ನನಗೆ ಮೊದಲಿಂದಲೂ ಊರುಗಳ ಬಗೆಗೆ ತುಂಬಾ ಆಸಕ್ತಿ. ಅಂದರೆ ಒಂದು ಊರಿನಲ್ಲಿ ಎಷ್ಟು ಜನರಿದ್ದಾರೆ, ಅದರ ವಿಸ್ತೀರ್ಣ ಎಷ್ಟು, ಪ್ರತಿಶತ ಎಷ್ಟು ಜನ ಕಾರು ಇಟ್ಟುಕೊಂಡಿದ್ದಾರೆ, ಇತ್ಯಾದಿ ವಿವರಗಳಲ್ಲ. ನನಗಿಷ್ಟವಾಗುವುದು ಗುಣಾತ್ಮಕ ವಿವರಗಳು. ವಿಶೇಷಣಗಳು. ಸ್ವಭಾವಗಳು. ಒಟ್ಟಾರೆ ಆ ಊರಿನ ಸ್ವರೂಪ, ಸಂಕ್ಷಿಪ್ತವಾಗಿ. ಆ ಊರಿನ ಬಣ್ಣ ಯಾವುದು, ವಾಸನೆ ಯಾವುದು, ಭಾವ ಯಾವುದು… ಅದೇನು ಶಾಂತ ಊರೋ, ಕೋಪಿಷ್ಠ ಊರೋ, ನಗೆಚಾಟಿಕೆಯದೋ… ಹೀಗೆ. ಕಾದಂಬರಿಯೊಂದನ್ನು ಓದುವಾಗ, ಅದರ ಪಾತ್ರಗಳು ವಾಸಿಸುವ ಊರುಗಳು, ಆ ಊರಲ್ಲಿ ಅವರ ಮನೆ, ಮನೆಯಲ್ಲಿ ಅವರ ಕುರ್ಚಿ ಮೇಜುಗಳ ಏರ್ಪಾಟು, ಟೆರೇಸಿಗೆ ಹೋಗುವ ಮೆಟ್ಟಿಲುಗಳು, ಟಿವಿ ಸ್ಟ್ಯಾಂಡಿನ ಕೆಳಗೆ ಇಟ್ಟ ಹಳೆಯ ವರ್ತಮಾನ ಪತ್ರಿಕೆಗಳು, ಎಲ್ಲವನ್ನೂ ಮನಸ್ಸಿನಲ್ಲೇ ಚಿತ್ರಿಸಿಕೊಳ್ಳುವುದಿಲ್ಲವೆ ಸ್ಪಷ್ಟವಾಗಿ? ಪ್ರತಿ ಸಲ ಪುಸ್ತಕ ತೆಗೆದಾಗಲೂ ಎಲ್ಲವೂ ಪಟಪಟನೆ ಓಡಿ ಬಂದು ತಾವೇ ಅನುಗೊಳ್ಳುವುದಿಲ್ಲವೆ? ಮುಂದೆ ಯಾವತ್ತೋ ಆ ಕಾದಂಬರಿಯ ನೆನಪಾದಾಗ, ಆ ಚಿತ್ರಗಳು ಕಣ್ಣೆದುರಿಗೆ ಸರಸರನೆ ಹಾಯುವುದಿಲ್ಲವೆ? ಹಾಗೆಯೇ, ಯಾವುದೋ ಊರನ್ನು ನೆನೆಸಿಕೊಂಡಾಗ ಮೂಡುವ ಚಿತ್ರ ಯಾವುದು? ಆಗುವ ಅನುಭವ ಎಂಥದ್ದು?
ಇತ್ತೀಚೆಗೆ ಓರ್ಹಾನ್ ಪಾಮುಕ್ನ ಇಸ್ತಾನ್ಬುಲ್ ಓದುತ್ತಿದ್ದೆ. ಇಸ್ತಾನ್ಬುಲ್ನ ಇಡೀ ಸ್ವರೂಪವನ್ನು ಒಂದೇ ಶಬ್ದದಲ್ಲಿ ಬಣ್ಣಿಸುತ್ತಾನೆ: ಹ್ಯುಝುನ್ (Hüzün) ಅಥವಾ melancholy. ಇಡೀ ಇಸ್ತಾನ್ಬುಲ್ನ ಒಳಹೊಕ್ಕು ಆವರಿಸಿಕೊಂಡಿರುವ ಭಾವ ದುಗುಡದ್ದು. ಅದನ್ನು ಮನಸೆಳೆಯುವಂತೆ ಬಣ್ಣಿಸುತ್ತಾನೆ ಪಾಮುಕ್.
