ಮೊದಲಿಗೆ ಕೆಲವು ಸರಳ ಸತ್ಯಗಳನ್ನು ನೋಡುವ: ಸ್ವಯಂಪ್ರೇರಿತವಾಗಿ ನಡೆಸುವ ಯಾವುದೇ ವ್ಯಾಪಾರ ಕೆಟ್ಟದ್ದಲ್ಲ; ಮನುಷ್ಯರ ನಡವಳಿಕೆ ವ್ಯವಹಾರಗಳು ಸ್ವಾರ್ಥದ ಮೇಲೆ ಆಧಾರಿತವಾಗಿವೆ; ಮನುಷ್ಯ ಸ್ವಾರ್ಥಿಯಾಗಿರುವುದರಿಂದ ಪ್ರತಿಫಲದ ಅಪೇಕ್ಷೆ ಸಹಜ; ಪ್ರತಿಫಲದ ಅಪೇಕ್ಷೆ ತಪ್ಪಲ್ಲ; ವಸ್ತುತ:, ನಮ್ಮನ್ನು ಕಾರ್ಯೋನ್ಮುಖರಾಗಲು ಪ್ರಚೋದಿಸುವುದೇ ಅದು; ಬೇರೆ ಬೇರೆ ಮನುಷ್ಯರಿಗೆ ಬೇರೆ ಬೇರೆ ಶಕ್ತಿಸಾಮರ್ಥ್ಯಗಳೂ, ಬೇರೆ ಬೇರೆ ಅವಶ್ಯಕತೆಗಳೂ ಇರುತ್ತವೆ; ಹೀಗಾಗಿ, ಮನುಷ್ಯ ಮನುಷ್ಯರ ನಡುವಿನ ವ್ಯವಹಾರಗಳು, ಸಂವಹನ ಅನಿವಾರ್ಯ; ಪ್ರತಿಫಲಗಳು/ಉತ್ತೇಜಕಗಳೇ ಎಲ್ಲ ರೀತಿಯ ವ್ಯವಹಾರಗಳನ್ನು ಸಾಧ್ಯವಾಗಿಸುವುವು.
ಇದನ್ನೇ ಸ್ವಲ್ಪ ವಿಸ್ತರಿಸಿದರೆ, ’ಲಾಭ’ ಎನ್ನುವುದು ಕೆಟ್ಟ ಶಬ್ದ ಅಲ್ಲ ಅನ್ನುವುದು ಸ್ಪಷ್ಟ. ಲಾಭಕ್ಕಾಗಿ ವ್ಯಾಪಾರ ಮಾಡುವುದು ತಪ್ಪಲ್ಲ. ಅದಷ್ಟೇ ಅಲ್ಲ, ವ್ಯಕ್ತಿಗಳಿಬ್ಬರು ವ್ಯವಹರಿಸಬೇಕಾದರೆ ವ್ಯಾಪಾರ ಪೂರ್ಣಗೊಳ್ಳುವುದು ಯಾವಾಗ ಎಂದರೆ, ಇಬ್ಬರಿಗೂ ಈ ವ್ಯಾಪಾರದಿಂದ ತಮಗೆ ಲಾಭವಾಗುತ್ತಿದೆ ಎನ್ನಿಸಿದಾಗ! ಇದು ಕಾಲು ಕೆಜಿ ಭೆಂಡಿಕಾಯಿ ತೆಗೆದುಕೊಳ್ಳುವುದರಿಂದ ಹಿಡಿದು ಏರ್ಬಸ್ ಎ೩೮೦ ತೆಗೆದುಕೊಳ್ಳುವುದರ ತನಕ ಅನ್ವಯವಾಗುತ್ತದೆ. ಇದು ಯುಕ್ತಿವಿರುದ್ಧ ಎನ್ನಿಸಬಹುದು. ಆದರೆ ಸೂಕ್ಷ್ಮವಾಗಿ ನೋಡಿದರೆ ಇದು ನಿಜ ಎಂದು ಗೊತ್ತಾಗುತ್ತದೆ. ಉದಾಹರಣೆಗೆ ನೀವು ಒಂದು ಕೆಜಿ ಬದನೆಕಾಯಿ ತೆಗೆದುಕೊಳ್ಳುತ್ತಿದ್ದೀರೆಂದುಕೊಳ್ಳಿ. ಬದನೆಕಾಯಿ ವ್ಯಾಪಾರಿ ಕೆಜಿಗೆ ೨೫ ಎನ್ನುತ್ತಾನೆ. ನೀವು ೧೮ಕ್ಕೆ ಕೊಡು ಎನ್ನುತ್ತೀರಿ. ಅವನು ಅಷ್ಟು ಕಡಿಮೆ ಸಾಧ್ಯವಿಲ್ಲ, ೨೨ಕ್ಕಾದರೆ ಕೊಡುತ್ತೇನೆ ಎನ್ನುತ್ತಾನೆ. ನೀವು, ನಿನ್ನದೂ ಬೇಡ ನನ್ನದೂ ಬೇಡ, ೨೦ಕ್ಕೆ ಕೊಡು, ಎನ್ನುತ್ತೀರಿ. ಇದೆಲ್ಲ ನಡೆಯುವಾಗ ನಿಮ್ಮ ಮನಸ್ಸಿನಲ್ಲೇ ನೀವು (ಗೊತ್ತಿನಿಂದಲೋ, ಗೊತ್ತಿಲ್ಲದೆಯೋ) ೨೦ ರೂಪಾಯಿ ಮತ್ತು ಒಂದು ಕೆಜಿ ಬದನೆಕಾಯಿಗಳನ್ನು ಒಂದು ತಕ್ಕಡಿಯಲ್ಲಿಟ್ಟು ತೂಗುತ್ತಿರುತ್ತೀರಿ. ಬದನೆಕಾಯಿಯ ಮೌಲ್ಯ, ೨೦ರೂಪಾಯಿಯ ಮೌಲ್ಯಕ್ಕಿಂತ ಹೆಚ್ಚು (ಏಕೆಂದರೆ ಸದ್ಯಕ್ಕೆ ನಿಮಗೆ ಪಲ್ಯಕ್ಕೆ ಬದನೆಕಾಯಿ ಬೇಕು) ಎನ್ನಿಸಿದರೆ ನೀವು ವ್ಯಾಪಾರವನ್ನು ಮುಂದುವರಿಸುತ್ತೀರಿ. ಇಲ್ಲದಿದ್ದಲ್ಲಿ, ಹೋಗಲಿ ಬಿಡು, ಬೇರೆ ಎಲ್ಲಾದರೂ ಬೇರೆ ಯಾವುದೋ ತರಕಾರಿ ತೊಗೊಂಡರಾಯಿತು ಎಂದುಕೊಳ್ಳುತ್ತೀರಿ. ಇದೇ ಸಮಯದಲ್ಲಿ ಬದನೆಕಾಯಿ ಮಾರುವವ ಇಂಥದೇ ಪ್ರಕ್ರಿಯೆಯಲ್ಲಿ ತೊಡಗಿರುತ್ತಾನೆ. ಅವನಿಗೆ ೨೦ ರೂಪಾಯಿ ತನ್ನ ಬದನೆಕಾಯಿಗಳಿಗಿಂತ ಹೆಚ್ಚಿನದು ಎನ್ನಿಸಿದ ಪಕ್ಷದಲ್ಲಿ, ಅವನ್ನು ಬಿಟ್ಟುಕೊಟ್ಟು ದುಡ್ಡು ಪಡೆಯುತ್ತಾನೆ.
