ಕೆಲಸ ಪ್ರಗತಿಯಲ್ಲಿದೆ, ಎಚ್ಚರಿಕೆ!

[ಕಳೆದ ೪-೫ ವರ್ಷಗಳಿಂದ ಬರೆದು ಮುಗಿಸಲು ಪ್ರಯತ್ನಿಸುತ್ತಿರುವ ಕಥೆಯ ಭಾಗವಿದು. ಬ್ಲಾಗನ್ನು ಮತ್ತೆ ತೆರೆಯುತ್ತಿದ್ದಂತೇ ಇದರತ್ತಲೂ ಮತ್ತೊಮ್ಮೆ ಗಮನ ಹರಿಸುತ್ತಿದ್ದೇನೆ. ಸದ್ಯಕ್ಕೆ ಕಥೆಯ ನಡುವಿನ ಈ ಒಂದು ಭಾಗ ಅಷ್ಟೇ. ಅಸಂಗತ ಎನ್ನಿಸಲಿಕ್ಕಿಲ್ಲ ಎಂದು ಆಶಿಸುತ್ತೇನೆ. ಪೂರ್ತಿ ಮುಗಿದ ಮೇಲೆ ಈ ಬ್ಲಾಗಿನ ಆಸಕ್ತ ಓದುಗರಿಗೆ ಕಳಿಸುತ್ತೇನೆ.]

ಜಯಂತ ಬಾಗಿಲು ತೆರೆಯುತ್ತಿದ್ದಂತೆ ಸುದರ್ಶನ ಒಳಹೊಕ್ಕ. ಇವನೇನಾದರೂ ಕುಶಲೋಪರಿಯನ್ನಾರಂಭಿಸಿದರೆ ತನಗೆ ಹೇಳಬೇಕಾದುದರ ಇಂಟೆನ್ಸಿಟಿ ಕಡಿಮೆಯಾಗಿ ತಾನು ಏನು ಅನುಭವಿಸುತ್ತೇದ್ದೇನೋ ಅದರ ಮಹತ್ವವೇ ಕಡಿಮೆಯಾಗುತ್ತದೇನೋ ಎಂಬಂತೆ ಹೇಳಲಾರಂಭಿಸಿದ.

“ಇತ್ತೀಚೆಗೆ ಆದದ್ದು ಇದು. ನಾನು ನಿನಗೆ ಹೇಳಬೇಕು ಅಂದುಕೋತ ಹೆಂಗ ಏನು ಯಾಕ ಅಂತ ನನಗ ನಾನ ವಿಚಾರ ಮಾಡಿಕೋತ ಕಡೀಕ ಏನೂ ಸ್ಪಷ್ಟ ತಿಳೀಲಿಲ್ಲ.” ಸುದರ್ಶನ ಹಿಂಗ ಖಬರಿಲ್ಲದವರಗತೆ ವಿಚಿತ್ರ ವ್ಯಾಕರಣದಾಗ ಮಾತಾಡಲಿಕ್ಕೆ ಚಾಲೂ ಮಾಡಿದಾಗ ಜಯಂತ ಗಂಭೀರ ಆದ.

ಒಂದೆರಡು ತಿಂಗಳ ಹಿಂದ ನಮ್ಮ ಅಕ್ಕ ಒಂದು ಹುಡುಗಿಯ ಫೋಟೊ ಕಳಿಸಿದ್ದ. ಅದರ ಕುಂಡಲಿ ಕೂಡಿ ಬರತದ, ಫೋಟೋ ನೋಡು, ಅಡ್ಡಿ ಇಲ್ಲ ಅಂತ ಅನ್ನಿಸಿದರ ಮುಖತಃ ನೊಡಲಿಕ್ಕೆ ಕರೆಸಿದರಾತು ಅಂತ. ಲಕೋಟೆ ಒಡೆದು ಫೋಟೋ ನೋಡಿದೆ. ಏನೋ ಒಂದು ನಮೂನಿ ಇದ್ದಳು ಕಾಣಸಲಿಕ್ಕೆ. ಸ್ವಲ್ಪ ಕಪ್ಪು. ಸರಿ, ಉಪಯೋಗ ಆಗೂಹಂಗ ಕಾಣಸೂದಿಲ್ಲ. ಯಾವುದಕ್ಕೂ ಆಮೇಲೆ ನೋಡಿದರಾಯಿತು ಅಂದುಕೊಂಡು ಫೋಟೊ ಕವರಿನಾಗ ಹಾಕಿ ಎಲ್ಲ್ಯೋ ಇಟ್ಟಿದ್ದೆ.

ಇತ್ತೀಚೆಗೆ ಬೆಳಗಾಂವಿಗೆ ಹೋಗಿದ್ದಾಗ ಒಂದು ಕನ್ಯಾ ಬಂದಿತ್ತು. ಆ ಕನ್ಯಾ ನೋಡತಿದ್ಧಂಗ ಮನ್ಯಾಗ ಉಳಕೀದವರು ಒಂದು ನಮನಿ ಆಗಿಂದಾಗ ನಪಾಸು ಮಾಡಿದ್ದರು. ಕಪ್ಪು ಇದ್ದಳು. ಅಂಥಾ ಏನು ದಪ್ಪ ಅಲ್ಲ. ಖರೆ ೨೪-೨೫ ವರ್ಷದ ಹುಡುಗಿ ಇರಬೇಕಾಧಂಗ ಏನು ಇರಲಿಲ್ಲ ಅಂತ ಅನ್ನು. ನಮ್ಮ ದೊಡ್ಡ ಅಣ್ಣ ಅಂತೂ ಅವರು ಹೊಸ್ತಲಾ ದಾಟೂದ ತಡ ಮಹಾ ನಿರ್ಲಕ್ಷ್ಯದಿಂದ, ’ಕರಸೂಹಂಗ ಮನಿ ತನಕ ಕರೆಸಿದಿವಿ. ಸರಿ, ಆದದ್ದಾತು ಬಿಡ್ರಿ. ಇದನ್ನೇನು ಮುಂದುವರಸೂಹಂಗ ಇಲ್ಲ,’ ಅಂದ. ನಮ್ಮ ತಂದೆಯೂ ಸಣ್ಣಂಗೆ, ’ಹಾಂ, ಸ್ವಲ್ಪ ಕಪ್ಪು ಅದ ಅಲ್ಲಾ,’ ಅಂತ ರಾಗ ಎಳೆದರು. ಇನ್ನು ನಮ್ಮ ತಾಯಿ, ಅಕ್ಕ, ಅತ್ತಿಗೆಂದ್ರು, ಪೂರ್ತಿ ಉದಾಸೀನ ತೋರಿಸಿದರು. ನನಗ ಸಂಕಟ ಆಗಲಿಕ್ಕೆ ಶುರು ಆಗಿತ್ತು. ಅವರೆಲ್ಲ ಬಂದು ಕನ್ಯಾ ತೋರಿಸಿ ಮಾತಾಡಿ ಹೋದಾಗ ನನ್ನ ಮನಸ್ಸಿನಾಗ ಏನು ನಡದಿತ್ತು ಅಂತ ಈಗ ಹೇಳೂದು ಕಠಿಣ. ಖರೆ ಇವರ ಗತೆ ನನಗ ಆ ಹುಡುಗಿನ್ನ ತಗದು ಹಾಕಲಿಕ್ಕೆ ಆಗಿರಲಿಲ್ಲ ಅಂತ ಈಗ ಅನ್ನಿಸತದ. ನಮ್ಮ ಅಣ್ಣ ಕಳಿಸಿದ್ದ ಆ ಫೋಟೋದ ಹುಡುಗಿ ಈಕೆಯೇ ಅಂತ ನನಗ ಆಮ್ಯಾಲೆ ಗೊತ್ತಾತು.

