ಮೂರ್ಖ ಪ್ರಕ್ರಿಯೆಗಳೂ ಮಶೀನುಗಳಂಥ ಮನುಷ್ಯರೂ

ಇಲ್ಲಿ ಬಂದಾಗಿನಿಂದ ನಾನು ಗಮನಿಸಿದ ಒಂದು ಅಂಶವೆಂದರೆ ಇಲ್ಲಿನ ತೀರಾ ಸಾಮಾನ್ಯ ವ್ಯಾವಹಾರಿಕ ಸಂವಹನಗಳೂ ಪ್ರಮಾಣಿತ ಪ್ರಕ್ರಿಯೆಗಳಿಂದ ಚಾಲಿತವಾದವು (process driven). ಇದರ ಒಂದು ನೇರ ಪರಿಣಾಮವೆಂದರೆ, ಈ ಪ್ರೊಸೆಸ್‍ಗಳಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೂ ಅದರಲ್ಲಿ ಒಳಗಾಗಿರುವ ಜನ ಮುಜುಗರಕ್ಕೊಳಗಾಗುತ್ತಾರೆ. ವಸ್ತುತಃ, ಇಲ್ಲಿನ ಜನರನ್ನು ಮುಜುಗರಕ್ಕೊಳಪಡಿಸುವುದು ತೀರ ಸುಲಭ. ಇದೊಂದು ಒಳ್ಳೆಯ ಸುದ್ದಿಯೆಂದು ನಾನು ಹೇಳುತ್ತಿಲ್ಲ. ಆದರೆ ನಾನು ಒಳಗಾಗುವ ತೀರ ಸಾಮಾನ್ಯ ವ್ಯವಹಾರಗಳಲ್ಲೆಲ್ಲ ದಿನನಿತ್ಯ ಇದು ಆನುಷಂಗಿಕವಾಗಿ ಆಗುತ್ತಲೇ ಇರುತ್ತದೆ. ಉದಾಹರಣೆಗೆ: ಫ಼ಾಸ್ಟ್‍ಫ಼ುಡ್ ತೆಗೆದುಕೊಳ್ಳುವಾಗ, ಮಾಲ್‍ಗಳಲ್ಲಿ, ಫೋನಿನಲ್ಲಿ ಕಸ್ಟಮರ್ ಕೇರ್‌ನವರೊಂದಿಗೆ ವ್ಯವಹರಿಸುವಾಗ, ಹೀಗೆ. ಇವರೆಲ್ಲರಲ್ಲೂ ಮೆಚ್ಚಬೇಕಾದಂಥ ಅಂಶವೆಂದರೆ, ಸೌಜನ್ಯದಿಂದ ಮಾತನಾಡುತ್ತಾರೆ. (ಎಲ್ಲರೂ ಅಲ್ಲ, ಆದರೆ ಅದು ಸಹಜ.) ಆದರೆ, ಅದೂ ಕೂಡ ಅವರ ಪ್ರೊಸೆಸ್‍ನ ಒಂದು ಅಂಗವಷ್ಟೆ. ಆ ಪ್ರಕ್ರಿಯೆ ಎಲ್ಲ ಗ್ರಾಹಕರಿಗೂ ಗೊತ್ತಿರುತ್ತದೆ ಎಂಬ ಭಾವನೆಯಲ್ಲಿರುತ್ತಾರೆ. ಆದರೆ ನನ್ನಂಥ ಅಜ್ಞಾನಿಗಳು ಇಂಥದ್ದೆಲ್ಲದ್ದಕ್ಕೆ ಗಮನ ಕೊಡದೆ, ಆ ಪ್ರಕ್ರಿಯೆಯ ತಾಳಕ್ಕೆ ಕುಣಿಯದೆ ನನ್ನದೇ ರೀತಿಯಲ್ಲಿ ವ್ಯವಹಾರ ನಡೆಸಲು ನೋಡಿದರೆ, ಬಹು ಬೇಗ ಅವರು ತಮ್ಮ comfort zoneನಿಂದ ಹೊರ ಬೀಳುವ ಪ್ರಸಂಗ ಉಂಟಾಗುತ್ತದೆ. ಅಂಥ ಸಂದರ್ಭವನ್ನು ಎದುರಿಸುವುದು ಅವರಿಗೆ ಎಷ್ಟು ಕಷ್ಟವಾಗಿತ್ತದೆಂದರೆ, ಅಲ್ಲಿಯವರೆಗೆ ಸೌಜನ್ಯದಿಂದಿದ್ದ ಅವರು ನಾವು ಅವರ ಮನನೋಯಿಸಿದವರ ಹಾಗೆ ವರ್ತಿಸತೊಡಗುತ್ತಾರೆ. ಎಷ್ಟೋ ಸಲ ನಾನೇನೋ ತಪ್ಪು ಮಾಡಿದೆನೇನೋ ಎಂಬ ಭಾವನೆ ನನ್ನಲ್ಲಿ ಮೂಡಲಾರಂಭಿಸುತ್ತದೆ.