Melancholy. ನನಗೆ ಅತ್ಯಂತ ಆಪ್ತವಾದ ಭಾವ ಇದು. ಒಂದು ರೀತಿಯಲ್ಲಿ ಇದೇ ಸ್ಥಾಯೀ ಭಾವ. ಈ ಕೊನೆಯಿಲ್ಲದ ದುಗುಡ ಯಾವಾಗ ಶುರುವಾಯಿತೆಂದು ಸರಿಯಾಗಿ ಗೊತ್ತಿಲ್ಲ. ಬಹಳ ಮಾಡಿ, ನಾನು ತೀರ ಸಣ್ಣವನಿದ್ದಾಗಿಂದಲೇ ನನ್ನಲ್ಲಿ ಸೇರಿಕೊಂಡಿದೆ. ಸುಮ್ಮನೆ ಕೂತಲ್ಲೆ ಕೂತಿದ್ದು ದುಗುಡ. ಎಲ್ಲಿಯೋ ಹೋಗುವಾಗ ದುಗುಡ. ಮುಸ್ಸಂಜೆ ಆವರಿಸುತ್ತಿದ್ದಂತೆ ನನ್ನ ಇಡೀ ಅಸ್ತಿತ್ವವನ್ನು ಆವರಿಸುತ್ತಿತ್ತು. ನನ್ನ ಜೊತೆಯವರೊಟ್ಟಿಗೆ ಆಡುತ್ತಿದ್ದಾಗಲೂ, ಉಲ್ಲಾಸದ ತುಟ್ಟತುದಿಯಲ್ಲಿದ್ದಾಗಲೂ, ಒಮ್ಮಿಂದೊಮ್ಮೆಲೆ ಎಲ್ಲಿಂದಲೋ ಹಾರಿ ಬಂದು ಒಳಸೇರುತ್ತಿತ್ತು. ಯಾವುದೊ ಚಿಕ್ಕಮಕ್ಕಳ ಆಟದಲ್ಲಿ ಯಾರೋ ಸೋತರೆ ನನಗೆ ಬಹಳ ಹೊತ್ತು ಕಾಡುವ ಬೇಸರ.
ಬೆಳೆಯುತ್ತ ಬಂದಂತೆ, ಹೆಚ್ಚು ಸ್ವತಂತ್ರ, ಹೆಚ್ಚು ಸ್ವಾರ್ಥಿ, ಹೆಚ್ಚು individualistic ಆಗುತ್ತ ಹೋದಂತೆ, ಹೆಚ್ಚುತ್ತಲೇ ಹೋಗುವ hüzün. ಈಹೊತ್ತಿಗೂ, ಒಂದೂರಿಂದ ಇನ್ನೊಂದೂರಿಗೆ ಹೋಗಲು ಬಸ್ಸು ಹತ್ತುತ್ತಿದ್ದಂತೆ ಶುರುವಾಗುತ್ತದೆ. ಒಳ್ಳೆಯ ಸಿನೆಮಾ ನೋಡಿದರೆ, ಒಳ್ಳೆಯ ಊಟ ಮಾಡಿದರೆ, ಒಳ್ಳೆಯ ಪುಸ್ತಕ ಓದಿದರೆ, ನಶೆಯೇರಿ ಪರಮಾನಂದದಲ್ಲಿರಬೇಕಾದರೆ, ಮಾಡುವ ಕೆಲಸದಲ್ಲಿ ಆಸಕ್ತಿಕರ ಪ್ರಗತಿಯುಂಟಾದರೆ, ಏನೇ ಆದರೂ ಮತ್ತೆ ಅದೇ. ವಯಸ್ಸಾಗುತ್ತಿದೆಯೋ, ನನ್ನ ಕ್ಷುಲ್ಲಕತೆಯ ಅರಿವು ಭದ್ರವಾಗುತ್ತಿದೆಯೋ, ಮತ್ತೇನೋ, ಗೊತ್ತಿಲ್ಲ.
