ರಾಘೂ ಕಾಕಾ ಎಂಬ Lazy Genius

Image

[ಕನ್ನಡದ ಮಹತ್ವದ ಕತೆಗಾರ ಹಾಗೂ ಕಾದಂಬರಿಕಾರ ರಾಘವೇಂದ್ರ ಪಾಟೀಲ ನನ್ನ ದೊಡ್ಡಪ್ಪ. ಅವರಿಗೆ ೬೦ ವರ್ಷ ತುಂಬಿದ ಸಂದರ್ಭದಲ್ಲಿ ಅವರ ಶಿಷ್ಯರು, ಅಭಿಮಾನಿಗಳು, ಗೆಳೆಯರು, ಹಾಗೂ ಕುಟುಂಬದವರು ಬರೆದ ಲೇಖನಗಳನ್ನೊಳಗೊಂಡು, ‘ಪ್ರಸ್ತುತಿ’ ಎಂಬ ಪುಸ್ತಕ ಬಿಡುಗಡೆ ಮಾಡಲಾಯಿತು. ಇದಾದದ್ದು ೨೦೧೧ನೆಯ ಇಸವಿಯಲ್ಲಿ. ‘ಪ್ರಸ್ತುತಿ’ಗಾಗಿ ನಾನೂ ಒಂದು ಲೇಖನ ಬರೆದಿದ್ದೆ. ಅದನ್ನೀಗ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.]

ನಾವು ಬೆಟಗೇರಿಯ ಗಂಡಸರು ಬಹಳೇ ಆಲಸಿಗಳೆಂದು ಪ್ರತೀತಿ ಮೊದಲಿನಿಂದಲೂ ಇದೆ. ಮುಂಜಾನೆ ಎಷ್ಟೇ ಬೇಗ ಎದ್ದರೂ ಅದರ ಮುಂದಿನ ಕಾರ್ಯಕ್ರಮಗಳು ತಾಸುಗಟ್ಟಲೆ ನಡೆಯುತ್ತವೆ. ಮನೆಯ ಹೆಂಗಸರ ಸತತ ಒತ್ತಡ ಪ್ರಯತ್ನಗಳಿಗೆ ಮಣಿಯದೆ ಆರಾಮಶೀರ ವರ್ತಮಾನ ಪತ್ರಿಕೆ ಓದುತ್ತ, ಹರಟೆ ಹೊಡೆಯುತ್ತ, ವಾದ ವಿವಾದ ನಡೆಸುತ್ತ ಕೂತು ಬಿಡುತ್ತೇವೆ. ಈ ಭೌತಿಕ ಆಲಸ್ಯವನ್ನು ವಿಪರೀತವಾದ ಬೌದ್ಧಿಕ ಚಟುವಟಿಕೆಯಲ್ಲಿ (ಬಹುತೇಕ ನಿರುಪಯುಕ್ತ!) ಪರಿವರ್ತಿಸುವ ಕಲೆಯೂ ಎಲ್ಲರಿಗೆ ಸಿದ್ಧಿಸಿದೆ. ನಮ್ಮ ವಂಶಸ್ಥರ ಈ ಬಳುವಳಿ ನನಗೂ ದಂಡಿಯಾಗಿ ದಕ್ಕಿದೆ. (ವಾರಗಟ್ಟಲೇ ಇದರ ಬಗ್ಗೆ ವಿಚಾರ ನಡೆಸುತ್ತ, ಮನಸ್ಸಿನಲ್ಲಿಯೇ notes ಮಾಡುತ್ತ, ತಿದ್ದುತ್ತ ತೀಡುತ್ತ, ಚರ್ಚಿಸುತ್ತ ಖುಷಿ ಪಟ್ಟುಕೊಳ್ಳುತ್ತ ಕೊನೆಗೆ ಈ ಲೇಖನವನ್ನು ನಾನು ಬರೆದದ್ದು ಮಾತ್ರ ಕಡೆಯ ಗಳಿಗೆಯಲ್ಲಿಯೇ!)

ರಾಘೂ ಕಾಕಾ ಅಂತೂ ಇದರ ಮುಂಚೂಣಿಯಲ್ಲಿ! ಮನೆಯಲ್ಲಿದ್ದಾಗಲೆಲ್ಲ ನಿಶ್ಚಿಂತನೂ, ನಿಧಾನವಂತನೂ ಆಗಿ ತೋರುತ್ತ; ಮಕ್ಕಳು ಮೊಮ್ಮಕ್ಕಳಿಗೆ ಕಥೆ ಹೇಳುತ್ತ, ಅವರಿಂದ ಕೈ ಕಾಲು ಒತ್ತಿಸಿಕೊಳ್ಳುತ್ತ ಅಡ್ಡಾಗಿರುವ ಅವನೊಬ್ಬ lazy genius. ಆದರೆ ಕಾರ್ಯೋನ್ಮುಖನಾದರೆ ಎಡಬಿಡದೆ ಮಾಡಿ ಮುಗಿಸುವ ಛಲವೂ ಅವನಲ್ಲಿ ಇದೆ. ಅಡ್ಡಾದರೆ ಕ್ಷಣಾರ್ಧದಲ್ಲಿ ನಿದ್ದೆ ಹಚ್ಚುತ್ತಾನೆ; ಆದರೆ ಏನಾದರೂ ನೆನಪಾದರೆ, ಹೊಸ ವಿಚಾರವೊಂದು ಹೊಳೆದರೆ ಸರಿರಾತ್ರಿಯಲ್ಲಿ ಸಹಿತ ಎದ್ದು ಕೂತು ಓದುತ್ತಾನೆ, ಬರೆಯುತ್ತಾನೆ.

ನಿಮ್ಮ ದೊಡ್ಡಪ್ಪನ ಬಗೆಗೆ ಬರೆಯಿರಿ ಎಂದು ನನಗೆ ಹೇಳಿದಾಗಿನಿಂದ ನಾನೇನು ಬರೆಯಲಿ, ನಾನೇನು ಬರೆಯಬಲ್ಲೆ ಎಂಬಂಥ ಪ್ರಶ್ನೆಗಳು ಕಾಡಿದುವು. ಮನೆಯಲ್ಲಿನ ವಾತಾವರಣದಿಂದ ಮೊದಲಿಂದಲೂ ಸಾಹಿತ್ಯಾಸಕ್ತಿ ಇದ್ದರೂ ಸಾಹಿತ್ಯದ ವಿಸ್ತಾರವಾದ ಓದು ಅಥವಾ ಆಳವಾದ ಅಭ್ಯಾಸ ನನಗೆ ಇಲ್ಲ. ರಾಘೂ ಕಾಕಾ ಬರೆದದ್ದನ್ನೆಲ್ಲ ಬಹುತೇಕ ಓದಿದ್ದರೂ ಅವನ ಸಾಹಿತ್ಯದ ಬಗ್ಗೆ ಮಾತನಾಡುವ ಪರಿಣತಿ ನನಗಿಲ್ಲ. ಮತ್ತಿನ್ನು ವೈಯಕ್ತಿಕ ನೆಲೆಯಲ್ಲಿ ಏನಾದರೂ ಹೇಳಬೇಕೆಂದರೆ, ಅದರ ರೂಢಿಯೂ ಇಲ್ಲ: ನಮ್ಮ ಕುಟುಂಬದಲ್ಲಿ ಭಾವನೆಗಳು ಹೆಚ್ಚಾಗಿ ಅವ್ಯಕ್ತ ಸಂವಹನದ ಮುಖಾಂತರ ಇಲ್ಲವೇ ಮೋಗಮ್ಮಾಗಿ ವಿನಿಮಯಗೊಳ್ಳುತ್ತವೆ; ಸ್ಫುಟವಾಗಿ ನಿವೇದಿಸಿಕೊಳ್ಳುವ ಪ್ರಸಂಗಗಳು ಕಡಿಮೆ. ಮೇಲಾಗಿ ಕಳೆದ ಅನೇಕ ವರ್ಷಗಳಲ್ಲಿ ನನ್ನ ಬರವಣಿಗೆಯೆಲ್ಲ ಗಣಕ ವಿಜ್ಞಾನದ ಕ್ಷೇತ್ರದಲ್ಲಿನ ನನ್ನ ಸಂಶೋಧನೆಗೆ ಸಂಬಂಧಪಟ್ಟದ್ದು. ಕನ್ನಡದಲ್ಲಿ ಏನನ್ನಾದರೂ ಔಪಚಾರಿಕವಾಗಿ ಮಾತನಾಡಿ ಅಥವಾ ಬರೆದು ರೂಢಿ ಇಲ್ಲ.