ಬೆಂಗಳೂರಿಗೆ ಬಂದ ಮ್ಯಾಲೆ ಆ ಫೋಟೋ ತಗದು ಭಾಳೊತ್ತು ತದೇಕ ನೋಡಿದೆ. ಆಕೀ ಮುಖದಾಗ ಏನೋ ಒಂದು ವಿಲಕ್ಷಣ ಆಕರ್ಷಣೆ ಇತ್ತು ಅನ್ನೂದು ಖರೆ. ಏನೋ ನಿಗೂಢ ಸೌಂದರ್ಯ. ಪ್ರತಿಬಿಂಬಿಸಲಾರದ ಒಂದು ರೂಪ. ಮುಖದಲ್ಲಿ ಯಾವುದೊ ಕರುಣೆಯೊ, ದೈನ್ಯವೊ ತುಂಬಿದ ಶೃಂಗಾರ. ಬಹುತೇಕ ಅದು ಆಕೆಯ ಕಣ್ಣುಗಳ ಬಗ್ಗೆ ಇರಬೇಕು. ಅಥವಾ ಹಾಂವಿನ್ಹಂಗ ಉದ್ದ ಕೂದಲು ಇದ್ದೂ ಎನೋ, ಗುಂಗುರು ಕೂದಲು… ನಾನು ನಿನಗ ಒಂದು ಮಾತು ಮೊದಲ ಹೇಳಬೇಕು. ಇದೆಲ್ಲ ಖರೆ ಹಕೀಕತ್ತು ಅಂತೇನಲ್ಲ. ಒಂದು ರೀತಿಯ ರೀಕನ್‍ಸ್ಟ್ರಕ್ಟೆಡ್ ವರ್ಶನ್ ಆಫ್ ಟ್ರೂಥ್ ಇರಬಹುದು. ಯಾಕಂದರ ಖರೆ ಏನಂದರ ಮುಂದ ಒಂದೆರಡ ದಿವಸಕ್ಕ ನನಗ ಆಕಿಯ ಮುಖಲಕ್ಷಣ ಮರತ ಹೋಗಿತ್ತು. ಅದಕ್ಕಿಂತ ಮೊದಲು ನೋಡಿದ ಸಾಕಷ್ಟು ಕನ್ಯಾಗಳ ಮುಖಗಳು ಸಾಲಾಗಿ ಚಿತ್ರಪಟಧಂಗ ಬರತಿದ್ದೂ. ಅಥವಾ ಯಾವುದರೆ ಹುಡುಗಿಯ ಹೆಸರು ನೆನಪು ಮಾಡಿಕೊಂಡರ ಅದಕ್ಕ ತಕ್ಕ ಮುಖ ಕಣ್ಮುಂದ ಮೂಡತಿತ್ತು. ಆದರ ಈ ಹುಡುಗಿಯ ಮುಖ ಮಾತ್ರ ಒಟ್ಟ ಸ್ವಲ್ಪನೂ ನೆನಪುಳಿದಿರಲಿಲ್ಲ. ಆದರ ಮನಸ್ಸಿನಾಗ ಮಾತ್ರ ಅತೃಪ್ತಿ ಕುದೀಲಿಕತ್ತಿತ್ತು. ಮತ್ತ ಫೋಟೊ ತಗದು ನೋಡಿದರ, ’ಆಹಾ! ಏನೋ ಅಸಾಧಾರಣ, ಎಲ್ಲೆಲ್ಲೂ ಕಂಡುಬರುವಂಥದ್ದಲ್ಲದ, ಚೆಲುವು!’ ಫೋಟೋ ಮುಚ್ಚಿಟ್ಟರ ಮತ್ತ ಎಲ್ಲಾ ಮಸುಕು ಮಸುಕು. ಇರಲಿ, ಹೆಂಗೂ ಕುಂಡಲಿ ಕೂಡಿ ಬರತದ. ಮನಿಯವರೆಲ್ಲ ಏನಂತಾರ ಅಂತ ಇನ್ನೊಂದು ಕೈ ಕೇಳಿದರಾತು ಅಂತ ಸಮಾಧಾನ ಮಾಡಿಕೊಂಡೆ.

ಮುಂದ ಕೆಲಸದ ಭರದಾಗ ಇದೆಲ್ಲಾ ಮರೆಮಾಚಾಗಿತ್ತು. ಖರೆ ಹದಿನೈದು ದಿವಸದ ಹಿಂದ ಮತ್ತ ಊರಿಗೆ ಹೋಗಿದ್ದೆ. ಅಲ್ಲಿ ಮತ್ತ ಕುಂಡಲೀ ಕನ್ಯಾ ಪರೀಕ್ಷೆ ಇತ್ಯಾದಿ ಮಾತು ಚಾಲೂ ಆದೂ. ಆವಾಗ ನನಗ ಮತ್ತ ಆ ಹುಡಿಗಿಯ ನೆನಪು ಆಗಲಿಕ್ಕೆ ಹತ್ತಿತು. ಅದೇನು ವಿಚಿತ್ರನೋ ಏನೋ ಆವಾಗ ಮಾತ್ರ ನನ್ನ ಕಣ್ಣಿಗೆ ಕಟ್ಟಿದ್ದು ಸ್ಪಷ್ಟ: ಒಂದು ಕಪ್ಪಿದ್ದರೂ ಅಗದೀ ಕಳೆ ಇದ್ದ ಮುಖ; ದೊಡ್ಡೂ ಕಣ್ಣು, ಕಪ್ಪು ಹೊಳಿಯುವ ಕಣ್ಣು. ನನಗ ಅರಿವಿಲ್ಲದೆ ನನ್ನ ಬಾಯಿಂದ ಉದ್ಗಾರ ಹೊಂಟಿತ್ತು, “ಶ್ಯಾಮಲೆ! ಶ್ಯಾಮಲೆ!”

