ಜೀವಕ್ಕೆ ಇನ್ನು ಸೌಖ್ಯವಿಲ್ಲ

ಚಿನುವಾ ಅಚೇಬೆ ನನ್ನ ಮೆಚ್ಚಿನ ಲೇಖಕರ ಪಟ್ಟಿಯ ಮುಂಚೂಣಿಯಲ್ಲಿರುವವರು. ಅವರ ಕಾದಂಬರಿಗಳ ಮುಖ್ಯ ಧಾತು ನೈಜೀರಿಯಾದ ಇಬೋ ಅಥವಾ ಇಗ್ಬೋ (ibo or igbo) ಜನಸಮುದಾಯದ ಮೇಲೆ ಕೊಲೋನಿಯಲಿಸಂನ ಪ್ರಭಾವ. ಅಚೇಬೆಯ ಭಾಷೆ ಸರಳ ಸುಂದರ. Poetic. ಇಂಗ್ಲಿಶಿನಲ್ಲಿ ಬರೆಯುವ ಅಚೇಬೆ, ಇಂಗ್ಲಿಶ್ ಭಾಷೆಯನ್ನು ಇಬೋ ಜನರ ನುಡಿಗಟ್ಟಿಗೆ ಹೊಂದುವಂತೆ ಅನುಕೂಲಿಸಿಕೊಂಡು ಭಾಷೆಯ ಸಾಧ್ಯತೆಗಳ ಮತ್ತೊಂದು ದರ್ಶನ ತೋರಿಸುತ್ತಾರೆ. ಇಬೋ ಜನರ ethos ಅತ್ಯಂತ ಸುರಳೀತವಾಗಿ ಆ ಭಾಷೆಯಿಂದ ಹೊಮ್ಮುತ್ತದೆ. ಅದು ಇಬೋ ಜನರ ಭಾಷೆ: ಮಾತುಕತೆಯೆಂದರೆ ಚಮತ್ಕಾರೋಕ್ತಿಗಳಿಂದ ಕೂಡಿದ ಉದ್ದುದ್ದ, ಆದರೆ ಬೋರು ಹೊಡೆಸದ, ಭಾಷಣದಂಥವು; ಮಾತಿಗೊಮ್ಮೆ ಉದುರಿಸುವ, ಆದರೂ ಪ್ರತಿ ಸಲ ಹೊಸದೆನ್ನಿಸುವ, ಜಾಣ್ಣುಡಿಗಳು. ಅಚೇಬೆಯ ಮೊದಲನೆಯ ಕಾದಂಬರಿ Things Fall Apartನಲ್ಲಿ ಅವರೇ ಹೇಳುವಂತೆ, “Among the Igbo, the art of conversation is regarded very highly, and proverbs are the palm-oil with which words are eaten.”

ಅಚೇಬೆಯ ಮೊದಲ ಮೂರು ಕಾದಂಬರಿಗಳು ಉಮುವೋಫ಼ಿಯಾ ಎಂಬ (ಕಾಲ್ಪನಿಕ) ಹಳ್ಳಿಯ (ನಂತರ, ಪಟ್ಟಣದ) ಇಬೋ ಜನರ ಬದುಕನ್ನು ಕುರಿತವು. ಅವು ಮೂರನ್ನು ಒಟ್ಟಿಗೆ ಸೇರಿಸಿ, African Trilogy ಎಂದೂ ಕೆಲವರು ಪರಿಗಣಿಸುತ್ತಾರೆ. ನಾನು ಇವುಗಳಲ್ಲಿ ಮೊದಲನೆಯದಾದ Things Fall Apart ಹಾಗೂ ಮೂರನೆಯದಾದ Arrow of God ಓದಿದ್ದೆ. ಎರಡೂ ಶ್ರೇಷ್ಠ ಕೃತಿಗಳು. ಹೀಗಿದ್ದ ಸಂದರ್ಭದಲ್ಲಿ ಮೊನ್ನೆ ಬಹು ನಿರೀಕ್ಷೆಯಿಂದ No Longer at Ease (ಇದು ಒಂದು ರೀತಿಯಲ್ಲಿ ಥಿಂಗ್ಸ್…ನ ಉತ್ತಾರಾರ್ಧ) ಓದಿದೆ. ಆದರೆ ಈ ಕೃತಿ ನನಗೆ ಬಹು ನಿರಾಸೆಯನ್ನುಂಟುಮಾಡಿತು ಎಂದು ಹೇಳಲೇಬೇಕು.  