ನಾನು ಮೇಲೆ ಹೇಳಿದ್ದು ಒಂದು ಅತಿ ideal ಉದಾಹರಣೆ ಮತ್ತು ಸರಳೀಕರಿಸಿದ್ದೆಂದು ಗೊತ್ತು. ನೀವು ಬದನೆಕಾಯಿ ತೆಗೆದುಕೊಳ್ಳುವುದು ೨೦ ರೂಪಾಯಿ ಅದಕ್ಕೆ ನ್ಯಾಯಬದ್ಧ ಬೆಲೆ ಎಂದುಕೊಂಡಾಗಲೇ ಆಗಬೇಕಾಗಿಲ್ಲ. ನಿಮಗೆ ಬೇರೆ ಪರಿಗಣನೆಗಳಿರಬಹುದು. ಸಮಯದ ಒತ್ತಡ, ಮತ್ತೆ ಬೇರೆಲ್ಲೋ ಹೋಗಲು ಮನಸ್ಸಿಲ್ಲದಿರುವುದು, ಬದನೆಕಾಯಿ ನಿಮ್ಮ ಹೆಂಡತಿಯ ಅತ್ಯಂತ ಪ್ರೀತಿಯ ತರಕಾರಿಯಾಗಿರುವುದು, ಅಥವಾ ಮತ್ತೇನೋ. ಆದರೂ ನೋಡಿ, ಇವೆಲ್ಲವೂ ಪರೋಕ್ಷವಾಗಿ ನಿಮ್ಮ ಕಣ್ಣಮುಂದಿರುವ ಬದನೆಕಾಯಿಯ ಮೌಲ್ಯವನ್ನು ಹೆಚ್ಚಿಸುತ್ತಿಲ್ಲವೇ! ಅದೂ ಅಲ್ಲದೇ ’೨೦ ರೂಪಾಯಿ’ ಎನ್ನುವುದು ಕೇವಲ ಮಾಹಿತಿಯ ಒಂದು ರೂಪ ಎಂಬುದನ್ನು ನಾವು ಮರೆಯಬಾರದು. ೨೦ ರೂಪಾಯಿಯ ಬೆಲೆ ಎಷ್ಟು ಎಂದರೆ ಅದರಿಂದ ಕೊಳ್ಳಬಹುದಾದುದರ ಮೌಲ್ಯದಷ್ಟು. ಇದೇ ರೀತಿ ಮಾರುವವನಿಗೂ ಅಡಚಣೆಗಳಿರುತ್ತವೆ. ಇವನ್ನೆಲ್ಲ ಗಣಿಸಿದರೂ ಮಾರುಕಟ್ಟೆ ಎನ್ನುವುದರ ಲಕ್ಷಣಗಳನ್ನೆಲ್ಲ ನಾವು ಸೆರೆಹಿಡಿಯಲಾಗುವುದಿಲ್ಲವೆಂದು ಒಪ್ಪುತ್ತೇನೆ. ಸೀಸನ್ನು, ಬೇಡಿಕೆ-ಪೂರೈಕೆಗಳ ಸಮತೋಲನ/ಅಸಮತೋಲನ, ಹಣದುಬ್ಬರ, ಒಟ್ಟಾರೆ ಆರ್ಥಿಕ ವಾತಾವರಣ ಮುಂತಾದ macro-economic ಅಂಶಗಳೂ ಕೆಲಸ ಮಾಡುತ್ತಿರುತ್ತವೆ. ನನ್ನ ಉದ್ದೇಶ ಒಂದು ಮೂಲಭೂತ ಗ್ರಹಿಕೆಯನ್ನು ಸರಳಗೊಳಿಸಿ ಒದಗಿಸಿಕೊಡುವುದಷ್ಟೆ ಆಗಿದೆ. ಅದೂ ಅಲ್ಲದೇ macro-economicsನ ತತ್ವಗಳು ನಾನು ಹೇಳುತ್ತಿರುವಂಥ micro-economicsನ ತತ್ವಗಳ ಆಧಾರದ ಮೇಲೆಯೇ ಕೆಲಸ ಮಾಡುತ್ತವೆ.