ಹೇಳಬೇಕಾದ ಒಂದು ವಿಷಯವೆಂದರೆ, ನಾನು ಸ್ವಲ್ಪ (ಸ್ವಲ್ಪವೇಕೆ, ಒಮ್ಮೊಮ್ಮೆ ಬಹಳವೇ) ಮಖೀನ ಮನುಷ್ಯ. ಉಳಿದವರಿಗೆ ಅತ್ಯಂತ ಸರಳ ಹಾಗೂ ಮಾಮೂಲು ಎನ್ನಿಸುವ ಸಾಮಾಜಿಕ ಸಂದರ್ಭಗಳು ನನಗೆ ನಿಭಾಯಿಸಲು ಕಷ್ಟವಾಗುವ ಸಮಸ್ಯೆಗಳು. ಅಪರಿಚಿತರನ್ನು ನಾನಾಗಿಯೇ ಹೋಗಿ ಮಾತನಾಡಿಸುವುದು, ನಾನಾಗಿಯೇ ಹೋಗಿ ಜನರ ದೋಸ್ತಿ ಮಾಡಿಕೊಳ್ಳುವುದು, ಅದೆಲ್ಲ ಹೋಗಲಿ, ಫೋನ್ ಮಾಡುವಾಗ ನಾನು ಅನೇಕ ಬಾರಿ ಸರಿಯಾದ ನಂಬರನ್ನು ಒತ್ತಿದ್ದೇನೆ ಎಂದು ಧೃಢಪಡಿಸಿಕೊಳ್ಳುತ್ತೇನೆ. ಏಕೆಂದರೆ ಅದು ಅಕಸ್ಮಾತ್ ಯಾವುದಾದರೂ ತಪ್ಪು ನಂಬರಿಗೆ ಹೋದರೆ ಏನು ಮಾಡುವುದು? ಅಂಥ ದುರ್ಭರ ಪ್ರಸಂಗವನ್ನು ನಿಭಾಯಿಸುವುದು ಹೇಗೆ? ಎಷ್ಟೋ ಸಲ, ಡಿಸ್‍ಪ್ಲೇ ಇಲ್ಲದ ನಮ್ಮ ಮನೆಯ ಲ್ಯಾಂಡ್‍ಲೈನಿನಿಂದ ಫೋನ್ ಮಾಡುವಾಗ, ನಂಬರ್ ಒತ್ತಿದ ಮೇಲೆ ಸಂಶಯದ ಹುಳು ತಲೆಯೊಳಗೆ ಹೊಕ್ಕುತ್ತದೆ. ಆಕಸ್ಮಾತಾಗಿ ಒಂದು ಅಂಕಿಯನ್ನು ತಪ್ಪು ಒತ್ತಿದ್ದರೆ? ಅತ್ತ ಫೋನು ರಿಂಗಾಗುತ್ತಿದ್ದರೂ ಪಟಕ್ಕನೆ ಕಟ್ ಮಾಡಿ, ಜಾಗ್ರತೆಯಿಂದ ಇನ್ನೊಮ್ಮೆ ಅಂಕಿಗಳನ್ನು ಒಂದೊಂದಾಗೆ ಒತ್ತುತ್ತೇನೆ. ಪಟಪಟನೆ ಅಂಕಿಗಳನ್ನು ಒತ್ತುವ ಬೇರೆಯವರನ್ನು ನೋಡಿದಾಗ ವಿಸ್ಮಯವಾಗುತ್ತದೆ. ಆದರೆ ಪರಿಚಿತರು, ಆತ್ಮೀಯರ ಜೊತೆ ನಾನು ಪೂರ್ತಿ ಬೇರೆ ವ್ಯಕ್ತಿಯೇ! ಅಲ್ಲಿ ನನ್ನ sense of humour ಎಣೆಯಿಲ್ಲದೆ ನಲಿಯುತ್ತದೆ. ಆರಾಮಾಗಿರುತ್ತೇನೆ.

ಹೀಗಿದ್ದಾಗ, ಅಪರಿಚಿತ ಊರಲ್ಲಿ, ಅಪರಿಚಿತರೊಂದಿಗೆ ಅಪರಿಚಿತ ರೀತಿಯ ವ್ಯವಹಾರಗಳು ಅದೆಷ್ಟು ಕಷ್ಟವಾಗಿರಬಹುದು ನನಗೆ! ಪ್ರತಿಯೊಂದು ವ್ಯವಹಾರವೂ ಒಂದು ಕಾಳಗವಿದ್ದಂತೆ. ನನ್ನಂತಲ್ಲದ, ಜನರೊಂದಿಗೆ ಬೆರೆಯುವ ಜನರಿಗೆ ಇವೆಲ್ಲ ಸುಲಭವೇನೋ. ಆದರೆ ಮತ್ತೆ ಈಪ್ರಕ್ರಿಯೆಗಳ ಬಗ್ಗೆ ಹೇಳಬೇಕೆಂದರೆ, ಒಂದೊಂದು ಕಡೆ ಒಂದೊಂದು ರೀತಿಯ ಪ್ರಕ್ರಿಯೆ ಇರುತ್ತದೆ. ಮತ್ತೆ, ಅಲ್ಲಿನ ಜನ ಗ್ರಾಹಕರಿಗೆ ಅದರ ತಿಳುವಳಿಕೆಯಿದೆ ಎಂದು assume ಮಾಡುತ್ತಾರೆ. ಅವೆಲ್ಲ ಪ್ರಕ್ರಿಯೆಗಳನ್ನು ಅನುಭವಿಸುವ ಮುನ್ನ ಅವು ಗೊತ್ತಿರಲು ಹೇಗೆ ಸಾಧ್ಯ? ಕೆಲ ಉದಾಹರಣೆಗಳನ್ನು ಕೊಡುತ್ತೇನೆ. ಶಿಕಾಗೋಗೆ ಹೋಗಲು ಒಂದು ಬಸ್ಸಿನ ಟಿಕೆಟ್ ತೊಗೊಂಡಿದ್ದೆ, ಅವರ ವೆಬ್‍ಸೈಟ್ ಮೂಲಕ. ಬಸ್ಸು ಹೊರಡುವುದಕ್ಕಿಂತ ಒಂದು ಗಂಟೆಯಾದರೂ ಮುಂಚೆ ಬಂದು ಒಂದು ರೆಫ಼ರನ್ಸ್ ನಂಬರ್ ಕೊಟ್ಟು ಕೌಂಟರಿನಲ್ಲಿ ಟಿಕೆಟ್ ಪಡೆಯಬೇಕು ಎಂದು ನಮೂದಾಗಿತ್ತು. ಸರಿ, ಸಮಯಕ್ಕೆ ಸರಿಯಾಗಿ ಹೋಗಿ ಅಲ್ಲಿ ಕೌಂಟರಿನಲ್ಲಿ ಕುಳಿತಿದ್ದ ಮಹಿಳೆಗೆ “ಹಾಯ್ದು”, ಹುಸಿನಕ್ಕು, “ನಾನು ಆನ್‍ಲೈನ್ ಟಿಕೆಟ್ ತೆಗೆಸಿದ್ದೆ. ನನ್ನ ರೆಫ಼ರನ್ಸ್ ನಂಬರು ಇದು,” ಎಂದು ನಂಬರ್ ಹೇಳಿದೆ. ನಾನು ಮಾಡಿರಬಹುದಾದ ತಪ್ಪೆಂದರೆ ನಂಬರನ್ನು ಸ್ವಲ್ಪ ವೇಗವಾಗಿ ಹೇಳಿದೆ. ಅಲ್ಲಿದ್ದ ಮಹಿಳೆ ಒಮ್ಮೆಲೇ ಸಿಟ್ಟಿಗೆದ್ದಂತೆ ತೋರಿತು. “Alright! Alright! Let me first get to the computer screen before you start rattling away those numbers.” Rattling away! ನಾನು ಒಮ್ಮೆಲೇ ಬೆಚ್ಚಿಬಿದ್ದೆ. “ತಾಯಿ, ನಾನು ಅಂಥದೇನು ತಪ್ಪು ಮಾಡಿದೆ? ನಿನಗೆ ಅರ್ಥವಾಗಿಲ್ಲದಿದ್ದರೆ, ಆ ಸಂಖ್ಯೆಯನ್ನು ಮತ್ತೆ ಮತ್ತೆ ಹೇಳುತ್ತೇನೆ, ಆದರೆ ಯಾಕಿಷ್ಟು ಅಸಹನೆ?” ಎನ್ನಬೇಕೆನ್ನಿಸಿತು. ಸುಮ್ಮನಿದ್ದೆ. ಆದರೆ ಅವಳು ಟಿಕೆಟ್ಟು ತೆಗೆದು ಕೊಡಲು ಹತ್ತಿದ ೩-೪ ನಿಮಿಷ ಪೂರ್ತಿ ತಲೆ ಕೊಡವುತ್ತ ತನ್ನ ಅಸಹನೆ ವ್ಯಕ್ತಪಡಿಸುತ್ತಲೇ ಇದ್ದಳು.