ಮೇಲೆ ಹೇಳಿಕೊಂಡ ಇಷ್ಟೆಲ್ಲ ಅಳುಕುಗಳೊಂದಿಗೆಯೂ ರಾಘೂ ಕಾಕಾನ ಬಗೆಗಿನ ಕೆಲವು ನೆನಪು, ಘಟನೆ ಹಾಗೂ ಅನುಭವಗಳನ್ನು ಅವನ ಬಗೆಗೆ ನನಗಿರುವ ಸಲಿಗೆ, ಪ್ರೀತಿ ಗೌರವಗಳ ಆಧಾರದ ಮೇಲೆ ದಾಖಲಿಸುವ ಸಣ್ಣ ಪ್ರಯತ್ನ ಕೆಳಗಿದೆ.
***

ರಾಘೂಕಾಕಾನ ಬಗೆಗಿನ ನನ್ನ ಮೊದಲ ನೆನಪುಗಳು ಬೆಟಗೇರಿಯ ಬೇಸಿಗೆಯ ಬಿರುಬಿಸಿಲಿನ ಮಧ್ಯಾಹ್ನಗಳೊಟ್ಟಿಗಿನವು. ಒಟ್ಟಿಗೆ ಸೇರಿದ ಚಿಕ್ಕಪ್ಪ ದೊಡ್ಡಪ್ಪಂದಿರು, ಕಾಕೂಗಳು, ಸೋದರತ್ತೆಯರು, ಅಣ್ಣಂದಿರು, ಅಕ್ಕಂದಿರು. ದಿನವಿಡೀ ಹರಟೆ, ಗಹಗಹಿಕೆ. ಆಟಗಳು. ನಮ್ಮ ನೂರಾರು ವರ್ಷಗಳಷ್ಟು ಹಳೆಯ ಮನೆಯ ತಲೆಬಾಗಿಲಿಗೆ ಹೊಂದಿಕೊಂಡಂತೆ ಆಕಡೆ ಈಕಡೆ ಎರಡು ಜಗುಲಿಗಳಿದ್ದುವು. ಅವುಗಳ ನಂತರ ಒಂದು ಸಣ್ಣ ದನದ ಮನೆ. ಮುಂದೆ ಅಂಗಳ; ಅಂಗಳದ ನಡುವೆ ತುಳಸೀ ಕಟ್ಟೆ. ಅದರ ಬಲಭಾಗದಲ್ಲಿ ದೊಡ್ಡ ದನದ ಮನೆ. ಇವಿಷ್ಟು ನಮ್ಮ ಆಟಗಳ ಮುಖ್ಯ ಠಾವುಗಳು. ಅದೇ ನಮ್ಮ ಖಾಸಗಿ ಸಣ್ಣ ಜಗತ್ತು. ಒಮ್ಮೊಮ್ಮೆ ನಮ್ಮ ಆಟಗಳು ಮನೆಯೊಳಗೂ ದಾಳಿಯಿಟ್ಟು ಗವಿಗಳಂಥ ಹಿಂದಿನ ಕೋಣೆಗಳ ತನಕ ನುಸುಳುತ್ತಿದ್ದುವು. ಮುಖ್ಯ ಆಟವೆಂದರೆ ಕಣ್ಣಾಮುಚ್ಚಾಲೆ ಅಥವಾ stop. ಆ ಆಟಗಳಲ್ಲಿ ಬಚ್ಚಿಟ್ಟುಕೊಂಡವರನ್ನು ಹುಡುಕುವವನ ಹಾದಿ ತಪ್ಪಿಸಿ ದೊಡ್ಡವರೂ ಪರೋಕ್ಷವಾಗಿ ಪಾಲ್ಗೊಳ್ಳುತ್ತಿದ್ದರು.

ಇಂಥ ನಮ್ಮ ಬಿರುಬಿಸಿಲಿನ ಆಟಗಳ ನಡುವೆಯೇ ಮುಗುಳ್ನಗುತ್ತ ರಾಘೂ ಕಾಕಾ ನಿಧಾನವಾಗಿ ಹೊಮ್ಮುತ್ತಿದ್ದ. ನಾವು ಹುಡುಗರು ಹೋಗಿ ಅವನ ಕೈಗಳಿಗೆ ಜೋತುಬಿದ್ದು ಅವನನ್ನು ಎಳೆಯುತ್ತ ಅವನಿಂದ ಎಳೆಸಿಕೊಂಡು ಹೋ ಎನ್ನುತ್ತ ಅವನ ಬರುವಿಕೆಯನ್ನು ಘೋಷಿಸುತ್ತಿದ್ದೆವು. “ಅವರ ಕೈಯಾಗಿನ ಚೀಲಾ ಇಸಗೊಳ್ಳೂದು ಬಿಟ್ಟು ಅವರಿಗೇ ಜೋತು ಬಿದ್ದೀರಲ್ರ್ಯೋ!” ಎಂದು ಬೈಸಿಕೊಳ್ಳುತ್ತಿದ್ದೆವು. ಅವನ ಚೀಲ ಅಂದಿಗೂ ಇಂದಿಗೂ ನಮಗೆಲ್ಲ ಕುತೂಹಲದ ಭಂಡಾರ. ಅದರಲ್ಲಿ ಅಡಗಿದ್ದು ಹೊರಗೆ ಬರುವ ಅನೇಕ ಹೊಸ ಹಳೆ ಪುಸ್ತಕಗಳು! ಅವನು ಬರೆಯುತ್ತಿರುವ ಹೊಸ ಕತೆ ಅಥವಾ ಲೇಖನಗಳು. ಅದೇಕೆ? ಅವನ ಹೊಸ ಬಗೆಯ ಚೀಲಗಳೇ ಚರ್ಚೆಯ ವಿಷಯಗಳಾಗುತ್ತಿದ್ದುವು. ಅಲ್ಲದೆಯೇ ಅವನು ಹಾಕಿಕೊಳ್ಳುವ ನಮನಮೂನೆಯ ಕುರ್ತಾಗಳು, ಹೊಸ ರೀತಿಯ ಶರಟುಗಳು, ಅವನು ಕೊಂಡುಕೊಳ್ಳುತ್ತಲೇ ಇದ್ದ ಲೆಕ್ಕವಿಲ್ಲದಷ್ಟು ಪೆನ್ನುಗಳು—ಇವೆಲ್ಲ ನಮ್ಮ ತಂದೆ ಹಾಗೂ ಬೇರೆ ಕಾಕಾಗಳಿಂದ ಅವನನ್ನು ಭಿನ್ನವಾಗಿಸಿ ಸ್ಟಾಯ್ಲಶೀರನನ್ನಾಗಿಸಿತ್ತು.

ಬೇಸಿಗೆಯೆಂದರೆ ಮಾವಿನಹಣ್ಣಿನ ಭರಾಟೆ. ಚಪಾತಿ ಮಾವಿನಹಣ್ಣಿನ ಶೀಕರಣಿಯ ಊಟ. ರಾಘೂ ಕಾಕಾ ಬಂದಿದ್ದಾಗ ಅವನ ಆರ್ಡರದ ಮೇರೆಗೆ ಹೋಳಿಗೆ ಶೀಕರಣಿಗಳು ಆಗುತ್ತಿದ್ದುವು. ಬುಟ್ಟಿಗಳಲ್ಲಿಯೋ ಅಥವಾ ಹಿಂದಿನ ಖೋಲಿಗಳಲ್ಲೋ ಒಣಹುಲ್ಲಿನ ನಡುವೆ ಅಡಗಿದ ಬೆಚ್ಚಗಿನ ಮಾವಿನ ಹಣ್ಣುಗಳನ್ನು ಆಯ್ದು ತರುವುದರಿಂದ ಹಿಡಿದು ಶೀಕರಣಿ ಆಗುವವರೆಗೆ ನಡೆಯುವುದೆಲ್ಲ ಸಂಭ್ರಮದ ಅವಸರದ ಚಟುವಟಿಕೆ. ನಂತರ ಹರಟೆ ನಗು ಸಹಿತ ನಿವಾಂತದ ಊಟ. ಊಟದ ನಂತರ ಮನೆ ಶಾಂತವಾಗುತ್ತ ಬಂದಂತೆ ಒಳಗಿನ ಕೊಠಡಿಗಳಲ್ಲಿ ಹೆಂಗಸರೂ ಪಡಸಾಲೆಯಲ್ಲಿ ಗಂಡಸರೂ ಗುಡಾರ ಜಮಖಾನೆಗಳನ್ನು ಹಾಸಿ ಅಡ್ಡಾಗುವ ತಯಾರಿ ನಡೆಸುತ್ತಿದ್ದರು.