ಡಿಮ್ಯಾಂಡ್ ಮತ್ತು ಸಪ್ಪ್ಲೈ. ಅತ್ಯಂತ ಮುಖ್ಯ ಗ್ರಹಿಕೆಗಳಿವು. ಬೇಡಿಕೆಯು ಅಧಿಕವಾಗಿದ್ದು, ಪೂರೈಕೆ ಕಡಿಮೆಯಿದ್ದಲ್ಲಿ ಬೆಲೆ ಹೆಚ್ಚಾಗುತ್ತದೆ. ಪೂರೈಕೆ ಹೆಚ್ಚಿದ್ದು ಬೇಡಿಕೆ ಕಡಿಮೆಯಿದ್ದಲ್ಲಿ ಬೆಲೆ ಕುಸಿಯುತ್ತದೆ. ಇಲ್ಲಿ ಅನ್ಯಾಯ ಏನೂ ಇಲ್ಲ. ಇದು ಸಹಜ. (ಬೇಕೆಂತಲೇ ಇಂಥ ವಿಪರೀತ ಪರಿಸ್ಥಿತಿ ನಿರ್ಮಿಸುವುದು ಅನ್ಯಾಯ. ಆದರೆ ಆ ಚರ್ಚೆ ಈ ಲೇಖನದ ಪರಿಧಿಯಲ್ಲಿ ಬರುವುದಿಲ್ಲ.) ಶನಿವಾರ ಸಾಯಂಕಾಲ ೧೮೦ ರೂಪಾಯಿ ಕೊಟ್ಟರೂ ಸಿಗದ ಪಿವಿಆರ್ನ ಟಿಕೆಟ್ಟುಗಳು, ಮಂಗಳವಾರ ಮುಂಜಾನೆ ೫೦ಕ್ಕೆ ಮಾರದೇ ಖಾಲಿ ಬಿದ್ದಿರುತ್ತವೆ. ಒಂದೇ ದಿನದಲ್ಲಿ ಬೆಲೆಗಳು ಬೇಕಾಬಿಟ್ಟಿ ಹೆಚ್ಚುಕಡಿಮೆಯಾಗುವುದನ್ನು ನೋಡುತ್ತೇವೆ.
ಬೆಲೆಗಳು ಹೀಗೆ ಓಲಾಡದೇ ಸ್ಥಿರವಾಗಿ ನಿಲ್ಲಬೇಕೆಂದರೆ ಬೇಡಿಕೆ ಮತ್ತು ಪೂರೈಕೆಗಳಲ್ಲಿ ಸಮತೋಲನವೇರ್ಪಡಬೇಕು. ಈ ಸಮತೋಲನಕ್ಕೆ ಪೂರಕವಾಗುವುದು ಪೈಪೋಟಿ. ಯಾವುದೇ ವಸ್ತುವನ್ನು ಒಬ್ಬನೇ ಅಥವಾ ಕೆಲವರೇ ಮಾರುತ್ತಿದ್ದರೆ ಅಂಥದುದರ ಬೆಲೆಯನ್ನು ಆ ಕೆಲ ವ್ಯಕ್ತಿಗಳು ಬೇಕಾಬಿಟ್ಟಿಯಾಗಿ ಹೆಚ್ಚಿಸಬಹುದು. ನಮ್ಮ ದೈನಂದಿನ ವ್ಯವಹಾರಗಳಲ್ಲಿ ಇಂಥದನ್ನು ನೋಡುತ್ತಲೇ ಇರುತ್ತೇವೆ. ಆದರೆ ಅಂಥ ವ್ಯಕ್ತಿಗಳಿಗೆ ಪೈಪೋಟಿ ಕೊಡಲು ಅದೇ ವಸ್ತುಗಳನ್ನು ಮಾರುವ, ಸ್ವಲ್ಪ ತಲೆಯಿರುವ ಮನುಷ್ಯ ಬಂದನೆಂದರೆ, ಅವರಿಗಿಂತ ಸ್ವಲ್ಪ ಕಡಿಮೆ ಬೆಲೆಗೆ ಅವೇ ವಸ್ತುಗಳನು ಮಾರತೊಡಗುತ್ತಾನೆ. ಜನರು ಈ ಹೊಸ ಮನುಷ್ಯನ ಹತ್ತಿರ ವ್ಯವಹರಿಸಲು ತೊಡಗುತ್ತಾರೆ. ಇದರಿಂದ ಉಳಿದವರು ಪಾಠ ಕಲಿತರೆಂದರೆ, ಅವರು ಇನ್ನೊಂದು ಸ್ವಲ್ಪ ಕಡಿಮೆಗೆ ಮಾರತೊಡಗುತ್ತಾರೆ. ಇದು ಹೀಗೆ ಮುಂದುವರಿದು, ಪೈಪೋಟಿ ಹೆಚ್ಚಾಗಿ ವಸ್ತುವು ತನ್ನ ’ನಿಜವಾದ’ ಬೆಲೆಯತ್ತ ಸಾಗುತ್ತದೆ.