ಥಿಂಗ್ಸ್ ಫ಼ಾಲ್ ಅಪಾರ್ಟ್‍ನ ನಾಯಕ ಒಕೋಂಕ್ವೋನ ಮೊಮ್ಮಗ ಓಬಿ ಒಕೊಂಕ್ವೋನ ಕತೆ ಇದು. ಅವನ ಅಜ್ಜ ಆತ್ಮಹತ್ಯೆ ಮಾಡಿಕೊಂಡು ಸಾಯುವ ಹೊತ್ತಿಗೆ ಅವನ ಊರು ಬಹುತೇಕ ಕ್ರಿಶ್ಚಿಯಾನಿಟಿಗೆ ತಿರುಗಿತ್ತು. ಓಬಿಯ ಅಪ್ಪ ಒಬ್ಬ ಕಟ್ಟಾ ಕ್ರಿಶ್ಚಿಯನ್ ಅಷ್ಟೇ ಅಲ್ಲ, ಬೋಧಕ ಕೂಡ (catechist). ಓಬಿ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ. ಊರಿನ ಸಮೀಪ ಸಿಗುವ ಶಿಕ್ಷಣವನ್ನೆಲ್ಲ ಲೀಲಾಜಾಲವಾಗಿ ಮುಗಿಸಿದ್ದಾನೆ. ಉಮುವೋಫಿಯಾದಿಂದ ವಲಸೆ ಹೋಗಿ ನಗರಗಳಲ್ಲಿ ಕೆಲಸ ಮಾಡುತ್ತಿರುವ ಮಂದಿ ತಮ್ಮದೇ ಸಂಘವನ್ನು ಕಟ್ಟಿಕೊಂಡಿದ್ದಾರೆ; ಆ ಸಂಘದ ಮುಖಾಂತರ ಓಬಿಯ ಉನ್ನತ ಶಿಕ್ಷಣಕ್ಕೆ ಹಣವನ್ನು ಒಗ್ಗೂಡಿಸಿ ಕೊಡುತ್ತಾರೆ. ಓಬಿ ಇಂಗ್ಲೆಂಡಿಗೆ ಹೊರಟಿದ್ದಾನೆ. 

ಕಾದಂಬರಿ ಶುರುವಾಗುವುದು ಕಟಕಟೆಯಲ್ಲಿ. ಲಂಚ ತಿಂದ ಆರೋಪದ ಮೇಲೆ ಓಬಿ ಕಟಕಟೆಯಲ್ಲಿ ನಿಂತಿದ್ದಾನೆ. “I cannot comprehend how a young man of your education and brilliant promise could have done this,” ತೀರ್ಪು ಕೊಡುತ್ತ ನ್ಯಾಯಾಧೀಶ ಹೇಳುತ್ತಾನೆ. ಅಲ್ಲಿಂದ ಕತೆ ಹಿಂದಕ್ಕೆ ಓಡುತ್ತದೆ. ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ಬಂದ ಓಬಿಗೆ ಮರಳಿ ಲಾಗೋಸ್‍ಗೆ ಬರುವಷ್ಟರಲ್ಲೇ ತನ್ನ ಮೇಲಿರುವ ಅಪಾರ ನಿರೀಕ್ಷೆಗಳ ಭಾರ ಅರಿವಾಗುತ್ತದೆ: ಸೀನಿಯರ್ ಸಿವಿಲ್ ಸರ್ವೀಸಿನಲ್ಲಿ ಕೆಲಸ ಸಿಗುವ ಕೆಲವೇ ಆಫ್ರಿಕನ್ನರಲ್ಲಿ ಇವನೊಬ್ಬ; ಉಮುವೋಫಿಯಾದ ವರಪುತ್ರ; ನಮಗೆಲ್ಲ ಸಹಾಯ ಮಾಡದೇ ಇರುತ್ತಾನೆಯೇ, ಇವನು ಯಾವುದೇ ತಪ್ಪು ಹೆಜ್ಜೆಯಿಡಲಾರ, ಇತ್ಯಾದಿ. ಮೊದಮೊದಲಿಗೆ ಇವೆಲ್ಲ ನಿರೀಕ್ಷೆ, ಅಪೇಕ್ಷೆಗಳನ್ನು ತೂಗಿಸಿಕೊಂಡು ಹೋಗಬಹುದು ಎಂದುಕೊಳ್ಳುವ ಓಬಿಗೆ ಅದು ಅಷ್ಟು ಸುಲಭದ ಮಾತಲ್ಲ ಎಂದು ಗೊತ್ತಾಗುತ್ತದೆ. ಅಲ್ಲದೇ ತನ್ನ ತತ್ವಾದರ್ಶಗಳನ್ನು ಈ ಬದಲಾದ ನೈಜೀರಿಯಾದ ಭ್ರಷ್ಟ ನಗರದಲ್ಲಿ ನಡೆಸಿಕೊಂಡು ಹೋಗುವುದು ಅಂದುಕೊಂಡದ್ದಕ್ಕಿಂತ ಕಷ್ಟ ಎಂದು ಅರಿವಾಗತೊಡಗುತ್ತದೆ. ಬಹಳ ಬೇಗ ’ಓಸು’ ಹುಡುಗಿಯೊಬ್ಬಳ (’ದೇವರಿಗೆ ಬಿಟ್ಟ ಮನೆತನ’ದ ಹುಡುಗಿ) ಜೊತೆಗಿನ ಇವನ ಪ್ರೇಮ ಪ್ರಕರಣ ಹೊರಬಂದು ಲಾಗೋಸ್‍ನಲ್ಲಿನ ಉಮುವೋಫಿಯಾದ ಮಂದಿಯ ಜೊತೆಗೆ ಇವನ ಸಂಬಂಧ ಹದಗೆಡಲು ಕಾರಣವಾಗುತ್ತದೆ. 