ಅಲ್ಲಿಯವರೆಗೆ ನಾನಾ ಕಾರಣಗಳಿಗೆ ಬೈಸಿಕೊಂಡು ಅಲ್ಲಲ್ಲಿ ಮರೆಯಾಗಿರುತ್ತಿದ್ದ ನಮಗೆ ಈ ಸಮಯದಲ್ಲಿ ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಾಗುತ್ತಿತ್ತು. ಅಡ್ಡಾಗುತ್ತಲೇ ಹಿರಿಯರು ಕೈಕಾಲು ಒತ್ತುವ, ಬಟ್ಟು ಲಟಕ್ಕೆನ್ನಿಸುವ ಹಾಗೂ “ಹೂಂ” ಅನ್ನಿಸುವ ಸ್ಫರ್ಧೆಗಳನ್ನು ಏರ್ಪಡಿಸುತ್ತಿದ್ದರು. ರಾಘೂ ಕಾಕಾ ಅಂತೂ, “ಅಪ್ಪೂ, ಸಂಕಪ್ಪಯ್ಯ, ನಿಕ್ಕಪ್ಪಯ್ಯ, ಸುಮಂತ್ರಿ,” ಎಂದು ಒಬ್ಬೊಬ್ಬರನ್ನೇ ಮೇಲಿಂದ ಮೇಲೆ ಕರೆದು ತನ್ನ ಸುತ್ತಲೂ ಕೂಡಿಸಿಕೊಳ್ಳುತ್ತಿದ್ದ. ಒಂದು ಬೆರಳು ಲಟಕ್ಕೆನ್ನಿಸಲು ಹತ್ತು ಪೈಸೆಯೋ ಕಾಲಿನ ಹೆಬ್ಬೆರಳು ಲಟಕ್ಕೆನ್ನಿಸಲು ಇಪ್ಪತ್ತು ಪೈಸೆಯೋ ಏನೋ ದರ ನಿಗದಿಯಾಗಿರುತ್ತಿತ್ತು. ವರ್ಷಗಟ್ಟಲೇ ಇದೇ ದರ ಓಡುತ್ತಿದ್ದುದೊಂದು ಸೋಜಿಗ. ಹತ್ತಿಪ್ಪತ್ತು ಪೈಸೆಯ ಆಕರ್ಷಣೆಯನ್ನು ಮೀರಿದ್ದ ನಮ್ಮ ಅಣ್ಣಂದಿರು ಈ ಸ್ಫರ್ಧೆಗಳಿಂದ ತಪ್ಪಿಸಿಕೊಳ್ಳುತ್ತಿದ್ದರು. ಚಿಕ್ಕವರಾಗಿದ್ದ ನಾವುಗಳು ಸಿರಿವಂತಿಕೆಯ ಆಕಾಂಕ್ಷೆಯೊಂದಲೋ ಅಥವಾ ಹಿರಿಯರ ಸಾಹಿತ್ಯ, ರಾಜಕೀಯ, ಹೊಲಮನೆ ಮೊದಲಾದ ವಿಷಯಗಳ ಬಗೆಗಿನ ಆಸಕ್ತಿಕರ ಮಾತುಕತೆ ಕೇಳುವುದಕ್ಕಾಗಿಯೋ ಕಾಲೊತ್ತುತ್ತ ಕೂಡುತ್ತಿದ್ದೆವು.

ಇವೇ ಸಂದರ್ಭಗಳಲ್ಲಿ ರಾಘೂ ಕಾಕಾನ ಕತೆಗಾರಿಕೆಯ ಮೊದಲ ಅನುಭವಗಳು ಆದುವು. ಕಾಲೊತ್ತುತ್ತ, “ಕಾಕಾ, ಕಥಿ ಹೇಳು,” ಎಂದರೆ, ಅವನು ಶುರು ಮಾಡುತ್ತಿದ್ದ. “ಒಂದೂರಾಗ ಒಬ್ಬ ಸಣ್ಣ ಹುಡುಗ ಇದ್ದ. ಅಂವ ಭಾಽಽಽಳ ಅಂದ್ರ ಭಾಽಽಽಳ ಶಾಣ್ಯಾ ಇದ್ದಂತ.” ನಾವು ಕಾಲೊತ್ತಲು ತಕರಾರು ಮಾಡಿದರೆ ಅಥವಾ ಸರಿಯಾಗಿ ಕಾಲೊತ್ತದಿದ್ದರೆ “ಶಾಣ್ಯಾ” ಸಣ್ಣ ಹುಡುಗ ಆಲಸಿಯೋ, ಧಡ್ಡನೋ ಆಗುತ್ತಿದ್ದ. ಹೀಗೆ ಅನುಕೂಲಕ್ಕೆ ತಕ್ಕಂತೆ ಶಾಣ್ಯಾ, ಢಡ್ಡ, ಆಲಸಿ, ಹುಂಬ, ಅಂಜುಬುರುಕ ಇತ್ಯಾದಿ ಆಗಿರುತ್ತಿದ್ದ ಸಣ್ಣ ಹುಡುಗನ ಕತೆ ಮುಂದೇನಾಗುತ್ತಿದ್ದಿತು ಎಂದು ಈಗ ನೆನಪಿಲ್ಲ. ಆದರೆ ಹೆಚ್ಚೂ ಕಡಿಮೆ ಅದೇ ಕಾಲಕ್ಕೆ ರಾಘೂ ಕಾಕಾನ ಒಡಪು ಹಾಗೂ ಪ್ರತಿಮೆಗಳನ್ನು ಮೊದಲನೆಯ ಸಲ ಓದಿ ನಿಧಾನವಾಗಿ ಅವನ ಕಥಾ ಪ್ರಪಂಚದೊಳಗೆ ಕಾಲಿಡುತ್ತಿದ್ದೆ.

ಮೊದಲಿಂದಲೂ ರಾಘೂ ಕಾಕಾನ ಜೊತೆ ನನಗೆ ಸಲಿಗೆ ಹೆಚ್ಚು. ಅವನು ಚಾಷ್ಟೀ ಮಾಡುತ್ತಿದ್ದ, “ಮಗನಾ, ನಿಮ್ಮ ಅಪ್ಪಗ ಆದರ ’ಅಪ್ಪಾಜಿ, ಹೋಗ್ರಿ ಬರ್ರಿ’ ಅಂತೀ. ನನಗ ಆದರ ’ಕಾಕಾ, ಹೋಗು ಬಾ’ ಅಂತೀ?” ಹೀಗಾಗಿ ಏನೇನೂ ತಿಳಿಯದಿದ್ದರೂ ಅವನ ಕತೆಗಳ ಬಗೆಗೆ ಏನಾದರೂ ಅಧಿಕಪ್ರಸಂಗದ ಅಭಿಪ್ರಾಯ ಕೊಡುತ್ತಿದ್ದೆ. ಅವನ ಕತೆಯಲ್ಲಿನ ಪ್ರಸಂಗಗಳನ್ನು ತೆಗೆದುಕೊಂಡು, “ಕಾಕಾ, ನೀ ಹಂಗ ಮಾಡಿದ್ದ್ಯೆಂತಲಾ, ಹಿಂಗ ಮಾಡಿದ್ದ್ಯಂತಲಾ,” ಎಂದು ಕಾಡುತ್ತಿದ್ದೆ. “ಕಾಕೂ, ಕಾಕಾ ಸಣ್ಣಂವ ಇದ್ದಾಗ ಯಾವುದೋ ಬಳ್ಳೀ ಹುಡುಕಿ ತರತೀನಂತ ಹೇಳಿ ಬಸೂನ ಜೋಡಿ ಗುಡ್ಡದ ಮ್ಯಾಲೆ ಹೋಗಿ ಬೀಡೀ ಶೇದತಿದ್ದಂತ!” ಎಂದೇನೋ ಹರಟಿದ್ದು ನೆನಪಿದೆ.