ನಾನಿರುವ ಅಪಾರ್ಟ್‍ಮೆಂಟ್‍ಗೆ ಗ್ಯಾಸ್ ಕನೆಕ್ಶನ್ ತೆಗೆದುಕೊಳ್ಳಲು ಫೋನಿನಲ್ಲಿ ಮಾತಾಡುವಾಗಲೂ ಅಷ್ಟೆ. ನಾನು ಹೇಳಿದ್ದು ಅವರಿಗರ್ಥವಾಗದಿದ್ದರೆ, ಅಥವಾ ಅವರು ಹೇಳಿದ್ದು ನನಗರ್ಥವಾಗದೆ ಇನ್ನೊಮ್ಮೆ ಹೇಳಿ ಎಂದರೆ, ಅವರಿಗೆ ತ್ರಾಸು ಶುರುವಾಗಿಬಿಡುತ್ತದೆ. ಈ ಗ್ಯಾಸಿನ ಕಸ್ಟಮರ್ ಕೇರ್‌ಗೆ ಫೋನ್ ಮಾಡಿದರೆ ಅವರು ಫೋನೆತ್ತಿದ ಕೂಡಲೆ ಮೊದಲಿಗೆ ನಮ್ಮ ವಿಳಾಸ ಹೇಳಬೇಕು. ಹೆಸರು ಹೇಳಲು ತೊಡಗಿದರೆ, ಅವರು ಸಂಕಟಪಟ್ಟುಕೊಂಡು, ಅದೆಲ್ಲ ನನಗೆ ಬೇಡ, ಮೊದಲು ವಿಳಾಸ ಎನ್ನುತ್ತಾರೆ. ಮತ್ತ್ಯಾವುದರದೋ ಕಸ್ಟಮರ್ ಕೇರ್‌ಗೆ ಫೋನ್ ಮಾಡಿದರೆ, ಮೊದಲು ಹೆಸರು ಫೋನ್ ನಂಬರ್ ಹೇಳಬೇಕು. ಇವೆಲ್ಲ ರೀತಿಗಳನ್ನು ನಾನು ನೆನಪಿಟ್ಟುಕೊಳ್ಳುವುದೇ? ಫೋನುಗಳ ವ್ಯವಹಾರಗಳು ಹೋಗಲಿ, ಮುಖಾಮುಖಿ ವ್ಯವಹಾರಗಳಲ್ಲೂ ಹಾಗೆಯೇ! ಕೆಲವು ಕಡೆ ಕಾಫಿಗಳಿಗೆ ಟಾಲ್, ಗ್ರ್ಯಾಂಡೆ, ಹೀಗೆ ಏನೇನೋ ಅಳತೆಗಳು. ಇನ್ನು ಕೆಲವು ಕಡೆ ಸ್ಮಾಲ್, ಮೀಡಿಯಮ್ ಹಾಗೂ ಲಾರ್ಜ್. ಒಂದು ಇನ್ನೊಂದು ಕಡೆ ಅರ್ಥವಾಗುವುದಿಲ್ಲ. ಅದು ಹೋಗಲಿ, ಬಿಗ್ ಎಂದರೆ ಮುಖ ನೋಡುತ್ತಾರೆ. ಮತ್ತೆ, “ಓ ಸಾರಿ, ಐ ಮೀನ್, ಲಾರ್ಜ್,” ಎನ್ನುತ್ತೇನೆ. ರೆಸ್ಟೊರಂಟುಗಳು, ಪಬ್ಬುಗಳಂತೂ ಅವರವರ ಒಂದೊಂದು glossary ಇಟ್ಟುಕೊಂಡರೇ ಒಳ್ಳೆಯದು. ಏಕೆಂದರೆ ಆ ತಿಂಡಿ ತೀರ್ಥಗಳ ಹೆಸರುಗಳಿಗೆ ಅರ್ಥವೇ ಇರುವುದಿಲ್ಲ. ಇಲ್ಲೇ ಪಕ್ಕದ ಪಬ್ಬಿನಲ್ಲಿ ಒಂದು ಪೇಯದ ಹೆಸರು “well drinks”. ವ್ಯಾಕರಣದ ಹಂಗಿಲ್ಲದ ಆ ನುಡಿಗಟ್ಟು ಹಾಳಾಗಲಿ, ಅದರರ್ಥ ಏನು? ವೇಟ್ರೆಸ್‍ಳನ್ನು ಕೇಳಿದೆ. ಅವಳಿಂದ, ವೋಡ್ಕಾ ಹಾಗೂ ಮತ್ತೇನೇನೋ ಇರುವ ಒಂದು ಕಾಕ್‍ಟೇಲ್‍ನಂಥದ್ದು ಎಂದು ತಿಳಿಯಿತು. ಅದರಲ್ಲಿನ ವೋಡ್ಕಾದ ಪರಿಮಾಣವೇನು ಎಂದು ಕೇಳಿದೆ. ಅವಳಿಗೆ ಅರ್ಥವೇ ಆಗಲಿಲ್ಲ. ಹೇಳಿದ್ದನ್ನೇ ಮತ್ತೆ ಹೇಳಿದಳು. ನಾನು, “ಸರಿಯಬ್ಬೆ, ಕೃತಕೃತ್ಯನು ನಾನು,” ಎಂದೆ.