ಆದರೂ ಹೀಗೋ ನಿಭಾಯಿಸಿಕೊಂಡು ಹೋಗುತ್ತಾನೆ. ಇತರ ನೈಜೀರಿಯನ್ನರಂತೆ ಭ್ರಷ್ಟನಾಗದೆ. ಆದರೆ ನಿಧಾನಕ್ಕೆ ಅಡಿಯಲ್ಲಿನ ನೆಲ ಸರಿಯುತ್ತಿದೆ. ಒಂದೇ ಸಮನೆ ಹಣದ ತಾಪತ್ರಯಗಳು. ಆತಂಕಗಳು. ಉಳಿಸಿಕೊಳ್ಳುವುದು ಕಷ್ಟವಾಗುತ್ತಿರುವ ಪ್ರೇಯಸಿಯ ಜೊತೆಗಿನ ಸಂಬಂಧ. ಅವನಪ್ಪ ಈ ಸಂಬಂಧಕ್ಕೆ ಒಪ್ಪದೇ ಇದ್ದಾಗ ಓಬಿ ಹೇಳುತ್ತಾನೆ, “ಆದರೆ ನಾವು ಕ್ರಿಶ್ಚಿಯನ್ನರು.” ಕಟ್ಟಾ ಕ್ರಿಶ್ಚಿಯನ್ನನಾಗಿದ್ದುಕೊಂಡೂ ಓಸುಗಳನ್ನು ಜಾತಿಭ್ರಷ್ಟಗೊಳಿಸುವ ಹಳೆಯ ಇಬೋ ಕಟ್ಟಳೆಯನ್ನು ಹೇರಲೆತ್ನಿಸುತ್ತಿರುವ ಅಪ್ಪ; ಅಪ್ಪನ ಧರ್ಮದಲ್ಲಿ ಯಾವತ್ತೂ ಅಂಥ ವಿಶ್ವಾಸವಿಲ್ಲದ, ಆದರೆ ತನ್ನ ಹತಾಶೆಯ ಸ್ಥಿತಿಯಲ್ಲಿ ಆ ಧರ್ಮವನ್ನು ಅಸ್ತ್ರವಾಗಿ ಉಪಯೋಗಿಸುವ ಮಗ. ಇಷ್ಟೆಲ್ಲದರ ಮೇಲೆ ಓಬಿ ಆ ಹುಡುಗಿಯನ್ನು ಮದುವೆಯಾಗುವುದಾದರೆ ತಾನು ಸತ್ತ ಮೇಲೆಯೇ ಎಂದು ತೀರ್ಪಿತ್ತ ತಾಯಿ. ಓಬಿಯ ವೈಯಕ್ತಿಕ ಜೀವನ ಬುಡಮೇಲಾಗತೊಡಗಿದೆ. ಅವನ ಪ್ರೇಯಸಿ ದೂರವಾಗುತ್ತಾಳೆ. ಓಬಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕುಸಿಯುತ್ತಿದ್ದಾನೆ, ಭ್ರಷ್ಟನಾಗುತ್ತಿದ್ದಾನೆ. 