ಬೆಟಗೇರಿಯ ಕನ್ನಡ ಶಾಲೆಯಲ್ಲಿ ಮೂರು ಇಯತ್ತೆಗಳನ್ನು ಮುಗಿಸಿದ್ದ ನಾನು ಬೇಸಿಗೆ ಸೂಟಿಗೆ ಬಂದಿದ್ದ ರಾಘೂ ಕಾಕಾ, “ಅಪ್ಪೂ, ಮಲ್ಲಾಡಿಹಳ್ಳಿಗೆ ಹೋಗೂಣು ನಡಿ. ಅಲ್ಲಿ ಸಾಲಿ ಛೊಲೊ ಅದ,” ಎಂದಿದ್ದೇ ಹೊರಟು ನಿಂತಿದ್ದೆ. ಅಮ್ಮನ ಅರೆಮನಸ್ಸಿಗೆ ಸೋಲದೆ, ರಾಘೂ ಕಾಕಾನ ಜೊತೆ ಹೋಗುವ ಖುಷಿಯಲ್ಲಿ ಮೈಮರೆತಿದ್ದೆ. ಸಾಕಷ್ಟು ಸಲ ಕೇಳಿ ಮನನವಾಗಿದ್ದ ’ಅರಸೀಕೆರೆ ಪ್ಯಾಸೆಂಜರ್’ ಎಂಬ ಮಾಂತ್ರಿಕ ರೈಲಿನಲ್ಲಿ ಹತ್ತಿ ಮಲ್ಲಾಡಿಹಳ್ಳಿಗೆ ಹುಮ್ಮಸ್ಸಿನಿಂದ ಹೋಗಿದ್ದೆ. ಆದರೆ ಅಲ್ಲಿ ಹೋದ ಮೇಲೆ ಮಾತ್ರ ತಂದೆ ತಾಯಂದಿರ, ಬೆಟಗೇರಿಯ ನೆನಪುಗಳು ತೀವ್ರವಾಗಿ ಬಾಧಿಸತೊಡಗಲು ತಡವಾಗಲಿಲ್ಲ. ಒಂದು ವರ್ಷ ಮಲ್ಲಾಡಿಹಳ್ಳಿಯಲ್ಲಿದ್ದ ನಾನು ಅಲ್ಲಿ ಎಲ್ಲರಿಗೂ ಸಾಕಷ್ಟು ಕಾಡಿದ್ದೆ. ನಂತರದ ದಿನಗಳಲ್ಲಿ ಅದನ್ನು ನೆನೆಸಿಕೊಂಡರೆ ನಗು ಬರುತ್ತಿತ್ತು. ನಾನು ಅಲ್ಲಿ ನಡೆಸಿದ ಪ್ರಸಂಗಗಳು ಇವತ್ತಿಗೂ ನಮ್ಮ ಮನೆಯಲ್ಲಿ ಹಾಸ್ಯದ ವಿಷಯವಾಗಿ ಉಳಿದಿವೆ.

ಮಲ್ಲಾಡಿಹಳ್ಳಿಯಲ್ಲಿ ಕಷ್ಟಪಟ್ಟು ಒಂದು ವರ್ಷ ಮುಗಿಸಿ ಬಂದ ನಂತರವೂ ಅಲ್ಲಿಯ ಆಕರ್ಷಣೆಯೇನೂ ಕಡಿಮೆಯಾಗಿರಲಿಲ್ಲ. ಮುಂದೆ ನಮ್ಮ ತಂದೆಗೆ ವರ್ಗವಾಗಿ ಕೊಡಗಿನ ಶ್ರೀಮಂಗಲ, ಮಡಿಕೇರಿ, ಬೆಂಗಳೂರು ಹೀಗೆ ಬೇರೆ ಬೇರೆ ಕಡೆ ಇದ್ದರೂ, ಸೂಟಿಗಳಲ್ಲಿ ಅಲ್ಲಿ ಹೋಗುತ್ತಲೇ ಇದ್ದೆ. ಮಲ್ಲಾಡಿಹಳ್ಳಿಯ ಮನೆಯಲ್ಲಿ ಯಾವಾಗಲೂ ಮಂದಿ ತುಂಬಿರುತ್ತಿದ್ದರು. ಹೈಸ್ಕೂಲು ಕಾಲೇಜುಗಳಿಗೆ ಹೋಗುತ್ತಿದ್ದ ಅಣ್ಣಂದಿರು ಅಕ್ಕಂದಿರು, ಬೇರೆ ಕಸಿನ್ನುಗಳು ಇದ್ದೇ ಇರುತ್ತಿದ್ದರು. ಮೊದಲಿಂದಲೂ ನೂರಾರು ಪುಸ್ತಕಗಳನ್ನು ನೋಡುತ್ತಲೇ ಬೆಳೆದಿದ್ದರೂ, ಮಲ್ಲಾಡಿಹಳ್ಳಿಯ ಮನೆಯ ಮೇಲಿನ ಮಹಡಿಯ ಎರಡೂ ಕೋಣೆಗಳಲ್ಲಿ ಸಾಲು ಸಾಲು ಪುಸ್ತಕಗಳಿದ್ದ ರಾಘೂ ಕಾಕಾನ ಗ್ರಂಥಾಲಯ ನನಗೆ ಒಂದು ಅಮೂಲ್ಯ ಭಂಡಾರವನ್ನೇ ಒದಗಿಸಿತ್ತು. ಅಲ್ಲಿಯೇ ನಾನು ಅನಂತಮೂರ್ತಿ, ಲಂಕೇಶ, ಖಾಸನೀಸ, ಚಿತ್ತಾಲ ಮೊದಲಾದವರ ಕತೆ ಕಾದಂಬರಿಗಳನ್ನು ಓದಿದ್ದುದು. ನಂತರದ ದಿನಗಳಲ್ಲಿ ಮಾರ್ಕೇಜ್, ಕುಂದೇರಾ, ಕ್ಯಾಲ್ವಿನೊ ಮೊದಲಾದ ವಿಶ್ವ ಸಾಹಿತ್ಯದ ದಿಗ್ಗಜರ ಪರಿಚಯ ನನಗಾದುದೂ ಅಲ್ಲಿಯೇ.
***

ರಾಘೂ ಕಾಕಾನ ಕತೆಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಸಾಕಷ್ಟು ದೊಡ್ಡವು. ’ಮಾಯಿಯ ಮುಖಗಳು’ ಕತೆ ಬರೆಯುತ್ತಿದ್ದಾಗಿನ ಒಂದು ಸಂದರ್ಭ ನೆನಪಾಗುತ್ತದೆ. ಅವನು ಬೆಂಗಳೂರಿಗೆ ಬಂದಾಗ ಮಾಯಿಯ ಮುಖಗಳು ಬರೆಯುತ್ತಿದ್ದ ಬಹುಶ: ಮೌಲ್ಯಮಾಪನಕ್ಕೆ. ಒಂದು ದಿನ ಅವನು ಮೌಲ್ಯಮಾಪನಕ್ಕೆ ಹೋಗುವಾಗ ಕತೆ ಮುಂದುವರಿಸುವಂತೆ ಹೇಳೀ ಹೋಗಿದ್ದ. ಬಹುತೇಕ ಫಕೀರಪ್ಪನ ಪತ್ತಾ ಕಿಶೆಯಲ್ಲಿ ಇಟ್ಟುಕೊಂಡು ಕಲ್ಲೋಪಂತರು ಧಾರವಾಡದ ಬಸ್ಸು ಹತ್ತುವಲ್ಲಿಗೆ ಕತೆ ನಿಂತಿತ್ತು. ನಾನು ಕೂತು ೩-೪ ಪುಟ ಬರೆದಿದ್ದೆ. ಅವನದೇ ಸ್ಟೈಲಿನಲ್ಲಿ ಮುಂದುವರಿಸಿಕೊಂಡು ಹೋಗಿದ್ದೆ. ಆ ೩-೪ ಪುಟಗಳಲ್ಲಿ ಆಗಿದ್ದೆಂದರೆ ಬೆಳಗಾವಿಯಲ್ಲಿ ಬಸ್ಸು ಹತ್ತಿದ್ದ ಕಲ್ಲೋಪಂತರು ಧಾರವಾಡದಲ್ಲಿ ಬಂದಿಳಿದಿದ್ದಷ್ಟೇ! “ಎಲ್ಲಾ ಛೊಲೊ ಅದ, ಖರೆ ಕಥಿ ಮಾತ್ರ ಒಂದು ಇಂಚೂ ಮುಂದ ಹೋಗಿಲ್ಲ,” ಎಂದು ನಂತರ ಕಾಕಾ ಮತ್ತು ನಮ್ಮ ತಂದೆ ನಕ್ಕಿದ್ದರು.

