ನಾಚಿಕೆಗೇಡು!

ನಾವ್ಯಾಕೆ ಇಷ್ಟು ಅಸಹನೆಯುಳ್ಳವರಾಗುತ್ತಿದ್ದೇವೆ? ಯಾಕಿಂಥ ದ್ವೇಷ? ಯಾವನೋ ಒಬ್ಬ ಕೆಲಸವಿಲ್ಲದವನು ಎಂಥದೋ ಒಂದು ಪದ್ಯವನ್ನು ಬರೆದದ್ದೆ ತಡ, ನಮ್ಮ ಆತ್ಮಾಭಿಮಾನಕ್ಕೆ ಧಕ್ಕೆಯಾಗಿ ಹೋಯಿತು. ಹೋಗಿ ಆ ವ್ಯಕ್ತಿ ಕೆಲಸ ಮಾಡುವ ಕಂಪನಿಯ ೫೦ ಕಂಪ್ಯೂಟರ್‍‍ಗಳನ್ನು ನಾಶ ಮಾಡಿದೆವು. ಎಂಥ ಬೇಜವಾಬ್ದಾರಿತನ! ೫೦ ಕಂಪ್ಯೂಟರ್‍ಗಳು ಹೋಗಲಿ,  ಅವುಗಳಲ್ಲಿನ ಮಾಹಿತಿ ನಾಶವಾದದ್ದನ್ನು ತುಂಬಿಕೊಡುವ ಬಗೆ ಹೇಗೆ. ಆ ಕಂಪನಿಯದೇನು ತಪ್ಪು? ಅಲ್ಲಿನ ವ್ಯವಸ್ಥೆ ಅಸ್ತವ್ಯಸ್ತಗೊಳಿಸಿ, ಜನರಲ್ಲಿ ಭಯ ತುಂಬಿ ಮೆರೆದಾಡುವುದು ಎಂಥ ಅವಮಾನಕರ ಸಂಗತಿ. ಹೇಡಿತನದ ಪರಮಾವಧಿ.

ಯಾರ ರಕ್ಷಣೆ ಮಾಡುವ ಯೋಗ್ಯತೆ ಇದೆ ಇವರಿಗೆ? ಭಾಷೆಯ ರಕ್ಷಣೆ? ಇವರೇ ನಮ್ಮ ಭಾಷೆಯ ವಾರಸುದಾರರಾಗಿದ್ದಲ್ಲಿ ಅಂಥ ಸಾವಿರಾರು “abusive” ಪದ್ಯಗಳು ಹರಡಲಿ. ಅದೇ ನಮಗೆ ತಕ್ಕ ಶಾಸ್ತಿ.

ನಮಗೆ ತಮಾಷೆ ಬೇಡ. ವ್ಯಂಗ್ಯ ರುಚಿಸುವುದಿಲ್ಲ. ಭಿನ್ನಾಭಿಪ್ರಾಯಕ್ಕೆ ಗೌರವವಿಲ್ಲ. ಹೋಗಲಿ ಅಮಾಯಕ ಮೂರ್ಖತನವೂ ಸಹನೀಯವಲ್ಲ. ಆ ಮನುಷ್ಯ ಬರೆದ ಪದ್ಯ ಅಲ್ಲಲ್ಲಿ ತಮಾಷೆಯಾಗಿ, ಅಲ್ಲಲ್ಲಿ ವ್ಯಂಗ್ಯದಿಂದ ಕೂಡಿದ್ದರೂ, ಒಟ್ಟಾರೆಯಾಗಿ ಕೆಟ್ಟದಾಗಿದೆ. ಆದರೆ ಅದರಲ್ಲಿ ಏನು derogatory ಅಥವಾ abusive ಎಂಬುದು ತಿಳಿಯಲಿಲ್ಲ. Deep Purple ಎಂಬ ರಾಕ್ ಬ್ಯಾಂಡ್ ಒಂದರ ಯಾವುದೋ ಹಾಡನ್ನು ಮಾರ್ಪಡಿಸಿ ಇದನ್ನು ಬರೆದಿದ್ದಾನೆ. ಇನ್ನು ನಾನು ಒಂದೆರಡು ಕಡೆ ಓದಿದಂತೆ ಅದನ್ನು ಅವನು ನಾತ್ಸೀ anthemನಂತೆ ತನ್ನ ಸಹೋದ್ಯೋಗಿಗಳ ಕಡೆ ಹಾಡಿಸಿದ್ದೇ ನಿಜವಾದಲ್ಲಿ, ಅದು ಅವನ ಕೆಲಸಗೇಡಿತನ ಹಾಗೂ ಮೂರ್ಖತನ. ಆದರೆ ಅದು ನಿರುಪದ್ರವಿ ಮೂರ್ಖತನ. ಉಪದ್ರವ ಆಗಿದ್ದ ಪಕ್ಷದಲ್ಲೂ ಅದು ಆ ಸಂಸ್ಥೆಯ ಆಂತರಿಕ ಸನ್ನಿವೇಶ. ಅದನ್ನು ಅವನ ಬಾಸುಗಳು ನಿಭಾಯಿಸಬೇಕಾದದ್ದು. ಎಲ್ಲರ ಬಾಸ್‍ಗಳಾದ ನಮ್ಮ ರಕ್ಷಕರಲ್ಲ.