ಆವಾಗಿಂದ ಮನಸ್ಸೆಲ್ಲ ಶ್ಯಾಮಲೆಯ ಹಿಡಿತದಲ್ಲೇ. ಬಹಳ ಚಡಪಡಿಕೆ ಶುರು ಆತು. ಇಷ್ಟು ದಿವಸ ಈ ಕನ್ಯಾ ಪರೀಕ್ಷೆ ಅನ್ನೂದಾಗಲಿ ಮದುವಿ ಅನೂದಾಗಲಿ ಇವುಗಳ ಬಗ್ಗೆ ಅಂಥ ಗಂಭೀರವಾಗಿ ವಿಚಾರ ಮಾಡಿರಲಿಲ್ಲ ನಾನು. ಏನೋ ಇವರೆಲ್ಲಾ ನೋಡತಾರ ಮಾಡತಾರ ಅಂತ ಒಂದು ರೀತಿಯ ಉದಾಸೀನದಲ್ಲಿಯೇ ಇದ್ದೆ. ನೂರಾ ಎಂಟು ಕನ್ಯಾ ನೋಡಿ ನೋಡಿ ತಲಿಚಿಟ್ಟು ಹಿಡದಿತ್ತು. ಆದರ ಈಗ ಒಮ್ಮಿಂದೊಮ್ಮೆಲೆ ಇದನ್ನೊಂದು ಹೆಂಗರೆ ನಿಟ್ಟಿಗೆ ಹಚ್ಚಬೇಕು ಅಂತ ಅನ್ನಿಸಿಬಿಟ್ಟಿತು.