ಕಾಲ ಕ್ರಮೇಣ ಗಂಭೀರವಾಗಿಯೇ ರಾಘೂ ಕಾಕಾನ ಕತೆಗಳನ್ನು ಎಷ್ಟೋ ಸಲ ಓದಿ, ಮೆಚ್ಚಿ, ನನ್ನ ರೀತಿಯಲ್ಲೇ ಅವನೆದುರಿಗೆ ಅವನ್ನು ವಿಮರ್ಶಿಸಿ, ನಿಯಮಿತವಾಗಿ ಸಾಹಿತ್ಯದ ಬಗೆಗೆ ಮಾತನಾಡುತ್ತಿದ್ದರೂ, ಅವನೊಬ್ಬ ಸಾಹಿತಿ ಎಂಬ ಭಾವನೆ ನನಗೆ ಬಂದಿರಲೇ ಇಲ್ಲ. ’ಸಾಹಿತಿ’ ಎಂಬುದೊಂದು ಬೇರೆಯದೇ species ಎಂಬ ಭಾವನೆ ಇದ್ದಿತೇನೋ. ಅಥವಾ ಅವನ ಬಗೆಗಿನ ಸಲಿಗೆ ಪ್ರೀತಿಯಿಂದಾಗಿ ಅವನು ಕಾಕಾ ಆಗಿಯೇ ಉಳಿದಿದ್ದನೇ ಹೊರತು ಹೊರಗಿನವರಂತೆ ಹಾಗೂ ಅವನ ಜೊತೆಯವರಂತೆ ಇನ್ನೂ ನನ್ನ ಪಾಲಿಗೆ ಸಾಹಿತಿ ಆಗಿರಲಿಲ್ಲ.

ಬಹಳ ಮಾಡಿ ಬೆಂಗಳೂರಿನಿಂದ ಬೆಳಗಾವಿಗೆ ನಾವು ನೆಲೆ ಬಂದ ಮೇಲೆಯೇ ರಾಘೂಕಾಕಾ ಒಬ್ಬ ದೊಡ್ಡ ಸಾಹಿತಿ ಎಂಬ ಅರಿವು ಸ್ಪಷ್ಟವಾಗಿದ್ದು. ಬೆಳಗಾವಿಯ ಸಾಹಿತ್ಯಾಸಕ್ತರ ವಲಯದಲ್ಲಿ ನಮ್ಮ ತಂದೆಯೊಂದಿಗೆ ನಾನೂ ತಕ್ಕಮಟ್ಟಿಗೆ ತೊಡಗಿಕೊಂಡದ್ದೂ ಸಾಹಿತ್ಯ ಎನ್ನುವುದರ ಬಗೆಗಿನ ಒಲವು ಹೆಚ್ಚಿಸಿ ಅದರ ಮಹತ್ವದ ಅರಿವನ್ನು ಗಾಢವಾಗಿಸಿದ್ದಿರಬೇಕು. ಅಲ್ಲದೇ ’ಒಡಪುಗಳು’ ಹಾಗೂ ’ಪ್ರತಿಮೆಗಳು’ ಸಂಕಲನಗಳ ಮುಖಾಂತರ promising ಕತೆಗಾರ ಎಂದು ಗುರುತಿಸಲ್ಪಟ್ಟಿದ್ದ ರಾಘೂ ಕಾಕಾ ’ದೇಸಗತಿ’ಯ ನಂತರ ಕನ್ನಡದ ಮಹತ್ವದ ಕತೆಗಾರನಾಗಿ ಬೆಳೆದಿದ್ದ. ದೇಸಗತಿಯ ಕತೆಗಳಷ್ಟೇ ಅಲ್ಲದೇ ಅದರ ಬಗೆಗಿನ ಅನೇಕ ವಿಮರ್ಶೆಗಳು, ಚರ್ಚೆಗಳು, ಪ್ರಶಸ್ತಿಗಳು—ಎಲ್ಲವೂ ಹೊಸದಾಗಿದ್ದುವು; ಹಿಂದೆಂದೂ ಕಂಡಿರದ ಹೊಸ ಹಾದಿಯನ್ನು ಸೂಚಿಸುತ್ತಿದ್ದುವು.

ನಾನು ಚಿಕ್ಕವನಿದ್ದಾಗ ರೇಡಿಯೊದಲ್ಲಿ ಆಗಾಗ ಬೇಂದ್ರೆಯವರ “ನೀ ಹೀಂಗ ನೋಡಬ್ಯಾಡ ನನ್ನ” ಹಾಡು ಪ್ರಸಾರವಾಗುತ್ತಿತ್ತು. ಆ ಹಾಡಿನಲ್ಲಿ ಬರುವ “ಹುಣಿಮಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲುತ ಹಗಲ” ಎಂಬ ಸಾಲು ದುರಂತದ ಹೃದಯವಿದ್ರಾವಕ ಪ್ರತಿಮೆಯಾಗಿ ನನ್ನ ಮನಸ್ಸಿನಲ್ಲಿ ಬೇರೂರಿದೆ. ಕಲ್ಪನಾಥ ದೇಸಾಯರ ವಂಶದ ಕುಡಿ ಎಳೆಯ ಮಗು ಅಮೃತನ ಮೈತುಂಬ ಮುತ್ತಿ, ಆ ಕೂಸಿನ ಕವಳೀ ಹಣ್ಣಿನಂಥ ಕಣ್ಣುಗಳನ್ನು ಕಚ್ಚಿ ತಿನ್ನುತ್ತಿರುವ ಕಟ್ಟಿರುವೆಗಳು; ಆ ಭೀಕರತೆಯನ್ನು ತಾಳದೆ ನೆಲಕ್ಕಚ್ಚುವ ದೇಸಾಯರು—ಈ ಚಿತ್ರಣವೂ ನನ್ನಲ್ಲಿ ಅದೇ ರೀತಿಯ ಗಾಢವಾದ ಪರಿಣಾಮವನ್ನುಂಟುಮಾಡಿದೆ. ’ದೇಸಗತಿ’ಯ ಕತೆಗಳನ್ನು ನಾನು ಅನೇಕ ಸಲ ಅನೇಕ ಹಂತಗಳಲ್ಲಿ ಓದಿದ್ದೇನೆ ಎನ್ನಿಸುತ್ತದೆ. ಕಾಫ್ಕನ ಕತೆಗಳ ನೆನಪು ತಾರುವ ’ಕಥಿಯ ಹುಚ್ಚಿನ ಕರಿಯ ಟೊಪಿಗಿ ರಾಯ’; ’ದೇಸಗತಿ’ ಕತೆಯಲ್ಲಿನ loneliness ನನ್ನನ್ನು ಬಹುವಾಗಿ ಕಾಡಿವೆ. (ರಾಘೂ ಕಾಕಾನಿಗೂ ಬಹಳ ಇಷ್ಟವಾಗುವ ಕತೆ ‘No One Writes to the Colonel’ ಎಂಬ ಕತೆಯಲ್ಲಿನ ಹೆಪ್ಪುಗಟ್ಟಿದ loneliness ನೆನಪಾಗುತ್ತದೆ.)