ಇನ್ನೊಮ್ಮೆ, ಬೆಂಗಳೂರಿಂದ ಇಲ್ಲಿನ ಒಂದು ಊರಿಗೆ ಕೆಲಸದ ಸಲುವಾಗಿ ವಾರದ ಮಟ್ಟಿಗೆ ಬಂದಿದ್ದ ಪ್ರೊಫೆಸರ್ ಒಬ್ಬರನ್ನು ಸಂಪರ್ಕಿಸಬೇಕಾಗಿತ್ತು. ಅವರು ಉಳಿದುಕೊಂಡ ಹೊಟೇಲಿನ ಹೆಸರು ಮಾತ್ರ ಗೊತ್ತಿತ್ತು; ಅವರ ರೂಂ ನಂಬರ್ ಗೊತ್ತಿರಲಿಲ್ಲ. ಅಲ್ಲಿಗೆ ಫೋನ್ ಹಚ್ಚಿ, ನಾನು ಇಂಥವರ ಜೊತೆ ಸಂಪರ್ಕ ಸಾಧಿಸಬಯಸುತ್ತೇನೆ ಎಂದು ಹೇಳಿದೆ. ಅಲ್ಲಿದ್ದವಳು, “ಅವರ ಕೊನೆಯ ನಾಮವೇನು?” ಮತ್ತೆ ಶುರು. ಅವರು ತಮಿಳರು. ಅವರಿಗೆ ಯಾವ “ಕೊನೆಯ ನಾಮ”ವೂ ಅಡ್ಡ ಹೆಸರೂ ಇಲ್ಲ. ಅವರ ಹೆಸರು.. ಉಂ.. ಏನೋ ಒಂದು, “ಅನಂತರಾಮನ್ ಪದ್ಮನಾಭನ್” ಎಂದುಕೊಳ್ಳೋಣ, ಉದಾಹರಣೆಗೆ. ಅವರು “ಎ. ಪದ್ಮನಾಭನ್” ಅಥವಾ ಹೆಚ್ಚಾಗಿ ಕೇವಲ “ಪದ್ಮನಾಭನ್” ಎಂದು ತಮ್ಮ ಹೆಸರು ಹೇಳುತ್ತಾರೆ. ಇಂತಿದ್ದಾಗ. ಅವರ ಕೊನೆಯ ನಾಮವೇನೆನ್ನಲಿ? ಅವರು ಪದ್ಮನಾಭನ್ ಎಂದೇ ಬರೆಸಿರಬಹುದೆಂದು ಅದನ್ನೇ ಅರುಹಿದೆ. ನಿಧಾನಕ್ಕೆ ಒಂದೊಂದೇ ಅಕ್ಷರವನ್ನು ಹೇಳಿದೆ. “ಅವರ ಮೊದಲ ನಾಮವೇನು?” ಪಂಚೇತಿಯಾಯಿತು. “ಅವರ ಮೊದಲ ನಾಮ.. ಅಲ್ಲ ಅದು ಹೀಗಿದೆ, ಆದರೆ ಅವರು ಅದನ್ನೇನು ಬಳಸುವಂತೆ ತೋರುವುದಿಲ್ಲ,” ಎಂದೇನೇನೋ ಹೇಳತೊಡಗಿದೆ. ಅವಳು, ಅರ್ಧ ಅಪನಂಬಿಕೆಯಿಂದ ಅರ್ಧ ಮುನಿಸಿನಿಂದ, “ನಿಮಗೆ ಅವರ ಮೊದಲ ನಾಮ ಗೊತ್ತಿಲ್ಲವೆ?!” ಎಂದಳು. ನಾನು, “ಇಲ್ಲ, ನಾನು ಹೇಳಿದ್ದರಿಂದಲೇ ಹುಡುಕಿ,” ಎಂದೆ. ಆ ಹೆಸರೇ ಅಲ್ಲಿ ಸಿಗಲಿಲ್ಲ ಅವಳಿಗೆ ಅವಳ ಕಂಪ್ಯೂಟರಿನಲ್ಲಿ. ಪೂರ್ತಿ ಹೆಸರು ಕೊಟ್ಟಾಗಲೇ ಹುಡುಕುವ ಆ ಮೂರ್ಖ ಕಂಪ್ಯೂಟರ್ ಪ್ರೋಗ್ರ್ಯಾಮನ್ನೂ, ಎಲ್ಲರ ಹೆಸರುಗಳೂ ಒಂದು standard formatನಲ್ಲಿರುತ್ತವೆಂದು ಭಾವಿಸುವ ಮೂರ್ಖ ಜನರನ್ನೂ, ಅಡ್ಡ ಹೆಸರಿಲ್ಲದ ತಮಿಳರನ್ನೂ ಶಪಿಸುತ್ತ ಫೋನು ಕುಕ್ಕಿದೆ.
ನಾನು ಇಲ್ಲಿ ಬಂದ ಹೊಸದರಲ್ಲಂತೂ ಮೇಲೆ ಹೇಳಿದಂತೆ ಪ್ರತಿಯೊಂದು ಇಂಥ ಸಂದರ್ಭವನ್ನು ಒಂದು ಕಾಳಗದಂತೆ, ಒಂದು ಸವಾಲಿನಂತೆ ಪರಿಗಣಿಸುತ್ತಿದ್ದೆ. ಇಂಥ ಯಾವುದೇ ಸಾಮಾಜಿಕ ಸಂದರ್ಭದಿಂದ ಸುಭಗವಾಗಿ ಹೊರಹೊಮ್ಮಿದರೆ, ಅದು ನನ್ನ ಒಂದು ದೊಡ್ದ social victory ಎಂದು ಆಹ್ಲಾದಪಡುತ್ತಿದ್ದೆ. ಹೆಚ್ಚಾಗಿ ಈ ಪ್ರಕ್ರಿಯೆಗಳು ಗೊತ್ತಿದ್ದ ಜಾಗಗಳಿಗೇ ಹೆಚ್ಚಾಗಿ ಹೋಗುತ್ತಿದ್ದೆ. ಆದರೆ ಈಗೀಗ ಸ್ವಲ್ಪ ರೂಢಿಯಾಗುತ್ತಿದ್ದೆ. ಏನಾದರೂ ಗೊತ್ತಾಗದಿದ್ದರೆ ಗೊತ್ತಿಲ್ಲವೆಂದು ಆರಾಮಾಗಿ ಹೇಳಿ, ಅವರೇನಾದರೂ ಅಂದುಕೊಳ್ಳಲಿ, ನನ್ನ ಕೆಲಸ ಸಾಧಿಸಿಕೊಳ್ಳುವುದರತ್ತ ಗಮನವಿಡುವುದು, ಇದನ್ನೆಲ್ಲ ಕಲಿಯುತ್ತಿದ್ದೇನೆ. ಆದರೂ ಒಮ್ಮೊಮ್ಮೆ ಇವೆಲ್ಲ ಮತ್ತೆ ಮರುಕಳಿಸುತ್ತವೆ. ಮೊನ್ನೆ ಒಂದೆಡೆಯಲ್ಲಿ ಸ್ಯಾಂಡ್‍ವಿಚ್ ತೊಗೊಳ್ಳಲು ಹೋದೆ. ಅಲ್ಲಿ ಹೋಗಿ ಒಂದು ವೆಜ್ ಸ್ಯಾಂಡ್‍ವಿಚ್ ಕೊಡಯ್ಯ, ಎಂದೆ. ಅವನು ಅಳತೆ ಕೇಳಿದ. (ಇಲ್ಲಿ ಊಟತಿಂಡಿಗಳನ್ನೆಲ್ಲ ಅಳೆಯುವುದು ನನಗಂತೂ ತೀರ ತಮಾಷೆಯ ಸಂಗತಿ.) ನಾನು, ಫೂಟುದ್ದದ್ದು, ಎಂದೆ. ಮುಂದೆ ಬಹಳೇ ಕಷ್ಟದ ಪರಿಸ್ಥಿತಿಗಳು ಒದಗಿದವು. ಅವನು, “ಯಾವ ಥರದ ಬ್ರೆಡ್ಡು?” ಎಂದ. ಒಳ್ಳೆಯ ಥರದ್ದು ಕೊಡಯ್ಯ ಎಂದರೆ ಅವನಿಗೆ ತಿಳಿಯುವುದಿಲ್ಲ. ನಗುತ್ತ, “ನನಗಿರುವ ಆಯ್ಕೆಗಳೇನು?” ಎಂದೆ. ಅವನು ಅಪನಂಬಿಕೆಯಿಂದ ನನ್ನತ್ತ ನೋಡುತ್ತ, ಸ್ವಲ್ಪ ದೂರದಲ್ಲಿ ಅಂಟಿಸಿದ್ದ ಪಟ್ಟಿಯೊಂದನ್ನು ತೋರಿಸಿದ. ಅವನ ಪಕ್ಕದಲ್ಲಿದ್ದವಳು ಆಗಲೇ ಅಪನಂಬಿಕೆಯಿಂದ ಮುಸಿನಗುತ್ತಿದ್ದಳು. ನಾನು ಹೆದರದೆ ಆ ಪಟ್ಟಿಯತ್ತ ಹೋಗಿ, ಅಲ್ಲಿದ್ದ ಐದಾರು ಬ್ರೆಡ್ಡುಗಳಿಂದ ಯಾವುದೋ ಒಂದನ್ನು ಆಯ್ದು, ಅದರ ಹೆಸರನ್ನು ಹೇಳಿದೆ. ಇದಾಗುತ್ತಿದ್ದಂತೆ ಅವನು, “ಯಾವು ಚೀಸು?” ಎಂದ. ನಾನು, “ಹಹ್ಹಾ.. ಮತ್ತೆ ತಾವು ನನ್ನನ್ನು ಕ್ಷಮಿಸಲೇಬೇಕು. ನನಗೆ ಅದರ ಬಗೆಗಳೂ ಗೊತ್ತಿಲ್ಲ.” ಅವನು ಗಾಜಿನ ಕೆಳಗಿದ್ದ ೪-೫ ಬಗೆಗಳನ್ನು ತೋರಿಸಿ, ಒಂದಷ್ಟು ಹೆಸರುಗಳನ್ನು ಹೇಳಿದ. ನಾನು ಯಾವುದೋ ಒಂದನ್ನು ಹೇಳಿದೆ. ಇದೆಲ್ಲ ಇಷ್ಟಕ್ಕೇ ಮುಗಿಯುತ್ತದೆಯೇ? ಮುಂದೆ ಅವನು, “ಯಾವ ಬಗೆಯ ಕಾಯಿಪಲ್ಲೆಗಳು ಬೇಕು?” ಎಂದ. ಇದೊಳ್ಳೆ ಫಜೀತಿಯಾಯಿತಲ್ಲ! ಇವನಿಗೆ ನಾನು ಪ್ರತಿಯೊಂದನ್ನೂ ಹೇಳಿ ಹೇಳಿ ಮಾಡಿಸಿಕೊಳ್ಳುವುದಾದರೆ ಮನೆಯಲ್ಲೇ ಏನೋ ಬೇಯಿಸುತ್ತಿದ್ದೆನಲ್ಲ. ಅಲ್ಲದೇ ಅಲ್ಲಿದ್ದ ಕಾಯಿಪಲ್ಲೆಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವುಗಳ ಹೆಸರೇ ನನಗೆ ಗೊತ್ತಿಲ್ಲ. (ಗೊತ್ತಿದ್ದ ತರಕಾರಿಗಳಿಗೂ ಇವರ ಹೆಸರುಗಳು ಬೇರೆ ಇರುತ್ತವೆ; ಬದನೆಕಾಯಿಗೆ ಎಗ್‍ಪ್ಲಾಂಟ್ ಎನ್ನುತ್ತಾರೆ!) ಬೆರಳಿನಿಂದ, “ಇದು, ಇದು, ಮತ್ತದು, ಅದೋ ಅದು,” ಎಂದು ತೋರಿಸುತ್ತ ಹೋದೆ. ಇದಾಗುವವರೆಗೆ ಅವನು ಬೆವೆತಿದ್ದ! ಆದರೂ ನನ್ನನ್ನು ಕೇಳಿದ, “ಯಾವ ಬಗೆಯ ಸಾಸ್?” “ಸ್ವಾಮಿಯೇ, ನನಗೆ ಯಾವ ಬಗೆಯ ಸಾಸೂ ಬೇಡ. ಇದನ್ನು ಮುಗಿಸಿ ನನ್ನನ್ನು ಮುಕ್ತನನ್ನಾಗಿಸು!” ಈ ವ್ಯವಹಾರ ಮುಗಿದಾಗ ಆ ಮನುಷ್ಯ ತ್ರಾಸುಮಾಡಿಕೊಂಡಿದ್ದ. ನನಗೂ ಕಡಿಮೆ ತ್ರಾಸಾಗಿರಲಿಲ್ಲ.