ಆಫ್ರಿಕಾದ ಪರಿಸ್ಥಿತಿಗೆ ಕೊಲೋನಿಯಲಿಸಂ ಅಷ್ಟೇ ಕಾರಣವಲ್ಲ, ಸ್ವತಃ ಆಫ್ರಿಕಾ ಕೂಡ ಅಷ್ಟೇ ಜವಾಬ್ದಾರ – ಇದು ಅಚೇಬೆಯ ಕೃತಿಗಳೆಲ್ಲದರ ಮುಖ್ಯ ದನಿಗಳಲ್ಲಿ ಒಂದು. ಕ್ರಿಶ್ಚಿಯನ್ ಮಿಶನರಿಗಳು, ಬ್ರಿಟಿಶ್ ವಸಾಹತುಶಾಹಿ ಆಫ್ರಿಕಾದ ಸಂಸ್ಕೃತಿಯನ್ನು ನಾಶ ಮಾಡಿದ್ದು ಹೌದು. ಆದರೆ ಆಫ್ರಿಕನ್ನರು ತಾವೇ ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಭ್ರಷ್ಟರಾದದ್ದೂ ಅಷ್ಟೇ ನಿಜ. ನಾನು ಓದಿದ ಉಳಿದೆರಡು ಕಾದಂಬರಿಗಳಲ್ಲಿ ಈ ಅಂಶ ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿತವಾಗಿದೆ. ಆದರೆ No Longer at Easeನಲ್ಲಿನ ದುರಂತ ಆಪ್ರಿಕಾದ ದುರಂತವಾಗಿ ತೋರದೆ, ಒಬ್ಬ ಯುವಕನ ವೈಯಕ್ತಿಕ ದುರಂತವಾಗಿ ತೋರುತ್ತದೆ. ಓಬಿ ಪೂರ್ವ ನೈಜೀರಿಯಾದ ಉಮುವೋಫಿಯಾದ ಇಬೋ ಜನಾಂಗದ ಪ್ರತಿನಿಧಿಯಾಗದೇ, ಎಲ್ಲಿ ಬೇಕಾದಲ್ಲಿ ಇರಬಹುದಾದ ಯಾವುದೋ ಒಬ್ಬ ಯುವಕ ಅಷ್ಟೆ. ಆದರೆ ಅಚೇಬೆಯ ಸಾಹಿತ್ಯದ ಶಕ್ತಿ ಇಂಥ ಸಾರ್ವತ್ರಿಕತೆಯಲ್ಲಿ ಇಲ್ಲ. ಈ ಕಾದಂಬರಿಯಲ್ಲಿ ಕೂಡ ಉಮುವೋಫಿಯಾದಲ್ಲಿ ಅವರು ಇದ್ದಷ್ಟು ಹೊತ್ತು ಪಾಮ್ ಎಣ್ಣೆಯಲ್ಲಿ ಕರಿದ ರುಚಿಕಟ್ಟಾದ ಭಾಷೆಯಿದೆ. ಆದರೆ ಲಾಗೋಸ್‍ಗೆ ಮರಳಿದ ಕೂಡಲೆ ಭಾಷೆಯ ಮೊನಚು ಕಡಿಮೆಯಾಗುತ್ತದೆ. ಸಂಭಾಷಣೆಗಳು ಸಾಧಾರಣವಾಗುಳಿಯುತ್ತವೆ. ಎರಡರ ನಡುವಿನ disconnect ಎದ್ದುಕಾಣುತ್ತದೆ. 