ಹಣಕ್ಕೆ ಅದರದೇ ಬೆಲೆ ಇಲ್ಲ ಎಂದಿದ್ದೆನಲ್ಲ. ಇನ್ನು ವಸ್ತುಗಳ ಬೆಲೆ ಏನು? ಇಂಥ ವಸ್ತುವಿಗೆ ಇಷ್ಟೇ ಬೆಲೆ ಎಂದು ನಿರ್ಧರಿಸುವುದು ಹೇಗೆ? ಅದನ್ನು ಮಾಡುವವರು ಯಾರು? ಇದು ಅತಿ ಮುಖ್ಯ ವಿಷಯ. ದಯವಿಟ್ಟು ಗಮನಿಸಿ. ವಸ್ತುಗಳಿಗೂ ಯಾವುದೇ ಪೂರ್ವನಿರ್ಧಾರಿತ ಬೆಲೆ ಇರಲು ಸಾಧ್ಯವಿಲ್ಲ. ಮತ್ತು ಇಂಥದುದರ ಬೆಲೆ ನಿಖರವಾಗಿ ಇಷ್ಟೇ ಎಂದು ಹೇಳಲು ಯಾರಪ್ಪನಿಗೂ ಸಾಧ್ಯವಿಲ್ಲ. ಅರ್ಥಶಾಸ್ತ್ರಜ್ಞರಿಗೆ ಸಾಧ್ಯವಿಲ್ಲ, ಸ್ವಾಮಿಗಳಿಗೆ ಸಾಧ್ಯವಿಲ್ಲ, ಯಾರಪ್ಪನಿಂದಲೂ ಸಾಧ್ಯವಿಲ್ಲ. ಸರ್ಕಾರಕ್ಕಂತೂ ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಸರ್ಕಾರ ನಿಗದಿಗೊಳಿಸಿರುವ ಬೆಲೆ ಎಂಬುದಕ್ಕೆ ಅರ್ಥ ಇಲ್ಲ.