ಇವೆಲ್ಲಕ್ಕಿಂತ ವಿಭಿನ್ನವಾದ ಮತ್ತು ನನಗೆ ಅತ್ಯಂತ ಮೆಚ್ಚುಗೆಯಾಗುವ ಕಾಕಾನ ಕತೆ ’ಲಯ’. ನಾನು ಮತ್ತೆ ಮತ್ತೆ ಓದುವ ಕತೆ ’ಲಯ’. ಅದು ನಾನು ಓದಿದ ಶ್ರೇಷ್ಠ ಕತೆಗಳಲ್ಲೊಂದು. ದೇಸಗತಿಯ ಕತೆಗಳಲ್ಲಿ—ಅದರಲ್ಲೂ ಮುಖ್ಯವಾಗಿ ’ಲಯ’ದಲ್ಲಿ—ಭಾಷೆಯನ್ನು ದುಡಿಸಿಕೊಳ್ಳುವ ಅವನ ಅಗಾಧ ಶಕ್ತಿ ಪ್ರತಿಯೊಂದು ಸಲವೂ ತಟ್ಟುತ್ತದೆ. ಸರಿ ಸುಮಾರು ಅದೇ ಕಾಲದಲ್ಲಿ ನಾನೂ ಅಲ್ಪಸ್ವಲ್ಪ ಬರೆಯುವ ಪ್ರಯತ್ನ ಮಾಡುತ್ತಿದ್ದೆ. ನಾನು ಬರೆದದ್ದೇ ಒಂದೆರಡು ಕತೆಗಳನ್ನಾದರೂ ಸಾಹಿತ್ಯ ಸೃಷ್ಟಿ ಮೂಡಿಸುವ ಧನ್ಯತೆಯ ಭಾವವನ್ನು ಸ್ವಲ್ಪವಾದರೂ ಅನುಭವಿಸಿದ್ದೆ. ಲಯದಂಥ ಕತೆಗಳು ಶ್ರೇಷ್ಠ ಸಾಹಿತ್ಯದ ಓದಿನ ಧನ್ಯತೆಯ ಭಾವವನ್ನು ಮನಗಾಣಿಸುತ್ತವೆ.

’ದೇಸಗತಿ’ಯ ಕತೆಗಳು (ಹಾಗೂ ’ತೇರು’ ಕೂಡ) ನಾಟಕಗಳಾಗಿ ಯಶಸ್ವೀ ಪ್ರಯೋಗ ಕಾಣುತ್ತಿವೆ. ಇವುಗಳು ನಾಟಕಗಳಾಗಿ ರೂಪಾಂತರಗೊಳ್ಳುವ ಪ್ರಕ್ರಿಯೆ ಅತ್ಯಂತ ಸ್ವಾಭಾವಿಕವಾದುದು; ಅದು ಆಗಲೇಬೇಕಾದ್ದು ಎಂದು ನನಗೆ ಯಾವಾಗಲೂ ಅನ್ನಿಸಿದೆ. ಕಾಕಾನ ಕತೆಗಳಲ್ಲಿ ನನಗೆ ವೈಯಕ್ತಿಕವಾಗಿ ಪ್ರಮುಖವೆನ್ನಿಸುವ ಇನ್ನೊಂದು ಅಂಶವನ್ನು ನಾನಿಲ್ಲಿ ಹೇಳಬೇಕು. ಸಂಗೀತದ ಬಗೆಗೆ ಅವನು ಆಶ್ಚರ್ಯವಾಗುವಷ್ಟು ಪುಷ್ಟವಾಗಿ ಬರೆಯುತ್ತಾನೆ. ಉದಾಹರಣೆಗೆ, ’ಮಾಯಿಯ ಮುಖಗಳು’ ಕತೆಯಲ್ಲಿ ಸಂಗೀತದ ವರ್ಣನೆ ಬರುವ ಭಾಗಗಳು ನನಗೆ ತುಂಬ ಇಷ್ಟವಾಗುತ್ತವೆ. ಔಪಚಾರಿಕವಾಗಿ ಅಭ್ಯಾಸ ಮಾಡಿರದಿದ್ದರೂ ಸಂಗೀತವನ್ನು ಆಳವಾಗಿ ಅವನು ಗ್ರಹಿಸುವ ಬಗೆ ಹಾಗೂ ಕ್ಲೀಶೆಗಳಿಲ್ಲದ ಸ್ವೋಪಜ್ಞವಾದ ಅಭಿವ್ಯಕ್ತಿ ನನ್ನನ್ನು ತೀರ ಮೃದುಗೊಳಿಸುತ್ತವೆ.

ಕತೆ ಕಾದಂಬರಿಗಳನ್ನು ಓದುವಾಗ ಕತೆ ನಡೆಯುವ ಸ್ಥಳಗಳು, ಪಾತ್ರಗಳು ವಾಸಿಸುವ ಮನೆಗಳು, ಅವು ಓಡಾಡುವ ಹಾದಿಗಳು, ಕೂಡುವ ಕೂಟಗಳು ಇತ್ಯಾದಿಗಳ ಮಾನಸಿಕ ಮಾದರಿ (mental model) ಒಂದು ಓದುಗನ ಮನಸ್ಸಿನಲ್ಲಿ ಇರುತ್ತದೆ. ರಾಘೂ ಕಾಕಾನ ಕತೆಗಳಲ್ಲಿನ ಊರುಗಳು, ಜಾಗಗಳೂ ಇದೇ ರೀತಿ ಸ್ಪಷ್ಟವಾಗಿ ಮನಸ್ಸಿನಲ್ಲಿ ಕೂತಿವೆ. ಅವನ ಹಿನ್ನೆಲೆ ನನಗೂ ಪರಿಚಿತವಾದ್ದರಿಂದ ಅನೇಕ ಸಲ ಕತೆಯಲ್ಲಿನ ಚಿತ್ರಣಗಳಿಗೂ ವಾಸ್ತವದಲ್ಲಿ ಇರುವ ಜಾಗಗಳಿಗೂ mapping ಇರುತ್ತದೆ. ಗೋಕಾಂವಿಯ ಬಸ್‍ಸ್ಟ್ಯಾಂಡು, ಬೆಟಗೇರಿಯ ಅಜ್ಜನ ಮಠ, ಓಕುಳಿ ಕೊಂಡ, ಅಗಸಿಯ ಬಾಗಿಲು, ಇತ್ಯಾದಿ. ಉಳಿದವು ಕಲ್ಪಿಸಿಕೊಂಡುವು. ಈ ಮಾದರಿಗಳು consistent ಆಗಿ ಉಳಿಯುತ್ತವೆ: ಮೊದಲೊಮ್ಮೆ ಓದಿದ್ದ ಕಾದಂಬರಿಗೆ ಮರಳಿ ಹೋದರೆ, ಅವೇ ಮರಳಿ ಬರುತ್ತವೆ. ಕೊನೆಯ ಪಕ್ಷ ನನಗಂತೂ ಹಾಗೆ ಆಗುತ್ತದೆ! ನಾನು ’ಕರಿ ಟೊಪಿಗಿ ರಾಯ’ ಕತೆಯನ್ನು ನೆನೆದಾಗಲೆಲ್ಲ ನನ್ನ ಮನಸ್ಸಿನಲ್ಲಿ ಮೊದಲು ಬರುವ ಚಿತ್ರವೆಂದರೆ ಇದು: ಸುತ್ತಮುತ್ತ ಹಿಂದೆ ಮುಂದೆ ಏನೂ ಇಲ್ಲದಂಥ, ಅಂತರದಲ್ಲಿ ತೇಲುತ್ತಿರುವಂಥ, ಒಂದು ನೇರವಾದ ಉದ್ದಾನುದ್ದ ರಸ್ತೆ ಹಾಗೂ ಒಮ್ಮಿಂದೊಮ್ಮೆಲೆ ಉದ್ಭವವಾದಂತೆ ರಸ್ತೆಯ ಬದಿಗೆ ಬರುವ ಒಂಟಿ ಕಂಬ.