No Longer at Ease ಕೆಟ್ಟ ಕಾದಂಬರಿಯಲ್ಲ. ಒಳ್ಳೆಯ ಕಾದಂಬರಿಯೇ. ಆದರೆ ನನ್ನ ಪ್ರಕಾರ, ಅಚೇಬೆಯ ಉಳಿದ ಕಾದಂಬರಿಗಳ ಮಟ್ಟಕ್ಕೆ ಏರುವುದಿಲ್ಲ. ಒಬ್ಬ ಸಾಹಿತಿಯ ಎಲ್ಲ ಕೃತಿಗಳೂ ಒಂದೇ ಮಟ್ಟಕ್ಕೆ ಇರಬೇಕೆಂದಿಲ್ಲ, ಇರಲು ಸಾಧ್ಯವೂ ಇಲ್ಲ. ಆದರೆ ನನಗೆ ಬೇಸರವಾಗುವುದು ಯಾಕೆಂದರೆ ಇದೊಂದು ಉತ್ತಮ ಕಾದಂಬರಿಯಾಗಬಹುದಿತ್ತು. And easily so! ಆದರೆ ಅದಾಗದಿದ್ದುದರಿಂದ ನಷ್ಟದ ಭಾವ ಆ ಕಾದಂಬರಿ ಮುಗಿಸಿ ಒಂದು ವಾರವಾದರೂ ನನ್ನನ್ನು ಕಾಡುತ್ತಿದೆ.

3 thoughts on “ಜೀವಕ್ಕೆ ಇನ್ನು ಸೌಖ್ಯವಿಲ್ಲ

  1. ಅನುರಾಧಾ:
    ಕ್ಷಮಿಸಿ, ನನಗೆ sweeping generalisationಗಳು ಸಮಂಜಸವೆನ್ನಿಸುವುದಿಲ್ಲ. ಹೊರಗಿನವರು ಹಾಳಾಗುವ ದಾರಿಯನ್ನು ತೋರಿಯೇ ತೋರಿದರು, ನಾವು ಆ ದಾರಿಯಲ್ಲಿ ಮುನ್ನುಗ್ಗಿಯೇ ಮುನ್ನುಗ್ಗಿದೆವು, ಎಂದೆಲ್ಲ ಹೇಳುವುದು ಕಷ್ಟ. At the least, these matters are very debatable.

    ಸುನಾಥ:
    ಓಬಿಯ ಕತೆ ಸುಶಿಕ್ಷಿತ ಭಾರತೀಯನ ಕತೆ ಹೌದು ಅಲ್ಲವೋ ಗೊತ್ತಿಲ್ಲ. ಆದರೆ ಅಚೇಬೆ ಹೇಳುವ ಆಫ್ರಿಕಾದ ಕತೆ ಮಾತ್ರ ಭಾರತದ ಕತೆಗಿಂತ ಭಿನ್ನ. ಕೊಲೋನಿಯಲಿಸಮ್‍ನ ಪರಿಣಾಮ ಆಫ್ರಿಕಾದ ಮೇಲೆ ಆದದ್ದಕ್ಕೂ ಭಾರತದ ಮೇಲೆ ಆದದ್ದಕ್ಕೂ ಬಹಳ ಭಿನ್ನತೆಗಳಿವೆ. ನಮ್ಮಲ್ಲಿ ಇವತ್ತಿಗೂ ನಾನಾ ನಮೂನೆಯ ಭಾಷೆ, ಪಂಥ, ಧರ್ಮ, ಸಂಸ್ಕೃತಿಗಳಿವೆ. ಕೊಲೋನಿಯಲಿಸಮ್ ಆಫ್ರಿಕಾದ ಮೇಲೆ ಮಾಡಿದ ಪರಿಣಾಮ ಬಹಳ deep-rooted. ಬೆರಳೆಣಿಕೆಯಷ್ಟು ಮಿಶನರಿಗಳು ಹೊಗಿ ಒಂದು ಪ್ರಾಂತ್ಯಕ್ಕೆ ಪ್ರಾಂತ್ಯವನ್ನೇ – ಸಾಮಾಜಿಕವಾಗಿ, ಬೌದ್ಧಿಕವಾಗಿ, ಧಾರ್ಮಿಕವಾಗಿ – ವ್ಯವಸ್ಥಿತವಾಗಿ ಪರಾವಲಂಬಿತಗೊಳಿಸಿದರು. ಮತ್ತು ಅದು ನಮ್ಮಲ್ಲಿಗಿಂತ ಹೆಚ್ಚು permanent ಆದ ಬದಲಾವಣೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s