ವಸ್ತುಗಳ ಬೆಲೆ ನಿರ್ಧರಿಸುವುವು ಮಾರುಕಟ್ಟೆಗಳು. ಮಾರುಕಟ್ಟೆ ಎಂದರೆ ಏನು? ಮಾರುಕಟ್ಟೆ ಎಂದರೆ ನಾನು, ನೀವು, ನಾವೆಲ್ಲರೂ. ಒಂದು ಮಾದರಿ ಮಾರುಕಟ್ಟೆಯಲ್ಲಿ ಪ್ರತಿ ವಸ್ತುವೂ ಅದರ ’ನಿಜವಾದ’ ಬೆಲೆ ಪಡೆದು ಕೃತಾರ್ಥಗೊಳ್ಳುತ್ತದೆ. Ideal ಮಾರುಕಟ್ಟೆಗಳು ಇಲ್ಲ. ಇರಲು ಸಾಧ್ಯವೂ ಇಲ್ಲ. ಆದರೆ, ಹೆಚ್ಚಾಗಿ ಅವು ತಮ್ಮ ಕೆಲಸ ನಿರ್ವಹಿಸುತ್ತವೆ. They work! ಅವು ಅನಿವಾರ್ಯವೂ ಹೌದು. ಪ್ರತಿಫಲದ ಬಗ್ಗೆ ಮೊದಲು ಹೇಳಿದ್ದೆನಲ್ಲವೇ. ಈ ಪ್ರತಿಫಲಗಳನ್ನು ಸಣ್ಣಪುಟ್ಟ ವೈಯಕ್ತಿಕ ವ್ಯವಹಾರಗಳ ಮೂಲಕ ಮಾರುಕಟ್ಟೆ ಸಾಕ್ಷಾತ್ಕರಿಸುತ್ತದೆ. ಈ ಪ್ರತಿಫಲ ಎನ್ನುವುದು ಧನಾತ್ಮಕವೂ ಆಗಿರಬಹುದು, ಋಣಾತ್ಮಕವೂ ಆಗಿರಬಹುದು. ಲಾಭವೂ ಆಗಬಹುದು, ಲುಕ್ಸಾನೂ ಆಗಬಹುದು. ಅದೇ ರೀತಿ, ಮೇಲಿನ ಉದಾಹರಣೆಯಲ್ಲಿ, ಮೊನೋಪೊಲಿಯನ್ನು ಮಾರುಕಟ್ಟೆ ಶಿಕ್ಷಿಸುವುದು incentiveಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆ ವರ್ಗಾಯಿಸುವುದರ ಮೂಲಕ. ಪೈಪೋಟಿ ಇದ್ದಾಗ ಇಂಥ ಪ್ರಕ್ರಿಯೆ ಹೆಚ್ಚು ಹೆಚ್ಚು ನಡೆದು, ಬೆಲೆಗಳೂ ಸ್ಥಿರವಾಗಲೂ ನ್ಯಾಯಯುತವಾಗಲೂ ಅನುಕೂಲವಾಗುತ್ತದೆ. ಆದ್ದರಿಂದಲೇ ಪೈಪೋಟಿಯೇರ್ಪಡಲು ಅನುಕೂಲ ಮಾಡಿಕೊಡದ ವ್ಯವಸ್ಥೆಗಳು, ಪಾಲಿಸಿಗಳು ಕೆಟ್ಟ ತಪ್ಪುಗಳು. ಮಾರುಕಟ್ಟೆಗಳನ್ನು ಅತಿಯಾಗಿ ನಿಯಂತ್ರಿಸಲು ಪ್ರಯತ್ನಿಸುವುದು, ಪ್ರಬಲವಾದ ನಿಯಂತ್ರಣ ಕೇಂದ್ರಗಳನ್ನು ಬೆಳೆಸುವುದು ಮೂರ್ಖತನ. ಮುಕ್ತ ಮಾರುಕಟ್ಟೆಗಳು ಪರಿಪೂರ್ಣತೆಯನ್ನು ತುಂಬಿ ತುಳುಕಿಸುತ್ತಿಲ್ಲ. ಆದರೆ ಅಂಥವು ಅನಿವಾರ್ಯವಷ್ಟೇ ಅಲ್ಲ, ಅವು ಬೇರೆಲ್ಲವಕ್ಕಿಂತ ಹೆಚ್ಚು ಪರಿಣಾಮಕಾರಿ.