***

ಇವೆಲ್ಲ ಉದಾಹರಣೆಗಳಷ್ಟೆ. ಇವುಗಳ ಆಧಾರದ ಮೇಲೆ ನಾನು ಯಾವುದೇ ಸಾರ್ವತ್ರಿಕ ತತ್ವಗಳನ್ನು ಮಂಡಿಸುತ್ತಿಲ್ಲ. ಆದರೆ ಒಟ್ಟಾರೆಯಾಗಿ ನೋಡಿದರೆ, ನಾನು ಹಿಂದೊಮ್ಮೆ ಸಿಂಗಪೋರಿನ ಸಂದರ್ಭದಲ್ಲಿ ಹೇಳಿದ್ದ ಸೂತ್ರಬದ್ಧ ಸಮಾಜಗಳ (normative society) ಲಕ್ಷಣಗಳು ಇಲ್ಲಿಯೂ ಕಾಣಿಸುತ್ತವೆ. ಇವನ್ನು ನಮ್ಮಲ್ಲಿನ್ನ ವ್ಯವಹಾರಗಳ ಜೊತೆ ಹೋಲಿಸಿ ನೋಡಿ. ನಮ್ಮಲ್ಲಿ ಹೆಚ್ಚು ವ್ಯವಹಾರಗಳು ಅಭಿವ್ಯಕ್ತ (declarative) ನೆಲೆಗಟ್ಟಿನಲ್ಲಿರುತ್ತವೆ. ಒಂದು ಹೊಟೇಲಿಗೆ ಹೋಗಿ, “ಅಯ್ಯಾ, ನನಗೊಂದು ಒಳ್ಳೆಯ ಮಸಾಲೆ ದೋಸೆಯನ್ನು ಕರುಣಿಸು,” ಎಂದಷ್ಟೆ ಹೇಳುತ್ತೇವೆ. ಅವನು ಯಾವ ಎಣ್ಣೆಯನ್ನು ಉಪಯೋಗಿಸಬೇಕು, ಎಷ್ಟು ಹಾಕಬೇಕು ಇತ್ಯಾದಿ ಹೇಳುವುದಿಲ್ಲ. ಅದು micro-management. ನಮ್ಮಲ್ಲಿರುವ ಜನಸಂಖ್ಯೆ ಅಗಾಧ. ಹೀಗಾಗಿ ಒಬ್ಬೊಬ್ಬರ ಅಭೀಪ್ಸೆಗಳ ಬಗ್ಗೆ ಗಮನ ಕೊಡಲಾಗುವುದಿಲ್ಲ. ಅಲ್ಲದೇ ನಮ್ಮ ತಿಂಡಿತಿನಿಸುಗಳ ರೀತಿಯೇ ಬೇರೆ. ಹೌದು, ಇವೆಲ್ಲ ನಿಜ. ಆದರೆ ಅವು ಅಷ್ಟು ದೊಡ್ಡ ವ್ಯತ್ಯಾಸ ಮಾಡುವುದಿಲ್ಲ. ಇನ್ನೊಂದು ಅಂಶವೆಂದರೆ, ಈ ರೀತಿ ಪ್ರತಿಯೊಂದಕ್ಕೂ ಹತ್ತಾರು ಆಯ್ಕೆಗಳನ್ನು ಕೊಟ್ಟು, ಗ್ರಾಹಕರಿಗೆ ಅವರಿಗೆ ಬೇಕಾದದ್ದನ್ನು ಆಯಲು ಬಿಟ್ಟರೆ, ಅದರ ಪರಿಣಾಮ ಶ್ರೇಷ್ಠವಾಗುತ್ತದೆಯೇ? ಇರಬಹುದು. ಆದರೆ, ಆ ಪ್ರಕ್ರಿಯೆಯಲ್ಲಿ, ಕೆಲಸವನ್ನು ಬೇರೊಬ್ಬರಿಗೆ ವಹಿಸಿ ಹಗುರಾಗುವ ಆನಂದವೇ ಇಲ್ಲವಾಗುತ್ತದೆ. ತಿಂಡಿ ತಿನ್ನಲು ದರ್ಶಿನಿಗೆ ಹೋಗಿ ನಿಮ್ಮ ಮನೆಯವರು ಅಥವಾ ದೋಸ್ತ-ದೋಸ್ತಿಯರೊಂದಿಗೆ ಹರಟೆ ಹೊಡೆಯುವುದು ಬಿಟ್ಟು, ಅಲ್ಲಿ ಅಡುಗೆ ಮಾಡುವವರಿಗೆ ನಿರ್ದೇಶನ ಕೊಡುತ್ತ ನಿಲ್ಲುವುದನ್ನು ಊಹಿಸಿ. ಹೇಗನ್ನಿಸುತ್ತದೆ?