ರಾಘೂ ಕಾಕಾನ ಕತೆಗಳ ವಿಷಯದಲ್ಲಂತೂ ಈ ಸುಸಂಬದ್ಧತೆ ಎಷ್ಟು ಪ್ರಬಲವಾಗಿದೆಯೆಂದರೆ ಇತ್ತೀಚೆಗೆ ಅವನ ಕೆಲವು ಕತೆಗಳ ನಾಟಕ ರೂಪಾಂತರಗಳನ್ನು ನೋಡುವಾಗ, “ಅರೆ, ಇದೇನು ರಂಗಸಜ್ಜಿಕೆ ತಪ್ಪುತಪ್ಪಾಗಿದೆಯಲ್ಲ!” “ಲಂಗಟದ ಸ್ವಾಮಿ, ಬಾಳಯ್ಯ ಕೂತು ಆವಾಹನೆ ಮಾಡಿದ ಜಾಗ ಇದಲ್ಲವೇ ಅಲ್ಲ!” ಈ ರೀತಿಯಾದ ಹುಚ್ಚು ತಕರಾರುಗಳು ನನ್ನ ಮನಸ್ಸಿನಲ್ಲಿ ಬರುತ್ತಿರುತ್ತವೆ.
***

’ತೇರು’ವಿನ ಮೊದಲ ವರ್ಶನ್ ಬರೆದಾಗ ಅದನ್ನು ನಾನು ಓದಿದ್ದೆ. ಅಲ್ಲಿಯವರೆಗೆ ಕತೆಗಳನ್ನೇ (ದೊಡ್ಡ ದೊಡ್ಡ ಕತೆಗಳು) ಬರೆದಿದ್ದ ಅವನು ಬಹುಶ: ಇದು ಕಾದಂಬರಿಯಾಗುತ್ತದೆ ಎಂದು ಹೇಳಿದ್ದಂತೆ ನೆನಪು. ’ತೇರು’ ಕಾದಂಬರಿಯ ಯಶಸ್ಸು ಇನ್ಸ್ಟಂಟ್ ಆಗಿದ್ದಿತು. ಅದರ ಕರಡು ಓದಿದವರೆಲ್ಲ ಮೆಚ್ಚಿ ಇದೊಂದು ಶ್ರೇಷ್ಠ ಕೃತಿ ಎಂದು ಗುರುತಿಸಿದ್ದರು. ಬೆಳಗಾವಿಯಲ್ಲಿ ಅನೇಕ ಸಾಹಿತ್ಯಾಸಕ್ತರ ಎದುರು ಕಾಕಾ ಅದನ್ನು ಓದಿದ್ದ. ನಂತರ ’ತೇರು’ ಪ್ರಕಟವಾಗಿ ಅದಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. ಮುಂದೆ ೨೦೦೬ರಲ್ಲಿ ಬಂದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ’ತೇರು’ ಕಾದಂಬರಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿಯಿತು. ರಾಷ್ಟ್ರಮಟ್ಟದಲ್ಲಿ ಆದ ಈ ದಾಖಲಾತಿ ನಮ್ಮೆಲ್ಲರಿಗೆ ಉಂಟು ಮಾಡಿದ ಹರ್ಷ ಅಷ್ಟಿಷ್ಟಲ್ಲ. ನಾನು ರಾಘೂ ಕಾಕಾನಿಗೆ ಫೋನ್ ಮಾಡಿ, “ಏನ್ ಕಾಕಾ, ಚೈನೀ ಆತಲಾ!” ಎಂದು ಅಭಿನಂದಿಸಿದ್ದೆ. ನನ್ನ ಗುರುತಿನವರನೇಕರಿಗೆ ನನಗೆಯೇ ಪ್ರಶಸ್ತಿ ಬಂದಷ್ಟು ಸಂತಸದಿಂದ ಹೇಳಿ, ಅವರ ಅಭಿನಂದನೆಗಳೂ ನನಗೆ ಸಂದಂತೆ ಕೌತುಕಪಟ್ಟಿದ್ದೆ.

’ತೇರು’ವಿನ ನಂತರ ಅವನು ಬಹಳ ದಿವಸ ಏನೂ ಬರೆದೇ ಇರಲಿಲ್ಲ. ಫೋನು ಮಾಡಿದಾಗೊಮ್ಮೆ ಅವನು ನನಗೂ ನಾನು ಅವನಿಗೂ ಇತ್ತೀಚೆಗೆ ಏನು ಬರೆದೆ ಎಂದು ಕೇಳುತ್ತಲೇ ಇದ್ದೆವು. “ಬರಿ ಮಗೂ,” ಎಂದು ಅವನು ನನಗೆ ಹೇಳುವುದೂ, “ಭಾಳ ದಿವಸ ಏನೂ ಬರೀದಿದ್ದರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೊಳ್ಳಿ ಇಸಗೋತಾರ ನೋಡು ಕಾಕಾ,” ಎಂದು ನಾನು ಅವನಿಗೆ ಛೇಡಿಸುವುದೋ ನಡೆದೇ ಇರುತ್ತಿತ್ತು.

ಕೇಂದ್ರ ಸಾಹಿತ್ಯ ಅಕ್ಯಾಡೆಮಿ ಪ್ರಶಸ್ತಿ ಸ್ವೀಕಾರಕ್ಕೆ ಅವನ ಜೊತೆ ನಮ್ಮ ಕುಟುಂಬದ ಬಹಳ ಮಂದಿ ಸಂಭ್ರಮದಿಂದ ಹೋಗಿದ್ದರು. ನಾನು ಸಮಾರಂಭ ಮುಗಿದ ಮರುದಿವಸವೋ ಏನೋ ಅವನಿಗೆ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿರುವ ಸುದ್ದಿ ಬಹುಶ: ನಮ್ಮ ಅಕ್ಕಳೊಬ್ಬಳಿಂದ ನನಗೆ ತಿಳಿಯಿತು. ಅಲ್ಲಿಯೇ ನಮ್ಮ ತಂದೆ, ಚಿಕ್ಕಪ್ಪ ಎಲ್ಲರೂ ಇದ್ದುದು, ಹಾಗೂ ತಕ್ಷಣ ತುರ್ತುಚಿಕಿತ್ಸೆ ಸಿಕ್ಕದ್ದು ಗೊತ್ತಾಗಿದ್ದರಿಂದ ನನಗೆ ಬಹಳ ದೊಡ್ಡ ಶಾಕ್ ಏನೂ ಆಗಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ನನ್ನನ್ನು ಮೌನವೊಂದು ಆವರಿಸಿತ್ತು. ಮನಸ್ಸು ಬ್ಲ್ಯಾಂಕ್ ಆಗಿ ಕೆಲಸದಲ್ಲಿ ಆಸಕ್ತಿ ಹೋಗಿತ್ತು. ನಾನು ಯಾವುದೇ ವರದಿ ಅಥವಾ ಪತ್ರ ಕಳಿದಿದ್ದುದರಿಂದಲೂ, ಸತತ ೮-೧೦ ದಿವಸ ಇನ್ಸ್ಟಿಟ್ಯೂಟ್‍ನಲ್ಲಿ ಕಾಣದೇ ಹೋದುದರಿಂದಲೂ ಸ್ವಲ್ಪ ಆತಂಕಗೊಂಡ ನನ್ನ ಪಿಎಚ್‍ಡಿ ಗುರುಗಳು “ನೀನು ಕಾಣಿಸಿಯೇ ಇಲ್ಲ. ಮನೆಯಲ್ಲಿ ಏನೂ ತೊಂದರೆಯಿಲ್ಲವಷ್ಟೇ? ಏನಾದರೂ ಸಮಸ್ಯೆಯಿದೆಯೇ?” ಎಂದು ಪತ್ರ ಬರೆದಿದ್ದರು. ನಾನು ಹೀಗಾಗಿದೆ ಎಂದು ತಿಳಿಸಿದ್ದೆ. ಅವರಿಗೆ ನನ್ನ ಸಮಸ್ಯೆಯೇನು ಎಂಬುದಕ್ಕೆ ಉತ್ತರಿಸಲು ನನಗೆ ತೋಚಿದ್ದು: “ನಮ್ಮ ಮನೆಯ ಹಿರಿಯರೆಲ್ಲರಿಗೂ ವಯಸ್ಸಾಗುತ್ತಿದೆ ಎಂಬುದರ ಪಕ್ಕಾ ಅರಿವು. ಅದೇ ಸಮಸ್ಯೆ.” ಅದನ್ನೇ ಅವರಿಗೆ ಹೇಳಿದ್ದೆ. ನಂತರ ಅವರ ಜೊತೆಗೊಮ್ಮೆ heartfelt ಮಾತುಕತೆಯಾಗಿ ಬೇಸರ ನಿಧಾನವಾಗಿ ಕಳೆದಿತ್ತು.
***