ಮಧ್ಯಾಹ್ನ ಊಟ ಆದ ಮ್ಯಾಲೆ ನಾನು ನಮ್ಮ ಅಪ್ಪಾರು ಪಡಸಾಲ್ಯಾಗ ಕೂತಿದ್ದಿವಿ. ಅವರು ನನ್ನ ಕೆಲಸದ್ದೂ ಅದೂ ಇದೂ ಕೇಳಿಕೋತ ಮಾಡಿಕೋತ ಮತ್ತ ಕೆಲವು ಹೊಸದಾಗಿ ಕೂಡಿದ್ದ ಕುಂಡಲಿಗಳ ಬಗ್ಗೆ ಹೇಳಲಿಕತ್ತರು. ನಾನು ಒಮ್ಮೆಲೇ ಗಡಬಡಿಸಿ, ’ಅಲ್ಲೋ ಅಪ್ಪ, ಆವತ್ತು ನೋಡಿದ್ದಿವಲ್ಲ ಆ ಕನ್ಯಾ. ಬೈಲಹೊಂಗಲದ್ದು. ನನಗ್ಯಾಕೋ ಅದು ಛೊಲೊ ಅನಸತದ,’ ಅಂದೆ. ಅವರು ನನ್ನ ಕಡೆ ಲಕ್ಷ್ಯ ಕೊಟ್ಟು ನೋಡಿ, ’ಯಾವುದೂ? ಹಾಂ… ಅದ… ಖರೆ ನಿಮ್ಮ ಅಕ್ಕಂದಿರು ವೈನಿಗೋಳು ಯಾಕೋ ಬ್ಯಾಡ ಅಂದರಲಾ… ಕಪ್ಪು ಅದ ಅಂ..’ ನನಗ ಒಮ್ಮೆಲೇ ಸಿಟ್ಟು ಬಂತು. ’ಅವರದೆಲ್ಲ ಮದುವಿ ಆಗೇದ. ಅವರು ಅನ್ನೂದನ್ನ ತೊಗೊಂಡು ಏನು ಆಗೂದದ? ನನಗ ಯಾಕೋ ಆ ಕನ್ಯಾನ ಮಾಡಿಕೋಬೇಕು ಅನ್ನಿಸಲೀಕತ್ತದ,’ ಅಂದೆ. ನನ್ನ ಖಂಡತುಂಡ ಮಾತುಗಳಿಗೆ ನಮ್ಮ ಅಪ್ಪ ಯಾಕ ನಾನ ಅಪ್ರತಿಭ ಆದೆ. ಅವರು ಸ್ವಲ್ಪ ನಕ್ಕಂಗ ಮಾಡಿ ಎದ್ದು ಗಣಪತಿ ಮಾಡದಾಗಿಂದ ತಮ್ಮ ಫ಼ೈಲ್ ತಗದರು. ಒಳಗ ಹೋಗಿ ಚಾಳಶಿ ಹಾಕ್ಕೊಂಡು ಬಂದು ಕೂತು, ’ಯಾವಾಗ? ಹೋದ ತಿಂಗಳು ಬಂದಿದ್ದರಲಾ ಅವರು?’ ಅಂದು ಹುಡಿಕಿ ಶ್ಯಾಮಲೆಯ ಕುಂಡಲಿ ತಗದರು. ಒಂದೈದು ನಿಮಿಷ ಕುಂಡಲಿ ನೋಡಿದವರನ ಮನಸ್ಸಿನೊಳಗಿನ ಪ್ರಶ್ನೆಗೆ ಒಮ್ಮೆಲೆ ಉತ್ತರ ಹೊಳದವರ ಗತೆ, “ಹಾಂ, ನಾ ಅದ ಅಂದುಕೊಳ್ಳಲಿಕತ್ತಿದ್ದೆ. ಕೂಡಿ ಬರತದ ಅಂತ ಕರೆಸಿದಿವಿ ಖರೆ. ಆಮ್ಯಾಲೆ ಇನ್ನೊಮ್ಮೆ ವಿವರವಾಗಿ ಕುಂಡಲಿ ನೋಡಿ ಬ್ಯಾಡ ಅಂತ ಬಿಟ್ಟಿದ್ದೆ. ಯಾಕ ಅಂತ ನೆನಪಿರಲಿಲ್ಲ. ಈಗ ನೋಡಿದ ಕೂಡಲೆ ನೆನಪಾತು.” ನನ್ನ ಕಡೆ ನೋಡಿ, “ಈ ಹುಡಿಗಿಗೆ ವಿಧವಾ ಯೋಗ ಅದ,” ಅಂದು ಫ಼ೈಲು ಮುಚ್ಚಿ ಸಾವಕಾಶ ಎಳಲಿಕತ್ತರು. ನಾನೂ ಎದ್ದು ನಿಂತು, “ಇದ್ದರ ವಿಧವಾ ಯೋಗ ಆಕಿಗೆ ಇರತದ. ನನಗೇನು ಸಂಬಂಧ?’ ಅಂತ ಧುಸುಮುಸು ಮಾಡಿದೆ. ನಮ್ಮ ಅಪ್ಪಾರು ನನ್ನ ಕಡೆ ನೋಡಿಕೋತ ಒಂದು ನಮೂನಿ ಪ್ರೀತಿಯ ಮರುಕದ ನಗೀ ನಕ್ಕರು. ’ಏನು ಹಂಗಂದರ?’ ಎಂದು ನಕ್ಕು ನಿಧಾನ ಒಳಗ ಹೋದರು. ನಮ್ಮ ತಾಯಿ ಎಲ್ಲಿದ್ದರೋ ಒಮ್ಮೆಲೇ ಬಂದರು. ಅವರಂತೂ ಭಯದಿಂದ ತಲ್ಲಣಿಸಿ “ಹಂಗಂದ್ರ ಅಂತೂ ಅದು ಮೊದಲು ಬ್ಯಾಡ. ಕಪ್ಪರೆ ಇರಲಿ, ದಪ್ಪರೆ ಇರಲಿ ಬ್ಯಾರೆ ಯಾವುದರೆ ಮಾಡಿಕೊಳ್ಳುವಂತೆ. ಆ ಫೋಟೋ ಸೈತ ನೊಡಬ್ಯಾಡ್ರಿ ಯಾರೂ,” ಎಂದರು.