ಸಮಸ್ಯೆ ಇದಷ್ಟೇ ಅಲ್ಲ. ಇದರ ಹಿಂದೆ ನನ್ನನ್ನು ಕಾಡುವ ಅಂಶವೆಂದರೆ, ಇವರೇನು ಮನುಷ್ಯರೋ ಮಶೀನುಗಳೋ, ಎಂಬ ಆತಂಕ. ಒಂದು ಪ್ರಕ್ರಿಯೆಯನ್ನು ದಿನನಿತ್ಯವೂ ಇದ್ದದ್ದು ಇದ್ದ ಹಾಗೇ ನಡೆಸುತ್ತ, ವರ್ಷಗಟ್ಟಲೇ ಅದನ್ನೇ ಮಾಡುತ್ತ ಹೋಗುವುದು ಭೀತಿ ತರಿಸುವುದಿಲ್ಲವೇ? ಒಂದು ಪ್ರಮಾಣೀಕೃತ ಪ್ರಕ್ರಿಯೆಯಲ್ಲಿ ಹೆಚ್ಚೂಕಡಿಮೆಯಾದರೆ ತಡಬಡಾಯಿಸುವುದು ಮಶೀನುಗಳಿಗೆ ಸಹಜ. ಯಾಕೆಂದರೆ ಅವನ್ನು ಹಾಗೆ ನಿರ್ಮಿಸುವುದು ಅನಿವಾರ್ಯ. ಮಶೀನುಗಳನ್ನೂ ಹೆಚ್ಚು ಹೆಚ್ಚು ಜಾಣರನ್ನಾಗಿ ಮಾಡಲು ಹತ್ತಾರು ವರ್ಷಗಳಿಂದ ಸಂಶೋಧಕರು ಶ್ರಮಿಸುತ್ತಿರುವುದು ಬೇರೆ ವಿಷಯ. ಆದರೆ ಮನುಷ್ಯರೂ ಹಾಗೆ ತಡಬಡಾಯಿಸುವುದೇ? ಈ ಪ್ರಕ್ರಿಯೆಗಳ ಮೇಲೆ ಇಂಥ ಅವಲಂಬನೆಯೇ? ಪ್ರಕ್ರಿಯೆಗಳು ಒಂದು ವ್ಯವಸ್ಥೆಯನ್ನು ಹೆಚ್ಚು ದಕ್ಷವಾಗಿಯೂ, ಅನೇಕ ಸಂದರ್ಭಗಳಲ್ಲಿ ಹೆಚ್ಚು ಪುಷ್ಟವಾಗಿಯೂ ಮಾಡುತ್ತವೆನ್ನುವುದು ನಿಜ. ಆದರೆ ಅದಕ್ಕೆ ತೆರಬೇಕಾದ ಬೆಲೆಯೇನು? ಮಶೀನುಗಳಂತಾಗುವುದೇ? ಅಲ್ಲದೆ, ಒಂದೆಡೆ ಮನುಷ್ಯರು ಮಶೀನುಗಳಂತಾಗುತ್ತಿರುವುದು, ಮತ್ತು ಇನ್ನೊಂದೆಡೆ ಮಶೀನುಗಳು ಜಾಣರಾಗಿ ಮನುಷ್ಯರಂತಾಗುವುವೇ ಎನ್ನುವ ಆತಂಕ, ಇವೆರಡೂ ಏಕಕಾಲದಲ್ಲಿ ನಡೆಯುತ್ತಿರುವ ಆಧುನಿಕ ಯುಗದಲ್ಲಿರುವ ನಾವೇ ಧನ್ಯರಲ್ಲವೇ! ಅದೆಂಥ ವಿಸ್ಮಯಗಳನ್ನು ನೋಡುತ್ತಿದ್ದೇವಲ್ಲ!

4 thoughts on “ಮೂರ್ಖ ಪ್ರಕ್ರಿಯೆಗಳೂ ಮಶೀನುಗಳಂಥ ಮನುಷ್ಯರೂ

 1. ಹ್ಹ ಹ್ಹ! ಸ್ಯಾಂಡ್‍ವಿಚ್ ಪುರಾಣ ಚೆನ್ನಾಗಿದೆ 🙂 ನಾನು ಈ ಊರಿಗೆ ಬಂದ ಮೊದಲ ದಿನ, ಸಹೋದ್ಯೋಗಿಯೊಬ್ಬನ ಜೊತೆ ಹೋಗಿ, ಸೊಪ್ಪುಸದೆ ಸೇರಿಸಿದ್ದ ಸ್ಯಾಂಡ್‍ವಿಚ್ ಆರ್ಡರ್ ಮಾಡಿದ್ದು ನೆನಪಾಯಿತು. ಅವನು ಇದನ್ನೇ ನೀನಿನ್ನು ಅಭ್ಯಾಸ ಮಾಡಿಕೊಳ್ಳಬೇಕು ಅಂದಿದ್ದ. ನನ್ನ ಪುಣ್ಯ, ಆ ಕರ್ಮ ನನಗೆ ದೇವರು ದಯಪಾಲಿಸಲಿಲ್ಲ!

