ್ಯನ್ನು ತುಯ್ಯುತ್ತ ಒಯ್ಯುತ್ತದೆ
ನನ್ನ ಕಣ್ಣಿನಾಳಕ್ಕೆ ಲಗ್ಗೆಯಿಟ್ಟವಳೆ, ಈ ನಿನ್ನ ಕೊಳ್ಳೆ
ನಿನ್ನ ಇರುಳಿನ ಆಸ್ಥೆಯನ್ನು ತಿಳಿಗೊಳಿಸುತ್ತದೆ ಕೊಳದ ನೀರಿನಂತೆನನ್ನ ನಾದದ ಬಲೆಗೆ ಒಳಗಾಗಿದ್ದೀ ನೀ, ಪ್ರಿಯೆ
ಆಗಸದ ಹರವು ನನ್ನ ನಾದದ ಬಲೆಗೆ
ಅಗಲಿಕೆಯ ದು:ಖದ ನಿನ ಕಂಗಳ ತಡಿಯಲ್ಲೆ ನನ್ನ ಚೇತನದ ಹುಟ್ಟು
ಶೋಕಿಸುವ ನಿನ ಕಂಗಳೇ ಕನಸುಗಳ ನೆಲೆಯ ಶುರುವಾತು