ನನಗೆನೋ ಒಂದು ರೀತಿ ಭ್ರಮಾ ಉಂಟಾತು. ಏನೋ ಗುಂಗು. ಬ್ಯಾಸರ ಆಗಿ ಧಾರವಾಡಕ್ಕ ಹೊರಟು ನಿಂತೆ. ಆ ಕನ್ಯೆ ಬರೀ ಕಪ್ಪಗಿದ್ದಿದ್ದರೆ, ಮೆಳ್ಳುಗಣ್ಣಿದ್ದರೆ, ಉಬ್ಬು ಹಲ್ಲಿನವಳಾಗಿದ್ದರೆ, … ಅಥವಾ ಅಂಥಾದ್ದು ಮತ್ತೇನಾದರೂ ಕುರೂಪ ಆಕೆಯಲ್ಲಿ ಇರಬೇಕಾಗಿತ್ತು. ಏನೋ ಹಾಗೂ ಹೀಗೂ ಒಪ್ಪಿಸಬಹುದಾಗಿತ್ತು. ಆಕೆ ನೋಡಿದರೆ ಅಂಥಾ ಅಸಾಧಾರಣ ಸುಂದರಿ — ಬರೀ ನನ್ನ ದೃಷ್ಟಿಯಲ್ಲಿ ಅಂದುಕೋ; ಅಥವಾ ನನ್ನ ಕಲ್ಪನೆಯಲ್ಲಿಯೇ ಇರಬಹುದು. ಎಲ್ಲಾ ಬಿಟ್ಟು ಈಗ ಅವಳಿಗೆ ವಿಧವಾ ಯೋಗ ಅದ ಅಂದರ… ನನ್ನ ಮನಸ್ಸು ಒಪ್ಪತದೋ ಬಿಡತದೋ, ಮನೆಯಲ್ಲಿ ಒಪ್ಪುವುದು ಅಸಂಭವ. ಆದರೂ ಬೇರೆ ಎಲ್ಲಾದರೂ ಜಾತಕ ತೋರಿಸೋಣ ಅಂತ ತಂದೆಗೆ ಕೇಳಿದರೆ… ಅವರು ಬೇಸರ ಮಾಡಿಕೊಳ್ಳುತ್ತಾರಲ್ಲ, ನಾನು ಜಾತಕ ನೋಡ್ಡಿದ್ದಕ್ಕೆ ಕಿಮ್ಮತ್ತು ಇಲ್ಲ ಎಂದು ಬೇಸರ ಮಾಡಿಕೊಳ್ಳುತ್ತರೆ. ಅಷ್ಟಕ್ಕೂ ಆ ಹುಡುಗಿ ನನ್ನನ್ನೇ ಮದುವೆ ಆಗಬೇಕು ಅನ್ನುವುದು ಏನು ಹಠ? ಏನೋ ವೈಶಿಷ್ಟ್ಯ ಇರಬಹುದು ಅವಳಲ್ಲಿ, ಖರೆ ಯಾರಿಗೆ ಯೋಗ ಇದೆಯೋ ಅವರು ಮಾಡಿಕೊಳ್ಳುತ್ತಾರೆ…

***

ಸಂಜಿಕ ಧಾರವಾಡಕ್ಕ ಬಂದೆ, ಹಳೆಯ ಗೆಳೆಯಾರನ್ನ ಭೆಟ್ಟಿ ಆದರಾತು ಅಂತ. ಅವರ ಜೋಡಿ ಅದೂ ಇದೂ ಹರಟೀ ಹೊಡದು ಊಟಾ ಮಾಡಿದರೂ ಮನಸ್ಸಿಗೆ ಸ್ವಾಸ್ಥ್ಯ ಸ್ವಲ್ಪನೂ ಇರಲಿಲ್ಲ. ಅವರು ಅಲ್ಲೇ ವಸತಿ ಇರು ಅಂತ ಗಂಟು ಬಿದ್ದರೂ ಯಾಕೋ ಮನಸ್ಸಿಗೆ ಸಮಾಧಾನ ಆಗದ ಎದ್ದು ಹೊರಟೆ. ಹುಬ್ಬಳ್ಳಿಗೆ ಅಕ್ಕನ ಮನಿಗೆ ಹೋಗಿ ಅಲ್ಲಿಂದ ಮುಂಜಾನೆ ಎದ್ದು ಬೆಂಗಳೂರಿಗೆ ಹೋದರಾತು ಅಂತ.