ಅವನು ಹೊಸದೇನಾದರೂ ಬರೆದರೆ ನನಗೆ ಕಳಿಸುತ್ತಾನೆ. ಇತ್ತೀಚೆಗೆ ’ಮತ್ತೊಬ್ಬ ಮಾಯಿ’ಯ ಕರಡನ್ನು ನನಗೆ ಕಳಿಸಿ ಮತ್ತೆ ಮತ್ತೆ ಫೋನು ಮಾಡಿ “ಓದಿದ್ಯಾ ಮಗೂ? ಹೆಂದ ಅದ?” ಎಂದು ಚೊಕ್ಕವಾಗಿ ಕೇಳಿದ್ದ. ನನ್ನಂಥವರ ಅಭಿಪ್ರಾಯವನ್ನು ಲಕ್ಶ್ಯಕೊಟ್ಟೂ ಕೇಳಿ ನನ್ನ ಅರೆಬೆಂದ ವಿಶ್ಲೇಷಣೆಗಳನ್ನು indulge ಮಾಡುವ ಮುಕ್ತ ಮನಸ್ಸು ಅವನಲ್ಲಿದೆ. ಸಿಕ್ಕಾಗೆಲ್ಲ ನಾನು ಇತ್ತೀಚೆಗೆ ಏನು ಓದಿದೆ ಎಂಬ ಆಸಕ್ತಿಯಿಂದ ಕೇಳುತ್ತಾನಲ್ಲದೇ ನಾನು ಈ ಪುಸ್ತಕ ಓದು ಎಂದು ಕೊಟ್ಟರೆ “ಛೊಲೋ ಅದ?” ಎಂದು ತೆಗೆದುಕೊಂಡು ಓದುತ್ತಾನೆ. ಯಾವುದೇ dogmaಗಳಿಗೆ ಒಳಗಾಗದೆಯೇ, ಒಳ್ಳೆಯ ವಿಷಯಗಳು ಎಲ್ಲೆಡೆಯಿಂದಲೂ ಬರಲಿ ಎಂದು ಆಶಿಸುತ್ತಾನೆ. ಅಲ್ಲದೇ ಸಾಹಿತ್ಯವನ್ನೂ ಮೀರಿ ಹೊಸ ವಿಷಯಗಳನ್ನು ಕಲಿಯಬೇಕೆಂಬ ಹಂಬಲ ಅವನಲ್ಲಿ ಜಾಗೃತವಾಗಿರುತ್ತದೆ. ಹಲವು ವರ್ಷಗಳ ಹಿಂದೆ, “ಅಪ್ಪೂ, C ಅಂತ ಕಂಪ್ಯೂಟರ್ ಲ್ಯಾಂಗುವೇಜ್ ಇರತದಲ್ಲ, ಅದನ್ನ ನಾನು ಕಲೀಬಹುದಾ? ಕಲತರ ಹೆಂಗ?” ಅಂತ ಗಂಟುಬಿದ್ದಿದ್ದ. ಕೆಲಸಕ್ಕೆ ಬಾರದ್ದನ್ನೆಲ್ಲ ಕಲಿತು ನಿನ್ನ ಸಮಯ ಹಾಳು ಮಾಡಿಕೊಳ್ಳಬೇಡ, ಎಂದೆಲ್ಲ ಹೇಳಿ ಹೇಗೋ ಮಾಡಿ ಅದನ್ನು ತಪ್ಪಿಸಿದ್ದೆ. ಮತ್ತೊಮ್ಮೊಮ್ಮೆ, “ನಾವೆಲ್ಲಾರೂ ಸೇರಿ ಒಂದು ಕಂಪನಿ ತಗದರ ಹೆಂಗ?” ಎಂದು ಕೇಳುತ್ತಿರುತ್ತಾನೆ!

ಎಲ್ಲ ಕಡೆಯಿಂದ ಭೆಟ್ಟಿಯಾದಾಗೊಮ್ಮೆ ಫೋನು ಮಾಡಿದಾಗೊಮ್ಮೆ “ಏನು ಬರದೀ, ಸಂಕಪ್ಪಯ್ಯ?” ಎಂದು ಕೇಳಿ, “ಬರಿ, ಮಗೂ,” ಎಂದು ಹುರಿದುಂಬಿಸುತ್ತಾನೆ. ಅಲ್ಲದೇ, ಎಂದೋ ಒಂದೆರಡು ಕತೆ ಬರೆದಿರುವ ನನ್ನನ್ನು ಅವನ ಸಾಹಿತಿ ಮಿತ್ರರೆದುರು, “ಇವನು ಒಳ್ಳೆ ಕತೆ ಬರೀತಾನೆ,” ಎಂದು ಪರಿಚಯಿಸಿ ಮುಜುಗರಕ್ಕೂ ಒಳಪಡಿಸುತ್ತಾನೆ. ಅದಕ್ಕೆ ಪ್ರತಿಯಾಗಿ ನಾನು, “ಉಳದದ್ದೂ ಕೆಲಸ ಕಡಿಮಿ ಮಾಡಿಕೊಂಡು ಬರಿ, ಕಾಕಾ. ರಶ್ದೀ, ಪಾಮುಕ್ ಇಂಥವರೆಲ್ಲ ಶಿಸ್ತು ಬೆಳೆಸಿಕೊಂಡಾರ. ದಿವಸಾ ಕೂತು ಸ್ವಲ್ಪಾದರೂ ಬರೀತಾರ,” ಎಂದೆಲ್ಲ ಅಧಿಕಪ್ರಸಂಗದ ಉಪದೇಶ ಮಾಡುತ್ತಿರುತ್ತೇನೆ.

ಅವನಿಗೆ ಮಲ್ಲಾಡಿಹಳ್ಳಿಯ ಶೈಕ್ಷಣಿಕ ಹಾಗೂ ಸಾಮಾಜಿಕ ಪ್ರಗತಿಗಳ ಬಗೆಗೂ ತುಂಬ ಒಲವಿದೆ. ಒಂದರ ಮೇಲೊಂದು ಹೊಸ ಕೋರ್ಸುಗಳನ್ನು ಶುರು ಮಾಡುತ್ತಾನೆ, ಬೇಸಿಗೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತಾನೆ, ಇಲ್ಲವೇ ಸಂಸ್ಥೆಯ ಕೆಲಸಗಳಿಗೆ ಓಡಾಡುತ್ತಾನೆ. ಮೊನ್ನೆಯೇ ಅವನು ಕಾಲೇಜಿನ ಪ್ರಾಂಶುಪಾಲ ಹುದ್ದೆಯಿಂದ ನಿವೃತ್ತನಾದ. ನಾನು ಫೋನು ಮಾಡಿದ್ದಾಗ ಈ ವಿಷಯ ತಿಳಿಸಿದ. ಕೂಡಲೇ ನಾನು ಮತ್ತೆ, “ಇನ್ನು ಮ್ಯಾಲೆ ಫ಼್ರೀ ಆಗತಿ. ಕೂತು ಸಾಕಷ್ಟು ಬರದು ಒಗದು ಬಿಡಬಹುದು,” ಎಂದು ಚಾಷ್ಟೀ ಮಾಡಿದೆ.

ಆದರೆ ಒಂದಂತೂ ಸ್ಪಷ್ಟ. ಶಿಸ್ತುಬದ್ಧ ಕ್ರಮವಾದ ಬರವಣಿಗೆ ಅವನಿಗೆ ಸಾಧ್ಯವೂ ಇಲ್ಲ, ಮತ್ತದರ ಅವಶ್ಯಕತೆಯೂ ಅವನಿಗಿಲ್ಲ. ಅವನ ಜೀವನ ಶೈಲಿ, ಚಟುವಟಿಕೆಗಳು ಹಾಗೂ ಬರವಣಿಗೆ ಅವನವೇ ಆದ ಸಾವಯವ ಪ್ರಕ್ರಿಯೆಗಳ ಮುಖಾಂತರ ನಿಧಾನವಾಗಿ ಪಕ್ವವಾಗಿ ಹೊರಹೊಮ್ಮುತ್ತವೆ. ಅವನಿಗೆ ಅರವತ್ತು ತುಂಬಿದ ಈ ಸಂದರ್ಭದಲ್ಲಿ ಅವನಲ್ಲಿರುವ lazy genius ಹೆಚ್ಚುತ್ತಲೇ ಹೋಗಲಿ ಎಂದು ಆಶಿಸುತ್ತೇನೆ.