***
ನಾನು ಮೇಲೆ ಹೇಳಿದ್ದರಲ್ಲಿ ಯಾವುದೇ ಹೊಸ ಸತ್ಯವಿಲ್ಲ. ಅಲ್ಲಿ ಇಲ್ಲಿ ಓದಿ ಕೇಳಿ, ಅಲ್ಪ ಸ್ವಲ್ಪ ಸ್ವಂತ ಯೋಚನೆ ಮಾಡಿ ಅರಿತುಕೊಂಡದ್ದು. ಇವೆಲ್ಲ micro-economicsನ ಸರಳ ಸತ್ಯಗಳು ಎಂದುಕೊಳ್ಳಬಹುದು. ಆದರೆ ನಿಜಕ್ಕೂ ಇದೆಲ್ಲ common sense. ಆದರೆ ಇವನ್ನು ತಿಳಿದುಕೊಂಡರೆ ಎಷ್ಟೋ ಸಂದರ್ಭಗಳಲ್ಲಿ ಸರಿಯಾದ ರೀತಿ ಯೋಚನೆ ಮಾಡಲು ನಮಗೆ ಸಾಧ್ಯವಾಗುತ್ತದೆ.
ಎಕನಾಮಿಕ್ಸ್ ಎನ್ನುವುದು ನಿಜಕ್ಕೂ ಏನು ಗೊತ್ತೇ? ಜನರ ಸಮಗ್ರ ನಡವಳಿಕೆಗಳ ಕ್ರಮವಾದ ಅಭ್ಯಾಸ. ಲಕ್ಷಾಂತರ ಸಣ್ಣಪುಟ್ಟ ಸ್ವತಂತ್ರ ನಿರ್ಧಾರಗಳು ಹೇಗೆ ಒಂದು ಅಗಾಧವಾದ ಅರ್ಥವ್ಯವಸ್ಥೆಯನ್ನು ನಿರ್ಮಿಸುತ್ತವೆ, ಹೇಗೆ ಅದನ್ನು ನಡೆಸುತ್ತವೆ, ಎಲ್ಲಿಯೋ ಯಾರೋ ಮಾಡಿದ ಒಂದು ಸಣ್ಣ ತಪ್ಪು ನಿರ್ಧಾರ ಮತ್ತೆಲ್ಲೋ ಅಲ್ಲೋಲಕಲ್ಲೋಲ ಎಬ್ಬಿಸುವ ಬಗೆಯೆಂತು; ಸೋಜಿಗವಲ್ಲವೇ?
(Disclaimer: ನಾನು ಎಕನಾಮಿಕ್ಸ್ನಲ್ಲಿ ಯಾವುದೇ ರೀತಿಯ ತರಬೇತಿಯನ್ನೂ, ಪರಿಣತಿಯನ್ನೂ ಆಳವನ್ನೂ ಹೊಂದಿಲ್ಲ. ಆಸಕ್ತಿಯಿದೆಯಷ್ಟೆ. ನನ್ನ ಮುಖ್ಯ ಉದ್ದೇಶ ಇಂಥ ವಿಷಯಗಳ ಬಗ್ಗೆ ಕನ್ನಡ ಬ್ಲಾಗುಗಳಲ್ಲಿ ಚರ್ಚೆ ಶುರು ಮಾಡುವುದು. ಅಲ್ಲದೇ, ಇವುಗಳ ಬಗ್ಗೆ ಬರಿಯುವಾಗ ನನಗೂ ಇವುಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಬರುತ್ತದೆ. ಇದನ್ನು ಓದಿದ ಯಾರಿಗಾದರೂ ಇಂಥ ವಿಷಯಗಳು ಆಸಕ್ತಿಕರ ಎನ್ನಿಸಿದಲ್ಲಿ ತಿಳಿಸಿ. ಓದುಗರಿಗೆ ಆಸಕ್ತಿಯದ್ದಲ್ಲಿ ಅನೇಕ ಸರಳ, ಆದರೆ ಗಾಢ ಸಂಗತಿಗಳ ಬಗ್ಗೆ ಮಾತಾಡುವುದಕ್ಕೆ, ಬರೆಯುವುದಕ್ಕೆ ನನಗೂ ಆಸಕ್ತಿಯಿದೆ. ಯಾವುದಕ್ಕೂ ತಿಳಿಸಿ.)