ನಮ್ಮ ಭಾಷೆಯನ್ನು ಸರಿಯಾಗಿ ಬಳಸುವ ಜನ ಕಡಿಮೆಯಾಗುತ್ತಿದ್ದಾರೆ. ಜನರದ್ದಷ್ಟೇ ಅಲ್ಲ ಭಾಷೆಯ ಶಬ್ದಸಂಪತ್ತು ಕಡಿಮೆಯಾಗುತ್ತಿದ್ದೆ. ನನನ್ನೂ ಸೇರಿಸಿಕೊಂಡು ಎಷ್ಟೋ ಜನರಿಗೆ ಅನೇಕ ಸಂದರ್ಭಗಳಲ್ಲಿ ಕನ್ನಡಕ್ಕಿಂತ ಇಂಗ್ಲಿಶ್ ಹೆಚ್ಚು ಸಹಜವಾದ ಅಭಿವ್ಯಕ್ತಿ ಮಾಧ್ಯಮವಾಗುತ್ತಿದೆ. ಬರೆಯುವಾಗ ಸರಿಯಾದ ಕನ್ನಡ ಪದಕ್ಕಾಗಿ ತಡಕಾಡುತ್ತ, ಆ ಭಾವಕ್ಕೆ ಹೊಂದುವಂಥ ಇಂಗ್ಲಿಶ್ ಶಬ್ದ ಫಕ್ಕನೆ ಹೊಳೆದು ನಿಘಂಟಿನಲ್ಲಿ ಅದಕ್ಕೆ ಸಮಾನ ಶಬ್ದ ಹುಡುಕುತ್ತೇವೆ. ಔಪಚಾರಿಕ ಸಂದರ್ಭಗಳಲ್ಲಿ ನಿರರ್ಗಳವಾಗಿ ಕನ್ನಡ ಶಬ್ದಗಳು ಬಾಯಿಗೆ ಬರದೆ ಜೀವ ಬರುತ್ತದೆ. ಆದರೆ ಇಂಥ ಕ್ಷುಲ್ಲಕ ವಿಷಯಗಳ ಬಗ್ಗೆ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು? ಪುಡಿ ಮಾಡಲು ಬೇಕಾದಷ್ಟು ಸಾಮಗ್ರಿ ಇದೆಯಲ್ಲ!

ಆ ಕೆನೆಡಿಯನ್ ಮನುಷ್ಯ ಕನ್ನಡ ಸೈನಿಕರ ಉಗ್ರಾಭಿಮಾನ ಹಾಗು ಜೋರು ಬಾಯಿಗಳ ಬಗ್ಗೆ ಪದ್ಯ ಬರೆದ; ಇವರು ವೀರಾವೇಶದಿಂದ ಒಂದು ಖಾಸಗಿ ಕಟ್ಟಡಕ್ಕೆ ನುಗ್ಗಿ ಧಾಂಧಲೆ ನಡೆಸಿದರು. ಎಂಥ ತಾಳೆ! ಎಂಥ delicious irony! ರುಚಿಕಟ್ಟಾದ ವಿಪರ್ಯಾಸ ಅನ್ನಲೆ?

ಅಭಿವ್ಯಕ್ತಿ ಸ್ವಾತಂತ್ರ್ಯ, ಖಾಸಗಿ ಸ್ವತ್ತುಗಳ ಹಕ್ಕು ಇಂಥ ನುಡಿಟ್ಟುಗಳೆಲ್ಲ ನಮಗೆ ವಿಚಿತ್ರವಾಗಿ ತೋರುತ್ತವೆ. ಎಲ್ಲವನ್ನೂ ಹಾದಿಗೆ ಹಚ್ಚುವ ಅಕ್ಕಸತನವೇ ನಮಗಿಷ್ಟ.

ಇದರ ಮೇಲೆ ನಮ್ಮ ಕನ್ನಡದ ಏಳಿಗೆಯ ಗುತ್ತಿಗೆ ಹಿಡಿದ ಮಹಾನುಭಾವರೊಬ್ಬರು – “ಇಂಥ ಧಾಂಧಲೆ ನಡೆಸುವ ಅವಶ್ಯಕತೆ ಇರಲಿಲ್ಲ. ಆದರೇನು? ಯಾರೂ ಸತ್ತಿಲ್ಲವಲ್ಲ. ಅವರಿಗೆ ಬೇಕಿದ್ದಲ್ಲಿ ಕಟ್ಟಡಕ್ಕೇ ಬೆಂಕಿ ಹಚ್ಚಬಹುದಿತ್ತು” – ಎಂದು ಅಪ್ಪಣೆ ಕೊಡಿಸಿದ್ದಾರೆ! ಅಷ್ಟೇ ಅಲ್ಲ:

“We should deal with those who show disrespect to Kannada and Karnataka like central reserve police. There should be no evidence, no scars on the outside. But inside, the bones must be powdered.”

ನಿಜವೋ ಸುಳ್ಳೋ ಕನಸೋ ಮೂರ್ಖರ ರಾಜ್ಯವೋ ರಕ್ಕಸರ ಯುಗವೋ? ’ಚುರುಮುರಿ’ಯು ಉದ್ಧರಿಸಿರುವ ವರದಿಯಲ್ಲಿ ಸತ್ಯಾಂಶವಿದ್ದಲ್ಲಿ, ನಾವು ರಕ್ಕಸರ ಕೈಯಲ್ಲಿ ಕನ್ನಡದ ಜವಾಬ್ದಾರಿ ಕೊಟ್ಟಿದ್ದೇವೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ನಾಚಿಕೆಗೇಡು.

2 thoughts on “ನಾಚಿಕೆಗೇಡು!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s