  ವಿಷಯಕ್ಕೆ ಬರುತ್ತಾ, ಈ ರೀತಿಯ ಕೆಲವು ವಿಷಯಗಳಿಗೆ ವಿಪರೀತ ಆಯ್ಕೆಯ ಸ್ವತಂತ್ರ ಕೊಡುವುದೇ ಈ ದೇಶದ ಸಂಸ್ಕೃತಿ ಎಂದು ತೋರುತ್ತೆ. ಸ್ಟಾರ್ ಬಕ್ಸ್ ಗೆ ಹೋದರೆ, ಸಾಲಿನಲ್ಲಿ ನಿಂತಿರುವರಲ್ಲಿ, ಸುಮ್ಮನೆ ಬರೀ ಕಾಫಿ ಎಂದು ಕೇಳುವವನು ನಾನೊಬ್ಬನೇ!

 2. ನಿಜ, ಈ ದೇಶದ ಸಂಸ್ಕೃತಿಯೇ ಅಂಥಾದ್ದು. ಇಲ್ಲಿ ಹುಟ್ಟುವುದರಿಂದ ಹಿಡಿದು ಸಾಯುವವರೆಗೆ, ಉಣ್ಣುವುದರಿಂದ ಹಿಡಿದು ಉಸಿರಾಡುವವರೆಗೆ ಪ್ರತಿಯೊಂದೂ ಆಯಾ ಫಾರ್ಮ್ಯಾಟಿನಲ್ಲೇ ಇರಬೇಕು. ಅದು ತಪ್ಪಿತೋ, ಬದುಕಿನ ಹದ ತಪ್ಪಿತು. ಮಾಡುವ ಕೆಲಸವೊಂದೇ ಅಲ್ಲ, ಆಡುವ ಭಾಷೆಯೂ ಸಹ. ಅಮೆರಿಕನ್ ಅಲ್ಲದೆ ಬ್ರಿಟಿಷ್ ಇಂಗ್ಲಿಷ್ ಬಳಸಿದರೂ ಮುಖ-ಮುಖ ನೋಡುತ್ತಾರೆ. ಸಾಮಾನ್ಯವಾಗಿ ಬಳಕೆಯಲ್ಲಿರುವ ಪದವನ್ನು ಬಿಟ್ಟು ಬೇರೆ ಪದವನ್ನೇನಾದರೂ ನೀವು ಬಳಸಿದರೆ, ದೇವರಾಣೆಗೂ ನಿಮ್ಮ ಕೆಲಸ ಆಗುವುದಿಲ್ಲ- ಕೆಲಸ ಎಷ್ಟು ದೊಡ್ಡದು, ಸಣ್ಣದು, ಎಂಥಾದ್ದೇ ಇರಲಿ. ನೀವು ಹೇಳಿದಂಥ ಹಲವಾರು ಅನುಭವಗಳು ನನಗೂ ಆಗಿವೆ. ತಿನ್ನಲು ಹೋದಾಗ ವೆಜ್ಜು, ನೋ ಮೀಟು ಎಂದೆಲ್ಲಾ ಬಡಕೊಂಡರೂ ನಮ್ಮ ಬಯಕೆಯ ತಿನಿಸೇ ಬರುತ್ತದೆ ಎಂಬ ಖಾತ್ರಿಯಿಲ್ಲ. ಇಲ್ಲಿನ ಜನಕ್ಕೆ ಮುಖ್ಯವಾಗಿ ತಮ್ಮ ದೇಶವಲ್ಲದೆ, ಜಗತ್ತಿನಲ್ಲಿ ಬೇರೆ ದೇಶಗಳೂ ಇವೆ, ಅಲ್ಲಿನ ಸಂಸ್ಕೃತಿ ಭಿನ್ನವಾಗಿದೆ ಎಂಬುದು ಅರ್ಥವೇ ಆದಂತಿಲ್ಲ.

 3. @neelanjana: ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್. ಆಯ್ಕೆಯ ಸ್ವಾತಂತ್ರ್ಯ ಕೊಡುವುದು ನಿಜ. ಆದರೆ ಇನ್ನೊಂದು ಥರದ ಅನುಭವವೂ ಆಗುತ್ತಲಿರುತ್ತದೆ: ನಮ್ಮಲ್ಲಿ ನಾವು ಏನಾದರೂ ತಿನ್ನಲು ಹೋದರೆ ನಿಧಾನವಾಗಿ ಮೆನು ಪರಿಶೀಲಿಸಿ, ಚರ್ಚಿಸಿ ಆರ್ಡರ್ ಮಾಡುತ್ತೇವೆ; ಆದರೆ ಇಲ್ಲಿ ಎಲ್ಲರಿಗೂ ಅವರು ಏನು ತಿನ್ನಬೇಕೆಂದಿದ್ದಾರೆ ಎನ್ನುವುದು ಮೊದಲೇ ಗೊತ್ತಿದ್ದಂತೆ ಕಾಣುತ್ತದೆ; ಮೆನು ಕೂಡ ಬೇಕಾಗಿಲ್ಲ, ಹಾಗೇ ಆರ್ಡರ್ ಮಾಡುತ್ತಾರೆ.

  ಒಟ್ಟಾರೆಯಾಗಿ ನನ್ನಂಥ ಅಜ್ಞಾನಿಗಳಿಗೆ ಕಷ್ಟವೇ.

  ಶ್ರೀಪ್ರಿಯೆ: ಹೌದು. ಇವರದು ತುಂಬ ದೊಡ್ಡ ದೇಶ. ಎಷ್ಟು ದೊಡ್ಡದೆಂದರೆ ಇದನ್ನು ಮೀರಿ ಬೇರೆ ಏನಾದರೂ ಇದೆ ಎನ್ನುವುದು ಇವರಿಗೆ ಗೊತ್ತೇ ಇಲ್ಲ.

  ಆದರೂ, ನೀಲಾಂಜನರು ಹೇಳಿದಂತೆ ಬೇ ಏರಿಯಾದ ನೀವೇ ಹೀಗೆ ಹೇಳಬೇಕಾದರೆ, ಈ ಮಿಡ್ ವೆಸ್ಟ್‍ನ ಸಣ್ಣಸಣ್ಣ ಊರುಗಳ ಕತೆಯಂತೂ ಹೇಳುವುದೇ ಬೇಡ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s