ಹುಬ್ಬಳ್ಳಿ ಬಸ್‍ಸ್ಟ್ಯಾಂಡ್‍ನಾಗ ಬ್ಂದು ಇಳದಾಗ ರಾತ್ರಿ ಸುಮಾರು ೧೧:೩೦ ಆಗಿತ್ತು. ಅಲ್ಲಿಂದ ಒಂದು ರಿಕ್ಷಾ ತೊಗೊಂಡು ನಮ್ಮ ಅಕ್ಕನ ಮನಿ ಕಡೆ ಹೊಂಟಿದ್ದೆ. ಇದೆಲ್ಲಾ ಈಗ ಹೇಳಿದರ ಸ್ವಲ್ಪ ಸಿನಿಮೀಯ ಅನ್ನಿಸತದ. ಖರೆ ಆವಾಗ ನನಗ ಶ್ಯಾಮಲೆಯ ಗುಂಗು ಇತ್ತೋ ಇಲ್ಲೋ ಅನ್ನೂದು ಸೈತ ನೆನಪಿಲ್ಲ. ನಡುವ ಹಾದ್ಯಾಗ ಇಳಕಾಲದಾಗ ರಿಕ್ಶಾ ವೇಗವಾಗಿ ಹೊಂಟಿತ್ತು. ಏನಾತೋ ಒಮ್ಮಿಂದೊಮ್ಮೆಲೆ ರಿಕ್ಷಾದಂವ ಗಕ್ಕಂತ ಬ್ರೇಕ್ ಹಚ್ಚಿದ. ಒಂದು ಎಂಟು ಹತ್ತು ನಾಯಿಗೋಳ ಗುಂಪು. ಅವು ಬೊಗಳಿಕೋತ ಕಡದ್ಯಾಡಿಕೋತ ಅಡ್ಡ ಬಂದಿದ್ದೂ. ಇಂವ ಬ್ರೇಕ್ ಹಚ್ಚಿದ್ದ. ರಿಕ್ಷಾ ಒಪ್ಪಾರೆ ಆಗಿ ಅಡ್ಡ ಬಿತ್ತು. ನಾಯಿಗೋಳಿಗೆ ಏನು ಧಾಡಿ ಆಗಿತ್ತೋ ಏನೋ ಒಮ್ಮೆಲೇ ಆಡರಾಯಿಸಿ ಬಂದೂ. ರಿಕ್ಷಾ ಡ್ರೈವರ ಪುಣ್ಯಾತ್ಮ ಹೆಂಗೋ ರಿಕ್ಷಾದ ಕೆಳಗಿಂದ ಎದ್ದು ಹೊರಗ ಬಂದು ಒಂದೆರಡು ಕಲ್ಲು ತೊಗೊಂಡು ನಾಯಿಗೋಳಿಗೆ ಹೆಟ್ಟಿ ಓಡಿಸಿದ. ಆಮ್ಯಾಲೆ ರಿಕ್ಷಾ ನೆಟ್ಟಗ ನಿಲ್ಲಿಸಿ ನನ್ನೂ ಕೈಹಿಡದು ಎಬ್ಬಿಸಿದ.