ತುಂಬ ವಿಚಾರಪೂರ್ಣವಾಗಿ ಚೆನ್ನಾಗಿದೆ ಲೇಖನ. ಚಿಂತನೆಗೆ ಹಚ್ಚಿತು. ಇನ್ನೂ ಬರೀರಿ ಈ ಥರ ಲೇಖನಗಳನ್ನ…
ಥ್ಯಾಂಕ್ಸ್, ಶುಭದಾ. ಆವಾಗಾವಾಗ ಏನಾದ್ರೂ ಬರೀತೀನಿ.
ಚಕೋರರೇ,
ನಿಮ್ಮ ಉತ್ಸಾಹ, ಉತ್ತೇಜನ ಉಲ್ಲಾಸಭರಿತವಾದ ಬರಹಕ್ಕೆ ಧನ್ಯವಾದಗಳು.
ಎಕನಾಮಿಕ್ಸ್ನ ಬಗ್ಗೆ ಯಾವ expert ಕೂಡಾ ಸರಳವಾಗಿ ಬರೆಯಲಾರ. ಅದು ಅವರ ದೌರ್ಬಲ್ಯ ಕೂಡ. ನೀವು ಹೇಳಿದಂತೆ ತೀರಾ ಇತ್ತೀಚಿನವರೆಗೂ ವಸ್ತುವಿನ ಮೌಲ್ಯವನ್ನು ನಾವೇ ಮಾಡಿಕೊಂಡಂತೆ ಕಾಣುತ್ತಿದ್ದ ಮಾರುಕೊಟ್ಟೆಯ ಸ್ವಾಭಾವಿಕ ವ್ಯವಸ್ಥೆ ನಿಯಂತ್ರಿಸುತ್ತಿತ್ತು. ಆದರೆ ಈಗೇನಾಗಿದೆ ಎಂದರೆ ಅದು ಹಣದ ಮೌಲ್ಯವನ್ನು ಬೇರೆಯದೇ ರೀತಿಯಾಗಿ ತರ್ಕಿಸುವ ವರ್ಗದ ಪಾಲಾಗಿದೆ. ಅದಕ್ಕೇ ದಿಢೀರ್ ಬೆಲೆಏರಿಕೆಗಳು. ಮತ್ತು ಬೀಳುವಿಕೆ. ಇದು ವಾರಕ್ಕೊಂದು ದಿನ ಅಥವ ಚಿತ್ರ ರೆಲೀಸ್ ಆದಾಗ ಬದಲಾಗುವ ಸಿನಿಮಾ ಟಿಕಿಟ್ಗಳ ಬೆಲೆಯಂತಲ್ಲ. ಒಂದು ಮಾರುಕಟ್ಟೆಯ ಮೌಲ್ಯಕ್ಕೆ ಹತ್ತಿರವಿರಬಹುದಾದ ಹಣಕಾಸು ವ್ಯವಹಾರವನ್ನು ಹೊಂದಿರುವ ಯಾವುದೇ ಕಂಪನಿಯಾಗಲೀ, ವ್ಯಕ್ತಿಯಾಗಲೀ ಆ ಮಾರುಕಟ್ಟೆಯ attension ಬದಲಾಯಿಸಬಲ್ಲರು. ಜಾಹೀರಾತುಗಳು ಈ ಕೃತಕ ಗಮನ ಸಂಚಲನಕ್ಕೆ ದೊಡ್ಡ ಕೊಡುಗೆ ನೀಡುತ್ತವೆ. ನಿಮ್ಮ ಲೇಖನ ನೇರವಾಗಿರೋದರಿಂದ, ಮತ್ತು ಅರ್ಥವಾಗುಂತಿರುವುದರಿಂದ ನೀವು ಎಕನಾಮಿಕ್ಸ್ ಬಗ್ಗೆ ನಿರಾಳವಾಗಿ ಬರೀತೀರಿ ಅನ್ನೋ ಬಯಕೆ ನಮ್ಮಂತವರನ್ನು ನಿಮ್ಮನ್ನು ಇನ್ನಷ್ಟು ಪ್ರಚೋದಿಸುವಂತೆ ಮಾಡುತ್ತೆ.