ಅಥವಾ ಹೀಗಿರಬಹುದು. ಇದು ನನ್ನದೊಬ್ಬನದೇ ಅಲ್ಲ. ಇಸ್ತಾನ್ಬುಲ್ ಅಷ್ಟೇ ಅಲ್ಲ. ಬೆಳಗಾವಿ, ಬೆಂಗಳೂರು, ಮತ್ತೊಂದೂರು… ಇಡೀ ಜಗತ್ತಿನ ಸ್ಥಾಯೀ ಭಾವ hüzün. ಹೊರಗಿನ ದುಗುಡ ಒಳಸೇರಿ, ಒಳಗಿನದು ಹೊರಕ್ಕೆ ವ್ಯಾಪಿಸಿ, ಎಲ್ಲೆಡೆ ಅದೇ ತುಂಬಿದೆಯೇನೋ.
ಯಾಕಪ್ಪಾ ಈ ವಯಸ್ನಲ್ಲಿ ಬರಬಾರದ ದುಗುಡ?
ಒಂದೆರಡ್ಸಾರೆ ಯಾರಾದ್ರು ಒಂದ್ನಾಕು ಜನ್ರನ್ನ ಸೇರಿಸಿ ಹೀಗೆ ದುಗುಡ ಆರ್ಗುಮೆಂಟೇಶನ್ ಕ್ರೈಸಿಸ್ಸು ಅಂತೆಲ್ಲ ಭೀಕರವಾಗಿ ಲೆಕ್ಚರು ಪೀಕಿರಿ. ಆಮೇಲೆ ಅವರ ಮುಖಗಳನ್ನ ನೋಡುತ್ತ ಇದ್ದರೆ ನಿಮ್ಮ Huzun ಎಲ್ಲ ಕಳೆದುಹೋಗಿ ನಗುವಿನ Noor ತಂತಾನೇ ಬರುತ್ತೆ.
– ಟೀನಾ.
(ಅಂದಹಾಗೆ Noor ಎಂದರೆ ಬೆಳಕು.)
ಯಾಕ್ರಿ ಪಾ, ಇಷ್ಟ ಬ್ಯಾಸರ ಮಾಡಕೊ೦ಡೀರಿ? ನನಗ ತಿಳದ೦ಗ ಈ ದುಗುಡ-ದುಮ್ಮಾನ ಎಲ್ಲ ಬರೋದು ನಾವು ಏನೋ ಕಳಕೋತೀವಿ ಅನ್ನಿಸಿದಾಗ. ಕಳಕೋಳೊ ಪ್ರಶ್ನಿ ಯಾವಾಗ ಬರ್ತದ? ನಮಗ ಏನರಾ ಸಿಕ್ಕಾಗ – ಹೌದಾ? ಅದಕ್ಕ ಸಿಕ್ಕರೂ ಅಷ್ಟ – ಕಳದ್ರು ಅಷ್ಟ ಅಂತ ಸುಮ್ಮ ಇರೋದ್ ಅಗದೀ ಬೆಸ್ಟ್ ನೊಡ್ರಿ! ಟೈಮ್ ಸಿಕ್ಕಾಗ ಈ ಚೇತನ್ ಭಗತ್ ಲೇಖನ ಒದ್ರಿ http://www.chetanbhagat.com/blog/general/sparks.
To some extent he sounds little pessimistic – but quite an impressive read. Keep the fire glowing 🙂
– ರಾಜೇಶ
ಟೀನಾ & ರಾಜೇಶ ಹೇಳೊದು ಖರೆ ಅದ.
ನೋಡ್ರಿ, ಮದುವಿ ಆಗಿಲ್ಲಾ ಅಂದ್ರ ಲಗೂನೆ ಆಗಿ ಬಿಡ್ರಿ. ಆಗೀರಿ, ಆದರ ಇನ್ನೂ ಮಕ್ಕಳಿಲ್ಲಾ ಅಂದರ, ಲಗೂನೆ ಅದನ್ನೂ ಮಾಡಿರಿ. ದುಗುಡ ಎಲ್ಲಾ ಓಡಿ ಹೋಗ್ತದ.
Anyway, Human Zoo ಅನ್ನೋ ಒಂದು ಪುಸ್ತಕದಾಗ, ಆಧುನಿಕ ನಾಗರಿಕರ ಪರಿತಾಪ ಇದು ಅಂತ ಹೇಳ್ತಾನ.
ಊರಿಂದ ವಾಪಸ್ ಬಂದ್ರೇನ್ರೀ? ಅದಕ್ಕಾಗಿಯೇ ಈ ದುಗುಡ?
hmmm! ಇದೂ ಒಂಥರಾ indulgence ಅನ್ಸಿಬಿಡುತ್ತೆ ಒಂದೊಂದ್ಸಲ… ಏನೋ… ಮತ್ತೆ ಎಲ್ಲಿ ಹೋಗಿದ್ರಿ ಇಷ್ಟು ದಿನ?!
mattadE besara Odi idda bEsaravella ODi hOytu!
ಇದೇನು..ನನ್ನ ಮನಸ್ಸಲ್ಲಿ ಇದ್ದದ್ದನ್ನು ಬರ್ದಿದ್ದೀರಿ!…ನಾನು ಇದೇ ತರಹ ಯೋಚಿಸ್ತೀನಿ.
“ಈ ಕೊನೆಯಿಲ್ಲದ ದುಗುಡ ಯಾವಾಗ ಶುರುವಾಯಿತೆಂದು ಸರಿಯಾಗಿ ಗೊತ್ತಿಲ್ಲ. ಬಹಳ ಮಾಡಿ, ನಾನು ತೀರ ಸಣ್ಣವನಿದ್ದಾಗಿಂದಲೇ ನನ್ನಲ್ಲಿ ಸೇರಿಕೊಂಡಿದೆ. ಸುಮ್ಮನೆ ಕೂತಲ್ಲೆ ಕೂತಿದ್ದು ದುಗುಡ. ಎಲ್ಲಿಯೋ ಹೋಗುವಾಗ ದುಗುಡ. ಮುಸ್ಸಂಜೆ ಆವರಿಸುತ್ತಿದ್ದಂತೆ ನನ್ನ ಇಡೀ ಅಸ್ತಿತ್ವವನ್ನು ಆವರಿಸುತ್ತಿತ್ತು. ನನ್ನ ಜೊತೆಯವರೊಟ್ಟಿಗೆ ಆಡುತ್ತಿದ್ದಾಗಲೂ, ಉಲ್ಲಾಸದ ತುಟ್ಟತುದಿಯಲ್ಲಿದ್ದಾಗಲೂ, ಒಮ್ಮಿಂದೊಮ್ಮೆಲೆ ಎಲ್ಲಿಂದಲೋ ಹಾರಿ ಬಂದು ಒಳಸೇರುತ್ತಿತ್ತು. ಯಾವುದೊ ಚಿಕ್ಕಮಕ್ಕಳ ಆಟದಲ್ಲಿ ಯಾರೋ ಸೋತರೆ ನನಗೆ ಬಹಳ ಹೊತ್ತು ಕಾಡುವ ಬೇಸರ.
“—— same pinch ..ouch
ಎಲ್ಲಿ ಕಾಣೆ ಆಗಿದ್ರಿ?
ಟೀನಾ, ರಾಜೇಶ, ಸುನಾಥ: ಈ ದುಗುಡ ಅನ್ನೋದು ನಾನೇ ಆಯ್ಕೆ ಮಾಡಿಕೊಂಡದ್ದು ಅನ್ನಿಸುತ್ತೆ. ಹೀಗಾಗಿ ಅದನ್ನು ಕಳೆದುಕೊಳ್ಳುವ ಬಯಕೆಯೂ ಇದ್ದಂತಿಲ್ಲ.
ನೀಲಾಂಜನ: ಊರಿಂದ ವಾಪಸ್ ಬಂದದ್ದಂತೂ ಹೌದು.
ಚೇತನಾ: ಸದ್ಯ ನಿನಗೇ ಓಡಿ ಹೋಗಬೇಕೆನ್ನಿಸಲಿಲ್ಲಲ್ಲ!
ಶ್ರೀ, ಮನಸ್ವಿನಿ: ಹೌದು, ಒಂದು ರೀತಿಯ indulgence ಅನ್ನೋದೇ ಸರಿ. ನನಗನ್ನಿಸತ್ತೆ, ಬಹಳ ಜನರಿಗೆ ಇದು ಅಂಟಿಕೊಂಡು ಬಂದಿದೆ. ಇರಲಿ. ಇದ್ದೆ, ಇಲ್ಲೇ. ಒಳಗೂ ಹೊರಗೂ.