ನಾನೂ ನಿದ್ದ್ಯಾಗಿದ್ದವನನ್ನು ಬಡದು ಎಬ್ಬಿಸಿದವರಗತೆ ಗಡಬಡಿಸಿ ಎದ್ದೆ. ರಿಕ್ಷಾದ ಹುಡ್ಡಾದ ರಾಡುಗೋಳು ತಲೀಗೆ ಬಡದಿರಬೇಕು. ತಲಿ ಜುಂ ಅನ್ನಲೀಕತ್ತಿತ್ತು. ಕೈಕಾಲು ಕೆತ್ತಿದ್ದೂ. ರಿಕ್ಷಾದಂವ ಪಾಪ ಗಾಬರಿ ಆಗಿದ್ದ. ’ಸರ, ಇನ್ನೊಂದು ರಿಕ್ಷಾ ತೊಗೊಂಡು ಬರತೀನ್ರಿ. ನಿಮ್ಮನ್ನ ಮನಿ ಮುಟ್ಟಸತೀನಿ,’ ಅನ್ನಲಿಕತ್ತಿದ್ದ. ನಾನು ಕೈ ಮಾಡಿ ಬ್ಯಾಡ ಅಂತ ಹೇಳಿದೆ. ಅಂವಗ ಏನರೆ ಒಂದಷ್ಟು ರೊಕ್ಕ ಕೊಡೂಣು ಅಂತ ಅಂಗಿ ಕಿಶೆದಾಗ ಕೈ ಹಾಕಿದೆ. ಒಂದೆರಡು ನೂರರ ನೋಟು ಇದ್ದೂ. ಅವುತರ ಜೋಡಿ ಇನ್ನೊಂದು ಬಿಳಿ ಹಾಳಿ ಕೈಯ್ಯಾಗ ಬಂತು. ಇದೇನಿದು ಅಂತ ಬಿಚ್ಚಿ ನೋಡಿದರ, ಶ್ಯಾಮಲೆಯ ಕುಂಡಲಿ! ಅದ್ಯಾವ ಮಾಯದಾಗ ಅದು ನನ್ನ ಅಂಗಿ ಕಿಶೇದಾಗ ಬಂದಿತ್ತೋ! ಅದ್ಯಾವ ಗುಂಗಿನಾಗ ಎಲ್ಲಾರ ಕಣ್ತಪ್ಪಿಸಿ ನಾನು ಅದನ್ನು ತೊಗೊಂಡು ಬಂದಿದ್ದೆನೋ ಏನೂ ತೋಚಲಿಲ್ಲ. ನಮ್ಮಪ್ಪ ಹೇಳಿದ್ದು ನೆನಪಾಗಿ ಮೈ ಥರಾ ಥರಾ ನಡುಗಲಿಕ್ಕೆ ಚಾಲೂ ಆತು. ಮೈಯ್ಯೆಲ್ಲ ಬೆಂವರು ಬಿಟ್ಟು ಕೈಕಾಲು ಥಣ್ಣಗ ಆಧಂಗ ಆದೂ. ಮೈಯ್ಯಾಗ ದೆವ್ವ ಹೊಕ್ಕವರ ಗತೆ ಆ ಕುಂಡಲಿ ರಪಾರಪಾ ಹರದು ಒಗದೆ. “ಸರ.. ಏನಾತ್ರೀ ಸರ…”, ಎನ್ನುತ್ತಿದ್ದ ರಿಕ್ಷಾ ಡ್ರೈವರನ ಕೈಯ್ಯಲ್ಲಿ ನೂರರ ಎರಡು-ಮೂರು ನೋಟು ತುರುಕಿ ಧಡಾಧಡಾ ನಡಕೋತ ನಮ್ಮ ಅಕ್ಕನ ಮನೀಕಡೆ ಹೊಂಟೆ.

ಜಯಂತನೂ ತೀವ್ರವಾಗಿ ಅಫ಼ೆಕ್ಟ್ ಆಗಿದ್ದ.

ಆದರೂ ಅದನ್ನು ಬಿಟ್ಟು ಕೊಡಬಾರದೆಂದು ಗಂಟಲು ಸಡಿಲಿಸಿ ಬಹಳ ಪ್ರಯತ್ನಪೂರ್ವಕ ತನ್ನ ಎಂದಿನ ಕುಹಕಭರಿತ ಚಾಣಾಕ್ಷತನ ತೋರಿಸಿದ: “ಸಧ್ಯ ಆ ನಾಯಿಗಳಿಗೆ ಏನೂ ಆಗಲಿಲ್ಲ, ಅಲ್ಲ?”

***

5 thoughts on “ಕೆಲಸ ಪ್ರಗತಿಯಲ್ಲಿದೆ, ಎಚ್ಚರಿಕೆ!

  1. ಅರೆ! ತುಂಬ ಚೆನ್ನಾಗಿದೆ. ಇಷ್ಟೊಂದು ಓದ್ಬೇಕಾ ಅಂದುಕೊಂಡೋಳು ಓದೋಕೆ ಶುರು ಮಾಡಿದ್ಮೇಲೆ ಒಂದೇ ಗುಕ್ಕಿಗೆ ಮುಗಿಸಿ ಬಿಟ್ಟೆ. ಅಂತೂ ಬರೆಯೋಕೆ ಶುರು ಮಾಡಿಬಿಟ್ಟಿದ್ದೀರಿ ಮತ್ತೆ. ಪೋಸ್ಟ್ಗಳು ಬೇಗ ಬೇಗ ಹರಿದು ಬರಲಿ. ಶುಭ ಹಾರೈಕೆಗಳು.

  2. ಈಗ ಓದಿದೆ, ಹಿಂಗೆ ಅರ್ಧಮರ್ಧ ಬರೆದು ನಮ್ಮನ್ಯಾಕೆ ಗೋಳುಹೋಯ್ಕೋತೀರಿ? ಕಥೆ ಲಗೂ ಕಳಿಸಿ ಡಾಕಟರ ಸಾಹೇಬರ! ತಡ ಮಾಡಂಗಿಲ್ಲ ಮತ್ತ!!

ನಿಮ್ಮ ಟಿಪ್ಪಣಿ ಬರೆಯಿರಿ